Updated News From Kaup

ಮಾರ್ಚ್ 3: ಎಲ್ಲೂರು ಶ್ರೀ ವಿಶ್ವೇಶ್ವರ ಸನ್ನಿಧಿಯಲ್ಲಿ ಭಾಗೀರಥಿ ದೇವರ ಗುಡಿಯ ಶಂಕು ಸ್ಥಾಪನೆ

Posted On: 02-03-2024 08:41AM

ಕಾಪು : ಇತಿಹಾಸ ಪ್ರಸಿದ್ಧ ಎಲ್ಲೂರು ಶ್ರೀ ವಿಶ್ವೇಶ್ವರ ಸನ್ನಿಧಿಯಲ್ಲಿ ಕ್ಷೇತ್ರದ ಉಪ ಸಾನಿಧ್ಯವಾದ ಶ್ರೀ ಭಾಗೀರಥಿ ದೇವರ ಗುಡಿಯ ಶಂಕು ಸ್ಥಾಪನೆ ಮಾರ್ಚ್ 3, ಭಾನುವರ ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಪು : ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಬಲೆಗೆ ಸಿಲುಕಿಕೊಂಡು ಮೃತ್ಯು

Posted On: 01-03-2024 06:59PM

ಕಾಪು : ಇಲ್ಲಿನ ಪೊಲಿಪುವಿನಲ್ಲಿ ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿಯೊಬ್ಬರು ಬಲೆಗೆ ಸಿಲುಕಿಕೊಂಡು ಸಾವನ್ನಪಿದ ಘಟನೆ ಇಂದು ಸಂಭವಿಸಿದೆ.

ಪೊಲಿಪು‌ ನಿವಾಸಿ ಕಿಶೋರ್ (29) ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಇವರು ದಿನನಿತ್ಯ ಕಯಾಕ್ ಮೂಲಕ ಏಕಾಂಗಿಯಾಗಿ ಮೀನುಗಾರಿಕೆ ಮಾಡುತ್ತಿದ್ದರು ಎನ್ನಲಾಗಿದೆ.

ಇಂದು ಮೀನುಗಾರಿಕೆಗೆ ತೆರಳಿದ್ದು, ಮೀನುಗಾರಿಕಾ ಬಲೆಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಸಮುದ್ರದಲ್ಲಿ ತೇಲುತ್ತಿದ್ದ ಕಯಾಕ್ ಅನ್ನು ಗಮನಿಸಿದ ಬೇರೆ ಮೀನುಗಾರಿಕಾ ಬೋಟಿನವರಿಗೆ ಮೃತದೇಹ ಪತ್ತೆಯಾಗಿದೆ. ನಂತರ ದಡಕ್ಕೆ ಮೃತದೇಹವನ್ನು ತಂದಿದ್ದಾರೆ.

ಸ್ಥಳಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಪುರಸಭಾ ಸದಸ್ಯ ಕಿರಣ್ ಆಳ್ವ, ಕಾಪು ಪೊಲೀಸರು ಭೇಟಿ ನೀಡಿದ್ದಾರೆ.

ಮಾಚ್೯ 3 : ಯುವವಾಹಿನಿ ಉಡುಪಿ ಘಟಕ - ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭ

Posted On: 01-03-2024 06:46PM

ಉಡುಪಿ : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಉಡುಪಿ ಘಟಕದ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭ ಮಾಚ್೯ 03, ರವಿವಾರ ಬೆಳಿಗ್ಗೆ 10 ಗಂಟೆ ಲಕ್ಷ್ಮೀ ಸಭಾಭವನ ಲಕ್ಷ್ಮೀ ಟ್ರೇಡ್ ಸೆಂಟರ್ ಚಿಟ್ಪಾಡಿ, ಉಡುಪಿ ಇಲ್ಲಿ ಜರಗಲಿದೆ.

ಜಾನಪದ ವಿದ್ವಾಂಸರು ಹಾಗೂ ನಿವೃತ್ತ ಪ್ರಾಂಶುಪಾಲರಾದ ಕನರಾಡಿ ವಾದಿರಾಜ ಭಟ್ ಇವರಿಗೆ ಜಾನಪದ ವಿದ್ವಾಂಸ ಪ್ರಶಸ್ತಿ, ಹಿರಿಯ ಬೈದೇರುಗಳ ದರುಶನ ಪಾತ್ರಿ ಕೋಟಿ ಪೂಜಾರಿಯವರಿಗೆ ಜಾನಪದ ಕಲಾವಿದ ಪ್ರಶಸ್ತಿ, ಖ್ಯಾತ ಮುಳುಗು ತಜ್ಞರು, ಸಮಾಜ ಸೇವಕ ಈಶ್ವರ ಮಲ್ಪೆ ಇವರು ಗೌರವ ಪುರಸ್ಕಾರ ಪಡೆಯಲಿದ್ದಾರೆ.

ಮುಕ್ಕ ಶ್ರೀನಿವಾಸ್ ಕಾಲೇಜಿನ ಪ್ರೊಫೆಸರ್ ಪ್ರೊ. ಎಂ.ಎಸ್. ಕೋಟ್ಯಾನ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಎಂಎಸ್‌ಡಬ್ಲ್ಯು ವಿಭಾಗ ಮುಖ್ಯಸ್ಥರಾದ ಡಾ। ದುಗ್ಗಪ್ಪ ಕಜೆಕಾರ್ ಅಭಿನಂದನಾ ನುಡಿಗಳನ್ನೀಯಲಿದ್ದಾರೆ. ಮುಖ್ಯ ಅತಿಥಿಗಳಾಗಿ ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು‌ ಇದರ ಒಂದನೇ ಉಪಾಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಭಾಗವಹಿಸಲಿದ್ದು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸರಾದ ಬನ್ನಂಜೆ ಬಾಬು ಅಮೀನ್ ಉಪಸ್ಥಿತರಿರಲಿದ್ದಾರೆ.

ಯುವವಾಹಿನಿ (ರಿ.) ಉಡುಪಿ ಘಟಕದ ಅಧ್ಯಕ್ಷರಾದ ಅಮಿತಾಂಜಲಿ ಕಿರಣ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಹ್ಯಾಕ್-ಟೆಕ್ 2.0 ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ

Posted On: 01-03-2024 06:09PM

ಬಂಟಕಲ್ಲು : ಇಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ ವಿಭಾಗದ ವಿದ್ಯಾರ್ಥಿಗಳು ಹ್ಯಾಕ್-ಟೆಕ್ 2.0 ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಗಣಕಯಂತ್ರ ವಿಭಾಗದ ಮೂರನೇ ವರ್ಷದ ವಿದ್ಯಾರ್ಥಿಗಳಾದ ಗಣೇಶ್ ಕಾಮತ್, ಮೆಕ್ವಿನ್ ಹರ್ಶೆಲ್ ಡಿಸೋಜಾ, ಡಿವೋನಾ ಥೆಲ್ಮಾ ಪಿಂಟೋ ಮತ್ತು ದಿನೇಶ್ ಶೆಟ್ಟಿ ಇವರು ದ್ವಿತೀಯ ಸ್ಥಾನ ಗಳಿಸಿರುತ್ತಾರೆ.

ಗಣಕಯಂತ್ರ ವಿಭಾಗದ ರಾಘವೇಂದ್ರ ಜಿ ಎಸ್ ಇವರ ಮಾರ್ಗದರ್ಶನದ ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಗ್ಲೂಕೋಮ ಪತ್ತೆ ಹಚ್ಚುವ ವ್ಯವಸ್ಥೆಯನ್ನು ಅಳವಡಿಸಿದ್ದಾರೆ. ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಒಟ್ಟು ಹನ್ನೆರಡು ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿರುತ್ತಾರೆ.

ಮಾಚ್೯ 2 - 12 : ರಕ್ತ ಸಂಚಾರ ಮತ್ತು ನರ ಸಂಬಂಧಿತ ಕಾಯಿಲೆಗೆ ಉಚಿತ ಥೆರಪಿ

Posted On: 01-03-2024 04:38PM

ಕಟಪಾಡಿ : ಸಿ. ಎಸ್. ಐ ಕ್ರೈಸ್ತ ದೇವಾಲಯ ಅಂಬಾಡಿ ಮತ್ತು ಜೇಸಿಐ ಕಟಪಾಡಿ ಹಾಗೂ ಕೋಟೆ ಗ್ರಾಮ ಪಂಚಾಯತ್, ಸಿ ಎಸ್ ಐ ಲಂಬಾರ್ಡ್ ಸ್ಮಾರಕ (ಮಿಷನ್ ) ಆಸ್ಪತ್ರೆ ಉಡುಪಿ ಹಾಗೂ ಕಂಪಾನಿಯೋ ಇವರ ಸಹಯೋಗದೊಂದಿಗೆ ಮಾರ್ಚ್ 02 ರಿಂದ ಮಾರ್ಚ್ 12ರ ವರೆಗೆ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಜೇ ಸಿ ಐ ಭವನ ಕಟಪಾಡಿ ಹಾಗೂ ಸಿ ಎಸ್ ಐ ದೇವಾಲಯದ ಚರ್ಚ್ ಹಾಲ್ ನಲ್ಲಿ ಯಾವುದೇ ಔಷಧವಿಲ್ಲದೆ ರಕ್ತ ಸಂಚಾರ ಮತ್ತು ನರ ಸಂಬಂಧಿತ ಕಾಯಿಲೆಗೆ ಉಚಿತ ಥೆರಪಿ ಸಿಗಲಿದೆ.

ಪ್ರತಿದಿನ ಕೇವಲ 30 ನಿಮಿಷಗಳ ಕಾಲ ಈ ಥೆರಪಿ ಉಪಯೋಗಿಸುವುದರಿಂದ ಪಾದದಲ್ಲಿ ಇರುವ ಎಲ್ಲಾ ಎಕ್ಯೂಪ್ರಷರ್ ಪಾಯಿಂಟನ್ನು ಸಕ್ರಿಯ ಗೊಳಿಸುವುದರ ಮೂಲಕ 120 ಕ್ಕೂ ಹೆಚ್ಚು ಕಾಯಿಲೆಗೆ ಉಪಯುಕ್ತವಾಗಿದೆ. ಮುಖ್ಯವಾಗಿ ಶುಗರ್, ನಿದ್ರಾಹೀನತೆ, ಥೈರೋಡ್ , ಪಾದದ ಉರಿ , ಬೆನ್ನು ನೋವು, ಮಂಡಿ ನೋವು, ವೆರಿಕೊಸ್ ಸಮಸ್ಯೆ ಇತ್ಯಾದಿಗಳಿಗೆ ಅನುಕೂಲವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಚ್೯ 3 : ಉಚ್ಚಿಲದಲ್ಲಿ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ

Posted On: 01-03-2024 02:56PM

ಉಚ್ಚಿಲ : ಬೆಳಪು ವ್ಯವಸಾಯ ಸಹಕಾರಿ ಸಂಘ (ನಿ.) ಪಣಿಯೂರು, ನವೋದಯ ಚಾರಿಟೇಬಲ್ ಟ್ರಸ್ಟ್ (ರಿ.) ಮಂಗಳೂರು, ರೋಟರಿ ಕ್ಲಬ್ ಉಚ್ಚಿಲ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ, ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ ಇವರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣೆ ಹಾಗೂ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ ಮಾಚ್೯ 3, ಆದಿತ್ಯವಾರ ಬೆಳಿಗ್ಗೆ ಘಂಟೆ 9ರಿಂದ ಮಧ್ಯಾಹ್ನ 1ರ ವರೆಗೆ ಬೆಳಪು ವ್ಯವಸಾಯ ಸಹಕಾರಿ ಸಂಘದ ಉಚ್ಚಿಲ ಶಾಖೆಯ ಸಹಕಾರಿ ಮಹಲ್ ನಲ್ಲಿ ಜರಗಲಿದೆ ಎಂದು ಬೆಳಪು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳಕಿಲ್ಲದ ಕಾಪು ಫ್ಲೈ ಓವರ್ ಅಂಡರ್ ಪಾಸ್ : ಅಧಿಕಾರಿಗಳ ನಿರ್ಲಕ್ಷ್ಯತನ

Posted On: 01-03-2024 01:48PM

ಕಾಪು : ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಮುಂಭಾಗದ ಎನ್‌ಎಚ್ 66, ಅಂಡರ್‌ಪಾಸ್ನಲ್ಲಿ ಅಳವಡಿಸಲಾಗಿರುವ ದೀಪವು ಕಳೆದ 18 ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿಲ್ಲ, ಇದು ಕಾಪು ನಗರ ಪ್ರದೇಶಕ್ಕೆ ಪ್ರವೇಶಿಸುವ ಮುಖ್ಯ ರಸ್ತೆಯಾಗಿದ್ದು ಈ ಸಮಸ್ಯೆಯನ್ನು ಮನಗಂಡು ಸ್ಥಳೀಯರಾದ ಜಯರಾಮ್ ಆಚಾರ್ಯ ಇವರು ರಾಷ್ಟ್ರೀಯ ಹೆದ್ದಾರಿ, ಜಿಲ್ಲಾಧಿಕಾರಿ, ತಹಶೀಲ್ದಾರ್, ಕಾಪು ಪುರಸಭೆ ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ತಿಳಿಸಿದರೂ ಕೂಡಾ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಅಂಡರ್ ಪಾಸ್ ಮೂಲಕ ಬಹಳಷ್ಟು ವಾಹನಗಳು ಮತ್ತು ಜನರು ಚಲಿಸುತ್ತಾರೆ. ಬೆಳಕಿಲ್ಲದೆ ಅಕ್ಕಪಕ್ಕದಲ್ಲಿ ನಿಂತಿರುವ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ.

ಮಾರ್ಚ್ 26 ಮತ್ತು 27 ರಂದು ಇತಿಹಾಸ ಪ್ರಸಿದ್ಧ ಕಾಪು ಮಾರಿಪೂಜೆಯನ್ನು ಆಚರಿಸಲಾಗುತ್ತದೆ ಆದ್ದರಿಂದ ಇಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಲಿದೆ ಎಂಬುದನ್ನು ಗಮನಿಸಿ ಬೆಳಕಿನ ವ್ಯವಸ್ಥೆ ಮಾಡಬೇಕೆಂದು ನಮ್ಮ ಕಾಪು ವಾಹಿನಿಯ ಮೂಲಕ ಆಗ್ರಹಿಸಿದ್ದಾರೆ.

ಅಖಿಲ ಭಾರತ ಸಂತ ಸಮಿತಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸಭೆ

Posted On: 01-03-2024 01:44PM

ಶಂಕರಪುರ : ರಾಷ್ಟ್ರೀಯ ಅಧ್ಯಕ್ಷರು ಜಗದೂರು ಅವಿಚಲ ದೇವಾಚಾರ್ಯ ಜಿ ಅವರ ಒಪ್ಪಿಗೆಯೊಂದಿಗೆ ಮತ್ತು ಗೌರವಾನ್ವಿತ ಮುಖ್ಯ ನಿರ್ದೇಶಕ ಶ್ರೀ ಮಹಂತ್ ಜ್ಞಾನದೇವ್ ಸಿಂಗ್ ಜಿ ಯವರ ಸಮಾಲೋಚನೆಯೊಂದಿಗೆ 2024 ಮಾರ್ಚ್ 02, 03 ಶನಿವಾರದಂದು ಪ್ರಬೋಧಿನಿ, ಜ್ಞಾನ ಶ್ರೇಷ್ಠ ಕೇಂದ್ರ, ಕೇಶವ ಸೃಷ್ಟಿ, ಉತ್ತಾನ್ ರಸ್ತೆ, ಭಯಂದರ್ ಪಶ್ಚಿಮ ಥಾಣೆ (ಮುಂಬೈ) ಮಹಾರಾಷ್ಟ್ರದಲ್ಲಿ ನಡೆಯುವ ಸಭೆಯಲ್ಲಿ ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರು ಭಾಗವಹಿಸಲಿದ್ದಾರೆ ಎಂದು ಶಂಕರಪುರ ದ್ವಾರಕಾಮಾಯಿ ಮಠದ ಪ್ರಕಟಣೆ ತಿಳಿಸಿದೆ.

ಹೆಜಮಾಡಿಯಲ್ಲಿ ಉಡುಪಿ ಜಿಲ್ಲಾ ಪತ್ರಕರ್ತರ ಕ್ರಿಕೆಟ್ ಪಂದ್ಯಾಟ

Posted On: 29-02-2024 07:39PM

ಪಡುಬಿದ್ರಿ : ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಸಂಭ್ರಮ ಅಂಗವಾಗಿ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಮಾರ್ಚ್ 5, ಮಂಗಳವಾರ ಹೆಜಮಾಡಿಯ ಬಸ್ತಿಪಡ್ಪು ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾ ಪತ್ರಕರ್ತರ ಕ್ರಿಕೆಟ್ ಪಂದ್ಯಾಟ ಅಯೋಜಿಸಲಾಗಿದೆ.

ಜಿಲ್ಲೆಯ ಎಲ್ಲಾ ತಾಲೂಕುಗಳ ಪತ್ರಕರ್ತರ ಸಂಘಗಳ ತಂಡಗಳು ಪಂದ್ಯಾಟದಲ್ಲಿ ರಜತ ಸಂಭ್ರಮ ಟ್ರೋಫಿಗಾಗಿ ಸೆಣಸಾಡಲಿದೆ. ಮಾಚ್೯ 5, ಮಂಗಳವಾರ ಬೆಳಿಗ್ಗೆ 9 ಗಂಟೆಯಿಂದ ಪಂದ್ಯಾಟ ಆರಂಭಗೊಳ್ಳಲಿದೆ. 11 ಗಂಟೆಗೆ ಕಾಪು ಸಂಘದ ಅಧ್ಯಕ್ಷ ಹರೀಶ್ ಹೆಜ್ಮಾಡಿ ಅಧ್ಯಕ್ಷತೆಯಲ್ಲಿ ಉಡುಪಿ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಉಪಸ್ಥಿತಿಯಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಪಂದ್ಯಾಟ ಉದ್ಘಾಟಿಸುವರು.

ಪಡುಬಿದ್ರಿ ಆಸ್ಪಿನ್ ಇನ್ಫ್ರಾ ಲಿ.ನ ಜಿ.ಎಮ್. ಅಶೋಕ್ ಶೆಟ್ಟಿ, ಕಾಪು ತಹಸೀಲ್ದಾರ್ ಡಾ.ಪ್ರತಿಭಾ ಆರ್., ಪಡುಪಣಂಬೂರು ಗ್ರಾ.ಪಂ. ಮಾಜಿ ಅಧ್ಯಕ್ಷ ವಿನೋದ್ ಸಾಲ್ಯಾನ್ ಉಡುಪಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ತಾ.ಪಂ.ಮಾಜಿ ಸದಸ್ಯ ಸಚಿನ್ ನಾಯಕ್, ತಾಲೂಕು ಯುವಜನ ಮತ್ತು ಕ್ರೀಡಾ ಅಧಿಕಾರಿ ರಿತೇಶ್ ಕುಮಾರ್ ಶೆಟ್ಟಿ, ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ, ರಜತ ಸಂಭ್ರಮ ಸಮಿತಿಯ ಸಂಚಾಲಕ ಮೊಹಮ್ಮದ್ ಶರೀಫ್ ಮುಖ್ಯ ಅತಿಥಿಗಳಾಗಿರುವರು.

ಸಮಾರೋಪ ಸಮಾರಂಭದಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ ಪ್ರಶಸ್ತಿ ವಿತರಿಸುವರು. ಅದಾನಿ ಪವರ್ ಲಿ. ಅಧ್ಯಕ್ಷ ಕಿಶೋರ್ ಆಳ್ವ, ಪಡುಬಿದ್ರಿ ಬೀಡು ರತ್ನಾಕರರಾಜ್ ಅರಸು ಕಿನ್ಯಕ್ಕ ಬಲ್ಲಾಳರು, ಪಡುಬಿದ್ರಿ ಸೊಸೈಟಿಯ ಅಧ್ಯಕ್ಷ ವೈ.ಸುಧೀರ್ ಕುಮಾರ್, ಕಾಪು ಗಾರ್ಡನ್ ಪ್ಯಾಲೇಸ್ ಎಮ್.ಡಿ. ಗೌರವ್ ಶೇಣವ, ಪಡುಬಿದ್ರಿ ಅಮರ್ ಕಂಫರ್ಟ್ಸ್ನ ಮಿಥುನ್ ಆರ್.ಹೆಗ್ಡೆ, ಕೆಪಿಸಿಸಿ ಕೋರ್ಡಿನೇಟರ್ ನವೀನ್‌ಚಂದ್ರ ಜೆ.ಶೆಟ್ಟಿ ಮುಖ್ಯ ಅತಿಥಿಗಳಾಗಿರುವರು ಎಂದು ಕ್ರೀಡಾ ಸಮಿತಿಯ ಸಂಚಾಲಕ ರಾಕೇಶ್ ಕುಂಜೂರು ತಿಳಿಸಿದ್ದಾರೆ.

ಕಾಪು ತಾಲೂಕು ಭೂನ್ಯಾಯ ಮಂಡಳಿಗೆ ನೇಮಕ

Posted On: 29-02-2024 04:15PM

ಕಾಪು : ತಾಲೂಕು ಭೂನ್ಯಾಯ ಮಂಡಳಿಗೆ ಸರಕಾರ ನಾಲ್ವರನ್ನು ಸದಸ್ಯರನ್ನಾಗಿ ನೇಮಿಸಿ ನಾಮ ನಿರ್ದೇಶನ ಮಾಡಿದೆ.

ರೋಹನ್ ಕುಮಾರ್ ಕುತ್ಯಾರು, ಶ ಮೆಲ್ವಿನ್ ಡಿ'ಸೋಜಾ, ರಮೀಜ್ ಹುಸೈನ್ ಪಡುಬಿದ್ರಿ ಮತ್ತು ರಾಘವ ಕೋಟ್ಯಾನ್ ಬೆಳ್ಳೆ ನೇಮಿಸಿ ಸರಕಾರ ಆದೇಶ ಹೊರಡಿಸಿದೆ.

ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತರನ್ನು ಮಂಡಳಿಯ ಅಧ್ಯಕ್ಷರನ್ನಾಗಿ, ಕಾಪು ತಾಲೂಕು ತಹಶೀಲ್ದಾರ್‌ರವರನ್ನು ಸದಸ್ಯ ಕಾರ್ಯದರ್ಶಿಯಾಗಿ ರಾಜ್ಯಪಾಲರ ಆಜ್ಞಾನುಸಾರ ಮುಂದಿನ ಆದೇಶದವರೆಗೆ ನೇಮಿಸಿ ನಾಮನಿರ್ದೇಶನ ಗೊಳಿಸಲಾಗಿದೆ ಎಂದು ಕಂದಾಯ ಇಲಾಖೆಯ ಸರಕಾರದ ಆಧೀನ ಕಾರ್ಯದರ್ಶಿ ಗೌರಮ್ಮ ಆರ್‌. ಆದೇಶದಲ್ಲಿ ತಿಳಿಸಿದ್ದಾರೆ.