Updated News From Kaup
ಎಪ್ರಿಲ್ 27 : ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 'ಶ್ರೀರಾಮ ವೈಭವ' - ನೃತ್ಯರೂಪಕ

Posted On: 26-04-2024 03:08PM
ಕಾಪು : ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ. 25ರಿಂದ ಮೊದಲ್ಗೊಂಡು ಮೇ 9ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಈ ನಿಮಿತ್ತ ಎಪ್ರಿಲ್ 27, ಶನಿವಾರ ಶ್ರೀಮತಿ ಸ್ವಾತಿ ಕೃಷ್ಣಾನಂದ ಭಟ್, ಯಸ್ಯ ನಾಟ್ಯಾಲಯ, ಮುದರಂಗಡಿ ಇವರಿಂದ ಸಂಜೆ ಗಂಟೆ 6:30ರಿಂದ 'ಶ್ರೀರಾಮ ವೈಭವ' - ನೃತ್ಯರೂಪಕ ಜರಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಎ.26 - 27 : ಶ್ರೀ ಧೂಮಾವತಿ ದೈವಸ್ಥಾನ ಮಲಂಗೋಲಿ ಕಳತ್ತೂರು - ವಿವಿಧ ಧಾರ್ಮಿಕ ಕಾರ್ಯಕ್ರಮಗಳು

Posted On: 26-04-2024 02:56PM
ಕಾಪು : ತಾಲೂಕಿನ ಕಳತ್ತೂರು ಮಲಂಗೋಳಿ ಶ್ರೀ ಧೂಮವತಿ ದೈವಸ್ಥಾನದಲ್ಲಿ ನವೀಕೃತ ಗರ್ಭಗೃಹ ಸಮರ್ಪಣೆ, ಪುನಃ ಪ್ರತಿಷ್ಠೆ - ದೈವ ಸಂದರ್ಶನ, ಅನ್ನ ಸಂತರ್ಪಣೆಯು ನಡೆಯಲಿದೆ ಎಂದು ದೈವಸ್ಥಾನದ ಪ್ರಮುಖರು ಪ್ರಕಟಣೆಯಲ್ಲಿ ತಿಳಿಸಿರುವರು.
ಕಾಪು : ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರಿಂದ ಮತದಾನ

Posted On: 26-04-2024 02:38PM
ಕಾಪು : ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಪೈಯಾರು ಕರಿಯಣ್ಣ ಶೆಟ್ಟಿ ಪ್ರೌಢಶಾಲೆಯಲ್ಲಿ ಕಳತ್ತೂರು ವಾರ್ಡಿನ ಮತಗಟ್ಟೆ ಸಂಖ್ಯೆ 157 ರಲ್ಲಿ ಮತದಾನ ಮಾಡಿದರು.
ಎ.25 - ಮೇ9 : ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

Posted On: 26-04-2024 11:10AM
ಕಾಪು : ತಾಲೂಕಿನ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಮಾರ್ಗದರ್ಶನದೊಂದಿಗೆ ಎಪ್ರಿಲ್ 25ರಿಂದ ಮೊದಲ್ಗೊಂಡು ಮೇ 9ರವರೆಗೆ ಮಹಾಗಣಪತಿ ದೇವರ ನೂತನ ಶಿಲಾಮಯ ಗರ್ಭಗೃಹ ಸಮರ್ಪಣೆ – ಬಿಂಬ ಪುನಃಪ್ರತಿಷ್ಠೆ, 500 ಕಲಶ ಸಹಿತ ಬ್ರಹ್ಮಕಲಶಾಭಿಷೇಕ, ಸಹಸ್ತ್ರ ನಾಲಿಕೇರ ಮಹಾಗಣಪತಿ ಯಾಗ, ಸಹಸ್ತ್ರಕಲಶ ಸಹಿತ ಬ್ರಹ್ಮಕಲಶಾಭಿಷೇಕ, ಏಕಪವಿತ್ರ ಶ್ರೀ ನಾಗಬ್ರಹ್ಮಮಂಡಲೋತ್ಸವ, ಮನ್ಮಹಾರಥೋತ್ಸವ, ಮಹಾಅನ್ನಸಂತರ್ಪಣೆಯು ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ಕಾಪು : ಮತದಾನ ಪ್ರಕ್ರಿಯೆ ಆರಂಭ

Posted On: 26-04-2024 10:21AM
ಕಾಪು : ವಿಧಾನ ಸಭಾ ಕ್ಷೇತ್ರದಲ್ಲಿ 209 ಬೂತ್ ಗಳಲ್ಲಿ ಮತದಾನ ಪ್ರಕ್ರಿಯೆ ಬೆಳಿಗ್ಗೆ 7 ಗಂಟೆಗೆ ಆರಂಭವಾಗಿದ್ದು, ಜನರು ಬಿಸಿಲ ಬೇಗೆ, ಮದುವೆ ಇನ್ನಿತರ ಕಾರ್ಯಕ್ರಮದ ನಿಮಿತ್ತ ಬೇಗನೆ ಮತಗಟ್ಟೆಗೆ ತೆರಳಿ ಮತ ಚಲಾಯಿಸುವುದು ಕಂಡು ಬಂದಿದೆ. ಕಾಪು ವಿಧಾನ ಸಭಾ ಕ್ಷೇತ್ರದ ಚುನಾವಣಾ ಪ್ರಕ್ರಿಯೆಗಳಿಗಾಗಿ 1715 ಮಂದಿ ಅಧಿಕಾರಿಗಳು ಮತ್ತು ಸಿಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಮತಗಟ್ಟೆಗಳ ವಿಂಗಡಣೆ : ಕೈಪುಂಜಾಲು ಶಾಲೆ, ದಂಡತೀರ್ಥ ಶಾಲೆ, ಕಾಪು ಪಡು ಸರಕಾರಿ ಮಾದರಿ ಶಾಲೆ, ಮಲ್ಲಾರು ಜನರಲ್ ಶಾಲೆ, ಮೂಳೂರು ಸರಕಾರಿ ಶಾಲೆಗಳಲ್ಲಿ ಸಖಿ ಮತಗಟ್ಟೆಗಳನ್ನಾಗಿ, ಕಟಪಾಡಿ ವೆಂಕಟರಮಣ ಸ್ವಾಮಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ಚೇತನರ ನಿರ್ವಹಣೆ, ಬೆಳಪು ಸರಕಾರಿ ಪ್ರೌಢಶಾಲಾ ಮತಗಟ್ಟೆಯನ್ನು ಯುವಜನ ನಿರ್ವಹಣೆ, ಪಾದೂರು ಬಾಷೆಲ್ ಮಿಷನ್ ಶಾಲೆ ಮತಗಟ್ಟೆಯನ್ನು ಧ್ಯೇಯ ಆಧಾರಿತ, ಎರ್ಮಾಳು ತೆಂಕ ಸರಕಾರಿ ಮಾದರಿ ಶಾಲೆಯ ಮತಗಟ್ಟೆಯನ್ನು ಸಾಂಪ್ರದಾಯಿಕ ಮತಗಟ್ಟೆಯನ್ನಾಗಿ, ಪೆರ್ಡೂರು ಬಾಷೆಲ್ ಮಿಷನ್ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ, ಕೈಪುಂಜಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಡುಬಿದ್ರಿ ನಡ್ಸಾಲು ಕಂಚಿನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯನ್ನು ಅತೀಸೂಕ್ಷ್ಮ ಮತಗಟ್ಟೆಯನ್ನಾಗಿ ವಿಂಗಡಿಸಲಾಗಿದೆ.
ಮೊಬೈಲ್ ಬಳಕೆ ನಿಷಿದ್ಧ : ಮತದಾನ ವೇಳೆ ಮೊಬೈಲ್ ಕೊಂಡೊಯ್ಯುವುದಕ್ಕೆ ನಿರ್ಬಂಧ ಹೇರಲಾಗಿದೆ. ಮತದಾನದ ವಿಡಿಯೋ ಮಾಡಿಕೊಳ್ಳುವ ಸಾಧ್ಯತೆ ಇರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಮತಗಟ್ಟೆ ಹೊರಗೆ ಮೊಬೈಲ್ ಇಟ್ಟು ಹೋಗಲು ಸೂಚನೆ ನೀಡಲಾಗುತ್ತಿದೆ.
ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಇಂದು ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ಮತದಾನಕ್ಕೆ ಅವಕಾಶವಿದೆ.
ಕಾಪು : ಚುನಾವಣೆಗೆ ಪೂರ್ವಭಾವಿಯಾಗಿ ಪೊಲೀಸ್ ಪಥಸಂಚಲನ

Posted On: 23-04-2024 04:35PM
ಕಾಪು : ಕ್ಷೇತ್ರದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದೆ ಶಾಂತಿ,ಸೌಹಾರ್ದತೆಯಿಂದ ಚುನಾವಣೆ ನಡೆಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಕಾಪುವಿನ ಪೊಲಿಪು ಮಸೀದಿಯಿಂದ K1 ಹೋಟೆಲ್ ವರೆಗೆ ಮಂಗಳವಾರ ಪಥಸಂಚಲನ ನಡೆಯಿತು.

ಪಥ ಸಂಚಲನದಲ್ಲಿ ಪೋಲೀಸ್ ಹೆಚ್ಚುವರಿ ವರಿಷ್ಠಾಧಿಕಾರಿ ಟಿ ಸಿದ್ದಲಿಂಗಪ್ಪ, DYSP ಅರವಿಂದ್, ಸರ್ಕಲ್ ಇನ್ಸ್ಪೆಕ್ಟರ್ ಜಯಶ್ರೀ ಹಾಗೂ ಕಾಪು ತಹಶಿಲ್ದಾರ್ ಡಾ.ಪ್ರತಿಭಾ ಆರ್ ಭಾಗವಹಿಸಿ, ಪಥಸಂಚಲನ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದರು.
ಪೋಲೀಸ್ ವರಿಷ್ಠಾಧಿಕಾರಿಗಳಾದ ಟಿ ಸಿದ್ದಲಿಂಗಪ್ಪ ಮಾತನಾಡಿ, ಮತದಾರರು ನಿರ್ಭೀತಿಯಿಂದ ಚುನಾವಣೆಯಲ್ಲಿ ಭಾಗವಹಿಸುವಂತೆ ಮಾಡಲು ಪೋಲೀಸ್ ಇಲಾಖೆ ಸಜ್ಜಾಗಿದ್ದು ಮುಂಜಾಗ್ರತೆ ಮತ್ತು ಜನಜಾಗೃತಿ ಮೂಡಿಸುವ ಸಲುವಾಗಿ ಪೋಲೀಸ್ ಇಲಾಖೆಯ ಸಿದ್ದತೆ ಇದಾಗಿದೆ ಎಂದರು.
ಕಾಪು ತಾಲ್ಲೂಕಿನ ದಂಡಾಧಿಕಾರಿ ಡಾ.ಪ್ರತಿಭಾ ಆರ್ ಮಾತನಾಡಿ, ಪೋಲೀಸ್ ವರಿಷ್ಠಾಧಿಕಾರಿಗಳಾದ ಟಿ ಸಿದ್ದಲಿಂಗಪ್ಪ ಇವರು ಸ್ವತಃ ಇಡೀ ಪಥಸಂಚನದಲ್ಲಿ ಭಾಗವಹಿಸಿದ್ದರಿಂದ ಜಾಗೃತಿ ಸಂದೇಶ ಪರಿಣಾಮಕಾರಿಯಾಗಿ ತಲುಪಿದೆ. ಕಾಪು ವಿಧಾನಸಭಾ ಕ್ಷೇತ್ರದ ಚುನಾವಣೆ ಶಾಂತಿಯುತವಾಗಿ ನಡೆಯಲು ಕಂದಾಯ ಇಲಾಖೆ ಕೂಡಾ ಸರ್ವಸನ್ನದ್ಧವಾಗಿದೆ ಎಂದರು.
ಬೆಳಪು ಸ್ಪೋರ್ಟ್ಸ್ ಕ್ಲಬ್ : 10ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

Posted On: 23-04-2024 10:58AM
ಬೆಳಪು : ಇಲ್ಲಿನ ಬೆಳಪು ಸ್ಪೋರ್ಟ್ಸ್ ಕ್ಲಬ್ ಇದರ 30ನೆ ವರ್ಷದ ಸಂಭ್ರಮದ ಅಂಗವಾಗಿ 2024ನೇ ಸಾಲಿನ ಸಾಮಾಜಿಕ ಕಾರ್ಯ ಚಟುವಟಿಕೆಯ ಬಾಗವಾಗಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಕಳತ್ತೂರು ಪಿ. ಕೆ. ಎಸ್. ಪ್ರೌಢಶಾಲೆಯ ಪ್ರಾಂಶುಪಾಲರಾದ ಶ್ರೀ. ಗಂಗನಯಕ್ ಅವರು ಉದ್ಘಾಟಿಸಿದರು.

ಈ ಸಂದರ್ಭ ಅವರು ಮಾತನಾಡಿ, ಬೆಳಪು ಸ್ಪೋರ್ಟ್ಸ್ ಕ್ಲಬ್ ನಿರಂತರವಾಗಿ ಸಾಮಾಜಿಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ನೀಡುತ್ತಾ ಬಂದಿದೆ. ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳ ತುಂಬ ಅಗತ್ಯವಿದೆ, ಪ್ರತಿ ವರ್ಷವು ಕೂಡ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕಾಗಿ ವಿನಂತಿಸಿದರು. ಪಿ. ಕೆ. ಎಸ್. ಪ್ರೌಢಶಾಲೆ ಕಳತ್ತೂರು, ಮೌಲಾನ ಅಝದ್ ಮಾಡೆಲ್ ಪ್ರೌಢಶಾಲೆ ಮಲ್ಲಾರು, ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಮಲ್ಲಾರು ಹಾಗೂ ಬೆಳಪು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ವಿದ್ಯಾರ್ಥಿಗಳು ಉಚಿತ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಖಲೀಲ್ ಅಹಮ್ಮದ್ ಲೈಫ್ & ಕರಿಯರ್ ಕೋಚ್ - ಇನ್ಸೖಟ್ ಕರಿಯರ್ ಅಕಾಡೆಮಿ, ಉಡುಪಿ ಇವರು ವೃತ್ತಿ ಮಾರ್ಗದರ್ಶಕ ಕಾರ್ಯಕ್ರಮವನ್ನು ನೆರವೇರಿಸಿದರು. ಬೆಳಪು ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಶಾನಾವಾಝ್ ಫಝಲುದ್ದೀನ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ಶಾಹೀದ್ ನವಾಜ್, ಕಾರ್ಯದರ್ಶಿ ರಿಯಾನ್ ಅನ್ಸಾರ್, ಜೊತೆ ಕಾರ್ಯದರ್ಶಿ ಸಕ್ಲೆನ್ ಅಹಮ್ಮದ್, ಸದಸ್ಯರಾದ ಶಮೀಮ್ ಖುಷ್ದಿಲ್, ನದಿಮ್ ಖುಷ್ದಿಲ್, ಯಸಿರ್ ಅಲಿ, ಮುಪೀದ್ ಹನೀಫ್ ಹಾಗೂ ಬೆಳಪು ಸ್ಪೋರ್ಟ್ಸ್ ಕ್ಲಬ್ ನ ಹಿರಿಯ ಸದಸ್ಯರುಗಳಾದ ಶಾನವಾಜ್ ನುರುಲ್ಲಾ, ಶೇಖ್ ಖಾಲಿದ್ ಅಹ್ಮದ್, ಇರ್ಫಾನ್ ರಫೀಕ್, ಅಸ್ಲಂ ನಸ್ರೊಲ್ಲಾ, ಸಹೀದ್ ಅಹ್ಮದ್, ಅಕ್ರಮ್ ಮಹತಾಬ್ ಮತ್ತು ಅಲ್ತಾಫ್ ಅಬ್ದುಲ್ ಘನಿ ಉಪಸ್ಥಿತರಿದ್ದರು.
ಎಬಿವಿಪಿಯಿಂದ ನೇಹಾ ಹೀರೆಮಠ ಕೊಲೆ ಖಂಡಿಸಿ ಪಂಜಿನ ಮೆರವಣಿಗೆ

Posted On: 20-04-2024 09:04PM
ಕಾರ್ಕಳ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಕಳ ವತಿಯಿಂದ ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಹಾಗೂ ಗೃಹ ಸಚಿವ ಪರಮೇಶ್ವರ ಅವರ ಹೇಳಿಕೆ ಖಂಡಿಸಿ ಕಾರ್ಕಳದ ಸರ್ವಜ್ಞ ವೃತ್ತದಿಂದ ಬಂಡೀಮಠದ ವರೆಗೆ ಪಂಜಿನ ಮೆರವಣಿಗೆ ನಡೆಸಿ ಆರೋಪಿಯ ಪ್ರತಿಕೃತಿಯನ್ನು ದಹಿಸಿ ಪ್ರತಿಭಟಿಸಲಾಯಿತು.
ರಾಜ್ಯ ಸಹ ಕಾರ್ಯದರ್ಶಿ ಹರ್ಶಿತ್ ಕೊಯ್ಲ ಮಾತನಾಡಿ ಶಾಲಾ ಕಾಲೇಜುಗಳು ಜ್ಞಾನದ ದೇಗುಲಗಳು ಇಂತಹ ದೇಗುಲದಲ್ಲಿ ಹಾಡು ಹಗಲೇ ವಿದ್ಯಾರ್ಥಿನಿ ನೇಹಾ ಹಿರೇಮಠಳನ್ನು ಭೀಕರ ಹತ್ಯೆಯನ್ನು ಮಾಡಿರುವ ಘಟನೆ ನಿಜಕ್ಕೂ ವಿದ್ಯಾರ್ಥಿ ಸಮುದಾಯದಲ್ಲಿ ಭಯದ ವಾತಾವರಣ ಮೂಡಿಸಿದಂತಾಗಿದೆ. ಕೆ.ಎಲ್.ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಎಂಸಿಎ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ನೇಹಾ ಹಿರೇಮಠ ಅವಳನ್ನು ಜಿಹಾದಿ ಕ್ರೂರ ಮನಸ್ಥಿತಿಯ ಪಯಾಜ್ ಎಂಬಾತ ಲವ್ ಜಿಹಾದಿಗಾಗಿ ಅವಳನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಈ ಪ್ರೀತಿಯನ್ನು ವಿದ್ಯಾರ್ಥಿನಿ ನಿರಾಕರಿಸಿದಕ್ಕಾಗಿ ಆಕೆಯ ಕಾಲೇಜಿಗೆ ಆಕ್ರಮವಾಗಿ ಪ್ರವೇಶಿಸಿ ಚಾಕುವಿನಿಂದ 9 ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕೊಲೆಗಾರನಿಗೆ ಕಾನೂನಿನ ಯಾವುದೇ ಭಯವೂ ಇಲ್ಲದೆ ರಾಜಾರೋಷವಾಗಿ ಕ್ರತ್ಯ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದರೆ ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟು ಕುಸಿದು ಹೋಗಿದೆ ಎನ್ನುವುದು ಸ್ಪಷ್ಟವಾಗಿ ತಿಳಿಯುವಂತಾಗಿದೆ. ಈ ಘಟನೆಯಿಂದ ರಾಜ್ಯದ ವಿದ್ಯಾರ್ಥಿ ಸಮುದಾಯ ಭಯಭೀತ ಗೊಂಡಿದೆ. ಪೊಲೀಸರು ಕೂಡಲೇ ಸೂಕ್ತ ತನಿಖೆಯನ್ನು ಕೈಗೊಂಡು, ಅಪರಾಧಿಗೆ ಉಗ್ರ ಶಿಕ್ಷೆ ಆಗುವ ಹಾಗೆ ಮಾಡಿ ವಿದ್ಯಾರ್ಥಿನಿಯ ಕುಂಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕರಾದ ಗಣೇಶ್ ಪೂಜಾರಿ ಪಣಿಯಾಡಿ, ತಾಲೂಕು ಸಂಚಾಲಕರಾದ ಶ್ರೇಯಸ್ ಅಂಚನ್,ಕರ್ನಾಟಕ ದಕ್ಷಿಣ ಪ್ರಾಂತ ಸಾಮಾಜಿಕ ಜಾಲತಾಣ ಸಹ-ಸಂಚಾಲಕರಾದ ಶ್ರೀವತ್ಸ ಮತ್ತು ಪ್ರಮುಖರಾದ ಅಜಿತ್ ಜೋಗಿ, ಪವನ್, ಸ್ವಸ್ತಿಕ್, ಕಾರ್ತಿಕ್, ಮನೋಜ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇದ್ದರು.
ಶಿಬರೂರು : ಕೊಡಮಣಿತ್ತಾಯ ದೈವಸ್ಥಾನಕ್ಕೆ ಚಿನ್ನದ ಪಲ್ಲಕ್ಕಿ ಸಮರ್ಪಣೆ

Posted On: 20-04-2024 06:02PM
ಶಿಬರೂರು : ಇಲ್ಲಿನ ಕೊಡಮಣಿತ್ತಾಯ ದೈವಸ್ಥಾನಕ್ಕೆ ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿತ ಚಿನ್ನದ ಪಲ್ಲಕ್ಕಿಯನ್ನು ಕಟೀಲಿನಿಂದ ವೈಭವದ ಮೆರವಣಿಗೆಯಲ್ಲಿ ಕೊಂಡೊಯ್ದು ಶಿಬರೂರು ದೈವಸ್ಥಾನದಲ್ಲಿ ಸಮರ್ಪಿಸಲಾಯಿತು.
ಜೀರ್ಣೋದ್ಧಾರಗೊಂಡ ದೈವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕ ನಡೆಯಲಿದ್ದು, ನೂತನ ಚಿನ್ನ ಪಲ್ಲಕ್ಕಿಯನ್ನು ಭಕ್ತಾದಿಗಳ ಸಹಕಾರದಿಂದ ನಿರ್ಮಿಸಲಾಗಿದೆ. ಸುಮಾರು ಎರಡು ಕೆಜಿಯಷ್ಟು ಬಂಗಾರವನ್ನು ಭಕ್ತಾದಿಗಳೇ ನೀಡಿದ್ದಾರೆ.
ಕಟೀಲಿನಿಂದ ಶಿಬರೂರಿಗೆ ನಡೆದ ಮೆರವಣಿಗೆಗೆ ಪಲಿಮಾರು ಶ್ರೀ ವಿದ್ಯಾಧೀಶ ಸ್ವಾಮೀಜಿ, ವೇದವ್ಯಾಸ ತಂತ್ರಿ ಕಟೀಲಿನ ಅಸ್ರಣ್ಣರು, ಕೊಡೆತ್ತೂರು ಗುತ್ತು ಸನತ್ ಕುಮಾರ್ ಶೆಟ್ಟಿ, ಜೀರ್ಣೋದ್ದಾರ ಮತ್ರು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಏಳಿಂಜೆ ಕೋಂಜಾಲುಗುತ್ತು ಪ್ರಭಾಕರ ಶೆಟ್ಟಿ, ಗುತ್ತಿನಾರ್ ಉಮೇಶ್ ಎನ್ ಶೆಟ್ಟಿ, ಹೊರೆ ಕಾಣಿಕೆ ಸಮಿತಿ ಉಪಾಧ್ಯಕ್ಷರಾದ ಶ್ರೀನಿವಾಸ ಶೆಟ್ಟಿ ಕೊಡೆತ್ತೂರು ಪೆಜತಿಮಾರ್, ಬ್ರಹ್ಮಕಲಶೋತ್ಸವ ಮತ್ತು ಜೀಣೋದ್ದಾರ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಶಿಬರೂರು-ಅತ್ತೂರು ಕೊಡೆತ್ತೂರು ಗ್ರಾಮಸ್ಥರು ಉಪಸ್ಥಿತರಿದ್ದರು.
ಉಡುಪಿ ಮಲಬಾರ್ ಗೋಲ್ಡ್ ನಲ್ಲಿ ವಜ್ರಾಭರಣಗಳ ಪ್ರದರ್ಶನಕ್ಕೆ ಚಾಲನೆ

Posted On: 18-04-2024 11:12AM
ಉಡುಪಿ : ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಏಪ್ರಿಲ್ 28ರವರೆಗೆ ಹಮ್ಮಿಕೊಳ್ಳಲಾಗಿರುವ ವಜ್ರಾಭರಣಗಳ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಜ್ಯೋತಿ ಶೆಟ್ಟಿ, ಸರಿತಾ ಪಿ.ಅಮೀನ್, ಪೂರ್ಣಿಮಾ ಶೆಟ್ಟಿ ವೈವಿಧ್ಯಮಯ ವಜ್ರಾಭರಣಗಳನ್ನು ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಜ್ಯೋತಿ ಶೆಟ್ಟಿ, ವಿಶ್ವ ಮಾನ್ಯತೆ ಪಡೆದಿರುವ ಮಲಬಾರ್ ಗೋಲ್ಡ್ ಸಂಸ್ಥೆಯಲ್ಲಿ ಉತ್ತಮ, ಗುಣಮಟ್ಟದ ಚಿನ್ನ ಹಾಗೂ ವಜ್ರಗಳ ಆಭರಣಗಳ ಸಂಗ್ರಹ ಇದೆ. ಈ ಸಂಸ್ಥೆ ಮುಂದೆ ಇನ್ನಷ್ಟು ಉತ್ತಮ ಸೇವೆ ನೀಡಲಿ ಎಂದು ಶುಭ ಹಾರೈಸಿದರು.
ಸರಿತಾ ಪಿ. ಅಮೀನ್ ಮಾತನಾಡಿ, ಎಲ್ಲೂ ಸಿಗದ ವಜ್ರಾಭರಣಗಳ ಸಂಗ್ರಹವು ಮಲಬಾರ್ ಗೋಲ್ಡ್ ನಲ್ಲಿ ಇದೆ. ಗ್ರಾಹಕರ ಸ್ನೇಹಿಯಾಗಿರುವ ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು. ಪೂರ್ಣಿಮಾ ಶೆಟ್ಟಿ ಮಾತನಾಡಿ, ಮಲಬಾರ್ ಗೋಲ್ಡ್ ವ್ಯವಹಾರದ ಜೊತೆ ಸಮಾಜ ಸೇವಾ ಕಾರ್ಯದಲ್ಲೂ ತೊಡಗಿಸಿಕೊಂಡಿದೆ. ಬಡವರ ಶಿಕ್ಷಣ, ಆರೋಗ್ಯ, ಮದುವೆ ಕಾರ್ಯಕ್ಕೆ ನೆರವು ಒದಗಿಸುತ್ತಿರುವ ಈ ಸಂಸ್ಥೆ ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಮಲಬಾರ್ ಗೋಲ್ಡ್ ಉಡುಪಿ ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್, ಪುರಂದರ ತಿಂಗಳಾಯ, ರಾಘವೇಂದ್ರ ನಾಯಕ್, ತಂಝೀಮ್ ಶಿರ್ವ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ವಿಘ್ನೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.