Updated News From Kaup

ಕಾಪು : ನೆರೆ ಸಂತ್ರಸ್ತರಿಗೆ ಗರಿಷ್ಟ ಪರಿಹಾರ ನೀಡುವಂತೆ ಮುಖ್ಯಮಂತ್ರಿ, ಕಂದಾಯ ಸಚಿವರಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮನವಿ

Posted On: 26-07-2023 06:53PM

ಕಾಪು : ವಿಧಾನಸಭಾ ಕ್ಷೇತ್ರದ ಬಹುಭಾಗವು ಕಡಲ ಪ್ರದೇಶಗಳಿಗೆ ಹೊಂದಿಕೊಂಡಿರುವ ಭಾಗದಲ್ಲಿ ಜನರು ವಾಸ್ತವ್ಯ ಮಾಡಿಕೊಂಡಿರುತ್ತಾರೆ. ಜೂನ್ ತಿಂಗಳಿನಿಂದ ಚಂಡಮಾರುತ ಹಾಗೂ ತೀವ್ರ ಸುರಿದ ಮಳೆಯಿಂದಾಗಿ ಅತಿವೃಷ್ಟಿ ಉಂಟಾಗಿದ್ದು, ಜನರ ಆಸ್ತಿ-ಪಾಸ್ತಿಗಳು ನಷ್ಟ ಉಂಟಾಗಿರುತ್ತದೆ. ಪ್ರವಾಹದಿಂದ ನೀರು ನುಗ್ಗಿರುವ ಮನೆಗಳ ಗೃಹಪಯೋಗಿ ವಸ್ತುಗಳು, ಬಟ್ಟೆ ಬರೆಗಳಿಗೆ ಹಾನಿ ಉಂಟಾಗಿರುತ್ತದೆ. ಅಲ್ಲದೇ ತೀವ್ರ ತರಹದ ಮಳೆಯಿಂದ ವಾಸ್ತವ್ಯದ ಮನೆ ಭಾಗಶಃ ಹಾಗು ಪೂರ್ಣ ಹಾನಿಯಾಗಿದ್ದು, ಪರಿಹಾರ ನೀಡುವುದು ತೀರಾ ಅತ್ಯವಶ್ಯಕತೆ ಇರುತ್ತದೆ.

ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೀಡಾದ ಮನೆಗಳ ಪುನರ್ ನಿರ್ಮಾಣಕ್ಕೆ ಎ ಕೆಟಗರಿ ಅಡಿ 5 ಲಕ್ಷ ರೂಪಾಯಿ ಪರಿಹಾರ ಹಾಗೂ ಮನೆಗಳ ಭಾಗಶಃ ರಿಪೇರಿಗೆ ಬಿ ಕೆಟಗರಿ ಅಡಿ 3 ಲಕ್ಷ ಮತ್ತು ಗೃಹಪಯೋಗಿ ವಸ್ತುಗಳ ಹಾನಿಗೆ ಸಿ ಕೆಟಗರಿ ಅಡಿ 50 ಸಾವಿರ ರೂಪಾಯಿ ಅನುದಾನ ಸಂತ್ರಸ್ತರಿಗೆ ದೊರಕುತ್ತಿತ್ತು. ಆದ್ದರಿಂದ ಈ ಹಿಂದಿನಂತೆಯೇ ಸಂತ್ರಸ್ತರಿಗೆ ಗರಿಷ್ಠ ಪರಿಹಾರ ಧನ ಮಂಜೂರು ಮಾಡುವಂತೆ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದರು.

ಕಾಪು : ಪಲಿಮಾರು ಸರಕಾರಿ ಪದವಿ ಪೂರ್ವ ಕಾಲೇಜಿನ ಬೆಟರ್ಮೆಂಟ್ ಕಮಿಟಿ ಸಭೆ

Posted On: 26-07-2023 06:18PM

ಕಾಪು : ಸರಕಾರಿ ಪದವಿ ಪೂರ್ವ ಕಾಲೇಜು, ಪಲಿಮಾರು ಇದರ ಕಾಲೇಜು ಬೆಟರ್ಮೆಂಟ್ ಕಮಿಟಿ ಸಭೆ ಜುಲೈ 26ರಂದು ಜರಗಿತು. ಕಾಪು ವಿಧಾನಸಭಾ ಕ್ಷೇತ್ರದ ಶಾಸಕರು, ಕಾಲೇಜು ಬೆಟರ್ಮೆಂಟ್ ಕಮಿಟಿ ಅಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಕಾಲೇಜು ಬೆಟರ್ಮೆಂಟ್ ಕಮಿಟಿ ಉಪಾಧ್ಯಕ್ಷರಾಗಿ ಪ್ರಸಾದ್ ಪಲಿಮಾರ್ ಅವರನ್ನು ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾಗಿ ಶೋಭಾ ಅವರನ್ನು ಪುನರ್ ಆಯ್ಕೆ ಮಾಡಲಾಯಿತು.

ಈ ಸಂದರ್ಭ ವಿಜಯಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಾಯತ್ರಿ ಪ್ರಭು, ಉಪಾಧ್ಯಕ್ಷರಾದ ಸೌಮ್ಯಲತಾ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ರಾಯೇಶ್ ಪೈ, ಸುಜಾತಾ, ಪ್ರವೀಣ್ ಕುಮಾರ್, ರಶ್ಮಿ, ಪ್ರಾಂಶುಪಾಲರಾದ ಗ್ರೇಟ್ಟಾ ಮೋರಸ್ ಹಾಗೂ ಕಾಲೇಜು ಬೆಟರ್ಮೆಂಟ್ ಕಮಿಟಿ ಸದಸ್ಯರು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಉಡುಪಿ : ಕಾಲೇಜ್ ಟಾಯ್ಲೆಟ್ ನಲ್ಲಿ ವಿಡಿಯೋ ಪ್ರಕರಣ - ಆಡಳಿತ ಮಂಡಳಿ, ವಿದ್ಯಾರ್ಥಿನಿಯರ ವಿರುದ್ಧ ಪ್ರಕರಣ ದಾಖಲು

Posted On: 26-07-2023 03:26PM

ಉಡುಪಿ : ಇಲ್ಲಿನ ಖಾಸಗಿ ಕಾಲೇಜಿನಲ್ಲಿ ನಡೆದ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯರ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯ ಪಿಎಸ್ಐ ಸುಷ್ಮಾ ಜಿ.ಬಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಮೂವರು ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಹಿಂದೂ ಹುಡುಗಿಯರ ವಿಡಿಯೋ ತೆಗೆದು ವಾಟ್ಸಪ್ ಗುಂಪುಗಳಿಗೆ ಶೇರ್ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಈ ಬಗ್ಗೆ ನಿನ್ನೆಯಷ್ಟೇ ಉಡುಪಿ ಎಸ್ಪಿ ಪತ್ರಿಕಾಗೋಷ್ಠಿಯಲ್ಲಿ ಈ ತರಹದ ಯಾವುದೇ ವಿಡಿಯೋ ವೈರಲ್ ಆಗಿಲ್ಲ, ತಮಾಷೆಗಾಗಿ ವಿಡಿಯೋ ‌ಮಾಡಲಾಗಿದ್ದು, ಬಳಿಕ ಅದನ್ನು ಡಿಲೀಟ್ ಮಾಡಿದ್ದಾರೆ ಎಂದು‌ ಹೇಳಿಕೆ ನೀಡಿದ್ದರು. ಆ ಬಳಿಕ ಕಾಲೇಜು ಆಡಳಿತ ಮಂಡಳಿಯು ಪತ್ರಿಕಾಗೋಷ್ಠಿ ನಡೆಸಿ ವಿದ್ಯಾರ್ಥಿಗಳನ್ನು ವಿಚಾರಣೆ ಮಾಡಲಾಗಿದ್ದು, ಸಂತ್ರಸ್ತ ವಿದ್ಯಾರ್ಥಿನಿ ದೂರು ನೀಡಲು ನಿರಾಕರಿಸಿದ್ದಾರೆ.‌ ಅಲ್ಲದೇ ವಿಡಿಯೋ ಡಿಲೀಟ್‌ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ವೀಡಿಯೋ ಮಾಡಿದ ಮೂವರು ವಿದ್ಯಾರ್ಥಿಗಳು ಹಾಗೂ ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಸಾಕ್ಷ್ಯನಾಶ ಆರೋಪದಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು ಐಪಿಸಿ ಸೆಕ್ಷನ್‌ 509, 204, 175, 34 ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ.

ಈ ಪ್ರಕರಣವು ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ರಾಷ್ಟ್ರೀಯ ಮಹಿಳಾ ಆಯೋಗ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಇಂದೇ ಖುಷ್ಬೂ ಸುಂದರ್ ಉಡುಪಿಗೆ ಭೇಟಿ ನೀಡಲಿದ್ದಾರೆ‌ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಟ್ವೀಟ್ ಮಾಡಿದ್ದಾರೆ.

ಸರ್ಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಪ್ರತಿಶತ ನೂರರಷ್ಟು ಅನುಷ್ಠಾನಗೊಳಿಸಬೇಕು : ಡಾ. ಎಂ.ಟಿ ರೇಜು

Posted On: 26-07-2023 03:08PM

ಉಡುಪಿ : ಜನ ಸಾಮಾನ್ಯರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಕಾಮಗಾರಿಗಳು ಸೇರಿದಂತೆ ಸರ್ಕಾರದ ಅಭಿವೃದ್ಧಿ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಆದ್ಯತೆ ಮೇಲೆ ಅನುಷ್ಠಾನಗೊಳಿಸಿ ಜನೋಪಯೋಗಿಯನ್ನಾಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಂ.ಟಿ ರೇಜು ಹೇಳಿದರು. ಅವರು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಹೆಚ್ಚಿನ ಮಳೆಯಾಗುತ್ತಿದ್ದು, ನೆರೆಯಿಂದಾಗಿ ಇದುವರೆಗೆ 9 ಮಾನವ ಜೀವಹಾನಿಗಳು ಉಂಟಾಗಿದೆ. ಮುಂದಿನ ದಿನಗಳಲ್ಲಿಯೂ ಸಹ ಮಳೆ ಅಧಿಕವಾಗಿ ಸುರಿದು ಮತ್ತಷ್ಟು ಅವಘಢಗಳು ಉಂಟಾಗುವ ಸಾಧ್ಯತೆಗಳಿವೆ. ಹೆಚ್ಚಿನ ಹಾನಿಯನ್ನು ತಪ್ಪಿಸಲು ಅಗತ್ಯವಿರುವ ಮುನ್ನೆಚ್ಚರಿಕೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಮಾನವ ಜೀವಹಾನಿಯಾಗದಂತೆ ಎಚ್ಚರವಹಿಸಬೇಕು ಎಂದರು. ಈಗಾಗಲೇ ಜಿಲ್ಲೆಗೆ ಪ್ರಕೃತಿ ವಿಕೋಪ ತುರ್ತು ನಿರ್ವಹಣೆಗಾಗಿ ಎಸ್.ಡಿ.ಅರ್.ಎಫ್ ನ 11 ಜನರ ತಂಡವನ್ನು ನಿಯೋಜಿಸಲಾಗಿದೆ ಹಾಗೂ 300 ಕ್ಕೂ ಹೆಚ್ಚು ಸ್ವಯಂ ಸೇವಕರಿಗೆ ಆಪದ ಮಿತ್ರ ಯೋಜನೆಯಡಿ ತರಬೇತಿ ನೀಡಲಾಗಿದ್ದು, ಇವರುಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ತೊಂದರೆಯಾದಾಗ ವಿಕೋಪ ಪರಿಹಾರ ಕಾರ್ಯಗಳನ್ನು ಶೀಘ್ರದಲ್ಲಿ ಕೈಗೊಳ್ಳಬೇಕು ಎಂದರು.

ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೆ 34,561 ನೊಂದಣಿ ಆಗಿದ್ದು, ನೊಂದಣಿ ಕಾರ್ಯಗಳು ಯಾವುದೇ ರೀತಿಯ ಗೊಂದಲಗಳಾಗದಂತೆ, ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಪ್ರತಿದಿನ ನೊಂದಣಿ ಕೇಂದ್ರಗಳಿಗೆ ನೀಡಿರುವ ಗುರಿಯನ್ನು ತಲುಪಬೇಕು. ಪ್ರಜಾಪ್ರತಿನಿಧಿಗಳು ಸಹ ನೊಂದಣಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ನೊಂದಣಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಉಂಟಾದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಿಕೊಳ್ಳಬೇಕು ಎಂದರು. ಜಿಲ್ಲೆಯಲ್ಲಿ ಕಳೆದ ತಿಂಗಳು ಶಕ್ತಿ ಯೋಜನೆಯಡಿ 29,790 ಮಹಿಳೆಯರು ಪ್ರಯಾಣಿಸಿದ್ದು, 11,11,533 ವೆಚ್ಚವನ್ನು ಭರಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ 2,33,291 ಗ್ರಾಹಕರ ಅರ್ಜಿ ನೊಂದಾಯಿಸಲಾಗಿದೆ ಎಂದರು. ಕೊರಗ ಸಮುದಾಯದ 350 ಕ್ಕೂ ಹೆಚ್ಚು ಜನರಿಗೆ ಬಿಪಿಎಲ್ ಕಾರ್ಡ್ ದೊರೆತಿರುವುದಿಲ್ಲ. ಪ್ರಸ್ತುತ ಹೊಸ ಪಡಿತರ ಚೀಟಿಗಳನ್ನು ನೀಡುವುದನ್ನು ನಿಲ್ಲಿಸಲಾಗಿದೆ. ಇವರುಗಳಿಗೆ ಆದ್ಯತೆಯ ಮೇಲೆ ನೀಡಲು ಸರಕಾರದಿಂದ ವಿಶೇಷ ಅನುಮತಿ ಪಡೆದು ಪಡಿತರ ಚೀಟಿಗಳನ್ನು ವಿತರಣೆ ಮಾಡಬೇಕೆಂದು ಸೂಚನೆ ನೀಡಿದರು. ಗ್ರಾಮೀಣ ಭಾಗದ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವ ಕಡೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಈಗಾಗಲೇ ಸರಕಾರದ ಹಂತದಲ್ಲಿ ಹೊಸ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, 250 ಕ್ಕೂ ಹೆಚ್ಚಿನ ಶಿಕ್ಷಕರು ಆಗಮಿಸಿದ್ದು, ಅವರುಗಳನ್ನು ಜಿಲ್ಲೆಗೆ ಅಗತ್ಯವಿರುವ ಕಡೆ ನಿಯೋಜಿಸಬೇಕೆಂದು ಸೂಚನೆ ನೀಡಿದರು. ಜನರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಲು ವೈದ್ಯರುಗಳು ಹಾಗೂ ಅರೋಗ್ಯ ಸಿಬ್ಬಂದಿಗಳು ಮುಂದಾಗಬೇಕು. ಆರೋಗ್ಯ ಇಲಾಖೆಯಲ್ಲಿರುವ ಸಿಬ್ಬಂದಿ ಕೊರತೆಯನ್ನು ನೀಗಿಸಲು ಸರಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದರು. ಶಾಲೆಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆಗಳು ನಡೆಸಿದಾಗ ಮಕ್ಕಳಿಗೆ ಉನ್ನತ ಚಿಕಿತ್ಸೆಗೆ ಅವಶ್ಯವಿದ್ದಲ್ಲಿ ಅವರುಗಳಿಗೆ ಜಿಲ್ಲಾ ಆಸ್ಪತ್ರೆ ಮತ್ತು ಉನ್ನತ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ಎಂಡೋಸಲ್ಫಾನ್ ಪೀಡಿತ ಸಂತ್ರಸ್ಥರಿಗೆ ಆರೋಗ್ಯ ಸುಧಾರಣೇ ಹಾಗೂ ಪುರ್ನವಸತಿ ಕಾರ್ಯಕ್ರಮಗಳ ಅನುಷ್ಠಾನಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕೆಂದು ಸೂಚನೆ ನೀಡಿದರು. ಗ್ರಾಮೀಣ ಭಾಗದ ಪ್ರತಿ ಗ್ರಾಮಗಳ ಮನೆಗಳಿಗೂ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ನಳ ಸಂಪರ್ಕವನ್ನು ಕಲ್ಪಿಸಬೇಕು. ಈಗಾಗಲೇ ಮೊದಲನೇ ಹಾಗೂ ಎರಡನೇ ಹಂತದ ಕಾಮಗಾರಿಗಳು ಪೂರ್ಣಗೊಂಡಿವೆ. ಮೂರನೇ ಹಂತದ ಕಾಮಗಾರಿ ಕೈಗೊಳ್ಳುವಾಗ ಯಾವುದೇ ಮನೆಗಳು ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು ಎಂದರು. ನಗರ ಪ್ರದೇಶಗಳಿಗೆ ಕುಡಿಯುವ ನೀರನ್ನು ಒದಗಿಸುವ ಅಮೃತ್ ಯೋಜನೆಯ ಕಾಮಗಾರಿಯನ್ನು ಮುಂದಿನ ವರ್ಷದ ಸೆಪ್ಟಂಬರ್ ಒಳಗಾಗಿ ಪೂರ್ಣಗೊಳಿಸಬೇಕು ಎಂದರು.

ಮಳೆಯಿಂದ ಹಾನಿಗೊಳಗಾದ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಪರಿಹಾರ ಕಾರ್ಯಗಳನ್ನು ಆಗಿಂದಾಗ್ಗೆ ಕೈಗೊಳ್ಳಬೇಕು. ಮರು ಭಿತ್ತನೆಗೆ ಅವಶ್ಯವಿರುವ ಭಿತ್ತನೆ ಬೀಜಗಳನ್ನು ಲಭ್ಯವಿರುವಂತೆ ನೋಡಿಕೊಳ್ಳಬೇಕು. ಬೆಳೆ ವಿಮೆ ವ್ಯಾಪ್ತಿಗೆ ಎಲ್ಲಾ ಬೆಳೆಗಳನ್ನು ತರಲು ಮುಂದಾಗಬೇಕು. ಪ್ರಧಾನಮಂತ್ರಿ ಆಹಾರ ಸಂಸ್ಕರಣೆ ಉದ್ದಿಮೆಗಳ ನಿಯೋಜನೆ ಬದ್ಧಗೊಳಿಸುವಿಕೆಯ ಪ್ರಗತಿಯು ನಿಗಧಿತ ಗುರಿಯನ್ನು ಸಾಧಿಸಬೇಕು ಎಂದರು. ಸರ್ಕಾರದ ಹಂತದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳ ಅನುದಾನಗಳು ಬಿಡುಗಡೆಯಾಗದೇ ಇದ್ದಲ್ಲಿ ಅಂತಹವುಗಳನ್ನು ನಮ್ಮ ಗಮನಕ್ಕೆ ತಂದಲ್ಲಿ ಅವುಗಳನ್ನು ಬಿಡುಗಡೆಗೊಳಿಸಲು ಹಾಗೂ ಸರಕಾರದ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಿರುವ ಸಿಬ್ಬಂದಿ ಕೊರತೆಯನ್ನು ಸರಿತೂಗಿಸಲು ಪ್ರಯತ್ನಿಸಲಾಗುವುದು ಎಂದರು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಎಸ್ಪಿ ಅಕ್ಷಯ್ ಎಂ ಹಾಕೆ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಉದಯ ಎಂ ನಾಯಕ್, ಕುದುರೆಮುಖ ವನ್ಯಜೀವಿ ವಿಭಾಗದ ಡಿಎಫ್ಓ ಗಣಪತಿ ಹಾಗೂ ವಿವಿಧ ಇಲಾಖೆಯ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

ಜುಲೈ 29 -30 : ಕಟಪಾಡಿಯಲ್ಲಿ ಹಲಸು ಮೇಳ

Posted On: 26-07-2023 02:22PM

ಕಟಪಾಡಿ : ಯುವ ಜನ ಸೇವಾ ಸಂಘ ಏಣಗುಡ್ಡೆ ಕಟಪಾಡಿ ಹಾಗೂ ತೋಟಗಾರಿಕೆ ಮತ್ತು ಕೃಷಿ ಇಲಾಖೆ ಉಡುಪಿ ಇದರ ಸಹಯೋಗ ದೊಂದಿಗೆ ಜುಲೈ 29 ಮತ್ತು 30 ರಂದು ಕಟಪಾಡಿಯ ಎಸ್.ವಿ.ಎಸ್ ಹೈಸ್ಕೂಲ್ ನಲ್ಲಿ ಪ್ರಥಮ ಬಾರಿಗೆ 2 ದಿನದ ಹಲಸು ಮೇಳವನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಉಡುಪಿಯ ನಿರ್ದೇಶಕರಾದ ಹೇಮಂತ್ ಕುಮಾರ್, ಕಾಪು ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಆದ ಶ್ರೀಶೈಲ ಮುರಗೊಡ್, ಎಸ್. ವಿ.ಎಸ್ ವಿದ್ಯಾವರ್ಧಕ ಸಂಘದ ಸಂಚಾಲಕರಾದ ಸತ್ಯೇ0ದ್ರ ಪೈ, ಎಸ್.ವಿ.ಎಸ್ ಕಾಲೇಜ್ ನ ಪ್ರಾಂಶುಪಾಲರಾದ ದಯಾನಂದ್ ಪೈ, ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಇಂದಿರಾ ಆಚಾರ್ಯ ಹಾಗೂ ಯುವಜನ ಸೇವಾ ಸಂಘದ ಅಧ್ಯಕ್ಷರಾದ ಪ್ರಮೋದ್ ಉಪಸ್ಥಿತರಿರುವರು.

2 ದಿನ ನಡೆಯುವ ಈ ಮೇಳದಲ್ಲಿ ಪ್ರಮುಖವಾಗಿ ಕಲ್ಪ ರಸ, ಹಲಸಿನ ತಳಿಗಳಾದ ಚಂದ್ರ ಹಲಸು, ಏಕಾದಶ ಹಲಸು, ರುದ್ರಾಕ್ಷ ಹಲಸುಗಳ ಮಾರಾಟ, ಹಲಸಿನ ಹಣ್ಣಿನ ವಿವಿಧ ಖಾದ್ಯಗಳಾದ, ಹಲಸಿನ ಹೋಳಿಗೆ, ದೋಸೆ, ಬನ್ಸ್, ಗಟ್ಟಿ, ಕಡುಬು, ಪತ್ರೊಡೆ, ಹಲಸಿನ ಬೀಜದ ಹೋಳಿಗೆ, ಚಕ್ಕುಲಿ, ಹಲಸಿನ ಕಬಾಬ್, ಮಂಚೂರಿಯನ್, ಹಲಸಿನ ಹಲ್ವಾ, ಹಪ್ಪಳ, ಚಿಪ್ಸ್, ಜ್ಯುಸ್, ಹಲಸಿನ ಐಸ್ ಕ್ರೀಮ್ ಹಲಸಿನ ವಿವಿಧ ತಳಿಗಳ ಸಸಿಗಳು, ತರಕಾರಿ ಬೀಜಗಳು, ಮಳಿಗೆಗಳು ಹಾಗೂ ಸಾವಯವ ಗೊಬ್ಬರ, ಪಾಟ್ಸ್, ಸಾವಯವ ಉತ್ಪನ್ನಗಳ ಮಳಿಗೆಗಳು, ದೇಸಿ ಗೋ ಉತ್ಪನ್ನಗಳು, ಆಯುರ್ವೇದಿಕ್ ಉತ್ಪನ್ನಗಳು, ಹ್ಯಾಂಡ್ ಲೂಮ್ಸ್, ಖಾದಿ ಬಟ್ಟೆಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.

60 ಕ್ಕಿಂತ ಹೆಚ್ಚು ಮಳಿಗೆಗಳಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬರುವ ನೀರೀಕ್ಷೆ ಇದೆ ಎಂದು ಸಂಘದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ : ಪ್ಯಾರಾ ಮೆಡಿಕಲ್ ಕಾಲೇಜು ಘಟನೆ - ಟೀಮ್ ಭಗ್ವ ಖಂಡನೆ

Posted On: 26-07-2023 02:01PM

ಉಡುಪಿ : ಇಲ್ಲಿನ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನ ಮೂರು ಮಂದಿ ಅನ್ಯ ಕೋಮಿನ ವಿದ್ಯಾರ್ಥಿನಿಯರು ಕಾಲೇಜಿನ ಶೌಚಾಲಯದಲ್ಲಿ ಹಿಂದೂ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಿಸುವ ಘಟನೆ ಈಗಾಗಲೇ ರಾಜ್ಯವ್ಯಾಪಿ ಸುದ್ದಿಯಾಗಿದ್ದು, ಹಿಂದೂಗಳ ತಾಳ್ಮೆಯನ್ನು ಪರೀಕ್ಷಿಸುವುದನ್ನು ನಿಲ್ಲಿಸಬೇಕು.

ಹಾಗೇನೇ ಯಾವುದೇ ಅಂಜಿಕೆ ಇಲ್ಲದೆ ದುಷ್ಟತೆ ಮೆರೆದ ಆ ಆರೋಪಿಗಳ ಮೇಲೆ ಸೂಕ್ತ ಕ್ರಮ ಜರಗಿಸಿ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಟೀಮ್ ಭಗ್ವ ತಂಡ ಮುಂದಿನ ದಿನಗಳಲ್ಲಿ ಯಾವ ರೀತಿಯ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಟೀಮ್ ಭಗ್ವದ ಅಧ್ಯಕ್ಷ ದೀಪಕ್ ಮೂಡುಬೆಳ್ಳೆ ಪ್ರಕಟಣೆಯಲ್ಲಿ ತಿಳಿಸಿರುವರು.

ಕಾಪು : ತಾಲೂಕಿನಲ್ಲಿ ಗಾಳಿ ಮಳೆಗೆ ಅಪಾರ ಹಾನಿ

Posted On: 26-07-2023 01:55PM

ಕಾಪು : ತಾಲೂಕಿನಲ್ಲಿ ಭಾರಿ ಗಾಳಿ ಮತ್ತು ಮಳೆಯಿಂದಾಗಿ ಕಳೆದ ಎರಡು ದಿನಗಳಲ್ಲಿ ಹತ್ತಕ್ಕೂ ಅಧಿಕ ಮನೆಗಳಿಗೆ ಹಾನಿಯುಂಟಾಗಿದ್ದು ಲಕ್ಷಾಂತರ ರೂ. ಮೊತ್ತದ ಸೊತ್ತು ನಷ್ಟವುಂಟಾಗಿದೆ.

ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೆರೆಯ ಭೀತಿ ಎದುರಾಗಿದೆ. ಇನ್ನಂಜೆ-ಮರ್ಕೋಡಿ ಹೊಳೆ ಬಳಿ, ಕಾಪು ಜನಾರ್ದನ ದೇವಸ್ಥಾನದ ಬಳಿ, ಮಲ್ಲಾರು-ಮೂಳೂರು- ಬೆಳಪು ಬೈಲ್, ಉಳಿಯಾರಗೋಳಿ ಕೈಪುಂಜಾಲು ಬೈಲು ಮುಳುಗಡೆಯಾಗಿದೆ.

ಇದೀಗ ಮತ್ತೆ ಭಾರಿ ಮಳೆ ಸುರಿದ ಪರಿಣಾಮ ಭತ್ತದ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿದ್ದು ನೂರಾರು ಹೆಕ್ಟೇರ್ ಕೃಷಿ ಗದ್ದೆಗಳಲ್ಲಿ ನಡೆಸಲಾಗಿರುವ ಭತ್ತದ ನಾಟಿ ಕೊಳೆಯುವ ಭೀತಿ ಎದುರಾಗಿದೆ. ಮಳೆ ಹಾನಿ ಮತ್ತು ನೆರೆ ಪೀಡಿತ ಪ್ರದೇಶಗಳಿಗೆ ಕಾಪು ಶಾಸಕರು, ತಾಲೂಕು ಮಟ್ಟದ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಿದ್ದಾರೆ.

ಜುಲೈ 26 (ನಾಳೆ) : ಭಾರೀ ಮಳೆ - ಉಡುಪಿ ಜಿಲ್ಲೆಯ ಶಾಲೆ, ಪಿಯು ಕಾಲೇಜುಗಳಿಗೆ ನಾಳೆ ರಜೆ ಘೋಷಣೆ

Posted On: 25-07-2023 08:20PM

ಉಡುಪಿ: ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆಯ ರೆಡ್ ಅಲರ್ಟ್ ಮುನ್ಸೂಚನೆಯಂತೆ ಹೆಚ್ಚು ಮಳೆಯಾಗುತ್ತಿರುವುದರಿಂದ ಮುಂಜಾಗೃತ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜುಲೈ 26 ರಂದು ಬುಧವಾರ ಉಡುಪಿ ಜಿಲ್ಲೆಯ ಎಲ್ಲಾ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ, ಹಾಗೂ ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶಿಸಿದ್ದಾರೆ.

ಜುಲೈ 27 : ನೇರ ಸಂದರ್ಶನ

Posted On: 25-07-2023 04:49PM

ಉಡುಪಿ : ಜಿಲ್ಲಾ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ಜುಲೈ 27 ರಂದು ಬೆಳಗ್ಗೆ 10.30 ಕ್ಕೆ ನಗರದ ಕೋರ್ಟ್ ರೋಡ್ ಶ್ರೀ ದೇವರಾಜ್ ಟವರ್ಸ್ ಬಳಿಯ ಪೈ ಇಂಟರ್ ನ್ಯಾಷ್ನಲ್ ನಲ್ಲಿ ನೇರ ಸಂದರ್ಶನ ನಡೆಯಲಿದೆ.

ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಬಿ.ಕಾಂ, ಡಿಪ್ಲೋಮಾ ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಸ್ವ-ವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ ಮೊ.ಸಂಖ್ಯೆ: 8105618291, 9945856670, 9901472710 ಹಾಗೂ 8105774936 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಟಪಾಡಿ : ಧ್ವನಿ ಬೆಳಕು ಸಂಯೋಜಕರ ಸಂಘಟನೆ ಉಡುಪಿ ಜಿಲ್ಲೆ - 12 ನೇ ವಾರ್ಷಿಕ ಮಹಾಸಭೆ ; ಪ್ರತಿಭಾ ಪುರಸ್ಕಾರ

Posted On: 25-07-2023 03:53PM

ಕಟಪಾಡಿ : ಧ್ವನಿ ಬೆಳಕು ಸಂಯೋಜಕರ ಸಂಘಟನೆ (ರಿ.) ಉಡುಪಿ ಜಿಲ್ಲೆ ಇದರ 12 ನೇ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜುಲೈ 25 ರಂದು ಶಂಕರಪುರದ ಜೆ.ಸಿ ಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಧ್ವನಿ ಬೆಳಕು ಸಂಯೋಜಕರ ಸಂಘಟನೆ (ರಿ.) ಉಡುಪಿ ಜಿಲ್ಲೆ ಇದರ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.