Updated News From Kaup
ಕಾಪು : ಪುನೀತ್ ರಾಜ್ ಕುಮಾರ್ ರವರ ಸ್ಮರಣಾರ್ಥ -ಅಪ್ಪು ಟ್ರೋಫಿ 2021

Posted On: 30-11-2021 08:43PM
ಕಾಪು : ಅಪ್ಪು ಟ್ರೋಫಿ 2021 ಪುನೀತ್ ರಾಜ್ ಕುಮಾರ್ ರವರ ಸ್ಮರಣಾರ್ಥವಾಗಿ ಕಾಪು ಪುರಸಭೆ ವ್ಯಾಪ್ತಿ, ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿ, ಇನ್ನಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಆಟಗಾರರಿಗಾಗಿ ಕಾಪು ಪ್ರೀಮಿಯರ್ ಲೀಗ್ 2021 ಕ್ರಿಕೆಟ್ ಪಂದ್ಯಾಟವು ಡಿಸೆಂಬರ್ 5 ರಂದು ಕಾಪುವಿನ ದಂಡತೀರ್ಥ ಶಾಲೆಯ ಮೈದಾನದಲ್ಲಿ ನಡೆಯಲಿದೆ.
ವಿಜೇತ ತಂಡಕ್ಕೆ ₹12,001 ಮತ್ತು ಟ್ರೋಫಿ, ರನ್ನರ್ ಅಪ್ ತಂಡಕ್ಕೆ ₹ 8,001 ಮತ್ತು ಟ್ರೋಫಿ ಸಿಗಲಿದೆ.
ಪಂದ್ಯಾಟದ ನಿಯಮಗಳು : ಪ್ರತಿ ಪಂದ್ಯಾಟವು 6 ಓವರ್‌ಗಳಾಗಿದ್ದು (ಸಮಯದ ಅಭಾವ ಇದ್ದಲ್ಲಿ ಓವರ್ ಕಡಿತಗೊಳಿಸಲಾಗುವುದು), ತೀರ್ಪುಗಾರರ ತೀರ್ಮಾನ ಅಂತಿಮ, ಲೀಗ್ ಮಾದರಿಯ ಪಂದ್ಯಾಕೂಟ, ಯಾವುದೇ ಬದಲಾವಣೆ ಇದ್ದಲ್ಲಿ ತಂಡಗಳಿಗೆ ಮುಂಚಿತವಾಗಿ ತಿಳಿಸಲಾಗುವುದು, ಯಾವುದೇ ಬದಲಾವಣೆಯ ಹಕ್ಕನ್ನು ವ್ಯವಸ್ಥಾಪಕರು ಹೊಂದಿರುತ್ತಾರೆ, ರಾಡಿ ಎಸೆತಕ್ಕೆ ಅವಕಾಶವಿಲ್ಲ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9741539169 (Google Pay) 9886502219
ಬಿಜೆಪಿ ಪಕ್ಷದಿಂದ ಕಾಪು ವಿಧಾನಸಭಾ ಕ್ಷೇತ್ರಾದ್ಯಂತ ವಿಧಾನ ಪರಿಷತ್ ಚುನಾವಣಾ ಸರಣಿ ಸಭೆಗಳು

Posted On: 29-11-2021 10:10PM
ಕಾಪು : ಬಿಜೆಪಿ ಪಕ್ಷದಿಂದ ಕಾಪುವಿಧಾಸಭಾ ಕ್ಷೇತ್ರಾದ್ಯಂತ ವಿಧಾನ ಪರಿಷತ್ ಚುನಾವಣಾ ಪೂರ್ವಭಾವಿಯಾಗಿ ಸರಣಿ ಸಭೆಗಳು ನಡೆದವು.
ಮಹಾಶಕ್ತಿ ಕೇಂದ್ರವಾರು ಹಾಗು ನಾಲ್ಕೈದು ಪಂಚಾಯತ್ ಒಟ್ಟು ಸೇರಿಸಿ ಅಲೆವೂರು, ಮುದರಂಗಡಿ, ಹಿರಿಯಡ್ಕ, ಕಟಪಾಡಿ, ಉಚ್ಚಿಲ ಹಾಗೂ ಪಡುಬಿದ್ರಿಯಲ್ಲಿ ಒಟ್ಟು ಆರು ಕಡೆ ಪಂಚಾಯತ್ ಸದಸ್ಯರಿಗೆ ಚುನಾವಣೆಯ ಮಹತ್ವ, ಮತದಾನ ಮಾಡುವ ರೀತಿ ಇತ್ಯಾದಿಗಳ ಮಾಹಿತಿ ನೀಡಲಾಯಿತು. ವಿಧಾನ ಪರಿಷತ್ ಅಭ್ಯರ್ಥಿಯೂ, ಕರ್ನಾಟಕ ಸರಕಾರದ ಸಚಿವರೂ ಆದ ಕೋಟ ಶ್ರೀನಿವಾಸ ಪೂಜಾರಿ ಎಲ್ಲಾ ಸಭೆಗಳಲ್ಲಿ ಭಾಗವಹಿಸಿ ತನಗೆ ಮತ ನೀಡುವಂತೆ ವಿನಂತಿಸಿದರು. ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್, ರಾಜ್ಯ ಕಾರ್ಯಕಾರಿಣಿ ಸದಸ್ಯರೂ, ಕಾಪು ಕ್ಷೇತ್ರ ಚುನಾವಣಾ ಸಂಚಾಲಕರೂ ಆದ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು, ಕಾಪು ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ಶೆಟ್ಟಿ, ಗೋಪಾಲಕೃಷ್ಣ ರಾವ್, ಮಂಗಳೂರು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಮಂಗಳೂರು, ರಾಜ್ಯ ಎಸ್ ಸಿ ಮೋರ್ಚ ಪ್ರಧಾನ ಕಾರ್ಯದರ್ಶಿ ದಿನಕರ್ ಬಾಬು, ಕಾಪು ಮಂಡಲ ನಿಕಟಪೂರ್ವ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷರಾದ ವೀಣಾ ಶೆಟ್ಟಿ, ಮಹಾಶಕ್ತಿ ಕೇಂದ್ರ ಅಧ್ಯಕ್ಷರುಗಳಾದ ಜಿಯಾನಂದ ಹೆಗ್ಡೆ, ವಿಶ್ವನಾಥ ಕುರ್ಕಾಲು, ಸಂದೀಪ್ ರಾವ್, ಚಂದ್ರಶೇಖರ ಕೋಟ್ಯಾನ್, ಶಿವಪ್ರಸಾದ್ ಶೆಟ್ಟಿ, ಉದ್ಯಾವರ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಅಶೋಕ್ ಕುಮಾರ್, ರವಿ ಶೆಟ್ಟಿ ಪಾದೆಬೆಟ್ಟು, ಶಶಿಕಾಂತ್ ಪಡುಬಿದ್ರಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಕ್ಷದ ಪ್ರಮುಖರಾದ ಸುರೇಂದ್ರ ಪಣಿಯೂರು, ಗಂಗಾಧರ ಸುವರ್ಣ, ನವೀನ್ ಎಸ್ ಕೆ, ಸಂಧ್ಯಾ ಕಾಮತ್, ಪವಿತ್ರ ಶೆಟ್ಟಿ, ಸುಭಾಸ್ ನಾಯ್ಕ್, ಕೇಶವ ಮೊಯ್ಲಿ, ಮುರಳಿಧರ್ ಪೈ, ಶಶಿಪ್ರಭಾ ಶೆಟ್ಟಿ, ಸಚಿನ್ ಸುವರ್ಣ, ಸುಮಾ ಶೆಟ್ಟಿ, ಎಲ್ಲಾ ಪಂಚಾಯತ್ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು, ಸದಸ್ಯರುಗಳು, ಶಕ್ತಿ ಕೇಂದ್ರ ಪ್ರಮುಖರು, ಜಿಲ್ಲಾ ಮತ್ತು ಮಂಡಲ ಪ್ರಮುಖರು ಉಪಸ್ಥಿತರಿದ್ದರು.
ಆಳ್ವಾಸ್ ನಿಂದ ಕೆಸರ್ಡ್ ಒಂಜಿ ದಿನ : ಕೃಷಿ ಸಾಧಕರಾದ ರಾಜು ಗೌಡ, ವಾರಿಜ ಮಿಜಾರು ಅವರಿಗೆ ಸನ್ಮಾನ

Posted On: 29-11-2021 09:54PM
ಮೂಡುಬಿದಿರೆ : ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯ ಮಿಜಾರು ಇದರ ಮಾಹಿತಿ ತಂತ್ರಜ್ಞಾನ ವಿಭಾಗದ ವತಿಯಿಂದ ಕೆಸರ್‌ಡ್ ಒಂಜಿ ದಿನ -2021 ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಭಾನುವಾರ ಮಿಜಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಎದುರು ಭಾಗದ ಗದ್ದೆಯಲ್ಲಿ ನಡೆಯಿತು. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪ್ರಗತಿಪರ ಕೃಷಿಕರಾದ ರಾಜು ಗೌಡ ಅರೆಮಜಲು ಪಲ್ಕೆ ಮತ್ತು ಕೃಷಿ ಕಾರ್ಮಿಕೆ ವಾರಿಜ ಮಿಜಾರು ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಾಯೀಶ್ ಚೌಟ ಹಿಂಗಾರ ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ, ಭಾರತ ಕೃಷಿ ಪ್ರದಾನ ದೇಶ. ಕನ್ನಡ ನಾಡಿನ ಜನತೆ ಜತೆ ತುಳುನಾಡಿನ ಸಂಸ್ಕೃತಿಯೂ ಬೆರೆತು ಹೋಗಿದೆ. ಗ್ರಾಮೀಣ ಬದುಕಿನ ಸೊಬಗು ಮತ್ತು ಸೊಗಡನ್ನು ಹೊಂದಿರುವ ಈ ದೇಶ ಇಂದು ತಂತ್ರಜ್ಞಾನದ ಪ್ರಭಾವದಿಂದಾಗಿ ಅವನತಿಯತ್ತ ಸಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಆಳ್ವಾಸ್ ತಾಂತ್ರಿಕ ಕಾಲೇಜು ಪ್ರಾಂಶುಪಾಲ ಪೀಟರ್ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು.
ದೇವಸ್ಥಾನದ ಅರ್ಚಕ ರಾಘವೇಂದ್ರ ಪೆಜತ್ತಾಯ , ಪ್ರಗತಿಪರ ಕೃಷಿಕ ಪ್ರಕಾಶ್ ಆಳ್ವ, ತೆಂಕಮಿಜಾರು ಗ್ರಾ.ಪಂ. ಅಧ್ಯಕ್ಷೆ ರುಕ್ಮಿಣಿ , ಉಪಾಧ್ಯಕ್ಷೆ ಶಮಿತಾ ಶೆಟ್ಟಿ , ಸದಸ್ಯ ನೇಮಿರಾಜ್ ಶೆಟ್ಟಿ, ಪಂಚಾಯಿತಿ ಮಾಜಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ , ಪ್ರಗತಿಪರ ಕೃಷಿಕ ಗಣೇಶ್ ಪೂಜಾರಿ ಉಪಸ್ಥಿತರಿದ್ದರು. ಶಿಕ್ಷಣ ಸಂಯೋಜಕ ಮಂಜುನಾಥ್ ಎಚ್.ಆರ್ . , ವಿದ್ಯಾರ್ಥಿ ಸಂಯೋಜಕಿ ಅಶ್ಮಿತಾ ಮೆಂಡನ್ , ಆಟೋಟ ಸ್ಪರ್ಧೆಗಳಿಗಾಗಿ ಗದ್ದೆಯನ್ನು ಸಮತಟ್ಟುಗೊಳಿಸಲು ಶ್ರಮಿಸಿದ ಸುಧಾಕರ ಪೂಂಜಾ ಇದ್ದರು . ವಿಭಾಗ ಮುಖ್ಯಸ್ಥ ಪ್ರೊ.ಸುಧೀರ್ ಶೆಟ್ಟಿ ಸ್ವಾಗತಿಸಿದರು. ಸಿರಿಶಾ ಶೆಟ್ಟಿ ನಿರೂಪಿಸಿದರು. ವಿದ್ಯಾರ್ಥಿ ಸಂಯೋಜಕಿ ಭುವನಾ ವಂದಿಸಿದರು.
ವಿದ್ಯಾರ್ಥಿಗಳಿಗಾಗಿ ವಾಲಿಬಾಲ್ , ಹಗ್ಗಜಗ್ಗಾಟ , ಕಬಡ್ಡಿ , ಮೊಸರು ಕುಡಿಕೆ ಒಡೆಯುವುದು , ಓಟ , ಅಡಕೆ ಹಾಳೆಯಲ್ಲಿ ಎಳೆಯುವುದು , ಉಪ್ಪು ಮೂಟೆ ಹಾಗೂ ಮೂರು ಕಾಲಿನ ಓಟ ಮುಂತಾದ ಸ್ಪರ್ಧೆಗಳು ಕೆಸರುಗದ್ದೆಯಲ್ಲಿ ನಡೆದವು.
ಪೆರ್ಡೂರು ಅಲಂಗಾರು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಕಾಯಿದ ಪೂಜೆ

Posted On: 29-11-2021 09:48PM
ಪೆರ್ಡೂರು : ಪೆರ್ಡೂರು ಅಲಂಗಾರು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ವರ್ಷಂಪ್ರತಿ ಜರಗುವ ಕಾಯಿದ ಪೂಜೆಯು ಡಿಸೆಂಬರ್ 2 ರಂದು ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಡಿಸೆಂಬರ್ 4 : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಪೆರಂಪಳ್ಳಿ - ವಾರ್ಷಿಕ ದೀಪೋತ್ಸವ, ಭಜನಾ ಕಾರ್ಯಕ್ರಮ, ತುಳಸಿ ಸಂಕೀರ್ತನೆ

Posted On: 29-11-2021 06:50PM
ಉಡುಪಿ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಪೆರಂಪಳ್ಳಿಯ ವಾರ್ಷಿಕ ದೀಪೋತ್ಸವ ಡಿಸೆಂಬರ್ 4, ಶನಿವಾರದಂದು ಜರಗಲಿದೆ.
ಬೆಳಗ್ಗೆ ದೇವರಿಗೆ ಏಕಾದಶ ರುದ್ರಾಭಿಷೇಕ ತದನಂತರ ಮಹಾಪೂಜೆ ಹಾಗೂ ಸಂಜೆ 6 ರಿಂದ 7 ತನಕ ಶ್ರೀ ಮಾತಾ ಭಜನಾ ಮಂಡಳಿ ಪೆರಂಪಳ್ಳಿ ಇವರಿಂದ ಭಜನಾ ಕಾರ್ಯಕ್ರಮ, ಸಂಜೆ 7 ರಿಂದ ದೀಪಾರಾಧನೆ ಮತ್ತು ಕರಂಬಳ್ಳಿ ವಿಪ್ರ ಮಹಿಳಾ ಮಂಡಳಿಯವರಿಂದ ತುಳಸಿ ಸಂಕೀರ್ತನೆ ತದನಂತರ ರಂಗಪೂಜೆ ನಡೆಯಲಿದೆ ಎಂದು ಕ್ಷೇತ್ರದ ಧರ್ಮದರ್ಶಿಗಳಾದ ಪಿ.ಎನ್ ಪ್ರಸನ್ನ ಕುಮಾರ್ ರಾವ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಯುವಜನರ ಆರೋಗ್ಯಪೂರ್ಣ ಮನಸ್ಸಿಗಾಗಿ ಯೋಗ - ಇದೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮಂತ್ರ - ಡಾ| ಹೆರಾಲ್ಡ್ ಐವನ್ ಮೋನಿಸ್

Posted On: 29-11-2021 06:36PM
ಶಿರ್ವ: ಯೋಗದಿಂದ ದೇಹ ಮತ್ತು ಮನಸ್ಸನ್ನು ನಿಯಂತ್ರಿಸಿಕೊಳ್ಳುವ ಮೂಲಕ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಬಹುದೆಂದು ಶಿರ್ವ ವಲಯ ಪತಂಜಲಿ ಯೋಗ ಸಮಿತಿಯ ಯೋಗಗುರುಗಳಾದ ರಂಜಿತ್ ಪುನರ್ ರವರು ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಯೋಗ ಮತ್ತು ಫಿಟ್ನೆಸ್ ಸೆಲ್ ಹಾಗೂ ಎನ್.ಸಿ.ಸಿ ಸಂಯುಕ್ತವಾಗಿ ಏರ್ಪಡಿಸಿದ ಯೋಗ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಉದ್ಘಾಟಿಸಿ ಮಾತನಾಡಿದರು.

ಇಂದು ಸ್ಪರ್ಧಾತ್ಮಕ ಯುಗದಲ್ಲಿ ಯುವಜನರು ತಮ್ಮ ದೈನಂದಿನ ಜೀವನದಲ್ಲಿ ದೈಹಿಕ ಚಟುವಟಿಕೆ, ಯೋಗ ಮತ್ತು ಕ್ರೀಡೆಯಲ್ಲಿ ತೊಡಗಿಸಿಕೊಂಡು ಆರೋಗ್ಯವಂತರಾಗಬೇಕು. ಇಂದಿನ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲ ಉದ್ದೇಶವು ಆರೋಗ್ಯಯುತ ಯುವಜನರನ್ನು ರೂಪಿಸಲು ಯೋಗ ಮತ್ತು ಕ್ರೀಡಾ ಕಡ್ಡಾಯವಾಗಿ ಶಿಕ್ಷಣದಲ್ಲಿ ಭಾಗವಾಗಿದೆ. ಈ ಶಿಬಿರದ ಪ್ರಯೋಜನವನ್ನು ವಿದ್ಯಾರ್ಥಿಗಳು ಸಂಪೂರ್ಣವಾಗಿ ಪಡೆದು ಮುಂದೆ ಇತರರಿಗೆ ಮಾದರಿಯಾಗಿ ಸಮಾಜಸೇವೆಯನ್ನು ಮಾಡಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಮಾತನಾಡಿ ಎಲ್ಲರಿಗೂ ಶುಭಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಗುರುಗಳಾದ ಅನಂತ ರಾಯ ಶೆಣೈ , ಕಾಲೇಜಿನ ವಿದ್ಯಾರ್ಥಿ ಸಂಘದ ನಿರ್ದೇಶಕಿ ಯಶೋಧ , ಹಿರಿಯ ಉಪನ್ಯಾಸಕ ವಿಠಲ್ ನಾಯಕ್, ಯೋಗ ಮತ್ತು ಫಿಟ್ನೆಸ್ ಸೆಲ್ ನಿರ್ದೇಶಕ ಜೆಫ್ ಸನ್ನಿ ಡಿಸೋಜಾ, ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್, ಅಣ್ಣಯ್ಯ, ಅಧ್ಯಾಪಕ ವೃಂದ, ಆಡಳಿತ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ದೀಪ್ತಿ ಮತ್ತು ಬಳಗ ಪ್ರಾರ್ಥಿಸಿ, ಚಂದನ ಸ್ವಾಗತಿಸಿ, ಹರ್ಷಿತ ಕಾರ್ಯಕ್ರಮ ನಿರೂಪಿಸಿ, ಶ್ರಾವ್ಯ ವಂದಿಸಿದರು.
ಬಂಟಕಲ್‍ನಲ್ಲಿ ಕನ್ನಡ ಜಾನಪದ ರಾಜ್ಯೋತ್ಸವ, ವಿವಿಧ ಸಾಧಕರಿಗೆ ಸನ್ಮಾನ

Posted On: 28-11-2021 11:54AM
ಕಾಪು : ನಮ್ಮ ನಾಡಿನ ಪುರಾತನ ಸಾಂಪ್ರದಾಯಿಕ ಜನಪದ ಸೊಬಗು ಇಂದಿನ ಯುವಪೀಳಿಗೆಗೆ ಕಟ್ಟುಕತೆಯಂತೆ ಭಾಸವಾಗಬಹುದು. ಆದರೆ ಜಾನಪದ ಎಂಬುದು ವಾಸ್ತವ ಸತ್ಯವಾಗಿದೆ. ಕುದುರೆ ರೇಸ್‍ನಂತಹ ಜೂಜಾಟವನ್ನು ನಿಲ್ಲಿಸದೆ ಜನರ ಮನೋರಂಜನಾ ಜಾನಪದ ಕ್ರೀಡೆಗಳಾದ ಕೋಳಿಅಂಕ, ಕಂಬಳದಂತಹ ಕ್ರೀಡೆಗಳನ್ನು ನಿರ್ಬಂಧಿಸಲು ಪ್ರಯತ್ನ ಪಡುವುದು ದುರಂತವಾಗಿದೆ. ಇದಕ್ಕೆ ಜಾನಪದ ಪರಿಷತ್ ನಂತಹ ಸಂಘಟನೆಗಳು ಸರಕಾರವನ್ನು ಪ್ರಶ್ನಿಸಬೇಕಾಗಿದೆ ಎಂದು ಬಂಟಕಲ್ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕಾರ್ಯದರ್ಶಿ ರತ್ನಕುಮಾರ್ ತಿಳಿಸಿದ್ದಾರೆ. ಅವರು ಕನ್ನಡ ಜಾನಪದ ಪರಿಷತ್ ಬೆಂಗಳೂರು, ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ, ಕನ್ನಡ ಜಾನಪದ ಪರಿಷತ್ ಕಾಪು ತಾಲೂಕು ಘಟಕ ಮತ್ತು ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ಬಂಟಕಲ್ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಕನ್ನಡ ಜಾನಪದ ರಾಜ್ಯೋತ್ಸವ-2021 ಕಾರ್ಯಕ್ರಮವನ್ನು ಉದ್ಘಾಟಿಸಿ, ವಿವಿಧ ಸಾಧಕರನ್ನು ಗೌರವಿಸಿ ಮಾತನಾಡಿದರು. ಪ್ರಸ್ತುತ ಜಾನಪದದ ಬಗ್ಗೆ ಮಕ್ಕಳಿಗೆ ತಿಳಿಸುವ ಅನಿವಾರ್ಯತೆಯಿದೆ. ಅದರ ಆಳ, ಅರಿವಿನ ಸಂಶೋಧನೆಗಳಾಗಬೇಕಾಗಿದ್ದು,ಜಾನಪದ ದಾಖಲೀಕರಣ ಪ್ರಕ್ರಿಯೆಗಳಿಗೆ ನಮ್ಮ ಸಂಸ್ಥೆ ಸದಾ ಪ್ರೋತ್ಸಾಹಿಸಲಿದೆ ಎಂದರು.

ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ತಿರುಮಲೇಶ್ವರ ಭಟ್ ಮಾತನಾಡಿ, ಅಳಿವಿನಂಚಿನಲ್ಲಿರುವ ಜಾನಪದದ ವಸ್ತು ವಿಷಯಗಳ ಬಗ್ಗೆ ದಾಖಲೀಕರಣವಾಗಬೇಕು. ಅದರ ಮೂಲಕ ಮತ್ತಷ್ಟು ತಿಳುವಳಿಕೆಯನ್ನು ಜನರಿಗೆ ಮೂಡಿಸಲು ಸಾಧ್ಯವಾಗಬಹುದು ಎಂದರು. ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷರಾದ ಡಾ.ಗಣೇಶ್ ಕುಮಾರ್ ಗಂಗೊಳ್ಳಿ ಮಾತನಾಡಿ, ಹಳ್ಳಿಗಳಲ್ಲಿ ಜಾನಪದಗಳು ಜನರ ದಿನನಿತ್ಯದ ಬದುಕಾಗಿದೆ. ಬೆಳಗಿನ ರಂಗೋಲಿಯಿಂದ, ತಾವು ಮಾಡುವ ಕೆಲಸಗಳ ದಣಿವಾರಿಸಲು ಜನಪದ ಸಾಹಿತ್ಯವನ್ನು ಅವರು ಬಳಸುವುದು ಜಾನಪದದ ಜೀವಂತಿಕೆಗೆ ಸಾಕ್ಷಿಯಾಗಿದೆ ಎಂದರು.

ಇದೇ ಸಂದರ್ಭ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಫಾರೂಕ್ ಚಂದ್ರನಗರ, ಚಾಣಕ್ಯ ಪ್ರಶಸ್ತಿ ವಿಜೇತ ಮಾಸ್ಟರ್ ಯಶಸ್ ಪಿ. ಸುವರ್ಣ, ಡಾ.ಎಸ್.ಪಿ.ಬಿ ಪ್ರಶಸ್ತಿ ಪುರಸ್ಕೃತ ಹಿರಿಯ ಗಾಯಕ ಕೆ. ರವಿಶಂಕರ್ ಮಂಗಳೂರು, ಪ್ರಗತಿಪರ ಯುವಕೃಷಿಕ ಸಂತೋಷ್ ಶೆಟ್ಟಿ ಪಂಜಿಮಾರು, ಡಾಕ್ಟರೇಟ್ ಪದವಿ ಪುರಸ್ಕೃತ ಡಾ. ಗಣೇಶ್ ಕುಮಾರ್ ಗಂಗೊಳ್ಳಿ ಅವರನ್ನು ಸನ್ಮಾನಿಸಲಾಯಿತು. ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಆಕಾಶವಾಣಿ ಕಲಾವಿದೆ ಭಾರತಿ ಟಿ ಕೆ, ಕನ್ನಡ ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷರಾದ ಪ್ರಕಾಶ್ ಸುವರ್ಣ ಕಟಪಾಡಿ, ಕಾರ್ಯದರ್ಶಿ ಭುವನೇಶ್ ಪ್ರಭು ಹಿರೇಬೆಟ್ಟು, ಜತೆಕಾರ್ಯದರ್ಶಿ ಪವಿತ್ರ ಶೆಟ್ಟಿ, ದಯಾನಂದ ದೆಂದೂರುಕಟ್ಟೆ, ದೀಪಕ್ ಬೀರ ಉಪಸ್ಥಿತರಿದ್ದರು. ಕನ್ನಡ ಜಾನಪದ ಪರಿಷತ್ ಕಾಪು ತಾಲೂಕು ಘಟಕದ ಅಧ್ಯಕ್ಷರಾದ ಪ್ರಕಾಶ್ ಸುವರ್ಣ ಕಟಪಾಡಿ ಸ್ವಾಗತಿಸಿದರು. ವಿದ್ಯಾರ್ಥಿನಿ ಪ್ರತಿಮಾ ಸಾಮಗ ಪ್ರಾರ್ಥಿಸಿದರು. ಚೈತ್ರ, ಸಮೀಕ್ಷ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ವಂದಿಸಿದರು. ಬಳಿಕ ಮಾಸ್ಟರ್ ಯಶಸ್ ಪಿ.ಸುವರ್ಣ ಕಟಪಾಡಿ ಅವರಿಂದ ಕೊಳಲುವಾದನ ಹಾಗೂ ಗಣೇಶ್‍ಕುಮಾರ್ ಗಂಗೊಳ್ಳಿ ಅವರಿಂದ ಗೀತಗಾಯನ ಕಾರ್ಯಕ್ರಮ ನಡೆಯಿತು.
ಶಿರ್ವ ಮಹಿಳಾ ಮಂಡಲ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಣೇಶ್ ಪಂಜಿಮಾರ್ ಗೆ ಸನ್ಮಾನ

Posted On: 28-11-2021 11:32AM
ಕಾಪು :ವಿಶೇಷ ಚೇತನ ಪ್ರತಿಭೆ ಗಣೇಶ್ ಪಂಜಿಮಾರ್ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಲುವಾಗಿ ಶನಿವಾರ ಶಿರ್ವ ಮಹಿಳಾ ಮಂಡಲ (ರಿ.) ಇದರ ಸರ್ವ ಪದಾಧಿಕಾರಿಗಳು ಗಣೇಶ್ ಪಂಜಿಮಾರ್ ಅವರ ಮನೆಗೆ ಆಗಮಿಸಿ ಪ್ರೀತಿ ಪೂರ್ವಕವಾಗಿ ಸನ್ಮಾನಿಸಿದರು.
ಜಿಲ್ಲೆಯ ಅಭಿವೃದ್ದಿಯಲ್ಲಿ ಯುವ ಜನತೆಯ ಪಾತ್ರ ಮಹತ್ವವಾದುದು : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

Posted On: 28-11-2021 11:27AM
ಉಡುಪಿ : ಜಿಲ್ಲೆಯ ಅಭಿವೃದ್ದಿಗೆ ಯುವಜನತೆ ನೀಡುವ ಸಹಕಾರ ಅತ್ಯಂತ ಮಹತ್ವವಾಗಿದ್ದು, ಜಿಲ್ಲೆಯಲ್ಲಿನ ವಿವಿಧ ಯೋಜನೆಗಳ ಪ್ರಗತಿಗೆ ಯುವಜನತೆ ಉತ್ತಮ ಸಹಕಾರ ನೀಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಶನಿವಾರ ಉಡುಪಿ ಪುರಭವನದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ,ಉಡುಪಿ, ಐಕ್ಯುಎಸಿ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಇವರ ಸಹಕಾರದೊಂದಿಗೆ ನಡೆದ ,ಉಡುಪಿ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯ ಯುವ ಜನತೆ ಇತ್ತೀಚೆಗೆ ನಡೆದ ಫಿಟ್ ಇಂಡಿಯಾ,ಕ್ಲೀನ್ ಇಂಡಿಯಾ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳ ಸಂಪೂರ್ಣ ಯಶಸ್ಸಿಗೆ ಉತ್ತಮ ಸಹಕಾರ ನೀಡಿದ್ದು, ಜಿಲ್ಲಾಡಳಿತ ಕೂಡಾ ಯುವಜನತೆ ನೀಡುವ ಸಲಹೆಗಳನ್ನು ಪರಿಗಣಿಸುತ್ತಿದ್ದು, ಯುವ ಜನತೆಯ ಕೋರಿಕೆ ಮೇರೆಗೆ ಇತ್ತೀಚೆಗೆ ಐ.ಎ.ಎಸ್, ಕೆ.ಎ.ಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಿರುವ ಮಾಹಿತಿ ಮತ್ತು ತರಬೇತಿಯನ್ನು ಏರ್ಪಡಿಸಲಾಗಿದೆ. ಸ್ವಚ್ಚತೆ ಕುರಿತಂತೆ ಜಿಲ್ಲೆಯ ಎಲ್ಲಾ ಕಾಲೇಜುಗಳ ಆವರಣ ಗೋಡೆಗಳ ಮೇಲೆ ಉತ್ತಮ ಸಂದೇಶ ಸಾರುವ ಆಕರ್ಷಕ ಚಿತ್ರಣ ಮತ್ತು ಸಂದೇಶಗಳನ್ನು ರಚಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದ ಜಿಲ್ಲಾಧಿಕಾರಿ ಕೂರ್ಮಾರಾವ್, ಪ್ರತಿಯೊಂದು ಕ್ಷೇತ್ರದಲ್ಲೂ ಸಹ ಯುವ ಜನತೆ ತಮ್ಮಲ್ಲಿರುವ ಯುವಶಕ್ತಿ ಮತ್ತು ಪ್ರತಿಭೆಯನ್ನು ಸದ್ಬಳಕೆ ಮಾಡಬೇಕು ಎಂದರು. ಜಿಲ್ಲೆಯಲ್ಲಿ ಸಂಪೂರ್ಣ 2 ಡೋಸ್ ಕೋವಿಡ್ ಲಸಿಕೆ ನೀಡುವ ಕಾರ್ಯ ಪ್ರಗತಿಯಲ್ಲಿದ್ದು,ಈಗಾಗಲೇ 93% ಪ್ರಥಮ ಡೋಸ್ ಮತ್ತು 68% ಎರಡನೇ ಡೋಸ್ ಸಾಧನೆ ಆಗಿದ್ದು,100% ಎರಡೂ ಡೋಸ್ ಲಸಿಕೆ ಸಾಧನೆ ಆಗುವ ನಿಟ್ಟಿನಲ್ಲಿ ಯುವ ಜನತೆ ಸಹಕಾರ ಅಗತ್ಯವಾಗಿದ್ದು, ಯುವಜನತೆ ತಮ್ಮ ಮನೆಗಳಲ್ಲಿ ಮತ್ತು ಸಮೀಪದ ಮನೆಗಳಲ್ಲಿ ಕೋವಿಡ್ ಲಸಿಕೆ ಪಡೆಯದವರಿಗೆ ಲಸಿಕೆ ಪಡೆಯುವ ಕುರಿತಂತೆ ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವಂತೆ ಪ್ರೇರೆಪಿಸಬೇಕು ಆ ಮೂಲಕ ಜಿಲ್ಲೆಯನ್ನು ಕೋವಿಡ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಮಾತನಾಡಿ, ಯುವ ಜನತೆಯಲ್ಲಿನ ವ್ಯಕ್ತಿತ್ವ ಮತ್ತು ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಇದರಿಂದ ಯುವ ಜನತೆಯ ವ್ಯಕ್ತಿತ್ವ ವಿಕಸನ ಕೂಡಾ ಆಗಲಿದೆ. ದೇಶದಲ್ಲಿ ಯುವ ಸಂಪತ್ತು ಅತ್ಯಧಿಕವಾಗಿದ್ದು ಇದರ ಸದ್ಬಳಕೆ ಆಗಬೇಕು, ಯುವಕರು ಎಲ್ಲಾ ಕಾರ್ಯಕ್ರಮಗಳ ರಾಯಭಾರಿಗಳಾಗಬೇಕು ,ಹೆಚ್ಚಿನ ಸಂಖ್ಯೆಯಲ್ಲಿ ಅತ್ಯುತ್ತಮ ನಾಯಕರು ಯುವ ಸಮುದಾಯದಿಂದ ಮೂಡಿಬರಬೇಕು ಎಂದರು. ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ವಾಣಿ ಬಲ್ಲಾಳ್, ಎನ್.ಎಸ್.ಎಸ್. ಸಂಯೋಜನಾಧಿಕಾರಿ ಡಾ.ರಾಜೇಂದ್ರ ಉಪಸ್ಥಿತರಿದ್ದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕಿ ತ್ರಿವೇಣಿ ನಿರೂಪಿಸಿದರು. ಯುವಜನೋತ್ಸವದಲ್ಲಿ, ಜಾನಪದ ನೃತ್ಯ, ಜಾನಪದ ಹಾಡು, ಏಕಪಾತ್ರಾ ಅಭಿನಯ,ಶಾಸ್ತ್ರೀಯ ಸಂಗೀತ, ,ಶಾಸ್ತ್ರೀಯ ನೃತ್ಯ, ಶಾಸ್ತ್ರೀಯ ವಾದ್ಯ, ಹಾರ್ಮೋನಿಯಂ, ಗಿಟಾರ್, ಆಶು ಭಾಷಣ ಮುಂತಾದ ಸ್ಪರ್ಧೆಗಳನ್ನು 3 ವಿವಿಧ ವೇದಿಕೆಗಳಲ್ಲಿ ಏರ್ಪಡಿಸಲಾಗಿತ್ತು.
ಶಿರ್ವ ಸಂತ ಮೇರಿ ಕಾಲೇಜಿನಲ್ಲಿ 73ನೇ ಎನ್.ಸಿ.ಸಿ ದಿನಾಚರಣೆ

Posted On: 28-11-2021 11:16AM
ಶಿರ್ವ: ಇಂದು ಯುವಜನರಲ್ಲಿ ದೇಶಭಕ್ತಿ, ಶಿಸ್ತು, ಸಮಯ ಪ್ರಜ್ಞೆ ಮೂಡಿಸುವ ಸಂಘಟನೆಗಳಲ್ಲಿ ವಿಶ್ವದ ಅತಿ ದೊಡ್ಡ ಯುವ ಸಂಘಟನೆಯಾದ ನ್ಯಾಷನಲ್ ಕೆಡೆಟ್ ಕಾರ್ಪ್ಸ್(ಎನ್.ಸಿ.ಸಿ) ಒಂದಾಗಿದೆ. ಯುವಜನರಲ್ಲಿ ರಾಷ್ಟ್ರಪ್ರೇಮ,ಸಮಾಜ ಸೇವಾಗುಣಗಳನ್ನು, ತಮ್ಮ ವ್ಯಕ್ತಿತ್ವ ವಿಕಸನ,ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಮಾತ್ರವಲ್ಲದೆ ಉತ್ತಮ ಉದ್ಯೋಗ ಅವಕಾಶಗಳನ್ನು ಪಡೆದುಕೊಳ್ಳಲು ಎನ್.ಸಿ.ಸಿ ಸಹಕಾರಿ. ಇಂದು ಬಹಳಷ್ಟು ಪ್ರಮುಖರು ಎನ್.ಸಿ.ಸಿಯ ಹಳೆವಿದ್ಯಾರ್ಥಿಗಳು ಆಗಿರುವುದು ಗಮನಾರ್ಹ ಎಂದು ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಕಾಲೇಜಿನ ಭೂ ಯುವ ಸೇನಾ ದಳದಿಂದ ಏರ್ಪಡಿಸಿದ 73ನೇ ಎನ್.ಸಿ.ಸಿಯ ದಿನಾಚರಣೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಮಾತನಾಡಿ ಎಲ್ಲರಿಗೂ ಶುಭಹಾರೈಸಿದರು.

ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಇಂದು, ತಮ್ಮ ಪ್ರಾಣದ ಪರಮ ತ್ಯಾಗ ಮಾಡಿದ ವೀರಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಈ ದಿನವನ್ನು ಪ್ರತಿವರ್ಷ ನವೆಂಬರ್ ನಾಲ್ಕನೇ ಭಾನುವಾರದಂದು ಗುರುತಿಸಲಾಯಿತು ಎಂದು ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಯಾಡೆಟ್ ಎಲ್ರುಷಾ ಮಿಲಿನಾ ಡೇಸ ಕಾರ್ಯಕ್ರಮದ ಮುಖ್ಯ ಉದ್ದೇಶವನ್ನು ಮತ್ತು ಮಹತ್ವವನ್ನು ವಿವರಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ತರಬೇತಿಯಲ್ಲಿ ಭಾಗವಹಿಸಿ ಬಹುಮಾನ ಪಡೆದ ಕ್ಯಾಡೆಟ್ ಗಳಾದ ಧೀರಜ್ ಆಚಾರ್ಯ, ದೀಪಕ್, ಮೋಹಿತ್ ಸಾಲಿಯನ್, ಜನಿಸಿಯಾ ನೊರೊನ್ಹಾ, ರಿಯಾ ಸೆರೆನಾ ಡಿಸೋಜಾ, ರತನ್ ಕುಮಾರ್ ಕೋಟ್ಯಾನ್, ಆಶಿಶ್ ಪ್ರಸಾದ್ ಇವರನ್ನು ಕಾಲೇಜಿನ ವತಿಯಿಂದ ಅಭಿನಂದಿಸಲಾಯಿತು. ಈ ದಿನದ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು ಮತ್ತು ಬಹುಮಾನವನ್ನು ವಿಜೇತ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕಿ ಯಶೋದ, ಜೂನಿಯರ್ ಅಂಡರ್ ಆಫೀಸರ್ ಸುರಕ್ಷಾ, ಅಧ್ಯಾಪಕ ವೃಂದ, ಆಡಳಿತ ಸಿಬ್ಬಂದಿ, ಎಲ್ಲಾ ಕ್ಯಾಡೆಟ್ ಗಳು ಉಪಸ್ಥಿತರಿದ್ದರು. ಕ್ಯಾಡೆಟ್ ಸನ ಅತಿಯ ಬಹುಮಾನ ಪಟ್ಟಿಯನ್ನು ವಾಚಿಸಿದರು ಸೀನಿಯರ್ ಅಂಡರ್ ಆಫೀಸರ್ ವಿಶಾಲ್ ಎಸ್ ಮೂಲ್ಯ ಎಲ್ಲರನ್ನು ಸ್ವಾಗತಿಸಿ, ಜೂನಿಯರ್ ಅಂಡರ್ ಆಫೀಸರ್ ಹರ್ಷಿತಾ ವಂದಿಸಿ,ಕ್ಯಾಡೆಟ್ ಲೋಬೋ ರಿಯಾ ಆನ್ ನೆವಿಲ್ ಕಾರ್ಯಕ್ರಮವನ್ನು ಸಂಯೋಜಿಸಿದರು.