Updated News From Kaup

ಅಂಡರ್ - 19 ಕ್ರಿಕೆಟಿಗೆ ಕಟಪಾಡಿಯ ತೇಜಸ್ವಿನಿ

Posted On: 16-11-2023 11:55AM

ಕಟಪಾಡಿ : ಬಿಸಿಸಿಐ ನಡೆಸುವ ಅಂಡರ್-19 ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ಉಡುಪಿ ಜಿಲ್ಲೆಯ ಕಟಪಾಡಿಯ ಕೆಆರ್ ಎಸ್ ಕ್ರಿಕೆಟ್ ಅಕಾಡೆಮಿಯ ತೇಜಸ್ವಿನಿ ಉದಯ್ ಆಯ್ಕೆಯಾಗಿದ್ದಾರೆ.ಇವರು ಆರಂಭಿಕ ಆಟಗಾರ್ತಿ ಮತ್ತು ಮಧ್ಯಮ ವೇಗಿ ಆಗಿದ್ದು,ಭರವಸೆಯ ಬ್ಯಾಟಿಂಗ್ ಮೂಲಕ ರಾಜ್ಯ ತಂಡಕ್ಕೆ ಪ್ರವೇಶ ಮಾಡಿದ್ದಾರೆ.

5ನೇ ವಯಸ್ಸಿನಲ್ಲಿ ಬಿಳಿ ಜೆರ್ಸಿ ತೊಟ್ಟು ಕ್ರಿಕೆಟ್ ಆಡಬೇಕೆಂದು ಹಠಹಿಡಿದ ತೇಜಸ್ವಿನಿಗೆ ಬ್ಯಾಟ್ ಹಿಡಿಯಲು ಹೇಳಿಕೊಟ್ಟು ಶುಭ ಹಾರೈಸಿದ್ದು ಭಾರತದ ಮಾಜಿ ಆಟಗಾರ ಸೈಯದ್ ಕಿರ್ಮಾನಿ ಎಂಬುದು ವಿಶೇಷ.

ಎಂಜಿಎಂ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ತೇಜಸ್ವಿನಿ,ಕಳೆದ ವರ್ಷ ರಾಜ್ಯ ಸಂಭಾವ್ಯ ತಂಡದಲ್ಲಿದ್ದರು.ಆದರೆ ಪ್ರಧಾನ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಈ ವರ್ಷ ಲಭಿಸಿದ ಅವಕಾಶಗಳನ್ನೆಲ್ಲ ಸದುಪಯೋಗಪಡಿಸಿಕೊಂಡರು. ತಂದೆ ಉದಯ್ ಕುಮಾರ್ ಅವರ ಶಿಸ್ತಿನ ತರಬೇತಿ ಕೂಡ ಆಕೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿತು. ತೇಜಸ್ವಿನಿ ಇತ್ತೀಚೆಗೆ ಶೈನ್ ಅಕಾಡೆಮಿಯಲ್ಲಿ ನಡೆದ ಪಂದ್ಯದಲ್ಲಿ 90 ಎಸೆತಗಳಿಂದ ಶತಕ ಬಾರಿಸಿದ್ದರು. ಇದರಲ್ಲಿ 20 ಬೌಂಡರಿ ಸೇರಿತ್ತು.

ವಿವಿಧ ಪಂದ್ಯಗಳಲ್ಲಿ 350ಕ್ಕೂ ಹೆಚ್ಚು ರನ್ ಗಳಿಸಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ತೇಜಸ್ವಿನಿಯ ಆಯ್ಕೆ ಕರಾವಳಿಯ ಯುವ ಮಹಿಳಾ ಕ್ರಿಕೆಟಿಗರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಸಾಮಾನ್ಯವಾಗಿ ರಾಜ್ಯ ತಂಡಕ್ಕೆ ಬೆಂಗಳೂರು ವಲಯದ ಆಟಗಾರರು ಆಯ್ಕೆಯಾಗುವುದೇ ಹೆಚ್ಚು ಉಡುಪಿ ಜಿಲ್ಲೆಯಿಂದ ಮಹಿಳಾ ಕ್ರಿಕೆಟಿಗರೊಬ್ಬರು ರಾಜ್ಯವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ಸಂಗತಿ. ಇವರು ಕಟಪಾಡಿಯ ಶ್ರೀಶೈಲ ಹಾಗೂ ಉದಯ್ ಕುಮಾರ್ ದಂಪತಿ ಪುತ್ರಿ.

ಕಾರ್ಕಳ : ಬ್ರೈಟ್ ಗ್ರೂಪ್ ಫ್ರೆಂಡ್ಸ್ ಸೂಡ - 9 ನೇ ವರ್ಷದ ಅಶ್ವತ್ಥ ಪೂಜೆ, ಸಾಮೂಹಿಕ ಗೋ ಪೂಜೆ

Posted On: 14-11-2023 05:37PM

ಕಾರ್ಕಳ : ಬ್ರೈಟ್ ಗ್ರೂಪ್ ಫ್ರೆಂಡ್ಸ್ (ರಿ.) ಸೂಡ ಇವರ ವತಿಯಿಂದ ಒಂಬತ್ತನೇ ವರ್ಷದ ಅಶ್ವತ್ಥ ಪೂಜೆ, ಸಾಮೂಹಿಕ ಗೋ ಪೂಜೆಯು ಸೂಡ ಸುಬ್ರಹ್ಮಣ್ಯ ಅನುದಾನಿತ ಶಾಲಾ ಬಳಿಯ ಅಶ್ವತ್ಥ ವೃಕ್ಷದ ಬಳಿ, ಸೂಡ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರಾದ ಶ್ರೀಶ ಭಟ್ ರವರ ನೇತೃತ್ವದಲ್ಲಿ ಶ್ರೀ ವಿಷ್ಣುಸಹಸ್ರನಾಮ ಮತ್ತಿತರ ಧಾರ್ಮಿಕ ಕಾರ್ಯಗಳೊಂದಿಗೆ ನೆರವೇರಿತು.

ಗ್ರಾಮಸ್ಥರು ತಮ್ಮ ಗೋ ಮಾತೆಯೊಂದಿಗೆ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಗೋ ಮಾತೆಗೆ ಕಡುಬು, ಬಾಳೆ ಹಣ್ಣು, ಹಿಂಡಿ ತಿನ್ನಿಸುವುದರೊಂದಿಗೆ ನಮಸ್ಕರಿಸಿ ಪ್ರಸಾದ ಸ್ವೀಕರಿಸಿದರು. ಬಳಿಕ ಸೂಡ ಸರಕಾರಿ ಪ್ರೌಢ ಶಾಲಾ ಮುಂಬಾಗದ ಮೈದಾನದಲ್ಲಿ ಸಾಮೂಹಿಕ ವಾಹನ ಪೂಜೆಯನ್ನು ನೆರವೇರಿಸಲಾಯಿತು.

ರಾಜೇಶ್ ಭಟ್, ವಸುಧೀಶ್ ಭಟ್, ವಿಭುಧೇಶ್ ಭಟ್ ರವರು ಪೂಜಾ ಕಾರ್ಯದಲ್ಲಿ ಸಹಕರಿಸಿದರು.

ಸಂಘದ ಅಧ್ಯಕ್ಷರಾದ ರವಿರಾಜ್ ಕುಲಾಲ್, ಕಾರ್ಯದರ್ಶಿ ರೋಶನ್, ಮತ್ತು ಸರ್ವ ಸದಸ್ಯರು, ಜನನಿ ಮಹಿಳಾ ಮಂಡಳಿ ಸೂಡ ಇದರ ಅಧ್ಯಕ್ಷೆ ವಿದ್ಯಾಲಕ್ಷ್ಮಿ ಆರ್ ಭಟ್, ಗೌರವಾಧ್ಯಕ್ಷೆ ದೀಪಿಕಾ ಅಶೋಕ್ ಮತ್ತು ಸದಸ್ಯರು ಉಪಸ್ಥಿತರಿದ್ದರು.

ಕಾಪು ಮಾರಿಗುಡಿ ಜೀರ್ಣೋದ್ಧಾರ : ಕೋಟೆ ಗ್ರಾಮ ಸಮಿತಿ ರಚನಾ ಸಭೆ ಸಂಪನ್ನ

Posted On: 14-11-2023 03:10PM

ಕಾಪು : ಇಲ್ಲಿನ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಕಾಪು ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾಮದಲ್ಲೂ ಗ್ರಾಮ ಸಮಿತಿ ರಚಿಸಿ, ಪ್ರತಿ ಮನೆಗೂ ಮನವಿ ಪತ್ರ ತಲುಪಿಸಿ ಅಮ್ಮನ ಅಭಯ ವಾಕ್ಯದಂತೆ ದೇವಳ ನಿರ್ಮಾಣದ ವಿಷಯ ಪ್ರಪಂಚದ ಮೂಲೆ ಮೂಲೆಗೂ ತಲುಪಬೇಕೆನ್ನುವುದು ಅಭಿವೃದ್ಧಿ ಸಮಿತಿಯ ಆಶಯದಂತೆ ಶನಿವಾರ ಸಂಜೆ ಕೋಟೆ ಗ್ರಾಮದ ಗ್ರಾಮ ಸಮಿತಿ ರಚನಾ ಸಭೆ ಕೋಟೆ ಶ್ರೀ ಪಂಡರಿನಾಥ ಭಜನಾ ಮಂದಿರ, ಮಂಜ ಶ್ರೀ ನಾಗ ಬ್ರಹ್ಮಾದಿ ಪಂಚದೈವಿಕ ಸನ್ನಿಧಿಯಲ್ಲಿ ಜರಗಿತು. ಪ್ರಾರ್ಥನೆಯೊಂದಿಗೆ ಒಂಬತ್ತು ಜನ ಮಹಿಳೆಯರಾದ ಶಾರದಾ ಡಿ. ಕೆ, ಸ್ಮಿತಾ ಪ್ರವೀಣ್ ಕಾಂಚನ್, ಗೀತಾ ಲಕ್ಷ್ಮಣ್, ಚಂದ್ರಿಕಾ ಚಂದ್ರಹಾಸ್, ಶಶಿಪ್ರಕಾಶ್, ವನಿತಾ ನಾಗೇಶ್, ಬೇಬಿ ಜಿ. ಕರ್ಕೇರ, ಅಶ್ವಿನಿ ಸುನೀಲ್ ಮತ್ತು ಮಾಲತಿ ಶಂಕರ್ ಇವರು ಏಕಕಾಲದಲ್ಲಿ ದೀಪ ಬೆಳಗಿಸಿ ಅಮ್ಮನಿಗೆ ಆರತಿ ಎತ್ತುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ನಂತರ ಗ್ರಾಮ ಸಮಿತಿಯ ಮಹಿಳಾ ಮುಖ್ಯ ಸಂಚಾಲಕರಾದ ಗೀತಾಂಜಲಿ ಸುವರ್ಣ ಮಾತನಾಡಿ ಅಮ್ಮನ ಸೇವೆ ಮಾಡುವುದು ನಮ್ಮೆಲ್ಲರ ಭಾಗ್ಯ,ಈ ಅವಕಾಶ ಮತ್ತೆಂದೂ ಸಿಗದು ಗ್ರಾಮ ಸಮಿತಿಯ ಮುಖೇನ ನಾವೆಲ್ಲರೂ ಅಮ್ಮನ ಸೇವೆಯನ್ನು ಮಾಡಲು ಕಾರ್ಯಪ್ರವೃತರಾಗೋಣ ಎಂದರು. ಉಪಾಧ್ಯಕ್ಷರಾದ ಮಾಧವ ಆರ್ ಪಾಲನ್ ಗ್ರಾಮ ಸಮಿತಿಯ ದ್ಯೇಯೋದ್ದೇಶಗಳನ್ನು ತಿಳಿಸುವ ಮೂಲಕ ಗ್ರಾಮದ ಪ್ರತೀ ಮನೆಯಿಂದಲೂ ಕನಿಷ್ಠ ಒಂಬತ್ತು ಶಿಲಾಸೇವೆಯನ್ನು (ರೂಪಾಯಿ 9,999) ನೀಡುವ ಮೂಲಕ "ಕಾಪುವಿನ ಅಮ್ಮನ ಮಕ್ಕಳು" ತಂಡಕ್ಕೆ ಸೇರಬೇಕು ಎಂದು ವಿನಂತಿಸಿದರು.

ನಂತರ ಗ್ರಾಮ ಸಮಿತಿಯನ್ನು ರಚನೆ ಮಾಡಿ ಕೋಟೆ ಗ್ರಾಮದ 9 ಜನ ಪುರುಷರ 1 ತಂಡ ಮುಖ್ಯ ಸಂಚಾಲಕರಾಗಿ ಚಂದ್ರಹಾಸ್ ಕೋಟ್ಯಾನ್ ಹಾಗೂ 9 ಜನ ಮಹಿಳೆಯರ 1 ತಂಡ ಮುಖ್ಯ ಸಂಚಾಲಕರಾಗಿ ಶಾರದಾ ಡಿ. ಕೆ ಇವರನ್ನು ಆಯ್ಕೆ ಮಾಡಲಾಯಿತು. ಗ್ರಾಮದ ಪ್ರತಿ ಮನೆ ಮನೆಗೆ ತಲುಪಿಸುವ ಮನವಿ ಪತ್ರವನ್ನು ಮತ್ತು ಸ್ಟಿಕ್ಕರನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಗ್ರಾಮದ ಪ್ರಮುಖರಿಗೆ ಹಸ್ತಾಂತರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಪ್ರವೀಣ್ ಕಾಂಚನ್ ವಹಿಸಿದ್ದರು.

ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರು ಮತ್ತು ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರರಾದ ರತ್ನಾಕರ ಶೆಟ್ಟಿ ನಡಿಕೆರೆ, ಪ್ರಚಾರ ಸಮಿತಿಯ ಸಂಚಾಲಕರಾದ ಜಯರಾಮ ಆಚಾರ್ಯ, ರಘುರಾಮ್ ಶೆಟ್ಟಿ ಕೊಪ್ಪಲಂಗಡಿ, ಪ್ರಭಾತ್ ಶೆಟ್ಟಿ ಮೂಳೂರು, ಪ್ರಚಾರ ಸಮಿತಿಯ ಮಹಿಳಾ ಸಮಿತಿಯ ಮುಖ್ಯ ಸಂಚಾಲಕರಾದ ಸಾವಿತ್ರಿ ಗಣೇಶ್, ಕೋಟೆ ಗ್ರಾಮದ ಪ್ರಮುಖರಾದ ಸದಿಯ ಸುವರ್ಣ ಕೋಟೆ, ಸಂಜೀವ ಮೆಂಡನ್, ಜಗನ್ನಾಥ ಕೋಟೆ, ಶೇಖರ್ ಸುವರ್ಣ, ಪಂಡರಿನಾಥ ಭಜನಾ ಮಂಡಳಿಯ ಅಧ್ಯಕ್ಷರಾದ ಪ್ರವೀಣ್ ಕಾಂಚನ್ ಉಪಸ್ಥಿತರಿದ್ದರು. ಪ್ರಕಾಶ್ ಸುವರ್ಣ ಕಟಪಾಡಿ ಸ್ವಾಗತಿಸಿದರು. ಜೀರ್ಣೋದ್ಧಾರದ ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಯೋಗೀಶ್ ವಿ. ಶೆಟ್ಟಿ ಬಾಲಾಜಿ ಪ್ರಸ್ತಾವನೆಗೈದರು.

ಕಾಪು : ಪೈಯ್ಯಾರು ಹಿಂದೂ ಜಾಗರಣ ವೇದಿಕೆ ವತಿಯಿಂದ 3 ನೇ ವರ್ಷದ ಸಾರ್ವಜನಿಕ ಗೋಪೂಜೆ, ವಾಹನ ಪೂಜೆ

Posted On: 14-11-2023 12:07PM

ಕಾಪು : ಹಿಂದೂ ಜಾಗರಣ ವೇದಿಕೆ ಪೈಯ್ಯಾರು ಘಟಕ ವತಿಯಿಂದ 3 ನೇ ವರ್ಷದ ಸಾರ್ವಜನಿಕ ಗೋಪೂಜೆ ಹಾಗೂ ವಾಹನ ಪೂಜೆಯು ಪೈಯ್ಯಾರು ಕರಿಯಣ್ಣ ಶೆಟ್ಟಿ ಶಾಲೆಯ ಮೈದಾನದಲ್ಲಿ ಜರಗಿತು.

ಈ ಸಂದರ್ಭ ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕುತ್ಯಾರು ಗ್ರಾಮ ಪಂಚಾಯತ್ ಸದಸ್ಯ ಗಣೇಶ್ ಶೆಟ್ಟಿ ಪೈಯ್ಯಾರು, ಕೃತಿ ಮೂಡಬೆಟ್ಟು, ಹಿಂದೂ ಜಾಗರಣ ವೇದಿಕೆ ಪ್ರಮುಖರಾದ ಗುರುಪ್ರಸಾದ್ ಸೂಡ, ರಾಜೇಶ್ ಪೈಯ್ಯಾರು ಉಪಸ್ಥಿತರಿದ್ದರು.

ಪಲಿಮಾರು : ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು - ಸಾಮೂಹಿಕ ಗೋವು ಪೂಜಾ ಕಾರ್ಯಕ್ರಮ

Posted On: 14-11-2023 11:58AM

ಪಲಿಮಾರು : ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು ಇದರ ನೇತೃತ್ವದಲ್ಲಿ ಪ್ರತಿ ವರ್ಷದಂತೆ ದೀಪಾವಳಿಯ ಪಾಡ್ಯದಂದು ಸಾಮೂಹಿಕ ಗೋವು ಪೂಜಾ ಕಾರ್ಯಕ್ರಮ ಮಂಗಳವಾರದಂದು ಶ್ರೀ ಪ್ರದೀಪ್ ಶಾಂತಿ ಅವರಾಲು ಇವರ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭ ಪಲಿಮಾರು ಪಂಚಾಯತ್ ಮಾಜಿ ಅಧ್ಯಕ್ಷರಾದ ಗಾಯತ್ರಿ ಪ್ರಭು, ಪಲಿಮಾರು ಪಂಚಾಯತ್ ಉಪಾಧ್ಯಕ್ಷರಾದ ರಾಯೇಶ್ವರ ಪೈ, ಪ್ರಸಾದ್ ಪಲಿಮಾರು , ಸುರೇಶ್ ಪೂಜಾರಿ ಅವರಾಲು, ತಿಮ್ಮಪ್ಪ ಪೂಜಾರಿ, ಸಂಸ್ಥೆಯ ಎಲ್ಲಾ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಮದರ್ ತೆರೆಸಾ ವಿಚಾರ ವೇದಿಕೆ ಮಂಗಳೂರು : ಸೌಹಾರ್ದ ದೀಪಾವಳಿಯ ಸಂಭ್ರಮ - 2023 ಸಂಪನ್ನ

Posted On: 14-11-2023 08:05AM

ಮಂಗಳೂರು : ವಾಮಂಜೂರಿನ ಮಂಗಳಜ್ಯೋತಿ ಜಂಕ್ಷನ್ ಬಳಿ ಅಂಧಕಾರದಲ್ಲಿ ಮುಳುಗಿದ ಸಮಾಜವನ್ನು ಬೆಳಕಿನತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಮದರ್ ತೆರೆಸಾ ವಿಚಾರ ವೇದಿಕೆ ,ಮಂಗಳೂರು ಇದರ ನೇತೃತ್ವದಲ್ಲಿ ಸೌಹಾರ್ದ ದೀಪಾವಳಿಯ ಸಂಭ್ರಮ - 2023ರ ಕಾರ್ಯಕ್ರಮ ಜರಗಿತು. ಸೌಹಾರ್ದ ದೀಪಾವಳಿ ಸಂಭ್ರಮ-2023 ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶ್ರೀಯುತ ಮುಲ್ಲೈ ಮುಹಿಲನ್ ರವರು ದೀಪ ಬೆಳಗಿಸಿ ಉದ್ಘಾಟಿಸಿ, ದೀಪಗಳ ಹಬ್ಬ ದೀಪಾವಳಿಯಲ್ಲಿ ಎರಡು ಅರ್ಥ ಕಾಣುತ್ತೇವೆ. ತನ್ನನ್ನು ಉರಿಸಿಕೊಂಡು ಬೇರೆಯವರಿಗೆ ಬೆಳಕು ಕೊಡುವುದು ಒಂದು ಅರ್ಥವಾದರೆ, ಒಂದು ದೀಪದಿಂದ ನೂರಾರು-ಸಾವಿರಾರು ದೀಪಗಳು ಬೆಳಗುತ್ತದೆ ಎಂಬುದು ಇನ್ನೊಂದು ಅರ್ಥ. ಬೆಳಕು ಜ್ಞಾನದ ಸಂಕೇತವೂ ಹೌದು. ಎಲ್ಲರೂ ಕೂಡಿಕೊಂಡು ಈ ಬೆಳಕಿನ ಹಬ್ಬ ಆಚರಿಸಬೇಕು. ಆಗಲೇ ದೀಪಾವಳಿ ಅರ್ಥಪೂರ್ಣವಾಗುವುದು ಎಂದು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಮಂಗಳೂರು ಪ್ರಗತಿಪರ ಅಧ್ಯಾಪಕರ ವೇದಿಕೆಯ ಅಧ್ಯಕ್ಷ ಡಾ. ವಸಂತ್ ಕುಮಾರ್ ಮಾತನಾಡಿ, ಬೆಳಕು ಎಲ್ಲರಿಗೂ ಬೇಕು. ಹಾಗಾಗಿ ಬೆಳಕಿನ ಹಬ್ಬಕ್ಕೆ ಜಾತಿ-ಧರ್ಮ ಎಂಬುದಿಲ್ಲ. ದಾರಿ ತಪ್ಪುತ್ತಿರುವ ಯುವಕರಿಗೆ ಉತ್ತಮ ಸಂಸ್ಕಾರ ನೀಡಿ ಉತ್ತಮ ಸಮಾಜದ ನಿರ್ಮಿಸಬೇಕು. ಸಮಾಜ ಎಂಬ ಮೂರಕ್ಷರದಲ್ಲಿ `ಸಂಬ೦ಧಗಳು ಮಾನವನಲ್ಲಿ ಜನಿಸಬೇಕು ಎಂಬ ಅರ್ಥ ಅಡಗಿದೆ. ಅದೇ ಸಮಾಜ ಭಾವನೆ. ಸಂಸ್ಕಾರ ಎಂದರೆ ಬರೇ ದೇವಸ್ಥಾನ ಕಟ್ಟುವುದು ಮೂರ್ತಿ ಕೆತ್ತುವುದಲ್ಲ. ಎಲ್ಲರಿಗೂ ಸಮಾನ ಶಿಕ್ಷಣ ಮತ್ತು ಆರೋಗ್ಯ ನೀಡುವುದು ಎಂದರು.

ಮ೦ಗಳೂರಿನ ಸಂದೇಶ ಪ್ರತಿಷ್ಠಾನದ ನಿರ್ದೇಶಕ ಫಾ. ಸುದೀಪ್ ಪೌಲ್ ಮಾತನಾಡಿ, ಭಾರತದ ಇತಿಹಾಸ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆ ಕಂಡಿದೆ. ಆಗ ಎಲ್ಲರೂ ಪ್ರೀತಿ, ಸಾಮರಸ್ಯ, ಭಾವೈಕ್ಯತೆಯಿಂದ ಜೀವಿಸುತ್ತಿದ್ದೆವು. ಆದರೆ ಈಗ ಎಲ್ಲವೂ ಬದಲಾಗಿದೆ. ದೀಪಾವಳಿ ಎಲ್ಲ ಧರ್ಮದ ಗಡಿ ಮೀರಿ ಆಚರಿಸುವ ಹಬ್ಬವಾಗಲಿ ಎಂದು ಶುಭ ಹಾರೈಸಿದರು.

ಸಂತ ಮದರ್ ತೆರೇಸಾ ವಿಚಾರ ವೇದಿಕೆ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ ಅಧ್ಯಕ್ಷತೆ ವಹಿಸಿದ್ದರು. ಕು. ಲತೀಕ್ಷಾ ಸ್ವಾಗತ ನೃತ್ಯ ಮಾಡಿದರು. ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿ ಪ್ರಸ್ತಾವಿಕ ಮಾತನ್ನಾಡಿದರು. ಕಾರ್ಪೊರೇಟರ್ ಅಬ್ದುಲ್ ಲತೀಫ್ ಕಂದಕ್, ಮಂಗಳಜ್ಯೋತಿಯ ಕೊರಗಜ್ಜ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಲಕ್ಷ್ಮಣ್ ವಾಮಂಜೂರು, ಮಂಗಳೂರು ಬೆಥನಿ ಸಿಸ್ಟರ್ ಪ್ರೊವಿನ್ಸಿಯಲ್ ಸುಪೀರಿಯರ್ ಸಿಸ್ಟರ್ ಸಿಸಿಲಿಯಾ ಮೆಂಡೋನ್ಸಾ,ಮಂಜುಳ ನಾಯಕ್ (ಜಂಟಿ ಕಾರ್ಯದರ್ಶಿ), ಡಾಲ್ಫಿ ಡಿ’ಸೋಜ(ಕೋಶಾಧಿಕಾರಿ) ಹಾಗೂ ಇತರ ಹಿರಿಯ ಗಣ್ಯರು, ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮನೋಜ್ ಕುಮಾರ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ್ ಮತ್ತು ಬಳಗದವರು ಸೌಹಾರ್ದ ನೃತ್ಯ ಪ್ರದರ್ಶಿಸಿದರು.

ಉಡುಪಿ ಜಿಲ್ಲೆಯ ನೇಜಾರು ಪ್ರಕರಣ : ಕೊಲೆಗಾರನನ್ನು ಆದಷ್ಟು ಬೇಗ ಬಂಧಿಸಿ ನ್ಯಾಯ ಒದಗಿಸಬೇಕು - ರಮೀಜ್ ಹುಸೇನ್

Posted On: 14-11-2023 07:45AM

ಉಡುಪಿ : ಜಿಲ್ಲೆಯ ನೇಜಾರುನಲ್ಲಿ ನಡೆದ ಅಮಾನವೀಯ ಕೊಲೆ ಘಟನೆ ಮನುಷ್ಯತ್ವವನ್ನು ಮರೆ ಮಾಚುವಂತಾಗಿದೆ. ಜಿಲ್ಲೆಯಲ್ಲಿ ನಡೆದ ಈ ಕೂಲೆ ಘಟನೆ ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದೆ. ತಾಯಿ ಮಕ್ಕಳನ್ನು ಕೊಂದು ಮರೆಯಾದ ಕೊಲೆಗಾರನನ್ನು ಆದಷ್ಟು ಬೇಗ ಬಂಧಿಸಿ ನ್ಯಾಯ ಒದಗಿಸಬೇಕು ಎಂದು ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ‌ರಮೀಜ್ ಹುಸೇನ್ ಆಗ್ರಹಿಸಿದ್ದಾರೆ.

ಈ ಘಟನೆಯನ್ನು ವಿಶೇಷವಾಗಿ ಪರಿಗಣಿಸಿ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಯವರು ನೇತೃತ್ವ ವಹಿಸಿ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ದೇಶ ಜನ ದೀಪಾವಳಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ಬೆಳ್ಳಂಬೆಳಿಗ್ಗೆ ಒಂದೇ ಮನೆಯ ತಾಯಿ ಹಾಗು ಮೂರು ಮಕ್ಕಳನ್ನು ಕೊಂದು ಹಾಕಿದ್ದು ದು:ಖಕರವಾಗಿದೆ. ಈ ಘಟನೆಯಿಂದ ಜಿಲ್ಲೆಯ ಜನತೆ ದು:ಖಿಸುವಂತೆ ಮಾಡಿದೆ.‌ ಮನುಷ್ಯನ ಜೀವಕ್ಕೆ ಬೆಲೆ ಇಲ್ಲದ ರೀತಿಯಾಗಿದ್ದು ಜನತೆ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಘಟನೆ ನಡೆದು ಎರಡು ದಿನ ಕಳೆದರೂ ಆರೋಪಿ ಪತ್ತೆಯಾಗದಿರುವುದರಿಂದ ಈ ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಕೊಲೆಗಾರನನ್ನು ಬಂಧಿಸಿ, ತನಿಖೆ ನಡೆಸಿ ನ್ಯಾಯ ಒದಗಿಸಿ, ಮುಂದೆ ಈ ರೀತಿಯ ಘಟನೆಯ ನಡೆಯದಂತೆ ಕಠಿಣ ಕಾನೂನು ಕ್ರಮ ಜಾರಿಯಾಗಬೇಕು ಎಂದು ಸರಕಾರಕ್ಕೆ ಮನವಿ ಮಾಡಿದ್ದಾರೆ.

ನಾಳೆ : ಹಿಂದೂ ಜಾಗರಣ ವೇದಿಕೆ ಪೈಯ್ಯಾರು ಘಟಕ ವತಿಯಿಂದ ಗೋಪೂಜೆ ಹಾಗೂ ವಾಹನ ಪೂಜೆ

Posted On: 13-11-2023 07:09PM

ಕಾಪು : ಹಿಂದೂ ಜಾಗರಣ ವೇದಿಕೆ ಪೈಯ್ಯಾರು ಘಟಕ ಕಾಪು ತಾಲೂಕು ವತಿಯಿಂದ ಗೋಪೂಜೆ ಹಾಗೂ ವಾಹನ ಪೂಜೆಯು ನವೆಂಬರ್ 14, ಮಂಗಳವಾರದಂದು ಬೆಳಿಗ್ಗೆ 9.30 ರಿಂದ ಪೈಯ್ಯಾರು ಶಾಲೆ ಸಮೀಪ ನಡೆಯಲಿದೆ ಎಂದು ಕಾರ್ಯಕ್ರಮದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿರುವರು.

ಮಟ್ಟಾರು : 11 ನೇ ವರ್ಷದ ಸಾರ್ವಜನಿಕ ಗೋಪೂಜೆ, ವಾಹನ ಪೂಜೆ

Posted On: 13-11-2023 05:11PM

ಮಟ್ಟಾರು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ನೇತೃತ್ವದಲ್ಲಿ 11 ನೇ ವರ್ಷದ ಸಾರ್ವಜನಿಕ ಗೋಪೂಜೆ ಮತ್ತು ವಾಹನ ಪೂಜೆ ನಡೆಯಿತು.

ವಿಷ್ಣುಮೂರ್ತಿ ಉಪಾಧ್ಯಾಯರ ಮುಂದಾಳುತ್ವದಲ್ಲಿ ಗೋಪೂಜೆ ಮತ್ತು ವಾಹನ ಪೂಜೆ ನಡೆಯಿತು. ನವೆಂಬರ್ 5 ರಂದು ಜರಗಿದ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ನಿವೃತ್ತ ಅಧ್ಯಾಪಕರಾದ ಭಾಸ್ಕರ ಶೆಟ್ಟಿ ಬೆಳೆಂಜಾಲೆ ಸಭಾಧ್ಯಕ್ಷತೆ ವಹಿಸಿದ್ದರು. ಉಡುಪಿ ಶಾಸಕರಾದ ಯಶಪಾಲ್ ಸುವರ್ಣ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಅರ್ಚಕ ವಿಷ್ಣುಮೂರ್ತಿ ಉಪಾಧ್ಯಾಯ, ಬಜರಂಗದಳ ಕಾಪು ಪ್ರಖಂಡ ಗೋರಕ್ಷಾ ಪ್ರಮುಖ್ ಅಭಿನಂದನ್ ಪಡುಬಿದ್ರಿ, ಶಿರ್ವ ವಲಯ ಸಂಚಾಲಕ ವಿಶ್ವನಾಥ ಆಚಾರ್ಯ, ವಿಶ್ವ ಹಿಂದು ಪರಿಷದ್ ಮಟ್ಟಾರು ಅಧ್ಯಕ್ಷ ಜಗದೀಶ ಆಚಾರ್ಯ, ಕೋಶಾಧಿಕಾರಿ ಅಜಿತ್ ಪೂಜಾರಿ, ಮಾತೃಶಕ್ತಿ ಪ್ರಮುಖ್ ಸುಮತಿ ಸಾಲ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಂಜಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಜಯಪ್ರಕಾಶ್ ಪ್ರಭು ಸ್ವಾಗತಿಸಿ, ವಂದಿಸಿದರು.

ಕಟಪಾಡಿ : ಯೋಗ ದೀಪಾವಳಿ ಸಂಪನ್ನ

Posted On: 13-11-2023 05:03PM

ಕಟಪಾಡಿ : ಇಲ್ಲಿನ ಪತಂಜಲಿ ಯೋಗ ಸಮಿತಿ ಉಡುಪಿ ಕಟಪಾಡಿ ಕಕ್ಷೆ ವತಿಯಿಂದ ಕಟಪಾಡಿ ಇನ್ವೆಂಜರ್ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ವಿಶೇಷವಾಗಿ ಹಣತೆ ದೀಪಗಳೊಂದಿಗೆ ಯೋಗ ದೀಪಾವಳಿ ಕಾರ್ಯಕ್ರಮವನ್ನು ಕಟಪಾಡಿ ಮಹಿಳಾ ಮಂಡಲ ಸಭಾಂಗಣದಲ್ಲಿ ಸೋಮವಾರ ಆಚರಿಸಲಾಯಿತು.

ಕಟಪಾಡಿ ಎಸ್ ವಿ ಎಸ್ ವಿದ್ಯಾವರ್ಧಕ ಸಂಘದ ಸಂಚಾಲಕ ಕೆ.ಸತ್ಯೇಂದ್ರ‌ ಪೈ ದೀಪಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ‌ ಸಂದರ್ಭ ಮಾತನಾಡಿದ ಅವರು ಸನಾತನ ಹಿಂದೂ ಧರ್ಮದಲ್ಲಿ ದೀಪಾವಳಿ ಹಬ್ಬಕ್ಕೆ ವಿಶೇಷ ಮಾನ್ಯತೆ ನೀಡಲಾಗಿದೆ. ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವಲ್ಲಿ ಬೆಳಕು ಎಷ್ಟು ಪ್ರಾಮುಖ್ಯವೋ ಆರೋಗ್ಯಕರ ಜೀವನ ಸಾಗಿಸುವಲ್ಲಿ ನಿರಂತರ ಯೋಗಾಭ್ಯಾಸ ಕೂಡಾ ಅತೀ ಅಗತ್ಯ ಎಂದರು.

ಪತಂಜಲಿ ಯೋಗ ಸಮಿತಿ ಕಟಪಾಡಿ ಕಕ್ಷೆಯ ಯೋಗಶಿಕ್ಷಕ ರಾಜೇಶ್ ಕಾಮತ್ ಅವರು ದೀಪದ ಬೆಳಕಿನೊಂದಿಗೆ ಮಹತ್ವದ ಯೋಗಾಸನಗಳನ್ನು ಕಲಿಸಿಕೊಟ್ಟರು. ಸಹಶಿಕ್ಷಕ ರಾಮಚಂದ್ರ ಪೈ, ಶಿಬಿರಾರ್ಥಿಗಳಾದ ಪ್ರದೀಪ್ ಆರ್. ಶೆಟ್ಟಿ, ಅನುಪಮ ಪೈ, ಅರುಂಧತಿ ಕಾಮತ್, ನಂದಿನಿ ಶೆಣೈ, ಸುಧೀಂದ್ರ ಶೆಟ್ಟಿ ಪಾಂಗಳ, ಪ್ರವೀಣ್ ಭಕ್ತ, ಸಂಪತ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಕಟಪಾಡಿ ಸೃಷ್ಠಿ ಫೌಂಡೇಶನ್ ಅಧ್ಯಕ್ಷ ಪ್ರಕಾಶ ಸುವರ್ಣ ಕಟಪಾಡಿ ಸ್ವಾಗತಿಸಿದರು. ರಂಗನಟ ನಾಗೇಶ್ ಕಾಮತ್ ಕಟಪಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.