Updated News From Kaup

ಕಾಪು ಹೊಸ ಮಾರಿಗುಡಿಯಲ್ಲಿ ಧಾರ್ಮಿಕ ದಿನಾಚರಣೆ ಪ್ರಯುಕ್ತ ಭಜನಾ ಕಾರ್ಯಕ್ರಮ

Thumbnail
Posted On: 02 Apr 2022, 07:54 PM

ಕಾಪು : ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಚಾಂದ್ರಮಾನ ಯುಗಾದಿ ಪ್ರಯುಕ್ತ ನಡೆದ ಧಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಶ್ರೀ ಲಕ್ಷ್ಮೀ ಜನಾರ್ದನ ಮಹಿಳಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮವನ್ನು ನೆರವೇರಿತು. ದೇವಳಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ಸದಸ್ಯರು ಮತ್ತು ಕಾರ್ಯನಿರ್ವಹಣಾಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಜಾನಪದ ವಿದ್ವಾಂಸ ಕೆ.ಎಲ್. ಕುಂಡಂತಾಯರ ದೈವಾರಾಧನೆಯ ಕುರಿತ ನಡುವಣ ಲೋಕದ ನಡೆ ಕೃತಿ ಬಿಡುಗಡೆ

Thumbnail
Posted On: 02 Apr 2022, 09:00 AM

ಎಲ್ಲೂರು : ಇಲ್ಲಿಯ ಕುಂಜೂರು ಶ್ರೀದುರ್ಗಾ ದೇವಸ್ಥಾನದಲ್ಲಿ ಕೆ.ಎಲ್.ಕುಂಡಂತಾಯರ ದೈವ - ಬೂತಾರಾಧನೆಯ ಕುರಿತ ಲೇಖನಗಳ ಸಂಗ್ರಹ 'ನಡುವಣ ಲೋಕದ ನಡೆ' ದೈವಾರಾಧನೆಯ ನೆಲೆ - ಕಲೆ ಬಿಡುಗಡೆಗೊಂಡಿತು. ಜಾನಪದ ವಿದ್ವಾಂಸ ಡಾ.ವೈ.ಎನ್ .ಶೆಟ್ಟಿ ಹಾಗೂ‌ ಸಾಮಾಜಿಕ ಕಾರ್ಯಕರ್ತ ಸುರೇಶ ಶೆಟ್ಟಿ ಗುರ್ಮೆ 'ನಡುವಣ ಲೋಕದ ನಡೆ'ಯನ್ನು ಬಿಡುಗಡೆಗೊಳಿಸಿದರು. ಸಾಹಿತಿ,ಲೇಖಕ ಡಾ.ಜನಾರ್ದನ ಭಟ್ ಕೃತಿಯನ್ನು ಪರಿಚಯಿಸಿದರು. ಜಾನಪದ ವಿದ್ವಾಂಸ ಡಾ.ಅಶೋಕ ಆಳ್ವ, ಉದ್ಯಮಿ ನಾರಾಯಣ ಕೆ.ಶೆಟ್ಟಿ, ನಡಿಮನೆ ದೇವರಾಜ ರಾವ್, ನಿವೃತ್ತ ಪ್ರಾಂಶುಪಾಲ ಸುದರ್ಶನ ವೈ.ಎಸ್, ದೇವಳದ ಮ್ಯಾನೇಜರ್ ರಾಘವೇಂದ್ರ ಶೆಟ್ಟಿ ಹಾಗೂ ಕೆ.ಎಲ್.ಕುಂಡಂತಾಯ ಉಪಸ್ಥಿತರಿದ್ದರು.

ಕಲ್ಯಾಣಪುರ ರೋಟರಿ ಪ್ರಾಯೋಜಕತ್ವದಲ್ಲಿ ಕೆಮ್ಮಣ್ಣು ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಪೈಂಟಿಂಗ್

Thumbnail
Posted On: 01 Apr 2022, 02:55 PM

ಉಡುಪಿ :ಸರ್ಕಾರಿ ಪದವಿಪೂರ್ವ ಕಾಲೇಜು, ಕೆಮ್ಮಣ್ಣು ಇದರ ಕಟ್ಟಡಕ್ಕೆ ಆಂಶಿಕವಾಗಿ ಇತ್ತೀಚೆಗೆ ಪೈಂಟಿಂಗ್ ಕೆಲಸವನ್ನು ಕಲ್ಯಾಣಪುರ ರೋಟರಿ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಮಾಡಿ ಕೊಡಲಾಯಿತು. ಇದರ ಹಸ್ತಾಂತರವನ್ನು ರೋಟರಿ ಕಲ್ಯಾಣಪುರದ ಅಧ್ಯಕ್ಷರಾದ ಶಂಭು ಶಂಕರ್, ಕಾರ್ಯದರ್ಶಿ ಪ್ರಕಾಶ್ , ವಲಯ ಸೇನಾನಿ ಬ್ರಯಾನ್ ಡಿಸೋಜ ಮತ್ತಿತರ ರೋಟರಿ ಪದಾಧಿಕಾರಿಗಳು ,ಕಾಲೇಜಿನ ಪ್ರಾಂಶುಪಾಲರಾದ ಲಕ್ಷ್ಮಿ ನಾರಾಯಣ ಎಸ್. ವಿ. ಮತ್ತು ಉಪನ್ಯಾಸಕರಾದ ಕ್ಸೇವಿಯರ್ ರವರು ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರು ಸಂಸ್ಥೆಯ ಅವಶ್ಯಕ ಬೇಡಿಕೆಗೆ ಸ್ಪಂದಿಸಿ, ಪೂರೈಸಿದ ರೋಟರಿ ಕ್ಲಬ್ ನ ಸೇವೆಯನ್ನು ಶ್ಲಾಘಿಸಿ ವಂದಿಸಿದರು.

ಮಣಿಪಾಲ : ಚಿನ್ನದ ಸರವನ್ನು ವಾರಸುದಾರರಿಗೆ ಮರಳಿಸಿದ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಸುದೇಶ್ ನಾಯ್ಕ

Thumbnail
Posted On: 31 Mar 2022, 09:50 PM

ಮಣಿಪಾಲ : ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನದ ಸರವು ಮಾಚ್೯ 31ರ ಬೆಳಿಗ್ಗೆ ಮಣಿಪಾಲ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷರಾದ ಸುದೇಶ್ ನಾಯ್ಕ ಇವರಿಗೆ ಸಿಕ್ಕಿರುತ್ತದೆ. ಆ ಚಿನ್ನದ ಸರವನ್ನು ನಿಜವಾದ ವಾರಸುದಾರರಿಗೆ ಮರಳಿಸುವ ಮೂಲಕ ಮಾನವೀಯತೆಯನ್ನು ಮೆರೆದಿರುತ್ತಾರೆ. ಚಿನ್ನದ ಸರದ ವಾರಸುದಾರರು ಇವರ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿರುತ್ತಾರೆ.

ಕೊಂಕಣ್ ರೈಲ್ವೇಸ್ನಿಂದ ಜಿಲ್ಲಾ ಆರೋಗ್ಯ ಇಲಾಖೆಗೆ ವಾಹನ ಹಸ್ತಾಂತರ

Thumbnail
Posted On: 30 Mar 2022, 10:17 PM

ಉಡುಪಿ : ಕೊಂಕಣ್ ರೈಲ್ವೇಸ್ ಮುಂಬೈ ಇವರ ವತಿಯಿಂದ ಸಿ.ಎಸ್.ಆರ್ (ಸಾಮಾಜಿಕ ಹೊಣೆಗಾರಿಕೆ ಕಾರ್ಯನೀತಿ) ಅನುದಾನದಡಿಯಲ್ಲಿ ಮಹೇಂದ್ರ ಬೊಲೇರೋ ವಾಹನವನ್ನು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮುಖಾಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ ಹೆಚ್ ಇವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಕೊಂಕಣ್ ರೈಲ್ವೇಸ್ ಅಧಿಕಾರಿಗಳಾದ ಸುಧಾ ಕೃಷ್ಣಮೂರ್ತಿ, ಬಿ.ಬಿ.ನಿಖಂ, ಆಶಾ ಶೆಟ್ಟಿ, ಡಾ. ಸ್ಟೀವೆನ್ ಜಾರ್ಜ್, ಜೈಸ್ವಾಲ್, ಬಿ.ಎಮ್ ವೆಂಕಟೇಶ್, ಆರೋಗ್ಯ ಇಲಾಖಾ ಅಧಿಕಾರಿಗಳಾದ ಡಾ ಪ್ರಶಾಂತ್ ಭಟ್, ಸುಬ್ರಮಣ್ಯ ಶೇರಿಗಾರ್ ಉಪಸ್ಥಿತರಿದ್ದರು.

ಏಪ್ರಿಲ್ 1 : ಶಿವದೂತೆ ಗುಳಿಗೆ ಯಶಸ್ಸಿನ ಬಳಿಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಇವರ ಮತ್ತೊಂದು ತುಳು ನಾಟಕ ಮಣಿಕಂಠ ಮಹಿಮೆ ಉಡುಪಿಯಲ್ಲಿ ಪ್ರಥಮ ಪ್ರದರ್ಶನ

Thumbnail
Posted On: 28 Mar 2022, 11:23 PM

ಉಡುಪಿ : ತುಳುನಾಡು ಅಲ್ಲದೇ ಬೇರೆ ಬೇರೆ ಕಡೆಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಇವರ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಶಿವದೂತೆ ಗುಳಿಗೆ ತಂಡದಿಂದ ಮತ್ತೊಂದು ಸಂಚಲನ ಮೂಡಿಸುವ ತುಳು ನಾಟಕ ಮಣಿಕಂಠ ಮಹಿಮೆ ರೋಯಲ್ ಫ್ರೆಂಡ್ಸ್, ಮಲ್ಪೆ-ಉಡುಪಿ ಪ್ರಾಯೋಜಕತ್ವದಲ್ಲಿ ಉಡುಪಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಉಡುಪಿಯ ಅಜ್ಜರಕಾಡುವಿನಲ್ಲಿರುವ ಉಡುಪಿ ಪುರಭವನದಲ್ಲಿ ಏಪ್ರಿಲ್‌ 1 ರಂದು ಸಂಜೆ 6:30ಕ್ಕೆ ಪ್ರಥಮ ಪ್ರದರ್ಶನವಾಗಲಿದೆ. ವಿಜಯಕುಮಾರ್ ಕೊಡಿಯಾಲ್ ಬೈಲ್ ರಚಿಸಿ ನಿರ್ದೇಶಿಸಿರುವ ತುಳು ನಾಟಕ ಮಣಿಕಂಠ ಮಹಿಮೆಯ ಟಿಕೇಟಿಗಾಗಿ ಸಂಪರ್ಕಿಸಿ : +91 9611649910, +91 9743247113

ಎಐಐಯು ಸಾಫ್ಟ್ ಬಾಲ್ ಟೂರ್ನಮೆಂಟ್ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲಿರುವ ವಿಧಾತ್ ಶೆಟ್ಟಿ

Thumbnail
Posted On: 28 Mar 2022, 10:57 PM

ಶಿರ್ವ : ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದ ತೃತೀಯ ಬಿಸಿಎ ವಿದ್ಯಾರ್ಥಿ ವಿಧಾತ್ ಶೆಟ್ಟಿ ಆಂಧ್ರಪ್ರದೇಶದ ಗುಂಟೂರಿನಲ್ಲಿ ಇರುವ ಆಚಾರ್ಯ ನಾಗಾರ್ಜುನ ಯುನಿವರ್ಸಿಟಿಯಲ್ಲಿ ಮಾರ್ಚ್ 24ರಿಂದ 30ರವರೆಗೆ ನಡೆಯಲಿರುವ ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಸಾಫ್ಟ್ ಬಾಲ್ ಟೂರ್ನಮೆಂಟ್ ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲಿದ್ದಾರೆ ಎಂದು ಪ್ರಾಂಶುಪಾಲರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಬ್ರಹ್ಮಶ್ರೀ ನಾರಾಯಣಗುರು ಭಜನಾ ಮಂದಿರ ಪಡುಕರೆ : 86ನೇ ವಾರ್ಷಿಕ ಮಂಗಲೋತ್ಸವ

Thumbnail
Posted On: 28 Mar 2022, 10:49 PM

ಉಡುಪಿ : ಬ್ರಹ್ಮಶ್ರೀ ನಾರಾಯಣಗುರು ಭಜನಾ ಮಂದಿರ (ರಿ.) ಪಡುಕರೆ ಇದರ 86ನೇ ವಾರ್ಷಿಕ ಮಂಗಲೋತ್ಸವವು ಮಾಚ್೯ 28 ರಿಂದ ಏಪ್ರಿಲ್ 03 ರವರೆಗೆ ಜರಗಲಿದೆ. ಮಾಚ್೯ 28 ರಿಂದ ಏಪ್ರಿಲ್ 03 ರವರೆಗೆ ಪ್ರತಿದಿನ ರಾತ್ರಿ ಮಂದಿರದಲ್ಲಿ ಭಜನೆ ಜರಗಲಿದ್ದು, ಏಪ್ರಿಲ್ 3ರಂದು ಸಂಜೆ 6 ರಿಂದ ಕಲಶಪ್ರತಿಷ್ಠೆಯಾಗಿ ಭಜನೆ, ರಾತ್ರಿ 9.30ಕ್ಕೆ ಮಹಾಮಂಗಲೋತ್ಸವ ತದನಂತರ ಗುರುಪೂಜೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಏಪ್ರಿಲ್ 1ರಿಂದ 15ರವರೆಗೆ ಪುನರ್ ಪ್ರತಿಷ್ಠೆ, ಬ್ರಹ್ಮಕಲಶ ಪುಣ್ಯೋತ್ಸವ, ರಥೋತ್ಸವ, ಚತು:ಪವಿತ್ರ ನಾಗಮಂಡಲೋತ್ಸವ

Thumbnail
Posted On: 28 Mar 2022, 08:34 PM

ಉಚ್ಚಿಲ : ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಶ್ರೀ ಕ್ಷೇತ್ರ ಉಚ್ಚಿಲ ಇದರ ಪುನರ್ ಪ್ರತಿಷ್ಠೆ, ಬ್ರಹ್ಮಕಲಶ ಪುಣೋತ್ಸವ, ರಥೋತ್ಸವ, ಚತುಃಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮಗಳು ಏಪ್ರಿಲ್ 1 ರ ಶುಕ್ರವಾರದಿಂದ 15 ನೇ ತಾರೀಕಿನವರೆಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರು ಜಿರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ನಾಡೋಜ ಡಾ|ಜಿ ಶಂಕರ್ ಹೇಳಿದರು. ಅವರು ಗುರುವಾರ ಉಚ್ಚಿಲ ಮೊಗವೀರ ಭವನದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವಾಸ್ತು ತಜ್ಞ ವಿದ್ವಾನ್ ಶ್ರೀ ಸುಬ್ರಹ್ಮಣ್ಯ ಭಟ್ ಗುಂಡಿಬೈಲು, ಕ್ಷೇತ್ರ ತಂತ್ರಿಗಳಾದ ಶ್ರೀ ರಾಘವೇಂದ್ರ ತಂತ್ರಿ ಕುಕ್ಕಿಕಟ್ಟೆಯವರ ಮಾರ್ಗದರ್ಶನದಲ್ಲಿ ಶಿಲಾಮಯ ಗರ್ಭ ಗುಡಿ, ಶಿಲಾಮಯ ಶ್ರೀ ಭದ್ರಕಾಳಿ ಗುಡಿ, ಶಿಲಾಮಯ ಶ್ರೀ ಪ್ರಸನ್ನ ಗಣಪತಿ ಗುಡಿ, ಶ್ರೀ ನಾಗದೇವರ ಗುಡಿ, ಸುತ್ತುಪೌಳಿ, ಗುರುಪೀಠ, ರಾಜಗೋಪುರ, ಯಾಗಶಾಲೆ, ವಸಂತ ಮಂಟಪ, ರಥಬೀಧಿ, ಸುತ್ತು ಆವರಣ ಗೋಡೆ, ಬಯಲು ರಂಗ ಮಂಟಪ, ಒಳಚರಂಡಿ ವ್ಯವಸ್ಥೆ, ಇಂಟರ್ಲಾಕ್ ಅಳವಡಿಕೆ ಹಾಗೂ ಪುಷ್ಕರಣಿಗಳನ್ನೊಳಗೊಂಡ ರೂಪಾಯಿ 32 ಕೋಟಿ ಅಂದಾಜು ಮೊತ್ತದ ಸಮಗ್ರ ಜೀರ್ಣೋದ್ಧಾರ ಕಾರ್ಯಕೈಗೊಳ್ಳಲಾಯಿತು. ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಕಾರ್ಯಗಳು ಸಂಪನ್ನಗೊಂಡಿದ್ದು ಶಿಲೆದಾರು ಶಿಲ್ಪಗಳಿಂದ ಕೂಡಿದ ದೇವಾಲಯದಲ್ಲಿ ಶ್ರೀ ಪ್ರಸನ್ನ ಗಣಪತಿ, ಶ್ರೀ ಭದ್ರಕಾಳಿ, ಶ್ರೀ ನಾಗದೇವರ ಸಹಿತ ಶ್ರೀ ಮಹಾಲಕ್ಷ್ಮೀ ದೇವಿಯ ಬಿಂಬ ಪುನರ್ ಪ್ರತಿಷ್ಠಾಪನೆ, ಅಷ್ಟಬಂಧ ಬ್ರಹ್ಮಕಲಶೋತ್ಸವ, ರಥೋತ್ಸವ, ಚತುಃಪವಿತ್ರ ನಾಗಮಂಡಲೋತ್ಸವಗಳನ್ನೊಳಗೊಂಡ ವೈಧಿಕ ವಿಧಿ ವಿಧಾನಗಳನ್ನು ಇದೇ ಬರುವ ಏಪ್ರಿಲ್ 1 ರಿಂದ ಏಪ್ರಿಲ್ 15 ರವರೆಗೆ ಕ್ಷೇತ್ರದ ತಂತ್ರಿಗಳಾದ ವಿದ್ವಾನ್ ಶ್ರೀ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿಗಳ ನೇತೃತ್ವದಲ್ಲಿ, ಹಿರಿಯ ಅರ್ಚಕರಾದ ವೆಂಕಟನರಸಿಂಹ ಉಪಾಧ್ಯಾಯ ಹಾಗೂ ರಾಘವೇಂದ್ರ ಉಪಾಧ್ಯಾಯರ ಉಪಸ್ಥಿತಿಯಲ್ಲಿ ಮತ್ತು ಯತಿವರೇಣ್ಯರ ಶುಭಾಶೀರ್ವಾದಗಳೊಂದಿಗೆ ವೈಭವೋಪೇತವಾಗಿ ನಡೆಸಲು ಸಂಕಲ್ಪಿಸಲಾಗಿದೆ ಎಂದರು. ರಾಜ್ಯ ಹಾಗೂ ಹೊರರಾಜ್ಯಗಳಿಂದ 2 ರಿಂದ 3 ಲಕ್ಷದಷ್ಟು ಭಕ್ತಾಧಿಗಳು ಆಗಮಿಸುವ ನಿರೀಕ್ಷೆಯಿದ್ದು ಆಗಮಿಸುವ ಎಲ್ಲಾ ಭಕ್ತಾಧಿಗಳಿಗೂ ದಿನಂಪ್ರತಿ ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಪ್ರಯುಕ್ತ ಮಾರ್ಚ್ 27 ಕ್ಕೆ ಅವಿಭಜಿತ ದ. ಕ ಜಿಲ್ಲೆಯ ಪ್ರಸಿದ್ಧ ದೇವಸ್ಥಾನಗಳಿಂದ ಪ್ರಸಾದದ ರೂಪದಲ್ಲಿ ಹೊರೆಕಾಣಿಕೆಯು ಕ್ಷೇತ್ರವನ್ನು ತಲುಪಲಿದೆ. ಈಗಾಗಲೇ ಹೈದ್ರಾಬಾದ್ ಕರ್ನಾಟಕ ಸೇರಿದಂತೆ ರಾಜ್ಯದ ಇತರ ಭಾಗಗಳಿಂದ ಹೊರೆಕಾಣಿಕೆಗಳು ದೇವಸ್ಥಾನಕ್ಕೆ ತಲುಪಿದೆ. ಕರಾವಳಿ ಭಾಗದ ಭಕ್ತಾದಿಗಳ ಹೊರಕಾಣಿಕೆಯು 2000ಕ್ಕೂ ಮಿಕ್ಕಿದ ವಾಹನಗಳ ಮೂಲಕ ದೇವಸ್ಥಾನದ ಉತ್ತರ ಭಾಗದ ಮೆರವಣಿಗೆಯು ಮೂಳೂರಿನಿಂದ ಹಾಗೂ ದಕ್ಷಿಣ ಭಾಗದ ಮೆರವಣಿಗೆಯು ತೆಂಕ ಎರ್ಮಾಳ್‌ನಿಂದ ಹೊರಟು ವಿವಿಧ ರೀತಿಯ ಟ್ಯಾಬ್ಲೊ, ಚೆಂಡೆ, ಭಜನಾಕುಣಿತ ಮುಂತಾದ ಬಿರುದಾವಳಿಗಳೊಂದಿಗೆ ದೇವಸ್ಥಾನ ತಲುಪಲಿದೆ. ಅನ್ನ ಛತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಯಾವುದೇ ನೂಕು ನುಗ್ಗಲಾಗದಂತೆ ಸುಮಾರು 1 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಅನ್ನಛತ್ರದ ಚಪ್ಪರ ನಿರ್ಮಿಸಿ ಎಲೆ ಊಟ ಮತ್ತು ಬಫೆ ಊಟಕ್ಕೆ ಅನುಕೂಲವಾಗುವಂತೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ ಹಾಗೂ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳ ವಾಹನ ನಿಲುಗಡೆಗೆ ಬೇಕಾಗುವಷ್ಟು ಪಾರ್ಕಿಂಗ್ ಜಾಗದ ಸಿದ್ಧತೆ ಮಾಡಿಕೊಳ್ಳಲಾಗಿದೆ. ನೂತನವಾಗಿ ನಿರ್ಮಾಣಗೊಂಡ ಭವ್ಯ ರಾಜಗೋಪುರ ಹಾಗೂ ಸರಕಾರದ ಅನುದಾನದೊಂದಿಗೆ ನಿರ್ಮಾಣಗೊಂಡ ಲಕ್ಷ್ಮೀ ತೀರ್ಥ ಕೆರೆಯು ಏಪ್ರಿಲ್ 1ರ ಸಂಜೆ 5 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಏಪ್ರಿಲ್ 2ರಿಂದ ಏಪ್ರಿಲ್ 15ರತನಕ ಪ್ರತಿದಿನ ಸಂಜೆ ಗಂಟೆ 4 ರಿಂದ 5ರವರೆಗೆ ಸಾವಿರ ಸುಮಂಗಲೆಯರಿಂದ ಕುಂಕುಮಾರ್ಚನೆಯೊಂದಿಗೆ ಮಹಾಮಂಗಳಾರತಿ ಕಾರ್ಯಕ್ರಮವನ್ನು ವಿಶೇಷವಾಗಿ ಆಯೋಜಿಸಲಾಗಿದೆ. ಮಹಾಲಕ್ಷ್ಮೀ ದೇವಿಯ ಬಿಂಬ ಪ್ರತಿಷ್ಠೆ, ಸ್ವರ್ಣಕಲಶ ಪ್ರತಿಷ್ಠೆ ಹಾಗೂ ಮಹಾಅನ್ನಸಂತರ್ಪಣೆ ಏಪ್ರಿಲ್ 6ರಂದು ನಡೆಯಲಿದೆ. ವರ್ಷಂಪ್ರತಿ ನಡೆಯುವ ಶ್ರೀಮಹಾಲಕ್ಷ್ಮೀ ರಥೋತ್ಸವ ಹಾಗೂ ಮಹಾಅನ್ನಸಂತರ್ಪಣೆಯು ಏಪ್ರಿಲ್ 13ರಂದು ನಡೆಯಲಿದೆ. ಏಪ್ರಿಲ್ 15ರ ರಾತ್ರಿ ಗಂಟೆ 8ಕ್ಕೆ ಹಾಲಿಟ್ಟು ಸೇವೆ ರಾತ್ರಿ 9ರಿಂದ ಚತುಃಪವಿತ್ರ ನಾಗಮಂಡಲೋತ್ಸವ ನಡೆಯಲಿದೆ. ಎಪ್ರಿಲ್ 16ರ ಬೆಳಗ್ಗೆ ಸಂಪೆ ವೀಕ್ಷಣೆ, ಮಂತ್ರಾಕ್ಷತೆಯೊಂದಿಗೆ ಪುನಃ ಪ್ರತಿಷ್ಠೆ ಧಾರ್ಮಿಕ ವಿಧಿವಿಧಾನಗಳು ಶುಭಾಂತ್ಯವಾಗಲಿದೆ. ಏಪ್ರಿಲ್ 15ರ ರಾತ್ರಿ ಗಂಟೆ 8ಕ್ಕೆ ಹಾಲಿಟ್ಟು ಸೇವೆ ರಾತ್ರಿ 9ರಿಂದ ಚತುಃಪವಿತ್ರ ನಾಗಮಂಡಲೋತ್ಸವ ನಡೆಯಲಿದೆ. ನಿರಂತರ 15ದಿನಗಳ ಪರ್ಯಂತ ಧಾರ್ಮಿಕ ಸಭಾಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಶ್ರೀ ಸಿದ್ಧರಾಮಯ್ಯ, ಹೆ ಚ್ ಡಿ ಕುಮಾರಸ್ವಾಮಿ, ಸಂಸದರುಗಳಾದ ನಳಿನ್ ಕುಮಾರ್ ಕಟೀಲ್, ಶೋಭಾಕರಂದ್ಲಾಜೆ, ರಾಜ್ಯದ ಹಾಲಿ ಹಾಗೂ ಮಾಜಿ ಸಚಿವರು, ಹಾಲಿ ಹಾಗೂ ಮಾಜಿ ಶಾಸಕರು, ರಾಜಕೀಯ ಮುಖಂಡರುಗಳು ಭಾಗವಹಿಸಲಿದ್ದಾರೆ. ವಿವಿಧ ಮಠಾಧೀಶರುಗಳು ಮತ್ತು ಧಾರ್ಮಿಕ ಮುಖಂಡರುಗಳು ಆಶೀರ್ವಚನ ನೀಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭಾರತ ಸರಕಾರ ಪ್ರಸ್ತುತ ಪಡಿಸುವ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಾಂಜವೂರು ಇವರು ಸಾದರ ಪಡಿಸುವ 20 ರಾಜ್ಯಗಳ ಕಲಾವಿದರುಗಳ ಸಾಂಸ್ಕೃತಿಕ ಉತ್ಸವ ಏರ್ಪಡಿಸಲಾಗಿದೆ. ರಾಜ್ಯದ ಹಾಗೂ ಸ್ಥಳೀಯ ಕಲಾವಿದರುಗಳಿಂದ ಪ್ರತೀ ದಿನ ಸಂಜೆ ನೃತ್ಯ ವೈವಿಧ್ಯ, ಯಕ್ಷಗಾನ, ನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಮತ್ತು ಖ್ಯಾತ ಗಾಯಕರೂ, ಸಂಗೀತ ನಿರ್ದೇಶಕರೂ ಆದ ಗಾನಗಂಧರ್ವ ವಿಜಯ ಪ್ರಕಾಶರವರಿಂದ ಸಾಂಸ್ಕೃತಿಕ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿದಿನ ಪೂರ್ವಾಹ್ನ ಗಂಟೆ 11.30 ರಿಂದ ರಾಜ್ಯದ ಖ್ಯಾತ ಕಲಾವಿದರುಗಳಿಂದ ಭಕ್ತಿ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ದ. ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್, ಜಿರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಗುಂಡು ಬಿ ಅಮೀನ್, ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ವಾಸುದೇವ ಸಾಲ್ಯಾನ್, ಸುಧಾಕರ ಕುಂದರ್, ವಾಸುದೇವ ಸಾಲ್ಯಾನ್, ಮೋಹನ್ ಕರ್ಕೇರಾ, ಭರತ್ ಎರ್ಮಾಳ್, ವಿನಯ್ ಕರ್ಕೇರಾ, ಶಂಕರ್ ಸಾಲ್ಯಾನ್, ಮತ್ತಿತರರು ಉಪಸ್ಥಿತರಿದ್ದರು.

ಯುವವಾಹಿನಿ ಕಾಪು ಘಟಕದ 2022 ನೇ ಸಾಲಿನ ಪದಗ್ರಹಣ, ಸಮ್ಮಾನ

Thumbnail
Posted On: 28 Mar 2022, 08:29 PM

ಕಾಪು,ಮಾ.28 : ಯುವವಾಹಿನಿ (ರಿ.) ಕಾಪು ಘಟಕದ 2022ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಕಾಪು ಜೇಸಿಐ ಭವನದಲ್ಲಿ ಜರಗಿತು. ಸಮಾರಂಭವನ್ನು ಕರ್ನಾಟಕ ಸರಕಾರದ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಅತಿಥಿಗಳಾಗಿ ಉಡುಪಿಯ ವಕೀಲರಾದ ಸಂಕಪ್ಪ ಭಾಗವಹಿಸಿದ್ದರು. ಸಮ್ಮಾನ : 2021ನೇ ಸಾಲಿನಲ್ಲಿ ಕಾಪು ಪುರಸಭಾ ಚುನಾವಣೆಯಲ್ಲಿ ವಿಜೇತರಾದ ಬಿಲ್ಲವ ಸಮುದಾಯದ ನಾಲ್ವರು ಸದಸ್ಯರನ್ನು ಸನ್ಮಾನಿಸಲಾಯಿತು. ಪ್ರತಿಜ್ಞಾ ವಿಧಿ ಬೋಧನೆ : ಕಾಪು ಯುವವಾಹಿನಿ ಘಟಕದ 2022 ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ಪ್ರತಿಜ್ಞಾವಿಧಿ ಬೋಧಿಸಿದರು. ಅಧಿಕಾರ ಹಸ್ತಾಂತರ : ಯುವವಾಹಿನಿ ಕಾಪು ಘಟಕದ ಅಧ್ಯಕ್ಷೆ ಸೌಮ್ಯ ರಾಕೇಶ್ ನೂತನ ಅಧ್ಯಕ್ಷರಾದ ಸಚಿನ್ ಉಚ್ಚಿಲ ಇವರಿಗೆ, ಕಾರ್ಯದರ್ಶಿ ಸುಧಾಕರ ಸಾಲಿಯಾನ್ ನೂತನ ಕಾರ್ಯದರ್ಶಿ ಸುಮಿತ್ರಾರವರಿಗೆ ಅಧಿಕಾರ ಹಸ್ತಾಂತರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಪು ಯುವವಾಹಿನಿ ಘಟಕದ ಅಧ್ಯಕ್ಷೆ ಸೌಮ್ಯ ರಾಕೇಶ್ ವಹಿಸಿದ್ದರು. ಕಾಪು ಯುವವಾಹಿನಿ ಘಟಕದ ಗೌರವಾಧ್ಯಕ್ಷ ಪ್ರಭಾಕರ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ದೀಪಕ್ ಕುಮಾರ್ ಏರ್ಮಾಳ್, ಪತ್ರಕರ್ತ ರಾಕೇಶ್ ಕುಂಜೂರು, ಯುವವಾಹಿನಿ ಕೇಂದ್ರ ಸಮಿತಿಯ ಪದಾಧಿಕಾರಿಗಳು, ಘಟಕದ ಸದಸ್ಯರು ಉಪಸ್ಥಿತರಿದ್ದರು.