Updated News From Kaup
ಜಿಲ್ಲಾಮಟ್ಟದ ದೂರ ಸಂಪರ್ಕ ಸಮನ್ವಯ ಸಮಿತಿ ಸಭೆ - ನೆಟ್ವರ್ಕ್ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚನೆ
Posted On: 26 Nov 2021, 06:18 PM
ಉಡುಪಿ : ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿನ ಮೊಬೈಲ್ ನೆಟ್ವರ್ಕ್ ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸುವಂತೆ ಜಿಲ್ಲೆಯಲ್ಲಿನ ವಿವಿಧ ಮೊಬೈಲ್ ಸಂಸ್ಥೆಗಳ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚನೆ ನೀಡಿದರು. ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್ನಲ್ಲಿ ನಡೆದ, ಜಿಲ್ಲಾಮಟ್ಟದ ದೂರ ಸಂಪರ್ಕ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಮೊಬೈಲ್ ನೆಟ್ವರ್ಕ್ ಸರಿಯಾಗಿ ದೊರೆಯದ ಕಾರಣ ಗ್ರಾಮೀಣ ಜನತೆ ತುರ್ತು ಸಂದರ್ಭದಲ್ಲಿ ಅಗತ್ಯ ನೆರವು ಪಡೆಯಲು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ತಮ್ಮ ಸಂಬಂದಿಕರನ್ನು ಸಂಪರ್ಕಿಸಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳು ಸಹ ಆನ್ಲೈನ್ ಪಾಠಗಳನ್ನು ಕೇಳಲು ಸಾಕಷ್ಟು ಶ್ರಮ ಪಡುತ್ತಿದ್ದು, ನೆಟ್ವರ್ಕ್ ಸಂಪರ್ಕಕ್ಕಾಗಿ ಎತ್ತರದ ಮತ್ತು ಅಪಾಯಕಾರಿ ಸ್ಥಳಗಳನ್ನು ಆಶ್ರಯಿಸುತ್ತಿದ್ದಾರೆ. ಇಂತಹ ಪ್ರದೇಶಗಳಲ್ಲಿ ತ್ವರಿತಗತಿಯಲ್ಲಿ ಟವರ್ಗಳನ್ನು ಅಳವಡಿಸಿ, ನಿರಂತರವಾಗಿ ಮೊಬೈಲ್ ಸಂಪರ್ಕ ಹಾಗೂ ನಿಗದಿತ ವೇಗವನ್ನು ದೊರಕಿಸುವಂತೆ ವಿವಿಧ ಮೊಬೈಲ್ ಸಂಸ್ಥೆಗಳಿಗೆ ಕೂರ್ಮಾರಾವ್ ಎಂ.ಸೂಚಿಸಿದರು. ನೆಟ್ವರ್ಕ್ ಒದಗಿಸುವ ಸಂಸ್ಥೆಗಳು ಸಂಬAಧಪಟ್ಟ ಗ್ರಾಮ ಪಂಚಾಯತ್ಗಳಿಗೆ ಬಾಕಿ ಇರುವ ಶುಲ್ಕವನ್ನು ಶೀಘ್ರವಾಗಿ ಪಾವತಿಸಿ, ನಿರಪೇಕ್ಷಣಾ ಪತ್ರವನ್ನು ಪಡೆಯಬೇಕು. ಟವರ್ ಅಳವಡಿಕೆ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಪಡೆಯಲು ಭೂ ದಾಖಲೆಗಳ ವಿವರ ಹಾಗೂ ನಿರಪೇಕ್ಷಣ ಪತ್ರವನ್ನು ಮೆಸ್ಕಾಂ ಇಲಾಖೆಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕಂಡು ಬರುವ ನೆಟ್ವರ್ಕ್ ಸಮಸ್ಯೆ, ಗ್ರಾಮೀಣ ವೈಫೈ ಯೋಜನೆ (ಭಾರತ್ -ನೆಟ್) ಪ್ರಗತಿ ಕುರಿತು ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಪ್ರತಿಭಾ, ಪೌರಾಯುಕ್ತ ಉದಯ ಶೆಟ್ಟಿ, ಜಿಲ್ಲೆಯಲ್ಲಿನ ವಿವಿಧ ಮೊಬೈಲ್ ಸಂಸ್ಥೆಗಳ ಪ್ರತಿನಿಧಿಗಳು ಮತ್ತಿತರರು ಉಪಸ್ಥಿತರಿದ್ದರು.
ಉಡುಪಿ: ಕಡತಗಳ ಶೀಘ್ರ ವಿಲೇವಾರಿಗೆ ಜಿಲ್ಲಾಧಿಕಾರಿ ಆದೇಶ
Posted On: 26 Nov 2021, 06:11 PM
ಉಡುಪಿ : ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಜಿಲ್ಲೆಯ ಎಲ್ಲಾ ಕಚೇರಿಗಳ ಕಡತಗಳನ್ನು ಕಾಲಮಿತಿಯಲ್ಲಿ ಶೀಘ್ರದಲ್ಲಿ ವಿಲೇವಾರಿ ಮಾಡುವಂತೆ ಎಲ್ಲಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್ನಲ್ಲಿ, ಎಲ್ಲಾ ಅಧಿಕಾರಿ ಸಿಬ್ಬಂದಿಗಳಿಗೆ ಸಂವಿಧಾನ ದಿನದ ಅಂಗವಾಗಿ ಸಂವಿಧಾನ ಪೀಠಿಕೆ ಬೋಧಿಸಿ, ನಂತರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾಧಿಕಾರಿ ಕಚೇರಿ, ಎಲ್ಲಾ ತಾಲೂಕು ಕಚೇರಿಗಳು ಹಾಗೂ ಕುಂದಾಪುರ ಉಪ ವಿಭಾಗಾಧಿಕಾರಿ ಕಚೇರಿಗೆ ಸಂಬಂಧಿಸಿದ ಕಡತಗಳನ್ನು ಇ-ಕಚೇರಿ ಮೂಲಕವೇ ತ್ವರಿತವಾಗಿ ವಿಲೇವಾರಿ ಮಾಡುವಂತೆ ಹಾಗೂ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು 2 ತಿಂಗಳ ಒಳಗೆ ಸಂಪೂರ್ಣ ಇ-ಕಚೇರಿ ಮೂಲಕ ಕಡತಗಳನ್ನು ನಿರ್ವಹಣೆ ಮಾಡಬೇಕು. ಈ ಕುರಿತಂತೆ ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ಮತ್ತಿತರ ಮೂಲ ಸೌಕರ್ಯಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಸೂಚನೆ ನೀಡಿದರು. ಜಿಲ್ಲೆಯ ಆಡಳಿತ ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು. ಈ ನಿಟ್ಟಿನಲ್ಲಿ ಎಲ್ಲಾ ಕಡತಗಳನ್ನು ಸೂಕ್ತ ರೀತಿಯಲ್ಲಿ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ಪ್ರತಿಭಾ, ಪೌರಾಯುಕ್ತ ಉದಯ ಶೆಟ್ಟಿ ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿಗಳಿಂದ ಸಂವಿಧಾನ ಪೀಠಿಕೆ ಬೋಧನೆ
Posted On: 26 Nov 2021, 06:05 PM
ಉಡುಪಿ : ಸಂವಿಧಾನ ದಿನದ ಅಂಗವಾಗಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್ನಲ್ಲಿ ಎಲ್ಲಾ ಅಧಿಕಾರಿ ಸಿಬ್ಬಂದಿಗಳಿಗೆ ಸಂವಿಧಾನ ದಿನದ ಪೀಠಿಕೆಯನ್ನು ಬೋಧಿಸಿದರು. ಭಾರತ ದೇಶದ ನಾಗರೀಕರಾದ ನಾವು, ಭಾರತವನ್ನು ಒಂದು ಸಾರ್ವಭೌಮ ಸಮಾಜವಾದೀ ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸಲು ಮತ್ತು ಸಮಸ್ತ ನಾಗರೀಕರಿಗೆ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ಧೆ ಮತ್ತು ಉಪಾಸನಾ ಸ್ವಾತಂತ್ರ್ಯ, ಸ್ಥಾನಮಾನ ಹಾಗೂ ಅವಕಾಶ ಸಮಾನತೆ ದೊರೆಯುವಂತೆ ಮಾಡಲು, ವ್ಯಕ್ತಿ ಗೌರವವನ್ನು ರಾಷ್ಟ್ರದ ಏಕತೆಯನ್ನು ಹಾಗೂ ಅಖಂಡತೆಯನ್ನು ಸುನಿಶ್ಚಿತಗೊಳಿಸಿ, ಅವರಲ್ಲಿ ಭ್ರಾತೃ ಭಾವನೆಯನ್ನು ವೃದ್ಧಿಗೊಳಿಸಲು ಶ್ರದ್ಧಾಪೂರ್ವಕ ಸಂಕಲ್ಪ ಮಾಡಿ, ನಮ್ಮ ಸಂವಿಧಾನವನ್ನು ಅಂಗೀಕರಿಸಿದ್ದೇವೆ, ಅಧಿನಿಯಮಿಸಿ ಅರ್ಪಿಸಿಕೊಂಡಿದ್ದೇವೆ. ಅದರಂತೆ ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಸಂವಿಧಾನದ ಆಶಯಗಳಿಗೆ ಬದ್ಧರಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದರು. ಭಾರತದ 75 ನೇ ಸ್ವಾತಂತ್ರ್ಯೋತ್ಸವ ಆಜಾದಿ ಕಾ ಅಮೃತ ಮಹೋತ್ಸವದ ಈ ಅವಧಿಯಲ್ಲಿ, ದೇಶದ ಪ್ರತಿಯೊಬ್ಬ ನಾಗರೀಕರೂ ನಮ್ಮ ಸಂವಿಧಾನದಲ್ಲಿರುವ ಸಾಂವಿಧಾನಿಕ ಮೌಲ್ಯಗಳನ್ನು ಅರಿಯಬೇಕು ಮತ್ತು ಅದಕ್ಕೆ ಬದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ, ಜಿಲ್ಲಾಧಿಕಾರಿ ಕಚೇರಿಯ ವಿವಿಧ ವಿಭಾಗಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ನಿರಂತರ ಪರಿಶ್ರಮದಿಂದ ಕಲಾಸಾಧನೆ ಸಾಧ್ಯ: ಡಾ. ಗಣೇಶ್ ಗಂಗೊಳ್ಳಿ ಅಭಿಮತ
Posted On: 26 Nov 2021, 05:45 PM
ಕಾಪು : ಕಲೆಯು ಯಾವಾಗಲೂ ಓರ್ವ ಸಾಧಕನ ಸ್ವತ್ತು. ತನ್ನ ಆಯ್ದ ಕ್ಷೇತ್ರದಲ್ಲಿ ಸಾಧನೆಗೈಯಲು ಶೃದ್ಧೆ, ಸತತ ಪರಿಶ್ರಮ, ಆತ್ಮವಿಶ್ವಾಸ ಹಾಗೂ ವಿನಮ್ರತೆ ಅಗತ್ಯ. ಜೀವನದಲ್ಲಿ ಬರುವ ಅಡೆತಡೆಗಳನ್ನೆದುರಿಸಿ ಸಾಧನೆಯ ಹಾದಿಯಲ್ಲಿ ದೃಢ ಸಂಕಲ್ಪದೊಂದಿಗೆ ಹೆಜ್ಜೆಯಿಡಬೇಕು. ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಸೂರ್ಯ ಚೈತನ್ಯ ಸಂಸ್ಥೆಯ ಪ್ರಯತ್ನ ಶ್ಲಾಘನೀಯ ಎಂದು ಕನ್ನಡ ಜಾನಪದ ಪರಿಷತ್ ನ ಉಡುಪಿ ಜಿಲ್ಲಾಧ್ಯಕ್ಷ , ಖ್ಯಾತ ಜಾನಪದ ಗಾಯಕ ಡಾ. ಗಣೇಶ್ ಗಂಗೊಳ್ಳಿ ಹೇಳಿದರು. ಅವರು ಕುತ್ಯಾರು ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಹೈಸ್ಕೂಲ್ ವತಿಯಿಂದ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಪು ತಾಲೂಕು ಕಸಾಪ ಪೂರ್ವಾಧ್ಯಕ್ಷ ಪುಂಡಲೀಕ ಮರಾಠೆ ಮಾತನಾಡಿ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಸೂಕ್ತ ವೇದಿಕೆಯನ್ನು ಕಂಡುಕೊಳ್ಳಬೇಕೆಂದು ಕರೆಯಿತ್ತರು. ಮುದರಂಗಡಿ ಸರಕಾರಿ ಪ.ಪೂ. ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಭಾಸ್ಕರ ವೈ. ಜಿ. ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ವಿದ್ವಾನ್ ಶಂಭುದಾಸ ಗುರೂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಗುರುದತ್ತ ಸೋಮಯಾಜಿ ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕ ಮಂಜುನಾಥ ಶೇಟ್ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕಿ ರಾಜಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿ, ಶ್ರುತಿ ಆಚಾರ್ಯ ವಂದಿಸಿದರು. ಸನ್ಮಾನ ಕಾರ್ಯಕ್ರಮದ ಬಳಿಕ ಡಾ. ಗಣೇಶ್ ಗಂಗೊಳ್ಳಿಯವರಿಂದ 'ಗೀತ ಗಾಯನ' ಸಂಗೀತ ಕಾರ್ಯಕ್ರಮ ಜರುಗಿತು.
ನವೆಂಬರ್ 27, ಕನ್ನಡ ಜಾನಪದ ಪರಿಷತ್ ಮತ್ತು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ಬಂಟಕಲ್ ಆಶ್ರಯದಲ್ಲಿ ಕನ್ನಡ ಜಾನಪದ ರಾಜ್ಯೋತ್ಸವ-2021
Posted On: 26 Nov 2021, 05:37 PM
ಕಾಪು : ಕನ್ನಡ ಜಾನಪದ ಪರಿಷತ್ ಬೆಂಗಳೂರು, ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಘಟಕ, ಕನ್ನಡ ಜಾನಪದ ಪರಿಷತ್ ಕಾಪು ತಾಲೂಕು ಘಟಕ ಮತ್ತು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ಬಂಟಕಲ್ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಜಾನಪದ ರಾಜ್ಯೋತ್ಸವ-2021 ನವೆಂಬರ್ 27ರಂದು ಮಧ್ಯಾಹ್ನ 3 ಗಂಟೆಗೆ ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ಬಂಟಕಲ್ ಇಲ್ಲಿ ಜರಗಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಕಾರ್ಯದರ್ಶಿ ರತ್ನಕುಮಾರ್ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಶ್ರೀಮಧ್ವವಾದಿರಾಜ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲರಾದ ಡಾ.ತಿರುಮಲೇಶ್ವರ ಭಟ್ ವಹಿಸಲಿದ್ದು, ಅತಿಥಿಯಾಗಿ ಕನ್ನಡ ಜಾನಪದ ಪರಿಷತ್ ಉಡುಪಿಯ ಜಿಲ್ಲಾಧ್ಯಕ್ಷರಾದ ಡಾ. ಗಣೇಶ್‌ಕುಮಾರ್ ಗಂಗೊಳ್ಳಿ ಭಾಗವಹಿಸಲಿದ್ದಾರೆ. ಈ ಸಂದರ್ಭ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ, ಚಾಣಕ್ಯ ಪ್ರಶಸ್ತಿ ವಿಜೇತ ಮಾಸ್ಟರ್ ಯಶಸ್ ಪಿ.ಸುವರ್ಣ ಕಟಪಾಡಿ ಅವರಿ೦ದ ಕೊಳಲುವಾದನವು ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವೇಶ್ಯಾವಾಟಿಕೆ ದಂಧೆ : ಕಾರು, ನಗದು ವಶ, ಇಬ್ಬರ ದಸ್ತಗಿರಿ, ಓರ್ವ ಸಂತ್ರಸ್ತೆ ಯುವತಿಯ ರಕ್ಷಣೆ
Posted On: 26 Nov 2021, 05:06 PM
ಮಂಗಳೂರು : ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಾವೂರು ಕಟ್ಟೆ ಪರಿಸರದ ಬಾಡಿಗೆ ಮನೆಯೊಂದರಲ್ಲಿ ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಬೆಂಗಳೂರು , ಮಂಗಳೂರು, ಮೈಸೂರು, ಉಡುಪಿ ಹಾಗೂ ಇತರ ಕಡೆಗಳಲ್ಲಿನ ಯುವತಿಯರು ಮತ್ತು ಮಹಿಳೆಯರನ್ನು ಮಾನವ ಕಳ್ಳಸಾಗಾಟ ಮೂಲಕ ಮಂಗಳೂರಿಗೆ ಕರೆಯಿಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಾರೆಂಬ ಖಚಿತ ಮಾಹಿತಿ ಮೇರೆಗೆ ನವೆಂಬರ್ 25ರಂದು ಮಂಗಳೂರು ಸಿಸಿಬಿ ಘಟಕದ ಪೊಲೀಸ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಹಾಗೂ ಸಿಬ್ಬಂದಿಯವರು ದಾಳಿ ನಡೆಸಿದ್ದಾರೆ. ಈ ಸಂದರ್ಭ ವೇಶ್ಯಾವಾಟಿಕೆ ದಂಧೆಯಲ್ಲಿ ನಿರತರಾಗಿದ್ದ ದಲ್ಲಾಳಿಗಳಾದ ಉಡುಪಿ ಉಳಿಯಾರಗೋಳಿಯ ಅಬ್ದುಲ್ ಹಫೀಸ್ (55), 7 ನೇ ಬ್ಲಾಕ್, ಬದ್ರಿಯಾ ಮಸೀದಿ ರಸ್ತೆ, ಕೃಷ್ಣಾಪುರ, ಕಾಟಿಪಳ್ಳದ ರಮ್ಲಾತ್ (46) ಎಂಬುವರನ್ನು ದಸ್ತಗಿರಿ ಮಾಡಿ ವೇಶ್ಯಾವಾಟಿಕೆ ದಂಧೆಯಲ್ಲಿ ನಿರತಳಾಗಿದ್ದ ಒಬ್ಬಳು ಸಂತ್ರಸ್ತೆ ಯುವತಿಯನ್ನು ರಕ್ಷಿಸಲಾಗಿದೆ. ದಸ್ತಗಿರಿ ಮಾಡಿದ ಆರೋಪಿಗಳಿಂದ ರೂ. 10,060 ನಗದು, 3 ಮೊಬೈಲ್ ಫೋನುಗಳು ಮತ್ತು ಸ್ಕಾರ್ಪಿಯೋ ಕಾರು ಹೀಗೆ ಒಟ್ಟು ರೂ. 3,25,560 ಮೊತ್ತದ ಸೊತ್ತನ್ನು ಸ್ವಾಧೀನಪಡಿಸಿಕೊಂಡಿದ್ದು, ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಉಗ್ರರಿಗೆ ಹಣ ಪೂರೈಕೆ : ಪಂಜಿಮೊಗರು ಮೂಲದ ದಂಪತಿ ಸೇರಿ ನಾಲ್ವರಿಗೆ 10 ವರ್ಷ ಜೈಲು
Posted On: 26 Nov 2021, 04:33 PM
ಮಂಗಳೂರು: ಉಗ್ರರಿಗೆ ಹಣ ಪೂರೈಸಿದ್ದ ಪಂಜಿಮೊಗರು ಮೂಲದ ದಂಪತಿ ಸೇರಿ ನಾಲ್ವರಿಗೆ ಛತ್ತೀಸ್ ಘಡ ನ್ಯಾಯಾಯಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಮಂಗಳೂರಿನ ಪಂಜಿಮೊಗರು ಮೂಲದ ದಂಪತಿ ಹುಸೈನ್ (42), ಪತ್ನಿ ಆಯೀಷಾ ಬಾನು (38), ಧಿರಜ್ ಸಾವೋ (21) ಮತ್ತು ಪಪ್ಪು ಮಂಡಲ್ ಎಂಬುವವರು ಶಿಕ್ಷೆಗೊಳಗಾದವರು. 2013 ನವೆಂಬರ್ ನಲ್ಲಿ ಬಿಹಾರ ಛತ್ತೀಸ್ಗಡ್‌ದಲ್ಲಿ 10 ಕ್ಕೂ ಹೆಚ್ಚು ನಿಷೇಧಿತ ಸಂಘಟನೆಗಳಿಗೆ ಸೇರಿದ ಕಾರ್ಯಕರ್ತರನ್ನು ಪೋಲಿಸರು ವಿಚಾರಣೆ ಮಾಡಿ ಉಗ್ರರಿಗೆ ಹಣ ಪೂರೈಕೆಯ ಬಗ್ಗೆ ಅಧಿಕಾರಿಗಳು ಮಾಹಿತಿ ಲಭಿಸಿತ್ತು. ಈ ಮಾಹಿತಿಯ ಮೇರೆಗೆ ಹುಡುಕಿಕೊಂಡು ಬಂದ ಪೋಲಿಸರು ಮಂಗಳೂರಿನ ಪಂಜಿಮೊಗರು ದಂಪತಿಯನ್ನು ವಶಕ್ಕೆ ಪಡೆದಿದ್ದರು. ದಂಪತಿ ಮತ್ತು ಮುಝಾಹಿಧಿನ್ ಉಗ್ರರ ಮಧ್ಯೆ ಕೋಟ್ಯಾಂತರ ಹಣ ವ್ಯವಹಾರ ಮಾಡಿರುವುದು ಬ್ಯಾಂಕ್ ಖಾತೆಯ ಮೂಲಕ ನ್ಯಾಯಾಲಯಕ್ಕೆ ವಿಚಾರಣೆ ವೇಳೆ ಸಾಕ್ಷಿ ಸಿಕ್ಕತ್ತು ಇದರ ಆಧಾರದಲ್ಲಿ ಇವರ ವಿರುಧ್ದ ದೇಶ ದ್ರೋಹ ಕಾಯ್ದೆಯಡಿ ರಾಯ್ ಪುರ ಕೋರ್ಟ್ ದಂಪತಿ ಸೇರಿ ನಾಲ್ವರಿಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. ದಂಪತಿ ನೆರೆಹೊರೆಯಲ್ಲಿ ಸಭ್ಯರಂತೆ ವರ್ತಿಸಿ, ತಮ್ಮ ಕುಕೃತ್ಯವನ್ನು ರಾಯ್ ಪುರಕ್ಕೆ ಆಗಾಗ ಹೋಗಿ ಬಂದು ಮಾಡುತ್ತಿದ್ದರು. ಇವರ ಬಳಿ 50 ಕ್ಕೂ ಹೆಚ್ಚು ಬ್ಯಾಂಕ್ ನಲ್ಲಿ ವ್ಯವಹಾರ ಇರವುದು ಮತ್ತು ನೆಟ್ ಬ್ಯಾಂಕಿಂಗ್ ಮೂಲಕ ಹಣ ವರ್ಗಾಹಿಸುತ್ತಿರುವುದು ಬೆಳಕಿಗೆ ಬಂದಿದೆ.
ನವೆಂಬರ್ 29ಕ್ಕೆ ಕರ್ನಾಟಕದಲ್ಲಿ ಮತ್ತೊಂದು ಚಂಡಮಾರುತ ಅಪ್ಪಳಿಸುವ ಭೀತಿ
Posted On: 26 Nov 2021, 02:12 PM
ಬೆಂಗಳೂರು : ತಿಂಗಳಿನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಜನರು ಹೈರಾಣಾಗಿದ್ದಾರೆ. ಮಳೆಗಾಗಿ ಕಾಯುತ್ತಿದ್ದ ರೈತರು ಯಾಕಾದರೂ ಇಷ್ಟು ಮಳೆ ಬರುತ್ತಿದೆಯೋ ಎನ್ನುವ ಪರಿಸ್ಥಿತಿಗೆ ಬಂದು ತಲುಪಿದ್ದಾರೆ. ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ವಾತಾವರಣ ಸೃಷ್ಟಿಯಾಗಿದ್ದು, ಇದರಿಂದಾಗಿ ರಾಜ್ಯದಲ್ಲಿ ನ.28ರವರೆಗೂ ಹೆಚ್ಚು ಮಳೆಯಾಗಲಿದೆ. ಚಳಿಗಾಲ ಆರಂಭವಾಗಿದ್ದರೂ ಮಳೆಗಾಲ ಮುಗಿದಿಲ್ಲ. ಹೆಚ್ಚಿದ ಮಳೆಯಿಂದಾಗಿ ತರಕಾರಿ, ಹಣ್ಣುಗಳ ಬೆಲೆಯೂ ಹೆಚ್ಚಾಗಿದ್ದು, ಜನಸಾಮಾನ್ಯರಿಗೆ ತೊಂದರೆಯಾಗಿದೆ. ನವೆಂಬರ್ 29ಕ್ಕೆ ಕರ್ನಾಟಕದಲ್ಲಿ ಮತ್ತೊಂದು ಚಂಡಮಾರುತ ಅಪ್ಪಳಿಸುವ ಭೀತಿ ಎದುರಾಗಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಚಂಡಮಾರುತವಾಗಿ ರೂಪಾಂತರಗೊಳ್ಳಲಿದೆ. ಇದರಿಂದಾಗಿ ಮಳೆ ಹೆಚ್ಚುವ ಸಾಧ್ಯತೆ ಇದೆ. ಆಂಧ್ರಪ್ರದೇಶದ ಕರಾವಳಿ, ರಾಯಲಸೀಮಾ, ಕರ್ನಾಟಕದ ದಕ್ಷಿಣ ಒಳನಾಡು, ಕೇರಳ, ತಮಿಳುನಾಡು, ಪುದುಚೆರಿ ಮತ್ತು ಕಾರೈಕಲ್‌ನಲ್ಲಿ ಮಳೆಯಾಗಲಿದೆ. ರಾಜ್ಯದಲ್ಲಿ ಉ.ಕ,ದ.ಕ, ಉಡುಪಿ, ಬೆಳಗಾವಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಹಾವೇರಿ, ಗದಗ, ಧಾರವಾಡ, ಚಿತ್ರದುರ್ಗ , ಕಲಬುರಗಿ, ಬೆಂಗಳೂರು, ಬೆಂ.ಗ್ರಾ, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ಮೈಸೂರು ಹಾಗೂ ತುಮಕೂರಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಮಲ್ಲಾರು ಗ್ರಾಮದ ಕುರ್ತಿಮಾರು ಉರ್ದುಶಾಲೆ, ಬಳಿ ರೈಲು ಡಿಕ್ಕಿ : ವ್ಯಕ್ತಿ ಸಾವು
Posted On: 26 Nov 2021, 01:39 PM
ಕಾಪು : ಇಂದು ಮಲ್ಲಾರು ಗ್ರಾಮದ ಕುರ್ತಿಮಾರು ಉರ್ದುಶಾಲೆಯ ರೈಲ್ವೇ ಹಳಿ ಬಳಿ ನಡೆದುಕೊಂಡು ಹೋಗುತ್ತಿರುವಾಗ ಮಲ್ಲಾರು ಗ್ರಾಮ ಪಕೀರಣಕಟ್ಟೆಯ ಎಂ.ಜೆ.ಎಂ ಮಸೀದಿ ಹತ್ತಿರದ ನಿವಾಸಿ ಅಬ್ದುಲ್ ರಜಾಕ್ (48) ಎಂಬುವವರಿಗೆ ಉಡುಪಿಯಿಂದ ಮಂಗಳೂರು ಕಡೆಗೆ ಹೋಗುವ ಯಾವುದೋ ರೈಲು ಡಿಕ್ಕಿ ಹೊಡೆದಿದೆ. ಈ ಸಂದರ್ಭ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಈ ಘಟನೆ ಬೆಳಿಗ್ಗೆ 06:30 ಗಂಟೆಯಿಂದ 08:00 ಗಂಟೆಯ ಮಧ್ಯೆ ನಡೆದಿರಬಹುದು ಎಂದು ತಿಳಿದು ಬಂದಿದೆ. ಆಪತ್ಬಾಂಧವ ಸೂರಿ ಶೆಟ್ಟಿ ಕಾಪು ಮೃತ ದೇಹವನ್ನು ತೆರವುಗೊಳಿಸಲು ಸಹಕರಿಸಿದ್ದು, ಘಟನಾ ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿದ್ದಾರೆ.
ಜಲ್ ಜೀವನ್ ಮಿಷನ್ ವತಿಯಿಂದ ಶಾಲಾ ಮಕ್ಕಳ ಜಾಥಾ ಕಾರ್ಯಕ್ರಮ, ಭಿತ್ತಿಪತ್ರ ತಯಾರಿಸುವ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆ
Posted On: 25 Nov 2021, 07:59 PM
ಮಂಗಳೂರು : ಮಂಗಳೂರು ತಾಲೂಕಿನ ಸೂರಿಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಪ್ರೌಢ ಶಾಲೆಯಲ್ಲಿ ಜಲ್ ಜೀವನ ಮಿಷನ್ನಿನ ವತಿಯಿಂದ ಶಾಲಾ ವಿದ್ಯಾರ್ಥಿಗಳಿಂದ ಜಾಥಾ ಕಾರ್ಯಕ್ರಮ, ಭಿತ್ತಿಪತ್ರ ತಯಾರಿಸುವ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆ ಮಾಡಲಾಯಿತು. ಶಾಲಾ ಮಕ್ಕಳಿಗೆ ನೀರಿನ ಸಂರಕ್ಷಣೆ, ಬಳಕೆ ಮತ್ತು ಜಲಮಾಲಿನ್ಯದಿಂದಾಗುವ ಹಾನಿ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಚಿತ್ರಕಲೆ ಮತ್ತು ಭಿತ್ತಿಪತ್ರ ತಯಾರಿಸುವ ಸ್ಪರ್ಧೆ ಮಾಡಲಾಗಿತ್ತು. ಭಿತ್ತಿಪತ್ರ ತಯಾರಿಸುವ ಸ್ಪರ್ಧೆಯಲ್ಲಿ ಸರಿ ಸುಮಾರು15 ವಿಧ್ಯಾರ್ಥಿಗಳು ಮತ್ತು ಚಿತ್ರಕಲೆಯಲ್ಲಿ 22 ವಿಧ್ಯಾರ್ಥಿಗಳು ಸ್ಪರ್ಧಿಸಿದ್ದರು. ಅನುಕ್ರಮವಾಗಿ ಪ್ರತಿ ಸ್ಪರ್ಧೆಗೂ ಪ್ರಥಮ, ದ್ವಿತಿಯ ಮತ್ತು ತೃತೀಯ ಬಹುಮಾನಗಳನ್ನು ಮುಖ್ಯೋಪಾಧ್ಯಾಯರು ಘೋಷಿಸಿದರು. ಸೂರಿಂಜೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಶಾಂತ ಶೆಟ್ಟಿ ಬಹುಮಾನ ವಿತರಿಸಿದರು. ನಂತರ ಗ್ರಾಮದ ಬೀದಿಗಳಲ್ಲಿ ಮಕ್ಕಳೆ ತಯಾರಿಸಿದ ಭಿತ್ತಿಪತ್ರಗಳನ್ನು ಪ್ರದರ್ಶಿಸುತ್ತಾ ಘೋಷಣೆಗಳನ್ನು ಹೇಳುತ್ತಾ ಶಾಲಾ ಮಕ್ಕಳ ಜಾಥಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮಕ್ಕೆ ಶಾಲಾ ಶಿಕ್ಷಕ ವೃಂದ ಮತ್ತು ಪಂಚಾಯತ್ ಸಿಬ್ಬಂದಿ ಸಹಕರಿಸಿದರು.
