Updated News From Kaup
ಕುತ್ಯಾರು ಯುವಕ ಮಂಡಲಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
Posted On: 08-11-2023 05:49PM
ಕಾಪು : ಕುತ್ಯಾರು ಯುವಕ ಮಂಡಲ ( ರಿ.) ಕುತ್ಯಾರು 1963 ರಲ್ಲಿ ಸ್ಥಾಪನೆ ಗೊಂಡು 60 ವರ್ಷಗಳಿಂದ ಸ್ಥಳೀಯವಾಗಿ ಶೈಕ್ಷಣಿಕ ಕ್ಷೇತ್ರ, ಕ್ರೀಡಾ ಕ್ಷೇತ್ರ, ಕೃಷಿ ಕ್ಷೇತ್ರ, ಕಲಾ ಕ್ಷೇತ್ರ, ಉದ್ಯೋಗ ಕಾರ್ಯಕ್ರಮ, ರಾಷ್ಟ್ರೀಯ ಹಬ್ಬ, ಪರಿಸರ ಸಂರಕ್ಷಣೆ, ರಕ್ತದಾನ ಇನ್ನಿತರ ಸಮಾಜ ಸೇವೆಗಳನ್ನು ಮಾಡಿಕೊಂಡು ಬಂದಿರುತ್ತದೆ.
ಯುವಕ ಮಂಡಲದ ಸೇವೆಯನ್ನು ಮನಗೊಂಡು ಪ್ರಸ್ತುತ 2023 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪಡುಬಿದ್ರಿ ಆರೋಗ್ಯ ಕೇಂದ್ರ : ಆರೋಗ್ಯ ರಕ್ಷಾ ಸಮಿತಿ ಸಭೆ
Posted On: 08-11-2023 05:45PM
ಪಡುಬಿದ್ರಿ : ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಇದರ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಇಂದು ಜರಗಿತು.
ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಕಲಾ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ನೀತಾ ಗುರುರಾಜ್, ಪ್ರಕಾಶ್ ಪಾದೆಬೆಟ್ಟು, ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಜಶ್ರೀ ಹಾಗೂ ಆರೋಗ್ಯ ರಕ್ಷಾ ಸಮಿತಿ ಸದಸ್ಯರು, ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ದಾದಿಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ನವೆಂಬರ್ 9 : ಕಟಪಾಡಿಯಲ್ಲಿ ಆಯುಷ್ ಆರೋಗ್ಯ ಶಿಬಿರ
Posted On: 08-11-2023 11:58AM
ಕಟಪಾಡಿ : ಆಯುಷ್ ಇಲಾಖೆ, ಉಡುಪಿ, ಜಿಲ್ಲಾ ಪಂಚಾಯತ್ ಉಡುಪಿ, ಪತಂಜಲಿ ಯೋಗ ಸಮಿತಿ ಉಡುಪಿ ಕಟಪಾಡಿ ಕಕ್ಷೆ, ಕಟಪಾಡಿ ಗ್ರಾಮ ಪಂಚಾಯತ್, ಎಸ್.ವಿ.ಎಸ್. ಹಳೆವಿದ್ಯಾರ್ಥಿ ಸಂಘ ಕಟಪಾಡಿ, ಮಹಿಳಾ ಮಂಡಲ ಕಟಪಾಡಿ, ಕೋಟೆ ಗ್ರಾಮ ಪಂಚಾಯತ್, ರೋಟರಿ ಕ್ಲಬ್ ಕಟಪಾಡಿ, ಸೃಷ್ಠಿ ಫೌಂಡೇಶನ್ ಕಟಪಾಡಿ, ಎಸ್.ವಿ.ಎಸ್.ವಿದ್ಯಾವರ್ಧಕ ಸಂಘ ಕಟಪಾಡಿ ಇವರ ಜಂಟಿ ಆಶ್ರಯದಲ್ಲಿ ಜಿಲ್ಲಾ ಆಯುರ್ವೇದ ಆಸ್ಪತ್ರೆ ಉಡುಪಿ ಇದರ ರಾಷ್ಟ್ರೀಯ ಅಯುಷ್ ಅಭಿಯಾನದ ಯೋಜನೆಯಡಿ ನವೆಂಬರ್ 9ರಂದು ಬೆಳಗ್ಗೆ 9.30ರಿಂದ 12.30ರ ವರೆಗೆ ಕಟಪಾಡಿ ಮಹಿಳಾ ಮಂಡಲ ಸಭಾ ಭವನದಲ್ಲಿ ಆಯುಷ್ ಆರೋಗ್ಯ ಶಿಬಿರ ನಡೆಯಲಿದೆ.
ಈ ಶಿಬಿರದಲ್ಲಿ ಆಯುರ್ವೇದ ಪದ್ಧತಿಯಲ್ಲಿ ಚಿಕಿತ್ಸೆ ನೀಡಲಾಗುವುದು. ಈ ಶಿಬಿರದಲ್ಲಿ ಅಸ್ತಮಾ, ಗ್ಯಾಸ್ಟಿಕ್, ವಾತವ್ಯಾಥಿ ಮತ್ತು ಸ್ತ್ರೀ ಸಂಬಂಧಿ ಖಾಯಿಲೆಗಳು ಹಾಗೂ ಎಲ್ಲಾ ರೀತಿಯ ಖಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಶಿಬಿರದಲ್ಲಿ ಉಡುಪಿ ಜಿಲ್ಲಾ ಆಯುಷ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ದಿನಕರ್ ಡೋಂಗ್ರೆ, ತಜ್ಞ ವೈದ್ಯರಾದ ಡಾ.ಸ್ವಾತಿ ಆರೋಗ್ಯ ತಪಾಸಣೆ ನಡೆಸಲಿರುವರು.
ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕಾಗಿ ಸಂಘಟಕರಾದ ಪ್ರಕಾಶ ಸುವರ್ಣ ಕಟಪಾಡಿ ಹಾಗೂ ನಾಗೇಶ್ ಕಾಮತ್ ಕಟಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಲಿಮಾರು : ನಿರಂತರ ಪರಿಶ್ರಮ ಮಾತ್ರ ಯಶಸ್ಸನ್ನು ದೊರಕಿಸಿಕೊಡಬಲ್ಲುದು - ಸುಧಾಕರ್ ಶೆಣೈ
Posted On: 07-11-2023 06:23PM
ಪಲಿಮಾರು : ಹಿರಿಯರು ಕಟ್ಟಿ ಬೆಳೆಸಿದ ಸುಂದರ ಸಂಸ್ಥೆ ಪಲಿಮಾರಿನ ಸರಕಾರಿ ವಿದ್ಯಾ ಸಂಸ್ಥೆ. ಎಲ್ಲಾ ರೀತಿಯ ಸೌಕರ್ಯಗಳಿರುವ ಈ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಬೇಕು, ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳನ್ನು ಈ ವಿದ್ಯಾಸಂಸ್ಥೆಗೆ ಸೇರಿಸಲು ಮುಂದೆ ಬರಬೇಕು ಎಂಬುದಾಗಿ ಸರಕಾರಿ ಪ್ರೌಢಶಾಲೆಯ ಪಲಿಮಾರು ಇಲ್ಲಿಯ ಕನ್ನಡ ಶಿಕ್ಷಕರಾದ ಸುಧಾಕರ್ ಶೆಣೈ ಹೇಳಿದರು. ಅವರು ನವೆಂಬರ್ 7ರಂದು ಸರಕಾರಿ ಪದವಿ ಪೂರ್ವ ಕಾಲೇಜು ಪಲಿಮಾರು ಇಲ್ಲಿ ನಡೆದ ಪೋಷಕರ ಮತ್ತು ವಿದ್ಯಾರ್ಥಿಗಳ ಸಭೆಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಅವರಿಗಿಂತ ನಿಮ್ಮ ಜೀವನ ಮಟ್ಟ ಒಳ್ಳೆಯದಾಗಬೇಕು ಎನ್ನುವುದು ನಿಮ್ಮ ಪೋಷಕರ ಅಭಿಲಾಷೆ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸತತ ಪ್ರಯತ್ನ ಮಾಡಿ, ಜೀವನದಲ್ಲಿ ಯಶಸ್ವಿಗಳಾಗಬೇಕು. ಯಶಸ್ಸಿಗೆ ಯಾವುದೇ ಅಡ್ಡ ದಾರಿಗಳಿಲ್ಲ. ನಿರಂತರ ಪರಿಶ್ರಮ ಮಾತ್ರ ಯಶಸ್ಸನ್ನು ದೊರಕಿಸಿಕೊಡಬಲ್ಲುದು ಎಂಬುದಾಗಿ ಅವರು ತಿಳಿಸಿದರು.
ಸಂಸ್ಥೆಯ ಪ್ರಾಂಶುಪಾಲರಾದ ಗ್ರೆಟ್ಟಾ ಮೊರಾಸ್ ಮಾತನಾಡಿ, ಪಲಿಮಾರಿನ ವಿದ್ಯಾರ್ಥಿಗಳು ತುಂಬಾ ಶಿಸ್ತು, ವಿನಯ ಮತ್ತು ವಿಧೇಯತೆ ಇರುವ ಮಕ್ಕಳು. ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ ಮಾತ್ರವಲ್ಲ, ತಪ್ಪದೆ ತರಗತಿಗಳಿಗೆ ಹಾಜರಾಗುತ್ತಾರೆ ಎಂಬುದಾಗಿ ವಿದ್ಯಾರ್ಥಿಗಳನ್ನು ಮತ್ತು ಪೋಷಕರನ್ನು ಅಭಿನಂದಿಸಿದರು. ಸಮಯ ಪ್ರಜ್ಞೆಯನ್ನು ಬೆಳೆಸುವಲ್ಲಿ ಹೆಚ್ಚಿನ ಆಸಕ್ತಿ ತೋರಿಸಬೇಕು ಎಂಬುದಾಗಿ ಅವರು ತಿಳಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಪ್ರಸಾದ್ ಪಲಿಮಾರ್ ಮಾತನಾಡಿ, ಸಂಸ್ಥೆಯಲ್ಲಿ ಯಾವುದೇ ಕುಂದು ಕೊರತೆಗಳಿದ್ದಲ್ಲಿ ಪೋಷಕರು ನೇರವಾಗಿ ಕೇಳಬಹುದು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬಿ.ಕಾಂ ಮತ್ತು ಎಂ.ಕಾಮ್ ನಲ್ಲಿ ಪ್ರಥಮ ಬ್ಯಾಂಕ್ ಗಳಿಸಿದ ನಿಮ್ಮ ಪ್ರಾಂಶುಪಾಲರನ್ನೇ ಮೀರಿಸು ಸಾಧನೆಯನ್ನು ನೀವು ಮಾಡಬೇಕು ಎಂದು ಕರೆ ಕೊಟ್ಟರು.
ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರೂ, ಪಲಿಮಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷರೂ ಆಗಿರುವ ರಾಯೇಶ್ವರ್ ಪೈ, ಪೋಷಕ ಪ್ರತಿನಿಧಿಗಳಾದ ಪ್ರಸನ್ನ, ತುಳಸಿ, ರೇಖಾ ಹಾಗೂ ನಳಿಸಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಡೆದ ಕಾಪು ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಕನ್ನಡ ಉಪನ್ಯಾಸಕಿ ಜ್ಯೋತಿ ಸ್ವಾಗತಿಸಿ, ವಾಣಿಜ್ಯ ಉಪನ್ಯಾಸಕಿ ಸ್ವಾತಿ ಪ್ರದೀಪ್ ವಂದಿಸಿದರು. ಅರ್ಥಶಾಸ್ತ್ರ ಉಪನ್ಯಾಸಕರು ಜೊತೆ ಜೊತೆ ಸೇರಿ ಒಂದು ಪವಿತ್ರ ಕೆ ಕಾರ್ಯಕ್ರಮ ನಿರೂಪಿಸಿದರು.
ಶಿರ್ವ : ಶ್ರೀ ವಿಶ್ವ ಬ್ರಾಹ್ಮಣ ಯುವ ಸಂಗಮದ ಮಹಾಸಭೆ ; ಮಹಿಳಾ ಬಳಗದ ಪದಗ್ರಹಣ
Posted On: 06-11-2023 09:25PM
ಶಿರ್ವ : ಇಲ್ಲಿನ ಶ್ರೀ ವಿಶ್ವ ಬ್ರಾಹ್ಮಣ ಯುವ ಸಂಗಮ (ರಿ.) ಇದರ ಮಹಾಸಭೆ ಮತ್ತು ಮಹಿಳಾ ಬಳಗದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಕಾಪು ಶ್ರೀ ಕಾಳಿಕಾ ಭಜನಾ ಮಂಡಳಿಯ ಅಧ್ಯಕ್ಷರಾದ ರೇಖಾ ಶ್ರೀಕಾಂತ್ ಆಚಾರ್ಯ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಮಾತನಾಡಿ ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆ ಮುಂದುವರಿಸಿಕೊಂಡು ಹೋಗುವಲ್ಲಿ ನಮ್ಮ ಪಾತ್ರ ಗಣನೀಯವಾಗಿದೆ ಎಂದರು.
ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ಧನ ಆಚಾರ್ಯ ಮಾತನಾಡಿ ರಾಜಕೀಯವಾಗಿ ನಾವು ಸಬಲರಾಗಿರಬೇಕಾದರೆ ನಮ್ಮಲ್ಲಿ ಒಗ್ಗಟ್ಟಿರಬೇಕು. ಆಗ ಮಾತ್ರ ನಮ್ಮನ್ನು ಸಮಾಜ ಗುರುತಿಸುತ್ತದೆ ಎಂದರು. ಈ ಸಂದರ್ಭ ಜನಾರ್ಧನ ಆಚಾರ್ಯರನ್ನು ಸನ್ಮಾನಿಸಲಾಯಿತು.
ಗೌರವಾಧ್ಯಕ್ಷ ಸುರೇಶ್ ಆಚಾರ್ಯ, ಮಹಿಳಾ ಬಳಗದ ಅಧ್ಯಕ್ಷೆ ಸುಮತಿ ಆಚಾರ್ಯ, ನೂತನ ಅಧ್ಯಕ್ಷೆ ಸಹನಾ ಗಣೇಶ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹಿಳಾ ಬಳಗದ ಸದಸ್ಯರು ಪ್ರಾರ್ಥಿಸಿದರು. ಯುವ ಸಂಗಮದ ಕೋಶಾಧಿಕಾರಿ ಪ್ರಶಾಂತ ಆಚಾರ್ಯ ಲೆಕ್ಕಪತ್ರ ಮಂಡಿಸಿದರು. ಪ್ರೀತಿ ಆಚಾರ್ಯ ವರದಿ ವಾಚಿಸಿದರು. ಮಂಜುಳಾ ಆಚಾರ್ಯ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು. ಅಧ್ಯಕ್ಷ ಉಮೇಶ್ ಆಚಾರ್ಯ ಸ್ವಾಗತಿಸಿ, ಮಾಧವಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಶಿರ್ವ : ಬಾಲ ಸಂಸ್ಕಾರ ಕೇಂದ್ರ ಉದ್ಘಾಟನೆ
Posted On: 06-11-2023 09:15PM
ಶಿರ್ವ : ವಿಶ್ವಹಿಂದು ಪರಿಷದ್ ಭಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ವಿಷ್ಣುಮೂರ್ತಿ ಘಟಕದ ಆಶ್ರಯದಲ್ಲಿ ಬಾಲ ಸಂಸ್ಕಾರ ಕೇಂದ್ರ ಉದ್ಘಾಟನಾ ಸಮಾರಂಭ ಶಿರ್ವ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು.
ದೇವಸ್ಥಾನದ ಪ್ರದಾನ ಅರ್ಚಕರಾದ ರಘುಪತಿ ಗುಂಡುಭಟ್ ಉದ್ಘಾಟನೆ ಮಾಡಿದರು.
ವಿಷ್ಣುಮೂರ್ತಿದೇವಸ್ಥಾನದ ಆಡಳಿತ ಮಂಡಳಿಯ ಕೋಶಾಧಿಕಾರಿಯಾದ ರತ್ನವರ್ಮ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ವಿಶ್ವಹಿಂದು ಪರಿಷದ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಕಾಪು ಪ್ರಖಂಡ ಕಾರ್ಯದರ್ಶಿ ರಾಜೇಂದ್ರ ಶೆಣೈ, ಕಾಪು ಪ್ರಖಂಡ ಮಾತೃಶಕ್ತಿ ಪ್ರಮುಖ್ ವಾಣಿ ಆಚಾರ್ಯ, ಕಾಪು ಪ್ರಖಂಡ ಧರ್ಮಚಾರಿ ಪ್ರಮುಖ್ ಪ್ರಸನ್ನ ಭಟ್, ಘಟಕದ ಅಧ್ಯಕ್ಷರಾದ ಜಯ ಪೂಜಾರಿ, ಘಟಕ ಮಾತೃ ಶಕ್ತಿ ಪ್ರಮುಖ್ ಚಂದ್ರಾವತಿ, ಕಾಪು ಪ್ರಖಂಡ ಭಜರಂಗದಳ ಸಹ ಸಂಯೋಜಕ ಆನಂದ್ ಶಿರ್ವ, ಪ್ರಖಂಡ ದುರ್ಗಾವಾಹಿನಿ ಸಂಯೋಜಕಿ ನಿಕ್ಷಿತಾ ಉಪಸ್ಥಿತರಿದ್ದರು.
ಕಾಪು : ಇನ್ನಂಜೆ ಬಿಲ್ಲವ ಸಂಘ - ಅಧ್ಯಕ್ಷರಾಗಿ ಜಗದೀಶ್ ಅಮೀನ್, ಕಾರ್ಯದರ್ಶಿಯಾಗಿ ಅರವಿಂದ ಕಲ್ಲುಗುಡ್ಡೆ ಆಯ್ಕೆ
Posted On: 06-11-2023 06:30PM
ಕಾಪು : ಇನ್ನಂಜೆ ಬಿಲ್ಲವ ಸಂಘದ ಮಹಾಸಭೆ ನವೆಂಬರ್ 5 ರಂದು ಜರಗಿತು.
ಸಂಘದ ನೂತನ ಅಧ್ಯಕ್ಷರನ್ನಾಗಿ ಜಗದೀಶ್ ಅಮೀನ್ ಮತ್ತು ಕಾರ್ಯದರ್ಶಿಯಾಗಿ ಅರವಿಂದ ಕಲ್ಲುಗುಡ್ಡೆ ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭ ಸಂಘದ ಅಧ್ಯಕ್ಷ ಸದಾಶಿವ ಪೂಜಾರಿ ಮಜಲು, ಕಾರ್ಯದರ್ಶಿ ರಮಾನಂದ ಪೂಜಾರಿ ಕಲ್ಲುಗುಡ್ಡೆ, ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಉಚ್ಚಿಲ : ಯುವವಾಹಿನಿ ಪಡುಬಿದ್ರಿ ಘಟಕ - ಸರಸ್ವತಿ ಮಂದಿರ ಶಾಲೆಯಲ್ಲಿ ಮಕ್ಕಳ ಹಬ್ಬ
Posted On: 05-11-2023 07:45PM
ಉಚ್ಚಿಲ : ಶಾಲಾ ಹಂತದಲ್ಲಿ ಪಠ್ಯದ ಜೊತೆಗೆ ಪಠ್ಯ ಪೂರಕ ಚಟುವಟಿಕೆಗಳು ಮಕ್ಕಳ ಕಲಿಕೆಗೆ ಪೂರಕವಾಗಿದೆ. ಜೀವನದಲ್ಲಿ ಮಾಧ್ಯಮ ಮುಖ್ಯವಾಗದು. ಕನ್ನಡ ಮಾಧ್ಯಮದಲ್ಲಿಯೂ ಕಲಿತವರು ಸಾಧನೆಯ ಹಂತ ತಲುಪಿದ್ದಾರೆ. ಕಳೆದ ಹಲವು ವರ್ಷಗಳಿಂದ ಮಕ್ಕಳಿಗೆ ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಬರತ್ತಿರುವ ಪಡುಬಿದ್ರಿ ಯುವವಾಹಿನಿ ಘಟಕದ ಕಾರ್ಯ ಶ್ಲಾಘನೀಯ ಎಂದು ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಹರೀಶ್ ಕುಮಾರ್ ಹೆಜಮಾಡಿ ಹೇಳಿದರು. ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪಡುಬಿದ್ರಿ ಘಟಕದ ವತಿಯಿಂದ ಉಚ್ಚಿಲ ಸರಸ್ವತಿ ಮಂದಿರ ಶಾಲೆಯಲ್ಲಿ ರವಿವಾರ ಜರಗಿದ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾರ್ಯಕ್ರಮವನ್ನು ಉಚ್ಚಿಲ ಸರಸ್ವತಿ ಮಂದಿರ ಶಾಲೆಯ ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕ ಶಿಖರ್ ಮತ್ತು ಹೈಸ್ಕೂಲ್ ವಿಭಾಗದ ವಿದ್ಯಾರ್ಥಿ ನಾಯಕಿ ತಮೀಮಾ ಉದ್ಘಾಟಿಸಿದರು. ಈ ಸಂದರ್ಭ ಮಕ್ಕಳಿಗಾಗಿ ನಡೆದ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಲಾಯಿತು. ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಅಶ್ವಥ್ ಎಸ್ ವಹಿಸಿದ್ದರು.
ಈ ಸಂದರ್ಭ ಪ್ರಾಥಮಿಕ ಶಾಲಾ ವಿಭಾಗದ ಸಂಚಾಲಕ ಮೋಹನ್ ದಾಸ್ ಶೆಟ್ಟಿ, ಪ್ರಾಥಮಿಕ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಗೀತಾ ವೈ., ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಬಾಬುರಾಯ ಆಚಾರ್ಯ, ಪ್ರೌಢಶಾಲಾ ವಿಭಾಗದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಆಶಾ, ಪ್ರಾಥಮಿಕ ವಿಭಾಗದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಕಲಾವತಿ, ಪಡುಬಿದ್ರಿ ಘಟಕದ ಕಲಾ ಮತ್ತು ಸಾಹಿತ್ಯ ನಿರ್ದೇಶಕರಾದ ಸಂತೋಷ್ ಕರ್ನಿರೆ, ಕಾರ್ಯದರ್ಶಿ ನಿಖಿಲ್ ಪೂಜಾರಿ ಪೂಜಾರಿ ಉಪಸ್ಥಿತರಿದ್ದರು.
ಪಡುಬಿದ್ರಿ ಘಟಕದ ಕಲಾ ಮತ್ತು ಸಾಹಿತ್ಯ ನಿರ್ದೇಶಕರಾದ ಸಂತೋಷ್ ಕರ್ನಿರೆ ಸ್ವಾಗತಿಸಿದರು. ಕಾರ್ಯಕ್ರಮವನ್ನು ವಿಧಿತ್ ಮತ್ತು ಪವಿತ್ರ ನಿರೂಪಿಸಿದರು. ಕಾರ್ಯದರ್ಶಿ ನಿಖಿಲ್ ಪೂಜಾರಿ ಪೂಜಾರಿ ವಂದಿಸಿದರು.
ಹೆಜಮಾಡಿ : ಯುನೈಟೆಡ್ ಕನ್ನಂಗಾರ್ ಫುಟ್ಬಾಲ್ ಕ್ಲಬ್ - ಸಮಾಜ ಸೇವಕ ಫಾರೂಕ್ ಚಂದ್ರನಗರಗೆ ಸನ್ಮಾನ
Posted On: 05-11-2023 05:11PM
ಹೆಜಮಾಡಿ : ಇಲ್ಲಿನ ರಾಜೀವ ಗಾಂಧಿ ಕ್ರಿಡಾಂಗಣದಲ್ಲಿ ರಾಜ್ಯ ಮಟ್ಟದ ಫುಟ್ ಬಾಲ್ ಕ್ರೀಡಾ ವೇದಿಕೆಯಲ್ಲಿ ಯುನೈಟೆಡ್ ಕನ್ನಂಗಾರ್ ಫುಟ್ಬಾಲ್ ಕ್ಲಬ್ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸಮಾಜ ಸೇವಕ ಫಾರೂಕ್ ಚಂದ್ರನಗರ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಹಾಜಿ ಗುಲಾಮ್ ಮಹಮ್ಮದ್, ರಜಬ್ ಪರ್ಕಳ ಉದ್ಯಮಿ ಸೌದಿ ಅರೇಬಿಯಾ, ಸಂದೇಶ್ ಶೆಟ್ಟಿ ಉದ್ಯಮಿ ಮುಂಬೈ, ಆಸೀಫ್ ಕಾರ್ಕಳ, ಶೇಖರ್ ಹೆಜಮಾಡಿ, ಅಝೀಜ್ ಹೆಜಮಾಡಿ, ನಜಿರ್ ಕಾರ್ನಾಡ್, ಯುನೈಟೆಡ್ ಅಧ್ಯಕ್ಷ ಆಶಿಫ್, ಝಿಯಾನ್ ಹೆಜಮಾಡಿ, ಮೋಹನ್ ಸುವರ್ಣ, ಶರಣ್ ಕುಮಾರ್ ಮಟ್ಟು, ಶಿವರಾಮ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಉದ್ಯಾವರ : ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಅಂಚೆ ಇಲಾಖೆಯ ಸೇವೆಗಳ ಮಾಹಿತಿ ಅಭಿಯಾನ
Posted On: 04-11-2023 12:40PM
ಉದ್ಯಾವರ : ಗುರ್ಮೆ ಫೌಂಡೇಶನ್, ಗುರ್ಮೆ ಕಳತ್ತೂರು, ಬಿಜೆಪಿ ಮಹಾಶಕ್ತಿ ಕೇಂದ್ರ, ಉದ್ಯಾವರ, ಶ್ರೀನಿವಾಸ ಆಸ್ಪತ್ರೆ ಮುಕ್ಕಾ, ಸುರತ್ಕಲ್, ಮಂಗಳೂರು ಇವರ ಆಶ್ರಯದಲ್ಲಿ ಶನಿವಾರ ಉದ್ಯಾವರ ಸೌಂದರ್ಯ ಹಾಲ್ ನಲ್ಲಿ ಆಯೋಜಿಸಲಾದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ಅಂಚೆ ಇಲಾಖೆಯ ಸೇವೆಗಳ ಮಾಹಿತಿ ಅಭಿಯಾನವನ್ನು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ಉಪಾಧ್ಯಕ್ಷರಾದ ನವೀನ್ ಎಸ್.ಕೆ, ಶ್ರೀನಿವಾಸ ಆಸ್ಪತ್ರೆಯ ಶಶಿರಾಜ್ ಶೆಟ್ಟಿ, ಉದ್ಯಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರಾಜೇಶ್ ಕುಂದರ್, ಕಾಪು ಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ಸಚೀನ್ ಸುವರ್ಣ, ಉದ್ಯಾವರ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ರವಿ ಕೋಟ್ಯಾನ್ ಹಾಗೂ ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.