Updated News From Kaup

ಪಂದ್ಯಕೂಟದಲ್ಲಿ ಸಂಗ್ರಹವಾದ ಮೊತ್ತದಿಂದ ಉಳಿತಾಯದ ಹಣದಲ್ಲಿ ಸರ್ಕಾರಿ ಶಾಲೆಗೆ ಕಂಪ್ಯೂಟರ್ ನೀಡಿದ ಟೀಮ್ ಡ್ಯೂಡ್

Thumbnail
Posted On: 21 Apr 2022, 04:48 AM

ಉಡುಪಿ : ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಟೀಮ್ ಡ್ಯೂಡ್ ಆಶ್ರಯದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ನಡೆದ ಪಂದ್ಯಕೂಟ ಏಪ್ರಿಲ್ 8 ಮತ್ತು 9ರಂದು ಡ್ಯೂಡ್ ಟ್ರೋಫಿ ಜರಗಿತು. ಪಂದ್ಯಕೂಟದಲ್ಲಿ ಸಂಗ್ರಹವಾದ ಮೊತ್ತದಿಂದ ಉಳಿತಾಯದ ಹಣದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೇರೂರು ಇಲ್ಲಿನ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಕಂಪ್ಯೂಟರ್ ನೀಡಲಾಯಿತು. ಈ ಸಂದರ್ಭ ನಿತ್ಯಾನಂದ ಪೂಜಾರಿ, ಸಚಿನ್ ಪೂಜಾರಿ , ದೀಕ್ಷಿತ್ ಪೂಜಾರಿ, ರಾಘವೇಂದ್ರ ಶೆಟ್ಟಿಗಾರ್, ಡ್ಯೂಡ್ ಮಾಲಕರದ ಹನೀಫ್, ಸುಕೇಶ್ ಕುಂದರ್ ಉಪಸ್ಥಿತರಿದ್ದರು.

ಏಣಗುಡ್ಡೆ : ಶ್ರೀ ಬ್ರಹ್ಮ ಬೈದೆರುಗಳ ಗರಡಿ ಪುನರ್ ಪ್ರತಿಷ್ಠಾಪನೆ, ಬ್ರಹ್ಮಕಲಶಾಭಿಷೇಕ, ಕಾಲಾವಧಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Thumbnail
Posted On: 18 Apr 2022, 11:54 AM

ಕಟಪಾಡಿ : ಅವಳಿ ವೀರರಾದ ಕೋಟಿಚೆನ್ನಯರು ನೆಲೆಯೂರಿದ ಐತಿಹ್ಯದ ಕಟಪಾಡಿ ಏಣಗುಡ್ಡೆ ಗರಡಿಯ ಸಮಗ್ರ ಜೀರ್ಣೋದ್ಧಾರ ಪ್ರಕ್ರಿಯೆಯು ಸುಮಾರು 4.5 ಕೋಟಿ ವೆಚ್ಚದಲ್ಲಿ ನಿರ್ಮಿತವಾಗಿದ್ದು ಮೇ 7ರಿಂದ ಮೊದಲ್ಗೊಂಡು ಮೇ 23ರವರೆಗೆ ವಿವಿಧ ಧಾರ್ಮಿಕ ಕ್ರಿಯೆಗಳು ನಡೆಯಲಿವೆ ಎಂದು ಜೀಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹರೀಶ್ಚಂದ್ರ ಅಮೀನ್ ಹೇಳಿದರು. ಅವರು ಕಟಪಾಡಿ ಏಣಗುಡ್ಡೆ ಶ್ರೀ ಬ್ರಹ್ಮ ಬೈದೆರುಗಳ ಗರಡಿ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶಾಭಿಷೇಕ ಹಾಗೂ ಕಾಲಾವಧಿ ಜಾತ್ರಾ ಮಹೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು. ಶಿಲಾ ದಾರು ಶಿಲ್ಪಗಳಿಂದ ಅಲಂಕರಿಸಲ್ಪಟ್ಟ ವೈಭವದಿಂದ ಕಂಗೊಳಿಸುವ ಶ್ರೀ ಬ್ರಹ್ಮ ಬೈದೆರುಗಳ ಮತ್ತು ಪರಿವಾರ ಶಕ್ತಿಗಳ ಪುನರ್ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶಾಭಿಷೇಕ ಆಗಮೋಕ್ತ ವೈದಿಕ ವಿಧಿಗಳು ವೇದಮೂರ್ತಿ ಮನೋಜ್ ತಂತ್ರಿ ಶಿವಗಿರಿ ಮತ್ತು ವೇದಮೂರ್ತಿ ಮಹೇಶ್ ಶಾಂತಿ ಹೆಜಮಾಡಿ ಇವರ ನೇತೃತ್ವದಲ್ಲಿ ಗರಡಿಯ ಪೂಜಾ ಪೂಜಾರಿ ಇಂಪು ಪೂಜಾರಿ, ಜ್ಯೋತಿಷ್ಯ ಪ್ರವೀಣ ಮೋಹನ್ ಮಾಯಿಪ್ಪಾಡಿ, ವಾಸ್ತುತಜ್ಞ ಪ್ರಮೋದ್ ಕುಮಾರ್ ಕಾರ್ಕಳ ಉಪಸ್ಥಿತಿಯಲ್ಲಿ ತಂತ್ರಿವರೇಣ್ಯರು ಹಾಗೂ ವೇದಜ್ಞ ಋತ್ವಿಜರ ಸಹಕಾರದೊಂದಿಗೆ ನೆರವೇರಲಿದೆ. ಮೇ 6ರಂದು ನಾಗಪ್ರತಿಷ್ಠೆ, 7ರಂದು ಪ್ರಾಯಶ್ಚಿತ್ತಾದಿ ವೈದಿಕ ಪೂಜಾವಿಧಿಗಳು, 8ರಂದು ಮೂಡಬೆಟ್ಟು ಚೌಟರ ಕಟ್ಟೆಯಿಂದ ಗರಡಿಗೆ ಹಸಿರು ಹೊರೆ ಕಾಣಿಕೆಯ ಭವ್ಯ ಮೆರವಣಿಗೆ, ಮೇ 9ರಂದು ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ಜರಗಲಿದ್ದು ಮೇ 14ರವರೆಗೆ ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. ಮೇ 19ರಂದು ಗರಡಿ ಪ್ರವೇಶದೊಂದಿಗೆ ವಾರ್ಷಿಕ ಜಾತ್ರಾ ಉತ್ಸವ ಆರಂಭ, 20ರಂದು ಧ್ವಜಾರೋಹಣ, ಅಗೆಲು ಸೇವೆ, 21 ರಂದು ಬೈದೇರುಗಳ ನೇಮೋತ್ಸವ, ರಾತ್ರಿ ಮಹಾ ಅನ್ನಸಂತರ್ಪಣೆ, 22 ಮಾಯಂದಾಲ್ ನೇಮ, ಪರಿವಾರ ಶಕ್ತಿಗಳ ನೇಮ, 23ರಂದು ಧ್ವಜಾವರೋಹಣ ಜರಗಲಿದೆ. ಮೇ 24 ರಂದು ಗರಡಿ ಬಾಕಿಮಾರು ಗದ್ದೆಯಲ್ಲಿ ಪಡು ಏಣಗುಡ್ಡೆ ಧೂಮಾವತಿ ದೈವದ ಸಿರಿ ಸಿಂಗಾರದ ನೇಮದೊಂದಿಗೆ ಸಂಪನ್ನಗೊಳ್ಳಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಅಶೋಕ್ ಎನ್. ಪೂಜಾರಿ, ಗೌರವಾಧ್ಯಕ್ಷರಾದ ಗಂಗಾಧರ ಸುವರ್ಣ, ಪ್ರೇಮ್ ಕುಮಾರ್, ಕೋಶಾಧಿ ಕಾರಿ ಡಿ.ಜಿ. ಬಂಗೇರ, ಉಪಕೋಶಾಧಿಕಾರಿ ಚಂದ್ರಹಾಸ ಕೋಟ್ಯಾನ್, ಗರಡಿಯ ಪೂಜಾ ಪೂಜಾರಿ ಇಂಪು ಪೂಜಾರಿ, ಮುಂಬಯಿ ಸಮಿತಿಯ ಕಾರ್ಯದರ್ಶಿ ಸತೀಶ್ ಅಮೀನ್‌, ಗೌರವ ಸಲಹೆಗಾರರಾದ ಬಗ್ಗ ಪೂಜಾರಿ ಯಾನೆ ಉಮೇಶ್ ಕೋಟ್ಯಾನ್, ಕೋಟೆ ಗ್ರಾಪಂ ಅಧ್ಯಕ್ಷ ಕಿಶೋರ್ ಅಂಬಾಡಿ, ಕಾರ್ಯದರ್ಶಿಗಳಾದ ರಿತೇಶ್ ಕೋಟ್ಯಾನ್, ಕಾಮರಾಜ್ ಸುವರ್ಣ, ಸ್ಥಳವಂದಿಗರಾದ ಸುಂದರ ಪೂಜಾರಿ, ರಂಗ ಪೂಜಾರಿ, ಶೀನ ಪೂಜಾರಿ, ದಾಮೋದರ ಪೂಜಾರಿ, ಮೋಹನ್ ಪೂಜಾರಿ, ರಮೇಶ್ ಜತ್ತನ್, ಭೋಜ ಪೂಜಾರಿ, ಕೃಷ್ಣಪ್ಪ ಪೂಜಾರಿ, ಗರಡಿ ಜವನೆರ್ ಸಂಚಾಲಕ ಸುಧೀರ್ ರಾಜ್ ಪೂಜಾರಿ, ದೇವಾಡಿಗರ ಸಂಘದ ಅಧ್ಯಕ್ಷ ಮನೋಹರ್ ದೇವಾಡಿಗ, ಮೊಗವೀರ ಸಭಾ ಅಧ್ಯಕ್ಷ ಚಂದ್ರಶೇಖರ್ ಕಾಂಚನ್, ಪ್ರಮುಖರಾದ ಜಗನ್ನಾಥ್ ಕೋಟೆ, ಉದಯ ಶೆಟ್ಟಿ, ಆಶಾ ಅಂಚನ್, ಮಹೇಶ್ ಪೂಜಾರಿ ಉಪಸ್ಥಿತರಿದ್ದರು.

ಪಡುಬಿದ್ರಿ : ಬ್ರಹ್ಮಶ್ರೀ ನಾರಾಯಣಗುರು ಗುರುಮೂರ್ತಿ ಪ್ರತಿಷ್ಠಾ ವರ್ಧಂತಿಯ ಪ್ರಯುಕ್ತ ಭಜನಾ ಕಾರ್ಯಕ್ರಮ ಸಂಪನ್ನ

Thumbnail
Posted On: 17 Apr 2022, 01:00 PM

ಪಡುಬಿದ್ರಿ : ಇಲ್ಲಿನ ಬಿಲ್ಲವ ಸಮಾಜ ಸೇವಾ ಸಂಘದ ಬ್ರಹ್ಮಶ್ರೀ ನಾರಾಯಣಗುರು ಸ್ವಾಮೀಜಿಯವರ ಗುರುಮೂರ್ತಿ ಪ್ರತಿಷ್ಠಾ ವರ್ಧಂತಿಯ ಪ್ರಯುಕ್ತ ಶನಿವಾರ ನಾರಾಯಣಗುರು ಮಂದಿರದಲ್ಲಿ ಧಾರ್ಮಿಕ ಕಾರ್ಯ, ಭಜನಾ ಕಾರ್ಯಕ್ರಮ ಜರಗಿತು. ಪಡುಬಿದ್ರಿ ನಾರಾಯಣಗುರು ಮಹಿಳಾ ಮಂಡಳಿ, ಕಲ್ಲಟ್ಟೆ ಶ್ರೀ ಜಾರಂದಾಯ ಭಜನಾ ಮಂಡಳಿ, ಶ್ರೀ ದುರ್ಗಾ ಹೆಜಮಾಡಿ ಮಹಿಳಾ ಮಂಡಳಿ, ಗಾಯತ್ರಿ ಭಜನಾ ಮಹಿಳಾ ಮಂಡಳಿ ಪಾದೆಬೆಟ್ಟು, ಬ್ರಹ್ಮಶ್ರಿ ಭಜನಾ ಮಂಡಳಿ ಎರ್ಮಾಳು, ಅವರಾಲು ಭಜನಾ ಮಂಡಳಿ, ಉದಯಾದ್ರಿ ಮಹಿಳಾ ಭಜನಾ ಮಂಡಳಿ ಮತ್ತು ಶ್ರವಣ್ ಕುಮಾರ್ ತಂಡದಿಂದ ಕುಣಿತ ಭಜನಾ ಕಾರ್ಯಕ್ರಮ ಜರಗಿತು. ಈ ಸಂದರ್ಭದಲ್ಲಿ ಬಿಲ್ಲವ ಸಂಘದ ಅಧ್ಯಕ್ಷರಾದ ವೈ ಸುಧೀರ್ ಕುಮಾರ್, ಕಾರ್ಯದರ್ಶಿ ಲಕ್ಷ್ಮಣ್ ಡಿ ಪೂಜಾರಿ, ಕೋಶಾಧಿಕಾರಿ ಅಶೋಕ್ ಪೂಜಾರಿ, ಮಹಿಳಾ ವಿಭಾಗದ ಅಧ್ಯಕ್ಷೆ ಸುಚರಿತ ಎಲ್. ಅಮೀನ್, ನಾರಾಯಣಗುರು ಸೇವಾದಳದ ದಳಪತಿ ಯೋಗೀಶ್ ಪೂಜಾರಿ ಮಾದುಮನೆ, ಅರ್ಚಕರಾದ ಚಂದ್ರಶೇಖರ ಶಾಂತಿ, ಯೋಗೀಶ್ ಶಾಂತಿ, ರವಿರಾಜ್ ಎನ್ ಕೋಟ್ಯಾನ್, ಉಮೇಶ್, ಲೀಲಾಧರ್, ವಿರೇಂದ್ರ, ರಮಾನಂದ, ಚಿತ್ರಾಕ್ಷಿ ಕೆ ಕೋಟ್ಯಾನ್, ಸುಗಂಧಿ, ಆನಂದ, ಬಿಲ್ಲವ ಸಂಘದ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಮಂಡಳಿಯ ಸದಸ್ಯರು, ಸೇವಾದಳದ ಸದಸ್ಯರು ಉಪಸ್ಥಿತರಿದ್ದರು.

ಉಂಡಾರು ದೇವಳಕ್ಕೆ ಇಂಟರ್‌ಲಾಕ್ ಸೌಲಭ್ಯ ಒದಗಿಸಿದ ಮಟ್ಟಾರು ರತ್ನಾಕರ ಹೆಗ್ಡೆಯವರಿಗೆ ಸೋದೆ ಶ್ರೀಗಳಿಂದ ಸನ್ಮಾನ

Thumbnail
Posted On: 17 Apr 2022, 12:11 PM

ಕಾಪು : ಉಂಡಾರು ಶ್ರೀ ವಿಷ್ಣುಮೂರ್ತಿ ದೇವಳದ ವಾರ್ಷಿಕ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಸಂದರ್ಭ ದೇವಳದ ಮುಂಭಾಗ ಇಂಟರ್‌ಲಾಕ್ ಸೌಲಭ್ಯ ಮಂಜೂರು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆಯವರನ್ನು ಸೋದೆ ಮಠದ ಶ್ರೀಗಳಾದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಸನ್ಮಾನಿಸಿದರು. ಈ ಸಂದರ್ಭ ಲೀಲಾಧರ ಶೆಟ್ಟಿ ಕರಂದಾಡಿ, ಚಂದ್ರಹಾಸ ಗುರುಸ್ವಾಮಿ, ಅಣ್ಣಪ್ಪ ಸೌಂಡ್ಸ್ ನ ಉದಯ್ ಶೆಟ್ಟಿ, ಡಾ.ಗಣೇಶ್ ಶೆಟ್ಟಿ, ರವಿವರ್ಮ ಶೆಟ್ಟಿ ಇನ್ನಂಜೆ, ನವೀನ್ ಅಮೀನ್ ಶಂಕರಪುರ, ಮಾಲಿನಿ ಪಾರ್ಥ ಇನ್ನಂಜೆ, ದಿವೇಶ್ ಶೆಟ್ಟಿ ಇನ್ನಂಜೆ, ನಿತೇಶ್ ಸಾಲ್ಯಾನ್ ಕಲ್ಯಾಲು, ಆಶಾ ನಾಯಕ್, ಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.

ಹಿಂದು ಜಾಗರಣ ವೇದಿಕೆ ಬೆಳಪು -ಪೈಯಾರು ಘಟಕದ ವತಿಯಿಂದ ಹನುಮ ಜಯಂತಿ ಆಚರಣೆ

Thumbnail
Posted On: 16 Apr 2022, 10:16 PM

ಕಾಪು : ತಾಲೂಕಿನ ಬೆಳಪು ಪಣಿಯೂರಿನ ಕಾನ ದೇವಸ್ಥಾನದಲ್ಲಿ ಹಿಂದು ಜಾಗರಣ ವೇದಿಕೆ ಬೆಳಪು -ಪೈಯಾರು ಘಟಕದ ವತಿಯಿಂದ ಹನುಮ ಜಯಂತಿ ಆಚರಿಸಲಾಯಿತು. ಈ ಸಂದರ್ಭ ರಾಮ ನಾಮ ಜಪ ಹಾಗೂ ಹನುಮಾನ್ ಚಾಲೀಸ ಪಠಣ ಕಾರ್ಯಕ್ರಮ ಜರಗಿತು.

ಜನರ ಮನೆ ಬಾಗಿಲಿಗೆ ತೆರಳಿ ಸಮಸ್ಯೆಗಳ ಇತ್ಯರ್ಥ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

Thumbnail
Posted On: 16 Apr 2022, 07:02 PM

ಉಡುಪಿ : ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಮೂಲಕ ಜಿಲ್ಲೆಯ ಗ್ರಾಮೀಣ ಭಾಗದ ಜನರ ಮನೆ ಬಾಗಿಲಿಗೆ ತೆರಳಿ, ಅವರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ತಕ್ಷಣದಲ್ಲಿ ಸ್ಪಂದಿಸಿ, ಪರಿಹಾರ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ಕಾರದ ನಿರ್ದೇಶನದಂತೆ ಪ್ರತೀ ತಿಂಗಳ 3 ನೇ ಶನಿವಾರ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ, ಎಲ್ಲಾ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಸಾರ್ವಜನಿಕರ ಸಮಸ್ಯೆಗಳನ್ನು ಅಲಿಸಿ, ಅವುಗಳಿಗೆ ಸಂಬಂಧಪಟ್ಟ ಇಲಾಖೆಗಳ ಮೂಲಕ ಪರಿಹಾರ ಒದಗಿಸಲಾಗುತ್ತಿದ್ದು, ಸಾರ್ವಜನಿಕರೂ ಹಲವು ವರ್ಷಗಳಿಂದ ಬಾಕಿ ಇರುವ ತಮ್ಮ ಸಮಸ್ಯೆಗಳನ್ನು ಗಮನಕ್ಕೆ ತಂದು ಸೂಕ್ತ ಪರಿಹಾರ ಪಡೆಯುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು. ಕಾರ್ಯಕ್ರಮದಲ್ಲಿ ಮಚ್ಚಟ್ಟು ಗ್ರಾಮದಲ್ಲಿ ಈ ಹಿಂದೆ ಎರಡು ಸರ್ಕಾರಿ ಬಸ್ಗಳನ್ನು ಓಡಿಸುತ್ತಿದ್ದು, ಹಲವು ದಿನಗಳಿಂದ ಈ ಸೇವೆ ಬಂದ್ ಆಗಿದ್ದು, ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದ್ದು, ಕೂಡಲೇ ಈ ಹಿಂದಿನಂತೆ ಬಸ್ಗಳನ್ನು ಓಡಿಸುವಂತೆ ಸಾರ್ವಜನಿಕರು ಮನವಿ ಸಲ್ಲಿಸಿದರು. ಈ ಬಗ್ಗೆ ಕೂಡಲೇ ಪರಿಶೀಲಿಸಿ, ಸಾರ್ವಜನಿಕರಿಗೆ ಸರ್ಕಾರಿ ಬಸ್ ಸೇವೆ ಒದಗಿಸುವಂತೆ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದರು. ತೊಂಬಟ್ಟು ಎಂಬಲ್ಲಿ ರಸ್ತೆ ಕಾಮಗಾರಿ ಅಪೂರ್ಣವಾಗಿದ್ದು, ಕೂಡಲೇ ಇದನ್ನು ಪೂರ್ಣಗೊಳಿಸುವಂತೆ ಸಾರ್ವಜನಿಕರು ಕೋರಿದರು. ಸಂಬಂಧಪಟ್ಟ ರಸ್ತೆ ನಿರ್ಮಾಣ ಮಾಡುತ್ತಿರುವ ಅನುಷ್ಠಾನ ಇಲಾಖೆಯ ಅಧಿಕಾರಿಗಳು ತಕ್ಷಣವೇ ಆ ಸ್ಥಳಕ್ಕೆ ತೆರಳಿ, ಅಲ್ಲಿನ ಸ್ಥಿತಿಗತಿ ಬಗ್ಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಹಲವು ವರ್ಷಗಳಿಂದ ಕೋಟೇಶ್ವರದಲ್ಲಿ ವಾಸವಿದ್ದು, ತಮಗೆ ಚುನಾವಣಾ ಗುರುತು ಚೀಟಿ, ಆಧಾರ್ ಕಾರ್ಡ್ ಮತ್ತು ನಿವೇಶನ ಒದಗಿಸುವಂತೆ ಲಿಂಗತ್ವ ಅಲ್ಪ ಸಂಖ್ಯಾತರು ಮನವಿ ಸಲ್ಲಿಸಿದರು. ಆರ್.ಟಿ.ಸಿ ಯಲ್ಲಿನ ಬದಲಾವಣೆ ಸೇರಿದಂತೆ 30 ಕ್ಕೂ ಅಧಿಕ ಅರ್ಜಿಗಳ ಕುರಿತು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಸಮಸ್ಯೆಗಳಿಗೆ ವಿಳಂಬಕ್ಕೆ ಅವಕಾಶ ನೀಡದೇ ತ್ವರಿತಗತಿಯಲ್ಲಿ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಾರ್ಯಕ್ರಮದಲ್ಲಿ 94 ಸಿ ಹಕ್ಕು ಪತ್ರ ವಿತರಣೆ, ಅಂಗವಿಕಲರ ಪೋಷಣಾ ಭತ್ಯೆ, ಎಂಡೋಸಲ್ಫಾನ್ ಪೀಡಿತರಿಗೆ ನೆರವು, ಅಕ್ರಮ-ಸಕ್ರಮ ಸಾಗುವಳಿ ಚೀಟಿ, ಇಂದಿರಾ ಗಾಂಧೀ ರಾಷ್ಟ್ರೀಯ ವೃದ್ಧಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷೆ ಸೇರಿದಂತೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ವತಿಯಿಂದ, ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಫಲಾನುಭವಿಗಳಿಗೆ ಉಚಿತವಾಗಿ ಅಕ್ಕಿ ವಿತರಿಸಲಾಯಿತು. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ, ಹಾಲಾಡಿ ಗ್ರಾ.ಪಂ.ಅಧ್ಯಕ್ಷೆ ಸಾಧು, ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ಹಾಗೂ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಶೀಲ್ದಾರ್ ಕಿರಣ್ ಗೌರಯ್ಯ ಸ್ವಾಗತಿಸಿದರು. ಕಂದಾಯ ನಿರೀಕ್ಷಕ ರಾಘವೇಂದ್ರ ವಂದಿಸಿದರು.

ಇನ್ನಂಜೆ ದಾಸ ಭವನದಲ್ಲಿ ಏಪ್ರಿಲ್ 18ರಂದು ಉಚಿತ ದಂತ ಚಿಕಿತ್ಸಾ ಶಿಬಿರ

Thumbnail
Posted On: 16 Apr 2022, 11:58 AM

ಕಾಪು : ಯುವತಿ ಮಂಡಲ (ರಿ.) ಇನ್ನಂಜೆ ಇದರ ಆಶ್ರಯದಲ್ಲಿ ಸಮುದಾಯ ದಂತ ಚಿಕಿತ್ಸಾ ವಿಭಾಗ ಮಣಿಪಾಲ ಮತ್ತು ರಾಜರಾಜೇಶ್ವರಿ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟ ಇನ್ನಂಜೆ ಇದರ ಸಹಯೋಗದೊಂದಿಗೆ ಉಚಿತ ದಂತ ಚಿಕಿತ್ಸಾ ಶಿಬಿರ ಏಪ್ರಿಲ್ 18, ಸೋಮವಾರ ಇನ್ನಂಜೆ ದಾಸಭವನದಲ್ಲಿ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1ಗಂಟೆವರೆಗೆ ಜರಗಲಿದೆ. ಇನ್ನಂಜೆ ಯುವತಿ ಮಂಡಲದ ಅಧ್ಯಕ್ಷರಾದ ಆಶಾ ನಾಯಕ್ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯಕ್ರಮವನ್ನು ಇನ್ನಂಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುರೇಶ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಸಮುದಾಯ ದಂತ ಚಿಕಿತ್ಸಾ ವಿಭಾಗ ಮಣಿಪಾಲದ ಡಾ| ತ್ರಿಷಾ ಹೆಗ್ಡೆ, ಉಡುಪಿ ಜಿಲ್ಲೆಯ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಡಾ| ರೋಷನ್ ಕುಮಾರ್, ಇನ್ನಂಜೆ ಯುವತಿಮಂಡಲದ ಗೌರವ ಸಲಹೆಗಾರರಾದ ಶ್ವೇತ ಎಲ್ ಶೆಟ್ಟಿ, ಇನ್ನಂಜೆ ರಾಜರಾಜಶ್ವರಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಪೂರ್ಣಿಮಾ ಭಾಗವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಶ್ರೀ ದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು : 23ನೇ ವಾರ್ಷಿಕೋತ್ಸವ, ಯುಗಾದಿ ಸಂಭ್ರಮ 2022, ಸಮ್ಮಾನ

Thumbnail
Posted On: 15 Apr 2022, 07:27 PM

ಪಲಿಮಾರು : ಶ್ರೀ ದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು ಇದರ 23ನೇ ವಾರ್ಷಿಕೋತ್ಸವ ಹಾಗೂ ಯುಗಾದಿ ಸಂಭ್ರಮ 2022 ಏಪ್ರಿಲ್ 13ರಂದು ಅವರಾಲು ಶ್ರೀ ಮೂಕಾಂಬಿಕ ದೇವಸ್ಥಾನದ ಬಳಿ ಜರಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಗುತ್ತಿನಾರ್ ಕೃಷ್ಣ ಶೆಟ್ಟಿ ಕಂಕಣಗುತ್ತು ಮಾತನಾಡಿ ಶ್ರೀ ದೇವಿ ಫ್ರೆಂಡ್ಸ್ ಕ್ಲಬ್ ನ ಚಟುವಟಿಕೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಮುಖ್ಯ ಅಥಿತಿಯಾದ ಬೆಂಗಳೂರಿನ ಉದ್ಯಮಿ ಗಣೇಶ್ ಗುಜರನ್ ಪಡುಬಿದ್ರಿ ಸಂಘಟನೆಯ ಸಾಮಾಜಿಕ ಕಾರ್ಯಗಳಿಂದ ಸಂತಸಗೊಂಡು ಮುಂದಿನ ಸಂಸ್ಥೆಯ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಲ್ಲುವ ಭರವಸೆ ನೀಡಿದರು. ಇನ್ನೋರ್ವ ಅಥಿತಿ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಮಾತನಾಡಿ ಧರ್ಮ ಜಾಗೃತಿ, ಸಂಸ್ಕ್ರತಿಯ ರಕ್ಷಣೆಯ ಸಲುವಾಗಿ ಇನ್ನಷ್ಟು ಇಂತಹ ಸಂಘಟನೆಗಳು ಬೆಳಗಿ ಬರಲಿ ಎಂದು ಹಾರೈಸಿದರು. ಸಮ್ಮಾನ : ಸಮಾರಂಭದಲ್ಲಿ ಸ್ಪೂರ್ತಿ ವಿಶೇಷ ಶಾಲೆ ಮೂಡುಬಿದರೆ ಇದರ ಸ್ಥಾಪಕರಾದ ಪ್ರಕಾಶ್ ಜೆ ಶೆಟ್ಟಿಗಾರ್ ಹಾಗೂ ಅವರಾಲು ವೆಂಕಟರಮಣ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಸಾವಿತ್ರಿ ಇವರನ್ನು ಸಮ್ಮಾನಿಸಲಾಯಿತು. ಪಲಿಮಾರು ಗ್ರಾ. ಪಂ. ಅಧ್ಯಕ್ಷರಾದ ಗಾಯತ್ರಿ ಡಿ ಪ್ರಭು ಮಾತನಾಡಿ ಸಂಸ್ಥೆಯ ಸೇವಾ ಕಾರ್ಯಗಳಲ್ಲಿನ ಉತ್ಸಾಹ ಮತ್ತು ಸದಸ್ಯರ ಪಾಲ್ಗೊಳ್ಳುವಿಕೆಯ ಬಗ್ಗೆ ಮೆಚ್ವುಗೆ ವ್ಯಕ್ತಪಡಿಸಿದರು. ಸಭೆಯಲ್ಲಿ ಅಥಿತಿಗಳಾಗಿ ಅಭಿನಂದನ್ ಜೈನ್ ಕಾರ್ಕಳ, ರೂಪ ಬಲ್ಲಾಳ್, ಜಯರಾಮ್ ಗುರಿಕಾರ, ಉದಯ್ ಹೆಗ್ಗಡೆ, ಸುರೇಶ್ ಪೂಜಾರಿ ಹಾಗೂ ಮಾರ್ಗದರ್ಶಕರಾದ ಪ್ರದೀಪ್ ಶಾಂತಿ, ತಂಡದ ಸದಸ್ಯರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಮುನ್ನ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಪ್ರತಾಪ್ ಸುವರ್ಣ ಪ್ರಸ್ತಾವಿಸಿದರು ಹಾಗೂ ಸುದರ್ಶನ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.

ಕಾಪು ಬಿಜೆಪಿ ಕಚೇರಿಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಜನ್ಮದಿನಾಚರಣೆ

Thumbnail
Posted On: 14 Apr 2022, 10:07 PM

ಕಾಪು : ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಜನ್ಮದಿನ ಆಚರಿಸಲಾಯಿತು. ಶಾಸಕರಾದ ಲಾಲಾಜಿ ಆರ್ ಮೆಂಡನ್, ರಾಜ್ಯ ಕಾರ್ಯಕಾರಿಣಿ‌ ಸದಸ್ಯರಾದ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ರೈತ ಮೋರ್ಚ ಅಧ್ಯಕ್ಷರಾದ ಪ್ರವೀಣ್ ಗುರ್ಮೆ, ಮಂಡಲ ಉಪಾಧ್ಯಕ್ಷರಾದ ನವೀನ್ ಎಸ್ ಕೆ, ಮಂಡಲ ರೈತಮೋರ್ಚ ಅಧ್ಯಕ್ಷರಾದ ಗುರುನಂದನ್, ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ, ಮಂಡಲ ಕಾರ್ಯದರ್ಶಿ ಮಾಲಿನಿ ಶೆಟ್ಟಿ, ಕಾಪು ಕ್ಷೇತ್ರದ ಅಧ್ಯಕ್ಷರಾದ ಶ್ರೀಕಾಂತ ನಾಯಕ್, ಕಾರ್ಯಕರ್ತರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸೌರಯುಗಾದಿ : ಬಿಸು - ವಿಷು ; ಕೃಷಿಗೆ ತೊಡಗುವ ಉತ್ಸಾಹ

Thumbnail
Posted On: 14 Apr 2022, 09:53 PM

ಅದೋ ನೋಡಿ... ಅನ್ನದಾತ 'ಪುಂಡಿಬಿತ್ತ್ ಪಾಡ್‌ಗ, ನಾಲೆರು ಮಾದಾಗ’ ಅಂದರೆ 'ಹಿಡಿ ಬೀಜ ಬಿತ್ತೋಣ, ನೇಗಿಲುಕಟ್ಟಿ ಒಂದು ಸುತ್ತು ಉಳುಮೆ ಮಾಡೋಣ'ಎನ್ನುತ್ತಾ ನೇಗಿಲನ್ನು ಹೆಗಲೇರಿಸಿ ಕೋಣ ಅಥವಾ ಎತ್ತುಗಳನ್ನು ಅಟ್ಟುತ್ತಾ ಕೃಷಿ ಕಾಯಕಕ್ಕೆ ತೊಡಗಲು ಗದ್ದೆಗೆ ಹೊರಟಿದ್ದಾನೆ. ಹೌದು... ಇದು ಸೌರ ಯುಗಾದಿಯ ದಿನದ ರೈತನ ಆದ್ಯತೆಯ ಕಾಯಕ. ಸೌರ ಪದ್ಧತಿಯನ್ನು ಅಂಗೀಕರಿಸಿದವರಿಗೆಲ್ಲ ಹೊಸ ವರ್ಷ ಆರಂಭವಾಗುವುದು ಯುಗಾದಿಯಿಂದ . ಇಗಾದಿ, ಬಿಸು,ವಿಷು ಎಂಬಿತ್ಯಾದಿ ಹೆಸರಿನಿಂದ ಆಚರಿಸುವ ಪರ್ವದಿನ ಸನ್ನಿಹಿತವಾಗುವುದು ಮೇಷ ಸಂಕ್ರಮಣದ ಮರುದಿನದಿಂದ. ತುಳುವರ ಪಗ್ಗು ತಿಂಗಳ ಮೊದಲ ದಿನ 'ಇಗಾದಿ'. ನಿಸರ್ಗದಲ್ಲಿ ನಳನಳಿಸುವ ನಾವೀನ್ಯವನ್ನು ಕಾಣುತ್ತಾ ನಲವೇರಿ ನರ್ತಿಸುತ್ತಾ ಕೃಷಿಗೆ ಗಮನ ಹರಿಸಲು ಇದೇ ಸುಮುಹೂರ್ತವೆಂದು ಕೃಷಿಕ ಪರಿವರ್ತಿತ ಪ್ರಕೃತಿಯಿಂದ ಹೊಸ ಸಂದೇಶವನ್ನು ಸ್ವೀಕರಿಸಿ ಸೌರ ಯುಗಾದಿಯಂದು ಎಚ್ಚೆತ್ತು ಕೊಂಡಂತಿದೆ. ಪರಿಸರ ಪಲ್ಲವಿಸಿದೆ. ಚೈತ್ರಮಾಸ-ವಸಂತ ಋತು, ಸೌರಮೇಷ ತಿಂಗಳು ಸನ್ನಿಹಿತವಾಗಿದೆ. ಸೂರ್ಯನಿರಲಿ, ಚಂದ್ರನಾಗಲಿ ಪ್ರಾಕೃತಿಕ ಪರಿವರ್ತನೆಗೆ ನಿಯಾಮಕರು ತಾನೆ? ಈ ಬದಲಾವಣೆಯನ್ನು ಗಮನಿಸುತ್ತಾ ಮಾನವ ಕಾಲ ನಿರ್ಣಯಿಸಿದ, ಕೃಷಿ ಸಂಸ್ಕೃತಿ ಬೆಳೆಸಿದ, ಬದುಕು ಕಟ್ಟಿದ. ಆದುದರಿಂದಲೇ ಪ್ರಾಚೀನವೆಂದು ಸ್ವೀಕರಿಸಲ್ಪಟ್ಟ ಸೌರ ಪದ್ಧತಿ ಮಾನವ ಜೀವನಕ್ಕೆ ಸಮೀಪವೆಂದು ಸ್ವೀಕಾರ. ಆದರೆ ಚಂದ್ರನನ್ನು ಬಿಟ್ಟಿಲ್ಲ, ಸೂರ‍್ಯನ ಚಲನೆಯನ್ನು ಅನುಸರಿಸುವಮ ಸೌರಮಾನಿಗಳಿಗೆ ಎರಡೂ ವಿಧಾನವೂ ಮಾನ್ಯವೆ. ಆಚರಣೆಗೆ ಮಾತ್ರ ಸೂರ‍್ಯ ಪ್ರಧಾನವಾದ ಸೌರಮಾನ ವಿಧಾನ. ಚಿಗುರು ನೆನಪಿಸುತ್ತದೆ ! ಗಿಡ, ಮರ, ಬಳ್ಳಿಗಳೆಲ್ಲ ಚಿಗುರುವ ತಿಂಗಳು. ಚಿಗುರು ಹೊಸತನ್ನು ಸಾಂಕೇತಿಸುತ್ತದೆ. ಈ ಹೊಸತು ಪ್ರಕೃತಿಯಿಂದ ಕಂಡ ಸತ್ಯ. ಹಾಗಿದ್ದರೆ ನಿಸರ್ಗದಿಂದ ಹೊಸದಾದುದನ್ನು ಪಡೆಯಬಹುದು. ಅದಕ್ಕೆ ಪ್ರಕೃತಿಯೇ ಕ್ಷೇತ್ರ. ಈ ಕ್ಷೇತ್ರದಿಂದ ಅಥವಾ ಗದ್ದೆ, ಕೃಷಿ ಭೂಮಿಯಿಂದಲೇ ಹೊಸ ಬೆಳೆ ತೆಗೆಯಬಹುದೆಂಬ ಸತ್ಯವನ್ನು ಸ್ಮರಿಸಿಕೊಳ್ಳುವ ಕಾಲ. ಕೃಷಿಕ ಸಿದ್ಧನಾಗು, ಎನ್ನುತ್ತಾ ಅಥವಾ ಪ್ರಕೃತಿಯ ಮೂಲಕ ಘೋಷಣೆ ಮೊಳಗಿಸುತ್ತಾ ಯುಗಾದಿ ಬರುತ್ತದೆ. ವಸಂತಾಗಮನವಾಗಿದೆ. ಕೋಗಿಲೆ ಸಹಜವಾಗಿ ಕುಹು... ಕುಹು ಎಂದು ಸುಸ್ವರದಿಂದ ಹಾಡುತ್ತಿದೆ. ಹೌದು, ಇದೆಲ್ಲ, ಈ ಸೂರ್ಯೋದಯದಿಂದಲೇ ಆರಂಭವೇ? ಅಲ್ಲ. ಪ್ರತಿದಿನವೂ ದಿನಮಣಿ ದಿನದ ಯಾತ್ರೆ ಆರಂಭಿಸುತ್ತಾನೆ. ಕ್ರಮಿಸುತ್ತಾನೆ. ಆದರೆ ಸೌರಯುಗಾದಿ ಅಥವಾ ಪಗ್ಗು ತಿಂಗಳ (ಮೇಷ ಮಾಸ) ತಿಂಗೊಡೆ, ಸಿಂಗೊಡೆ ಅಥವಾ ‘ತಿಂಗಳುದ್ಯೊ’ ದಂದು ಮಾತ್ರ ಸೂರ‍್ಯ ಹನ್ನೆರಡು ರಾಶಿಗಳ ಒಂದು ಚಕ್ರದ ಯಾತ್ರೆಯನ್ನು ಮುಗಿಸಿ ಮತ್ತೆ ಪ್ರಥಮದ ಮೇಷರಾಶಿಗೆ ಪ್ರವೇಶಿಸುತ್ತಾನೆ. ಒಮ್ಮೆ ಸಮಗ್ರ ಪ್ರಾಕೃತಿಕ ಸ್ಥಿತ್ಯಂತರ, ಮಾಸಗಳ ಬದಲಾವಣೆ, ಋತುಗಳ ವೈವಿಧ್ಯ, ಮಳೆ - ಚಳಿ - ಬೇಸಗೆ ಪರಿಣಾಮ ಬೀರಿಯಾಗಿದೆ. ಮತ್ತೆ ಹೊಸತಾಗಿ ಹನ್ನೆರಡು ತಿಂಗಳ ಅನಂತರ ಹೊಸ ಆವರ್ತನಕ್ಕೆ ಸೂರ‍್ಯ ಸಿದ್ಧವಾದ ದಿನ. ಈ ಪರ್ವ ಆಚರಣೆಯ ಸಂಪ್ರದಾಯ ನಮಗೆ ಪ್ರಕೃತಿಯನ್ನೊಮ್ಮೆ ದಿಟ್ಟಿಸಿ ನೋಡುವ ಪರ್ವವಾಗುತ್ತದೆ. 'ಪಗ್ಗುಡೆ ಎರುಕಟ್ ದ್ ದತ್ತೊನುಲ, ಬಗ್ಗ್ ದ್ ನೇಜಿ ಪಾಡೊನುಲ' (ಕೋಣಕಟ್ಟಿ ಉತ್ತುಕೊ, ಬಗ್ಗಿನೇಜಿ ಹಾಕಿಕೋ) ಎಂಬ ಮಾತು ಯುಗಾದಿ ಸಂಬಂಧಿಯಾಗಿದೆ. ಈ ದಿನದಿಂದಲೇ ಕೃಷಿ ಚಟುವಟಿಕೆಗಳು ಆರಂಭ ಎನ್ನುವಂತಿವೆ. ಇವು ಯುಗಾದಿ ಆಚರಣೆಯ ಅವಿಭಾಜ್ಯ ಅಂಗ (ಕೃಷಿಕರಿಗೆ ಮಾತ್ರ), ಕೃಷಿ-ಆಚರಣೆ-ಮಾನವ ಬಹುಕು ಏಕಸೂತ್ರದಂತೆ ಪರಸ್ಪರ ಸಂಬಂಧಿಯಾಗಿ ಕಾಣುವುದಿಲ್ಲವೆ? ಭೂದೇವಿ ಸಿದ್ಧಳಾದಳು ..... ಮಕರ ಮಾಸದಲ್ಲಿ ಭೂಮಿ ದೇವಿ ರಜಸ್ವಲೆಯಾಗುವ ಸಂದೇಶವಿರುವ ‘ಕೆಡ್ಡಸ’ (ಭೂರಜಸ್ವಲಾ ದಿನಗಳು) ಆಚರಣೆ. ಮುಂದೆ ಬೇಸಗೆಕಾಲ. ಬಳಿಕದ ಮಳೆಗಾಲಕ್ಕೆ ಮೊದಲು ಋತುಸ್ನಾತೆಯಾದ ಭೂದೇವಿಯನ್ನು ಬೆಳೆ ಬೆಳೆಯುವ ಫಲವಂತಿಕೆಯನ್ನು ನೀಡುವ ಸಲುವಾಗಿ ಸಿದ್ಧಗೊಳಿಸುವ ಪ್ರಕ್ರಿಯೆಯಾಗಿ ನಮ್ಮ ಆಚರಣೆಗಳು ನೇರ್ಪುಗೊಂಡಿವೆ ಅನ್ನಿಸುತ್ತಿದೆ. ಆದರೆ ಕೃಷಿ ಕೃಶವಾಗುತ್ತಾ ಕೃಷಿ ಭೂಮಿ ಕಣ್ಮರೆಯಾಗುತ್ತಿದೆ. ಹಾಗಾಗಿ ಉಜ್ಜಲವಾಗಿ ಬೆಳೆದ ‘ಕೃಷಿ ಸಂಸ್ಕೃತಿ’ ಉಳಿಯುತ್ತದೋ ಗೊತ್ತಿಲ್ಲ. ಅಂತಹ ವಿವರವಾದರೂ ತಿಳಿದಿರಲಿ ಎಂಬುದು ಆಶಯ. ಕಪ್ಪುಗು ಎಡ್ಡೆನಾ, ಬೊಲ್ದುಗು ಎಡ್ಡೆನಾ ? ಕೋಲ, ಬಲಿ, ಅಂಕ, ಆಯನಗಳ ಉತ್ಸಾಹ, ನಾಗ - ಬಹ್ಮಲೋಕ, ದೈವಗಳ ಸಾಮ್ರಾಜ್ಯ ಸೃಷ್ಟಿಯಾಗುತ್ತಾ ಪ್ರತಿ ರಾತ್ರಿಯೂ ದಿವ್ಯವಾಗುವ ಶ್ರಾಯ. ಇದಕ್ಕೆ ಪೂರಕವಾಗಿ ಒದಗಿ ಬಂದಿರುತ್ತದೆ ವಸಂತ ಋತುವಿನ ಬಿನ್ನಾಣ. ಈ ನಡುವೆ ಕಾಲ ನಿಯಾಮಕ ಸೂರ್ಯ ಮೇಷ ರಾಶಿ ಪ್ರವೇಶಿಸಿ ಹೊಸ ಕ್ರಮಣ ಆರಂಭಿಸುವ ಪರ್ವ ಕಾಲ ‘ಸೌರಯುಗಾದಿ’ ಸಮನಿಸುತ್ತದೆ. ಗೌಜಿ - ಗದ್ದಲಗಳಿಲ್ಲದ, ಸಂಭ್ರಮದ ವಿಧಿಯಾಚರಣೆಗಳಿಲ್ಲದ ಹಬ್ಬ. ಜಾತ್ರೆ-ನೇಮಗಳ ಸಹಿತ ಶುಭ ಶೋಭನಾದಿಗಳ ಗುಂಗಿನಿಂದ ಹೊರ ಬಂದು ಕೃಷಿಗೆ ತೊಡಗು ಎಂಬ ಆಶಯವೂ ‘ಸೌರಯುಗಾದಿ’ಯ ಆಚರಣೆಯಲ್ಲಿದೆ. ಹೊಸ ವರ್ಷಾರಂಭವಾಗಿರುವುದರಿಂದ ಶುಭ ಪ್ರತೀಕ್ಷೆಯೂ ಸೌರಯುಗಾದಿಯ ಆಶಯವಾಗಿದೆ. ಕೃಷಿ ಮತ್ತು ಮುಂದಿನ ವರ್ಷದ ಜೀವನ ನಿರಾತಂಕವಾಗಿ ನಡೆಯಲಿ ಎಂಬ ಹರಕೆಯೊಂದಿಗೆ ‘ಕಣಿ’ ದರ್ಶನ. ಈ ಮೂಲಕ ನೂತನ ವರ್ಷದ ಮೊದಲ ದಿನ ಮಂಗಲದ್ರವ್ಯಗಳನ್ನು ಹೊಂದಿರುವ ‘ಕಣಿ’ಯನ್ನು ನೋಡುವುದು ಹಲವೆಡೆ ಪ್ರಧಾನ ವಿಧಿಯಾಗಿ ನಡೆಯುತ್ತದೆ. ದೇವಾಲಯಗಳಿಗೆ ಹೋಗುವುದು, ದೈವಗಳಿಗೆ ಸೇವೆ ಸಲ್ಲಿಸುವುದು ಮುಖ್ಯ ಆಚರಣೆಯಾಗುವ ಕ್ರಮವೂ ಚಾಲ್ತಿಯಲ್ಲಿದೆ. ತುಳುನಾಡಿನ ಉದ್ದಕ್ಕೂ ವೈವಿಧ್ಯದಿಂದ ನಡೆಯುವ ‘ಇಗಾದಿ’ ಅಥವಾ ‘ಯುಗಾದಿ’ ‘ವಿಷು' ಎಂದೇ ವಿಶೇಷವಾಗಿ ‘ಬಿಸು’ವಾಗಿ ಸ್ವೀಕರಿಸಲ್ಪಟ್ಟು ನಡೆಯತ್ತದೆ. ಆದರೆ ಕೃಷಿಕನ ಲಕ್ಷ್ಯವಿರುವುದು ಮುಂದಿನ ವರ್ಷದ ಬೇಸಾಯದ ಸ್ವರೂಪ ಹೇಗಿರಬೇಕು ಎಂದು ನಿರ್ಧರಿಸುವಲ್ಲಿ. ಅದಕ್ಕಾಗಿ ಆತ ‘ಯುಗಾದಿ ಫಲ’ ಕೇಳುವಲ್ಲಿ ಆಸಕ್ತನಿರುತ್ತಾನೆ. ಈ ವರ್ಷದ ಮಳೆ ಹೇಗೆ ಎಂದು ಪಂಚಾಂಗ ವಿವರಿಸುವ ‘ಯುಗಾದಿ ಫಲ’ವು ಮಳೆಯ ಪ್ರಮಾಣವನ್ನು ತಿಳಿಸುತ್ತದೆ. ಯಾವ ಬಣ್ಣದ ಧಾನ್ಯಗಳ ಬೆಳೆ ಹುಲುಸಾಗಿ ಬೆಳೆದೀತು ಎಂಬ ಭವುಷ್ಯವನ್ನು ತಿಳಿಯುವ ಕುತೂಹಲವು ರೈತನದ್ದಾಗಿರುತ್ತದೆ. ‘ಕಪ್ಪುಗು ಎಡ್ಡೆನಾ, ಬೊಲ್ದುಗು ಎಡ್ಡೆನಾ’ (ಕಪ್ಪು ಬಣ್ಣದ ಧಾನ್ಯ ಅಥವಾ ಅಕ್ಕಿಯಾಗುವ ಭತ್ತದ ತಳಿ ಆದೀತೋ ಬಿಳಿ ಬಣ್ಣದವು ಆದೀತೊ ಅಥವಾ ಯಾವುದು ಒಳ್ಳೆಯದಾದೀತು) ಎಂಬ ನಿರ್ಧಾರಕ್ಕೆ ಬಂದು ‘ಕಜೆಬಿದೆ’ - ಕುಚ್ಲು ಅಕ್ಕಿಯ ಬೀಜ ಅಥವಾ ‘ಮಡಿಬಿದೆ - ಬೆಳ್ತಿಗೆಯ ಬೀಜವನ್ನು ‘ಕೈಬಿತ್ತ್’ ( ಸಾಂಕೇತಿಕವಾಗಿ ಗದ್ದೆ ಮೂಲೆಯಲ್ಲಿ ಒಂದು ಹಿಡಿ ಪ್ರಮಾಣದಲ್ಲಿ ಹಾಕುವುದು) ಪಾಡುನಿ ಎಂಬ ಯುಗಾದಿಯಂದು ನಡೆಸಲಾಗುವ ಕೃಷಿ ಆರಂಭದ ಪ್ರಕ್ರಿಯೆಯಲ್ಲಿ ಒಂದು ಪರಂಪರೆಯಿಂದ ಸಾಗಿ ಬಂದ ಸಂಪ್ರದಾಯವಿದೆ. ಬುಳೆಪು ಕಾಣಿಕೆ : ಭೂ ಸುಧಾರಣೆ ಕಾನೂನು ಅನುಷ್ಠಾನದ ಪೂರ್ವದಲ್ಲಿ ‘ಬೆನ್ನಿಬುಡ್ಪುನಿ ಮತ್ತು ಮಲ್ಪುನಿ’( ಸಾಗುವಳಿ ಮಾಡುತ್ತೇನೆ ಎಂದು ತೊಡಗುವ ಅಥವಾ ಸಾಗುವಳಿ ಬಿಡುತ್ತೇನೆ ಎಂದು ಒಕ್ಕಲು ಬಿಟ್ಟುಹೋಗುವ ಕ್ರಮ) ಎಂಬ ನಿರ್ಣಯಕ್ಕೆ ಯುಗಾದಿ ನಿಗದಿತ ದಿನವಾಗಿತ್ತು. ಏಕೆಂದರೆ ಕೃಷಿ ಆರಂಭವೇ ಇಲ್ಲಿಂದ ಆಗಿರುವುದರಿಂದ ಭೂ ಒಡೆತನ ಉಳುವವನದ್ದಾಗಿರವುದರಿಂದ ಭೂ ಒಡೆಯನಿಗೆ ಮುಂದಿನ ವರ್ಷದ ಅಥವಾ ಹೊಸ ವರ್ಷದಲ್ಲಿ ಕೃಷಿ ಮುಂದುವರಿಸಲು ‘ಬುಳೆಪು ಕಾಣಿಕೆ’ ( ತರಕಾರಿ,ಹಣ್ಣುಗಳನ್ನು ಭೂಮಾಲಕನಿಗೆ ಸಾಂಕೇತಿಕವಾಗಿ ಅರ್ಪಿಸುವುದು) ಸಲ್ಲಿಸಿ ಅಪ್ಪಣೆ ಕೇಳುವ ಕ್ರಮವೂ ಮರೆತುಹೋಗಿದೆ. ಆದರೆ ಊರ ದೇವಾಲಯಕ್ಕೆ ಈ ಕಾಣಿಕೆ ಸಂದಾಯದ ಸಂಪ್ರದಾಯ ಇಂದಿಗೂ ಕೆಲವೆಡೆ ಇದ್ದಂತಿದೆ. ಮನೆಯ ಹಿರಿಯರನ್ನು ಗೌರವದಿಂದ ಕಾಣುವ ಅಂದರೆ, ಅವರಿಗೆ ನಮಸ್ಕರಿಸುವುದೂ ಸತ್‌ಸಂಪ್ರದಾಯವಾಗಿದೆ. ಮನೆಮಂದಿಗೆ ಹಾಗೂ ಪೂರ್ಣ ಕಾಲಿಕ ಕೆಲಸದವರಿಗೂ ಹೊಸಬಟ್ಟೆ ಕೊಡುವ ಕ್ರಮವು ‘ಇಗಾದಿ’ಯಂದು ನಡೆಯುತ್ತದೆ. ಇಗಾದಿಯ ಅಂಗವಾಗಿ ‘ತಾರಾಯಿ ಕುಟ್ಟುನಿ’ ( ತೆಂಗಿನಕಾಯಿಯನ್ನು ಉಪಯೋಗಿಸಿ ಆಡುವ ಆಟ) ಒಂದು ಜನಪದ ಆಟ ಆಡುವ ಕ್ರಮವಿತ್ತು. ‘ಬಿಸುತ ಕಟ್ಟ’ ಎಂಬ ಕೋಳಿ ಅಂಕವೂ ‘ಬಿಸು’ ಅಂಗವಾಗಿ ನಡೆಯುವುದಿದೆ. ಹಬ್ಬಗಳ ಆಚರಣೆಯ ಗುರಿ ‘ಆನಂದ’ವನ್ನು ಪಡೆಯುವುದು. ಆದರೆ ಯುಗಾದಿ ಸರಳ, ಭಾವನಾತ್ಮಕ ಆಚರಣೆಯಾಗಿ ನೆರವೇರುತ್ತದೆ. ಇಲ್ಲಿ ಹಳೆಯ ಕಹಿಯನ್ನು ಮರೆಯುವ, ‘ಸಿಹಿ’ಯನ್ನು ಬಯಸುವ ನಿರೀಕ್ಷೆ ಇದೆ. ಕಹಿಯಲ್ಲೂ ಸಿಹಿಯನ್ನು ಆನಂದಿಸುವ ಅಧ್ಯಾತ್ಮವಿದೆ. ಒಟ್ಟಿನಲ್ಲಿ ‘ಕರ್ತವ್ಯ’ಕ್ಕೆ ಎಚ್ಚರಿಕೆ ಇದೆ. ‘ತೊಡಗು’ ಎಂಬ ಸಂದೇಶವಿದೆ. ಅದೇನಿದ್ದರೂ ಕೃಷಿ ಆರಂಭಕ್ಕೆ ಇಗಾದಿ (ಯುಗಾದಿ ಅಥವಾ ಬಿಸು) ಎಂಬ ಅನುಸಂಧಾನವಿದ್ದಾಗ ಮಾತ್ರ. ಆದರೆ ಈ ಕಾಲದಲ್ಲೂ ‘ಇಗಾದಿ’ ನೆನಪಿದೆ, ಯುಗಾದಿ ಆಚರಿಸಲ್ಪಡುತ್ತಿದೆ, ‘ಬಿಸು ಕಣಿ’ಯ ದರ್ಶನ ಸಂಭ್ರಮದಿಂದ ನಡೆಯುತ್ತಿದೆ ಎನ್ನುವುದು ಮಾತ್ರ ಸಂತಸದ ಸಂಗತಿ. ವೈವಿಧ್ಯಮಯ ಕಲ್ಪನೆಯೊಂದಿಗೆ ಸೂಕ್ತ ಅನುಸಂಧಾನ ವಿಧಾನದಿಂದ ‘ಸೌರಯುಗಾದಿ’ ನೆರವೇರುವುದು. ಇದರ ಹಿನ್ನೆಲೆ ಕೃಷಿ ಆಧಾರಿತ ಬದುಕಿನ ನೋಟ. • ಹಳೆಯ ಕಹಿಯನ್ನು ಮರೆತು ಮುಂದೆ ಅಡಿ ಇಡುವ ಸಂಭ್ರಮದ ನಡುವೆಯೂ ‘ಬಾಗುವ’ (ನಮಸ್ಕರಿಸುವ) ಸಂದೇಶವಿದೆ. • ‘ಕಣಿ’ ಎಂಬುದು ಹಣ್ಣು, ಕಾಯಿ, ಅಕ್ಕಿ, ಕನ್ನಡಿ, ಚಿನ್ನಾಭರಣ ಇತ್ಯಾದಿ ಮಂಗಳ ದ್ರವ್ಯಗಳನ್ನು ದೇವರ ಮುಂದೆ ಜೋಡಿಸಿಟ್ಟು ಯುಗಾದಿಯಂದು ಬೆಳಗ್ಗೆ ಎದ್ದೊಡನೆ ನೋಡುವ ಮಂಗಲದ್ರವ್ಯ ದರ್ಶನ ಪ್ರಕ್ರಿಯೆ. •‘ಕಣಿ’ಯಿಂದ ಶುಭಫಲ ನಿರೀಕ್ಷೆ ಇದೆ. ‘ವಿಷು'ಎಂಬುದು ‘ಸೌರಯುಗಾದಿ’. ಇದು ತುಳುವರಲ್ಲಿ ‘ಬಿಸು’ ಆಯಿತು. ಈ ಹೆಸರಿನಲ್ಲಿ ವಿವಿಧ ಸಾಮೂಹಿಕ ಆಚರಣೆಗಳು ಇತ್ತೀಚೆಗೆ ನಡೆಯುತ್ತಿವೆ. • ಉತ್ತರದಿಂದ ದಕ್ಷಿಣ ತುಳುನಾಡಿನತ್ತ ಗಮನಿಸಿದರೆ ನಾಲ್ಕೈದು ವಿಧದ ಸೌರ ಯುಗಾದಿಯ ಆಚರಣಾ ವೈವಿಧವಿದೆ. • ಸೌರಯುಗಾದಿಯಲ್ಲಿ ಜಾನಪದ - ಶಿಷ್ಟ ಸಂಸ್ಕೃತಿಗಳ ಸುಗಮ ಸಮಾಗದ ಆಚರಣಾ ವಿಧಾನವಿದೆ. • ‘ಕಣಿ’ಯೊಂದಿಗೆ ಅಟ್ಟದ ಮೇಲಿನ ‘ತಾಳೆಗರಿ’ಯ ಗ್ರಂಥಗಳನ್ನು ಸ್ವಚ್ಛಗೊಳಿಸಿ ಇಡುವ ಕ್ರಮವಿದೆ. ಇತ್ತೀಚೆಗೆ ಪಂಚಾಂಗ (ಹೊಸ)ವನ್ನು ಇಡುವುದು ರೂಢಿಯಾಗಿದೆ. ಲೇಖನ : ಕೆ.ಎಲ್. ಕುಂಡಂತಾಯ