Updated News From Kaup
ಜುಲೈ 25 : ಕಾಪುವಿನ ಮೂರು ಮಾರಿಗುಡಿಗಳಲ್ಲಿ ಕಾಲಾವಧಿ ಆಟಿ ಮಾರಿಪೂಜೆ

Posted On: 19-07-2023 07:40PM
ಕಾಪು : 2023ರ ಜುಲೈ 25ರ ಮಂಗಳವಾರ ಮತ್ತು ಜುಲೈ 25ರ ಬುಧವಾರ ಕಾಪುವಿನ ಹಳೆ ಮಾರಿಗುಡಿ, ಹೊಸ ಮಾರಿಗುಡಿ ಮತ್ತು ಮೂರನೇ ಮಾರಿಗುಡಿಯಲ್ಲಿ ಕಾಲಾವಧಿ ಆಟಿ ಮಾರಿಪೂಜೆಯು ಯಥಾಪ್ರಕಾರ ನಡೆಯಲಿದೆ ಎಂದು ತಿಳಿಸಿದ್ದಾರೆ.
ಜುಲೈ 28 : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ - ತಾಮ್ರದ ಶೀಟ್ ಗಳ ಬಹಿರಂಗ ಏಲಂ

Posted On: 19-07-2023 07:37PM
ಕಾಪು : ಕರ್ನಾಟಕ ಸರಕಾರ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಅಧೀನದ ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಶ್ರೀ ದೇವಳದ ಹಳೆಯ ಗರ್ಭಗುಡಿಯ ತಾಮ್ರದ ಶೀಟ್ ಗಳನ್ನು ಬಹಿರಂಗ ಏಲಂ ಜುಲೈ 28, ಶುಕ್ರವಾರದಂದು ಬೆಳಿಗ್ಗೆ 11ಗಂಟೆಗೆ ಸರಿಯಾಗಿ ಶ್ರೀ ದೇವಳದಲ್ಲಿ ನಡೆಯಲಿದೆ.
ಆಸಕ್ತರು ಈ ಏಲಂನಲ್ಲಿ ಭಾಗವಹಿಸಬಹುದು. ಹೆಚ್ಚಿನ ವಿವರಗಳಿಗೆ ಶ್ರೀ ದೇವಳದ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆಯಲ್ಲಿ ತಿಳಿಸಿದರು.
ಎಲ್ಲೂರು : ಮೂವತ್ತೈದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಂದು ಲಕ್ಷದ ಹತ್ತುಸಾವಿರ ರೂಪಾಯಿ ಮೊತ್ತದ ವಿದ್ಯಾರ್ಥಿ ವೇತನ ವಿತರಣೆ

Posted On: 19-07-2023 07:27PM
ಎಲ್ಲೂರು : ಅಭಿವೃದ್ಧಿಯ ಸಾಧನೆಯಲ್ಲಿ ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದುದನ್ನು ಆಧಾರವಾಗಿಟ್ಟುಕೊಂಡು ಯಥಾಸಾಧ್ಯ ಪ್ರವೃತ್ತರಾಗಿ ಮಹತ್ತನ್ನು ಸಾಧಿಸಿರಿ ಎಂದು ಬೆಂಗಳೂರಿನ 'ಟೆಕ್ ಸೆಲ್ 'ಅಟೋಮೇಶನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆರ್.ಆರ್.ಹರೀಶ ರಾವ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ಸ್ಥಳೀಯ ಶ್ರೀ ಪಂಚಾಕ್ಷರಿ ಯಕ್ಷಗಾನ ಮಂಡಳಿಯು ಬೆಂಗಳೂರಿನ "ಟೆಕ್ ಸೆಲ್" ಅಟೋಮೇಶನ್ ಪ್ರೈ.ಲಿ.ಇವರ ಸಹಯೋಗದಲ್ಲಿ ಎಲ್ಲೂರು ಪರಿಸರದ ಹತ್ತು ಕನ್ನಡ ಮಾಧ್ಯಮ ಶಾಲೆಗಳ ಏಳನೇ ತರಗತಿ,ಹತ್ತನೇ ತರಗತಿ ಹಾಗೂ ಪದವಿ ಪೂರ್ವ ತರಗತಿಗಳ ಮೂವತ್ತೈದು ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳಿಗೆ ಒಂದು ಲಕ್ಷದ ಹತ್ತುಸಾವಿರ ರೂಪಾಯಿ ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಿ ಮಾತನಾಡುತ್ತಿದ್ದರು.
ಬೆಳಪು ಕಾನ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ, ಅವರ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೂಪಾ ಹರೀಶ ರಾವ್ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಪಂಚಾಕ್ಷರೀ ಯಕ್ಷಗಾನ ಮಂಡಳಿಯ ಅಧ್ಯಕ್ಷ ಕೆ.ಶ್ರೀನಿವಾಸ ಉಪಾಧ್ಯಾಯ ವಹಿಸಿದ್ದರು.ಕುಂಜೂರು ದುರ್ಗಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಮನೆ ದೇವರಾಜ ರಾವ್,ಕಾನ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಪಟೇಲ್ ಪ್ರಕಾಶ ರಾವ್,ಬೆಳಪು ವಲಯ ಬ್ರಾಹ್ಮಣ ಸಂಘದ ಅಧ್ಯಕ್ಷ ನಡಿಮನೆ ವಾದಿರಾಜ ರಾವ್ ಅವರು ಭಾಗವಹಿಸಿದ್ದರು.
ರಾಘವೇಂದ್ರ ರಾವ್ ಎಲ್ಲೂರು ಸ್ವಾಗತಿಸಿದರು. ಕೆ.ಎಲ್.ಕುಂಡಂತಾಯ ಪ್ರಸ್ತಾವಿಸಿದರು. ಎಲ್ಲೂರು ಗಣೇಶ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಅನಂತ ಪದ್ಮನಾಭ ಜೆನ್ನಿ ವಂದಿಸಿದರು. ಈ ಸಂದರ್ಭದಲ್ಲಿ ಎಲ್ಲೂರು ಶ್ರೀ ವಿಶ್ವೇಶ್ವರ ದೇವಳದ ಅರ್ಚಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ವೇ.ಮೂ .ಗೋಪಾಲ ಭಟ್, ವೇ.ಮೂ.ಶ್ರೀ ಕೃಷ್ಣಮೂರ್ತಿ ಭಟ್, ಹಾಗೂ ವೇ.ಮೂ.ಸುಬ್ರಾಯ ಭಟ್ ಅವರನ್ನು ಹಾಗೂ ಶ್ರೀ ಬಡಿಕೇರಿ ಹರಿದಾಸ ರಾವ್ ಅವರನ್ನು ಅವರವರ ಮನೆಗೆ ಹೋಗಿ ಸಮ್ಮಾನಿಸಲಾಯಿತು.
ಕಾರ್ಕಳ : ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಮೊಹಮ್ಮದ್ ಶರೀಫ್ ಆಯ್ಕೆ

Posted On: 19-07-2023 07:17PM
ಕಾರ್ಕಳ : ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಮೊಹಮ್ಮದ್ ಷರೀಫ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಬೈಲೂರು ಹರೀಶ್ ಅಚಾರ್ಯ, ಕೋಶಾಧಿಕಾರಿಯಾಗಿ ಕೆ.ಎಂ ಖಲೀಲ್ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸೂಚನೆಯಂತೆ ಉಡುಪಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಕಾರ್ಕಳ ತಾಲೂಕು ಘಟಕದ ಪದಾಧಿಕಾರಿಗಳ ಪುನರ್ ರಚನೆ ಪ್ರಕ್ರಿಯೆ ತಾಲೂಕು ಪ್ರವಾಸಿ ಕೇಂದ್ರದಲ್ಲಿ ಬುಧವಾರ ಜರುಗಿತು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ರಾಜೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಜೀರ್ ಪೊಲ್ಯ, ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲ್, ರಜತ ಸಮಿತಿ ಕಾರ್ಯದರ್ಶಿ ಜಯಕರ ಸುವರ್ಣ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ಉಪಾಧ್ಯಕ್ಷರಾಗಿ ಹರೀಶ್ ಸಚ್ಚರಿಪೇಟೆ, ಜತೆ ಕಾರ್ಯದರ್ಶಿಯಾಗಿ ವಾಸುದೇವ ಭಟ್ , ಕ್ರೀಡಾ ಕಾರ್ಯದರ್ಶಿ ರಾಂ ಅಜೆಕಾರು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಹರಿಪ್ರಸಾದ್ ನಂದಳಿಕೆ ಆಯ್ಕೆಗೊಂಡರು. ಜಿಲ್ಲಾ ಉಪಾಧ್ಯಕ್ಷ ಆರ್. ಬಿ ಜಗದೀಶ್, ಜಿಲ್ಲಾ ಸಮಿತಿ ಪ್ರತಿನಿಧಿ ಉದಯ್ ಮುಂಡ್ಕೂರ್ ಉಪಸ್ಥಿತರಿದ್ದರು.
ಜುಲೈ 22 : ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ ಶ್ರೀ ಪುರುಷೋತ್ತಮ ಯಾಗ

Posted On: 19-07-2023 06:20PM
ಕಾಪು : ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಕಟಪಾಡಿ ಪಡುಕುತ್ಯಾರು ಇಲ್ಲಿನ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಶೋಭಕೃತ್ ನಾಮ ಸಂವತ್ಸರದ 19ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ-2023 ಜುಲೈ 3ರಿಂದ ಸೆಪ್ಟಂಬರ್ 29 ತನಕ ಶ್ರೀ ಸರಸ್ವತೀ ಸತ್ಸಂಗ ಮಂದಿರ, ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಪಡುಕುತ್ಯಾರು ಇಲ್ಲಿ ಜರಗುತ್ತಿದೆ.
ಈ ನಿಮಿತ್ತ ವಿಶ್ವ ಬ್ರಾಹ್ಮಣ ಪ್ರತಿಷ್ಠಾನ ಹುಬ್ಬಳ್ಳಿ ಇವರ ವತಿಯಿಂದ ಆನೆಗುಂದಿ ಮಹಾಸಂಸ್ಥಾನದ ಆಸ್ಥಾನ ವಿದ್ವಾಂಸರಾದ ವೇ.ಬ್ರ. ಶ್ರೀ ಶಂಕರಾಚಾರ್ಯಗುರುನಾಥ ಆಚಾರ್ಯ ಪಂಡಿತ್ ಕಡ್ಲಾಸ್ಕರ್ ಅವರ ನೇತೃತ್ವದೊಂದಿಗೆ, ಪಡುಕುತ್ಯಾರಿನಲ್ಲಿ ಸ್ವಸ್ತಿ ವಿಜಯಾಭ್ಯುದಯ ಶಾಲಿವಾಹನಶಕ 1946, ಜುಲೈ 22, ಶನಿವಾರದಂದು ಪೂರ್ವಾಹ್ನ ಘಂಟೆ 7 ರಿಂದ ಶೊಭಕೃತ್ ಸಂವತ್ಸರದ ಅಧಿಕ ಮಾಸದ ಅಧಿಕ ಶ್ರಾವಣ ಶುಕ್ಲ ಪಕ್ಷ ಚತುರ್ಥಿ, ಶನಿವಾರದಂದು ಶ್ರೀ ಪುರುಷೋತ್ತಮ ಯಾಗವನ್ನು ನಡೆಸಲು ತೀರ್ಮಾನಿಸಲಾಗಿದೆ.
ಪುರುಷೋತ್ತಮ ಮಾಸದ ನಿಮಿತ್ತವಾಗಿ ಮಾಡುವ ವ್ರತನಿಯಮ, ಪೂಜಾನುಷ್ಠಾನ,ಯಾಗ ಧರ್ಮಗಳಿಗೆ ಪುರುಷೋತ್ತಮ ಸ್ವರೂಪಿಯಾಗಿರುವ ಯತಿಗಳ ಸಾನಿಧ್ಯದಲ್ಲಿ ಸಂಪನ್ನಗೊಳ್ಳುವ ಸೇವೆಗಳಿಗೆ ವಿಶೇಷ ಮತ್ತು ಅಧಿಕ ಫಲಗಳು ಇವೆ. ಪುರುಷೋತ್ತಮ ಯಾಗವು 108 ದಂಪತಿ ಪೂಜೆ, ವಾಯನ ದಾನ, ಅಪೂಪಾದಿ ದಾನ ಇವುಗಳೊಂದಿಗೆ ಕಾರ್ಯಕ್ರಮಗಳು ಮಹಾ ಸನ್ನಿಧಾನಂಗಳವರ ದಿವ್ಯ ಸನ್ನಿಧಿಯಲ್ಲಿ ಸಂಪನ್ನಗೊಳ್ಳಲಿದೆ.
ಗೌರವಾಧ್ಯಕ್ಷರಾದ ಪಿ.ವಿ ಗಂಗಾಧರ ಆಚಾರ್ಯ, ಉಡುಪಿ, ಅಧ್ಯಕ್ಷರಾದ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ ಆಚಾರ್, ಕೋಶಾಧಿಕಾರಿ ಅರವಿಂದ ವೈ. ಆಚಾರ್ಯ ಬೆಳುವಾಯಿ, ಪದಾಧಿಕಾರಿಗಳು ಹಾಗೂ ಸದಸ್ಯರು ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಹಾಗೂ ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ(ರಿ) ಕಟಪಾಡಿ ಪಡುಕುತ್ಯಾರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಉಡುಪಿ : ಮಹತ್ಮಾ ಗಾಂಧಿ ಅಂತರಾಷ್ಟ್ರೀಯ ಪುರಸ್ಕಾರಕ್ಕೆ ರಾಘವೇಂದ್ರ ಪ್ರಭು ಕವಾ೯ಲು ಆಯ್ಕೆ

Posted On: 19-07-2023 05:59PM
ಉಡುಪಿ :- ಡಬ್ಲ್ಯು.ಎ.ಸಿ ಬುಕ್ ಆಫ್ ರೆಕಾಡ್೯ ಸಂಸ್ಥೆಯ ಮೂಲಕ ನೀಡಲಾಗುವ ಮಹತ್ಮಾ ಗಾಂಧಿ ಅಂತರಾಷ್ಟ್ರೀಯ ಪುರಸ್ಕಾರ ಕ್ಕೆ ರಾಘವೇಂದ್ರ ಪ್ರಭು, ಕವಾ೯ಲುರವರು ಆಯ್ಕೆಯಾಗಿದ್ದಾರೆ.
ಸಾಮಾಜಿಕ ಕಾಯ೯ ಮತ್ತು ರಕ್ತದಾನ ವಿಭಾಗದಲ್ಲಿ ಈ ಪುರಸ್ಕಾರ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ.
ವಿವಿಧ ರೀತಿಯ ಸಾಮಾಜಿಕ ಚಟುವಟಿಕೆಯ ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದು, ರಕ್ತದಾನ ವಿಭಾಗದಲ್ಲಿ ವಿಶೇಷ ಸಾಧನೆ ಮಾಡಿದ್ದು, ರೆಡ್ ಕ್ರಾಸ್ ರಾಜ್ಯ ಪುರಸ್ಕಾರವನ್ನು ಪಡೆದುಕೊಂಡಿದ್ದಾರೆ.
ಕಾಪು : ಎಲ್ಲೂರಿನ ಶ್ರೀ ಪಾಂಡುರಂಗ ಭಜನಾ ಮಂಡಳಿಯಲ್ಲಿ ವಾರ್ಷಿಕ ಭಜನಾ ಮಂಗಳೋತ್ಸವ

Posted On: 19-07-2023 05:52PM
ಕಾಪು : ಎಲ್ಲೂರು ಗ್ರಾಮದ ಶ್ರೀ ಪಾಂಡುರಂಗ ಭಜನಾ ಮಂಡಳಿಯಲ್ಲಿ ವಾರ್ಷಿಕ ಭಜನಾ ಮಂಗಳೋತ್ಸವ ವಿಜೃಂಭಣೆಯಿಂದ ನೆರವೇರಿತು.

ಶನಿವಾರ ಮುಂಜಾನೆ ಸೂರ್ಯೋದಯದ ಕಾಲ 6 ಗಂಟೆಗೆ ದೀಪ ಪ್ರಜ್ವಲನೆಯ ಮೂಲಕ ಆರಂಭಗೊಂಡ ಭಜನೆ ಮರುದಿನ ಭಾನುವಾರ 6:10 ನಿಮಿಷಕ್ಕೆ ಸಂಪನ್ನಗೊಂಡಿತು. ಭಜನಾ ಸೇವೆಯಲ್ಲಿ ಜಿಲ್ಲೆಯ 22 ಭಜನಾ ತಂಡಗಳು ಪಾಲ್ಗೊಂಡಿದ್ದವು.

ಜಾನಪದ ವಿದ್ವಾಂಸ ಕೆ ಎಲ್ ಕುಂಡಂತಾಯರು ,ಮಂಡಳಿಯ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿಗಾರ್, ಕೆ.ಲಕ್ಷ್ಮೀನಾರಾಯಣ ರಾವ್ ದಂಪತಿಗಳು, ನಿವೃತ್ತ ಪ್ರಾಚಾರ್ಯ ನಾಗರತ್ನ ರಾವ್ ದಂಪತಿಗಳು, ಕಮಲಾವತಿ ಉಡುಪಿ, ಸತೀಶ್ ಕುತ್ಯಾರ್, ಪ್ರೀತಿ ಸಂತೋಷ್ ಭಂಡಾರಿ ಕಟಪಾಡಿ, ಅರುಣ್ ಶೆಟ್ಟಿ ಕುತ್ಯಾರು, ಶ್ರೀನಿವಾಸ್ ಭಾಗವತರು, ಅರ್ಚಕ ಗುರುರಾಜ್ ರಾವ್, ವಿಎ ಸುನೀಲ್ ದೇವಾಡಿಗ ಮತ್ತಿತರ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಹೋರಾತ್ರಿ ನಡೆದ ಭಜನೆ, ಅನ್ನಸಂತರ್ಪಣೆ, ಮಾತೃ ಮಂಡಳಿಯ ಸುಮಾರು ನೂರಕ್ಕೂ ಹೆಚ್ಚು ಸದಸ್ಯರ ಕುಣಿತ ಭಜನೆಯೊಂದಿಗೆ ಸಮಾಪನೆಗೊಂಡು ತರುವಾಯ ಓಕುಳಿ ಸೇವೆ , ಅವಭೃತ ಸ್ನಾನ ಮಹಾಪೂಜೆಯೊಂದಿಗೆ ಸಂಪನ್ನಗೊಂಡಿತು.
ಬಂಟಕಲ್ಲು : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ತಾಂತ್ರಿಕ ಶಿಕ್ಷಣದ ಜೊತೆಗೆ ಇನ್ನೆರಡು ಶೈಕ್ಷಣಿಕ ಸಂಸ್ಥೆಗಳ ಕಾರ್ಯಾರಂಭ

Posted On: 19-07-2023 05:32PM
ಬಂಟಕಲ್ಲು : ಉಡುಪಿಯ ಶ್ರೀ ಸೋದೆ ವಾದಿರಾಜ ಮಠದ ಆಶ್ರಯದಲ್ಲಿ ಬಂಟಕಲ್‌ನಲ್ಲಿ ಸ್ಥಾಪಿತವಾದ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯಕ್ಕೆ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಅತೀ ಅಗತ್ಯವಾದ NAAC ನಿಂದ “ಎ” ಶ್ರೇಣಿಯ ಮಾನ್ಯತೆ ಹಾಗು ರಾಷ್ಟ್ರೀಯ ಮೌಲ್ಯಾಂಕನ ಮಂಡಳಿ (NBA)ಯಿಂದ ಮಾನ್ಯತೆ ಕೂಡಾ ದೊರೆತಿದೆ. ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ಖಾತ್ರಿಪಡಿಸುವ ಈ ಎರಡು ಮಾನ್ಯತೆ ಗಳನ್ನು ವಿದ್ಯಾಸಂಸ್ಥೆಯು ಪ್ರಾರಂಭವಾದ 9 ಮತ್ತು 11ನೇ ವರ್ಷಗಳಲ್ಲಿ ಪಡೆದಿರುವ ಕರಾವಳಿ ಕರ್ನಾಟಕದ ಪ್ರಪ್ರಥಮ ತಾಂತ್ರಿಕ ಶಿಕ್ಷಣ ಸಂಸ್ಥೆ ಎನ್ನುವ ಹೆಗ್ಗಳಿಕೆ ಈ ವಿದ್ಯಾ ಸಂಸ್ಥೆಗೆ ಸಿಕ್ಕಿರುವುದು ಹೆಮ್ಮೆಯ ವಿಷಯ.
.png)
ಇದೀಗ 2023-24 ಶೈಕ್ಷಣಿಕ ವರ್ಷದಿಂದ ಉಡುಪಿ ಸುತ್ತಮುತ್ತಲಿನ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅತೀ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದೊಂದಿಗೆ ಶ್ರೀ ಸೋದೆ ವಾದಿರಾಜ ಮಠದ ಆಡಳಿತಕ್ಕೆ ಒಳಪಟ್ಟ ಶ್ರೀ ವಿಷ್ಣುಮೂರ್ತಿ ಹಯವದನ ಸ್ವಾಮಿ ಎಜ್ಯುಕೇಶನ್ ಸೊಸೈಟಿಯ ಆಶ್ರಯಲ್ಲಿ ನಿರಾಮಯ ಕಾಲೇಜ್ ಆಫ್ ನರ್ಸಿಂಗ್‌ನಲ್ಲಿ 4 ವರ್ಷದ ಬಿ.ಎಸ್ಸಿ ನರ್ಸಿಂಗ್ ಹಾಗೂ ನಿರಾಮಯ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್‌ನಲ್ಲಿ ಅನಸ್ತೀಶಿಯ ಆಪರೇಶನ್ ಥಿಯೇಟರ್ ಟೆಕ್ನಾಲಜಿ, ಮೆಡಿಕಲ್ ಲ್ಯಾಬ್ ಟೆಕ್ನಾಲಜಿ ಹಾಗೂ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ, ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ ಎಂಬ ಮೂರು ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್‌ಗಳ ಜೊತೆಗೆ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಮಾರ್ಕೆಟಿಂಗ್ ಹಾಗೂ ಫೈನಾನ್ಸ್ ವಿಶೇಷತೆಯೊಂದಿಗೆ 2 ವರ್ಷದ ಪದವಿ ಪ್ರಾರಂಭಿಸಲು ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯ, ಬೆಳಗಾವಿ ವಿಶ್ವವಿದ್ಯಾನಿಲಯದ ಅನುಮೋದನೆ, ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ಸರಕಾರದಿಂದ ಅನುಮತಿ ದೊರೆತಿರುತ್ತದೆ. ಈ ಎಲ್ಲಾ ಕೋರ್ಸ್‌ಗಳು ಬಂಟಕಲ್ಲಿನ ಸುಂದರ ವಾತಾವರಣದಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ ಕಾರ್ಯಾರಂಭ ಮಾಡಲಿದೆ. ಈ ಎಲ್ಲಾ ಸಾಧನೆಗಳು ಪೂಜ್ಯ ಶ್ರೀ ಸೋದೆ ವಾದಿರಾಜ ಮಠದ ಶ್ರೀಪಾದರ ಕನಸಾದ ಮಧ್ವ ವಿಶ್ವವಿದ್ಯಾನಿಲಯಕ್ಕೆ ಕನಸಿಗೆ ಮತ್ತೊಂದು ಮೆಟ್ಟಿಲಾಗಿದೆ ಎಂದು ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರತ್ನಕುಮಾರ್ ಬುಧವಾರ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
.png)
ಎಮ್‌ಬಿಎ 2 ವರ್ಷದ ಪದವಿಯಾಗಿದೆ. ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾನಿಯದಿಂದ 3 ವರ್ಷದ ಪದವಿ ಪೂರ್ಣಗೊಳಿಸಿ ಶೇಕಡಾ 50% ಅಂಕಗಳೊಂದಿಗೆ ಹಾಗೂ KMAT/PGCET/CAT ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ಅಭ್ಯರ್ಥಿಗಳು ಪ್ರವೇಶ ಪಡೆಯಬಹುದು. ಬಿಎಸ್ಸಿ ನರ್ಸಿಂಗ್ 4 ವರ್ಷದ ಕೋರ್ಸ್ ಆಗಿದ್ದು (3 ವರ್ಷ ಮತ್ತು 1 ವರ್ಷ ಇಂಟರ್ನ್‌ಶಿಪ್) ಅಭ್ಯರ್ಥಿಗಳು ಸಂಪೂರ್ಣವಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ಪ್ರವೇಶ ಪಡೆಯಬಹುದು. ಅಲೈಡ್ ಹೆಲ್ತ್ ಸೈನ್ಸ್ ಇದು ಕೂಡ 4 ವರ್ಷದ ಕೋರ್ಸ್ ಆಗಿದ್ದು (3 ವರ್ಷ ಮತ್ತು 1 ವರ್ಷ ಇಂಟರ್ನ್‌ಶಿಪ್) ಅಭ್ಯರ್ಥಿಗಳು ವಿಶ್ವವಿದ್ಯಾನಿಯದ ಮಾನದ೦ಡದ ಪ್ರಕಾರ ದ್ವಿತೀಯ ಪಿಯುಸಿಯಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ಒಟ್ಟು ಕನಿಷ್ಠ 50% ಅಂಕವನ್ನು ಪಡೆದಿರಬೇಕು. ಸಾಮಾನ್ಯ ಪ್ರವೇಶ ಪರೀಕ್ಷೆಯ ಅವಶ್ಯಕತೆ ಇರುವುದಿಲ್ಲ
ಈ ಪತ್ರಿಕಾಗೋಷ್ಠಿಯಲ್ಲಿ ವಿದ್ಯಾಸಂಸ್ಥೆಗಳ ಕಾರ್ಯದರ್ಶಿಗಳಾದ ರತ್ನಕುಮಾರ್, ಆಡಳಿತ ಮಂಡಳಿಯ ಸದಸ್ಯರಾದ ಹರೀಶ್ ಬೆಳ್ಮಣ್, ನರ್ಸಿಂಗ್ ಕಾಲೇಜಿನ ನಿಯೋಜಿತ ಪ್ರಾಂಶುಪಾಲೆಯಾದ ಡಾ. ಪ್ಲೇವಿಯಾ ಕ್ಯಾಸ್ಟೆಲಿನೊ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿನ ನಿಯೋಜಿತ ಪ್ರಾಂಶುಪಾಲರಾದ ಡಾ. ನವೀನ್ ಬಲ್ಲಾಳ್, ಶ್ರೀ ಮಧ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್, ಆಡಳಿತಾಧಿಕಾರಿ ವಿದ್ಯಾಭಟ್ ಹಾಜರಿದ್ದರು.
ಕಾಪು : ಕುತ್ಯಾರಿನ ಗ್ರಾಮ one ಸೇವಾ ಕೇಂದ್ರದಲ್ಲಿ ಗೃಹಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಕೆಗೆ ಅವಕಾಶ

Posted On: 19-07-2023 02:18PM
ಕಾಪು : ಕುತ್ಯಾರು, ಕಳತ್ತೂರು ಗ್ರಾಮದ ಜನತೆಗೆ ಸರ್ಕಾರದ ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಗೆ ಶ್ರೀ ಸಾಯಿ ಕಂಪ್ಯೂಟರ್ ಗ್ರಾಮ one ಸೇವಾ ಕೇಂದ್ರದ ಕುತ್ಯಾರಿನ ಕಚೇರಿಯಲ್ಲಿ ಲಭ್ಯವಿದೆ. ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕವಿರುವುದಿಲ್ಲ.

ಕಚೇರಿ ವಿಳಾಸ : ಸಾಯಿ ಕಂಪ್ಯೂಟರ್ ಗ್ರಾಮ one ಸೇವಾ ಕೇಂದ್ರ (ಗ್ರಾಮ ಪಂಚಾಯತಿ ಕುತ್ಯಾರಿನ ಹತ್ತಿರ) ಐಡ ಕಾಂಪ್ಲೆಕ್ಸ್, ಶಾಂತಿ ಗುಡ್ಡೆ ಬಸ್ಟ್ಯಂಡ್ ಬಳಿ, 108 ಕಳತ್ತೂರು ಕಾಪು ತಾಲೂಕು ಉಡುಪಿ ಜಿಲ್ಲೆ 574106 ಮೊಬೈಲ್ :9606764039

ಜುಲೈ 22 : ದೊಂದಿ ಬೆಳಕಿನ ಕೊರಗಜ್ಜ ದೈವದ ನೇಮೋತ್ಸವ

Posted On: 17-07-2023 07:34PM
ಉಡುಪಿ : ಇಲ್ಲಿನ ವುಡ್‌ಲ್ಯಾಂಡ್ಸ್ ಹೋಟೆಲ್ ಹತ್ತಿರದ ಬೊಬ್ಬರ್ಯಕಟ್ಟೆ ಶ್ರೀ ಬೊಬ್ಬರ್ಯ, ಕಾಂತೇರಿ ಜುಮಾದಿ ಹಾಗೂ ಕಲ್ಕುಡ, ಕೊರಗಜ್ಜ ಪರಿವಾರ ದೈವಗಳ ದೈವಸ್ಥಾನದಲ್ಲಿ ಬೊಬ್ಬರ್ಯ ಯುವ ಸೇವಾ ಸಮಿತಿ ಉಡುಪಿ ಸುಪ್ರಸಾದ್ ಶೆಟ್ಟಿ ಅಭಿಮಾನಿ ಬಳಗ ಉಡುಪಿ ಹಾಗೂ ಮಮತಾ ಪಿ. ಶೆಟ್ಟಿ ಅಭಿಮಾನಿ ಬಳಗ ಉಡುಪಿ ಇವರ ವತಿಯಿಂದ ದೊಂದಿ ಬೆಳಕಿನ ಕೊರಗಜ್ಜ ದೈವದ ನೇಮೋತ್ಸವ ಜುಲೈ 22, ಶನಿವಾರ ಸಂಜೆ 7 ಗಂಟೆಗೆ ಜರಗಲಿದೆ.
ನೇಮೋತ್ಸವದ ನೇರ ಪ್ರಸಾರವವು ನಮ್ಮ ಉಡುಪಿ ಟಿ.ವಿ. ಚಾನೆಲ್ ಹಾಗೂ ಫೇಸ್‌ಬುಕ್ ಪೇಜ್‌ನಲ್ಲಿ ಪ್ರಸಾರವಾಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.