Updated News From Kaup
ರಕ್ತದಾನದಲ್ಲಿ ಉಡುಪಿ ಮುಂಚೂಣಿ : ಜಿಲ್ಲಾಧಿಕಾರಿ ಜಿ.ಜಗದೀಶ್

Posted On: 13-11-2020 04:10PM
ಉಡುಪಿ : ಉಡುಪಿ ಜಿಲ್ಲೆಯಲ್ಲಿ ರಕ್ತದಾನಿಗಳು ನಿರಂತರವಾಗಿ ರಕ್ತದಾನ ಮಾಡುತ್ತಿರುವುದರಿಂದ ಜಿಲ್ಲೆಯಲ್ಲಿ ರಕ್ತದ ಕೊರತೆ ಅಷ್ಟಾಗಿ ಕಂಡುಬರುತ್ತಿಲ್ಲ, ಇದರಿಂದಾಗಿ ರಕ್ತದಾನದಲ್ಲಿ ಜಿಲ್ಲೆಯು ರಾಜ್ಯ ಮತ್ತು ರಾಷ್ಟçಮಟ್ಟದಲ್ಲಿ ಮಂಚೂಣಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.

ಅವರು ಗುರುವಾರ ಉಡುಪಿಯ ಪುರಭವನದಲ್ಲಿ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಉಡುಪಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಉಡುಪಿ, ಬಡಗುಬೆಟ್ಟು ಕೋ-ಆಪರೇಟಿವ್ ಸೊಸೈಟಿ, ಅಭಯ ಹಸ್ತ ಸ್ವಯಂ ಸೇವಾ ಸಂಸ್ಥೆ ಉಡುಪಿ, ಹೋಟೆಲ್ ಓಷಿಯಲ್ ಪರ್ಲ್ ಮತ್ತು ಜೋಸ್ ಅಲ್ಯೂಕಾಸ್ ಉಡುಪಿ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಮತ್ತು ಮೊಗವೀರ ಯುವ ಸಂಘಟನೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ “ರಕ್ತವನ್ನು ಸ್ವಯಂಪ್ರೇರಿತರಾಗಿ ದಾನಮಾಡಿ ಮತ್ತು ಕರೋನ ವಿರುದ್ಧದ ಹೋರಾಟಕ್ಕೆ ಕೊಡುಗೆಯಾಗಲಿ” ಎಂಬ ಧ್ಯೇಯ ವಾಕ್ಯದೊಂದಿಗೆ ನಡೆದ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಮತ್ತು ಅತಿ ಹೆಚ್ಚು ಬಾರಿ ರಕ್ತದಾನ ಮಾಡಿರುವ ದಾನಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೋವಿಡ್ ಸಂದರ್ಭದಲ್ಲಿ ರಕ್ತದಾನ ಶಿಬಿರಗಳು ನಡೆಯದ ಕಾರಣ ಜಿಲ್ಲೆಯಲ್ಲಿ ಸ್ವಲ್ಪ ಮಟ್ಟಿಗೆ ರಕ್ತದ ಕೊರತೆ ಕಂಡು ಬಂದಿದ್ದು, ಈ ಸಂದರ್ಭದಲ್ಲಿ ರಕ್ತದಾನಿಗಳು ಸ್ವಯಂ ಪ್ರೇರಿತವಾಗಿ ಬಂದು ರಕ್ತದಾನ ಮಾಡಿದ ಕಾರಣ ಸಮಸ್ಯೆ ಬಗೆಹರಿಯಿತು, ಜಿಲ್ಲೆಯಲ್ಲಿ ರಕ್ತದಾನ ಶಿಬಿರಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯ ದಾನಿಗಳು ರಕ್ತದಾನ ಮಾಡುತ್ತಿರುವುದರಿಂದ ರಕ್ತದ ಕೊರತೆ ಇಲ್ಲ, ಈ ಎಲ್ಲಾ ಶ್ರೇಯವು ರಕ್ತದಾನಿಗಳಿಗೆ ಸಲ್ಲಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಸಿಇಓ ಡಾ.ನವೀನ್ ಭಟ್ ಮಾತನಾಡಿ, ಯುವ ಪೀಳಿಗೆಯಲ್ಲಿ 6 ತಿಂಗಳಿಗೊಮ್ಮೆಯಾದರೂ ರಕ್ತದಾನ ಮಾಡಬೇಕು, ರಕ್ತದಾನಿಗಳು ಜಿಲ್ಲಾ ರಕ್ತನಿಧಿ ಕೇಂದ್ರದಲ್ಲಿ ತಮ್ಮ ಹೆಸರು ನೊಂದಾಯಿಸಿಕೊAಡು ರಕ್ತನಿಧಿಗೆ ತುರ್ತು ಅಗತ್ಯ ಬಿದ್ದಲ್ಲಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಬೇಕು. ರಕ್ತದಲ್ಲಿ ನೆಗೆಟಿವ್ ಗುಂಪಿನ ರಕ್ತ ಹೊಂದಿರುವವರ ಸಂಖ್ಯೆ ಕಡಿಮೆಯಿದ್ದು, ನೆಗೆಟಿವ್ ಗುಂಪು ಹೊಂದಿರುವ ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಬೇಕು ಎಂದರು. ಹೆಚ್ಚು ಬಾರಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಿದ ಮತ್ತು ರಕ್ತದಾನ ಮಾಡಿದ, ಡಾ. ಸಚ್ಚಿದಾನಂದ ಪ್ರಭು, ಶಿವರಾಮ ಕೋಟಾ, ಜಯಕರ ಶೆಟ್ಟಿ, ಪದ್ಮನಾಭ ಕಾಮತ್, ಶಾಲಿನಿ ಅವರನ್ನು ಸನ್ಮಾನಿಸಲಾಯಿತು.
ಶಿಬಿರದಲ್ಲಿ ಮಣಿಪಾಲ ಸರಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಗಮನ ಸೆಳೆದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸುಧೀರ್ ಚಂದ್ರ ಸೂಡ, ಜಿಲ್ಲಾ ಸರ್ಜನ್ ಡಾ. ಮಧುಸೂದನ ನಾಯಕ್, ಎಂ.ಐ.ಟಿ.ಯ ಮುಖ್ಯ ಭದ್ರತಾ ಅಧಿಕಾರಿ ರತ್ನಾಕರ ಸಾಮಂತ್ ಉಪಸ್ಥಿತರಿದ್ದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು ಸ್ವಾಗತಿಸಿದರು, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರೆಗಾರ್ ವಂದಿಸಿದರು, ಹಿರಿಯ ಚಿಕಿತ್ಸಾ ಮೆಲ್ವಿಚಾರಕ ಮಂಜುನಾಥ್ ನಿರೂಪಿಸಿದರು.
ವಿಶಿಷ್ಟವಾಗಿ ದೀಪಾವಳಿ ಹಬ್ಬ ಆಚರಣೆ ಸೇವಾ ಚಟುವಟಿಕೆಯ ಮೂಲಕ ಮಾದರಿಯಾದ ಕಾಯ೯

Posted On: 11-11-2020 05:04PM
ಉಡುಪಿ :- ಹೋಂ ಡಾಕ್ಟರ್ ಫೌಂಡೇಶನ್(ರಿ.) ಇದರ ವತಿಯಿಂದ ನ.10 ರಂದು ಕೊಳಲಗಿರಿ ಸಂತೆ ಮಾರುಕಟ್ಟೆ ಆವರಣದಲ್ಲಿ ವಿಶಿಷ್ಟವಾಗಿ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು. ಈ ಕಾಯ೯ಕ್ರಮದಲ್ಲಿ ಸುಮಾರು 10 ರೋಗಿಗಳಿಗೆ ಸಹಾಯಧನ, ವಿದ್ಯಾಥಿ೯ಗಳಿಗೆ ವಿದ್ಯಾಥಿ೯ ವೇತನ 2 ಕುಟುoಬಗಳಿಗೆ ಸಿಲಿಂಗ್ ಪ್ಯಾನ್ ಕೊಡುಗೆ, ಸೇರಿದಂತೆ ಅನೇಕ ರೀತಿಯ ಸೇವಾ ಯೋಜನೆ ನೆರವೇರಿಸಲಾಯಿತು. ವಿಶೇಷ ಆಕಷ೯ಣೆಯಾಗಿ ಶ್ರೀ ಶಾರದಾ ಅಂಧರ ಗೀತ ಗಾಯನ ಕಲಾ ಸಂಘ ಮಂಗಳೂರು ವತಿಯಿಂದ ಸುಗಮ ಸಂಗೀತ ಕಾಯ೯ಕ್ರಮ ನಡೆಯಿತು ಈ ಸಂದಭ೯ದಲ್ಲಿ ಕಲಾವಿದರನ್ನು ಧನ ಸಹಾಯದೊಂದಿಗೆ ಗೌರವಿಸಲಾಯಿತು.

ಸಭಾ ಕಾಯ೯ಕ್ರಮದಲ್ಲಿ ಸಂಸ್ಥೆಯ ಪ್ರಮುಖರಾದ ಡಾ|| ಶಶಿಕಿರಣ್ ಶೆಟ್ಟಿ ಪ್ರಸ್ತಾವನೆಗೈದು ಸಂಸ್ಥೆಯ ಚಟುವಟಿಕೆಯ ಕುರಿತು ಮಾಹಿತಿ ನೀಡಿದರು.ಹಿರಿಯರಾದ ಸೋಮ ಪೂಜಾರಿ, ನಿವೃತ್ತ ಶಿಕ್ಷಕಿ ಶಶಿಕಲಾ ಶೆಟ್ಟಿ, ಹಿಂದೆ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಇಂದು ಸಂಸ್ಥೆಯ ನೆರವಿನಿಂದ ಸಮಾಜದಲ್ಲಿ ಉತ್ತಮ ಜೀವನ ಸಾಗಿಸುತ್ತಿರುವ ಸರೋಜಮ್ಮ, ಹಿರಿಯ ಸೂಲಗಿತ್ತಿ ಸಂಸ್ಥೆಯ ಮೂಲಕ ಆಶ್ರಯ ಪಡೆದ ಸುಂದರಿ ವೇದಿಕೆಯಲ್ಲಿದ್ದರು.ಕೈಯನ್ನು ಕಳೆದುಕೊಂಡರೂ ದೃತಿಗೆಡದೆ, ಸಂಸ್ಥೆಯ ನೆರವು ಪಡೆದು ಕೃತಕ ಕೈ ಜೊಡಿಸಿಕೊಂಡ ಅಜಿತ್ ಶೆಟ್ಟಿ, ನಟರಾಜ್ ಪೇತ್ರಿ, ಹಿರಿಯ ಕ್ರೀಡಾಪಟು ಸವಿತಾ ಶೆಟ್ಟಿ, ಗಣಿIಶ್ ರವರನ್ನು ಗೌರವಿಸಲಾಯಿತು. ರಾಘವೇಂದ್ರ ಪೂಜಾರಿ, ಬಂಗಾರಪ್ಪ, ಡಾ" ಸುಮಾ ಶೆಟ್ಟಿ ಸೇರಿದಂತೆ ಸದಸ್ಯರು ಭಾಗ ಹಿಸಿದರು.ವಿಜೇತ ವಿಶೇಷ ಶಾಲೆಯ ಮಕ್ಕಳು ತಯಾರಿಸಿದ ದೀಪ ಹಚ್ಚಿ ಸಮೂಹಿಕವಾಗಿ ದೀಪಾವಳಿ ನಡೆಸಲಾಯಿತು. ರಾಘವೇಂದ್ರ ಪ್ರಭು,ಕವಾ೯ಲು ಕಾರ್ಯಕ್ರಮ ನಿರೂಪಿಸಿದರು.
ಡಾ| ಜಿ. ಶಂಕರ್ ಆರೋಗ್ಯ ಸುರಕ್ಷಾ ಕಾಡ್೯ ನೋಂದಣಿ ಕಾರ್ಯಕ್ರಮ

Posted On: 10-11-2020 05:08PM
ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.), ಮೊಗವೀರ ಯುವ ಸಂಘಟನೆ (ರಿ.), ರೋಟರಿ ಸಮುದಾಯ ದಳ ಇನ್ನಂಜೆ ಮತ್ತು ಯುವಕ ಮಂಡಲ (ರಿ.) ಇನ್ನಂಜೆ ಇವರ ಸಂಯುಕ್ತ ಆಶ್ರಯದಲ್ಲಿ ಇನ್ನಂಜೆ ದಾಸ ಭವನದಲ್ಲಿ ಡಾ| ಜಿ. ಶಂಕರ್ ಆರೋಗ್ಯ ಸುರಕ್ಷಾ ಕಾಡ್೯ ನೋಂದಣಿ ಕಾರ್ಯಕ್ರಮ ಜರಗಿತು.

ಕಾರ್ಯಕ್ರಮವನ್ನು ಆರ್ ಝೋನ್ 5.ರ ಸಹಾಯಕ ಗವರ್ನರ್ ನವೀನ್ ಅಮೀನ್ ಶಂಕರಪುರ ಉದ್ಘಾಟಿಸಿದರು. ಈ ಸಂದರ್ಭ ರೋಟರಿ ಸಮುದಾಯ ದಳದ ಇನ್ನಂಜೆಯ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ, ಕಾರ್ಯದರ್ಶಿ ಮನೋಹರ್ ಕಲ್ಲುಗುಡ್ಡೆ, ಇನ್ನಂಜೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ರೋ. ಮಾಲಿನಿ ಶೆಟ್ಟಿ ಇನ್ನಂಜೆ, ಇನ್ನಂಜೆ ಯುವಕ ಮಂಡಲದ ಅಧ್ಯಕ್ಷರಾದ ದಿವೇಶ್ ಶೆಟ್ಟಿ ಕಲ್ಯಾಲು, ಪ್ರಶಾಂತ್, ಜೇಸುದಾಸ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 80 ಕ್ಕೂ ಅಧಿಕ ಮಂದಿ ಹೆಸರು ನೋಂದಾಯಿಸಿದರು.
ಏಳು ತಿಂಗಳಿನಲ್ಲಿ ಲಕ್ಷಕ್ಕೂ ಮೀರಿ ಫಾಲೋವಸ್೯ ಪಡೆದ ಕರಾವಳಿಯ ಖ್ಯಾತ ಗಾಯಕ

Posted On: 10-11-2020 09:51AM
ಸಾಮಾಜಿಕ ಜಾಲತಾಣ ಅದೆಷ್ಟೋ ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳನ್ನು ಸರ್ವರೂ ಗುರುತಿಸುವಂತೆ ಮಾಡುವ ತಾಣವಾಗಿದೆ. ಕೋವಿಡ್ ಎಂಬ ಹೆಮ್ಮಾರಿಯು ಕಲಾವಿದರ ಬದುಕು ಕಸಿದ ಸಂದರ್ಭ ತಾವು ಕಷ್ಟದಲ್ಲಿದ್ದರೂ ತಮ್ಮ ಕಷ್ಟ ತೋರ್ಪಡಿಸದೆ ತಮ್ಮ ಕಲಾ ನೈಪುಣ್ಯತೆಯ ಮೂಲಕ ಅದೆಷ್ಟೋ ಜನ ಮನಗಳಿಗೆ ಸಾಮಾಜಿಕ ಜಾಲತಾಣಗಳ ಮುಖಾಂತರ ಮನ ತೃಪ್ತಿ ನೀಡಿದ ಕಲಾವಿದರ ಸಾಲಿನಲ್ಲಿ ಅಗ್ರಗಣ್ಯರಾದ ಹಾಡುಗಾರ ಅರವಿಂದ್ ವಿವೇಕ್.

ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಉಪಯೋಗಿಸುವವರಲ್ಲಿ ಈ ಹೆಸರು ಕೇಳದವರೇ ಇಲ್ಲ. ಅಷ್ಟು ಪ್ರಸಿದ್ಧರಾಗಿದ್ದಾರೆ. ಲಾಕ್ಡೌನ್ ಸಂದರ್ಭ ಫೇಸ್ ಬುಕ್ ನಲ್ಲಿ ಯಾವುದೋ ಒಂದು ಲೈವ್ ಕಾರ್ಯಕ್ರಮ ನೋಡಿ ತಾನೂ ತನ್ನ ಕಲೆಯನ್ನು ತೋರ್ಪಡಿಸಿದರೆ ಹೇಗೆ ಎಂದು ನಿಶ್ಚಯಿಸಿ ಮೊದಲ ಲೈವ್ ಬಂದಾಗ ಇವರ ಹಾಡನ್ನು ಕೇಳಲು ಕೇವಲ 14 ಜನರಿದ್ದರು. ನಂತರ ಲೈವ್ ಕಾರ್ಯಕ್ರಮ ನೀಡುತ್ತಾ ಬಂದರು ನೋಡುಗರ ಸಂಖ್ಯೆಯಲ್ಲಿ ಏರಿಕೆಯ ಜೊತೆಗೆ ಜನರ ಪ್ರೋತ್ಸಾಹದ ಹಾರೈಕೆಗಳಿಂದ ಮತ್ತಷ್ಟು ಉತ್ಸುಕರಾದರು. ಇಂದು ಲಕ್ಷಾಂತರ ಮಂದಿ ಇವರ ಲೈವ್ ಹಾಡುಗಾರಿಕೆಗೆ ಮನಸೋತಿದ್ದಾರೆ. ಅದರಲ್ಲೂ ಹಲವಾರು ದೇಶಗಳಿಂದ ಇವರ ಲೈವ್ ವೀಕ್ಷಿಸುತ್ತಾರೆ ಎಂಬುದು ಗಮನಾರ್ಹವಾಗಿದೆ. ಅರವಿಂದ್ ರವರ ಹಾಡಿನ ಮೋಡಿಗೆ ಇಂದು ಫೇಸ್ ಬುಕ್ ನಲ್ಲಿ ಅವರ ಪೇಜ್ ಗೆ ಒಂದು ಲಕ್ಷ ಜನ ಫಾಲೋವರ್ಸ್ ಗಳಿದ್ದಾರೆ. ಅದು ಇನ್ನೂ ಏರಿಕೆಯಾಗಲೂ ಬಹುದು. ಇದು ಇವರ ಹಾಡುಗಾರಿಕೆಯ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ತಾನು ಬೆಳೆದರೆ ಸಾಲದು ತನ್ನ ಸುತ್ತಮುತ್ತಲಿನ ಪ್ರತಿಭೆಗಳಿಗೂ ಅವಕಾಶವಿತ್ತವರು. ಮದುವೆ, ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸುಮಾರು 9 ಸಾವಿರಕ್ಕೂ ಅಧಿಕ ಹಾಡು ಹಾಡಿರುತ್ತಾರೆ. ತನ್ನದೇ ಸಂಗೀತದ ತಂಡವೂ ಇವರ ಬಳಿಯಿದೆ. ಸಂಗೀತವೇ ಇವರಿಗೆ ಬದುಕು ಕಟ್ಟುವ ಉದ್ಯೋಗವಾಗಿದೆ ಎನ್ನುವ ಅರವಿಂದ್ ವಿವೇಕ್ ರ ಸಂಗೀತದ ಪಯಣ ಹೀಗೆಯೇ ಮುಂದುವರಿಯಲಿ... ದೀಪಕ್ ಬೀರ ಪಡುಬಿದ್ರಿ
ಪೋಲಿಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷೆಯಲ್ಲಿ ಸ್ವೀಕೃತ್ ರೈ ರಾಜ್ಯಕ್ಕೆ 54ನೇ ರಾಂಕ್

Posted On: 10-11-2020 08:28AM
2019-20ರ ಬ್ಯಾಚ್ ನ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಯ ಅಂತಿಮ ಪರೀಕ್ಷೆಯಲ್ಲಿ ದ.ಕ ಜಿಲ್ಲೆಯ ಪುತ್ತೂರಿನ ಸ್ವೀಕೃತ್ ರೈ ರಾಜ್ಯಕ್ಕೆ 54ನೇ ರಾಂಕ್ ಪಡೆದು ಬೆಂಗಳೂರು ನಗರ ಪೋಲಿಸ್ ಕಮಿಷನರೇಟ್ ವ್ಯಾಪ್ತಿಗೆ ಆಯ್ಕೆಯಾಗಿದ್ದಾರೆ.
ಮಂಗಳೂರಿನಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ವಿದ್ಯಾಭ್ಯಾಸ ಮಾಡಿರುವ ಇವರು, ಮೈಸೂರಿನ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿಯನ್ನು ಪಡೆದಿರುವರು. ಅಮೇರಿಕದ ಪ್ರತಿಷ್ಠಿತ ಅಕ್ಸೆಂಚರ್ ಕಂಪನಿಗೆ ಇದೇ ಕಾಲೇಜಿನ ಕ್ಯಾಂಪಸ್ ನಲ್ಲಿ ಆಯ್ಕೆಯಾಗಿ, ಬೆಂಗಳೂರಿನಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ್ದರು.
ಮಂಗಳೂರಿನ ರೊಸಾರಿಯೊ ಪ್ರೌಢಶಾಲೆಯ ದೈಹಿಕ ನಿರ್ದೇಶಕ, NCC ವಿಭಾಗದ ನೇವಲ್ ಆಫೀಸರ್ ಮತ್ತು ಕ್ರೀಡಾಭಾರತಿ ಮಂಗಳೂರಿನ ಅಧ್ಯಕ್ಷರಾಗಿರುವ ಕೆಲ್ಲಾಡಿ ಕಾರಿಯಪ್ಪ ರೈ ಮತ್ತು ಬಳಜ್ಜ ಶ್ರೀಮತಿ ಸುಭಾಷಿಣಿ. ಕೆ. ರೈಯವರ ಸುಪುತ್ರರಾದ ಇವರು, ಇನ್ನು ಕೆಲವೇ ದಿನಗಳಲ್ಲಿ ಕತ೯ವ್ಯಕ್ಕೆ ಹಾಜರಾಗಲಿರುವರು.
ಕೋವಿಡ್ ನಿಯಂತ್ರಣಕ್ಕೆ ತಜ್ಞರ ಸಲಹೆ ತಪ್ಪದೇ ಪಾಲಿಸಿ: ಜಿಲ್ಲಾಧಿಕಾರಿ ಜಿ.ಜಗದೀಶ್

Posted On: 10-11-2020 08:22AM
ಉಡುಪಿ : ಜಿಲ್ಲೆಯಲ್ಲಿ 2 ನೇ ಹಂತದ ಕೋವಿಡ್ ಹರಡದಂತೆ ಸಾರ್ವಜನಿಕರು ಎಚ್ಚರ ವಹಿಸಬೇಕು ,ತಜ್ಞರ ಸಮಿತಿ ನೀಡುವಂತಹ ಸಲಹೆಗಳನ್ನು ಚಾಚೂ ತಪ್ಪದೇ ಪಾಲಿಸಬೇಕೆಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು. ಅವರು ಸೋಮವಾರ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ತಜ್ಞರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕೋವಿಡ್ ಪ್ರಕರಗಳು ಗಣನೀಯವಾಗಿ ಕಡಿಮೆಯಾಗುವುದರ ಜೊತೆಗೆ ಮರಣ ಪ್ರಮಾಣವು ಸಹ ಇಡೀ ರಾಜ್ಯದಲ್ಲೇ ಅತ್ಯಂತ ಕಡಿಮೆಯಾಗಿದೆ , ಸಾರ್ವಜನಿಕರು ಇದರಿಂದ ಮೈ ಮರೆಯದೇ, ತಜ್ಞರು ಈಗಾಗಲೇ ಸಲಹೆ ನೀಡಿರುವಂತೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬರೂ ತಪ್ಪದೇ ಮಾಸ್ಕ್ ಗಳನ್ನು ಧರಿಸುವುದರೊಂದಿಗೆ, ಸಾಮಾಜಿಕ ಅಂತರ ಸೇರಿದಂತೆ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು. ಜಿಲ್ಲೆಯಲ್ಲಿ ಕೋವಿಡ್ ನ ನಿಯಂತ್ರಣಕ್ಕೆ ಸರಕಾರಿ ಮತ್ತು ಖಾಸಗಿ ವೈದ್ಯರು ಉತ್ತಮವಾಗಿ ಸೇವೆ ಸಲ್ಲಿಸಿದ್ದು, ಇದಕ್ಕಾಗಿ ಅವರಿಗೆ ಜಿಲ್ಲಾಡಳಿತದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ ಜಿಲ್ಲಾಧಿಕಾರಿ,ಮುಂದಿನ ದಿನಗಳಲ್ಲಿ ಇನ್ನೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವುದರೊಂದಿಗೆ ಜಿಲ್ಲೆಯನ್ನು ಕೋವಿಡ್ ಮುಕ್ತವಾಗಿಸಬೇಕು ಎಂದರು.

ಮುಂದಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳು ತೆರೆಯಲಿದ್ದು, ಜಿಲ್ಲೆಗೆ ಹೊರರಾಜ್ಯಗಳಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆಯನ್ನು ಮಾಡಿಸಬೇಕು , ಯಾವುದೇ ಸಭೆ ಸಮಾರಂಭಗಳಲ್ಲಿ ಮಾರ್ಗಸೂಚಿಯಲ್ಲಿ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಜನ ಸೇರದಂತೆ ಅಧಿಕಾರಿಗಳು ಎಚ್ಚರವಹಿಸಬೇಕು ,ಈ ಬಗ್ಗೆ ಪರಿಶೀಲಿಸಲು ಅಧಿಕಾರಿಯೊಬ್ಬರನ್ನು ನಿಯೋಜಿಸಬೇಕು, ಖಾಸಗಿ ಆಸ್ಪತ್ರೆಗಳಲ್ಲಿ ತೀವ್ರತರ ಖಾಯಿಲೆಗಳಿಗೆ ದಾಖಲಾಗುವ ರೋಗಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕೆಂದರು.ಕೋವಿಡ್ ನಿಯಂತ್ರಣ ಕುರಿತು ಸಾರ್ವಜನಿಕರು ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಹೆಚ್ಚಿನ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದರು.
ಸಭೆಯಲ್ಲಿ ಡಿಹೆಚ್‌ಓ ಡಾ.ಸುಧೀರ್ ಚಂದ್ರ ಸೂಡಾ, ಜಿಲ್ಲಾ ಕೋವಿಡ್ ನೋಡೆಲ್ ಅಧಿಕಾರಿ ಡಾ.ಪ್ರಶಾಂತ ಭಟ್, ಡಾ.ಪ್ರೇಮಾನಂದ್ ಹಾಗೂ ತಜ್ಞರ ಸಮಿತಿಯಲ್ಲಿನ ವೈದ್ಯರು ಉಪಸ್ಥಿತರಿದ್ದರು.
ದೇವಸ್ಥಾನ, ದೈವಸ್ಥಾನ, ಚಾವಡಿ, ಮನೆ ಹೆಸರನ್ನು ತುಳುವಿನಲ್ಲಿ ಬರೆಯೋಣ...

Posted On: 07-11-2020 10:32AM
ತುಳು ಭಾಷೆಯ ಲಿಪಿಯನ್ನು ಆಸಕ್ತಿಯಿಂದ ಗಮನಿಸುವ , ಕಲಿಯುವ ,ಬರೆಯುವ ,ಬರೆಯಿಸುವ ಒಂದು ಅಭಿಯಾನ ಆರಂಭವಾಗಿದೆ. ನಾವು ಮಾತನಾಡುವ ಭಾಷೆಯನ್ನು ಅದೇ ಭಾಷೆಯ ಲಿಪಿಯಲ್ಲಿ ಬರೆಯುವ ಅವಕಾಶವಿದೆ - ಅವಕಾಶವಿತ್ತು ; ಆದರೆ ನಾವದನ್ನು ಶತಮಾನಗಳಷ್ಟು ಹಿಂದೆಯೇ ಮರೆತಿದ್ದೆವು ಅಥವಾ ಕಲಿಯುವ ಕುರಿತು ನಿರ್ಲಕ್ಷ್ಯ ತಾಳಿದ್ದೆವೋ ಗೊತ್ತಿಲ್ಲ .ಅಂತೂ ತುಳುಲಿಪಿ ಬಳಕೆಯಿಂದ ಮರೆಯಾಗಿತ್ತು. ಆದರೆ ಇತ್ತೀಚೆಗೆ ಬಹಳಷ್ಟು ಯುವಕರು ಸ್ವತಃ ತುಳುಲಿಪಿ ಕಲಿತು ಅದನ್ನು ತಮ್ಮ ವ್ಯಾಪ್ತಿಯಲ್ಲಿ ಮಕ್ಕಳಿಗೆ ಕಲಿಸುವ ಕೆಲಸವನ್ನು ಆರಂಭಿಸಿದ್ದಾರೆ . ಕೆಲವು ಸಂಘಟನೆಗಳೂ ಬರೆಯುವ - ಕಲಿಸುವ ಕಾರ್ಯದಲ್ಲಿ ತೊಡಗಿರುವುದನ್ನು ಕಾಣುತ್ತೇವೆ . ಈ ಬೆಳವಣಿಗೆ ಸಂತೋಷದ ಸಂಗತಿ .
ತುಳುವಿನಲ್ಲಿ ಒಂದು ಗಾದೆ ಇದೆ : "ಉಡಲ್ ಡ್ ಪುಟ್ಟೊಡು ಬುದ್ಧಿ ,ಕಡಲ್ ಡ್ ಪುಟ್ಟೊಡು ಗಾಳಿ". 'ಮನಸ್ಸಿನಲ್ಲಿ ಬುದ್ಧಿ ಹುಟ್ಟಬೇಕು (ಬರಬೇಕು) ,ಕಡಲಿನಲ್ಲಿ ಗಾಳಿ ಹುಟ್ಟಬೇಕು' . ಹೀಗೆ ಸಹಜವಾಗಿ ತುಳುಭಾಷೆಯ ಮೇಲಿನ ಅಭಿಮಾನ ತುಳುವರ ಮನಸ್ಸಿನಲ್ಲಿ ಹುಟ್ಟಿಕೊಂಡಿದೆ , ಕಲಿಯಲೇ ಬೇಕೆಂಬ ಹಠದಿಂದ ನಮ್ಮ ಯುವಕರು ಕಲಿತು ಮಕ್ಕಳಿಗೆ ಕಲಿಸುತ್ತಿದ್ದಾರೆ .ಈ ಅಭಿಯಾನ ತನ್ನಿಂದತಾನೆ ಆರಂಭವಾದದ್ದು , ಮನಃಪೂರ್ವಕ ತೊಡಗಿದ್ದು .ಇದು ಖಂಡಿತ ಮುಂದುವರಿಯುತ್ತದೆ . ನಾವು ಪ್ರೋತ್ಸಾಹಿಸೋಣ .ಯುವಕರು ,ಮಕ್ಕಳು ಹೆಚ್ಚಿನ ಪ್ರಯತ್ನಗಳಿಲ್ಲದೆ ಕಲಿಯುತ್ತಾರೆ . ಅವರು ಕಲಿಯುವ ಬದುಕಿನ ಅವಧಿಯಲ್ಲಿ ಈ ಉಮೇದು ಹುಟ್ಟಿಕೊಂಡಿದೆ .ಆದರೆ ಹಿರಿಯರು ,ಹಿರಿಯ ನಾಗರಿಕರು ತುಳುಲಿಪಿಯನ್ನು ಸುಲಭವಾಗಿ ಕಲಿಯಲಾಗದು .ಅದಕ್ಕೆ ಮಕ್ಕಳೊಟ್ಟಿಗೆ ಕುಳಿತು ತಮ್ಮ ತಮ್ಮ ಹೆಸರನ್ನಾದರೂ ಬರೆಯಲು ಕಲಿಯಬೇಕು .ಹಿರಿಯರು ಇಷ್ಟು ಬರೆಯಲಾರಂಭಿಸುವಾಗ ನಿಮ್ಮ ಮನೆ ಯುವಕರು ,ಮಕ್ಕಳು ತುಳುಲಿಪಿಯನ್ನು ಕನ್ನಡ ,ಇಂಗ್ಲೀಷ್ ,ಹಿಂದಿಯಂತೆಯೇ ಸರಾಗವಾಗಿ ಬರೆಯುತ್ತಾರೆ . ಮುಂದೊಂದು ದಿನ ತುಳುಲಿಪಿಯಲ್ಲಿ ಕವನ , ಕತೆ , ನಾಟಕ ಹೀಗೆ ವಿವಿಧ ಪ್ರಕಾರದ ತುಳು ಸಾಹಿತ್ಯ ಸೃಷ್ಟಿಯಾಗುತ್ತದೆ .ಆಗ ಅದನ್ನು ಓದುವವರೂ ಇರುತ್ತಾರೆ .ಇದು ಈಗ ಆರಂಭವಾದ ಈ ಅಭಿಯಾನದ ಭವಿಷ್ಯ . ಹಿರಿಯರು ,ಹಿರಿಯ ನಾಗರಿಕರು ಸೇರಿ ನಿಮ್ಮ ಹೆಸರು ಬರೆಯಲು ಕಲಿಯಿರಿ. ಇದರೊಂದಿಗೆ ಊರಿನ ದೇವಸ್ಥಾನಗಳ ,ದೈವ - ಬೂತ ಸ್ಥಾನಗಳ , ಚಾವಡಿಗಳ , ಮನೆಗಳ , ಸಂಘ - ಸಂಸ್ಥೆಗಳ , ರಸ್ತೆಗಳ ಹೆಸರನ್ನು ತುಳುಲಿಪಿಯಲ್ಲಿ ಬರೆಯಿಸಿರಿ . ಕನ್ನಡದ ನಾಮಫಲಕದ ಬಳಿಯಲ್ಲೆ ಹಾಕಿರಿ . ಆಗ ಆಸಕ್ತಿ , ಕುತೂಹಲ ಮೂಡುತ್ತದೆ ,ಇದು ಏನು ಮಲಯಾಳವಾ ......ಹೀಗೆ ಹತ್ತಾರು ಪ್ರಶ್ನೆಗಳು ಕೇಳಿಸುತ್ತವೆ . ಆಗ "ಇದು ನಾವು ಮಾತನಾಡುವ ಭಾಷೆ" ಆ ಭಾಷೆಯಲ್ಲಿಯೇ ಬರೆದದ್ದು ಎಂಬ ವಿವರಣೆ ಕೊಡುವ . ಇದು ತುಳುಲಿಪಿಯನ್ನು ಜನಮಾನಸದಲ್ಲಿ ಸ್ಥಾಪಿಸುವ ಪ್ರಯತ್ನವಾಗುತ್ತದೆ .ಇದು ನಾಮಫಲಕಕ್ಕೆ ಅಷ್ಟೆ ಸೀಮಿತವಾಗದು . ಏಕೆಂದರೆ ನಮ್ಮ ಯುವಕರು ,ಮಕ್ಕಳು ತುಳು ಕಲಿಯಲು ಆರಂಭಿಸಿದ್ದಾರೆ .ತುಳುವಿನಲ್ಲಿ ಬರೆದ ಕತೆಗಳಿವೆ , ಕಾವ್ಯಗಳಿವೆ , ಪುರಾಣಗಳಿವೆ , ಮಂತ್ರಗಳಿವೆ ,ವೈದಿಕವಿಧಿಯಾಚರಣೆಯ ಪ್ರಯೋಗ ವಿಧಾನಗಳಿರುವ ತಾಳೆಗರಿ - ಪುಸ್ತಕಗಳಿವೆ , ಜಾತಕಗಳಿವೆ , ಮನೆಮನೆಗಳಲ್ಲಿ ತಾಳೆಗರಿಯಲ್ಲಿ ಬರೆದ ಅಮೂಲ್ಯ ಸಾಹಿತ್ಯಗಳಿವೆ ಇವೆಲ್ಲ ಕಾಲ ಗರ್ಭಸೇರುತ್ತಿವೆ ,ಗೆದ್ದಲು ತಿಂದು ನಾಶವಾಗುತ್ತವೆ . ತುಳುಲಿಪಿ ಕಲಿಯುವ - ಕಲಿಸುವ ಅಭಿಯಾನದಿಂದ ನಮ್ಮಲ್ಲಿ ಇದ್ದು ,ಅವಗಣಿಸಲ್ಪಟ್ಟು ಮನೆಯಂಗಳದ ತೆಂಗಿನ ಮರದಬುಡ ಅಥವಾ ಗೊಬ್ಬರದ ಗುಂಡಿ ಸೇರುವ ಮೊದಲು ಇಂತಹ ತುಳುಲಿಪಿಯ ತಾಳೆಗರಿಗಳ ಕಟ್ಟು ಅಥವಾ ಪುಸ್ತಕಗಳು ಖಂಡಿತಾ ಕಾಪಿಡಲ್ಪಡುತ್ತವೆ .

ಸುಮಾರು ಒಂದುಸಾವಿರ ವರ್ಷಗಳಷ್ಟು ಹಿಂದೆಯೇ ಆಳುಪ ಅರಸರು ಬರೆಯಿಸಿದ ತುಳು ಶಾಸನ ಸಿಗುತ್ತದೆ .ಹನ್ನೊಂದನೇ ಶತಮಾನದ ಶಾಸನ ಲಭ್ಯವಿದ್ದು ಓದಲಾಗಿದೆ .ಹನ್ನೆರಡನೇ ಶತಮಾನದ ಶಾಸನ ಇವೇ ಮುಂತಾದುವು ಪ್ರಾಚೀನ ಶಾಸನಗಳು .ಹೀಗೆ 50-60 ಸಂಖ್ಯೆಯ ತುಳು ಶಾಸನಗಳು ಸಿಕ್ಕಿವೆ.ಇವುಗಳಲ್ಲಿ ಗೋಸಾಡ, ಕಿದೂರು, ಅನಂತಪುರ, ಅನಂತಾಡಿ, ಕೊಡಂಗಳ, ಕೊಳನಕೋಡು, ಕುಲಶೇಖರಗಳಲ್ಲಿ ದೊರೆತ ತುಳು ಲಿಪಿಯ ಪ್ರಾಚೀನ ಶಾಸನಗಳು ಮುಖ್ಯವಾಗುತ್ತವೆ ಎಂದು ಅವುಗಳನ್ನು ಓದಿದ ತುಳುಲಿಪಿ ಸಂಶೋಧಕ ಸುಬಾಸ್ ನಾಯಕ್ ವಿವರ ನೀಡುತ್ತಾರೆ . ಹದಿಮೂರನೇ ಶತಮಾನದಲ್ಲಿ ಆಚಾರ್ಯಮಧ್ವರು ಹೇಳಿದ ಅವರ ಶಿಷ್ಯ ಹೃಷೀಕೇಶ ತೀರ್ಥರು ಬರೆದ ಅಮೂಲ್ಯ ಸರ್ವಮೂಲ ಗ್ರಂಥ ತುಳುಲಿಪಿಯಲ್ಲಿದೆ . ಅಷ್ಟು ಸುಂದರವಾದ ತುಳುಲಿಪಿಯನ್ನು ತಾನು ಕಂಡಿಲ್ಲ ಎಂದು ನೂರಾರು ತುಳುಲಿಪಿಯ ಗ್ರಂಥಗಳನ್ನು ಸಂಪಾದಿಸಿದ ಗೋವಿಂದಾಚಾರ್ಯರು ಹೇಳುತ್ತಾರೆ .ಉಡುಪಿಯ ಮಠಗಳಲ್ಲಿ ತುಳುಲಿಪಿಯ ಗ್ರಂಥಗಳಿವೆ ಎಂದು ಇನ್ನೂರು ವರ್ಷಗಳಷ್ಟು ಹಿಂದೆಯೇ ಕರ್ನಲ್ ಕಾಲಸ್ ಮೆಕೆಂಜಿ ಸಂಗ್ರಹಿಸಿದ ಕಫಿಯತ್ತುಗಳಿಂದ ಮಾಹಿತಿ ಸಿಗುತ್ತವೆ .ಆದರೆ ಈ ವಿವರ ಇವತ್ತಿಗೂ ಪ್ರಚಾರವಾಗಲೇ ಇಲ್ಲ . ಲಿಪಿಯ ಕುರಿತಾದ ಅಧ್ಯಯನಕ್ಕೆ ಈ ಸಂಗ್ರಹ ಉಪಯುಕ್ತವಾದೀತು .ಹತ್ತೊಂಬತ್ತನೇ ಶತಮಾನದಲ್ಲಿ ಬರ್ನರ್ ಕೊಟ್ಟ ತುಳುಲಿಪಿಯೂ ಪರಿಗಣಿಸಲೇ ಬೇಕು. ಮಂತ್ರವಾದರೆ ಏನು ತುಳುಲಿಪಿ ಎಂಬುದು ಮುಖ್ಯವಾಗಬೇಕು. ಯಾರಲ್ಲಿದೆ ಎನ್ನುವುದಕ್ಕಿಂತಲೂ ಇರುವುದು ತುಳುಲಿಪಿಯ ಬರೆಹ ಎಂಬ ಹೃದಯವಂತಿಕೆ ಬೇಕು . ಈಗಲೂ ಹಿರಿಯ ವೈದಿಕರು ತುಳುಲಿಪಿಯಲ್ಲೆ ಬರೆಯುತ್ತಾರೆ ,ಓದುತ್ತಾರೆ. ಅವರು ವೈದಿಕರು ಎನ್ನುವುದಕ್ಕಿಂತಲೂ ಅವರು ತುಳುಲಿಪಿ ಬಲ್ಲವರು ,ಅವರು ನಮ್ಮವರು ಎಂಬ ಭಾವನೆ ಆಸಕ್ತರಿಗೆ , ಅಧ್ಯಯನಕಾರರಿಗೆ ಅಗತ್ಯ .ಲಿಪಿಯಲ್ಲಿರುವ ಪಾಠಾಂತರಗಳನ್ನು ಗಮನಿಸಿ ಲಿಪಿಯ ವಿನ್ಯಾಸ ಸ್ಥಿರೀಕರಣಕ್ಕೆ ಯತ್ನಿಸುವ ಕೆಲಸಕ್ಕೆ ಲಭ್ಯ ಲಿಪಿಗಳ ವಿಸ್ತೃತ ಅವಲೋಕನ ಬೇಕು . .ಕಳೆದ ಶತಮಾನದಲ್ಲಿ ವೆಂಕಟರಾಜ ಪುಣಿಂಚತ್ತಾಯರು ಸಂಶೋಧಿಸಿದ ತುಳುಲಿಪಿಯ ಕಾವ್ಯಗಳನ್ನು ಹಾಗೂ ಅಕ್ಷರಗಳನ್ನು ನೆನಪಿಸಿಕೊಳ್ಳಬೇಡವೇ . ಇಲ್ಲಿ ಪುಣಿಂಚತ್ತಾಯರು ಮುಖ್ಯವಲ್ಲ ,ಅವರು ಮಾಡಿದ ತುಳುವಿನ ಕೆಲಸ ಮುಖ್ಯ . ಒಂದು ರಾಜಾಜ್ಞೆ , ಆಜ್ಞೆ ,ಯಾವುದೋ ಒಂದು ಘಟನೆಯನ್ನು , ವೀರರಕಲ್ಲುಗಳನ್ನು ಶಾಸನವಾಗಿ ಹಾಕುವಾಗ ,ಅದರ ಉದ್ದೇಶ ಪ್ರಚಾರವೇ ತಾನೆ .ಪ್ರಚಾರ ಎಂದರೆ ಬಹುತೇಕ ಜನಮಂದಿಗೆ ತಿಳಿಯಲು ತಾನೆ .ಹಾಗಾಗಿ ಓದಲು ಬರುತ್ತಿದ್ದ ಜನ ಇದ್ದರು ಎಂಬುದು ಸ್ಪಷ್ಟವಾಗದೆ . ಲಿಪಿ ಕೇವಲ ವೈದಿಕರಿಗೆ ಸೀಮಿತವಾಗಿತ್ತು ಎಂಬುದು ಒಪ್ಪಲಾಗದು .ಸಮಾಜದ ಸಂವಹನ ಮಾಧ್ಯಮವಾಗಿದ್ದ ಭಾಷೆಯಲ್ಲವೆ ? ಸಮಾಜದ ಶೇ.40 ಮಂದಿಗಾದರೂ ಗೊತ್ತಿದ್ದಿರಲೇ ಬೇಕು .ಇದು ನನ್ನ ವಿವರಣೆ .ಸರಿಯಾಗಿರಬೇಕೆಂದಿಲ್ಲ . ಇತಿಹಾಸ ಸಂಶೋಧಕರು ತುಳುಲಿಪಿಯ ಶಾಸನಗಳನ್ನು ಹುಡುಕಿ ಓದಿದ್ದಾರೆ , ಕಾಲ ನಿರ್ಣಯಿಸಿದ್ದಾರೆ . ಭಿನ್ನವಾದ ತುಳುವಿನ ಅಕ್ಷರ ವಿನ್ಯಾಸವನ್ನು ಗುರುತಿಸಿದ್ದಾರೆ .ಈ ಮಾಹಿತಿಯು ಲಿಪಿಯ ಸ್ವರೂಪದ ನಿರ್ಧಾರಕ್ಕೆ ಪೂರಕವಾದುದು .ಅಂತೂ ತುಳುಲಿಪಿ ಜನಪ್ರಿಯವಾಗಲಿ , ಎಲ್ಲರೂ ಬರೆಯುವ - ಓದುವ ದಿನಗಳು ಬರಲಿ .
ಇತ್ತೀಚೆಗೆ ಕಾಪು ತಾಲೂಕಿನ ಎಲ್ಲೂರು ಗ್ರಾಮದ ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ಒಳಾಂಗಣ ಪ್ರವೇಶ ದ್ವಾರದಲ್ಲಿ ಎತ್ತರದಲ್ಲಿ 'ಅಪ್ಪೆ ಉಲ್ಲಾಲ್ತಿ' ,"ಶ್ರೀ ದುರ್ಗಾ ದೇವಸ್ಥಾನ ಕುಂಜೂರು" ಎಂದು ತುಳು ಲಿಪಿಯಲ್ಲಿ ಬರೆದಿರುವ ಫಲಕವನ್ನು ಅಳವಡಿಸಲಾಗಿತ್ತು . ನವರಾತ್ರಿಯ ಒಂಬತ್ತು ದಿನಗಳಲ್ಲಿ ಒಂದು ಶ್ರೀ ಕೃಷ್ಣಾಪುರ ಮಠಾಧೀಶರು ದುರ್ಗೆಯ ಸಂದರ್ಶನಕ್ಕೆ ಬರುವುದು ವಾಡಿಕೆ .ಅಂತೆಯೇ ಕಳೆದ ನವರಾತ್ರಿ ಕಾಲದಲ್ಲೂ ಆಗಮಿಸಿದರು . ದೇವಳ ಪ್ರವೇಶಿಸುತ್ತಿರುವಂತೆ ಪ್ರವೇಶ ದ್ವಾರದ ಮೇಲಿನ ಫಲಕವನ್ನು "ಅಪ್ಪೆ ಉಲ್ಲಾಲ್ತಿ , ಶ್ರೀ ದುರ್ಗಾ ದೇವಸ್ಥಾನ ಕುಂಜೂರು" ಎಂದು ಓದುತ್ತಾ ಮುಂದುವರಿದರು .ಫಲಕ ಅಳವಡಿಸಿದವರು ಸಂತೋಷಪಟ್ಟರು. ತುಳು ಲಿಪಿಯಲ್ಲಿ ಬರೆಯೋಣ , ಓದುವವರು ಇದ್ದಾರೆ . ಮುಂದೆ ಓದುವವರು ಬರುತ್ತಾರೆ . ಲೇಖನ : ಕೆ.ಎಲ್.ಕುಂಡಂತಾಯ.
ಕಾಪು ಠಾಣಾಧಿಕಾರಿ ರಾಜಶೇಖರ್ ಸಾಗನೂರು ಕಾರವಾರಕ್ಕೆ ವರ್ಗಾವಣೆ

Posted On: 07-11-2020 10:28AM
ದಕ್ಷ ಅಧಿಕಾರಿಯಾಗಿ ಕಾಪು ಠಾಣೆಯಲ್ಲಿ ಕರ್ತವ್ಯವಹಿಸಿದ ಪಿಎಸ್ಐ ರಾಜಶೇಖರ್ ಸಗನೂರ್ ಉತ್ತರ ಕನ್ನಡ ಜಿಲ್ಲೆಯ ಕಾರವಾರಕ್ಕೆ ವರ್ಗಾವಣೆ ಆಗಿರುತ್ತಾರೆ. ರಾಜಶೇಖರ್ ರವರು ಬೀದರ್, ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ. ಇವರಿಂದ ತೆರವಾದ ಸ್ಥಾನಕ್ಕೆ ಬ್ರಹ್ಮಾವರ ಠಾಣೆಯ ಪಿಎಸ್ಐ ರಾಘವೇಂದ್ರ ಬರಲಿದ್ದಾರೆ.
ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ರಾಘವೇಂದ್ರ ಪ್ರಭು, ಕರ್ವಾಲು ಆಯ್ಕೆ

Posted On: 06-11-2020 09:43PM
ಲೇಖಕ, ಸಾಮಾಜಿಕ ಕಾರ್ಯಕರ್ತ, ತರಬೇತುದಾರ ರಾಘವೇಂದ್ರ ಪ್ರಭು, ಕರ್ವಾಲುರವರಿಗೆ ಬೆಂಗಳೂರಿನ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಸಮಾಜ ಸೇವೆ ಮತ್ತು ಯುವಸಂಘಟನೆ ವಿಭಾಗದಲ್ಲಿ ನೀಡಲ್ಪಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸ್ವಚ್ಚ ಭಾರತ ಫ್ರೇoಡ್ಸ್ ಸಂಯೋಜಕರಾಗಿರುವ ಇವರು ಅನೇಕ ಸಮಾಜ ಮುಖಿ ಕಾಯ೯ ದಲ್ಲಿ ತೊಡಗಿಸಿಕೊಂಡಿದ್ದಾರೆ.
ಉಡುಪಿಯಲ್ಲಿ ಫರ್ನಿಚರ್ ಕ್ಲಸ್ಟರ್ ಆರಂಭಿಸಲು ಜಾಗ ಗುರುತಿಸಿ: ಜಗದೀಶ್ ಶೆಟ್ಟರ್

Posted On: 06-11-2020 05:51PM
ಉಡುಪಿ, ನವೆಂಬರ್ 6 : ಉಡುಪಿ ಜಿಲ್ಲೆಯಲ್ಲಿ ಮರದ ಸಾಮಗ್ರಿಗಳನ್ನು ತಯಾರಿಸುವ ಫರ್ನಿಚರ್ ಕ್ಲಸ್ಟರ್ ಆರಂಭಿಸಲು ಸೂಕ್ತ ಜಾಗವನ್ನು ಗುರುತಿಸುವಂತೆ ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು. ಅವರು ಶುಕ್ರವಾರ ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲೆಯ ಕೈಗಾರಿಕಾಭಿವೃದ್ದಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯದಲ್ಲಿ ಈಗಾಗಲೇ ಕೈಗಾರಿಕೆ ಅಭಿವೃದ್ಧಿಗಾಗಿ ವಿವಿಧ ಕ್ಲಸ್ಟರ್‌ಗಳನ್ನು ಆರಂಭಿಸಲು ಸೂಚನೆ ನೀಡಿದ್ದು, ಕೊಪ್ಪಳದಲ್ಲಿ ಆಟಿಕೆ ತಯಾರಿಕಾ ಕ್ಲಸ್ಟರ್ ಮತ್ತು ಯಾದಗಿರಿ-ರಾಯಚೂರಿನಲ್ಲಿ ಫಾರ್ಮಾ ಕ್ಲಸ್ಟರ್ ಆರಂಭ ಕುರಿತಂತೆ ಕಾರ್ಯಗಳು ನಡೆಯುತ್ತಿವೆ, ಉಡುಪಿ ಜಿಲ್ಲೆಯಲ್ಲಿ ಬಂದರು ಇರುವ ಕಾರಣ ವಿದೇಶಗಳಿಂದ ಉತ್ತಮ ಗುಣಮಟ್ಟದ ಮರಗಳನ್ನು ಆಮದು ಮಾಡಿಕೊಳ್ಳಲು ಮತ್ತು ತಯಾರಿಸಿದ ಪೀಠೋಪಕರಣಗಳನ್ನು ರಫ್ತು ಮಾಡಲು ಉತ್ತಮ ಅವಕಾಶಗಳಿದ್ದು, ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರಯಲಿದ್ದು, ಇದಕ್ಕಾಗಿ ಅಗತ್ಯ ಪ್ರಮಾಣದ ಭೂಮಿಯನ್ನು ಗುರುತಿಸುವಂತೆ ತಿಳಿಸಿದ ಸಚಿವ ಜಗದೀಶ್ ಶೆಟ್ಟರ್, ಕ್ಲಸ್ಟರ್ ಆರಂಭಕ್ಕೆ ಸರಕಾರದಿಂದ ಎಲ್ಲಾ ರೀತಿಯ ಅಗತ್ಯ ನೆರವು ನೀಡಲಾಗುವುದು ಎಂದರು. ಉಡುಪಿ ಜಿಲ್ಲೆಯ ನಂದಿಕೂರು ಸೇರಿದಂತೆ ವಿವಿಧ ಕೈಗಾರಿಕಾ ಪ್ರದೇಶದಲ್ಲಿ, ಉದ್ದಿಮೆ ಆರಂಭಿಸಲು ಕೈಗಾರಿಕೆಗಳು ಪಡೆದಿರುವ ಭೂಮಿಯು ಸಂಪೂರ್ಣ ಬಳಕೆಯಾಗಿರುವ ಬಗ್ಗೆ ಬೆಂಗಳೂರಿನಿಂದ ತಜ್ಞರ ತಂಡದಿಂದ ಪರಿಶೀಲಿಸಿ, ಅವರ ಮೂಲಕ ವರದಿ ಪಡೆಯಲಾಗುವುದು ಎಂದ ಸಚಿವರು, ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ನೀಡುವಂತೆ ಹಾಗೂ ಸರೋಜಿನಿ ಮಹಿಷಿ ವರದಿಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವಂತೆ ಕೈಗಾರಿಕೋದ್ಯಮಿಗಳಿಗೆ ಸೂಚಿಸಿದರು.

ರಾಜ್ಯದಲ್ಲಿ ಕೈಗಾರಿಕೆಗಳು ಒಂದೇ ಕಡೆ ಕೇಂದ್ರೀಕೃತವಾಗುವುದನ್ನು ತಪ್ಪಿಸುವ ಉದ್ದೇಶದಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಹೊರತುಪಡಿಸಿ ಇತರೆ ಟೈರ್ 1 ಮತ್ತು 2 ನಗರಗಳಲ್ಲಿ ಕೈಗಾರಿಕೆಗಳನ್ನು ಆರಂಬಿಸಲು ಅವಕಾಶ ನೀಡಿದ್ದು, ಇದರಿಂದ ಈ ನಗರಗಳಲ್ಲಿ ಉದ್ಯೋಗಾವಕಾಶಗಳು ಸೃಷ್ಠಿಯಾಗುತ್ತಿವೆ, ಬೇಲೆಕೇರಿ ಬಂದರನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಲು ಡಿಪಿಆರ್ ಮಾಡಲು ನಿರ್ದೇಶನ ನೀಡಲಾಗಿದೆ, ಕೈಗಾರಿಕಾ ನೀತಿಯಲ್ಲಿ ಹಲವು ಬದಲಾವಣೆ ಮಾಡಿ, ರಾಜ್ಯದಲ್ಲಿ ಕೈಗಾರಿಕೆಗಳ ಅಭಿವೃದ್ದಿಗೆ ಪೂರಕ ವಾತಾವರಣ ನಿರ್ಮಿಸಲಾಗುತ್ತಿದೆ ಎಂದು ಸಚಿವ ಶೆಟ್ಟರ್ ಹೇಳಿದರು. ಮಣಿಪಾಲದ ಶಿವಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅಗತ್ಯವಾಗಿ ಕೈಗೊಳ್ಳಬೇಕಾದ ಕಾಮಗಾರಿಗಳ ಕುರಿತು, ಗೋಡಂಬಿ ಉದ್ಯಮದ ಬೆಳವಣಿಗೆ ಅಗತ್ಯವಿರುವ ಬೆಂಬಲ ನೀಡುವಂತೆ ಹಾಗೂ ಜಿಲ್ಲೆಯ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಕೈಗಾರಿಕೋದ್ಯಮಿಗಳು ಸಚಿವರಿಗೆ ಮನವಿ ಸಲ್ಲಿಸಿದರು.

ಸಭೆಯಲ್ಲಿ ಮೀನುಗಾರಿಕೆ, ಬಂದರು ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷಿö್ಮ ಮಂಜುನಾಥ್, ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಶಾಸಕ ರಘುಪತಿ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿಲ್ಲಾಧಿಕಾರಿ ಜಿ.ಜಗದೀಶ್, ಕೆಐಎಡಿಬಿಯ ಸಿಇಓ ಶಿವ ಶಂಕರ್ ಹಾಗೂ ಜಿಲ್ಲೆಯ ವಿವಿಧ ಕೈಗಾರಿಕೋದ್ಯಮಿಗಳು ಉಪಸ್ಥಿತರಿದ್ದರು.