Updated News From Kaup
ಕಾಪು ಪುರಸಭಾ ಚುನಾವಣೆ : ಶೇ.73.95 ಮತದಾನ

Posted On: 27-12-2021 11:12PM
ಕಾಪು : ಇಂದು ನಡೆದ ಪುರಸಭೆಯ 23 ವಾರ್ಡ್ ಗಳ 23 ಮತಗಟ್ಟೆಗಳಲ್ಲಿ ಸಾರ್ವತ್ರಿಕ ಚುನಾವಣೆಯು ಶಾಂತಿಯುತವಾಗಿ ಹಾಗೂ ನ್ಯಾಯಯುತವಾಗಿ ಜರಗಿದೆ. ಒಟ್ಟು 17366 ಮತದಾರರಿದ್ದು, ಈ ಪೈಕಿ 8196 ಪುರುಷ ಮತದಾರರಲ್ಲಿ 5772 ಮತದಾರರು, 9170 ಮಹಿಳಾ ಮತದಾರರಲ್ಲಿ 7070 ಮತದಾರರು ಮತ ಚಲಾವಣೆ ಮಾಡಿದ್ದು ಶೇ. 73.95% ಮತದಾನ ಆಗಿರುತ್ತದೆ.
ವಾರ್ಡ್ 1 (ಕೈಪುಂಜಾಲು) ರಲ್ಲಿ ಶೇ. 80.12% ಮತದಾನವಾಗಿದ್ದು, ಇದು ಅತೀ ಹೆಚ್ಚು ಮತದಾನವಾಗಿರುವ ವಾರ್ಡ್ ಆಗಿದ್ದು, ವಾರ್ಡ್ 15 (ಮಂಗಳಾಪೇಟೆ) ಶೇ. 64.33 % ಮತದಾನವಾಗಿದ್ದು, ಇದು ಅತೀ ಕಡಿಮೆ ಮತದಾನವಾಗಿವ ವಾರ್ಡ್ ಆಗಿರುತ್ತದೆ.ಮತ ಎಣಿಕೆಯು ಡಿಸೆಂಬರ್ 30ರಂದು ಪೂರ್ವಾಹ್ನ 8 ಗಂಟೆಯಿಂದ ಕಾಪು ಪುರಸಭಾ ಕಾರ್ಯಾಲಯದಲ್ಲಿ ನಡೆಯಲಿದೆ.
ನಟನೆಗೂ ಸೈ...ಸಮಾಜ ಸೇವೆಯಲ್ಲೂ ಎತ್ತಿದ ಕೈ...ಲವಿನಾ ಫೆರ್ನಾಂಡೀಸ್

Posted On: 27-12-2021 07:39PM
ಅನೇಕರು ಕನಸುಗಳನ್ನು ಕಂಡು ಅದನ್ನು ನನಸು ಮಾಡಲು ಕಷ್ಟಪಟ್ಟು ಅದನ್ನು ಸಾಧಿಸಿ ಅನೇಕರಿಗೆ ದಾರಿ ದೀಪವಾಗುತ್ತಾರೆ. ಕೆಲವರ ಯಶಸ್ಸಿನ ಕಥೆ ಹಲವರಿಗೆ ಗೊತ್ತಿರುತ್ತದೆ. ಇನ್ನು ಕೆಲವರ ಯಶಸ್ಸು ಮಾತ್ರ ಕಾಣುತ್ತೆ. ಆದರೆ, ಅದರ ಹಿಂದೆ ಪಟ್ಟ ಪರಿಶ್ರಮ ಯಾರಿಗೂ ಕಾಣುವುದಿಲ್ಲ. ಕೆಲವರು ತಮ್ಮ ಸಂತೋಷವನ್ನು ಮಾತ್ರ ಹೇಳಿಕೊಳ್ಳುತ್ತಾರೆ. ಆದರೆ, ಅವರ ಸಾಧನೆಯ ಹಿಂದಿನ ಕಥೆಯನ್ನು ಅವರು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಇಂತಹ ವ್ಯಕ್ತಿಗಳಲ್ಲಿ ಒಬ್ಬರು ಲವಿನಾ ಫರ್ನಾಂಡೀಸ್. ಕೂಡು ಕುಟುಂಬದಲ್ಲಿ ಜನಿಸಿದವರು ಲವಿನಾ. ಹತ್ತಿರದ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ, ಅಮ್ಮನ ಕೈ ಅಡುಗೆ, ಅಪ್ಪನ ಬೈಗುಳ, ಒಡಹುಟ್ಟಿದವರ ಜೊತೆಗಿನ ತುಂಟತನಗಳು ಹೀಗೆ ಬಾಲ್ಯದಲ್ಲಿಯೇ ಚುರುಕಾಗಿದ್ದವರು. ಬೇರೆಯವರ ಕಷ್ಟಕ್ಕೆ ಬೇಗನೆ ಸ್ಪಂದಿಸಿ, ಅವರಿಗೆ ಸಹಾಯ ಮಾಡುವ ಗುಣ ಅವರಿಗೆ ಎಳವೆಯಲ್ಲಿಯೇ ಬಂದಿದೆ.
ಕಷ್ಟ ಎಂದವರಿಗೆ ನೆರವಾಗೋ ಜೀವ : ಲವಿನಾ ಅನೇಕರಿಗೆ ಶಿಕ್ಷಣ, ಮದುವೆ, ಮೆಡಿಕಲ್ ಖರ್ಚು, ಉದ್ಯೋಗ, ಮನೆ ಕಟ್ಟಲು ಹಾಗೂ ರಿಪೇರಿ ಮುಂತಾದ ಕೆಲಸಗಳಿಗೆ ಸಹಾಯ ಮಾಡಿದ್ದಾರೆ. ಬಲಗೈಯಲ್ಲಿ ಕೊಟ್ಟಿದ್ದು, ಎಡಗೈಗೆ ಗೊತ್ತಾಗಬಾರದು ಎಂಬಂತೆ ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದಾರೆ ಅವರು. ಹಾಗಾಗಿ ಅವರ ಈ ಮಹಾನ್ ಕಾರ್ಯಗಳು ಯಾರಿಗೂ ತಿಳಿದಿಲ್ಲ. 'ಕಷ್ಟ' ಎಂದವರಿಗೆ ನೆರವಾಗಿದ್ದಾರೆ. 'ಸಂಕಟ'ದಲ್ಲಿರುವವರಿಗೆ ಆಸರೆಯಾಗಿದ್ದಾರೆ. ಈ ಗುಣ ಅವರನ್ನು ಅನೇಕ ಕುಟುಂಬಗಳೊಂದಿಗೆ ಬೆಸೆದಿದ್ದು, ಅವರೆಲ್ಲರ ಆಶೀರ್ವಾದಕ್ಕೆ ಪಾತ್ರರಾಗಿದ್ದಾರೆ.
ನಟನೆಗೂ ಸೈ : ಈ ನಡುವೆ ತಮ್ಮ ಹೃದಯದ ಮೂಲೆಯಲ್ಲಿ ಅಡಗಿರೋ ನಟನೆಯ ಆಸೆಯನ್ನೂ ಬಿಡಲಿಲ್ಲ. ಉದ್ಯೋಗ, ಸಂಸಾರ, ಕುಟುಂಬ, ಸಮಾಜ ಸೇವೆ, ಇವೆಲ್ಲದರ ನಡುವೆ ಸಿಕ್ಕ ಅಲ್ಪ ಸಮಯದಲ್ಲಿ ದುಬೈನಲ್ಲಿಯೇ ನಾಟಕ ತಂಡವನ್ನು ಸೇರಿಕೊಂಡು ಅಭಿನಯಿಸಲು ಶುರು ಮಾಡಿದರು. ನೋಡುನೋಡುತ್ತಲೇ ಯಶಸ್ವೀ ನಟಿಯಾಗಿ ಬೆಳೆದರು ಲವಿನಾ. 16 ವರ್ಷಗಳ ಹಿಂದೆ 'ಥೋ ಮಕಾ ನಾಕಾ' ಎಂಬ ಕೊಂಕಣಿ ನಾಟಕದಲ್ಲಿ ಅಭಿನಯಿಸಿದರು. ನಂತರ ಅನೇಕ ನಾಟಕಗಳು, ಕಿರು ಚಿತ್ರ, ವೀಡಿಯೋ ಆಲ್ಬಂಗಳಲ್ಲಿ ನಟಿಸಿದರು. ಇವರು ಅಭಿನಯಿಸಿದ ಮೊದಲ ಕೊಂಕಣಿ ಸಿನಿಮಾ 'ಏಕ್ ಅಸ್ಲಾರ್ ಏಕ್ ನ". ಇದು ಜಗತ್ತಿನಾದ್ಯಂತ ಪ್ರದರ್ಶನ ಕಂಡು ಯಶಸ್ಸು ಬಾಚಿಕೊಂಡ ಚಿತ್ರ. ಇದೀಗ ಲವಿನಾ ಅಭಿನಯದ ಎರಡನೇ ಚಿತ್ರ 'ಸೋಡಾ ಶರಬತ್' ಡಿಸೆಂಬರ್ 31 ರಂದು ತೆರೆಗೆ ಬರುತ್ತಿದೆ. ಈ ಸಿನಿಮಾ ಈಗಾಗಲೇ ತನ್ನ ಟ್ರೇಲರ್ ಮೂಲಕ ಗಮನ ಸೆಳೆದು, ಸಿನಿಮಾ ವೀಕ್ಷಿಸಲು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.
ಕುಟುಂಬದ ಪ್ರೋತ್ಸಾಹ : ಲವಿನಾ ಅನೇಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾಧಿಸುತ್ತಿದ್ದಾರೆ. ಆದರೂ ಸಾಮಾನ್ಯರಂತಿದ್ದಾರೆ. ತಾನು ಬೆಳೆಯಲು ಪತಿ ಗೊಡ್ವಿನ್ ಫೆರ್ನಾಂಡೀಸ್, ಮಕ್ಕಳಾದ ಲೆನೋರ ಫೆರ್ನಾಂಡೀಸ್, ಲೆನಾರ್ಡ್ ಫೆರ್ನಾಂಡೀಸ್ , ತಮ್ಮ ಕುಟುಂಬ, ರಂಗಭೂಮಿಯ ಸಹಕಲಾವಿದರ ಸಹಕಾರವನ್ನು ನೆನೆಯುತ್ತಾರೆ ಲೆವಿನಾ. ಅವರು ಜೀವನದಲ್ಲಿ ಇನ್ನಷ್ಟು ಸಾಧಿಸಲಿ, ಯಶಸ್ವಿಯಾಗಲಿ ಎಂದು ಹಾರೈಸೋಣ.
ಜಿಲ್ಲೆಯಲ್ಲಿ ನೈಟ್ಕರ್ಫ್ಯೂ ಮತ್ತು ಹೊಸ ವರ್ಷಾಚರಣೆ ಕುರಿತ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಪಾಲನೆ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

Posted On: 27-12-2021 07:31PM
ಉಡುಪಿ : ಓಮಿಕ್ರಾನ್ ನಿಯಂತ್ರಣ ಕುರಿತಂತೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ನೈಟ್ಕರ್ಫ್ಯೂ ಮತ್ತು ಹೊಸ ವರ್ಷಾಚರಣೆ ಕುರಿತ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಆನುಷ್ಠಾನಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯಾದ್ಯಂತ ಡಿಸೆಂಬರ್ 28 ರಿಂದ ಜನವರಿ 7 ರ ವರಗೆ, ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ಕರ್ಫ್ಯೂ ಜಾರಿಗೊಳಿಸಲಾಗುತ್ತಿದ್ದು, ಈ ಅವಧಿಯಲ್ಲಿ ಅಗತ್ಯ ಚಟುವಟಿಕೆ ಹೊರತುಪಡಿಸಿ ಸಾರ್ವಜನಿಕರ ಓಡಾಟವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ವೈದ್ಯಕೀಯ ಮತ್ತು ತುರ್ತು ಸೇವೆಗಳು ಯಥಾ ಪ್ರಕಾರ ಮುಂದುವರೆಯಲಿದ್ದು, ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವ ಕೈಗಾರಿಕೆ/ ಕಂಪೆನಿಗಳಿಗೆ ಅನುಮತಿ ನೀಡಿದ್ದು, ಅಲ್ಲಿನ ನೌಕರರು ಸೂಕ್ತ ಗುರುತಿನ ಚೀಟಿ ಸಲ್ಲಿಸುವ ಮೂಲಕ ಸಂಚರಿಸಬಹುದು. ಬಸ್, ರೈಲು ಮತ್ತು ವಿಮಾನ ಪ್ರಯಾಣ ಅನುಮತಿಸಲಾಗಿದ್ದು, ಪ್ರಯಾಣಿಕರು ಸೂಕ್ತ ಪ್ರಯಾಣದ ದಾಖಲೆಗಳು ಸಲ್ಲಿಸುವುದು ಕಡ್ಡಾಯವಾಗಿದೆ. ಎಲ್ಲಾ ತರಹದ ಸರಕು ಸಾಗಾಟ ವಾಹನಗಳ ಓಡಾಟಕ್ಕೆ ಅನುಮತಿ ನೀಡಲಾಗಿದ್ದು, ಇ-ಕಾಮರ್ಸ್ ಮತ್ತು ಹೋಮ್ ಡೆಲಿವರಿ ಕೆಲಸ ಮುಂದುವರೆಸಲು ಅನುಮತಿ ನೀಡಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದರು.
ಹೊಸ ವರ್ಷಾಚರಣೆ ಅಂಗವಾಗಿ ಡಿಸೆಂಬರ್ 30 ರಿಂದ ಜನವರಿ 2 ರ ವರೆಗೆ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಕ್ಲಬ್/ಪಬ್/ರೆಸ್ಟೋರೆಂಟ್/ಹೋಟೆಲ್ಗಳು ಅಥವಾ ಖಾಸಗಿ ಸ್ಥಳಗಳಲ್ಲಿ ಡಿಜೆ/ಆರ್ಕೆಸ್ಟ್ರಾ/ಸಮೂಹ ನೃತ್ಯ ಮುಂತಾದ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ನಡೆಸಲು ಅವಕಾಶವಿರುವುದಿಲ್ಲ. ಹೊಸವರ್ಷ ಆಚರಿಸಲು ಸಾರ್ವಜನಿಕ ಸ್ಥಳಗಳು ಸೇರಿದಂತೆ ರಸ್ತೆಗಳು, ಉದ್ಯಾನವನಗಳು, ಆಟದ ಮೈದಾನಗಳು ಇತ್ಯಾದಿಗಳನ್ನು ಬಳಸುವಂತಿಲ್ಲ. ರೆಸ್ಟೋರೆಂಟ್ಗಳು/ ಹೋಟೆಲ್ಗಳು/ ಕ್ಲಬ್ಗಳು / ಪಬ್ಗಳು ಕೋವಿಡ್-19 ಸಮುಚಿತ ವರ್ತನೆಯೊಂದಿಗೆ, ಸಿಬ್ಬಂದಿಗಳು ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ಮತ್ತು 2 ಡೋಸ್ ಕೋವಿಡ್ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಬೇಕು. ಇಲ್ಲಿಗೆ ಆಗಮಿಸುವ ಸಾರ್ವಜನಿಕರು ಕಡ್ಡಾಯವಾಗಿ 2 ಡೋಸ್ ಕೋವಿಡ್ ಲಸಿಕೆ ಪಡೆದಿರುವ ಕುರಿತು ಪತ್ರವನ್ನು ಪ್ರದರ್ಶಿಸಿದ ನಂತರವೇ ಪ್ರವೇಶ ನೀಡಬೇಕು ಹಾಗೂ ಕೋವಿಡ್-19 ಸಮುಚಿತ ವರ್ತನೆಯೊಂದಿಗೆ ಶೇ.50 ರಷ್ಟು ಆಸನ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದರು.
ಡಿಸೆಂಬರ್ 28 ರಿಂದ ಜಿಲ್ಲೆಯಲ್ಲಿ ಎಲ್ಲಾ ಸಭೆ, ಸಮಾರಂಭ, ಸಮ್ಮೇಳನ, ಮದುವೆ ಇತ್ಯಾದಿಗಳಲ್ಲಿ ಭಾಗವಹಿಸುವವರ ಸಂಖ್ಯೆಯನ್ನು 300 ಕ್ಕೆ ಸೀಮಿತಗೊಳಿಸಿದ್ದು, ಈ ಕಾರ್ಯಕ್ರಮಗಳಲ್ಲಿ ಕೋವಿಡ್-19 ಸಮುಚಿತ ವರ್ತನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಸಂಘಟಕರ/ವ್ಯವಸ್ಥಾಪಕರ ಜವಾಬ್ದಾರಿಯಾಗಿದೆ ಎಂದರು. ಜಿಲ್ಲೆಯಲ್ಲಿ ಇದುವರೆಗೆ 96.03% ಜನರಿಗೆ ಪ್ರಥಮ ಡೋಸ್ ಹಾಗೂ 82.97% ಜನರಿಗೆ ಎರಡೂ ಡೋಸ್ ಕೋವಿಡ್-19 ಲಸಿಕೆ ನೀಡಿದ್ದು, 15-18 ವರ್ಷ ವಯಸ್ಸಿನವರಿಗೆ ಹಾಗೂ ಬೂಸ್ಟರ್ ಡೋಸ್ ನೀಡುವ ಕುರಿತಂತೆ ಕೇಂದ್ರ ಮತ್ತು ರಾಜ್ಯದ ಮಾರ್ಗಸೂಚಿ ಬಂದ ತಕ್ಷಣ ಕ್ರಮ ವಹಿಸಲಾಗುವುದು ಎಂದ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಜಿಲ್ಲೆಯಲ್ಲಿ ಪ್ರಸ್ತುತ 55 ಸಕ್ರಿಯ ಪ್ರಕರಣಗಳು ಮಾತ್ರ ಇದ್ದು, ಪಾಸಿಟಿವಿಟಿ ಪ್ರಮಾಣ 0.2% ಇದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ, ಎಎಸ್ಪಿ ಕುಮಾರ ಚಂದ್ರ ಉಪಸ್ಥಿತರಿದ್ದರು.
ಓಂತಿಬೆಟ್ಟು : ವೃದ್ಧೆಯೋರ್ವರ ಮನೆಗೆ ಬೇಕಾದ ಸವಲತ್ತುಗಳನ್ನು ನೀಡಿ ಮಾನವೀಯತೆ ಮೆರೆದ ತಂಡ

Posted On: 27-12-2021 12:18PM
ಉಡುಪಿ : ಹಿರಿಯಡ್ಕ ಸಮೀಪ ಓಂತಿಬೆಟ್ಟು ಎಂಬ ಊರಿನಲ್ಲಿ ವೃದ್ಧೆಯೋರ್ವರ ಮನೆಯಿದ್ದು ಸರಿಯಾದ ವ್ಯವಸ್ಥೆಯನ್ನು ಹೊಂದಿರದ ಈ ಮನೆಗೆ ಬೇಕಾದ ಸವಲತ್ತುಗಳನ್ನು ಸಮಾಜ ಸೇವಕರಾದ ನೀತಾ ಪ್ರಭು ಮತ್ತು ತಂಡದಿಂದ ನೀಡಲ್ಪಟ್ಟಿತು.

ಮನೆಯ ಮೇಲ್ಛಾವಣಿ, ಸ್ವಿಚ್, ಬಲ್ಬ್, ಅಡುಗೆ ಕೋಣೆಗೆ ಬೇಕಾದ ಸವಲತ್ತುಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ತಂಡಕ್ಕೆ ಊಟೋಪಚಾರದ ವ್ಯವಸ್ಥೆಯನ್ನು ಸಂದೀಪ್ ನೀಡಿ ಸಹಕರಿಸಿದ್ದರು.
ಇಂತಹ ಜೀವನ ಸಾಗಿಸುತ್ತಿದ್ದ ವೃದ್ಧೆಗೆ ಒಂದು ಸರಿಯಾದ ಸೂರನು ನಿರ್ಮಿಸಿ ಕೊಡುವುದು ನಮ್ಮ ತಂಡದ ಗುರಿಯಾಗಿತ್ತು ಅದು ಇಂದು ನೆರವೇರಿತು. ನಾವು ಕೊಡುವಷ್ಟು ಬೆಳೆದಿಲ್ಲ ಆದರೆ ಇರುವುದರಲ್ಲಿ ಹಂಚಿ ತಿನ್ನುವಷ್ಟು ಮನಸ್ಸು ಆ ದೇವರು ಕೊಟ್ಟಿದ್ದಾನೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆಗಳು ಎಂದು ತಂಡದ ಪ್ರಮುಖರು ತಿಳಿಸಿದರು.
ಡ್ರಗ್ಸ್ ಮತ್ತು ಸೆಕ್ಸ್ ಜಿಹಾದಿಗೆ ಕ್ರೈಸ್ತ ಯುವತಿ ಬಲಿ - ರಕ್ಷಣೆ ಕೋರಿ ಯುವತಿ ತಾಯಿ ವಿಶ್ವ ಹಿಂದೂ ಪರಿಷತ್ ಗೆ ಮನವಿ

Posted On: 26-12-2021 10:33PM
ಮಂಗಳೂರು : ಜಿಲ್ಲೆಯಲ್ಲಿ ಸದ್ದು ಮಾಡುತ್ತಿರುವ ಡ್ರಗ್ಸ್ ಮತ್ತು ಲವ್ ಜಿಹಾದ್ ಗೆ ಇದೀಗ ಕ್ರೈಸ್ತ ಸಮುದಾಯದ ಯುವತಿಯೋರ್ವಳು ಬಲಿಯಾಗಿ ಆಕೆಯ ತಾಯಿ ವಿಶ್ವ ಹಿಂದೂ ಪರಿಷತ್ ಗೆ ಲಿಖಿತ ದೂರು ನೀಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಕಳೆದ ಮೂರು ವರ್ಷಗಳಿಂದ ಡ್ರಗ್ಸ್ ಪೆಡ್ಲರ್ ಕೃಷ್ಣಾಪುರ ನಿವಾಸಿ ಸಿದ್ದಿಕ್ ಮತ್ತು ಸ್ನೇಹಿತರಿಂದ ನಿರಂತರ ಲೈಂಗಿಕ ದೌರ್ಜನ್ಯ ಜೊತೆಗೆ ಡ್ರಗ್ಸ್ ನ್ನು ನೀಡುತ್ತಿದ್ದು ಇದರಿಂದ ಆಕೆ ಅನಾರೋಗ್ಯಗೊಂಡು ಮಾನಸಿಕವಾಗಿ ಅಸ್ವಸ್ಥತೆಗೆ ಒಳಗಾಗಿದ್ದಾಳೆ ಎಂದು ಆಕೆಯ ತಾಯಿ ಆರೋಪಿಸಿದ್ದಾರೆ.
ಡ್ರಗ್ಸ್ ಚಟಕ್ಕೆ ಬಲಿಯಾದ ತನ್ನ ಮಗಳನ್ನು ರಕ್ಷಿಸಿ ನ್ಯಾಯ ದೊರಕಿಸಿಕೊಡಬೇಕೆಂದು ಕೋರಿ ನೊಂದ ತಾಯಿಯು ವಿಶ್ವ ಹಿಂದೂ ಪರಿಷತ್ ಗೆ ಮನವಿ ಮಾಡಿದ್ದಾರೆ.
ಸಿ.ಎಸ್.ಸಿ ಡಿಜಿಟಲ್ ಸೇವಾ ಕೇಂದ್ರ : ಜನವರಿ 4 ಶುಭಾರಂಭ ; ಕಾರ್ಯನಿರ್ವಹಿಸಲು ಜನ ಬೇಕಾಗಿದ್ದಾರೆ

Posted On: 26-12-2021 07:10PM
ಕಾಪು : ಸಿ.ಎಸ್.ಸಿ ಡಿಜಿಟಲ್ ಸೇವಾ ಕೇಂದ್ರವು ಜನವರಿ 4ರಂದು ಶುಭಾರಂಭಗೊಳ್ಳಲಿದೆ. ಸರಕಾರದ ಯೋಜನೆಗಳು ತ್ವರಿತವಾಗಿ ಜನರಿಗೆ ತಲುಪಲು ಸಿ.ಎಸ್.ಸಿ ಕೇಂದ್ರವು ಸಹಕಾರಿಯಾಗಿದೆ.
ಅದೇ ರೀತಿ ಸಿ.ಎಸ್.ಸಿ ಡಿಜಿಟಲ್ ಸೇವಾ ಕೇಂದ್ರದಲ್ಲಿ ಕಾರ್ಯನಿರ್ವಹಿಸಲು ಜನ ಬೇಕಾಗಿದ್ದು, ಕಾಪು ಹಾಗೂ ಕಟಪಾಡಿಯ ಆಸುಪಾಸಿನವರಿಗೆ ಮೊದಲ ಆದ್ಯತೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8951569423
ಮುಂಬೈ ಶಿವಸೇನಾ ಮುಖಂಡ ಚಂದ್ರಕೃಷ್ಣ ಶೆಟ್ಟಿಯವರಿಂದ ಕಾಪು ಹೊಸ ಮಾರಿಗುಡಿ ಜೀರ್ಣೋದ್ದಾರಕ್ಕೆ 51 ಶಿಲಾ ಸೇವೆ ಸಮರ್ಪಣೆ

Posted On: 26-12-2021 05:14PM
ಕಾಪು : ಮುಂಬೈ ಶಿವಸೇನಾ ಮುಖಂಡರಾದ ಉದ್ಯಮಿ ಚಂದ್ರಕೃಷ್ಣ ಶೆಟ್ಟಿ "ಬೆರ್ಮೋಟ್ಟು" ಮಡುಂಬು, ಇನ್ನಂಜೆ ಇವರು ಇಂದು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ದಾರಕ್ಕೆ 51 ಶಿಲಾ ಸೇವೆ ನೀಡಿ, ಶಿಲಾ ಪುಷ್ಪ ಸಮರ್ಪಣೆ ಮಾಡಿ ಕಾಪು ಮಾರಿಯಮ್ಮನ ಅನುಗ್ರಹ ಪ್ರಸಾದವನ್ನು ಸ್ವೀಕರಿಸಿದರು.
ಈ ಸಂದರ್ಭ ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳೊಂದಿಗೆ ಮಾತನಾಡಿದ ಅವರು ಕೋವಿಡ್ ಕಾರಣದಿಂದಾಗಿ ಭಕ್ತರು ಕಂಗಲಾಗಿದ್ದಾರೆ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಹೊರ ರಾಜ್ಯ ಮತ್ತು ಹೊರ ದೇಶಗಳಿಂದಲೂ ಶಿಲಾಸೇವೆಯ ಮಹಾಪೂರವೇ ಹರಿದು ಬರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯಾ, ಆರ್ಥಿಕ ಸಮಿತಿಯ ಶೈಲಪುತ್ರಿ ತಂಡದ ಸಂಚಾಲಕರಾದ ಲಕ್ಷ್ಮೀಶ ತಂತ್ರಿ ಕಲ್ಯಾ ಮತ್ತು ಸಿಬ್ಬಂದಿ ಲಕ್ಷ್ಮಣ್ ಶೆಟ್ಟಿ ಮಂಡೇಡಿ ಉಪಸ್ಥಿತರಿದ್ದರು.
ಜನವರಿ 2ರಂದು ಪಾಂಜಗುಡ್ಡೆಯಲ್ಲಿ ಉಚಿತ ನೇತ್ರ ತಪಾಸಣೆ

Posted On: 26-12-2021 04:39PM
ಶಿರ್ವ : ಧರ್ಮ ಫೌಂಡೇಶನ್ (ರಿ.), ದೇಶೀ ಗೋ ಅಭಿವೃದ್ಧಿ ಕೇಂದ್ರ ಪಾಂಜಗುಡ್ಡೆ, ಶಿರ್ವ ಇವರ ನೇತೃತ್ವದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂಧತ್ವ ನಿವಾರಣಾ ವಿಭಾಗ) ಉಡುಪಿ ಇವರ ಸಹಭಾಗಿತ್ವದಲ್ಲಿ ಜನವರಿ 02, ರವಿವಾರದಂದು ಬೆಳಿಗ್ಗೆ ಘಂಟೆ 9ರಿಂದ ಮಧ್ಯಾಹ್ನ 12.30ರ ತನಕ ಧರ್ಮ ಫೌಂಡೇಶನ್(ರಿ.), ದೇಶೀ ಗೋ ಅಭಿವೃದ್ಧಿ ಕೇಂದ್ರ ಪಾಂಜಗುಡ್ಡೆ, ಕಡಂಬು, ಶಿರ್ವ ಇಲ್ಲಿ ಉಚಿತ ನೇತ್ರ ತಪಾಸಣೆ ನಡೆಯಲಿದೆ.
ಈ ಸಂದರ್ಭ ಅಗತ್ಯ ಇರುವವರಿಗೆ ಉಚಿತ ಕನ್ನಡಕ ಹಾಗೂ ಉಚಿತವಾಗಿ ಕಣ್ಣಿನ ಆಪರೇಷನ್ ಮಾಡಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಗಿರೀಶ್ ಜಿ. (9946815444)
ಸುರತ್ಕಲ್ ಎನ್ಐಟಿಕೆ ವಿದ್ಯಾರ್ಥಿ ಆತ್ಮಹತ್ಯೆ

Posted On: 26-12-2021 04:19PM
ಸುರತ್ಕಲ್ : ಇಲ್ಲಿನ ಠಾಣಾ ವ್ಯಾಪ್ತಿಯ ಎನ್ಐಟಿಕೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಿಹಾರದ ಪಾಟ್ನಾ ಮೂಲದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ 2ನೇ ವರ್ಷದ ವಿದ್ಯಾರ್ಥಿ ಸೌರವ್ (19) ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ.
ಡೆತ್ ನೋಟಿನಲ್ಲಿ ಹಣಕಾಸಿನ ಸಮಸ್ಯೆಯಿಂದ ನಾನು ಆತ್ಮಹತ್ಯೆ ಮಾಡುತ್ತಿದ್ದು ಕ್ಷಮಿಸಿ, ಶೈಕ್ಷಣಿಕ ಸಾಲವಾದ ಒಂದು ಲಕ್ಷವನ್ನು ಪಾವತಿಸಿ ಎಂದು ತಂದೆಗೆ ತಿಳಿಸಿದ್ದಾನೆ.
ಘಟನಾ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್, ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ನಾಳೆ ಕಾಪು ಪುರಸಭೆ ಚುನಾವಣೆ : ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ ಮತದಾರರು

Posted On: 26-12-2021 12:01PM
ಕಾಪು : ಇಲ್ಲಿನ ಪುರಸಭಾ ಚುನಾವಣೆ ಡಿಸೆಂಬರ್ 27 , ನಾಳೆ ನಡೆಯಲಿದ್ದು, ರಾಷ್ಟ್ರೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದ್ದರೆ, ಉಳಿದಂತೆ ಇತರೆ ಪಕ್ಷಗಳಿಗೆ ತಮ್ಮ ಅಸ್ತಿತ್ವದ ಪ್ರಶ್ನೆಯಾಗಿದೆ. ತಮ್ಮ ಪಕ್ಷ ಗೆಲ್ಲಲೇ ಬೇಕೆಂಬ ದಿಸೆಯಲ್ಲಿ ಸ್ಥಳೀಯ ರಾಜಕೀಯ ಪ್ರಮುಖರಲ್ಲದೆ ಜಿಲ್ಲೆಯ ಪ್ರಮುಖರು ಬಿರುಸಿನ ಪ್ರಚಾರ ನಡೆಸಿದ್ದರು.
ಸಂಪೂರ್ಣ ಸಿದ್ಧತೆ : ಮತದಾನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕಾಪು ತಾಲೂಕು ಆಡಳಿತದಿಂದ ಮತದಾನ ಕೇಂದ್ರ ಸೇರಿದಂತೆ ಇನ್ನಿತರ ವ್ಯವಸ್ಥೆಯನ್ನು ಮಾಡಲಾಗಿದೆ.
ಪಕ್ಷ /ಅಭ್ಯರ್ಥಿಗಳು : ಕಾಂಗ್ರೆಸ್, ಬಿಜೆಪಿ, ಜನತಾದಳ, ಎಸ್ಡಿಪಿಐ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯ ಮತ್ತು ಪಕ್ಷೇತರರು ಸೇರಿದಂತೆ 67 ಮಂದಿ 23 ವಾಡ್೯ಗಳಲ್ಲಿ ಸ್ಪರ್ಧಿಸಲಿದ್ದಾರೆ. 23 ಮತಗಟ್ಟೆಗಳಿದ್ದು, 4 ಅತಿ ಸೂಕ್ಷ್ಮ, 8 ಸೂಕ್ಷ್ಮ, 11 ಸಾಮಾನ್ಯವಾಗಿದೆ.
ಒಟ್ಟಿನಲ್ಲಿ ಪುರಸಭೆ, ಅಭಿವೃದ್ಧಿ ಪ್ರಾಧಿಕಾರ, ಅನುದಾನ ಇತ್ಯಾದಿ ಚರ್ಚೆಗಳಿಗೆ ಅಲ್ಪವಿರಾಮ ಬಿದ್ದಿದೆ. 27 ರಂದು ನಡೆಯುವ ಮತದಾನದಲ್ಲಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಿ ಬಹುಮತ ಯಾವ ಪಕ್ಷದ ಪಾಲಾಗಲಿದೆ ಎಂದು ಕಾದು ನೋಡಬೇಕಾಗಿದೆ.