Updated News From Kaup

ಬಿಜೆಪಿ ಕಾಪು ವಿಧಾನ ಸಭಾ ಕ್ಷೇತ್ರ : ಸಮರ್ಪಣಾ ದಿನ

Thumbnail
Posted On: 12 Feb 2022, 08:33 PM

ಕಾಪು : ಪಂಡಿತ್ ದೀನ ದಯಾಳ್ ಇವರ ಬಲಿದಾನ ದಿನವಾದ ಇಂದು ಸಮರ್ಪಣಾ ದಿನವನ್ನಾಗಿ ಕಾಪು ಕ್ಷೇತ್ರದ 8 ಮಹಾಶಕ್ತಿಕೇಂದ್ರಗಳಾದ ಪಡುಬಿದ್ರಿ, ಉಚ್ಚಿಲ, ಶಿರ್ವ, ಕಾಪು, ಕುರ್ಕಾಲು, ಉದ್ಯಾವರ, 80 ಬಡಗುಬೆಟ್ಟು ಹಾಗೂ ಪೆರ್ಡೂರಿನಲ್ಲಿ ಆಚರಿಸಲಾಯಿತು. ಪಂಡಿತ್ ದೀನ್ ದಯಾಳ್ ಇವರ ಕುರಿತು ಉಪನ್ಯಾಸ ನೀಡಲಾಯಿತು. ಪಕ್ಷದ ವಿವಿಧ ಸ್ತರದ ನಾಯಕರುಗಳು, ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ

Thumbnail
Posted On: 11 Feb 2022, 11:42 PM

ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ರಾಜ್ಯ ಪೊಲೀಸ್ ಇಲಾಖೆಯು ಕರ್ನಾಟಕ ಕೈಗಾರಿಕೆ ಭದ್ರತಾ ಪಡೆಯಲ್ಲಿ ಖಾಲಿ ಇರುವ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಪುರುಷ, ಮಹಿಳೆ ಮತ್ತು ತೃತೀಯ ಲಿಂಗಿಯ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಮಾರ್ಚ್ 3 ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. 63 ಹುದ್ದೆಗಳ ಪೈಕಿ ಪುರುಷ ಅಭ್ಯರ್ಥಿಗಳಿಗೆ 40, ಮಹಿಳೆಯರಿಗೆ 12, ಸೇವೆಯಲ್ಲಿರುವವರಿಗೆ 9 ಹಾಗೂ ತೃತೀಯ ಲಿಂಗದ ಅಭ್ಯರ್ಥಿಗಳಿಗೆ 2 ಹುದ್ದೆಯನ್ನು ಮೀಸಲಿಡಲಾಗಿದೆ. ವಯೋಮಿತಿ : ಯಾವುದೇ ಪದವಿ ಪಡೆದವರು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 21 ವರ್ಷ ಹಾಗೂ ಗರಿಷ್ಠ ವಯೋಮಿತ 26 ವರ್ಷ ಎಂದು ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 28 ವರ್ಷಗಳಾಗಿವೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್ ಸೈಟ್ CLICK HERE.. ಗೆ ಭೇಟಿ ನೀಡಬಹುದು.

ವಿಧಾನ ಪರಿಷತ್​ ಸಭಾನಾಯಕನಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನಾಮನಿರ್ದೇಶನ

Thumbnail
Posted On: 11 Feb 2022, 11:30 PM

ಬೆಂಗಳೂರು : ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ವಿಧಾನ ಪರಿಷತ್​ ಸಭಾನಾಯಕನಾಗಿ ನಾಮನಿರ್ದೇಶನ ಮಾಡಲಾಗಿದೆ. ಈ ಬಾರಿಯೂ ಸಭಾ ನಾಯಕರಾಗಿ ನಾಮನಿರ್ದೇಶನ ಮಾಡಿ ಸಭಾಪತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಜೂನ್‌ ವೇಳೆಗೆ ವಿಧಾನ ಪರಿಷತ್ ಚುನಾವಣೆ ನಡೆಯಲಿದೆ. ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಉಡುಪಿ ಬೊಬ್ಬರ್ಯ ಯುವಸೇವಾ ಸಮಿತಿಯಿಂದ ಹೊರೆಕಾಣಿಕೆ ಸಮರ್ಪಣೆ

Thumbnail
Posted On: 11 Feb 2022, 11:23 PM

ಉಡುಪಿ : ಕುಕ್ಕೆಹಳ್ಳಿ ಕೊರಗಜ್ಜ ದೈವಸ್ಥಾನದಲ್ಲಿ ಫೆಬ್ರವರಿ 12ರ ಶನಿವಾರದಂದು ನಡೆಯಲಿರುವ ವಾರ್ಷಿಕ ನೇಮೋತ್ಸವಕ್ಕೆ ಉಡುಪಿ ಬೊಬ್ಬರ್ಯ ಯುವಸೇವಾ ಸಮಿತಿಯಿಂದ ಹೊರೆಕಾಣಿಕೆ ಸಲ್ಲಿಸಲಾಯಿತು. ಈ ಸಂದರ್ಭ ಬೊಬ್ಬರ್ಯ ಯುವಸೇವಾ ಸಮಿತಿಯ ಅಧ್ಯಕ್ಷರಾದ ವರದರಾಜ ಕಾಮತ್ ತುಳುನಾಡಿನ ಧ್ವಜವನ್ನು ಬೀಸುವ ಮೂಲಕ ಹೊರೆಕಾಣಿಕೆಯ ವಾಹನಕ್ಕೆ ಚಾಲನೆ ನೀಡಿದರು. ಬೊಬ್ಬರ್ಯ ಯುವ ಸೇವಾ ಸಮಿತಿ ಹಾಗೂ ಕೊರಗಜ್ಜ ಯುವ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ವಿನೋದ್ ಶೆಟ್ಟಿ ಮತ್ತು ರವಿ ಶೆಟ್ಟಿ, ಸಂತೋಷ್, ನಾಗರಾಜ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

ನಿರ್ಲಕ್ಷ್ಯತನದ ಚಾಲನೆ ಸ್ಕೂಟರ್ ಸವಾರನಿಗೆ ಗಂಭೀರ ಗಾಯ

Thumbnail
Posted On: 11 Feb 2022, 11:17 PM

ಮೂಡಬಿದ್ರಿ : ಇಲ್ಲಿನ ವಿದ್ಯಾಗಿರಿ ಎಂಬಲ್ಲಿ ಮೂಲ್ಕಿ ಕ್ರಾಸ್ ರಸ್ತೆಯ ಬಳಿ ಕಾರಿನ ನಿರ್ಲಕ್ಷ್ಯತನದ ಚಾಲನೆಯದ ಸ್ಕೂಟರ್ ಸವಾರನಿಗೆ ಗಂಭೀರ ಗಾಯಗೊಂಡ ಘಟನೆ ಫೆಬ್ರವರಿ 9ರಂದು ನಡೆದಿದೆ. ಚಾಲಕ ಕಾರನ್ನು ಮೂಡಬಿದ್ರೆ ಕಡೆಯಿಂದ ಚಲಾಯಿಸಿಕೊಂಡು ಬಂದು ಮೂಲ್ಕಿ ಕ್ರಾಸ್ ರಸ್ತೆಗೆ ತಿರುಗಿಸಿ ನಂತರ ಏಕಾಏಕಿಯಾಗಿ ಪುನಃ ಮಂಗಳೂರು ಕಡೆಗೆ ಹೋಗುವ ರಸ್ತೆಗೆ ನಿರ್ಲಕ್ಷ್ಯತನದಿಂದ ತಿರುಗಿಸಿದ ಪರಿಣಾಮ ಮಂಗಳೂರು ಕಡೆಯಿಂದ ಸ್ಕೂಟರ್ನಲ್ಲಿ ಬರುತ್ತಿದ್ದ ಸಹೋದರರಾದ ಮೊಹಮ್ಮದ್ ರಿಜ್ವಾನ್ ಮತ್ತು ಮೊಹಮ್ಮದ್ ಸಾಹುಲ್ ಹಮೀದ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೊಹಮ್ಮದ್ ಸಾಹುಲ್ ಹಮೀದ್ ನಿಗೆ ಎರಡು ಕೈಗಳಿಗೆ ಮೂಳೆ ಮುರಿತದ ಗಾಯಗಳಾಗಿರುವುದು ಅಲ್ಲದೇ ದೇಹದ ಭಾಗಗಳಿಗೂ ಗಾಯವಾಗಿದೆ. ಗಾಯಾಳುವನ್ನು ಚಿಕಿತ್ಸೆಗಾಗಿ ಮೂಡಬಿದ್ರೆಯ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಜಾಬ್- ಕೇಸರಿ ವಿವಾದದ ಹಿನ್ನೆಲೆ-ಕಾಪು ಪೇಟೆಯಲ್ಲಿ ಪೊಲೀಸ್ ಪಥಸಂಚಲನ

Thumbnail
Posted On: 11 Feb 2022, 01:28 PM

ಕಾಪು : ಹಿಜಾಬ್- ಕೇಸರಿ ವಿವಾದದ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಕಾಪು ವೃತ್ತ ವ್ಯಾಪ್ತಿಯ ಪೊಲೀಸರು ಕಾಪು ಪೇಟೆಯಲ್ಲಿಂದು ಬೆಳಗ್ಗೆ ಪಥ ಸಂಚಲನ ನಡೆಸಿದರು. ಕಾಪು ವೃತ್ತ ನಿರೀಕ್ಷಕ ಪ್ರಕಾಶ್ ನೇತೃತ್ವದಲ್ಲಿ ಕಾಪು, ಪಡುಬಿದ್ರೆ, ಶಿರ್ವ ಠಾಣಾ ವ್ಯಾಪ್ತಿಯ ಸುಮಾರು 90 ಪೊಲೀಸರು ಈ ಪಥ ಸಂಚಲನದಲ್ಲಿ ಭಾಗಿಯಾಗಿದ್ದರು. ಪಡುಬಿದ್ರಿ ಎಸೈ ಅಶೋಕ್ ಕುಮಾರ್, ಶಿರ್ವ ಎಸೈ ಶ್ರೀಶೈಲಾ, ಕಾಪು ಎಸೈ ರಾಘವೇಂದ್ರ ಸಿ., ಕ್ರೈಂ‌ ಎಸೈ ತಿಮ್ಮೇಶ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಡಿಆರ್ ತುಕಡಿ ಕೂಡಾ ಪಾಲ್ಗೊಂಡಿತ್ತು.

ಪಡುಬಿದ್ರಿ : ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ

Thumbnail
Posted On: 10 Feb 2022, 06:34 PM

ಪಡುಬಿದ್ರಿ : ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಯುವತಿಯೋರ್ವಳು ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಡುಬಿದ್ರಿ ಬ್ರಹ್ಮಸ್ಥಾನದ ಬಳಿ ನಡೆದಿದೆ. ಪಡುಬಿದ್ರಿ ಇಲೆಕ್ಟ್ರಿಕಲ್ ಕಾಂಟ್ರ್ಯಾಕ್ಟರ್ ರಾಮಕೃಷ್ಣ ಎಂಬುವವರ ಎರಡನೆಯ ಮಗಳಾದ ಸೌಜನ್ಯ (22) ಹೈದರಾಬಾದಿನ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದಳು. ವಕ್೯ ಫ್ರಂ ಹೋಮ್ ಮೂಲಕ ಕಾರ್ಯನಿರ್ವಹಿಸುತ್ತಿದ್ದಳು. ತಂದೆಯ ಅನಾರೋಗ್ಯದ ನಿಮಿತ್ತ ತಂದೆ ತಾಯಿ ಜೊತೆಯಾಗಿ ಆಸ್ಪತ್ರೆಗೆ ತೆರಳಿದ್ದರು. ಈ ಸಂದರ್ಭ ಮೊಬೈಲ್ ರಿಚಾಜ್೯ ಬಗ್ಗೆ ತಾಯಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಳು ಎಂದು ತಿಳಿದು ಬಂದಿದೆ. ಇದು ತಾಯಿಯೊಂದಿಗೆ ಆಕೆಯ ಕೊನೆಯ ಕರೆಯಾಗಿತ್ತು. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಮನೆಗೆ ಬಂದು ಹೆತ್ತವರು ಕೋಣೆಯ ಬಾಗಿಲು ಬಡಿದಾಗ ತೆರೆಯದಿದ್ದನ್ನು ಕಂಡು ಕಿಟಕಿಯ ಮೂಲಕ ನೋಡಿದಾಗ ನೇಣಿಗೆ ಶರಣಾದ ದೃಶ್ಯ ಕಂಡು ಬಂದಿತ್ತು. ಆತ್ಮಹತ್ಯೆಗೂ ಮುನ್ನ ಸ್ಥಳೀಯ ವಾಟ್ಸಾಪ್ ಗ್ರೂಪಿನಲ್ಲಿ ಈಕೆ ಹೊರ ಬಂದಿದ್ದಳು. ಸಾವಿಗೂ ಮುನ್ನ ಬರೆದ ಡೆತ್ ನೋಟಿನಲ್ಲಿ ತನ್ನ ಬಾಲ್ಯದ ದಿನಗಳು ಮತ್ತು ಅಪ್ಪ ಅಮ್ಮ ನನ್ನನ್ನು ಕ್ಷಮಿಸಿ ಎಂದು ಬರೆದಿದ್ದಾಳೆ ಎಂದು ಪೋಲಿಸರು ತಿಳಿಸಿದ್ದಾರೆ. ಸೌಮ್ಯ ಸ್ವಭಾವದ ಈಕೆ ಮನೆಯವರೊಂದಿಗೆ ಅನ್ಯೋನ್ಯತೆಯಿಂದ ಇದ್ದಳು. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೆಬ್ರವರಿ 11 -13 : ಉದ್ಯಾವರದಲ್ಲಿ ನಿರಂತರ್ ನಾಟಕೋತ್ಸವ

Thumbnail
Posted On: 10 Feb 2022, 12:02 PM

ಕಾಪು : ಕಲೆ' ಸಾಹಿತ್ಯ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆರಂಭವಾಗಿರುವ ನಿರಂತರ್ ಉದ್ಯಾವರ ಸಂಸ್ಥೆಯ ನಾಲ್ಕನೇ ವರ್ಷದ 3 ದಿನಗಳ 'ನಿರಂತರ್ ನಾಟಕೋತ್ಸವ'ವೂ ಇದೇ ಫೆಬ್ರವರಿ 11ರಿಂದ 13ರವರೆಗೆ ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ವಠಾರದ ಐಸಿವೈಎಂ ಉದ್ಯಾವರ ಸುವರ್ಣಮಹೋತ್ಸವ ರಂಗಮಂದಿರದಲ್ಲಿ ನಡೆಯಲಿದೆ ಎಂದು ಸಂಘಟನೆಯ ಪ್ರಕಟನೆ ತಿಳಿಸಿದೆ. ಫೆಬ್ರವರಿ 11ರಂದು ಸಂಜೆ 6.15ಕ್ಕೆ ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಮತ್ತು ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಪ್ರಧಾನ ಧರ್ಮಗುರುಗಳಾದ ಅ.ವಂ. ಸ್ಟ್ಯಾನಿ ಬಿ ಲೋಬೋ ರವರು ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದು, ದೇವಾಲಯದ ಪಾಲನಾ ಮಂಡಳಿಯ ಉಪಾಧ್ಯಕ್ಷ ರಾದ ಮೆಲ್ವಿನ್ ನೊರೊನ್ಹಾ ಮತ್ತು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಅಧ್ಯಕ್ಷರಾದ ಲ. ಗೋಡ್ ಫ್ರೀ ಡಿಸೋಜ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉದ್ಘಾಟನ ದಿನದಲ್ಲಿ 2ನಾಟಕ ಪ್ರದರ್ಶನವಾಗಲಿದ್ದು, ಕ್ರಿಸ್ಟಿ ನೀನಾಸಂ ನಿರ್ದೇಶನದ ಅಸ್ತಿತ್ವ ತಂಡದಿಂದ 'ರಾಯಾಚಿ ನವಿ ಮುಸ್ತಾಯ್ಕಿ' ಮತ್ತು ವಿಕಾಸ್ ಕಲಾಕುಲ್ ನಿರ್ದೇಶನದ ಮಾಂಡ್ ತಂಡದಿಂದ 'ಮಜ್ಯಾ ಪುತಾಚೊ ಕಿಣ್ಕುಳೊ' ಪ್ರದರ್ಶನವಾಗಲಿದೆ. ದ್ವಿತೀಯ ದಿನ (ಫೆ.12) ಉಡುಪಿ ಧರ್ಮಪ್ರಾಂತ್ಯದ ಐಸಿವೈಎಂ ನಿರ್ದೇಶಕ ಮತ್ತು ಉಡುಪಿ ಚರ್ಚಿನ ಪ್ರಧಾನ ಧರ್ಮಗುರುಗಳಾಗಿರುವ ಅ. ವಂ. ಚಾರ್ಲ್ಸ್ ಮಿನೇಜಸ್, ಕರ್ನಾಟಕ ಪೊಲೀಸ್ ನ ನಿವೃತ್ತ ಎಸ್ ಪಿ ಎಚ್ ಡಿ ಮೆಂಡೋನ್ಸಾ, ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನ ನಿಕಟಪೂರ್ವ ಅಧ್ಯಕ್ಷ ಲ. ಜೋನ್ ಫೆರ್ನಾಂಡಿಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಡೆನಿಸ್ ಮೊಂತೇರ್ ನಿರ್ದೇಶನದ ಅಸ್ತಿತ್ವ ತಂಡದಿಂದ 'ಹಾಂಡೊ ಉಟ್ಲಾ' ನಾಟಕ ಪ್ರದರ್ಶನವಾಗಲಿದೆ. ಕೊನೆಯ ದಿನ (ಫೆ.13) ಮಂಗಳೂರಿನ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕರಾಗಿರುವ ವಂ. ರಿಚ್ಚರ್ಡ್ ಕುವೆಲ್ಲೋ, ಮಂಗಳೂರು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ಡೀನ್ ಮತ್ತು ಮೆಡಿಕಲ್ ಕಾಲೇಜ್ ಇಲ್ಲಿಯ ಪ್ರೊಫೆಸರ್ ಆಗಿರುವ ಡಾ. ಉರ್ಬನ್ ಡಿಸೋಜ ಮತ್ತು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನ ಸ್ಥಾಪಕ ಅಧ್ಯಕ್ಷರಾಗಿರುವ ಲ. ಹೆನ್ರಿ ಡಿಸೋಜಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕ್ರಿಸ್ಟಿ ನೀನಾಸಂ ನಿರ್ದೇಶನದ ಅಸ್ತಿತ್ವ ತಂಡದಿಂದ 'ಸಂಪದ್ಲೆ' ನಾಟಕ ಪ್ರದರ್ಶನವಾಗಲಿದೆ ಎಂದು ನಿರಂತರ್ ಪ್ರಕಟನೆ ತಿಳಿಸಿದೆ.

ಕಾಪು ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸಂತೋಷ್ ಕುಲಾಲ್ ಪಕ್ಕಾಲು ಆಯ್ಕೆ

Thumbnail
Posted On: 09 Feb 2022, 09:04 PM

ಕಾಪು : ಪಕ್ಷ ಸಂಘಟನೆಯ ಹೊಣೆಯರಿತ ಜವಾಬ್ದಾರಿ ಮತ್ತು ಸಂಘಟನಾ ಸಾಮರ್ಥ್ಯವನ್ನು ಗುರುತಿಸಿ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆಯವರ ಶಿಪಾರಸ್ಸಿನ ಮೇರೆಗೆ, ಪೆರ್ಡೂರಿನ ಕಾಂಗ್ರೆಸ್ ಮುಖಂಡರಾದ ಶಾಂತಾರಾಮ್ ಸೂಡ ರವರ ಮುತುವರ್ಜಿಯಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಿ.ಕೆ‌.ಶಿವಕುಮಾರ್ ರವರು ಕಾಪು ವಿಧಾನಸಭಾ ಕ್ಷೇತ್ರದ ಕಾಪು ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ಸಂತೋಷ್ ಕುಲಾಲ್ ಪಕ್ಕಾಲು ಅವರನ್ನು ಆಯ್ಕೆ ಮಾಡಲಾಗಿದೆ.

ಆತ್ಮ ರಕ್ಷಣಾ ಕಲೆಯ ಮೂಲಕ ದೌರ್ಜನ್ಯನಿಂದ ರಕ್ಷಣೆ: ಜಯಪ್ರಕಾಶ್ ಹೆಗ್ಡೆ

Thumbnail
Posted On: 09 Feb 2022, 08:39 PM

ಉಡುಪಿ : ಹೆಣ್ಣುಮಕ್ಕಳು ತಮ್ಮ ಮೇಲೆ ನಡೆಯುವ ದೌರ್ಜನ್ಯದಿಂದ ರಕ್ಷಿಸಿಕೊಳ್ಳಲು ಕರಾಟೆ ಆತ್ಮ ರಕ್ಷಣಾ ಕಲೆಯು ಸಹಕಾರಿಯಾಗಲಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿದರು. ಅವರು ಇಂದು ನಗರದ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ, ಓಬವ್ವ ಆತ್ಮರಕ್ಷಣೆ ಕಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹೆಣ್ಣು ಮಕ್ಕಳು ತಮ್ಮ ಮೇಲೆ ನಡೆಯುವ ದೌರ್ಜನ್ಯನಿಂದ ತಕ್ಷಣದಲ್ಲಿ ರಕ್ಷಿಸಿಕೊಳ್ಳಲು ಆತ್ಮ ರಕ್ಷಣೆ ಕಲೆ ನೆರವಾಗಲಿದೆ. ಆತ್ಮ ರಕ್ಷಣೆಯಿಂದ ಆತ್ಮಸ್ಥೈರ್ಯ ಮೂಡಲಿದೆ. ಕರಾಟೆಯಿಂದ ದೈಹಿಕವಾಗಿ ಬಲಿಷ್ಠವಾಗುವ ಜೊತೆಗೆ ಮಾನಸಿಕವಾಗಿಯೂ ಬಲಿಷ್ಠರಾಗಲು ಸಾಧ್ಯ. ಈ ಕಾರ್ಯಕ್ರಮ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಆರಂಭವಾಗಬೇಕು ಎಂದರು. ವಿದ್ಯಾರ್ಥಿಗಳು ಆನ್ಲೈನ್ ವಂಚನೆ ಕುರಿತಂತೆ ಎಚ್ಚರವಹಿಸುವಂತೆ ತಿಳಿಸಿದ ಜಯಪ್ರಕಾಶ್ ಹೆಗ್ಡೆ, ಯಾವುದೇ ಕಾರಣಕ್ಕೂ ತಮ್ಮ ಮೊಬೈಲ್ಗೆ ಬರುವ ಓ.ಟಿ.ಪಿ ಯನ್ನು ಇತರರಿಗೆ ನೀಡದಂತೆ ಕಿವಿ ಮಾತು ಹೇಳಿದರು. ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ಹಾಸ್ಟೆಲ್ಗಳಲ್ಲಿರುವ ವಿದ್ಯಾರ್ಥಿಗಳಿಗೆ ಹಲವು ಚಟುವಟಿಕೆಗಳನ್ನು ಕಲಿಯುವ ಆಸೆ ಇದ್ದರೂ ಸಹ ಸಮಯದ ಕೊರತೆಯಿರುತ್ತದೆ. ಪ್ರಸ್ತುತ ಸರ್ಕಾರವೇ ಹಾಸ್ಟೆಲ್ನಲ್ಲಿ ಆತ್ಮ ರಕ್ಷಣೆ ಕಲೆಯನ್ನು ಕಲಿಸುತ್ತಿದ್ದು, ವಸತಿ ನಿಲಯಗಳಲ್ಲಿನ ಎಲ್ಲಾ ವಿದ್ಯಾರ್ಥಿನಿಯರು ಇದರ ಪ್ರಯೋಜನ ಪಡೆಯಬೇಕು. ಆತ್ಮ ರಕ್ಷಣೆಯಿಂದ ಆತ್ಮ ವಿಶ್ವಾಸ ಮೂಡಲಿದೆ ಎಂದು ಹೇಳಿದರು. ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ವರ್ಚುವಲ್ ಮೂಲಕ ಕಾರ್ಯಕ್ರಮಕ್ಕೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅನಿತಾ ಮಡ್ಲೂರು, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಉಪಸ್ಥಿತರಿದ್ದರು. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ದೇವಿಂದ್ರ ಎಸ್ ಬಿರಾದಾರ ಸ್ವಾಗತಿಸಿದರು, ತಾಲೂಕು ಸಮಾಜ ಕಲ್ಯಾಣಾಧಿಕಾರಿ ರಮೇಶ್ ವಂದಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿದರು. ಜಿಲ್ಲೆಯ 7 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ವಿದ್ಯಾರ್ಥಿನಿಯರಿಂದ ಕರಾಟೆ ಪ್ರದರ್ಶನ ನಡೆಯಿತು. ಮೃಣಾಲಿನಿ ಸಚಿನ್ ಶೆಟ್ಟಿ ತರಬೇತಿ ನೀಡಿದರು.