Updated News From Kaup

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ಡಾ| ದೇವಿ ಪ್ರಸಾದ್ ಶೆಟ್ಟಿ ಬೆಳಪು ರವರಿಗೆ ಸನ್ಮಾನ

Posted On: 27-05-2025 11:49AM

ಉಡುಪಿ : ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ನೂತನವಾಗಿ ಆಯ್ಕೆಯಾದ ಕರ್ನಾಟಕ ರಾಜ್ಯ ಹಾಲು ಮಹಾ ಮಂಡಲ ಬೆಂಗಳೂರು ಹಾಗು ದಕ್ಷಿಣ ಕನ್ನಡ ಒಕ್ಕೂಟ ನಿಗಮದ ನಿರ್ದೇಶಕರಾಗಿ ಆಯ್ಕೆಯಾದ ಡಾ| ದೇವಿ ಪ್ರಸಾದ್ ಶೆಟ್ಟಿ ಬೆಳಪು ರವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಶಾಖಾ ಮುಖ್ಯಸ್ಥರಾದ ಹಫೀಝ್ ರೆಹಮಾನ್, ಉಡುಪಿ ಸರ್ಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಅಧ್ಯಾಪಕರಾದ ದಯಾನಂದ್, ಮಾರುಕಟ್ಟೆ ವ್ಯವಸ್ಥಾಪಕ ತಂಝೀಮ್ ಶಿರ್ವ, ವಿಘ್ನೇಶ್ ಉಪಸ್ಥಿತರಿದ್ದರು.

ಚಿಕಿತ್ಸೆಗೆ ಸಹಾಯದ ನಿರೀಕ್ಷೆಯಲ್ಲಿ ಕಾಪು ಮಲ್ಲಾರು ಗ್ರಾಮದ ಮಾಸ್ಟರ್ ನಿಶಾಂತ್ ಕುಟುಂಬ

Posted On: 26-05-2025 10:03AM

ಕಾಪು : ಇಲ್ಲಿನ ಮಲ್ಲಾರು ಗ್ರಾಮದಲ್ಲಿ ವಾಸವಾಗಿರುವ ಶಿವ ಮತ್ತು ಸುನೀತಾ ದಂಪತಿಗಳ 2 ವರ್ಷದ ಮಗು (Hspt No 4015051) Diagnosed with Chronic Kidney Disease ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಮಗುವನ್ನು ಮಣಿಪಾಲದ ಕೆ ಎಂ ಸಿ ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾರೆ. ಈ ಮಗುವಿಗೆ ತಕ್ಷಣದಿಂದ ಪೆರಿಟೋನಿಯಲ್‌ ಡಯಾಲಿಸಿಸ್‌ನ ಅಗತ್ಯವಿರುತ್ತದೆ. ಈ ಕುಟುಂಬವು ಆರ್ಥಿಕವಾಗಿ ಹಿಂದುಳಿದವರಾಗಿದ್ದು ತೀರಾ ಬಡವರಾಗಿದ್ದಾರೆ. ಕೂಲಿ ಕೆಲಸ ಮಾಡಿ ತಮ್ಮ ಜೀವನವನ್ನು ಸಾಗಿಸುತ್ತಿರುವ ಕುಟುಂಬವು ಮಗುವಿನ ಚಿಕಿತ್ಸೆಯನ್ನು ನಡೆಸಲು ಅಶಕ್ತವಾಗಿರುತ್ತದೆ. ಕರುಣೆಯುಳ್ಳ ನಿಮ್ಮೊಂದಿಗೆ ಮಗುವಿನ ಚಿಕಿತ್ಸೆಗಾಗಿ ಈ ಕುಟುಂಬವು ಸಹಾಯವನ್ನು ಯಾಚಿಸುತ್ತಿದೆ

ಈ ಮಗುವಿಗೆ ಪೆರಿಟೋನಿಯಲ್‌ ಡಯಾಲಿಸಿಸ್ ಚಿಕಿತ್ಸೆಯನ್ನು ನಡೆಸಲು ವರ್ಷಕ್ಕೆ 8 ಲಕ್ಷ ರೂಪಾಯಿಗಳವರೆಗೆ ತಗುಲಬಹುದು ಹಾಗೂ 3 ವರ್ಷಗಳ ತನಕ ಈ ಡಯಾಲಿಸೀಸ್ ಚಿಕಿತ್ಸೆಯನ್ನು ನೀಡಿ ತದ ನಂತರ kidney transplant ಶಸ್ತ್ರ ಚಿಕಿತ್ಸೆಯನ್ನು ನಡೆಸಬೇಕಾಗಿದೆ ಎಂದು ಮಣಿಪಾಲ ಆಸ್ಪತ್ರೆಯ ವೈದ್ಯರು ತಿಳಿಸಿರುತ್ತಾರೆ.

ನೀವು ನೀಡುವ ಒಂದೊಂದು ರೂಪಾಯಿಯೂ ಈ ಮಗುವಿನ ಪ್ರಾಣ ಉಳಿಸಲು ಸಹಕಾರಿಯಾಗಲಿದೆ. ಜಾತಿ, ಧರ್ಮ ನೋಡದೆ ಈ ಸಂದೇಶವನ್ನು ನೋಡುತ್ತಿರುವ ಪ್ರತಿಯೊಬ್ಬರೂ ಹಾಗೂ ಸಂಘ ಸಂಸ್ಥೆಗಳು ನಿಮ್ಮಿಂದಾಗುವ ಸಹಾಯ ಸಹಕಾರವನ್ನು ಈ ಮಗುವಿನ ಚಿಕಿತ್ಸೆಗೆ ನೀಡಬೇಕಾಗಿ ವಿನಂತಿಸಿದ್ದಾರೆ.

For More Information Contact : 9900644932 NAME: SUNITHA AC NO: 44063108925 IFSC CODE:SBIN0040151 BANK NAME: STATE BANK OF INDIA BRANCH NAME: SALMAR KARKALA

ಜೂ.1 : ಸಾಲ್ಮರ ಆಯುರ್ವೇದ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ

Posted On: 25-05-2025 06:03PM

ಶಿರ್ವ : ಶಂಕರಪುರ ಸಮೀಪದ ಸಾಲ್ಮರ ಕೃಷ್ಣವೇಣಿ ಆಯುರ್ವೇದ ಚಿಕಿತ್ಸಾ ಮತ್ತು ಸ್ವಾಸ್ಥ್ಯ ಕೇಂದ್ರ, ಸಾಲ್ಮರ ಗೋವಿಂದ ಭಟ್ ಫ್ಯಾಮಿಲಿ ಟ್ರಸ್ಟ್ ಮತ್ತು ಇನ್ನಂಜೆ ಯುವಕ ಮಂಡಲ (ರಿ) ಇವರ ಸಹಯೋಗದಲ್ಲಿ ಜೂನ್.1, ರವಿವಾರ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.30 ರ ಪರ್ಯಂತ ಆಸ್ಪತ್ರೆಯ ನುರಿತ ವೈದ್ಯರಿಂದ "ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ" ಸಾಲ್ಮರ ಆಯುರ್ವೇದ ಕೇಂದ್ರದಲ್ಲಿ ಜರುಗಲಿದೆ.

ಕಾರ್ಯಕ್ರಮವನ್ನು ಪಡುಬಿದ್ರಿ ಅಂಚನ್ ಆಯುರ್ವೇದ ಇಂಡಸ್ಟ್ರೀಸ್ ಇದರ ಆಡಳಿತ ನಿರ್ದೇಶಕರಾದ ಡಾ.ಟಿ.ನಾರಾಯಣ ಅಂಚನ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಮುನಿಯಾಲು ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಇಲ್ಲಿನ ಪ್ರಾಂಶುಪಾಲ ಡಾ.ಸತ್ಯನಾರಾಯಣ, ಇನ್ನಂಜೆ ಯುವಕ ಮಂಡಲದ ಅಧ್ಯಕ್ಷ ಮಧುಸೂದನ್ ಆಚಾರ್ಯ ಭಾಗವಹಿಸುವರು.

ಅಧ್ಯಕ್ಷತೆಯನ್ನು ಸಾಲ್ಮರ ಗೋವಿಂದ ಭಟ್ ಫ್ಯಾಮಿಲಿ ಟ್ರಸ್ಟ್ ಇದರ ಟ್ರಸ್ಟಿಗಳಾದ ಸಿಎ. ಹರಿದಾಸ್ ಭಟ್ ವಹಿಸುವರು.

ಶಿಬಿರದಲ್ಲಿ ಎಲ್ಲಾ ವಿಧಧ ಕಾಯಿಲೆಗಳಿಗೆ, ವಿಶೇಷವಾಗಿ ಸಂಧಿವಾತ, ಆಮವಾತ, ಬೆನ್ನು ನೋವು, ನರದೌರ್ಬಲ್ಯ, ತಲೆನೋವು, ಶೀತ,ಕೆಮ್ಮು,ಉಬ್ಬಸ, ತುರಿಕೆ, ಕಜ್ಜಿ, ಮುಂತಾದ ಚರ್ಮರೋಗಗಳು, ಗ್ಯಾಸ್ಟ್ರಿಕ್‌ ತೊಂದರೆ, ಮಲಬದ್ಧತೆ, ಮೂಲವ್ಯಾಧಿ, ಡಯಾಬಿಟಿಸ್, ಮಕ್ಕಳ ಬೆಳವಣಿಕೆ ಸಂಬಂಧಿ ಕಾಯಿಲೆಗಳು, ಹೆಂಗಸರ ಮುಟ್ಟು ಸಂಬಂಧಿ ಕಾಯಿಲೆಗಳಿಗೆ ಉಚಿತ ತಪಾಸಣೆ ಮತ್ತು ಔಷಧಿಗಳನ್ನು ನೀಡಲಾಗುವುದು. ರಕ್ತಹೀನತೆ, ಮಧುಮೇಹ ರೋಗಕ್ಕೆ ಉಚಿತ ರಕ್ತ ತಪಾಸಣೆ ನಡೆಸಲಾಗುವುದು. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಶಿಬಿರ ಸಂಘಟಕರ ಪ್ರಕಟನೆ ತಿಳಿಸಿದೆ.

ಅಹಿಂಸಾ ಸಂದೇಶಕ್ಕಾಗಿ ಯುವಕರಿಬ್ಬರ 12 ದಿನ, ಮೂರು ರಾಜ್ಯಗಳು, ಮೂರು ಸಾವಿರ ಕಿ.ಮೀ. ಬೈಕ್ ರ್‍ಯಾಲಿಗೆ ಚಾಲನೆ

Posted On: 25-05-2025 03:04PM

ಕಾಪು : ಕೌಟುಂಬಿಕ ಹಾಗೂ ಸಾಮಾಜಿಕ ಹಿಂಸೆ ಮತ್ತು ದೌರ್ಜನ್ಯದ ವಿರುದ್ಧ ಜನರನ್ನು ಎಚ್ಚರಿಸುವುದಕ್ಕಾಗಿ ವನಸುಮ ಟ್ರಸ್ಟ್ ಕಟಪಾಡಿ ವತಿಯಿಂದ ಯುವಕರಾದ ದೃಶಾ ಕೊಡಗು ಮತ್ತು ಉಜ್ವಲ್ ಕಾಮತ್ ಇವರಿಂದ 12 ದಿನಗಳ, ಮೂರು ರಾಜ್ಯಗಳಲ್ಲಿ, ಮೂರು ಸಾವಿರ ಕಿಲೋಮೀಟರ್ ಬೈಕ್ ರ್‍ಯಾಲಿಗೆ ಭಾನುವಾರ ಬೆಳಿಗ್ಗೆ ಕಾಪು ಹೊಸ ಮಾರಿಗುಡಿ ಆವರಣದಲ್ಲಿ ಕಾಪು ಕ್ಷೇತ್ರದ ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್ ಚಾಲನೆ ನೀಡಿದರು.

ಮೊದಲಿಗೆ ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನದ ಪ್ರಧಾನ ಅರ್ಚಕ ಕಲ್ಯ ಶ್ರೀನಿವಾಸ ತಂತ್ರಿಯವರು ವಿಷೇಶ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಿದರು. ಕಾಪು ಹೊಸ ಮಾರಿಗುಡಿಯ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ವಾಸುದೇವ ಶೆಟ್ಟಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ ಶುಭ ಹಾರೈಸಿದರು.

ವನಸುಮ ಟ್ರಸ್ಟ್ ಕಟಪಾಡಿ ಅಧ್ಯಕ್ಷ ಬಾಸುಮ ಕೊಡಗು ಮಾತನಾಡಿ, ದೃಶಾ ಕೊಡಗು ಮತ್ತು ಉಜ್ವಲ್ ಕಾಮತ್ ಇವರು 12 ದಿನಗಳ ಕಾಲ ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯದಲ್ಲಿ ಕೌಟುಂಬಿಕ ಮತ್ತು ಸಾಮಾಜಿಕ ಹಿಂಸೆ ಮತ್ತು ದೌರ್ಜನ್ಯದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಕರಪತ್ರಗಳನ್ನು ವಿತರಿಸಲಿದ್ದಾರೆ. ತಜ್ಞರಿಂದ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಮಾಡುವ ಮೂಲಕವೂ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದರು.

ಈ ಸಂದರ್ಭ ವನಸುಮ ಟ್ರಸ್ಟ್ ನ ಕಾವ್ಯವಾಣಿ ಕೊಡಗು, ಭಾಸ್ಕರ್ ಉದ್ಯಾವರ, ಜೇಸಿ ಸದಸ್ಯರು ಉಪಸ್ಥಿತರಿದ್ದರು. ಜೇಸಿಐ ಉಡುಪಿ ಸಿಟಿ ಮತ್ತು ಜೇಸೀಐ ಕಟಪಾಡಿ ಈ ರ್‍ಯಾಲಿಯ ಸಂಘಟನೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದು, ಹಿರಿಯ ಜೇಸಿ ಬಾಸುಮ ಕೊಡಗು ಮಾರ್ಗದರ್ಶನದಲ್ಲಿ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ 50 ಕ್ಕೂ ಹೆಚ್ಚು ಜೇಸೀ ಘಟಕಗಳು ಇದರಲ್ಲಿ ಭಾಗಿಯಾಗುತ್ತಿದ್ದಾರೆ.

ಮೀನುಗಾರರ ಪ್ರಾಥಮಿಕ ಸಹಕಾರ ಸಂಘ ಎರ್ಮಾಳು ಬಡಾ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Posted On: 25-05-2025 02:47PM

ಪಡುಬಿದ್ರಿ : ಬಡಾ ಎರ್ಮಾಳು ಮೀನುಗಾರರ ಪ್ರಾಥಮಿಕ ಸಹಕಾರ ಸಂಘ (ನಿ.) ಎರ್ಮಾಳು ಬಡಾ, ಎ ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕುಂಟಿಕಾನ ಮಂಗಳೂರು, ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಕುಂಟಿಕಾನ ಮಂಗಳೂರು, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಜಂಟಿ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಸರಕಾರಿ ಹಿ.ಪ್ರಾ.ಶಾಲೆ ಎರ್ಮಾಳು ಬಡಾ ಇಲ್ಲಿ ಜರಗಿತು.

ಶಿಬಿರವನ್ನು ದ.ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಬಡಾ ಎರ್ಮಾಳು ಮೀನುಗಾರರ ಪ್ರಾಥಮಿಕ ಸಹಕಾರ ಸಂಘವು ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದ ಜೊತೆಗೆ ಆರೋಗ್ಯದ ಬಗೆಯೂ ಕಾಳಜಿ ವಹಿಸಿ ಆರೋಗ್ಯ ಶಿಬಿರ ನಡೆಸುತ್ತಿರುವುದು ಶ್ಲಾಘನೀಯ. ಜನರು ಆರೋಗ್ಯ ಶಿಬಿರಗಳ ಸದುಪಯೋಗಪಡಿಸಿಕೊಂಡು ಆರೋಗ್ಯದ ಬಗೆಗೆ ಜಾಗೃತರಾಗಬೇಕು ಎಂದು ಹೇಳಿದರು.

ಉದ್ಯಮಿ ಶೇಖರ ಆರ್ ಸಾಲ್ಯಾನ್, ಶಿಬಿರದ ಉಸ್ತವಾರಿ ಎ.ಜೆ. ಆಸ್ಪತ್ರೆ ವೈದ್ಯ ಡಾ. ಮಯೂರ್ ರೈ, ಡಾ.ಸಂಸ್ಕೃತಿ ಶೆಟ್ಟಿ, ಡಾ. ಆರತಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಡಾ ಎರ್ಮಾಳು ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷರಾದ ದಿನೇಶ್ ಎರ್ಮಾಳು ವಹಿಸಿದ್ದರು. ಕಾರ್ಯಕ್ರಮವನ್ನು ಪ್ರಿಯಾಂಕ ಸಂತೋಷ್ ನಿರೂಪಿಸಿ, ವಂದಿಸಿದರು.

ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

Posted On: 24-05-2025 04:45PM

ಕಾಪು : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ವತಿಯಿಂದ ವರ್ಷಂಪ್ರತಿಯಂತೆ ಕಾಪು ಕಂದಾಯ ತಾಲೂಕು ವ್ಯಾಪ್ತಿಯಲ್ಲಿ ಬರುವ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ/ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ಪ್ರಥಮ ಭಾಷೆ ಕನ್ನಡ ಪಾಠದಲ್ಲಿ ಪೂರ್ಣ ಅಂಕ(125/125)ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರದೊಂದಿಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು.

ಅರ್ಹ ವಿದ್ಯಾರ್ಥಿಗಳು ಆಯಾ ಶಾಲಾ ಮುಖ್ಯ ಶಿಕ್ಷಕರು/ಪ್ರಾಂಶುಪಾಲರ ದೃಢೀಕರಣ ಪತ್ರದೊಂದಿಗೆ ಅಂಕಪಟ್ಟಿಯ ನಕಲು ಪ್ರತಿಯನ್ನು (ಕೃಷ್ಣಕುಮಾರ್ ರಾವ್ ಮಟ್ಟು, ಸಹಕಾರ್ಯದರ್ಶಿಗಳು, ಕಸಾಪ ಕಾಪು ತಾಲೂಕು ಘಟಕ, ಮಟ್ಟು ದೇವಸ್ಥಾನದ ಬಳಿ. ಅಂಚೆ ಕಟಪಾಡಿ -574105. ಮೊ. 94817 60611) ಜೂ.5ರೊಗೆ ಕಳುಹಿಸಬೇಕಾಗಿ ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಾಪು ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಪುನಶ್ಚೇತನ ಕಾರ್ಯಗಾರ

Posted On: 24-05-2025 04:35PM

ಕಾಪು : ಇಲ್ಲಿನ ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕ - ಶಿಕ್ಷಕೇತರ ವೃಂದಕ್ಕೆ ಪುನಶ್ಚೇತನ ಕಾರ್ಯಗಾರವನ್ನು ಶನಿವಾರ ಹಮ್ಮಿಕೊಳ್ಳಲಾಯಿತು.

ಸಮಾರಂಭದ ಉದ್ಘಾಟನೆಯನ್ನು ಸಂಚಾಲಕರಾದ ಡಾ|| ಕೆ. ಪ್ರಶಾಂತ್ ಶೆಟ್ಟಿಯವರು ನೆರವೇರಿಸಿ, ಶಿಕ್ಷಕರು ಪ್ರತಿವರ್ಷ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ತಮ್ಮನ್ನು ಪರಿಪೂರ್ಣಗೊಳಿಸುವುದರ ಜೊತೆಗೆ, ವಿದ್ಯಾರ್ಥಿಗಳ ಪ್ರತಿಭೆಯನ್ನು ಅರಳಿಸಲು ಸಹಕಾರಿಯಾಗುತ್ತದೆ ಎಂಬ ಸಂದೇಶವನ್ನು ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಉಡುಪಿ ಶಾರದಾ ರೆಸಿಡೆನ್ಸಿಯಲ್ ಕಾಲೇಜಿನ ಪ್ರಾಂಶುಪಾಲರಾದ ವಿನ್ಸೆಂಟ್ ಡಿ ಕೋಸ್ಟಾ ಮಾತನಾಡಿ, ಪ್ರತಿಯೊಬ್ಬ ಶಿಕ್ಷಕರು ಕೂಡಾ ಸಂಪನ್ಮೂಲ ವ್ಯಕ್ತಿಗಳೇ. ಆದರೆ ಅವರು ಪ್ರತಿನಿತ್ಯ ಕಲಿಕೆ ಮತ್ತು ಕಲಿಸುವಿಕೆಯಲ್ಲಿ ತೊಡಗಿಸಿಕೊಂಡರೆ ತಮ್ಮ ಜ್ಞಾನವೃದ್ಧಿಯನ್ನು ಮಾಡುವುದರ ಜೊತೆಗೆ ಮಕ್ಕಳ ಸರ್ವಾಂಗೀಣ ಉನ್ನತಿ ಮಾಡಬಹುದು ಹಾಗೂ ವಿದ್ಯಾರ್ಥಿಗಳಲ್ಲಿ ವಿಶಿಷ್ಟ ಬದಲಾವಣೆ ಸಾಧ್ಯ ಎಂಬ ಕಿವಿಮಾತನ್ನು ಹೇಳಿದರು.

ಸಮಾರಂಭದಲ್ಲಿ ಆಡಳಿತಾಧಿಕಾರಿ ಆಲ್ಬನ್ ರೊಡ್ರಿಗಸ್, ಪ್ರಾಥಮಿಕ ವಿಭಾಗದ ಮುಖ್ಯಸ್ಥ ಗೇಬ್ರಿಯಲ್ ಫ್ರೇಂಕಿ ಮಸ್ಕರೇನ್ಹಸ್, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ರಾಜಲಕ್ಷ್ಮೀ ರಾವ್ ಉಪಸ್ಥಿತರಿದ್ದರು. ಪ್ರಾಂಶುಪಾಲ ನೀಲಾನಂದ್ ನಾಯ್ಕ್ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ಶಿವಣ್ಣ ಬಾಯಾರ್ ವಂದಿಸಿದರು. ಈ ಕಾರ್ಯಕ್ರಮವನ್ನು ಶಿಕ್ಷಕ ಉದಯ ಕುಮಾರ್ ನಿರೂಪಿಸಿದರು.

ಕಾಪು : ಅಹಿಂಸಾ ಸಂದೇಶಕ್ಕಾಗಿ ಬೈಕ್ ರ್‍ಯಾಲಿ

Posted On: 23-05-2025 12:29PM

ಕಾಪು : ಕೌಟುಂಬಿಕ ಹಾಗೂ ಸಾಮಾಜಿಕ ಹಿಂಸೆ ಮತ್ತು ದೌರ್ಜನ್ಯದ ವಿರುದ್ಧ ಜನರನ್ನು ಎಚ್ಚರಿಸುವುದಕ್ಕಾಗಿ, 12 ದಿನಗಳ ಬೈಕ್ ರ್‍ಯಾಲಿಯನ್ನು ವನಸುಮ ಟ್ರಸ್ಟ್ ಕಟಪಾಡಿ ವತಿಯಿಂದ ಹಮ್ಮಿಕೊಳ್ಳಲಾಗಿದೆ. ದೃಶಾ ಕೊಡಗು ಮತ್ತು ಉಜ್ವಲ್ ಕಾಮತ್ ಮೂರು ರಾಜ್ಯಗಳಲ್ಲಿ ಮೂರು ಸಾವಿರ ಕಿಲೋಮೀಟರ್ ಬೈಕ್ ಮೂಲಕ ಈ ಸಂದೇಶ ಜಾಥಾವನ್ನು ಕೈಗೊಳ್ಳಲಿದ್ದಾರೆ ಎಂದು ವನಸುಮ ಟ್ರಸ್ಟ್ ಅಧ್ಯಕ್ಷರಾದ ಬಾಸುಮ ಕೊಡಗು ಹೇಳಿದರು. ಅವರು ಶುಕ್ರವಾರ ಕಾಪು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜೇಸಿಐ ಉಡುಪಿ ಸಿಟಿ ಮತ್ತು ಜೇಸೀಐ ಕಟಪಾಡಿ ಈ ರ್‍ಯಾಲಿಯ ಸಂಘಟನೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದು, ಹಿರಿಯ ಜೇಸಿ ಬಾಸುಮ ಕೊಡಗು ಮಾರ್ಗದರ್ಶನದಲ್ಲಿ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ 50 ಕ್ಕೂ ಹೆಚ್ಚು ಜೇಸೀ ಘಟಕಗಳು ಇದರಲ್ಲಿ ಭಾಗಿಯಾಗುತ್ತಿದ್ದಾರೆ.

ಎಲ್ಲಾ ಕಡೆಗಳಲ್ಲಿ ಕೌಟುಂಬಿಕ ಮತ್ತು ಸಾಮಾಜಿಕ ಹಿಂಸೆ ಮತ್ತು ದೌರ್ಜನ್ಯದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಕರಪತ್ರಗಳನ್ನು ವಿತರಿಸಲಾಗುತ್ತದೆ ಮತ್ತು ತಜ್ಞರಿಂದ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.

ಈ ರ್‍ಯಾಲಿಗೆ ಮೇ 25 ರಂದು ಬೆಳಿಗ್ಗೆ 7.30 ಕ್ಕೆ ಕಾಪು ಹೊಸ ಮಾರಿಗುಡಿ ಆವರಣದಲ್ಲಿ ಚಾಲನೆ ನೀಡಲಾಗುತ್ತದೆ. ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ವಾಸುದೇವ ಶೆಟ್ಟಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಮಾಜಿ ಶಾಸಕರಾದ ವಿನಯಕುಮಾರ್ ಸೊರಕೆ, ಲಾಲಾಜಿ ಮೆಂಡನ್, ಯೋಗೀಶ್ ಶೆಟ್ಟಿ ಹಾಗೂ ಕಾಪು ಪೋಲಿಸ್ ಸಬ್ ಇನ್ಸ್ಪೆಕ್ಟರ್ ತೇಜಸ್ವಿ ಇವರುಗಳು ಉಪಸ್ಥಿತರಿದ್ದು ರ್‍ಯಾಲಿಗೆ ಚಾಲನೆ ನೀಡಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ವನಸುಮ ಟ್ರಸ್ಟ್ ಕಾವ್ಯವಾಣಿ ಕೊಡಗು, ಭಾಸ್ಕರ್ ಉದ್ಯಾವರ ಮತ್ತಿತರರು ಉಪಸ್ಥಿತರಿದ್ದರು.

ಕಾಪು ಶ್ರೀ ಹೊಸ ಮಾರಿಗುಡಿಗೆ ವಿವಿಧ ಕ್ಷೇತ್ರಗಳ ಗಣ್ಯರ ಭೇಟಿ

Posted On: 23-05-2025 07:09AM

ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಪ್ರತಿನಿತ್ಯ ಹಲವಾರು ಅಧಿಕಾರಿ ವರ್ಗದವರು, ನ್ಯಾಯಾದೀಶರು, ವಕೀಲರು, ಪೊಲೀಸ್ ಅಧಿಕಾರಿಗಳು, ಸಿನಿಮಾ ನಟರು, ನಟಿಯರು ಸೇರಿದಂತೆ ರಾಜಕೀಯ ಧುರಿಣರು ಆಗಮಿಸುತ್ತಿದ್ದಾರೆ.

ಇದೀಗ ಕಳೆದ ಎರಡು ದಿನಗಳಿಂದ ಮಹಾರಾಷ್ಟ್ರ ರಾಜಕೀಯ ಧುರೀಣರ ದಂಡು ಕಾಪು ಮಾರಿಯಮ್ಮನೆಡೆಗೆ ಸಾಗಿ ಬಂದಿದೆ. ಮಹಾರಾಷ್ಟ್ರ ದಿಂಡೋಷಿ ಕ್ಷೇತ್ರದ ಶಾಸಕ ಮತ್ತು ಮುಂಬೈನ ಮಾಜಿ ಮೇಯರ್ ಸುನಿಲ್ ಪ್ರಭು, ಮಾಹಿಮ್ ಕ್ಷೇತ್ರದ ಶಾಸಕ ಮಹೇಶ್ ಸಾವಂತ್ ಮತ್ತು ಉದ್ಯಮಿ ಮಯೂರೇಶ್ ಪಾಟೀಲ್ ಅವರು ದೇವಳಕ್ಕೆ ಭೇಟಿ ನೀಡಿ ದೇವಳದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ ಮತ್ತು ಕಾರ್ಯಾಧ್ಯಕ್ಷ ಹಾಗೂ ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಮಕ್ಷಮದಲ್ಲಿ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಅವರು ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿ ಗೌರವಿಸಿದರು.

ಅದೇ ರೀತಿ ಮಹಾರಾಷ್ಟ್ರದ ಬಾಂದ್ರ ಕ್ಷೇತ್ರದ ವಿಧಾನ ಪರಿಷತ್ತಿನ ಸದಸ್ಯ ಮತ್ತು ಮಾಜಿ ಸಾರಿಗೆ ಸಚಿವ ಅನಿಲ್ ಪರಬ್, ಬಿ.ಈ. ಎಸ್. ಟಿ ಮಾಜಿ ಅಧ್ಯಕ್ಷ ಮತ್ತು ವರ್ಲಿ ಕ್ಷೇತ್ರದ ವಿಧಾನ ಪರಿಷತ್ತಿನ ಸದಸ್ಯ ಮತ್ತು ಶಾಸಕ ಸುನಿಲ್ ಶಿಂದೆ, ವಿಧಾನ ಪರಿಷತ್ತಿನ ಸದಸ್ಯ ರಾಜನ್ಸ್, ಅವೆನ್ಯೂ ಹೋಟೆಲ್ ಮಾಲಕ ಉದ್ಯಮಿ ರಘುರಾಮ್ ಶೆಟ್ಟಿ ಮತ್ತು ಸುನಿಲ್ ಶೆಟ್ಟಿ ಹಾಗೂ ಮತ್ತಿತರರು ಆಗಮಿಸಿದ್ದರು.

ಈ ಸಂದರ್ಭದಲ್ಲಿ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ವ್ಯವಸ್ಥಾಪನಾ ಸಮಿತಿಯ ಸದಸ್ಯೆ ಜಯಲಕ್ಷ್ಮಿ ಎಸ್.ಶೆಟ್ಟಿ,ಉದ್ಯಮಿಗಳಾದ ಶರತ್ ಹೆಗ್ಡೆ, ಪರ್ವತ್ ಶೆಟ್ಟಿ, ಅಂಕಿತ್ ಶೆಟ್ಟಿ, ಉತ್ತಮ್ ಶೆಟ್ಟಿ ಮತ್ತು ದೇವಳದ ಪ್ರಬಂಧಕರಾದ ಗೋವರ್ಧನ್ ಸೇರಿಗಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಎಸ್‌ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ : ಶ್ರೀಷಾ ಜಯ ಪೂಜಾರಿ 607 (ಶೇ. 97.12) ಅಂಕ

Posted On: 23-05-2025 07:00AM

ಪಡುಬಿದ್ರಿ : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ನಡೆಸಿದ 2024 - 25 ನೇ ಸಾಲಿನ ಎಸ್‌ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಪಡುಬಿದ್ರಿ ಲಯನ್ಸ್‌ ಇಂಗ್ಲಿಷ್ ಮೀಡಿಯಂ ಶಾಲೆ ಇದರ ವಿದ್ಯಾರ್ಥಿನಿ, ಶ್ರೀಷಾ ಜಯ ಪೂಜಾರಿ 607 (ಶೇ. 97.12) ಅಂಕ ಗಳಿಸಿದ್ದಾರೆ.

ಈಕೆ ಜಯ ನಾರಾಯಣ ಪೂಜಾರಿ ಪಡುಬಿದ್ರಿ ಪಾದೆಬೆಟ್ಟು, ಹಾಗೂ ವನಿತಾ ಜಯ ಪೂಜಾರಿ ಮುಡಾರು, ಕಾರ್ಕಳ ಅವರ ಸುಪುತ್ರಿ.