Updated News From Kaup
ಕಾಪು ತಾಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷರಾಗಿ ಪತ್ರಕರ್ತ, ಚಿತ್ರ ನಿರ್ದೇಶಕ ಪ್ರಕಾಶ ಸುವರ್ಣ ಕಟಪಾಡಿ ಆಯ್ಕೆ.

Posted On: 27-11-2020 02:18PM
ಕಾಪು ತಾಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷರಾಗಿ ಪತ್ರಕರ್ತ, ಸಿನೆಮಾ ನಿರ್ದೇಶಕ ಪ್ರಕಾಶ ಸುವರ್ಣ ಕಟಪಾಡಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಉದ್ಯಮಿ ಕೆ.ಸತ್ಯೇಂದ್ರ ಪೈ ಕಟಪಾಡಿ, ಗೌರವ ಸಲಹೆಗಾರರಾಗಿ ಹಿರಿಯ ಚಿಂತಕ ಬಿ.ಪುಂಡಲೀಕ ಮರಾಠೆ ಶಿರ್ವ, ಪ್ರಧಾನ ಕಾರ್ಯದರ್ಶಿಯಾಗಿ ಭುವನೇಶ್ ಪ್ರಭು ಹಿರೇಬೆಟ್ಟು, ಜತೆ ಕಾರ್ಯದರ್ಶಿಯಾಗಿ ಕಲಾವಿದೆ ಪವಿತ್ರ ಶೆಟ್ಟಿ ಕಟಪಾಡಿ, ಕೋಶಾಧಿಕಾರಿಯಾಗಿ ರಂಗನಟ ಕೆ.ನಾಗೇಶ್ ಕಾಮತ್ ಕಟಪಾಡಿ, ಮಾಧ್ಯಮ ಕಾರ್ಯದರ್ಶಿಯಾಗಿ ಪತ್ರಕರ್ತ ರಾಕೇಶ್ ಕುಂಜೂರ್, ಸಂಘಟನಾ ಕಾರ್ಯದರ್ಶಿಯಾಗಿ ಸಮಾಜಸೇವಕ ರಾಘವೇಂದ್ರ ಪ್ರಭು ಕರ್ವಾಲ್, ಸಂಚಾಲಕರಾಗಿ ಉಡುಪಿ ಬಾಲಕಿಯರ ಪದವಿಪೂರ್ವ ಕಾಲೇಜು ಉಪನ್ಯಾಸಕ ದಯಾನಂದ ಡಿ, ಸಂಪಾದಕರಾಗಿ ಯುವಸಾಹಿತಿ ದೀಪಕ್ ಕೆ. ಬೀರ ಪಡುಬಿದ್ರಿ, ಸಮಿತಿ ಸದಸ್ಯರಾಗಿ ಸಮಾಜಸೇವಕ ಸುನೀಲ್ ಜಾನ್ ಡಿಸೋಜಾ ಶಂಕರಪುರ, ಜಾನಪದ ಕಲಾವಿದ ಹರೀಶ್ ಹೇರೂರು, ಆಕಾಶವಾಣಿ ಕಲಾವಿದೆ ಭಾಗ್ಯಲಕ್ಷ್ಮೀ ಉಪ್ಪೂರು, ಶಂಕರ್ ಶೇರಿಗಾರ್ ಮಟ್ಟು, ನ್ಯತ್ಯಕಲಾವಿದೆ ಕಾವ್ಯ ಪೈ ಕುತ್ಯಾರು, ಗೀತಾ ಆಚಾರ್ಯ ಕಾಪು, ಲಕ್ಷ್ಮಣ್ ಟಿ ಕಟಪಾಡಿ ಇವರನ್ನು ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಗಣೇಶ್ ಗಂಗೊಳ್ಳಿ ಅವರ ಶಿಫಾರಸ್ಸಿನ ಮೇರೆಗೆ ರಾಜ್ಯಾಧ್ಯಕ್ಷ ಡಾ.ಬಾಲಾಜಿ ಎಸ್. ಆಯ್ಕೆಮಾಡಿದ್ದಾರೆ ಎಂದು ವಿಭಾಗೀಯ ಸಂಚಾಲಕಿ ಡಾ.ಭಾರತಿ ಮರವಂತೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
101 ವರ್ಷ ಹಳೆಯ ಯೆಲ್ಲೂರು ಮಹಾತ್ಮ್ಯಂ

Posted On: 26-11-2020 05:24PM
ಉಡುಪಿ ಜಿಲ್ಲೆ , ಕಾಪು ತಾಲೂಕಿನ ಎಲ್ಲೂರಿನಲ್ಲಿರುವ ಮಹತೋಭಾರ ಶ್ರೀ ವಿಶ್ವೇಶ್ವರ ದೇವಸ್ಥಾನದ ಕುರಿತಂತೆ ವಿಶೇಷ ಆಸಕ್ತಿಯಿಂದ ನಿರಂತರ ಶೋಧನೆಗಳು ನಡೆಯುತ್ತಿದ್ದು ಹೊಸಹೊಸ ವಿಚಾರಗಳು , ಪ್ರಸ್ತುತ ರೂಢಿಯಲ್ಲಿರುವ ಸಂಪ್ರದಾಯ - ಶಿಷ್ಟಾಚಾರಗಳಿಗೆ ಹಾಗೂ ನಂಬಿಕೊಂಡು ಬಂದಿರುವ ಒಡಂಬಡಿಕೆಗಳಿಗೆ ಪೂರಕವಾದ ಅಂಶಗಳು ಬೆಳಕಿಗೆ ಬರುತ್ತಲೇ ಇವೆ. ಈಗಾಗಲೇ ದಾಖಲೆಯಾಗಿರುವ ದೇವಾಲಯದ ಇತಿಹಾಸ , ಪೌರಾಣಿಕ ಹಿನ್ನೆಲೆಗಳು ಮತ್ತಷ್ಟು ಹೆಚ್ಚು ಆಧಾರಗಳೊಂದಿಗೆ ದೃಢವಾಗುತ್ತಿವೆ . ಹಿರಿಯ ಶಿಕ್ಷಕ - ವೈದಿಕ ವಿದ್ವಾಂಸರಾಗಿದ್ದ ಮಾಣಿಯೂರು ಮಠದ ಮುಖ್ಯಪ್ರಾಣಾಚಾರ್ಯರು 1918ರಲ್ಲಿ ದೇವಾಲಯದ ಆಗ ಮ್ಯಾನೇಜರ್ ಆಗಿದ್ದ ರಾಘವೇಂದ್ರರಾಯರ ಮೂಲಕ ಒಂದು ಸಣ್ಣ ಪುಸ್ತಕವನ್ನು ನನಗೆ ಕಳುಹಿಸಿದ್ದರು . "ಈ ಪುಸ್ತಕ ಅವನಿಗೆ ಬೇಕಾದೀತು , ಹೊಸ ವಿಷಯ ಏನಾದರೂ ಸಿಗಬಹುದು" ಎಂದೂ ಸೂಚಿಸಿದ್ದರು . ಸಂಸ್ಕೃತ ಶ್ಲೋಕಗಳಿರುವ ಪುಸ್ತಕವು ಹಳೆಯ ಮಗ್ಗಿ ಪುಸ್ತಕದ ಅಳತೆಯಲ್ಲಿದ್ದು ಇದರ ಹೆಸರು "ಯೆಲ್ಲೂರು ಮಹಾತ್ಮ್ಯಂ". ಕೇವಲ ೨೦+೨ ಹಾಗೂ ಹೊದಿಕೆಯ ನಾಲ್ಕು ಪುಟಗಳನ್ನು ಹೊಂದಿದೆ .11- 2- 1919 ರಂದು ಪ್ರಕಟವಾಗಿತ್ತು .ಆಗ ಪುಸ್ತಕದ ಬೆಲೆ ಎರಡಾಣೆ. 2020 ನೇ ಇಸವಿಯ ಫೆಬ್ರವರಿ ಎರಡನೇ ತಾರೀಕಿಗೆ ಈ ಪುಸ್ತಕಕ್ಕೆ 101 (ನೂರ ಒಂದು) ವರ್ಷವಾಯಿತು .

'ಯೆಲ್ಲೂರು ಮಹಾತ್ಮ್ಯಂ' :ಒಟ್ಟು ನಾಲ್ಕು ಅಧ್ಯಾಯಗಳಾಗಿ ಯೆಲ್ಲೂರು ಮಹಾತ್ಮ್ಯೆಯನ್ನು ವಿವರಿಸಲಾಗಿದೆ .೧೪೩ ಶ್ಲೋಕಗಳಿವೆ . ಈ ಪುಸ್ತಕಕ್ಕೆ ಸಂಗ್ರಾಹಕರು ಬರೆದ 'ಪ್ರಸ್ತಾವನೆ'ಯಲ್ಲಿ ಕ್ಷೇತ್ರ ಮಹಾತ್ಮೆಯ ಕತೆಯ ಸಂಕ್ಷಿಪ್ತ ವಿವರಣೆ ಇದೆ . " ದೇವಾಲಯದ ಗರ್ಭಗುಡಿಯ ದೀಪದಳಿಯ ಮೇಲಿನ ಹಂತದಲ್ಲಿ ಜೀರ್ಣೋದ್ಧಾರದ ವೇಳೆ ಅಳವಡಿಸಿರುವ ಕ್ಷೇತ್ರ ಪರಿಚಯದ ದೃಶ್ಯಗಳ ಕಥೆಯನ್ನು ಈ ಪುಸ್ತಕ ದೃಢೀಕರಿಸುತ್ತದೆ" . ಕಥಾಸಾರ : ಕುಂದಕುಲೋತ್ಪನ್ನನಾದ ರಾಜನು ಗ್ರಾಮಸಮೀಪಕ್ಕೆ ಬಂದ ಭಾರ್ಗವ ಮುನಿಯನ್ನು ತನ್ನ ಗ್ರಾಮಕ್ಕೆ ಬರಬೇಕೆಂದು ಬೇಡಿದನು .ಆಮುನಿಯು ದೇವಾಲಯ ಶೂನ್ಯವಾದ ನಿನ್ನ ದೇಶಕ್ಕೆ ಬರಲಾರೆನೆಂದು ಹೇಳಿಹೋದನು .ರಾಜನು ದುಃಖದಿಂದ ಕಡಂಬಳಿತ್ತಾಯ ಕುಲಜನಾದ ವಿಪ್ರನಿಂದ ಕೂಡಿ ಕಾಶಿಗೆ ಹೋಗಿ ರುದ್ರನನ್ನು ಸೇವಿಸಿ ಪ್ರಸನ್ನನಾದ ದೇವನಿಂದ ಹುಲಿ - ದನ ಕೂಡಿ ವೈರವಿಲ್ಲದೆ ವಾಸಿಸುವ ಮೈಲಾರನೆಂಬ ಶಿವಾರ್ಚಕ ಬ್ರಾಹ್ಮಣನ ಶುದ್ಧ ಸ್ಥಳದಲ್ಲಿ ಉದ್ಭವಿಸುವೆನೆಂದು ವರವನ್ನು ಪಡೆದು ತನ್ನ ದೇಶಕ್ಕೆ ಹಿಂದಿರುಗಿ ಬಂದನು . ಹಾಗೆಯೇ ಅಲ್ಲಿ ಮಹಾದೇವನು ಉದ್ಭವಿಸುತ್ತಿರುವಾಗ ಬುಡಕಟ್ಟು ಮಹಿಳೆಯೊಬ್ಬಳು ಗಡ್ಡೆಯನ್ನು ಕೀಳುವುದಕ್ಕೆ ಕತ್ತಿಯನ್ನು ಭೂಮಿಗೆ ಹೊಡೆಯಲು ಅಲ್ಲಿ ರಕ್ತವು ತೋರಿತು.ಆಗ ಅವಳು ಹೆದರಿ ತನ್ನ ಮೃತ ಪುತ್ರನ ರಕ್ತವೆಂದು ಭಾವಿಸಿ "ಯೆಲ್ಲೋ ..." ಎಂದು ಕೂಗುತ್ತಾ ಓಡಿದಳು .ಆ ದೇವನು ತಲೆಯಲ್ಲಿ ಆ ಗಾಯವನ್ನು ಧರಿಸಿ ಮೇಲಕ್ಕೆ ಬಂದನಾದುದರಿಂದ ಆಸ್ಥಳಕ್ಕೆ "ಯೆಲ್ಲೂರು" ಎಂಬ ಹೆಸರಾಯಿತು .ಈ ರೀತಿ ಅರಸನಿಗೆ ಪ್ರಸನ್ನನಾದ ಮಹಾದೇವನು ಆ ಸ್ಥಳದಲ್ಲಿ ಭಕ್ತ ಜನರಿಗೆ ಸರ್ಮಾಭೀಷ್ಟವನ್ನು ಕೊಡುತ್ತಿರುವನು ....... (ಕತೆ ಇನ್ನೂ ವಿಸ್ತಾರವಾಗಿ ಮಹಾತ್ಮ್ಯೆಯಲ್ಲಿದೆ) ಇದೇ ಪುಸ್ತಕದ ಕೊನೆಯ ಪುಟದಲ್ಲಿ (ಹೊದಿಕೆಯ ಪುಟ) ಮುದ್ರಿತವಾದ 'ಸೂಚನೆ" : ಇಂತಹ ಪ್ರಸಿದ್ಧವಾದ ಕ್ಷೇತ್ರದ ಮಹಿಮೆಯನ್ನು ಪ್ರಕಟಿಸಬೇಕಾಗಿ ಈ ಕ್ಷೇತ್ರದ ಸಂದರ್ಶನಾರ್ಥಿಗಳಾಗಿ ಬಂದಿದ್ದ ಮದರಾಸು ಸಂಸ್ಥಾನದ ಸಂಸ್ಕೃತ ಶಾಲೆಗಳ ಸೂಪರಿಂಟೆಂಡೆಂಟ್ ಆದ ಮ.ರಾ.ರಾ. ಸೇಲಂ ಸುಬ್ರಾವ್ ಎಂ.ಎ. ಇವರ ಸೂಚನಾನುಸಾರ ದೇವಸ್ಥಾನದ ಅರ್ಚಕರೊಬ್ಬರಲ್ಲಿದ್ದ ಅತಿ ಜೀರ್ಣ "ತಾಲಪ್ರತಿ"ಯಿಂದ ಸಂಗ್ರಹಿಸಿ ಶ್ರೀಮದದಮಾರು ಮಠದ ಶ್ರೀ ವಿಬುಧಪ್ರಿಯ ಶ್ರೀ ಪಾದಂಗಳವರ ಆಜ್ಞೆಯಂತೆ ಛಾಪಿಸಿ ಪ್ರಕಟಿಸಲ್ಪಟ್ಟಿತು . ಕುಂಜೂರು ವ್ಯಾಸರಾವ್. ಆಡಳಿತೆದಾರ ಎಲ್ಲೂರು ದೇವಸ್ಥಾನ . (ಈಗಾಗಲೇ ಜನಪ್ರಿಯವಾಗಿದ್ದು ,ಬಹು ಸಂಖ್ಯೆಯ ಭಕ್ತರು ಒಪ್ಪಿರುವ ಕಥೆ ಹಾಗೂ 1996 ರಲ್ಲಿ ದೇವಸ್ಥಾನದ ವತಿಯಲ್ಲಿ ಪ್ರಕಟವಾಗಿ, ಈಗ ಮೂರನೇ ಅವೃತ್ತಿಯಾಗಿ ಲಭ್ಯವಿರುವ "ಮಹತೋಭಾರ ಯೆಲ್ಲೂರು ವಿಶ್ವನಾಥ" ಪುಸ್ತಕದಲ್ಲಿ ದಾಖಲೆಯಾಗಿರುವ ಮೂರು ಕತೆಗಳಲ್ಲಿ ವಿಸ್ತಾರವಾದ ಒಂದು ಕತೆಗೆ ಈ 'ನೂರ ಒಂದು' ವರ್ಷ ಹಳೆಯ ಪುಸ್ತಕ ಕತೆ ಸಮರ್ಥನೆಯನ್ನು ನೀಡುತ್ತದೆ.)
ಅನುವಾದ ಸಹಿತ ಪ್ರಕಟವಾಗುತ್ತದೆ : ಬಳಿಕ ಎರಡುಬಾರಿ ಈ "ಯೆಲ್ಲೂರು ಮಹಾತ್ಮ್ಯಂ" ಪುಸ್ತಕದಲ್ಲಿರುವ ಸಂಸ್ಕೃತ ಶ್ಲೋಕಗಳ ಅನುವಾದ ಸಹಿತದ 'ಸ್ಕಾಂದ ಪುರಾಣದ ಸಹ್ಯಾದ್ರಿ ಖಂಡ'ದಲ್ಲಿರುವ "ಯೆಲ್ಲೂರು ಮಹಾತ್ಮೆ" ಎಂದು ಕನ್ನಡ ತಾತ್ಪರ್ಯ ಸಹಿತದ ಪುಸ್ತಕವು ದೇವಾಲಯದ ವತಿಯಲ್ಲಿ ಮುದ್ರಣವಾಗುತ್ತದೆ (ಭಕ್ತರ ಪ್ರಯೋಜನಾರ್ಥವಾಗಿ ಎಲ್ .ನರಸಿಂಗರಾಯರು ಕನ್ನಡ ತಾತ್ಪರ್ಯ ಸಹಿತವಾದ ಈ ಪುಸ್ತಕವನ್ನು ಮುದ್ರಿಸಿಕೊಟ್ಟರು ಎಂದು ಒಂದನೇಯ ಅಥವಾ ಎರಡನೇ ಆವೃತ್ತಿಯ ಪ್ರಸ್ತಾವನೆಯಲ್ಲಿದೆ.). ಆ ಎರಡು ಆವೃತ್ತಿಗಳು ಲಭ್ಯವಿಲ್ಲ .ಮುದ್ರಣವಾದ ವರ್ಷ ತಿಳಿದು ಬರುವುದಿಲ್ಲ. ಆದರೆ 1974ರ ವೇಳೆ ದ್ವಿತೀಯ ಮುದ್ರಣದ ಪ್ರತಿಗಳು ಲಭ್ಯವಿತ್ತು ಎಂಬುದಕ್ಕೆ ಇತಿಹಾಸ ತಜ್ಞ ಡಾ.ಗುರುರಾಜ ಭಟ್ಟರು ಆ ದ್ವಿತೀಯ ಆವೃತ್ತಿಯನ್ನು ಆಧರಿಸಿ "ಕುಂಜೂರು ಶ್ರೀ ದುರ್ಗಾ ದೇವಸ್ಥಾನ" ಎಂಬ ಒಂದು ಸಣ್ಣ ಕೈಪಿಡಿಯನ್ನು ಕುಂಜೂರು ದೇವಸ್ಥಾನಕ್ಕಾಗಿ ಬರೆದು ಕೊಡುತ್ತಾರೆ . ಈಗ ಹಲವೆಡೆ ಲಭ್ಯವಿರುವ "ಎಲ್ಲೂರು ಮಹಾತ್ಮೆ" ಅದು 1976 ರಲ್ಲಿ ಮುದ್ರಣವಾದ ಮೂರನೇ ಆವೃತ್ತಿಯ ಪ್ರತಿಗಳು ದೇವಾಲಯದ ಕಚೇರಿಯಲ್ಲಿ ಇರಬೇಕು .ಕನ್ನಡ ತಾತ್ಪರ್ಯ ಸಹಿತದ ಈ ಪುಸ್ತಕದ ಒಂದು ಮೂಲ ಪ್ರತಿ (ಸಂಸ್ಕೃತ ಶ್ಕೋಕಗಳು ಮಾತ್ರ ಇರುವ. ಪುಸ್ತಕ ಸಂಗ್ರಹಿಸುವವರಲ್ಲಿ ಈ ಪ್ರತಿಗಳು ಇರಬಹುದು) ಈಗ ಲಭ್ಯವಾಗಿದೆ .ಈ ಪುಸ್ತಕ ಈ ವರೆಗೆ ದಾಖಲಿಸಿದ ಕತೆಗಳಿಗೆ ನೂರೊಂದು ವರ್ಷ ಪುರಾತನ ಆಧಾರವಾಗುತ್ತದೆ. 1996 ನೇ ಇಸವಿ ಏಪ್ರಿಲ್13 ನೇ ತಾರೀಕಿನಂದು ಪ್ರಸ್ತುತ ಲಭ್ಯವಿರುವ ಕ್ಷೇತ್ರ ಪರಿಚಯ ಪುಸ್ತಕ 'ಮಹತೋಭಾರ ಎಲ್ಲೂರು ವಿಶ್ವನಾಥ' ದೇವಾಲಯದ ವತಿಯಲ್ಲಿ ಮುದ್ರಿಸಲ್ಪಟ್ಟು ಬಿಡುಗಡೆಯಾಗುತ್ತದೆ .ಕಳೆದ 24 ವರ್ಷಗಳಲ್ಲಿ ಇದೇ ಪುಸ್ತಕ ದೇವಾಲಯದ ವತಿಯಲ್ಲಿ ಮತ್ತೆರಡು ಬಾರಿ ಮುದ್ರಣಗೊಳ್ಳುತ್ತದೆ. ಈಗ ದೇವಾಲಯದಲ್ಲಿ ಮಾರಾಟಕ್ಕೆ ಲಭ್ಯವಿರುವ ಪುಸ್ತಕ, ಮೂರನೇ ಆವೃತ್ತಿಯದ್ದು.
ಎಲ್ಲೂರು ಮಹಾತ್ಮ್ಯೆ : ತಾನು ಎಲ್ಲೂರಿಗೆ ಹೇಗೆ ,ಯಾಕೆ ಹೋದೆನು , ಎಲ್ಲಿ ,ಯಾವ ಸುಸ್ಥಳದಲ್ಲಿ ಆವಿರ್ಭವಿಸಿದೆ ಎಂಬುದನ್ನು ಮಹಾದೇವನು ಪಾರ್ವತಿಗೆ ಹೇಳುತ್ತಾ : "ಪಿಲಾರುಕಾನ , ಸಾಂತೂರು , ನಂದಿಕೂರು , ಪಾದೆಬೆಟ್ಟು ,ಕುಂಜೂರು ,ಉಳಿಯಾರು , ಕಾಪು ಸಮೀಪದ ಪಾಂಗಾಳ , ಕಳತ್ತೂರು ,ಪೇರೂರು , ಶಿರ್ವ , ಮುಂತಾದ ಹತ್ತು ಪುಣ್ಯ ಕ್ಷೇತ್ರಗಳನ್ನು ಪಿಲಾರಕಾನದಲ್ಲಿ ತಪಸ್ಸನ್ನಾಚರಿಸುತ್ತಿದ್ದ ಭಾರ್ಗವನೆಂಬ ಮಹರ್ಷಿಯು ಸಂಕಲ್ಪಸಿದ್ದನು .ಆ ಹತ್ತು ಕ್ಷೇತ್ರಗಳ ಮಧ್ಯೆ ನಾನು ಆವಿರ್ಭವಿಸಿದೆ ಅದೇ 'ಯೆಲ್ಲಾಪುರ' ಅಥವಾ ಯೆಲ್ಲೂರು" ಎಂದು ಈಶ್ವರನು ಹೇಳುತ್ತಾನೆ . ಈ ಹತ್ತು ಕ್ಷೇತ್ರಗಳಲ್ಲಿ "ಕುಂಜಪುರ ಕ್ಷೇತ್ರ ಕಲ್ಪನಂ ಪರಮಾದ್ಭುತಂ" ಎಂದೂ ಉದ್ಗರಿಸುತ್ತಾನೆ . ಹೀಗೆ ಕುಂಜಪುರ - ಕುಂಜೂರು ಕ್ಷೇತ್ರ ಸಂಕಲ್ಪದ ಕತೆಯನ್ನು ಹೇಳುತ್ತಾ ಹರಿಯುತ್ತಿರುವ ವಾರುಣಿ ಎಂಬ ನದಿಯನ್ನು ಮುಚ್ಚಿ ಬದಿಯಲ್ಲಿ ಭೂಮಿಯನ್ನು ಪವಿತ್ರವಾಗಿಸಲು ಯಾಗವೊಂದನ್ನು ಮಾಡಲು ಸಂಕಲ್ಪಿಸುತ್ತಾನೆ (ಈ ಕುರಿತ ವಿಸ್ತಾರವಾದ ವಿವರಣೆ ಇದೆ , ಪ್ರಮಾಣಗಳಿವೆ .ಯಾಗ ನೆರವೇರಿಸಿದ ಕ್ರಮವಿದೆ , ಸಹಕರಿಸಿದ ವಂಶಸ್ಥರ , ವಂಶಗಳ ಹೆಸರುಗಳಿವೆ). ಯಾಗ ಪೂರೈಸಿದ ಬಳಿಕ ದುರ್ಗಾ ಶಕ್ತಿಯನ್ನು ಸಂಕಲ್ಪಿಸುತ್ತಾನೆ. ಈ ವಿವರಗಳು ಈಗಾಗಲೇ ನಮೂದಾಗಿದೆಯಾದರೂ ಆ ವಿವರಣೆಗೆ ನೂರೊಂದು ವರ್ಷ ಪುರಾತನ ದಾಖಲೆಯೊಂದು ಸಿಕ್ಕಿದೆ (ಇನ್ನಷ್ಟು ಹೊಸ ವಿಷಯಗಳು ಇತ್ತೀಚೆಗೆ ಲಭ್ಯವಾಗಿದ್ದು ಮುಂದೆ ವಿವರಿಸುವ). ಲೇಖನ : ಕೆ.ಎಲ್.ಕುಂಡಂತಾಯ
ಕಾಪು : ಜಾರ್ದೆ ಮಾರಿಪೂಜೆ ಸಂಪನ್ನ

Posted On: 25-11-2020 08:34PM
ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಜಾರ್ದೆ ಮಾರಿಪೂಜೆಯು ಧಾರ್ಮಿಕ ಪೂಜಾ ವಿಧಾನಗಳೊಂದಿಗೆ ಕಾಪುವಿನ ಹಳೆ ಮಾರಿಗುಡಿ, ಹೊಸ ಮಾರಿಗುಡಿ ಮತ್ತು ಮೂರನೇ ಮಾರಿಗುಡಿಗಳಲ್ಲಿ ಸಂಪನ್ನಗೊಂಡಿತು.

ಲಾಕ್ ಡೌನ್ ಸಂದರ್ಭ ನಡೆದ ಸುಗ್ಗಿ ಮಾರಿಪೂಜೆ, ಆಟಿ ಮಾರಿಪೂಜೆಗಳಲ್ಲಿಯೂ ದೇವಳದ ಅರ್ಚಕರು, ಸಿಬ್ಬಂದಿಗಳು ಮತ್ತು ಆಡಳಿತ ಮಂಡಳಿಗೆ ಮಾತ್ರ ಅವಕಾಶ ನೀಡಲಾಗಿತ್ತು.

ಲಕ್ಷಾಂತರ ಭಕ್ತಾದಿಗಳು ಆಗಮಿಸುವ ಮಾರಿ ಪೂಜೆಗೆ ಸರಕಾರದ ನಿರ್ದೇಶನದಂತೆ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದ್ದು ಸುಗ್ಗಿ, ಆಟಿ, ಜಾರ್ದೆ ಮಾರಿಪೂಜೆಯಲ್ಲಿ ಬಾಕಿ ಉಳಿಸಿದ ಹರಕೆಗಳನ್ನು ಸಮರ್ಪಿಸಲು ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ನಡೆಯುವ ಸುಗ್ಗಿ ಮಾರಿಪೂಜೆಗೆ ಅವಕಾಶ ನೀಡಲಾಗುವುದು ಎಂದು ಹೊಸ ಮಾರಿಗುಡಿ ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಹಳೆ ಮಾರಿಗುಡಿ ಆಡಳಿತ ಮೊಕ್ತೇಸರ ಪ್ರಸಾದ್ ಜಿ. ಶೆಣೈ, ಮೂರನೇ ಮಾರಿಗುಡಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್ ಬಂಗೇರ ತಿಳಿಸಿದ್ದಾರೆ.
ಮಾರಿಪೂಜೆ ಸಂದರ್ಭ ಸಾರ್ವಜನಿಕರಿಗೆ ನಿರ್ಬಂಧವಿದ್ದರೂ ಭಕ್ತಾದಿಗಳ ಸಂದಣಿ ನಿಯಂತ್ರಿಸಲು ಮೂರು ದೇವಳಗಳಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ ಉಡುಪಿ : ಕಟಪಾಡಿ ಕಾರುಣ್ಯ ವೃದ್ಧಾಶ್ರಮ ಭೇಟಿ

Posted On: 25-11-2020 04:53PM
ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡವು ಕಟಪಾಡಿಯ ಕಾರುಣ್ಯ ವೃದ್ಧಾಶ್ರಮಕ್ಕೆ ಇಂದು ಭೇಟಿ ನೀಡಿ ಪ್ರತಿ ತಿಂಗಳು ನಡೆಸುವ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷಧಿ ನೀಡುವ ಜೊತೆಗೆ ತಂಡದ ಚಿರಪರಿಚಿತರಾದ ಸಿಲೋಮ್ ಅವರ ಹುಟ್ಟುಹಬ್ಬವನ್ನು ಅಲ್ಲಿಯ ವೃದ್ಧರಿಗೆ ಊಟ ಹಾಗೂ ಸಿಹಿ ಹಂಚುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದರು.

ಊಟದ ವ್ಯವಸ್ಥೆಯನ್ನು ಮಾಡಿದ ಸಿಲೋಮ್ ಹಾಗೂ ಅವರ ಕುಟುಂಬಕ್ಕೆ ಧನ್ಯವಾದ ಸಮರ್ಪಿಸಲಾಯಿತು. ಡಾ. ಕೀರ್ತಿ ಪಾಲನ್ ಅವರು ಅಲ್ಲಿಯ ವೃದ್ಧ ಮಹಿಳೆಯರಿಗೆ ಸೀರೆ ಹಂಚಿದರು.

ಆಸರೆ ತಂಡದ ಸ್ಥಾಪಕಾಧ್ಯಕ್ಷರು ಡಾ. ಕೀರ್ತಿ ಪಾಲನ್ ಈ ಕಾರ್ಯಕ್ರಮವನ್ನು ನೆರವೇರಿಸಿದರು. ಆಸರೆ ತಂಡದ ಜಗದೀಶ್ ಬಂಟಕಲ್, ಮೋಕ್ಷ ಪಾಲನ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಉಡುಪಿ : ಎರಡು ಕಾಲಿಲ್ಲದ ಯುವತಿಗೆ ಬಾಳು ನೀಡಿದ ದುಬೈ ಉದ್ಯೋಗಿ

Posted On: 25-11-2020 01:27PM
ಉಡುಪಿಯ ಕರಂಬಳ್ಳಿ ಗ್ರಾಮದ ನಿವಾಸಿಯಾಗಿರುವ ಸುನೀತಾ ಹುಟ್ಟಿನಿಂದಲೇ ಸೌಂದರ್ಯವತಿಯಾಗಿದ್ದರೂ ಪೋಲಿಯೋ ಎಂಬ ಮಹಾಮಾರಿ ಆಕೆಯ ಎರಡೂ ಕಾಲುಗಳನ್ನ ಕಿತ್ತುಕೊಂಡಿತ್ತು. ಈ ಅಂಗವೈಕಲ್ಯತೆ ಆಕೆಯ ನೆಮ್ಮದಿ ಹಾಳುಮಾಡಿತ್ತು. ಪಿಯುಸಿವರೆಗೆ ಓದಿಕೊಂಡು ತಂದೆ ತಾಯಿಯ ಆಶ್ರಯದಲ್ಲಿ ಬೆಳೆಯುತ್ತಿದ್ದ ಸುನೀತಾ, ತನ್ನ ಕಾಲಿನಂತೆ ಬದುಕು ಕೂಡಾ ನಿರಾಧಾರವಾಗುತ್ತೆ ಎಂದು ಖಿನ್ನತೆಗೆ ಜಾರಿದ್ದಳು. ಆದರೆ ಕಾಲು ಕಿತ್ತುಕೊಂಡು ಕಷ್ಟ ಕೊಟ್ಟ ದೇವರು ಮದುವೆಯ ವಿಚಾರದಲ್ಲಿ ಈಕೆಯ ಭಾಗ್ಯದ ಬಾಗಿಲು ತೆರೆದಿದ್ದಾರೆ. ದುಬೈನ ಆಯಿಲ್ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿರುವ ಮಂಗಳೂರಿನ ನಿವಾಸಿ ಸಂದೀಪ್ ತಾನೇ ಮುಂದೆ ಬಂದು ಈಕೆಯ ಜೀವನ ಪಯಣಕ್ಕೆ ಆಧಾರವಾಗಲು ನಿರ್ಧರಿಸಿದ್ದಾರೆ.

ಮನೆಯವರ ಒಪ್ಪಿಗೆಯಂತೆ ನಿನ್ನೆ ಈ ಅಪರೂಪದ ಮದುವೆಗೆ ಉಡುಪಿಯ ಕಂಬಳ್ಳಿ ದೇವಸ್ಥಾನ ಸಾಕ್ಷಿಯಾಯ್ತು. ಮಾನವೀಯತೆ ಇನ್ನೂ ಸತ್ತಿಲ್ಲ ಅನ್ನೋದಕ್ಕೆ ಉಡುಪಿಯ ಕರಂಬಳ್ಳಿಯಲ್ಲಿ ನಡೆದ ಈ ಆದರ್ಶ ಮದುವೆಯೇ ಸಾಕ್ಷಿ. ಈಗಿನ ಕಾಲದಲ್ಲಿ ದೇಹದಲ್ಲಿ ಒಂದು ಸಣ್ಣ ವೈಕಲ್ಯತೆ ಕಂಡರೂ ಹುಡುಗಿ ನನಗೆ ಬೇಡ ಅನ್ನುವವರೆ ಜಾಸ್ತಿ. ಆದರೆ, ದುಬೈನಂತಹ ಸಿರಿತನದ ನಾಡಿನಲ್ಲಿ ದೊಡ್ಡ ಕಂಪೆನಿಯೊಂದರಲ್ಲಿ ಕೆಲಸದಲ್ಲಿರುವ ಯುವಕ ಕಾಲಿಲ್ಲದ ಯುವತಿಗೆ ಬಾಳುಕೊಡುವ ನಿರ್ಧಾರ ಮಾಡಿ ಸುನಿತಾಳ ಕೈಹಿಡಿದಿರೋದು ಮಾನವೀಯತೆಗೆ ಹಿಡಿದ ಕೈಗನ್ಬಡಿ ಅಂದರೆ ತಪ್ಪಾಗಲ್ಲ.

ಮಲೈಕಾ ಸೊಸೈಟಿ : ಮಂಗಳೂರು ಶಾಖೆ ಮ್ಯಾನೇಜರ್ ಬಂಧನ

Posted On: 25-11-2020 01:21PM
ಮಲೈಕಾ ಸೊಸೈಟಿ ಹೆಸರಲ್ಲಿ ಗ್ರಾಹಕರಿಂದ ಕೋಟ್ಯಂತರ ರೂ. ಠೇವಣಿ ಸಂಗ್ರಹಿಸಿ ಅವಧಿ ಪೂರ್ಣಗೊಂಡಾಗ ಅದನ್ನು ಹಿಂದಿರುಗಿಸದೆ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಸಂಸ್ಥೆಯ ಮಂಗಳೂರು ಶಾಖೆಯ ಮ್ಯಾನೇಜರ್‌ವೊಬ್ಬರನ್ನು ಆರ್ಥಿಕ ಮತ್ತು ಮಾದಕದ್ರವ್ಯ ಅಪರಾಧಗಳ ಪೊಲೀಸರು ಬಂಧಿಸಿ, ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಮ್ಯಾನೇಜರ್ ರೀನಾ ಜೋಶ್ ಎಂಬವರನ್ನು ಬಂಧಿಸಿರುವ ಪೊಲೀಸರು ಬೆಂದೂರ್‌ವೆಲ್‌ನಲ್ಲಿರುವ ಪ್ರಧಾನ ಕಚೇರಿಗೆ ಕರೆ ತಂದು ತನಿಖೆ ನಡೆಸಿ, ಮಹತ್ವದ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಸಂಸ್ಥೆಯ ಸ್ಥಾಪಕ ಗಿಲ್ಬರ್ಟ್ ಬ್ಯಾಪಿಸ್ಟ್, ಪತ್ನಿ ಮರ್ಸಿಲಿನ್ ಬ್ಯಾಪ್ಟಿಸ್ಟ್ ಸೇರಿದಂತೆ ಆಡಳಿತ ಮಂಡಳಿಯ 12 ಮಂದಿ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.
ಮುಂಬೈ, ಮಂಗಳೂರು, ಉಡುಪಿ ಸಹಿತ ವಿವಿಧೆಡೆ ಮಲೈಕಾ ಮಲ್ಟಿ ಸ್ಟೇಟ್ ಕೋ ಆಪರೇಟಿವ್ ಸೊಸೈಟಿ ಶಾಖೆಗಳನ್ನು ಹೊಂದಿದೆ.ಆಕರ್ಷಕ ಗರಿಷ್ಠ ಬಡ್ಡಿ ನೀಡುವ ಆಮಿಷ ತೋರಿಸಿ 800ಕ್ಕೂ ಅಧಿಕ ಮಂದಿ 350 ಕೋಟಿ ರೂ.ಗಿಂತಲೂ ಅಧಿಕ ಹಣ ಠೇವಣಿ ಇಡುವಂತೆ ಮಾಡಿದ್ದಾರೆ. ಠೇವಣಿ ಬಡ್ಡಿ ಸಮೇತ ಹಿಂದಿರುಗಿಸುವ ಸಮಯವಾದರೂ ಹಣ ಹಿಂದಿರುಗಿಸದೇ ಮೋಸ ಮಾಡಿದ್ದಾರೆ ಎನ್ನಲಾಗಿದೆ.
ಸದ್ಯ ಮಲೈಕಾ ಸೊಸೈಟಿ ಮಂಗಳೂರು ಶಾಖೆಯ ಮ್ಯಾನೇಜರ್ ರೀನಾ ಜೋಶ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕಾಪು ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಸರಳ ರೀತಿಯಲ್ಲಿ ಮಾರಿಪೂಜೆ ಆಚರಣೆ

Posted On: 25-11-2020 12:27AM
ಕಾಪು ಶ್ರೀ ಹಳೇ ಮಾರಿಯಮ್ಮ ದೇವಳದಲ್ಲಿ ಇಂದು ಕಾಲಾವಧಿ ಜಾರ್ದೆ ಮಾರಿಪೂಜಾ ಜಾತ್ರೆ.

ಸರಕಾರದ ಕೋರೋನಾ ನಿರ್ಭಂಧ ಕಾರಣ ಸರಳ ರೀತಿಯಲ್ಲಿ ಧಾರ್ಮಿಕ ಆಚರಣೆಗಳು ಜರಗಿತು.


ಕರಾವಳಿಯಲ್ಲಿ 3986 ಕೋಟಿ ರೂ ವೆಚ್ಚದಲ್ಲಿ 1348 ಕಿಂಡಿ ಅಣೆಕಟ್ಟು: ಸಚಿವ ಮಾಧುಸ್ವಾಮಿ

Posted On: 24-11-2020 10:55PM
ಉಡುಪಿ : ರಾಜ್ಯಾದ್ಯಂತ ಅಂರ್ತಜಲವನ್ನು ಹೆಚ್ಚಿಸುವ ಉದ್ದೇಶದಿಂದ ಸಣ್ಣ ನೀರಾವರಿ ಇಲಾಖೆವತಿಯಿಂದ ಅನೇಕ ಯೋಜನೆಗಳನ್ನು ರೂಪಿಸಿ, ಕೃಷಿ ಮತ್ತು ಕುಡಿಯುವ ನೀರಿನ ಬಳಕೆಗೆ ಆದ್ಯತೆ ನೀಡಿ, ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯದ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಹೇಳಿದರು. ಅವರು ಮಂಗಳವಾರ ಬೈಂದೂರಿನ ಪಡುವರಿಯಲ್ಲಿ 35 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಕಿಂಡಿ ಅಣೆಕಟ್ಟು ಕಾಮಗಾರಿಯ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಕರಾವಳಿ ಜಿಲ್ಲೆಗಳಲ್ಲಿ ಕೃಷಿ ಮತ್ತು ಕುಡಿಯುವ ನೀರು ಉದ್ದೇಶಕ್ಕಾಗಿ 3986 ಕೋಟಿ ರೂ ವೆಚ್ಚದಲ್ಲಿ 1348 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲು ಮಾಸ್ಟರ್ ಪ್ಲಾನ್ ಯೋಜನೆಯನ್ನು ರೂಪಿಸಿದ್ದು, ದಕ್ಷಿಣ ಕನ್ನಡದಲ್ಲಿ 446, ಉಡುಪಿಯಲ್ಲಿ 424 ಉಡುಪಿಯಲ್ಲಿ, 466 ಕಿಂಡಿ ಅಣೆಕಟ್ಟು ಕಾಮಗಾರಿಗಳನ್ನು 5 ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದರು. ಕಿಂಡಿ ಅಣೆಕಟ್ಟು ಮೂಲಕ ನೀರನ್ನು ಸಂಗ್ರಹಿಸಿ, ಕುಡಿಯುವ ನೀರಿನ ಬಳಕೆಗೆ ಮತ್ತು ರೈತರಿಗೆ ಕೃಷಿ ಬಳಕೆಗೆ ಬಳಸಲಾಗುವುದು ಎಂದ ಅವರು, ಕಿಂಡಿ ಆಣೆಕಟ್ಟುಗಳ ಹಲಗೆಗಳ ನಿರ್ವಹಣೆಗೆ 4 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದ್ದು, ಆದ್ಯತೆ ಮೇರೆಗೆ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.
ಕಿಂಡಿ ಅಣೆಕಟ್ಟು ನಿರ್ಮಾಣದಿಂದ ಸಂಗ್ರಹಗೊಳ್ಳುವ ನೀರಿನಲ್ಲಿ ಮೀನುಗಾರಿಕೆ ಸೇರಿದಂತೆ ಸೀಗಡಿ ಕೃಷಿಯನ್ನು ಕೈಗೊಳ್ಳಲು ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಬಯಲುಸೀಮೆಯ ಪ್ರದೇಶಕ್ಕೆ ನೀರನ್ನು ಒದಗಿಸುವ ಉದ್ದೇಶದಿಂದ 24 ಸಾವಿರ ಕೋಟಿ ವ್ಯಯಿಸಿ ಎತ್ತಿನ ಹೊಳೆ ಯೋಜನೆಯಡಿ 24 ಟಿಎಂಸಿ ನೀರನ್ನು ಕೊಂಡೊಯ್ಯಲು ಕಾಮಗಾರಿ ಕೈಗೊಳ್ಳಲಾಗುತ್ತಿದೆ ಆದರೆ ಕರಾವಳಿ ಭಾಗದಲ್ಲಿ 1 ಅಥವಾ 2 ಕೋಟಿ ರೂ ವೆಚ್ದಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಗೆ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸುವುದರಿಂದ 1 ರಿಂದ 2 ಟಿಎಂಸಿ ನೀರು ನಿಂತು, ಈ ಭಾಗದ ಜನರಿಗೆ ಕುಡಿಯುವ ನೀರು , ಕೃಷಿಗೆ ಅನುಕೂಲವಾಗುವುದರ ಜೊತೆಗೆ ಜನರು ಸೇತುವೆಯ ಬಳಕೆಯಾಗಿ ಸುತ್ತುವರಿದು ಸಂಚರಿಸುವುದು ತಪ್ಪುತ್ತದೆ ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಜಲಜೀವನ್ ಮಿಷನ್ ಯೋಜನಯಡಿ ಬೈಂದೂರು ತಾಲೂಕಿನ ಪ್ರತೀ ಮನೆಗೆ ಕುಡಿಯುವ ನೀರು ನೀಡುವ ಉದ್ದೇಶ ಹೊಂದಲಾಗಿದೆ, ಈ ಭಾಗದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ದಿಪಡಿಸಲು ಯೋಜನೆ ರೂಪಿಸಲಾಗುವುದು ಮತ್ತು ಬೈಂದೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಶಾಸಕ ಸುಕುಮಾರ ಶೆಟ್ಟಿ ಮಾತನಾಡಿ, ಬೈಂದೂರು ತಾಲೂಕಿನಲ್ಲಿ 5 ನದಿಗಳು ಹರಿದರೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ, ಇದನ್ನು ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ, ಸುಮಾರು 50 ವರ್ಷಗಳ ಬೇಡಿಕೆಯಾದ ಈ ಕಿಂಡಿ ಅಣೆಕಟ್ಟು ನಿರ್ಮಾಣದಿಂದ ಕುಡಿಯುವ ನೀರು ಹಾಗೂ ಕೃಷಿಗೆ ಅನುಕೂಲವಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ, ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಬಾಬು ಶೆಟ್ಟಿ, ಸುರೇಶ್ ಬಟವಾಡೆ, ಶಂಕರ ಪೂಜಾರಿ, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಮಟ್ಟು ಪರಿಸರದ ಜನತೆಯನ್ನು ಭಯಭೀತರನ್ನಾಗಿಸಿದ ಬಯೋಲುಮಿನೆಸೆಂಟ್ ನೀಲಿ ಸಮುದ್ರ

Posted On: 23-11-2020 05:28PM
ರಾತ್ರಿಯಲ್ಲಿ ನೀವು ಸಮುದ್ರ ತೀರಕ್ಕೆ ಹೋದಾಗ ಸಮುದ್ರ ನೀಲಿ ಹೊಳಪಿನಿಂದ ಪ್ರಕಾಶಿಸಲ್ಪಟ್ಟಾಗ ನೀವು ಹೇಗೆ ಭಾವಿಸುತ್ತೀರಿ? ನೀವು ಸ್ವಲ್ಪ ಭಯಭೀತರಾಗಬಹುದು? ಚಿಂತಿಸಬೇಕಾಗಿಲ್ಲ. ಇದು ನಿಜವಾಗಿಯೂ ನೈಸರ್ಗಿಕ ಮತ್ತು ವೈಜ್ಞಾನಿಕವಾಗಿದೆ.
ಉಡುಪಿ ಜಿಲ್ಲೆಯ ಕಟಪಾಡಿ ಮಟ್ಟು ಹಾಗೂ ಪಡುಕೆರೆ ಭಾಗದಲ್ಲಿ ರಾತ್ರಿ ಹೊತ್ತಿನಲ್ಲಿ ಸಮುದ್ರ ನೀಲಿ ಬಣ್ಣಕ್ಕೆ ತಿರುಗುತ್ತಿದ್ದು. ಜನರು ರಾಸಾಯನಿಕ ವಸ್ತು ವಿಲೀನವಾಗಿರಬೇಕೆಂದು ಊಹಿಸಿದ್ದಾರೆ ಆದರೇ ಇದನ್ನು ಬಯೋಲುಮಿನಿಸೆಂಟ್ ಎಂದು ಕರೆಯಲಾಗುತ್ತದೆ.
ಬಯೋಲುಮಿನೆಸೆಂಟ್ ಬೀಚ್ ವಿದ್ಯಮಾನ
ರಾತ್ರಿಯಲ್ಲಿ ಸಮುದ್ರವು ನೀಲಿ ಹೊಳಪನ್ನು ಹೊಂದಿರುವುದನ್ನು ನೀವು ನೋಡಿದ್ದರೆ, ಅದನ್ನು ಬಯೋಲುಮಿನೆಸೆಂಟ್ ಎಂದು ಹೇಳಬಹುದು. ಬೆಳಕನ್ನು ಜೀವಂತ ಜೀವಿ ಹೊರಸೂಸುತ್ತದೆ ಇದನ್ನು ಕೆಮಿಕಲ್ ಅಥವಾ ಇನ್ನೇನೋ ಎಂದು ತಿಳಿದುಕೊಳ್ಳಬೇಕಾದ ಅವಶ್ಯಕತೆ ಇಲ್ಲ. ಈ ಬಯೋಲುಮಿನೆಸೆಂಟ್ ವಿದ್ಯಮಾನದೊಂದಿಗೆ ಜಗತ್ತಿನಲ್ಲಿ ಕೆಲವು ಕಡಲತೀರಗಳು ಮಾತ್ರ ಇವೆ.
ಮಾಲ್ಡೀವ್ಸ್‌ನಲ್ಲಿರುವವು ಅವುಗಳಲ್ಲಿ ಒಂದು, ಜಮೈಕಾ, ಸ್ಯಾನ್ ಡಿಯಾಗೋ, ವಿಯೆಟ್ನಾಂ, ಆಸ್ಟ್ರೇಲಿಯಾ ಮತ್ತು ಥೈಲ್ಯಾಂಡ್‌ನಲ್ಲೂ ಇವೆ.
ಮಾಲ್ಡೀವ್ಸ್ನಲ್ಲಿ ಮಾತ್ರ, ಈ ಬಯೋಲುಮಿನೆಸೆಂಟ್ ವಿದ್ಯಮಾನ ಕಾಣ ಸಿಗುತ್ತವೆ. ಸಮುದ್ರದ ಅಲೆಗಳು ಇದಕ್ಕೆ ಕಾರಣವೆಂದು ನಂಬಲಾಗಿದೆ. ರಾತ್ರಿಯಲ್ಲಿ ಕಾಣುವ ಬೆಳಕನ್ನು ಅವು ಉತ್ಪಾದಿಸುತ್ತವೆ. ಸಮುದ್ರವು ಸೂಕ್ಷ್ಮಜೀವಿಗಳು ಮತ್ತು ಸೂಕ್ಷ್ಮಾಣುಜೀವಿಗಳಿಂದ ತುಂಬಿದೆ ಎಂದು ತೋರುತ್ತದೆ, ಇದು ನೀಲಿ ಹೊಳಪನ್ನು ಉಂಟುಮಾಡುವ ನೈಸರ್ಗಿಕ ಸಾಮರ್ಥ್ಯವನ್ನು ಹೊಂದಿದೆ.
ಸಮುದ್ರದಲ್ಲಿ ಹಲವಾರು ರೀತಿಯ ಪ್ಲ್ಯಾಂಕ್ಟನ್ಗಳಿವೆ, ಅದು ತೊಂದರೆಗೀಡಾದಾಗ ಬೆಳಕನ್ನು ಹೊರಸುಸುತ್ತವೆ. ಬೆಳಕುಗಳು ಅವುಗಳ ರಕ್ಷಣಾ ಕಾರ್ಯವಿಧಾನ.

ಬೆಳಕನ್ನು ಉತ್ಪಾದಿಸುವ ಲ್ಯೂಸಿಫೆರಿನ್ ಎಂಬ ರಾಸಾಯನಿಕದಿಂದ ಬೆಳಕನ್ನು ಉತ್ಪಾದಿಸಲಾಗುತ್ತದೆ. ಪ್ರತಿಯೊಂದು ಜೀವಿಗೂ ಬೆಳಕನ್ನು ಉತ್ಪಾದಿಸಲು ತಮ್ಮದೇ ಆದ ಮಾರ್ಗವಿದೆ. ಕೆಲವೊಂದು ಜೀವಿಗಳು ತಮ್ಮದೇ ಆದ ಲೂಸಿಫೆರಿನ್ ಅನ್ನು ಉತ್ಪಾದಿಸಬಹುದು, ಆದರೆ ಕೆಲವೊಂದು ಜೀವಿಗಳಿಗೆ ಜೀವಂತ ಜೀವಿಗಳನ್ನು ತಿನ್ನುವ ಅಗತ್ಯವಿರುತ್ತದೆ. , ಈ ನೈಸರ್ಗಿಕವಾದ ಬೆಳಕು ಬಹಳ ವಿಶಿಷ್ಟವಾಗಿದೆ.
ಸಂಗ್ರಹ : ವಿಕ್ಕಿ ಪೂಜಾರಿ ಮಡುಂಬು
ಉಚ್ಚಿಲ: ಲಾರಿ ಚಕ್ರಕ್ಕೆ ಸಿಲುಕಿ ಸ್ಕೂಟರ್ ಸವಾರ ಮೃತ್ಯು

Posted On: 23-11-2020 12:57PM
ಉಚ್ಚಿಲ : ಸ್ಕೂಟರ್ ಸವಾರನೋರ್ವ ಲಾರಿ ಚಕ್ರಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ ಘಟನೆ ಉಚ್ಚಿಲ ಪೇಟೆಯಲ್ಲಿ ಸಂಭವಿಸಿದೆ.
ಉಚ್ಚಿಲ ಪೇಟೆಯಿಂದ ಪಡುಬಿದ್ರಿ ಕಡೆಗೆ ಸ್ಕೂಟರ್ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸವಾರ ಮಂಗಳೂರಿನತ್ತ ಗ್ಯಾಸ್ ಸಿಲಿಂಡರ್ ತುಂಬಿಕೊಂಡು ಚಲಿಸುತ್ತಿದ್ದ ಲಾರಿಯ ಚಕ್ರಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
ಮೃತದೇಹವನ್ನು ಆಂಬ್ಯುಲೆನ್ಸ್ ಮೂಲಕ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಮೃತರನ್ನು ಹೆಜಮಾಡಿ ಅಡ್ಕ ಹೌಸ್ ನಿವಾಸಿ ವಾಸು ಬಿ ಕೋಟ್ಯಾನ್ (65) ಎಂದು ಗುರುತಿಸಲಾಗಿದೆ.