Updated News From Kaup
ವಿಶ್ವ ವೈದ್ಯರ ದಿನ : ಡಾ. ಉದಯ್ ಕುಮಾರ್ ಶೆಟ್ಟಿಗೆ ಸನ್ಮಾನ

Posted On: 03-07-2022 07:52AM
ಕಟಪಾಡಿ : ಇಲ್ಲಿಯ ಜನರಿಗೆ ಹಲವಾರು ವರ್ಷಗಳಿಂದ ವೈದ್ಯಕೀಯ ಸೇವೆ ನೀಡುತ್ತಾ ಬಂದಿರುವ ಕಟಪಾಡಿಯ ಹೆಸರಾಂತ ವೈದ್ಯರಾದ ಡಾ. ಉದಯ್ ಕುಮಾರ್ ಶೆಟ್ಟಿಯವರನ್ನು ವಿಶ್ವ ವೈದ್ಯರ ದಿನದಂದು ಸನ್ಮಾನಿಸಲಾಯಿತು.
ಈ ಸಂದರ್ಭ ಕಟಪಾಡಿಯ ನವೀನ್ ಪೂಜಾರಿ, ಕಿಶನ್ ಪೂಜಾರಿ, ಪ್ರಭಾಕರ್ ಕೋಟ್ಯಾನ್, ಸತೀಶ್, ರಾಜೇಶ್ ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ 10000 ಜನರಿಂದ ಯೋಗಾಭ್ಯಾಸ ಕಾರ್ಯಕ್ರಮ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

Posted On: 02-07-2022 08:01PM
ಉಡುಪಿ : ಜನಸಾಮಾನ್ಯರಲ್ಲಿ ಯೋಗದ ಮಹತ್ವ ಹಾಗೂ ಅದರಿಂದ ದೇಹಕ್ಕೆ ಆಗುವ ಪ್ರಯೋಜನ ಕುರಿತು ಅರಿವು ಮೂಡಿಸುವುದು ಸೇರಿದಂತೆ ಯೋಗವನ್ನು ನಿತ್ಯ ಜೀವನದ ಒಂದು ಭಾಗವಾಗಿ ಅಳವಡಿಸಿಕೊಳ್ಳಲು ಆಗಸ್ಟ್ 12, 13 ಮತ್ತು 14 ರಂದು ಯೋಗಾಥಾನ್ ಕಾರ್ಯಕ್ರಮವನ್ನು ಜಿಲ್ಲಾಮಟ್ಟದಲ್ಲಿ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್ ನಲ್ಲಿ, ಜಿಲ್ಲೆಯಲ್ಲಿ ಯೋಗಾಥಾನ್ ಕಾರ್ಯಕ್ರಮ ಏರ್ಪಡಿಸುವ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ನಡೆಯುವ ಯೋಗಾಥಾನ್ ಕಾರ್ಯಕ್ರಮಕ್ಕೆ 10000 ಜನರಿಗೆ ಏಕಕಾಲದಲ್ಲಿ ಒಂದೆಡೆ ತರಬೇತಿ ನೀಡಿ,ಯೋಗವನ್ನು ತಮ್ಮ ದೈನಂದಿನ ಚಟುವಟಿಕೆಗಳನ್ನಾಗಿಸಿಕೊಳ್ಳುವುದರೊಂದಿಗೆ ಉತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯವಂತರನ್ನಾಗಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ , ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಪ್ರಮಾಣಪತ್ರ ನೀಡಲಾಗುವುದು ಎಂದರು.
ಯೋಗಾಭ್ಯಾಸಕ್ಕೆ ಸಾರ್ವಜನಿಕರು ಸೇರಲು ಅನುಕೂಲವಾಗುವ ಸೂಕ್ತ ಸ್ಥಳವನ್ನು ಗುರುತಿಸಿ, ಅಲ್ಲಿ ಎಲ್ಲಾ ಅಗತ್ಯ ಮೂಲ ಸೌಕರ್ಯಗಳನ್ನು ಕೈಗೊಳ್ಳಬೇಕು, ಕಾರ್ಯಕ್ರಮದಲ್ಲಿ ಜಿಲ್ಲೆಯ ಯೋಗ ಸಂಸ್ಥೆಗಳು, ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಲು ಅನುಕೂಲವಾಗುವಂತೆ ವಿವಿಧ ಸ್ವಯಂ ಸೇವಾ ಸಂಘಟನೆಗಳ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸಹಕಾರವನ್ನು ಪಡೆಯುವಂತೆ ಸೂಚಿಸಿದರು. ಜಿಲ್ಲೆಯ ಎಲ್ಲಾ ಸಾರ್ವಜನಿಕರು ಈ ಯೋಗಾಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸಲು ನೊಂದಣಿ ಮಾಡಲು, ಆನ್ಲೈನ್ ನೊಂದಣಿಯನ್ನು register@yogathon2022.com ಹಾಗೂ ಆಫ್ಲೈನ್ ನೊಂದಣಿಯನ್ನು ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಮಾಡಬಹುದಾಗಿದೆ ಎಂದರು. ಯುವಜನರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಕಾಲೇಜುಗಳಲ್ಲಿ ಪ್ರಾಂಶುಪಾಲರ ಸಹಕಾರ ಪಡೆಯಬೇಕು.ಯೋಗ ತರಬೇತಿ ನೀಡಲು ಯೋಗ ಶಿಕ್ಷಕರನ್ನು ಗುರುತಿಸಬೇಕು, ಕಾರ್ಯಕ್ರಮಕ್ಕೆ ಶಿಬಿರಾರ್ಥಿಗಳು ಭಾಗವಹಿಸಲು ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು. ಉಡುಪಿ ಜಿಲ್ಲೆ ಘೋಷಣೆಯಾಗಿ 25 ವರ್ಷಗಳು ಸಂಪೂರ್ಣವಾಗುತ್ತಿದ್ದು, ಇದರ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಷನ್ ಕುಮಾರ್ ಶೆಟ್ಟಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸತೀಶ್ ಆಚಾರ್ಯ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಮಲ್ಪೆ : ಅಂಗನವಾಡಿಯಿಂದ 13,900 ರೂ. ಮೌಲ್ಯದ ವಸ್ತುಗಳ ಕಳ್ಳತನ

Posted On: 02-07-2022 07:46PM
ಮಲ್ಪೆ: ಇಲ್ಲಿಯ ಕೊಳ -1ರಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಸುಮಾರು 13,900 ಮೌಲ್ಯದ ವಸ್ತುಗಳ ಕಳವುಗೈದ ಘಟನೆ ನಡೆದಿದೆ.
ಪ್ರತಿದಿನ ಅಂಗನವಾಡಿ ಶಿಕ್ಷಕಿ ಬೆಳಿಗ್ಗೆ 09:30ಕ್ಕೆ ಅಂಗನವಾಡಿಗೆ ಬಂದು, ಕರ್ತವ್ಯ ನಿರ್ವಹಿಸಿ ಸಂಜೆ 4:30 ಗಂಟೆಗೆ ಬಾಗಿಲು ಹಾಕಿ ಹೋಗುತ್ತಿದ್ದು , ಜುಲೈ 1ರಂದು ಜಿಲ್ಲಾಧಿಕಾರಿಗಳ ಆದೇಶದಂತೆ ರಜೆ ಇದ್ದು , ಮರುದಿನ ಶಿಕ್ಷಕಿ ಮತ್ತು ಅಂಗನವಾಡಿ ಸಹಾಯಕಿ ಬೆಳಿಗ್ಗೆ ಬಂದು ನೋಡಿದಾಗ ಅಂಗನವಾಡಿಯ ಎದುರಿನ ಮುಖ್ಯ ಕಬ್ಬಿಣದ ಬಾಗಿಲಿನ ಡ್ರಿಲ್ ನ ಚಿಲಕವನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ತುಂಡು ಮಾಡಿದ್ದು ಕಂಡುಬಂದಿದ್ದು, ಕೊಠಡಿಯ ಕೋಣೆಯ ಒಳಗಡೆ ಇದ್ದ ಬೀರುವನ್ನು ತೆರೆದಿದ್ದು, ಅದರೊಳಗಿದ್ದ ಮೊಬೈಲ್ ಪೋನ್, ಸ್ತ್ರೀ ಶಕ್ತಿ ಸಂಘದ ಡಬ್ಬದಲ್ಲಿದ್ದ ಹಣ ಕಳವಾಗಿರುತ್ತದೆ. ಇದರ ಒಟ್ಟು ಮೌಲ್ಯ 13,900 ರೂ. ಆಗಿರುತ್ತದೆ.
ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮಟ್ಟು : ಮೀನುಗಾರಿಕೆಯ ಸಂದರ್ಭ ಎದೆ ನೋವು ವ್ಯಕ್ತಿ ಸಾವು

Posted On: 02-07-2022 06:06PM
ಕಾಪು : ಅಣ್ಣ ಮತ್ತು ತಮ್ಮ ಮಟ್ಟುಗ್ರಾಮದ ಪಾಪನಾಶಿನಿ ನದಿಯಲ್ಲಿ ಮೀನುಗಾರಿಕೆಗೆ ತೆರಳಿದ್ದು ಅಣ್ಣನು ಮೀನು ಹಿಡಿಯುವ ಸಂದರ್ಭದಲ್ಲಿ ಎದೆ ನೋವು ಕಾಣಿಸಿಕೊಂಡು ಮೃತಪಟ್ಟ ಘಟನೆ ಜುಲೈ 1ರಂದು ನಡೆದಿದೆ.
ಮಟ್ಟು ಗ್ರಾಮದ ದಿನೇಶ್ ಎಂಬುವವರು ತನ್ನ ಅಣ್ಣ ಗಣೇಶ್ (45)ರೊಂದಿಗೆ ಎಂದಿನಂತೆ ಮೀನು ಹಿಡಿಯಲು ಬೆಳಿಗ್ಗೆ 10 ಗಂಟೆಗೆ ಮಟ್ಟುಗ್ರಾಮದ ಪಾಪನಾಶಿನಿ ನದಿಗೆ ದೋಣಿಯಲ್ಲಿ ಹೋಗಿದ್ದು, ಮೀನು ಹಿಡಿಯುತ್ತಿರುವ ಸಂದರ್ಭ ಗಣೇಶ್ ಗೆ ಎದೆ ನೋವು ಕಾಣಿಸಿಕೊಂಡು ದೋಣಿಯಿಂದ ನೀರಿಗೆ ಬಿದ್ದಿದ್ದು, ಆ ಕೂಡಲೇ ದಿನೇಶ್ ಅಲ್ಲಿಯೇ ಬೇರೆ ದೋಣಿಯಲ್ಲಿ ಮೀನು ಹಿಡಿಯುತ್ತಿದ್ದವರನ್ನು ಕೂಗಿ ಕರೆದು ಅವರ ಸಹಾಯದಿಂದ ನೀರಿಗೆ ಬಿದ್ದಿದ್ದ ಗಣೇಶ್ರವರನ್ನು ಮೇಲಕ್ಕೆ ಎತ್ತಿ ದಡಕ್ಕೆ ತಂದಾಗ ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದು ಅವರನ್ನು ಕೂಡಲೇ ಮಟ್ಟುವಿನ ಕ್ಲಿನಿಕ್ಗೆ ಕರೆದುಕೊಂಡು ಹೋಗಲಾಗಿತ್ತು.
ಅಲ್ಲಿಂದ ಉಡುಪಿಯ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು, ಪರೀಕ್ಷಿಸಿದ ಅಲ್ಲಿನ ವೈದ್ಯರು ಮೃತಪಟ್ಟಿರುವ ಬಗ್ಗೆ ತಿಳಿಸಿರುತ್ತಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ : ಮನೆಯಂಗಳದಲ್ಲಿ ಕಾಲು ಜಾರಿ ಬಿದ್ದು ವ್ಯಕ್ತಿ ಮೃತ

Posted On: 01-07-2022 08:20PM
ಮಣಿಪಾಲ : ಮನೆಯ ಮುಂದಿನ ತೋಟದಲ್ಲಿ ತೆಂಗಿನಕಾಯಿ ಹೆಕ್ಕಲು ಮನೆಯಂಗಳದಲ್ಲಿ ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಕ್ಕೆ ಬಿದ್ದು, ತಲೆಗೆ ತೀವ್ರ ತರಹದ ಗಾಯವಾಗಿ ವ್ಯಕ್ತಿಯೋರ್ವರು ಮೃತ ಪಟ್ಟ ಘಟನೆ ಮಣಿಪಾಲದಲ್ಲಿ ನಡೆದಿದೆ.
ತಲೆಗೆ ತೀವ್ರವಾದ ಗಾಯವಾದ ಕೆ .ಎಸ್. ರಮೇಶ್ (62) ರವರನ್ನು ಕೂಡಲೇ ಚಿಕಿತ್ಸೆಗಾಗಿ ಉಡುಪಿ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಲ್ಲಿ ತೋರಿಸಲಾಗಿದ್ದು, ವೈದ್ಯರು ಪರೀಕ್ಷಿಸಿ ಕೆ.ಎಸ್.ರಮೇಶ್ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಜಿಲ್ಲಾಡಳಿತ ಸನ್ನದ್ದವಾಗಿರಬೇಕು : ಮನೋಜ್ ಜೈನ್

Posted On: 01-07-2022 03:28PM
ಉಡುಪಿ, ಜೂನ್ 30 : ಜಿಲ್ಲೆಯಲ್ಲಿ ಕಳೆದ 3 ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು ಹೀಗೆ ಮುಂದುವರೆದಲ್ಲಿ ಅತಿವೃಷ್ಠಿ ಉಂಟಾಗಿ ಸಮಸ್ಯೆಗಳು ಆಗುವ ಸಾಧ್ಯತೆ ಇರುವ ಹಿನ್ನಲೆ ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಜಿಲ್ಲಾಡಳಿತ ಸನ್ನದ್ದರಾಗಿರಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಸೂಚನೆ ನೀಡಿದರು. ಅವರು ಇಂದು ವರ್ಚುವಲ್ ಮೀಟಿಂಗ್ ಮೂಲಕ ನಡೆದ , ಜಿಲ್ಲೆಯ ಮಳೆ ಪರಿಸ್ಥಿತಿ ಹಾಗೂ ಪ್ರಗತಿ ಪರಿಶೀಲನಾ ಸಭೆಯನ್ನು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿರಂತರ ಮಳೆಯಿಂದಾಗಿ ನದಿ ಹಳ್ಳ ಕೊಳ್ಳಗಳು ತುಂಬಿ ಹರಿದು ತಗ್ಗು ಪ್ರದೇಶಗಳಿಗೆ ನುಗ್ಗುವ ಸಾಧ್ಯತೆಗಳು ಇರುತ್ತವೆ ಅಂತಹ ಪ್ರದೇಶಗಳನ್ನು ಈಗಾಗಲೇ ಗುರ್ತಿಸಿದ್ದು, ಅಲ್ಲಿ ವಾಸಿಸುವ ಜನರಿಗೆ ರಕ್ಷಣೆ ಮತ್ತು ಸ್ಥಳಾಂತರಕ್ಕೆ ಕಾಳಜಿ ಕೇಂದ್ರಗಳನ್ನು ಗುರುತಿಸಿ ಸಿದ್ದವಾಗಿಟ್ಟುಕೊಳ್ಳಬೇಕೆಂದು ಸೂಚನೆ ನೀಡಿದರು. ಮಳೆ ಗಾಳಿಯಿಂದಾಗಿ ರಸ್ತೆಗಳಲ್ಲಿ ಮರಗಳು ಬಿದ್ದು ಸಂಚಾರಕ್ಕೆ ಅಸ್ತವ್ಯಸ್ತವಾಗದಂತೆ ಕ್ರಮ ವಹಿಸಲು ಅಗತ್ಯ ಪರಿಕರಗಳೊಂದಿಗೆ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸಿದ್ದರಿರಬೇಕು, ತಗ್ಗುಪ್ರದೇಶದಲ್ಲಿರುವ ಸೇತುವೆಗಳು ಮುಳುಗಡೆಗೊಂಡ ಸಂದರ್ಭದಲ್ಲಿ ಸಂಚಾರ ವ್ಯವಸ್ಥೆಯನ್ನು ಸ್ಥಗಿತಗೊಳಿಸುವ ಕಾರ್ಯವನ್ನು ಪೊಲೀಸ್ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು. ಮಳೆಯಿಂದಾಗಿ ಮನೆ , ಜಾನುವಾರು , ಆಸ್ತಿ ಸೇರಿದಂತೆ ಮತ್ತಿತರ ಹಾನಿಗಳಿಗೆ ನಷ್ಠ ಪರಿಹಾರವನ್ನು ಎನ್.ಡಿ.ಆರ್.ಎಫ್ ನಿಯಮಾವಳಿಯಂತೆ ಪರಿಹಾರವನ್ನು ಶೀಘ್ರದಲ್ಲಿಯೇ ತಲುಪಿಸಬೇಕು ಎಂದರು.
ಕಿಂಡಿ ಅಣೆಕಟ್ಟುಗಳ ಹಲಗೆಗಳನ್ನು ಪೂರ್ಣ ಪ್ರಮಾಣದಲ್ಲಿ ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ವಹಿಸಬೇಕು ,ಜಿಲ್ಲಾ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂ 24 ಗಂಟೆಯೂ ಕಾರ್ಯನಿರ್ವಹಿಸುವುದರೊಂದಿಗೆ , ತುರ್ತು ಕರೆಗಳು ಬಂದಾಗ ತಕ್ಷಣ ಸ್ಪಂದಿಸಬೇಕು ಎಂದರು. ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿರುವ ಹಿನ್ನಲೆಯಲ್ಲಿ ಕೃಷಿ ಚಟುವಟಿಕೆಗಳು ಭರದಿಂದ ಸಾಗುತ್ತಿದ್ದು, ರೈತರಿಗೆ ಅಗತ್ಯವಿರುವ ಭಿತ್ತನೆ ಬೀಜ, ರಸಗೊಬ್ಬರಗಳ ವಿತರಣೆಯನ್ನು ಸಮರ್ಪಕವಾಗಿ ಮಾಡಬೇಕೆಂದು ಸೂಚಿಸಿದರು. ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ಜಿಲ್ಲೆಯಲ್ಲಿ ಮಳೆಯಿಂದ ಅಪಾಯಕ್ಕೆ ಒಳಗಾಗುವ ಸಂಭವವಿರುವ ಅಂಗನವಾಡಿ, ಶಾಲಾ ಕಾಲೇಜು ಕಟ್ಟಡಗಳಲ್ಲಿ ಅಗತ್ಯ ಮುನ್ನಚ್ಚರಿಕೆ ಕ್ರಮಗಳನ್ನು ಸಂಬಂಧಪಟ್ಟ ಇಲಾಖೆಗಳು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಪ್ರಸಕ್ತ ಮಳೆಗಾಲ ಮುಗಿಯುವವರೆಗೂ ತಾಲೂಕು ಹಾಗೂ ಗ್ರಾಮ ಮಟ್ಟದ ಪ್ರಾಕೃತಿಕ ವಿಕೋಪ ನಿರ್ವಹಣಾ ಸಮಿತಿಗಳು ಪ್ರತೀ 15 ದಿನಗಳಿಗೊಮ್ಮೆ ಸಭೆಯನ್ನು ನಡೆಸಬೇಕು ಎಂದು ಸೂಚನೆ ನೀಡಿದ ಅವರು ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದೊಂದಿಗೆ ವಿಕೋಪ ನಿರ್ವಹಣೆ ಕಾರ್ಯಗಳನ್ನು ಕೈಗೊಳ್ಳಬೇಕು ಎಂದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಜಿ.ಪಂ. ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್ ಹಾಗೂ ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.
ಜುಲೈ 3 : ಎನ್ ಎಸ್ ಸಿ ಡಿ ಎಫ್ ಆಶ್ರಯದಲ್ಲಿ ಸಂಸ್ಕೃತಿ ಜಾತ್ರೆ - ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ

Posted On: 30-06-2022 10:55PM
ಮಂಗಳೂರು : ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ಒಂದು ದಿನದ ಸಂಸ್ಕೃತಿ ಜಾತ್ರೆ ಕಾರ್ಯಕ್ರಮ ಜುಲೈ 3, ಭಾನುವಾರ ಬೆಳಿಗ್ಗೆ (9ರಿಂದ ರಾತ್ರಿ 9ರ ವರೆಗೆ) ಮಂಗಳೂರು ಪುರ ಭವನದಲ್ಲಿ ನಡೆಯಲಿದೆ.

ಈ ಮಹತ್ವಪೂರ್ಣ ಕಾರ್ಯಕ್ರಮವನ್ನು ವಿಶ್ರಾಂತ ಹೈಕೋರ್ಟ್ ನ್ಯಾಯಾಧೀಶ ಅರಳಿ ನಾಗರಾಜ್ ಉದ್ಘಾಟಿಸಲಿದ್ದು, ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಗಂಗಾಧರ್ ಗಾಂಧಿ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಲೋಕಾಯುಕ್ತ ನ್ಯಾಯವಾದಿ ರವೀಂದ್ರ ಮುನ್ನಿಪಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜೆ, ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ, ಕವಿಗೋಷ್ಠಿ ಅಧ್ಯಕ್ಷೆ ಉಪನ್ಯಾಸಕಿ, ಕವಯತ್ರಿ ಮಾನ್ವಿ, ಸಂಚಾಲಕಿ ಮಾನಸ ಪ್ರವೀಣ್ ಭಟ್, ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ NSCDF ಸಮಾಜ ಸೇವಾ ಪುರಸ್ಕಾರವನ್ನು ಮೈಸೂರಿನ ಸಮಾಜ ಸೇವಕ ಡಾ.ಎಂ.ಪಿ.ವರ್ಷ, NSCDF ಸಾಹಿತ್ಯ ಸೇವಾ ಪುರಸ್ಕಾರವನ್ನು ಪಿ.ವಿ.ಪ್ರದೀಪ್ ಕುಮಾರ್, NSCDF ಬಾಲ ಪ್ರತಿಭಾ ಪುರಸ್ಕಾರವನ್ನು ಲಾಲಿತ್ಯ ಕುಮಾರ್ ಬೇಲೂರು ಇವರಿಗೆ ನೀಡಿ ಗೌರವಿಸಲಾಗುವುದು.

ಬಳಿಕ ಕವಿಗೋಷ್ಠಿ, ಯಕ್ಷಗಾನ ಗೀತಗಾಯನ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು NSCDF ಪ್ರಧಾನ ಕಾರ್ಯದರ್ಶಿ ದಿನಕರ ಡಿ ಬಂಗೇರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಉದ್ಯಾವರ : ಹೃದಯಾಘಾತದಿಂದ ಮಹಿಳೆ ಸಾವು

Posted On: 30-06-2022 07:59PM
ಉದ್ಯಾವರ : ಇಲ್ಲಿನ ಗುಡ್ಡೆಅಂಗಡಿ ಉದ್ಯಾವರದ ವಸಂತಿ (55) ರವರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಜೂನ್ 30 ರಂದು ನಡೆದಿದೆ.
ಕಂಟ್ಟಿಂಗೇರಿಯಲ್ಲಿರುವ ಬ್ಯಾಂಕ್ ಒಂದರಲ್ಲಿ ಉದ್ಯೋಗ ಮಾಡಿಕೊಂಡಿರುವ ಇವರು ಬೆಳಿಗ್ಗೆ 8:30 ಗಂಟೆಗೆ ಬ್ಯಾಂಕ್ಗೆ ಹೋಗಲು ಉದ್ಯಾವರದ ಗುಡ್ಡೆಯಂಗಡಿ ಬಸ್ ನಿಲ್ದಾಣದಲ್ಲಿ ಬಸ್ ಗೆ ಕಾಯುತ್ತಿದ್ದಾಗ ಕುಸಿದು ಬಿದ್ದವರನ್ನು ಸ್ಥಳೀಯ ರಿಕ್ಷಾದವರು ಒಂದು ರಿಕ್ಷಾದಲ್ಲಿ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.
ವಸಂತಿರವರಿಗೆ ಮಧುಮೇಹದ ಖಾಯಿಲೆ ಇದ್ದು ಒಂದೂವರೆ ವರ್ಷದ ಮೊದಲು ಎದೆ ಬಡಿತದ ಸಮಸ್ಯೆ ಕಾಣಿಸಿಕೊಂಡಿದ್ದು ಈ ಬಗ್ಗೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ವಸಂತಿಯವರು ಹೃದಯಘಾತದಿಂದ ಮೃತಪಟ್ಟಿರುವ ಸಾಧ್ಯತೆ ಇರುತ್ತದೆ. ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಉಡುಪಿ : ಭಾರೀ ಮಳೆಯ ಸಾಧ್ಯತೆ - ಶಾಲಾ,ಕಾಲೇಜುಗಳಿಗೆ ರಜೆ

Posted On: 30-06-2022 07:55PM
ಉಡುಪಿ : ಜಿಲ್ಲೆಯಾದ್ಯಂತ ಸತತ ಮೂರು ದಿನಗಳಿಂದ ನಿರಂತರ ಮಳೆಯಾಗುತ್ತಿರುವುದರಿಂದ, ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂಜಾಗರೂಕತಾ ಕ್ರಮವಾಗಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ - ಜುಲೈ 1ರಂದು ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪದವಿ ಪೂರ್ವ, ಪದವಿ ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಆದೇಶಿಸಿದ್ದಾರೆ.
ಜುಲೈ 1 ರಿಂದ 4 ದಿನಗಳ ಕಾಲ ರಾಜ್ಯದಲ್ಲಿ ಭಾರಿ ಮಳೆ ಆಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ ,ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜೂನ್ 30 ಮತ್ತು ಜುಲೈ ಒಂದರಂದು ಆರೆಂಜ್ ಅಲರ್ಟ್ ಜೂನ್ 2 ರಿಂದ ಜೂನ್ ನಾಲ್ಕರ ವರೆಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕಟಪಾಡಿ : ಶ್ರೇಷ್ಠ ನಾದಸ್ವರ ವಾದಕ ಅಗ್ರಹಾರ ಚಂದಯ್ಯ ಶೇರಿಗಾರ್ ವಿಧಿವಶ

Posted On: 30-06-2022 07:01PM
ಕಟಪಾಡಿ : ನಾಡಿನ ಶ್ರೇಷ್ಠ ನಾದಸ್ವರ ವಾದಕರಾಗಿ ಹೆಸರುವಾಸಿಯಾಗಿರುವ ಅಗ್ರಹಾರ ಚಂದಯ್ಯ ಶೇರಿಗಾರ್ ರವರು ಜೂನ್ 30 ರ ಬೆಳಿಗ್ಗೆ ತಮ್ಮ ಸ್ವಗ್ರಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ದೈವಾಧೀನರಾದರು.
ಶ್ರೀಯುತ ಅಪ್ಪು ಶೇರಿಗಾರ್ ಹಾಗೂ ಶ್ರೀಮತಿ ಸೀತು ಸೇರಿಗಾರ್ತಿ ರವರ ಸುಪುತ್ರರು. ಬಾಲ್ಯದಿಂದಲೇ ತಂದೆಯಿಂದ ನಾಗಸ್ವರ ವಾದನವನ್ನು ಕರಗತ ಮಾಡಿಕೊಂಡು ಎಲ್ಲರ ಜನಮನ ಗೆದ್ದವರು. ಹಲವಾರು ಸನ್ಮಾನಗಳಿಗೆ ಭಾಜನರಾದರು. ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಬಂದು ಮಿತ್ರರನ್ನು ಅಗಲಿದ್ದಾರೆ.
ಇವರು ನೀಡಿದ ಕೊಡುಗೆಗೆ ಸನ್ಮಾನ ನೀಡಿದ ಸಂಘ ಸಂಸ್ಥೆಗಳು : ಸಾವಿರಾಳು ಧೂಮಾವತಿ ದೈವಸ್ಥಾನ ಫಾರೆಸ್ಟ್ ಗೇಟ್ ಏಣಗುಡ್ಡೆ ಕಟಪಾಡಿ, ಲಯನ್ಸ್ ಕ್ಲಬ್ ಕಟಪಾಡಿ, ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್, ಉಡುಪಿ ಜಿಲ್ಲಾ ಯುವ ವೇದಿಕೆ, ಉಡುಪಿ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಗಳ ಕಚೇರಿ, ದೇವಾಡಿಗರ ಸೇವಾ ಸಂಘ ಕಟಪಾಡಿ, ಹಳೆ ವಿದ್ಯಾರ್ಥಿ ಸಂಘ ಶ್ರೀ ದುರ್ಗಾಪರಮೇಶ್ವರಿ ಶಾಲೆ ಅಗ್ರಹಾರ.
ಸೇವೆ ಸಲ್ಲಿಸಿದ ಕ್ಷೇತ್ರಗಳು : ಅಗ್ರಹಾರ ದುರ್ಗಾಪರಮೇಶ್ವರಿ ದೇವಸ್ಥಾನ. ಕಟಪಾಡಿ, ಕಾಳಿಕಾಂಬ ದೇವಸ್ಥಾನ ಅಗ್ರಹಾರ ಕಟಪಾಡಿ, ಚೊಕ್ಕಾಡಿ ಮಹಾಲಿಂಗೇಶ್ವರ ದೇವಸ್ಥಾನ ಕಟಪಾಡಿ, ವಿಷ್ಣು ಮೂರ್ತಿ ದೇವಸ್ಥಾನ ಮಟ್ಟು ಕಟಪಾಡಿ, ಕಾಪು ಮಾರಿಗುಡಿ, ಜುಮಾದಿ ದೈವಸ್ಥಾನ ಫಾರೆಸ್ಟ್ ಗೇಟ್ ಕಟಪಾಡಿ, ನೀಚ ದೈವಸ್ಥಾನ ದುರ್ಗಾನಗರ ಕಟಪಾಡಿ ಹಾಗೂ ಕಾಪು, ಪಾಂಗಳ, ಕಟಪಾಡಿ, ಶಂಕರಪುರ, ಉದ್ಯಾವರ ಸುತ್ತಮುತ್ತ ಧಾರ್ಮಿಕ ಕ್ಷೇತ್ರ ಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ.