Updated News From Kaup
ಉಡುಪಿ : ಮನೆಯೇ ಗ್ರಂಥಾಲಯ - ವಿನೂತನ ಕಾರ್ಯಕ್ರಮಕ್ಕೆ ಚಾಲನೆ

Posted On: 22-05-2024 04:12PM
ಉಡುಪಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದಿಂದ "ಮನೆಯೇ ಗ್ರಂಥಾಲಯ" ಕಾರ್ಯಕ್ರಮಕ್ಕೆ ನಾಡಿನ ಪ್ರಸಿದ್ಧ ಸಾಹಿತಿ ವಿದ್ವಾಂಸ ನಾಡೋಜ ಡಾ. ಕೆ .ಪಿ .ರಾವ್ ಅವರು ಉಡುಪಿಯ ಬೈಲೂರಿನಲ್ಲಿರುವ ರಂಗ ಕಲಾವಿದರಾದ ಶಶಿಪ್ರಭಾ ಹಾಗೂ ವಿವೇಕಾನಂದ ದಂಪತಿಗಳ ಮನೆ "ವಾಟಿಕಾ"ದಲ್ಲಿ ಚಾಲನೆ ನೀಡಿದರು.
ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಎನ್ನುವಂತದ್ದು ಇವತ್ತಿನ ಆಧುನಿಕ ಸಂದರ್ಭದಲ್ಲಿ ಎಲ್ಲಾ ಸಾಧ್ಯತೆಗಳನ್ನು ಇಟ್ಟುಕೊಂಡು ಬೆಳೆಯುತ್ತಿದೆ. ಆದರೆ ಅನೇಕ ಶತಮಾನಗಳ ಹಿಂದೆ ನಾವು ಕಂಡುಕೊಂಡ ಮುದ್ರಣ ಮಾಧ್ಯಮದ ಆವಿಷ್ಕಾರದಿಂದಾಗಿ ಗಳಿಸಿದ ಜ್ಞಾನ ಸಂಪತ್ತನ್ನು ಅಕ್ಷರ ರೂಪವಾಗಿ ಪರಿವರ್ತಿಸಿ, ಮುಂದೆ ಅವುಗಳನ್ನು ಮುದ್ರಣ ರೂಪದಲ್ಲಿ ದಾಖಲೀಕರಣ ಗೊಳಿಸಿರುವುದರ ಪರಿಣಾಮವಾಗಿ ನಮಗಿಂದು ಕೋಟಿ ಕೋಟಿ ಗ್ರಂಥಗಳು ನಮ್ಮ ಅಧ್ಯಯನಕ್ಕೆ ಸಾಧ್ಯವಾಗಿವೆ, ಮುಂದೆಯೂ ಇವು ಸಾಧ್ಯವಾಗುತ್ತವೆ. ಅಷ್ಟು ಮಾತ್ರವಲ್ಲ ಒಂದು ಗ್ರಂಥವನ್ನು ತೆರೆದು ಅದರೊಳಗಿನ ಒಂದು ಪುಟದ ಸುವಾಸನೆಯನ್ನು ಗಮನಿಸಿದಾಗ ಅಲ್ಲಿ ಸಿಗುವ ಆನಂದವೇ ಬೇರೆ ಆಗಿರುತ್ತದೆ ಅದನ್ನು ಪದಗಳಲ್ಲಿ ಕಟ್ಟಿಕೊಡಲು ಸಾಧ್ಯವಿಲ್ಲ. ಅಂತಹ ಅನುಭವವನ್ನು ಗ್ರಂಥಗಳನ್ನು ಸ್ಪರ್ಶಿಸುವುದರಿಂದ ಆಗುವುದೇ ಹೊರತು ಬೇರೆ ಯಾವುದರಿಂದಲೂ ಆಗುವುದಿಲ್ಲ ಎಂದು ನಾಡೋಜ ಕೆ. ಪಿ. ರಾವ್ ಅವರು ತಿಳಿಸಿದರು.
ತಾಲೂಕು ಅಧ್ಯಕ್ಷ ರವಿರಾಜ್ ಎಚ್. ಪಿ. ಆಶಯ ನುಡಿಗಳನ್ನಾಡುತ್ತಾ ಇದೊಂದು ವಿನೂತನ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಉಡುಪಿ ತಾಲೂಕಿನ ಮನೆ ಮಂದಿರಗಳಲ್ಲಿ ಆಸ್ಪತ್ರೆಗಳಲ್ಲಿ ಅಂಗಡಿಗಳಲ್ಲಿ ಗ್ರಂಥಾಲಯ ಪ್ರಾರಂಭಿಸುತ್ತೇವೆ . ಈ ಮೂಲಕ ಓದುವ ಹವ್ಯಾಸ ಬೆಳೆಸಲು ಪ್ರಯತ್ನಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿಯ ಸ್ಥಾಪಕ ಉಡುಪಿ ವಿಶ್ವನಾಥ ಶೆಣೈ, ಜಿಲ್ಲಾ ಕಸಾಪ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್, ಜಿಲ್ಲಾ ಸಹಕಾರ್ಯದರ್ಶಿ ಮೋಹನ್ ಉಡುಪ ಹಂದಾಡಿ ,ತಾಲೂಕು ಗೌರವ ಕಾರ್ಯದರ್ಶಿ ರಂಜಿನಿ ವಸಂತ್ ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ಸ್ವಾಗತಿಸಿ, ಕೋಶಾಧ್ಯಕ್ಷ ರಾಜೇಶ್ ಭಟ್ ಪಣಿಯಾಡಿ ಧನ್ಯವಾದ ನೀಡಿದರು. ಕಾರ್ಯಕ್ರಮದ ಸಂಚಾಲಕ ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.
ಕೇಮುಂಡೇಲು ಶ್ರೀ ಪಾಂಡುರಂಗ ಭಜನಾ ಮಂಡಳಿ - ಷಷ್ಟ್ಯಬ್ದ ಸಂಭ್ರಮ ; ಹನ್ನೆರಡು ದಿನಗಳ ಭಜನಾ ಕಾರ್ಯಕ್ರಮ

Posted On: 21-05-2024 06:31PM
ಎಲ್ಲೂರು : ಕೇಮುಂಡೇಲು ಶ್ರೀ ಪಾಂಡುರಂಗ ಭಜನಾ ಮಂಡಳಿ (ರಿ) ಇದರ ಅರವತ್ತನೇ ವರ್ಷದ ಸಂಭ್ರಮಾಚರಣೆ ಷಷ್ಟ್ಯಬ್ದ ಸಂಭ್ರಮ ಪ್ರಯುಕ್ತ ಸತತ 288 ಗಂಟೆಗಳ ಹನ್ನೆರಡು ದಿನಗಳ ಭಜನಾ ಕಾರ್ಯಕ್ರಮ "ಅಖಂಡ ದ್ವಾದಶಾಹ ವೈಭವಂ " ಊರ ಪರವೂರ ಮಹನೀಯರು ನಂದಾದೀಪವನ್ನು ಪ್ರಜ್ವಲಿಸುವುದರ ಮೂಲಕ ಉದ್ಘಾಟಿಸಿದರು.
ಆಗಮ ಪಂಡಿತರಾದ ವಿದ್ವಾನ್ ಕೇಂಜ ಶ್ರೀಧರ ತಂತ್ರಿಗಳು, ಅಖಂಡ ದ್ವಾದಶಾಹ ಭಜನಾ ವೈಭವಮ್ ಸಮಿತಿಯ ಗೌರವಾಧ್ಯಕ್ಷರಾದ ಕೆ.ಎಲ್ ಕುಂಡಂತಾಯರು, ನಂದಿಕೂರು ದೇವಳದ ಮಧ್ವರಾಯ ಭಟ್, ರಘು ಶೆಟ್ಟಿಗಾರ್, ಡಾ.ಭವಾನಿ ಶಂಕರ್, ಸುನೀಲ್ ಕುಮಾರ್ ಶೆಟ್ಟಿ ಸಾಂತೂರು, ನಾಗರತ್ನ ರಾವ್ ದಂಪತಿಗಳು, ಮಂಡಳಿಯ ಅಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿಗಾರ್ ದಂಪತಿಗಳು, ಕಾರ್ಯದರ್ಶಿ ಕೃಷ್ಣಾನಂದ ರಾವ್, ಅರ್ಚಕ ಗುರುರಾಜ ಆಚಾರ್ಯ ಮತ್ತಿತರು ಹಾಜರಿದ್ದರು.
ಮಾತೃ ಮಂಡಳಿಯ ಭಜಕರಿಂದ ಆರಂಭಗೊಂಡ ಭಜನಾ ವೈಭವದಲ್ಲಿ ಪ್ರಸಿದ್ದ ದಾಸವಾಣಿ ಕೀರ್ತನಕಾರ ಮೈಸೂರು ರಾಮಚಂದ್ರಚಾರ್ ಭಜನೆ ಹಾಡಿದ್ದು ವಿಶೇಷವಾಗಿತ್ತು.
ಮಂಗಳೂರು ಸಮುದ್ರ ತೀರದಲ್ಲಿ ಹೈ ಅಲರ್ಟ್, ಉಡುಪಿಯಲ್ಲಿ ಸಮುದ್ರ ಪ್ರಕ್ಷುಬ್ಧ

Posted On: 21-05-2024 01:52PM
ಮಂಗಳೂರು : ಬಂಗಾಳ ಕೊಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಸಮುದ್ರ ತೀರದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಗಂಟೆಗೆ 45 ಕಿ.ಮೀ ನಿಂದ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಕರಾವಳಿಯುದ್ದಕ್ಕೂ ಬಿರುಗಾಳಿ ಬೀಸುವ ಸಾಧ್ಯತೆ ಹಿನ್ನಲೆ ಮೀನುಗಾರಿಕೆಗೆ ತೆರಳದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಎಚ್ಚರಿಕೆ ನೀಡಲಾಗಿದೆ.
ಮಂಗಳೂರಿನಲ್ಲಿ ಇಂದು ಕೂಡ ಧಾರಾಕಾರ ಮಳೆ ಸುರಿಯುವ ಮುನ್ಸೂಚನೆ ಇದೆ. ಇಂದಿನಿಂದ 2 ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಉಡುಪಿಯಲ್ಲಿ ಸಮುದ್ರ ಪ್ರಕ್ಷುಬ್ದವಾಗಿದೆ. ಉರಿ ಬಿಸಿಲಿನ ನಡುವೆ ಮೋಡದ ವಾತಾವರಣವಿದೆ. ಈ ವಾರದಲ್ಲಿ ಗುಡುಗು ಸಿಡಿಲು ಮಳೆಯ ಮುನ್ನೆಚ್ಚರಿಕೆಯನ್ನ ಜಿಲ್ಲಾಡಳಿತ ನೀಡಿದೆ. ಭಾರೀ ಗಾತ್ರದ ಸಮುದ್ರದಲೆಗಳು ದಡಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ. ಮೀನುಗಾರರು ಹಾಗೂ ಪ್ರವಾಸಿಗರು ಸಮುದ್ರಕ್ಕಿಳಿಯಬಾರದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಮೇ 28 - 30 : ಉಡುಪಿಯ ಬೊಬ್ಬರ್ಯ ಕಟ್ಟೆ ದೈವಗಳ ವಾರ್ಷಿಕ ನೇಮೋತ್ಸವ

Posted On: 21-05-2024 12:00PM
ಉಡುಪಿ : ಇಲ್ಲಿನ ವುಡ್ಲಾಂಡ್ಸ್ ಹೋಟೆಲ್ ಬಳಿಯ ಬೊಬ್ಬರ್ಯ ಕಟ್ಟೆ ಬೊಬ್ಬರ್ಯ, ಕಾಂತೇರಿ ಜುಮಾದಿ, ಕಲ್ಕುಡ, ಕೊರಗಜ್ಜ, ಪರಿವಾರ ದೈವಗಳ ದೇವಸ್ಥಾನದಲ್ಲಿ ಮೇ 28 ರಿಂದ 30 ರವರೆಗೆ ವಾರ್ಷಿಕ ನೇಮೋತ್ಸವ ಜರಗಲಿದೆ.
ಮೇ 28, ಮಂಗಳವಾರ ರಾತ್ರಿ ಗಂಟೆ 9 ರಿಂದ ಬೊಬ್ಬರ್ಯ ದೈವದ ಕೋಲ, ಮೇ 29, ಬುಧವಾರ ಸಂಜೆ 4 ಗಂಟೆಗೆ ಕಾಂತೇರಿ ಜುಮಾದಿ ಪರಿವಾರ ದೈವಗಳ ಬಂಡಾರ ಮೆರವಣಿಗೆ, ರಾತ್ರಿ 8:30ಕ್ಕೆ ಸನ್ಮಾನ ಕಾರ್ಯಕ್ರಮ, ರಾತ್ರಿ ಗಂಟೆ 9 ರಿಂದ ಕಾಂತೇರಿ ಜುಮಾದಿ ಹಾಗೂ ಪರಿವಾರ ದೈವಗಳ ನೇಮೋತ್ಸವ, ಮೇ 30, ಗುರುವಾರ ಸಂಜೆ 5 ರಿಂದ ಕಲ್ಕುಡ ದೈವದ ನೇಮೋತ್ಸವ, ರಾತ್ರಿ ಗಂಟೆ 7ರಿಂದ ಕೊರಗಜ್ಜ ದೈವದ ನೇಮೋತ್ಸವ ಜರಗಲಿದೆ ಎಂದು ಕ್ಷೇತ್ರದ ಗೌರವಾಧ್ಯಕ್ಷರಾದ ವಿನೋದ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಜಮಾಡಿ : ಟೋಲ್ ವಿನಾಯಿತಿ ರದ್ದು - ಮೇ 24ರಂದು ಮನವಿ ಸಲ್ಲಿಸಲು ಸಮಿತಿ ನಿರ್ಧಾರ

Posted On: 21-05-2024 11:40AM
ಹೆಜಮಾಡಿ : ಇಲ್ಲಿಯ ಟೋಲ್ ಪ್ಲಾಝಾದಲ್ಲಿ ಈ ಹಿಂದೆ ಹೆಜಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಹನಗಳಿಗೆ ಸುಂಕ ವಿನಾಯಿತಿ ನೀಡಲಾಗಿತ್ತು. ಕಳೆದ ವಾರದಿಂದ ವಿನಾಯಿತಿ ರದ್ದುಗೊಳಿಸಿ ಫಾಸ್ಟ್ಟ್ಯಾಗ್ನಲ್ಲಿ ಟೋಲ್ ಸುಂಕ ಕಡಿತಗೊಳಿಸಲಾಗಿತ್ತು. ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದ ಸ್ಥಳೀಯರು ಹೋರಾಟಕ್ಕೆ ಸಿದ್ಧತೆ ನಡೆಸಿದ್ದು ಪೂರ್ವಭಾವಿಯಾಗಿ ಶಾಂತಿಯುತವಾಗಿ ಮೇ 24ರಂದು ಮನವಿ ಸಲ್ಲಿಸಲು ಹೆಜಮಾಡಿ ಟೋಲ್ ವಿರೋಧಿ ಹೋರಾಟ ಸಮಿತಿ ತೀರ್ಮಾನಿಸಿದೆ. ಹೆಜಮಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆದ ಹೆಜಮಾಡಿ ಟೋಲ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಅದರಂತೆ ಪಡುಬಿದ್ರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಾಹನಗಳಿಗೆ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಲಾಯಿತು. ಹೆಜಮಾಡಿ ಒಳ ರಸ್ತೆಗೂ ಹೆದ್ದಾರಿ ಇಲಾಖೆ ಟೋಲ್ ಕೇಂದ್ರ ಸ್ಥಾಪಿಸಿರುವುದಕ್ಕೆ ಸಭೆಯಲ್ಲಿ ವಿರೋಧ ವ್ಯಕ್ತವಾಯಿತು.
ಹೋರಾಟ ಸಮಿತಿಯ ಶೇಖರ್ ಹೆಜಮಾಡಿ, ಶೇಖಬ್ಬ ಕೋಟೆ, ನವೀನ್ಚಂದ್ರ ಜೆ. ಶೆಟ್ಟಿ, ವೈ. ಸುಕುಮಾರ್, ಅಬ್ದುಲ್ ಅಝೀಝ್ ಹೆಜಮಾಡಿ, ರೋಲ್ಫಿ ಡಿ ಕೋಸ್ತ, ಅಬ್ಬಾಸ್ ಹಾಜಿ, ವಿಶ್ವಾಸ್ ವಿ.ಅಮೀನ್, ಗಣೇಶ್ ಆಚಾರ್ಯ ಉಚ್ಚಿಲ, ಉಮಾನಾಥ್ ಕೋಟ್ಯಾನ್, ಅಬ್ದುಲ್ ರಹ್ಮಾನ್ ಕಣ್ಣಂಗಾರ್, ಅಬ್ಬಾಸ್ ಹಾಜಿ, ಸಂತೋಷ್ ಪಡುಬಿದ್ರಿ, ನಿರ್ಮಲಾ, ತೇಜ್ಪಾಲ್ ಸುವರ್ಣ, ರಘುವೀರ್ ಸುವರ್ಣ, ಸುಧೀರ್ ಕರ್ಕೇರ, ಸನಾ ಇಬ್ರಾಹಿಂ, ಸುಭಾಸ್ ಸಾಲ್ಯಾನ್, ಅರುಣ್ ಶೆಟ್ಟಿ, ಕೇಶವ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಮೇ 22: ಮುಂಡ್ಕೂರು ಮುಲ್ಲಡ್ಕ ದುಗ್ಗು ನಿವಾಸ ಗಾಂದೊಟ್ಯ ಮನೆಯಲ್ಲಿ ಸಿರಿ ಸಿಂಗಾರದ ನೇಮೋತ್ಸವ

Posted On: 20-05-2024 05:31PM
ಕಾರ್ಕಳ : ತಾಲೂಕಿನ ಮುಂಡ್ಕೂರು ಮುಲ್ಲಡ್ಕ ದುಗ್ಗು ನಿವಾಸ ಗಾಂದೊಟ್ಯ ಮನೆಯಲ್ಲಿ ಮೇ 22 ರ ರಾತ್ರಿ 8 ಗಂಟೆಯಿಂದ ಸತ್ಯದೇವತೆ, ವರ್ತೆ ಪಂಜುರ್ಲಿ ದೈವಗಳಿಗೆ ಸಿರಿ ಸಿಂಗಾರದ ನೇಮೋತ್ಸವ ನಡೆಯಲಿದೆ.
ಕಟಪಾಡಿ : ಶ್ರೀ ಶಂಕರಪುರ ಕ್ಷೇತ್ರದಲ್ಲಿ ಭಕ್ತರ ಇಷ್ಟಾರ್ಥ ನೆರವೇರಿಸುವ ಪಾನ ಪ್ರಿಯ ಕಾಲಭೈರವ ಸ್ವಾಮಿ

Posted On: 20-05-2024 03:51PM
ಕಟಪಾಡಿ : ಶ್ರೀ ಸಾಯಿ ಈಶ್ವರ್ ಗುರೂಜಿಯವರ ಸಂಕಲ್ಪದಲ್ಲಿ 2018 ರಂದು ಸ್ಥಾಪನೆಯಾದ ಪ್ರಾಣಿ-ಪಕ್ಷಿ ಮೋಕ್ಷಕಟ್ಟೆ ಬಳಿಕ ಈ ಕಟ್ಟೆಯಲ್ಲಿ ಕಾಲಭೈರವ ಸ್ವಾಮಿಯನ್ನು ಪ್ರತಿಷ್ಠಾಪಿಸಲಾಗಿದೆ.
ಉಜ್ಜಯಿನಿ ಸಂಕಲ್ಪದಲ್ಲಿ ಸೇವೆ ನಡೆಯಬೇಕು ಎಂದು ಗುರು ನೀಡಿದ ಆಜ್ಞೆಯಂತೆ 2023ರ ಡಿಸೆಂಬರ್ ನಲ್ಲಿ ದೇಶದಾದ್ಯಂತ ಶ್ರೀ ಕ್ಷೇತ್ರಕ್ಕೆ ಬಂದ 150ಕ್ಕೂ ಹೆಚ್ಚು ಸಾಧು-ಸಂತರ ಉಪಸ್ಥಿತಿಯಲ್ಲಿ ಶಿಲಾಮಯ ಗುಡಿಯಲ್ಲಿ ಕಾಲಭೈರವ ಸ್ವಾಮಿಯ ಪ್ರತಿಷ್ಠೆ ನಡೆದಿತ್ತು.
ಅಂದಿನಿಂದ ಈ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ ತಮ್ಮ ಪ್ರಾರ್ಥನೆಯನ್ನು ಕಾಲಭೈರವ ಸ್ವಾಮಿಗೆ ಸಲ್ಲಿಸಿ ಸಮಸ್ಯೆಗಳನ್ನು ಪರಿಹರಿಸಿಕೊಂಡ ಸಾವಿರಾರು ಉದಾಹರಣೆಗಳಿವೆ. ಕಾಲಭೈರವ ಸ್ವಾಮಿಗೆ ಉಜ್ಜಯಿನಿಯ ಸಂಕಲ್ಪದಂತೆ ಪ್ರತಿದಿನ ಸಂಜೆ ಭಕ್ತರು ನೀಡಿದ ಮದ್ಯವನ್ನು ನೈವೇದ್ಯವಾಗಿ ಸಲ್ಲಿಸಲಾಗುತ್ತದೆ.
2024 ಮೇ 19ರ ಆದಿತ್ಯವಾರ ಸಂಜೆ ನೈವೇದ್ಯ ಸೇವೆಯನ್ನು ಸಮರ್ಪಿಸುವಾಗ ಮಧ್ಯ ಹಾಕಿದ ತಟ್ಟೆಯಿಂದ ಮದ್ಯವನ್ನು ಹೀರಿಕೊಳ್ಳುವ ಘಟನೆಯನ್ನು ಆಶ್ಚರ್ಯಚಕಿತರಾಗಿ ಗಮನಿಸಿದ ಭಕ್ತರು ವಿಡಿಯೋ ಚಿತ್ರೀಕರಣ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾದ ಕಾರಣ ಮತ್ತಷ್ಟು ಭಕ್ತರನ್ನು ಶ್ರೀ ಕ್ಷೇತ್ರಕ್ಕೆಆಕರ್ಷಿಸುತ್ತಿದೆ. ಮಧ್ಯ ನೀಡುವುದರಿಂದ ಭಕ್ತರಿಗೆ ಬರುವ ಅನಾರೋಗ್ಯ, ಸಂಕಷ್ಟ ನೋವುಗಳನ್ನ ತನ್ನಲ್ಲಿಗೆ ಹೀರಿಕೊಳ್ಳುತ್ತಿದ್ದಾನೆ ಎಂಬ ನಂಬಿಕೆ ಭಕ್ತರದ್ದಾಗಿದೆ.
ಉಡುಪಿ : ಜನತಾದಳ ಪಕ್ಷ ಉಡುಪಿ ಜಿಲ್ಲಾ ಘಟಕದ ವತಿಯಿಂದ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರ ಹುಟ್ಟುಹಬ್ಬ ಆಚರಣೆ

Posted On: 20-05-2024 01:29PM
ಉಡುಪಿ : ಜನತಾದಳ ಜಾತ್ಯಾತೀತ ಪಕ್ಷ ಉಡುಪಿ ಜಿಲ್ಲಾ ಘಟಕದ ವತಿಯಿಂದ ಉಡುಪಿ ಜೆಡಿಎಸ್ ಕಚೇರಿಯಲ್ಲಿ ಮಾಜಿ ಪ್ರಧಾನಿಗಳು, ಜೆಡಿಎಸ್ ಪಕ್ಷದ ವರಿಷ್ಠರಾದ ಹೆಚ್. ಡಿ.ದೇವೇಗೌಡರ ಹುಟ್ಟುಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು.
ದೇವೇಗೌಡರ ಭಾವಚಿತ್ರಕ್ಕೆ ಹಾಲಿನ ಅಭಿಷೇಕವನ್ನು ಮಾಡುವ ಮೂಲಕ ಜಿಲ್ಲಾಧ್ಯಕ್ಷರಾದ ಯೋಗಿಶ್ ವಿ ಶೆಟ್ಟಿ ಯವರು ಹುಟ್ಟುಹಬ್ಬ ಆಚರಿಸಿದರು. ಈ ಸಂದರ್ಭ ಅವರು ಮಾತನಾಡಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ, ಕಾಂಗ್ರೆಸ್ ಪಕ್ಷ ಷಡ್ಯಂತರವನ್ನು ಮಾಡುವ ಮುಖಾಂತರ ಅನೇಕ ಬೆಳವಣಿಗೆಯನ್ನು ಕರ್ನಾಟಕದಲ್ಲಿ ಮಾಡುತ್ತಿದೆ. ತನ್ನ ಕಾರ್ಯಕರ್ತರ ಮುಖಾಂತರ ದೇವೇಗೌಡರ ಭಾವಚಿತ್ರಕ್ಕೆ ಮಸಿಯನ್ನು ಬಳಿದಿದ್ದಾರೆ ಇದು ಅತ್ಯಂತ ಕ್ರೂರವಾದ ಕೃತ್ಯ, ಮಾಜಿ ಪ್ರಧಾನಿ ಆದಂತಹ ದೇವೇಗೌಡರು ನಮ್ಮ ರಾಜ್ಯಕ್ಕೆ ದೇಶಕ್ಕೆ ಯಾವ ಕೊಡುಗೆಯನ್ನು ಕೊಟ್ಟಿದ್ದಾರೆ ಎಂಬುದು ನಾಡಿನ ಜನತೆಗೆ ಗೊತ್ತಿದೆ. ಅದಕ್ಕೋಸ್ಕರವಾಗಿ ನಾವಿವತ್ತು ಅವರ ಹುಟ್ಟುಹಬ್ಬವನ್ನು ಆಚರಿಸಿ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕವನ್ನು ಮಾಡಿದ್ದೇವೆ. ಏನು ಇವರು ಮಸಿ ಬಳಿದಿದ್ದಾರೆ ಇದೆಲ್ಲವೂ ಪರಿಶುದ್ಧವಾಗಲಿ, ದೇವೇಗೌಡರು ಇನ್ನಷ್ಟು ವರ್ಷ ಬಾಳಲಿ, ಅವರಿಗೆ ಒಳ್ಳೆಯಆಯುಷ್ಯ, ಆರೋಗ್ಯವನ್ನು ಭಗವಂತ ಕರುಣಿಸಲಿ ಇನ್ನಷ್ಟು ರಾಜ್ಯಕ್ಕೆ ದೇಶಕ್ಕೆ ಅವರ ಸೇವೆ ದೊರಕಲಿ ಅದರೊಂದಿಗೆ ನಮ್ಮ ಪಕ್ಷ ವನ್ನೂ ಕಟ್ಟಿ ಬೆಳೆಸುವಂತಹ ಹುಮ್ಮಸ್ಸು ಅವರಲ್ಲಿ ಇದೆ. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.
ನೈರುತ್ಯ ಶಿಕ್ಷಣ ಕ್ಷೇತ್ರ ಮತ್ತು ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ/ಜೆಡಿಎಸ್ ಜಂಟಿ ಅಭ್ಯರ್ಥಿಗಳಾದ ಎಸ್. ಎಲ್ ಭೋಜೇಗೌಡ ಮತ್ತು ಡಾ. ಧನಂಜಯ್ ಸರ್ಜೆ ಇವರ ಗೆಲುವಿಗೆ ಯಾವ ರೀತಿಯಾಗಿ ಕಾರ್ಯಕರ್ತರು ಕಾರ್ಯ ಪ್ರವೃತ್ತರಾಗಬೇಕು ಎಂಬುದರ ಬಗ್ಗೆ ಚರ್ಚಿಸಲಾಯಿತು.
ಜಿಲ್ಲಾ ಕಾರ್ಯಾಧ್ಯಕ್ಷರಾದ ವಾಸುದೇವ ರಾವ್, ಜಯಕುಮಾರ್ ಪರ್ಕಳ, ರಮೇಶ್ ಕುಂದಾಪುರ, ಗಂಗಾಧರ್ ಭಿರ್ತಿ, ರಾಮರಾವ್, ರಶೀದ್, ಕೀರ್ತಿರಾಜ್, ಶ್ರೀಕಾಂತ್ ಕಾರ್ಕಳ, ಎಂ.ಡಿ ರಫೀಕ್, ವೆಂಕಟೇಶ್ ಎಂ.ಟಿ, ದೇವರಾಜ ತೊಟ್ಟಂ, ಪದ್ಮನಾಭ. ಆರ್. ಕೋಟ್ಯಾನ್, ರಂಗ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಕಟಪಾಡಿ : ಕೋಟೆ ನಾಗರಿಕ ಸೇವಾ ಸಮಿತಿ ವತಿಯಿಂದ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ; ಸನ್ಮಾನ

Posted On: 19-05-2024 03:49PM
ಕಟಪಾಡಿ : ಸಾಧಿಸುವ ಮನಸ್ಸುಗಳಿಗೆ ಹುಟ್ಟೂರ ಸನ್ಮಾನ ಅತಿ ಮುಖ್ಯವಾಗಿರೋದು. ನಮ್ಮೂರಿನಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ನಾವು ಗುರುತಿಸಿರುವುದು ಹೆಮ್ಮೆಯ ಸಂಗತಿ ಇದು ವಿದ್ಯಾರ್ಥಿಗಳಿಗೆ ಇನ್ನೊಂದಷ್ಟು ಸ್ಪೂರ್ತಿಯ ಜೊತೆಗೆ ಜವಾಬ್ದಾರಿಯನ್ನು ನೀಡುತ್ತದೆ ಎಂದು ಕಟಪಾಡಿಯ ಸೃಷ್ಟಿ ಫೌಂಡೇಶನ್ ಅಧ್ಯಕ್ಷರಾದ ಪ್ರಕಾಶ್ ಸುವರ್ಣ ಕಟಪಾಡಿ ಹೇಳಿದರು. ಅವರು ಕೋಟೆ ನಾಗರಿಕ ಸೇವಾ ಸಮಿತಿ ವತಿಯಿಂದ ಕೋಟೆ ಸೌಜನ್ಯ ನಿಲಯದಲ್ಲಿ ಭಾನುವಾರ ನಡೆದ ಅತ್ಯಧಿಕ ಅಂಕ ಗಳಿಸಿದ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ - ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ಕೋಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಯೋಗೀಶ್ ವಿ.ಕೋಟ್ಯಾನ್ ಮಾತನಾಡಿ, ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಗೌರವಿಸಿ, ಪ್ರೋತ್ಸಾಹ ನೀಡಿದ್ದಲ್ಲಿ ಮುಂದಿನ ಶೈಕ್ಷಣಿಕ ವ್ಯಾಸಂಗಕ್ಕೆ ಉತ್ತೇಜನ ನೀಡಿದಂತಾಗುತ್ತದೆ ಎಂದರು.
10ನೇ ತರಗತಿಯ ಪರೀಕ್ಷೆಯಲ್ಲಿ 90 ಶೇಕಡಕ್ಕಿಂತ ಹೆಚ್ಚು ಅಂಕಗಳಿಸಿದ ಮುನಿಶಾ ಆರ್ ಕೋಟ್ಯಾನ್, ಪೂರ್ವಿ ಜೆ ಸಾಲಿಯಾನ್, ಧನ್ಯಶ್ರೀ, ನವ್ಯ ಡಿ.ಜತ್ತನ್, ಧನುಷ್ ,ಲಿಖಿತ್ ಆರ್. ಜೆ ಜತ್ತನ್ ಇವರನ್ನು ಸನ್ಮಾನಿಸಲಾಯಿತು.
ಕೋಟೆ ನಾಗರಿಕ ಸೇವಾ ಸಮಿತಿಯ ಅಧ್ಯಕ್ಷರಾದ ಕೃಷ್ಣ ಅಮೀನ್ ಕೋಟೆ, ಬೆಂಗಳೂರಿನ ಮೋರ್ಗೆನ್ ಸ್ಟಾನ್ಲಿ ಸಂಸ್ಥೆಯ ಉಪಾಧ್ಯಕ್ಷ ರೋಷನ್ ಪೂಜಾರಿ, ಪ್ರಸನ್ನ ಕೋಟೆ, ಸ್ಥಳೀಯರಾದ ಗೀತಾ ಬಿ ಶೆಟ್ಟಿ, ಸಂಜೀವ್ ಮೆಂಡನ್ ಉಪಸ್ಥಿತರಿದ್ದರು. ಕಟಪಾಡಿ ಸ್ವಸ್ತಿಕ್ ಕಲಾಸಂಘದ ಅಧ್ಯಕ್ಷರಾದ ರಮೇಶ್ ಕೋಟ್ಯಾನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ಧೀರಜ್ ಬೆಳ್ಳಾರೆ ನಿರೂಪಿಸಿದರು. ಕಾರ್ತಿಕ್ ವಂದಿಸಿದರು.
ಮೇ 19 - 20 : ಪರಿಚಯ ಪ್ರತಿಷ್ಠಾನ ಪಾಂಬೂರು - ಬಹುಮುಖಿ 2024 ಸಾಂಸ್ಕೃತಿಕ ಉತ್ಸವ

Posted On: 19-05-2024 10:35AM
ಕಾಪು : ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸುವ ಪಾಂಬೂರಿನ ಪರಿಚಯ ಪ್ರತಿಷ್ಠಾನವು ಬಹುಮುಖಿ 2024 ಸಾಂಸ್ಕೃತಿಕ ಉತ್ಸವವನ್ನು ಇದೇ ಮೇ 19 ಮತ್ತು ಮೇ 20ರಂದು ಪಾಂಬೂರು ರಂಗಪರಿಚಯದಲ್ಲಿ ಆಯೋಜಿಸಿದೆ.
ಮೇ 19ರಂದು ಕೊಂಕಣಿಯ ಖ್ಯಾತ ನಾಟಕಕಾರ ಡೊ. ಫಾದರ್ ಆಲ್ವಿನ್ ಸೆರಾವೊರವರೊಂದಿಗೆ ಮುಖಾಮುಖಿ, ಸಂವಾದ ಹಾಗೂ ಗೌರವಾರ್ಪಣೆಯ ರಂಗ್ತರoಗ್ ಕಾರ್ಯಕ್ರಮ ಜರಗಲಿದೆ. ಸಂವಾದದ ಬಳಿಕ ಅಸ್ತಿತ್ವ (ರಿ), ಮಂಗಳೂರು ತಂಡದಿOದ ಕ್ರಿಸ್ಟೋಫರ್ ನೀನಾಸಮ್ ನಿರ್ದೇಶನದ ಪ್ರಸಿದ್ದ ಕೊಂಕಣಿ ನಾಟಕ ‘ಸಳ್ಗಿ’ ಪ್ರದರ್ಶನಗೊಳ್ಳಲಿದೆ. ಮೇ 20ರಂದು ದೇಶವಿದೇಶಗಳಲ್ಲಿ ಖ್ಯಾತಿ ಗಳಿಸಿರುವ ಯುವಸಂಗೀತಗಾರ ಈಶಾನ್ ಫೆರ್ನಾಂಡಿಸ್ ಮತ್ತು ತಂಡದಿOದ “Transcending Boundaries-II” ಜಾಗತಿಕ ವಿವಿಧ ಭಾಷೆಗಳ ಸಂಗೀತ ರಸಮಂಜರಿ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ.
ಅಂತರಾಷ್ಟ್ರೀಯ ಖ್ಯಾತಿಯ ಕುಂಚ ಕಲಾವಿದ ವಿಲ್ಸನ್ ಕಯ್ಯಾರ್ರವರು ಎಲ್ಲಾ ಹಾಡುಗಳನ್ನು ತನ್ನ ಕುಂಚ ಕೈಚಳಕದಿಂದ ವಿವಿಧ ವರ್ಣಗಳಲ್ಲಿ ಚಿತ್ರಿಸಲಿದ್ದಾರೆ.
ಕಾರ್ಯಕ್ರಮಗಳಿಗೆ ಉಚಿತ ಪ್ರವೇಶವಿದ್ದು ಕಲಾಸಕ್ತರಿಗೆ ಹಾರ್ದಿಕ ಸ್ವಾಗತ. ಎಲ್ಲಾ ಕಾರ್ಯಕ್ರಮಗಳು ಸಾಯಂಕಾಲ ಗಂಟೆ 6.30ಕ್ಕೆ ಸರಿಯಾಗಿ ಆರಂಭಗೊಳ್ಳಲಿವೆ ಎಂದು ಪರಿಚಯ ಪ್ರಕಟಣೆ ತಿಳಿಸಿದೆ.