Updated News From Kaup

ಶಿರ್ವ : ಸಿಡಿಲಾಘಾತದಿ ಮೃತಪಟ್ಟ ವಿದ್ಯಾರ್ಥಿಯ ಕುಟುಂಬದ ನೆರವಿಗೆ ಮನವಿ

Posted On: 28-05-2024 12:43PM

ಶಿರ್ವ : ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಗ್ರಾಮದ, ಮಟ್ಟಾರ್ ಅಂಚೆಯ ಮಾಣಿಬೆಟ್ಟು ವ್ಯಾಪ್ತಿಯ ಕೃಷಿ ಕೂಲಿ ಕಾರ್ಮಿಕರು, ಕೃಷಿಯನ್ನೇ ಅವಲಂಬಿತವಾಗಿ ಜೀವನ ನಡೆಸುತ್ತಿದ್ದ ರಮೇಶ್ ಪೂಜಾರಿ ಹಾಗು ರತ್ನ ಪೂಜಾರ್ತಿಯವರ ಮಗನಾದ ರಕ್ಷಿತ್ ಪೂಜಾರಿ (20) ಇವರು ಮೇ 23 ರಂದು ಸಾಯಂಕಾಲ ಸುಮಾರು 6.45 ರ ಹೊತ್ತಿಗೆ ಅಪ್ಪಳಿಸಿದ ಗುಡುಗು ಮಿಂಚಿನ ಆರ್ಭಟಕ್ಕೆ ಸಿಲುಕಿ ಮೃತಪಟ್ಟಿರುತ್ತಾರೆ.

ಒಬ್ಬನೇ ಮಗ ಮನೆಯ ಆಧಾರ ಸ್ಥಂಭವಾಗಿದ್ದ, ಆತನನ್ನು ಕಳೆದುಕೊಂಡ ಮನೆಯವರ ಪರಿಸ್ಥಿತಿಯು ಶೋಚನೀಯವಾಗಿದೆ. ಕೃಷಿ ಕೂಲಿಯನ್ನು ನಡೆಸಿಕೊಂಡು ಜೀವನ ನಡೆಸುತ್ತಿದ್ದ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ.

ಸಹೃದಯಿಗಳಾದ ತಾವು, ವಿಧಿಯ ಕ್ರೂರ ಆಟಕ್ಕೆ ತುತ್ತಾಗಿ ಬಲಿಯಾದ ರಕ್ಷಿತ್ ರವರಿಗೆ ಚಿರಶಾಂತಿಯನ್ನು ಕೋರುವ ಮುಖೇನ , ಬಡ ಕುಟುಂಬಕ್ಕೆ ಸಹಾಯಾರ್ಥವಾಗಿ, ಸಹಾಯಧನವನ್ನು ಮಾಡಬಹುದಾಗಿದೆ.

ಸಹಾಯಧನವನ್ನು ಮಾಡುವವರು, ಈ ಕೆಳಕಂಡ ಬ್ಯಾಂಕ್ ಖಾತೆ ಸಂಖ್ಯೆಗೆ ಸಹಾಯಧನ ವರ್ಗಾವಣೆ ಮಾಡಬಹುದಾಗಿದೆ. ಹೆಸರು: ರತ್ನ ಪೂಜಾರ್ತಿ ಬ್ಯಾಂಕ್ ಹೆಸರು:union Bank of India ಬ್ಯಾಂಕ್ ಖಾತೆ ಸಂಖ್ಯೆ:520101043248329 IFSC:UBIN0913910 Branch :ಕಟ್ಟಿಂಗೇರಿ(moodubelle) Google pay number:9945354172 (ರತ್ನ ಪೂಜಾರ್ತಿ)

ಕಾಪು : ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಉಚಿತ ಆರೋಗ್ಯ, ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಸಂಪನ್ನ

Posted On: 28-05-2024 12:40PM

ಕಾಪು : ಶ್ರೀದೇವಿ ಭಜನಾ ಮಂಡಳಿ ಮಂಡೇಡಿ ಇವರ ವತಿಯಿಂದ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಪ್ರಸಾದ್ ನೇತ್ರಾಲಯ, ಉಡುಪಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕಾಪು, ಸಮುದಾಯ ಆರೋಗ್ಯ ಕೇಂದ್ರ ಶಿರ್ವ ಇವರ ಸಹಯೋಗದೊಂದಿಗೆ ಶ್ರೀದೇವಿ ಭಜನಾ ಮಂಡಳಿ ಮಂಡೇಡಿ ಇಲ್ಲಿ ಉಚಿತ ಆರೋಗ್ಯ ತಪಾಸಣೆ, ಮಾಹಿತಿ ಹಾಗೂ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಭಜನಾ ಮಂಡಳಿಯ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ವಿ.ಜಿ.ಶೆಟ್ಟಿ ನೇರವೇರಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಡಾ. ರೋಶ್ನಿ ಪೂಂಜಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಕೃಷ್ಣ ಮೂರ್ತಿಯವರು ಅಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ನೀಡಿದರು. ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ಸಾಂಕ್ರಾಮಿಕ ರೋಗಗಳ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರಸಾದ್ ನೇತ್ರಾಲಯದ ತಜ್ಞ ವೈದ್ಯರಾದ ಡಾ|| ತೇಜಸ್ವಿನಿ, ನೇತ್ರಾಧಿಕಾರಿ ಅಮ‌ರ್, ಸಾರ್ವಜನಿಕ ಸಂಪರ್ಕಾಧಿಕಾರಿ ಹರ್ಷ, ಸಿ.ಎ. ಬ್ಯಾಂಕಿನ ಉಪಾಧ್ಯಕ್ಷರಾದ ಚಂದ್ರಹಾಸ ಶೆಟ್ಟಿ, ಹಾಲು ಉತ್ಪಾದಕ ಸಂಘದ ಅಧ್ಯಕ್ಷರಾದ ಶಿವರಾಮ್ ಜೆ. ಶೆಟ್ಟಿ, ರಮೇಶ್ ಕೆ ಮಧ್ಯಸ್ಥರು, ರಮೇಶ್ ಶೆಟ್ಟಿ ಗೌರವ ಸಲಹೆಗಾರರು, ಭಜನಾ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಶ್ರೀದೇವಿ ಭಜನಾ ಮಂಡಳಿಯ ಅಧ್ಯಕ್ಷರಾದ ಲಕ್ಷ್ಮಣ ಶೆಟ್ಟಿಯವರು ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶಕುಂತಳಾ ವಂದಿಸಿದರು.

ಹೊಟೇಲ್ ಕಾರ್ಮಿಕರ ಮಕ್ಕಳಿಗೆ ಪ್ರೋತ್ಸಾಹ ಧನ ಅರ್ಜಿ ಆಹ್ವಾನ ; ಯಾರೆಲ್ಲಾ ಅರ್ಹರು?

Posted On: 28-05-2024 12:37PM

ಬೆಂಗಳೂರು : ಹೊಟೇಲ್ ಕಾರ್ಮಿಕರ ಮಕ್ಕಳಿಗಾಗಿ ಕರ್ನಾಟಕ ಹೊಟೇಲ್ ಕಾರ್ಮಿಕರ ಸಂಘ 2023-24 ನೇ ಸಾಲಿನ ಪ್ರೋತ್ಸಾಹ ಧನ ನೀಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಯಾರೆಲ್ಲಾ ಅರ್ಹರು? ಹೇಗೆ ಅರ್ಜಿ ಸಲ್ಲಿಸಬಹುದು‌? ಈ ಎಲ್ಲಾ ಮಾಹಿತಿಗಳನ್ನು ಒಂದೊಂದಾಗಿ ನೋಡೋಣ.

ಅರ್ಜಿ ಹಾಕಲು ಅರ್ಹತೆಗಳೇನು? *ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ತಂದೆ ಅಥವಾ ತಾಯಿ ಹೊಟೇಲ್ ಕಾರ್ಮಿಕರಾಗಿರಬೇಕು ಮತ್ತು ಏಪ್ರಿಲ್ 30, 2024ರ ಒಳಗಾಗಿ ಕಡ್ಡಾಯವಾಗಿ ಹೊಟೇಲ್ ಕಾರ್ಮಿಕ ಸಂಘದ ಐಡಿ ಕಾರ್ಡ್ ಹೊಂದಿರಬೇಕು. * ವಿದ್ಯಾರ್ಥಿಯು 2023-24 ನೆ ಸಾಲಿನಲ್ಲಿ SSLC ಅಥವಾ PUC ಮುಗಿಸಿರಬೇಕು. * 2023-24ನೇ ಸಾಲಿನ SSLC ಅಥವಾ ಪಿಯುಸಿಯಲ್ಲಿ ಕಡ್ಡಾಯವಾಗಿ ಕನಿಷ್ಠ 80% ಅಂಕ ಪಡೆದಿರಬೇಕು. * ಜೂನ್ 15 ರ ಒಳಗೆ ಅರ್ಜಿ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. * ವಿದ್ಯಾರ್ಥಿಯ ಆಧಾರ್ ಕಾರ್ಡ್ ಮತ್ತು ಅಂಕಪಟ್ಟಿಯನ್ನು ಅರ್ಜಿಯ ಜೊತೆ ಕಡ್ಡಾಯವಾಗಿ ಲಗತ್ತಿಸಬೇಕು.

ಅರ್ಜಿ ಸಲ್ಲಿಸುವುದು ಹೇಗೆ? * 9035655406 ಅಥವಾ 9743539990 ಗೆ ವಾಟ್ಸಪ್ ಮಾಡುವ ಮೂಲಕ ಅರ್ಜಿ ಪಡೆದುಕೊಳ್ಳಬೇಕು. * ಅರ್ಜಿಯಲ್ಲಿ ಕೇಳಿರುವ ಮಾಹಿತಿಯನ್ನು ತುಂಬಿಸಿ. * ಒಂದು ಇತ್ತೀಚಿನ ಭಾವಚಿತ್ರ, ಆಧಾರ್ ಕಾರ್ಡ್ ಮತ್ತು ಅಂಕ ಪ್ರತಿಗಳನ್ನು ಇರಿಸಿ. ಅನಫಾ ಗ್ರಾಂಡ್, ನಂ 1353 29 ನೇ ಮುಖ್ಯ ರಸ್ತೆ, ಉತ್ತರಹಳ್ಳಿ, ಪೂರ್ಣಪ್ರಜ್ಞಾ ಬಡಾವಣೆ ಬೆಂಗಳೂರು 560061, ಈ ವಿಳಾಸಕ್ಕೆ ಕಳುಹಿಸಿ ಕೊಡಿ. ಅರ್ಜಿಗಳನ್ನು ಪರಿಗಣಿಸಿ ಆಯ್ದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಶ್ರೀ ಸಾಯಿ ತುತ್ತು ಯೋಜನೆ ರಾಜ್ಯದೆಲ್ಲೆಡೆ ವಿಸ್ತರಿಸುವ ಸಂಕಲ್ಪ : ಶ್ರೀ ಸಾಯಿಈಶ್ವರ್ ಗುರೂಜಿ

Posted On: 28-05-2024 12:31PM

ಕಟಪಾಡಿ : ಶ್ರೀ ಸಾಯಿ ಮುಖ್ಯ ಪ್ರಾಣದೇವಸ್ಥಾನ ಶ್ರೀ ದ್ವಾರಕಾಮಯಿ ಮಠ ಇದರ ವತಿಯಿಂದ ವಿಶ್ವ ಹಸಿವು ದಿನಾಚರಣೆ ಕಾರ್ಯಕ್ರಮ ಮೇ.28ರಂದು ನಡೆಯಿತು. ಈ ಸಂದಭ೯ದಲ್ಲಿ ಮುಷ್ಠಿ ಅಕ್ಕಿ ಅಭಿಯಾನದ ಚಾಲನೆ ನಡೆಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಬಿಜೆಪಿ ಮಹಿಳಾ ಮೋಚಾ೯ ಮಾಜಿ ಜಿಲ್ಲಾದ್ಯಕ್ಷೆ ವೀಣಾ ಶೆಟ್ಟಿ ಕ್ಷೇತ್ರದ ವತಿಯಿಂದ ಸಾಯಿ ತುತ್ತು ಯೋಜನೆ ಮೂಲಕ ಸಾವಿರಾರು ನಿಗ೯ತಿಕರಿಗೆ ಅನ್ನದಾನ ನಡೆಯುತ್ತಿದೆ. ಈ ಮೂಲಕ ಹಸಿವು ಮುಕ್ತ ಸಮಾಜದ ನಿಮಾ೯ಣಕ್ಕೆ ಗುರೂಜಿಯವರಿಗೆ ನಾವೆಲ್ಲರೂ ಸಹಕಾರ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಕ್ಷೇತ್ರದ ಶ್ರೀ ಸಾಯಿ ಈಶ್ವರ ಗುರೂಜಿ, ಸಾಯಿ ತುತ್ತು ಯೋಜನೆ ರಾಜ್ಯದಲ್ಲೆಡೆ ವಿಸ್ತರಿಸುವ ಸಂಕಲ್ಪ ಹೊಂದಲಾಗಿದ್ದು, ಪ್ರತಿಯೊಂದು ಕುಟುಂಬ ಒಂದು ಮುಷ್ಟಿ ಅಕ್ಕಿಯನ್ನು ಸಮಾಜದ ನಿಗ೯ತಿಕರಿಗೆ ನೀಡಲು ತೆಗೆದಿಡಬೇಕು . ಆ ಮೂಲಕ ಹಸಿವು ಮುಕ್ತ ದೇಶದ ನಿರ್ಮಾಣಕ್ಕೆ ನಾವೆಲ್ಲರೂ ಕಂಕಣಭದ್ಧರಾಗಬೇಕು ಕ್ಷೇತ್ರದ ವತಿಯಿಂದ ವಿವಿಧ ರೀತಿಯಲ್ಲಿ ಸಮಾಜಮುಖಿ ಕಾರ್ಯಕ್ರಮಗಳು ನಿತ್ಯ ನಿರಂತರ ನಡೆಯುತ್ತಿದ್ದು ಇದು ಎಲ್ಲರ ಸಹಕಾರದಿಂದ ಮತ್ತಷ್ಟು ವೇಗ ಪಡೆಯಿತುಕೊಳ್ಳುತ್ತಿರುವುದು ಸಂತೋಷದಾಯಕ ಎಂದರು.

ಈ ಸಂದಭ೯ದಲ್ಲಿ ಪ್ರಕಾಶ್ ಆಚಾರ್ಯ, ವಿಜಯ ಕುಂದರ್, ನಾರಾಯಣ ಪೂಜಾರಿ, ಶಿಲ್ಪಾ ಮಹೇಶ್ ಶ್ವೇತಾ ಜಯರಾಮ್, ಭಾರತಿ ಸಂಧ್ಯಾ ರಾಜೇಶ್, ಸತೀಶ್ ದೇವಾಡಿಗ, ವಿಘೇಶ್ ನೀಲಾವರ, ನಿಲೇಶ್ ಸುಪ್ರೀತಾ, ಲಕ್ಷ್ಮೀ ಮುಂತಾದವರು ಉಪಸ್ಥಿತರಿದ್ದರು. ರಾಘವೇಂದ್ರ ಪ್ರಭು, ಕವಾ೯ಲು ನಿರೂಪಿಸಿ, ವಂದಿಸಿದರು.

ಬ್ರಹ್ಮಾವರ : ಪರಿಸರ ಕುರಿತ ವಿಚಾರ ಸಂಕಿರಣ

Posted On: 26-05-2024 10:08AM

ಬ್ರಹ್ಮಾವರ : ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ, ಭಾರತೀಯ ಜನ ಔಷಧಿ ಕೇಂದ್ರ ಮತ್ತು ರೋಟರಿ ಕ್ಲಬ್ ಬ್ರಹ್ಮಾವರ ಇದರ ಸಂಯುಕ್ತ ಆಶ್ರಯದಲ್ಲಿ ಮಳೆ ಬೆಳೆಗಾಗಿ 'ಪ್ರಾಣಿ ಪಕ್ಷಿ ಸಂಕುಲ ಮನುಕುಲದ ಉಳಿವಿಗಾಗಿ ಪರಿಸರ ಜಾಗೃತಿ ವಿಚಾರ ಸಂಕಿರಣ ಬ್ರಹ್ಮಾವರ ರೋಟರಿ ಭವನದಲ್ಲಿ ನಡೆಯಿತು. ರೋಟರಿ ಅಧ್ಯಕ್ಷ ಉದಯ ಕುಮಾರ್ ಕಾಯ೯ಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ಕಾಯ೯ಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ಉರಗ ತಜ್ಞ ಗುರುರಾಜ್ ಸನಿಲ್ ಮಾತನಾಡಿ, ನಾಗಬನಗಳನ್ನು ಅಭಿವೃದ್ಧಿ ಹೆಸರಿನಲ್ಲಿ ನಾಶ ಮಾಡುತ್ತಿರುವುದು ಸರಿಯಲ್ಲ. ಪ್ರಕೃತಿಯ ಉತ್ತಮ ಕೊಡುಗೆಯಾದ ಬನ ಗಳನ್ನು ಉಳಿಸುದರಿಂದ ಬಹಳಷ್ಟು ಜೀವಿಗಳನ್ನು ನಾಶವಾಗದಂತೆ ನೋಡಬಹುದು ಎಂದರು.

ಮುನಿಯಾಲು ಆಯುವೇ೯ದ ಕಾಲೇಜಿನ ಪ್ರಾಧ್ಯಾಪಕ ಡಾ. ಚಂದ್ರಕಾಂತ್ ಭಟ್ ರವರು ವಿವಿಧ ಆಯುವೇ೯ದ ಸಸ್ಯಗಳ ಪರಿಚಯ ಮತ್ತು ಅದರ ಉಪಯೋಗ ಕುರಿತು ಮಾಹಿತಿ ನೀಡಿದರು. ಪರಿಸರ ಹೋರಾಟಗಾರ ಪ್ರೇಮಾನಂದ ಕಲ್ಮಾಡಿ ಮಾತನಾಡಿ ಪರಿಸರ ಉಳಿದರೆ ಮಾತ್ರ ನಾವೆಲ್ಲರೂ ಉಳಿಯಬಹುದು ಹೀಗಾಗಿ ಈ ಬಗ್ಗೆ ಗಿಡಗಳನ್ನು ಬೆಳೆಸುವ ಕಾಯ೯ ಮಾಡಬೇಕು ಎಂದರು.

ವೇದಿಕೆಯಲ್ಲಿ ಜಯಂಟ್ಸ್ ಯುನಿಟ್ ನಿದೇ೯ಶಕ ವಿವೇಕಾನಂದ ಕಾಮತ್, ಕಾಯ೯ದಶಿ೯ ಮಿಲ್ಟನ್ ಒಲಿವೇರ್ ಮುಂತಾದವರಿದ್ದರು. ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು ಪ್ರಸ್ತಾವನೆಗೈದರು. ಜಯಂಟ್ಸ್ ಅಧ್ಯಕ್ಷರಾದ ಸುಂದರ ಪೂಜಾರಿ ಮೂಡುಕುಕ್ಕುಡೆ ಸ್ವಾಗತಿಸಿದರು. ರಾಘವೇಂದ್ರ ಕವಾ೯ಲು ನಿರೂಪಿಸಿದರು.

ಕಾಪು : ಲೋಕಾಯುಕ್ತ ಉಪ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ಹೊಸ ಮಾರಿಗುಡಿ ದೇವಳ ಭೇಟಿ

Posted On: 26-05-2024 10:03AM

ಕಾಪು : ಇಲ್ಲಿ ಪೊಲೀಸ್ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದ ಸುನಿಲ್ ನಾಯಕ್ ಅವರು ಪ್ರಸ್ತುತ ಬೆಂಗಳೂರು ಲೋಕಾಯುಕ್ತದ ಉಪ ಪೋಲಿಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಜಿರ್ಣೋದ್ಧಾರಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಆಗಮಿಸಿ ಶ್ರೀದೇವಿಯ ದರುಶನ ಪಡೆದು "ಕಾಪುವಿನ ಅಮ್ಮನ ಅನುಗ್ರಹ ಪ್ರಸಾದ" ವನ್ನು ಸ್ವೀಕರಿಸಿದರು.

ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿಯವರು ಜಿರ್ಣೋದ್ಧಾರ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಈಗಾಗಲೇ ಶಿಲಾಸೇವೆಯನ್ನು ನೀಡಿದ್ದು ಇನ್ನು ಮುಂದೆ ನಡೆಯಲಿರುವ ಸ್ವರ್ಣ ಗದ್ದುಗೆಯ ಸ್ವರ್ಣ ಸಮರ್ಪಣೆಯ ಕಾರ್ಯಕ್ರಮದಲ್ಲೂ ಭಾಗಿಯಾಗುತ್ತೇನೆ, ಕಾಪು ಮಾರಿಯಮ್ಮನ ಶಕ್ತಿ ಅಪಾರ ಎಂದರು.

ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯಾ, ಪ್ರಬಂಧಕರಾದ ಗೋವರ್ಧನ್ ಸೇರಿಗಾರ್ ಮತ್ತು ಸಿಬ್ಬಂದಿ ಲಕ್ಷ್ಮಣ್ ಶೆಟ್ಟಿ ಮಂಡೇಡಿ ಉಪಸ್ಥಿತರಿದ್ದರು.

ಹೆಜಮಾಡಿ ಟೋಲ್ ವಿರೋಧಿ ಹೋರಾಟ ಸಮಿತಿ : ಟೋಲ್‌ ವಿನಾಯಿತಿಗೆ ಆಗ್ರಹ

Posted On: 24-05-2024 07:56PM

ಪಡುಬಿದ್ರಿ : ಹೆಜಮಾಡಿ ಟೋಲ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಸ್ಥಳೀಯರಿಗೆ ಟೋಲ್ ವಿನಾಯಿತಿ ರದ್ದುಪಡಿಸಿರುವುದನ್ನು ವಿರೋಧಿಸಿ ಶುಕ್ರವಾರ ಟೋಲ್ ಮುಂಭಾಗ ಹಕ್ಕೊತ್ತಾಯ ಸಭೆ ನಡೆಸಿ ಟೋಲ್ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿದ ಟೋಲ್ ಪ್ರಬಂಧಕ ತಿಮ್ಮಯ್ಯ ಮಾತನಾಡಿ, ಮುಂದಿನ ವಾರದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾಸ್ತಾನ, ಹೆಜಮಾಡಿ ಟೋಲ್ ಸಮಸ್ಯೆಯ ಇತ್ಯರ್ಥಕ್ಕೆ ಸಭೆಯನ್ನು ಜಿಲ್ಲಾಧಿಕಾರಿ ಕರೆಯಲಿದ್ದಾರೆ. ಅದುವರೆಗೂ ಸ್ಥಳೀಯರಿಗಿದ್ದ ವಿನಾಯಿತಿಯನ್ನು ಯಥಾಸ್ಥಿತಿ ಮುಂದುವರಿಸಲಾಗುವುದು ಎಂದರು.

ಹೋರಾಟ ಸಮಿತಿ ಅಧ್ಯಕ್ಷ ಶೇಖರ್ ಹೆಜಮಾಡಿ ಮಾತನಾಡಿ, ಯಾವುದೇ ಕಾರಣಕ್ಕೂ ಈ ಭಾಗದಲ್ಲಿ ಸ್ಥಳೀಯ ವಾಹನಗಳಿಗೆ ಟೋಲ್ ವಿಧಿಸಬಾರದು. ಇಲ್ಲದಿದ್ದಲ್ಲಿ ತೀವ್ರ ಹೋರಾಟ ಎದುರಿಸಬೇಕು ಎಂದು ಎಚ್ಚರಿಸಿದರು.

ಹಕ್ಕೊತ್ತಾಯ ಸಭೆಯಲ್ಲಿ ಶೇಖರ್ ಹೆಜ್ಮಾಡಿ, ಶೇಕಬ್ಬ ಕೋಟೆ, ಸಂತೋಷ್ ‌ಪಡುಬಿದ್ರಿ, ನವೀನಚಂದ್ರ ಜೆ ಶೆಟ್ಟಿ, ವೃೆ ಸುಕುಮಾರ್, ಶಶಿಕಾಂತ್ ಪಡುಬಿದ್ರಿ, ವಿಶ್ವಾಸ್ ಅಮೀನ್, ಗುಲಾಂ ಮೊಹಮ್ಮದ್, ಸುಧಾಕರ್ ಶೆಟ್ಟಿ ಬಿಕ್ರಿಬೆಟ್ಟು, ರಾಲ್ಪಿ ಡಿ ಕೋಸ್ತಾ, ರವಿ ಎಚ್ ಕುಂದರ್, ರೇಷ್ಮಾ ಮೆಂಡನ್, ಶಶಿಕಲಾ ಪೂಜಾರಿ, ನಿರ್ಮಲ, ಸೃಯದ್ ನಿಝಾಮ್, ಸುಧೀರ್ ಕರ್ಕೇರ, ಉಮಾನಾಥ್ ಪಡುಬಿದ್ರಿ, ದಿನೇಶ್ ಕೋಟ್ಯಾನ್ ಪಲಿಮಾರ್, ಜಿತೇಂದ್ರ ಪುರ್ಟಾಡೋ, ಮಧು ಅಚಾರ್ಯ, ಲೋಕೇಶ್ ಅಮೀನ್, ತಸ್ನೀನ್ ಅರಾ, ಶರ್ಪುದ್ದೀನ್ ಶೇಕ್, ಅಶೋಕ್ ಸಾಲ್ಯಾನ್, ಕೇಶವ್ ಸಾಲ್ಯಾನ್ ಹೆಜಮಾಡಿ, ಸನಾ ಇಬ್ರಾಹಿಮ್, ಹಸನ್ ಕೋಡಿ, ದೀಪಕ್ ಕೋಟ್ಯಾನ್ ಹೆಜಮಾಡಿ, ಎಮ್ .ಎಸ್ ಶಾಫಿ, ರಮೀಜ್ ಹುಸೇನ್, ರೋಶನ್ ಕಾಂಚನ್, ಪ್ರಾಣೇಶ್ ಹೆಜ್ಮಾಡಿ, ಅಬ್ದುಲ್ ಅಜೀಜ್ ಹೆಜಮಾಡಿ, ಪಾಂಡುರಂಗ ಕೋಟ್ಯಾನ್ , ಮೋಹನ್ ಉಪಸ್ಥಿತರಿದ್ದರು.

ಸೂರ್ಯಕಾಂತ್‌ ಜಯ ಸುವರ್ಣರಿಗೆ ಬೆಸ್ಟ್‌ ಚೇರ್‌ಮೆನ್ ಪ್ರಶಸ್ತಿ

Posted On: 24-05-2024 05:08PM

ಮಂಗಳೂರು : ಸೂರ್ಯಕಾಂತ್ ಜಯಸುವರ್ಣ ಅವರ ಅಧ್ಯಕ್ಷತೆಯಲ್ಲಿ ಅಭಿವೃದ್ದಿಯ ಪಥದಲ್ಲಿ ಸಾಗುತ್ತಿರುವ ಭಾರತ್‌ ಬ್ಯಾಂಕ್‌ ಗೆ ಮತ್ತೊಂದು ಪ್ರಶಸ್ತಿಯ ಗರಿ ಸೇರಿದೆ. “ಭಾರತ ರತ್ನ ಸಹಕಾರಿತ ಸನ್ಮಾನ-2024” ರಲ್ಲಿ ಬಹು-ರಾಜ್ಯ ಅನುಸೂಚಿತ ಸಹಕಾರಿ ಬ್ಯಾಂಕ್‌ಗಳ ವಿಭಾಗದಲ್ಲಿ “ಕೊ-ಅಪರೇಟಿವ್‌ ಬ್ಯಾಂಕ್‌ ಸಮ್ಮಿಟ್‌” ನಲ್ಲಿ ಬೆಸ್ ಚೇರ್‌ಮೆನ್‌ ಅವಾರ್ಡ್‌ಅನ್ನು ಸೂರ್ಯಕಾಂತ್‌ ಜಯಸುವರ್ಣ ಪಡೆದುಕೊಂಡಿದ್ದಾರೆ.

ಮುಂಬೈನ ಗ್ರ್ಯಾಂಡ್ ಲಲಿತ್ ಹೋಟೆಲ್‌ನಲ್ಲಿ ನಡೆದ ಪ್ರಶಸ್ತಿ ಸಮಾರಂಭ ಕಾರ್ಯಕ್ರಮದಲ್ಲಿ ಭಾರತ ಸರಕಾರದ ಸಂವಹನ ಸಚಿವಾಲಯದ ಮಹಾನಿರ್ದೇಶಕ ಸುಮ್ನೇಶ್ ಜೋಶಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ಈ  ಹಿಂದೆ 1991ರಲ್ಲಿ ಬ್ಯಾಂಕ್ ಜವಬ್ದಾರಿಯನ್ನು ಹೊತ್ತಿದ್ದ ಜಯ ಸುವರ್ಣರವರಿಗೆ ‘ಬೆಸ್ಟ್ ಚ್ಯಾರ್‌ಮ್ಯಾನ್ ಅವಾರ್ಡ್‌’ ಲಭಿಸಿತ್ತು. ಕೊ-ಅಪರೇಟಿವ್‌ ಬ್ಯಾಂಕ್‌ಗಳಲ್ಲಿ ಭಾರತ್ ಬ್ಯಾಂಕ್  ಮೊಟ್ಟ ಮೊದಲು ಆರ್‌ಬಿಐನಿಂದ ಮಾನ್ಯತೆ ಪಡೆದ ಹೆಗ್ಗಳಿಕೆ ಕೂಡಾ ಇದೆ. ಇದೀಗ ಜಯ ಸುವರ್ಣರವರ ಬಳಿಕ ಕಾರ್ಪರೇಟ್‌ ಬ್ಯಾಂಕ್‌ ವಲಯದಲ್ಲಿ ಬೆಸ್ಟ್ ಚ್ಯಾರ್‌ಮ್ಯಾನ್ ಅವಾರ್ಡ್‌ ಅನ್ನು ಸೂರ್ಯಕಾಂತ್ ಜಯಸುವರ್ಣ ತಮ್ಮದಾಗಿಸಿಕೊಂಡಿದ್ದಾರೆ

ಮೇ 23 ಭಾರತ್‌ ಬ್ಯಾಂಕ್‌ ಗೆ 25 ವರ್ಷ ಪೂರೈಸಿದ ಸಂಭದ್ರದ ದಿನವಾಗಿದ್ದು ಅಂದೇ ಈ ಪ್ರಶಸ್ತಿ ಲಭಿಸಿರುವುದು ಬಹಳ ವಿಶೇಷ. ಭಾರತ್ ಬ್ಯಾಂಕ್ ಇಂದು ದೇಶದ ಹಲವು ರಾಜ್ಯಗಳಲ್ಲಿ 100 ಕ್ಕೂ ಅಧಿಕ ಬ್ರಾಂಚ್‌ಗಳನ್ನು ಹೊಂದಿದ್ದು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದೆ.

ಪಡುಬಿದ್ರಿ : ಅದಾನಿ ಪವ‌ರ್ ಕಂಪನಿ‌ ಭದ್ರತಾ ಸಿಬ್ಬಂದಿ ಪ್ರತಿಭಟನೆ ; ಬೇಡಿಕೆ ಈಡೇರಿಕೆಗೆ ಒಪ್ಪಿಗೆ

Posted On: 24-05-2024 04:28PM

ಪಡುಬಿದ್ರಿ : ವೇತನ ಹೆಚ್ಚಳ, ತುಟ್ಟಿಭತ್ಯೆ ಏರಿಕೆ ಇತ್ಯಾದಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅದಾನಿ ಪವರ್ ಕಂಪನಿಯ ಭದ್ರತಾ ಸಿಬ್ಬಂದಿಗಳು ಗುರುವಾರ ಶಾಂತಿಯುತ ಪ್ರತಿಭಟನೆ ನಡೆಸಿದ್ದರು. ಸಿಬ್ಬಂದಿ ಬೇಡಿಕೆ ಈಡೇರಿಕೆಗೆ ಕಂಪನಿ ಒಪ್ಪಿಗೆ ಸೂಚಿಸಿ ಪ್ರತಿಭಟನೆಗೆ ಜಯ ಸಿಕ್ಕಿದಂತಾಗಿದೆ.

ಅದಾನಿ ಪವರ್ ಕಂಪನಿಯಲ್ಲಿ ಚೆನ್ನೈ ಮೂಲದ ಸೆಕ್ಯೂರಿಟಿ ಕಂಪೆನಿ ಗುತ್ತಿಗೆ ಕಾರ್ಮಿಕರಾಗಿ 19 ವರ್ಷಗಳಿಂದ ದುಡಿಯುತ್ತಿರುವ ಸುಮಾರು 74 ಭದ್ರತಾ ಸಿಬ್ಬಂದಿ ಶಾಂತಿಯುತ ಹೋರಾಟ ಆರಂಭಿಸಿದ್ದರು.

ಮೊದಲು ಇಲ್ಲಿನ ಸಿಬ್ಬಂದಿ ಪ್ರತೀಕ್ ಹೆಗ್ಡೆ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಇವರಿಗೆ ಇತರೆ ಭದ್ರತಾ ಸಿಬ್ಬಂದಿ ಬೆಂಬಲ ಸೂಚಿಸಿದ್ದರು.

ತುಟ್ಟಿಭತ್ಯೆ ಜತೆಗೆ ರೂ.400 ಸಂಬಳ ಏರಿಕೆ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಳೆದ ಎಪ್ರಿಲ್ ತಿಂಗಳಿಂದ ಗಾರ್ಡಿಯನ್ ಹಾಗೂ ಅದಾನಿ ಕಂಪೆನಿ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದೇವೆ. ಒಂದೂವರೆ ತಿಂಗಳಾದರೂ ಯಾವುದೇ ಸ್ಪಂದನೆ ದೊರಕಿಲ್ಲ. ಈ ನಿಟ್ಟಿನಲ್ಲಿ ಸತ್ಯಾಗ್ರಹ ಆರಂಭಿಸಿದ್ದೆವು. ಶಾಸಕರ ಮಧ್ಯಸ್ಥಿಕೆಯಲ್ಲಿ ಕಂಪೆನಿ ವೇತನ ಹೆಚ್ಚಳಕ್ಕೆ ಒಪ್ಪಿದ್ದು, ಇತರ ಬೇಡಿಕೆಗಳನ್ನು ಮುಂದಿನ ದಿನಗಳಲ್ಲಿ ಈಡೇರಿಸುವ ಭರವಸೆ ನೀಡಿದ್ದಾರೆ ಎಂದು ಕಾರ್ಮಿಕ ಮುಖಂಡ ಸುನಿಲ್‌ ಹೇಳಿದರು.

ಶಿರ್ವ : ಸಿಡಿಲು ಬಡಿದು ಯುವಕ ಮೃತ್ಯು

Posted On: 24-05-2024 03:57PM

ಶಿರ್ವ : ಸ್ನಾನಕ್ಕೆಂದು ತೆರಳಿದ್ದ ವೇಳೆ ಸಿಡಿಲು ಬಡಿದು ಕಾಲೇಜು ವಿದ್ಯಾರ್ಥಿಯೋರ್ವ ಬಲಿಯಾದ ಘಟನೆ ಶಿರ್ವ ಸಮೀಪದ ಮಾಣಿಬೆಟ್ಟು ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ

ಮೃತ ವಿದ್ಯಾರ್ಥಿಯನ್ನು, ಶಿರ್ವ ಮಾಣಿಬೆಟ್ಟು ತೋಟದ ಮನೆ ನಿವಾಸಿ ರಮೇಶ್ ಪೂಜಾರಿಯವರ ಮಗ ರಕ್ಷಿತ್ ಪೂಜಾರಿ (20) ಎಂದು ಗುರುತಿಸಲಾಗಿದೆ.

 ಈತ ಶಿರ್ವ ಎಂಎಸ್ಆರ್ ಎಸ್ ಕಾಲೇಜಿನ ಎರಡನೇ ವರ್ಷದ ಬಿಸಿಎ ವಿದ್ಯಾಭ್ಯಾಸ ಮಾಡುತ್ತಿದ್ದರು.

ಗುರುವಾರ ಸಂಜೆ ಸ್ನಾನ ಮಾಡಲು ಬಚ್ಚಲು ಮನೆಯ ಬಳಿ ನಿಂತಿದ್ದ ವೇಳೆ ಸಿಡಿಲು ಬಡಿದಿದೆ. ನೆಲದಲ್ಲಿ ಬಿದ್ದಿದ್ದ ಅವರನ್ನು ಮನೆ ಮಂದಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 10 ಗಂಟೆಯ ವೇಳೆಗೆ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.