Updated News From Kaup

ಮನೆ-ನಿವೇಶನ ರಹಿತ ಎಸ್ಸಿ ಕುಟುಂಬಗಳಿಗೆ ತ್ವರಿತ ನಿವೇಶನ ಹಂಚಿಕೆಗೆ ಕ್ರಮ : ಸಚಿವ ಕೋಟ ಶ್ರೀನಿವಾಸ ಪೂಜಾರಿ

Thumbnail
Posted On: 26 Apr 2022, 05:07 PM

ಉಡುಪಿ : ರಾಜ್ಯದಲ್ಲಿ ಮನೆ ನಿವೇಶನ ಹೊಂದಿರದ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಕುಟುಂಬಗಳ ಪಟ್ಟಿಮಾಡಿ ಅವರಿಗೆ ತ್ವರಿತವಾಗಿ ನಿವೇಶನಗಳನ್ನು ಒದಗಿಸಲು ನಮ್ಮ ಸಮಾಜ ಕಲ್ಯಾಣ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ನಾಲ್ಕು ವಿಭಾಗಗಳ ಒಂದೊಂದು ಜಿಲ್ಲೆಯನ್ನು ಮಾದರಿಯಾಗಿ ಆಯ್ಕೆ ಮಾಡಲಾಗಿದೆ. ರಾಜ್ಯಾದ್ಯಂತ ಪರಿಶಿಷ್ಟ ಜಾತಿಯ ಮನೆ/ನಿವೇಶನ ರಹಿತ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಕುಟುಂಬಗಳಿಗೆ ಮನೆ ನಿವೇಶನಗಳನ್ನು ನೀಡಬೇಕು. ಈ ಮಹತ್ವದ ಕಾರ್ಯವನ್ನು ನಡೆಸಲು ಆರಂಭಿಕವಾಗಿ ನಾಲ್ಕು ವಿಭಾಗಗಳಲ್ಲಿ ಅತೀ ಹೆಚ್ಚು ಜನಸಂಖ್ಯೆ ಇರುವ ನಾಲ್ಕು ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರು ವಿಭಾಗದಲ್ಲಿ ಚಿತ್ರದುರ್ಗ, ಮೈಸೂರು ವಿಭಾಗದಲ್ಲಿ ಚಾಮರಾಜ ನಗರ, ಕಲಬುರ್ಗಿ ವಿಭಾಗದಲ್ಲಿ ರಾಯಚೂರು ಮತ್ತು ಬೆಳಗಾವಿ ವಿಭಾಗದಲ್ಲಿ ಹಾವೇರಿ ಜಿಲ್ಲೆಯಲ್ಲಿ ಇದನ್ನು ಪೈಲಟ್ ಆಗಿ ಅನುಷ್ಠಾನಿಸಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ರಾಜ್ಯದಲ್ಲೀಗ ಒಟ್ಟು 5.46 ಲಕ್ಷ ಕುಟುಂಬಗಳು ಮನೆ ನಿವೇಶನ ಹೊಂದಿಲ್ಲ. ಅವರಿಗೆ ಭೂಮಿ ಕೊಡುವುದು ಸರಕಾರದ ಜವಾಬ್ದಾರಿ. ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಆದ್ಯತೆಯಲ್ಲಿ ಶೀಘ್ರ ಮನೆ ಒದಗಿಸಲು, ಆಯ್ದ ಜಿಲ್ಲೆಗಳಲ್ಲಿ ಸರಕಾರಿ ಭೂಮಿ ಲಭ್ಯತೆ, ಮನೆ ನಿವೇಶನ ರಹಿತ ಪರಿಶಿಷ್ಟ ಜಾತಿ ಸಮುದಾಯದ ಕುಟುಂಬಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಬಳಿಕ ಪ್ರತೀ ಜಿಲ್ಲೆಗೂ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ನಿವೇಶನ ಒದಗಿಸಲು ಮಾರ್ಗಸೂಚಿಗಳಲ್ಲಿ ಸಡಿಲಿಕೆ ಮಾಡಿ, ಫಲಾನುಭವಿಗಳಿಗೆ ಅನುಕೂಲವಾಗುವಂತೆ ಕ್ರಮವಹಿಸಬೇಕೆಂದು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು. ಸಭೆಯಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಸಲಹೆಗಾರ ನಿವೃತ್ತ ಅಧಿಕಾರಿ ವೆಂಕಟಯ್ಯ, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ಪಿ., ಆಯುಕ್ತ ರಾಕೇಶ್ ಕುಮಾರ್, ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮದ ವ್ಯವಸ್ಥಾಪಕ ಬಸವರಾಜ್, ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತರ ಸಹಿತ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಸುರೇಶ್ ಎರ್ಮಾಳ್ ಆಯ್ಕೆ

Thumbnail
Posted On: 26 Apr 2022, 02:43 PM

ಕಾಪು : ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನ ಸಂಸ್ಥೆಯಾದ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಸುರೇಶ್ ಎರ್ಮಾಳ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಪ್ರಧಾನ ಕಾರ್ಯದರ್ಶಿಯಾಗಿ ಪುಂಡಲೀಕ ಮರಾಠ, ಉಪಾಧ್ಯಕ್ಷರಾಗಿ ಹರೀಶ್ ಕಟಪಾಡಿ, ಕೋಶಾಧಿಕಾರಿಯಾಗಿ ಅಬ್ದುಲ್ ಹಮೀದ್,ಜೊತೆ ಕಾರ್ಯದರ್ಶಿ ವಿಜಯ ಆಚಾರ್ಯ, ಕ್ರೀಡಾ ಕಾರ್ಯದರ್ಶಿ ಸಂತೋಷ ನಾಯ್ಕ ಆಯ್ಕೆಯಾಗಿದ್ದಾರೆ. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಅಧ್ಯಕ್ಷರಾದ ಅಲೆವೂರು ರಾಜೇಶ್ ಶೆಟ್ಟಿ ನೂತನ ಪಧಾದಿಕಾರಿಗಳನ್ನು ಘೋಷಣೆ ಮಾಡಿದರು. ಕಾಪು ತಾಲೂಕು ನಿಕಟಪೂರ್ವ ಅಧ್ಯಕ್ಷ ರಾಕೇಶ್ ಕುಂಜೂರು, ನಿಕಟಪೂರ್ವ ಕಾರ್ಯದರ್ಶಿ ಶಫಿ ಉಚ್ಚಿಲ ಉಪಸ್ಥಿತರಿದ್ದರು.

ಸಾಹಿತ್ಯ ಬದುಕನ್ನು ಉತ್ತಮಗೊಳಿಸುತ್ತದೆ - ಗುರ್ಮೆ ಸುರೇಶ್ ಶೆಟ್ಟಿ

Thumbnail
Posted On: 25 Apr 2022, 08:55 PM

ಉಡುಪಿ : ಅನಾದಿ ಕಾಲದಿಂದಲೂ ತುಳುವರು ಭಾವನಾತ್ಮಕವಾದ ಬದುಕನ್ನು ಕಟ್ಟಿಕೊಂಡವರು, ಪ್ರಕೃತಿಯನ್ನು ಆರಾಧಿಸುತಿದ್ದವರು. ಆದರೇ ಇಂದು ಮನೆಗಳು ದೊಡ್ಡದಾಗಿವೆ, ಆದರೇ ಮನಸ್ಸುಗಳು ಚಿಕ್ಕದಾಗುತ್ತಿವೆ. ತುಳುವರಲ್ಲಿಯೂ ಕೌಟುಂಬಿಕ ಶಿಥಿಲತೆ ಕಾಣಲಾರಂಭಿಸಿದೆ ಎಂದು ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ವಿಷಾದ ವ್ಯಕ್ತಪಡಿಸಿದರು. ಅವರು ಉಡುಪಿ ತುಳುಕೂಟದ 27ನೇ ವರ್ಷದ ಪಣಿಯಾಡಿ ಕಾದಂಬರಿ ಪ್ರಶಸ್ತಿ ಪಡೆದ, ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕಿ ಪ್ರೊ. ಅಕ್ಷಯಾ ಆರ್. ಶೆಟ್ಟಿ ಅವರ ದೆಂಗ ಕಾದಂಬರಿಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಉತ್ತಮ ಸಾಹಿತ್ಯದಿಂದ ಬದುಕನ್ನು ಉತ್ತಮಗೊಳಿಸಲು ಸಾಧ್ಯವಿದೆ. ಕಾದಂಬರಿ ಎಂಬುದು ಜನರ ನಡುವಿನ ಮಾತು ಘಟನೆಗಳೇ ಆಗುತ್ತವೆ. ಆದ್ದರಿಂದ ತುಳುಕೂಟವು ತುಳು ಭಾಷೆಯಲ್ಲಿ ಕಾದಂಬರಿಗಳನ್ನು ಬರೆಯುವುದಕ್ಕೆ ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯವಾದುದು ಎಂದರು. ಪ್ರೊ. ಅಕ್ಷಯಾ ಆರ್. ಶೆಟ್ಟಿ ಅವರಿಗೆ ಜನಪದ ವಿದ್ವಾಂಸ ಕೆ.ಎಲ್.ಕುಂಡಂತಾಯ ಅವರು ಪ್ರಶಸ್ತಿ ನೀಡಿ ಸನ್ಮಾನಿಸಿದರು. ಕಾದಂಬರಿಯನ್ನು ಡಾ.ನಿಕೇತನ ಅವರು ಪರಿಚಯಿಸಿದರು. ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು. ದಾನಿ ವಿಶ್ವನಾಥ ಶೆಣೈ, ಪ್ರ.ಕಾರ್ಯದರ್ಶಿ ಗಂಗಾಧರ ಕಿದಿಯೂರು, ಖಜಾಂಚಿ ಎಂ.ಜಿ.ಚೈತನ್ಯ, ಉಪಾಧ್ಯಕ್ಷೆ ಮನೋರಮಾ ಶೆಟ್ಟಿ ವೇದಿಕೆಯಲ್ಲಿದ್ದರು. ಕಾದಬಂರಿ ಪ್ರಶಸ್ತಿ ಸಮಿತಿ ಸಂಚಾಲಕಿ ತಾರಾ ಉಮೇಶ್ ಆಚಾರ್ಯ ಸ್ವಾಗತಿಸಿದರು, ಸರೋಜಾ ಯಶವಂತ್ ಮತ್ತು ರಶ್ಮಿ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಯಶೋಧಾ ಕೇಶವ್ ಮತ್ತು ವೇದಾವತಿ ಸಹಕರಿಸಿದರು.

ಕಾಪು : ಕಾಂಗ್ರೆಸ್ ವತಿಯಿಂದ ಸೌಹಾರ್ದ ಸಮಾರಂಭ ಹಾಗೂ ಇಫ್ತಾರ್ ಕೂಟ

Thumbnail
Posted On: 24 Apr 2022, 05:15 PM

ಕಾಪು : ಬ್ಲಾಕ್ ಕಾಂಗ್ರೆಸ್ ಸಮಿತಿ, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ, ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಕಾಪು (ದ) ಇದರ ಸಹಯೋಗದೊಂದಿಗೆ ಸೌಹಾರ್ದ ಸಮಾರಂಭ ಹಾಗೂ ಇಫ್ತಾರ್ ಕೂಟವು ಏಪ್ರಿಲ್‌ 27ರ ಸಂಜೆ 4:30 ಕ್ಕೆ ಕಾಪುವಿನ ಕೊಪ್ಪಲಂಗಡಿಯ ಕಮ್ಯುನಿಟಿ ಹಾಲ್ ನಲ್ಲಿ ಸಭಾ ಕಾರ್ಯಕ್ರಮದೊಂದಿಗೆ ಜರಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏಪ್ರಿಲ್‌ 29 : ಶ್ರೀ ದೇವಿ ಭಜನಾ ಮಂಡಳಿ ಮಂಡೇಡಿ ಇನ್ನಂಜೆ - ವಾರ್ಷಿಕ ಭಜನಾ ಮಂಗಳೋತ್ಸವ

Thumbnail
Posted On: 24 Apr 2022, 05:03 PM

ಕಾಪು : ತಾಲೂಕಿನ ಮಂಡೇಡಿ ಇನ್ನಂಜೆಯ ಶ್ರೀ ದೇವಿ ಭಜನಾ ಮಂಡಳಿ ಇದರ ವಾರ್ಷಿಕ ಭಜನಾ ಮಂಗಳೋತ್ಸವ ಏಪ್ರಿಲ್‌ 29 ರಂದು ಜರಗಲಿದೆ. ಏಪ್ರಿಲ್ 29, ಶುಕ್ರವಾರದಂದು ಬೆಳಿಗ್ಗೆ ಗಂಟೆ 10ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಗಂಟೆ 12ಕ್ಕೆ ಪ್ರಸಾದ ವಿತರಣೆ, ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ, ಸಾಯಂಕಾಲ ಗಂಟೆ 6ರಿಂದ ದೀಪ ಪ್ರತಿಷ್ಠೆಯೊಂದಿಗೆ ಭಜನೆ ಆರಂಭ, ರಾತ್ರಿ ಗಂಟೆ 12-30ಕ್ಕೆ ಭಜನಾ ಮಂಗಳೋತ್ಸವ ಜರಗಲಿದೆ. ಭಜನಾ ಮಂಗಳೋತ್ಸವದಲ್ಲಿ ಶ್ರೀ ದೇವಿ ಭಜನಾ ಮಂಡಳಿಯ ಮಹಿಳಾ ಸದಸ್ಯರು, ಮಂಡೇಡಿ, ಶಿಮಂತೂರು ಶ್ರೀ ಆದಿಜನಾರ್ದನ ಮಕ್ಕಳ ಕುಣಿತ ಭಜನಾ ಮಂಡಳಿ, ಮುಲ್ಕಿ, ಇನ್ನಂಜೆಯ ಯುವತಿ ಮಂಡಲ ಸದಸ್ಯರಿಂದ ಕುಣಿತ ಭಜನೆ, ಶ್ರೀ ಮಹಾಲಸ ನಾರಾಯಣಿ ಭಜನಾ ಮಂಡಳಿ ಶಿರ್ವ, ಶ್ರೀ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಕರಂದಾಡಿ, ಶ್ರೀ ಸರಸ್ವತಿ ಭಜನಾ ಮಂಡಳಿ ಸರಸ್ವತಿನಗರ ಪಾಂಗಾಳ, ಶ್ರೀ ದೇವಿ ಭಜನಾ ಮಂಡಳಿ, ಮಂಡೇಡಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಟಪಾಡಿ ಟ್ರಾಫಿಕ್ ಸಮಸ್ಯೆ, ಮುಗಿಯದ ಗೋಳು, ಮುಕ್ತಿ ಎಂದು ?

Thumbnail
Posted On: 24 Apr 2022, 03:45 PM

ಕಟಪಾಡಿ : ಕಾಪು ತಾಲೂಕಿನ ಕಟಪಾಡಿ ಮುಖ್ಯ ಜಂಕ್ಷನ್ ನ ಟ್ರಾಫಿಕ್ ಸಮಸ್ಯೆಯು ವಾಹನ ಸವಾರರಿಗೆ ಮುಗಿಯದ ಗೋಳಾಗಿದೆ. ವಿಶೇಷ ದಿನಗಳಲ್ಲಿ ಇಲ್ಲಿ ಪ್ರತಿದಿನಕ್ಕಿಂತ ಅಧಿಕ ವಾಹನಗಳು ಓಡಾಟ ಕಾಣಬಹುದು ಅಂತಹ ಸಂದರ್ಭ ಟ್ರಾಫಿಕ್ ನಿವಾರಣೆಗೆ ಒಂದಷ್ಟು ಪೋಲಿಸರ ಅಗತ್ಯ ಈ ಸ್ಥಳದಲ್ಲಿದೆ. ಏಪ್ರಿಲ್‌ 24 ರಂದು ಮಧ್ಯಾಹ್ನದ ಸಮಯ ಸುಮಾರು ಒಂದು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಸಮಸ್ಯೆಯಿಂದ ವಿವಿಧ ಕಾರ್ಯಕ್ರಮಗಳಿಗೆ ತೆರಳಬೇಕಿದ್ದ ಮಂದಿ ಸಕಾಲದಲ್ಲಿ ತಲುಪಲು ಹರಸಾಹಸ ಪಡಬೇಕಾಯಿತು. ನಾಲ್ಕು ಕಡೆಗಳಿಂದ ಬರುವ ವಾಹನಗಳಿಗೆ ಇಬ್ಬರು ಟ್ರಾಫಿಕ್ ‌ಪೋಲಿಸರು ಇದ್ದರೂ ಕೂಡಾ ವಾಹನ ದಟ್ಟನೆಯನ್ನು ಕಡಿಮೆ ಮಾಡಲು ಅಸಾಧ್ಯವಾಯಿತು. ಈ ಸಂದರ್ಭದಲ್ಲಿ ಸಾರ್ವಜನಿಕರೇ ಮುಂದೆ ನಿಂತು ಟ್ರಾಫಿಕ್ ನಿಯಂತ್ರಣ ಮಾಡಿದ್ದಾರೆ. ಪ್ರತಿಷ್ಟಿತರು ಬರುವಾಗ ಟ್ರಾಫಿಕ್ ಸಮಸ್ಯೆಯನ್ನು ಕೂಡಲೇ ಬಗೆಹರಿಸುವ ಪೋಲಿಸರಿಗೆ ಇದೀಗ ಜನಸಾಮಾನ್ಯರ ಗೋಳು ಕಾಣುವುದಿಲ್ಲವೇ ? ಇಲಾಖೆಗಳು ಈ ಟ್ರಾಫಿಕ್ ಸಮಸ್ಯೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಅಜ್ಜಮ್ಮ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ವತಿಯಿಂದ ಅಜ್ಜಮ್ಮ ಟ್ರೋಫಿ - ಸಮಾರೋಪ ಸಮಾರಂಭ

Thumbnail
Posted On: 21 Apr 2022, 10:53 PM

ಉಡುಪಿ : ಅಜ್ಜಮ್ಮ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ಇದರ ಅಜ್ಜಮ್ಮ ಟ್ರೋಫಿಯ ಸಮಾರೋಪ ಸಮಾರಂಭವು ಬೀಡಿನಗುಡ್ಡೆ ಮಹಾತ್ಮಗಾಂಧಿ ಮೈದಾನದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಮಂಜು ಕೊಳ, ರಿಕೇಶ್ ಪಾಲನ್ ಕಡೆಕಾರ್, ಕೃಷ್ಣಮೂರ್ತಿ ಆಚಾರ್ಯ, ಜೀವನ್ ಪಾಳೆಕಟ್ಟೆ, ಅರವಿಂದ್ ಕೆಪಿ, ಗಂಗಾಧರ್ ಸುವರ್ಣ, ಸತೀಶ್ ಸಾಲಿಯಾನ್, ಸಬಿತಾ ಕೊರಗ ಪಾಲ್ಗೊಂಡರು. ಅಜ್ಜಮ್ಮ ಟ್ರೋಫಿಯ ಪ್ರಥಮ ಬಹುಮಾನ ಕರಾವಳಿ ಫ್ರೆಂಡ್ಸ್ ಮಲ್ಪೆ, ದ್ವಿತೀಯ ಬಹುಮಾನ ಜೈ ಮಾರುತಿ ಕಟಪಾಡಿ ಪಡೆದುಕೊಂಡರು. ರವಿ ಕಡಿಯಾಳಿ ಕಾರ್ಯಕ್ರಮ ನಿರೂಪಿಸಿದರು. ಕ್ಲಬ್ ನ ಅಧ್ಯಕ್ಷರಾದ ಸುಹಾನ್ ಕಾಂಚನ್ ವಂದಿಸಿದರು.

ನಾಂಜಾರು ಶ್ರೀ ಧರ್ಮ ಜಾರಂದಾಯ ದೈವಸ್ಥಾನ ಪಣಿಯೂರು : ಶ್ರೀ ಧರ್ಮ ಜಾರಂದಾಯ ಹಾಗೂ ಪರಿವಾರ ದೈವಗಳ ವಾರ್ಷಿಕ ಸಿರಿ-ಸಿಂಗಾರದ ನೇಮ

Thumbnail
Posted On: 21 Apr 2022, 05:35 AM

ಕಾಪು : ಇಲ್ಲಿನ ಪಣಿಯೂರು ನಾಂಜಾರು ಶ್ರೀ ಧರ್ಮ ಜಾರಂದಾಯ ದೈವಸ್ಥಾನದಲ್ಲಿ ಶ್ರೀ ಧರ್ಮ ಜಾರಂದಾಯ ಹಾಗೂ ಪರಿವಾರ ದೈವಗಳ ವಾರ್ಷಿಕ ಸಿರಿ-ಸಿಂಗಾರದ ನೇಮವು ಏಪ್ರಿಲ್ 21ರಂದು ಜರಗಲಿದೆ. ಬೆಳಿಗ್ಗೆ ಗಂಟೆ 12ರಿಂದ ಚಪ್ಪರ ಏರುವುದು, ಸಂಜೆ 5:30ಕ್ಕೆ ಭಂಡಾರ ಇಳಿಯುವುದು, ರಾತ್ರಿ ಗಂಟೆ 7: 30ರಿಂದ ಅನ್ನಸಂತರ್ಪಣೆ, ರಾತ್ರಿ ಗಂಟೆ 9 ರಿಂದ ಸಿರಿ-ಸಿಂಗಾರದ ನೇಮ, ರಾತ್ರಿ ಗಂಟೆ 1ರಿಂದ ಶ್ರೀ ಧರ್ಮ ಜಾರಂದಾಯ ದೈವದ ಬಂಡಿ ಸವಾರಿ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಾಪು‌ ಮಂಡಲ ಬಿಜೆಪಿ ಯುವಮೋರ್ಚದಿಂದ ಯೋಧರ ಸನ್ಮಾನ

Thumbnail
Posted On: 21 Apr 2022, 05:17 AM

ಕಾಪು : ಸ್ವಾತಂತ್ರ್ಯದ ಅಮ್ರತ ಮಹೋತ್ಸವದ ನಿಮಿತ್ತ ಕಾಪು‌ ಮಂಡಲ ಬಿಜೆಪಿ ಯುವಮೋರ್ಚ ವತಿಯಿಂದ ಏಪ್ರಿಲ್ 19ರಂದು ಅಧ್ಯಕ್ಷರಾದ ಸಚಿನ್ ಸುವರ್ಣ ಇವರ ನೇತೃತ್ವದಲ್ಲಿ ಯೋಧರನ್ನು ಸನ್ಮಾನಿಸುವ ಕಾರ್ಯಕ್ರಮ‌ ಜರಗಿತು. ಕಾಪು ಪುರಸಭಾ ವ್ಯಾಪ್ತಿಯಲ್ಲಿ 4 ಜನ ಯೋಧರನ್ನು ಗುರುತಿಸಿ ಅವರ ಮನೆಗೆ ತೆರಳಿ ಗೌರವಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಮೋರ್ಚ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ, ಕಾಪು ಮಂಡಲ ನಿಕಟಪೂರ್ವ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ, ಕಾಪು‌ ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ಬಿಜೆಪಿ ಕಾಪು ಕ್ಷೇತ್ರ ಅಧ್ಯಕ್ಷರಾದ ಶ್ರೀಕಾಂತ ನಾಯಕ್, ಮಂಡಲ ಕಾರ್ಯದರ್ಶಿ ರಾಜೇಶ್ ಕುಂದರ್, ಪುರಸಭಾ ಸದಸ್ಯರುಗಳಾದ ಅನಿಲ್ ಕುಮಾರ್, ಅರುಣ್ ಶೆಟ್ಟಿ, ಯುವಮೋರ್ಚ ಜಿಲ್ಲಾ ಹಾಗೂ ಮಂಡಲ ಪದಾಧಿಕಾರಿಗಳಾದ ಪ್ರವೀಣ್ ಕುಮಾರ್, ಯತೀಶ್ ಕೋಟ್ಯನ್, ಸೋನು ಪಾಂಗಳ,ಉದಯ್, ರಾಜ್, ವಿನಿಶ್, ಧೀರೇಶ್ ಮತ್ತಿತರರು ಉಪಸ್ಥಿತರಿದ್ದರು.

ಮೇ 1 : ಉಡುಪಿಯ ಕೃಷ್ಣ ಮಠದ ರಾಜ್ಯಾಂಗಣದಲ್ಲಿ ರಾಜ್ಯ ಮಟ್ಟದ ಭಜನಾ ಕಮ್ಮಟ - ಗುರುವಂದನೆ

Thumbnail
Posted On: 21 Apr 2022, 05:07 AM

ಉಡುಪಿ : ಶ್ರೀ ಕ್ರಷ್ಣ ಮಠ ಪರ್ಯಾಯ ಶ್ರೀ ಕ್ರಷ್ಣಾಪುರ ಮಠ ಉಡುಪಿ, ಇದರ ಆಶ್ರಯದಲ್ಲಿ, ಮೋಹಿನಿ ಭಟ್ ಮಂಜೇಶ್ವರ ಮತ್ತು ಮಾಯಾ ಕಾಮತ್ ಈಶ್ವರ ನಗರ ಮಣಿಪಾಲ, ಶ್ರೀ ಮಹಾಮಾಯಾ ಭಜನಾ ಮಂಡಳಿ ಈಶ್ವರನಗರ ಮಣಿಪಾಲ, ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಕರ್ವಾಲು, ಅಲೆವೂರು, ಪರಿವರ್ತನಾ ಫೌಂಡೇಶನ್ ಮಣಿಪಾಲ ಇದರ ಸಹಯೋಗದಲ್ಲಿ ರಾಜ್ಯ ಮಟ್ಟದ ಭಜನಾ ಕಮ್ಮಟ - ಗುರುವಂದನೆ ಮೇ 1 ರಂದು ಬೆಳಿಗ್ಗೆ 9ಗಂಟೆಗೆ ಉಡುಪಿಯ ಕೃಷ್ಣ ಮಠದ ರಾಜ್ಯಾಂಗಣದಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಆಯೋಜಕರಿಂದ ಪರ್ಯಾಯ ಶ್ರೀ ಕ್ರಷ್ಣಾಪುರ ಮಠಾಧೀಶರಾದ ವಿದ್ಯಾಸಾಗರತೀರ್ಥ ಶ್ರೀಗಳಿಗೆ ನೀಡಲಾಯಿತು. ಭಜನಾ ಗುರುತಿಲಕ, ಗಾನಕಲಾ ರತ್ನ, ದಾಸಸಿಂಚನ ಕಾರ್ಯಕ್ರಮದ ಮೂಲಕ ಮನೆ ಮನೆಗಳಲ್ಲಿ ಭಕ್ತಿಯ ಕುಸುಮ ಅರಳಿಸುತ್ತಿರುವ ಎಮ್ ಎಸ್ ಗಿರಿಧರ್ ಇವರ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಎಮ್ ಎಸ್ ಗಿರಿಧರ್ ರವರು ದಾಸಸಿಂಚನದ ಮೂಲಕ ಸಾವಿರಕ್ಕೂ ಅಧಿಕ ಮನೆ ಮನೆ ಭೇಟಿ ಮಾಡಿ ಭಜನಾ ಕಾರ್ಯಕ್ರಮ ನಡೆಸಿರುವ ಸಾವಿರದ ಮೈಲಿಗಲ್ಲು ದಾಟಿದ ಸುಸಂದರ್ಭದಲ್ಲಿ ಅವರ ಶಿಷ್ಯೋತ್ತಮೆ ಮಾಯಾ ಕಾಮತ್ ಹಾಗೂ ಶಿಷ್ಯವೃಂದದವರೆಲ್ಲ ಸೇರಿ ಗೌರವಾರ್ಪಣೆ ಮಾಡುವ ಕಾರ್ಯಕ್ರಮ ಹಾಗೂ ಅವರಿಂದಲೇ ರಾಜ್ಯ ಮಟ್ಟದ ಭಜನಾ ಕಮ್ಮಟ ಕಾರ್ಯಕ್ರಮ ಆಯೋಜಿಸಲಾಗಿದೆ. ಈಗಾಗಲೇ ಕಾರ್ಯಕ್ರಮಕ್ಕೆ ಐವತ್ತಕ್ಕೂ ಹೆಚ್ಚು ಭಜನಾ ಮಂಡಳಿಗಳು ತಮ್ಮ ಭಾಗವಹಿಸುವಿಕೆಯ ಕುರಿತು ಹೆಸರು ನೋಂದಾಯಿಸಿದ್ದು, ಸಾವಿರಕ್ಕೂ ಅಧಿಕ ಭಗವದ್ಭಕ್ತರನ್ನು ಒಗ್ಗೂಡಿಸಿ ನಾಮಸ್ಮರಣೆ ಮಾಡುವ ಬಹಳ ದೊಡ್ಡ ಯೋಜನೆ ಇದಾಗಿದ್ದು ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮೊಂದಿಗೆ ಕೈ ಜೋಡಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ರೂವಾರಿ ಮಾಯಾ ಕಾಮತ್, ಕಾಪು ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ ನಾಯಕ್, ಪರಿವರ್ತನಾ ಫೌಂಡೇಶನ್ ಅಧ್ಯಕ್ಷರಾದ ಮೋಹನ್ ಭಟ್, ಉದ್ಯಮಿಗಳಾದ ಐರೋಡಿ ಸಹನಶೀಲ ಪೈ, ವಿದ್ಯಾ ಮೋಹನ್ ಭಟ್ ಉಪಸ್ಥಿತರಿದ್ದರು.