Updated News From Kaup

ಅದಮಾರು ಪೂರ್ಣ ಪ್ರಜ್ಞಾ ಪದವಿ ಪೂರ್ವ ಕಾಲೇಜು : ವಿಶ್ವ ಪರಿಸರ ದಿನಾಚರಣೆ

Posted On: 05-06-2024 06:45PM

ಅದಮಾರು : ಪೂರ್ಣಪ್ರಜ್ಞಾ ಪದವಿಪೂರ್ವ ಕಾಲೇಜಿನಲ್ಲಿ ಎನ್ಎಸ್ಎಸ್  ಹಾಗೂ ಪ್ರಜ್ಞಾ ಇಕೋ ಕ್ಲಬ್ಬಿನ ಜಂಟಿ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಸಸಿ ನೆಡುವ ಮೂಲಕ ಹಾಗೂ ಔಷಧೀಯ ಸಸಿಗಳ ಪ್ರಾಧಾನ್ಯತೆಯ ಕುರಿತು ಉಪನ್ಯಾಸ ನಡೆಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಆಯುರ್ವೇದ ವೈದ್ಯರಾದ ಡಾ. ಪಯಸ್ವಿನಿ ಅವರು ಮಾತನಾಡಿ, ನಮ್ಮ ಪರಿಸರ ಸ್ವಚ್ಛವಾಗಿ ಇರಿಸುವುದರ ಜೊತೆಗೆ ಔಷಧೀಯ ಸಸ್ಯಗಳ ಪರಿಚಯವನ್ನು ಮಾಡಿಕೊಳ್ಳಬೇಕು. ನಮ್ಮ ಸುತ್ತಮುತ್ತಲಿನ ಗಿಡಗಳಲ್ಲಿ ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಗಿಡಗಳೇ ಇರುತ್ತವೆ. ವಿದ್ಯಾರ್ಥಿಗಳು ಇದನ್ನು ಗುರುತಿಸಬೇಕಾಗಿದೆ ಎಂದು ಸ್ವತಹ ಗಿಡಗಳನ್ನು ಪ್ರದರ್ಶಿಸುವ ಮೂಲಕ ಮಕ್ಕಳಿಗೆ ಪರಿಚಯಿಸಿದರು. ಸಂಸ್ಥೆಯ ಪ್ರಾಂಶುಪಾಲ ಸಂಜೀವ್ ನಾಯಕ್ ಮಾತನಾಡಿ, ಮಕ್ಕಳು ಪರಿಸರದ ಕಾಳಜಿಯನ್ನು ಹೊಂದಬೇಕು. ಅನಗತ್ಯ ಪರಿಸರ ಮಾಲಿನ್ಯ ಮಾಡಬಾರದು ಎಂದರು.

ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ  ಮಂಜುನಾಥರವರು ಮಕ್ಕಳು ತಮ್ಮ ಮಟ್ಟದಲ್ಲಿ ಪರಿಸರದ ವಿಚಾರಗಳನ್ನು ತಿಳಿದುಕೊಳ್ಳಬೇಕು, ಕೇವಲ ಪುಸ್ತಕ ಮಾತ್ರದಿಂದ ಜ್ಞಾನ ಸಿಗುವುದಿಲ್ಲ ಪರಿಸರದಿಂದಲೂ ನಾವು ಪಡೆದುಕೊಳ್ಳಬೇಕು ಎಂದರು. ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಕಾಂತ ರಾವ್ ಮಾತನಾಡಿ, ಪ್ಲಾಸ್ಟಿಕ್ ವಸ್ತುಗಳನ್ನು ಮರುಬಳಕೆ ಮಾಡಬೇಕೆಂದರು.

ಪೂರ್ಣಪ್ರಜ್ಞಾ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಪ್ರತಿನಿಧಿ ಪ್ರೊಫೆಸರ್ ನಿತ್ಯಾನಂದರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪರಿಸರ ಸಂಬಂಧಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪೂರ್ಣಪ್ರಜ್ಞಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಉಪ ಮುಖ್ಯೋಪಾಧ್ಯಾಯನಿ ನಿಶ್ಮಿತಾ ಶೆಟ್ಟಿ ಸ್ವಾಗತಿಸಿದರು. ಹತ್ತನೇ ತರಗತಿಯ ವಿದ್ಯಾರ್ಥಿ ಶಮೃತ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ನವ್ಯ ವಂದಿಸಿದರು.

ಉಡುಪಿ : ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆ

Posted On: 05-06-2024 06:35PM

ಉಡುಪಿ : ನಮ್ಮ ಮನೆ ನಮ್ಮ ಮರ ತಂಡ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಉಡುಪಿ ತಾಲೂಕು, ಎಂ.ಐ.ಟಿ ಯ ಎನ್.ಎಸ್.ಎಸ್ ವಿಭಾಗದ ವತಿಯಿoದ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಗತಿನಗರ ಇದರ ಆವರಣದಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಹಣ್ಣಿನ ಗಿಡಗಳನ್ನು ನೆಡುವ ಕಾಯ೯ಕ್ರಮ ಜೂನ್ 4 ರಂದು ನಡೆಯಿತು.

ಕಾಯ೯ಕ್ರಮವನ್ನು ಉದ್ದೇಶಿಸಿ ಮಾತನಾಡಿದ ಖ್ಯಾತ ಉರಗ ತಜ್ಞ ಗುರುರಾಜ್ ಸನಿಲ್ ನಮ್ಮ ಹಿರಿಯರು ಪ್ರಕೃತಿಗೆ ಅಪಾರ ಕೊಡುಗೆ ನೀಡಿದ್ದರು. ನಾಗ ಬನಗಳ ಮೂಲಕ ಪರಿಸರ ಉಳಿಸುವ ಕಾಯ೯ ನಿರಂತರ ಮಾಡಿದ್ದರು. ಆದರೆ ಇಂದು ವಿವಿಧ ಕಾರಣಗಳನ್ನು ನೀಡಿ ಪರಿಸರ ನಾಶ ಮಾಡಲಾಗುತ್ತಿರುವುದು ದುರದೃಷ್ಟ. ನಾವೆಲ್ಲರೂ ಹೆಚ್ಚಿನ ಸಂಖ್ಯೆಗಳಲ್ಲಿ ಗಿಡ ನೆಟ್ಟು ಪಾಲನೆ ಮಾಡಬೇಕು ಎಂದು ಕರೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಪೂರ್ಣಿಮಾ ಅವರು ಮಾತನಾಡಿ ನಮ್ಮ ಇಲಾಖೆಯ ಆವರಣದಲ್ಲಿ ಗಿಡ ನೆಡುತ್ತಿರುವುದು ತುಂಬಾ ಖುಷಿ ಕೊಟ್ಟಿದೆ. ಇದನ್ನು ಪಾಲನೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಮುಂದಿನ ದಿನಗಳಲ್ಲಿ ಇನ್ನಷ್ಟು ಗಿಡಗಳನ್ನು ಈ ಪರಿಸರದಲ್ಲಿ ನೆಡುತ್ತೇವೆ ಎಂದರು. ಎಂ.ಐ.ಟಿ ಮಣಿಪಾಲದ ನಿದೇ೯ಶಕ ಕಾಂ. ಅನಿಲ್ ರಾಣಾ ಶುಭ ಹಾರೈಸಿದರು.

ಈ ಸಂದಭ೯ದಲ್ಲಿ ವಿವಿಧ ಹಣ್ಣಿನ ಗಿಡಗಳನ್ನು ನೆಡಲಾಯಿತು. ಕಾಯ೯ಕ್ರಮದಲ್ಲಿ ಎಂ.ಐ.ಟಿ ಮಣಿಪಾಲದ ಜಂಟಿ ನಿದೇ೯ಶಕ ಡಾ| ಸೋಮಶೇಖರ್ ಭಟ್, ಭದ್ರತಾ ಅಧಿಕಾರಿ ರತ್ನಾಕರ ಸಾಮಂತ್, ಪ್ರಬಂಧಕ ರಾಮದಾಸ್' ಎನ್.ಎಸ್.ಎಸ್ ಕಾಯ೯ಕ್ರಮ ಅಧಿಕಾರಿ ಪ್ರೊ.ಬಾಲಕೃಷ್ಣ ಮದ್ದೋಡಿ, ನಮ್ಮ ಮನೆ ನಮ್ಮ ಮರ ತಂಡದ ಅವಿನಾಶ್ ಕಾಮತ್, ಕಸಾಪ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್.ಪಿ, ಸಂಸ್ಕೃತಿ ವಿಶ್ವ ಪ್ರತಿಷ್ಟಾನದ ಗೌರವಾಧ್ಯಕ್ಲ ವಿಶ್ವನಾಥ್ ಶೆಣೈ, ಅಧ್ಯಕ್ಷರಾದ ಪ್ರೊ.ಶಂಕರ್, ತಾಲೂಕು ಕಸಾಪ ಗೌರವ ಕಾಯ೯ದಶಿ೯ ಜನಾಧ೯ನ್ ಕೊಡವೂರು, ಕಲಾವಿದೆ ಪದ್ಮಾಸಿನಿ ಉದ್ಯಾವರ ಮುಂತಾದವರಿದ್ದರು.

ಕ ಸಾ ಪ ಸಂಘಟನಾ ಕಾರ್ಯದರ್ಶಿ, ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು.ಆರ್

ಕಾಪು ತಾಲ್ಲೂಕು ಕಚೇರಿಯಲ್ಲಿ ಪರಿಸರ ದಿನ ಆಚರಣೆ

Posted On: 05-06-2024 06:32PM

ಕಾಪು : ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಗಿಡಗಳನ್ನು ನೆಡುವುದರ ಮೂಲಕ ಬುಧವಾರ ಪರಿಸರ ದಿನಾಚರಣೆ ಆಚರಿಸಲಾಯಿತು.

ಕಾಪು ತಹಶಿಲ್ದಾರ್ ಪ್ರತಿಭಾ ಆರ್ ಮತ್ತು ಪುರಸಭೆ ಮುಖ್ಯಾಧಿಕಾರಿ ನಾಗರಾಜ್ ರವರು ಗಿಡ ನೆಟ್ಟು ಪರಿಸರ ದಿನಾಚರಣೆಗೆ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ತಹಶಿಲ್ದಾರ್ ಪ್ರತಿಭಾ ಆರ್ ನಾವಿಲ್ಲದಿದ್ದರೂ ಗಿಡ-ಮರಗಳು ಬದುಕುತ್ತವೆ ಆದರೆ ಗಿಡ-ಮರಗಳು ಇಲ್ಲದಿದ್ದರೆ ನಾವು ಬದುಕುವುದಕ್ಕೆ ಸಾಧ್ಯವೇ ಇಲ್ಲ ಆದ್ದರಿಂದ ಇಂದು ನಾವೆಲ್ಲರೂ ಸೇರಿ ಪರಿಸರವನ್ನು ಪ್ರೀತಿಸಬೇಕು, ಆರಾಧಿಸಬೇಕು. ಅದನ್ನು ರಕ್ಷಿಸಬೇಕಾದ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು ಅದಕ್ಕಾಗಿ ಪರಿಸರ ದಿನಾಚರಣೆಯ ದಿನ ಮಾತ್ರ ಸಸಿಗಳನ್ನು ನೆಟ್ಟು ನಾನು ಪರಿಸರ ಪ್ರೇಮಿ ಎಂದು ಬಿಂಬಿಸಿ ಕೊಳ್ಳುವುದು ಬೇಡ. ಪ್ರತಿ ವರ್ಷ,ಪ್ರತಿ ದಿನ ಪ್ರತಿ ಕ್ಷಣ ಗಿಡ ಮರಗಳನ್ನು ಪ್ರೀತಿಸಿ, ಆರಾಧಿಸಿ ರಕ್ಷಿಸಿದಾಗ ಮಾತ್ರ ನಾವು ನಿಜವಾದ ಪರಿಸರ ಪ್ರೇಮಿಗಳು. ತಹಶಿಲ್ದಾರ್ ಕಚೇರಿಯ ಆವರಣದಲ್ಲಿ ಉದ್ಯಾನವನ ನಿರ್ಮಿಸಿ ಸೌಂದರ್ಯೀಕರಣಗೊಳಿಸಲು ಪ್ರಯತ್ನಿಸಲಾಗುವುದು. ಅದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯ ಎಂದರು.

ತಹಶಿಲ್ದಾರ್ ಕಚೇರಿಯ ಉಪ ತಹಶಿಲ್ದಾರ್ ರವಿಕಿರಣ್, ದೇವಕಿ, ಅಶೋಕ್ ಕೋಟೆಕಾರ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

ಕೋಟ ಶ್ರೀನಿವಾಸ ಪೂಜಾರಿಗೆ ಕಾಪು ಮಂಡಲ ಬಿಜೆಪಿ ವತಿಯಿಂದ ಅಭಿನಂದನೆ

Posted On: 04-06-2024 05:48PM

ಕಾಪು : ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 2.5 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಕಾಪು ಮಂಡಲ ಬಿಜೆಪಿ ವತಿಯಿಂದ ಅಭಿನಂದಿಸಲಾಯಿತು.

ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಮಾತನಾಡಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ್ ಪೂಜಾರಿಯವರಿಗೆ 32 ಸಾವಿರಕ್ಕೂ ಅಧಿಕ ಅಂತರ ದೊರಕಿದೆ. ಈ ಗೆಲುವಿಗೆ ಶ್ರಮಿಸಿದ ದೇವದುರ್ಲಭ ಕಾರ್ಯಕರ್ತರಿಗೆ ಶಾಸಕನ ನೆಲೆಯಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಶಿಲ್ಪಾ ಜಿ ಸುವರ್ಣ, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಪ್ರಥ್ವಿರಾಜ್ ಶೆಟ್ಟಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀಕಾಂತ್ ನಾಯಕ್, ಕಾಪು ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ರಾವ್, ಶರಣ್ ಮಟ್ಟು, ಕಾಪು ಮಂಡಲ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದ ಸೋನು ಪಾಂಗಾಳ, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಸಹ ಸಂಚಾಲಕರಾದ ಕುತ್ಯಾರು ನವೀನ್ ಶೆಟ್ಟಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ, ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಅರಳಿದ ಕಮಲ

Posted On: 04-06-2024 05:02PM

ಕಾಪು : ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಅವರು ಜಯಗಳಿಸಿದ್ದಾರೆ.

ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ತನ್ನ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಪದ್ಮರಾಜ್ ಆರ್. ಪೂಜಾರಿ ಅವರನ್ನು ಸೋಲಿಸಿದ್ದಾರೆ.

ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅವರನ್ನು ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಅವರು ಪರಾಭವಗೊಳಿಸಿ ಸಂಸತ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚುನಾವಣಾ ಫಲಿತಾಂಶವು ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿರಾಸೆ ತಂದಿದೆ.

ಜೆಸಿಐ ಉಡುಪಿ ಸಿಟಿ ಘಟಕಕ್ಕೆ ಅತ್ಯುತ್ತಮ ಘಟಕ ಪ್ರಶಸ್ತಿ

Posted On: 04-06-2024 06:55AM

ಉಡುಪಿ : ವಲಯದ ಪ್ರತಿಷ್ಠಿತ ಘಟಕಗಳಲ್ಲಿ ಒಂದಾದ ಜೆಸಿಐ ಉಡುಪಿ ಸಿಟಿ ಘಟಕ ಅತ್ಯುತ್ತಮ ಘಟಕ ಪ್ರಶಸ್ತಿಗೆ ಭಾಜನವಾಗಿದೆ.

ವಿಟ್ಲದಲ್ಲಿ ನಡೆದ ವಲಯ 15 ಮಧ್ಯಂತರ ಸಮ್ಮೇಳನದಲ್ಲಿ ವಲಯಾಧ್ಯಕ್ಷ ಗಿರೀಶ್ ಎಸ್.ಪಿ ಯವರು ಈ ಪ್ರಶಸ್ತಿಯನ್ನು ಘಟಕಾಧ್ಯಕ್ಷೆ ಡಾ| ಹರಿಣಾಕ್ಷಿ ಕಕೇ೯ರ ರವರಿಗೆ ನೀಡಿದರು.

ಅಲ್ಲದೆ ಈ ಘಟಕವು ಅತ್ಯುತ್ತಮ ಘಟಕ ಅಧ್ಯಕ್ಷೆ ರನ್ನರ್ ಪ್ರಶಸ್ತಿ, ಡೈಮಂಡ್ ಲೋಮ್ , ಕರುನಾಡ ವೈಭವದಲ್ಲಿ ದ್ವಿತೀಯ ಬಹುಮಾನ, ಪೋಟೋ ಡಿಸ್ಪ್ಲೆಯಲ್ಲಿ ದ್ವಿತೀಯ ಬಹುಮಾನ ಸಹಿತ ವಿವಿಧ ಪುರಸ್ಕಾರಗಳು ಸಿಕ್ಕಿವೆ.

ಈ ಸಂದಭ೯ದಲ್ಲಿ ಪೂವ೯ ಅಧ್ಯಕ್ಷರಾದ ಉದಯ್ ನಾಯ್ಕ್, ಜಗದೀಶ್ ಶೆಟ್ಟಿ, ರಫೀಕ್ ಖಾನ್, ಕಿರಣ್ ಭಟ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ವಲಯ ಉಪಾಧ್ಯಕ್ಷ ದೀಪಕ್ ರಾಜ್ ಸಹಿತ ವಲಯಾಧಿಕಾರಿಗಳು ಉಪಸ್ಥಿತರಿದ್ದು, ಪ್ರಶಸ್ತಿ ಪ್ರದಾನ ಮಾಡಿದರು.

ಕುತ್ಯಾರು : ಶ್ರೀ ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಶಿಕ್ಷಣ ಸಂಸ್ಥೆ - ಶಾಲಾ ಪ್ರಾರಂಭೋತ್ಸವ

Posted On: 04-06-2024 06:50AM

ಕುತ್ಯಾರು : ಶ್ರೀ ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಶಿಕ್ಷಣ ಸಂಸ್ಥೆ ಕುತ್ಯಾರು ಇಲ್ಲಿ ಸೋಮವಾರ 2024-25 ನೇ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವದಲ್ಲಿ ಮಕ್ಕಳನ್ನು ಪುಷ್ಪಾರ್ಚನೆಯೊಂದಿಗೆ ಆರತಿಯನ್ನು ಬೆಳಗಿಸಿ ಶಾಲಾ ಬ್ಯಾಂಡಿನೊಂದಿಗೆ ಸ್ವಾಗತಿಸಲಾಯಿತು.

ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು. ಚಂದ್ರಕಲಾ ವಿಶುಕುಮಾರ್ ಪಡುಬಿದ್ರಿ, ಮಾಲಕರು ಶ್ರೇಯಸ್ ಗೋಲ್ಡ್ & ಡೈಮಂಡ್ ಇವರ ವತಿಯಿಂದ ಮಕ್ಕಳಿಗೆ ವಿಶೇಷ ಭೋಜನ ವ್ಯವಸ್ಥೆಯನ್ನು ಮಾಡಲಾಯಿತು.

ಸಮಾರಂಭದಲ್ಲಿ ಆನೆಗುಂದಿ ಅಸೆಟ್ ನ ಅಧ್ಯಕ್ಷರಾದ ಸೂರ್ಯಕುಮಾರ್ ಹಳೆಯಂಗಡಿ, ಉಪಾಧ್ಯಕ್ಷರಾದ ವಿವೇಕ್ ಆಚಾರ್ಯ, ಕಾರ್ಯದರ್ಶಿಯಾದ ಗುರುರಾಜ ಆಚಾರ್ಯ, ಶೈಕ್ಷಣಿಕ ಸಲಹೆಗಾರರಾದ ದಿವಾಕರ ಆಚಾರ್ಯ ಗೇರುಕಟ್ಟೆ, ಮುಖ್ಯ ಅತಿಥಿಗಳಾದ ಕುತ್ಯಾರು ಅರಸು ಮನೆತನದ ಜಿನೇಶ್ ಬಲ್ಲಾಳ್, ಧಾರ್ಮಿಕ ಮಾರ್ಗದರ್ಶಕರಾದ ಸಂತೋಷ್ ಆಚಾರ್ಯ ಉಡುಪಿ, ಅಸೆಟ್ ನ ಸದಸ್ಯರಾದ ಜಿ. ಟಿ.ಆಚಾರ್ಯ, ದಯಾನಂದ ಆಚಾರ್ಯ, ಶಾಲಾ ಪ್ರಾಂಶುಪಾಲರಾದ ಸಂಗೀತಾ, ಪೋಷಕರು, ಶಿಕ್ಷಕ ವೃಂದ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಕಾಪುವಿನಲ್ಲಿ ನಮ್ಮ ಕಾಪು "ಧ್ಯಾನ್ ಟ್ಯೂಷನ್ ಸೆಂಟರ್" ಶುಭಾರಂಭ

Posted On: 03-06-2024 07:54PM

ಕಾಪು : ಇಲ್ಲಿನ ಆಸುಪಾಸಿನ ವಿದ್ಯಾರ್ಥಿಗಳಿಗೆ ಸುಲಲಿತ ಕಲಿಕೆಗಾಗಿ ನಮ್ಮ ಕಾಪು "ಧ್ಯಾನ್ ಟ್ಯೂಷನ್ ಸೆಂಟರ್" ತರಗತಿಗಳು ಜೂನ್ 3 ರಿಂದ ಆರಂಭವಾಗಿದೆ.

ಕಾಪುವಿನ ಹೃದಯ ಭಾಗದಲ್ಲಿ ಮುಖ್ಯ ರಸ್ತೆಯ ನಾರಾಯಣಗುರು ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿ ನಮ್ಮ ಕಾಪು "ಧ್ಯಾನ್ ಟ್ಯೂಷನ್ ಸೆಂಟರ್" ತರಗತಿಗಳು ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9844323955 93265 83640

ಕೆ.ಸಿ.ಇ.ಟಿ ಫಲಿತಾಂಶ : 100 ರೊಳಗೆ 10 ರ‍್ಯಾಂಕ್‌ ಪಡೆದ ಕಾರ್ಕಳ ಕ್ರಿಯೇಟಿವ್ ನ ವಿದ್ಯಾರ್ಥಿಗಳು

Posted On: 03-06-2024 07:29PM

ಕಾರ್ಕಳ : ಏಪ್ರಿಲ್ 18 ಮತ್ತು 19 ರಂದು ನಡೆದ ಕೆ.ಸಿ.ಇ.ಟಿ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪಿ.ಯು. ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳು 100 ರೊಳಗೆ 1೦ ರ‍್ಯಾಂಕ್‌ ಪಡೆದು ಅದ್ಭುತ ಸಾಧನೆ ಮಾಡಿದ್ದಾರೆ.

ಪ್ರಸ್ತುತ ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿದಂತೆ ಹಲವು ಪ್ರಮುಖ ಕೋರ್ಸ್‌ಗಳಿಗೆ ಸೇರಲು ನಡೆಯುವ ರಾಜ್ಯಮಟ್ಟದ ಪ್ರವೇಶ ಪರೀಕ್ಷೆಯಲ್ಲಿ, ಕಾಲೇಜಿನ ನೇಹಾ ಕೆ. ಉದಪುಡಿ ಅವರು ವಿವಿಧ ವಿಭಾಗಗಳಲ್ಲಿ ಅದ್ಭುತವಾದ ಸಾಧನೆ ಮಾಡಿದ್ದಾರೆ. ಕೃಷಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 21ನೇ ರ‍್ಯಾಂಕ್‌, ಬಿ.ಎನ್.ವೈ.ಎಸ್. ವಿಭಾಗದಲ್ಲಿ 24ನೇ ರ‍್ಯಾಂಕ್‌, ಬಿ.ಎಸ್.ಸಿ. ನರ್ಸಿಂಗ್ ವಿಭಾಗದಲ್ಲಿ 33 ನೇ ರ‍್ಯಾಂಕ್‌, ಪಶು ವೈದ್ಯಕೀಯ ವಿಭಾಗದಲ್ಲಿ 33ನೇ ರ‍್ಯಾಂಕ್‌, B-ಫಾರ್ಮ್ ಮತ್ತು D-ಫಾರ್ಮ್ ವಿಭಾಗಗಳಲ್ಲಿ 49 ನೇ ರ‍್ಯಾಂಕ್‌ ಗಳಿಸಿದ್ದಾರೆ. ವಿದ್ಯಾರ್ಥಿ ಶರತ್ ಹೆಚ್. ಪಿ. ಪಶು ವೈದ್ಯಕೀಯ ವಿಭಾಗದಲ್ಲಿ 26 ನೇ ರ‍್ಯಾಂಕ್‌, ಕೃಷಿ ವಿಜ್ಞಾನ ವಿಭಾಗದಲ್ಲಿ 37 ನೇ ರ‍್ಯಾಂಕ್‌ ಪಡೆದು ಶ್ಲಾಘನೀಯ ಸಾಧನೆ ಮಾಡಿದ್ದಾರೆ. ಕಾರ್ತಿಕ್ ಎ. ಎಸ್. ಕೃಷಿ ವಿಜ್ಞಾನ ವಿಭಾಗದಲ್ಲಿ 62ನೇ ರ‍್ಯಾಂಕ್‌, ಅಭಿನವ್ ಹೆಚ್. ಬಿ. ಪಶು ವೈದ್ಯಕೀಯ ವಿಭಾಗದಲ್ಲಿ 74 ನೇ ರ‍್ಯಾಂಕ್‌ ಪಡೆದಿದ್ದಾರೆ. ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕ್ರಿಯೇಟಿವ್ ಕಾಲೇಜಿನ122 ವಿದ್ಯಾರ್ಥಿಗಳು 1000 ರ‍್ಯಾಂಕ್‌ನೊಳಗೆ 122 ಮತ್ತು 210 ವಿದ್ಯಾರ್ಥಿಗಳು 2000 ರೊಳಗೆ ರ‍್ಯಾಂಕ್‌ಗಳನ್ನು ಗಳಿಸಿದ್ದಾರೆ.

ಕಾಲೇಜು ಪ್ರಾರಂಭದಿಂದಲೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 100 ಶೇಕಡಾ ಫಲಿತಾಂಶ ದಾಖಲಿಸಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿ, ಸಂತಸ ವ್ಯಕ್ತಪಡಿಸಿದ್ದಾರೆ.

ಕಾಪು ತಾಲೂಕಿನಲ್ಲಿ ನೈರುತ್ಯ ಪದವೀಧರ ಕ್ಷೇತ್ರ ಶೇ.76.26 ಮತ್ತು ಶಿಕ್ಷಕರ ಕ್ಷೇತ್ರ ಶೇ.83.21 ಮತದಾನ

Posted On: 03-06-2024 07:20PM

ಕಾಪು : ತಾಲೂಕಿನ ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಮತದಾನ ಇಂದು ಕಾಪು ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು.

ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಒಟ್ಟು 1208 ಮಂದಿ ಮತದಾನ ಮಾಡಿದ್ದು ಇದರಲ್ಲಿ ಪುರುಷರು (531), ಮಹಿಳೆಯರು (677) ಮತ ಚಲಾಯಿಸಿದ್ದಾರೆ. ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಶೇ.76.26 ಮತದಾನವಾಗಿದೆ.

ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 233 ಮಂದಿ ಮತ ಚಲಾಯಿಸಿದ್ದು. ಪುರುಷರು (531), ಮಹಿಳೆಯರು (677) ಮತದಾನಗೈದಿರುತ್ತಾರೆ. ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇ.83.21 ಮತದಾನವಾಗಿದೆ.