Updated News From Kaup

ಕಾರ್ಕಳ : ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನಿಟ್ಟೆಯ ಧನುಷ್ ಕುಲಾಲ್ ಗೆ ಚಿನ್ನದ ಪದಕ

Thumbnail
Posted On: 27 Nov 2023, 04:39 PM

ಕಾರ್ಕಳ : ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನಿಟ್ಟೆಯ ಧನುಷ್ ಕುಲಾಲ್ ಚಿನ್ನದ ಪದಕ ಪಡೆದಿದ್ದಾರೆ. ನಿಟ್ಟೆ ನಿವಾಸಿ ರಮೇಶ್ ಸಂಜನ್ ಹಾಗೂ ದಿವ್ಯ ದಂಪತಿಗಳ ಪುತ್ರನಾದ ಇವರು. ನಿಟ್ಟೆ ಡಾ.ಎನ್.ಎಸ್.ಎ.ಎಮ್ ಆಂಗ್ಲ ಮಾಧ್ಯಮ ಶಾಲೆಯ 6 ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ.

ಕಾಪು : ಕೊಪ್ಪಲಂಗಡಿ ಶ್ರೀ ವಾಸುದೇವ ಸ್ವಾಮಿ ಭಜನಾ ಮಂಡಳಿಯ ವಾರ್ಷಿಕ ಭಜನಾ ಮಂಗಲೋತ್ಸವ

Thumbnail
Posted On: 25 Nov 2023, 10:11 PM

ಕಾಪು : ಶ್ರೀ ಲಕ್ಷ್ಮಿಜನಾರ್ದನ ದೇವಳದ ಆಡಳಿತಕ್ಕೊಳಪಟ್ಟಿರುವ ಕೊಪ್ಪಲಂಗಡಿ ಶ್ರೀ ವಾಸುದೇವ ದೇವಸ್ಥಾನದ ಶ್ರೀ ವಾಸುದೇವ ಸ್ವಾಮಿ ಭಜನಾ ಮಂಡಳಿಯ ವಾರ್ಷಿಕ ಭಜನಾ ಮಂಗಲೋತ್ಸವದ ದೀಪ ಪ್ರಜ್ವಲನೆಯನ್ನು ಕಾಪು ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಕೆ ಪಿ ಆಚಾರ್ಯ ಮಾಡಿದರು. ಈ ಸಂದರ್ಭ ಮೋಹನ್ ಬಂಗೇರ, ಕೊಪ್ಪಳಮನೆ ಉದಯ ಶೆಟ್ಟಿ, ಜಯರಾಮ ಆಚಾರ್ಯ, ಭಜನಾ ಮಂಡಳಿ ಅಧ್ಯಕ್ಷ ಉಮೇಶ್ ಪೂಜಾರಿ, ಸದಸ್ಯರು, ದೇವಳದ ಸಿಬ್ಬಂದಿವರ್ಗ ಹಾಗೂ ಊರವರು ಉಪಸ್ಥಿತರಿದ್ದರು.

ಹೆಜಮಾಡಿ ಯುವವಾಹಿನಿ ಘಟಕದ ಆಶ್ರಯದಲ್ಲಿ ಸೌಹಾರ್ದತೆಯ ತುಳುವರೆ ತುಳಸಿ ಪರ್ಬ ಆಚರಣೆ

Thumbnail
Posted On: 25 Nov 2023, 06:17 PM

ಹೆಜಮಾಡಿ : ಹಬ್ಬಗಳು ದೇಶದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇಂತಹ ಅಚರಣೆಗಳು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ರವಾನಿಸಲು ವೇದಿಕೆಯಾಗಿದೆ. ಈ ಹಬ್ಬಗಳ ಮೂಲಕ ಯುವಕರು ತಮ್ಮ ಸಾಂಸ್ಕೃತಿಕ ಪರಂಪರೆ ಮತ್ತು ವಿವಿಧ ಪದ್ದತಿಗಳು ಹಾಗು ಆಚರಣೆಗಳ ಮಹತ್ವವನ್ನು ತಿಳಿದುಕೊಳ್ಳುತ್ತಾರೆ. ಕೂಡು ಕುಟುಂಬ ಒಡೆದು ಹೋಗಿರುವುದರಿಂದ ಹಬ್ಬಗಳ ಮಹತ್ವ ಕಳೆದು ಹೋಗಿದೆ. ಪುರಾಣದ‌ ಹಿನ್ನೆಲೆಯುಳ್ಳ ಇಂತಹ ಹಬ್ಬಗಳನ್ನು ವಿವಿಧ ಧರ್ಮದ ಜನರನ್ನು ಸೇರಿಸಿ ಸೌಹಾರ್ದತೆಯ ರೀತಿಯಲ್ಲಿ ಅಚರಿಸುತಿರುವ ಹೆಜಮಾಡಿ ಯುವವಾಹಿನಿಯ ಕಾರ್ಯ ಶ್ಲಾಘನೀಯ ಎಂದು ಪ್ರವಚನಕಾರ, ಯಕ್ಷಗಾನ ಕಲಾವಿದ ಭಾಸ್ಕರ್ ಪಡುಬಿದ್ರಿ ಹೇಳಿದರು. ಅವರು ಹೆಜಮಾಡಿ ಬಿಲ್ಲವ ಸಂಘದಲ್ಲಿ ಹೆಜಮಾಡಿ ಯುವವಾಹಿನಿ (ರಿ.) ವತಿಯಿಂದ ನಡೆದ ಸೌಹಾರ್ದತೆಯ ತುಳುವರೆ ತುಳಸಿ ಪರ್ಬ ಕಾರ್ಯಕ್ರಮದಲ್ಲಿ ತುಡರ್ ದೀಪ ಬೆಳಗಿಸಿ ಮಾತಾನಾಡಿದರು. ಹೆಜಮಾಡಿ ಯುವವಾಹಿನಿ ಅಧ್ಯಕ್ಷ ದೀಪಕ್ ವಿ.ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕೃಷಿಕ ಹೆಜಮಾಡಿ ಶೇಖರ್ ಕುಕ್ಯಾನ್ ರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ಲೋಕೇಶ್ ಅಮೀನ್, ಯುವವಾಹಿನಿ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಭರತೇಶ್, ಉದ್ಯಮಿ ಜೋನ್ ಕ್ವಾಡ್ರಸ್, ಪಡುಬಿದ್ರಿ ರೋಟರಿ ಪೂರ್ವ ಅಧ್ಯಕ್ಷ ರಮೀಜ್ ಹುಸೇನ್, ಕಾರ್ಯಕ್ರಮ ನಿರ್ದೇಶಕ ಮಹೇಂದ್ರ ಸಾಲ್ಯಾನ್, ಹೆಜಮಾಡಿ ಯುವವಾಹಿನಿ ಕಾರ್ಯದರ್ಶಿ ನಾಗವೇಣಿ ಉಪಸ್ಥಿತರಿದ್ದರು. ಹೆಜಮಾಡಿ ಯುವವಾಹಿನಿ ಅಧ್ಯಕ್ಷ ದೀಪಕ್ ವಿ. ಕೋಟ್ಯಾನ್ ಸ್ವಾಗತಿಸಿದರು. ಹೆಜಮಾಡಿ ಯುವವಾಹಿನಿಯ ಗೌರವ ಸಲಹೆಗಾರ ಪ್ರಭೋಧ್ ಚಂದ್ರ ಹೆಜ್ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನೀತಾ ಕರ್ಕೇರ ಮತ್ತು ಧೀರಜ್ ಹೆಜಮಾಡಿ ನಿರೂಪಿಸಿದರು. ಕುಮಾರಿ ಪ್ರಾಪ್ತಿ ಹೆಜಮಾಡಿ ವಂದಿಸಿದರು.

ಡಿಸೆಂಬರ್ 3, 4 : ಶಂಕರಪುರ ದ್ವಾರಕಾಮಾಯಿ ಮಠ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದ ಶಿಲಾಮಯ ಗರ್ಭಗುಡಿಯಲ್ಲಿ ಕಾಲಭೈರವ ಸ್ವಾಮಿ ಪ್ರತಿಷ್ಠೆ ; ಗುರು ವಂದನೆ ಕಾರ್ಯಕ್ರಮ

Thumbnail
Posted On: 25 Nov 2023, 06:04 PM

ಶಂಕರಪುರ : ಕಾಪು ತಾಲೂಕಿನ ಶಂಕರಪುರ ದ್ವಾರಕಾಮಾಯಿ ಮಠ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ಇಲ್ಲಿ ಶಿಲಾಮಯ ಗರ್ಭಗುಡಿಯಲ್ಲಿ ಕಾಲಭೈರವ ಸ್ವಾಮಿ ಪ್ರತಿಷ್ಠೆ ಮತ್ತು ಗುರು ವಂದನೆ ಕಾರ್ಯಕ್ರಮ ಡಿಸೆಂಬರ್ 3 ಮತ್ತು 4 ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಶನಿವಾರ ಶ್ರೀ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಮಾತನಾಡಿದ ದ್ವಾರಕಾಮಾಯಿ ಮಠದ ಧರ್ಮದರ್ಶಿ ಶ್ರೀ ಸಾಯಿ ಈಶ್ವರ್ ಗುರೂಜಿ, ದಾನಿಗಳು, ಭಕ್ತರ ಸಹಾಯದಿಂದ 3 ವರ್ಷದ ಮೊದಲು ಜೀರ್ಣೋದ್ದಾರಗೊಂಡ ದ್ವಾರಕಾಮಾಯಿ ಮಠ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನವು ಧಾರ್ಮಿಕ, ಸಾಮಾಜಿಕ ಸೇವೆಗಳನ್ನು ಮಾಡುತ್ತಾ ಬರುತ್ತಿದ್ದು ಇತ್ತೀಚಿನ ದಿನಗಳಲ್ಲಿ ಹೊರ ರಾಜ್ಯ, ಹೊರ ದೇಶದ ಭಕ್ತರನ್ನು ಆಕರ್ಷಿಸುವ ಈ ಪುಣ್ಯ ಕ್ಷೇತ್ರವಾಗಿದೆ. ಮಠದ ಆವರಣದಲ್ಲಿಯೇ 2018ರಲ್ಲಿ ಶ್ರೀ ಸಾಯಿನಾಥರ 100ನೇ ಪುಣ್ಯಸ್ಮರಣೆಯ ದಿನದಂದು ಬಿಲ್ವಮರದ ಕಟ್ಟೆಗೆ "ಪ್ರಾಣಿ ಪಕ್ಷಿ ಮೋಕ್ಷ ಕಟ್ಟೆ" ಎಂದು ಸಂಕಲ್ಪಿಸಿ ಮೋಕ್ಷಕಾರಕ ಶಿವನ ಸಂಕಲ್ಪದಲ್ಲಿ ಪೂಜೆ ಸಲ್ಲುತ್ತಿತ್ತು. 2022ರಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಿದ ಗುರುಗಳಾದ ಶ್ರೀ ಪ್ರವೀಣ್ ರಾಜ್ ಮಚ್ಚೇಂದ್ರನಾಥ ಬಾಬಾರು ಇಲ್ಲಿ ಶಿವನೇ ಕಾಲಭೈರವನಾಗಿ ಮೋಕ್ಷ ಕಟ್ಟೆಯಲ್ಲಿ ನೆಲೆಸಿದ್ದಾನೆ ಎಂದು ತಿಳಿಸಿ, ಈ ಕಟ್ಟೆಯಲ್ಲಿ ಉಜ್ಜಯಿನಿಯ ಸಂಕಲ್ಪದಲ್ಲಿ ಕಾಲ ಭೈರವ - ಸ್ವಾಮಿಗೆ ಸ್ಥಾನವನ್ನು ನೀಡಬೇಕು ಎಂದು ಪ್ರಸ್ತಾಪಿಸಿದರು. ಗುರುವಿನ ಆಜ್ಞೆಯಂತೆ ಅದೇ ಜಾಗದಲ್ಲಿ ಶಿಲಾಮಯ ಗರ್ಭಗುಡಿಯಲ್ಲಿ ಪಾನ ಪ್ರಿಯ ಕಾಲಭೈರವ ಸ್ವಾಮಿಯನ್ನು ಇದೇ 2023ರ ಡಿಸೆಂಬರ್ 3 ಮತ್ತು 4ರಂದು ಗುರುವರ್ಯರಾದ ಶ್ರೀ ಪ್ರವೀಣ್ ರಾಜ್ ಮಚ್ಚೇಂದ್ರನಾಥ ಬಾಬಾರ ಉಪಸ್ಥಿತಿಯಲ್ಲಿ ವೇದಮೂರ್ತಿ ಶ್ರೀ ದೇವದಾಸ್ ತಂತ್ರಿ, ಮುಂಬೈ ಇವರ ನೇತೃತ್ವದಲ್ಲಿ ಪ್ರತಿಷ್ಠಾಪನೆ ನಡೆಯಲಿದೆ. ಈ ಧಾರ್ಮಿಕ ಸಮಾರಂಭದಲ್ಲಿ ದೇಶದ ನಾನಾ ರಾಜ್ಯಗಳಿಂದ 110ಕ್ಕೂ ಹೆಚ್ಚು ಸಾಧು ಸಂತರು ಭಾಗವಹಿಸಲಿದ್ದಾರೆ. ಡಿಸೆಂಬರ್ 3ರಂದು ಬೆಳಿಗ್ಗೆ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಬಳಿಕ 11:30ಕ್ಕೆ ಶಿರ್ವ ಮಟ್ಟಾರ್‌ನ ಪಾಂಜಗುಡ್ಡೆಯಲ್ಲಿ ಮಠದ ಮಹತ್ವದ ಯೋಜನೆಯಾದ ಸಂತ ಆಶ್ರಯ ಧಾಮಕ್ಕೆ ಸಾಧು ಸಂತರು ಭಗವತ್ ಧ್ವಜವನ್ನು ಇಟ್ಟು ದೀಪ ಬೆಳಗಿಸಿ ಪ್ರಾರ್ಥಿಸಲಿದ್ದಾರೆ. ಮಧ್ಯಾಹ್ನ 3:30ಕ್ಕೆ ಅಖಿಲ ಭಾರತೀಯ ಸಂತ ಸಮಿತಿಯ ಪ್ರಾಂತ್ಯ ಸಭೆಯು ನಡೆಯಲಿದೆ. ಸಂಜೆ 5ಕ್ಕೆ ಸಾಲ್ಮರ ಶಂಕರಪುರದಿಂದ ಕಾಲಭೈರವ ಸ್ವಾಮಿ ಪ್ರತಿಮೆ ಹಾಗೂ ಹಸಿರು ಹೊರಕಾಣಿಕೆ ಮೆರವಣಿಗೆ ನಡೆಯಲಿದೆ. ಡಿಸೆಂಬರ್ 4 ರಂದು ಬೆಳಿಗ್ಗೆ ಪ್ರತಿಷ್ಠೆ ಕಲಶಾಭಿಷೇಕ, 10:30ಕ್ಕೆ ಗುರುವಂದನೆ, 12:30 ಮಹಾಪೂಜೆ ನಂತರ ಮಹಾ ಅನ್ನ ಸಂತರ್ಪಣೆ ನಡೆಯಲಿದೆ. ಎಂದರು. ಈ ಸಂದರ್ಭ ಮಠದ ಟ್ರಸ್ಟಿ ವಿಶ್ವನಾಥ ಸುವರ್ಣ, ಗೌರವ ಅಧ್ಯಕ್ಷ ಸುಧಾಕರ್ ಶೆಟ್ಟಿ, ಕ್ಷೇತ್ರದ ಮಾರ್ಗದರ್ಶಕರುಗಳಾದ ವೀಣಾ ಶೆಟ್ಟಿ, ಗೀತಾಂಜಲಿ ಸುವರ್ಣ, ವಿಜಯ್ ಕುಂದರ್ ಉಪಸ್ಥಿತರಿದ್ದರು.

ನವೆಂಬರ್ 26 : ಮಾತೃಜಾ ಸೇವಾ ಸಿಂಧು ನಿಟ್ಟೆ ಇದರ ಸಮಾಲೋಚನ ಸಭೆ

Thumbnail
Posted On: 24 Nov 2023, 04:33 PM

ಕಾರ್ಕಳ :ಇಲ್ಲಿಯ ನಿಟ್ಟೆ ಭಾಗದಲ್ಲಿ ಹಲವಾರು ಅಶಕ್ತ ಬಡ ಕುಟುಂಬಕ್ಕೆ ನೆರವಾಗುತ್ತ, ಆ ಕುಟುಂಬದಲ್ಲಿ ಮಂದಹಾಸ ಕಾಣುವ, ಸಮಾನ ಮನಸ್ಕರ ತಂಡದ ಸಭೆಯು ನವೆಂಬರ್ 26 ರಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ನಿಟ್ಟೆ ಲೆಮಿನ ಕ್ರಾಸ್ ಬಳಿಯ ಸನ್ಮಾನ್ ರಿಜೆನ್ಸಿ ಸಭಾಭವನದಲ್ಲಿ ನಡೆಯಲಿದೆ. ತಂಡದ ಸೇವಾ ಬಂಧುಗಳು ಹಾಗೂ ಹಿತೈಷಿಗಳು ಅಂದು ಹಾಜರಿರಬೇಕಾಗಿ ಮಾತೃಜ ಸೇವಾ ಸಿಂಧು ನಿಟ್ಟೆ ಇದರ ಪ್ರಮುಖರು ಪ್ರಕಟಣೆಯಲ್ಲಿ ತಿಳಿಸಿರುವರು.

ಮನಸ್ವೀ ಕುಲಾಲ್ ಗೆ ಶಿವರಾಮ ಕಾರಂತ ಪುರಸ್ಕಾರ

Thumbnail
Posted On: 24 Nov 2023, 03:57 PM

ಕಾರ್ಕಳ : ತಾಲೂಕಿನ ಸ.ಹಿ.ಪ್ರಾ ಶಾಲೆ ಕಲಂಬಾಡಿ ಪದವು ಇಲ್ಲಿಯ ವಿದ್ಯಾರ್ಥಿನಿ ಕುಮಾರಿ ಮನಸ್ವೀ ಕುಲಾಲ್ ಕಾರಂತ ವಿಶೇಷ ಪುರಸ್ಕಾರಕ್ಕೆ ಆಯ್ಕೆಯಾಗಿರುತ್ತಾರೆ. ಡಾ| ಶಿವರಾಮ ಕಾರಂತ ಬಾಲ ಪುರಸ್ಕಾರವನ್ನು ಕೋಟದ ಡಾ| ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ನವೆಂಬರ್ 26 ರಂದು ಸಂಜೆ 5 ಗಂಟೆಗೆ ಪ್ರದಾನ ಮಾಡಲಾಗುವುದೆಂದು ಡಾ| ಶಿವರಾಮ ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಸತೀಶ್ ಕುಂದರ್, ಉಡುಪಿ ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮನಸ್ವೀ ಕುಲಾಲ್ ಅವರು ಕಾರ್ಕಳ ಪದವು ಸಂತೋಷ್ ಕುಲಾಲ್ ಮತ್ತು ಮಂಜುಳಾ ದಂಪತಿಯ ಸುಪುತ್ರಿ.

ಮೂಳೂರು : ಕಾರು ಢಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಸಾವು

Thumbnail
Posted On: 23 Nov 2023, 11:54 AM

ಮೂಳೂರು : ಕಾರು ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದಾಗಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಢಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾ.ಹೆ. 66 ಮೂಳೂರಿನಲ್ಲಿ ಬುಧವಾರ ನಡೆದಿದೆ. ಮೂಳೂರು ಮಹಾಲಕ್ಷ್ಮೀ ನಗರ ನಿವಾಸಿ ಲೀಲಾವತಿ ಸಾಲ್ಯಾನ್ (65) ಮೃತ ಮಹಿಳೆ. ಬುಧವಾರ ಮಧ್ಯಾಹ್ನ ಮೂಳೂರು ಅಂಚೆ ಕಚೇರಿಗೆ ಬಂದು ಮನೆಗೆ ತೆರಳುತ್ತಿದ್ದಾಗ ರಾ.ಹೆ. 66ರಲ್ಲಿ ಉಡುಪಿ ಕಡೆಗೆ ತೆರಳುತ್ತಿದ್ದ ಕಾರು ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಲೀಲಾವತಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಕಾಪು ಪೋಲಿಸರು ಕಾರು ಚಾಲಕನನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದಾರೆ. ಮೃತ ಲೀಲಾವತಿ ಸಾಲ್ಯಾನ್ ಅವರು ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ.

ಪಡುಬಿದ್ರಿ ರೋಟರಿ ಕ್ಲಬ್ : ಮನೆ ಬೆಳಕು ಕಾರ್ಯಕ್ರಮದಡಿಯಲ್ಲಿ ಗ್ಯಾಸ್ ಸ್ಟವ್, ಸಿಲಿಂಡರ್‌ ಹಸ್ತಾಂತರ

Thumbnail
Posted On: 22 Nov 2023, 09:14 PM

ಪಡುಬಿದ್ರಿ : ಇಲ್ಲಿನ ರೋಟರಿ ಕ್ಲಬ್ ವತಿಯಿಂದ "ಮನೆ ಬೆಳಕು" ಕಾರ್ಯಕ್ರಮದಡಿ ಪಡುಬಿದ್ರಿ ಪಾದೆಬೆಟ್ಟು ಗ್ರಾಮದ ಸುಮಿತ್ರಾ ಪೂಜಾರಿಯವರಿಗೆ ಗ್ಯಾಸ್ ಸ್ಟವ್ ಮತ್ತು ಸಿಲಿಂಡರ್‌ ನ್ನು ಪೂರ್ವ ಸಹಾಯಕ ಗರ್ವನರ್ ಗಣೇಶ್ ಆಚಾರ್ಯ ಉಚ್ಚಿಲ ಹಸ್ತಾಂತರಿಸಿದರು. ಪಡುಬಿದ್ರಿ ರೋಟರಿ ಅಧ್ಯಕ್ಷ ಸಂತೋಷ್ ಪಡುಬಿದ್ರಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ವಲಯ ‌ಸಂಯೋಜಕ ರಮೀಜ್ ಹುಸೇನ್, ನಿಕಟ ಪೂರ್ವ ಅಧ್ಯಕ್ಷರಾದ ಗೀತಾ ಅರುಣ್, ಪೂರ್ವ ಅಧ್ಯಕ್ಷರಾದ ಗಣೇಶ್ ಅಚಾರ್ಯ ಎರ್ಮಾಳ್, ಮಹಮ್ಮದ್ ನಿಯಾಜ್, ನಿಯೋಜಿತ ಅಧ್ಯಕ್ಷ ಬಿ.ಎಸ್ ಅಚಾರ್ಯ, ಕಾರ್ಯದರ್ಶಿ ಪವನ್ ಸಾಲ್ಯಾನ್, ಕೋಶಾಧಿಕಾರಿ ಸುನಿಲ್ ಕುಮಾರ್, ಸದಸ್ಯರಾದ ಜ್ಯೋತಿ ಮೆನನ್, ಪುಷ್ಪಲತಾ ಗಂಗಾಧರ್, ತಸ್ನೀನ್ ಅರಾ ಉಪಸ್ಥಿತರಿದ್ದರು. ಸಂತೋಷ್ ಪಡುಬಿದ್ರಿ ಸ್ವಾಗತಿಸಿದರು. ಬಿ.ಎಸ್ ಅಚಾರ್ಯ ನಿರೂಪಿಸಿದರು. ಪವನ್ ಸಾಲ್ಯಾನ್ ವಂದಿಸಿದರು.

ಸರ್ಕಾರದ ಸೌಲಭ್ಯ ಪಡೆಯಲು ರೈತರು ಜಮೀನು ವಿವರ FRUITSನಲ್ಲಿ ದಾಖಲಿಸಿ : ತಹಶಿಲ್ದಾರ್ ಡಾ. ಪ್ರತಿಭಾ ಆರ್. ಸೂಚನೆ

Thumbnail
Posted On: 22 Nov 2023, 08:57 PM

ಕಾಪು : ರೈತರು ಸರ್ಕಾರದ ಸೌಲಭ್ಯ ಪಡೆಯಲು, ಯಾವುದೇ ಭಯ ಇಲ್ಲದೇ ಜಮೀನಿನ ವಿವರಗಳನ್ನು FRUITS ತಂತ್ರಾಂಶದಲ್ಲಿ ದಾಖಲು ಮಾಡಬೇಕು ಕಾಪು ತಾಲ್ಲೂಕು ತಹಶಿಲ್ದಾರ್ ಡಾ. ಪ್ರತಿಭಾ ಆರ್ ತಿಳಿಸಿದ್ದಾರೆ. ಬೆಳೆ ನಷ್ಟವಾಗಿರುವ ರೈತರು ಪರಿಹಾರ ಧನ ಪಡೆಯಲು ಭೂಮಿ ವಿವರ ಇರುವ ಎಫ್‌ಐಡಿ Fruits ID (FID) ಹೊಂದಿರಬೇಕು. ಎಫ್‍ಐಡಿ ಗುರುತಿನ ಸಂಖ್ಯೆ ಪಡೆಯಲು ರೈತರು FRUITS ತಂತ್ರಾಂಶದಲ್ಲಿ ತಮ್ಮ ಹಕ್ಕಿನಲ್ಲಿರುವ ಎಲ್ಲಾ ಸಾಗುವಳಿ ಭೂಮಿಗಳ ವಿವರಗಳನ್ನು ಸೇರಿಸಿರಬೇಕು. ರೈತರು ಸರ್ಕಾರದ ಸೌಲಭ್ಯ ಪಡೆಯಲು ಎಫ್‍ಐಡಿ ಬೇಕು, ಏನಿದು ಐಡಿ ? : ಕರ್ನಾಟಕ ಸರ್ಕಾರ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳು ಮತ್ತು ಕೃಷಿಗೆ ಪೂರಕವಾದ ಇಲಾಖೆಗಳ ಮುಖ್ಯಸ್ಥರ ಮಾರ್ಗದರ್ಶನದಲ್ಲಿ ಅಧೀನ ಕಚೇರಿಗಳಲ್ಲಿ ರೈತರ ಫ್ರೂಟ್ಸ್ ಐಡಿ ಸೃಷ್ಟಿಸಲು ವ್ಯವಸ್ಥೆ ಮಾಡಿದೆ. ರೈತರು ಇದರ ಸದುಪಯೋಗ ಪಡೆಯಬೇಕೆಂದು ಕರೆ ನೀಡಲಾಗಿದೆ. FRUITS (Farmers Registration & Unified beneficiary Information System) ಗುರುತಿನ ಸಂಖ್ಯೆಯಲ್ಲಿ ದಾಖಲಿಸಿದ ಜಮೀನಿನ ವಿಸ್ತೀರ್ಣಗಳಿಗೆ ಸರ್ಕಾರದ ಪರಿಹಾರ ಸೌಲಭ್ಯ ದೊರೆಯುವುದರಿಂದ ರೈತರು ತಾವು ಹೊಂದಿರುವ ಎಲ್ಲಾ ಜಮೀನಿನ ಸರ್ವೇ ನಂಬರ್ ವಿಸ್ತೀರ್ಣಗಳನ್ನು ಕೂಡಲೇ ಫ್ರೂಟ್ಸ್ (Fruits) ತಂತ್ರಾಂಶದಲ್ಲಿ ದಾಖಲಿಸಿಕೊಳ್ಳಬೇಕು. ನವೆಂಬರ್ 30ರ ತನಕ ದಾಖಲು ಮಾಡಲು ಅವಕಾಶ ನೀಡಲಾಗಿದೆ. ರೈತರ ಫ್ರೂಟ್ಸ್ ಐಡಿಯಲ್ಲಿ ರೈತರ ಜಮೀನು, ಆಧಾರ್ ನಂಬರ್, ಬ್ಯಾಂಕ್ ಅಕೌಂಟ್ ಸೇರಿದಂತೆ ಎಲ್ಲಾ ವಿವರ ಇರುತ್ತದೆ. ಸರ್ಕಾರದಿಂದ ಬರ ಪರಿಹಾರದ ಹಣ ಬಿಡುಗಡೆಯಾದರೆ ಡಿಬಿಟಿ (Direct Beneficiary Transfer) ಮೂಲಕ ರೈತರ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ ಎಂದು ಸರ್ಕಾರ ಹೇಳಿದೆ. ಕಾಪು ತಾಲ್ಲೂಕಿನಲ್ಲಿ FRUITS ತಂತ್ರಾಂಶದಲ್ಲಿ ರೈತರ ಎಲ್ಲಾ ಜಮೀನಿನ ಮಾಹಿತಿಯನ್ನು ನವೆಂಬರ್ 30 ರೊಳಗೆ ದಾಖಲಿಸಲು ಮನವಿ ಮಾಡಲಾಗಿದೆ. ಈ ಕಾರ್ಯವನ್ನು ಕ್ಷೇತ್ರ ಮಟ್ಟದಲ್ಲಿ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಲಾಗಿನ್‌ಗಳ‌ ಮೂಲಕ ಮುಂದಿನ ದಿನಗಳಲ್ಲಿ ಅಭಿಯಾನ ರೂಪದಲ್ಲಿ ಕೈಗೊಂಡು, FRUITS ತಂತ್ರಾಂಶದಲ್ಲಿ ಶೇ. 100 ರಷ್ಟು Land Updation ಪ್ರಗತಿ ಸಾಧಿಸಲು ಸರ್ಕಾರ ನಿರ್ದೇಶನ ನೀಡಿದೆ. FRUITS ತಂತ್ರಾಂಶದ ಮಾಹಿತಿಯನ್ನು ಸರ್ಕಾರದ ವಿವಿಧ ಸವಲತ್ತುಗಳಾದ ಬೆಳೆ ವಿಮೆ, ಬೆಳೆ ಸಾಲ ವಿತರಣೆ, ಬೆಳೆ ಪರಿಹಾರ ವಿತರಣೆ, ಬೆಂಬಲ ಬೆಲೆ ಅನುಷ್ಟಾನ, ಪಹಣಿಯಲ್ಲಿ ಬೆಳೆ ದಾಖಲಾತಿ ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳ ವಿತರಣೆಗೆ ಬಳಕೆ ಮಾಡುತ್ತಿದ್ದು, ಕಂದಾಯ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆ, ರೇಷ್ಮೆ, ಸಹಕಾರ ಇಲಾಖೆ ಹಾಗೂ ಸಹಕಾರ ಮತ್ತು ವಾಣಿಜ್ಯ ಬ್ಯಾಂಕ್‌ಗಳಲ್ಲಿ ದತ್ತಾಂಶವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಲಾಗಿದೆ. ಜಿಲ್ಲೆಯ ರೈತ ಬಾಂಧವರು ತಮ್ಮ ಆಧಾರ್ ಕಾರ್ಡ್‌ ಪ್ರತಿ, ಬ್ಯಾಂಕ್ ಖಾತೆ ಮತ್ತು ಶಾಖೆಯ ವಿವರ, ಬ್ಯಾಂಕ್ ಐ.ಎಫ್.ಎಸ್.ಸಿ ಕೋಡ್, ಪಡಿತರ ಚೀಟಿಯ ವಿವರ, ಮೊಬೈಲ್ ಸಂಖ್ಯೆ, ಪರಿಶಿಷ್ಟ ಜಾತಿ/ ಪಂಗಡದ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ ಹಾಗೂ ತಮ್ಮ ಮಾಲೀಕತ್ವದ ಎಲ್ಲಾ ಜಮೀನಿನ ಸರ್ವೇ ನಂಬರ್ ವಿವರವನ್ನು ತಮ್ಮ ಹತ್ತಿರದ ತಹಶೀಲ್ದಾರ್‌ ಕಛೇರಿ, ಕಂದಾಯ ನಿರೀಕ್ಷಕರ ಕಛೇರಿ, ಗ್ರಾಮ ಲೆಕ್ಕಾಧಿಕಾರಿಗಳ ಕಛೇರಿ, ನ್ಯಾಯಬೆಲೆ ಅಂಗಡಿ ಅಥವಾ ಕೃಷಿ/ ತೋಟಗಾರಿಕೆ/ ರೇಷ್ಮೆ ಇಲಾಖೆಯ ಕಛೇರಿಗಳಿಗೆ ಕೂಡಲೇ ಒದಗಿಸಿ ತಮ್ಮ ಮಾಲೀಕತ್ವದ ಎಲ್ಲಾ ಪಹಣಿಯ ದಾಖಲೆಗಳನ್ನು ನವೆಂಬರ್ 30ರೊಳಗೆ ನೋಂದಾಯಿಸಿಕೊಳ್ಳಲು ಕಾಪು ತಾಲ್ಲೂಕು ತಹಶಿಲ್ದಾರ್ ಡಾ. ಪ್ರತಿಭಾ ಆರ್ ಸೂಚಿಸಿದ್ದಾರೆ.

ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಶಕುಂತಲಾ ಪೂಜಾರಿ ನಿಧನ

Thumbnail
Posted On: 22 Nov 2023, 08:06 PM

ಉಚ್ಚಿಲ : ಇಲ್ಲಿನ ಬಡಾ ಗ್ರಾಮ ಪಂಚಾಯತಿಯ ಮಾಜಿ ಸದಸ್ಯೆ ಶಕುಂತಲಾ ಪೂಜಾರಿ (75) ಮಂಗಳವಾರ ರಾತ್ರಿ ಹೃದಯಘಾತದಿಂದ ಮೃತ ಪಟ್ಟಿದ್ದಾರೆ. ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಸಹಿತ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದ ಶಕುಂತಲಾರವರು ಜನರ ಕಷ್ಟಗಳಿಗೆ ತಕ್ಷಣ ಸ್ಪಂದಿಸುತ್ತಿದ್ದರು. ಉಚ್ಚಿಲ ಬಡ ಗ್ರಾಮ ಪಂಚಾಯತ್ ಅಧ್ಯಕ್ಷ ಶಶಿಕುಮಾರ್ ಮೆಂಡನ್, ಮಹಾಲಕ್ಷ್ಮಿ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಮೃತರ ಅಂತಿಮ ದರ್ಶನ ಪಡೆದರು. ಬೆಳಪುವಿನ ರುದ್ರ ಭೂಮಿಯಲ್ಲಿ ಬುಧವಾರ ಅಂತಿಮ ಸಂಸ್ಕಾರ ನಡೆಸಲಾಯಿತು. ಮೃತರು ಮಗ, ಸೊಸೆ, ಮೊಮ್ಮಗಳು ಹಾಗೂ ಅಪಾರ ಬಂದು ವರ್ಗದವರನ್ನು ಅಗಲಿದ್ದಾರೆ.