Updated News From Kaup
ಡಿಸೆಂಬರ್ 15 : ಕಾಪು ತಾಲ್ಲೂಕು ಮಟ್ಟದ ಪಿಂಚಣಿ ಅದಾಲತ್
Posted On: 13 Dec 2023, 08:52 AM
ಕಾಪು : ಸಾಮಾಜಿಕ ಭದ್ರತಾ ಯೋಜನೆಗಳಾದ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲ ವೇತನ, ನಿರ್ಗತಿಕ ವಿಧವಾ ವೇತನ, ಮೈತ್ರಿ ಯೋಜನೆ ಹಾಗೂ ಮನಸ್ವಿನಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾಪು ತಾಲೂಕಿಗೆ ಸಂಬಂಧಿಸಿದ ಗ್ರಾಮಗಳ ಕಾಪು ತಾಲ್ಲೂಕು ಮಟ್ಟದ ಪಿಂಚಣಿ ಅದಾಲತ್ ಡಿಸೆಂಬರ್ 15 ರಂದು ಬೆಳಿಗ್ಗೆ 10 ಗಂಟೆಗೆ ಕಾಪು ಆಡಳಿತ ಸೌಧದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರಾದ ರಶ್ಮಿ ಎಸ್ ಆರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕಾಪು ತಾಲ್ಲೂಕು ವ್ಯಾಪ್ತಿಯ ಗ್ರಾಮಗಳಿಗೆ ಸಂಬಂಧಪಟ್ಟ ಪಿಂಚಣಿಗಾಗಿ ಈಗಾಗಲೇ ಅರ್ಜಿ ಸಲ್ಲಿಸಿ ಕೋರಿಕೆ ತಿರಸ್ಕೃತಗೊಂಡಿರುವವರು ಪಿಂಚಣಿ ಬಾರದಿರುವವ ಹಾಗೂ ಪಿಂಚಣಿಗೆ ಸಂಬಂಧಿಸಿದ ಇನ್ನಿತರ ದೂರುಗಳ ಫಲಾನುಭವಿಗಳು ಹಾಜರಾಗಿ ಪರಿಹಾರ ಕಂಡುಕೊಳಬಹುದಾಗಿದೆ ಎಂದು ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಓಮನ್ ಬಿಲ್ಲವಾಸ್ : ವ್ಯವಹಾರ ಸಂಪರ್ಕ - ತರಬೇತಿ ಕಾರ್ಯಾಗಾರ ಸಂಪನ್ನ
Posted On: 13 Dec 2023, 08:30 AM
ಓಮನ್ ಬಿಲ್ಲವಾಸ್ ಮುಖೇನ 'ವ್ಯವಹಾರ ಸಂಪರ್ಕ' ಶೀರ್ಷಿಕೆಯಡಿಯಲ್ಲಿ ಬಿಲ್ಲವ ಬಾಂಧವರನ್ನು ಆರ್ಥಿಕವಾಗಿ ಸ್ವಾವಲಂಬಿತರನ್ನಾಗಿಸುವ ಹಾಗೂ ಪರಸ್ಪರ ವ್ಯಾವಹಾರಿಕ ಬೆಂಬಲವನ್ನು ವೃದ್ಧಿಪಡಿಸುವ ತರಬೇತಿ ಕಾರ್ಯಾಗಾರ ಡಿಸೆಂಬರ್ 8ರಂದು ಮಸ್ಕತ್ ನ ಅಜ್ಹೈಭ ಗಾರ್ಡನ್ ಹಾಲ್ ನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಮುದಾಯದ ಹಿರಿಯ ಉದ್ಯಮಿಗಳು, ಸ್ವಉದ್ಯೋಗಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳು ತಮ್ಮ ವ್ಯಾವಹಾರಿಕ ಅನುಭವನ್ನು ಹಂಚಿಕೊಂಡರು ಹಾಗೂ ಯಶಸ್ವೀ ಉದ್ಯಮಿಗಳಾಗುವಲ್ಲಿ ಪರಿಪಾಲಿಸಬೇಕಾದ ಸೂಕ್ಷ್ಮ ವಿಚಾರಗಳನ್ನು ತಿಳಿಸಲಾಯಿತು. ಅಧ್ಯಕ್ಷರಾದ ಸುಜಿತ್ ಅಂಚನ್ ಮಾತನಾಡಿ ಸಂಘಟನಾತ್ಮಕ ಚಟುವಟಿಕೆಗಳು ಹಾಗೂ ಮುಂಬರುವ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಪ್ರಸ್ತಾಪಿಸಿದರು. ಸ್ಥಾಪಕ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಡಾ. ಅಂಚನ್ ಸಿ. ಕೆ ದಿಕ್ಸೂಚಿ ಭಾಷಣ ನೀಡಿದರು. ಕಾರ್ಯಕಾರಿ ಸಮಿತಿ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಹರೀಶ್ ಸುವರ್ಣ ಸ್ವಾಗತಿಸಿದರು. ಶ್ರೀ ಕೃಷ್ಣ ಪ್ರಸಾದ್ ಮತ್ತು ಸುರೇಂದ್ರ ಅಮೀನ್ ಪ್ರಸ್ತಾವನೆಗೈದರು. ಉಮೇಶ್ ಜೆಪ್ಪು ಕಾರ್ಯಕ್ರಮ ನಿರೂಪಿಸಿ, ವಂದನ ರಾಮಕೃಷ್ಣ ವಂದಿಸಿದರು.
ಕಾಪು : ಸಮಾಜ ಸೇವಕ ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆ
Posted On: 13 Dec 2023, 08:04 AM
ಕಾಪು : ಇಲ್ಲಿನ ಸಮಾಜ ಸೇವಕ, ರಂಗತರಂಗ ನಾಟಕ ಸಂಸ್ಥೆಯ ಸ್ಥಾಪಕರೂ ಆಗಿದ್ದ ಲೀಲಾಧರ ಶೆಟ್ಟಿ ಹಾಗೂ ಅವರ ಪತ್ನಿ ವಸುಂಧರಾ ಶೆಟ್ಟಿ ಜೊತೆಯಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಜನರ ಪ್ರೀತಿಯ ಲೀಲಣ್ಣ ಸರಳ ಸಜ್ಜನ ವ್ಯಕ್ತಿಯಾಗಿ ಓರ್ವ ಉತ್ತಮ ನಟ, ನಿರ್ದೇಶಕನಗಿ, ಕಾಪು ರಂಗತರಂಗ ತಂಡದ ಜನಪ್ರಿಯತೆಗೆ ಕಾರಣವಾಗಿದ್ದರು. ಒಂದು ಬಾರಿ ಕಾಪು ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಸಮಾಜದ ಪರವಾಗಿ ಕಾಳಜಿ ಹೊಂದಿದ್ದರು. ಸಮಾಜ ಸೇವಕನಾಗಿ, ಕಾಪು ಬಂಟರ ಸಂಘದ ಮಾಜಿ ಅಧ್ಯಕ್ಷ, ಭಜನಾ ಮಂಡಳಿಯ ಸಂಚಾಲಕ ಆಗಿದ್ದರು. ಅವರು ದಂಪತಿ ಸಹಿತವಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಆಘಾತವುಂಟು ಮಾಡಿದೆ. ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಇಂದು ಸಾಯಂಕಾಲ 4 ಘಂಟೆಯ ನಂತರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಉಡುಪಿ : ಎನ್ ಎ ಐ ಉಡುಪಿ ಜಿಲ್ಲಾಧ್ಯಕ್ಷರಾಗಿ ಕಿರಣ್ ಪೂಜಾರಿ ಆಯ್ಕೆ
Posted On: 10 Dec 2023, 09:09 PM
ಉಡುಪಿ : ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಉಡುಪಿ ಜಿಲ್ಲಾಧ್ಯಕ್ಷರಾಗಿ ನಾಡಿನ ಸುದ್ದಿ ಪತ್ರಿಕೆ ಉಪಸಂಪಾದಕರಾದ ಕಿರಣ್ ಪೂಜಾರಿ ಆಯ್ಕೆಯಾಗಿದ್ದಾರೆ. 1998ರಲ್ಲಿ "ಜನ ಈದಿನ" ಪತ್ರಿಕೆ ಮೂಲಕ ಪತ್ರಿಕಾರಂಗಕ್ಕೆ ಪಾದಾರ್ಪಣೆ ಮಾಡಿದರು. ಸ್ಟಿಂಗ್ ರಿಪೋರ್ಟರ್ ಆಗಿ ಭ್ರಷ್ಟಚಾರ, ಅಕ್ರಮ, ಕಾನೂನು ಬಾಹಿರ ಚಟುವಟಿಕೆಗಳನ್ನು ಬಯಲಿಗೆ ಎಳೆದು ಪತ್ರಿಕಾ ಲೋಕದಲ್ಲಿ ಪ್ರಾಮಾಣಿಕ, ನೇರ ನುಡಿ, ರಾಜಿ ಆಗದ ಪತ್ರಕರ್ತ, ಸಾಮಾಜಿಕ ಕಾರ್ಯಕರ್ತನನ್ನು ಗುರುತಿಸಿ ರಾಷ್ಟ್ರೀಯ ಸಂಘದ ಕಾರ್ಯದರ್ಶಿ ವಿಪಿನ್ ಗೌರ್ ಉಡುಪಿ ಜಿಲ್ಲಾಧ್ಯಕ್ಷರಾಗಿ ಕಿರಣ್ ಪೂಜಾರಿಯವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಭಾರತದ ಎಲ್ಲ ರಾಜ್ಯ ಗಳಲ್ಲಿ ಶಾಖೆಯನ್ನು ಹೊಂದಿದ್ದು, ಭಾರತ ಸರಕಾರದಿಂದ ಮಾನ್ಯತೆ ಪಡೆದಿದೆ.
ಕಾಪು ಹೊಸ ಮಾರಿಗುಡಿ : ಕುದಿ - ಕೋಡಿಬೆಟ್ಟು ಗ್ರಾಮದ ಗ್ರಾಮ ಸಮಿತಿ ರಚನಾ ಸಭೆ ಸಂಪನ್ನ
Posted On: 10 Dec 2023, 09:05 PM
ಕಾಪು : ಇಲ್ಲಿನ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಕಾಪು ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾಮದಲ್ಲೂ ಗ್ರಾಮ ಸಮಿತಿ ರಚಿಸಿ, ಪ್ರತಿ ಮನೆಗೂ ಮನವಿ ಪತ್ರ ತಲುಪಿಸಿ ಅಮ್ಮನ ಅಭಯ ವಾಕ್ಯದಂತೆ ದೇವಳ ನಿರ್ಮಾಣದ ವಿಷಯ ಪ್ರಪಂಚದ ಮೂಲೆ ಮೂಲೆಗೂ ತಲುಪಬೇಕೆನ್ನುವುದು ಅಭಿವೃದ್ಧಿ ಸಮಿತಿಯ ಆಶಯದಂತೆ ಶನಿವಾರ ಕುದಿ - ಕೋಡಿಬೆಟ್ಟು ಗ್ರಾಮದ ಗ್ರಾಮ ಸಮಿತಿ ರಚನಾ ಸಭೆ ಕುದಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜರಗಿತು. ಪ್ರಾರ್ಥನೆಯೊಂದಿಗೆ ಒಂಬತ್ತು ಜನ ಮಹಿಳೆಯರಾದ ಲತಾ ವಿ. ಶೆಟ್ಟಿ, ಹೇಮಲತಾ ಶೆಟ್ಟಿ, ಸುಧಾ, ದೇವಕಿ ಐತಾಳ್, ಉಮಾ ಶೆಟ್ಟಿ, ಸಂಧ್ಯಾ ಶೆಟ್ಟಿ, ಶಕುಂತಲಾ, ರಂಜಿತಾ ಮತ್ತು ದಿಶಾ ಇವರು ಏಕಕಾಲದಲ್ಲಿ ದೀಪ ಬೆಳಗಿಸಿ ಆರತಿ ಎತ್ತುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಗ್ರಾಮ ಸಮಿತಿಯ ಪ್ರಧಾನ ಸಂಚಾಲಕರಾದ ಅರುಣ್ ಶೆಟ್ಟಿ ಪಾದೂರು ಮಾತನಾಡಿ ಗ್ರಾಮದ ಪ್ರತೀ ಮನೆಯಿಂದಲೂ ಕನಿಷ್ಠ ಒಂಬತ್ತು ಶಿಲಾಸೇವೆಯನ್ನು (ರೂಪಾಯಿ 9,999) ನೀಡುವ ಮೂಲಕ "ಕಾಪುವಿನ ಅಮ್ಮನ ಮಕ್ಕಳು" ತಂಡಕ್ಕೆ ಸೇರಬೇಕು ಎಂದು ವಿನಂತಿಸಿದರು ಮತ್ತು ಗ್ರಾಮ ಸಮಿತಿಯ ದ್ಯೇಯೋದ್ದೇಶಗಳನ್ನು ತಿಳಿಸಿದರು. ಕಾಪು ಪುರಸಭಾ ವ್ಯಾಪ್ತಿಯ ವಾರ್ಡ್ ಸಮಿತಿಯ ಪ್ರಧಾನ ಸಂಚಾಲಕರಾದ ಶ್ರೀಕರ ಶೆಟ್ಟಿ ಕಲ್ಯಾ ಇವರ ಉಪಸ್ಥಿತಿಯಲ್ಲಿ ಗ್ರಾಮ ಸಮಿತಿಯನ್ನು ರಚನೆ ಮಾಡಿ ಕುದಿ ಮತ್ತು ಕೋಡಿಬೆಟ್ಟು ಗ್ರಾಮದ 9 ಜನ ಪುರುಷರ ಮತ್ತು ಮಹಿಳೆಯರ 5 ತಂಡಗಳನ್ನು ಮಾಡಲಾಯಿತು, ಗ್ರಾಮದ ಜವಾಬ್ದಾರಿಯನ್ನು ಕುದಿ ವಸಂತ್ ಶೆಟ್ಟಿ, ಶಿವರಾಮ್ ಶೆಟ್ಟಿ, ಗುರುರಾಜ್ ಭಟ್ ಮತ್ತು ಸುಧಾಕರ್ ಶೆಟ್ಟಿ ವಹಿಸಿಕೊಂಡರು. ಸಮಿತಿಗೆ ಆಯ್ಕೆಯಾದವರು ಹೊಸ ಮಾರಿಗುಡಿ ದೇವಳದ ಜೀರ್ಣೋದ್ಧಾರದ ಬಗ್ಗೆ ಗ್ರಾಮದ ಪ್ರತಿ ಮನೆ ಮನೆಗೂ ಸುದ್ದಿ ತಲುಪಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು. ಗ್ರಾಮದ ಪ್ರತಿ ಮನೆ ಮನೆಗೆ ತಲುಪಿಸುವ ಮನವಿ ಪತ್ರವನ್ನು ಮತ್ತು ಸ್ಟಿಕ್ಕರನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಗ್ರಾಮದ ಪ್ರಮುಖರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರು ಮತ್ತು ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರರಾದ ರತ್ನಾಕರ ಶೆಟ್ಟಿ ನಡಿಕೆರೆ, ದೇವಳದ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ಮಾಧವ ಆರ್. ಪಾಲನ್, ಪ್ರಚಾರ ಸಮಿತಿಯ ಸಂಚಾಲಕರಾದ ಜಯರಾಮ ಆಚಾರ್ಯ, ಪ್ರಭಾತ್ ಶೆಟ್ಟಿ ಮೂಳೂರು, ಗ್ರಾಮ ಸಮಿತಿಯ ಮಹಿಳಾ ಮುಖ್ಯ ಸಂಚಾಲಕರಾದ ಗೀತಾಂಜಲಿ ಎಂ.ಸುವರ್ಣ, ಗ್ರಾಮಸ್ಥರಾದ ರಾಘವೇಂದ್ರ ಪಾಟ್ಕರ್, ಪ್ರಸನ್ನ ಹೆಗ್ಡೆ, ಸಂಧ್ಯಾ ಶೆಟ್ಟಿ, ಸತೀಶ್ ಗೌಡ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಸುಧಾಕರ ಶೆಟ್ಟಿ ಗುಂಡಿಬೈಲು ಸ್ವಾಗತಿಸಿದರು. ಜೀರ್ಣೋದ್ಧಾರದ ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಯೋಗೀಶ್ ವಿ. ಶೆಟ್ಟಿ ಬಾಲಾಜಿ ಪ್ರಸ್ತಾವನೆಗೈದರು.
ಪಡುಬಿದ್ರಿ : ಕೃಷಿ ಮೇಳ ಸಮಾರೋಪ
Posted On: 10 Dec 2023, 08:51 PM
ಪಡುಬಿದ್ರಿ : ಅಂದಿನ ಕಾಲದಲ್ಲಿ ಯಾವುದೇ ಯಂತ್ರದ ಸಹಾಯವಿಲ್ಲದೆ ಬಹಳ ಕಷ್ಟದಿಂದ ನಮ್ಮ ಹಿರಿಯರು ಕೃಷಿಯನ್ನು ನಿರ್ವಹಿಸುತ್ತಿದ್ದರು. ಕೃಷಿ ತೋ ನಾಸ್ತಿ ದುರ್ಭೀಕ್ಷಮ್ ಎಂಬ ಮಾತಿನಂತೆ ಕೃಷಿಯು ಇಂದು ಕಷ್ಟಕರವಾದರೂ ಇಷ್ಟಪಟ್ಟು ನಿರ್ವಹಿಸಿದ್ದಲ್ಲಿ ಲಾಭದಾಯಕವಾಗಿದೆ. ಅಂದು ನಮ್ಮ ಮನೆಯ ಹಿರಿಯರೇ ಕೃಷಿ ತಜ್ಞರಾಗಿರುತ್ತಿದ್ದರು. ಈಗ ಹಿರಿಯರ ಅನುಭವದ ಮಾತು ಕೃಷಿಗೆ ಅನಿವಾರ್ಯವಾಗಿದೆ. ಹಿರಿದಾಗಿ ಎಕರೆಗಟ್ಟಲೆಯಲ್ಲಿದ್ದ ಕೃಷಿ ಭೂಮಿಗಳು ಕೈಗಾರಿಕೆ, ವಸತಿ ಸಮುಚ್ಚಯಗಳಾಗಿ ಕಿರಿದಾದ ಪ್ರದೇಶಗಳಾಗಿ ಮಾರ್ಪಾಡುಗೊಂಡಿದೆ. ಕೃಷಿಯ ಬಗೆಗಿನ ಜಾಗೃತಿಗೆ ಕೃಷಿ ಮೇಳಗಳು ಸಹಾಯಕವಾಗಿದೆ ಎಂದು ಕಟೀಲು ಕ್ಷೇತ್ರದ ಅರ್ಚಕರಾದ ವೇ.ಮೂ. ಶ್ರೀ ಹರಿನಾರಾಯಣದಾಸ ಅಸ್ರಣ್ಣ ಹೇಳಿದರು. ಅವರು ಪಡುಬಿದ್ರಿ ಶ್ರೀ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನ ಹಾಗೂ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಜಂಟಿ ಸಹಯೋಗದೊಂದಿಗೆ ಆದಿತ್ಯವಾರ ಪಡುಬಿದ್ರಿಯ ಶ್ರೀ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನದ ವಠಾರದಲ್ಲಿ ಪ್ರಥಮ ಬಾರಿಗೆ ಜರಗಿದ ಕೃಷಿ ಮೇಳದ ಸಮಾರೋಪದಲ್ಲಿ ಮಂಗಳ ಮಂತ್ರಕ್ಷತೆಯ ನುಡಿಗಳನ್ನಿತ್ತರು. ಎಸ್ ಇ ಝಡ್ ಮುಖ್ಯಸ್ಥ ಅಶೋಕ್ ಶೆಟ್ಟಿ ಮಾತನಾಡಿ ಕೃಷಿ ಮೇಳದ ಮೂಲಕ ರೈತರ ಸಬಲೀಕರಣ ಆಗಬೇಕಾಗಿದೆ. ಇದರ ಮೂಲಕ ನಮ್ಮ ಪ್ರದೇಶ, ರಾಜ್ಯ, ದೇಶದ ಅಭಿವೃದ್ಧಿ ಸಾಧ್ಯ. ಅದಕ್ಕಾಗಿ ರೈತರಿಗೆ ಬೇಕಾದ ಮಾಹಿತಿ ಮುಖ್ಯ. ಆಧುನೀಕರಣಕ್ಕೆ ಒತ್ತು ನೀಡಿ ಲಾಭದಾಯಕದತ್ತ ಕೃಷಿ ಸಾಗುವಲ್ಲಿ ಶ್ರಮಿಸಬೇಕಾಗಿದೆ ಎಂದರು. ಸನ್ಮಾನ : ಕೃಷಿಯಲ್ಲಿ ಸಾಧನೆಗೈದ ಪಿ ಕೆ ಸದಾನಂದ, ಅಪ್ಪು ಪೂಜಾರಿ, ಪೂವಪ್ಪ ಪೂಜಾರಿ, ಪ್ರಭಾಕರ ಎನ್ ಶೆಟ್ಟಿ, ಬಿ ಕೆ ದೇವರಾವ್, ಕೊಳಚೂರು ಜಗನ್ನಾಥ ಮೂಲ್ಯರನ್ನು ಸನ್ಮಾನಿಸಲಾಯಿತು. ಕೃಷಿ ಮೇಳದ ಅಧ್ಯಕ್ಷರಾದ ಶಶಿಕಾಂತ್ ಪಡುಬಿದ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಮಂಗಳೂರು ಇದರ ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ ಬೆಳಪು, ಕೆಪಿಸಿಸಿ ಸಂಯೋಜಕರಾದ ನವೀನ್ ಚಂದ್ರ ಜೆ ಶೆಟ್ಟಿ, ಪಡುಬಿದ್ರಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ರವಿ ಶೆಟ್ಟಿ, ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರಾದ ನವೀನ್ ಎನ್ ಶೆಟ್ಟಿ, ಪಡುಬಿದ್ರಿ ವ್ಯವಸಾಯ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ಗುರುರಾಜ್ ಪೂಜಾರಿ, ಎರ್ಮಾಳು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಕಸ್ತೂರಿ ಪ್ರವೀಣ್, ಎಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ರವಿರಾಜ್, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪ್ರಧಾನ ಅರ್ಚಕ ಜಗದಾಭಿರಾಮ, ಶಿವಪ್ರಸಾದ್ ಶೆಟ್ಟಿ ಎಲ್ಲದಡಿ ಎರ್ಮಾಳು, ಕಾರ್ಯಕ್ರಮ ಸಂಚಾಲಕ ದೇವಾನಂದ್ ಭಟ್ ಮತ್ತಿತರರು ಉಪಸ್ಥಿತರಿದ್ದರು. ಕುಮಾರಿ ಶರಣ್ಯ ಪ್ರಾರ್ಥಿಸಿದರು. ಶಿವಪ್ರಸಾದ್ ಶೆಟ್ಟಿ ಎಲ್ಲದಡಿ ಎರ್ಮಾಳು ಸ್ವಾಗತಿಸಿದರು. ರವಿರಾಜ್ ಎನ್ ಕೋಟ್ಯಾನ್ ಮತ್ತು ಯಶೋಧ ಕಾರ್ಯಕ್ರಮ ನಿರೂಪಿಸಿದರು. ದೇವಾನಂದ್ ಭಟ್ ವಂದಿಸಿದರು. ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.
ಪಡುಬಿದ್ರಿ ಶ್ರೀ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನದ ವಠಾರದಲ್ಲಿ ಕೃಷಿ ಮೇಳಕ್ಕೆ ಚಾಲನೆ
Posted On: 09 Dec 2023, 03:15 PM
ಪಡುಬಿದ್ರಿ : ಇಲ್ಲಿನ ಶ್ರೀ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನ ಹಾಗೂ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಜಂಟಿ ಸಹಯೋಗದೊಂದಿಗೆ ಶನಿವಾರ ಬೆಳಿಗ್ಗೆ ಪಡುಬಿದ್ರಿಯ ಶ್ರೀ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನದ ವಠಾರದಲ್ಲಿ ಪ್ರಥಮ ಬಾರಿಗೆ ಜರಗಿದ ಕೃಷಿ ಮೇಳವನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಹಿಂದೆ ನಮ್ಮ ದೇಶ ಕೃಷಿ ಪ್ರಧಾನ ದೇಶವಾಗಿತ್ತು. ಕಾಲ ಬದಲಾದಂತೆ ನಾವು ಕೂಡಾ ಬದಲಾಗಿದ್ದೇವೆ. ಇತ್ತೀಚಿನ ದಿನಗಳಲ್ಲಿಯುವಕರು ಕೃಷಿಯತ್ತ ಮುಖ ಮಾಡಿರುವುದು ಸಂತಸದ ಸಂಗತಿ. ಇಂತಹ ಕೃಷಿ ಮೇಳವು ಕೃಷಿಕರ ಬಾಳಿಗೆ ನಂದಾದೀಪವಾಗಲಿ ಎಂದು ಹಾರೈಸಿದರು. ಮೂಡುಬಿದಿರೆ ಜೈನ ಮಠದ ಭಾರತಭೂಷಣ ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚಿಸಿದರು. ಈ ಸಂದರ್ಭ ಸ್ಥಳೀಯ ಐವರು ಸಾಧಕ ಕೃಷಿಕರಿಗೆ ಕೃಷಿ ಋಷಿ ಸಮ್ಮಾನ ಪತ್ರ ನೀಡಿ ಅಭಿನಂದಿಸಲಾಯಿತು. ಕೃಷಿ ಮೇಳದ ಅಧ್ಯಕ್ಷರಾದ ಶಶಿಕಾಂತ್ ಪಡುಬಿದ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಿಕಟಪೂರ್ವ ಶಾಸಕರಾದ ಲಾಲಾಜಿ ಆರ್ ಮೆಂಡನ್, ಯು.ಪಿ.ಸಿ.ಎಲ್ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಪಡುಬಿದ್ರಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಮೋಹನ್ ರಾಜ್, ತೋಟಗಾರಿಕೆ ಇಲಾಖೆಯ ಎಲ್. ಹೇಮಂತ್ ಕುಮಾರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ, ಪಲಿಮಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರಾಯೇಶ್ ಪೈ, ಹೆಜಮಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮೋಹನ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಕಾಪು : ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಬಳಿ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ
Posted On: 07 Dec 2023, 12:16 PM
ಕಾಪು : ಭಾರತದಾದ್ಯಂತ ನವೆಂಬರ್ 15 ರಿಂದ ಜನವರಿ 26ರವರೆಗೆ ನಡೆಯುತ್ತಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಗುರುವಾರ ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಬಳಿ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಶಾಸಕರು, ಕೇಂದ್ರ ಸರ್ಕಾರದ 70ಕ್ಕೂ ಹೆಚ್ಚು ಯೋಜನೆಗಳ ಪೈಕಿ 17 ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿಯನ್ನು ಒದಗಿಸುವುದು. ಈ ಯೋಜನೆಗಳನ್ನು ಕೊನೆಯ ಮೈಲಿಯವರೆಗೂ ಮುಟ್ಟಿಸುವುದು. ಈ ವರೆಗೆ ಪ್ರಯೋಜನ ಪಡೆಯದ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಯೋಜನೆಗಳನ್ನು ತಲುಪಿಸುವುದು ಈ ಯಾತ್ರೆಯ ಉದ್ದೇಶವಾಗಿದ್ದು, ಯಾತ್ರೆಯಲ್ಲಿ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ವಾಹನ ಉಡುಪಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಲಿದ್ದು, ಎಲ್ಇಡಿ ಪರದೆಯ ಮೂಲಕ ಯೋಜನೆಗಳ ಮಾಹಿತಿಯನ್ನು ನೀಡಲಾಗುವುದು ಎಂದರು. ಶಾಸಕರು ಫಲಾನುಭವಿಗಳಿಗೆ ಉಜ್ವಲ ಯೋಜನೆ ಅಡಿಯಲ್ಲಿ ಮಂಜೂರಾದ ಉಚಿತ ಗ್ಯಾಸ್ ಸಂಪರ್ಕವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತಿ, ಉಪಾಧ್ಯಕ್ಷರಾದ ಹರೀಶ್ ಸಾಲಿಯಾನ್, ಕೆನರಾ ಬ್ಯಾಂಕ್ ನ ಹಿರಿಯಡಕ ಶಾಖೆಯ ಪ್ರಬಂಧಕರಾದ ಅವಿನಾಶ್ ಕಿಣಿ, ಬ್ಯಾಂಕ್ ಆಫ್ ಬರೋಡಾದ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪುರ : ನಕಲಿ ಅಲೋಪತಿ ಡಾಕ್ಟರ್ ಕ್ಲಿನಿಕ್ ಮೇಲೆ ದಾಳಿ ನಡೆಸಿದ ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ
Posted On: 07 Dec 2023, 12:05 PM
ಕುಂದಾಪುರ : ಆಯುರ್ವೇದಿಕ್ ವೈದ್ಯ ಅಲೋಪತಿ ಪ್ರಾಕ್ಟೀಸ್ ಮಾಡುತ್ತಿದ್ದರು ಎನ್ನುವ ಸಾರ್ವಜನಿಕರ ದೂರಿನ ಮೇರೆಗೆ ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಕ್ಲಿನಿಕ್ ಒಂದರ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ. ನಕಲಿ ಅಲೋಪತಿ ಡಾಕ್ಟರ್ ಪರ್ಜಿತ್ ನಂಬಿಯಾರ್ ಕ್ಲಿನಿಕ್ ಮೇಲೆ ಹಠಾತ್ ದಾಳಿ ನಡೆಸಿ ಕುಂದಾಪುರ ತಾಲೂಕು ಆರೋಗ್ಯಧಿಕಾರಿ ಡಾ. ಪ್ರೇಮಾನಂದ್ ಮತ್ತು ತಂಡ ಪರಿಶೀಲಿಸಿದಾಗ ಇವರ ಕ್ರಾಸ್ ಪ್ರಾಕ್ಟೀಸ್ ಸಾಬೀತಾಗಿದೆ ಇವರ ಮೇಲೆ FIR ದಾಖಲಿಸಲಾಗಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಕಳೆದ ಒಂದು ವರ್ಷದ ಹಿಂದೆಯೂ ಸ್ಟಿಂಗ್ ಪತ್ರಕರ್ತ ಕಿರಣ್ ಪೂಜಾರಿಯವರು ಈತನ ಕ್ರಾಸ್ ಪ್ರಾಕ್ಟೀಸ್ ಅನ್ನು ಸಾಬೀತುಪಡಿಸಿ ದಾಖಲೆ ನೀಡಿದರು ಸಹ ಅಂದಿನ ತಾಲೂಕು ಆರೊಗ್ಯಾಧಿಕಾರಿ ಡಾ. ರಾಜೇಶ್ವರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ನಾಗಭೂಷಣ್ ಉಡುಪ ಹಾಗೂ ರಾಜಕೀಯದವರ ಶ್ರೀರಕ್ಷೆಯಿಂದ ಈತನ ಕೃತ್ಯವನ್ನು ಮುಚ್ಚಿ ಹಾಕಲಾಗಿತ್ತು. ತದನಂತರ ಸಹ ಈತ ರಾಜಾರೋಷವಾಗಿ ಅಲೋಪತಿ ಮೆಡಿಸಿನ್ ಅನ್ನು ನೀಡುತ್ತಿದ್ದ ಕಾರಣ ಸಾರ್ವಜನಿಕರು ಈಗಿನ ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ ರವರ ಗಮನಕ್ಕೆ ತಂದಿದ್ದರು. ಕುಂದಾಪುರ ಮತ್ತು ಬೈಂದೂರಿಗೆ ಒಬ್ಬ ದಕ್ಷ ಅಧಿಕಾರಿಯ ಅಗತ್ಯ ಇತ್ತು. ಮುಂದಿನ ದಿನಗಳಲ್ಲಿ ನಕಲಿ ಅಲೋಪತಿ ಡಾಕ್ಟರ್ ಗಳ ಹಾವಳಿಯನ್ನು ತಪ್ಪಿಸುವ ಸೂಚನೆ ದೊರೆತಿದೆ. ಸಾರ್ವಜನಿಕ ವಲಯದಲ್ಲಿ ಡಾ. ಪ್ರೇಮಾನಂದ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.
ಡಿಸೆಂಬರ್ 9, 10 : ಪಡುಬಿದ್ರಿಯಲ್ಲಿ ಕೃಷಿ ಮೇಳ
Posted On: 07 Dec 2023, 11:42 AM
ಪಡುಬಿದ್ರಿ : ಇಲ್ಲಿನ ಶ್ರೀ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನ ಹಾಗೂ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಜಂಟಿ ಸಹಯೋಗದೊಂದಿಗೆ ಪಡುಬಿದ್ರಿಯ ಶ್ರೀ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನದ ವಠಾರದಲ್ಲಿ ಪ್ರಥಮ ಬಾರಿಗೆ ಡಿಸೆಂಬರ್ 9 ಮತ್ತು 10 ರಂದು ಬೆಳಿಗ್ಗೆ 8ರಿಂದ ರಾತ್ರಿ 8 ರವರೆಗೆ ವಿಶೇಷ ಆಕರ್ಷಣೆಗಳೊಂದಿಗೆ ಕೃಷಿ ಮೇಳ ಜರಗಲಿದೆ ಎಂದು ಕೃಷಿ ಮೇಳದ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ ಹೇಳಿದರು. ಅವರು ಶ್ರೀ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನದ ವಠಾರದಲ್ಲಿ ಗುರುವಾರ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕೃಷಿ ಮೇಳದ ಉದ್ಘಾಟನೆಯನ್ನು ಕಾಪು ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ನೆರವೇರಿಸಲಿದ್ದು, ಜೈನ ಮಠ ಮೂಡಬಿದಿರೆಯ ಭಾರತ ಭೂಷಣ ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ. ಎರಡು ದಿನಗಳ ಕಾಲ ಕೃಷಿ ಸಂಬಂಧಿ ಗೋಷ್ಠಿಗಳ ಜೊತೆಗೆ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ. ಜೊತೆಗೆ ಪಡುಬಿದ್ರಿ ಆಸುಪಾಸಿನ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ವಿವಿಧ ಬಗೆಯ ಮನೋರಂಜನಾ ಕಾರ್ಯಕ್ರಮಗಳ ಜೊತೆಗೆ ವಿಶೇಷ ಆಕರ್ಷಣೆಯಾಗಿ ಯಕ್ಷಗಾನ, ನಾಟ್ಯ ವೈಭವ, ವಿಟ್ಲ ಶ್ರೀ ವಿಠಲ ನಾಯ್ಕ ಅವರಿಂದ ಗೀತಾ ಸಾಹಿತ್ಯ ಸಂಭ್ರಮ, ಜನಪದ ನೃತ್ಯ ವೈಭವ, ಭರತನಾಟ್ಯ ವೈವಿಧ್ಯ ಮೊದಲಾದ ಕಾರ್ಯಕ್ರಮಗಳು ಕೃಷಿ ಮೇಳಕ್ಕೆ ಮೆರುಗು ನೀಡಲಿದೆ. ಆದಿತ್ಯವಾರ ಸಂಜೆ ಸಮಾರೋಪ ಸಮಾರಂಭದೊಂದಿಗೆ ಕೃಷಿ ಮೇಳ ಸಂಪನ್ನಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಸುಮಾರು 10,000ಕ್ಕೂ ಮಿಕ್ಕಿ ಜನರು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಸುಮಾರು 80ಕ್ಕೂ ಮಿಕ್ಕಿ ಕೃಷಿ ಸಂಬಂಧಿ ಮಳಿಗೆಗಳು ವಿಶೇಷ ಉತ್ಸಾಹದಿಂದ ಬಂದು ಭಾಗವಹಿಸಲು ನೋಂದಣಿ ಮಾಡಿಕೊಂಡಿರುತ್ತಾರೆ. ಈ ಸಮಾರಂಭದಲ್ಲಿ ಅನೇಕ ಕೃಷಿ ಸಾಧಕರನ್ನು ಕೃಷಿ ಋಷಿ ಸಂಮ್ಮಾನ್ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭ ಕೃಷಿ ಮೇಳದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಶಿವಪ್ರಸಾದ್ ಎಲ್ಲದಡಿ, ಜಗದಭಿರಾಮ, ನವೀನ್ ಚಂದ್ರ ಶೆಟ್ಟಿ, ಶರಾವತಿ, ನೀತಾ ಗುರುರಾಜ್, ನಯನಭಿರಾಮ, ದಿನಕರ ರಾವ್, ಶೇಖರ ರಾವ್, ಜನಾರ್ಧನ ರಾವ್, ಅಶೋಕ್ ಪೂಜಾರಿ, ರವಿ ಶೆಟ್ಟಿ, ಸತೀಶ್ ರಾವ್, ಅಮರಭಿರಾಮ ಮತ್ತಿತರರು ಉಪಸ್ಥಿತರಿದ್ದರು.
