Updated News From Kaup
ಗೌರಿ - ಗಣೇಶ : ವಿಲಕ್ಷಣ ತಾಯಿ - ಮಗು
Posted On: 30 Aug 2022, 05:44 PM
ಸ್ತ್ರೀ ತನ್ನ ಬಯಕೆಯನ್ನು ಪುರುಷಾವಲಂಬನೆ ಇಲ್ಲದೆ ನೆರವೇರಿಸಿಕೊಳ್ಳುತ್ತಾಳೆ , ಮಗುವನ್ನು ಪಡೆಯುತ್ತಾಳೆ .ಇದನ್ನು ಗಮನಿಸಿದ ಪುರುಷ ಸಿಟ್ಟಾಗುತ್ತಾನೆ .ಅಸೂಯೆಗೊಳ್ಳುತ್ತಾನೆ . ಚಿತ್ತಸ್ವಾಸ್ಥ್ಯ ಕಳೆದುಕೊಳ್ಳುತ್ತಾನೆ .ಜನಿಸಿದ ಮಗು - ಪುರುಷ ಸಂಘರ್ಷವೇರ್ಪಡುತ್ತದೆ . ಆದರೆ ಪ್ರಕರಣ ಸುಖಾಂತ್ಯವಾಗುತ್ತದೆ . ಕತ್ತರಿಸಲ್ಪಟ್ಟ ತಲೆಗೆ ಆನೆಯ ಮುಖ ಜೋಡಿಸಿ ಮಗು ಗಜಾನನನಾಗುತ್ತಾನೆ. ಸ್ತ್ರೀಯ ನಿರ್ಬಂಧಕ್ಕೆ ಪುರುಷನು ಮಗುವನ್ನು ಒಪ್ಪಿಕೊಳ್ಳುತ್ತಾನೆ .ಇದು ಅನಿವಾರ್ಯವಾಗಿ ಅಲ್ಲ , ಪ್ರೀತಿಪೂರ್ವಕವಾಗಿ . ನಿಗ್ರಹಿಸಲ್ಪಟ್ಟರೂ ಶಿವನ ಪ್ರಸನ್ನತೆಗೆ ಪ್ರಕೃತಿ ಕಾರಣವಾಗಿ ಗಣಪ ಏರಿದ ಎತ್ತರ ,ಪಡೆದ ಸ್ಥಾನಮಾನ ಪುರಾಣಗಳೇ ವಿವರಿಸುವಂತೆ ಅದು ವಿಸ್ತಾರವಾದುದು . ಎಷ್ಟೇ ಮುನಿದರೂ ಕೊನೆಗೊಮ್ಮೆ ಪ್ರಕೃತಿಯನ್ನು ಪುರುಷ ಸಮೀಪಿಸಲೇ ಬೇಕಾಗುತ್ತದೆ ,ಅನುಗ್ರಹಿಸುವುದು ಅನಿವಾರ್ಯವಾಗುತ್ತದೆ .ಈ ಪ್ರಪಂಚ ನಿಯಮ ಗಣೇಶನ ಜನನದಲ್ಲಿ ಸಹಜವಾಗಿ ಅನಾವರಣಗೊಳ್ಳುತ್ತದೆ . ಪ್ರಕೃತಿಯ ನಿರೀಕ್ಷೆ ಮತ್ತು ಸಿದ್ಧತೆಯ ಸಂಕೇತವಾಗಿ ಗೌರಿ ಮೈಯ ಮಣ್ಣನ್ನು ಆಕೆ ತೆಗೆಯುವುದು ಮತ್ತು ಸ್ನಾನಕ್ಕೆ ಹೊರಡುವುದು. ಈ ನಡುವೆ ಮೈಯ ಮಣ್ಣಿಗೆ ರೂಪು ನೀಡಿ - ಜೀವ ಕೊಡುವುದು ಮತ್ತೆ ಪರಿಶುದ್ಧಳಾದುದನ್ನು ದೃಢೀಕರಿಸುತ್ತದೆ. ಪುರುಷ ಪ್ರವೇಶ ಪ್ರಕೃತಿಯ ನಿರೀಕ್ಷೆಯಂತೆಯೇ ಆದರೆ 'ಅಕಾಲ'ದಲ್ಲಿ ಆಗುತ್ತದೆ. ಸಮಾಗಮಕ್ಕೆ ತೊಡಕಾಗುವ ಮೈಯ ಮಣ್ಣು ಪ್ರತಿಮೆಯಾಗಿ ರೂಪು ಪಡೆದು ತಡೆಯುತ್ತದೆ .ಈ ಘಟನೆ ಭೂಮಿ - ಆಕಾಶ ಸಂಬಂಧವನ್ನು ನಿರೂಪಿಸುತ್ತಾ ವಿಶಾಲತೆಯನ್ನು ಒದಗಿಸಿ ಕೃಷಿ ಸಂಸ್ಕೃತಿಯ ಹುಟ್ಟು-ಬೆಳವಣಿಗೆಯನ್ನು ಮತ್ತು ಕೃಷಿ ಆಧರಿತ ಮಾನವ ಬದುಕನ್ನು ತೆರೆದಿಡುತ್ತದೆ . ಬೇಟೆಯೇ ಜೀವನಾಧಾರವಾಗಿದ್ದ ಕಾಲದಲ್ಲಿ ಮಾನವ ಬದುಕಿನ ವಿವಿಧ ಹಂತಗಳಲ್ಲಿ ಭಿನ್ನ ಪರಿಕಲ್ಪನೆ ಅನುಸಂಧಾನದೊಂದಿಗೆ ಸಾಗಿ ಬಂದ ಗಣಪತಿ ಆರಾಧನೆ ಈ ಕಾಲಘಟ್ಟದಲ್ಲಿ ಈ ವಿಧಾನದಲ್ಲಿ ವಿಜೃಂಭಿಸುತ್ತಿದೆ .ಇತಿಹಾಸ ಕಾಲದಲ್ಲೂ ಗಣಪತಿ ಇಲಿ ರಹಿತನಾಗಿಯೇ ಮೊತ್ತಮೊದಲು ಕಾಣಸಿಗುತ್ತಾನೆ .ಅನಂತರ ಇಲಿಯ ಸಾಂಗತ್ಯ ಸಿಗುತ್ತದೆ . ಆದರೆ ಕೃಷಿಯೇ ಪ್ರಧಾನವಾದಾಗ ಗಣಪ ಬಹುವಾಗಿ ಪೂಜಿಸಲ್ಪಡುತ್ತಾನೆ .ಆಕರ್ಷಕ ಪ್ರತಿಮಾ ಲಕ್ಷಣಗಳ ವೈವಿಧ್ಯಮಯ ಗಣಪತಿ ಶಿಲಾಶಿಲ್ಪಗಳಲ್ಲಿ - ದಾರುಶಿಲ್ಪಗಳಲ್ಲಿ ಲಭ್ಯ. ( ಸಂಗ್ರಹ) "ಸಾರ್ಪತ್ಯ ಆವೊಂದಿಪ್ಪೊಡು" : ಜನಪದರ ಹೆಣ್ಣು ಮೈಸಗೆಯನ್ನು ಶಿವ ಪ್ರೀತಿಸುವುದು .ತಾವರೆ ಹೂವಾಗುವುದು . ಗುಟ್ಟಿನಲ್ಲಿ ಜೊತೆಯಾಗುವುದು . ಮುಂದುವರಿಯುವ ಕತೆಯಲ್ಲಿ ಭಾಮಕುಮಾರನ ಜನನ .ಈತ ಗಜಮುಖನಾಗುವುದು ಪಾರ್ವತಿ ಮಗುವನ್ನು ಸಾಕುವುದು . ಪಾರ್ವತಿ ಸಹಜವಾಗಿ ಮೈಸಗೆಯನ್ನು ಸ್ವೀಕರಿಸುವುದು .ಪ್ರತಿ ಮನೆಯಲ್ಲೂ ಗಣಪತಿ ಪೂಜೆ ನಡೆಯಬೇಕು . ಅಲ್ಲೆಲ್ಲ ಗಣಪತಿ "ಸಾರ್ಪತ್ಯ ಆವೊಂದಿಪ್ಪೊಡು" ಎಂಬುದು ಶಿವನ ವರ . ಇದು ಭಾಮಕುಮಾರ ಸಂಧಿಯಲ್ಲಿ ಬರುವ ಕತೆ. ಗಣಪನ ಹೊಟ್ಟೆ : ಕಣಜ , ಕಣಜಕ್ಕೆ ಸುತ್ತುವ ಹಗ್ಗ ( ಪೆರ್ಮರಿ) ಇವು ಗಣಪತಿಯ ಹೊಟ್ಟೆ ಮತ್ತು ಹೊಟ್ಟೆಗೆ ಸುತ್ತಿದ ಸರ್ಪವನ್ನು ಸಾಂಕೇತಿಸುತ್ತವೆ. ಅಕ್ಕಿ - ಭತ್ತಕ್ಕೆ ಹಾಗೂ ಇತರ ಬೆಳೆಗಳಿಗೆ ಇಲಿಕಾಟ ಸಹಜ ( ಅರಿಬಾರ್ ಇತ್ತಿನಲ್ಪ ಎಲಿ ಪೆರ್ಗುಡೆ ಕಡಮೆನಾ ). ಇಂತಹ ಆಹಾರದ ರಕ್ಷಣೆಗಾಗಿ ಸರ್ಪ(ಹಗ್ಗ). ಗಣಪನ ಹೊಟ್ಟೆ ಕೃಷಿ ಸಮೃದ್ಧಿಯ ದಾಸ್ತಾನು. ಹೇಗಿದೆ ಜನಪದರ ಕಲ್ಪನೆ. ಬೆಣಚುಕಲ್ಲಿನ 'ಬೆನಕ' : ಗಣಪತಿ ಬೇಟೆ ಸಂಸ್ಕೃತಿಯ ಪ್ರತಿನಿಧಿ : ಗಣಪನ ಮೂರ್ತಿ ಶಿಲ್ಪದಲ್ಲೆ ಪಾಚೀನತೆಯನ್ನು ಗುರುತಿಸುವ ಸಂಶೋಧಕರು ಇವನ ಅಸ್ತಿತ್ವಕ್ಕೆ ಅಥವಾ ಕಲ್ಪನೆಗೆ ಬೇಟೆ ಸಂಸ್ಕೃತಿಯಷ್ಟು ಪಾಚೀನತೆಯನ್ನು ಅಥವಾ ಅದಕ್ಕಿಂತಲೂ ಪೂರ್ವದ ಜನಜೀವನದ ಕಾಲದವರೆಗೆ ಒಯ್ಯುತ್ತಾರೆ .ಬೇಟೆ , ಬೇಟೆಗೆ ಬಳಸುತ್ತಿದ್ದ ಬೆಣಚುಕಲ್ಲು ಪ್ರಧಾನ ಆಯುಧ . ಇಲ್ಲಿಂದಲೇ ಬೆಣಚುಕಲ್ಲಿನಿಂದ "ಬೆನಕ" ಎಂದು ಪೂಜಿಸುವ ವಿಧಾನ ರೂಢಿಗೆ ಬಂದಿರಬಹುದು . ಈ ಶೈಲಿಯ ಪೂಜೆ ಈಗಲೂ ರೂಢಿಯಲ್ಲಿವೆ .ವೈಭವದ ಮೂರ್ತಿಗಳ ಭವ್ಯತೆಯ ನೇಪಥ್ಯದಲ್ಲಿ ಈ ಬೆನಕನಿದ್ದಾನೆ . ಬೇಟೆಯ ಕಾಲಘಟ್ಟದಲ್ಲಿ ಆನೆಯ ಕಲ್ಪನೆ ಬಂದಿರಬಹುದು . ಶ್ರಮ ಸಂಸ್ಕೃತಿ : ಶ್ರಮ ಸಂಸ್ಕೃತಿಯ ಸಂಕೇತವಾಗಿ ಗಣಪತಿ ಗುರುತಿಸಲ್ಪಡುವುದಿದೆ .ಶ್ರಮದಿಂದ ಮೈಬೆವರುತ್ತೆ , ಇದೇ ಮೈಯ ಮಣ್ಣಿಗೆ ಕಾರಣವಾಗುತ್ತದೆ . ಪಾರ್ವತಿಯ ಮೈಯ ಮಣ್ಣಿನಿಂದ ಗಣಪನ ಸೃಷ್ಟಿ .ಮಣ್ಣಿನ ಮಗನ ಕಲ್ಪನೆ ಎಷ್ಟು ಸುಂದರ . ಕಪಿಲ ವರ್ಣ , ಕಾವಿಬಣ್ಣ , ಮಣ್ಣಿನ ಬಣ್ಣ , ಧೂಮ್ರವರ್ಣ , ಕಪ್ಪು - ಕೆಂಪು ಬಣ್ಣಗಳ ಸಂಯುಕ್ತ ಇದೂ ಮಣ್ಣಿನ ಬಣ್ಣವೆ .ಇದು ವಿಘ್ನೇಶನ ಮೈ ಬಣ್ಣ . ಕೃಷಿ ಸಂಸ್ಕೃತಿ: "ಸೆಗಣಿಯ ಗಣಪಂಗೆ ಸಂಪಗೆಯರಳಲ್ಲಿ ಪೂಜಿಸಿದರೆ" ಭೂಮಿಯ ಫಲವತ್ತತೆಗಾಗಿ ಸೆಗಣಿ - ಕೃಷಿಗೆ ಪೂರಕವಾಗಿ ಒದಗಿದ ಪಶುಪಾಲನೆ. ಸೆಗಣಿಗೆ ಹಸಿರು ಗರಿಕೆಯನ್ನು ಇಟ್ಟು ಪೂಜಿಸುವ ಗಣಪತಿಯ ಕಲ್ಪನೆಯೊಂದಿದೆ . ಕಬ್ಬು ಪ್ರಧಾನವಾಗಿ ಆನೆಮುಖ ಹೊಂದಿರುವ ಸ್ವರೂಪದ ಆರಾಧನೆ . ಇವು ಜನಪದರ ಚಿಂತನೆಗಳು . (ಓದಿದ್ದು - ಗ್ರಹಿಸಿದ್ದು) ಲೇಖನ : ಕೆ.ಎಲ್.ಕುಂಡಂತಾಯ
ಉದ್ಯಾವರ : ಹಿರಿಯರ ದಿನಾಚರಣೆ
Posted On: 30 Aug 2022, 10:32 AM
ಉದ್ಯಾವರ : ಕೆಥೊಲಿಕ್ ಸಭಾ ಉದ್ಯಾವರ ಇವರ ನೇತೃತ್ವದಲ್ಲಿ ಸ್ತ್ರೀ, ಕುಟುಂಬ ಮತ್ತು ಯುವ ಆಯೋಗದ ಸಹಕಾರದೊಂದಿಗೆ ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ವ್ಯಾಪ್ತಿಯ ಹಿರಿಯರ ದಿನವನ್ನು ಝೇವಿಯರ್ ಸಭಾಭವನದಲ್ಲಿ ಆಚರಿಸಲಾಯಿತು. ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಮತ್ತು ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಪ್ರಧಾನ ಧರ್ಮಗುರುಗಳಾದ ಅ. ವಂ. ಫಾ. ಸ್ಟಾನಿ ಬಿ ಲೋಬೊ, ಸಹಾಯಕ ಧರ್ಮಗುರು ವಂ. ಫಾ. ಲಿಯೋ ಪ್ರವೀಣ್, ಕಾಪುಚಿನ್ ಧರ್ಮಗುರು ವಂ. ಫಾ. ಚಾರ್ಲ್ಸ್ ಸಲ್ದಾನ ಇವರ ನೇತೃತ್ವದಲ್ಲಿ ದಿವ್ಯ ಬಲಿಪೂಜೆ ನಡೆಯಿತು. ಬಳಿಕ ಸ್ಥಳೀಯ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯರನ್ನು ಅದ್ದೂರಿಯಾಗಿ ಸಭಾ ಭವನದ ಒಳಗೆ ಕರೆತರಲಾಯಿತು. ಹಿರಿಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದ ಸಂಘಟಕರು, ವಿಜೇತರಿಗೆ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವಂ. ಫಾ. ಸ್ಟ್ಯಾನಿ ಬಿ ಲೋಬೊ, ದೇವಾಲಯದಲ್ಲಿ ವಿವಿಧ ಸೇವೆ ಸಲ್ಲಿಸಿದ ಎಲ್ಲ ಹಿರಿಯರನ್ನು ಸ್ಮರಿಸಿ ದರು. ಹಿರಿಯರ ಸಂಘಕ್ಕೆ ತಾವು ಸೇರ್ಪಡೆಯಾಗಿ, ಜೊತೆಯಾಗಿ ನಿಮ್ಮ ಸುಖ ದುಃಖಗಳನ್ನು ಹಂಚಿಕೊಳ್ಳಿ. ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಹಭೋಜನದ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಫಾದರ್ ಮುಲ್ಲರ್ಸ್ ಇನ್ ಸ್ಟಿಟ್ಯೂಷನ್ ನ ಡೀನ್ ಡಾ. ಉರ್ಬನ್ ಡಿಸೋಜ, ಕಥೋಲಿಕ್ ಸಭಾ ಕೇಂದ್ರೀಯ ಅಧ್ಯಕ್ಷೆ ಮೇರಿ ಡಿಸೋಜ, ಉಪಾಧ್ಯಕ್ಷ ರೊನಾಲ್ಡ್ ಅಲ್ಮೇಡಾ, ಪಾಲನ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ನೋರೊನ್ನ, 20 ಆಯೋಗಗಳ ಸಂಯೋಜಕ ಜೆರಾಲ್ಡ್ ಪಿರೇರಾ, ಅಧ್ಯಕ್ಷ ಆಲ್ವಿನ್ ಅಂದ್ರಾದೆ, ಕಾರ್ಯದರ್ಶಿ ಟೆರೆನ್ಸ್ ಪಿರೇರಾ, ಉಸ್ತುವಾರಿ ಲಾರೆನ್ಸ್ ಡೇಸಾ, ಕುಟುಂಬ ಆಯೋಗದ ವಿಲ್ಫ್ರೆಡ್ ಕ್ರಾಸ್ಟೊ, ಸ್ತ್ರೀ ಆಯೋಗದ ಐರಿನ್ ಪಿರೇರಾ ಮತ್ತಿತರರು ಉಪಸ್ಥಿತರಿದ್ದರು. ಅನಿಲ್ ಮಿನೇಜಸ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮೈಕಲ್ ಡಿಸೋಜಾ ಮತ್ತು ಸ್ಟೀವನ್ ಕುಲಾಸೊ ಸಹಕರಿಸಿದರು. ಯುವ ಆಯೋಗ ಸಂಯೋಜಕ ರೋಯ್ಸ್ ಫೆರ್ನಾಂಡಿಸ್ ವಂದಿಸಿದರು.
ಕಲ್ಯಾಲು ಮನೆ ಕಮಲ ಪೂಜಾರ್ತಿ ಇನ್ನಿಲ್ಲ
Posted On: 29 Aug 2022, 07:11 PM
ಕಲ್ಯಾಲು ಮನೆ ಕಮಲ ಪೂಜಾರ್ತಿಯವರು (103 ವರ್ಷ) ಇಂದು ಬೆಳಗ್ಗೆ ದೈವಾದಿನರಾಗಿದ್ದಾರೆ. ಇವರು ದಿವಂಗತ ನರ್ವ ಪೂಜಾರಿಯವರ ಧರ್ಮಪತ್ನಿಯಾಗಿದ್ದು, ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಶಿರ್ವ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೆ ಆರ್ ಪಾಟ್ಕರ್ ರವರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ
Posted On: 28 Aug 2022, 11:29 PM
ಶಿರ್ವ : ಇಲ್ಲಿನ ಗ್ರಾಮ ಪಂಚಾಯತ್ ನಲ್ಲಿ ಅತ್ಯುತ್ತಮ ಕೆಲಸ ಮಾಡಿ, ಇತ್ತೀಚಿಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕೆ ಆರ್ ಪಾಟ್ಕರ್ ಅವರಿಗೆ ಬಂಟಕಲ್ಲಿನಲ್ಲಿ ಸುಮಾರು 12 ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದರು. ಆಟೋ ರಿಕ್ಷಾ ಚಾಲಕ ಮಾಲಕ ಸಂಘ, ಅಯ್ಯಪ್ಪ ಭಕ್ತವೃಂದ, ರಾಜಪುರ ಸಾರಸ್ವತ ಯುವ ವೃಂದ, ದುರ್ಗಾ ಚಂಡೆ ಬಳಗ, ಗಣೇಶೋತ್ಸವ ಸಮಿತಿ, ಲಯನ್ಸ್ ಕ್ಲಬ್ ಜಾಸ್ಮಿನ್, ಲಯನ್ಸ್ ಕ್ಲಬ್ ಬಂಟಕಲ್ಲು, ಉಡುಪಿ ಕಿಸಾನ್ ಸಂಘ, ನಾಗರಿಕ ಸಮಿತಿ ಸಹಿತ 12 ವಿವಿಧ ಸಂಘ ಸಂಸ್ಥೆಯಿಂದ ಕೆಆರ್ ಪಾಟ್ಕರ್ ಹಾಗೂ ಅವರ ಧರ್ಮಪತ್ನಿ ಸಂಗೀತ ಪಾಟ್ಕರ್ ಅವರನ್ನು ಹೃದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಬಳಿಕ ಕೆ ಆರ್ ಪಾಟ್ಕರ್ ಮಾತನಾಡಿ, ಜನರ ಪ್ರೀತಿಯಿಂದ ಹೃದಯ ತುಂಬಿ ಬರುತ್ತಿದೆ. ಸದಸ್ಯನಾಗಿ ಮುಂದುವರಿಯುವ ನನಗೆ ಗ್ರಾಮಸ್ಥರ ಸಹಕಾರ ಬೇಕು ಎಂದರು. ಈ ಸಂದರ್ಭ ವಿವಿಧ ಸಂಘಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಕಾಪು : ಸಾರ್ವಜನಿಕ ಗಣೇಶೋತ್ಸವ ಸಮಿತಿಗಳೊಂದಿಗೆ ಡಿವೈಎಸ್ಪಿ ಸಮಾಲೋಚನ ಸಭೆ
Posted On: 28 Aug 2022, 03:45 PM
ಕಾಪು : ಸಾರ್ವಜನಿಕವಾಗಿ ಗಣೇಶೋತ್ಸವ ನಡೆಸುವ ಕಾಪು, ಪಡುಬಿದ್ರಿ, ಶಿರ್ವ ಠಾಣಾವ್ಯಾಪ್ತಿಯ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳ ಜೊತೆ ಕಾರ್ಕಳ ಡಿವೈಎಸ್ಪಿ ವಿಜಯ ಪ್ರಸಾದ್ ರವರು ಶನಿವಾರ ಕಾಪು ವೀರಭದ್ರ ಸಭಾಭವನದಲ್ಲಿ ಸಮಾಲೋಚನ ಸಭೆ ನಡೆಸಿದರು. ಸಾರ್ವಜನಿಕ ಗಣೇಶೋತ್ಸವ ಸಮಿತಿ ಆಚರಿಸುವ ಮಂಡಳಿಯವರು ಶಾಂತಿಯುತವಾಗಿ ಗಣೇಶೋತ್ಸವ ಆಚರಿಸಬೇಕು. ಧ್ವನಿವರ್ಧಕದ ಬಳಕೆಯನ್ನು ಆದಷ್ಟು ಕಡಿಮೆ ಶಬ್ದದಲ್ಲಿ ಉಪಯೋಗಿಸಬೇಕು. ಯಾವುದೇ ಕಾರಣಕ್ಕೂ ಇತರ ಧರ್ಮೀಯರಿಗೆ ನೋವುಂಟುಮಾಡುವ ಕೆಲಸ ಮಾಡಬಾರದು. ಮೆರವಣಿಗೆಯ ಸಂದರ್ಭ ಅನ್ಯ ಜಾತಿಯವರ ವಿರುದ್ಧ ಪೋಷಣೆ ಕೂಗಬಾರದು ಎಂಬ ಹತ್ತು ಹಲವು ಮಾನದಂಡಗಳನ್ನು ಗಣೇಶೋತ್ಸವ ಸಮಿತಿಯವರಿಗೆ ನೀಡಿದ್ದಾರೆ. ಈ ಸಂದರ್ಭ ಕಾಪು ವೃತ್ತ ನಿರೀಕ್ಷಕ ಕೆ ಸಿ ಪೂವಯ್ಯ, ಕಾಪು ಠಾಣಾಧಿಕಾರಿ ಶ್ರೀಶೈಲ ಮುರುಗೋಡ, ಪಡುಬಿದ್ರಿ ಠಾಣಾಧಿಕಾರಿ ಪುರುಷೋತ್ತಮ, ಶಿರ್ವ ಠಾಣಾಧಿಕಾರಿ ರಾಘವೇಂದ್ರ ಸಿ, ಪ್ರೊಬೆಷನರಿ ಎಸ್ಐ ಮಹಾಂತೇಶ, ಕಾಪು, ಪಡುಬಿದ್ರಿ ಮತ್ತು ಶಿರ್ವ ಠಾಣಾ ವ್ಯಾಪ್ತಿಯ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮೂಳೂರು : ಬಸ್ ಡಿಕ್ಕಿಯಾಗಿ ಮೀನು ಸಾಗಾಟ ವಾಹನ ಪಲ್ಟಿ ; ಎಸ್ಕೇಪ್ ಆಗಲು ಯತ್ನಿಸಿದ ಬಸ್ ಗೆ ಟೋಲ್ ನಲ್ಲಿ ತಡೆ
Posted On: 28 Aug 2022, 09:31 AM
ಮೂಳೂರು : ಕಾಪು ತಾಲೂಕಿನ ಮೂಳೂರಿನಲ್ಲಿ ಮೀನಿನ ವಾಹನಕ್ಕೆ ಟೂರಿಸ್ಟ್ ಬಸ್ ಡಿಕ್ಕಿಯಾದ ಪರಿಣಾಮ ಪಲ್ಟಿಯಾಗಿ ಮೀನಿನ ವಾಹನದಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾದ ಘಟನೆ ಶನಿವಾರ ರಾತ್ರಿ ನಡೆದಿದೆ. ಭಟ್ಕಳದಿಂದ ಕೇರಳಕ್ಕೆ ಮೀನು ಸಾಗಾಟ ಮಾಡುತ್ತಿದ್ದ ಗೂಡ್ಸ್ ಟೆಂಪೊಗೆ ಹಿಂದಿನಿಂದ ಬರುತ್ತಿದ್ದ ಕರಾವಳಿಗರೇ ತುಂಬಿದ ಬಸ್ಸು ಡಿಕ್ಕಿಯಾದ ರಭಸಕ್ಕೆ ನಿಯಂತ್ರಣ ಕಳಕೊಂಡ ಗೂಡ್ಸ್ ವಾಹನ ರಸ್ತೆ ವಿಭಜಕ ಏರಿ ಮತ್ತೊಂದು ಪಾಶ್ವಕ್ಕೆ ಹೋಗಿ ಪಲ್ಟಿಯಾಗಿದೆ. ಸ್ಥಳಕ್ಕೆ ಬಂದ ಪಡುಬಿದ್ರಿ ಪೊಲೀಸರು ಹೆಜಮಾಡಿ ಟೋಲ್ ಪ್ಲಾಜಾಕ್ಕೆ ಕರೆ ಮಾಡಿ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಟೋಲ್ ನಲ್ಲಿ ಬಸ್ ತಡೆಯಲಾಯಿತು. ರಸ್ತೆಯಲ್ಲೇ ಪಲ್ಟಿಯಾದ ವಾಹನ ಇದ್ದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸ್ಥಳಕ್ಕೆ ಆಗಮಿಸಿದ ಕಾಪು ಹಾಗೂ ಪಡುಬಿದ್ರಿ ಪೊಲೀಸರು ವಾಹನ ಸಂಚಾರ ಸುಗಮಗೊಳಿಸಿದ್ದಾರೆ.
ಉಡುಪಿ : ಗ್ರಾಮ ಒನ್ ಯೋಜನೆ - ಒಂದೇ ಸೂರಿನಡಿ ಸೌಲಭ್ಯ
Posted On: 27 Aug 2022, 04:56 PM
ಉಡುಪಿ : ಜಿಲ್ಲೆಯಲ್ಲಿ ಗ್ರಾಮ ಒನ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಈ ಯೋಜನೆಯಡಿ ಸಾರ್ವಜನಿಕ ಆರೋಗ್ಯದ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಿ, ಒಬ್ಬ ವ್ಯಕ್ತಿಯ ಆರೋಗ್ಯದ ಮಾಹಿತಿಯನ್ನು ಒಂದೇ ಸೂರಿನಡಿ ದೊರಕಿಸಿ ಆರೋಗ್ಯದ ಸೌಲಭ್ಯಗಳು ಸುಲಭವಾಗಿ ದೊರೆಯುವಂತೆ ಮಾಡಲು ಎ.ಬಿ.ಎಚ್.ಎ. ಕಾರ್ಡ್ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಕಾರ್ಡ್ ಹೊಂದಿದ ಫಲಾನುಭವಿಗಳು ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 5 ಲಕ್ಷ ರೂ. ವರೆಗೆ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ ಹಾಗೂ ಚಿಕಿತ್ಸೆಯ ಮಾಹಿತಿಯೂ ಕೂಡ ದೇಶದ ಯಾವುದೇ ಭಾಗದಲ್ಲಿ ಆನ್‌ಲೈನ್ ಮೂಲಕ ಪಡೆಯಬಹುದಾಗಿದೆ. ಕಾರ್ಡ್ ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಗ್ರಾಮ ಒನ್ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಪು : ಬ್ಯಾಂಕ್ ಗೆ ಹೋದ ವ್ಯಕ್ತಿ ನಾಪತ್ತೆ
Posted On: 27 Aug 2022, 04:51 PM
ಕಾಪು : ಇಲ್ಲಿನ ಬ್ಯಾಂಕ್ ಆಫ್ ಬರೋಡದ ಜುವೆಲ್ ಚೆಕ್ ಗಾಗಿ ಹೋಗುವುದಾಗಿ ತಿಳಿಸಿದ ವ್ಯಕ್ತಿಯೋರ್ವರು ಮನೆಗೆ ಬಾರದೆ ಇದ್ದ ಘಟನೆ ಆಗಸ್ಟ್ 25 ರಂದು ನಡೆದಿದೆ. ಹರಿಪ್ರಸಾದ್ ಎಂಬುವವರು ಇವರ ಮನೆಯಾದ ಶಂಕರ ನಿಲಯ ಶಿರಿಬೀಡು ಉಡುಪಿಯಿಂದ ಆಗಸ್ಟ್ 25 ರ ಬೆಳಿಗ್ಗೆ 08.45 ಗಂಟೆಗೆ ಕೆಲಸಕ್ಕೆಂದು ತೆರಳಿದ್ದು, ಮಧ್ಯಾಹ್ನ ಕಾಪುವಿನ ಬ್ಯಾಂಕ್ ಆಫ್ ಬರೋಡದ ಜುವೆಲ್ ಚೆಕ್ ಗಾಗಿ ಹೋಗುವುದಾಗಿ ಪತ್ನಿಯಲ್ಲಿ ತಿಳಿಸಿರುತ್ತಾರೆ. ನಂತರ ಇವರು ಸಂಜೆ 04 ಗಂಟೆಗೆ ಕರೆ ಮಾಡಿ ಬೇಗ ಮನೆಗೆ ಬರುವಂತೆ ತಿಳಿಸಿದ್ದಲ್ಲಿ ತಡವಾಗುವುದಾಗಿ ತಿಳಿಸಿರುತ್ತಾರೆ. ಬಳಿಕ ಪತ್ನಿಯ ಅತ್ತೆ ಕರೆ ಮಾಡಿ ಮನೆಗೆ ಬೇಗ ಬರುವಂತೆ ತಿಳಿಸಿರುತ್ತಾರೆ. ನಂತರ ಸಂಜೆ 7 ಗಂಟೆಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಎಂದು ಬರುತ್ತಿರುವುದನ್ನು ಮನಗಂಡು ಶಿರ್ವ ಬ್ರಾಂಚ್ ಮ್ಯಾನೇಜರ್ ಗೆ ವಿಚಾರಿಸಿದಲ್ಲಿ ಹರಿಪ್ರಸಾದ್ ಸಂಜೆ 6 ಗಂಟೆಗೆ ಕಾಪುವಿನಿಂದ ಮನೆಗೆ ಹೋಗುತ್ತೇನೆ ಎಂದು ಹೇಳಿ ಹೋಗಿರುತ್ತಾರೆ ಎಂದು ತಿಳಿಸಿರುತ್ತಾರೆ. ಈ ಬಗ್ಗೆ ಪರಿಚಯದವರಲ್ಲಿ, ಸಂಬಂಧಿಕರಲ್ಲಿ ವಿಚಾರಿಸಿದಾಗ ಅಲ್ಲಿಗೂ ಹೋಗದೇ ಮನೆಗೂ ಬಾರದೇ ಕಾಣೆಯಾಗಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಉಚ್ಚಿಲ : ರೇಬೀಸ್ ಹಾಗೂ ಪ್ರಾಣಿಜನ್ಯ ರೋಗದ ಕುರಿತು ಮಾಹಿತಿ ಕಾರ್ಯಕ್ರಮ
Posted On: 27 Aug 2022, 04:26 PM
ಉಚ್ಚಿಲ : ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಕಾಪು, ಜಿಲ್ಲಾ ಪ್ರಾಣಿ ದಯಾ ಸಂಘ ಉಡುಪಿ ಇವರ ಸಹಯೋಗದೊಂದಿಗೆ ಸರಸ್ವತಿ ಮಂದಿರ ಹೈಸ್ಕೂಲ್ ಉಚ್ಚಿಲ, ರೋಟರಿ ಕ್ಲಬ್ ಉಚ್ಚಿಲ ಇವರ ಸಂಯುಕ್ತಾಶ್ರಯದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ್ ಅಂಗವಾಗಿ ರೇಬೀಸ್ (ಹುಚ್ಚುನಾಯಿ ರೋಗ) ಹಾಗೂ ಪ್ರಾಣಿಜನ್ಯ ರೋಗದ ಕುರಿತು ಮಾಹಿತಿ ಕಾರ್ಯಕ್ರಮ ಸರಸ್ವತಿ ಮಂದಿರ ಹೈಸ್ಕೂಲ್ ಉಚ್ಚಿಲ ಇಲ್ಲಿ ಜರಗಿತು. ಕಾಪುವಿನ ಪಶು ವೈದ್ಯರಾದ ಡಾ| ಅರುಣ್ ಹೆಗಡೆ ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಉಚ್ಚಿಲ ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ಸತೀಶ್ ಕುಲಾಲ್ ವಹಿಸಿದ್ದರು. ಹಿರಿಯ ಶಿಕ್ಷಕರಾದ ಸದಾಶಿವ ನಾಯಕ್, ಶಾಲಾ ವಿದ್ಯಾರ್ಥಿ ನಾಯಕ ಅಜ್ಜಯ್ಯ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಬಿ ಎಸ್ ಆಚಾರ‍್ಯ ಕಾರ‍್ಯಕ್ರಮ ನಿರ್ವಹಿಸಿ, ವಂದಿಸಿದರು.
ಪಡುಬೆಳ್ಳೆಯಲ್ಲಿ ಉಡುಪಿ ವಲಯ ಮಟ್ಟದ ಪ್ರೌಢ ಶಾಲಾ ಬಾಲಕರ ಕಬಡ್ಡಿ ಪಂದ್ಯಾಟ
Posted On: 27 Aug 2022, 07:58 AM
ಕಾಪು : ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತು ಸಾಕ್ಷಾರತ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಉಡುಪಿ ವಲಯ, ಪಡುಬೆಳ್ಳೆ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಇದರ ಸಹಯೋಗದಲ್ಲಿ ಶುಕ್ರವಾರ ಶಾಲಾ ಮೈದಾನದಲ್ಲಿ ಉಡುಪಿ ವಲಯ ಮಟ್ಟದ ಪ್ರೌಢ ಶಾಲಾ ಬಾಲಕರ ಕಬಡ್ಡಿ ಪಂದ್ಯಾಟ ಜರಗಿತು. ಬೆಳ್ಳೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಶಶಿಧರ್ ವಾಗ್ಲೆ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಕಾಪು ಚಂದ್ರಶೇಖರವರು ಅಧ್ಯಕ್ಷತೆ ವಹಿಸಿದ್ದರು. ಉಡುಪಿ ವಲಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಗೋಪಾಲ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿ ಶುಭ ಹಾರೈಸಿದರು. ಕಾಪು ಯುವಜನ ಸೇವಾ ಮತು ಕ್ರೀಡಾ ಇಲಾಖೆಯ ಅಧಿಕಾರಿ ರಿತೇಶ್ ಕುಮಾರ್ ಶೆಟ್ಟಿ, ತಾಲ್ಲೂಕು ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಚಂದ್ರಶೇಖರ್. ಕೆ. ಸುವರ್ಣ, ಉಡುಪಿ ತಾಲ್ಲೂಕು ಗ್ರೇಡ್ ೧ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ್ ಸಾಲಿಯಾನ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ದಿನಕರ್ ಭಂಡಾರಿ, ಕನ್ನಡ ಮಾಧ್ಯಮ ಮುಖ್ಯ ಶಿಕ್ಷಕಿ ಉಷಾ. ಎಸ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಜಿನ್ ರಾಜ್ ಸಾಲಿಯಾನ್ ಸ್ವಾಗತಿಸಿದರು. ದೈಹಿಕ ಶಿಕ್ಷಕಿ ಸುಮಂಗಲ ವಂದಿಸಿದರು. ದೈಹಿಕ ಶಿಕ್ಷಕ ಸುರೇಶ ದೇವಾಡಿಗ ಕಾರ್ಯಕ್ರಮ ಸಂಯೋಜಿಸಿದರು. ವೀಣಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಸಮಾರೋಪ ಸಮಾರಂಭದಲ್ಲಿ ಶ್ರೀ ಹರೀಶ್ ಶೆಟ್ಟಿ, ಬೆಳ್ಳೆ ಪಂಚಾಯತ್ ಸದಸ್ಯರು, ವಿಜೇತರಿಗೆ ಬಹುಮಾನ ವಿತರಿಸಿದರು. ಪಂದ್ಯಾಟದಲ್ಲಿ ಮೂಳೂರು ಅಲ್ ಇಶಾನ್ ಆಂಗ್ಲ ಮಾಧ್ಯಮ ಶಾಲೆ ಪ್ರಥಮ, ಉಡುಪಿ ಕ್ರಿಶ್ಚಿಯನ್ ಪ್ರೌಢಶಾಲೆ ದ್ವಿತೀಯ ಬಹುಮಾನ ಪಡೆಯಿತು. ಅಲ್ ಇಶಾನ್ ಶಾಲೆಯ ಮಹಮ್ಮದ್ ಅನಸ್ ಬೆಸ್ಟ್ ಅಲ್ ರೌಂಡರ್ , ಮಹಮ್ಮದ್ ಸುಹಾನ್ ಬೆಸ್ಟ್ ಕ್ಯಾಚರ್ ಮತ್ತು ಕ್ರಿಶ್ಚಿಯನ್ ಪ್ರೌಢ ಶಾಲೆಯ ದೀಪಕ್ ಬೆಸ್ಟ್ ರೈಡರ್ ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದರು.
