Updated News From Kaup
ಬಿಲ್ಲವ - ಈಡಿಗ ಅಭಿವೃದ್ಧಿ ಪ್ರಾಧಿಕಾರ ರಚನೆ, ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡಲು ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಆಗ್ರಹ

Posted On: 18-11-2020 11:37AM
ಕಾಪು : ಬಿಲ್ಲವ ಈಡಿಗ ಸಮಾಜದ ಸಾಮಾಜಿಕ ಶೈಕ್ಷಣಿಕ ಔದ್ಯೋಗಿಕ ಅಭಿವೃದ್ಧಿಗೆ ಪೂರಕವಾಗಿ ಬಿಲ್ಲವ ಈಡಿಗ ಅಭಿವೃದ್ಧಿ ಪ್ರಾಧಿಕಾರ ರಚನೆ ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ಧಾನಕ್ಕೆ ಕೋಟಿ ಚೆನ್ನಯರ ಹೆಸರಿಡ ಬೇಕೆಂಬ ಗ್ರಾಮ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಪ್ರಸ್ತಾವನೆಯನ್ನು ಪರಿಗಣಿಸಿ ಮರುನಾಮಕರಣಕ್ಕೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಆಗ್ರಹಿಸಿದೆ. ಬಿಲ್ಲವ ಸಮಾಜದ ನಿರ್ಣಯ ಮತ್ತು ಬೇಡಿಕೆಗಳ ಬಗ್ಗೆ ಸರಕಾರಗಳ ನಿರ್ಲಕ್ಷ್ಯ ಬಗ್ಗೆ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಡಾ. ರಾಜಶೇಖರ್ ಕೋಟ್ಯಾನ್ ಆಕ್ರೋಶ ವ್ಯಕ್ತಪಡಿಸಿದ್ದು, ತೀವ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಉಭಯ ಜಿಲ್ಲೆಗಳಲ್ಲಿ ಬಹುಸಂಖ್ಯಾತರಾಗಿರುವ ಬಿಲ್ಲವ ಮತ್ತು ಈಡಿಗ ಸಮುದಾಯ ಸಾಮಾಜಿಕ ನ್ಯಾಯದಿಂದ ವಂಚಿತರಾಗುತ್ತಿದ್ದು ಈ ಬಗ್ಗೆ ಉಡುಪಿಯಲ್ಲಿ ಜರಗಿದ್ದ ಬೃಹತ್ ಬಿಲ್ಲವ ಸಮಾವೇಶದಲ್ಲಿ ಬಿಲ್ಲವ ಈಡಿಗ ಸಮಾಜದ ಸಾಮಾಜಿಕ ಶೈಕ್ಷಣಿಕ ಔದ್ಯೋಗಿಕ ಅಭಿವೃದ್ಧಿಗೆ ಪೂರಕವಾಗಿ ಬಿಲ್ಲವ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕೆಂಬ ನಿರ್ಣಯದ ಜೊತೆ ಸಮಾಜದ ಅಭಿವೃದ್ಧಿಗೆ ಕೆಲವೊಂದು ನಿರ್ಣಯಗಳನ್ನು ತೆಗೆದುಕೊಂಡು ಸರಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ ಸರಕಾರ ನಮ್ಮ ಸಮಾಜದ ನಿರ್ಣಯ ಮತ್ತು ಬೇಡಿಕೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ಆದುದರಿಂದ ಈ ಕೂಡಲೇ ಬಿಲ್ಲವ ಈಡಿಗ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಿ ಸಮಾಜದ ಬಡವರು ಹಿಂದುಳಿದವರಿಗೆ ಅನುಕೂಲ ಮಾಡಿ ಕೊಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ.
ತುಳುನಾಡಿನ ಸಮಸ್ತ ಜನರ ಹಲವಾರು ವರ್ಷಗಳ ಆಗ್ರಹದಂತೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ಧಾನಕ್ಕೆ ಕೋಟಿ ಚೆನ್ನಯರ ಹೆಸರನ್ನು ನಾಮಕರಣ ಮಾಡಬೇಕೆಂದು ಬಜ್ಪೆಯ ಮಳವೂರು ಗ್ರಾಮ ಪಂಚಾಯತ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಜನವರಿ 2019 ರ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೆಗೆದುಕೊಂಡ ಸರ್ವಾನುಮತದ ತೀರ್ಮಾನದಂತೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ಧಾನಕ್ಕೆ ಕೋಟಿ ಚೆನ್ನಯ ಹೆಸರನ್ನು ಮರುನಾಮಕರಣ ಮಾಡಬೇಕೆಂಬ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲು ನಿರ್ಣಯ ಕೈಗೊಂಡು ಸರಕಾರಕ್ಕೆ ಮುಂದಿನ ಕ್ರಮಗಳಿಗೆ ಕಳುಹಿಸಿಕೊಡಲಾಗಿತ್ತು. ಜಿಲ್ಲಾ ಪಂಚಾಯತ್ ನಿರ್ಣಯ ಕೈಗೊಂಡು ವಿಧಾನ ಮಂಡಲದ 4 ಅಧಿವೇಶನ ಗಳು ಕಳೆದು ಹೋಯಿತು. ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್ ಕೋಟಿ ಚೆನ್ನಯ ಹೆಸರಿನ ಮರುನಾಮಕರಣದ ಬಗ್ಗೆ ವಿಧಾನ ಮಂಡಲದಲ್ಲಿ ಈ ಬಗ್ಗೆ ಪ್ರಶ್ನೆ ಯನ್ನು ಕೂಡ ಕೇಳಿದ್ದರು. ಆದರೆ ರಾಜ್ಯ ಸರಕಾರ ನಿರ್ಣಯ ಕೈಗೊಂಡು ಕೇಂದ್ರ ಸರಕಾರಕ್ಕೆ ಸಲ್ಲಿಕೆಯಾಗಬೇಕಾದ ಪ್ರಸ್ತಾಪ ಈಗ ಕೂಡ ಕಡತದಲ್ಲಿ ಬಾಕಿಯಾಗಿದೆ.
ಉಭಯ ಜಿಲ್ಲೆಗಳ ಶಾಸಕರು ಈ ಪ್ರಸ್ತಾಪದ ಬಗ್ಗೆ ಕ್ಯಾಬಿನೆಟ್ ನಲ್ಲಿ ನಿರ್ಣಯ ಕೈಗೊಳ್ಳುವಂತೆ ಒತ್ತಡಹೇರಿ ವಿಧಾನ ಮಂಡಲದಲ್ಲಿ ಈ ಬಗ್ಗೆ ಮಾತನಾಡಿ ಮುಂದಿನ ಕ್ರಮಗಳಿಗೆ ಕೇಂದ್ರ ಸರಕಾರಕ್ಕೆ ಸಲ್ಲಿಕೆಯಾಗಿ ತುಳುನಾಡಿನ ಸತ್ಯ ಧರ್ಮದ ವೀರ ಪುರುಷರ ಹೆಸರನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ಧಾನಕ್ಕೆ ಮರುನಾಮಕರಣ ಮಾಡಬೇಕೆಂದು ಒತ್ತಾಯ ಮಾಡುತ್ತೇವೆ ಹಾಗೂ ಈ ಬಗ್ಗೆ ವಿಳಂಬ ನೀತಿ ಅನುಸರಿಸಿದರೆ ಮುಂದಿನ ದಿನಗಳಲ್ಲಿ ತುಳುನಾಡಿನ ಸರ್ವ ಜಾತಿ ಧರ್ಮದ ಬಂಧುಗಳನ್ನು ಸೇರಿಸಿಕೊಂಡು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ವತಿಯಿಂದ ತೀವ್ರ ಹೋರಾಟವನ್ನು ಸಂಘಟಿಸಲಾಗುವುದು ಎಂದು ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ರಾದ ಡಾ. ರಾಜಶೇಖರ್ ಕೋಟ್ಯಾನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶಂಕರಪುರದಲ್ಲಿ ಎಂಟು ಅಡಿ ಎತ್ತರದ ಗೂಡುದೀಪ - ನಿಸರ್ಗ ಫ್ರೆಂಡ್ಸ್ ಪಾದೆಕೆರೆ

Posted On: 16-11-2020 07:30PM
ಕಳೆದ ಹತ್ತು ಹದಿನೈದು ವರ್ಷಗಳಿಂದ ಶಂಕರಪುರ ಸಮೀಪದ ಇನ್ನಂಜೆಯ ಪಾದೇಕೆರೆ ಎಂಬ ಸಣ್ಣ ಊರಿನಲ್ಲಿ ಯುವಕರು ಕಟ್ಟಿದ ತಂಡವೊಂದು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನೇಕ ಪ್ರತಿಭೆಗಳನ್ನು ಗುರುತಿಸಿ ಜನಮನ್ನಣೆಗೆ ಪಾತ್ರರಾಗಿರುತ್ತಾರೆ.
ನಿಸರ್ಗ ಫ್ರೆಂಡ್ಸ್ ಪಾದೇಕೆರೆ ಕಳೆದ ಹತ್ತು ವರ್ಷದ ಹಿಂದೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗೂಡುದೀಪವನ್ನು ತಯಾರಿಸಿ ಶಂಕರಪುರ ಜಂಕ್ಷನ್ ನಲ್ಲಿ ಹಾಕುತ್ತಿದ್ದರು. ವರ್ಷ ಕಳೆದಂತೆ ಗೂಡುದೀಪದ ಗಾತ್ರದಲ್ಲಿ ಬದಲಾವಣೆ ಮಾಡುತ್ತಿದ್ದರು. ಇದೀಗ ಹತ್ತನೇ ವರ್ಷಕ್ಕೆ 8 ಅಡಿ ಎತ್ತರ 5 ಅಡಿ ಅಗಲದ ಗೂಡುದೀಪ ತಯಾರಿಸಿದ್ದು ಜನರಿಂದ ಬಹಳಷ್ಟು ಉತ್ತಮ ಅಭಿಪ್ರಾಯಗಳು ಕೇಳಿ ಬರುತ್ತಿವೆ.

ರಾಜ್ಯ ಖಾಸಗಿ ಶಿಕ್ಷಕರ ಸಂಘ ಕಾಪು ತಾಲೂಕು ಘಟಕದ ಅಧ್ಯಕ್ಷರಾಗಿ ಚಿತ್ರಲೇಖ ಶೆಟ್ಟಿ ಆಯ್ಕೆ

Posted On: 16-11-2020 07:30PM
ರಾಜ್ಯ ಖಾಸಗಿ ಶಾಲಾ- ಕಾಲೇಜು ಶಿಕ್ಷಕ ಹಾಗೂ ಉಪನ್ಯಾಸಕರ ಸಂಘದ ಕಾಪು ತಾಲೂಕು ಘಟಕದ ಅಧ್ಯಕ್ಷರಾಗಿ ಚಿತ್ರಲೇಖ ಶೆಟ್ಟಿ ಮತ್ತು ಕಾರ್ಯದರ್ಶಿಯಾಗಿ ಲಕ್ಷ್ಮಿಕಾಂತ್ ಆಯ್ಕೆಯಾಗಿರುತ್ತಾರೆ. ಘಟಕದ ಗೌರವ ಅಧ್ಯಕ್ಷರಾಗಿ ವಿದ್ಯಾಧರ ಪುರಾಣಿಕ್, ಉಪಾಧ್ಯಕ್ಷರಾಗಿ ಶೋಭಾ, ಜೊತೆ ಕಾರ್ಯದರ್ಶಿ ಲತಾ, ಕೋಶಾಧಿಕಾರಿ ವಿನುತಾ, ನಿರ್ದೇಶಕರಾಗಿ ಸುರಥ್ ಕುಮಾರ್, ಭವಾನಿ ನಾಯಕ್, ದೀಪಕ್ ಕೆ. ಬೀರ, ಸಂಗೀತ ಆಯ್ಕೆಯಾಗಿರುತ್ತಾರೆ ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಗಣೇಶ್ ಪ್ರಸಾದ್ ಕೆ. ಉಡುಪಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಶಿರ್ವ : ಪ್ರಜ್ವಲ್ ಡಿಜಿಟಲ್ ಸೇವಾ ಕೇಂದ್ರ ಶುಭಾರಂಭ

Posted On: 16-11-2020 07:02PM
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನೇಕ ಸೇವೆಗಳನ್ನು ಒದಗಿಸುವ ಶ್ರೀ ಡಿಜಿಟಲ್ ಸೇವಾ ಸಿಂಧು ಕೇಂದ್ರಗಳು ಪ್ರಮುಖ ಪಾತ್ರವಹಿಸಿರುತ್ತದೆ ಹಾಗೂ ಸಾರ್ವಜನಿಕರಿಗೆ ತಮ್ಮ ಗ್ರಾಮಗಳಲ್ಲೇ ಸರಕಾರಿ ಸೇವೆಗಳು ತಲುಪುವಂತೆ ಡಿಜಿಟಲ್ ಸೇವಾ ಕೇಂದ್ರಗಳಲ್ಲಿ ಇನ್ನೂ ಅನೇಕ ಸೇವೆಗಳಿಗೆ ಉತ್ತೇಜನ ನೀಡಬೇಕಾಗಿದೆ ಎಂದು ಕಾಪು ಶಾಸಕರಾದ ಲಾಲಾಜಿ ಆರ್. ಮೆಂಡನ್ ಹೇಳಿದರು. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಗ್ರಾಮದಲ್ಲಿ ಮೊದಲ ಅಧಿಕೃತ ಆಧಾರ್ ತಿದ್ದುಪಡಿ ಕೇಂದ್ರದ ಉದ್ಘಾಟನೆ ಮಾಡಿ ಮಾತನಾಡಿದರು.

ಸಮಾಜ ಸೇವಕರು ಹಾಗೂ ಶಿರ್ವ ಮಹಾಶಕ್ತಿ ಕೇಂದ್ರದ ಉಪಾಧ್ಯಕ್ಷರಾದ ಪವನ್ ಕುಮಾರ್ ಶಿರ್ವ ಮಾತನಾಡಿ ಪ್ರಜ್ವಲ್ ಡಿಜಿಟಲ್ ಸೇವಾ ಕೇಂದ್ರ ಕಳೆದ ಮೂರು ವರ್ಷಗಳಿಂದ ಶಿರ್ವದ ಜನತೆಗೆ ಒಂದೇ ವೇದಿಕೆಯಡಿಯಲ್ಲಿ ಎಲ್ಲಾ ಸರಕಾರಿ ಸೌಲಭ್ಯಗಳು ಲಭ್ಯವಾಗುವಂತೆ ಜನಪರ ಕಾಳಜಿಯೊಂದಿಗೆ ಸೇವೆಯನ್ನು ನೀಡುತ್ತಾ ಬಂದಿದ್ದು ಶಿರ್ವ ಗ್ರಾಮದ ಉತ್ತಮ ಸೇವಾ ಸಿಂಧು ಕೇಂದ್ರವೆಂದು ಸಾರ್ವಜನಿಕರಲ್ಲಿ ಮಾನ್ಯತೆ ಪಡೆದಿದೆ ಎಂದರು. ಈ ಆಧಾರ್ ತಿದ್ದುಪಡಿ ಕೇಂದ್ರದಲ್ಲಿ ಆಧಾರ್ ಗೆ ಸಂಬಂಧಿಸಿದಂತೆ ಮೊಬೈಲ್ ನಂಬರ್ ಸೇರ್ಪಡೆ, ಹೆಸರು ಬದಲಾವಣೆ, ಜನ್ಮ ದಿನಾಂಕ ಹಾಗೂ ವಿಳಾಸ ಬದಲಾವಣೆ ಮಾಡಬಹುದಾಗಿದೆ ಎಂದು ಸಂಸ್ಥೆಯ ಮಾಲಕರಾದ ಪ್ರಜ್ವಲ್ ಬಿ. ಕುಲಾಲ್ ತಿಳಿಸಿದರು.

ಈ ಸಂದರ್ಭದಲ್ಲಿ ಕಾಪು ತಾಲೂಕು ಪಂಚಾಯತ್ ಅಧ್ಯಕ್ಷರಾದ ಶಶಿಪ್ರಭಾ, ಜಿಲ್ಲಾ ಪಂಚಾಯತ್ ಸದಸ್ಯರಾದ ಶಿಲ್ಪಾ ಸುವರ್ಣ, ನಿವೃತ್ತ ಹೆಡ್ ಕಾನ್ಸ್ಟೇಬಲ್ ಕೆ. ಗಣೇಶ್, ಜಿಲ್ಲಾ ವ್ಯವಸ್ಥಾಪಕರಾದ ನಿತೇಶ್ ಶೆಟ್ಟಿಗಾರ್, ಕಟ್ಟಡ ಮಾಲಿಕರಾದ ಸ್ಟಾನ್ಲಿ ಸಲ್ವೋದರ್ ಡಯಾಸ್, ಉಡುಪಿ ಜಿಲ್ಲ ಸಿಎಸ್ಸಿ ವಿಎಲ್ಇ ಸೊಸೈಟಿ ಅಧ್ಯಕ್ಷರಾದ ರವಿರಾಜ್ ಮಲ್ಪೆ, ಕಾರ್ಯದರ್ಶಿ ಪ್ರಸಾದ್ ಎಚ್, ಮಾಜಿ ಸದಸ್ಯರುಗಳು, ಸಂಸ್ಥೆಯ ಆಡಳಿತ ವರ್ಗ, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರವಿರಾಜ್ ಮಲ್ಪೆ ನಿರೂಪಿಸಿ, ವಂದಿಸಿದರು.
ಕಟಪಾಡಿ ಏಣಗುಡ್ಡೆಯಲ್ಲಿ ಮುಳ್ಳಮುಟ್ಟೆ ಆಚರಣೆ.

Posted On: 16-11-2020 07:11AM
ಹಿಂದಿನ ಕೃಷಿ ಪ್ರಧಾನವಾದ ತುಳುನಾಡಿನಲ್ಲಿ ಜಾನುವಾರುಗಳನ್ನು ಗುಡ್ಡ-ಲಚ್ಚಿಲ್ ಪ್ರದೇಶಗಳಿಗೆ ಮೇಯಲು ಕೊಂಡೊಯ್ಯುತ್ತಿದ್ದ ಕಾಲ.

ಜಾನುವಾರುಗಳನ್ನು ಕಾಯುತ್ತಿದ್ದ ಮಕ್ಕಳು ಮುಳ್ಳು-ಕಸಕಡ್ಡಿಗಳನ್ನು ಒಂದುಕಡೆ ಶೇಖರಿಸಿ ಇಡುವುದು ರೂಢಿಯಲ್ಲಿತ್ತು. ಅಂತಹ ಶೇಖರಿಸಿ ಇಟ್ಟಂತಹ ರಾಷಿಗೆ ದೀಪಾವಳಿಯಂದು ಪ್ರಾಥಕಾಲದಲ್ಲಿ ಊರವರು ಸೇರಿ ಸಾಮೂಹಿಕವಾಗಿ ಬೆಂಕಿಹಚ್ಚಿ ಸುಡುವಂತಹ ಒಂದು ಆಚರಣೆ ಕೆಲವೇ ಕಡೆ ಇಂದಿಗೂ ಚಾಲ್ತಿಯಲ್ಲಿದೆ. ಸಾಂಪ್ರದಾಯಿಕವಾಗಿ ನಡೆಸಲಾಗುವ ಈ ಆಚರಣೆಗೆ ನೂರಾರು ವಷ೯ಗಳ ಇತಿಹಾಸವಿದೆ. ತುಳುನಾಡಿನ ಇಂತಹ ಸಾಂಪ್ರದಾಯಿಕ, ಸಾಂಸ್ಕೃತಿಕ ಆಚರಣೆಗಳು ನಶಿಸಿ ಹೋಗಬಾರದು ಎಂದು ಸಾಹಿತಿ ಕಟಪಾಡಿ ಶಂಕರ ಪೂಜಾರಿ ಹೇಳಿದರು.

ಅವರು ಏಣಗುಡ್ಡೆಯ ನೀಚದೇವಸ್ಥಾನದ ವಠಾರದಲ್ಲಿ ಜರಗಿದ ಮುಳ್ಳಮುಟ್ಟೆ ಸುಡುವ ಕಾಯ೯ಕ್ರಮದಲ್ಲಿ ಮಾತನಾಡಿದರು.
ದೇವಸ್ಥಾನದ ಮುಖ್ಯಸ್ಥ ಆನಂದ ಮಾಬಿಯಾನ್, ಊರಿನ ಗುರಿಕಾರರಾದ ದಾಮೋಧರ.ಕೆ.ಪೂಜಾರಿ, ಸೂರಪ್ಪ ಕುಂದರ್, ವಿನೋಧರ ಪೂಜಾರಿ, ನಾರಾಯಣ ಮದಿಪು, ಹರಿದಾಸ ಶ್ರೀಯಾನ್, ಗಣೇಶ ಮಿತ್ತೋಟ್ಟು, ರಾಜೇಂದ್ರ ಆಚಾಯ೯, ಸಿದ್ಧಾಂತ್.ಎ.ಮಾಬಿಯಾನ್ ಉಪಸ್ಥಿತರಿದ್ದರು. ರಮೇಶ್ ಕೋಟ್ಯಾನ್, ಹಾಗೂ ಕೃಷ್ಣ ಪೂಜಾರಿ ಪೂಜಾ ವಿಧಿಗಳನ್ನು ನೆರವೇರಿಸಿದರು.
ಅನುಮಾನಗಳಿಗೆ ಕಾರಣವಾಗಿದ್ದ ಪರ್ಕಳದ ಗದ್ದೆಯಲ್ಲಿದ್ದ ಕಾರಿನ ವಾರಸುದಾರನನ್ನು ಪತ್ತೆಹಚ್ಚಿದ ಪೊಲೀಸರು

Posted On: 15-11-2020 06:50PM
ಮಣಿಪಾಲ : ಹಲವು ಅನುಮಾನಗಳಿಗೆ ಕಾರಣವಾಗಿದ್ದ ಮಣಿಪಾಲ ಸಮೀಪದ ಕೆಳಪರ್ಕಳದ ಗೋಪಾಲಕೃಷ್ಣ ದೇವಸ್ಥಾನ ಸಮೀಪದ ರಸ್ತೆ ಇಲ್ಲದ ಗದ್ದೆಯಲ್ಲಿ ಎರಡು ದಿನಗಳಿಂದ ನಿಂತಿದ್ದ ಕೇರಳ ತಿರುವನಂತಪುರ ನೋಂದಣಿಯ ಕಾರಿನ ವಾರಸುದಾರರನ್ನು ಮಣಿಪಾಲ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರಿಗೆ ಸರಿಯಾದ ದಾಖಲೆಗಳನ್ನು ನೀಡಿದ ಮಣಿಪಾಲದ ಎಂಬಿಬಿಎಸ್ ವಿದ್ಯಾರ್ಥಿ ಕಾರನ್ನು ರಿವರ್ಸ್ ತೆಗೆಯುವಾಗ ನಿಯಂತ್ರಣ ತಪ್ಪಿ ಗದ್ದೆಗೆ ಇಳಿದಿದೆ. ಪರೀಕ್ಷೆಯ ಒತ್ತಡದಲ್ಲಿ ಇದ್ದುದರಿಂದ ಕಾರನ್ನು ಅಲ್ಲಿಯೇ ಬಿಟ್ಟು ಹೋಗಿರುವುದಾಗಿ ತಿಳಿಸಿದ್ದಾನೆ. ಪರೀಕ್ಷೆ ಮುಗಿದ ಬಳಿಕ ಕಾರನ್ನು ಕ್ರೇನ್ ಸಹಾಯದಿಂದ ತೆಗೆಯಬಹುದೆಂದು ಯೋಚಿಸಿದ್ದೆ ಎಂದಿದ್ದಾನೆ. ಇದೀಗ ಅನುಮಾನಗಳಿಗೆ ತೆರೆ ಎಳೆದಂತಾಗಿದೆ.
ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ ಉಡುಪಿ ತಂಡದಿಂದ ಕಾರುಣ್ಯ ವೃದ್ಧಾಶ್ರಮದಲ್ಲಿ ದೀಪಾವಳಿ ಆಚರಣೆ

Posted On: 15-11-2020 06:24PM
ದಿನಾಂಕ:15.11.2020 ರವಿವಾರ ಇಂದು ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡವು ಕಟಪಾಡಿಯ "ಕಾರುಣ್ಯ" ವೃದ್ಧಾಶ್ರಮಕ್ಕೆ ಭೇಟಿನೀಡಿ ದೀಪಾವಳಿಯನ್ನು ಆಚರಿಸಲಾಯಿತು. ನಿಂಬೆಹಣ್ಣಿನ ಸಿಪ್ಪೆ ಹಾಗೂ ತೆಂಗಿನಕಾಯಿಯ ಗೆರಟೆಯಿಂದ ಮಾಡಿದ ಹಣತೆಯಿಂದ ದೀಪ ಹಚ್ಚಿ ದೀಪಾವಳಿಯನ್ನು ಅಲ್ಲಿಯ ವೃದ್ಧರೊಂದಿಗೆ ಆಚರಿಸಲಾಯಿತು. ತಂಡದ ಸ್ಥಾಪಕಾಧ್ಯಕ್ಷರು ಆದ ಡಾ.ಕೀರ್ತಿ ಪಾಲನ್ ಈ ಕಾರ್ಯಕ್ರಮವನ್ನು ನೆರವೇರಿಸಿದರು. ಬೇಬಿ ಶೆಟ್ಟಿ, ಮೋಕ್ಷ ಪಾಲನ್ ಹಾಗೂ ಜಗದೀಶ್ ಬಂಟಕಲ್ ಉಪಸ್ಥಿತರಿದ್ದರು. ಮೋಕ್ಷ ಪಾಲನ್ ಸಿಹಿತಿಂಡಿ ಹಂಚಿ ಧನ್ಯವಾದ ಸಲ್ಲಿಸಿದರು.
ಮುಂಬೈಯ ಪೇಜಾವರ ಮಠದಲ್ಲಿ ಜಯ ಸುವರ್ಣರಿಗೆ ನುಡಿನಮನ

Posted On: 15-11-2020 05:20PM
ಮುಂಬೈ : ಸಮಾಜವನ್ನು ಪ್ರೀತಿ ಮತ್ತು ವಿಶ್ವಾಸದಿಂದ ಗೆದ್ದ ಜಯ ಸುವರ್ಣರು ದೈವಾಧೀನರಾದ ಸುದ್ದಿ ತುಂಬಾ ವಿಷಾದವನ್ನು ತಂದಿತ್ತು. ಅವರಿಗೆ ನುಡಿನಮನ ನೀಡಬೇಕೆನ್ನುವ ನನ್ನ ಇಚ್ಛೆಗೆ ಭಗವಂತ ಮುಂಬಯಿಯ ಪೇಜಾವರ ಮಠವನ್ನು ಆಯ್ಕೆ ಗೊಳಿಸಿದ್ದೇನೆ. ನಾನು ಈ ನಗರಕ್ಕೆ ಅಪರಿಚಿತ ಆದರೆ ಜಯ ಸುವರ್ಣರು ಅಪಾರ ಸೇವಾಕಾರ್ಯಗಳನ್ನು ಮಾಡಿ ಮುಂಬೈಗೆ ಮಾತ್ರ ಪರಿಚಿತರ ಅಲ್ಲದೇ ಊರಿನಲ್ಲಿ ಅಪಾರ ಪರಿಚಿತರು. ಏಕೆಂದರೆ ಅವರಿಂದ ಊರಿನಲ್ಲಿ ತುಂಬಾ ಕೆಲಸಕಾರ್ಯಗಳು ನಡೆದಿದೆ ಸಮಾಜದ ಬಹಳಷ್ಟು ಅಭಿವೃದ್ಧಿಯಾಗಿದೆ . ಮನುಕುಲವನ್ನು ಪ್ರೀತಿಸಿದ ಜಯ ಸುವರ್ಣರ ಆತ್ಮಕ್ಕೆ ಮೋಕ್ಷ ಪ್ರಾಪ್ತಿಯಾಗಿದೆ ಎಂದು ಉಡುಪಿ ಪೇಜಾವರ ಮಠದ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳು ಸುವರ್ಣರಿಗೆ ನುಡಿನಮನ ಸಲ್ಲಿಸಿದರು ಶ್ರೀಗಳು ನವಂಬರ್ 13 ರಂದು ಸಾಂತಕ್ಲಾಸ್ ಪೂರ್ವದ ಪೇಜಾವರ ಮಠದ ಮದ್ವ ಭವನದ ಶ್ರೀ ವಿಶ್ವೇಶ್ವರ ತೀರ್ಥ ಸಭಾಗೃಹದಲ್ಲಿ ನಡೆದ ಬಿಲ್ಲವ ಸಮಾಜದ ಕುಲರತ್ನ. ಬಿಲ್ಲವರ ಎಸೋಸಿಯೇಶನ್ ನ ಮಾಜಿ ಅಧ್ಯಕ್ಷ ಜಯ ಸುವರ್ಣರ ನುಡಿನಮನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನುಡಿ ನಮನ ಸಲ್ಲಿಸಿದರು ಜಯ ಸುವರ್ಣರು ತನ್ನ ಬದುಕನ್ನು ಮಾತ್ರ ಕಟ್ಟದೆ ಸಮಾಜವನ್ನ ಕಟ್ಟಿ. ಸರ್ವ ಸಮಾಜದ ಬಂಧುಗಳನ್ನು ಪ್ರೀತಿಸಿ ಅವರಿಗೆ ಸದಾ ಸಹಕಾರವನ್ನು ನೀಡುತ್ತಾ ಬಂದವರಾಗಿದ್ದಾರೆ. ನಮ್ಮೆಲ್ಲರ ಬದುಕು ಇನ್ನೊಬ್ಬರ ಶ್ರೇಯಸ್ಸಿಗೆ ಮತ್ತು ಅವರ ಕಷ್ಟ ಸುಖಗಳಿಗೆ ಸ್ಪಂದಿಸುವ ಬದುಕಾಗಬೇಕು ಅದರಲ್ಲಿ ಭಗವಂತನಿರುತ್ತಾನೆ ಅಂತ ಕಾಯಕವನ್ನು ಜಯ ಸುವರ್ಣರ ಬದುಕಿನಲ್ಲಿ ಮಾಡಿದ್ದಾರೆ. ಅವರಿಗೆ ಭಗವಂತ ಸದಾ ಅನುಗ್ರಹ ನೀಡಿರುತ್ತಾನೆ ಜಯ ಸುವರ್ಣರ ಪರಿವಾರಕ್ಕೆ ಶ್ರೀ ದೇವರು ಸದಾ ಆಶೀರ್ವದಿಸಲಿ. ಸತ್ಕಾರ್ಯಗಳನ್ನು ಮಾಡುವ ಬಿಲ್ಲವ ಭವನ . ಬಿಲ್ಲವರ ಭವನವಾಗದೆ ಬಲ್ಲವರ ಭವನವಾಗಲಿ ಎಂದು ನುಡಿದರು.

ಬಿಲ್ಲವರ ಎಸೋಸಿಯೇಷನ್ಅಧ್ಯಕ್ಷ ಚಂದ್ರಶೇಖರ್ ಪೂಜಾರಿಯವರು ನುಡಿನಮನ ಸಲ್ಲಿಸುತ್ತಾ .ನಮ್ಮೆಲ್ಲರ ಬದುಕಿನಲ್ಲಿ ಹುಟ್ಟು ಅನಿರೀಕ್ಷಿತ ಸಾವು ನಿಶ್ಚಿತ .ಈ ನಡುವೆ ನಮ್ಮ ಬದುಕು ಹೇಗಿರಬೇಕು ಎನ್ನುವುದಕ್ಕೆ ಜಯ ಸುವರ್ಣರೇ ಮಾದರಿ. ಎಲ್ಲಾ ಸಮಾಜದವರು ಅವರನ್ನು ಒಪ್ಪುವಂತ ಸೇವೆ ಮಾಡಿದ ಮಹಾನ್ ಚೇತನವನ್ನು ಭಗವಂತ ಬೇಗನೆ ತನ್ನಲ್ಲಿ ಕರೆಸಿಕೊಂಡ. 32ವರ್ಷಗಳ ಒಡನಾಡಿ ನಲ್ಲಿದ್ದ ನನ್ನ ಮತ್ತು ಜಯ ಸುವರ್ಣರ ಸಂಬಂಧ. ಅವರು ಯಾವುದೇ ಜಾತಿಯನ್ನು ಕೇಳಿ ಸಹಯವನ್ನು ಮಾಡಿದವರಲ್ಲ. ಅವರಲ್ಲಿದ್ದ ಸಂಘಟನಾ ಚತುರತೆ ಮತ್ತು ಶಿಸ್ತು .ಸಮಯಪಾಲನೆ ಯಾರಿಂದಲೂ ಸಾಧ್ಯವಾಗದು. ಬಿಲ್ಲವ ಭವನದ ನಿರ್ಮಾಣ. ಊರಿನಲ್ಲಿ ಶಿಕ್ಷಣ ಸಂಸ್ಥೆ ನಿರ್ಮಾಣ ಕಾರ್ಯಗಳು ಜಯ ಸುವರ್ಣರ ಸಾಧನೆಗೆ ಸಾಕ್ಷಿ .ಅವರ ಪರಿವಾರಕ್ಕೆ ಶ್ರೀಕೃಷ್ಣನ ಅನುಗ್ರಹವಿರಲಿ ಅವರು ಇನ್ನಷ್ಟು ಉನ್ನತ ಮಟ್ಟದಲ್ಲಿ ಸಮಾಜದಲ್ಲಿ ಬೆಳೆಯಲಿ ಎಂದು ನನ್ನ ಆರೈಕೆ. ಎಂದು ನುಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಖಾರ್ ಪೂರ್ವದ ಶನಿ ಮಂದಿರದ ಗೌರವ ಅಧ್ಯಕ್ಷ ಶಂಕರ್ ಸುವರ್ಣ ಕುದ್ರೋಳಿ .ಜಯ ಸುವರ್ಣರಿಗೆ ನುಡಿನಮನ ಸಲ್ಲಿಸುತ್ತಾ ನಾರಾಯಣ ಗುರುಗಳ ತತ್ವಗಳನ್ನು ಬದುಕಿನಲ್ಲಿ ಮೈಗೂಡಿಸಿಕೊಂಡು ಅವರು ಮಾಡಿರುವ ಸೇವಾಕಾರ್ಯಗಳು ಅವಿಸ್ಮರಣೀಯವಾಗಿದೆ. ಎಲ್ಲರನ್ನೂ ತನ್ನ ಬಂಧುಗಳ ಎಂದು ಪ್ರೀತಿಸುತ್ತಾ ಗೌರವಿಸುತ್ತಾ ಸಮಾಜವನ್ನು ಕಟ್ಟಿ ಬೆಳೆಸಿದ ಸುವರ್ಣರ. ಇಂದಿನ ಜನಾಂಗಕ್ಕೆ ಆದರ್ಶರಾಗಿದ್ದಾರೆ ಎಂದು ನುಡಿದರು. ಅಂದೇರಿ ಪಶ್ಚಿಮದ ಅದಮಾರು ಮಠದ ಪ್ರಬಂಧಕ ರಾಜೇಶ್ ರಾವ್ ಅವರು ಜಯ ಸುವರ್ಣರು ಸಮಾಜದಲ್ಲಿ ಹೇಗೆ ಕಟ್ಟಿದ್ದಾರೆ ಮತ್ತು ಎಲ್ಲಾ ಸಮಾಜದವರನ್ನು ಕೂಡ ಗೌರವಿಸುತ್ತಿದ್ದರು ಅವರು ನಡೆದ ದಾರಿಯಲ್ಲಿ ಸಮಾಜ ಬೆಳೆಯಬೇಕು. ಕೋರೋಣ ಸಂದರ್ಭದಲ್ಲೂ ಕೂಡ ಅವರ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡ ಜನಸಾಗರವನ್ನು ಕಂಡಾಗ ಅವರು ಸಮಾಜಕ್ಕೆ ನೀಡಿದ ಕೊಡುಗೆ ತಿಳಿಯಬಹುದು ಎಂದು ನುಡಿದರು.

ಪ್ರಪ್ರಥಮ ಬಾರಿಗೆ ಪೇಜಾವರ ಮಠದಲ್ಲಿ ಶ್ರೀಗಳ ಉಪಸ್ಥಿತಿಯಲ್ಲಿ ಸಮಾಜ ಸೇವಕನಿಗೆ ನುಡಿನಮನ : ಸಮಾಜದಲ್ಲಿ ಬಹಳಷ್ಟು ಜನ ತಮ್ಮ ಕರ್ತವ್ಯದ ಸೇವೆಗಳನ್ನು ನಿರ್ವಹಿಸಿಕೊಂಡು ಅಸ್ತಂಗತ ರಾಗುತ್ತಾರೆ ಆದರೆ ಬಿಲ್ಲವ ಸಮಾಜದ ಮುಖಂಡ ಜಯ ಸುವರ್ಣ ಅವರ ಅಗಲುವಿಕೆ ತುಳು ಕನ್ನಡಿಗರಿಗೆ ಬಾಳಷ್ಟು ದುಃಖ ತಂದಿದೆ . ಇದರಿಂದಾಗಿ ಅಷ್ಟಮಠಗಳಲ್ಲಿ ಒಂದಾಗಿರುವ ಪೇಜಾವರಮಠದ ಮಠಾಧೀಶರ ಉಪಸ್ಥಿತಿಯಲ್ಲಿ .ಪೇಜಾವರ ಮಠದಲ್ಲಿ ನುಡಿನಮನ ನಡೆಯುತ್ತಿರುವುದು ಇದು ಮಹಾನಗರದಲ್ಲಿ ಪೇಜಾವರ ಮಠದಲ್ಲಿ ಪ್ರಥಮ ಬಾರಿಗೆ. ಮಠದ ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ದೇಶದ ಪ್ರಮುಖ ನಗರವಾಗಿರುವ ಅಯೋಧ್ಯ. ದೆಹಲಿ .ಲಕ್ನೋ. ಬದ್ರಿನಾಥ್ ನಂತ ಪವಿತ್ರ ಕ್ಷೇತ್ರಗಳ ಯಾತ್ರೆಗಳನ್ನು ಮುಗಿಸಿ ಪೇಜಾವರ ಮಠದಲ್ಲಿ ಜಯ ಸುವರ್ಣರ ನುಡಿನಮನ ದಲ್ಲಿ ಉಪಸ್ಥಿತರಿದ್ದು ಅವರ ಪರಿವಾರವನ್ನು ಮತ್ತು ಸಮಾಜಕ್ಕೆ ಎಂದು ಹರಸಿದರು.

ಕಾರ್ಯಕ್ರಮವನ್ನು ಪೇಜಾವರ ಮಠದ ಪ್ರಬಂಧಕ ಡಾ. ರಾಮದಾಸ್ ಉಪಾಧ್ಯಾಯ ನಿರೂಪಿಸುತ್ತಾ ಪೇಜಾವರಶ್ರೀಗಳ ಯೋಜನೆಗಳು ತಿಳಿಸಿದ ಬಳಿಕ ಜಯ ಸುವರ್ಣರ ಬದುಕಿನ ಸಾಧನೆಗಳನ್ನು ತಿಳಿಸಿದರು ಸಭೆಯಲ್ಲಿ ಜಯ ಸುವರ್ಣರ ಸುಪುತ್ರ ಸೂರ್ಯಕಾಂತ್ ಜಯ ಸುವರ್ಣ. ಅಳಿಯ ಭಾಸ್ಕರ್ ಎಂ ಸುವರ್ಣ. ಬಾವ ರಾಮ ಸುವರ್ಣ ಗೊರೆಗಾವ್ ಮತ್ತು ದೇವೇಂದ್ರ ಬಂಗೇರ. ಬಿಲ್ಲವರ ಅಸೋಸಿಯೇಶನ್ ಕಾರ್ಯದರ್ಶಿ ರವೀಂದ್ರ ಶಾಂತಿ . ಅಸೋಸಿಯೇಷನ್ ಧಾರ್ಮಿಕ ಉಪ ಸಮಿತಿಯ ಕಾರ್ಯ ಧ್ಯಕ್ಷ ಮೋಹನದಾಸ್ ಜಿ ಪೂಜಾರಿ ಯುವ ಅಭ್ಯುದಯದ ಕಾರ್ಯ ಅಧ್ಯಕ್ಷ ನಾಗೇಶ್ ಕೋಟ್ಯಾನ್. ಸ್ಥಳೀಯ ಮಾಜಿ ನಗರ ಸೇವಕ ಶೇಖರ್ ಸಾಲ್ಯಾನ್ ಹಾಗೂ ಪೇಜಾವರ ಮಠದ ಪ್ರಬಂಧಕರಾದ ಪ್ರಕಾಶ್ ಆಚಾರ್ಯ ನಿರಂಜನ್ ಭಟ್ ಹರಿ ಭಟ್ ಮತ್ತು ಮುಕುಂದ್ ಭಟ್ . .ಪವನ್ ಆಚಾರ್ಯ. ಆದ್ಯ ಭಟ್. ಹಾಗೂ ಅಪಾರ ಜಯ ಸುವರ್ಣರ ಅಭಿಮಾನಿಗಳು ಪಾಲ್ಗೊಂಡು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಪೇಜಾವರ ವಿಶ್ವ ಪ್ರಸನ್ನ ತೀರ್ಥರಿಂದ ಒಣ ಹುಲ್ಲು ಅಭಿಯಾನಕ್ಕೆ ಚಾಲನೆ

Posted On: 15-11-2020 05:04PM
ಕಾಮದೇನು ಗೋಸೇವಾಸಮಿತಿ ಮಂದಾರ್ತಿ ನೇತ್ರತ್ವದಲ್ಲಿ ಅನಾಥ ಗೋವುಗಳ ಸಂರಕ್ಷಣೆ ಮಾಡುತ್ತಿರುವ ಗೋಶಾಲೆಗಳಿಗೆ ಮೇವನ್ನು ನೀಡುವ ಗೋವಿಗಾಗಿ ಮೇವು ಅಭಿಯಾನ ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಯಶಸ್ವಿಯಾಗಿ ಸಾಗುತ್ತಿದ್ದು ಗೋಪೂಜಾ ದಿನವಾದ ಇಂದು ಪೇಜಾವರ ವಿಶ್ವಪ್ರಸನ್ನ ತೀರ್ಥರುಗೋಪೂಜೆ ಮಾಡಿ ಒಣಹುಲ್ಲು ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪೇಜಾವರ ಶ್ರೀಪಾದರು ಉಡುಪಿ ಜಿಲ್ಲೆಯಲ್ಲಿ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಯವರ ನೇತ್ರತ್ವದಲ್ಲಿ ಆರಂಭಗೊಂಡ ಗೋವಿಗಾಗಿ ಮೇವು ಅಭಿಯಾನ ಇಂದು ಚಿಕ್ಕಮಗಳೂರು ಜಿಲ್ಲೆಯಲ್ಲೂ ಯಶಸ್ವಿಯಾಗಿರುವುದು ಹೆಮ್ಮೆಯ ವಿಚಾರ ಎಂದರು ಹಾಗೇಯೇ ಒಣಹುಲ್ಲು ಅಭಿಯಾನ ಇಂದಿನಿಂದ ಆರಂಭಗೊಂಡಿದ್ದು ಜಿಲ್ಲೆಯ ಎಲ್ಲಾ ಸಂಘಟನೆಗಳು ಭಾಗವಹಿಸಿ ಗೋಪಾಲಕ್ರಷ್ಣನ ಅನುಗ್ರಹಕ್ಕೆ ಪಾತ್ರರಾಗಿ ಎಂದರು, ಈ ದಿನದ ಪ್ರಥಮ ಸೇವೆಯಾಗಿ ಉಡುಪಿ ಶಾಸಕಾರದ ರಘುಪತಿ ಭಟ್ ಅವರು ಗೌರವ ಅದ್ಯಕ್ಷರಾಗಿರುವ ಕರಂಬಳ್ಳಿ ಪ್ರೆಂಡ್ಸ್ ತಾವೇ ಹಡಿಲು ಬಿದ್ದ ಭೂಮಿಯಲ್ಲಿ ಬೆಳೆದ ಒಣಹುಲ್ಲನ್ನು ಶ್ರೀಗಳಿಗೆ ಹಸ್ತಾಂತರಿಸಿದರು ಈ ಸಂದರ್ಭದಲ್ಲಿ ಗೋವಿಗಾಗಿ ಮೇವು ಸಂಚಾಲಕ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ,ಉಡುಪಿ ನಗರಸಭಾ ಸದಸ್ಯ ಗಿರಿಧರ್ ಆಚಾರ್ಯ ಕರಂಬಳ್ಳಿ,ಸಂಸ್ತೆಯ ಸ್ಥಾಪಕಾದ್ಯಕ್ಷರಾದ ಪ್ರಸನ್ನ ಶೆಟ್ಟಿ ,ಹಿರಿಯ ಅಂಕಣಕಾರ ರಾಘವೇಂದ್ರ ಪ್ರಭು ಕರ್ವಾಲ್ ,ಗೋವಿಗಾಗಿ ಮೇವು ಅಬಿಯಾನದ ಉಲ್ಲಾಸ್ ಅಮೀನ್ ಕೂರಾಡಿ,ಪವನ್ ಶೆಟ್ಟಿ ಐರೋಡಿ ಉಪಸ್ಥಿತರಿದ್ದರು.
ರಂಗವಲ್ಲಿಯಲ್ಲಿ ದೇವರ ಚಿತ್ರವ ಮೂಡಿಸುವ ಕಲಾಕಾರ ಹರೀಶ್ ಶಾಂತಿ

Posted On: 15-11-2020 02:40PM
ನಾವು ಒಬ್ಬ ಕಲಾವಿದನ ಬಗ್ಗೆ ತಿಳಿಯುವ ಮುಂಚೆ ಮತ್ತು ಕಲೆಯ ಬಗ್ಗೆ ತಿಳಿದುಕೊಳ್ಳಬೇಕಾದ ಅವಶ್ಯಕತೆ ಖಂಡಿತವಾಗಿ ಇದೆ. ಕಲೆಯ ಬಗ್ಗೆ ಚೊಕ್ಕದಾಗಿ ಹೇಳುವುದಾದರೆ ಮಾನವನ ವಿಶಿಷ್ಟ ಚಟುವಟಿಕೆಯನ್ನು ಕಲೆ ಅಂತ ಹೇಳಬಹುದು. ಕಲಾವಿದನೆಂದರೆ ಕಲೆಯನ್ನು ಸೃಷ್ಟಿಸುವವ, ಅಭ್ಯಾಸ ಮಾಡುವವ ಅಥವಾ ಕಲೆಯನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ. ಎಲ್ಲಾ ರೀತಿಯಾದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರನ್ನು ಕಲಾವಿದ ಅಂತ ಗುರುತಿಸಬಹುದು. ಮನದಿ ಮೂಡಿದ ಅಸ್ಥಿರ ಬಿಂಬಕ್ಕೆ ಸುಸ್ಥಿರ ರೂಪ ನೀಡುವವ, ಪದ ಮತ್ತು ರಾಗಕ್ಕೆ ನಿಲುಕ್ಕದ್ದನ್ನು ಬಣ್ಣಗಳ ಮೂಲಕ, ಕಂಡದ್ದನ್ನು ಕಂಡ ಹಾಗೆ ಕಾಣದ್ದನ್ನು ಕಾಣುವಹಾಗೆ ಬಿಂಬಿಸುವ, ಎಂತಹ ಮನಸ್ಸನ್ನು ಬೇಕಾದರೂ ಕೇಂದ್ರೀಕೃತ ಮಾಡಬಲ್ಲ, ಮನದಲ್ಲಿ ಭಕ್ತಿಭಾವ ಮೂಡಿಸಬಲ್ಲ ರಂಗೋಲಿ ಚಿತ್ರಕಾರ ಇವರೇ ಹರೀಶ್ ಶಾಂತಿ.

ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಎನ್ನುವ ಮಾತಿನಂತೆ ಸ್ವಾಧಿಸಿದವರಿಗೇ ಗೊತ್ತು ಈತನ ರಂಗೋಲಿಯ ಸೊಬಗು. ಮೂಲತ: ಬಂಟ್ವಾಳದ ಪಂಜಿಕಲ್ಲು ನಿವಾಸಿಯಾದ ಇವರು ದಿವಂಗತ ವಿಶ್ವನಾಥ ಪೂಜಾರಿ ಮತ್ತು ಸುಶೀಲಾ ದಂಪತಿಗಳ ದ್ವಿತೀಯ ಪುತ್ರ. ಪ್ರಾಥಮಿಕ ವಿದ್ಯಾಭ್ಯಾಸವನ್ನು ದಡ್ಡಲಕಾಡು ಹಾಗೂ ಪ್ರೌಢಶಿಕ್ಷಣವನ್ನು ಕ್ರಿಸ್ತಜ್ಯೋತಿ ಶಾಲೆ ಅಗ್ರಾರದಲ್ಲಿ ಮುಗಿಸಿ ತದನಂತರ ತಂದೆಯ ಆಸೆಯಂತೆ ಮುಂದಿನ ವಿದ್ಯಾಭ್ಯಾಸವನ್ನು ಪೌರೋಹಿತ್ಯದೆಡೆಗೆ ಸಾಗಿಸಿದರು. ಕುದ್ರೋಳಿಯ ಗೋಕರ್ಣಾಥ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದ ಸರ್ಟಿಫಿಕೇಟ್ ಕೋರ್ಸ್ ಇನ್ ವೇದ ತಂತ್ರಮ್ ವಿಷಯವಾಗಿ ಅಭ್ಯಸಿಸಿದರು. ನಂತರ ಕಟೀಲಿನಲ್ಲಿ ಕೂಡ ತನ್ನ ವೈದಿಕ ಅಧ್ಯಯನವನ್ನು ಮುಂದುವರಿಸಿ, ಕುದ್ರೋಳಿ ಗೋಕರ್ಣಾಥ ಕ್ಷೇತ್ರದಲ್ಲಿ ತನ್ನ ವೃತ್ತಿಜೀವನವನ್ನು ಆರಂಭಿಸಿದರು. ನಂತರ ಉಡುಪಿಯ ಕಟಪಾಡಿ ವಿಶ್ವನಾಥ ಕ್ಷೇತ್ರದಲ್ಲಿ ಕೂಡ ವೃತ್ತಿಗೈದಿರುತ್ತಾರೆ. ತದನಂತರ ಲೋಕೇಶ್ ಶಾಂತಿ ಮತ್ತು ವಸಂತ್ ಶಾಂತಿ ಎಂಬುವರೊಂದಿಗೆ ಜೊತೆಗೂಡಿರುತ್ತಾರೆ.

ವೈದಿಕದ ಜೊತೆಯಲ್ಲಿ ಚಿತ್ರಕಲೆಯಲ್ಲೂ ಅಪಾರ ಆಸಕ್ತಿಯನ್ನು ಹೊಂದಿರುವ ಇವರು ವೈದಿಕತೆಗೆ ಸಂಬಂಧಿಸಿದಂತಹ ರಂಗೋಲಿಯನ್ನು ಬಿಡಿಸುವ ಮುಖಾಂತರವೇ ತನ್ನ ಆಸಕ್ತಿಯ ಕಲೆಯನ್ನು ಹೊರ ಚಿಮ್ಮಿಸಿದವರು. ಇವರ ಜೀವನವು ರಂಗೋಲಿ ಆಸಕ್ತಿಗೆ ಇನ್ನೂ ಹೆಚ್ಚು ಒಲವು ಮೂಡುವಲ್ಲಿ ವಸಂತ್ ಶಾಂತಿಯವರ ಪಾತ್ರವನ್ನು ಕೂಡ ಮುಖ್ಯವೆನ್ನಬಹುದು. ವಸಂತ್ ಶಾಂತಿಯವರ ಜೊತೆ ವೃತ್ತಿಗೂಡಿದಾಗ ಸಿಕ್ಕ ಅವಕಾಶಗಳು ಮತ್ತು ವಸಂತ್ ಶಾಂತಿಯವರ ಪ್ರೋತ್ಸಾಹವೇ ಉತ್ತಮ ರಂಗೋಲಿ ಕಲಾಕಾರರನ್ನಾಗಿಸಿದ್ದು ಅಂದರೆ ತಪ್ಪಿಲ್ಲ.

ಸುಮಾರು ಹದಿನೈದು ವರ್ಷಗಳಿಂದ ಈ ಕಾರ್ಯದಲ್ಲಿ ತೊಡಗಿರುವವರು ಇದುವರೆಗೂ ಸುಮಾರು ಎರಡು ಸಾವಿರದಿಂದ ಮೂರು ಸಾವಿರದವರೆಗೆ ರಂಗೋಲಿಗಳನ್ನು ಬಿಡಿಸಿ ಜನಮನ್ನಣೆ ಗಳಿಸಿದ್ದಾರೆ. ಇವರು ಕೇವಲ ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲೂ ತನ್ನ ಪ್ರತಿಭೆಯನ್ನು ಗುರುತಿಸಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲ ವೃತ್ತಿಯಲ್ಲಿ ಪೌರೋಹಿತ್ಯ ಆರಿಸಿಕೊಂಡ ಇವರು ಇನ್ನೊಂದು ಅದ್ಭುತವನ್ನು ಹೊಂದಿದ್ದಾರೆ. ಅದೇನೆಂದರೆ ಮಂತ್ರ ಪಠಣೆಗೆ ಕುಳಿತರೆ ಎಲ್ಲರನ್ನೂ ನಿಬ್ಬೆರಗಾಗಿಸಿ ಮಂತ್ರಮುಗ್ಧರನ್ನಾಗಿಸುವ ಸ್ವರ ಮಾಂತ್ರಿಕ ಅನ್ನಬಹುದು. ಇವರ ಇಂತಹ ಅತ್ಯದ್ಭುತ ಪ್ರತಿಭೆಗೆ ಇನ್ನಷ್ಟು ಜನ ಮನ್ನಣೆ ಸಿಗಬೇಕು. ಇನ್ನಷ್ಟು ಎತ್ತರಕ್ಕೆ ಬೆಳೆಯಲು ಇಂತಹ ಕಲಾರತ್ನಗಳಿಗೆ ನಾವೆಲ್ಲ ಪ್ರೋತ್ಸಾಹಕರಾಗಿರಬೇಕು. ನಮ್ಮ ನಾಡಿನಲ್ಲಿ ಕಲೆಯು ನಿರಂತರವಾಗಿ ಹರಿಯುವಂತಾಗಬೇಕು. ಲೇಖನ :ಸಂಧ್ಯಾ ಬಂಟ್ವಾಳ್