Updated News From Kaup

ಸುರತ್ಕಲ್ : ಸಂಸದರು, ಶಾಸಕರು ಅಕ್ರಮ ಟೋಲ್ ಪರ - ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆರೋಪ ; ಸುರತ್ಕಲ್ ಟೋಲ್ ಗೇಟ್ಗೆ ಮುತ್ತಿಗೆ ನಿರ್ಧಾರ

Posted On: 07-07-2022 11:04PM

ಸುರತ್ಕಲ್ : ವಿಲೀನದ ನಿರ್ಣಯ, ಹೆದ್ದಾರಿ ಸಚಿವರ ಭರವಸೆ, ಸತತ ಹೋರಾಟಗಳ ಹೊರತಾಗಿಯೂ ವಿವಾದಿತ ಸುರತ್ಕಲ್ ಟೋಲ್ ಗೇಟ್ ನಲ್ಲಿ ಸುಂಕ ಸಂಗ್ರಹ ಮುಂದುವರಿಯಲು ಸ್ಥಳೀಯ ಸಂಸದ, ಶಾಸಕರುಗಳೇ ಕಾರಣ. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟಿ ಸುಂಕ ಸಂಗ್ರಹದ ಗುತ್ತಿಗೆದಾರರು ಅಕ್ರಮ ಟೋಲ್ ಗೇಟ್ ಪರ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸುರತ್ಕಲ್ ಆರೋಪಿಸಿದೆ‌. ಇಂದು ಸುರತ್ಕಲ್ ನ ಖಾಸಗಿ ಹೊಟೇಲ್ ನಲ್ಲಿ ನಡೆದ ಹೋರಾಟ ಸಮಿತಿಯ ಸಭೆಯಲ್ಲಿ ಈ ಆರೋಪ ವ್ಯಕ್ತವಾಯಿತು‌. ಸಂಸದರು, ಶಾಸಕರು ಅಕ್ರಮ ಟೋಲ್ ಗೇಟ್ ಮುಚ್ಚಿಸಲು ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಜುಲೈ ಕೊನೆಯ ವಾರ ಸುರತ್ಕಲ್ ಟೋಲ್ ಗೇಟ್ ಗೆ ಮುತ್ತಿಗೆ ಹಾಕಲು ಸಭೆ ನಿರ್ಧರಿಸಿತು.

ಮಾರ್ಚ್ 22 ರಂದು ನಿತಿನ್ ಗಡ್ಕರಿ ಲೋಕಸಭೆಯಲ್ಲಿ ನೀಡಿದ ಭರವಸೆಯ ನಂತರದ ಬೆಳವಣಿಗೆಗಳನ್ನು ಸಭೆ ಚರ್ಚಿಸಿತು. 2018 ರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೆಗೆದುಕೊಂಡ ನಿರ್ಣಯದ ಪ್ರಕಾರ ಸುರತ್ಕಲ್ ಟೋಲ್ ಗೇಟ್ ವರ್ಷಗಳ ಹಿಂದೆಯೇ ತೆರವುಗೊಳ್ಳಬೇಕಿತ್ತು. ದಿನವೊಂದಕ್ಕೆ 15 ಲಕ್ಷ ರೂಪಾಯಿಗೂ ಹೆಚ್ಚು ಸುಂಕ ಸಂಗ್ರಹ ಆಗುವ ಸುರತ್ಕಲ್ ಟೋಲ್ ನಲ್ಲಿ ಸುಂಕ ಸಂಗ್ರಹ ಗುತ್ತಿಗೆ ಮಾಫಿಯಾ ಆಗಿ ಬೆಳೆದಿದೆ. ಅದಲ್ಲದೆ ಇದೇ ರಸ್ತೆ ನಿರ್ವಹಣೆಗೆ ಕೋಟ್ಯಾಂತರ ರೂಪಾಯಿ ವರ್ಷವೊಂದಕ್ಕೆ ಖಾಸಗಿ ಏಜನ್ಸಿಗೆ ಗುತ್ತಿಗೆ ನೀಡಲಾಗುತ್ತಿದೆ‌. ಈ ಹತ್ತಾರು ಕೋಟಿ ರೂಪಾಯಿ ಲಾಭದ ವ್ಯವಹಾರದ ಹಿತಾಸಕ್ತಿ ಟೋಲ್ ಗೇಟ್ ತೆರವಿಗೆ ದೊಡ್ಡ ಅಡ್ಡಿಯಾಗಿದೆ. ಇಂತಹ ಹಿತಾಸಕ್ತಿಗಳ ಪರವಾಗಿ ಸಂಸದರು, ಶಾಸಕರು ನಿಂತಿದ್ದಾರೆ ಎಂದು ಹೋರಾಟ ಸಮಿತಿ ಸಭೆ ಗಂಭೀರ ಆರೋಪ ಮಾಡಿದೆ. ರಸ್ತೆ ನಿರ್ವಹಣೆ ಗುತ್ತಿಗೆ ಪಡೆದ ಕಂಪೆನಿ ಮಳೆಗಾಲದ ಮುಂಚಿತವಾಗಿ ದುರಸ್ತಿ ಕೆಲಸ ನಡೆಸದಿರುವುದರಿಂದ ಹೆದ್ದಾರಿ ಪೂರ್ತಿ ಗುಂಡಿಮಯವಾಗಿ ಸಂಚಾರ ಅಪಾಯಕಾರಿಯಾಗಿ ಮಾರ್ಪಟ್ಟಿದೆ. ಕೂಳೂರು ಹೊಸ ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು ಹಳೆ ಸೇತುವೆ ಪ್ರಯಾಣಕ್ಕೆ ಅಯೋಗ್ಯ ಸ್ಥಿತಿಗೆ ತಲುಪಿದೆ. ಇಂತಹ ಕೆಟ್ಟ ರಸ್ತೆಗೆ ಬಲವಂತದಿಂದ ಟೋಲ್ ಪಾವತಿ ಮಾಡುವ ಸ್ಥಿತಿ ವಾಹನ ಸವಾರರಿಗೆ ಬಂದೊದಗಿದೆ. ಜನತೆ ಈ ಕುರಿತು ಆಕ್ರೋಶಗೊಂಡಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳು ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಸ್ಥಳೀಯ ಶಾಸಕರುಗಳ ಕರ್ತವ್ಯ ಚ್ಯುತಿಯ ಕುರಿತು ಸಚಿವ ನಿತಿನ್ ಗಡ್ಕರಿಗೆ ವಿವರವಾದ ಪತ್ರ ಬರೆಯಲು ಹೋರಾಟ ಸಮಿತಿ ನಿರ್ಧರಿಸಿತು ಹಾಗೂ ಟೋಲ್ ಗುತ್ತಿಗೆ ನವೀಕರಣ ಪ್ರಕ್ರಿಯೆ ಕೈ ಬಿಟ್ಟು, ಟೋಲ್ ಗೇಟ್ ತೆರವಿಗೆ ತಕ್ಷಣ ಕ್ರಮಗಳನ್ನು ಜನಪ್ರತಿನಿಧಿಗಳು ಕೈಗೊಳ್ಳದಿದ್ದಲ್ಲಿ ಜುಲೈ ಕೊನೆಯ ವಾರ ಸುರತ್ಕಲ್ ಟೋಲ್ ಗೇಟ್ ಗೆ ಮುತ್ತಿಗೆ ಹಾಕಲಾಗುವುದು ಎಂದು ಸಮಿತಿ ಸಭೆ ತೀರ್ಮಾನಿಸಿತು‌.

ಸಭೆಯ ಅಧ್ಯಕ್ಷತೆಯನ್ನು ವಸಂತ ಬೆರ್ನಾಡ್ ವಹಿಸಿದ್ದರು. ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ವಿವಿಧ ಸಂಘಟನೆಗಳ ಪ್ರಮುಖರಾದ ವೈ ರಾಘವೇಂದ್ರ ರಾವ್, ಮೂಸಬ್ಬ ಪಕ್ಷಿಕೆರೆ, ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ, ಪ್ರತಿಭಾ ಕುಳಾಯಿ, ಹರೀಶ್ ಪೇಜಾವರ, ಯೋಗೀಶ್ ಕೋಟ್ಯಾನ್ ಮುಲ್ಕಿ, ರಾಜೇಶ್ ಪೂಜಾರಿ ಕುಳಾಯಿ, ಟಿ ಎನ್ ರಮೇಶ್ ಸುರತ್ಕಲ್, ಸಲೀಂ ಶ್ಯಾಡೋ, ರಮೀಝ್ ಪಡುಬಿದ್ರೆ, ಶ್ರೀಕಾಂತ್ ಸಾಲ್ಯಾನ್, ಶ್ರೀನಾಥ್ ಕುಲಾಲ್, ರಶೀದ್ ಮುಕ್ಕ ಮತ್ತಿತರರು ಉಪಸ್ಥಿತರಿದ್ದರು‌.

ನಿರಂತರ ಮಳೆ - ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಜುಲೈ 8 ಮತ್ತು 9ರಂದು ರಜೆ

Posted On: 07-07-2022 07:50PM

ಉಡುಪಿ/ಮಂಗಳೂರು : ಕಳೆದ ಕೆಲ ದಿನಗಳಿಂದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ಸಮನೆ ಮಳೆ ಸುರಿಯುತ್ತಿದ್ದು ನಾಳೆಯೂ ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಜುಲೈ 8ಮತ್ತು 9 ರಂದು ರಜೆ ಘೋಷಿಸಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಕೆ ವಿ ಆದೇಶ ಹೊರಡಿಸಿದ್ದಾರೆ.

ಮಕ್ಕಳ ಹಿತದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ಜುಲೈ 8 ಮತ್ತು 9 ರಂದು ರಂದು ಉಭಯ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ,ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿ ಪೂರ್ವ, ಪದವಿ, ಸ್ನಾತಕೊತ್ತರ ಪದವಿ, ಡಿಪ್ಲೋಮ, ಇಂಜಿನಿಯರಿಂಗ್, ಐ.ಟಿ.ಐ, ಸೇರಿದಂತೆ ಸರ್ಕಾರಿ ಅನುದಾನಿತ ಮತ್ತು ಖಾಸಗಿ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ವರುಣಾರ್ಭಟ : ಭಾರಿ ಮಳೆ ಸಾಧ್ಯತೆ ; ಜುಲೈ 9ರವರೆಗೆ ಉಡುಪಿ, ದ.ಕ, ಉ.ಕ ಜಿಲ್ಲೆಯಲ್ಲಿ ರೆಡ್ ಅಲಟ್೯

Posted On: 07-07-2022 06:59PM

ಕಾಪು : ಕರಾವಳಿ ಜಿಲ್ಲೆಗಳಲ್ಲಿ ಜುಲೈ 9ರವರೆಗೆ ರೆಡ್ ಅಲಟ್೯ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಘೋಷಿಸಿದೆ.

ಜುಲೈ 7 ರಂದು ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ 204 ಮಿ.ಮೀ ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ಮುಂಜಾಗೃತಾ ಕ್ರಮವಾಗಿ ರೆಡ್ ಅಲರ್ಟ್ ಘೋಷಿಸಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.

ಇದೀಗ ಜುಲೈ 8 ಮತ್ತು 9 ರವರೆಗೆ ವಿಸ್ತರಿಸಲಾಗಿದೆ. ಮುಂದಿನ 48 ಗಂಟೆಗಳಲ್ಲಿ, ಕರಾವಳಿಯ ಎಲ್ಲಾ ಪ್ರದೇಶಗಳಲ್ಲಿ ಸಾಕಷ್ಟು ಪ್ರಮಾಣದ ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

NSCDF ಸಂಸ್ಕೃತಿ ಜಾತ್ರೆ - ಸಾಮಾಜಿಕ, ರಾಜಕೀಯ, ಧಾರ್ಮಿಕ ಪರಿಸರದ ಬಗ್ಗೆ ಅರಿವು ಮೂಡಿಸಬೇಕಾಗಿದೆ : ಅರಳಿ ನಾಗರಾಜ್

Posted On: 07-07-2022 11:44AM

ಮಂಗಳೂರು : ಪರಿಸರ ಅಂದರೆ ಗಿಡ ನೆಡುವುದು ನೀರು ಉಳಿಸುವುದು ಎಂದು ಭಾಷಣ ಮಾಡುತ್ತೇವೆ ಕಾರ್ಬನ ಡೈಆಕ್ಸೈಡ್ ಜಾಸ್ತಿ ಆಗದಂತೆ ನೋಡಿಕೊಳ್ಳಬೇಕು ಎಂದೆಲ್ಲ ಹೇಳಿಕೊಳ್ಳುತ್ತೇವೆಯೇ ಹೊರತು ಸಾಮಾಜಿಕ ಪರಿಸರ, ರಾಜಕೀಯ ಪರಿಸರ, ಧಾರ್ಮಿಕ ಪರಿಸರದ ಬಗ್ಗೆ ಅರಿವು ಮೂಡಿಸುತ್ತಿಲ್ಲ. ಇದು ಅತ್ಯಂತ ಖೇದಕರ ಸಂಗತಿ ಎಂದು ಹೈಕೋರ್ಟ್ ವಿಶ್ರಾಂತ ನ್ಯಾಯಾಧೀಶ ಅರಳಿ ನಾಗರಾಜ್ ಹೇಳಿದರು. ಅವರು ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಪುರ ಭವನದಲ್ಲಿ ಜುಲೈ ಮೂರರಂದು ಆಯೋಜಿಸಿದ್ದ ಒಂದು ದಿನದ ಸಂಸ್ಕೃತಿ ಜಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶ ಇಂದು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಕೋವಿಡ್ ನಂತಹ ಪರಿಸ್ಥಿತಿಯಲ್ಲೂ ದೇಶ ಮುನ್ನಡೆದಿದೆ. ವಿದೇಶಗಳಿಗೆ ಔಷಧಿ ರಫ್ತು ಮಾಡುವ ಸಾಮರ್ಥ್ಯ ಹೊಂದಿದೆ. ಆದರೆ ಅದೇ ರೀತಿ ಬ್ರಷ್ಟಾಚಾರದಂತಹ ಪಿಡುಗು ಕೂಡಾ ವ್ಯಾಪಕವಾಗಿ ಹರಡಿಕೊಂಡಿದೆ. ಇಂದು ಪೂರ್ಣಾಂಕ ಪಡೆದ ಮಕ್ಕಳಿಗೆ ಮಾನ್ಯತೆ ಇಲ್ಲ. ಲಕ್ಷಾಂತರ ರುಪಾಯಿ ನೀಡಿ ಸೀಟು ಗಿಟ್ಟಿಸಿ ಕೊಂಡ ವಿದ್ಯಾರ್ಥಿಗಳು ಬಳಿಕ ಬ್ರಷ್ಟರಾಗದೆ ಇರುತ್ತಾರೆಯೇ ಎಂದು ಪ್ರಶ್ನಿಸಿದ ಅವರು ಇದನ್ನ ತಡೆಯಬೇಕಾದರೆ ಇಂದಿನ ಮಕ್ಕಳಲ್ಲಿ ಸಾಮಾಜಿಕ ಅರಿವು ಮೂಡಿಸಬೇಕಾಗಿದೆ ಎಂದು ಹೇಳಿದರು.

ಲೋಕಾಯುಕ್ತ ನ್ಯಾಯವಾದಿ ರವೀಂದ್ರ ಮುನ್ನಿ ಪಾಡಿ ಮಾತನಾಡಿ NSCDF ಒಂದು ಸಾಮಾಜಿಕ ಕಳಕಳಿ ಹೊಂದಿರುವ ಸಂಸ್ಥೆ . ಈ ಕಾರಣದಿಂದಾಗಿಯೇ ಅವರ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ನಾನು ಭಾಗವಹಿಸುತ್ತೇನೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಾಮಾಜಿಕ ಸೇವೆಗಾಗಿ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸಾಮಾಜಿಕ ವಿಜ್ಞಾನಿ ಡಾ. ಎಂ ಪಿ. ವರ್ಷ , ಸಾಹಿತ್ಯ ಕ್ಷೇತ್ರದಲ್ಲಿ ಪಿ.ವಿ.ಪ್ರದೀಪ್ ಕುಮಾರ್, ನೃತ್ಯ ಕ್ಷೇತ್ರದಲ್ಲಿ ಲಾಲಿತ್ಯ ಕುಮಾರ್ ಬೇಲೂರು ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.

NSCDF ಅಧ್ಯಕ್ಷ ಗಂಗಾಧರ್ ಗಾಂಧಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. KSSAP ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ, ಕವಿಗೋಷ್ಠಿ ಅಧ್ಯಕ್ಷೆ ಉಪನ್ಯಾಸಕಿ ಮಾನ್ವಿ, ಕವಿಗೋಷ್ಟಿ ಸಂಚಾಲಕಿ ಮಾನಸ ಪ್ರವೀಣ್ ಭಟ್ ಉಪಸ್ಥಿತರಿದ್ದರು. ರಶ್ಮಿ ಸನಿಲ್ ಕಾರ್ಯಕ್ರಮ ನಿರೂಪಿಸಿದರು. ಕವಿಗೋಷ್ಠಿ, ಯಕ್ಷಗಾನ ಹಾಗೂ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಪಾಂಬೂರು : ಕಾಣೆಯಾಗಿದ್ದ ವ್ಯಕ್ತಿ ಪತ್ತೆ

Posted On: 06-07-2022 01:58PM

ಶಿರ್ವ : ಕಾಪು ತಾಲೂಕಿನ ಪಾಂಬೂರಿನ ಲಕ್ಷ್ಮಣ್ ರಾವ್ (66) ಕಾಣೆಯಾದ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇವರು ಉಡುಪಿಯ ಕಲ್ಯಾಣಪುರ, ಸಂತೆಕಟ್ಟೆ ಬಳಿ ಪತ್ತೆಯಾಗಿದ್ದಾರೆ.

ಇವರು ಕಾಣೆಯಾದ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಹೋಟೆಲ್ನಲ್ಲಿ ಹೊಟ್ಟೆ ತುಂಬಾ ತಿಂದು ಹಣ ನೀಡದೆ ಮಾಲಿಕರಿಗೆ ಬೆದರಿಕೆ

Posted On: 06-07-2022 12:00PM

ಮಣಿಪಾಲ : ಹೋಟೆಲ್ ಗೆ ಆಗಮಿಸಿ ಹೊಟ್ಟೆ ತುಂಬಾ ತಿಂದು ಹಣವನ್ನು ಕೊಡದೆ ಹೋಟೆಲ್ ಮಾಲಿಕರಿಗೆ ಬೆದರಿಕೆಯೊಡ್ಡಿದ ಘಟನೆ ಮುರ್ಡೇಶ್ವರ ಭಟ್ಕಳ, ಉತ್ತರ ಕನ್ನಡ ಜಿಲ್ಲೆ ಇಲ್ಲಿ ಜುಲೈ 5ರಂದು ನಡೆದಿದೆ.

ಹಬೀಬುಲ್ಲಾ ಇವರ ಹೋಟೆಲ್ ಗೆ ಮೊಹಮ್ಮದ್ ಅನ್ವರ್ ಎಂಬಾತ ಕಾರಿನಲ್ಲಿ ಬಂದು ತಿಂಡಿ ತಿಂದು ಚಾ ಕುಡಿದು ಅದರ ಹಣವನ್ನು ಪಾವತಿಸದೇ ಕಾರಿನ ಬಳಿ ಹೋದಾಗ ಮಾಲಿಕರು ಹಣವನ್ನು ಕೇಳಿದಾಗ ಕೈಯಿಂದ ಹೊಡೆದು ಅಡ್ಡಗಟ್ಟಿ ಪಿಸ್ತೂಲ್ ತರಹ ಇರುವ ಒಂದು ವಸ್ತುವನ್ನು ತೋರಿಸಿ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ದಾಖಲಿಸಿದ್ದಾರೆ.

ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾಂಬೂರು : ವ್ಯಕ್ತಿಯೋರ್ವ ಕಾಣೆ

Posted On: 06-07-2022 11:37AM

ಶಿರ್ವ : ಕಾಪು ತಾಲೂಕಿನ ಪಾಂಬೂರಿನ ಲಕ್ಷ್ಮಣ್‌ ರಾವ್‌ (66) ಕಾಣೆಯಾದ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಜಾತ ರಾವ್‌ ಎಂಬುವವರು ನೀಡಿದ ದೂರಿನಂತೆ ಅವರ ಗಂಡ ಶಿವರಾಯ ರಾವ್‌ ಮತ್ತು ತಂದೆ ಲಕ್ಷ್ಮಣ್‌ ರಾವ್‌ ರವರು ಉಡುಪಿ ಬನ್ನಂಜೆಯ ಕೆನರಾ ಬ್ಯಾಂಕ್‌ ವ್ಯವಹಾರದ ಬಗ್ಗೆ ಬಸ್ಸಿನಲ್ಲಿ ಬಂದವರು ಉಡುಪಿಯ ಕೆಎಂ ಮಾರ್ಗದ ಬಳಿ ಬಸ್ಸಿನಿಂದ ಇಳಿದಿದ್ದು, ಶಿವರಾಯ ರಾವ್‌ರವರು ಲಕ್ಷ್ಮಣ ರಾವ್‌ರವರನ್ನು ಅಲ್ಲಿಯೇ ನಿಲ್ಲಲು ಹೇಳಿ ರಾಧಾ ಮೆಡಿಕಲ್‌ಗೆ ಹೋಗಿ ಔಷಧಿಯನ್ನು ತೆಗೆದುಕೊಂಡು ವಾಪಾಸು ಹಿಂತಿರುಗಿ ಬಂದು ನೋಡಿದಾಗ ಲಕ್ಷ್ಮಣ ರಾವ್‌ರವರು ಅಲ್ಲಿರಲಿಲ್ಲ. ಈವರೆಗೂ ಮನೆಗೂ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ.

ಮುಂಬೈ ಉದ್ಯಮಿ ಶ್ರೀನಿವಾಸ್ ಎನ್ ಕಾಂಚನ್ ಅವರಿಗೆ ರಾಷ್ಟ್ರೀಯ ನಿರ್ಮಾಣ ರತನ್ ಅವಾರ್ಡ್

Posted On: 06-07-2022 08:28AM

ಕಾಪು : ಅಖಿಲ ಭಾರತ ಉದ್ಯಮ ಅಭಿವೃದ್ಧಿ ಸಂಘವು ಮುಂಬೈ ಉದ್ಯಮಿ ಕನ್ನಡಿಗ ಶ್ರೀನಿವಾಸ್ ಎನ್ ಕಾಂಚನ್ ಅವರಿಗೆ 'ರಾಷ್ಟ್ರೀಯ ನಿರ್ಮಾಣ ರತನ್ ಅವಾರ್ಡ್ ಫ಼ಾರ್ ಇಂಡಸ್ಟ್ರಿ ಡೆವಲಪ್ಮೆಂಟ್' ಎಂಬ ರಾಷ್ಟ್ರೀಯ ಪ್ರಶಸ್ತಿಯ ಗೌರವ ಪಡೆದರು.

ಶ್ರೀನಿವಾಸ್ ಕಾಂಚನ್ ಅವರು ಹಿಂದುಳಿದ ಪ್ರದೇಶವಾದ ಮಹಾರಾಷ್ಟ್ರ ದ ನಾಸಿಕ್ ಗ್ರಾಮೀಣ ಪ್ರದೇಶದಲ್ಲಿ ಪಂಚಾವಟಿ ವಲ್ವೇಸ್ ಆಂಡ್ ಫ್ಲಾಲೆಂಗ್ಸ್ ಎಂಬ ಕಾರ್ಖಾನೆಯನ್ನು ಸ್ಥಾಪಿಸಿ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹಾಗೂ ಸ್ಥಳೀಯರಿಗೆ ಉದ್ಯೋಗ ನೀಡುವಲ್ಲಿ ಶ್ರಮಿಸಿರುವದರಿಂದ ಈ ಪ್ರತಿಷ್ಟಿತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅವರ ಉದ್ಯೋಗ ವೃದ್ಧಿಯಲ್ಲಿ ಅವರ ಪುತ್ರ ಸಾಯಿಪ್ರಸಾದ್ ಸಹಾಯ ಮಾಡುತ್ತಿದ್ದಾರೆ.

ಮಂಗಳೂರಿನಲ್ಲಿ 518 ವಿದೇಶಿ ಪ್ರಜೆಗಳ ವಿಚಾರಣೆ

Posted On: 04-07-2022 10:55PM

ಮಂಗಳೂರು : ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚುವ ಕಾರ್ಯ ಸಾಗಿದ್ದು, ಕಳೆದ ಒಂದು ವಾರದಲ್ಲಿ 4 ಸಾವಿರ ಮಂದಿಯ ದಾಖಲೆ ಪರಿಶೀಲಿಸಲಾಗಿದೆ. ಈ ಪೈಕಿ ಸೂಕ್ತ ದಾಖಲೆಗಳಿಲ್ಲದೆ ವಾಸಿಸುತ್ತಿದ್ದ 518 ಮಂದಿ ವಲಸೆ ಕಾರ್ಮಿಕರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಸೋಮವಾರ ನಗರದ ರೊಸಾರಿಯೊ ಶಾಲೆಯ ಸಭಾಂಗಣದಲ್ಲಿ ಪೊಲೀಸರು ಬೆಳಗ್ಗಿನಿಂದಲೇ ಪ್ರತಿಯೊಬ್ಬ ವಲಸೆ ಕಾರ್ಮಿಕರ ದಾಖಲೆ ಪರಿಶೀಲನೆ ಕಾರ್ಯ ನಡೆಸಿದ್ದಾರೆ.

ನಗರದಲ್ಲಿ ಬಾಂಗ್ಲಾ ಮತ್ತಿತರ ದೇಶಗಳ ಕಾರ್ಮಿಕರು ಅಕ್ರಮವಾಗಿ ನೆಲೆಸಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಅವರನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಈ ದಾಖಲೆ ಪರಿಶೀಲನೆ ಕಾರ್ಯ ನಡೆದಿದೆ.

ಈ ಸಂದರ್ಭ ಮಾತನಾಡಿದ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ನಗರದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಸಲಾದ ಕಾರ್ಯಾಚರಣೆಯ ವೇಳೆ 4000 ಮಂದಿಯ ದಾಖಲೆ ಪರಿಶೀಲನೆ ನಡೆಸಲಾಗಿದೆ. ಅವರಲ್ಲಿ ಸರಿಯಾದ ದಾಖಲೆಗಳಿಲ್ಲದೆ, ಅನುಮಾನಸ್ಪದ ರೀತಿಯಲ್ಲಿ ಕಂಡುಬಂದವರನ್ನು ವಿಚಾರಣೆಗೊಳಪಡಿಸಲಾಗಿದೆ ಎಂದರು.

ಗೃಹ ಸಚಿವರು ಇತ್ತೀಚೆಗೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪರಿಶೀಲನಾ ಸಭೆಯ ಸಂದರ್ಭ ನೀಡಿದ ಆದೇಶದಂತೆ ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವ ಕಾರ್ಯ ಸಾಗಿದೆ. ಪ್ರತಿಯೊಬ್ಬ ವಲಸೆ ಕಾರ್ಮಿಕರ ಮೇಲೂ ವಿಶೇಷ ನಿಗಾ ಇಡಲಾಗಿದೆ ಎಂದರು. ಮುಖ್ಯವಾಗಿ ಚುನಾವಣಾ ಗುರುತಿನ ಚೀಟಿ, ಆಧಾರ್‌ಕಾರ್ಡ್‌ಗಳ ಪರಿಶೀಲನೆ ನಡೆಯುತ್ತಿದೆ. ಆದರೆ ಅವುಗಳನ್ನು ಕೂಡಾ ನಕಲಿಯಾಗಿ ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅದನ್ನು ಖಾತ್ರಿ ಪಡಿಸುವ ನಿಟ್ಟಿನಲ್ಲಿಯೂ ಮೊಬೈಲ್ ನಂಬರಗಳ ಮೂಲಕ ಅವರ ಪರಿಶೀಲನೆ ನಡೆಸಲಾಗುತ್ತಿದೆ. 20ಕ್ಕೂ ಅಧಿಕ ವಿಷಯಗಳ ಮೇಲೆ ಸಮಗ್ರ ವಿಚಾರಣೆ ನಡೆಸಲಾಗುತ್ತಿದೆ ಎಂದವರು ತಿಳಿಸಿದರು.

ಅರ್ಜಿ ವಿಲೇವಾರಿಯಲ್ಲಿ ಶಿರ್ವ ಗ್ರಾಮ ಒನ್ ಕೇಂದ್ರ ಪ್ರಥಮ

Posted On: 04-07-2022 09:08PM

ಕಾಪು : ಉಡುಪಿ ಜಿಲ್ಲೆಯಲ್ಲಿ ಕಳೆದ 6 ತಿಂಗಳಲ್ಲಿ ಗ್ರಾಮ ಒನ್ ಕೇಂದ್ರಗಳಲ್ಲಿ ಅತೀ ಹೆಚ್ಚಿನ ಅರ್ಜಿ ವಿಲೇವಾರಿಯಲ್ಲಿ ಮಾಡಿದ ಶಿರ್ವ ಗ್ರಾಮ ಒನ್ ಕೇಂದ್ರ ಮೊದಲ ಸ್ಥಾನ ಪಡೆದುಕೊಂಡಿದೆ.

ಉಡುಪಿ ಜಿಲ್ಲೆಯ ಎಡಿಸಿ ವೀಣಾ ಬಿ.ಎನ್ ಇವರು ಅಭಿನಂದಿಸಿ, ಟ್ರೋಫಿಯನ್ನು ನೀಡಿ ಗೌರವಿಸಿದರು.