Updated News From Kaup

ರಾಘವೇಂದ್ರ ಪ್ರಭು ಕವಾ೯ಲುರವರಿಗೆ ಸಮಾಜ ಸೇವಾ ರತ್ನ ಪುರಸ್ಕಾರ

Posted On: 31-08-2021 09:39AM

ಉಡುಪಿ : ಜನ್ಮಭೂಮಿ ಫೌಂಡೇಶನ್ (ರಿ.) ಬೆಂಗಳೂರು ಇದರ ವತಿಯಿಂದ ಕರೋನಾ ವಾರಿಯಸ್೯ಗಳಿಗೆ ಆ.29ರಂದು ಸ್ಯಾಂಕಟನ್ ಹೋಟೆಲ್ ನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಕರೋನಾ ಸಂದಭ೯ದಲ್ಲಿ ಉತ್ತಮ ಸೇವೆ ಸಲ್ಲಿಸಿದ ರಾಘವೇಂದ್ರ ಪ್ರಭು, ಕವಾ೯ಲುರವರನ್ನು ಸಮಾಜ ಸೇವಾ ರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು.

ಈ ಸಂದಭ೯ದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾII ಕುಂ.ವೀರಭದ್ರಪ್ಪ, ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಶಿವಕುಮಾರ್, ಚಲನಚಿತ್ರ ನಟರಾದ ಭೂವನ್ ಪೊನಪ್ಪ, ಪೂಜಾ ರಮೇಶ್, ಗ್ರಂಥಾಲಯ ಇಲಾಖೆಯ ನಿದೇ೯ಶಕ ಡಾII ಸತೀಶ್ ಕುಮಾರ್ ಹೊಸಮನಿ, ಸಹಾಯಕ ಪೊಲೀಸ್ ಕಮಿಷನರ್ ರಮೇಶ್, ವಿಶ್ವಕಮ೯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬು ಪತ್ತಾರ್, ಮಾರುತಿ ಬಡಿಗೇರ್ ಮುಂತಾದವರು ಉಪಸ್ಥಿತರಿದ್ದರು.

ಶಿಕ್ಷಾರತ್ನ ಪ್ರಶಸ್ತಿ ಪುರಸ್ಕೃತರಾದ ಉಪನ್ಯಾಸಕ ದೇವಿಪ್ರಸಾದ್ ಬೆಳ್ಳಿಬೆಟ್ಟು

Posted On: 30-08-2021 09:03PM

ಕಾಪು: ಉಡುಪಿ ಜಿಲ್ಲೆಯ ಅದಮಾರು ಪೂರ್ಣ ಪ್ರಜ್ಞ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹಾಗೂ ಸಮಾಜ ಸೇವೆ ಜೊತೆ ನಿರೂಪಣೆಯಲ್ಲಿ ಸಾಮಾಜಿಕವಾಗಿ ಗುರುತಿಸಿಕೊಂಡಿರುವ ದೇವಿಪ್ರಸಾದ್ ಬೆಳ್ಳಿಬೆಟ್ಟುರವರಿಗೆ ಪ್ರತಿಷ್ಠಿತ MAX LIFE ಸಂಸ್ಥೆ ಮಂಗಳೂರಿನಲ್ಲಿ ಶಿಕ್ಷಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.

ಈ ಸಂದರ್ಭದಲ್ಲಿ ಮಂಗಳೂರು ಸಂಸ್ಥೆಯ AADM ಪ್ರಜ್ವಲ್ ಕೋಟ್ಯಾನ್, ಆಫೀಸ್ ಮುಖ್ಯಸ್ಥ ಸಂದೀಪ್ ಮೆನನ್ , ಜೊತೆಗೆ ಸಂಸ್ಥೆಯ ಸಿಬ್ಬಂದಿ ಗಳು ಹಾಗೂ ಇತರರು ಉಪಸ್ಥಿತರಿದ್ದರು.

ಯುವತಿಗೆ ಚೂರಿಯಿಂದ ಇರಿದು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕ

Posted On: 30-08-2021 06:50PM

ಉಡುಪಿ :ಉಡುಪಿಯ ಸಂತೆಕಟ್ಟೆ ಆಶೀರ್ವಾದ್ ಚಿತ್ರಮಂದಿರದ ಬಳಿ ಜೋಡಿಯೊಂದು ಪರಸ್ಪರ ವಾಗ್ವಾದಕ್ಕಿಳಿದು ಯುವಕನು ಯುವತಿಗೆ ಚೂರಿಯಿಂದ ಇರಿದು ತಾನು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ ಇಬ್ಬರೂ ಬೇರೆ ಬೇರೆ ವಾಹನದಲ್ಲಿ ಆಗಮಿಸಿದ್ದು, ಇರ್ವರಲ್ಲಿ ವಾಗ್ವಾದ ಬೆಳೆದು ಈ ಘಟನೆ ಸಂಭವಿಸಿದೆ.

ಇದೊಂದು ಏಕಮುಖ ಪ್ರೀತಿಯಾಗಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಕೂಡಲೇ ಸ್ಥಳೀಯರು ಚಿಂತಾಜನಕ ಸ್ಥಿತಿಯಲ್ಲಿದ್ದ ಇಬ್ಬರನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಲು ಸಹಕರಿಸಿದ್ದಾರೆ.

ಘಟನಾ ಸ್ಥಳಕ್ಕೆ ಪೋಲೀಸರು ಭೇಟಿ ನೀಡಿದ್ದಾರೆ.

ಬಂಟ್ವಾಳ : ಬಲೆ ತುಲು ಲಿಪಿ ಕಲ್ಪುಗ ಕಾರ್ಯಗಾರ ಉದ್ಘಾಟನೆ

Posted On: 30-08-2021 04:17PM

ಮಂಗಳೂರು : ಬಂಟ್ವಾಳ ತಾಲೂಕಿನ ಅಂಬೇಡ್ಕರ್ ನಗರ ನಾವೂರ ಬಂಟ್ವಾಳದಲ್ಲಿ ಆದಿತ್ಯವಾರ (29/8/21)ದಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜೈ ತುಲುನಾಡ್ (ರಿ.) ಮತ್ತು ಅಂಬೇಡ್ಕರ್ ನಗರ ನಾವೂರ ಬಂಟ್ವಾಳ ಇವರ ಸಹಭಾಗಿತ್ವದಲ್ಲಿ ಬಲೆ ತುಲು ಲಿಪಿ ಕಲ್ಪುಗ ಕಾರ್ಯಗಾರ ಉದ್ಘಾಟನಾ ಸಮಾರಂಭ ನಡೆಯಿತು.

ಅಂಬೇಡ್ಕರ್ ನಗರದ ಹಿರಿಯರಾದ ಜಾನು, ಬೆಲ್ಚಡ, ಅಣ್ಣು (ಯಾನೆ ಅನಿಲ್ ) ತುಲು ಲಿಪಿ ಕಲಿಯುವ ಕಾರ್ಯಗಾರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ತುಲು ಲಿಪಿ ಶಿಕ್ಷಕರಾದ ಪೂರ್ಣಿಮಾ ಬಂಟ್ವಾಳ ಮತ್ತು ಪೃಥ್ವಿ ತುಲುವೆ ಇವರು ತುಲು ಲಿಪಿ ಬರೆಯುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.

ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ ನಾವೂರಿನ ಅಂಬೇಡ್ಕರ್ ಭವನದ ಮಾರ್ಗದರ್ಶಕರಾದ ಶಂಕರ್ ಎನ್ ಎಸ್ ನಾವೂರ ಇವರು ತುಲು ಭಾಷೆಯ ಲಿಪಿಯನ್ನು ನಾವೆಲ್ಲರೂ ಕಲಿಯಬೇಕು ಮತ್ತು ತುಲುನಾಡಿನೆಲ್ಲೆಡೆ ಕಲಿಸಬೇಕು ಹಾಗೂ ತುಲು ಭಾಷೆಗೆ ಸುಮಾರು ವರ್ಷದ ಇತಿಹಾಸ ಇದೆ. ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಮಾತೃಭಾಷೆಗೆ ಸ್ಥಾನಮಾನ ಸಿಗುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭವನದ ಗೌರವ ಅಧ್ಯಕ್ಷರಾದ ಸದಾನಂದ, ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷರಾದ ದೇಜಪ್ಪ ಉಪಸ್ಥಿತರಿದ್ದರು. ದೀಕ್ಷಾ ಗಣ್ಯರನ್ನು ಸ್ವಾಗತಿಸಿ, ಶ್ರವಣ್ ನಾವೂರ ಎಲ್ಲರಿಗೂ ಧನ್ಯವಾದಗೈದರು. ದೀಕ್ಷಾ ನಾವೂರ ಕಾರ್ಯಕ್ರಮ ನಿರೂಪಿಸಿದರು.

ಕಲಾರತ್ನ ಪುರಸ್ಕೃತರಾದ ಆರ್. ಜೆ. ಎರೋಲ್

Posted On: 30-08-2021 12:09PM

ಕಾಪು : ಉಡುಪಿ ಜಿಲ್ಲೆಯ ಉದ್ಯಾವರ ಮೂಲದ ರೇಡಿಯೋ ಜಾಕಿ ಎರೋಲ್ ಗೆ MAXLIFE ಸಂಸ್ಥೆಯು ಕಲಾರತ್ನ ಗೌರವವನ್ನು ನೀಡಿ ಪುರಸ್ಕರಿಸಿದೆ.

ಈ ಸಂದರ್ಭ ಹಿರಿಯ ಕಲಾವಿದೆ ಮಾಳವಿಕಾ ಅವಿನಾಶ್ ಹಾಗು ಇತರ ದಿಗ್ಗಜರು ಉಪಸ್ಥಿತರಿದ್ದರು.

ಗ್ಯಾಂಗ್ ರೇಪ್, ಪುರುಷ ಪ್ರಧಾನ ಮಾನಸಿಕತೆ, ಸ್ವಾತಂತ್ರ್ಯ, ಸ್ವೇಚ್ಛೆ ಇತ್ಯಾದಿ.

Posted On: 30-08-2021 08:19AM

ಅತ್ಯಾಚಾರವನ್ನು ಯಾವ ನಾಗರಿಕ ಸಮಾಜ ಕೂಡ ಸಮರ್ಥನೆ ಮಾಡಬಾರದು. ಮೈಸೂರಿನ ಗ್ಯಾಂಗ್ ರೇಪ್ ಆರೋಪಿಗಳ ಬಂಧನವು ಆಗಿದೆ. ಅವರಿಗೆ ಅತ್ಯಂತ ಕಠಿಣವಾದ ಶಿಕ್ಷೆ ಆಗಲಿ ಎನ್ನುವುದು ನಮ್ಮ ಪ್ರಾರ್ಥನೆ. ಇಂಥಹಾ ಪ್ರಕರಣಗಳು ಆಗುವಾಗ ಒಮ್ಮೆ ಸಮಾಜ, ಸರಕಾರ, ಮಾಧ್ಯಮಗಳು ಬೆಚ್ಚಿ ಬೀಳುತ್ತವೆ. ಮತ್ತೆ ಕೆಲವೇ ದಿನಗಳಲ್ಲಿ ಮರೆತೇ ಬಿಡುತ್ತವೆ. ಇಲ್ಲಿ ಹಾಗಾಗದೇ ಇರಲಿ. ಅತ್ಯಾಚಾರಕ್ಕೆ ಒಳಗಾದ ಹುಡುಗಿ ತನ್ನ ಜೀವನ ಪೂರ್ತಿ ಮಾನಸಿಕವಾಗಿ ಜರ್ಜರಿತವಾಗಿ ಬದುಕುವಾಗ ಅದಕ್ಕೆ ಕಾರಣರಾದವರು 5-7 ವರ್ಷ ಮಾತ್ರ ಜೈಲುವಾಸ ಅನುಭವಿಸುವುದು, ಮತ್ತೆ ಹೊರಬಂದು ತಮ್ಮ ಹಳೆಯ ಚಾಳಿಗಳನ್ನು ಮುಂದುವರೆಸುವುದು ಖಂಡಿತವಾಗಿ ಸರಿಯಲ್ಲ. ಅತ್ಯಾಚಾರದ ಪ್ರಕರಣಗಳಲ್ಲಿ ಆಪರಾಧಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ಆಗಬೇಕು ಎನ್ನುವುದು ನಮ್ಮೆಲ್ಲರ ಆಶಯ ಆಗಬೇಕು.

ಅವರನ್ನು ಎನ್ಕೌಂಟರ್ ಮಾಡಿ ಸಾಯಿಸಿ ಹೀಗೆಲ್ಲ ಹೇಳಿಕೆ ಕೊಡುವವರು ಇದ್ದಾರೆ. ದೇಶದ ಕಾನೂನನ್ನು ಗೌರವಿಸುವವರು ಹಾಗೆ ಹೇಳುವುದಿಲ್ಲ! ಅತ್ಯಾಚಾರಗಳು ಸಮಾಜದ ಪುರುಷ ಪ್ರಧಾನವಾದ ಮಾನಸಿಕತೆಯ ಪ್ರತೀಕ ಎನ್ನುವವರು ಕೂಡಾ ಇದ್ದಾರೆ. ಅದನ್ನು ಕೂಡ ನಾನು ಒಪ್ಪುವುದಿಲ್ಲ. ಅವುಗಳು ಕೇವಲ ವಿಕೃತ ಮನಸ್ಸಿನ ಪ್ರತೀಕಗಳು. ಕುಡಿತ, ಧೂಮಪಾನ, ಡ್ರಗ್ಸ್ ಮೊದಲಾದ ವ್ಯಸನಗಳು, ಸಾಮಾಜಿಕ ಜಾಲತಾಣಗಳು ಹರಡುವ ವಿಕೃತ ಮನಸ್ಥಿತಿ, ಸ್ವೇಚ್ಚೆಯ ಹೆಸರಿನಲ್ಲಿ ಹಾದಿ ತಪ್ಪುತ್ತಿರುವ ಯುವಕ ಯುವತಿಯರು, ಮಕ್ಕಳು ಮಾಡಿದನ್ನೆಲ್ಲ ಸಮರ್ಥನೆ ಮಾಡಲು ಹೊರಡುವ ಪೋಷಕರು ಇವರೆಲ್ಲರೂ ಅತ್ಯಾಚಾರದ ಪ್ರಕರಣಗಳಿಗೆ ಪರೋಕ್ಷವಾಗಿ ಕಾರಣರಾಗುತ್ತಾರೆ. ಕ್ಯಾರೆಕ್ಟರ್ ಅನ್ನುವುದು ಹೆಣ್ಣು ಮಕ್ಕಳಿಗೆ ಮಾತ್ರವಲ್ಲ, ಅದು ಗಂಡು ಮಕ್ಕಳಿಗೆ ಕೂಡ ಅನ್ವಯ ಆಗುತ್ತದೆ. ಹೆಣ್ಣು ಮಕ್ಕಳಿಗೆ ಬಿಗಿ ಬಂಧನಗಳನ್ನು ಹಾಕಿ ಗಂಡು ಮಕ್ಕಳಿಗೆ ಹೆಚ್ಚು ಸ್ವಾತಂತ್ರ್ಯ ಕೊಡುವ ಪೋಷಕರನ್ನು ನಾನು ನೋಡಿದ್ದೇನೇ. ಅದು ಖಂಡಿತ ತಪ್ಪು. ತುಂಬಾ ತಡವಾಗಿ ಮನೆಗೆ ಬರುವ ಮಗಳನ್ನು ಕಾರಣ ಕೇಳುವ ಅಪ್ಪ ಅಮ್ಮಂದಿರು ಗಂಡು ಮಕ್ಕಳಿಗೆ ಕೂಡ ಕಾರಣ ಕೇಳಬೇಕು ಅಲ್ವಾ? ಗೆಳೆಯ ಗೆಳತಿಯರಾಗಲಿ, ಪ್ರೇಮಿಗಳಾಗಲಿ ರಾತ್ರಿ ಕತ್ತಲಾದ ನಂತರ ನಿರ್ಜನ ಪ್ರದೇಶ ಹುಡುಕಿಕೊಂಡು ಹೋಗುವ ಅಗತ್ಯ ಇದೆಯಾ? ಇಡೀ ಜಗತ್ತಿಗೆ ಸಿಸಿ ಕ್ಯಾಮರಾ ಹಾಕಿಕೊಂಡು ಪೊಲೀಸರು ಕಾವಲು ಕಾಯಲು ಸಾಧ್ಯ ಇದೆಯಾ? ಎಲ್ಲವನ್ನೂ ಪೊಲೀಸರ ತಲೆಗೆ ಕಟ್ಟಿ, ಬೇಕಾಬಿಟ್ಟಿ ಹೇಳಿಕೆಗಳನ್ನು ಕೊಡುವ ನಮ್ಮ ರಾಜಕೀಯ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಜಗತ್ತಿನ ಎಲ್ಲಿ ಅತ್ಯಾಚಾರ ನಡೆದರೂ ಅದನ್ನು ನಾನು ಬಲವಾಗಿ ಖಂಡಿಸುತ್ತೇನೆ, ಸಂತ್ರಸ್ತೆಗೆ ನ್ಯಾಯವನ್ನು ಕೊಡಿಸುತ್ತೇವೆ ಎಂದು ಮಂತ್ರಿಗಳು, ಶಾಸಕರು ತುಂಬಾ ಗಟ್ಟಿಯಾಗಿ ಹೇಳಬೇಕು. ಅದನ್ನು ಬಿಟ್ಟು ಸಮಾಜವನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡಬಾರದು. ರೇಪ್ ನಡೆದಾಗ ಅದರಲ್ಲಿ ತಮ್ಮ ರಾಜಕೀಯ ಲಾಭ ಪಡೆಯಲು ಪ್ರಯತ್ನ ಮಾಡುವರು ಕೂಡ ಅಪರಾಧಿಗಳು ಅಲ್ಲವೇ?

ಇನ್ನು ಒಂದು ಪ್ರಮುಖವಾದ ಮಾತನ್ನು ಹದಿಹರೆಯದ ಮಕ್ಕಳ ಅಪ್ಪನಾಗಿ ನಾನು ಹೇಳಬೇಕು. ಸ್ವಾತಂತ್ರ್ಯ ಮತ್ತು ಸ್ವೇಚ್ಛೆಗಳ ನಡುವೆ ತುಂಬಾ ದೊಡ್ಡ ವ್ಯತ್ಯಾಸ ಇದೆ. ನಮ್ಮ ಮಕ್ಕಳ ಮೇಲೆ ನಮಗೆ ನಂಬಿಕೆ ಇದೆ. ಅವರು ಎಲ್ಲಿ ಬೇಕಾದರೂ ಹೋಗಬಹುದು. ಎಷ್ಟು ಲೇಟ್ ಆದರೂ ಮನೆಗೆ ಬರಬಹುದು. ನನ್ನ ಮಕ್ಕಳ ನಿಜವಾದ ಅಗತ್ಯಕ್ಕಿಂತ ಹೆಚ್ಚು ಪಾಕೆಟ್ ಮನಿ ಕೊಡ್ತೇವೆ. ನನ್ನ ಮಗ, ಮಗಳು ಮಧ್ಯರಾತ್ರಿ ಕಳೆದು ಎಷ್ಟು ಲೇಟ್ ಆದ್ರೂ ಆನ್ಲೈನ್ ಇರುತ್ತಾರೆ. ಅದನ್ನು ಪ್ರಶ್ನೆ ಮಾಡಲು ನೀವ್ಯಾರು? ತನ್ನ ಇಷ್ಟ ಪಡುವ ಗೆಳೆಯ, ಗೆಳತಿಯರ ಜೊತೆಗೆ ಬಾರ್, ಪಬ್, ರೆಸಾರ್ಟ್ಸ್, ಡ್ಯಾನ್ಸಿಂಗ್ ಬಾರ್, ಹುಕ್ಕಾ ಬಾರಗಳಿಗೆ ಹೋದರೆ ಏನು ತಪ್ಪು? ಅವರು ನಮ್ಮ ಕಾಲದವರ ಹಾಗೆ ಮನೆಯ ಮೂಲೆಯಲ್ಲಿ ಕಳೆದುಹೋಗಬೇಕೆ? ಹೀಗೆಲ್ಲ ಪ್ರಶ್ನೆ ಮಾಡುವ ತುಂಬಾ ಅಡ್ವಾನ್ಸ್ ಆದ ಪೋಷಕರನ್ನು ನಾನು ನೋಡಿರುವೆ. ಅಂತವರು ಎಲ್ಲಾ ಕಾಲ ಮಿಂಚಿ ಹೋದ ನಂತರ ಅಯ್ಯೋ! ಎಂದು ಕಣ್ಣೀರನ್ನು ಸುರಿಸುತ್ತಾ ಸರಕಾರವನ್ನು, ಪೊಲೀಸರನ್ನು ಬಯ್ಯಬಾರದು ಅಲ್ಲವೇ? ನಮ್ಮ ಮಾಧ್ಯಮಗಳಿಗೂ ಅತ್ಯಾಚಾರವು ಪ್ರಮುಖ TRP ಸರಕು ಆಗಬಾರದು. ನನ್ನ ಟಿವಿ ಕಾರ್ಯಕ್ರಮಕ್ಕೆ ಬಂದಿದ್ದ ಕಾಲೇಜು ಹುಡುಗಿ ಒಬ್ಬಳು ವಿಚ್ಛೇದನ ಅನ್ನುವುದು ಸ್ತ್ರೀ ಸ್ವಾತಂತ್ರ್ಯದ ಪ್ರತೀಕ ಅಂದಿದ್ದಳು. ಸ್ವಲ್ಪ ಮಟ್ಟಿಗೆ ಅದನ್ನಾದರೂ ಒಪ್ಪೋಣ. ಸಿನೆಮಾ ನಟಿ ಒಬ್ಬಳು ಮೂರು ಬಾರಿ ಮದುವೆಯಾದಳು ಅಂದಾಗ ಇನ್ನೊಬ್ಬಳು ಮಾಡರ್ನ್ ಹುಡುಗಿ ಅದು ಅವಳ ಪರ್ಸನಲ್ ಲೈಫ್ ಅಲ್ವಾ? ಅವಳದ್ದು ಏನೂ ತಪ್ಪಿಲ್ಲ ಅಂದಿದ್ದಳು! ಅದನ್ನು ಕೂಡ ಸ್ವಲ್ಪ ಮಟ್ಟಿಗೆ ಒಪ್ಪಬಹುದು. ಮೂರು ಮದುವೆಯಾಗಿ ಸುಖವನ್ನು ಅನುಭವಿಸಿದ ದಕ್ಷಿಣ ಭಾರತದ ಖ್ಯಾತ ನಟ ಒಬ್ಬ ನಾಲ್ಕನೇ ಹೆಂಗಸಿನ ಸೆರಗನ್ನು ಹಿಡಿದು ಲಿವಿಂಗ್ ಟುಗೆದರ್ ರಿಲೇಶನ್ ಹೊಂದುತ್ತಾನೆ. ಅವನ ಮಗಳು (ಅವಳು ಕೂಡ ಸಿನೆಮಾ ನಟಿ) ನನಗೆ ಕೂಡ ಅಪ್ಪನ ಹಾಗೆ ಮದುವೆಗಳಲ್ಲಿ ನಂಬಿಕೆಯೇ ಇಲ್ಲ ಎಂದು ಹೇಳುತ್ತಾಳೆ! ಅವರೆಲ್ಲರೂ ಸೆಲೆಬ್ರಿಟಿಗಳು, ಅವರನ್ನು ಫಾಲೋ ಮಾಡುವ ಬಹುದೊಡ್ಡ ಯುವಪಡೆ ಇದೆ ಅನ್ನುವುದನ್ನು ನಾವು ಯಾರೂ ಮರೆಯಬಾರದು. ಇಂಥವರ ನಡೆ ನುಡಿಗಳನ್ನು ಬ್ಲೈಂಡ್ ಆಗಿ ಸಮರ್ಥನೇ ಮಾಡುವ ಹಾಗೂ ಕಾಪಿ ಮಾಡುವ ಯುವಕ, ಯುವತಿಯರು ನಮಗೆ ಎಲ್ಲಾ ಕಾಲೇಜುಗಳಲ್ಲಿ ಸಿಗುತ್ತಾರೆ!

ಇನ್ನೂ ಒಬ್ಬ ಕಾಲೇಜು ಹುಡುಗ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ನನ್ನ ಅಪ್ಪ ನನ್ನ ಅಮ್ಮನ ಜೊತೆಗೆ ಮೂವತ್ತು ವರ್ಷಗಳ ಕಾಲ ಅದು ಹೇಗೆ ಜೊತೆಯಾಗಿ ಬದುಕಿದರೋ? ನನಗೆ ಅವರ ಬಗ್ಗೆ ಅಯ್ಯೋ ಪಾಪ ಅನ್ನಿಸುತ್ತದೆ ಎಂದು ಹೇಳಿ ಕಾಲೇಜು ವೇದಿಕೆಯಲ್ಲಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ! ಮದುವೆಯಾದ ಗಂಡ, ಹೆಂಡತಿಯರು ಪರಸ್ಪರ ಸಣ್ಣ ಪುಟ್ಟ ವ್ಯತ್ಯಾಸಗಳನ್ನು ಮೆಟ್ಟಿ ನಿಂತು 30-40 ವರ್ಷಗಳ ಕಾಲ ಜೊತೆಯಾಗಿ ಬದುಕಿದ ನೂರಾರು ಉದಾಹರಣೆಗಳು ಒಂದೆಡೆ! ಅದ್ದೂರಿಯಾಗಿ ಮದುವೆ ಮಾಡಿಕೊಟ್ಟ ಅಪ್ಪ ಅಮ್ಮನ ಮುಂದೆ ಬಂದು (ಮದುವೆಯಾದ ಕೇವಲ ಒಂದೆರಡು ತಿಂಗಳಲ್ಲಿ) ಅವನ ಬಗ್ಗೆ ಇಷ್ಟುದ್ದ ಚಾಡಿ ಹೇಳಿ ಮದುವೆ ಮುರಿಯಲು ಸಿದ್ದರಾಗುವ ಹೆಣ್ಮಕ್ಕಳು ಇನ್ನೊಂದೆಡೆ! ಇಷ್ಟವಾಗದ ಗಂಡನ ಜೊತೆಗೆ ಜೀವನ ಪೂರ್ತಿಯಾಗಿ ಬದುಕಲು ನಾನು ನನ್ನ ಅಮ್ಮ ಅಲ್ಲ ಎಂದು ಧಿಮಾಕು ತೋರುವ ಮಗಳು ಮತ್ತೊಂದು ಕಡೆ! ಐವತ್ತು ವರ್ಷಗಳ ದಾಂಪತ್ಯವನ್ನು ಯಶಸ್ವೀ ಆಗಿ ಪೂರೈಸಿದ ಹೆಂಡತಿ ತೀರಿ ಹೋದಾಗ ಪುಟ್ಟ ಮಗುವಿನ ಹಾಗೆ ಜೋರಾಗಿ ಕಣ್ಣೀರು ಸುರಿಸಿದ ಗಂಡ ಇನ್ನೊಂದು ಕಡೆ! ಮದುವೆಯ ಮೊದಲ ರಾತ್ರಿಯೇ ನನ್ನ ಮೈ ಮುಟ್ಟಿದರೆ ಜಾಗ್ರತೆ, ನಾನು ಬೇರೆ ಒಬ್ಬನನ್ನು ಪ್ರೀತಿ ಮಾಡ್ತಾ ಇದ್ದೇನೆ. ಹೆತ್ತವರ ಒತ್ತಾಯಕ್ಕೆ ನಾನು ಈ ಮದುವೆ ಆಗಬೇಕಾಯಿತು. ನನಗೆ ಡೈವೋರ್ಸ್ ಬೇಕು ಎಂದು ಕೇಳುವ ಹುಡುಗಿ ಇನ್ನೊಂದೆಡೆ! ಸಮಾಜ ಯಾವ ಕಡೆ ಹೋಗ್ತಾ ಇದೆ? ☑ಲೇಖನ : ರಾಜೇಂದ್ರ ಭಟ್ ಕೆ, ಜೇಸಿಐ ರಾಷ್ಟ್ರಮಟ್ಟದ ತರಬೇತುದಾರ.

ಈ ಬಾರಿ ಡಾಕ್೯ ಅಲೈಟ್ ವೇಷಧಾರಿಯಾಗಿ ಬರಲಿದ್ದಾರೆ ರವಿ ಕಟಪಾಡಿ - ನಮ್ಮ ಕೈಲಾದಷ್ಟು ಸಹಾಯ ಮಾಡಿ ಅನಾರೋಗ್ಯ ಪೀಡಿತ ಮಕ್ಕಳಿಗೆ ನೆರವಾಗೋಣ

Posted On: 29-08-2021 11:42PM

ಉಡುಪಿ : ಕೃಷ್ಣಜನ್ಮಾಷ್ಟಮಿಯೆಂದರೆ ಉಡುಪಿಯ ಜನತೆಗೆ ಎಲ್ಲಿಲ್ಲದ ಸಂತೋಷ. ಅಷ್ಟಮಿ ಎಂದಾಕ್ಷಣ ನಮಗೆ ನೆನಪು ಆಗುವುದು ವೇಷಧಾರಿಗಳು.

ವೇಷಧಾರಿ ಎಂದಾಗ ನಮಗೆ ಪ್ರಪ್ರಥಮವಾಗಿ ನೆನಪು ಆಗುವುದು ರವಿ ಕಟಪಾಡಿ. ಇವರು 9 ವರ್ಷದಿಂದ ವಿವಿಧ ರೀತಿಯ ವೇಷ ಧರಿಸಿ ಅನಾರೋಗ್ಯ ಪೀಡಿತ ಮಕ್ಕಳಿಗೆ ಸಹಾಯ ಮಾಡುತ್ತಿದ್ದಾರೆ.

ಈ ವರ್ಷ ಡಾರ್ಕ್ ಅಲೈಟ್ ಎಂಬ ವಿಭಿನ್ನ ರೀತಿಯ ವೇಷ ಧರಿಸಿ ಮಲ್ಪೆ ಹಾಗೂ ಉಡುಪಿಯ ಆಸುಪಾಸಿಗೆ 30 ಹಾಗೂ 31 ರಂದು ಬರಲಿದ್ದಾರೆ.

ಈಗ ಹಣ ಕೊಡಲು ಸ್ವಲ್ಪ ಕಷ್ಟ ಆದರೂ ನಾವು ನಮ್ಮ ಕೈಲಾದಷ್ಟು ಸಹಾಯ ಮಾಡೋಣ. ಅನಗತ್ಯ ವಸ್ತುಗಳಿಗೆ ಹಣ ಖರ್ಚು ಮಾಡುವ ಬದಲು ಇಂತವರಿಗೆ ಸಹಾಯ ಮಾಡೋಣ.

ಕುಂದಾಪುರ : ಬ್ರಹ್ಮಶ್ರೀ ನಾರಾಯಣಗುರುಗಳ 167 ನೇ ಜನ್ಮ ಜಯಂತಿಯ ಪ್ರಯುಕ್ತ ವಾಹನ ಜಾಥಾ

Posted On: 29-08-2021 10:06PM

ಕುಂದಾಪುರ : ಶ್ರೀ ನಾರಾಯಣಗುರು ಯುವಕ ಮಂಡಲ ಕುಂದಾಪುರ ಇವರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜನ್ಮ ಜಯಂತಿಯ ಪ್ರಯುಕ್ತ ಬೃಹತ್ ವಾಹನ ಜಾಥಾ ಕಾರ್ಯಕ್ರಮವನ್ನು ಇಂದು ಹಿರಿಯರಾದ ಕಾಳಪ್ಪ ಪೂಜಾರಿ, ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಅಧ್ಯಕ್ಷರು ಅಶೋಕ್ ಪೂಜಾರಿ ಹಾಗೂ ಶ್ರೀ ನಾರಾಯಣ ಗುರು ಯುವಕ ಮಂಡಲ ಕುಂದಾಪುರ ಅಧ್ಯಕ್ಷರಾದ ಶ್ರೀನಾಥ ಕಡ್ಗಿಮನೆ ಚಾಲನೆ ನೀಡಿದರು.

ಶ್ರೀ ನಾರಾಯಣ ಗುರು ಮಂದಿರದಿಂದ ಸರಿ ಸುಮಾರು 50 ಕಾರುಗಳ ಮೂಲಕ ಪುರ ಮೆರವಣಿಗೆ ಹೊರಟಾಗ ಹಲವಾರು ಕಡೆ ಜಾತಿ, ಮತ ಬೇಧವಿಲ್ಲದೆ ಪುರಸಭೆ ಸದಸ್ಯರುಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಲ್ಲಿಸಿದರು. ಶಾಸ್ತ್ರಿ ಸರ್ಕಲ್ ಸುತ್ತುವರೆದು ಚರ್ಚ್ ರಸ್ತೆಯ ಮೂಲಕ ಕೋಡಿ ಚಕ್ರಮ್ಮ ದೇವಸ್ಥಾನ ತಲುಪಿ ವಾಹನ ಜಾಥ ಸಂಪನ್ನಗೊಂಡಿತು.

ತದನಂತರ ಕೋಡಿ ಚಕ್ರಮ್ಮ ದೇವಸ್ಥಾನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜನ್ಮ ಜಯಂತಿ ಪ್ರಯುಕ್ತ ಗುರುಗಳಿಗೆ ವಿವಿಧ ರೀತಿಯ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಈ ಸಂಧರ್ಭದಲ್ಲಿ ‘ನಾರಾಯಣ ಗುರು ಅವರು ಸಾಮಾಜಿಕ ಪರಿವರ್ತನೆಯ ಹರಿಕಾರರು. ಕೇರಳದಲ್ಲಿ ದೊಡ್ಡ ಬದಲಾವಣೆಗೆ ನಾಂದಿ ಹಾಡಿದವರು. ಸಮಾಜದಲ್ಲಿ ಸ್ತ್ರೀ ಸಮಾನತೆಗೆ ಶ್ರಮಿಸಿದ ಮಹಾನುಭಾವರು. ಅವರ ತತ್ವಾದರ್ಶಗಳನ್ನು ಎಲ್ಲರೂ ಪಾಲಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು’ ಜಾತ್ಯಾತೀತ ಮನೋಭಾವದಿಂದ ಸರ್ವಜಾತಿ ಬಾಂಧವರನ್ನೂ ಸಮನಾಗಿ ಸ್ವೀಕರಿಸಿ ಸಮಾಜದಲ್ಲಿ ತುಳಿತಕ್ಕೆ ಒಳಪಟ್ಟವರಿಗೆ ಶಕ್ತಿಯನ್ನು ತುಂಬಿದ ಸಂತ. ಒಂದೇ ಜಾತಿ, ಒಂದೇ ಮತ, ಒಂದೇ ದೇವರೆಂಬ ಅಮರ ಸಂದೇಶವನ್ನು ನೀಡಿ ವಿಶ್ವ ಪ್ರಸಿದ್ಧರಾದ ಮಹಾಸಂತ, ದಾರ್ಶನಿಕ, ಸಮಾಜ ಸುಧಾರಕ, ವಿಶ್ವ ಮಾನವತೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳು. ಆಧ್ಯಾತ್ಮಿಕ ಸಾಧಕರಾಗಿದ್ದ ಅವರು ಓರ್ವ ಶ್ರೇಷ್ಠ ಸಾಮಾಜಿಕ ಚಿಂತಕರಾಗಿದ್ದರು. ನಾರಾಯಣ ಗುರುಗಳ ಜೀವನಾದರ್ಶಗಳ ಕುರಿತು ಸಭೆಯನ್ನುದ್ದೇಶಿಸಿ ಗಣ್ಯರು ಮಾತನಾಡಿದರು.

ಈ ಸಂದರ್ಭದಲ್ಲಿ ಅಶೋಕ್ ಪೂಜಾರಿ ಅಧ್ಯಕ್ಷರು ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ, ಶ್ರೀನಾಥ ಕಡ್ಗಿಮನೆ ಅಧ್ಯಕ್ಷರು ಶ್ರೀ ನಾರಾಯಣ ಗುರು ಯುವಕ ಮಂಡಲ ಕುಂದಾಪುರ, ಗಣೇಶ್ ಪೂಜಾರಿ ಅಧ್ಯಕ್ಷರು ಬಿಲ್ಲವ ಸಂಘ ಬೈಂದೂರು, ಗೋಪಾಲಕೃಷ್ಣ ಪೂಜಾರಿ ಅಧ್ಯಕ್ಷರು ಬಿಲ್ಲವ ಸಂಘ ಕೋಡಿ, ಗೋಪಾಲ ಪೂಜಾರಿ ಮೊಕ್ತೇಸರು ಚಕ್ರಮ್ಮ ದೇವಸ್ಥಾನ ಕೋಡಿ, ಶಂಕರ್ ಪೂಜಾರಿ ಕೋಡಿ, ಮಹೇಶ್ ಪೂಜಾರಿ, ಗ್ರಾಮಸ್ಥರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶ್ರೀ ನಾರಾಯಣ ಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆ ಕಾರ್ಯದರ್ಶಿ ಭಾಸ್ಕರ ವಿಠಲವಾಡಿ ಕಾರ್ಯಕ್ರಮ ನಿರೂಪಿಸಿದರು.

ಶಿರ್ವ : ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಸ್ವಚ್ಚತಾ ಕಾರ್ಯ

Posted On: 29-08-2021 09:42PM

ಕಾಪು : ರಾಷ್ಟ್ರೀಯ ಸ್ವಯಂಸೇವಕ ಸಂಘ ಶಿರ್ವ ಮಂಡಲದ ಸೇವಾ ಚಟುವಟಿಕೆಯ ಅಂಗವಾಗಿ ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಒಳಾಂಗಣ ಮತ್ತು ಹೊರಾಂಗಣ ವನ್ನು ಸ್ವಚ್ಛಗೊಳಿಸಲಾಯಿತು.

ಈ ಕಾರ್ಯಕ್ರಮವು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾಪು ತಾಲೂಕಿನ ಸೇವಾ ಪ್ರಮುಖರಾದ ಸುಬ್ರಮಣ್ಯ ವಾಗ್ಳೆ, ಸೇವಾಭಾರತಿಯ ಪ್ರಮುಖರಾದ ಗಿರಿಧರ್ ಪ್ರಭು ಶಿರ್ವ, ಪ್ರವೀಣ್ ಪೂಜಾರಿ ಇವರ ನೇತೃತ್ವದಲ್ಲಿ ಸುಮಾರು 25ಕ್ಕೂ ಹೆಚ್ಚು ಸ್ವಯಂಸೇವಕರು ಸೇರಿಕೊಂಡು ಸ್ವಚ್ಛತಾ ಕಾರ್ಯಕ್ರಮವನ್ನು ಮಾಡಲಾಯಿತು.

ಸಮಾಜಸೇವಕರಾದ ಶ್ರೀನಿವಾಸ ಶೆಣೈ ಉಪಹಾರದ ವ್ಯವಸ್ಥೆಯನ್ನು ಮಾಡಿದ್ದರು. ಈ ಕಾರ್ಯಕ್ರಮದ‌ ಬಗ್ಗೆ ವೈದ್ಯಾಧಿಕಾರಿಗಳು ಹಾಗೂ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು. ಭಾಗವಹಿಸಿದ ಸ್ವಯಂಸೇವಕರಿಗೆ ಧನ್ಯವಾದ ಅರ್ಪಿಸಲಾಯಿತು. ಸಂಘದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ರೋಟರಿ ಶಂಕರಪುರ : ವಿದ್ಯಾಸೇತು ವಿದ್ಯಾ ಅಭಿಯಾನದ ಉದ್ಘಾಟನೆ

Posted On: 26-08-2021 03:24PM

ಕಾಪು : ರೋಟರಿ ಶಂಕರಪುರ ವತಿಯಿಂದ ವಿದ್ಯಾ ಸೇತು ವಿದ್ಯಾ ಅಭಿಯಾನದ ಉದ್ಘಾಟನೆಯನ್ನು ವಲಯ ಐದರ ಎಜುಕೇಶನ್ ಮತ್ತು ಲಿಟರಸಿ ಕೋಆರ್ಡಿನೆಟರ್ ಆಗಿರುವ ಶ್ರೀನಿವಾಸ್ ರಾವ್ ಮಾಡಿದರು.

ಸೈಂಟ್ ಜೋನ್ಸ್ ಕನ್ನಡ ಮಾಧ್ಯಮ ಶಾಲೆ ಶಂಕರಪುರದ ವಿದ್ಯಾರ್ಥಿಗಳಿಗೆ 52 ಪುಸ್ತಕ, ಇನ್ನಂಜೆ ಕನ್ನಡ ಮಧ್ಯಮ ಶಾಲೆಗೆ 42 ಪುಸ್ತಕ ಮತ್ತು ಪಾಂಗಾಳ ವಿದ್ಯಾವರ್ಧಕ ಶಾಲೆಗೆ 31 ಪುಸ್ತಕವನ್ನು ವಿತರಣೆ ಮಾಡಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಪ್ಲಾವಿಯಾ ಮೆನೆಜಸ್ ವಹಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ವಲಯ 5 ರ ವಲಯ ಸೇನಾನಿ ಅನಿಲ್ ಡೇಸಾ, ವಲಯ 5 ರ ಮಾಜಿ ಅಸಿಸ್ಟೆಂಟ್ ಗವರ್ನರ್ ಮತ್ತು ವಲಯ ತರಬೇತುದಾರರಾದ ನವೀನ್ ಅಮೀನ್, ಸೈ0ಟ್ ಜೋನ್ಸ್ ಶಂಕರಪುರದ ಮುಖ್ಯೋಪಾಧ್ಯಾಯರಾದ ಅಶ್ವಿನ್ ರೋಡ್ರಿಗಸ್, ನಿಕಟಪೂರ್ವ ಅಧ್ಯಕ್ಷರಾದ ವಿಕ್ಟರ್ ಮಾರ್ಟಿಸ್, ಸಂದೀಪ್ ಬಂಗೇರ, ಕಾರ್ಯದರ್ಶಿ ಮಾಲಿನಿ ಶೆಟ್ಟಿ, ಇನ್ನಂಜೆ ಶಾಲಾ ಮುಖ್ಯೋಪಾದ್ಯಾಯರಾದ ನಟರಾಜ್ ಉಪಾಧ್ಯಾಯ, ಪಾಂಗಾಳ ಶಾಲೆ ಮುಖ್ಯೋಪಾಧ್ಯಾಯರಾದ ಫ್ರಾನ್ಸಿಸ್, ಅಧ್ಯಾಪಕರು ಉಪಸ್ಥಿತರಿದ್ದರು.