Updated News From Kaup

ಬಂಟಕಲ್ಲು : ನಾಗರಿಕ ಸೇವಾ ಸಮಿತಿಯಿಂದ ಶಾಸಕರ ಭೇಟಿ ; ಅಭಿನಂದನೆ ; ಮನವಿ ಸಲ್ಲಿಕೆ

Posted On: 02-08-2023 06:26PM

ಬಂಟಕಲ್ಲು : ನಾಗರಿಕ ಸೇವಾ ಸಮಿತಿ (ರಿ.) ಬಂಟಕಲ್ಲು ಇವರು ಕಾಪು ಕ್ಷೇತ್ರ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆಯವರನ್ನು ಅವರ ಕಛೇರಿಯಲ್ಲಿ ಭೇಟಿಯಾಗಿ ಸಮಿತಿ ಪರವಾಗಿ ಶಾಸಕರನ್ನು ಸನ್ಮಾನಿಸಿ, ಅಭಿನಂದಿಸಿ ಮನವಿ ಸಲ್ಲಿಸಿದರು.

ನಾ.ಸೇ.ಸಮಿತಿ ಅಧ್ಯಕ್ಷ ಕೆ .ಆರ್ ಪಾಟ್ಕರ್ ಶಾಸಕರನ್ನು ಸನ್ಮಾನಿಸಿ, ಅಭಿನಂದಿಸಿದರು. ಶಾಸಕರಿಗೆ ಮನವಿ ಸಲ್ಲಿಸಿ ಸಮಿತಿಯು ಕೆಲವು ಪ್ರಮುಖ ಅಭಿವೃದ್ದಿ ವಿಚಾರಗಳ ಬಗ್ಗೆ ಶಾಸಕರಲ್ಲಿ ಚರ್ಚಿಸಿತು. ಶಿರ್ವ ಸಮುದಾಯ ಆರೋಗ್ಯ ಕೇಂದ್ರವನ್ನು 24 ಗಂಟೆ ಕಾರ್ಯನಿರ್ವಹಿಸುವಂತೆ, ಕೇಂದ್ರದಲ್ಲಿ ಡಯಾಲಿಸ್ ಯಂತ್ರದ ಅಳವಡಿಕೆ, ತಜ್ಞ ವೈದ್ಯರ ಹಾಗೂ ಇತರೇ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವುದು, ತೀರ ಹದೆಗಟ್ಟಿರುವ ಕಟಪಾಡಿ- ಶಿರ್ವ ರಾಜ್ಯ ಹೆದ್ದಾರಿಯನ್ನು ಮರು ಡಾಮರೀಕರಣಗೊಳಿಸುವುದು, ದ್ವಿಪಥ ಕಾಮಗಾರಿ ಬಾಕಿ ಇರುವ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಲ್ಕೆಯಿಂದ ಸಿದ್ದಿವಿನಾಯಕ ದೇವಸ್ಥಾನದವರೆಗಿನ ರಾಜ್ಯ ಹೆದ್ದಾರಿಯನ್ನು ದ್ವಿಪಥಗೊಳಿಸಿ ಅಭಿವೃದ್ದಿಪಡಿಸುವುದು, ಶಿರ್ವ ಉಡುಪಿ ಮಾರ್ಗದಲ್ಲಿ ಒಂದು ನರ್ಮ್ ಬಸ್ ಸಂಚರಿಸುತ್ತಿದ್ದು, ಪರವಾನಿಗೆ ಇದ್ದೂ ಸಂಚಾರವನ್ನು ನಿಲ್ಲಿಸಿರುವ ಇನ್ನೂಂದು ನರ್ಮ್ ಬಸ್ಸು ಸಂಚಾರವನ್ನು ಪುನರಾರಂಭಿಸುವುದು, ಶಿರ್ವ ಮೆಸ್ಕಾಂ ಉಪವಿಭಾಗದಲ್ಲಿ ಲೈನ್ ಮೆನ್ ಗಳ ಕೊರತೆ, ಶಿರ್ವ ಕೇಂದ್ರಿಕೃತವಾಗಿ ಅಗ್ನಿಶಾಮಕ ಘಟಕವನ್ನು ಪ್ರಾರಂಭಿಸುವಂತೆ ಸಮಿತಿಯಿಂದ ಮನವಿಯನ್ನು ನೀಡಲಾಯಿತು.

ಶಾಸಕರು ಮನವಿ ಬಗ್ಗೆ ಅಧಿಕಾರಿಗಳೊಂದಿಗೆ ಕರೆಮಾಡಿ ಮಾತನಾಡಿ ಈ ವಿಚಾರಗಳ ಬಗ್ಗೆ ಕ್ರಮ ವಹಿಸುವಂತೆ ತಿಳಿಸಿದರು. ಸಮಿತಿ ಮನವಿ ವಿಚಾರಗಳಿಗೆ ಸೂಕ್ತವಾಗಿ ಸ್ಪಂದಿಸುವುದಾಗಿ ತಿಳಿಸಿದರು.

ನಾ.ಸೇ ಸಮಿತಿಯ ಉಪಾಧ್ಯಕ್ಷರಾದ ಪುಂಡಲೀಕ ಮರಾಠೆ, ಮಾಧವ ಕಾಮತ್, ಕಾರ್ಯದರ್ಶಿ ದಿನೇಶ್ ದೇವಾಡಿಗ, ಕೋಶಾಧಿಕಾರಿ ಜಗದೀಶ್ ಆಚಾರ್ಯ, ಸಮಿತಿ ಸದಸ್ಯರಾದ ಉಮೇಶ್ ರಾವ್, ವಿರೇಂದ್ರ ಪಾಟ್ಕರ್, ಡೇನಿಸ್ ಡಿ ಸೋಜ, ಹರೀಶ್ ಹೇರೂರು, ವಸಂತಿ ಆಚಾರ್ಯ, ರಾಘವೇಂದ್ರ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

ಅದಮಾರು : ನೇಮನಿಷ್ಠೆಯ ಹಬ್ಬಗಳು ಪುಸ್ತಕ ಬಿಡುಗಡೆ

Posted On: 02-08-2023 12:56PM

ಅದಮಾರು : ನಮ್ಮ ಹಬ್ಬಗಳ ಆಚರಣೆಯಲ್ಲಿ ಸಂಸ್ಕೃತಿಯ ಅನಾವರಣ ಇದೆ.ಇಂತಹ ಹಬ್ಬಗಳು ಸನ್ನಿಹಿತವಾಗುವ ವೇಳೆ ಮನೆಯ ಹಿರಿಯರು ಆಚರಣೆ ವಿಧಾನ ಹಾಗೂ ಅವುಗಳ ಮಹತ್ವವನ್ನು ಮನೆಯ ಮಕ್ಕಳಿಗೆ ವಿವರಿಸಬೇಕಾದ ಅಗತ್ಯವಿದೆ ಎಂದು ನಿವೃತ್ತ ಪಾಂಶುಪಾಲ ಬಿ.ಆರ್.ನಾಗರತ್ನ ಅವರು ಅಭಿಪ್ರಾಯಪಟ್ಟರು. ಅವರು ಅದಮಾರಿನ ಸುದರ್ಶನ ನಿಲಯದಲ್ಲಿ ಕೆ.ಎಲ್.ಕುಂಡಂತಾಯರ 'ನೇಮನಿಷ್ಠೆಯ ಹಬ್ಬಗಳು' ಪುಸ್ತಕ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.

ತೊಂಬತ್ತಾರರ ಹರೆಯದ ನಿವೃತ್ತ ಶಿಕ್ಷಕ,ಶಿಕ್ಷಣ ಪ್ರೇಮಿ ವೈ.ಎಂ.ಶ್ರೀಧರ ರಾವ್ , ಪುಸ್ತಕದ ಪ್ರಕಾಶಕರಾದ ಕಿನ್ನಿಗೋಳಿಯ ಗಾಯತ್ರೀ ಪ್ರಕಾಶನ ಸಂಸ್ಥೆಯ ಸಚ್ಚಿದಾನಂದ ಉಡುಪ, ಗುರುರಾಜ ಮಂಜಿತ್ತಾಯ, ಉದ್ಯಮಿ‌ ಸತೀಶ ಕುಂಡಂತಾಯ, ನಿವೃತ್ತ ಪ್ರಾಂಶುಪಾಲ ಸುದರ್ಶನ ವೈ.ಎಸ್., ಅದಮಾರು ಯುವಕ ಸಂಘದ ಅಧ್ಯಕ್ಷ ಸಂತೋಷ ಜೆ.ಶೆಟ್ಟಿ ಉಪಸ್ಥಿತರಿದ್ದರು.

ಕೆ.ಎಲ್.ಕುಂಡಂತಾಯ ಪ್ರಸ್ತಾವಿಸಿದರು, ಸುದರ್ಶನ ಅವರು ಸ್ವಾಗತಿಸಿ, ವಂದಿಸಿದರು.

ಕಾಪು ವಲಯದ ಎಸ್ ಕೆ ಪಿ ಎ ಅಧ್ಯಕ್ಷರಾಗಿ ಸಚಿನ್‌ ಉಚ್ಚಿಲ ಅವಿರೋಧ ಆಯ್ಕೆ

Posted On: 01-08-2023 08:29PM

ಕಾಪು : ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಇದರ ಕಾಪು ವಲಯದ ಅಧ್ಯಕ್ಷರಾಗಿ ಸಚಿನ್‌ ಉಚ್ಚಿಲ ಅವಿರೋಧ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ರಾಘವೇಂದ್ರ ಭಟ್, ಕೋಶಾಧಿಕಾರಿಯಾಗಿ ರವಿರಾಜ್ ಶೆಟ್ಟಿ, ಗೌರವಾಧ್ಯಕ್ಷರಾಗಿ ಕರುಣಾಕರ ನಾಯಕ್‌, ಉಪಾಧ್ಯಕ್ಷರಾಗಿ ಸಂತೋಷ್ ಕಾಪು ಮತ್ತು ಸತೀಶ್ ಎರ್ಮಾಳು, ಕ್ರೀಡಾ ಕಾರ್ಯದರ್ಶಿಯಾಗಿ ವಿಕ್ರಮ್ ಭಟ್, ಜೊತೆ ಕಾರ್ಯದರ್ಶಿಯಾಗಿ ದೀಪಕ್ ಶೆಣೈ, ಸಂಘಟನಾ ಕಾರ್ಯದರ್ಶಿಯಾಗಿ ಪ್ರವೀಣ್ ಕಾಪು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಉದಯ್ ಇನ್ನ, ಅರುಳ್ ಡಿಸೋಜಾ ಛಾಯಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ಹಾಗೆಯೇ ಜಿಲ್ಲಾ ಸಮಿತಿ ಸದಸ್ಯರಾಗಿ ರವಿಕುಮಾರ್ ಕಟಪಾಡಿ, ಕೃಷ್ಣ ರಾವ್, ಶ್ರೀನಿವಾಸ ಐತಾಳ್, ವೀರೇಂದ್ರ ಶಿರ್ವ, ಉದಯ್ ಮುಂಡ್ಕೂರು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರವಿರಾಜ್ ರಾವ್, ಅಶೋಕ್ ಸುಭಾಸ್ ನಗರ ಆಯ್ಕೆಯಾಗಿದ್ದಾರೆ.

ಆಗಸ್ಟ್ 2 : ಮಣಿಪುರ ಹಿಂಸಾಚಾರ - ಪ್ರತಿಭಟನಾ ಸಭೆ

Posted On: 01-08-2023 07:53PM

ಉಡುಪಿ : ಮಣಿಪುರದಲ್ಲಿ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ಉಡುಪಿ ಜಿಲ್ಲೆಯ ಸಮಾನ ಮನಸ್ಕ ವೇದಿಕೆಯ ನೇತೃತ್ವದಲ್ಲಿ ಅಗಸ್ಟ್ 2ರಂದು ಉಡುಪಿಯಲ್ಲಿ ನಡೆಯುವ ಕಾಲ್ನಾಡಿಗೆ ಜಾತ ಹಾಗೂ ಪ್ರತಿಭಟನಾ ಸಭೆಯನ್ನು ಯಶಸ್ವಿಗೊಳಿಸುವಂತೆ ಕರ್ನಾಟಕ ಕ್ರೈಸ್ತ ಸಂಘಗಳ ಅಂತರಾಷ್ಟ್ರೀಯ ಒಕ್ಕೂಟ (ಇಫ್ಕಾ) ಇದರ ಉಡುಪಿ ಜಿಲ್ಲಾ ಗೌರವಾಧ್ಯಕ್ಷ ಲೂವೀಸ್ ಲೋಬೊ ಕಲ್ಮಾಡಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಜಿಲ್ಲೆಯ ಪ್ರಮುಖ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ನಡೆಯುವ ಪ್ರತಿಭಟನಾ ಸಭೆ ಹಾಗೂ ಪ್ರತಿಭಟನಾ ಜಾತವು ಶೋಕಮಾತ ದೇವಾಲಯ ಉಡುಪಿ ಇಲ್ಲಿಂದ ಆರಂಭವಾಗಿ ಸರ್ವಿಸ್ ಬಸ್ ನಿಲ್ದಾಣ, ಕೆಎಂ ಮಾರ್ಗ, ಕೋರ್ಟ್ ರೋಡ್ ಮೂಲಕ ಸಾಗಿ ಮಿಷನ್ ಕಾಂಪೌಂಡ್ ನಲ್ಲಿ ಪ್ರತಿಭಟನಾ ಸಭೆಯ ಮೂಲಕ ಮುಕ್ತಾಯಗೊಳ್ಳಲಿದೆ. ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ನಡೆಯುವ ಪ್ರತಿಭಟನಾ ಸಭೆಯಲ್ಲಿ 7,000ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.

ಕಳೆದ ಮೂರು ತಿಂಗಳಿಗಳಿಂದ ಮಣಿಪುರದಲ್ಲಿ ಎರಡು ಸಮುದಾಯಗಳ ನಡುವೆ ಸಂಘರ್ಷ ಉಂಟಾಗಿದ್ದು ಅಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರಕಾರವು ಸೂಕ್ತ ಕ್ರಮ ಕೈಗೊಂಡು ಮತ್ತೊಮ್ಮೆ ಅಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಲೋಬೋ ತಿಳಿಸಿದ್ದಾರೆ.

ಉಡುಪಿ : ಆರೋಗ್ಯ, ಶಿಕ್ಷಣ ಇಲಾಖೆ ಸೂಚ್ಯಂಕದಲ್ಲಿ ಕುಸಿತ - ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಮುಖ್ಯಮಂತ್ರಿ

Posted On: 01-08-2023 07:43PM

ಉಡುಪಿ : ಜಿಲ್ಲೆಯಲ್ಲಿ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದ ಸೂಚ್ಯಂಕದಲ್ಲಿ ಕುಸಿತ ಕಂಡಿರುವುದು ಅಕ್ಷಮ್ಯ, ಇದಕ್ಕೆ ಅಧಿಕಾರಿಗಳೇ ನೇರ ಹೊಣೆ. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಮೊದಲ ಸ್ಥಾನದಲ್ಲಿ ಇದ್ದ ಜಿಲ್ಲೆಗೆ ಹಿನ್ನಡೆ ಆಗಿರುವುದನ್ನು ಸಹಿಸಲು ಆಗದು. ಜಿಲ್ಲೆ ಮತ್ತೆ ಮೊದಲನೇ ಸ್ಥಾನಕ್ಕೆ ಬರಲೇಬೇಕು, ಇದಕ್ಕೆ ಬೇಕಾದ ಯಾವ ಕ್ರಮಗಳ ಅಗತ್ಯವೋ ಅದನ್ನು ಕಡ್ಡಾಯವಾಗಿ ಮಾಡಲೇಬೇಕು ಎಂದು ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಡಿಮಿಡಿಗೊಂಡರು. ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಮಂಗಳವಾರ ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು, 2015 ರ ಆರೋಗ್ಯ ಸೂಚ್ಯಂಕದಲ್ಲಿ ಉಡುಪಿ ಜಿಲ್ಲೆ ಮೊದಲ ಸ್ಥಾನದಲ್ಲಿತ್ತು. ಈಗ 18 ನೇ ಸ್ಥಾನಕ್ಕೆ ಕುಸಿತ ಕಂಡಿದೆ. ತಾಯಿ, ಮಕ್ಕಳ ಸಾವಿನ ಪ್ರಮಾಣದಲ್ಲಿ ಏರಿಕೆ ಕಂಡಿದೆ ಎಂದು ಡಿಎಚ್‌ ಓ ವಿರುದ್ಧ ಅಕ್ರೋಶ ಹೊರಹಾಕಿದರು. ಆರೋಗ್ಯ ಸೂಚ್ಯಂಕದಲ್ಲಿ ಈ ಪ್ರಮಾಣದ ಕುಸಿತ ಕಂಡಿರುವುದಕ್ಕೆ ನಿಮ್ಮದೇ ಹೊಣೆಗಾರಿಕೆ. ಜಿಲ್ಲೆ ಮತ್ತೆ ಮೊದಲ ಸ್ಥಾನಕ್ಕೆ ಬರಬೇಕು. ಇಲ್ಲದಿದ್ದರೆ ಅಮಾನತ್ತು ಮಾಡಬೇಕಾಗುತ್ತದೆ. ಈ ಬಗ್ಗೆ ನಿಗಾ ಇಟ್ಟು ಸುಧಾರಣೆ ಕಾಣದಿದ್ದರೆ ಡಿಎಚ್‌ಓ ಅವರನ್ನು ಮುಲಾಜಿಲ್ಲದೆ ಅಮಾನತ್ತು ಮಾಡಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಸೂಚನೆ ನೀಡಿದರು.

ಇನ್ನೂ ಶೈಕ್ಷಣಿಕ ಸೂಚ್ಯಂಕದಲ್ಲಿ ಜಿಲ್ಲೆ 13 ನೇ ಸ್ಥಾನಕ್ಕೆ ಕುಸಿತ ಕಂಡಿದೆ. ನಿಮಗೆ ನಾಚಿಕೆ, ಬೇಸರ ಆಗುವುದಿಲ್ಲವೇ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ದ ಹರಿಹಾಯ್ದರು. ಬರುವ ದಿನಗಳಲ್ಲಿ ನಿಮ್ಮಲ್ಲಿ ಜಿಲ್ಲೆಯ ಕಾರ್ಯಕ್ಷಮತೆ ಕಾಣದಿದ್ದರೆ ನಿಮ್ಮನ್ನು ಶಾಶ್ವತವಾಗಿ ಮನೆಗೆ ಕಳಹಿಸಬೇಕಾಗುತ್ತದೆ ಖಡಕ್‌ ಎಚ್ಚರಿಕೆ ನೀಡಿದರು. ಅಧಿಕಾರಿಗಳು ನಿರ್ಲಕ್ಷ್ಯ ತೋರಿಸಿದರೆ, ಸ್ಪಂದಿಸುವ ಮನಸ್ಸು ಇಲ್ಲದವರು ಅಧಿಕಾರ ತ್ಯಾಗ ಮಾಡಿ. ಜನರ ಸ್ಪಂದನೆ ಮಾಡುವ ಸಾಕಷ್ಟು ಅಧಿಕಾರಿಗಳು ಇದ್ದಾರೆ. ಅಪರಾಧ ನಿಯಂತ್ರಣ, ಸೈಬರ್‌ ಕ್ರೈಂ ತಡೆಯುವುದು ಪೊಲೀಸ್‌ ಇಲಾಖೆ ಜವಾಬ್ದಾರಿ. ಇದನ್ನು ಪರಿಣಾಮಕಾರಿ ಆಗಿ ನಿರ್ವಹಿಸಬೇಕು. ರಸ್ತೆಗಳನ್ನು ಶೀಘ್ರವೇ ದುರಸ್ತಿಪಡಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಮತ್ತು ಪೊಲೀಸ್‌ ಇಲಾಖೆ ಅಧಿಕಾರಿಗಳಿಗೆ ಸಿಎಂ ನಿರ್ದೇಶನ ನೀಡಿದರು.

ಮಳೆ ಅನಾಹುತಗಳಲ್ಲಿ ಪೂರ್ಣ ಮನೆ ಹಾನಿ ಆಗಿದ್ದರೆ 5 ಲಕ್ಷ ರೂ.ಗಳ ವರೆಗೂ ಪರಿಹಾರ ನೀಡಬೇಕು. ಇದು ಸರಕಾರದ ನಿರ್ಧಾರ. ಮನೆ ಸ್ವಂತ ಜಾಗದಲ್ಲಿ ಕಟ್ಟಿದ್ದಾರೋ-ಇಲ್ಲವೋ, ಹಕ್ಕು ಪತ್ರ ಇದೆಯೋ-ಇಲ್ಲವೋ ಎನ್ನುವುದನ್ನು ನೋಡದೆ  ಪರಿಹಾರ ನೀಡಿ, ಪುನಃ ಮನೆ ನಿರ್ಮಾಣ ಆಗಬೇಕು. ಮಳೆ ಹಾನಿಗೆ ಸಂಬಂಧಪಟ್ಟಂತೆ ಸಂಪೂರ್ಣ ಸಮೀಕ್ಷೆ ನಡೆಸಬೇಕು. ಬೆಳೆ ಹಾನಿಗೊಳಗಾದವರಿಗೆ ತಪ್ಪದೆ ಪರಿಹಾರ ಸಿಗಬೇಕು. ಅಡಕೆ ಬೆಳೆಗೆ ಬಂದಿರುವ ಎಲೆಚುಕ್ಕೆ ರೋಗದ ಬಗ್ಗೆ ಕೃಷಿ ವಿಜ್ಞಾನಿಗಳ ನೆರವು ಪಡೆದು ಪರಿಹಾರ ಕಂಡುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯ ಗ್ರಾಮೀಣ ಭಾಗದ ಜನರಿಗೆ ಸಮಸ್ಯೆ ಆಗಿರುವ ಕಾಲುಸಂಕಗಳ ದುರಸ್ತಿ ಅಥವಾ ಪುನಃ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಬೇಕು. ಕಾಲುಸಂಕ ದುರಸ್ತಿ ಆಗದೇ ಇರುವುದರಿಂದ ಅನಾಹುತಗಳು ಸಂಭವಿಸದಂತೆ ಎಚ್ಚರ ವಹಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಸಚಿವ ಮಾಂಕಳ ವೈದ್ಯ, ಶಾಸಕರಾದ ವಿ.ಸುನಿಲ್‌ ಕುಮಾರ್‌, ಯಶ್‌ಪಾಲ್‌ ಸುವರ್ಣ, ಗುರ್ಮೆ ಸುರೇಶ್‌ ಶೆಟ್ಟಿ, ಕಿರಣ್‌ ಕೊಡ್ಗಿ, ಗುರುರಾಜ ಗಂಟಿಹೊಳೆ, ವಿಧಾನ ಪರಿಷತ್‌ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಮಂಜುನಾಥ ಭಂಡಾರಿ, ಗೃಹ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಡಾ. ರಜನೀಶ್‌ ಗೋಯಲ್‌, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎಂ.ಟಿ.ರೇಜು, ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಜಿ.ಪಂ. ಸಿಇಒ ಪ್ರಸನ್ನ ಎಚ್‌., ಎಸ್‌ ಪಿ ಅಕ್ಷಯ್‌ ಮಚ್ಚೀಂದ್ರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಪಡುಬಿದ್ರಿ : ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ

Posted On: 01-08-2023 02:56PM

ಪಡುಬಿದ್ರಿ : ಇಲ್ಲಿನ ಕಡಲ ಕಿನಾರೆಯಲ್ಲಿ ಮಳೆಯಿಂದಾಗಿ ಭಾರೀ ಕಡಲ್ಕೊರೆತ ಉಂಟಾದ ಪ್ರದೇಶಕ್ಕೆ ಇಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಕಡಲ ಕೊರೆತ ಭಾದಿತ ಪ್ರದೇಶದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಅಗತ್ಯ ಅನುದಾನ ಮಂಜೂರು ಮಾಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಮೀನುಗಾರಿಕಾ ಸಚಿವರಾದ ಮಂಕಾಳ ವೈದ್ಯ, ಜಿಲ್ಲಾಧಿಕಾರಿಗಳಾದ ಡಾ| ವಿದ್ಯಾ ಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರಸನ್ನ ಎಚ್, ಪೋಲಿಸ್ ವರಿಷ್ಠಾಧಿಕಾರಿಗಳಾದ ಹಾಕೆ ಅಕ್ಷಯ್ ಮಚ್ಚಿಂದ್ರ, ಸಹಾಯಕ ಆಯುಕ್ತರಾದ ರಶ್ಮಿ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪಡುಬಿದ್ರಿ ಕಡಲ್ಕೊರೆತ ಪ್ರದೇಶಕ್ಕೆ ಸಿ.ಎಂ ಭೇಟಿ ; ಜಿಲ್ಲಾಡಳಿತದಿಂದ ಸ್ಥಳ ಪರಿಶೀಲನೆ

Posted On: 31-07-2023 08:21PM

ಪಡುಬಿದ್ರಿ : ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಡುಬಿದ್ರಿಯಲ್ಲಿ ಕಡಲ್ಕೊರೆತ ತೀವ್ರಗೊಂಡ ಪ್ರದೇಶಕ್ಕೆ ಮಂಗಳವಾರ ಭೇಟಿ ನೀಡಲಿದ್ದಾರೆ.

ಆ ಪ್ರಯುಕ್ತ ಇಂದು ಉಡುಪಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ, ಪೋಲಿಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೇಂದ್ರ ಮತ್ತು ಜಿಲ್ಲಾಡಳಿತದ ತಂಡ ಸ್ಥಳ ಪರಿಶೀಲನೆ ನಡೆಸಿದೆ.

ಸಿ ಎಂ ಭೇಟಿ ಹಿನ್ನೆಲೆಯಲ್ಲಿ ಸಿ ಎಂ ಸಾಗುವ ಬೀಚ್ ರಸ್ತೆಯ ಹೊಂಡ ಮುಚ್ಚುವ ಕಾರ್ಯ ನಡೆಸಲಾಗುತ್ತಿದೆ. ಸಮುದ್ರ ಕಿನಾರೆಯಲ್ಲಿ ಪೋಲೀಸರ ಗಸ್ತು ಹಾಕಲಾಗಿದೆ.

ಉಡುಪಿ ಜಿಲ್ಲೆಗೆ ಭೇಟಿ ಸಂದರ್ಭ 500 ಅಧಿಕ ಪೋಲಿಸರನ್ನು ನಿಯೋಜಿಸಲಾಗಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.

ಆಗಸ್ಟ್ 1 : ಮಂಗಳೂರು, ಉಡುಪಿಗೆ ಬರಲಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ

Posted On: 30-07-2023 11:54PM

ಉಡುಪಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಸ್ಟ್ 1ರಂದು ಮಂಗಳೂರಿಗೆ ಆಗಮಿಸುವರು. ಅಂದು ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿಯವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವರು. 11.10ಕ್ಕೆ ರಸ್ತೆ ಮೂಲಕ ಉಡುಪಿಗೆ ತೆರಳುವರು. 12.30ಕ್ಕೆ ಉಡುಪಿ ಜಿಲ್ಲೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 3.30ಕ್ಕೆ ರಸ್ತೆ ಮೂಲಕ ಮಂಗಳೂರಿಗೆ ಆಗಮಿಸುವರು. ಸಂಜೆ 4.15ಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳುವರು. ರಾತ್ರಿ 10.45ಕ್ಕೆ ವಿಮಾನದ ಮೂಲಕ ಬೆಂಗಳೂರಿಗೆ ತೆರಳುವರು ಎಂದು ಪ್ರಕಟನೆ ತಿಳಿಸಿದೆ.

ಕಾಪು : ಯುವವಾಹಿನಿ ಘಟಕ - ಆಟಿಡೊಂಜಿ ದಿನ, ಕುಟುಂಬ ಸಮ್ಮಿಲನ ಮತ್ತು ವಿದ್ಯಾರ್ಥಿ ವೇತನ ವಿತರಣೆ

Posted On: 30-07-2023 11:03PM

ಕಾಪು : ಯುವವಾಹಿನಿ ಕಾಪು ಘಟಕದ ಆಶ್ರಯದಲ್ಲಿ ಆಟಿಡೊಂಜಿ ದಿನ, ಕುಟುಂಬ ಸಮ್ಮಿಲನ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವು ಕಾಪು ಲೈಟ್ ಹೌಸ್ ರೆಸಾಟ್೯ನಲ್ಲಿ ಭಾನುವಾರ ಜರಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ರಾಜೇಶ್ ಬಿ, ಯುವವಾಹಿನಿ ಸಂಸ್ಥೆ ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಧ್ಯೇಯವಿರಿಸಿಕೊಂಡು ಹಲವಾರು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡಿದೆ. ಮುಂದಿನ ದಿನಗಳಲ್ಲಿಯು ಸಂಸ್ಥೆಯ ಚಟುವಟಿಕೆಗಳು ನಿರಂತರವಾಗಿರುತ್ತದೆ ಎಂದರು.

ಸಮ್ಮಾನ/ ವಿದ್ಯಾರ್ಥಿವೇತನ ವಿತರಣೆ : ಕಾಪು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಹರೀಶ್ ಹೆಜಮಾಡಿ, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ರಾಜೇಶ್ ಬಿ ಇವರನ್ನು ಸಮ್ಮಾನಿಸಲಾಯಿತು. ಶಶಿಧರ ಸುವರ್ಣ ಮತ್ತು ಕುಟುಂಬದ ಪ್ರಾಯೋಜಕತ್ವದಲ್ಲಿ ನೀಡಲ್ಪಟ್ಟ ವಿದ್ಯಾರ್ಥಿವೇತನವನ್ನು ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಆಟಿ ಖಾದ್ಯ ವಿಶೇಷ : ಸುಮಾರು 20ಕ್ಕೂ ಅಧಿಕ ಬಗೆಯ ಆಟಿ ವಿಶೇಷತೆಯ ಖಾದ್ಯಗಳನ್ನು ಉಣಬಡಿಸಲಾಯಿತು.

ಯುವವಾಹಿನಿ ಕಾಪು ಘಟಕದ ಅಧ್ಯಕ್ಷರಾದ ಸಚಿನ್ ಉಚ್ಚಿಲ ಅಧ್ಯಕ್ಷತೆಯನ್ನು ವಹಿಸಿದ್ದರು. ಘಟಕದ ಗೌರವಾಧ್ಯಕ್ಷರಾದ ಪ್ರಭಾಕರ ಪೂಜಾರಿ, ನಿಕಟಪೂರ್ವ ಅಧ್ಯಕ್ಷೆ ಸೌಮ್ಯ ರಾಕೇಶ್, ಘಟಕದ ಮಾಜಿ ಅಧ್ಯಕ್ಷರಾದ ದೀಪಕ್ ಕುಮಾರ್ ಎರ್ಮಾಳು, ಉಪಾಧ್ಯಕ್ಷರುಗಳಾದ ಶಶಿಧರ್ ಸುವರ್ಣ, ಭವಾನಿ ಶೇಖರ್, ಕಾರ್ಯದರ್ಶಿ ಸುಮಿತ್ರ ಉಪಸ್ಥಿತರಿದ್ದರು.

ಯುವವಾಹಿನಿ ಕಾಪು ಘಟಕದ ಅಧ್ಯಕ್ಷರಾದ ಸಚಿನ್ ಉಚ್ಚಿಲ ಸ್ವಾಗತಿಸಿದರು. ಪತ್ರಕರ್ತ ರಾಕೇಶ್ ಕುಂಜೂರು ನಿರೂಪಿಸಿದರು. ನಿಕಟಪೂರ್ವ ಅಧ್ಯಕ್ಷೆ ಸೌಮ್ಯ ರಾಕೇಶ್ ವಂದಿಸಿದರು.

ಕಾಪು : ಕಳತ್ತೂರು ಫ್ರೆಂಡ್ಸ್ ಗ್ರೂಪ್ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ

Posted On: 30-07-2023 04:13PM

ಕಾಪು : ಫ್ರೆಂಡ್ಸ್ ಗ್ರೂಪ್ ಕಳತ್ತೂರು ಇವರ ವತಿಯಿಂದ ಇಂದು ಶಿರ್ವ ಕಳತ್ತೂರು ಕುಶಲಶೇಖರ್ ಶೆಟ್ಟಿ ಆಡಿಟೋರಿಯಂನಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಜರಗಿತು.

ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭ ಶಾಸಕರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಕಳತ್ತೂರು ಶೇಖರ ಶೆಟ್ಟಿ, ಕಳತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲತಾ ಆಚಾರ್ಯ, ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮುಖ್ಯಸ್ಥರಾದ ಕೇಂಜ ಶ್ರೀಧರ ತಂತ್ರಿ, ಶಿರ್ವ ಮಹಿಳಾ ಮಂಡಲ ಮಾಜಿ ಅಧ್ಯಕ್ಷರಾದ ಬಬಿತಾ ಶೆಟ್ಟಿ, ಕಳತ್ತೂರು ಗರಡಿಮನೆ ವಿಶ್ವನಾಥ ಪೂಜಾರಿ, ಕಾಪು ಮಹಿಳಾ ಮಂಡಲ ಅಧ್ಯಕ್ಷರಾದ ಲಕ್ಷ್ಮೀ ಶೆಟ್ಟಿ, ಫೇಂಡ್ಸ್ ಕಳತ್ತೂರು ಗ್ರೂಪ್ ಅಧ್ಯಕ್ಷರಾದ ರಂಗನಾಥ್ ಶೆಟ್ಟಿ, ಕಾಪು ಪೋಲಿಸ್ ಉಪ ನಿರೀಕ್ಷಕರಾದ ಶ್ರೀಶೈಲ ಉಪಸ್ಥಿತರಿದ್ದರು.