Updated News From Kaup
ಬಂಟಕಲ್ಲು : ದೇವಾಡಿಗರ ಸಂಘದಿಂದ ಆಟಿಡೊಂಜಿ ದಿನ ಕಾರ್ಯಕ್ರಮ
Posted On: 25 Jul 2022, 12:05 AM
ಕಾಪು : ದೇವಾಡಿಗರ ಸಂಘ 92 ಹೇರೂರು ಬಂಟಕಲ್ಲು ಇವರ ಆಶ್ರಯದಲ್ಲಿ ಇಂದು ಆಟಿಡೊಂಜಿ ದಿನ ಕಾರ್ಯಕ್ರಮ ಹೇರೂರು ಶಶಿಕಲಾ ದಿನೇಶ್ ದೇವಾಡಿಗರವರ ಮನೆಯಲ್ಲಿ ನಡೆಯಿತು. ಸಂಘದ ಸದಸ್ಯರಿಗೆ ವಿವಿಧ ಜಾನಪದ ಸ್ಪರ್ಧೆಗಳನ್ನು ನಡೆಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆಯ ಸದಸ್ಯರು ಸಮಾಜ ಸೇವಕರು ಆಗಿರುವ ವಿಜಯ ಕೊಡವೂರು ಕಾರ್ಯಕ್ರಮವನ್ನು ಉದ್ಘಾಟಿಸಿ ಆಟಿ ತಿಂಗಳ ಮಹತ್ವ, ಆರೋಗ್ಯವಂತ ಆಹಾರದ ಬಗ್ಗೆ ಹಾಗೂ ಕಲ್ಮಾಡಿ ಶ್ರೀ ಬಗ್ಗುಪಂಜರ್ಲಿ ದೈವಸ್ಥಾನದ ಜೀರ್ಣೋದ್ಧಾರದ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಹೇರೂರು ಗ್ರಾಮದ ದೇವಾಡಿಗ ಸಮಾಜದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಉಡುಪಿ ದೇವಾಡಿಗರ ಸಂಘದ ಮಾಜಿ ಅಧ್ಯಕ್ಷರಾದ ಗಣೇಶ್ ದೇವಾಡಿಗ ರವರು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ವಿಶ್ವ ದೇವಾಡಿಗ ಮಹಾಮಂಡಲದ ಸದಸ್ಯರು, ಉಡುಪಿ ದೇವಾಡಿಗರ ಸಂಘದ ಸದಸ್ಯರು, ಹೇರೂರು ದೇವಾಡಿಗರ ಸಂಘದ ಗೌರವ ಅಧ್ಯಕ್ಷರಾದ ದೇಜು ಸೇರಿಗಾರ್, ಸಂಘದ ಅಧ್ಯಕ್ಷರಾದ ಶಂಕರ ದೇವಾಡಿಗ ಉಪಸ್ಥಿತರಿದ್ದರು. ಉಪಾಧ್ಯಕ್ಷರಾದ ಅನಿತಾ ದೇವಾಡಿಗ ಮತ್ತು ಚರಣ್ ದೇವಾಡಿಗರವರು ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತರರಾದವರ ಪಟ್ಟಿಯನ್ನು ವಾಚಿಸಿದರು. ಕುಮಾರಿ ಅಭಿಜ್ಞಾರವರ ಪ್ರಾರ್ಥಿಸಿದರು. ಕಾರ್ಯದರ್ಶಿ ಉದಯ ದೇವಾಡಿಗರವರು ಸ್ವಾಗತಿಸಿದರು. ದಿನೇಶ್ ದೇವಾಡಿಗ ಮತ್ತು ಅಖಿಲ ದೇವಾಡಿಗರವರು ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷರಾದ ಗೋಪಾಲ ದೇವಾಡಿಗ ರವರು ವಂದಿಸಿದರು. ಕಾರ್ಯಕ್ರಮದ ಬಳಿಕ ಸಂಘದ ಸದಸ್ಯರು ತಯಾರಿಸಿದ ಸುಮಾರು 30 ಬಗೆಯ ಆಟಿ ತಿಂಗಳ ವಿವಿಧ ತಿಂಡಿ ತಿನಸುಗಳನ್ನು ಆಗಮಿಸಿದ ಎಲ್ಲರಿಗೂ ಉಣ ಬಡಿಸಲಾಯಿತು.
ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ
Posted On: 24 Jul 2022, 11:50 PM
ಕಾಪು : ಸಾಮಾಜಿಕ ಜಾಲತಾಣದ ಮೂಲಕ ಕರ್ನಾಟಕ ರಾಜ್ಯದಲ್ಲಿರುವ ಅನೇಕ ಜನರನ್ನು ಒಂದುಗೂಡಿಸಿ , ಅವರೆಲ್ಲರ ಸಹಕಾರದಿಂದ ಪ್ರಾರಂಭಗೊಂಡ ಅನಂತ ಇನ್ನಂಜೆಯವರ ನೇತೃತ್ವದ ಉಡುಪಿಯ ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಾಪು ಶ್ರೀ ಲಕ್ಷ್ಮೀ ಜನಾರ್ದನ ಸಭಾಭವನದಲ್ಲಿ ರವಿವಾರ ಉಡುಪಿ ಹಾಗೂ ಕಾಪು ತಾಲ್ಲೂಕಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ ಇವರು ಮಾತನಾಡಿ , ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ ಮೂಲಕ ಜಿಲ್ಲೆ ಮಾತ್ರವಲ್ಲದೆ ರಾಜ್ಯದ ಹಲವು ಕಡೆಗಳಲ್ಲಿ ನಿರಂತರ ಸಮಾಜ ಸೇವಾ ಚಟುವಟಿಕೆಗಳು ನಡೆಯುತ್ತಿವೆ. ಉಡುಪಿ ಜಿಲ್ಲೆಯ ವಿವಿಧ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡುವ ಮೂಲಕ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಪ್ರಯತ್ನಕ್ಕೂ ಚಾಲನೆ ನೀಡಿರುವುದು ಸ್ವಾಗತಾರ್ಹವಾಗಿದೆ ಎಂದರು. ಟ್ರಸ್ಟ್ ನ ಅಧ್ಯಕ್ಷರಾದ ಅನಂತ ಇನ್ನಂಜೆ ಇವರು ಮಾತನಾಡಿ , ಸಮಾಜದಿಂದ ಕಷ್ಟಕಾಲದಲ್ಲಿ ಪಡೆದಿರುವ ಉತ್ತಮ ಸ್ಪಂದನೆಯನ್ನು ಸಮಾಜಕ್ಕೆ ಸಕಾಲದಲ್ಲಿ ಹಿಂದೆ ನೀಡಬೇಕು ಎನ್ನುವ ಮಾತಿನಂತೆ ಸಮಾಜದಲ್ಲಿ ಅಗತ್ಯವುಳ್ಳವರ ನೋವಿಗೆ ಸ್ಪಂದಿಸುವ ಉದ್ದೇಶದಿಂದ ಈ ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ ಕಾರ್ಯಾಚರಿಸುತ್ತಿದೆ.ಶಿಕ್ಷಣ ಆಹಾರ ಆರೋಗ್ಯ ಈ ಮೂರು ವಿಷಯದಲ್ಲಿ ಈ ಟ್ರಸ್ಟ್ ಕಾರ್ಯಾಚರಿಸುತ್ತಿದ್ದು ಸಾಮಾಜಿಕ ಜಾಲತಾಣದ ಸದ್ವಿನಿಯೋಗದಿಂದ ಹಲವಾರು ಜನರ ಸಹಕಾರದಿಂದ ಇಂತಹ ಮಹತ್ಕಾರ್ಯವು ಸಾಧ್ಯವಾಯಿತು ಎಂದರು. ಸಮಾಜ ಸೇವಕರು ಹಾಗೂ ಬಿ.ಜೆ.ಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಯಶ್ ಪಾಲ್ ಸುವರ್ಣ ಇವರು ತಮ್ಮ ಮಹಾಲಕ್ಷ್ಮಿ ಕೋಪರೇಟಿವ್ ಬ್ಯಾಂಕಿನಿಂದ ಪುರಸ್ಕೃತ ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಂಕ್ ಎಕೌಂಟ್ ಹಾಗೂ ಎ.ಟಿ.ಎಮ್ ಕಾರ್ಡ್ ನ ಸೌಲಭ್ಯಗಳನ್ನು ಒದಗಿಸಿದರು. ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ ನಿರ್ದೇಶಕರಾದ ಐಕಳಬಾವ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು , ಜೆ.ಡಿ.ಎಸ್ ಜಿಲ್ಲಾಧ್ಯಕ್ಷರಾದ ಯೋಗಿಶ್ ಶೆಟ್ಟಿ ಬಾಲಾಜಿ , ಶ್ರೀರಾಮ ಸೇನೆಯ ವಲಯಾಧ್ಯಕ್ಷರಾದ ಮೋಹನ್ ಭಟ್ ಮಣಿಪಾಲ ,ಸಮಾಜ ಸೇವಕರಾದ ಲೀಲಾಧರ ಶೆಟ್ಟಿ ಕಾಪು ಶುಭಾಶಂಸನೆಗೈದರು. ಎಸ್.ವಿ.ಹೆಚ್ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಪುಂಡರೀಕಾಕ್ಷ ಕೊಡಂಚ ಇವರು ಮಕ್ಕಳಿಗೆ ದ್ವಿತೀಯ ಪಿ.ಯು.ಸಿ ನಂತರ ಮತ್ತೇನು ಎನ್ನುವ ವಿಷಯದ ಬಗ್ಗೆ ಮಾರ್ಗದರ್ಶನವನ್ನು ನೀಡಿದರು. ಅನಿಲ್ ಆಚಾರ್ಯ ಓಂತಿಬೆಟ್ಟು ಇವರು ಸ್ವಾಗತಿಸಿ , ಎಮ್ ಶ್ರೀನಿವಾಸ್ ಭಟ್ ಉಡುಪಿ ಇವರು ಕಾರ್ಯಕ್ರಮ ನಿರ್ವಹಿಸಿದರು. ಅಮೃತಾ ಭಟ್ ಇವರು ವಂದಿಸಿದರು.
ಮಳೆಗಾಲದ ನೀರು ತುಂಬಿದ್ದ ಕಲ್ಲಿನ ಕ್ವಾರೆಯಲ್ಲಿ ಈಜಲು ಹೋಗಿ ಮೃತಪಟ್ಟ ಯುವಕ
Posted On: 24 Jul 2022, 11:44 PM
ಮಂಗಳೂರು : ಕ್ರಿಕೆಟ್ ಆಟದ ಬಳಿಕ ಕೆಂಪು ಕಲ್ಲಿನ ಕ್ವಾರೆಯಲ್ಲಿ ಮಳೆಗಾಲದ ನೀರು ತುಂಬಿದ ಹೊಂಡದಲ್ಲಿ ಈಜಲು ಹೋಗಿ ಯುವಕನೋರ್ವ ಮೃತಪಟ್ಟ ಘಟನೆ ಮಂಗಳೂರಿನ ಉಲೈಬೆಟ್ಟು ಕಾಯರಪದವು ಎಂಬಲ್ಲಿ ನಡೆದಿದೆ. ಮಂಗಳೂರು ಗ್ರಾಮಾಂತರ ಠಾಣೆ ವ್ಯಾಪ್ತಿಯ ಉಲೈಬೆಟ್ಟು ಕಾಯರಪದವು ಎಂಬಲ್ಲಿ ಶಿಯಾಬ್ ಹಾಗೂ ಆತನ ಗೆಳೆಯರು ಕ್ರಿಕೆಟ್ ಆಟವಾಡಿ ನಂತರ ಅಲ್ಲಿಯೇ ಆಟದ ಮೈದಾನದ ಪಕ್ಕದ್ದಲ್ಲಿ ಕೆಂಪು ಕಲ್ಲಿನ ಕ್ವಾರೆ ಮಳೆಗಾಲದ ನೀರು ತುಂಬಿದ ಹೊಂಡದಲ್ಲಿ ಈಜಲು ಹೋಗಿ ಜೋಕಟ್ಟೆ ನಿವಾಸಿ ಶಿಯಾಬ್ (21) ಎಂಬ ಹುಡುಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡುಬಿದ್ರಿ : ರೋಟರಿ ಕ್ಲಬ್ ಮತ್ತು ಇನ್ನರ್ವೀಲ್ ಜಂಟಿ ಆಶ್ರಯದಲ್ಲಿ ಆಟಿದ ಗಮ್ಮತ್ತ್
Posted On: 24 Jul 2022, 11:36 PM
ಪಡುಬಿದ್ರಿ : ತುಳುನಾಡು ಕೃಷ್ಣದೇವರಾಯ ಅರಸರಾಗಿ, ಹಲವಾರು ಸಾಮಂತರಾಜರು ಆಳಿದ ಸ್ಥಳವಾಗಿದೆ. ತುಳು ನೆಲದಲ್ಲಿ ವಿಶೇಷತೆ, ಅದರದೇ ಆದ ಮಹಿಮೆ ಜಗತ್ತಿನಲ್ಲಿ ಸ್ಥಾನವನ್ನು ಪಡೆದಿದೆ. ಇಲ್ಲಿ ಬಂದು ಅಧ್ಯಯನ ನಡೆಸಿದ ಬ್ರಿಟಿಷರಿಗೆ ಇಲ್ಲಿನ ಜನಪದ ಸಂಸ್ಕೃತಿ ಅವರನ್ನು ಕುತೂಹಲಿಗರನ್ನಾಗಿಸಿದೆ. ಅವರು ದಾಖಲಿಸಿದ್ದು ಜನರಿಗೆ ತಿಳಿಯುವಂತಾಗಿದೆ. ಜಗತ್ತಿನ ಹಲವಾರು ಭಾಷೆಗಳಿಗೆ ಅವುಗಳದೇ ಆದ ಮಹತ್ವ, ವ್ಯಾಪ್ತಿಯಿದೆ. ಸರಕಾರದ ಮಟ್ಟದಲ್ಲಿ ಮಾನ್ಯತೆ ದೊರಕಿದೆ. ಆದರೆ ಎಲ್ಲ ಇದ್ದು ಏನೂ ಇಲ್ಲದಂತೆ ಇರುವ ಭಾಷೆಯಾಗಿ ತುಳುವಿದೆ. ಸ್ವತಂತ್ರ ಕ್ಯಾಲೆಂಡರ್, ಸ್ವತಂತ್ರ ಲಿಪಿ, ಅಷ್ಟಮಠಾಧಿಪತಿಗಳು ತುಳು ಲಿಪಿಯಲ್ಲಿಯೇ ಸಹಿ ಹಾಕುವ ರೂಢಿಯಿದೆ. ಅಸಂಖ್ಯಾತ ಶಿಲಾಶಾಸನಗಳು, ಅಸಂಖ್ಯಾತ ತಾಮ್ರ ಶಾಸನಗಳು ತುಳುವಲ್ಲಿ ಇದೆ. ವಿಶ್ವದಲ್ಲಿ ಎರಡುವರೆ ಕೋಟಿ ಜನಸಂಖ್ಯೆ ಇದ್ದರೂ ತುಳು ಅಧಿಕೃತ ಭಾಷೆ ಆಗಲಿಲ್ಲ. ನಾವು ನಮ್ಮ ಭಾಷೆಯನ್ನು ಮರೆಯದಿರಲು ನಮ್ಮ ಕಾರ್ಯಕ್ರಮ, ಮನೆ ಮನಗಳಲ್ಲಿ ತುಳು ಭಾಷೆಯ ಬಳಕೆ ಅನಿವಾರ್ಯ. ಅದರಲ್ಲೂ ಕೃಷಿ ಪ್ರಧಾನ ಸಂಸ್ಕೃತಿಯಲ್ಲಿ ಒಂದಾದ ಆಟಿ ಆಚರಣೆಯು ನಮ್ಮಲ್ಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ದಯಾನಂದ ಕತ್ತಲ್ ಸಾರ್ ಹೇಳಿದರು. ಅವರು ಪಡುಬಿದ್ರಿ ರೋಟರಿ ಕ್ಲಬ್ ಮತ್ತು ಇನ್ನರ್ವೀಲ್ ಕ್ಲಬ್ ಪಡುಬಿದ್ರಿ ಜಂಟಿ ಆಶ್ರಯದಲ್ಲಿ ಜರಗಿದ ಆಟಿದ ಗಮ್ಮತ್ತ್ ಕಾರ್ಯಕ್ರಮವನ್ನು ಕಲಶಕ್ಕೆ ಭತ್ತವನ್ನು ಸುರಿಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಮೂಢನಂಬಿಕೆ, ರೂಢನಂಬಿಕೆಗಳು ಭಿನ್ನ. ಆಟಿದ ಆಚರಣೆಯ ಹಿನ್ನೆಲೆಯನ್ನು ತಿಳಿಯಬೇಕಾಗಿದೆ. ವೈಜ್ಞಾನಿಕ ಮಹತ್ವ ಮತ್ತು ಆರೋಗ್ಯಯುತ ಆಹಾರ ಪದಾರ್ಥಗಳನ್ನು ಬಳಸುವಲ್ಲಿ ಮಹತ್ವದ ಅಂಶಗಳನ್ನು ನಮಗೆ ತಿಳಿಸುತ್ತದೆ ಎಂದರು. ಈ ಸಂದರ್ಭ ಶಿಕ್ಷಣ ಕ್ಷೇತ್ರದ ಸಾಧಕಿ, ಶಿಕ್ಷಕಿ ವಂದನಾ ರೈ, ಯಕ್ಷಗಾನ ಪ್ರಸಂಗಕರ್ತ, ಯಕ್ಷಗಾನ ಅಕಾಡೆಮಿ ಸದಸ್ಯ ಮಾಧವ ಭಂಡಾರಿ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ನಾಗೇಶ್ ಕುಲಾಲ್, ಇನ್ನರ್ವೀಲ್ ಅಧ್ಯಕ್ಷೆ ವಿಮಲ ಸಾಲ್ಯಾನ್, ಕಾರ್ಯದರ್ಶಿ ಸುನಿತ ಭಕ್ತವತ್ಸಲ, ರೋಟರಿ ಅಧ್ಯಕ್ಷೆ ಗೀತಾ ಅರುಣ್, ಕಾರ್ಯದರ್ಶಿ ಜ್ಯೋತಿ ಮೆನನ್, ಪುಷ್ಪಲತಾ, ಅನಿತಾ ಉಪಸ್ಥಿತರಿದ್ದರು. ಪಡುಬಿದ್ರಿ ರೋಟರಿ ಕ್ಲಬ್ ನ ಸಂತೋಷ್ ಪಡುಬಿದ್ರಿ ಸ್ವಾಗತಿಸಿದರು. ರಾಜೇಶ್ ಶೇರಿಗಾರ್ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಕಾರ್ಯದರ್ಶಿ ಜ್ಯೋತಿ ಮೆನನ್ ವಂದಿಸಿದರು.
ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆಯ ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಉದ್ಘಾಟನೆ
Posted On: 24 Jul 2022, 02:18 PM
ಕಾಪು : ಜಿ.ಎಸ್.ಬಿ ಸಮಾಜ ಹಿತರಕ್ಷಣಾ ವೇದಿಕೆ(ರಿ.), ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ (ರಿ.) ಮುದರಂಗಡಿ ಇದರ ಸಹಭಾಗಿತ್ವದಲ್ಲಿ ಜುಲೈ 24ರಂದು ವಿದ್ಯಾ ಪೋಷಕ ನಿಧಿ (2022-23)ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವು ಉಚ್ಚಿಲದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಂಕೀರ್ಣದ ಮಾಧವ ಮಂಗಲ ಸಭಾಭವನದಲ್ಲಿ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಮುಂಬಯಿಯ ಖ್ಯಾತ ಸುಪ್ರೀಂ ಕೋರ್ಟ್ ವಕೀಲರಾದ ರವಿಚಂದ್ರ ಕಿಣಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ವಿದ್ಯೆಗಿಂತ ಸಂಸ್ಕಾರ ಮುಖ್ಯ, ವಿದ್ಯೆಗೆ ಕರಾವಳಿಯಲ್ಲಿ ಅತಿ ಪ್ರಾಮುಖ್ಯತೆಯಿದೆ. ಕರಾವಳಿ ಕರ್ನಾಟಕದಲ್ಲಿ ಜಿಎಸ್ ಬಿ ಸಮಾಜ ಶೈಕ್ಷಣಿಕವಾಗಿ ಮುಂದಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ರಾಜಕೀಯದ ಕಡೆಗೆ ಗಮನ ನೀಡದೆ ವಿದ್ಯಾರ್ಜನೆಗೆ ಗಮನ ನೀಡಬೇಕಾಗಿದೆ. ನಮ್ಮಲ್ಲಿ ತುಂಬಾ ಯುವ ಜನಾಂಗವಿದೆ ಇವರು ಸಮಾಜವನ್ನು ಮುನ್ನಡೆಸಬೇಕಾಗಿದೆ ಎಂದರು. ಬೆಂಗಳೂರಿನ ಸೆಂಚುರಿ ರಿಯಲ್ ಎಸ್ಟೇಟ್ ಹೋಲ್ಡಿಂಗ್ಸ್ ಪ್ರೈವೆಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕರಾದ ಪಿ ರವೀಂದ್ರ ದಯಾನಂದ ಪೈಯವರು ತಮ್ಮ ದಿಕ್ಸೂಚಿ ಭಾಷಣದಲ್ಲಿ ಜಿಎಸ್ ಬಿ ಸಮಾಜದೊಂದಿಗಿನ ಒಡನಾಟ ಇಂದು ಸಮಾಜ ಗುರುತಿಸುವಂತಾಗಿದೆ. ಎಲ್ಲಾ ಕ್ಷೇತ್ರದಲ್ಲಿ ನಾವು ಇದ್ದೇವೆ. ಎಲ್ಲರಿಂದ ಗೌರವಿಸಲ್ಪಡುತ್ತಿದ್ದೇವೆ. ಜೀವನೋಪಾಯಕ್ಕಾಗಿ ನಾವು ಆಯ್ದುಕೊಂಡ ಕಾರ್ಯಗಳನ್ನು ನಿಷ್ಠೆಯಿಂದ ಮಾಡುತ್ತಿದ್ದೇವೆ. ಭಾರತದ ಆರ್ಥಿಕತೆಯಲ್ಲಿ ನಮ್ಮ ಪಾಲೂ ಇದೆ ಎಂದರು. ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಉಡುಪಿಯ ಅನಂತ ವೈದಿಕ ಕೇಂದ್ರದ ವೇದಮೂರ್ತಿ ಚೇಂಪಿ ರಾಮಚಂದ್ರ ಅನಂತ ಭಟ್, ಮಂಗಳೂರು ಗಣೇಶ್ ಬೀಡಿ ವರ್ಕ್ಸ್ ಪ್ರೈವೆಟ್ ಲಿಮಿಟೆಡ್ ಮೈಸೂರು ಇದರ ಪಾಲುದಾರರಾದ ಗೋವಿಂದ ಜಗನ್ನಾಥ ಶೆಣೈ, ಅಮೇರಿಕದ ವಾಷಿಂಗ್‌ಟನ್ ಡಿಸಿಯ ಇಂಡಿಯನ್ ಸಿಎ ಎಸೋಸಿಯೇಷನ್ ನ ಸ್ಥಾಪಕಾಧ್ಯಕ್ಷರು, ಹಾಗೂ ವಿಶ್ವ ಬ್ಯಾಂಕ್ ನ ಕಾರ್ಯನಿರ್ವಾಹಕರಾಗಿರುವ ಸಿಎ ಗೋಕುಲ್‌ದಾಸ್ ಪೈ, ಮುಂಬಯಿ ನ್ಯಾಚುರಲ್ ಐಸ್ ಕ್ರೀಂನ ಆಡಳಿತ ನಿರ್ದೇಶಕರಾದ ರಘುನಂದನ್ ಎಸ್. ಕಾಮತ್, ಮುಂಬಯಿಯ ಎಮ್.ವಿ. ಕಿಣಿ ಲಾ-ಫರ್ಮ್ ನ ಸಂಸ್ಥಾಪಕರಾದ ಖ್ಯಾತ ಸುಪ್ರೀಂ ಕೋರ್ಟ್ ನ ವಕೀಲರಾದ ಮಣಿಪುರ ವಸಂತ ಕಿಣಿ, ಭಾರತ ಸರಕಾರದ ನ್ಯಾಶನಲ್ ಬ್ಯಾಂಕ್ ಆಫ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ನ ಅಧ್ಯಕ್ಷರಾದ ಪದ್ಮಭೂಷಣ ಕೆ.ವಿ ಕಾಮತ್, ಎಂ ವಿ ಕಿಣಿ, ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ (ರಿ.)ಮುದರಂಗಡಿ ಇದರ ವಿಶ್ವಸ್ಥರಾದ ರತ್ನಾಕರ ಕಾಮತ್, ಪಡುಬಿದ್ರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೋಕ್ತೇಸರರಾದ ಪಿ ರಾಮಚಂದ್ರ ಶೆಣೈ, ಕಾರ್ಗಿಲ್ ಹುತಾತ್ಮ ಲೆ|ಕ|ಶೌರ್ಯಚಕ್ರ ಪುರಸ್ಕೃತ ಅಜಿತ್ ವಿ ಭಂಡಾರ್ಕಾರ್ ರವರ ಧರ್ಮಪತ್ನಿ ಶಕುಂತಲಾ ಎ. ಭಂಡಾರ್ಕಾರ್, ಕಾಪು ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಹಳೆ ಮಾರಿಗುಡಿಯ ಆಡಳಿತ ಮೊಕ್ತೇಸರರಾದ ಶ್ರೀ ಪ್ರಸಾದ ಶೆಣೈ, ರಾಯಚೂರಿನ ಹೆಸರಾಂತ ಲೆಕ್ಕ ಪರಿಶೋಧಕರಾದ ಉಪ್ಪುಂದ ರಾಮಚಂದ್ರ ಪ್ರಭು, ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆ ಸಂಚಾಲಕರಾದ ಆರ್. ವಿವೇಕಾನಂದ ಶೆಣೈ, ಅಧ್ಯಕ್ಷರಾದ ಜಿ. ಸತೀಶ್ ಹೆಗ್ಡೆ ಕೊಟ, ಸಿಎ ಎಸ್ ಎಸ್ ನಾಯಕ್, ವಿಜಯಕುಮಾರ್ ಶೆಣೈ, ಸಿಎ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು. ಮುರಳೀದರ ಜಿ ಶೆಣೈ ಪ್ರಾರ್ಥಿಸಿ, ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಸ್ವಾಗತಿಸಿದರು. ಸಿಎ ಎಸ್ ಎಸ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಕಾಪು : ಆಗಸ್ಟ್ 14ರಂದು ದೇಶಕ್ಕಾಗಿ ಓಟ
Posted On: 23 Jul 2022, 10:54 PM
ಕಾಪು : ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೋರ್ಚಾ ಕಾಪು ವಿಧಾನಸಭಾ ಕ್ಷೇತ್ರದ ವತಿಯಿಂದ 75ನೇ ಸ್ವಾತಂತ್ರೋತ್ಸವದ ಅಂಗವಾಗಿ ದೇಶಕ್ಕಾಗಿ ಓಟ ಕಾರ್ಯಕ್ರಮ ಜರಗಲಿದೆ. ಇದರ ಪ್ರಯುಕ್ತ 11 ಕಿಲೋಮೀಟರ್ ಓಟವನ್ನು ಆಗಸ್ಟ್ 14ರಂದು ಬೆಳಿಗ್ಗೆ 6 ಗಂಟೆಗೆ ಕಾಪು ಸರಕಾರಿ ಪ್ರಾಥಮಿಕ ಶಾಲಾ ಮೈದಾನದಿಂದ ಪಡುಬಿದ್ರಿ ಶಾಲಾ ಮೈದಾನದವರೆಗೆ ಓಟ ಸಾಗಲಿದೆ. ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಬಹುಮಾನಗಳಿದ್ದು, ನಗದು ಮತ್ತು ಟ್ರೋಫಿ ನೀಡಲಾಗುವುದು ಅರ್ಜಿ ಸಲ್ಲಿಸಲು ಆಗಸ್ಟ್ 10 ಕೊನೆಯ ದಿನವಾಗಿದೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಆಸಕ್ತರು 90081 69918, 82177 52220, 9844 7427 45 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಹಿಂದುಳಿದ ವರ್ಗಗಳ ಮೋರ್ಚ ಕಾಪು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಸಂತೋಷ್ ಕುಮಾರ್ ಮೂಡುಬೆಳ್ಳೆ ತಿಳಿಸಿದ್ದಾರೆ.
ಯುವವಾಹಿನಿ ಉಡುಪಿ ಘಟಕದಿಂದ ಸಾಹಿತ್ಯ ಸೌರಭ - ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳು
Posted On: 23 Jul 2022, 10:31 PM
ಉಡುಪಿ : ಯುವ ವಾಹಿನಿ ಉಡುಪಿ ಘಟಕದಿಂದ ಸಾಹಿತ್ಯ ಸೌರಭ ಕಾರ್ಯಕ್ರಮದ ಅಂಗವಾಗಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಜುಲೈ 23 ರಂದು ಉದ್ಯಾವರ ಬಲಾಯಿಪಾದೆಯ ಯುವವಾಹಿನಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಖ್ಯಾತ ಸಾಹಿತಿಗಳು ಹಾಗೂ ಉಪನ್ಯಾಸಕರಾದ ವಾಸಂತಿ ಅಂಬಲಪಾಡಿ ಮುಖ್ಯ ಅತಿಥಿಯಾಗಿ ಆಗಮಿಸಿ ಸ್ಪರ್ಧಾ ಕೂಟದ ಯಶಸ್ಸಿಗೆ ಶುಭ ಹಾರೈಸಿದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಹೈಸ್ಕೂಲು ವಿದ್ಯಾರ್ಥಿಗಳಿಗೆ ಪ್ರಬಂಧ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆಯನ್ನು ನಡೆಸಲಾಯಿತು. ಒಟ್ಟು 70 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಲ್ಲಾ ಪ್ರತಿಭೆಗಳಿಗೂ ಪ್ರಶಂಸನಾ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು. ಉಡುಪಿ ಯುವವಾಹಿನಿ ಘಟಕದ ಅಧ್ಯಕ್ಷರಾದ ಪ್ರವೀಣ್ ಡಿ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಯುವವಾಹಿನಿ ಕೇಂದ್ರ ಸಮಿತಿಯ ಕಲೆ ಮತ್ತು ಸಾಹಿತ್ಯ ನಿರ್ದೇಶಕರಾದ ಜಗದೀಶ್ ಕುಮಾರ್, ಯುವವಾಹಿನಿ ಉಡುಪಿ ಘಟಕದ ಮಾಜಿ ಅಧ್ಯಕ್ಷರುಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಉಡುಪಿ ಯುವವಾಹಿನಿ ಘಟಕದ ಪ್ರವೀಣ್ ಡಿ ಪೂಜಾರಿ ಸ್ವಾಗತಿಸಿದರು. ಕಾರ್ಯಕ್ರಮ ಸಂಚಾಲಕ ವೀಕ್ಷಿತ್ ಪ್ರಸ್ತಾವಿಸಿದರು. ಸುಪ್ರೀತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ದಯಾನಂದ್ ಕರ್ಕೇರ ವಂದಿಸಿದರು. ಶ್ರೇಯಸ್ ಕೋಟ್ಯಾನ್ ತೀರ್ಪುಗಾರರಾಗಿ ಹಾಗೂ ಅಮಿತಾಂಜಲಿ ಕಿರಣ್ ಕಾರ್ಯಕ್ರಮ ಸಂಚಾಲಕರಾಗಿ ಸಹಕರಿಸಿದರು.
ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಕಾಪುವಿನಲ್ಲಿ ಎಸ್‌ಡಿಪಿಐ ಪ್ರತಿಭಟನೆ
Posted On: 23 Jul 2022, 08:12 PM
ಕಾಪು : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಬೆಲೆ ಏರಿಕೆ ಹಾಗೂ ಜಿಎಸ್‌ಟಿ ನೀತಿಯ ವಿರುದ್ಧ ಕಾಪುಪೇಟೆಯಲ್ಲಿ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ಪ್ರತಿಭಟನಾ ಸಭೆ ನೆರವೇರಿತು. ಎಸ್ಡಿಪಿಐ ಕಾಪು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹನೀಫ್ ಮೂಳೂರು ಮಾತನಾಡಿ, ಕೇಂದ್ರದ ತೆರಿಗೆ ನೀತಿಯಿಂದ ಬಡವರು ತಿನ್ನುವ ಅನ್ನದ ಬಟ್ಟಲಿಗೆ ಟ್ಯಾಕ್ಸ್ ಹಾಕಿದ್ದಾರೆ. ಹಾಲು, ಮಜ್ಜಿಗೆ, ಮೊಸರಿಗೆ ಜಿಎಸ್‌ಟಿ ಹಾಕಿ ಜನರನ್ನು ಬದುಕದಂತೆ ಮಾಡಿದ್ದಾರೆ. ಇದೇ ರೀತಿ ಬಡವರನ್ನು ತುಳಿಯುವ ಪ್ರಯತ್ನ ಮುಂದುವರಿದರೆ, ಮುಂದಿನ ದಿನಗಳಲ್ಲಿ ಶ್ರೀಲಂಕಾ ದೇಶದ ಪರಿಸ್ಥಿತಿ ಭಾರತದಲ್ಲಿ ಬರುವುದು ಖಚಿತ ಎಂದರು. ಈ ಸಂದರ್ಭ ಎಸ್ ಡಿ ಪಿ ಐ ಜಿಲ್ಲಾ ಉಪಾಧ್ಯಕ್ಷ ಶಾಹಿದ್ ಅಹ್ಮದ್, ಕಾಪು ಪುರಸಭಾ ಸದಸ್ಯ ನೂರುದ್ದೀನ್ ಅಹಮದ್ ಮಹಲ್ಲಾ, ಅಬ್ದುಲ್ ಖಾದರ್ ಉಪಸ್ಥಿತರಿದ್ದರು.
ಕಟಪಾಡಿ : ಎಸ್. ವಿ.ಎಸ್ ಶಾಲೆಯ ಹಳೆವಿದ್ಯಾರ್ಥಿಗಳಿಂದ ಶಾಲಾ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ಕೊಡುಗೆ
Posted On: 23 Jul 2022, 07:10 PM
ಕಟಪಾಡಿ : ಇಲ್ಲಿನ ಎಸ್. ವಿ.ಎಸ್ ಹೈಸ್ಕೂಲ್ ಇದರ 1997ರಿಂದ 2002 ರ ಬ್ಯಾಚ್ ನ ಹಳೆವಿದ್ಯಾರ್ಥಿಗಳ ವತಿಯಿಂದ ಶಾಲಾ ಮಕ್ಕಳಿಗೆ ಗುರುತಿನ ಚೀಟಿ ನೀಡುವ ಕಾರ್ಯಕ್ರಮ ಜುಲೈ 22 ರಂದು ಎಸ್. ವಿ. ಎಸ್ ಹೈಸ್ಕೂಲ್ ಇದರ ಸಭಾಂಗಣದಲ್ಲಿ ಜರಗಿತು. ಮುಖ್ಯ ಅತಿಥಿಗಳಾಗಿ ಶಾಲಾ ಮುಖ್ಯೋಪಾಧ್ಯಾಯರಾದ ಸುಬ್ರಹ್ಮಣ್ಯ ತಂತ್ರಿ ಶಾಲಾ ಸಮಿತಿ ಸದಸ್ಯರಾದ ನಿತ್ಯಾನಂದ ಶೆಣೈ, ಸಂಘದ ಗೌರವಾಧ್ಯಕ್ಷರಾದ ಸತೀಶ್ ಕುಮಾರ್ ಉದ್ಯಾವರ ಹಾಗೂ ಅಧ್ಯಕ್ಷರಾದ ಜ್ಯೋತಿ ಪ್ರಶಾಂತ್ ಕಟಪಾಡಿ ಹಾಗೂ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಎಸ್. ವಿ. ಎಸ್ ನ 1997-2002 ರ ಬ್ಯಾಚ್ ನ ಹಳೆವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹೊಂಡ ತಪ್ಪಿಸಲು ಹೋಗಿ ಹೊಂಡಕ್ಕೆ ಬಿದ್ದ ಕಾರು
Posted On: 22 Jul 2022, 06:23 PM
ಕಾಪು : ಕಟಪಾಡಿ ರಾಷ್ಟ್ರೀಯ ಹೆದ್ದಾರಿ 66 ರ ಕಲ್ಲಾಪು ಸಮೀಪ ಉಡುಪಿಯಿಂದ ಪಡುಬಿದ್ರಿ ಕಡೆಗೆ ಹೋಗುತ್ತಿರುವಾಗ ಹೊಂಡ ತಪ್ಪಿಸಲು ಹೋಗಿ ಕಾರೊಂದು ಗದ್ದೆಗೆ ಉರುಳಿದ ಘಟನೆ ನಡೆದಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರು ಚಲಾಯಿಸುತ್ತಿದ್ದ ಪತ್ರಕರ್ತ ಹಮೀದ್ ಪಡುಬಿದ್ರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
