Updated News From Kaup

ಜನತಾದಳದ ಅಭ್ಯರ್ಥಿಗಳನ್ನು ಗೆಲ್ಲಿಸಿ, ರಾಷ್ಟ್ರೀಯ ಪಕ್ಷಗಳ ಕುತಂತ್ರಕ್ಕೆ ಬಲಿಯಾಗದಿರಿ : ಯೋಗೀಶ್ ವಿ ಶೆಟ್ಟಿ ಬಾಲಾಜಿ

Posted On: 25-12-2021 07:25PM

ಕಾಪು : ಈ ಬಾರಿ ಕಾಪು ಪುರಸಭಾ ಚುನಾವಣೆಯಲ್ಲಿ ಜನತಾದಳ ಪಕ್ಷವು 7 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಪುರಸಭೆಯಲ್ಲಿ ನಾವೇ ನಿರ್ಣಾಯಕವಾಗಲಿದ್ದೇವೆ. ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಇಲ್ಲ. ಜನತಾದಳ ಮತ ವಿಭಜನೆಗೆ ನಿಂತಿಲ್ಲ ಬದಲಾಗಿ ಜನರ ಪರವಾಗಿದೆ ಎಂದು ಜನತಾದಳ ಉಡುಪಿ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿ ಬಾಲಾಜಿ ಹೇಳಿದರು.

ಅವರು ಕಾಪು ಪ್ರೆಸ್ ಕ್ಲಬ್ ನಲ್ಲಿ ಪಕ್ಷದ ವತಿಯಿಂದ ಆಯೋಜಿಸಿದ್ದ ಪ್ರತಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಪುರಸಭೆಯಿಂದ ತೊಂದರೆಯಾಗದು ಎಂದಿದ್ದ ಪಕ್ಷಗಳು ಇಂದು ಹತ್ತು ಪಟ್ಟು ತೆರಿಗೆ ಹೆಚ್ಚಿಸಿ ಜನರಿಗೆ ತೊಂದರೆಯಾಗಿದೆ. ತರಾತುರಿಯಲ್ಲಿ ಪ್ರಾಧಿಕಾರ ತರುವ ಅಗತ್ಯವೇನಿತ್ತು?. ರಾಷ್ಟ್ರೀಯ ಪಕ್ಷಗಳ ಕುತಂತ್ರಕ್ಕೆ ಬಲಿಯಾಗದಿರಿ ಎಂದರು.

ಈ ಸಂದರ್ಭ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಅಪ್ರಾಪ್ತ ಬಾಲಕಿ, ಯುವತಿಗೆ ಕಿರುಕುಳ : ಪ್ರಕರಣ ದಾಖಲು

Posted On: 25-12-2021 04:15PM

ಮಂಗಳೂರು : ಉಳ್ಳಾಲ ಪೋಲಿಸ್ ಠಾಣಾ ವ್ಯಾಪ್ತಿಯ ತಲಪಾಡಿ ತಚ್ಚಣಿ ಬಳಿ ಅಪ್ರಾಪ್ತ ಬಾಲಕಿ ಹಾಗೂ ಇನ್ನೋರ್ವ ಯುವತಿಯ ಕೈ ಎಳೆದು ಅಸಭ್ಯವಾಗಿ ವರ್ತಿಸಿದ ಬಗ್ಗೆ ಮಂಜೇಶ್ವರ ಹೊಸಬೆಟ್ಟು ನಿವಾಸಿ ಇಬ್ರಾಹಿಂ ಎಂಬುವವರ ಮಗನಾದ ಮುಸ್ತಫಾ ಎನ್ನುವ ವ್ಯಕ್ತಿಯ ಮೇಲೆ ಪ್ರಕರಣ ದಾಖಲಾಗಿದೆ.

ಈತನು ಕೇರಳ ರಿಜಿಸ್ಟಡ್೯ ಆಕ್ಟಿವಾ ಹೋಂಡಾ (KL14 P 6400) ಮೂಲಕ ಈ ಕೃತ್ಯ ಮಾಡುತ್ತಿದ್ದ.

ಅಪ್ರಾಪ್ತ ಬಾಲಕಿಯ ದೂರಿನನ್ವಯ 354 ಐಪಿಸಿ ಮತ್ತು ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಯುವತಿಯ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ದೂರು ದಾಖಲಾಗಿದೆ.

2020 - 21ನೇ ಸಾಲಿನಲ್ಲಿ ದ್ವಿತೀಯ ಅತ್ಯುತ್ತಮ ಸಂಘ ಪ್ರಶಸ್ತಿಗೆ ಪಾತ್ರವಾದ ಇನ್ನಂಜೆ ಹಾಲು ಉತ್ಪಾದಕರ ಸಹಕಾರಿ ಸಂಘ

Posted On: 25-12-2021 01:43PM

ಕಾಪು : ದ.ಕ. ಹಾಲು, ಉತ್ಪಾದಕರ ಒಕ್ಕೂಟ, ಕುಲಶೇಖರ ಡೈರಿಯ ಆವರಣದಲ್ಲಿ ಡಿಸೆಂಬರ್ 22ರಂದು ನಡೆದ ದ.ಕ, ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ನಿ.) ಮಂಗಳೂರು ಇದರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘವನ್ನು 2020 - 2021 ನೇ ಸಾಲಿನಲ್ಲಿ ಉಡುಪಿ ತಾಲೂಕಿನ 'ದ್ವಿತೀಯ ಅತ್ಯುತ್ತಮ ಸಂಘ'ವೆಂದು ಘೋಷಿಸಲಾಯಿತು.

ದ.ಕ. ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷರಾದ ಕೆ. ರವಿರಾಜ ಹೆಗ್ಡೆಯವರಿಂದ ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಲಕ್ಷ್ಮಣ ಕೆ. ಶೆಟ್ಟಿಯವರು ಪ್ರಶಸ್ತಿ ಪತ್ರವನ್ನು ಪಡೆದಿರುತ್ತಾರೆ.

ಈ ಸಂದರ್ಭದಲ್ಲಿ ದ.ಕ.ಸ.ಒಕ್ಕೂಟದ ಉಪಾಧ್ಯಕ್ಷರಾದ ಎಸ್. ಪ್ರಕಾಶ್ ಚಂದ್ರ ಶೆಟ್ಟಿ, ಕೆ.ಎಂ.ಎಫ್ ನಿರ್ದೇಶಕರಾದ ಕಾಪು ದಿವಾಕರ್ ಶೆಟ್ಟಿ , ವ್ಯವಸ್ಥಾಪಕ ನಿರ್ದೇಶಕರಾದ ಡಾ.ಎಸ್.ಟಿ. ಸುರೇಶ್ , ವ್ಯವಸ್ಥಾಪಕರಾದ ಡಾ. ನಿತ್ಯಾನಂದ ಭಕ್ತ, ಮಾಜಿ ಅಧ್ಯಕ್ಷರುಗಳು, ನಿರ್ದೇಶಕರು, ಉಪ ವ್ಯವಸ್ಥಾಪಕರುಗಳು ಹಾಗೂ ಒಕ್ಕೂಟದ ಅಧಿಕಾರಿ ವರ್ಗದವರು, ಸಿಬ್ಬಂದಿಯವರು ಉಪಸ್ಥಿತರಿದ್ದರು.

ಉಡುಪಿ : ರಾಷ್ಟ್ರೀಯ ಗ್ರಾಹಕರ ದಿನಾಚರಣೆ ; ಗ್ರಾಹಕರು ಹಕ್ಕುಗಳ ಬಗ್ಗೆ ತಿಳಿದು ಸಬಲರಾಗಬೇಕು

Posted On: 24-12-2021 09:04PM

ಉಡುಪಿ, ಡಿಸೆಂಬರ್ 24 : ಪ್ರತಿಯೊಬ್ಬ ಸಾರ್ವಜನಿಕ ಸಹ ಯಾವುದಾದರೂ ವಸ್ತುಗಳ ಖರೀದಿ ಮಾಡುವ ಹಾಗೂ ವಿವಿಧ ಸೇವೆಗಳನ್ನು ಪಡೆಯುವ ಮೂಲಕ ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕರಾಗಿದ್ದು, ಎಲ್ಲಾ ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ತಿಳಿದು ಸಬಲರಾಗಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾರ್ವಜನಿಕರು ನ್ಯಾಯಾಲಯವು ಗ್ರಾಹಕ ಕಾಯಿದೆಯ ಮೂಲಕ ಗ್ರಾಹಕರಿಗೆ ನೀಡಿರುವ ಎಲ್ಲಾ ಹಕ್ಕುಗಳನ್ನು ತಿಳಿದು ಅವುಗಳನ್ನು ಚಲಾಯಿಸುವ ಮೂಲಕ ಉತ್ತಮ ಗುಣಮಟ್ಟದ ವಸ್ತು ಮತ್ತು ಸೇವೆಗಳನ್ನು ಪಡೆಯಬೇಕು. ತಾವು ಪಡೆಯುವ ವಸ್ತು ಮತ್ತು ಸೇವೆಗಳಲ್ಲಿ ನ್ಯೂನತೆ ಕಂಡು ಬಂದಲ್ಲಿ ಸೂಕ್ತ ಪರಿಹಾರ ಪಡೆಯಲೂ ಸಹ ಸಾಧ್ಯವಿದ್ದು, ಕಾಯಿದೆಯ ಪ್ರಯೋಜನ ಪಡೆದು ಸಬಲರಾಗಬೇಕು ಎಂದು ಕೂರ್ಮರಾವ್ ಎಂ ಹೇಳಿದರು. ಜಿಲ್ಲೆಯ ಜನತೆ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಪಡೆಯುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ ಆಹಾರ ತಯಾರಿಕಾ ಉದ್ಯಮಗಳು, ಉದ್ಯಮ ಆರಂಭಕ್ಕೆ ಸಂಬಂದಪಟ್ಟ ಸ್ಥಳೀಯ ಸಂಸ್ಥೆಗಳಿಂದ ಪರವಾನಗಿ ಪಡೆಯುವ ಮುನ್ನ, ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳಿಂದ ಕಡ್ಡಾಯವಾಗಿ ಸುರಕ್ಷತಾ ಪ್ರಮಾಣಪತ್ರ ಪಡೆಯುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಈಗಾಗಲೇ ಇರುವ ಆಹಾರ ತಯಾರಿಕಾ ಉದ್ಯಮಗಳು ಪ್ರಮಾಣಪತ್ರ ಪಡೆದಿರುವ ಬಗ್ಗೆ ಪರಿಶೀಲನೆ ನಡೆಸುವಂತೆ ಮತ್ತು ಅಲ್ಲಿನ ಆಹಾರ ಉತ್ಪನ್ನಗಳ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸುವಂತೆ ಸೂಚನೆ ನೀಡಲಾಗಿದೆ ಎಂದರು.

ಸರಕು ಮತ್ತು ಸೇವೆಗಳ ಬೇಡಿಕೆ ಮತ್ತು ಪೂರೈಕೆಗಳ ನಡುವೆ ವ್ಯತ್ಯಾಸವಾದಲ್ಲಿ ಬೆಲೆ ಹೆಚ್ಚಳದ ಹೊರೆ ಗ್ರಾಹಕನಿಗೆ ಬೀಳಲಿದ್ದು, ಕೋವಿಡ್ ಮೊದಲನೆ ಮತ್ತು ಎರಡನೇ ಅಲೆಯ ಅವಧಿಯಲ್ಲಿ ಸ್ಯಾನಿಟೈಸರ್, ರೆಮಿಡೆಸಿವರ್ ಔಷಧ ಮತ್ತಿತರ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇದಕ್ಕೆ ನಿದರ್ಶನವಾಗಿದೆ. ಆದ್ದರಿಂದ ಅತ್ಯಾವಶ್ಯಕ ವಸ್ತುಗಳನ್ನು ಕೊರೆತೆಯಾಗುವ ಮುನ್ನವೇ ಖರೀದಿಸುವುದು ಉತ್ತಮವಾಗಿದ್ದು, ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್-19 ಸಂಭಾವ್ಯ ಅಲೆಯನ್ನು ಎದುರಿಸಲು ಅಗತ್ಯವಿರುವ ಎಲ್ಲಾ ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತದ ವತಿಯಿಂದ ಸಿದ್ಧವಾಗಿಟ್ಟುಕೊಳ್ಳಲಾಗಿದ್ದು, ಎಲ್ಲಾ ಮುಂಜಾಗ್ರತಾ ಕ್ರಮಗಳನ್ನೂ ಸಹ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಹಿರಿಯ ಸಿವಿಲ್ ನ್ಯಾಯಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಮಾತನಾಡಿ, ಗ್ರಾಹಕರು ಮಾರಾಟಗಾರರು ನೀಡುವ ಯಾವುದೇ ಆಮಿಷಗಳಿಗೆ, ಜಾಹೀರಾತುಗಳ ಮೋಡಿಗೆ ಸಿಲುಕದೇ ತಮ್ಮ ಆಯ್ಕೆಯ ಗುಣಮಟ್ಟದ ವಸ್ತುಗಳನ್ನು ಖರೀದಿಸಬೇಕು. ಖರೀದಿಸಿದ ವಸ್ತುಗಳಲ್ಲಿ ದೋಷ ಕಂಡು ಬಂದಲ್ಲಿ, ಸಂಬಂದಪಟ್ಟ ವಸ್ತುಗಳ ಉತ್ಪಾದಕರಿಂದ/ ಮಾರಾಟಗಾರರಿಂದ ಸೂಕ್ತ ಪರಿಹಾರ ಪಡೆಯಬಹುದಾಗಿದೆ ಎಂದರು. ಗ್ರಾಹಕರು ಮತ್ತು ರಕ್ಷಣೆ ಕುರಿತು ವಿಶೇಷ ಉಪನ್ಯಾಸ ನೀಡಿದ ಬಳಕೆದಾರರ ವೇದಿಕೆ ಸಂಚಾಲಕ ಎ.ಪಿ.ಕೊಡಂಚ ಮಾತನಾಡಿ, ಗ್ರಾಹಕರಿಗೆ ಕಾನೂನಿನಲ್ಲಿ 8 ವಿವಿಧ ಬಗೆಯ ಹಕ್ಕುಗಳನ್ನು ನೀಡಿದ್ದು, ಗ್ರಾಹಕರು ತಮ್ಮ ಆಯ್ಕೆ ವಸ್ತುಗಳನ್ನು ಖರೀದಿಸಲು, ಅವುಗಳಲ್ಲಿನ ದೋಷಗಳನ್ನು ಪ್ರಶ್ನಿಸಲು, ಸೂಕ್ತ ಪರಿಹಾರ ಪಡೆಯಲು ಸಾಧ್ಯವಿದ್ದು, ಇದು ಗ್ರಾಹಕರಿಗೆ ಹೆಚ್ಚಿನ ಶಕ್ತಿ ನೀಡಲಿದೆ. ದೋಷಪೂರಿತ ವಸ್ತು ಹಾಗೂ ಸೇವೆಗಳ ಕುರಿತು ದೇಶದ ಯಾವುದೇ ಭಾಗದಲ್ಲಿ ಪ್ರಕರಣ ದಾಖಲಿಸಬಹುದಾಗಿದ್ದು, ಜಿಲ್ಲಾ ಮಟ್ಟದ ನ್ಯಾಯಾಲಯಗಳಲ್ಲಿ 1 ಕೋಟಿ ರೂ. ವರೆಗೆ ಪರಿಹಾರ ಕೋರಿ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನೂ ಹೆಚ್ಚಿನ ಪರಿಹಾರಕ್ಕಾಗಿ ಹೈಕೋರ್ಟ್ ಹಾಗೂ ರಾಷ್ಟ್ರೀಯ ಗ್ರಾಹಕ ಆಯೋಗಕ್ಕೆ ದೂರು ನೀಡಬಹುದಾಗಿದ್ದು, ದೂರುಗಳನ್ನು ಆನ್ಲೈನ್ ಮೂಲಕ ಅಥವಾ ಪತ್ರದ ಮೂಲಕ ಸಹ ನೀಡಬಹುದಾಗಿದೆ. ತಮ್ಮ ದೂರುಗಳ ಕುರಿತು ಮಧ್ಯಂತರ ಪರಿಹಾರ ಪಡೆಯಲೂ ಸಹ ಅವಕಾಶವಿದ್ದು, ಗ್ರಾಹಕರು ಈ ಎಲ್ಲಾ ಸೌಲಭ್ಯಗಳ ಬಗ್ಗೆ ಅರಿತು ಈ ಸೌಲಭ್ಯಗಳನ್ನು ಬಳಸಿಕೊಂಡು ಜಾಗೃತರಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷೆ ಶೋಭಾ ಮಾತನಾಡಿ, ಗ್ರಾಹಕರು ಜಾಹೀರಾತುಗಳ ಮೋಡಿಗೆ ಒಳಗಾಗದೇ ತಮ್ಮ ಅಗತ್ಯಕ್ಕನುಗುಣವಾಗಿ ಮಾತ್ರ ವಸ್ತುಗಳನ್ನು ಖರೀದಿಸಬೇಕು. ಪ್ರತೀ ವಸ್ತುವಿನ ಖರೀದಿಗೆ ಸೂಕ್ತ ರಸೀದಿಯನ್ನು ಪಡೆಯಬೇಕು. ಬ್ಯಾಂಕ್ಗಳ ಸೇವಾ ನ್ಯೂನತೆ, ವಾಹನ ವಿಮಾ ಕಂಪೆನಿಗಳ ಸೇವಾ ನ್ಯೂನತೆ, ಬೆಳೆ ವಿಮೆ, ವೈದ್ಯಕೀಯ ಚಿಕಿತ್ಸೆ ಪಡೆಯುವಲ್ಲಿ ಸಂಭವಿಸುವ ನ್ಯೂನತೆಗಳ ಬಗ್ಗೆ ಸಹ ದೂರು ದಾಖಲಿಸಲು ಅವಕಾಶವಿದೆ. ಮೀನುಗಾರರು ತಮ್ಮ ಬೋಟ್ ಮುಳುಗಡೆ ಕುರಿತು ಸಹ ನಷ್ಠ ಪರಿಹಾರ ಕೋರಿ ದೂರು ದಾಖಲಿಸಬಹುದು. ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ಅರಿತುಕೊಂಡಲ್ಲಿ ಮೋಸ ಹೋಗಲು ಸಾಧ್ಯವಿಲ್ಲ ಎಂದರು. ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ.ಪ್ರೇಮಾನಂದ, ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಗಜೇಂದ್ರ ಉಪಸ್ಥಿತರಿದ್ದರು. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪ ನಿರ್ದೇಶಕ ಮಹಮದ್ ಇಸಾಕ್ ಸ್ವಾಗತಿಸಿದರು. ಬಳಕೆದಾರರ ವೇದಿಕೆ ಸಂಚಾಲಕ ನಾರಾಯಣನ್ ನಿರೂಪಿಸಿದರು. ಲಕ್ಷ್ಮೀಬಾಯಿ ವಂದಿಸಿದರು.

ಕಾಪು : ಅಪಘಾತಕ್ಕೆ ಎಡೆಮಾಡುತ್ತಿದೆ ತೆಂಕು ಪೇಟೆಯ ಮುಖ್ಯ ರಸ್ತೆ ; ಮನವಿಗೂ ಸ್ಪಂದನೆಯಿಲ್ಲ

Posted On: 24-12-2021 04:26PM

ಕಾಪು : ಇಲ್ಲಿನ ಪುರಸಭೆ ವ್ಯಾಪ್ತಿಯ ಕಾಪು ತೆಂಕು ಪೇಟೆಯ ಮುಖ್ಯ ರಸ್ತೆಯಲ್ಲಿ, ರಸ್ತೆ ಹಾಳಾಗಿದ್ದು, ನೀರಿನ ಪೈಪ್ ಅಳವಡಿಸುವ ಸಂದರ್ಭದಲ್ಲಿ ಕಾಂಕ್ರೀಟ್ ರಸ್ತೆಯನ್ನು ಕಟ್ ಮಾಡಿ ಸುಮಾರು 1ವರುಷ ಕಳೆದರೂ ರಿಪೇರಿ ಗೋಜಿಗೆ ಸಂಬಂಧ ಪಟ್ಟ ಇಲಾಖೆ ಅಥವಾ ಪುರಸಭೆ ಹೋಗಲಿಲ್ಲ. ಇಲಾಖೆಯವರಲ್ಲಿ ಹಲವು ಬಾರಿ ತಿಳಿಸಿದರೂ ಕೂಡಾ ರಿಪೇರಿಯಾಗಲಿಲ್ಲ. ಇದರಿಂದ ಅಪಘಾತ ಆಗಿರೋದು ಎಲ್ಲರಿಗೂ ತಿಳಿದ ವಿಷಯ.

ರಸ್ತೆಯ ಬದಿಯ ದಾರಿಯಲ್ಲಿ ಡ್ರೈನೇಜ್ ಪಿಟ್ ನ್ನು ಅವೈಜ್ಞಾನಿಕವಾಗಿ ಅಳವಡಿಸಿರುವುದರಿಂದ ಪಾದಚಾರಿಗಳಿಗೆ ಅಲೆದಾಡಲು ಕಷ್ಟವಾಗಿರುತ್ತದೆ.

ಪುರಸಭೆ ಚುನಾವಣೆ ಸಂದರ್ಭದಲ್ಲಿ ಕಾಪು ಪೇಟೆಯಲ್ಲಿ ಅಲ್ಪ ಸ್ವಲ್ಪ ಡಾಂಬರು ಎರಚಿದಂತೆ ಮಾಡದೆ, ಈ ಸ್ಥಳವನ್ನು ಸರಿಯಾದ ರೀತಿಯಲ್ಲಿ ರಿಪೇರಿ ಮಾಡಿದರೆ ಅಪಘಾತಗಳನ್ನು ತಪ್ಪಿಸಬಹುದು ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸುತ್ತಾರೆಯೇ ಕಾದು ನೋಡಬೇಕು.

ಅದಮಾರು : ಅಪರಾಧ ತಡೆ ಮಾಸಾಚರಣೆ 2021 ಹಾಗೂ 112 ಜಾಗೃತಿ ಕಾರ್ಯಕ್ರಮ

Posted On: 24-12-2021 07:43AM

ಅದಮಾರು: ತೆಂಕ ಎರ್ಮಾಳ್ ಗ್ರಾಮದ ಅದಮಾರು ಪೂರ್ಣ ಪ್ರಜ್ಞಾ ವಿದ್ಯಾ ಸಂಸ್ಥೆಯಲ್ಲಿ ಪೋಲಿಸ್ ಇಲಾಖೆ ಮತ್ತು ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ಅಪರಾಧ ತಡೆ ಮಾಸಾಚರಣೆ 2021 ಹಾಗೂ 112 ERSS ಜಾಗೃತಿ ಮೂಡಿಸುವ ಕಾರ್ಯಕ್ರಮ ಜರಗಿತು.

ಕಾರ್ಯಕ್ರಮದಲ್ಲಿ ಅಶೋಕ್ ಕುಮಾರ್ ಪಿಎಸ್ ಐ (ಕಾನೂನು ಸುವ್ಯವಸ್ಥೆ & ಸಂಚಾರ ) ಹಾಗೂ ಜಯ ಕೆ ಪಿಎಸ್ ಐ (ತನಿಖೆ) ರವರು ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಪಾಲನೆ, ಸೈಬರ್ ಕ್ರೈಂ, 112 ಬಗ್ಗೆ ಜಾಗೃತಿ, NDPS ಮತ್ತು COVID-19 ಮಾರ್ಗ ಸೂಚಿಗಳನ್ನು ಪಾಲಿಸಿ ಅಪರಾಧವನ್ನು ತಡೆಯುವಲ್ಲಿ ಜಾಗೃತರಾಗಿ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ತಿಳಿಸಿ, ಸೂಕ್ತ ಮಾರ್ಗದರ್ಶನ ನೀಡಿದರು.

ಈ ಸಂದರ್ಭ ಪಡುಬಿದ್ರಿ ರೋಟರಿ ಕ್ಲಬ್ ನ ಅಧ್ಯಕ್ಷರಾದ ಮೊಹಮ್ಮದ್ ನಿಯಾಜ್, ರೋಟರಿ ಪದಾಧಿಕಾರಿಗಳು, ಪೋಲಿಸ್ ಸಿಬ್ಬಂದಿಗಳು, ಪೂರ್ಣ ಪ್ರಜ್ಞಾ ವಿದ್ಯಾಸಂಸ್ಥೆಯ ಶಿಕ್ಷಕರು ಉಪಸ್ಥಿತರಿದ್ದರು.

ಕಾಪು ಪೇಟೆಯ ರಸ್ತೆಯಲ್ಲಿದ್ದ ಗುಂಡಿಗಳು ಇದ್ದಕ್ಕಿದಂತೆ ಮಾಯ...! ಚುನಾವಣಾ ಗಿಮಿಕ್ ?

Posted On: 23-12-2021 06:23PM

ಕಾಪು : ಇಲ್ಲಿನ ಪೇಟೆ ಭಾಗದ ರಸ್ತೆಯು ಹೊಂಡಮಯವಾಗಿತ್ತು. ಆದರೆ ಇಂದು ಹೊಂಡಗಳು ಮಾಯವಾಗಿ ಉತ್ತಮ ರಸ್ತೆಯಾಗಿದೆ.

ಹಲವಾರು ಸಮಯದವರೆಗೆ ಇದ್ದ ಹೊಂಡದ ರಸ್ತೆಯು ಏಕಾಏಕಿಯಾಗಿ ಬದಲಾಗಲು ಪುರಸಭೆಯ ಚುನಾವಣೆ ಬರಬೇಕಾಯಿತು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೊಬೈಲ್ ಕಳ್ಳತನದ ಆರೋಪ : ಅಪಹರಿಸಿ, ಮಾರಣಾಂತಿಕ ಹಲ್ಲೆ, ಆರೋಪಿಗಳ ಬಂಧನ

Posted On: 23-12-2021 05:36PM

ಮಂಗಳೂರು : ಇಲ್ಲಿನ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವನ ಮೇಲೆ ಮೊಬೈಲ್ ಕಳ್ಳತನದ ಆರೋಪ ಮಾಡಿ ತಂಡವೊಂದು ಆತನನ್ನು ಅಪಹರಿಸಿ ಮಾರಣಾಂತಿಕವಾಗಿ ಹಲ್ಲೆಗೈದ ಪ್ರಕರಣ ಮಂಗಳೂರಿನ ದಕ್ಕೆಯಲ್ಲಿ ನಡೆದಿದೆ.

ಡಿಸೆಂಬರ್ 14ರಂದು ರಾತ್ರಿ ಮಂಗಳೂರು ದಕ್ಕೆಯಲ್ಲಿ ಮೀನುಗಾರಿಕೆ ಕೆಲಸ ಮಾಡುತ್ತಿರುವ ಆಂದ್ರಪದೇಶದ, ಪಕಾಶಂ ಜಿಲ್ಲೆಯ, ಕಾಟಮ್ವಾರಿ ಪಾಲಮ್ ನಿವಾಸಿ ವೈಲ ಶೀನು (32) ಎಂಬಾತನು ಮಂಗಳೂರು ದಕ್ಕೆಯಲ್ಲಿ ನಿಲ್ಲಿಸಿದ್ದ JOHN SHAILESH 2 ಎಂಬ ಬೋಟಿಗೆ ಹೋಗಿ ವಾಪಾಸು ತಾನು ಕೆಲಸ ಮಾಡುವ ಬೋಟಿನಲ್ಲಿ ಮಲಗಿರುತ್ತಾನೆ. ಮರುದಿನ JOHN SHAILESH 2 ಬೋಟಿನಲ್ಲಿ ಕೆಲಸ ಮಾಡುತ್ತಿರುವ ಆಂಧ್ರಪ್ರದೇಶದ ಕರಪಿಂಗಾರ ರವಿ, ಕೊಂಡೂರು ಪೊಲಯ್ಯ, ಅವುಲ ರಾಜಕುಮಾರ್‌, ಕಾಟಂಗರಿ ಮನೋಹರ್, ವುಟುಕುರಿ ಜಾಲಯ್ಯ ಹಾಗೂ ಪ್ರಲಯ ಕಾವೇರಿ ಗೋವಿಂದಯ್ಯರವರು ವೈಲ ಶೀನು ರವರಲ್ಲಿಗೆ ಬಂದು, ನಿನ್ನೆ ರಾತ್ರಿ ಬೋಟಿಗೆ ಬಂದವನು ಮೊಬೈಲ್ ಕಳ್ಳತನ ಮಾಡಿದ್ದೀಯಾ ಎಂದು ಹೇಳಿ, ಬೆಳಿಗ್ಗೆ 11-15 ಗಂಟೆಗೆ ವೈಲ ಶೀನು ನನ್ನು ಅಪಹರಿಸಿಕೊಂಡು JOHN SHAILESH 2 ಬೋಟಿಗೆ ಹೋಗಿ, ಎಲ್ಲರು ಸೇರಿಕೊಂಡು ವೈಲ ಶೀನುವಿನ ಕೈ ಕಾಲುಗಳನ್ನು ಹಿಡಿದು, ಬೊಬ್ಬೆ ಹಾಕದಂತೆ ಬಾಯಿ ಮುಚ್ಚಿ, ಎರಡೂ ಕಾಲುಗಳನ್ನು ಜೋಡಿಸಿ ಹಗ್ಗದಿಂದ ಕಟ್ಟಿ, ಬಳಿಕ ಕಾಲಿಗೆ ಕಟ್ಟಿದ ಹಗ್ಗವನ್ನು ಬೋಟ್ ನ ಆರಿಯ ಕೊಕ್ಕೆಗೆ ಸಿಕ್ಕಿಸಿ ತಲೆ ಕೆಳಗಡೆ ಮಾಡಿ ವೈಲ ಶೀನು ರವರನ್ನು ನೇತಾಡಿಸಿ, ಕೈಗಳಿಂದ, ಮರದ ರೀಪಿನಿಂದ ಹಾಗೂ ಕಬ್ಬಿಣದ ಸರಳಪಳಿಯಿಂದ ಹಲ್ಲೆ ನಡೆಸಿ ಕೊಲೆ ನಡೆಸಲು ಪುಯತ್ನಿಸಿರುತ್ತಾರೆ. ಆರೋಪಿಗಳು ವೈಲು ಶೀನುವಿನ ಕಾಲುಗಳನ್ನು ಕಟ್ಟಿ, ಸಮುದ್ರಕ್ಕೆ ಬಿಸಾಡಿ ಕೊಲೆ ನಡೆಸಲು ಮಾತುಕತೆ ನಡೆಸಿದ್ದು, ಆ ಸಮಯ ಸಾರ್ವಜನಿಕರು ಬಂದು ವೈಲು ಶೀನುವನ್ನು ರಕ್ಷಿಸಿರುತ್ತಾರೆ.

ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಅಪಹರಣ ಹಾಗೂ ಕೊಲೆಯತ್ನ ಪ್ರಕರಣ ಡಿಸೆಂಬರ್‌ 21ರಂದು ರಾತ್ರಿ ದಾಖಲಾಗಿರುತ್ತದೆ.

ಈ ಪ್ರಕರಣದ ಆರೋಪಿಗಳಾದ ಡಿಸೆಂಬರ್ 22ರಂದು ಸಂಜೆ 6ಗಂಟೆಗೆ ಮಂಗಳೂರು ದಕ್ಕೆ ಬಳಿಯಿಂದ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ ಮರದ ರೀಪು, ಕಬ್ಬಿಣದ ಸರಪಳಿ, ಹಗ್ಗ ಹಾಗೂ ಮೊಬೈಲ್ ಹ್ಯಾಂಡ್ ಸೆಟ್ಟನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.

ಕುತ್ಯಾರು ಸೂರ್ಯ ಚೈತನ್ಯ ಹೈಸ್ಕೂಲ್ : ಸೈಬರ್ ಸುರಕ್ಷತಾ ಅರಿವು ಕಾರ್ಯಕ್ರಮ

Posted On: 23-12-2021 05:08PM

ಕಾಪು : ನಮ್ಮ ಖಾಸಗಿ ಮಾಹಿತಿಗಳು ಕ್ಲೌಡ್ ಸರ್ವರ್ ಗಳಲ್ಲಿ ಶೇಖರವಾಗುವುದರಿಂದ ಇವು ಸುರಕ್ಷಿತವಲ್ಲ. ಯಾವುದೇ ಮೊಬೈಲ್ ತಂತ್ರಾಂಶಗಳನ್ನು ಉಪಯೋಗಿಸುವಾಗ ಮಾಹಿತಿಗಳನ್ನು ಅಪರಿಚಿತರೊಡನೆ ಹಂಚಿಕೊಳ್ಳಬಾರದು. ನಮಗೆ ಬರುವ ಇಮೇಲ್ ಮತ್ತು ಎಸ್ ಎಂ ಎಸ್ ಗಳ ಬಗೆಗೆ ಜಾಗರೂಕರಾಗಿರಬೇಕು. ಯಾವುದೇ ಬ್ಯಾಂಕ್ ನವರು ಕರೆ ಮಾಡಿ ಒಟಿಪಿ, ಪಾಸ್ವರ್ಡ್ ಅಥವಾ ಸಿವಿವಿ ಗಳನ್ನು ಕೇಳುವುದಿಲ್ಲ. ಬಳಕೆದಾರರು ವಿವೇಚನೆಯನ್ನು ಬಳಸಿ ವ್ಯವಹರಿಸಿದರೆ ಹಾನಿಯನ್ನು ತಪ್ಪಿಸಬಹುದು. ಫೇಸ್ ಬುಕ್ ನ ನಕಲಿ ಅಕೌಂಟ್ ಗಳಿಂದ ಹಾಗೂ ಇಮೇಲ್ ಗಳಿಂದ ಬರುವ ಲಿಂಕ್ ಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಬೇಕು ಎಂದು ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯುನಿಕೇಷನ್ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕಿ ಪ್ರೊ. ರಾಜಶ್ರೀ ನಂಬಿಯಾರ್ ತಿಳಿಸಿದರು.

ಅವರು ಕುತ್ಯಾರು ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಹೈಸ್ಕೂಲ್ ಆಯೋಜಿಸಿದ್ದ ಸೈಬರ್ ಸುರಕ್ಷತಾ ಅರಿವು ಕಾರ್ಯಕ್ರಮದಲ್ಲಿ ಸಂಪನ್ಮೂಲ ತಜ್ಞರಾಗಿ ಮಾತನಾಡಿದರು . ಇಂದಿನ ಆಧುನಿಕ ಯುಗದಲ್ಲಿ ಜಾಗರೂಕರಾಗಿ ಬಳಕೆದಾರರು ವ್ಯವಹರಿಸಬೇಕು. ಖಾಸಗಿ ಮಾಹಿತಿಗಳು , ಒಟಿಪಿ , ಪಾಸ್ ವರ್ಡ್ ಗಳನ್ನೂ ಎಂದೂ ಅಪರಿಚಿತರೊಂದಿಗೆ ಹಂಚಿಕೊಳ್ಳಬಾರದು ಎಂದು ಸಲಹೆಯಿತ್ತರು.

ಶಾಲಾ ಸ್ಥಾಪಕಾಧ್ಯಕ್ಷ ವಿದ್ವಾನ್ ಶಂಭುದಾಸ್ ಗುರೂಜಿ ಅಧ್ಯಕ್ಷತೆ ವಹಿಸಿದ್ದರು. ಪ್ರಿನ್ಸಿಪಾಲ್ ಗುರುದತ್ತ ಸೋಮಯಾಜಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉದ್ಯಮಿ ದೀಪಕ್ ಕಾಮತ್, ಹಿತೈಷಿಗಳಾದ ಚಂದ್ರಿಕಾ ಪೂಜಾರಿ, ಅಕ್ಷತಾ , ಶಾಲಾ ಶಿಕ್ಷಕ ವೃಂದ ಮತ್ತು ಪೋಷಕರು ಉಪಸ್ಥಿತರಿದ್ದರು. ಶ್ರುತಿ ಆಚಾರ್ಯ ಸ್ವಾಗತಿಸಿ, ಹಿರಿಯ ಶಿಕ್ಷಕಿ ಸಂಗೀತಾ ಅತಿಥಿಗಳನ್ನು ಪರಿಚಯಿಸಿದರು. ಸಹಶಿಕ್ಷಕಿ ರಮ್ಯಾ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ದೀಪಾ ಮೋಹನ್ ವಂದಿಸಿದರು.

ಎನ್ ಸಿಸಿ ವಿಶೇಷ ತರಬೇತಿ ಶಿಬಿರ

Posted On: 23-12-2021 05:01PM

ಶಿರ್ವ: ಇಲ್ಲಿನ 21 ಕರ್ನಾಟಕ ಬೆಟಾಲಿಯನ್ ಎನ್ ಸಿಸಿ, ಉಡುಪಿ ವಲಯ ಸಂತ ಮೇರಿ ಮಹಾವಿದ್ಯಾಲಯ ಸೇರಿದಂತೆ ವಿವಿಧ ಕಾಲೇಜುಗಳ ಸುಮಾರು 70 ಕೆಡೆಟ್ ಗಳಿಗೆ ಉಡುಪಿಯ ಪಿಪಿಸಿ ಕಾಲೇಜಿನಲ್ಲಿ ಡಿಸೆಂಬರ್ 23ರಿಂದ ಡಿಸೆಂಬರ್ 31ರವರೆಗೆ ವಿಶೇಷ ತರಬೇತಿ ಶಿಬಿರವನ್ನು ಕಮಾಂಡಿಂಗ್ ಆಫೀಸರ್ ಕರ್ನಲ್ ಆರ್ಕೆ ಸಿಂಗ್ ಅವರ ನೇತೃತ್ವದಲ್ಲಿ ಏರ್ಪಡಿಸಲಾಯಿತು.

ಯುವ ಸೇನಾದಳದ ಕೆಡೆಟ್‍ಗಳನ್ನು ಎನ್.ಸಿ.ಸಿ. ಪರೀಕ್ಷೆಗಳಿಗೆ ಸಜ್ಜುಗೊಳಿಸುವ ಜೊತೆಗೆ ಅವರಲ್ಲಿ ವ್ಯಕ್ತಿತ್ವ ವಿಕಸನ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ ಈ ಶಿಬಿರದಲ್ಲಿ ಸಮುದಾಯ ಸೇವಾಗುಣ ಮೂಡಿಸುವ ಜೊತೆಗೆ ಕವಾಯತು, ಶಸ್ತ್ರ ತರಬೇತಿ, ಭೂಪಟ ಅಧ್ಯಯನ, ಫೈರಿಂಗ್ ಅಣಕುಯುದ್ಧ ಪ್ರಾತ್ಯಕ್ಷಿಕೆಯ ನಿಟ್ಟಿನಲ್ಲಿ ತರಬೇತಿ ನೀಡಿದರು.

ಹವಲ್ದಾರ್ ನರೇಶ ಸಿಂಗ್ ತೋಮರ್, ವಿನೋದ್ ರಾಯ್, ಮಹೇಂದ್ರ ಲಿಂಬು ತರಬೇತುದಾರ ರಾಗಿದ್ದಾರೆ. ಮೇಜರ್ ಪ್ರಕಾಶ್ ರಾವ್, ಲೆಫ್ಟಿನೆಂಟ್ ಕೆ.ಪ್ರವೀಣ್ ಕುಮಾರ್, ಲೆಫ್ಟಿನೆಂಟ್ ನವ್ಯ ಭಾಗವಹಿಸಿದ್ದರು.