Updated News From Kaup

ಕಾಪು : ಮಳೆ ಸಂದರ್ಭದಲ್ಲಿ ಸೂಕ್ತ ಮುಂಜಾಗ್ರತ ಕ್ರಮ ಕೈಗೊಳ್ಳಲು ವಿವಿಧ ಇಲಾಖೆಗಳಿಗೆ ಶಾಸಕರಿಂದ ಸೂಚನೆ

Posted On: 11-06-2024 11:53AM

ಕಾಪು : ಕರಾವಳಿಗೆ ಈಗಾಗಲೇ ಮುಂಗಾರು ಪ್ರವೇಶಗೊಂಡಿದ್ದು, ಪ್ರಸಕ್ತ ಸಾಲಿನಲ್ಲಿ ಗಾಳಿ ಮಳೆ ಜೋರಿರುವ ಬಗ್ಗೆ ಹವಾಮಾನ ಇಲಾಖೆ ವರದಿ ನೀಡಿರುತ್ತದೆ. ಈ ನಿಟ್ಟಿನಲ್ಲಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರು ವಿವಿಧ ಇಲಾಖೆಗಳಿಗೆ ಮುಂಜಾಗ್ರತ ಕ್ರಮ ಕೈಗೊಳ್ಳಲು ಪತ್ರದ ಮೂಲಕ ಸೂಚಿಸಿದ್ದಾರೆ.

ನಿರಂತರ ವಿದ್ಯುತ್ ಪೂರೈಕೆಯ ನಿಟ್ಟಿನಲ್ಲಿ, ವಿದ್ಯುತ್ ಅವಘಡ ಹಾಗೂ ಹಾನಿ ತಪ್ಪಿಸಲು ರಸ್ತೆ ಇಕ್ಕೆಲಗಳಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳು ಹಾಗೂ ಮರಗಳ ಗೆಲ್ಲುಗಳನ್ನು ತೆರವುಗೊಳಿಸುವುದು ಹಾಗೂ ಅಪಾಯಕಾರಿ ಹಳೆಯ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವುದು ಮತ್ತು ಹಳೆಯ ವಿದ್ಯುತ್ ತಂತಿಗಳನ್ನು ತೆರವುಗೊಳಿಸಿ ಹೊಸ ವಿದ್ಯುತ್ ತಂತಿಗಳನ್ನು ಅಳವಡಿಸುದು, ಸಾರ್ವಜನಿಕರಿಂದ ತಮ್ಮ ಇಲಾಖೆಗೆ ವಿದ್ಯುತ್ ವ್ಯತ್ಯಯ ಸಂಬಂಧಿ ದೂರುಗಳು ಬಂದಲ್ಲಿ ಶೀಘ್ರ ಸ್ಪಂದನೆ ನೀಡಿ ಕ್ರಮ ಕೈಗೊಳ್ಳುವ ಬಗ್ಗೆ ಮೆಸ್ಕಾಂ ಇಲಾಖಾಧಿಕಾರಿಗಳಿಗೆ ಹಾಗೂ ಮಳೆ ನೀರು ಹರಿಯುವ ಚರಂಡಿಗಳಲ್ಲಿ ಹೂಳು ತುಂಬಿದ್ದು, ರಸ್ತೆಯ ಮೇಲೆ ನೀರು ಹರಿದು ಜನ-ವಾಹನ ಸಂಚಾರಕ್ಕೆ ಅನಾನುಕೂಲವಾಗಿರುತ್ತದೆ

ಆದ್ದರಿಂದ ಪುರಸಭಾ ವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿ ಮಳೆ ನೀರು ಹರಿಯುವ ಚರಂಡಿಗಳಲ್ಲಿರುವ ಹೂಳುಗಳನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲು ಕ್ರಮ ಕೈಗೊಳ್ಳುವುದು. ಹಾಗೆಯೇ ಮುಂದುವರೆದು ಪುರಸಭಾ ವ್ಯಾಪ್ತಿಯಲ್ಲಿನ ಕೆರೆ ಹಾಗೂ ಮದಗಗಳಲ್ಲಿ ನೀರು ತುಂಬಿ ಕೊಂಡಿದ್ದು, ಸೂಚನಾ ಫಲಕಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸುವಂತೆ ಇರಿಸುವುದು ಹಾಗೂ ಆಳ ಗುಂಡಿಗಳನ್ನು ಮ್ಯಾನ್ ಹೋಲ್ ಗಳನ್ನು ಮುಚ್ಚಿ ಸಾರ್ವಜನಿಕರಿಗೆ ಅಪಾಯಕಾರಿ ದುರ್ಘಟನೆಗಳು ಆಗದಂತೆ ಕ್ರಮ ಕೈಗೊಳ್ಳುವುದು ಹಾಗೂ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮತ್ತು ಹಿಂದಿನ ವರ್ಷದಲ್ಲಿ ರಸ್ತೆಯ ಇಕ್ಕೆಲಗಳಲ್ಲಿರುವ ಅಪಾಯಕಾರಿ ಮರಗಳಿಂದ ಸಾರ್ವಜನಿಕ ಆಸ್ತಿ-ಪಾಸ್ತಿ ಹಾಗೂ ಜೀವ ಹಾನಿ ಆಗಿದ್ದು, ಸದ್ರಿ ವರ್ಷಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸುವುದು ಅತ್ಯಗತ್ಯವಾಗಿರುತ್ತದೆ.

ರಸ್ತೆಯ ಇಕ್ಕೆಲಗಳಲ್ಲಿರುವ ಅಪಾಯಕಾರಿ ಮರ ಹಾಗೂ ಗೆಲ್ಲುಗಳನ್ನು ತೆರವುಗೊಳಿಸುವರೇ ಹಾಗೂ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ವಲಯ ಅರಣ್ಯಾಧಿಕಾರಿಗಳಿಗೆ ಜೊತೆಗೆ ಮಳೆ ನೀರು ಹರಿಯುವ ಚರಂಡಿಗಳಲ್ಲಿ ಹೂಳು ತುಂಬಿದ್ದು, ರಸ್ತೆಯ ಮೇಲೆ ನೀರು ಹರಿದು ಜನ-ವಾಹನ ಸಂಚಾರಕ್ಕೆ ಅನಾನುಕೂಲವಾಗಿರುತ್ತದೆ. ಆದ್ದರಿಂದ ಲೋಕೋಪಯೋಗಿ ಇಲಾಖಾ ರಸ್ತೆಯ ಮಳೆ ನೀರು ಹರಿಯುವ ಪ್ರಮುಖ ಚರಂಡಿಗಳಲ್ಲಿರುವ ಹೂಳುಗಳನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲು ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವುದು ಹಾಗೂ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಮತ್ತು ಮಳೆ ನೀರು ಹರಿಯುವ ಚರಂಡಿಗಳಲ್ಲಿ ಹೂಳು ತುಂಬಿದ್ದು, ರಸ್ತೆಯ ಮೇಲೆ ನೀರು ಹರಿದು ಜನ-ವಾಹನ ಸಂಚಾರಕ್ಕೆ ಅನಾನುಕೂಲವಾಗಿರುತ್ತದೆ. ಆದ್ದರಿಂದ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಮಳೆ ನೀರು ಹರಿಯುವ ಪ್ರಮುಖ ಚರಂಡಿಗಳಲ್ಲಿರುವ ಹೂಳುಗಳನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲು ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವುದು ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಡಿವೈಡರ್ ಅನ್ನು ಸಮರ್ಪಕವಾಗಿ ಅಳವಡಿಸಿ ಪ್ರತಿಫಲಕಗಳನ್ನು ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಿಗಳಿಗೆ ತೋರುವ ಹಾಗೆ ಅಳವಡಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಸೂಚಿಸಲಾಗಿದೆ.

ಕಟಪಾಡಿ : ಧರ್ಮ, ರಾಷ್ಟ್ರ ಯೋಧರ ರಕ್ಷಣೆಗಾಗಿ ಶ್ರೀ ಸಾಯಿ ಈಶ್ವರ್ ಗುರೂಜಿ 108 ದಿನ 108 ದೇವಸ್ಥಾನ ಪ್ರದಕ್ಷಿಣೆ

Posted On: 11-06-2024 11:50AM

ಕಟಪಾಡಿ : ಶ್ರೀ ಸಾಯಿ ಮುಖ್ಯ ಪ್ರಾಣದೇವಸ್ಥಾನ ಶ್ರೀ ದ್ವಾರಕಾಮಯಿ ಮಠದ ಪೀಠಾಧೀಶರು ಮತ್ತು ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಾಯಿಈಶ್ವರ್ ಗುರೂಜಿಯವರು ಧರ್ಮ, ರಾಷ್ಟ್ರ ಯೋಧರ ರಕ್ಷಣೆಗಾಗಿ ಜೂನ್ 14 ರಿಂದ ಸಪ್ಟೆಂಬರ್‌ 29 ರವರೆಗೆ 108 ದಿನ 108 ದೇವಸ್ಥಾನ ಪ್ರದಕ್ಷಿಣೆ ಕೈಗೊಂಡಿದ್ದಾರೆ.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಜೂನ್ 14 ರಂದು ಬೆಳಿಗ್ಗೆ 9 ಕ್ಕೆ ಈ ಮಹಾ ಸಂಕಲ್ಪಕ್ಕೆ ಚಾಲನೆ ಕೊಟ್ಟು ಧರ್ಮ, ರಾಷ್ಟ್ರ, ಯೋಧರ ರಕ್ಷಣೆಯ ಬಗ್ಗೆ ನಿತ್ಯ ಪ್ರಾರ್ಥನೆಗಾಗಿ ಮನವಿ ನೀಡಲಿದ್ದಾರೆ.

ಕ್ಷೇತ್ರ ದರ್ಶನದ ನೆನಪಿಗಾಗಿ ಬಿಲ್ವಪತ್ರೆಯ ಗಿಡವನ್ನು ದೇವಸ್ಥಾನದ ವಠಾರದಲ್ಲಿ ನೆಡಲಿದ್ದಾರೆ. ಶ್ರೀ ಕ್ಷೇತ್ರ ಶಂಕರಪುರದಲ್ಲಿ ನಡೆಯುವ ಎಲ್ಲಾ ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳು ಎಂದಿನಂತೆ ಮುಂದುವರಿಯುತ್ತದೆ. ಗುರುಗಳ ಸಾರ್ವಜನಿಕ ಭೇಟಿ ಸಾಂತ್ವನ ಕಾರ್ಯಕ್ರಮಗಳ ಬಗ್ಗೆ ಕಚೇರಿಯನ್ನು ಸಂಪರ್ಕಿಸಬಹುದು. ಗುರುಗಳು ಭೇಟಿ ನೀಡುವ ಕ್ಷೇತ್ರಗಳ ಬಗ್ಗೆ ಮಾಹಿತಿಯನ್ನು ಮೊದಲು ತಿಳಿಸಲಾಗುವುದು ಧರ್ಮ, ರಾಷ್ಟ್ರಕ್ಕಾಗಿ ಭಕ್ತರು ಗುರುಗಳ ಜೊತೆ ಸೇರಿ ಪ್ರಾರ್ಥನೆಯಲ್ಲಿ ಭಾಗವಹಿಸಬಹುದು ಎಂದು ಮಠದ ಪ್ರಕಟಣೆ ತಿಳಿಸಿದೆ.

ಕಾರ್ಕಳ : ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ಐದು ವಿದ್ಯಾರ್ಥಿಗಳಿಗೆ ಜೆ.ಇ.ಇ ಅಡ್ವಾನ್ಸ್ಡ್‌ನಲ್ಲಿ ಅರ್ಹತೆ

Posted On: 09-06-2024 07:00PM

ಕಾರ್ಕಳ : ದೇಶದ ಪ್ರತಿಷ್ಠಿತ IIT, IIST, IISc ನಂತಹ ಸಂಸ್ಥೆಗಳಲ್ಲಿ ಬಿ.ಟೆಕ್ (B.Tech) ಪದವಿ ಪ್ರವೇಶಕ್ಕೆ ನಡೆಯುವ ರಾಷ್ಟ್ರಮಟ್ಟದ ಅತೀ ಕಠಿಣವಾದ ಜೆ.ಇ.ಇ (JEE) ಅಡ್ವಾನ್ಸ್ಡ್‌ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ಸುಜಿತ್ ಡಿ. ಕೆ, ಕೆ ಧ್ರುವ ಬಂಡಾರ್ಕರ್,ಅರ್ಜುನ್ ಇ ನಾಯಕ್, ಕಾರ್ತಿಕ್ ಎ. ಎಸ್, ಶಮಿತ್ ಎನ್ ಉನ್ನತ ರ‍್ಯಾಂಕ್‌ನೊಂದಿಗೆ ತೇರ್ಗಡೆ ಹೊಂದಿದ್ದಾರೆ. ಅದರಲ್ಲಿ ಸುಜಿತ್ ಡಿ ಕೆ 3648, ಅರ್ಜುನ್ ಇ ನಾಯಕ್ 3298, ಕೆ ಧ್ರುವ ಬಂಡಾರ್ಕರ್ 4260ನೇ ಕೆಟಗರಿ ರ‍್ಯಾಂಕ್‌ ಗಳಿಸಿ ವಿಶೇಷ ಸಾಧನೆ ಗೈದಿದ್ದಾರೆ.

ಈ ಮೂಲಕ ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳ ಪ್ರವೇಶಕ್ಕೆ ನಡೆಯುವ ಆಯ್ಕೆ ಪ್ರಕ್ರಿಯೆಗೆ ಅರ್ಹರಾಗಿದ್ದಾರೆ. ಸಂಸ್ಥೆಯು ಆರಂಭದ ವರ್ಷಗಳಲ್ಲೇ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಉನ್ನತ ಫಲಿತಾಂಶ ಗಳಿಸುವ ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ.

ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ಉಪನ್ಯಾಸಕೇತರ ವರ್ಗದವರು, ಜೆ.ಇ.ಇ ಅಡ್ವಾನ್ಸ್ಡ್‌ ಪರೀಕ್ಷೆಯ ಸಂಯೋಜಕರಾದ ತಿರುಮಲ ರೆಡ್ಡಿ ರವರು ಅಭಿನಂದನೆ ಸಲ್ಲಿಸಿದ್ದಾರೆ.

ಕಾಪು : ಶ್ರೀ ದೇವಿ ಫ್ರೆಂಡ್ಸ್ ಮಲ್ಲಾರು ರಾಣ್ಯಕೇರಿ ಕಾಪು - ದಿ. ಕಾಪು ಲೀಲಾಧರ ಶೆಟ್ಟಿ ಸ್ಮರಣಾರ್ಥ ರಾಣೆಯಾರ್ ಸಮಾಜದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ

Posted On: 09-06-2024 06:54PM

ಕಾಪು : ಶ್ರೀ ದೇವಿ ಫ್ರೆಂಡ್ಸ್ ಮಲ್ಲಾರು ರಾಣ್ಯಕೇರಿ ಕಾಪು ಇದರ ನೇತೃತ್ವದಲ್ಲಿ ದಿ. ಕಾಪು ಲೀಲಾಧರ ಶೆಟ್ಟಿ ಇವರ ಸ್ಮರಣಾರ್ಥ ರಾಣೆಯಾರ್ ಸಮಾಜದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವು ಕೋಟೆ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಸಭಾಂಗಣದಲ್ಲಿ ರವಿವಾರ ಜರಗಿತು.

ಕಾರ್ಯಕ್ರಮವನ್ನು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭ ಅವರು ಕಾಪು ಲೀಲಾಧರ ಶೆಟ್ಟಿಯವರು ಹಾಗೂ ಅವರ ಕೊಡುಗೆಗಳನ್ನು ಸ್ಮರಿಸಿ ಅವರೊಂದಿಗಿನ ಒಡನಾಟವನ್ನು ಮೆಲುಕು ಹಾಕಿದರು. ಶೈಕ್ಷಣಿಕ ವಿದ್ಯಾಭ್ಯಾಸ ಮಾತ್ರವಲ್ಲದೆ ಬದುಕಿನ ಮೌಲ್ಯವನ್ನು ತಿಳಿ ಹೇಳಿ, ಲೀಲಾಧರ ಶೆಟ್ಟಿ ಅವರ ಸಮಾಜ ಸೇವೆಯನ್ನು ಮಾದರಿಯಾಗಿ ಇಟ್ಟುಕೊಂಡು ಇಂದಿನ ಮಕ್ಕಳು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ತಲುಪಬೇಕೆಂದು ಸಂದೇಶ ನೀಡಿದರು. ಶ್ರೀದೇವಿ ಫ್ರೆಂಡ್ಸ್ ಕಾರ್ಯಕ್ರಮವನ್ನು ಶ್ಲಾಘಿಸಿ, ಮುಂದೆಯೂ ಇಂತಹ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆಯೂ, ತಮ್ಮ ಬೆಂಬಲ ಸದಾ ಇರುತ್ತದೆ ಎಂದು ಶುಭ ಹಾರೈಸಿದರು.

ಈ ಸಂದರ್ಭ ಮಾರಿಗುಡಿಯ ಗುರಿಕಾರರುಗಳಾದ ಶೇಖರ ರಾಣ್ಯ, ಎಂ. ಬಾಬು ರಾಣ್ಯ, ರಾಘು, ಸಮಾಜದ ಪ್ರಮುಖರಾದ ಬಿ ಕೆ ಶ್ರೀನಿವಾಸ, ಜಯ ರಾಣ್ಯ, ರವೀಂದ್ರ ಮಲ್ಲಾರ್, ಸಾಧು ರಾಣ್ಯ, ವಿಟ್ಟು, ರಾಣೆಯಾರು ಸಮಾಜ ಸೇವಾ ಸಂಘ ಕಾಪು ಇದರ ಅಧ್ಯಕ್ಷರಾದ ನಾಗಾರ್ಜುನ ಕಾಪು, ಶ್ರೀದೇವಿ ಫ್ರೆಂಡ್ಸ್ ಅಧ್ಯಕ್ಷರಾದ ಸೂರಜ್, ಉಪಾಧ್ಯಕ್ಷೆ ರಮ್ಯ ಉಪಸ್ಥಿತರಿದ್ದರು.

ಸಾನ್ವಿತ್ ಪ್ರಾರ್ಥಿಸಿದರು. ಪ್ರಕಾಶ್ ಎಸ್ ನಿರೂಪಿಸಿದರು.

ಪಡುಬಿದ್ರಿ : ಆಸ್ಪೆನ್‌ ಇನ್ಫ್ರಾ ಪಡುಬಿದ್ರಿ ಪ್ರೈ.ಲಿ. - ಸಿಎಸ್ಆರ್ ನಿಧಿಯಿಂದ 20 ಲಕ್ಷ ರೂ. ಮೊತ್ತದ ವಿವಿಧ ಸವಲತ್ತುಗಳ ವಿತರಣೆ

Posted On: 09-06-2024 12:10PM

ಪಡುಬಿದ್ರಿ : ಆಸ್ಪೆನ್‌ ಇನ್ಫ್ರಾ ಪಡುಬಿದ್ರಿ ಪ್ರೈ.ಲಿ. ಸಂಸ್ಥೆ ವತಿಯಿಂದ ಮಣಿಪಾಲದ ಭಾರತೀಯ ವಿಕಾಸ್ ಟ್ರಸ್ಟ್ ಸಹಯೋಗದಲ್ಲಿ ಶನಿವಾರ ಪಡುಬಿದ್ರಿ ಬಂಟರ ಭವನದಲ್ಲಿ ಜರಗಿದ 2023-24ನೇ ಸಾಲಿನ ಸಿಎಸ್‌ಆರ್ ಯೋಜನೆಯ ವಿವಿಧ ಸವಲತ್ತುಗಳ ಹಸ್ತಾಂತರ ಕಾರ್ಯಕ್ರಮವನ್ನು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಆಸ್ಪೆನ್ ಇನ್ಫ್ರಾ ಕಂಪೆನಿಯು ಬಂದ ಲಾಭಾಂಶದ ಪಾಲನ್ನು ಸಮಾಜಕ್ಕೆ ನೀಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಇಂತಹ ಸಮಾಜಮುಖಿ ಕಾರ್ಯ ಹೆಚ್ಚು ಹೆಚ್ಚು ನಡೆಯಬೇಕು ಎಂದು ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.

20 ಲಕ್ಷ ರೂ. ಮೊತ್ತದ ಸವಲತ್ತು ವಿತರಣೆ : ಸಿಎಸ್‌ಆರ್ ಯೋಜನೆಯಲ್ಲಿ ಪಡುಬಿದ್ರಿಯ 3 ಶಾಲೆ, 3 ಅಂಗನವಾಡಿ, ಪಾದೆಬೆಟ್ಟು ದೇವಸ್ಥಾನ, ಪಡುಬಿದ್ರಿ, ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 20 ಮಹಿಳೆಯರಿಗೆ ಸೋಲಾ‌ರ್ ಆಧಾರಿತ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಆಸ್ಪೆನ್‌ ಇನ್ಫ್ರಾ ಸಂಸ್ಥೆಯ ಮಹಾ ಪ್ರಬಂಧಕ ಅಶೋಕ್ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿ, ಕಂಪನಿ ಪ್ರತಿ ವರ್ಷ ಸಿಎಸ್‌ಆರ್ ಯೋಜನೆ ಮೂಲಕ ಪಡುಬಿದ್ರಿ, ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ.ದೇವಿಪ್ರಸಾದ್‌ ಶೆಟ್ಟಿ, ಕೆಪಿಸಿಸಿ ಕೊಆರ್ಡಿನೇಟರ್ ನವೀನ್ ಚಂದ್ರ ಶೆಟ್ಟಿ ಮಾತನಾಡಿದರು.

ಈ ಸಂದರ್ಭ ಶಶಿಧರ ಶೆಟ್ಟಿ, ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್, ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ, ಭಾರತೀಯ ವಿಕಾಸ್ ಟ್ರಸ್ಟ್‌ನ ಜಗದೀಶ್‌ ಪೈ, ಬಿಜೆಪಿ ಉಡುಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಪೂಜಾರಿ, ಸದಸ್ಯ ಅಬ್ದುಲ್ ಅಜೀಜ್, ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ ಉಪಸ್ಥಿತರಿದ್ದರು. ಆಸ್ಪೆನ್‌ ಇನ್ಫ್ರಾ ಸಂಸ್ಥೆಯ ಮಹಾ ಪ್ರಬಂಧಕ ಅಶೋಕ್ ಶೆಟ್ಟಿ ಸ್ವಾಗತಿಸಿದರು. ಡಾ.ಸುಧೀರ್ ರಾಜ್ ನಿರೂಪಿಸಿದರು. ರಾಘವೇಂದ್ರ ವಂದಿಸಿದರು.

ಪಡುಬಿದ್ರಿ : ಎಸ್.ಬಿ.ವಿ.ಪಿ. ಹಿ.ಪ್ರಾ. ಶಾಲೆ ಹಾಗೂ ಗಣಪತಿ ಪ್ರೌಢ ಶಾಲೆ - ಶೈಕ್ಷಣಿಕ ಬಾಂಡ್, ಇಂಗ್ಲಿಷ್ ಸ್ಪೀಕಿಂಗ್ ತರಗತಿ

Posted On: 09-06-2024 11:37AM

ಪಡುಬಿದ್ರಿ : ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬಳಿ ಇರುವ ಅದಮಾರು ಮಠ ಶಿಕ್ಷಣ ಮಂಡಳಿಯ ಆಡಳಿತಕ್ಕೆ ಒಳಪಟ್ಟ 104 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ ಎಸ್.ಬಿ.ವಿ.ಪಿ. ಹಿರಿಯ ಪ್ರಾಥಮಿಕ ಶಾಲೆ ಹಾಗೂ ಗಣಪತಿ ಪ್ರೌಢ ಶಾಲೆಯಲ್ಲಿ 2024-2025 ನೇ ಶೈಕ್ಷಣಿಕ ವರ್ಷದಲ್ಲಿ ಒಂದನೇ ಮತ್ತು ಎಂಟನೇ ತರಗತಿಗೆ ಪ್ರವೇಶ ಪಡೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬಾಂಡ್ ನೀಡಲು ಪಡುಬಿದ್ರಿ ಗಣಪತಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ, ಶಾಲಾ ಹಳೆ ವಿದ್ಯಾರ್ಥಿ ಮುಂಬಯಿ ಉದ್ಯಮಿ ಪೃಥ್ವಿರಾಜ್ ಹೆಗ್ಡೆ ನಿರ್ಧರಿಸಿದ್ದಾರೆ.

ಇದರಂತೆ 1 ನೇ ತರಗತಿಗೆ ಸೇರ್ಪಡೆಗೊಳ್ಳುವ ಪುಟಾಣಿಗಳ ಹೆಸರಲ್ಲೇ 3000 ರೂ. ಮತ್ತು 8 ನೇ ತರಗತಿಗೆ ಸೇರ್ಪಡೆಯಾಗುವ ವಿದ್ಯಾರ್ಥಿಗಳಿಗೆ 2000 ರೂ. ಗಳ ಶೈಕ್ಷಣಿಕ ಬಾಂಡ್ ನೀಡಲು ನಿರ್ಧರಿಸಲಾಗಿದೆ.

ವಿದ್ಯಾರ್ಥಿಗಳ ಶಾಲಾ ವಿದ್ಯಾಭ್ಯಾಸದ ಬಳಿಕ ಅವರಿಗೆ ಮರಳಿ ದೊರೆಯಲಿದೆ. ಹಾಗೆಯೇ ಪ್ರಾಥಮಿಕ ಶಾಲೆ (1-7) ಯ ಎಲ್ಲಾ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಸ್ಪೀಕಿಂಗ್ ತರಗತಿಯನ್ನು ಪರಿಣಿತ ಶಿಕ್ಷಕರು ನಡೆಸಲಿದ್ದು, ಇದಕ್ಕೆ ಅವಶ್ಯಕವಿರುವ 350ರೂ. ಮೌಲ್ಯದ ಸ್ಪೀಕಿಂಗ್ ಕೋರ್ಸ್ ಪುಸ್ತಕವನ್ನೂ ಉಚಿತವಾಗಿ ನೀಡಲಾಗುವುದು. ಅತ್ಯುತ್ತಮ ಶೈಕ್ಷಣಿಕ ಗುಣಮಟ್ಟವುಳ್ಳ ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುತ್ತಿದೆ.

ಉಚಿತ ಸಮವಸ್ತ್ರ, ಪಠ್ಯಪುಸ್ತಕ ಮೊದಲಾದ ಸವಲತ್ತುಗಳನ್ನು ಮೊದಲೇ ಇಲ್ಲಿ ನೀಡಲಾಗುತ್ತಿತ್ತು. ಈಗ ರೂಪಿಸಲಾಗಿರುವ ಶೈಕ್ಷಣಿಕ ಬಾಂಡ್ ಯೋಜನೆಯ ಮೂಲಕ ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸಿ ಬೆಳೆಸುವ ಪ್ರಯತ್ನದತ್ತ, ವಿದ್ಯಾರ್ಥಿಗಳ ದಾಖಲಾತಿಯನ್ನು ಹೆಚ್ಚಿಸುವತ್ತ ಶಿಕ್ಷಣ ಪ್ರೇಮಿ ಪೃಥ್ವಿರಾಜ್ ಹೆಗ್ಡೆ ದಿಟ್ಟ ಹೆಜ್ಜೆ ಇರಿಸಿರುವುದಾಗಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಕರಂದ, ಸದಸ್ಯರಾದ ಕಸ್ತೂರಿ ರಾಮಚಂದ್ರ, ಪೂರ್ಣಿಮಾ, ರಮಾಕಾಂತ್ ರಾವ್ ತಿಳಿಸಿದ್ದಾರೆ.

ಶಿರ್ವ : ಅನಾರೋಗ್ಯದಿಂದ ಬಳಲುತ್ತಿದ್ದ ಯೋಧ ಮಹಮ್ಮದ್‌ ಸಲೀಂ ನಿಧನ

Posted On: 08-06-2024 08:22PM

ಶಿರ್ವ : ತಾಲೂಕಿನ ಬೆಳ್ಳೆ ಕುಂತಳನಗರ ನಿವಾಸಿ ಭಾರತೀಯ ಸೇನೆಯಲ್ಲಿ ಕರ್ತವ್ಯದಲ್ಲಿದ್ದ ಯೋಧ ಮೊಹಮ್ಮದ್‌ ಸಲೀಂ (35) ಅವರು ಜೂನ್ 7ರಂದು ಅನಾರೋಗ್ಯದಿಂದ ಬೆಂಗಳೂರಿನ ಮಿಲಿಟರಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಭಾರತೀಯ ಭೂ ಸೇನೆಯ 196 ಆರ್ಟಿ ರೆಜಿಮೆಂಟ್‌ನ ಜಮ್ಮು-ಕಾಶ್ಮೀರ, ದೆಹಲಿ ಮತ್ತು ಸಿಕಂದರಾಬಾದ್‌ನಲ್ಲಿ 14ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಹರ್ಯಾಣದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಿಡ್ನಿ ವೈಫಲ್ಯದಿಂದ ಅನಾರೋಗ್ಯಕ್ಕೆ ತುತ್ತಾದ ಅವರನ್ನು ಬೆಂಗಳೂರಿನ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಾಯಿ ಹಾಗೂ ಪತ್ನಿ ಕಿಡ್ನಿ ದಾನ ಮಾಡಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

ಕಾಪು ಶಾಸಕ ಸುರೇಶ್‌ ಶೆಟ್ಟಿ ಗುರ್ಮೆ ಮೃತರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಕಾಪು ತಹಶೀಲ್ದಾರ್‌ ಡಾ| ಪ್ರತಿಭಾ ಆರ್‌ ಅವರು ಶನಿವಾರ ಮೃತರ ನಿವಾಸಕ್ಕೆ ತೆರಳಿ ಯೋಧನ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

ಬೆಳ್ಳೆ ಗ್ರಾಮ ಆಡಳಿತಾಧಿಕಾರಿ ಪ್ರದೀಪ್‌ ಕುಮಾರ್‌, ಬೆಳ್ಳೆ ಗ್ರಾ.ಪಂ. ಮಾಜಿ ಅಧ್ಯಕ್ಷ ಸುಧಾಕರ ಪೂಜಾರಿ, ಮೃತರ ಪತ್ನಿ, ತಂದೆ, ತಾಯಿ, ಸಹೋದರ ಯೋಧ ಮಹಮ್ಮದ್‌ ಬುಹ್ರಾಮ್‌ ಮೊದಲಾದವರು ಉಪಸ್ಥಿತರಿದ್ದರು. ಮೃತರು ತಂದೆ, ತಾಯಿ, ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಮಣಿಪುರ ಖಬರಸ್ತಾನದಲ್ಲಿ ಶನಿವಾರ ಸಕಲ ಸರಕಾರಿ ಗೌರವಗಳೊಂದಿಗೆ ಯೋಧ ಮಹಮ್ಮದ್‌ ಸಲೀಂ ಅವರ ಅಂತಿಮ ಸಂಸ್ಕಾರ ನಡೆಯಿತು.

ಜೂನ್ 8 ರಿಂದ 11 ರವರೆಗೆ ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಣೆ

Posted On: 08-06-2024 06:19PM

ಉಡುಪಿ : ಮುಂದಿನ ಮೂರು ದಿನಗಳಲ್ಲಿ ಕರಾವಳಿ ಕರ್ನಾಟಕದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರೆಡ್ ಅಲರ್ಟ್ ಘೋಷಿಸಿದೆ.

ಕರಾವಳಿ ಭಾಗದಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದೆ. ಮುಂದಿನ ಎರಡು ಮೂರು ದಿನಗಳ ಕಾಲ ಕರಾವಳಿ ಕರ್ನಾಟಕದಲ್ಲಿ ಭಾರಿ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. ಜೂನ್ 8 ಮತ್ತು 9 ರಂದು ರೆಡ್ ಅಲರ್ಟ್, ಜೂನ್ 11 ಮತ್ತು 12 ರಂದು ಆರೆಂಜ್ ಅಲರ್ಟ್ ಜಾರಿಯಲ್ಲಿರುತ್ತದೆ. ಮುಂದಿನ ಐದು ದಿನಗಳ ಕಾಲ ಮೀನುಗಾರರಿಗೆ ಹೊರಹೋಗದಂತೆ IMD ಎಚ್ಚರಿಕೆ ನೀಡಿದೆ.

IMD ಪ್ರಕಾರ, ಮುಂದಿನ ಏಳು ದಿನಗಳಲ್ಲಿ ಕರಾವಳಿ ಪ್ರದೇಶದಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಹೆಚ್ಚಿನ ವೇಗದ ಗಾಳಿಯೊಂದಿಗೆ ಭಾರೀ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ.

ಯುವಕ ನಾಪತ್ತೆ : ಪತ್ತೆಗಾಗಿ ಮನವಿ

Posted On: 08-06-2024 05:30PM

ಕಾಪು : ತಾಲೂಕಿನ ಮೂಳೂರು ಗ್ರಾಮದ ಪ್ರೀತಂ ಎಂಬ ಯುವಕ ಗುರುವಾರದಿಂದ ನಾಪತ್ತೆಯಾಗಿರುತ್ತಾನೆ.

ಪತ್ತೆಯಾದಲ್ಲಿ ಈ ಸಂಖ್ಯೆ 7204146368 ಸಂಪರ್ಕಿಸುವಂತೆ ವಿನಂತಿಸಿದ್ದಾರೆ.

ಕಾಪುವಿನಲ್ಲಿ ನಾಪತ್ತೆಯಾದ ಯುವಕನ ಮೃತದೇಹ ಕಡೆಕಾರು- ಪಡುಕೆರೆ ಬಳಿ ಸಮುದ್ರದಲ್ಲಿ ಪತ್ತೆ

Posted On: 07-06-2024 06:56PM

ಕಾಪು : ಇಲ್ಲಿ ನಾಪತ್ತೆ ಆಗಿದ್ದ ಕಾಪು ಪಡುಗ್ರಾಮದ ಕರಣ್ ಸಾಲ್ಯಾನ್ (20) ಮೃತದೇಹ ಕಡೆಕಾರು- ಪಡುಕೆರೆ ಬಳಿಯ ಸಮುದ್ರದಲ್ಲಿ ಶುಕ್ರವಾರ ಸಂಜೆಯ ವೇಳೆಗೆ ಪತ್ತೆಯಾಗಿದೆ.

ಗುರುವಾರ ಸಂಜೆಯಿಂದ ನಾಪತ್ತೆ ಆಗಿದ್ದ ಕರಣ್ ಸಾಲ್ಯಾನ್ ರವರ ಬೈಕು, ಮೊಬೈಲ್ ಹಾಗೂ ಪರ್ಸ್ ಕಾಪು ಲೈಟ್ ಹೌಸ್ ಬಳಿಯ ಶ್ರೀಯಾನ್ ಸದನ ಮನೆಯ ಬಳಿ ಶುಕ್ರವಾರ ಬೆಳಗ್ಗೆ ಪತ್ತೆಯಾಗಿತ್ತು. ಈ ಬಗ್ಗೆ ತಂದೆ ತುಳಸಿ ಸಾಲ್ಯಾನ್‌ರವರು ಕಾಪು ಠಾಣೆಗೆ ನಾಪತ್ತೆ ದೂರು ಸಲ್ಲಿಸಿದ್ದರು.

ಸ್ಥಳೀಯರು, ಈಜುಗಾರರು ಶುಕ್ರವಾರ ಬೆಳಗಿನಿಂದಲೇ ಸಮುದ್ರದಲ್ಲಿ ಹುಡುಕಾಟ ನಡೆಸಿದ್ದು, ಸಂಜೆಯ ವೇಳೆ ಮಲ್ಪೆ ಬಳಿಯ ಪಡುಕೆರೆ ಕಡೆಕಾರು ಸಮುದ್ರದಲ್ಲಿ ಮೃತದೇಹ ತೇಲುತ್ತಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಸ್ಥಳೀಯರು ಮೃತದೇಹವನ್ನು ಸಮುದ್ರದಿಂದ ಹೊರತೆಗೆದಿದ್ದಾರೆ. ಕರಣ್ ಕುಟುಂಬಿಕರು ಘಟನಾ ಸ್ಥಳಕ್ಕೆ ತೆರಳಿ ಮೃತದೇಹದ ಗುರುತು ಪತ್ತೆ ಮಾಡಿದ್ದಾರೆ.

ಕಾಪುವಿನ ಸಮಾಜಸೇವಕ ಸೂರಿ ಶೆಟ್ಟಿಯವರು ಮೃತದೇಹವನ್ನು ಉಡುಪಿ ಅಜ್ಜರ ಕಾಡು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದರು. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.