Updated News From Kaup
ಮರೆಯಾಯಿತು ಶ್ರಮಜೀವಿಯ ಬದುಕು : ಶ್ರೀ ಸಂಜೀವ ಪೂಜಾರಿ

Posted On: 29-06-2022 07:50PM
ಕಾಪು : ಮೂಡುಬೆಳ್ಳೆ ಗರಡಿಯ ಪೂ ಪೂಜನೆಯ ಸಂಜೀವ ಪೂಜಾರಿಯವರು ಜೂನ್ 28ರಂದು ದೈವಾಧೀನರಾದರು.
ಶ್ರದ್ದಾ ಭಕ್ತಿಯ ಕೇಂದ್ರ ಬ್ರಹ್ಮ ಬೈದ್ಯರುಗಳ ಗರೋಡಿಯಲ್ಲಿ ಪೂ ಪೂಜನೆಯ ಪೂಜಾರಿಯಾಗಿ ಕಾಯ ವಾಚಾ ಮನಪೂರ್ವಕವಾಗಿ ಆತ್ಮ ಸಮರ್ಪಣಾ ಮನೋಭಾವದಿಂದ ಬೈದ್ಯರುಗಳ ಸೇವಾ ಕಾರ್ಯವನ್ನು ಮಾಡಿದ್ದಲ್ಲದೆ ಬೈದ್ಯರುಗಳು ಇತರೆ ಕ್ಷೇತ್ರಗಳಲ್ಲಿ ಆಯಾ ಸಂಪ್ರದಾಯ ಪರಂಪರೆಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದವರು.
ಹಿರಿಯರಿಂದ ಬಂದ ರೂಢಿಗತ ಆಚರಣೆಗಳನ್ನು ಚಾಚೂ ತಪ್ಪದ ರೀತಿಯಲ್ಲಿ ಪಾಲಿಸಿಕೊಂಡು ಬಂದವರು. ಕೃಷಿ, ಹೈನುಗಾರಿಕೆಯಂತಹ ಶ್ರಮಭರಿತ ಕಾಯಕದಲ್ಲಿ ತೊಡಗಿಕೊಂಡ ಕ್ರೀಯಾಶೀಲ ವ್ಯಕ್ತಿ ಇಂದು ಅಕಾಲಿಕವಾಗಿ ಬೈದ್ಯರುಗಳ ಪಾದ ಸೇರಿರುವುದನ್ನು ತಿಳಿಸಲು ವಿಷಾದವಾಗುತ್ತಿದೆ.
ಆಗಲಿದ ಸಂಜೀವ ಪೂಜಾರಿಯವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಿ ಅವರ ಕುಟುಂಬಕ್ಕೆ ದು:ಖವನ್ನು ಸಹಿಸುವ ಶಕ್ತಿಯನ್ನು ನೀಡಲಿ.
ರೋಟರಿ ಶಂಕರಪುರ 2022-23ನೇ ಸಾಲಿನ ಪದಗ್ರಹಣ

Posted On: 29-06-2022 10:46AM
ಕಟಪಾಡಿ : ರೋಟರಿ ಜಿಲ್ಲೆ 3182 ವಲಯ 5ರ ರೋಟರಿ ಶಂಕರಪುರ 2022-23ನೇ ಸಾಲಿನ ಪದಗ್ರಹಣವು ರೋಟರಿ ಶತಾಬ್ದಿ ಭವನದಲ್ಲಿ ಜೂ.28ರಂದು ಜರಗಿತು. ರೋಟರಿ ಜಿಲ್ಲಾ ಗವರ್ನರ್ ರೊ|ಡಾ| ಜಯಗೌರಿ ಹಡಿಗಾಲ್ ಪದಗ್ರಹಣ ನೆರವೇರಿಸಿ ಶುಭ ಕೋರಿದರು.
ಅಧಿಕಾರ ಹಸ್ತಾಂತರ : 2021-22 ಸಾಲಿನ ಅಧ್ಯಕ್ಷರಾದ ಫ್ಲಾವಿಯ ಮಿನೇಝಸ್ ನೂತನ ಅಧ್ಯಕ್ಷರಾದ ರೊ|ಗ್ಲಾಡ್ಸನ್ ಕುಂದರ್ ರಿಗೆ ಮತ್ತು 2021-22 ಸಾಲಿನ ಕಾರ್ಯದರ್ಶಿ ಮಾಲಿನಿ ಶೆಟ್ಟಿ ನೂತನ ಕಾರ್ಯದರ್ಶಿ ರೊಸಿಲ್ವಿಯಾ ಕ್ಯಾಸ್ತಲಿನೋ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಹಲವು ಜಿಲ್ಲಾ ಸಮ್ಮೇಳನಗಳಲ್ಲಿ ಅಸಂಖ್ಯ ಪ್ರಶಸ್ತಿ, ಮನ್ನಣೆಗಳನ್ನು ಪಡೆದಿದ್ದು, ಸರ್ವರ ಸಹಕಾರ, ಸಹಯೋಗದೊಡನೆ ಇನ್ನಷ್ಟು ಉತ್ತುಂಗಕ್ಕೇರಿಸುವ ಅಭಿಲಾಷೆಯನ್ನು ನೂತನ ಅಧ್ಯಕ್ಷರೊಗ್ಲಾಡನ್ ಕುಂದರ್ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಅಸಿಸ್ಟೆಂಟ್ ಗವರ್ನರ್ ರೊ| ಡಾ| ಶಶಿಕಾಂತ ಕರಿಂಕ, ವಲಯ ಸೇನಾನಿ ರೊ|ಯಶೋಧರ ಶೆಟ್ಟಿ ಉಪಸ್ಥಿತರಿದ್ದರು.
ಉಡುಪಿ : ಸ್ವಚ್ಛ ವಿದ್ಯಾಲಯ ಪ್ರಶಸ್ತಿ ಪುರಸ್ಕಾರ

Posted On: 28-06-2022 09:43PM
ಉಡುಪಿ : ಪ್ರತಿಯೊಂದು ಕ್ಷೇತ್ರದಲ್ಲಿಯೂ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡುವುದು ಮುಖ್ಯ ಕರ್ತವ್ಯವಾಗಿದೆ. ಇದರಿಂದ ಸಮಾಜದಲ್ಲಿ ಎಲ್ಲರೂ ಉತ್ತಮ ಅರೋಗ್ಯವಂತರಾಗಿ ಇರಲು ಸಾಧ್ಯ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ಹೇಳಿದರು. ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ ಉಡುಪಿ ಜಿಲ್ಲೆ ಸಹಯೋಗದಲ್ಲಿ ನಡೆದ ಸ್ವಚ್ಛ ವಿದ್ಯಾಲಯ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ನಮ್ಮ ಸುತಮುತ್ತಲಿನ ಪರಿಸರವನ್ನು ನಾವು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರಥಮ ಆದ್ಯತೆಯಾಗಬೇಕು. ಕೇವಲ ಪ್ರಶಸ್ತಿ ಪುರಸ್ಕಾರ ಪಡೆಯುವ ದೃಷ್ಠಿಯಿಂದ ಈ ಕಾರ್ಯವನ್ನು ಮಾಡುವುದು ಸರಿಯಲ್ಲ. ಇದು ನಮ್ಮ ದೈನಂದಿನ ಚಟುವಟಿಕೆಗಳ ಕಾರ್ಯವಾಗಬೇಕು ಎಂದರು.
ಯಾವುದೇ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವಾಗ ಫಲಾಪೇಕ್ಷೆಯಿಲ್ಲದೆ ನಮ್ಮ ಕರ್ತವ್ಯಗಳನ್ನು ಶ್ರದ್ಧೆಯಿಂದ ಮಾಡಿದಾಗ ಅದಕ್ಕೆ ಪ್ರತಿಫಲ ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಅಂತಹ ಪ್ರತಿಫಲ ಮಹತ್ವನ್ನು ಪಡೆದಿರುತ್ತದೆ. ಈ ರೀತಿಯಾಗಿ ನಾವುಗಳು ಸ್ವಚ್ಛತಾ ಕಾರ್ಯಗಳನ್ನು ಮಾಡಿದಾಗ ಅದು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ನಾಂದಿಯಾಗುತ್ತದೆ ಎಂದರು. ಕೇಂದ್ರ ಸರ್ಕಾರದ ಸ್ವಚ್ಛ ವಿದ್ಯಾಲಯ ಪುರಸ್ಕಾರದಂತಹ ಕಾರ್ಯಕ್ರಮವನ್ನು ನಾವ್ಯಾರು ನಿರೀಕ್ಷಿಸಿರಲಿಲ್ಲ. ಇಂತಹ ಒಂದು ಮಹತ್ವ ಕಾರ್ಯಕ್ರಮವನ್ನು ರೂಪಿಸುವುದರೊಂದಿಗೆ ಶಾಲಾ ಕಾಲೇಜುಗಳ ಪರಿಸರವನ್ನು ಉತ್ತಮವಾಗಿ ಇರಿಸುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಾಮರ್ಥ್ಯ ಹಾಗೂ ಶುಚಿತ್ವವನ್ನು ಬೆಳೆಸಲು ಸಹಕಾರಿಯಾಗಲಿದೆ ಎಂದರು.
ಪ್ರಸ್ತುತ ಸಾಲಿನ ಈ ಪುರಸ್ಕಾರಕ್ಕೆ ಜಿಲ್ಲೆಯ 1168 ಶಾಲಾ ಕಾಲೇಜುಗಳಲ್ಲಿ 729 ಶಾಲೆಗಳು ನೊಂದಾಯಿಸಿ, 627 ಶಾಲೆಗಳು ಆನ್ಲೈನ್ನಲ್ಲಿ ತಮ್ಮ ಶಾಲೆಯ ಕಾರ್ಯ ಸಾಧನೆಯ ಮಾಹಿತಿಯನ್ನು ದಾಖಲಿಸಿದ್ದು, ಜಿಲ್ಲಾ ಮಟ್ಟದ ಸಮಿತಿಯು ಸರ್ಕಾರದ ಮಾನದಂಡದನ್ವಯ 38 ಶಾಲೆಗಳನ್ನು ವಿವಿಧ ಆಯಾಮಗಳಲ್ಲಿ ಆಯ್ಕೆಗೊಂಡಿರುತ್ತವೆ. ಈ ಎಲ್ಲಾ ಶಾಲಾ-ಕಾಲೇಜುಗಳನ್ನು ವೈಯಕ್ತಿಕವಾಗಿ ಅಭಿನಂದಿಸುತ್ತೇನೆ ಎಂದರು. ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಲ್ಲಿ ಉತ್ತಮ ಶಿಕ್ಷಣವನ್ನು ಪಡೆಯುವುದರಿಂದ ಸಮಾಜದ ಹಿತಕ್ಕೆ ಹಾಗೂ ತಮ್ಮ ವೈಯಕ್ತಿಕ ಅಭಿವೃದ್ಧಿ ಹೊಂದಲು ಸಾದ್ಯವಾಗುತ್ತದೆ ಎಂದ ಅವರು, ಮುಂದಿನ ದಿನಗಳಲ್ಲಿ ಜಿಲ್ಲೆಯ ಪ್ರತಿಯೊಂದು ಶಾಲೆಗಳೂ ಸ್ವಚ್ಛ ವಿದ್ಯಾಲಯ ಪುರಸ್ಕಾರ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಒಳಿತು ಎಂದರು. ಸ್ವಚ್ಛ ವಿದ್ಯಾಲಯ ಪ್ರಶಸ್ತಿ ಪುರಸ್ಕಾರದಲ್ಲಿ, ಕಾರ್ಕಳ ತಾಲೂಕಿನ ನಲ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬ್ರಹ್ಮಾವರದ ಚೇತನಾ ಪ್ರೌಢಶಾಲೆ, ಹಂಗಾರಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಆವರ್ಸೆಯ ಹಿರಿಯ ಪ್ರಾಥಮಿಕ ಶಾಲೆ, ನಿಟ್ಟೂರಿನ ಜಿ.ಎಂ.ವಿದ್ಯಾನಿಕೇತನ ಶಾಲೆ, ಕುಂದಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಡುವಳತ್ತೂರು ಕಾರ್ವಾಡಿ ಶಾಲೆ, ನೇತಾಜಿ ಹಿರಿಯ ಪ್ರಾಥಮಿಕ ಶಾಲೆ ಹಳ್ನಾಡು, ಉಡುಪಿಯ ಸೈಂಟ್ ಸಿಸಿಲಿಸ್ ಶಾಲೆಗಳಿಗೆ ಸಮಗ್ರ ಪ್ರಶಸ್ತಿ ಹಾಗೂ 30 ಶಾಲೆಗಳಿಗೆ ಇತರೆ ಪ್ರಶಸ್ತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ರಘುಪತಿ ಭಟ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್., ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್., ಡಿಡಿಪಿಐ ಗೋವಿಂದ ಮಡಿವಾಳ ಹಾಗೂ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು. ಚಂದ್ರಾ ನಾಯಕ್ ಸ್ವಾಗತಿಸಿ , ವಂದಿಸಿದರು.
ಜೂನ್ 30 ರಂದು ಹಿರಿಯ ಪತ್ರಕರ್ತ ಕೆ.ಎಲ್.ಕುಂಡಂತಾಯರಿಗೆ ಪತ್ರಿಕಾ ದಿನದ ಗೌರವ ಪ್ರದಾನ

Posted On: 28-06-2022 02:15PM
ಉಡುಪಿ: ಹಿರಿಯ ಪತ್ರಕರ್ತ, ಯಕ್ಷಪ್ರಭಾ ಸಂಪಾದಕ ಕೆ.ಎಲ್.ಕುಂಡಂತಾಯ ಅವರಿಗೆ ಬೆಂಗಳೂರಿನ ಪತ್ರಕರ್ತರ ವೇದಿಕೆ ನೀಡುವ ಪತ್ರಿಕಾ ದಿನದ ಗೌರವವನ್ನು ಜೂನ್ ೩೦ ರಂದು ಅವರ ನಿವಾಸದಲ್ಲಿ ನಡೆಯುವ ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಡಾ. ಹರಿಕೃಷ್ಣ ಪುನರೂರು ಅವರು ಹಿರಿಯ ಪತ್ರಕರ್ತ ಪ್ರತಿನಿಧಿ ಸಂಪಾದಕ ಡಾ. ಉದಯ ರವಿ ಅವರ ಅಧ್ಯಕ್ಷತೆಯಲ್ಲಿ ಪ್ರದಾನಿಸುವರು ಎಂದು ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಡಾ.ಶೇಖರ ಅಜೆಕಾರು ತಿಳಿಸಿದ್ದಾರೆ.
70 ರ ಹರೆಯದ ಧಣಿವರಿಯದ ಕುಂಡಂತಾಯ ಅವರು 20 ವರ್ಷಗಳ ಕಾಲ ಉದಯವಾಣಿ ದೈನಿಕದಲ್ಲಿ ಮುಖ್ಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿ ಇದೀಗ ಕಟೀಲು ಕ್ಷೇತ್ರದಿಂದ ಪ್ರಕಟವಾಗುವ ಯಕ್ಷಪ್ರಭಾ ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿರಂತರ ಶೋಧನೆಯ, ಸಂಶೋಧನೆಯ ಮನೋಭಾವವುಳ್ಳ ಸಜ್ಜನ ಸಾಹಿತಿಯಾಗಿದ್ದಾರೆ.
ವಿಶ್ವನಾಥ ಶೆಣೈ, ಕರುಣಾ ಸುರೇಶ್ ಪೈ, ಎಸ್.ಆರ್.ಬಂಡಿಮಾರ್, ಪುನೀತ್ ಎಂ, ಪ್ರಶಾಂತ್ ಕಾಮತ್ ಕುಕ್ಕಿಕಟ್ಟೆ, ಜನಾರ್ದನ ಕೊಡವೂರು, ರಾಕೇಶ್ ಕುಂಜೂರು ಸಹಿತ ಆಹ್ವಾನಿತ ಗಣ್ಯರು ಉಪಸ್ಥಿತರಿರುವರು.
ಅಂಬಾತನಯ ಮುದ್ರಾಡಿ, ಎ.ಎಸ್.ಎನ್.ಹೆಬ್ಬಾರ್, ವಿದ್ವಾನ್ ಬಿ.ಚಂದ್ರಯ್ಯ, ಬಿ.ಎ.ಸನದಿ, ಮಲಾರ್ ಜಯರಾಮ ರೈ, ಎಂ.ವಿ.ಕಾಮತ್, ಸತೀಶ್ ಪೈ ಮಣಿಪಾಲ, ಕು.ಗೋ ಉಡುಪಿ, ಶ್ರೀನಿವಾಸ ರಾವ್ ಎಕ್ಕಾರು, ಕು.ಗೋ ಉಡುಪಿ, ಬಿ.ಸಿ.ರಾವ್ ಶಿವಪುರ, ನಾದವೈಭವಂ ಉಡುಪಿ ವಾಸುದೇವ ಭಟ್ ಸಹಿತ ಗಣ್ಯರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಉಡುಪಿ : ಬೆಂಗಳೂರನ್ನು ನಗರವನ್ನಾಗಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ - ಸಿಇಓ ಪ್ರಸನ್ನ ಹೆಚ್

Posted On: 27-06-2022 11:31PM
ಉಡುಪಿ : ಮಣ್ಣಿನ ಕೋಟೆಯಿಂದ ಕಟ್ಟಿದ ಹಳ್ಳಿ ಪ್ರದೇಶವಾಗಿದ್ದ ಬೆಂದಕಾಳೂರನ್ನು ನಗರವಾಗಿ ನಿರ್ಮಿಸಿದ ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರಿಂದ, ಬೆಂಗಳೂರು ನಗರ ಇಂದು ದೇಶ-ವಿದೇಶಿಗರಿಗೆ ಚಿರಪರಿಚಿತವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್. ಹೇಳಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಸಹಯೋಗದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಕೆಂಪೇಗೌಡರು ಶೌರ್ಯ, ಸಾಹಸ, ದೂರದೃಷ್ಠಿಗೆ ಹೆಸರಾಗಿದ್ದು, ವಿಜಯನಗರ ಅರಸರ ಒಪ್ಪಿಗೆಯೊಂದಿಗೆ ಯಲಹಂಕದಲ್ಲಿ ಜಾತ್ಯಾತೀತ ನಗರವನ್ನು ನಿರ್ಮಿಸಿದರು. ಬೆಂಗಳೂರು ನಗರವನ್ನು ಜಾತಿ ಆಧಾರಿತವನ್ನಾಗಿ ಮಾಡದೇ ವೃತ್ತಿ ಆಧಾರಿತ ಭೂಮಿಯನ್ನಾಗಿ ಮಾಡಿದರು. ಒಂದು ಕಾಲದಲ್ಲಿ ಕಾಡಿನಿಂದ ಕೂಡಿದ್ದ ಬೆಂಗಳೂರು ಪ್ರದೇಶಕ್ಕೆ ಕೋಟೆ ನಿರ್ಮಿಸಿ, ನಗರವನ್ನಾಗಿ ಮಾಡಿ, ಅದರ ಅಭಿವೃದ್ಧಿಗೆ ಕಾರಣರಾದ ನಾಡಪ್ರಭುವಿಗೆ ಗೌರವ ನೀಡುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದರು. ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಮಾತನಾಡಿ, ಕೆಂಪೇಗೌಡರನ್ನು ಜನತೆ ಇಂದಿಗೂ ನೆನೆಯಲು ಕಾರಣ ಅವರ ವ್ಯಕ್ತಿತ್ವ ಹಾಗೂ ಅಸಾಧಾರಣ ಸಾಧನೆಯಾಗಿದೆ. ಅಂದಿನಿಂದ ಇಂದಿನವರೆಗೂ ಬೆಂಗಳೂರು ಹಂತಹಂತವಾಗಿ ಅಭಿವೃದ್ಧಿಯತ್ತ ಸಾಗುತ್ತಾ ಬಂದಿದ್ದು, ಕೆಂಪೇಗೌಡರ ಕುಟುಂಬವೂ ಕೂಡ ತ್ಯಾಗ ಬಲಿದಾನಕ್ಕೆ ಹೆಸರುವಾಸಿಯಾಗಿತ್ತು ಎಂದರು.
ಕೆಂಪೇಗೌಡರ ಜೀವನಚರಿತ್ರೆ ಮತ್ತು ಅವರ ಸಾಧನೆಗಳ ಕುರಿತು ಮಾತನಾಡಿದ ಜಿಲ್ಲಾ ಒಕ್ಕಲಿಗ ಸಮುದಾಯದ ಅಧ್ಯಕ್ಷ ಸಿದ್ಧರಾಜು, ತನ್ನನ್ನು ಬೇಟೆಯಾಡಲು ಬಂದಂತಹ ನಾಯಿಯನ್ನು ಮೊಲವೊಂದು ಧೈರ್ಯದಿಂದ ಅಟ್ಟಿಸಿಕೊಂಡು ಹೋಗಿ ಎದುರಿಸುತ್ತಿದ್ದ ದೃಶ್ಯ ಕೆಂಪೇಗೌಡರನ್ನು ವೀರಭೂಮಿ ಕಟ್ಟಲು ಪ್ರೇರೇಪಿಸಿತು ಎಂದು ಇತಿಹಾಸ ತಿಳಿಸುತ್ತದೆ. ನಾಲ್ಕೂ ದಿಕ್ಕಿನಲ್ಲೂ ಗಡಿ ರೇಖೆಯನ್ನು ಗುರುತಿಸಲು ಎತ್ತುಗಳಿಗೆ ನೇಗಿಲನ್ನು ಕಟ್ಟಿ ಎತ್ತುಗಳು ನಿಲ್ಲುವ ಪ್ರದೇಶವನ್ನು ಗಡಿ ಪ್ರದೇಶ ಎಂದು ನಿರ್ಧರಿಸಿ, ಅದರ ಒಳಗೆ ಬೆಂಗಳೂರು ನಗರವನ್ನು ನಿರ್ಮಿಸಿದರು ಎಂಬ ಕಥೆಗಳು ಇವೆ. ವೃತ್ತಿಗೆ ಪ್ರಾಶಸ್ತ್ಯ ನೀಡಿ, ಕೆಂಪೇಗೌಡರು ಕೋಟೆಯನ್ನು ನಿರ್ಮಿಸಿದರು. ಬೆಂಗಳೂರು ನಿರ್ಮಾಣದಲ್ಲಿ ಕೆಂಪೇಗೌಡರ ಸೊಸೆ ಲಕ್ಷ್ಮೀದೇವಿಯ ಪಾತ್ರಕೂಡ ಅವಿಸ್ಮರಣೀಯವಾದುದು ಎಂದರು.
ಕಾರ್ಯಕ್ರಮದಲ್ಲಿ ಉಡುಪಿ ತಹಶೀಲ್ದಾರ್ ಅರ್ಚನಾ ಭಟ್, ಒಕ್ಕಲಿಗ ಸಮುದಾಯದ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
ಸಿ.ಜಿ.ಕೆ ರಂಗ ಪ್ರಶಸ್ತಿ-2022 ಪುರಸ್ಕೃತರಾದ ನಟ, ರಂಗನಿರ್ದೇಶಕ, ರಂಗಸಂಘಟಕ ಪ್ರದೀಪ್ ಚಂದ್ರ ಕುತ್ಪಾಡಿ

Posted On: 27-06-2022 11:22PM
ಉಡುಪಿ : ನಮ ತುಳುವೆರ್ ಕಲಾ ಸಂಘಟನೆ (ರಿ.) ನಾಟ್ಕದೂರು, ಮುದ್ರಾಡಿ ಆಯೋಜನೆಯಲ್ಲಿ ಸಂಸ ಥಿಯೇಟರ್, ಬೆಂಗಳೂರು - ಕರ್ನಾಟಕ ಬೀದಿ ನಾಟಕ ಅಕಾಡೆಮಿ ಮತ್ತು ಎಂ.ಜಿ.ಎಂ ಕಾಲೇಜು, ಉಡುಪಿ ಸಹಭಾಗಿತ್ವದಲ್ಲಿ ಸಿ.ಜಿ.ಕೆ ಬೀದಿರಂಗ ದಿನ ಪ್ರಯುಕ್ತ ಜೂನ್ 26 ರಂದು ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಸಿ.ಜಿ.ಕೆ ರಂಗ ಪ್ರಶಸ್ತಿ-2022 ನ್ನು ನಟ, ರಂಗನಿರ್ದೇಶಕ, ರಂಗಸಂಘಟಕ ಪ್ರದೀಪ್ ಚಂದ್ರ ಕುತ್ಪಾಡಿ ಇವರಿಗೆ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ನಮ ತುಳುವೆರ್ ಕಲಾ ಸಂಘಟನೆ (ರಿ.) ತಂಡದಿಂದ ಗುರುರಾಜ ಮಾರ್ಪಳ್ಳಿ ರಚನೆ ಮತ್ತು ನಿರ್ದೇಶನದ ಅವ್ವ ನನ್ನವ್ವ ನಾಟಕದ 75ನೇ ಪ್ರದರ್ಶನ ಜರಗಿತು.
ಇನ್ನಂಜೆ : ಮಂಡೇಡಿ ಶ್ರೀದೇವಿ ಭಜನಾ ಮಂಡಳಿಯ ನೂತನ ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿ ಆಯ್ಕೆ

Posted On: 27-06-2022 11:09PM
ಕಾಪು : ತಾಲೂಕಿನ ಇನ್ನಂಜೆಯ ಮಂಡೇಡಿ ಶ್ರೀದೇವಿ ಭಜನಾ ಮಂಡಳಿಯ 2022-24ನೇ ಸಾಲಿನ ನೂತನ ಅಧ್ಯಕ್ಷರಾಗಿ ಲಕ್ಷ್ಮಣ್ ಕೆ ಶೆಟ್ಟಿ, ಕಾರ್ಯದರ್ಶಿಯಾಗಿ ಕೃಷ್ಣ ವಿ ಶೆಟ್ಟಿ ಮತ್ತು ಕೋಶಾಧಿಕಾರಿಯಾಗಿ ಸಂತೋಷ್ ಎಸ್ ಶೆಟ್ಟಿ ಆಯ್ಕೆಯಾಗಿರುತ್ತಾರೆ.
ಜೂನ್ 30 : ಶಿರ್ವದಲ್ಲಿ ಸಂಜೀವಿನಿ ಸಂತೆ

Posted On: 27-06-2022 10:59PM
ಶಿರ್ವ : ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಆದೇಶದಂತೆ ಸಂಜೀವಿನಿ ಒಕ್ಕೂಟಗಳ ಸಂಜೀವಿನಿ ಸಂತೆಯು ಜೂನ್ 30 ರಂದು ಶಿರ್ವ ಮಹಿಳಾ ಮಂಡಲದ ಮಹಿಳಾ ಸೌಧದಲ್ಲಿ ಬೆಳಿಗ್ಗೆ ಗಂಟೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿದೆ.
ಶಿರ್ವ ಗ್ರಾಮ ಪಂಚಾಯತ್ ಸೇರಿದಂತೆ ಮಜೂರು, ಮುದರಂಗಡಿ, ಕುತ್ಯಾರು, ಬೆಳ್ಳೆ, ಇನ್ನಂಜೆ ಗ್ರಾಮ ಪಂಚಾಯತ್ ಗಳ ಸಂಜೀವಿನಿ ಒಕ್ಕೂಟಗಳ ಸ್ವ ಸಹಾಯ ಸಂಘಗಳ ಸದಸ್ಯೆಯರು ಮನೆಯಲ್ಲೆ ತಯಾರಿಸಿದ, ಉತ್ಪಾದಿಸಿದ ಅಥವಾ ಬೆಳೆದ ಉತ್ಪನ್ನಗಳ ಮಾರಾಟ ಮಾಡಲು ಅವಕಾಶವನ್ನು ನೀಡುವ ಕಾರ್ಯಕ್ರಮ ಸಂಜೀವಿನಿ ಸಂತೆ.
ಈ ಸಂತೆಯಲ್ಲಿ ನಮ್ಮ ದಿನಬಳಕೆಯ ವಸ್ತುಗಳು, ತರಕಾರಿ, ಬಟ್ಟೆ ಚೀಲಗಳು, ಪುಸ್ತಕ, ಸಾಂಬರು ಹುಡಿ ಹೀಗೆ ದಿನ ಬಳಕೆಯ 50ಕ್ಕೂ ಹೆಚ್ಚಿನ ಉತ್ಪನ್ನಗಳ ಮಾರಾಟ ನಡೆಯಲಿದೆ. ಆರು ಪಂಚಾಯತ್ ಗಳ ಸಂಜೀವಿನಿ ಒಕ್ಕೂಟದ ಸದಸ್ಯರು ಭಾಗವಹಿಸಿ ತಾವು ತಯಾರಿಸಿದ ಉತ್ಪನ್ನಗಳನ್ನು ಮಾರಾಟಮಾಡಲಿದ್ದಾರೆ. ಗ್ರಾಮ ಪಂ ಸದಸ್ಯರು, ಗ್ರಾಮಸ್ಥರು, ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಜೀವಿನಿ ಸಂತೆಯ ಉತ್ಪನ್ನಗಳನ್ನು ಖರೀದಿಸಿ, ಪ್ರೋತ್ಸಾಹಿಸಿ ಸಂಜೀವಿನಿ ಸಂತೆಯನ್ನು ಯಶಸ್ವಿಗೊಳಿಸಬೇಕೆಂದು ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ ಆರ್ ಪಾಟ್ಕರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಂತಪದ್ಮನಾಭ ನಾಯಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಶಿರ್ವ ಗ್ರಾಮ ಪಂಚಾಯತ್ : ತೆರಿಗೆ ಪಾವತಿಸಲು ಡಿಜಿಟಲ್ ವ್ಯವಸ್ಥೆ

Posted On: 27-06-2022 10:48PM
ಶಿರ್ವ : ಇಲ್ಲಿನ ಗ್ರಾಮ ಪಂಚಾಯತ್ ನ ಗ್ರಾಮಸ್ಥರಿಗೆ ತೆರಿಗೆ ಪಾವತಿ ಮಾಡಲು ಅನುಕೂಲವಾಗುವಂತೆ ಡಿಜಿಟಲ್ ವ್ಯವಸ್ಥೆ ಮಾಡಲಾಗಿದೆ.
ಪಂಚಾಯತ್ ಅಧ್ಯಕ್ಷ ಕೆ ಆರ್ ಪಾಟ್ಕರ್ ತಮ್ಮ ಮನೆ ತೆರಿಗೆಯನ್ನು ಗೂಗಲ್ ಪೇ ಮೂಲಕ ಪಾವತಿಸುವ ಮೂಲಕ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಉದ್ಘಾಟಿಸಿದರು.
ಗ್ರಾಮಸ್ಥರು ತಮ್ಮ ಕಟ್ಟಡ ತೆರಿಗೆ, ಮನೆ ತೆರಿಗೆ, ನೀರಿನ ಕರ ಇತ್ಯಾದಿಗಳನ್ನು ಪಾವತಿಸಲು ಈ ವ್ಯವಸ್ಥೆಯನ್ನು ಬಳಸಬಹುದಾಗಿದೆ. ಗೂಗಲ್ ಪೇ, ಪೇಟಿಯಂ, ಸ್ಕ್ಯಾನರ್ ಗಳನ್ನು ಅಳವಡಿಸಲಾಗಿದ್ದು ಈ ಮೂಲಕ ತೆರಿಗೆ ಪಾವತಿಸಿ ಸಂಬಂಧಿಸಿದ ರಶೀದಿಯನ್ನು ಸಿಬ್ಬಂದಿಯವರಿಂದ ಪಡೆಯಬಹುದಾಗಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಆರ್ ಪಾಟ್ಕರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಂತಪದ್ಮನಾಭ ನಾಯಕ್ ತಿಳಿಸಿದರು.
ಪುಷ್ಪಾನಂದ ಫೌಂಡೇಶನ್ ವತಿಯಿಂದ ಕಾಪು ಪುರಸಭಾ ವ್ಯಾಪ್ತಿಯ ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

Posted On: 27-06-2022 09:41PM
ಕಾಪು : ಪುಷ್ಪಾನಂದ ಫೌಂಡೇಶನ್ ವತಿಯಿಂದ ಕಾಪು ಪುರಸಭಾ ವ್ಯಾಪ್ತಿಯ 2022 ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 85 ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 3 ಆಗಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಪುಷ್ಪಾನಂದ ಫೌಂಡೇಶನ್ ಇದರ ಪ್ರವರ್ತಕರಾದ ಯಶ್ಪಾಲ್ ಸುವರ್ಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಸಂದೀಪ್ ಶೆಟ್ಟ 9880295376 ಲಕ್ಷ್ಮೀಕಾಂತ್ ಕೆ. 9964014603 ಚಿತ್ತನ್ ಪೂಜಾರಿ 9964379589 ಪ್ರವೀಣ್ ಪೂಜಾರಿ 9886619748 ಆಶ್ವಿನ್ ಪುತ್ರನ್ 9916664903 ಯೋಗೀಶ್ ಪೂಜಾರಿ 9945772113 ಬಾಲಕೃಷ್ಣ ಕೋಟ್ಯಾನ್ 9108298806