Updated News From Kaup

ಪ್ರತಿದಿನ ಯೋಗ ಮಾಡುವುದರಿಂದ ಆರೋಗ್ಯ ವೃದ್ಧಿ : ಮಟ್ಟಾರು ರತ್ನಾಕರ ಹೆಗ್ಡೆ

Posted On: 21-06-2022 09:43PM

ಉಡುಪಿ : ಇಂದಿನ ಯಾಂತ್ರಿಕ ಬದುಕಿನಲ್ಲಿ, ದೇಹಕ್ಕೆ ಸೂಕ್ತ ವ್ಯಾಯಾಮ ದೊರೆಯದೇ, ನಾವುಗಳು ಅನೇಕ ರೋಗಗಳಿಂದ ಬಳಲುತ್ತಿದ್ದು, ದೈನಂದಿನ ಬದುಕಿನಲ್ಲಿ ಪ್ರತಿದಿನ ಯೋಗ ಮಾಡುವುದರಿಂದ ಆರೋಗ್ಯ ವೃದ್ಧಿಯಾಗಲಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು. ಅವರು ಇಂದು ಉಡುಪಿಯ ಶ್ರೀಕೃಷ್ಣ ಮಠ ರಾಜಾಂಗಣದಲ್ಲಿ, ಆಯುಷ್ ಇಲಾಖೆ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ ಎನ್.ಸಿ.ಡಿ ವಿಭಾಗ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪರ್ಯಾಯ ಕೃಷ್ಣಾಪುರ ಮಠ ಉಡುಪಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇವರ ಸಹಯೋಗದಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಯತ್ನದಿಂದಾಗಿ ಇಂದು ಯೋಗವು ಇಡೀ ವಿಶ್ವಕ್ಕೆ ಹರಡಿದ್ದು, ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ. ಪ್ರತಿ ದಿನದ ಯೋಗಾಭ್ಯಾಸದಿಂದ ಉತ್ತಮ ಆರೋಗ್ಯವಂತರಾಗಿ ಆಸ್ಪತ್ರೆಗಳಿಂದ ದೂರ ಉಳಿಯಲು ಸಾಧ್ಯವಾಗಲಿದೆ. ಯೋಗಾಭ್ಯಾಸ ನಿತ್ಯ ಜೀವನದ ಭಾಗವಾಗಬೇಕು ಎಂದರು. ಯೋಗ ಭಾರತೀಯ ಪ್ರಾಚೀನ ಪರಂಪರೆಯ ಅತ್ಯಮೂಲ್ಯ ಕೊಡುಗೆಯಾಗಿದೆ. ಯೋಗಾಭ್ಯಾಸವನ್ನು ವಿಶ್ವದೆಲ್ಲೆಡೆ ಅನುಸರಿಸುತ್ತಿದ್ದಾರೆ. ಮುಂದುವರೆದ ದೇಶಗಳಲ್ಲೊಂದಾದ ಅಮೇರಿಕದಲ್ಲಿ ಸಹ ಯೋಗದ ಸೆಂಟರುಗಳು ನಿರಂತರವಾಗಿವೆ ಎಂದರು.

ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ಯೋಗವು ವಿಶ್ವಕ್ಕೆ ಭಾರತ ನೀಡಿರುವ ಅತ್ಯುತ್ತಮ ಕೊಡುಗೆ. ಯೋಗದ ಮೂಲಕ ಪ್ರತಿಯೊಬ್ಬರೂ ತಮ್ಮನ್ನು ತಾವು ಅರಿತುಕೊಳ್ಳಲು ಹಾಗೂ ಉತ್ತಮ ಮಾನವೀಯ ಮೌಲ್ಯಗಳನ್ನು ರೂಡಿಸಿಕೊಳ್ಳಲು ಸಾಧ್ಯ. ಉಡುಪಿ ಜಿಲ್ಲೆಯಲ್ಲಿ ನಿರಂತರವಾಗಿ ಯೋಗ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ ಎಂದರು. ಕಾರ್ಯಕ್ರಮದಲ್ಲಿ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಯೋಗಾಸನದ ವಿವಿಧ ಆಸನಗಳನ್ನು ಅಭ್ಯಾಸ ಮಾಡಲಾಯಿತು. ಯೋಗ ಶಿಕ್ಷಕ ಬಿರಾದರ್ ಯೋಗ ಪ್ರಾತ್ಯಕ್ಷಿಕೆ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಪ್ರತಿಭಾ, ಪತಂಜಲಿ ಯೋಗ ಶಿಕ್ಷಣ ಕೇಂದ್ರದ ಜಿಲ್ಲಾ ಸಂಚಾಲಕ ಚಂದ್ರಶೇಖರ್ ಹಾಗೂ ಮತ್ತಿತರರು ಭಾಗವಹಿಸಿದ್ದರು. ಜಿಲ್ಲಾ ಆಯುಷ್ ಅಧಿಕಾರಿ ಡಾ.ಸತೀಶ್ ಆಚಾರ್ಯ ಸ್ವಾಗತಿಸಿದರು.

ಜೂನ್ 26 : ಪಡುಬಿದ್ರಿ ಗ್ರಾಮೀಣ ಕಾಂಗ್ರೇಸ್ ವತಿಯಿಂದ ಚಿಂತನ ಮಂಥನ ಸಭೆ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ

Posted On: 21-06-2022 08:04PM

ಪಡುಬಿದ್ರಿ : ಗ್ರಾಮೀಣ ಕಾಂಗ್ರೇಸ್ ಸಮಿತಿ, ಪಡುಬಿದ್ರಿ ಇದರ ವತಿಯಿಂದ ಚಿಂತನ ಮಂಥನ ಸಭೆ ಜೂನ್ 26, ಆದಿತ್ಯವಾರದಂದು ಸಂಜೆ 4.30ಕ್ಕೆ ಸಾಯಿ ಆರ್ಕೇಡ್ ಸಭಾಂಗಣ, 3ನೇ ಮಹಡಿ ಮಾರ್ಕೇಟ್ ರಸ್ತೆ, ಪಡುಬಿದ್ರಿ ಇಲ್ಲಿ ಜರಗಲಿದೆ.

ಈ ಸಂದರ್ಭ ಸಾಧಕರಿಗೆ ಸನ್ಮಾನ, ಪಡುಬಿದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯೊಳಗೆ ವಾಸ್ತವ್ಯವಿರುವ 2021-22ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ 550ಕ್ಕೂ ಮೇಲ್ಪಟ್ಟು ಅಂಕಗಳಿಸಿದವರಿಗೆ ಪ್ರತಿಭಾ ಪುರಸ್ಕಾರ, ಪಕ್ಷದ ಹಿರಿಯ ಮುಖಂಡರಿಗೆ ಸನ್ಮಾನ, ಪಕ್ಷದ ಸಂಘಟನಾತ್ಮಕ ಕಾರ್ಯದ ಬಗ್ಗೆ ಚಿಂತನ ಮಂಥನ, ಪಕ್ಷದ ಮಾಜಿ ಹಿರಿಯ ಗ್ರಾ.ಪಂ. ಸದಸ್ಯರು, ಅಧ್ಯಕ್ಷರುಗಳಿಗೆ ಗೌರವ ಸನ್ಮಾನ ಕಾರ್ಯಕ್ರಮ ಜರಗಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಬಿದ್ರಿ ಗ್ರಾಮೀಣ ಕಾಂಗ್ರೇಸ್ ಸಮಿತಿಯ ಅಧ್ಯಕ್ಷರಾದ ಕರುಣಾಕರ್ ಪೂಜಾರಿ ವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪ್ರಕಟನೆ : ಪಡುಬಿದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯೊಳಗೆ ವಾಸ್ತವ್ಯವಿರುವ 2021-22ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ(ವಿಜ್ಞಾನ, ವಾಣಿಜ್ಯ, ಕಲಾ ವಿಭಾಗ) 550ಕ್ಕೂ ಮೇಲ್ಪಟ್ಟು ಅಂಕಗಳಿಸಿದವರು ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸುವವರು ಜೂನ್ 24ರ ಮೊದಲು ಈ ಕೆಳಗಿನ ಸಂಖ್ಯೆಗೆ ಕರೆ ಮಾಡಿ ಹೆಸರು ನೋಂದಾಯಿಸಿ ಗಣೇಶ್ ಕೋಟ್ಯಾನ್ : 9900555542 ತಸ್ನಿನ್ ಅರಾ : 8861183491

ಉಡುಪಿ ಜಿಲ್ಲೆಯಲ್ಲಿ ಸರಕಾರಿ ಅಧಿಕಾರಿಗಳ ಭ್ರಷ್ಟಚಾರ, ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಧರಣಿ ; ಜಿಲ್ಲಾಧಿಕಾರಿಗಳಿಂದ ತನಿಖೆಯ ಭರವಸೆ

Posted On: 21-06-2022 03:36PM

ಉಡುಪಿ : ಜಿಲ್ಲೆಯಲ್ಲಿ ಸರಕಾರಿ ಅಧಿಕಾರಿಗಳ ಭ್ರಷ್ಟಚಾರ ಹಾಗೂ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಉಡುಪಿ ಜಿಲ್ಲೆಯ ಅರ್ ಟಿ ಐ ಸಂಘಟನೆ ಹಾಗೂ ದಲಿತ ಸಂಘರ್ಷ ಸಮಿತಿ ಸಂಘಟನೆ, ಅರ್ ಪಿ ಐ ಪಕ್ಷ , ಕುಂದಾಪುರ ಕನತಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಉಡುಪಿ‌ ಜಿಲ್ಲಾಡಳಿತ ಕಚೇರಿ ಎದುರುಗಡೆ ದಿನ ಪೂರ್ತಿ ಪ್ರತಿಭಟನೆಯನ್ನು ನಡೆಸಿದರು. ಜಿಲ್ಲೆಯಲ್ಲಿ ವಿವಿಧ ಇಲಾಖೆಯಲ್ಲಿ ಅಧಿಕಾರಿಗಳು ಭ್ರಷ್ಟಾಚಾರ ನಡೆಸುತ್ತಿದ್ದು, ಈ ಬಗ್ಗೆ ಹಲವು ದೂರುಗಳನ್ನು ವಿವಿಧ ಸಂಘಟನೆಗಳು ದೂರು ನೀಡಿದರು, ಯಾವುದೇ ಪ್ರಯೋಜನ ಆಗದ ಹಿನ್ನೆಲೆಯಲ್ಲಿ ಸಂಘಟನೆಗಳು ಪ್ರತಿಭಟನೆಗಿಳಿದಿದ್ದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ಮೆಡಿಕಲ್ ಮಾಫಿಯ ,ಕುಂದಾಪುರ ತಹಶಿಲ್ದಾರರ ನಕಲಿ ಜಾತಿ ಪ್ರಮಾಣ ಪತ್ರ ಪ್ರಕರಣ,ಬ್ರಹ್ಮಾವರ ಸೀತಾನದಿ ಕಳಪೆ ರಸ್ತೆ ಹಗರಣ , ಮೀಸಲು ಅರಣ್ಯ ಭೂಮಿಯನ್ನು ನಾಶ ಪಡಿಸಿ ಪರಿಶಿಷ್ಟ ಪಂಗಡದ ನಿಧಿ ದುರುಪಯೋಗ ಪಡಿಸಿಕೊಂಡು ರಸ್ತೆ ನಿರ್ಮಾಣ, ಬೈಂದೂರಿನಲ್ಲಿ ಉಪ ತಹಶೀಲ್ದಾರ್ ಭೂ ಕಬಳಿಕೆ ಪ್ರಕರಣ, ಆಯುಷ್ಮಾನ್ ಯೋಜನೆ ಸಮಪರ್ಕವಾಗಿ ಜಾರಿಯಾಗದ ಬಗ್ಗೆ , ನ್ಯಾಯಾಲಯದ ಆದೇಶಗಳನ್ನು ಅಧಿಕಾರಿಗಳು ಸರಿಯಾಗಿ ಪಾಲನೆ ಮಾಡದಿರುವ ಬಗ್ಗೆ ಸೇರಿದಂತೆ ಭ್ರಷ್ಟ ಅಧಿಕಾರಿಗಳ ವಿರುದ್ದ ಕ್ರಮಗಳನ್ನು ಕೈಗೊಳ್ಳುವಂತೆ ನೂರಾರು ಕಾರ್ಯಕರ್ತರು ಜಿಲ್ಲಾಡಳಿತ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿದರು.

ಬೆಳಿಗ್ಗಿನಿಂದಲೂ ಪ್ರತಿಭಟನೆ ನಡೆಸಿದರೂ ಕೂಡ ಜಿಲ್ಲಾಡಳಿತ ಮಾತ್ರ ಪ್ರತಿಭಟನಕಾರರ ಕಡೆಗೆ ತಲೆ ಎತ್ತಿಯೂ ನೋಡದಿರುವುದು ಪ್ರತಿಭಟನಾಕಾರರ ಅಕ್ರೋಶಕ್ಕೆ ಕಾರಣವಾಯ್ತು. ಜಿಲ್ಲಾಧಿಕಾರಿಗಳು ಪ್ರತಿಭಟನೆ ನಡೆಯುವ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು. ಜಿಲ್ಲಾಡಳಿತದ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಭ್ರಷ್ಟರನ್ನು ಜಿಲ್ಲಾಡಳಿತ ರಕ್ಷಣೆ ಮಾಡುತ್ತಿದೆ ಎಂದು ಆರೋಪಿಸಿದರು. ಜಿಲ್ಲಾಡಳಿತ ಸ್ಪಂದಿಸುವವರೆಗೂ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಿದ ಕಾರ್ಯಕರ್ತರು ಪ್ರತಿಭಟನಾ ಸ್ಥಳದಿಂದ ಕದಲದೆ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ರಾತ್ರಿವರೆಗೂ ಧರಣಿ ಮುಂದುವರೆಸಿದ್ದರು. ಪೋಲೀಸರು ಹಾಗೂ ಇತರ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಸಾಧ್ಯವಾಗಲಿಲ್ಲ. ಭಾರೀ ಗಾಳಿ ಮಳೆಯನ್ನು ಲೆಕ್ಕಿಸದೇ ಪಟ್ಟು ಹಿಡಿದು ತಡವರಾತ್ರಿವರೆಗೂ ಧರಣಿ ಮುಂದುವರೆಸಿದ ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದು ಕೊನೆಗೂ ಜಿಲ್ಲಾಧಿಕಾರಿಗಳಾದ ಕೂರ್ಮಾ ರಾವ್ ಸ್ಥಳಕ್ಕೆ ಬಂದು ಕಾರ್ಯಕರ್ತರ ಮನವಿಯನ್ನು ಸ್ವೀಕರಿಸಿದರು.

ಕಾರ್ಯಕರ್ತರ ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಈಗ ನೀಡಿರುವ ದೂರುಗಳ‌ ಬಗ್ಗೆ ಸಮರ್ಪಕವಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.ಭ್ರಷ್ಟ ಅಧಿಕಾರಿಗಳ ವಿರುದ್ದ ತನಿಖೆ ನಡೆಸುತ್ತೇವೆ ,ಜಿಲ್ಲಾಡಳಿತಕ್ಕೆ ಸಮರ್ಪಕವಾದ ಮಾಹಿತಿಗಳನ್ನು ನೀಡುವಂತೆಯೂ ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡರು. ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿಯ ಶೇಖರ್ ಹಾವಂಜೆ, ಆರ್. ಟಿ. ಐ ಸಂಘಟನೆಯ ಸತೀಶ್ ಪೂಜಾರಿ , ಸದಾಶಿವ ಶೆಟ್ಟಿ, ಜಯಕರ್ ನಾಯ್ಕ್ , ಸಂಜೀವ ನಾಯ್ಕ್ , ಕಿರಣ್ ಪೂಜಾರಿ, ರಮೇಶ್, ಕೆ ಅರ್ ಎಸ್ ಪಕ್ಷದ ಅಶೋಕ್ ಕಾಡಬೆಟ್ಟು, ಇಕ್ಬಾಲ್ ಕುಂಜಿಬೆಟ್ಟು, ಸದಾಶಿವ ಕೋಟೆಕಾರ್, ಪುರುಷೋತ್ತಮ, ಮತ್ತಿತರರು ಉಪಸ್ಥಿತರಿದ್ದರು.

ಜೀವಬೆದರಿಕೆ ಪ್ರಕರಣ : ಆರೋಪಿಯನ್ನು ಬಂಧಿಸುವಲ್ಲಿ ಶ್ರಮಿಸಿದ ಕಾಪು ಠಾಣಾಧಿಕಾರಿ ಮತ್ತು ವೃತ್ತ ನಿರೀಕ್ಷಕರನ್ನು ಅಭಿನಂದಿಸಿದ ಕಾಪು ಬಿಜೆಪಿ ಯುವಮೋರ್ಚಾ

Posted On: 21-06-2022 03:09PM

ಕಾಪು : ಇತ್ತೀಚೆಗೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣರಿಗೆ ಸಾಮಾಜಿಕ ಜಾಲತಾಣದಲ್ಲಿ ಜೀವಬೆದರಿಕೆ ಒಡ್ಡಿದ ಆರೋಪಿಯನ್ನು ಬಂಧಿಸುವಂತೆ ಬಿಜೆಪಿ ಯುವಮೋರ್ಚಾ ಕಾಪು ಮಂಡಲದಿಂದ ಕಾಪು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.

ಅದರಂತೆ ಈ ದೂರನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರವಾಗಿ ಆರೋಪಿಯನ್ನು ಬಂಧಿಸಿ ತಮ್ಮ ಕರ್ತವ್ಯ ಪ್ರಜ್ಞೆಯನ್ನು ತೋರ್ಪಡಿಸಿದ ಕಾಪು ವ್ರತ್ತ ನಿರೀಕ್ಷಕರು ಹಾಗೂ ಠಾಣಾಧಿಕಾರಿಗಳಿಗೆ ಇಂದು ಬಿಜೆಪಿ ಯುವಮೋರ್ಚಾ ಕಾಪು ಮಂಡಲದಿಂದ ಅಭಿನಂದನೆ ಸಲ್ಲಿಸಲಾಯಿತು.

ರೈಲ್ವೆ ಮಾರ್ಗದ ವಿದ್ಯುತ್ತೀಕರಣದಿಂದ ವಾರ್ಷಿಕ 300 ಕೋಟಿ ರೂ. ಉಳಿತಾಯ : ಶೋಭಾ ಕರಂದ್ಲಾಜೆ

Posted On: 21-06-2022 02:55PM

ಉಡುಪಿ : ಕೊಂಕಣ ರೈಲ್ವೆಯು ಕರಾವಳಿಯ ಜೀವನಾಡಿಯಾಗಿದ್ದು, ಕರಾವಳಿಯನ್ನು ಉತ್ತರ ಭಾರತದೊಂದಿಗೆ ಜೋಡಿಸುವ ಮಾರ್ಗವಾಗಿದೆ. ಪರಿಸರದ ಹಲವು ಅಡೆತಡೆಗಳನ್ನು ಎದುರಿಸಿ ಆರಂಭಗೊಂಡ ಈ ರೈಲ್ವೆ ಮಾರ್ಗವನ್ನು ಪ್ರಸ್ತುತ ವಿದ್ಯುತ್ತೀಕರಣಗೊಳಿಸಿರುವುದರಿಂದ ವಾರ್ಷಿಕವಾಗಿ 300 ಕೋಟಿ ರೂ. ಉಳಿತಾಯವಾಗಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆಯ ರಾಜ್ಯಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಅವರು ಇಂದು, ಕೊಂಕಣ ರೈಲ್ವೆಯ ವಿದ್ಯುತ್ತೀಕರಣ ಯೋಜನೆ ಉದ್ಘಾಟಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವರ್ಚುವಲ್ ಕಾರ್ಯಕ್ರಮವನ್ನು, ಉಡುಪಿ ರೈಲ್ವೆ ನಿಲ್ದಾಣದಲ್ಲಿ ವೀಕ್ಷಿಸಿ ಮಾತನಾಡಿದರು.

ಮಹಾರಾಷ್ಟ್ರದ ರೋಹಾದಿಂದ ಮಂಗಳೂರಿನ ತೋಕೂರು ವರೆಗಿನ 740 ಕಿ.ಮೀ ಉದ್ದದ ಕೊಂಕಣ ರೈಲು ಮಾರ್ಗವನ್ನು 1287 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ತೀಕರಣಗೊಳಿಸಿದ್ದು, ಇದರಿಂದ ವಾರ್ಷಿಕ ಇಂಧನ ವೆಚ್ಚ 180 ಕೋಟಿ ರೂ. ಹಾಗೂ ನಿರ್ವಹಣಾ ವೆಚ್ಚ 120 ಕೋಟಿ ರೂ. ಗಳ ಉಳಿತಾಯವಾಗಲಿದ್ದು, ವಿದ್ಯುತ್ ಬಳಕೆಯಿಂದ ಕಲ್ಲಿದ್ದಲ್ಲಿನ ಬಳಕೆ ಪ್ರಮಾಣ ಕಡಿಮೆಯಾಗಿ, ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಹಾಗೂ ಪ್ರಯಾಣಿಕರಿಗೆ ವೇಗವಾಗಿ ತಮ್ಮ ಸ್ಥಳಗಳಿಗೆ ತಲುಪಲು ಸಾಧ್ಯವಾಗಲಿದೆ. ಈ ಮಾರ್ಗದಲ್ಲಿ 16 ಮೈಲ್ ಎಕ್ಸ್ಪ್ರೆಸ್ ಹಾಗೂ 10 ಗೂಡ್ಸ್ ರೈಲುಗಳು ಸಂಚರಿಸಲಿವೆ ಎಂದರು.

ದೇಶದಲ್ಲಿ 2024 ರೊಳಗೆ 67956 ಕಿ.ಮೀ. ರೈಲು ಮಾರ್ಗವನ್ನು ವಿದ್ಯುತ್ತೀಕರಣಗೊಳಿಸುವ ಯೋಜನೆಯಿದ್ದು, ಈಗಾಗಲೇ 45881 ಕಿ.ಮೀ. ಯೋಜನೆ ಪೂರ್ಣವಾಗಿದ್ದು, ಇದಕ್ಕಾಗಿ 13500 ಕೋಟಿ ರೂ. ವೆಚ್ಚವಾಗಿದೆ. ಇನ್ನು 2 ವರ್ಷದಲ್ಲಿ ಬಾಕಿ ಕಾಮಗಾರಿ ಪೂರ್ಣಗೊಳ್ಳಲಿದೆ. ಕೇಂದ್ರ ಸರ್ಕಾರದ 8 ವರ್ಷಗಳ ಆಡಳಿತದ ಅವಧಿಯಲ್ಲಿ ಶೌಚಾಲಯ, ವಸತಿ, ವಿದ್ಯುತ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರಗತಿಪರ ಅಭಿವೃದ್ಧಿ ಕಾರ್ಯಗಳಾಗಿವೆ. ದೇಶದ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದಿಂದ , ರೈತರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಒದಗಿಸಲು ಮತ್ತು ಆಹಾರ ಪದಾರ್ಥಗಳನ್ನು ರಫ್ತು ಮಾಡಲು ಹೆಚ್ಚು ಆದ್ಯತೆ ನೀಡಲಾಗುತಿದ್ದು, ವಿಶ್ವದಲ್ಲಿ ಆಹಾರ ಪದಾರ್ಥಗಳ ರಫ್ತಿನಲ್ಲಿ ದೇಶ ಪ್ರಸ್ತುತ 9 ನೇ ಸ್ಥಾನದಲ್ಲಿದೆ ಎಂದರು.

ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆಯ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಕೊಂಕಣ ರೈಲ್ವೆಯ ಕಾರವಾರ ಪ್ರಾದೇಶಿಕ ಕಚೇರಿಯ ಕ್ಷೇತ್ರಿಯ ಪ್ರಬಂಧಕ ಬಿ.ಬಿ.ನಿಕ್ಕಂ, ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. ಕೊಂಕಣ ರೈಲ್ವೆಯ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್ ನಾಯಕ್ ಸ್ವಾಗತಿಸಿದರು.

ಸಂತ ಮೇರಿ ಮಹಾವಿದ್ಯಾಲಯ, ಶಿರ್ವದಲ್ಲಿ ವಿಶ್ವ ಯೋಗ ದಿನಾಚರಣೆ

Posted On: 21-06-2022 02:32PM

ಶಿರ್ವ: ಸಂತ ಮೇರಿ ಮಹಾವಿದ್ಯಾಲಯ, ಶಿರ್ವ ಇದರ ರಾಷ್ಟ್ರೀಯ ಭೂ-ಯುವಸೇನಾದಳದ ಎನ್.ಸಿ.ಸಿ. ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಜಂಟಿಯಾಗಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ "ವಿಶ್ವ ಯೋಗ ದಿನಾಚರಣೆ ಯನ್ನು" ಫಾದರ್ ಹೆನ್ರಿ ಕ್ಯಾಸ್ಟಲಿನೋ ಸಭಾಂಗಣದಲ್ಲಿ ಆಯುಷ್ ಮಂತ್ರಾಲಯ ನೀಡಿದ ಯೋಗ ವಿಡಿಯೋ ಪ್ರಾಯೋಗಿಕ ಪ್ರದರ್ಶನವನ್ನು ಅನುಸರಿಸಿ ಆಚರಿಸಲಾಯಿತು.

ಯೋಗ ಒಂದು ಸರ್ವರೋಗ ನಿವಾರಣಾ ತಂತ್ರವಾಗಿದೆ .ಯೋಗವನ್ನು ಕೇವಲ ವಿಶ್ವ ಯೋಗ ದಿನಾಚರಣೆಕ್ಕೆ ಸೀಮಿತಗೊಳ್ಳದೆ ಪ್ರತಿನಿತ್ಯ ಜೀವನಶೈಲಿಯಲ್ಲಿ ಜನಗಳು ಯೋಗ ಮಾಡುವ ಮೂಲಕ ನಿತ್ಯ ಆರೋಗ್ಯವಂತ ರಾಗುವರು ಎಂದು ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರೊ. ವಿಠ್ಠಲ್ ನಾಯ್ಕರವರು ಮಾತನಾಡಿ, ಇಂತಹ ಕಾರ್ಯಕ್ರಮ ಹಮ್ಮಿಕೊಂಡ ಕಾಲೇಜಿನ ಎನ್.ಸಿ.ಸಿ ಘಟಕವನ್ನು ಪ್ರಶಂಸಿಸಿದರು ಮತ್ತು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಎನ್.ಸಿ.ಸಿಯ ಬಿ ' ಸರ್ಟಿಫಿಕೇಟ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಕೆಡೆಟ್ ಮೋಹಿತ ಎನ್ ಸಾಲಿಯಾನ, ಆಶಿಶ್ ಪ್ರಸಾದ್ , ಧೀರಜ್ ಆಚಾರ್ಯ, ರಿಯಾನ್ ಡಿಸೋಜಾ, ವಿನೋಲ್ ನೊರೊನ್ಹಾ, ಮಂಜುನಾಥ್ ಅಮರಾವಟಿ, ಶ್ರೇಯಸ್ ವಿ ಕೋಟಿಯನ್, ದೀಪಕ್, ಸೂರಜ್,ರತನ್ ಕೋಟ್ಯಾನ್, ಶೆಟ್ಟಿ ತರುಣ್ ರಮೇಶ, ಜನಿಸಿಯಾ ನೊರೊನ್ಹಾ, ಎಲ್ರುಶಾ ಮಿಲಿನಾ ಡಿಸಾ, ರಿಯಾ ಆನ್ ನೆವಿಲ್ ಲೋಬೋ ನವ್ಯ ಆಚಾರ್ಯ, ದೀಕ್ಷಾ ಪಿ ಸಾಲಿಯಾನ್, ದೀಪ್ತಿ, ರಕ್ಷಿತಾ, ನಿವೇದಿತ ಪೂಜಾರಿ, ರಿಯಾ ಸರೀನಾ ಡಿಸೋಜಾ, ಸೆರಾ ಮಾತೆ ಮ್ಯಾಕ್ವಾನ್ ಇವರನ್ನುಅಭಿನಂದಿಸಲಾಯಿತು.

ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಅವರು ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿ, ವಿಶ್ವ ಯೋಗ ದಿನಾಚರಣೆಯ ಪ್ರಾಮುಖ್ಯತೆಯನ್ನು ಮತ್ತು ಉದ್ದೇಶವನ್ನು ತಿಳಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಜೂನಿಯರ್ ಅಂಡರ್ ಆಫೀಸರ್ ಹರ್ಷಿತಾ, ಸುರಕ್ಷಾ ಉಪಸ್ಥಿತರಿದ್ದರು. ಕ್ಯಾಡೆಟ್ಗಳಾದ ಅನುಪ್ ನಾಯಕ ಹಾಗೂ ಅಲಿಸ್ಟರ್ ಸುಜಾಯ್ ಡಿಸೋಜಾ ಸಹಕರಿಸಿದರು. ಸೀನಿಯರ್ ಅಂಡರ್ ಆಫೀಸರ್ ವಿಶಾಲ್ ಎಸ್ ಮೂಲ್ಯ ಸರ್ವರನ್ನೂ ಸ್ವಾಗತಿಸಿ, ಕೆಡೆಟ್ ಶೆಟ್ಟಿಗಾರ್ ಹೇಮಶ್ರೀ ಸುದರ್ಶನ್ ಕಾರ್ಯಕ್ರಮವನ್ನು ನಿರೂಪಿಸಿದರು. ಕೆಡೆಟ್ ಸುಶ್ಮಿತಾ ಎಸ್ ಅಮೀನ್ ವಂದಿಸಿದರು

ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ : ಅಧ್ಯಕ್ಷರಾಗಿ ಅನಿಲ್ ಲೋಬೊ ಆಯ್ಕೆ

Posted On: 21-06-2022 10:40AM

ಉದ್ಯಾವರ : ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ತನ್ನದೇ ಅದ ಛಾಪನ್ನು ಮೂಡಿಸಿರುವ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನ 2022-23ರ ಸಾಲಿನ ನೂತನ ಅಧ್ಯಕ್ಷರಾಗಿ ಅನಿಲ್ ಲೋಬೊ ಆಯ್ಕೆಯಾಗಿದ್ದಾರೆ.

ಇತ್ತೀಚಿಗೆ ನಡೆದ ಮಾಸಿಕ ಸಭೆಯಲ್ಲಿ ನೂತನ ಸಾಲಿನ ಕಾರ್ಯಕಾರಿ ಸಮಿತಿಯ ಚುನಾವಣೆ ನಡೆದಿದ್ದು ಕಾರ್ಯದರ್ಶಿಯಾಗಿ ಸ್ಟೀವನ್ ಕುಲಾಸೊ ಮತ್ತು ಕೋಶಾಧಿಕಾರಿಯಾಗಿ ರೋಶನ್ ಕ್ರಾಸ್ತಾ ಆಯ್ಕೆಯಾಗಿದ್ದಾರೆ.

ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಕಾರ್ಯಕ್ರಮವು ಜುಲೈ 2 ರಂದು ಶನಿವಾರ ಸಂಜೆ ಉದ್ಯಾವರದ ಝೇವಿಯರ್ ಸಭಾಭವನದಲ್ಲಿ ನಡೆಯಲಿದೆ ಎಂದು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನ ಪ್ರಕಟಣೆ ತಿಳಿಸಿದೆ.

ಪಲಿಮಾರು : ನರೇಂದ್ರ ಮೋದಿಯವರ ಎಂಟನೇ ವರ್ಷದ ಆಡಳಿತದ ಪ್ರಯುಕ್ತ ಎಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ

Posted On: 20-06-2022 07:47PM

ಕಾಪು : ಬಿಜೆಪಿ ಶಕ್ತಿಕೇಂದ್ರ ಪಲಿಮಾರು ಇದರ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ಎಂಟನೇ ವರ್ಷದ ಆಡಳಿತದ ಪ್ರಯುಕ್ತ ಸೇವಾ ಸುಶಾಸನ ಮತ್ತು ಬಡವರ ಕಲ್ಯಾಣ ಕಾರ್ಯಕ್ರಮದಡಿ ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮವು ಅವರಾಲು ಶ್ರೀ ಧೂಮಾವತಿ ದೈವಸ್ಥಾನದ ವಠಾರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಪಲಿಮಾರು ಶಕ್ತಿಕೇಂದ್ರ ಅಧ್ಯಕ್ಷರಾದ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಾಯತ್ರಿ ಡಿ ಪ್ರಭು, ವಾರ್ಡ್ ಅಧ್ಯಕ್ಷರಾದ ಪ್ರಜ್ವಲ್ ನಂದಿಕೂರು, ಶಕ್ತಿಕೇಂದ್ರ ಅಧ್ಯಕ್ಷರಾದ ಸೌಮ್ಯಲತಾ ಶೆಟ್ಟಿ, ಪಂಚಾಯತ್ ಸದಸ್ಯರಾದ ಸುಮಂಗಲ ದೇವಾಡಿಗ, ಸುಜಾತ, ರಶ್ಮಿ, ಪ್ರಿಯ, ರಾಜೇಶ್ ಪೈ, ಮಹೇಶ್, ಪ್ರವೀಣ್ ಹಿಂದುಳಿದ ವರ್ಗಗಳ ಮೋರ್ಚಾದ ಸದಸ್ಯರಾದ ಪ್ರಸಾದ್ ಪಲಿಮಾರು, ಹರೀಶ್, ಪ್ರತಾಪ್, ಅರುಣ್ ಶೆಟ್ಟಿ, ಪ್ರೀತಮ್ ಶೆಟ್ಟಿ ಮತ್ತು ಬಿಜೆಪಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಹರಿಯಾಣದಲ್ಲಿ ಜರಗಲಿರುವ ಅಖಿಲ ಭಾರತ ಸಂತ ಸಮಿತಿಯ ರಾಷ್ಟ್ರೀಯ ಕಾರ್ಯಸಮಿತಿಯ ಸಭೆಗೆ ಸಂತ ಶ್ರೀ ಸಾಯಿ ಈಶ್ವರ್ ಗುರೂಜಿಗೆ ಆಹ್ವಾನ

Posted On: 20-06-2022 05:46PM

ಕಾಪು : ಉಡುಪಿ ಜಿಲ್ಲೆಯ ಶಂಕರಪುರ ದ್ವಾರಕಾಮಾಯಿ ಮಠದ ಸಂತ ಶ್ರೀ ಸಾಯಿ ಈಶ್ವರ್ ಗುರೂಜಿ ಹರಿಯಾಣ ಪಟೋಡಿ ಎಂಬಲ್ಲಿ ಜೂನ್ 25 ಮತ್ತು 26ರಂದು ನಡೆಯಲಿರುವ ಅಖಿಲ ಭಾರತ ಸಂತ ಸಮಿತಿಯ ರಾಷ್ಟ್ರೀಯ ಕಾರ್ಯಸಮಿತಿಯ ಸಭೆಯಲ್ಲಿ ರಾಜ್ಯ ಪ್ರಮುಖ್ ಓಂ ಶ್ರೀ ವಿದ್ಯಾನಂದ ಸರಸ್ವತಿ ಜೊತೆಗೆ ಭಾಗವಹಿಸಬೇಕೆಂದು ಸೂಚಿಸಲಾಗಿದೆ.

ಈ ರಾಷ್ಟ್ರೀಯ ಸಭೆಯಲ್ಲಿ ಕರ್ನಾಟಕ ರಾಜ್ಯಸಮಿತಿಯಲ್ಲಿ ಶ್ರೀ ಸಾಯಿ ಈಶ್ವರ್ ಗುರೂಜಿ ಮಹತ್ವದ ಹುದ್ದೆಯನ್ನು ವಹಿಸಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಪ್ರದೀಪಚಂದ್ರ ಕುತ್ಪಾಡಿಯವರಿಗೆ ಜಾನಪದ ಪ್ರಶಸ್ತಿ

Posted On: 18-06-2022 11:14PM

ಉಡುಪಿ : ಕರ್ನಾಟಕ ಜಾನಪದ ಪರಿಷತ್ತು (ರಿ) ಬೆಂಗಳೂರು- ಉಡುಪಿ ಜಿಲ್ಲಾ ಘಟಕ ಇವರು ಆಯೋಜಿಸಿದ್ದ ಜಾನಪದ ಉತ್ಸವ 2022 ರಲ್ಲಿ ಈ ಬಾರಿ ಪ್ರದೀಪಚಂದ್ರ ಕುತ್ಪಾಡಿ ,ರಂಗಕರ್ಮಿ ಮತ್ತು ಸಂಘಟಕರು ಉಡುಪಿ ಇವರಿಗೆ ಜಾನಪದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭ ರಾಜಕೀಯ,ಸಾಂಸ್ಕೃತಿಕ ಕ್ಷೇತ್ರದ ಗಣ್ಯರು, ಕರ್ನಾಟಕ ಜಾನಪದ ಪರಿಷತ್ತಿನ ಪದಾಧಿಕಾರಿಗಳು, ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.