Updated News From Kaup
ಟೋಲ್ ವಿನಾಯಿತಿ ಮನವಿಗೆ ಸ್ಪಂದಿಸುವ ಭರವಸೆ ನೀಡಿ ಸ್ಪಂದಿಸದ ಟೋಲ್ ಪ್ಲಾಜಾದ ಅಧಿಕಾರಿಗಳು
Posted On: 26 Mar 2021, 10:46 PM
ಹೆಜಮಾಡಿ ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆಯ ನಿರ್ಣಯದಂತೆ ಹೆಜಮಾಡಿ ಕೋಡಿ ಭಾಗಕ್ಕೆ ಸಂಚರಿಸುವ ಸರ್ವಿಸ್ ಬಸ್ಸುಗಳಿಗೆ ಮತ್ತು ಶಾಲಾ ಬಸ್ಸುಗಳಿಗೆ ಟೋಲ್ ಪಡೆಯುವುದನ್ನು ಖಂಡಿಸಿ ಹೆಜಮಾಡಿ ಗ್ರಾಮಪಂಚಾಯತ್ ನಿಂದ ಹೆಜಮಾಡಿಯ ನವಯುಗ ಟೋಲ್ ಪ್ಲಾಜಾದ ಪ್ರಬಂಧಕರಿಗೆ ಮಾಚ್೯ 25, ಗುರುವಾರ ಮನವಿ ಸಲ್ಲಿಸಲಾಗಿತ್ತು. ಮಾಚ್೯ 26, ಶುಕ್ರವಾರ ಬೆಳಿಗ್ಗೆ 9 ಗಂಟೆಯೊಳಗೆ ಸ್ಪಂದಿಸುವ ಭರವಸೆ ನೀಡಿದ ಟೋಲ್ ಪ್ಲಾಜಾದ ಪ್ರಬಂಧಕರು ಇದೀಗ ಮನವಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಪಡುಬಿದ್ರಿ ಪೋಲಿಸ್ ಠಾಣೆಗೆ ಸೂಕ್ತ ಕ್ರಮಕ್ಕಾಗಿ ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಿಂದ ಮನವಿ ನೀಡಲಾಯಿತು. ಹೆಜಮಾಡಿ ಗ್ರಾಮವು ಉಡುಪಿ ಹಾಗೂ ಮಂಗಳೂರು ಜಿಲ್ಲೆಯ ಗಡಿ ಭಾಗವಾಗಿದ್ದು, ಹೆಜಮಾಡಿ ಕೋಡಿಯ ವಿದ್ಯಾರ್ಥಿಗಳು ಹಾಗೂ ನಾಗರಿಕರು ಹೆಚ್ಚಾಗಿ ಮಂಗಳೂರನ್ನು ಅವಲಂಬಿಸಿರುತ್ತಾರೆ. ಬಸ್ಸುಗಳಿಗೆ ಟೋಲ್ ಪಾವತಿಸಬೇಕಾದ ಕಾರಣ ಬಸ್ಸುಗಳು ಈ ಭಾಗಕ್ಕೆ ಬಾರದೆ ಜನರಿಗೆ ತೊಂದರೆ ಆಗಿದೆ. ಆದ್ದರಿಂದ ಹೆಜಮಾಡಿ ಕೋಡಿಗೆ ಬರುವ ಸರ್ವಿಸ್ ಬಸ್ಸು ಹಾಗೂ ಶಾಲಾ ಬಸ್ಸುಗಳಿಗೆ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂದರ್ಭ ಹೆಜಮಾಡಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಪ್ರಾಣೇಶ್ ಹೆಜಮಾಡಿ, ಉಪಾಧ್ಯಕ್ಷರಾದ ಪವಿತ್ರ ಗಿರೀಶ್, ಸದಸ್ಯರು, ಉಪಸ್ಥಿತರಿದ್ದರು.
ಟೀನ್ ಕರ್ನಾಟಕ ಪ್ರಶಸ್ತಿ ಮುಡಿಗೇರಿಸಿಕೊಂಡ ದಿಶಾಲಿ ಪೂಜಾರಿ
Posted On: 26 Mar 2021, 09:12 PM
ಕಾಪು : ಮೂಡಬಿದ್ರಿಯಲ್ಲಿ ನಡೆದ ರಾಜ್ಯಮಟ್ಟದ ಕರ್ನಾಟಕ ಯೂನಿಕ್ ಫ್ಯಾಶನ್ - 2021 ಅಲ್ಲಿ ದಿಶಾಲಿ ಪೂಜಾರಿ ಇವರು ಟೀನ್ ಕರ್ನಾಟಕ ಪ್ರಶಸ್ತಿ ಪಡೆದಿರುತ್ತಾರೆ. ಉಚ್ಚಿಲ ಮಹಾಲಕ್ಷ್ಮಿ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿಯಾಗಿರುವ ಇವರು ನೃತ್ಯದಲ್ಲಿ ಆಸಕ್ತಿ ಹೊಂದಿದವರಾಗಿ ಹಲವು ಕಡೆ ನೃತ್ಯ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಪಡುಬಿದ್ರಿಯ ಸ್ಟೆಪ್ ರೈಡರ್ಸ್ ನೃತ್ಯ ಕಲಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿನಿಯಾಗಿದ್ದಾರೆ. ಕಿರುತೆರೆಯ ಪ್ರಸಿದ್ಧ ಧಾರಾವಾಹಿ ಯಶೋಧ ಇದರಲ್ಲಿಯೂ ನಟಿಸಿರುತ್ತಾರೆ.
ಶ್ರೀ ಗುರು ರಾಘವೇಂದ್ರ ಮಹಿಳಾ ಭಜನಾ ಮಂಡಳಿ 92 ಹೇರೂರು : ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ
Posted On: 26 Mar 2021, 04:59 PM
ಕಾಪು : ಶ್ರೀ ಗುರು ರಾಘವೇಂದ್ರ ಮಹಿಳಾ ಭಜನಾ ಮಂಡಳಿ 92 ಹೇರೂರು ಇದರ ಮಹಾಸಭೆಯು ಶ್ರೀ ಗುರುರಾಘವೇಂದ್ರ ಸಮಾಜ ಸೇವಾ ಮಂಡಳಿಯ ಸಭಾಂಗಣದಲ್ಲಿ ನಡೆಯಿತು. 2019 - 20ನೆಯ ವರ್ಷದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಸುಕನ್ಯಾ ಜೋಗಿಯವರು ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದರು. ಅಧ್ಯಕ್ಷರಾದ ಶ್ರೀಮತಿ ವಸಂತಿ ಆಚಾರ್ಯರವರು ಸರ್ವರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಸಮಾಜ ಸೇವಾ ಮಂಡಳಿಯ ಅಧ್ಯಕ್ಷರಾದ ಸುಜಿತ್ ಕುಮಾರ್, ಕಾರ್ಯದರ್ಶಿ ದಿನೇಶ್ ದೇವಾಡಿಗ, ನಿಯೋಜಿತ ಅಧ್ಯಕ್ಷರಾದ ಶ್ರೀನಿವಾಸ ದೇವಾಡಿಗ, ಕಾರ್ಯದರ್ಶಿ ನಿತ್ಯಾನಂದ ಆಚಾರ್ಯ, ಶಂಕರ್ ದೇವಾಡಿಗ ಉಪಸ್ಥಿತರಿದ್ದರು. 2021- 22ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶ್ರೀಮತಿ ಶಶಿಕಲಾ ದಿನೇಶ್ ದೇವಾಡಿಗ, ಉಪಾಧ್ಯಕ್ಷರಾಗಿ ಶ್ರೀಮತಿ ಸರಸ್ವತಿ ಶ್ರೀಧರ ಕಾಮತ್, ಕಾರ್ಯದರ್ಶಿಯಾಗಿ ಪವಿತ್ರ ಪ್ರಕಾಶ್ ರಾವ್, ಕೋಶಾಧಿಕಾರಿಯಾಗಿ ಆಶಾ ವಿಶ್ವನಾಥರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಶ್ರೀಮತಿ ಸುಕನ್ಯಾ ಜೋಗಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾಪು ಬೀಚ್ : ಮಾಸ್ಕ್ ಹಾಕದವರಿಗೆ ದಂಡ
Posted On: 26 Mar 2021, 04:47 PM
ಕಾಪು ಬೀಚ್ ನ ಲೈಟ್ ಹೌಸ್ ಬಳಿ ಪ್ರವಾಸಿಗರು ಮಾಸ್ಕ್ ಹಾಕದ ಹಿನ್ನೆಲೆಯಲ್ಲಿ ಸ್ಥಳದಲ್ಲಿಯೇ ಅಧಿಕಾರಿಗಳು ದಂಡ ವಿಧಿಸಿದರು. ಮಾಸ್ಕ್ ಹಾಕದವರಿಗೆ ಕೊರೊನದ ಬಗ್ಗೆ ಜಾಗೃತಿಯನ್ನು ಮಾಡಿದರು. ಇದೇ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು, ಸಹಾಯಕ ನಿರ್ದೇಶಕರು ಉಪಸ್ಥಿತರಿದ್ದರು.
ಜಲ್ಲಿಕಲ್ಲು ಹಾಗೂ ಶಿಲೆಗಳ ಸಾಗಾಟಕ್ಕೆ ಅವಕಾಶ ಕಲ್ಪಿಸುವಂತೆ ಮುಖ್ಯಮಂತ್ರಿಯಿಂದ ಅಧಿಕಾರಿಗಳಿಗೆ ಸೂಚನೆ
Posted On: 25 Mar 2021, 04:03 PM
ಇಂದು ಉಡುಪಿ ಶಾಸಕರಾದ ರಘುಪತಿ ಭಟ್ ಹಾಗೂ ದಕ್ಷಿಣ ಕನ್ನಡ ಶಾಸಕರಾದ ವೇದವ್ಯಾಸ ಕಾಮತ್ ಅವರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಲಾರಿ ಮಾಲಕರು, ಕ್ರಷರ್ ಮಾಲಕರು, ಕಟ್ಟಡ ಸಾಮಾಗ್ರಿ ಲಾರಿ ಟೆಂಪೋ ಮಾಲಕರ ಸಂಘದ ಪದಾಧಿಕಾರಿಗಳ ನಿಯೋಗ ಗಣಿ ಮತ್ತು ಭೂವಿಜ್ಞಾನ ಸಚಿವರಾದ ಮುರುಗೇಶ್ ನಿರಾಣಿ ಅವರನ್ನು ಭೇಟಿ ಮಾಡಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಜಲ್ಲಿಕಲ್ಲು ಹಾಗೂ ಶಿಲೆಕಲ್ಲುಗಳ ಸಾಗಾಟಕ್ಕೆ ನಿರ್ಬಂಧ ಹೇರಿರುವ ಕಾರಣ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತವಾಗಿರುವ ಕುರಿತು ಚರ್ಚೆ ನಡೆಯಿತು. ಜಲ್ಲಿಕಲ್ಲು ಸಿಗದೆ ಅನೇಕ ಕಾಮಗಾರಿಗಳು ಸ್ಥಗಿತವಾಗಿದೆ. ಮಾತ್ರವಲ್ಲದೆ ಜನ ಸಾಮಾನ್ಯರಿಗೂ ಇದರಿಂದ ವಿಪರೀತ ಸಮಸ್ಯೆಯಾಗುತ್ತಿದೆ. ಹಾಗಾಗಿ ನಿರ್ಬಂಧ ತೆರವುಗೊಳಿಸುವಂತೆ ನಿಯೋಗವು ಗಣಿ ಹಾಗೂ ಭೂ ವಿಜ್ಞಾನ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಸಮಸ್ಯೆ ಆಲಿಸಿದ ಸಚಿವರು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ನಿಯೋಗದೊಂದಿಗೆ ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿಸಿ ಸಮಸ್ಯೆಯ ಕುರಿತು ಗಮನ ಸೆಳೆದರು. ಸಮಸ್ಯೆಯ ಗಂಭೀರತೆಯನ್ನು ಅರಿತ ಮುಖ್ಯಮಂತ್ರಿಗಳು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಜಲ್ಲಿಕಲ್ಲು ಹಾಗೂ ಶಿಲೆಕಲ್ಲು ಸಾಗಾಟಕ್ಕೆ ಅವಕಾಶ ನೀಡುವ ಕುರಿತು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶಿರ್ವ ಸಂತ ಮೇರಿ ಕಾಲೇಜಿನ ಸತ್ಯಸುಬ್ರಹ್ಮಣ್ಯ ವಿ.ಎಸ್ ಗೆ ಗಣಕ ವಿಜ್ಞಾನ ವಿಭಾಗದಲ್ಲಿ ನಾಲ್ಕನೇ ರ‍್ಯಾಂಕ್
Posted On: 25 Mar 2021, 03:57 PM
ಶಿರ್ವ: ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಸಂಸ್ಥೆ, ಶಿರ್ವ ಸಂತ ಮೇರಿ ಕಾಲೇಜಿನ ವಿದ್ಯಾರ್ಥಿ ಸತ್ಯಸುಬ್ರಹ್ಮಣ್ಯ ವಿ.ಎಸ್. ರವರು ಮಂಗಳೂರು ವಿಶ್ವವಿದ್ಯಾನಿಲಯ 2020 ರ ಸಪ್ಟೆಂಬರ್‍ನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಗಣಕ ವಿಜ್ಞಾನ ವಿಭಾಗ ಬಿ.ಸಿ.ಎ. ದಲ್ಲಿ ನಾಲ್ಕನೇ ರ‍್ಯಾಂಕ್ ಪಡೆದಿದ್ದಾರೆ. ಕಾಸರಗೋಡಿನ ಶ್ರೀ ವೆಂಕಟೇಶ್ವರ ಭಟ್ ಮತ್ತು ಶ್ರೀಮತಿ ಗೌರಿ ಅವರ ಪುತ್ರರಾದ ಅವರು ಶೇಕಡಾ 95.72% ಅಂಕಗಳೊಂದಿಗೆ ನಾಲ್ಕನೇ ರ‍್ಯಾಂಕ್ ಗಳಿಸಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು, ಆಡಳಿತ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
ರಾಘವೇಂದ್ರ ಶೆಟ್ಟಿ ಮಂಡೇಡಿ ನಿಧನ
Posted On: 24 Mar 2021, 10:46 PM
ಕಾಪು : ಮಂಡೇಡಿ ದಿವಂಗತ ಮೋನಪ್ಪ ಶೆಟ್ಟಿಯವರ ಪುತ್ರ ರಾಘವೇಂದ್ರ ಶೆಟ್ಟಿ ಮಂಡೇಡಿ ಇವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಸಂಜೆ 5 ಗಂಟೆಗೆ ನಿಧನರಾಗಿದ್ದಾರೆ.
ಸೌಹಾರ್ದತೆಗೆ ಸಾಕ್ಷಿಯಾದ ಕಾಪು ಮಾರಿಪೂಜೆ
Posted On: 24 Mar 2021, 04:00 PM
ಏಳು ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಇತಿಹಾಸ ಪ್ರಸಿದ್ಧ ಕಾಲಾವಧಿ ಸುಗ್ಗಿ ಮಾರಿಪೂಜೆ. ಕಾಪುವಿನ ಮೂರು ಮಾರಿ ಗುಡಿಗಳು ಜನಾಕರ್ಷಣೆಯ, ವಿದ್ಯುದೀಪಾಲಂಕೃತದಿಂದ, ಪುಷ್ಪಾಲಂಕಾರದಿಂದ ಎಲ್ಲರ ಕಣ್ಮನ ಸೆಳೆಯುತ್ತಿದ್ದು, ಕಾಪು ಶ್ರೀ ಹಳೆ ಮಾರಿಗುಡಿ ದೇವಸ್ಥಾನ, ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಮೂರನೆಯ ಮಾರಿಗುಡಿ (ಕಲ್ಯ) ದೇವಸ್ಥಾನಗಳು ಮಂಗಳವಾರ ಸಂಜೆಯಿಂದ ಬುಧವಾರ ಸಂಜೆಯವರೆಗೆ ಲಕ್ಷಾಂತರ ಭಕ್ತರು ಜಿಲ್ಲೆ, ಹೊರಜಿಲ್ಲೆಗಳಿಂದ ಆಗಮಿಸಿ ಗದ್ದುಗೆಯಿಂದ ಅಲಂಕೃತಳಾದ ದೇವಿಯ ಕಂಡು ವಿವಿಧ ಸೇವೆಗಳನ್ನು ಸಮರ್ಪಿಸಿ ಪುನೀತರಾಗಿದ್ದಾರೆ. ಕೋಮು ಸೌಹಾರ್ದತೆ ಎಂಬಂತೆ ಮತ್ತು ಎಲ್ಲಾ ಜಾತಿ, ಧರ್ಮದವರು ನನ್ನ ಮಕ್ಕಳು ಎಂಬಂತೆ ದೇವಿಗೆ ಸಮರ್ಪಿಸುವ ದೇವಿಗೆ ಅತಿಪ್ರಿಯವಾದ ಶಂಕರಪುರ ಮಲ್ಲಿಗೆ ಹಾಗೂ ರಕ್ತಾಹಾರ ಬೇಕೆಂಬ ದೇವಿಯ ಪ್ರೇರಣೆಯ ಕುರಿ, ಆಡು,ಕೋಳಿಗಳ ಮಾರಾಟದಲ್ಲಿಯೂ ಮುಸ್ಲಿಮ್ ಬಾಂಧವರೇ ಹೆಚ್ಚಾಗಿ ಕಂಡು ಬಂದಿದ್ದು ಒಟ್ಟಿನಲ್ಲಿ ನಮ್ಮ ಕಾಪು ಸುಗ್ಗಿ ಮಾರಿಪೂಜೆಯು ಸೌಹಾರ್ದತೆಗೆ ಸಾಕ್ಷಿಯಾಗಿದೆ ಎಂಬುವುದರಲ್ಲಿ ಎರಡು ಮಾತಿಲ್ಲ.
ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ ಕಾಪು ದೇವಳದ ನೂತನ ವೆಬ್ ಸೈಟ್ ಲೋಕಾರ್ಪಣೆ
Posted On: 24 Mar 2021, 09:15 AM
ತುಳುನಾಡ ಸೀಮೆಯ ಇತಿಹಾಸ ಪ್ರಸಿದ್ದ ಕಾರಣಿಕ ಶಕ್ತಿ ಕೇಂದ್ರ - ಶ್ರೀ ಕ್ಷೇತ್ರ ರಕ್ಷಣಾಪುರ ಕಾಪು ಶ್ರೀ ಹಳೇ ಮಾರಿಯಮ್ಮ ದೇವಳದ ಅಧಿಕೃತ ನೂತನ ವೆಬ್ ಸೈಟ್ (http://hmtkapu.in) ಮಾಚ್೯ 23, ಮಂಗಳವಾರ ಶ್ರೀದೇವಿಯ ಕಾಲಾವಧಿ ಸುಗ್ಗಿಮಾರಿಪೂಜೆ ಶುಭ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು. ದೇಶ ವಿದೇಶದಲ್ಲಿರುವ ಭಜಕರಿಗೆ ದೇವಳದಲ್ಲಿ ಜರಗುವ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಹಾಗೂ ಆನ್ ಲೈನ್ ಸೇವಾ ವಿವರಗಳು, ದೇವಳದ ಇತಿಹಾಸ, ದೇವಿಯ ವಿವಿಧ ಅಲಂಕಾರ, ಧಾರ್ಮಿಕ ಕಾರ್ಯಕ್ರಮ ಚಿತ್ರಣಗಳು ಹಾಗೂ ಇನ್ನಿತರ ಯಾವುದೇ ಮಾಹಿತಿಗಳಿಗೆ ಸಂಪರ್ಕಿಸಲು ಸಾಮಾಜಿಕ ಜಾಲತಾಣಗಳಲ್ಲಿ ಈಗಿನ ತಂತ್ರಜ್ಞಾನ ಬಳಸಿ ನೂತನ ವೆಬ್ಸೈಟ್ ತಯಾರಿಸಿದ್ದು ನಾಡಿನ ಸಮಸ್ತ ಭಕ್ತ ಭಾಂದವರು ಇದರ ಸದುಪಯೋಗ ಪಡಕೊಳ್ಳಬೇಕೆಂದು ವಿನಂತಿಸಿದ್ದಾರೆ.
ಆರ್ರ್ಯಾಡಿ ದಿ| ಅಂಚನ್ ಅವರ 5ನೇ ವರ್ಷದ ಸಂಸ್ಮರಣಾರ್ಥ ಪುತ್ರರಿಂದ 14 ಅಶಕ್ತ ಕುಟುಂಬಗಳಿಗೆ ಸುಮಾರು 1.50 ಲಕ್ಷ ರೂ. ವೈದ್ಯಕೀಯ ನೆರವಿನ ಹಸ್ತ
Posted On: 23 Mar 2021, 05:19 PM
ಕಟಪಾಡಿ : ಆರ್ರ್ಯಾಡಿ ದಿ| ಅಂಚನ್ ಅವರ 5ನೇ ವರ್ಷದ ಸಂಸ್ಮರಣಾರ್ಥ ಪುತ್ರರಾದ ಸುರೇಂದ್ರ ಅಂಚನ್, ಸುಜಿತ್ ಅಂಚನ್, ಸುಕುಮಾರ್ ಅಂಚನ್ ಅವರು ವೈದ್ಯಕೀಯ ಚಿಕಿತ್ಸೆ ವೆಚ್ಚಕ್ಕಾಗಿ ಅಶಕ್ತ 14 ಬಡ ಕುಟುಂಬಗಳಿಗೆ ಸುಮಾರು 1.50 ಲಕ್ಷ ರೂ. ಸಹಾಯ ಧನವನ್ನು ಮಾ.21ರಂದು ವಿತರಿಸಿದರು. ದಿ| ಸುಂದರ ಅಂಚನ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ನೀಡಲಾದ ಈ ಸಹಾಯಧನವನ್ನು ಪಾಂಗಾಳ ಆರ್ರ್ಯಾಡಿಯ ಅಂಚನ್ಸ್ ನಲ್ಲಿ ಪತ್ನಿ ಜಾನಕಿ ಸುಂದರ ಅಂಚನ್ ಅವರು, ಅನಾರೋಗ್ಯ ಪೀಡಿತ ಅಶಕ್ತ ಕುಟುಂಬಗಳಾದ ಸಂಗೀತಾ ಉಪ್ಪೂರು, ಜೂಲಿಯನ ಪಿರೇರಾ ಶಿರ್ವ, ಲೀಲಾ ಪೂಜಾರ್ತಿ ಗಾಂಧಿನಗರ ಪಾಂಗಾಳ, ಗಂಗಿ ಪೂಜಾರ್ತಿ ಪಾಂಗಾಳ, ವಾಸುದೇವ ಆಚಾರ್ಯ ಪಾಂಗಾಳ, ಅಚ್ಯುತ ಆಚಾರ್ಯ ಇನ್ನಂಜೆ, ವಿಜಯಾ ಕುರ್ಕಾಲು, ಸೂರು ಮೂಲ್ಯ ಇನ್ನಂಜೆ, ಪ್ರೇಮ ಶಂಕರಪುರ, ರಕ್ಷಿತ್ ಸಾಲ್ಯಾನ್ ಹೆಜಮಾಡಿ ಸಹಿತ 14 ಕುಟುಂಬಗಳಿಗೆ ವೈದ್ಯಕೀಯ ಚಿಕಿತ್ಸೆಯ ಸಹಾಯ ಧನದ ಚೆಕ್ ನ್ನು ವಿತರಿಸಿದರು. ಈ ಸಂದರ್ಭ ದಿವ್ಯಾ ಸುರೇಂದ್ರ, ಕೃಪಾ ಸುಜಿತ್, ಮಹೇಶ ಎಂ. ಸುವರ್ಣ, ತಾ.ಪಂ. ಸದಸ್ಯ ರಾಜೇಶ್ ಶೆಟ್ಟಿ, ಗ್ರಾ.ಪಂ. ಸದಸ್ಯರಾದ ಸುರೇಖಾ ಶೆಟ್ಟಿ, ಪ್ರವೀಣ್ ಪೂಜಾರಿ ಕುರ್ಕಾಲು, ರಾಜೇಶ್ ಆಚಾರ್ಯ, ಸತ್ಯದ ತುಳುವೆರ್ ಸಂಘಟನೆಯ ಅಧ್ಯಕ್ಷ ಪ್ರವೀಣ್ ಬಂಗೇರ ಮಲ್ಪೆ ಉಪಸ್ಥಿತರಿದ್ದರು. ಜಿ.ಪಂ. ಸದಸ್ಯೆ ಗೀತಾಂಜಲಿ ಎಂ.ಸುವರ್ಣ ಸ್ವಾಗತಿಸಿದರು.ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರಾಡಳಿತ ಮಂಡಳಿಯ ಸದಸ್ಯ ಕಾಮ್ ರಾಜ್ ಸುವರ್ಣ ವಂದಿಸಿದರು.
