Updated News From Kaup

ನಮ್ಮ ಆರೋಗ್ಯ ರಕ್ಷಕರಿಗೆ ನಮೋ ನಮ:

Thumbnail
Posted On: 01 Jul 2024, 06:21 AM

ನಮಗೆಲ್ಲಾ ಅನಾರೋಗ್ಯ ಉಂಟಾದಾಗ ನಮಗೆ ನೆನಪಾಗುವವರು ವೈದ್ಯರು ರಾತ್ರಿ ಹಗಲೆನ್ನದೆ ರೋಗಿಗಳ ಆರೋಗ್ಯವನ್ನು ಕಾಪಾಡುವ ಮಹತ್ತರ ಕಾಯ೯ ವೈದ್ಯರು ಮಾಡುತ್ತಿದ್ದಾರೆ. ಹೀಗಾಗಿ ವೈದ್ಯೋ ನಾರಾಯಣ ಹರಿ: ಎಂಬ ಮಾತು ಬಂದಿದೆ. ತಮ್ಮ ಕುಟುಂಬಕ್ಕೆ ಸಮಯ ನೀಡಲು ಸಾಧ್ಯವಾಗದಿದ್ದರೂ ರೋಗಿಗಳ ಆರೋಗ್ಯ ರಕ್ಷಣೆಯಲ್ಲಿ ನಿರಂತರ ಕಾಯ೯ ಮಾಡುತ್ತಿರುವುದು ಅಭಿನಂದನೀಯ. ಈ ಜುಲೈ 1 ವೈದ್ಯರಿಗೆ ಕೃತಜ್ಞತೆ ಸಲ್ಲಿಸುವುದಕ್ಕೆ ಮೀಸಲಾದರೆ ಅದೇ ಈ ದಿನದ ಸಾರ್ಥಕತೆಯಾಗಲಿದೆ. ಭಾರತದಲ್ಲಿ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಗುತ್ತದೆ. ಅದಕ್ಕೊಂದು ಕಾರಣವೂ ಇದೆ. ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದ ಡಾ. ಬಿದಾನ್ ಚಂದ್ರ ರಾಯ್ ಅವರ ನೆನಪಲ್ಲಿ ಜುಲೈ 1ನ್ನು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ. ಅವರೊಬ್ಬ ಅಸಾಧಾರಣ ವೈದ್ಯರಾಗಿದ್ದವರು. ಅವರ ಗಣನೀಯ ಸೇವೆಯನ್ನು ಪರಿಗಣಿಸಿ 1961ರ ಫೆಬ್ರವರಿ 4ರಂದು ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಿತ್ತು. ಕುತೂಹಲಕರ ವಿಚಾರವೆಂದರೆ ಅವರು ಜನಿಸಿದ್ದು 1882, ಜುಲೈ 1, ತೀರಿಕೊಂಡಿದ್ದು 1962 ಜುಲೈ 1. ಅವರು ಜನಿಸಿದ ದಿನ ಮತ್ತು ತೀರಿಕೊಂಡ ದಿನ ಒಂದೇ ಆಗಿದೆ. ಒಬ್ಬ ಮಾದರಿ ವೈದ್ಯರಾಗಿ ತಮ್ಮ ಬದುಕು ಸವೆಸಿದ ಅವರ ನೆನಪಿನಲ್ಲೇ ರಾಷ್ಟ್ರೀಯ ವೈದ್ಯರ ದಿನ ಆಚರಿಸಬೇಕು ಎಂದು ನಿರ್ಧರಿಸಿದ ಭಾರತ ಸರ್ಕಾರ 1991ರಲ್ಲಿ ಜುಲೈ 1ನ್ನು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲು ಕರೆಕೊಟ್ಟಿತು. ರಾಯ್ ಅವರು ಅಪ್ರತಿಮ ವೈದ್ಯರಾಗಿದ್ದರು. ತಮ್ಮ ದೂರದೃಷ್ಟಿ ನಿಲುವುಗಳಿಂದ ವೈದ್ಯಲೋಕಕ್ಕೆ ಅಪರೂಪವಾದ ಕೊಡುಗೆ ಕೊಟ್ಟವರು. ಮೇಲು ಕೀಳು ನೋಡದೆ, ಭೇದಭಾವ ಮಾಡದೆ ಎಲ್ಲರನ್ನೂ ಒಂದೇ ರೀತಿ ನೋಡಿದ ಜನಮೆಚ್ಚಿದ ವೈದ್ಯರಾಗಿದ್ದ ರಾಯ್, ಹೊಸತನದ ಆಲೋಚನೆಗಳನ್ನು ಹೊಂದಿದ್ದರು. 1905ರಲ್ಲಿ ಅವರು ಕೋಲ್ಕತ್ತಾ ವಿವಿಯಲ್ಲಿ ಓದುತ್ತಿರುವಾಗ ಬಂಗಾಳ ವಿಭಜನೆಯಾಯಿತು. ಸ್ವಾತಂತ್ರ್ಯ ಹೋರಾಟದಲ್ಲೂ ಭಾಗಿಯಾಗಿದ್ದ ರಾಯ್ ಅವರು ಕೆಲ ಕಾಲ ಮಹಾತ್ಮ ಗಾಂಧೀಜಿಯ ವೈದ್ಯರೂ ಆಗಿದ್ದರು ಎನ್ನುವುದು ವಿಶೇಷ. ಅವರು ವೈದ್ಯರಾಗಿದ್ದೂ ಅಲ್ಲದೆ ಆಡಳಿತದಲ್ಲೂ ಮುಂದೆ ನಿಂತು ಕೆಲಸ ಮಾಡಿದ್ದು, ಅಚ್ಚರಿ ತರುವಂತಹದ್ದು. ಅನೇಕ ದೊಡ್ಡ ಆಸ್ಪತ್ರೆಗಳು ಅವರ ಕಾಲದಲ್ಲಿ ಸ್ಥಾಪನೆಯಾಗಿದೆ. ಸುಮಾರು 14 ವರ್ಷಗಳ ಕಾಲ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಅವರು ಆ ಸಮಯದಲ್ಲೂ ರೋಗಿಗಳ ಶುಶ್ರೂಷೆ ಮಾಡುತ್ತಿದ್ದರು. ಆ ಕಾರಣಕ್ಕೆ ಜನರ ಒಲವು ಗಳಿಸಿದ್ದರು. ಒತ್ತಡದ ಸೇವೆ : ರೋಗಿಗಳಿಗೆ ಅನುಗುಣವಾಗಿ ವೈದ್ಯರಿಲ್ಲ. ಇದರಿಂದಾಗಿ ಅನೇಕ ಬಾರಿ ಊಟ–ತಿಂಡಿ ಇಲ್ಲದೆಯೇ ಕೆಲಸ ಮಾಡಬೇಕಾಗತ್ತದೆ. ಚಿಕಿತ್ಸೆ ಸ್ವಲ್ಪ ತಡವಾದರೂ ರೋಗಿಯ ಕಡೆಯವರು ಹಲ್ಲೆಗೆ ಮುಂದಾಗುತ್ತಾರೆ. ಗ್ರಾಮೀಣ ಪ್ರದೇಶದ ವೈದ್ಯರು ಹೆಚ್ಚಾಗಿ ಇಂಥ ಹಲ್ಲೆ ಅನುಭವಿಸಬೇಕಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ವೈದ್ಯರ ರಕ್ಷಣೆಗೆ ಕಾನೂನು ಬಲ : ಕೋವಿಡ್‌ ಸಂದರ್ಭದಲ್ಲಿ ವೈದ್ಯರ ಮೇಲೆ ಹಲ್ಲೆಯ ಪ್ರಕರಣಗಳು ಹೆಚ್ಚಾದಾಗ, ಐಎಂಎ ಒತ್ತಾಯದ ಮೇರೆಗೆ ಕೇಂದ್ರವು ಅವರ ರಕ್ಷಣೆಗೆ ವಿಶೇಷ ಕಾನೂನು ರೂಪಿಸಿತು. 2020ರ ಎಪ್ರಿಲ್‌ನಲ್ಲಿ ಆ ಕುರಿತ ಸುಗ್ರೀವಾಜ್ಞೆಯೊಂದನ್ನು ಹೊರಡಿಸಿತು. ಸುಮಾರು 123 ವರ್ಷಗಳಷ್ಟು ಹಳೆಯದಾದ (1897ರ) ಸಾಂಕ್ರಾಮಿಕ ರೋಗಗಳ ಕಾಯ್ದೆಗೆ ತಿದ್ದುಪಡಿ ಮಾಡಿ, ವೈದ್ಯರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲು ಅಲ್ಲಿ ಅವಕಾಶ ನೀಡಲಾಯಿತು. ಹೊಸ ಕಾನೂನಿನ ಪ್ರಕಾರ ಈಗ ವೈದ್ಯರ ಮೇಲಿನ ಹಲ್ಲೆಯು ಜಾಮೀನುರಹಿತ ಅಪರಾಧ ಎನಿಸಿದೆ. ದೂರು ದಾಖಲಾಗಿ 30 ದಿನದೊಳಗೆ ತನಿಖೆ ನಡೆಸಬೇಕಾಗುತ್ತದೆ. ಅಪರಾಧಿಗೆ ಕನಿಷ್ಠ 3 ತಿಂಗಳು ಮತ್ತು ಗರಿಷ್ಠ ಐದು ವರ್ಷಗಳ ಜೈಲು ಶಿಕ್ಷೆ ಹಾಗೂ ಕನಿಷ್ಠ ರೂ. 50,000ದಿಂದ ಗರಿಷ್ಠ ರೂ. 2 ಲಕ್ಷದವರೆಗೆ ದಂಡ ವಿಧಿಸಲು ಅವಕಾಶ ಇದೆ. ವೈದ್ಯರಿಗೆ ಗಂಭೀರ ಸ್ವರೂಪದ ಗಾಯಗಳಾದರೆ ಅಪರಾಧಿಗೆ ಗರಿಷ್ಠ 7 ವರ್ಷ ಜೈಲು ಮತ್ತು ₹ 5ಲಕ್ಷದವರೆಗೆ ದಂಡ ವಿಧಿಸಲೂ ಅವಕಾಶ ಇದೆ. ಆಸ್ತಿಗೆ ಹಾನಿ ಉಂಟುಮಾಡಿದರೆ, ಅದರ ಮಾರುಕಟ್ಟೆ ಮೌಲ್ಯದ ಎರಡರಷ್ಟು ದಂಡ ವಿಧಿಸಲೂ ಅವಕಾಶ ಕಲ್ಪಿಸಲಾಗಿದೆ. ಈ ಕಾಯ್ದೆಗೆ 2020ರ ಸೆಪ್ಟೆಂಬರ್‌ನಲ್ಲಿ ರಾಜ್ಯಸಭೆಯೂ ಅನುಮೋದನೆ ನೀಡಿದೆ. ಈ ಕಾನೂನು ಇದ್ದರೂ ನಮ್ಮ ಸಮಾಜ ವೈದ್ಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕಾಗಿದೆ. ರೋಗಿಯು ಅನಾರೋಗ್ಯದಿಂದ ಆರೋಗ್ಯ ಹೊಂದಿದರೆ ವೈದ್ಯರಿಗೆ ಧನ್ಯವಾದ ಹೇಳದಿದ್ದರೂ, ಆ ರೋಗಿ ನಿಧನ ಹೊಂದಿದರೆ ವೈದ್ಯರ ನಿಲ೯ಕ್ಷದಿಂದ ಸಾವು ಎಂಬ ಹಣೆಪಟ್ಟಿ ಕಟ್ಟಿ ವೈದ್ಯರು ತಮ್ಮ ರಕ್ಷಣೆಗೆ ಪೋಲಿಸರ ಮೊರೆ ಹೋಗಬೇಕಾದ ಕಾಲ ಬಂದಿದೆ. ಇದು ಸರಿಯಲ್ಲ. ವೈದ್ಯರು ಕೂಡ ಮನುಷ್ಯರೇ ಅವರಿಗೂ ಭಾವನೆಗಳು, ಕುಟುಂಬ, ವೈಯುಕ್ತಿಕ ಬದುಕು ಇದೆ ಎಂಬುದನ್ನು ಅಥ೯ ಮಾಡಬೇಕಾಗಿದೆ. ಒಟ್ಟಾಗಿ ನಮ್ಮ ಸಮಾಜದ ಆರೋಗ್ಯದ ರಕ್ಷಕರಾಗಿರುವ ಎಲ್ಲಾ ವೈದ್ಯರಿಗೂ ಮನದಾಳದ ಕೃತಜ್ಞತೆಗಳು. ರಾಘವೇಂದ್ರ ಪ್ರಭು, ಕವಾ೯ಲು - ಸಂ.ಕಾಯ೯ದಶಿ೯ ಕ .ಸಾ.ಪ ಉಡುಪಿ

ರೋಟರಿ ಕ್ಲಬ್ ಶಂಕರಪುರದ ನೂತನ ಅಧ್ಯಕ್ಷರಾಗಿ ಮಾಲಿನಿ ಶೆಟ್ಟಿ ಇನ್ನಂಜೆ ಅಧಿಕಾರ ಸ್ವೀಕಾರ

Thumbnail
Posted On: 30 Jun 2024, 11:10 PM

ಕಟಪಾಡಿ : ಶಂಕರಪುರ ರೋಟರಿ ಕ್ಲಬ್ ಇದರ ನೂತನ ಅಧ್ಯಕ್ಷರಾಗಿ ಮಾಲಿನಿ ಶೆಟ್ಟಿ ಇನ್ನಂಜೆ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಕಾಪು ಪರಿಸರದಲ್ಲಿ ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡಿರುವ ಇವರು ಇನ್ನಂಜೆ ಯುವತಿ ಮಂಡಲ ಇದರ ಪೂರ್ವ ಅಧ್ಯಕ್ಷರಾಗಿ, ಶ್ರೀ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಇನ್ನಂಜೆ ಒಕ್ಕೂಟದ ಮಾಜಿ ಅಧ್ಯಕ್ಷರಾಗಿ, ಕಾಪು ಬಂಟರ ಸಂಘ ಇದರ ಸದಸ್ಯರಾಗಿ, ರೋಟರಾಕ್ಟ್ ಸಮ್ಮೇಳನದಲ್ಲಿ Rotaract Queen ಆಗಿ ಮೂಡಿ ಬಂದ ಇವರು 2018- 19 8 Rotaract District 3182 ಮಹಿಳಾ ಜಿಲ್ಲಾ ಪ್ರತಿನಿಧಿಯಾಗಿ (DRR) ಸುಮಾರು 42 ಕ್ಲಬ್ ಗಳನ್ನು ಮಾಡಿ ಯಶಸ್ವಿ ಪರಿಚಯ ಕಾನ್ಸರೆನ್ಸ್ ಮಾಡಿದ ಹೆಗ್ಗಳಿಕೆ ಇವರದ್ದು. 2015 ರಲ್ಲಿ ರಾಜಕೀಯ ಜೀವನಕ್ಕೆ ಕಾಲಿಟ್ಟ ಇವರು ಇನ್ನಂಜೆ ಗ್ರಾಮ ಪಂಚಾಯತ್ ಸದಸ್ಯರಾಗಿ, 5 ವರ್ಷ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ಪ್ರಸ್ತುತ ಇನ್ನಂಜೆ ಗ್ರಾಮ ಪಂಚಾಯತ್ ನ ಅಧ್ಯಕ್ಷರು ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪದಗ್ರಹಣ ಸಮಾರಂಭದಲ್ಲಿ ಗಣ್ಯರು, ಶಂಕರಪುರ ರೋಟರಿ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮಾತೃ ವಿಯೋಗ

Thumbnail
Posted On: 30 Jun 2024, 08:11 PM

ಉಡುಪಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ನೂತನ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಮಾತೃಶ್ರೀ ಶ್ರೀಮತಿ ಲಚ್ಚಿ ಪೂಜಾರಿ ಅವರು ಇಂದು ಮಧ್ಯಾಹ್ನ ವಿಧಿವಶರಾಗಿದ್ದಾರೆ. ವಯೋ ಸಹಜ ಕಾರಣದಿಂದಾಗಿ ಸುಮಾರು 95 ವರ್ಷ ವಯಸ್ಸಿನ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ.

ಉಚ್ಚಿಲ ಸರಸ್ವತಿ ಮಂದಿರ ಶಾಲೆ ಹಳೆ ವಿದ್ಯಾರ್ಥಿ ಸಂಘದಿಂದ ಕೆಸರು ಗದ್ದೆ ಕ್ರೀಡಾಕೂಟ

Thumbnail
Posted On: 30 Jun 2024, 07:57 PM

ಉಚ್ಚಿಲ : ಇಲ್ಲಿನ ಸರಸ್ವತಿ ಮಂದಿರ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಕೆಸರುಗದ್ದೆ ಕ್ರೀಡಾಕೂಟವನ್ನು ಭಾನುವಾರ ಉಚ್ಚಿಲ ಬದ್ದಿಂಜೆ ಮಠದ ಬಳಿಯ ಗದ್ದೆಯಲ್ಲಿ ಆಯೋಜಿಸಲಾಯಿತು. ಕ್ರೀಡಾಕೂಟವನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದ್ಯುಮಣಿ ಆರ್ ಭಟ್ ಮತ್ತು ಗಣ್ಯರು ದೀಪ ಪ್ರಜ್ವಲಿಸಿ, ಕೆಸರು ಗದ್ದೆಗೆ ಹಾಲು, ಸಿಯಾಳ ನೀರು ಹಾಗೂ ದೇವರ ಪ್ರಸಾದವನ್ನು ಹಾಕುವ ಮೂಲಕ ಚಾಲನೆ ನೀಡಿದರು. ಉಚ್ಚಿಲ ಸರಸ್ವತಿ ಮಂದಿರ ಕನ್ನಡ ಶಾಲೆ ಹಾಗೂ ಸ್ಥಳೀಯ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು, ಪೋಷಕರು, ಹಳೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ಮುಕ್ತ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಧ್ಯುಮಣಿ ಭಟ್‌, ಪ್ರಾಥಮಿಕ ಶಾಲಾ ಸಂಚಾಲಕ ಮೋಹನದಾಸ ಶೆಟ್ಟಿ, ಗೌರವಾಧ್ಯಕ್ಷರುಗಳಾದ ಬಾಲಕೃಷ್ಣ ಪೂಜಾರಿ ಉಚ್ಚಿಲ, ಧೀರಜ್‌ ಹುಸೈನ್‌, ಲಕ್ಷ್ಮೀ ಟೀಚರ್‌, ಸರಸ್ವತಿ ಮಂದಿರ ಪ್ರೌಡ ಶಾಲಾ ಮುಖ್ಯೋಪಾಧ್ಯಾಯ ಬಾಬುರಾಯ ಆಚಾರ್ಯ, ಮಾಜಿ ತಾಪಂ ಉಪಾಧ್ಯಕ್ಷ ಯುಸಿ ಶೇಕಬ್ಬ, ಲಕ್ಷ್ಮೀಶ ಭಟ್‌, ಸಂಘಟನಾ ಕಾರ್ಯದರ್ಶಿ ಕಾಂತಿ ಆಚಾರ್ಯ, ಕಾರ್ಯದರ್ಶಿ ಸತೀಶ್‌ ಕುಲಾಲ್‌, ಕೋಶಾಧಿಕಾರಿ ಅನಿತ್‌ ಸಾಲ್ಯಾನ್‌ ಮತ್ತಿತರು ವೇದಿಕೆಯಲ್ಲಿದ್ದರು. ಉಚ್ಚಿಲ ಸರಸ್ವತಿ ಮಂದಿರ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್‌ ಕುಲಾಲ್‌ ಮತ್ತು ವಿದ್ಯಾಪ್ರಭೋಧಿನಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಪ್ರಸಾದ್‌ ಕ್ರೀಡೆಯಲ್ಲಿ ಸಹಕರಿಸಿದರು. ಚಂದ್ರ ಶೇಖರ ಶೆಟ್ಟಿ ಪೊಲ್ಯ ಸ್ವಾಗತಿಸಿ, ನಿರೂಪಿಸಿದರು. ಸತೀಶ್‌ ಕುಲಾಲ್‌ ವಂದಿಸಿದರು.

ದ್ವಾರಕಾಮಯಿ ಮಠದ ಪೀಠಾಧಿಪತಿ ಶ್ರೀ ಸಾಯಿ ಈಶ್ವರ ಗುರೂಜಿ108 ದಿನಗಳಲ್ಲಿ 108 ಕ್ಷೇತ್ರ ಪ್ರದಕ್ಷಣೆ : ಬಂಟಕಲ್ಲು ಕ್ಷೇತ್ರ ಭೇಟಿ

Thumbnail
Posted On: 30 Jun 2024, 12:59 PM

ಕಟಪಾಡಿ : ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ದ್ವಾರಕಾಮಯಿ ಮಠದ ಪೀಠಾಧಿಪತಿ ಶ್ರೀ ಸಾಯಿ ಈಶ್ವರ ಗುರೂಜಿ ಅವರ 108 ದಿನಗಳಲ್ಲಿ 108 ಕ್ಷೇತ್ರ ಪ್ರದಕ್ಷಣೆ ಅಂಗವಾಗಿ 17 ದಿನದ ಪ್ರದಕ್ಷಿಣೆ ಜೂನ್ 30ರಂದು ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ದೇವಳದ ಆಡಳಿತ ಧಮ೯ದಶಿ೯ ಶಶಿಧರ ವಾಗ್ಲೆ, ಗುರೂಜಿಯವರನ್ನು ಬರಮಾಡಿಕೊಂಡರು. ಈ ಸಂದಭ೯ದಲ್ಲಿ ದೇವಳದಲ್ಲಿ ನಡೆದ ಶ್ರೀ ರಾಮ ತಾರಕ ಯಜ್ಞ ಕಾರ್ಯಕ್ರಮವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದಭ೯ದಲ್ಲಿ ದೇವಸ್ಥಾನದ ಪುರೋಹಿತರಾದ ಸಂದೇಶ ಭಟ್, ವೆಂಕಟೇಶ್ ಭಟ್, ಶಿವಾನಂದ ಭಟ್, ರಾಘವೇಂದ್ರ ಪ್ರಭು, ಕವಾ೯ಲು, ಶಿಲ್ಪಾ ಮಹೇಶ್, ಸತೀಶ್ ದೇವಾಡಿಗ, ನಿಲೇಶ್, ಪ್ರದೀಪ್ ಪೂಜಾರಿ, ಶಶಾಂಕ್ ಬಂಗೇರ, ನಿಮಿಶ್ ಜತ್ತನ್ ಮುಂತಾದವರು ಉಪಸ್ಥಿತರಿದ್ದರು.

ಕಾಪು : ಶ್ರೀ ಅಯ್ಯಣ್ಣ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರ ನಿವೃತ್ತಿ ಬೀಳ್ಕೊಡುಗೆ

Thumbnail
Posted On: 29 Jun 2024, 06:44 PM

ಕಾಪು : ಶ್ರೀ ಅಯ್ಯಣ್ಣ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಹೊರ್ತಿ ಅಮಗೊಂಡ ಇವರ ನಿವೃತ್ತಿ ಬೀಳ್ಕೊಡುಗೆ ಶನಿವಾರ ಜರಗಿತು. ಈ ಸಂದರ್ಭ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಶಾಲಾ ಸಂಚಾಲಕರಾದ ಪ್ರವೀಣ್ ಕುಮಾರ್ ಗುರ್ಮೆ, ಕಿಶೋರ್ ಕುಮಾರ್ ಗುರ್ಮೆ, ಪಿ.ಕೆ.ಎಸ್ ಪ್ರೌಢ ಶಾಲೆಯ ಶಿಕ್ಷಕರಾದ ಚಂದ್ರಕಾಂತ್ ಮಾಣಿ ನಾಯ್ಕ್, ಹಳೆ ವಿದ್ಯಾರ್ಥಿಗಳಾದ ಯೋಗೀಶ್ ಆಚಾರ್ಯ, ವಿನೇಶ್ವರಿ, ಗಣೇಶ್ ಶೆಟ್ಟಿ, ಅನಿಲ್ ಶೆಟ್ಟಿ, ರೋಹಿತ್, ಸಿಆರ್ ಪಿ ಸರಿತಾ ಹಾಗೂ ಶಾಲಾ ಶಿಕ್ಷಕ ವೃಂದ, ಪೋಷಕರು ಉಪಸ್ಥಿತರಿದ್ದರು.

ಕಟಪಾಡಿ ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜು ಅಮೃತ ಮಹೋತ್ಸವ ಉದ್ಘಾಟನೆ

Thumbnail
Posted On: 29 Jun 2024, 06:37 PM

ಕಟಪಾಡಿ : ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜು ಕಟಪಾಡಿ ಇದರ "ಅಮೃತ ಮಹೋತ್ಸವ" ಕಾರ್ಯಕ್ರಮವನ್ನು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿ ಶುಭಹಾರೈಸಿದರು. ಜನರೇಟರ್ ಹಸ್ತಾಂತರ : ಕೆನರಾ ಬ್ಯಾಂಕ್ ಕಟಪಾಡಿ ಶಾಖೆ ವತಿಯಿಂದ ಕಾಲೇಜಿಗೆ ಕೊಡಮಾಡಿದ ಜನರೇಟರ್ ನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಅಮೃತ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಕೆ. ಸತ್ಯೇಂದ್ರ ಪೈ, ಕಟಪಾಡಿ ಕೆನರಾ ಬ್ಯಾಂಕ್ ಪ್ರಬಂಧಕರಾದ ಸುಶ್ಮಿತಾ ಪಿ, ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಕೆ. ವಸಂತ್ ಮಾಧವ್ ಭಟ್, ರವೀಂದ್ರನಾಥ ಶೆಟ್ಟಿ, ಎ. ಲಕ್ಮೀ ಬಾಯಿ ಹಾಗೂ ಉಪಾಧ್ಯಕ್ಷರು, ಸರ್ವ ಸದಸ್ಯರು ಉಪಸ್ಥಿತರಿದ್ದರು.

ಮಳೆ ಮುಂಜಾಗ್ರತಾ ಕ್ರಮ : ನಾಳೆ (ಜೂ.28) ದ.ಕ. ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ

Thumbnail
Posted On: 27 Jun 2024, 07:28 PM

ಮಂಗಳೂರು : ದ.ಕ.ಜಿಲ್ಲೆಯಲ್ಲಿ ಮಳೆ ತೀವ್ರಗೊಳ್ಳುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ (ಜೂ.28) ಶುಕ್ರವಾರ ಶಾಲೆಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ರಜೆ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಶುಕ್ರವಾರ ರಜೆ ಸಾರಲಾಗಿದೆ.

ಕಾರ್ಕಳ : ಮುಂಡ್ಕೂರುವಿನಲ್ಲಿ ಬೆಂಕಿಗಾಹುತಿಯಾದ ಮನೆ

Thumbnail
Posted On: 27 Jun 2024, 05:51 PM

ಕಾರ್ಕಳ : ಇಲ್ಲಿನ ಮುಂಡ್ಕೂರು ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಅನಾಹುತದಿಂದ ಮನೆ ಹಾಗೂ ಮನೆಯಲ್ಲಿ ವಸ್ತುಗಳು ಸುಟ್ಟು ಕರಕಲಾದ ಘಟನೆ ಇಂದು ನಡೆದಿದೆ. ಮುಂಡ್ಕೂರು ಗ್ರಾಮದ ಹಳೆ ಮನೆ ಪುರುಷೋತ್ತಮ ಶೆಟ್ಟಿಯವರ ಮನೆ ಇದಾಗಿದ್ದು ಬೆಲೆಬಾಳುವ ವಸ್ತುಗಳ ಸಹಿತ ಇನ್ನಿತರ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಅಂದಾಜು 5 ಲಕ್ಷಕ್ಕೂ ಅಧಿಕ ಮೊತ್ತದ ನಷ್ಟ ಉಂಟಾಗಿದ್ದು, ಯಾವುದೇ ಪ್ರಾಣ ಹಾನಿಯಾಗಿಲ್ಲ. ಘಟನೆ ನಡೆದ ಸ್ಥಳಕ್ಕೆ ಜನಪ್ರತಿನಿಧಿಗಳು, ಪಂಚಾಯತ್ ಮಟ್ಟದ ಅಧಿಕಾರಿಗಳಾಗಲಿ ಇಷ್ಟರವರೆಗೆ ಭೇಟಿ ನೀಡಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರಮುಖರಾದ ಸಂತೋಷ್ ನಮ್ಮ‌ ಕಾಪು‌ ನ್ಯೂಸ್ ವೆಬ್ ಪೋರ್ಟಲ್ ಗೆ ತಿಳಿಸಿದ್ದಾರೆ.

ಕಾಪು ತಾಲೂಕಿನಲ್ಲಿ ಮಳೆಯಿಂದಾಗಿ ಮನೆಗಳಿಗೆ ಹಾನಿ

Thumbnail
Posted On: 27 Jun 2024, 04:17 PM

ಕಾಪು : ಕರಾವಳಿಯಲ್ಲಿ ಮುಂಗಾರು ಮಳೆ ಬಿರುಸುಗೊಂಡಿದ್ದು ಕಾಪು ತಾಲೂಕಿನ ಕೆಲವೆಡೆ ಮನೆಗಳಿಗೆ ಹಾನಿಯಾಗಿದೆ. ಮಳೆಯಿಂದಾಗಿ ಕಾಪು ತಾಲೂಕಿನ ತೆಂಕಗ್ರಾಮದ ಭಾಸ್ಕರ್ ಅವರ ವಾಸ್ತವ್ಯದ ಮನೆಗೆ ಹಾನಿ ಸಂಭವಿಸಿದೆ. ಶಿರ್ವದ ಲಕ್ಷ್ಮಣ ಆಚಾರಿಯವರ ಮನೆಗೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ನಂದಿಕೂರು ಗ್ರಾಮದ ಸಂತೋಷ್ ಪೂಜಾರಿಯವರ ಮನೆಗೂ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.