Updated News From Kaup
ಕರಾವಳಿಯಲ್ಲಿ ವಿಧ್ವಂಸಕ ಕೃತ್ಯದ ಶಂಕೆ ; ಕಾಪು ತಾಲೂಕಿನಲ್ಲಿ ಪೊಲೀಸರ ಕಟ್ಟೆಚ್ಚರ

Posted On: 27-07-2023 07:01PM
ಕಾಪು : ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಶಂಕಿತ ಭಯೋತ್ಪಾದಕರನ್ನು ಬಂಧಿಸಿದ ಬಳಿಕ ಕರಾವಳಿಯಲ್ಲಿ ವಿಧ್ವಂಸಕ ಚಟುವಟಿಕೆ ನಡೆಯುವ ಸಾಧ್ಯೆತೆಯಿಂದಾಗಿ, ಪೊಲೀಸರು ಜನ ನಿಬಿಡ ಪ್ರದೇಶಗಳ ಮೇಲೆ ಹದ್ದಿನ ಕಣ್ಣಿರಿಸಿದ್ದಾರೆ.
ಕರಾವಳಿಯ ದೇವಸ್ಥಾನ, ಪ್ರವಾಸಿ ಕೇಂದ್ರ ಸೇರಿದಂತೆ ಆಯಾಕಟ್ಟಿನ ಸ್ಥಳಗಳಲ್ಲಿ ಕಳೆದ ನಾಲ್ಕು ದಿನಗಳಿಂದ ತಪಾಸಣೆ ನಡೆಸಲಾಗಿದೆ.
ಈಗಾಗಲೇ ಉಡುಪಿ ಕೃಷ್ಣ ಮಠ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳ, ಕಾಪುವಿನ ಮೂರೂ ಮಾರಿಗುಡಿ ಸುತ್ತ ತಪಾಸಣೆ ಮಾಡಲಾಗಿದೆ. ತಪಾಸಣೆ ಕಾರ್ಯ ನಿರಂತರವಾಗಿ ಮುಂದುವರೆಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪಡುಬಿದ್ರಿ : ಬಾಲಕಿಗೆ ಲೈಂಗಿಕ ದೌರ್ಜನ್ಯ ; ಆರೋಪಿಯ ಬಂಧನ

Posted On: 27-07-2023 06:16PM
ಪಡುಬಿದ್ರಿ : ಐದರ ಹರೆಯದ ಬಾಲಕಿಗೆ ಬಿಸ್ಕೆಟ್ ಆಸೆ ತೋರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಕೃತ್ಯ ಪಡುಬಿದ್ರಿಯಲ್ಲಿ ನಡೆದಿದೆ.
ಲೈಂಗಿಕ ದೌರ್ಜನ್ಯವೆಸಗಿದ ಪಶ್ಚಿಮ ಬಂಗಾಲದ ಮುರ್ಷಿದಾಬಾದ್ ಜಿಲ್ಲೆಯ ಹಾಝಿಗಂಝ್ ಅಮ್ದಾಹರದ ನಿವಾಸಿ ಆರೋಪಿ ಮುಫೀಜುಲ್ ಶೇಖ್ (26) ಎಂಬಾತನನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ.
ಪಡುಬಿದ್ರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಬಹುಮಹಡಿ ವಸತಿ ಸಂಕೀರ್ಣವಾದ ಮಾತಾ ಕನ್ಸ್ಟ್ರಕ್ಷನ್ ನಲ್ಲಿ ಕಾರ್ಮಿಕನಾಗಿರುವ ಆರೋಪಿಯು ಅಲ್ಲಿ ದುಡಿಯುತ್ತಿದ್ದ ಮುರ್ಷಿದಾಬಾದ್ ಜಿಲ್ಲೆಯ ದಂಪತಿಯ ಐದು ವರ್ಷದ ಮಗಳನ್ನೇ ಮಧ್ಯಾಹ್ನದ ವೇಳೆ ಅದೇ ಕಟ್ಟಡದ ಮೂರನೇ ಮಹಡಿಯಲ್ಲಿನ ತನ್ನ ಕೋಣೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಬಾಲಕಿಯ ಕೂಗಿಗೆ ಎಚ್ಚೆತ್ತ ಮನೆಮಂದಿಗೆ ವಿಷಯ ತಿಳಿದಿದೆ.
ಬಾಲಕಿಯ ಹೆತ್ತವರು ನೀಡಿದ ದೂರಿನನ್ವಯ ಪಡುಬಿದ್ರಿ ಠಾಣೆಯಲ್ಲಿ ಪೋಕ್ಸೋ ಕಾನೂನಿನನ್ವಯ ಪ್ರಕರಣವನ್ನು ದಾಖಲಿಸಲಾಗಿದೆ.
ಪಡುಬಿದ್ರಿ ರೋಟರಿ ಪದಗ್ರಹಣ ಕಾರ್ಯಕ್ರಮ ; ನೂತನ ಅಧ್ಯಕ್ಷರಾಗಿ ಸಂತೋಷ್ ಪಡುಬಿದ್ರಿ

Posted On: 27-07-2023 06:05PM
ಪಡುಬಿದ್ರಿ : ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯು ಸಮಾಜಮುಖಿ ಚಿಂತನೆಯ ಜೊತೆಗೆ ಸರ್ವರ ಹಿತ ಬಯಸುವ ಕಾಯಕದೊಂದಿಗೆ, ಲಿಂಗ ತಾರತಮ್ಯವಿಲ್ಲದೆ ಮಹಿಳೆಯರಿಗೂ ಸಮಾನ ಹಕ್ಕನ್ನು ನೀಡಿದೆ ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್ ಡಾ. ಭರತೇಶ್ ಅದಿರಾಜ್ ಹೇಳಿದರು. ಅವರು ಪಡುಬಿದ್ರಿಯ ಸುಜಾತಾ ಅಡಿಟೋರಿಯಂನಲ್ಲಿ ಪಡುಬಿದ್ರಿ ರೋಟರಿಯ 2023-24ನೇ ಸಾಲಿನ ಪದಗ್ರಹಣ ಸಮಾರಂಭ ದಲ್ಲಿ ಪದಪ್ರದಾನ ಅಧಿಕಾರಿಯಾಗಿ ಭಾಗವಹಿಸಿ ಮಾತನಾಡಿದರು.
ರೋಟರಿ ಜಿಲ್ಲೆ 3182ನ ಸಹಾಯಕ ಗವರ್ನರ್ ಶೈಲೇಂದ್ರ ರಾವ್ ಕೆ. ರೋಟರಿ ಪಡುಬಿದ್ರಿಯ ಗೃಹಪತ್ರಿಕೆ 'ಸ್ಪಂದನ'ವನ್ನು ಬಿಡುಗಡೆಗೊಳಿಸಿದರು.
ಬಿಎಸ್ಎಫ್ನ ನಿವೃತ್ತ ಸಹಾಯಕ ಕಮಾಂಡರ್ ಪಿ.ಎ. ಮೊಯ್ದಿನ್, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ, ಸಾಮಾಜಿಕ ಕಾರ್ಯಕರ್ತ ಮಹೇಶ್ ಅಮೀನ್ ಅವರನ್ನು ಸನ್ಮಾನಿಸಲಾಯಿತು. ದಿ. ವೈ. ಹಿರಿಯಣ್ಣ ಹಾಗೂ ದಿ. ಮೀರಾ ಹಿರಿಯಣ್ಣ ಸ್ಮರಣಾರ್ಥ ರೋಲಿಂಗ್ ಶೀಲ್ಡನ್ನು ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆದ ಸಾಗರ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಪಡುಬಿದ್ರಿ ರೋಟರಿ ಕ್ಲಬ್ನ ಸ್ಥಾಪಕಾಧ್ಯಕ್ಷ ವೈ. ಸುಧೀರ್ ಕುಮಾರ್ ಹಸ್ತಾಂತರಿ ಸಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ವಂದನಾ ರೈ, ರೋಟರಿ ವಲಯ ಸೇನಾನಿ ರಿಯಾಜ್ ನಝೀರ್ ಸಾಹೇಬ್, ನಿಕಟ ಪೂರ್ವ ಅಧ್ಯಕ್ಷೆ ಗೀತಾ ಅರುಣ್, ನೂತನ ಅಧ್ಯಕ್ಷ ಸಂತೋಷ್ ಪಡುಬಿದ್ರಿ ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷೆ ಗೀತಾ ಸ್ವಾಗತಿಸಿದರು. ನಿಕಟಪೂರ್ವ ಕಾರ್ಯದರ್ಶಿ ಜ್ಯೋತಿ ಮೆನನ್ ವರದಿ ವಾಚಿಸಿದರು. ಯಶೋದಾ ಕಾರ್ಯಕ್ರಮ ನಿರ್ವಹಿಸಿದರು. ನೂತನ ಕಾರ್ಯದರ್ಶಿ ಪವನ್ ಸಾಲ್ಯಾನ್ ವಂದಿಸಿದರು.
ಕಾಪು : 80 ಬಡಗಬೆಟ್ಟು ಗ್ರಾಮ ಪಂಚಾಯತ್ ಗೆ ಶಾಸಕರ ಭೇಟಿ ; ವಿವಿಧ ಸವಲತ್ತು ವಿತರಣೆ ; ಅಹವಾಲು ಸ್ವೀಕಾರ

Posted On: 27-07-2023 05:23PM
ಕಾಪು : ಕ್ಷೇತ್ರದ ಶಾಸಕಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಜುಲೈ27ರಂದು 80 ಬಡಗುಬೆಟ್ಟು ಗ್ರಾಮ ಪಂಚಾಯತ್ ಗೆ ಭೇಟಿ ನೀಡಿದರು.

ಶಾಸಕರು ಪಂಚಾಯತ್ ನ ಶೇ.25 ನಿಧಿಯಿಂದ ಮಂಜೂರಾದ ಮನೆ ರಿಪೇರಿಯ ಸಹಾಯಧನ ಹಾಗೂ ವೈದ್ಯಕೀಯ ಸಹಾಯಧನ ವಿತರಿಸಿ ಶೇ. 5 ನಿಧಿಯಿಂದ ಮಂಜೂರಾದ ವೈದ್ಯಕೀಯ ಸಹಾಯಧನ ವಿತರಣೆ ಮಾಡಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.

ಈ ಸಂದರ್ಭ 80 ಬಡಗಬೆಟ್ಟು ಗ್ರಾಮ ಪಂಚಾಯತ್ ವತಿಯಿಂದ ಶಾಸಕರನ್ನು ಅಭಿನಂದಿಸಲಾಯಿತು.
ಈ ಸಂದರ್ಭ 80 ಬಡಗಬೆಟ್ಟು ಅಧ್ಯಕ್ಷರಾದ ಮಾಧವಿ ಆಚಾರ್ಯ, ಉಪಾಧ್ಯಕ್ಷರಾದ ನಿರೂಪಮಾ ಹೆಗ್ಡೆ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಗ್ರಾಮ ಪಂಚಾಯತ್ ಸದಸ್ಯರಾದ ಉಪೇಂದ್ರ ನಾಯಕ್, 80 ಬಡಗಬೆಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಗ್ರಾಮ ಪಂಚಾಯತ್ ಸದಸ್ಯರಾದ ಶಾಂತಾರಾಮ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಅಭಿಯಂತರ ಸುಭಾಸ್ ರೆಡ್ಡಿ, 80 ಬಡಗಬೆಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಶೋಕ್, ಗ್ರಾಮ ಆಡಳಿತಾಧಿಕಾರಿ ಗುರುರಾಜ್ ಹಾಗೂ 80 ಬಡಗಬೆಟ್ಟು ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ 2022-23 ನೇ ವಾರ್ಷಿಕ ಮಹಾಸಭೆ ; ಶೇ. 25 ಡಿವಿಡೆಂಡ್ ಘೋಷಣೆ

Posted On: 27-07-2023 05:12PM
ಪಡುಬಿದ್ರಿ : ಇಲ್ಲಿನ ಸಹಕಾರಿ ವ್ಯವಸಾಯಿಕ ಸೊಸೈಟಿಯ 2022-23 ನೇ ವಾರ್ಷಿಕ ಮಹಾಸಭೆಯು ಜುಲೈ 26 ರಂದು ವೈ ಲಕ್ಷ್ಮಣ್ ಸಭಾಂಗಣ ಸಹಕಾರ ಸಂಗಮ, ಪ್ರಧಾನ ಕಚೇರಿ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಇಲ್ಲಿ ಜರಗಿತು.

ಸೊಸೈಟಿಯು 2022-23 ನೇ ಸಾಲಿನಲ್ಲಿ ಸಾಧಿಸಿರುವ ವಾರ್ಷಿಕ ವಹಿವಾಟಿನ ಬಗ್ಗೆ ಸೊಸೈಟಿಯ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ತಿಳಿಸಿದರು. ಈ ಸಂದರ್ಭ ಶೇ. 25 ಡಿವಿಡೆಂಡ್ ಅನ್ನು ಘೋಷಿಸಿದರು. ಸೊಸೈಟಿಯು 96.03% ಸಾಲ ವಸೂಲಾತಿಯೊಂದಿಗೆ ಸಮಗ್ರ ಅಭಿವೃದ್ಧಿಗಾಗಿ ಉಡುಪಿ ವಲಯದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ. 100 % ಸಾಲ ವಸೂಲಾತಿಯನ್ನು ಸಾಧಿಸುವಲ್ಲಿ ಸದಸ್ಯರ ಸಹಕಾರವನ್ನು ಕೋರಲಾಯಿತು. 2022-23 ನೇ ಸಾಲಿನಲ್ಲಿ ನಡೆಸಿರುವ ಸಾಮಾಜಿಕ ಚಟುವಟಿಕೆಗಳ ಬಗ್ಗೆ ಸದಸ್ಯರಿಗೆ ವಿವರ ನೀಡಿದರು.
ಸಹಕಾರ ಸಪ್ತಾಹದ ಅಂಗವಾಗಿ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುಮಾರು 5 ಲಕ್ಷ ವೆಚ್ಚದಲ್ಲಿ ನಿರ್ಮಿಸಿ ಕೊಟ್ಟ 4 ಶವಗಳನ್ನು ಇಡುವ ಶೀತಲೀಕೃತ ಶವಗಾರ, ಪಡುಬಿದ್ರಿ ಆರಕ್ಷಕರ ಠಾಣೆಗೆ ಸಂಚಾರ ನಿರ್ವಹಣೆಗೆ ಅನುಕೂಲವಾಗುವಂತೆ ಧ್ವನಿವರ್ಧಕ ಹಾಗೂ ಸಂಚಾರ ನಿರ್ವಹಣಾ ಬೂತ್ ನೀಡಿರುವ ಬಗ್ಗೆ ತಿಳಿಸಿದರು. ಸುಮಾರು 1.5 ಎಕ್ರೆಗಿಂತ ಹೆಚ್ಚಿನ ಜಾಗದಲ್ಲಿ ಭತ್ತದ ಕೃಷಿ ಮಾಡುತ್ತಿರುವ 180 ಕ್ಕೂ ಹೆಚ್ಚು ರೈತರಿಗೆ ರೂ. 3000/- ದಂತೆ ಕೃಷಿ ಸಹಾಯಧನ ವಿತರಿಸಿರುವ ಬಗ್ಗೆ ತಿಳಿಸಿದರು. ಮುಂದಿನ ದಿನಗಳಲ್ಲಿ ತೋಟಗಾರಿಕೆ ಕೃಷಿಯನ್ನು ನಿರ್ವಹಿಸುತ್ತಿರುವವರಿಗೂ ಕೂಡ ವಿಶೇಷ ಯೋಜನೆಯನ್ನು ರೂಪಿಸುವುದಾಗಿ ತಿಳಿಸಿದರು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ರಾಸಾಯನಿಕ ಗೊಬ್ಬರ ಖರೀದಿಸುವ ರೈತ ಸದಸ್ಯರಿಗೆ 15% ರಿಯಾಯಿತಿಯನ್ನು ನೀಡುವುದಾಗಿ ಘೋಷಿಸಿದರು. ಪಲಿಮಾರು ಹಾಗೂ ಹೆಜಮಾಡಿ ಶಾಖಾ ನವೀಕರಣ ಮಾಡುತ್ತಿದ್ದು, 5, 6 ತಿಂಗಳುಗಳಲ್ಲಿ ಕಾಮಗಾರಿಯು ಮುಗಿಯಲಿದ್ದು ಹವಾನಿಯಂತ್ರಿತ ಸುಸಜ್ಜಿತ ಹವಾನಿಯಂತ್ರಿತ ಶಾಖೆಯನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು. ಸೊಸೈಟಿಯು ಲಾಭದಾಯಕ ಕೃಷಿಯ ಬಗ್ಗೆ ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಿದ್ದು, ಈ ಮಾಹಿತಿಯಿಂದ ಕೃಷಿಯಲ್ಲಿ ಉತ್ತಮ ಸಾಧನೆಯನ್ನು ಪಡೆಯುವ 5 ಮಂದಿಗೆ ವಿಶೇಷ ಬಹುಮಾನವನ್ನು ನೀಡಲಾಗುವುದು ಎಂದು ತಿಳಿಸಿದರು. ಈ ಬಗ್ಗೆ ಆಸಕ್ತರು ಹೆಸರು ನೋಂದಾಯಿಸಬೇಕಾಗಿ ವಿನಂತಿಸಿದರು. ಸೊಸೈಟಿಯು ನೀಡುತ್ತಿರುವ ವಿವಿಧ ಸೇವೆಗಳ ಬಗ್ಗೆ ಸದಸ್ಯರಿಗೆ ತಿಳಿಸಿದರು. ಪಡುಬಿದ್ರಿಯ ಸಿಟಿ ಶಾಖೆಯಲ್ಲಿ ಕೃಷಿ ಉಪಕರಣದೊಂದಿಗೆ ಕೃಷಿ ಬಳಕೆಗೆ ಅಗತ್ಯವಿರುವ ಪೈಪ್ ಹಾಗೂ ಫಿಟ್ಟಿಂಗ್ಸ್ ಗಳನ್ನು ಕೂಡ ಮಾರಾಟ ಮಾಡಲಾಗುತ್ತಿದ್ದು, ಇದರೊಂದಿಗೆ ಚಿನ್ನಾಭರಣ ಶುದ್ಧತಾ ಪರಿಶೀಲನಾ ಸೇವೆಯನ್ನು ಕೂಡ ಸಿಟಿ ಶಾಖೆಯಲ್ಲಿ ನೀಡಲಾಗುವುದು ಎಂದು ತಿಳಿಸಿದರು. ಪಲಿಮಾರಿನಲ್ಲಿ ಹಾಗೂ ಹೆಜಮಾಡಿಯಲ್ಲಿ ಮುಂದಿನ ದಿನಗಳಲ್ಲಿ ಸುಸಜ್ಜಿತ ಕೃಷಿ ಉಪಕರಣ ಮಾರಾಟ ಮಳಿಗೆಯನ್ನು ಪ್ರಾರಂಭಿಸಿ ಕಡಿಮೆ ದರದಲ್ಲಿ ಗ್ರಾಹಕರಿಗೆ ಪೂರೈಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಉಪಾಧ್ಯಕ್ಷರಾದ ಗುರುರಾಜ ಪೂಜಾರಿ, ನಿರ್ದೇಶಕರಾದ ರಸೂಲ್ ವೈ. ಜಿ, ಗಿರೀಶ್ ಪಲಿಮಾರು, ಶಿವರಾಮ ಎನ್. ಶೆಟ್ಟಿ, ವಾಸುದೇವ ದೇವಾಡಿಗ, ಯಶವಂತ ಪಿ.ಬಿ, ರಾಜಾರಾಮ್ ರಾವ್, ಮಾಧವ ಆಚಾರ್ಯ, ಸ್ಟೇನಿ ಕ್ವಾಡ್ರಸ್, ಸುಚರಿತ ಎಲ್. ಅಮೀನ್, ಕುಸುಮ ಎಂ. ಕರ್ಕೇರ, ಕಾಂಚನ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿ ಬಾಲಕೃಷ್ಣರಾವ್, ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಷ್ಮಿತ ಪಿ. ಹೆಚ್ ಉಪಸ್ಥಿತರಿದ್ದರು. ಸೊಸೈಟಿಯ ನಿರ್ದೇಶಕಿ ಸುಚರಿತಾ ಎಲ್ ಅಮೀನ್ ಪ್ರಾರ್ಥಿಸಿದರು. ಅಧ್ಯಕ್ಷರಾದ ವೈ ಸುಧೀರ್ ಕುಮಾರ್ ಸ್ವಾಗತಿಸಿ, ವರದಿ ವಾಚಿಸಿದರು. ನಿರ್ದೇಶಕ ಗಿರಿಶ್ ಪಲಿಮಾರು ವಂದಿಸಿದರು.
ಜುಲೈ 28 : ಪತ್ರಿಕಾ ದಿನಾಚರಣೆ, ಪತ್ರಕರ್ತ ದಿ। ಜಯಂತ್ ಪಡುಬಿದ್ರಿ ಸಂಸ್ಮರಣೆ – ದತ್ತಿನಿಧಿ ವಿತರಣೆ ಕಾರ್ಯಕ್ರಮ

Posted On: 27-07-2023 01:04PM
ಕಾಪು : ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನ ಸಂಸ್ಥೆಯಾದ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ, ಪತ್ರಕರ್ತ ದಿ। ಜಯಂತ್ ಪಡುಬಿದ್ರಿ ಸಂಸ್ಮರಣೆ – ದತ್ತಿನಿಧಿ ವಿತರಣೆ ಕಾರ್ಯಕ್ರಮ ಜುಲೈ 28, ಶುಕ್ರವಾರ ಬೆಳಿಗ್ಗೆ ಗಂಟೆ 11.30 ಕ್ಕೆ ಸರಕಾರಿ ಪದವಿ ಪೂರ್ವ ಕಾಲೇಜು, ಪಲಿಮಾರು ಇಲ್ಲಿ ಜರಗಲಿದೆ.
ದತ್ತಿನಿಧಿ ವಿತರಣೆ, ದತ್ತಿ ಉಪನ್ಯಾಸವನ್ನು ಜಾನಪದ ಚಿಂತಕರಾದ ಡಾ| ವೈ.ಎನ್. ಶೆಟ್ಟಿ, ಉಪನ್ಯಾಸವನ್ನು ಹಿರಿಯ ಪತ್ರಕರ್ತರಾದ ಪುಂಡಲೀಕ ಮರಾಠೆ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪಲಿಮಾರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗ್ರೆಟ್ಟಾ ಮೊರಾಸ್ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಹರೀಶ್ ಕುಮಾರ್ ಹೆಜ್ಮಾಡಿ ವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾಪು : ಕುತ್ಯಾರು ಕೇಂಜ ಶ್ರೀ ಬ್ರಹ್ಮ ಬೈದೆರುಗಳ ಗರಡಿ - ಆಟಿ ತಿಂಗಳ ಅಗೆಲು ಸೇವೆ ಸಂಪನ್ನ

Posted On: 26-07-2023 11:38PM
ಕಾಪು : ತಾಲೂಕಿನ ಎಲ್ಲೂರು ಸೀಮೆಯ ಇತಿಹಾಸ ಪ್ರಸಿದ್ಧ ಕುತ್ಯಾರು ಕೇಂಜ ಗರಡಿಯ ದಿವ್ಯ ಸಾನಿಧ್ಯದಲ್ಲಿ ವರ್ಷಂಪ್ರತಿ ಜರಗುವ ಆಟಿ ತಿಂಗಳ ಅನ್ನ ನೈವೇದ್ಯದ ಅಗೆಲು ಸೇವೆ ಬುಧವಾರ ಸಂಪನ್ನಗೊಂಡಿತು.

ತುಳುನಾಡಿನ ಗರಡಿಗಳಲ್ಲಿ ಎಲ್ಲೂರು ಸೀಮೆಯ ಕೇಂಜ, ಎಲ್ಲೂರು, ಪಣಿಯೂರು, ಕಳತ್ತೂರು, ಅಡ್ವೆ, ಕೊಳಚೂರು ಗರಡಿಗಳಲ್ಲಿ ಆಟಿ ತಿಂಗಳಲ್ಲಿ ಅಗೆಲು ಸೇವೆ ನಡೆಯುತ್ತದೆ. ಮೊದಲ ಅಗೆಲು ಸೇವೆ ಕೇಂಜ ಗರಡಿಯಲ್ಲಿ ನಡೆಯುತ್ತದೆ. ಆಟಿ ತಿಂಗಳಲ್ಲಿ ಶ್ರೀ ಬ್ರಹ್ಮ ಬೈದೆರುಗಳು ಕೇಂಜದ ಪವಿತ್ರ ಸತ್ಯದ ಮಣ್ಣಿನಲ್ಲಿ ಕಲೆ ಕಾರ್ನಿಕ ತೋರ್ಪಡಿಸಿ ನೆಲೆಯಾದ ದ್ಯೋತಕವಾಗಿ ಈ ದೇವತಾ ಕಾರ್ಯ ಜರಗುತ್ತಿರುವುದು ವಿಶೇಷವಾಗಿದೆ.
ಈ ಸಂದರ್ಭ ಗರಡಿ ಮನೆ ಪ್ರಮುಖರು, ಊರಿನ ಪ್ರಮುಖರು, ಭಕ್ತಾದಿಗಳು ಉಪಸ್ಥಿತರಿದ್ದರು.
ಕಾರ್ಕಳ : ಕುಲಾಲ ಸಂಘ ನಾನಿಲ್ತಾರ್ ವತಿಯಿಂದ ಆಗಸ್ಟ್ ತಿಂಗಳಲ್ಲಿ ಸರಣಿ ಕಾರ್ಯಕ್ರಮಗಳು

Posted On: 26-07-2023 10:26PM
ಕಾರ್ಕಳ : ತಾಲೂಕಿನ ನಾನಿಲ್ತಾರ್ ಕುಲಾಲ ಸಂಘದ ಆಶ್ರಯದಲ್ಲಿ ಆಗಸ್ಟ್ 6, ಭಾನುವಾರ ಆಟಿಡೊಂಜಿ ಕೂಟ, ಆಗಸ್ಟ್ 15 ರಂದು ಸ್ವಾತಂತ್ರ ದಿನಾಚರಣೆ, ಆಗಸ್ಟ್ 25 ರಂದು ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆಯು ಸಂಘದ ಸಭಾಭವನದಲ್ಲಿ ನಡೆಯಲ್ಲಿದೆ ಎಂದು ನಾನಿಲ್ತಾರು ಕುಲಾಲ ಸಂಘದ ಅಧ್ಯಕ್ಷರಾದ ಕುಶ ಆರ್ ಮೂಲ್ಯ ಪ್ರಕಟಣೆಯಲ್ಲಿ ತಿಳಿಸಿರುವರು.
ನಿರಂತರ ಮಳೆ : ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ (ಜು.27) ರಜೆ ಘೋಷಣೆ
Posted On: 26-07-2023 08:50PM
ಉಡುಪಿ : ಜಿಲ್ಲೆಯಲ್ಲಿ ನಾಳೆ (ಜುಲೈ 27) ಕೂಡಾ ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.
ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಪದವಿ, ಸ್ನಾತಕೋತ್ತರ, ಡಿಪ್ಲೊಮಾ, ಐಟಿಐ ಹೊರತುಪಡಿಸಿ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ, ಹಾಗೂ ಪಿಯು ಕಾಲೇಜಿಗೆ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.
ಜುಲೈ 29 : ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಭೆ

Posted On: 26-07-2023 07:10PM
ಕಾಪು : ಭಾರತದ ಒಕ್ಕೂಟ ವ್ಯವಸ್ಥೆಯ ಭಾಗವಾಗಿರುವ ಮಣಿಪುರ ರಾಜ್ಯದಲ್ಲಿ ಎರಡು ಪಂಗಡಗಳ ನಡುವೆ ನಡೆಯುತ್ತಿರುವ ಜನಾಂಗೀಯ ಘರ್ಷಣೆಯು ತಾರಕಕ್ಕೇರಿ, ತೀವ್ರ ಹಿಂಸಾಚಾರಕ್ಕೆ ತಿರುಗಿ, ಅಲ್ಲಿ ನಡೆಯುತ್ತಿರುವ ಅಮಾನವೀಯ ಘಟನೆಗಳು, ಅದರಲ್ಲಿಯೂ ವಿಶೇಷವಾಗಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಹಿಂಸಾಕೃತ್ಯಗಳಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಗೆ ಮಸಿ ಬಳಿದಂತಾಗಿ, ಭಾರತೀಯರೆಲ್ಲರೂ ನಾಚಿಕೆಯಿಂದ ತಲೆತಗ್ಗಿಸುವಂತಾಗಿರುವುದು ವಿಪರ್ಯಾಸ. ಇಬ್ಬರು ಮಹಿಳೆಯರನ್ನು ಬಲಾತ್ಕಾರವಾಗಿ ಕೊಂಡೊಯ್ದು, ಸಾಮೂಹಿಕ ಅತ್ಯಾಚಾರ ನಡೆಸಿ, ವಿವಸ್ತ್ರಗೊಳಿಸಿ ಬಹಿರಂಗವಾಗಿ ಬೀದಿಯಲ್ಲಿ ಮೆರವಣಿಗೆ ನಡೆಸಿರುವ ವಿಡಿಯೋ ತುಣುಕು ಘಟನೆ ನಡೆದ ಬಹಳ ದಿನಗಳ ನಂತರ ಬೆಳಕಿಗೆ ಬಂದಿದೆ. ಆದರೆ ಆ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿ.ಜೆ.ಪಿ ಸರ್ಕಾರ ಹಾಗೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ, "ಬೇಟಿ ಪಢಾವೋ- ಬೇಟಿ ಬಚಾವೋ" ಎಂಬ ಡೋಂಗಿ ಘೋಷಣೆಯ ಬಿ.ಜೆ.ಪಿ ನೇತೃತ್ವದ ಸರ್ಕಾರದ ಬೇಜವಾಬ್ದಾರಿ ಧೋರಣೆ ಹಾಗೂ ಪ್ರಜಾಪ್ರಭುತ್ವ ವಿರೋಧಿ ನಡೆ ತೀರಾ ಖಂಡನೀಯ.
ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಈ ಘಟನೆಯಿಂದಾಗಿ ದೇಶದ ಮಾನ ಹರಾಜಾಗುತ್ತಿದ್ದರೂ ಮೂಕ ಪ್ರೇಕ್ಷಕನಾಗಿ ಕುಳಿತಿರುವ ಸರ್ಕಾರದ ಬೇಜವಾಬ್ದಾರಿ ನಡೆಯನ್ನು, ತೀವ್ರ ತರಾಟೆಗೆ ತೆಗೆದುಕೊಂಡು, ಸರ್ಕಾರಕ್ಕೆ ತಪರಾಕಿ ಹಾಕಿದ ನಂತರ, ಚುನಾವಣಾ ಸಭೆಯಲ್ಲಿ, ವಿದೇಶ ಪ್ರವಾಸದಲ್ಲಿ ನಿರತರಾಗಿದ್ದ ಭಾರತದ ಪ್ರಧಾನಿಯು 78 ದಿವಸಗಳ ನಂತರ ಮೌನ ಮುರಿದಿರುವುದು, 'ಕೋಟೆ ದೋಚಿದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ' ಆಗಿರುವುದು ಮಹಿಳಾ ವಿರೋಧಿ ನಡೆಯ ಜೀವಂತ ಉದಾಹರಣೆ. ಸರ್ಕಾರದ ಈ ಅಮಾನವೀಯ ನಡೆಯನ್ನು ಖಂಡಿಸಿ, ರಾಕ್ಷಸೀ ಪ್ರವೃತ್ತಿ ಮೆರೆದು ಮಹಿಳೆಯರ, ಹಿರಿಯ ನಾಗರಿಕರ ಹಾಗೂ ಮಕ್ಕಳ ಮೇಲೆ ಮೃಗೀಯ ರೀತಿಯಲ್ಲಿ ದೌರ್ಜನ್ಯವೆಸಗಿದ ಚಾಂಡಾಲರ ಮೇಲೆ ಕಠಿಣವಾದ ಶಿಕ್ಷೆ ವಿಧಿಸುವಂತೆ ಮತ್ತು ಸಂತ್ರಸ್ತರಿಗೆ ನ್ಯಾಯ ಒದಗಿಸಿ, ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಜುಲೈ 29, ಶನಿವಾರದಂದು ಪೂರ್ವಾಹ್ನ ಗಂಟೆ 10ಕ್ಕೆ ಕಾಪು ಪೇಟೆಯಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಬೃಹತ್ ಪ್ರತಿಭಟನಾ ಸಭೆಯನ್ನು ಹಮ್ಮಿಕೊಂಡಿದೆ.
ಕಾಪು ಕಾಂಗ್ರೆಸ್ ಕಚೇರಿ ರಾಜೀವ್ ಭವನದಿಂದ ಕಾಲ್ನಡಿಗೆ ಮೂಲಕ ಕಾಪು ಪೇಟೆಯವರೆಗೆ ಮೆರವಣಿಗೆಯಲ್ಲಿ ಸಾಗಿ, ಕಾಪು ಪೇಟೆಯಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ ಮತ್ತು ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ.