Updated News From Kaup

ಕರಾವಳಿ ಸೊಗಡಿನ ಸದಭಿರುಚಿಯ ಚಿತ್ರಗಳ ನಿರ್ಮಾಣಕ್ಕೆ ಹೆಚ್ಚಿನ ಒಲವು ತೋರಬೇಕಿದೆ : ಬಿ.ಜಯಕರ್ ಶೆಟ್ಟಿ ಇಂದ್ರಾಳಿ

Posted On: 19-05-2024 10:19AM

ಉಡುಪಿ : ಸಿನೆಮಾಗಳಲ್ಲಿ ಕರಾವಳಿಯ ಕಲಾವಿದರು, ತಂತ್ರಜ್ಞರು ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ಮಾಡುತ್ತಿದ್ದು, ನಮ್ಮ ಕರಾವಳಿಯ ಸೊಗಡನ್ನು ಪ್ರತಿಬಿಂಬಿಸುವ ಸದಭಿರುಚಿಯ ಚಿತ್ರಗಳ ನಿರ್ಮಾಣಕ್ಕೆ ಹೆಚ್ಚಿನ ಒಲವು ತೋರಬೇಕಿದೆ ಎಂದು ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ. ಅಮ್ಚೆ ಕ್ರಿಯೇಷನ್ಸ್ ಬ್ಯಾನರ್ ನಡಿ ನಿರ್ಮಾಣಗೊಳ್ಳುತ್ತಿರುವ ಪ್ರೊಡಕ್ಷನ್ ನಂ.1 ಮಕ್ಕಳ ಕನ್ನಡ ಚಲನಚಿತ್ರದ ಕಲಾವಿದರ ಆಯ್ಕೆ ಶಿಬಿರವನ್ನು ಜಗನ್ನಾಥ ಸಭಾ ಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ ಶಿರ್ವ ಮಾತನಾಡಿ, ಕರಾವಳಿಯಲ್ಲಿ ಕೊಂಕಣಿ, ಕನ್ನಡ, ತುಳು ಭಾಷೆಯ ಚಿತ್ರಗಳಿಗೆ ಉತ್ತಮ ಪ್ರೇಕ್ಷಕರಿದ್ದಾರೆ. ಮೂರು ಭಾಷೆಗಳ ಸಿನೆಮಾಗಳ ನಿರ್ಮಾಣಕ್ಕೆ ವಿಫುಲ ಅವಕಾಶಗಳಿವೆ ಎಂದರು.

ಚಲನಚಿತ್ರ ಕಲಾವಿದರಾದ ಶೋಭರಾಜ್ ಪಾವೂರು, ರಾಹುಲ್ ಅಮೀನ್, ವಿನೀತ್ ಕುಮಾರ್, ಶೈಲಶ್ರೀ ಮುಲ್ಕಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ನಿರ್ಮಾಪಕರಾದ ದತ್ತಾತ್ರೇಯ ಪಾಟ್ಕರ್, ನಿರ್ದೇಶಕ ಪ್ರಕಾಶ ಸುವರ್ಣ ಕಟಪಾಡಿ, ಚಂದ್ರಕಲಾ ರಾವ್, ಕ್ಲಿಂಗ್ ಜಾನ್ಸನ್ ಉಪಸ್ಥಿತರಿದ್ದರು. ಚಿತ್ರ ನಿರ್ದೇಶಕ ಸಂದೀಪ್ ಕಾಮತ್ ಸ್ವಾಗತಿದರು. ಛಾಯಾಗ್ರಾಹಕ ಭುವನೇಶ್ ಪ್ರಭು ವಂದಿಸಿದರು.

ಟೋಲ್ ನಲ್ಲಿ ಸ್ಥಳೀಯ ವಾಹನಗಳಿಗೆ ನೀಡಿದ ವಿನಾಯಿತಿ ರದ್ದು ಪಡಿಸಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆ : ಶೇಖರ್ ಹೆಜ್ಮಾಡಿ

Posted On: 18-05-2024 09:58PM

ಹೆಜಮಾಡಿ : ಹೆಜಮಾಡಿ, ಸಾಸ್ತಾನ ಹಾಗು ತೊಕ್ಕೊಟ್ಟು ಟೋಲ್ ಪ್ಲಾಜಾಗಳನ್ನು ಹೊಸ ಕಂಪನಿಯು ಟೋಲ್ ಸಂಗ್ರಹಕ್ಕೆ ಗುತ್ತಿಗೆ ಪಡೆದಿದ್ದು, ಈ ಹಿಂದೆ 2016 ರಿಂದ ನಿರಂತರವಾಗಿ ಹೋರಾಟ ಮಾಡುವುದರ ಮೂಲಕ ಸ್ಥಳೀಯ ವಾಹನಗಳಿಗೆ ಟೋಲ್ ವಿನಾಯಿತಿಯನ್ನು ಪಡೆದಿರುತ್ತೇವೆ. ಸದ್ಯ ಟೋಲ್ ಪ್ಲಾಜಾದ‌ ಅಧಿಕಾರಿಗಳು ಸ್ಥಳೀಯ ವಾಹನಗಳು ಟೋಲ್ ನಲ್ಲಿ ಸಂಚಾರಿಸಿದಾಗ ಅವರ ಪಾಸ್ಟ್ ಟಾಗ್ ನಿಂದ ಹಣ ಕಡಿತಗೊಳಿಸುವ ಪ್ರಕ್ರಿಯೆ ಬಗ್ಗೆ ಸ್ಥಳೀಯ ವಾಹನ ಮಾಲೀಕರಿಂದ ದೂರುಗಳು ಬಂದಿರುತ್ತದೆ. ಸ್ಥಳೀಯರಿಗೆ ನೀಡಿದ ಟೋಲ್ ವಿನಾಯಿತಿಯನ್ನು ಸಂಪೂರ್ಣ ಕಿತ್ತು ಹಾಕುವ ಹುನ್ನಾರವಿದು.

ಟೋಲ್ ಪ್ಲಾಜಾದಲ್ಲಿ ಕಂಪನಿಯು ಕೋಟ್ಯಾಂತರ ರೂಪಾಯಿಯನ್ನು ಸಾರ್ವಜನಿಕರಿಂದ ಟೋಲ್ ನೆಪದಲ್ಲಿ ‌ಸಂಗ್ರಹಿಸಿ ಸಾರ್ವಜನಿಕರಿಗೆ ಮೂಲ ಸೌಕರ್ಯಗಳನ್ನು ನೀಡುವಲ್ಲಿ ವಿಫಲ‌ಗೊಂಡಿದೆ. ರಾಷ್ಟ್ರೀಯ ಹೆದ್ದಾರಿಯ ದುರವಸ್ಥೆಯನ್ನು ಹೇಳತಿರದು. ದಿನನಿತ್ಯ, ಪ್ರತಿ ಕ್ಷಣ ರಾಷ್ಟ್ರೀಯ ಹೆದ್ದಾರಿಯ ಅಸಮರ್ಪಕ ನಿರ್ವಹಣೆಯಿಂದ ಸಾರ್ವಜನಿಕರ ಅಮೂಲ್ಯ ಜೀವಗಳು ಬಲಿಯಾಗುತ್ತಿರುವುದು ರೂಢಿಯಾಗಿದೆ.

ಈ ಬಗ್ಗೆ ‌ಕಂಪನಿಯು ಯಾವುದೇ ಪರಿಹಾರವನ್ನು ನೀಡುವುದಿಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಜಮಾಡಿ ಟೋಲ್ ನಲ್ಲಿ ‌ಸ್ಥಳೀಯ ಲೋಕೋಪಯೋಗಿ ‌ರಸ್ತೆಗೆ ಟೋಲ್ ‌ನಿಗದಿಪಡಿಸಿದ್ದು ಕಂಪನಿಯ ಕಾನೂನು ಬಾಹಿರ ಕ್ರಮವಾಗಿರುತ್ತದೆ. ಅನೇಕ ಹೋರಾಟಗಳ ಮೂಲಕ ‌ಸ್ಥಳೀಯ ಯುವ ಜನರಿಗೆ ಉದ್ಯೋಗವನ್ನು ನೀಡಿದ್ದು, ಸದ್ಯ ಸ್ಥಳೀಯ ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಯು ಕಂಪನಿಯಿಂದ ನಡೆಯುತ್ತಿರುವುದು ಕಂಡು ಬಂದಿದೆ.

ಸ್ಥಳೀಯ ವಾಹನಗಳಿಗೆ ಈ ಹಿಂದೆ ನೀಡಿದ ವಿನಾಯಿತಿಯನ್ನು ವಜಾಗೊಳಿಸಿದರೆ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಖಾಸಗಿ ಜಾಗದಲ್ಲಿ ‌ರಸ್ತೆ ನಿರ್ಮಾಣ ಮಾಡುವುದರ ಮೂಲಕ ‌ಉಗ್ರ ಹೋರಾಟ‌ವನ್ನು ಹಮ್ಮಿಕೊಳ್ಳಲಾಗುವುದು. ಈ ಬಗ್ಗೆ ‌ಜನಪ್ರತಿನಿಧಿಗಳ‌, ವಾಹನ ಮಾಲಿಕರ ಹಾಗು ಸಾರ್ವಜನಿಕರ ಸಭೆಯನ್ನು ಕರೆದು ಚರ್ಚಿಸಿ ಮುಂದಿನ ‌ಹೋರಾಟಗಳ ರೊಪರೇಷೆಗಳನ್ನು ಸಿದ್ದ ಪಡಿಸಲಾಗುವುದು ಎಂದು ಟೋಲ್ ವಿರೋಧಿ ಹೋರಾಟ ‌ಸಮಿತಿ ಅಧ್ಯಕ್ಷರಾದ ಶೇಖರ ಹೆಜ್ಮಾಡಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ ಅರ್ಹತಾ ಪರೀಕ್ಷೆಯಲ್ಲಿ ಕ್ರಿಯೇಟಿವ್‌ ಪಿಯು ಕಾಲೇಜಿನ 21 ವಿದ್ಯಾರ್ಥಿಗಳು ಆಯ್ಕೆ

Posted On: 16-05-2024 09:13PM

ಕಾರ್ಕಳ : Institute of Company Secretary of India ರವರು ಮೇ 4, 2024 ರಲ್ಲಿ ನಡೆಸಿದ ಅತ್ಯಂತ ಕಠಿಣಕರವಾದ CSEET ಅರ್ಹತಾ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಪ.ಪೂ ಕಾಲೇಜಿನ ವಿದ್ಯಾರ್ಥಿಗಳಾದ ಭಕ್ತಿ ಕಾಮತ್, ಸಾನ್ವಿ ರಾವ್, ಶೆಟ್ಟಿ ತ್ರಿಶಾ ವಿಠ್ಠಲ್, ಹೃತಿಕ್,ಜೀವನ್ ಗೌಡ, ಆಶೆಲ್,ಕೀರ್ತಿ ಪಾಟ್ಕರ್, ಅನ್ವಿತ, ಭವಿಷ್ಯ ಶೆಟ್ಟಿ, ರಾಹುಲ್, ಅನನ್ಯ ಜೈನ್, ಪ್ರತ್ವೀಕ್, ಪ್ರಥಮ್,ಎ.ಎಸ್. ಚಿನ್ಮಯ, ಪ್ರಜ್ವಲ್ ರಾವ್, ಸುಖಿ ಸುಭಾಶ್, ಶ್ರೇಯಾ, ವಿನಯ್ ಪ್ರಶಾಂತ್, ಸುಪ್ರೀತ್ ಹೆಗ್ಡೆ, ಶ್ರೀ ಹರಿ ಹಾಗೂ ಸುವಿಕ್ಷಾ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಮುಂದಿನ ಹಂತದ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ.

ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ ನಡೆಸುವ ರಾಷ್ಟ್ರಮಟ್ಟದ ಅತೀ ಕಷ್ಟಕರವಾದ ಪರೀಕ್ಷೆ ಇದಾಗಿದ್ದು ಕ್ರಿಯೇಟಿವ್‌ನ ವಿದ್ಯಾರ್ಥಿಗಳು ಪಿ ಯು ಸಿ ಯಲ್ಲೇ ಮೊದಲ ಹಂತದಲ್ಲೇ ತೇರ್ಗಡೆ ಹೊಂದಿರುವುದು ವಿಶೇಷವಾಗಿದೆ.

ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕ್ರಿಯೇಟಿವ್‌ ಕಾಲೇಜಿನ ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌, ಆಡಳಿತ ಮಂಡಳಿಯವರು, CSEET ಸಂಯೋಜಕರಾದ ಜ್ಞಾನೇಶ್ ಕೋಟ್ಯಾನ್, ಉಪನ್ಯಾಸಕ ವರ್ಗದವರು ಅಭಿನಂದಿಸಿ, ಶುಭ ಹಾರೈಸಿದ್ದಾರೆ.

ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ ಅರ್ಹತಾ ಪರೀಕ್ಷೆಯಲ್ಲಿ ಕ್ರಿಯೇಟಿವ್‌ ಪಿಯು ಕಾಲೇಜಿನ 21 ವಿದ್ಯಾರ್ಥಿಗಳು ಆಯ್ಕೆ

Posted On: 16-05-2024 09:12PM

ಕಾರ್ಕಳ : Institute of Company Secretary of India ರವರು ಮೇ 4, 2024 ರಲ್ಲಿ ನಡೆಸಿದ ಅತ್ಯಂತ ಕಠಿಣಕರವಾದ CSEET ಅರ್ಹತಾ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಪ.ಪೂ ಕಾಲೇಜಿನ ವಿದ್ಯಾರ್ಥಿಗಳಾದ ಭಕ್ತಿ ಕಾಮತ್, ಸಾನ್ವಿ ರಾವ್, ಶೆಟ್ಟಿ ತ್ರಿಶಾ ವಿಠ್ಠಲ್, ಹೃತಿಕ್,ಜೀವನ್ ಗೌಡ, ಆಶೆಲ್,ಕೀರ್ತಿ ಪಾಟ್ಕರ್, ಅನ್ವಿತ, ಭವಿಷ್ಯ ಶೆಟ್ಟಿ, ರಾಹುಲ್, ಅನನ್ಯ ಜೈನ್, ಪ್ರತ್ವೀಕ್, ಪ್ರಥಮ್,ಎ.ಎಸ್. ಚಿನ್ಮಯ, ಪ್ರಜ್ವಲ್ ರಾವ್, ಸುಖಿ ಸುಭಾಶ್, ಶ್ರೇಯಾ, ವಿನಯ್ ಪ್ರಶಾಂತ್, ಸುಪ್ರೀತ್ ಹೆಗ್ಡೆ, ಶ್ರೀ ಹರಿ ಹಾಗೂ ಸುವಿಕ್ಷಾ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಮುಂದಿನ ಹಂತದ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ.

ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ ನಡೆಸುವ ರಾಷ್ಟ್ರಮಟ್ಟದ ಅತೀ ಕಷ್ಟಕರವಾದ ಪರೀಕ್ಷೆ ಇದಾಗಿದ್ದು ಕ್ರಿಯೇಟಿವ್‌ನ ವಿದ್ಯಾರ್ಥಿಗಳು ಪಿ ಯು ಸಿ ಯಲ್ಲೇ ಮೊದಲ ಹಂತದಲ್ಲೇ ತೇರ್ಗಡೆ ಹೊಂದಿರುವುದು ವಿಶೇಷವಾಗಿದೆ.

ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕ್ರಿಯೇಟಿವ್‌ ಕಾಲೇಜಿನ ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌, ಆಡಳಿತ ಮಂಡಳಿಯವರು, CSEET ಸಂಯೋಜಕರಾದ ಜ್ಞಾನೇಶ್ ಕೋಟ್ಯಾನ್,ಉಪನ್ಯಾಸಕ ವರ್ಗದವರು ಅಭಿನಂದಿಸಿ, ಶುಭ ಹಾರೈಸಿದ್ದಾರೆ.

ನೈರುತ್ಯ ಪದವೀಧರರ ಕ್ಷೇತ್ರ : ರಘುಪತಿ ಭಟ್ ನಾಮಪತ್ರ ಸಲ್ಲಿಕೆ

Posted On: 16-05-2024 08:54PM

ಉಡುಪಿ : ಕರ್ನಾಟಕ ವಿಧಾನ ಪರಿಷತ್ ಚುನಾವಣೆ -2024 ಇದರ ನೈರುತ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿಯಾಗಿ ಇಂದು ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಮಾಜಿ ಶಾಸಕ ರಘುಪತಿ ಭಟ್ ಅವರು ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಡಾ. ಶಿವಚರಣ್ ಶೆಟ್ಟಿ, ವಿಶ್ವನಾಥ್ ಭಟ್, ಚೇತನ್ ಮಂದಣ್ಣ, ಎಂ. ಶಂಕರ್ ಉಪಸ್ಥಿತರಿದ್ದರು.

ಮೇ 18 : ಶ್ರೀ ಪಲಿಮಾರು ಮೂಲ ಮಠದಲ್ಲಿ ವಿಹಿತಮ್ ಕಾರ್ಯಕ್ರಮ

Posted On: 16-05-2024 09:54AM

ಪಲಿಮಾರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಯ 18 ರಿಂದ 40 ರ ವಯೋಮಿತಿಯ ತ್ರಿಮತಸ್ಥ ಬ್ರಾಹ್ಮಣ ಯುವಕರ ಸಮಾವೇಶ ವಿಹಿತಮ್ ಮತ್ತು ಪೇಜಾವರ ಶ್ರೀಗಳ ಅಭಿನಂದನ ಸಮಾರಂಭವು ಮೇ 18, ಶನಿವಾರ ಪಲಿಮಾರು ಮೂಲ ಮಠದಲ್ಲಿ ನಡೆಯಲಿದೆ ಎಂದು ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹೇಳಿದರು. ಅವರು ಬುಧವಾರ ಪಲಿಮಾರು ಮೂಲ ಮಠದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ವಿಹಿತಮ್ ಸಮಾವೇಶವು ಹಿಂದೂ ಸಮಾಜದ ಭಾಗವಾದ ಬ್ರಾಹ್ಮಣ ಸಮಾಜದಲ್ಲಿಯ ಯುವಕರನ್ನು ಒಗ್ಗೂಡಿಸುವ ಪ್ರಯತ್ನವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರು ಅತಿಥಿಗಳಾಗಿದ್ದು, ವಿಚಾರಗೋಷ್ಠಿಗಳ ಮೂಲಕ ಚಿಂತನ ಮಂಥನ ನಡೆಯಲಿದೆ ಎಂದರು.

ಪಲಿಮಾರು ಮಠದ ದಿವಾನರಾದ ಜಿ.ವಾಸುದೇವ ಭಟ್ ಪೆರಂಪಳ್ಳಿ ಮಾತನಾಡಿ ಬ್ರಾಹ್ಮಣ ಸಮಾಜದ ಜೀವನಕ್ರಮ, ಅದರ ಸಂರಕ್ಷಣೆ, ವರ್ತಮಾನದ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜ ಆಂತರಿಕ ಮತ್ತು ಬಾಹ್ಯವಾಗಿ ಎದುರಿಸುತ್ತಿರುವ ಗಂಭೀರ ಸವಾಲುಗಳ ಬಗ್ಗೆ ಯುವ ಮನಸ್ಸುಗಳ ನಡುವೆ ಚಿಂತನ ಮಂಥನ ಹಾಗೂ ಬ್ರಾಹ್ಮಣರ ಸಂಘಟನಾತ್ಮಕ ಪ್ರಕ್ರಿಯೆಗಳಿಗೆ ಒಂದು ಶಕ್ತಿ ಮತ್ತು ಪ್ರೇರಣೆಯನ್ನು ನೀಡಬೇಕೆಂಬ ಉದ್ದೇಶದಿಂದ ವಿಹಿತಮ್ ಸಮಾವೇಶ ಹಮ್ಮಿಕೊಂಡಿದ್ದೇವೆ. ಉಭಯ ಜಿಲ್ಲೆಗಳ 18-40 ವಯಸ್ಸಿನ ವಿವಿಧ ಕ್ಷೇತ್ರಗಳಲ್ಲಿ ವಿದ್ಯಾಭ್ಯಾಸ ಮತ್ತುಉದ್ಯೋಗ ವ್ಯವಹಾರಗಳನ್ನು ನಡೆಸುತ್ತಿರುವ ಯುವಕರನ್ನು ಹಾಗೂ ಬೆಂಗಳೂರು, ಮೈಸೂರು ಹಾಗೂ ಇತರೆಡೆ ನೆಲೆಸಿರು ಕರಾವಳಿ ಮೂಲದ ತ್ರಿಮತಸ್ಥ ಯುವಕರನ್ನು ಆಹ್ವಾನಿಸಲಾಗಿದೆ. ಸುಮಾರು 600 ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದೆ.

ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಅಧ್ಯಕ್ಷತೆಯಲ್ಲಿ, ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ, ಜೊತೆಗೆ ಅವರನ್ನು ಅಭಿನಂದಿಸಲಾಗುವುದು. ವಿವಿಧ ಮಠಗಳ ಮಠಾಧಿಪತಿಗಳಿಂದ ಮಾರ್ಗದರ್ಶನ, ವಿವಿಧ ಕ್ಷೇತ್ರದ ಸಾಧಕರು ಉಪಸ್ಥಿತರಿರುವರು. ಬ್ರಾಹ್ಮಣರ ಅನನ್ಯ ಜೀವನ ಕ್ರಮ ಮತ್ತು ಸಂರಕ್ಷಣೆಯ ಅಗತ್ಯತೆ, ಬ್ರಾಹ್ಮಣ ಸಮಾಜದ ಆಂತರಿಕ ಮತ್ತು ಬಾಹ್ಯ ಸವಾಲುಗಳು ಮತ್ತು ಪರಿಹಾರೋಪಾಯಗಳ ವಿಚಾರದಲ್ಲಿ ವಿಚಾರಗೋಷ್ಠಿ ನಡೆಯಲಿದೆ. ಸಂಜೆ ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು, ವಿಷ್ಣು ಆಚಾರ್ಯ, ಪ್ರಣವ್ ಆಚಾರ್ಯ, ರಾಹುಲ್ ಬಾರಿತ್ತಾಯ, ಶಶಾಂಕ್ ಶಿವತ್ತಾಯ ಮತ್ತಿತರರು ಉಪಸ್ಥಿತರಿದ್ದರು.

ನೈಋತ್ಯ ಶಿಕ್ಷಕರ ಕ್ಷೇತ್ರ - ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ

Posted On: 15-05-2024 10:37PM

ಮಂಗಳೂರು : ವಿಧಾನ ಪರಿಷತ್‌ನ ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಾ.ಎಸ್.ಆರ್.ಹರೀಶ್ ಆಚಾರ್ಯ ಬುಧವಾರ ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಡಾ.ಎಸ್.ಆರ್.ಹರೀಶ್ ಆಚಾರ್ಯ, ರಾಜಕೀಯ ಪಕ್ಷಗಳು ಕರಾವಳಿ ಜಿಲ್ಲೆಗಳ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರದಲ್ಲಿ ಯಾವುದೇ ಪ್ರಾತಿನಿಧ್ಯ ನೀಡದೇ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಇದರಿಂದ ಕರಾವಳಿ ಭಾಗದ ಇರುವಿಕೆಯ ಅಸ್ತಿತ್ವವನ್ನೇ ನಿರಾಕರಿಸಿದಂತಾಗಿದೆ. ಆದುದರಿಂದ ಶಿಕ್ಷಕರ ಮತ್ತು ಪದವೀಧರರ ಸ್ವಾಭಿಮಾನದ ಪ್ರತೀಕವಾಗಿ ಈ ಬಾರಿಯ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದರು.

ಕಾಲೇಜು ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ.ಹನುಮಂತಪ್ಪ ಕಲ್ಮನಿ, ಪ್ರಮುಖರಾದ ಮನಮೋಹನ್ ಬಳ್ಳಡ್ಕ, ರಂಜಿತ್ ಪಿ.ಜೆ., ಡಾ.ಅರುಣ್ ಕುಮಾರ್ ಮತ್ತು ನಿತೇಶ್ ಸಾಲಿಯಾನ್ ಈ ಸಂದರ್ಭ ಉಪಸ್ಥಿತರಿದ್ದರು.

ಶಿರ್ವ : ನಾಲ್ಕು ವಿದ್ಯಾರ್ಥಿಗಳು ನಾಪತ್ತೆ

Posted On: 15-05-2024 01:34PM

ಶಿರ್ವ : ಇಲ್ಲಿನ ಇಸ್ಲಾಂ ಎಜುಕೇಶನ್‌ ಟ್ರಸ್ಟ್‌ ಸಂಸ್ಥೆಯ ನಾಲ್ವರು ವಿದ್ಯಾರ್ಥಿಗಳು ನಾಪತ್ತೆಯಾದ ಘಟನೆ ಮಂಗಳವಾರ ನಡೆದಿದೆ.

ಮಧ್ಯಾಹ್ನ 2:30 ಗಂಟೆಯಿಂದ ಮಧ್ಯಾಹ್ನ 3:30 ಗಂಟೆಯ ನಡುವಿನ ಅವಧಿಯಲ್ಲಿ ಬಿಹಾರ ರಾಜ್ಯದ ವಿದ್ಯಾರ್ಥಿಗಳಾದ ತಬಾರಕ್‌, ಜಮ್‌ ಶೇಡ್‌, ತಂಜೀರ್‌ ಆಲ್‌ಮ್‌, ಶಾಹಿಲ್ ಇವರುಗಳು ಸಂಸ್ಥೆಯಿಂದ ಹೊರಗಡೆ ಹೋದವರು ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಪರ್ವೇಜ್‌ ಸಲೀಂ ಶಿರ್ವ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಉಡುಪಿ : ಮತಗಟ್ಟೆಗಳಲ್ಲಿ ಮಾಧ್ಯಮದವರಿಗಾದ ತೊಂದರೆ ಕುರಿತು ಎಸ್ಪಿಗೆ ಮನವಿ

Posted On: 14-05-2024 04:01PM

ಉಡುಪಿ : ಲೋಕ ಸಭಾ ಚುನಾವಣೆಯ ಸಂದರ್ಭ ಮತಗಟ್ಟೆಗಳಲ್ಲಿ ಮಾಧ್ಯಮದವರಿಗಾದ ತೊಂದರೆ ಕುರಿತು ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಡಾ.ಅರುಣ್ ಕೆ. ಅವರಿಗೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಇಂದು ಮನವಿ ಸಲ್ಲಿಸಲಾಯಿತು.

ಈ ಬಾರಿಯ ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾನದ ಸಂದರ್ಭ ಮತಗಟ್ಟೆಗೆ ತೆರಳಿ ವಿಡಿಯೋ ಚಿತ್ರೀಕರಣ ಹಾಗೂ ಫೋಟೋಗ್ರಫಿ ಮಾಡಲು ಮಾಧ್ಯಮದವರಿಗೆ ಚುನಾವಣಾ ಆಯೋಗ ಪಾಸ್ ನೀಡಿತ್ತು. ಅದರಂತೆ ಸೀಮಿತ ಮತಗಟ್ಟೆಗಳಲ್ಲಿ ಸಲಬ್ರೆಟಿಗಳು ಮತದಾನ ಮಾಡುವ ಸಂದರ್ಭ ಕ್ಯಾಮೆರಾಮೆನ್‌ಗಳು ಹಾಗೂ ಫೋಟೋಗ್ರಾಫರ್‌ಗಳು ಚಿತ್ರೀಕರಣ/ ಫೋಟೋ ತೆಗೆಯಲು ಮುಂದಾಗಿದ್ದು, ಈ ವೇಳೆ ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಗಳು ಮಾಧ್ಯಮದವರಿಗೆ ಅಡ್ಡಿ ಪಡಿಸಿದ್ದಾರೆ. ಗ್ರಾಮೀಣ ಪ್ರದೇಶಗಳ ಪತ್ರಕರ್ತರಿಗೆ ಸರತಿ ಸಾಲಿನಲ್ಲಿ ನಿಂತ ಮತದಾರರ ಫೋಟೋ ತೆಗೆಯಲು ಕೂಡ ಅಧಿಕಾರಿಗಳು ಅವಕಾಶ ನೀಡಲಿಲ್ಲ. ಈ ಬಗ್ಗೆ ಪರಿಶೀಲಿಸಿ ಮುಂದೆ ಈ ರೀತಿ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಜೂ.4ರಂದು ನಡೆಯುವ ಮತ ಎಣಿಕೆಗೆ ಸಂಬಂಧಿಸಿ ಮತ ಎಣಿಕೆ ಕೇಂದ್ರದಲ್ಲಿ ಯಾವುದೇ ಗೊಂದಲ ಆಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಇದಕ್ಕೆ ಸ್ಪಂದಿಸಿದ ಎಸ್ಪಿ ಡಾ.ಕೆ.ಅರುಣ್, ಈ ವಿಚಾರವನ್ನು ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡುವ ಸಂದರ್ಭದಲ್ಲಿ ಮಾಹಿತಿ ನೀಡಬೇಕಾಗಿದ್ದು, ಮುಂದೆ ಈ ರೀತಿಯಾಗದಂತೆ ಅಧಿಕಾರಿಗಳಿಗೆ ತರಬೇತಿ ನೀಡಲಾಗುವುದು ಮತ್ತು ಮತ ಎಣಿಕೆ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ನಿಯೋಗದಲ್ಲಿ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಉಮೇಶ್ ಮಾರ್ಪಳ್ಳಿ, ರಹೀಂ ಉಜಿರೆ, ಪ್ರಮೋದ್ ಸುವರ್ಣ, ಜಯಕರ ಸುವರ್ಣ, ಮೈಕಲ್ ರೋಡ್ರಿಗಸ್, ಹರೀಶ್ ಕುಂದರ್, ಅಜಿತ್ ಆರಾಡಿ, ಪತ್ರಕರ್ತರಾದ ಶಶಿಧರ್ ಮಾಸ್ತಿಬೈಲು, ದೀಪಕ್ ಜೈನ್, ಪುಂಡಲೀಕ ಮರಾಠ, ಹರೀಶ್ ಪಾಲೇಚಾರ್‌, ಚೇತನ್ ಮಟಪಾಡಿ, ಪರೀಕ್ಷಿತ್ ಶೇಟ್, ಜಸ್ಟಿನ್ ಡಿಸಿಲ್ವ, ರಕ್ಷಿತ್ ಬೆಳಪು, ನಾಗರಾಜ್ ರಾವ್, ಅವಿನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಕಾಪು : ನಿಖಿತಾ ಕುಲಾಲ್ ಸ್ಮರಣಾರ್ಥ ಉಚಿತ ನೋಟ್ ಬುಕ್ ವಿತರಣೆ

Posted On: 14-05-2024 02:49PM

ಕಾಪು : ನಿಖಿತಾ ಕುಲಾಲ್ ನೆನಪಿನಲ್ಲಿ ಅವರ ಮನೆಯವರು ಕೊಡಮಾಡುವ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಮೇ 12 ರಂದು ಕುತ್ಯಾರು ರಾಮೋಟ್ಟು ಬನತೋಡಿಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ಕುಲಾಲ ಸಂಘದ ಅಧ್ಯಕ್ಷರಾದ ಸಂದೀಪ್ ಬಂಗೇರ ವಹಿಸಿದ್ದರು.

ವೇದಿಕೆಯಲ್ಲಿ ಸಂತೋಷ್ ಕುಲಾಲ್ ಪಕ್ಕಾಲು, ಪ್ರಭಾಕರ್ ಇನ್ನ, ನಿಖಿತಾ ಕುಲಾಲ್ ತಂದೆ ತಾಯಿ ಉಪಸ್ಥಿತರಿದ್ದರು.

ಸಿಂಚನ ಕುಲಾಲ್ ಪ್ರಾರ್ಥಿಸಿದರು. ಸಂದೀಪ್ ಬಂಗೇರ ಸ್ವಾಗತಿಸಿ, ದೀರಾಜ್ ಕುಲಾಲ್ ವಂದಿಸಿದರು. ಸುಮಾರು 90 ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಲಾಯಿತು.