Updated News From Kaup

ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ರೋಟರಾಕ್ಟ್ ಕ್ಲಬ್ ಪದಗ್ರಹಣ

Thumbnail
Posted On: 15 Dec 2021, 08:11 PM

ಉಡುಪಿ : ಕಲ್ಯಾಣಪುರ ರೋಟರಿ ಕ್ಲಬ್ ಪ್ರವರ್ತಿತ ರೋಟರಾಕ್ಟ್ ಕ್ಲಬ್ ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇತ್ತೀಚೆಗೆ ಕಾಲೇಜಿನ ಸಭಾಂಗಣದಲ್ಲಿ ನೆರವೇರಿತು. ರೋಟರಿ ಕ್ಲಬ್ ನ ಅಧ್ಯಕ್ಷ ಶಂಭು ಶಂಕರ್ ರವರು ನೂತನ ಅಧ್ಯಕ್ಷರಾದ ರೋಟ್ರಾಕ್ಟರ್ ಮಂಜುನಾಥ್ ರವರಿಗೆ ಅಧಿಕಾರ ಹಸ್ತಾಂತರಿಸಿ ತಂಡಕ್ಕೆ ಶುಭ ಕೋರಿದರು. ಮುಖ್ಯ ಅತಿಥಿಯಾಗಿ ವಲಯದ ಮಾಜಿ ಸಹಾಯಕ ಗವರ್ನರ್ ಅಶೋಕ್ ಕುಮಾರ್ ಶೆಟ್ಟಿಯವರು ಸಂದರ್ಭೋಚಿತವಾಗಿ ಮಾತನಾಡಿ ವಿದ್ಯಾರ್ಥಿಗಳು ನಾಯಕತ್ವ ರೂಢಿಸಿಕೊಂಡು ಉತ್ತಮ ವಿದ್ಯಾರ್ಥಿ ಹಾಗೂ ಪ್ರಜೆಯಾಗಿ ಬೆಳೆಯುವಂತೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿಯಾದ ಅಶೋಕ್ ಕುಮಾರ್ ಶೆಟ್ಟಿಯವರಿಗೆ ಸನ್ಮಾನ ಕಾರ್ಯಕ್ರಮವು ನಡೆಯಿತು. ರೋಟರಾಕ್ಟ ಚೇರ್ಮನ್ ವಿಜಯ್ ಮಯ್ಯಾಡಿ, ರಾಮ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ನಿತ್ಯಾನಂದರವರು ಕಾರ್ಯಕ್ರಮ ನಿರೂಪಿಸಿದರು.

ಮಂಗಳೂರು ನಗರ ಪೊಲೀಸ್ ವತಿಯಿಂದ ಪರಿವರ್ತನಾ ಸಭೆ

Thumbnail
Posted On: 15 Dec 2021, 07:51 PM

ಮಂಗಳೂರು : ಇಲ್ಲಿನ ನಗರ ಪೊಲೀಸ್ ವತಿಯಿಂದ ಪರಿವರ್ತನಾ ಸಭೆಯು ಡಿಸೆಂಬರ್ 16, ಬೆಳಿಗ್ಗೆ 11.30ಕ್ಕೆ ಶ್ರೀ ಟಿ.ವಿ. ರಮಣ ಪೈ ಕನ್‌ವೆನ್ಶನ್ ಸೆಂಟರ್ ಇಲ್ಲಿ ಜರಗಲಿದೆ. ಉದ್ಯಮಿಗಳು ಹಾಗೂ ಎ.ಜೆ. ಸಮೂಹ ಸಂಸ್ಥೆಗಳು ಮಂಗಳೂರು ಇದರ ಅಧ್ಯಕ್ಷರಾದ, ಡಾ. ಎ.ಜೆ. ಶೆಟ್ಟಿ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ, ಕಂಕನಾಡಿ, ಮಂಗಳೂರು ಇದರ ಆಡಳಿತಾಧಿಕಾರಿ ವಂದನೀಯ ರುಡೋಲ್ಫ್ ರವಿ ಡೇಸ, ಛೇಯರ್‌ಮ್ಯಾನ್ ಮತ್ತು ಮೆಡಿಕಲ್ ಡೈರೆಕ್ಟರ್, ಯುನಿಟಿ ಆಸ್ಪತ್ರೆ, ಮಂಗಳೂರು ಇದರ ಡಾ. ಸಿ.ಪಿ. ಹಬೀಬ್ ರೆಹಮಾನ್, ಪೊಲೀಸ್ ಕಮೀಷನರ್, ಮಂಗಳೂರು ನಗರ ಎನ್. ಶಶಿಕುಮಾರ್, ಪೊಲೀಸ್ ಉಪಆಯುಕ್ತರು, ಕಾನೂನು ಮತ್ತು ಸುವ್ಯವಸ್ಥೆ, ಮಂಗಳೂರು ನಗರ ಹರಿರಾಮ್ ಶಂಕರ್, ಪೊಲೀಸ್ ಉಪಆಯುಕ್ತರು, ಅಪರಾಧ ಮತ್ತು ಸಂಚಾರ, ಮಂಗಳೂರು ನಗರ ಬಿ.ಪಿ. ದಿನೇಶ್ ಕುಮಾರ್, ಪೊಲೀಸ್ ಉಪಆಯುಕ್ತರು, ಸಿಎಆರ್, ಮಂಗಳೂರು ನಗರ ಚೆನ್ನವೀರಪ್ಪ ಹಡಪದ್ ಉಪಸ್ಥಿತರಿರುವರು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಹಿಂದು ಜಾಗರಣ ವೇದಿಕೆ ಮುದರಂಗಡಿ ಘಟಕದ ವತಿಯಿಂದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಯೋಧರಿಗೆ ಶ್ರದ್ಧಾಂಜಲಿ ಸಮರ್ಪಣೆ

Thumbnail
Posted On: 15 Dec 2021, 07:47 PM

ಕಾಪು : ಹಿಂದು ಜಾಗರಣ ವೇದಿಕೆ ಮುದರಂಗಡಿ ಘಟಕದ ವತಿಯಿಂದ, ಮುದರಂಗಡಿ, ವಿದ್ಯಾನಗರ ಶ್ರೀ ದುರ್ಗ ಮಂದಿರದಲ್ಲಿ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ದೇಶದ ಮಹಾನ್ ದಂಡನಾಯಕ ಸಿಡಿಎಸ್ ಬಿಪಿನ್ ರಾವತ್ ಹಾಗು ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಥಿತಿಗಳಿಂದ ದೀಪ ಬೆಳಗಿಸಿ ಪುಷ್ಪಾರ್ಚನೆ ಸಲ್ಲಿಸಲಾಯಿತು. ಈ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಅಧ್ಯಾಪಕರಾದ ಹರಿ ಹೆಚ್ ರವರು ಸಿಡಿಎಸ್ ರಾವತ್ ಹಾಗು ಯೋಧರ ವಿಷಯವಾಗಿ ಪ್ರಾಸ್ತಾವಿಕ ನುಡಿನಮನಗಳನ್ನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಜಾಗರಣ ವೇದಿಕೆ ಕಾಪು ತಾಲೂಕು ಅಧ್ಯಕ್ಷರಾದ ಶಶಿಧರ್ ಹೆಗ್ಡೆ, ಶಿರ್ವ ವಲಯ ಉಪಾಧ್ಯಕ್ಷರಾದ ಜೀತು ಶೆಟ್ಟಿ ಪಿಲಾರ್ , ಶಿರ್ವ ವಲಯ ಕಾರ್ಯದರ್ಶಿ ನಿಕೇಶ್ ಪೂಜಾರಿ , ಜಾಗರಣ ವೇದಿಕೆ ಮುದರಂಗಡಿ ಘಟಕದ ಅಧ್ಯಕ್ಷರಾದ ಪ್ರತೀಕ್ ಹೆಚ್ ಪಿಲಾರ್ , ಜಾಗರಣ ಮುದರಂಗಡಿ ಉಪಾಧ್ಯಕ್ಷರಾದ ಸುರೇಶ್ ಅಮೀನ್ ಕಾಪಿಕಾಡ್, ಮುದರಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶರತ್ ಶೆಟ್ಟಿ ಸಾಂತೂರ್ , ಶಕ್ತಿ ಕೇಂದ್ರ ಬಿಜೆಪಿ ಮುದರಂಗಡಿ ಅಧ್ಯಕ್ಷರಾದ ಶಿವರಾಮ್ ಭಂಡಾರಿ , ಪಂಚಾಯತ್ ಸದಸ್ಯರುಗಳಾದ ಮೋಹಿನಿ ಹೆಗ್ಡೆ, ಪ್ರಮೀಳ, ಶ್ರೀ ದುರ್ಗ ಮಂದಿರ ಅರ್ಚಕರಾದ ಶ್ರೀಧರ್ ಆಚಾರ್ಯ, ಹರಿಣಾಕ್ಷ ಶೆಟ್ಟಿ, ವಿಶ್ವನಾಥ್ ಶೆಟ್ಟಿ, ಹಾಗು ಜಾಗರಣ ವೇದಿಕೆ ಮುದರಂಗಡಿಯ ಕಾರ್ಯಕರ್ತರು ಉಪಸ್ಥಿರಿದ್ದರು.

ರಸ್ತೆ ಮಧ್ಯ ಕಂಬ ? ತೆರವಿಗೆ ಆದೇಶ

Thumbnail
Posted On: 14 Dec 2021, 04:56 PM

ಕಾಪು : ರಸ್ತೆ ಮಧ್ಯ ಕಂಬ ?ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬರುತ್ತಿದ್ದ ದೃಶ್ಯ ಕಾಪು ತಾಲ್ಲೂಕಿನಲ್ಲಿ ನಡೆದಿದೆ. ಈ ರಸ್ತೆ ಮೂಡುಬೆಳ್ಳೆ ಮತ್ತು ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿದ್ದಾಗಿದೆ. ಕುತೂಹಲಿಗರಾದ ಕೆಲವೊಂದು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯ ಹಬ್ಬಿಸಿದ್ದಾರೆ. ಆದರೆ ಈ ಬಗ್ಗೆ ನಮ್ಮ ಕಾಪು ವೆಬ್ ಪೋರ್ಟಲ್ ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಸಂಪರ್ಕಿಸಿದಾಗ ಇದು PMGSY ಯೋಜನೆಯ ರಸ್ತೆ. ಕೆಲಸ ನಡೆಯುತ್ತಿದೆ. ಕಂಬಗಳ ತೆರವು ಕಾರ್ಯವೂ ನಡೆಯಲಿದೆ, ಈ ರಸ್ತೆಯ ಪ್ರಾರಂಭದ 100 ಮೀ ಮಾತ್ರ ಶಿರ್ವ ಗ್ರಾಮ ಪಂಚಾಯತ್ ಗೆ ಸೇರಿದ್ದು ಉಳಿದ 99 ಭಾಗದ ರಸ್ತೆ ಮೂಡುಬೆಳ್ಳೆ ಗ್ರಾಮ ಪಂಚಾಯತ್ ಗೆ ಸೇರಿದ್ದಾಗಿರುತ್ತದೆ. ರಸ್ತೆಗೆ ಡಾಮರೀಕರಣ ಪ್ರಾರಂಭವಾಗುವ ಮೊದಲು ಕಂಬಗಳ ಸ್ಥಳಾಂತರ ಕಾರ್ಯ ನಡೆಸುತ್ತೇವೆ ಎಂದಿದ್ದಾರೆ.

ಮಂಗಳೂರು : ಮಾರಣಾಂತಿಕ ಹಲ್ಲೆ ಐವರ ಬಂಧನ

Thumbnail
Posted On: 14 Dec 2021, 02:19 PM

ಮಂಗಳೂರು : ಇಲ್ಲಿನ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೊಂಡಂತಿಲ ಗ್ರಾಮ ಪಡು ಎಂಬಲ್ಲಿ ಡಿಸೆಂಬರ್ 10ರಂದು 7:30 ಗಂಟೆಗೆ ಮಂಗಳೂರು ತಾಲೂಕು, ಅಡ್ಯಾರ್ ಪದವು ಗ್ರಾಮದ ನಿವಾಸಿಯಾದ ಮೊಹಮ್ಮದ್ ರಿಯಾಜ್ ಎಂಬುವವರು ತಮ್ಮ ಕಾರಿನಲ್ಲಿ ತಮ್ಮ ಮನೆಯ ಕಡೆಗೆ ತೆರಳುತ್ತಿರುವಾಗ 7 ರಿಂದ 8 ಜನ ಆರೋಪಿಗಳು ಮೋಟಾರು ಸೈಕಲ್ ಮತ್ತು ಒಂದು ವಾಹನವನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಿ, ಕಾರನ್ನು ತಡೆದು ನಿಲ್ಲಿಸಿ, ಕಾರಿನ ಹೆಡ್ ಲೈಟ್, ಬಂಪರ್ ಗೆ ಕ್ರಿಕೇಟ್ ಬ್ಯಾಟ್ ಮತ್ತು ಕಬ್ಬಿಣದ ರಾಡ್ ನಿಂದ ಹೊಡೆದು ಜಖಂಗೊಳಿಸಿ ನಂತರ ಕಾರಿನಲ್ಲಿದ್ದ ಮೊಹಮ್ಮದ್ ರಿಯಾಜ್ ನನ್ನು ಕಾರಿನಿಂದ ಎಳೆದು ಹೊರಕ್ಕೆ ತಂದು ಕೈಯಲ್ಲಿದ್ದ ಬ್ಯಾಟ್, ರಾಡ್ ಮತ್ತು ಬೀಯರ್ ಬಾಟಲಿಗಳಿಂದ ತಲೆಗೆ, ಬಲ ಕಣ್ಣಿಗೆ, ಬಲ ಹುಬ್ಬುಗಳಿಗೆ ಬಲವಾಗಿ ಹೊಡೆದು ಗಂಭೀರ ಸ್ವರೂಪದ ರಕ್ತಗಾಯವನ್ನುಂಟು ಮಾಡಿ, ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ. ಕೃತ್ಯವೆಸಗಿದ ಆರೋಪಿಗಳಾದ ಗಣೇಶ್ (23), ಚೇತನ್ ಕುಮಾರ್ (21), ಕೀರ್ತಿ ರಾಜ್ (23), ಸುವೀತ್ (19), ಪರೀಕ್ಷಿತ್ (20)ರನ್ನು ದಸ್ತಗಿರಿ ಮಾಡಲಾಗಿದೆ.

109 ವರ್ಷಗಳ ಇತಿಹಾಸವಿರುವ ಕುಕ್ಕೆಹಳ್ಳಿ ಬಜೆ - ತಂಗಾಣ ಶ್ರೀ ವರ್ತೆ ಕಲ್ಕುಡ ದೈವಗಳಿಗೆ ಕಾಲಾವಧಿ ನೆಮೋತ್ಸವ

Thumbnail
Posted On: 13 Dec 2021, 10:23 PM

ಉಡುಪಿ : ಡಿಸೆಂಬರ್ 16 ರ ಗುರುವಾರ ಸಂಜೆ 6 ಗಂಟೆಗೆ ಭಜನಾ ಸೇವೆಯಿಂದ ಕಾರ್ಯಕ್ರಮ ಮೊದಲ್ಗೊಂಡು ಸಂಜೆ 7 ಗಂಟೆಗೆ ಅನ್ನಸಂತರ್ಪಣೆ ತದನಂತರ ರಾತ್ರಿ 8 ಗಂಟೆಗೆ ಹೂವಿನ ಪೂಜೆ ಹಾಗೂ ರಾತ್ರಿ 9 ಗಂಟೆಯಿಂದ ವರ್ತೆ ಕಲ್ಕುಡ ದೈವಗಳಿಗೆ ಸಿರಿ ಸಿಂಗಾರದ ಕಾಲಾವಧಿ ನೆಮೋತ್ಸವ ನಡೆಯಲಿದೆ. ಭಕ್ತಾದಿಗಳು ನಮ್ಮ ಉಡುಪಿ ಟಿವಿ ಯುಟ್ಯೂಬ್ ಚಾನೆಲ್ ನಲ್ಲಿ ಸಂಜೆ ಗಂಟೆ 6 ರಿಂದ ನೇಮೋತ್ಸವದ ನೇರಪ್ರಸಾರವನ್ನು ವೀಕ್ಷಿಸಬಹುದು ಎಂದು ಸುಧಾಕರ್ ಶೆಟ್ಟಿ ತಂಗಾಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವರದಿ ವಿನೋದ್ ಶೆಟ್ಟಿ

ಏಕೊನೊಮಿಕ್ ಗ್ರೂಪ್ ಸೊಸೈಟಿ ಆಫ್ ಇಂಡಿಯಾ ನವದೆಹಲಿಯಿಂದ ನೀಡಲ್ಪಡುವ ಪ್ರಶಸ್ತಿಗೆ ದಿವಾಕರ ಬಿ ಶೆಟ್ಟಿ ಕಳತ್ತೂರು, ಮೊಹಮ್ಮದ್ ಫಾರೂಕ್ ಚಂದ್ರನಗರ, ದಿವಾಕರ ಡಿ ಶೆಟ್ಟಿ ಆಯ್ಕೆ

Thumbnail
Posted On: 13 Dec 2021, 06:55 PM

ಕಾಪು : ಏಕೊನೊಮಿಕ್ ಗ್ರೂಪ್ ಸೊಸೈಟಿ ಆಫ್ ಇಂಡಿಯಾ ನವದೆಹಲಿ ಇವರು ನೀಡಲಿರುವ ರಾಷ್ಟ್ರೀಯ ಪ್ರತಿಷ್ಠಿತ ಪ್ರಶಸ್ತಿಗೆ ಕಾಪು ಪರಿಸರದ ನಿಸ್ವಾರ್ಥ ಸಮಾಜ ಸೇವಕರಾದ ಜನಸಂಪರ್ಕ ಜನಸೇವಾ ವೇದಿಕೆ ಅಧ್ಯಕ್ಷರಾದ ದಿವಾಕರ ಬಿ ಶೆಟ್ಟಿ ಕಳತ್ತೂರು ಇವರನ್ನು ಗ್ಲೋರಿ ಆಫ್ ಇಂಡಿಯಾ ಅವಾರ್ಡ್, 2021ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಾ ವೇದಿಕೆ ಅಧ್ಯಕ್ಷರಾದ ಮೊಹಮ್ಮದ್ ಫಾರೂಕ್ ಚಂದ್ರನಗರ ಇವರನ್ನು ಏಶಿಯ ಫೆಸಿಫಿಕ್ ಗೋಲ್ಡ್ ಸ್ಟಾರ್ ಅವಾರ್ಡ್ ಹಾಗೂ ಉಭಯ ವೇದಿಕೆ ಸಂಚಾಲಕರು ಕೃಷಿಕರು, ಸಮಾಜ ಸೇವಕರು ಆದ ದಿವಾಕರ ಡಿ ಶೆಟ್ಟಿ ಸ್ಟಾರ್ ಆಫ್ ಏಶಿಯ ಅವಾರ್ಡ್ ಇವರ ಸಮಾಜ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಡಿಸೆಂಬರ್ 22 ರಂದು ನವದೆಹಲಿಯ ಪಂಚತಾರ ಹೋಟೆಲ್ ಪಾರ್ಕ್ ಯಂತ್ರ ಹಾಲ್ ನಲ್ಲಿ ಭಾರತದ ಉಪರಾಷ್ಟ್ರಪತಿ ಹಾಗೂ ಕೇಂದ್ರ ಸಚಿವರು ಗಣ್ಯ ಉದ್ಯಮಿಗಳು ರಿಸರ್ವ್ ಬ್ಯಾಂಕ್ ನ ಗವರ್ನರ್ ಮಾಜಿ ಸಿ ಬಿ ಐ ಡೈರೆಕ್ಟರ್ ಇವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಏಕೊನೊಮಿಕ್ ಗ್ರೂಪ್ ಸೊಸೈಟಿ ಆಫ್ ಇಂಡಿಯಾ ಇದರ ಪ್ರದಾನ ವ್ಯವಸ್ಥಾಪಕ ಜಿ.ಎಸ್ ಸಚಿದೇವ ನವದೆಹಲಿ ತಿಳಿಸಿದ್ದಾರೆ.

ಮಂಗಳೂರು : ಸ್ಕೂಟರ್ ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ

Thumbnail
Posted On: 13 Dec 2021, 06:48 PM

ಮಂಗಳೂರು : ಇಲ್ಲಿನ ಹೊರವಲಯದ ಉಳ್ಳಾಲದ ಬಗಂಬಿಲ ಬಳಿ ಗಾಂಜಾ ಸಾಗಾಟದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಕೇರಳ ತ್ರಿಶೂರು ನಿವಾಸಿ ಆದರ್ಶ್ ಜೋತಿ (22), ಕೊಟ್ಟಾಯಂ ನ ಲೋಯಲ್ ಜೋಯ್ಸ್ (22) ಬಂಧಿತರು. ಬಂಧಿತರಿಂದ 220 ಗ್ರಾಂ ಗಾಂಜಾ ವಶಪಡಿಸಲಾಗಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಿನ್ನಿಗೋಳಿ : ಚಪ್ಪಲಿ ತೋರಿಸುವ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಮಾಲಿಕ ; ಪೋಲಿಸ್ ವಶ

Thumbnail
Posted On: 12 Dec 2021, 11:01 PM

ಮುಲ್ಕಿ : ಮುಲ್ಕಿ ಠಾಣಾ ವ್ಯಾಪ್ತಿಯ ತಾಳಿಪಾಡಿ ಗ್ರಾಮದ ಕಿನ್ನಿಗೋಳಿಯ ಚಪ್ಪಲಿ ಅಂಗಡಿಗೆ ಮಹಿಳಾ ಗ್ರಾಹಕಿಯೊಬ್ಬರು ಚಪ್ಪಲಿ ಖರೀದಿಗಾಗಿ ಹೋದ ಸಮಯ ಅಂಗಡಿಯಲ್ಲಿದ್ದ ಅಂಗಡಿ ಮಾಲಿಕರು ಮಹಿಳಾ ಗ್ರಾಹಕಿಗೆ ವಿವಿಧ ಚಪ್ಪಲಿಗಳನ್ನು ತೋರಿಸಿದ್ದು ಮಹಿಳಾ ಗ್ರಾಹಕಿಗೆ ಅವರು ತೋರಿಸಿದ ಚಪ್ಪಲಿ ಇಷ್ಟವಾಗದೇ ಇದ್ದಾಗ ಅಂಗಡಿ ಮಾಲಕರು ಬೇರೆ ಚಪ್ಪಲಿಗಳನ್ನು ತೋರಿಸುವುದಾಗಿ ತಿಳಿಸಿ ಮಹಿಳಾ ಗ್ರಾಹಕಿಯನ್ನು ಅಂಗಡಿಯ ಒಳಗಿದ್ದ ಇನ್ನೊಂದು ಕಂಪಾರ್ಟ್ ಮೆಂಟ್ ಗೆ ಕರೆಸಿಕೊಂಡು ಮಹಿಳಾ ಗ್ರಾಹಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಈ ಬಗ್ಗೆ ಮಹಿಳಾ ಗ್ರಾಹಕಿ ನೀಡಿದ ದೂರಿನಂತೆ ಅಂಗಡಿ ಮಾಲಿಕನಾದ ಸಂಶುದ್ದಿನ್ ಎಂಬಾತನ ವಿರುದ್ಧ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಅಂಗಡಿ ಮಾಲಕನನ್ನು ವಶಕ್ಕೆ ಪಡೆದು ದಸ್ತಗಿರಿ ಮಾಡಲಾಗಿದೆ.

ಅಜಾಗರೂಕತೆಯ ಚಾಲನೆ : ಮಾರುತಿ ಕಾರಿಗೆ ಇಂಟ್ರಾ ವಾಹನ ಢಿಕ್ಕಿ

Thumbnail
Posted On: 12 Dec 2021, 10:49 PM

ಕಟಪಾಡಿ : ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾಪು ಕಡೆಗೆ ಬರುತ್ತಿದ್ದ ಮಾರುತಿ ಕಾರಿಗೆ ಉಡುಪಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಟಾಟಾ ಇಂಟ್ರಾ ವಾಹನ ಹಿಂಬದಿಗೆ ಢಿಕ್ಕಿಯಾದ ಪರಿಣಾಮ ಓರ್ವನಿಗೆ ತೀವ್ರತರದ ಗಾಯವಾಗಿ, ಕಾರು ಸಂಪೂರ್ಣ ಜಖಂಗೊಂಡ ಪ್ರಕರಣ ಪಾಂಗಾಳ ಜನಾರ್ಧನ ದೇವಸ್ಥಾನದ ಸಮೀಪ ನಡೆದಿದೆ. ಮಾರುತಿ ಕಾರಿನ ಹಿಂಬದಿ ಸೀಟಿನಲ್ಲಿದ್ದ ಚರಣ್ ಹೆಚ್ ಪೂಜಾರಿಯ ತಲೆ, ಬೆನ್ನು, ಎದೆಭಾಗ, ಬಲ ಕೈಗೆ ತೀವ್ರ ತರದ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಟಾಟಾ ಇಂಟ್ರಾ ಚಾಲಕನ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣ ಎಂದು ತಿಳಿದುಬಂದಿದೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.