Updated News From Kaup
ಕುತ್ಯಾರು ಗ್ರಾಮಾಂತರ ಪ್ರದೇಶಕ್ಕೆ ಬಸ್ಸು ಸೌಲಭ್ಯ ಒದಗಿಸಿ : ಸಾಮಾಜಿಕ ಕಾರ್ಯಕರ್ತ ಜಯರಾಮ ಆಚಾರ್ಯ

Posted On: 14-05-2025 04:57PM
ಕಾಪು : ತಾಲೂಕಿನ ಕುತ್ಯಾರು ಗ್ರಾಮಾಂತರ ಪ್ರದೇಶಕ್ಕೆ ಸರಕಾರಿ ಬಸ್ಸಿನ ಸೌಲಭ್ಯ ಅಥವಾ ಖಾಸಗಿ ಬಸ್ಸಿನ ಸೌಲಭ್ಯವನ್ನು ಮುಂದುವರಿಕೆ ಮಾಡುವಂತೆ ಈಗಾಗಲೇ ಮನವಿ ನೀಡಿದ್ದು ಪುನರ್ ಪರಿಶೀಲಿಸಿ ತಕ್ಷಣ ಕ್ರಮಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತರಾದ ಜಯರಾಮ ಆಚಾರ್ಯ ಕಾಪು ಇವರು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್‌ರವರಿಗೆ ಮನವಿ ಮಾಡಿದರು.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಕಾಪು ಪಡುಕುತ್ಯಾರು ಇರಂದಾಡಿ ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠದ ಸ್ವಾಮಿಗಳಾದ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಶ್ರೀ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳವರ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಮನವಿಯನ್ನು ಸಲ್ಲಿಸಲಾಯಿತು. ಸಾರ್ವಜನಿಕರು ನೀಡಿದ ಮನವಿಗೆ ಸ್ಪಂದಿಸಿದ ಮಾನ್ಯ ಸಚಿವರು ಈ ಗ್ರಾಮಾಂತರ ಭಾಗಕ್ಕೆ ಬಸ್ಸು ಸೌಲಭ್ಯ ಒದಗಿಸುವರೆ ಉಡುಪಿ ಜಿಲ್ಲಾಧಿಕಾರಿ ಮುಖೇನ, ಉಡುಪಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಮೂಲಕ, ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಗಳು ಕೆ.ಎಸ್.ಆರ್.ಟಿ.ಸಿ ಬಿಜೈ ಮಂಗಳೂರುರವರಿಗೆ ಪತ್ರ ಮುಖೇನ ಕುತ್ಯಾರು ಗ್ರಾಮಂತರ ಪ್ರದೇಶಕ್ಕೆ ಸರಕಾರಿ ಬಸ್ಸು ಸೌಲಭ್ಯ ಒದಗಿಸುವರೆ ತಿಳಿಸಿರುತ್ತಾರೆ. ಈ ಬಗ್ಗೆ ಮಾನ್ಯ ಉಡುಪಿ ಜಿಲ್ಲಾಧಿಕಾರಿಯವರಿಗೂ ಮನವಿಯನ್ನು ಸಲ್ಲಿಸಲಾಗಿರುತ್ತದೆ. ನಂತರ ನಡೆದ ಬೆಳವಣಿಗೆ ಗಮನಿಸಿದಾಗ ಖಾಸಗಿ ಬಸ್ಸಿನವರು ಗ್ರಾಮಂತರ ಪ್ರದೇಶಕ್ಕೆ ಸರಕಾರಿ ಬಸ್ಸು ಸೌಲಭ್ಯ ಒದಗಿಸುವ ಬಗ್ಗೆ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ತಡೆಯನ್ನು ಪಡೆದಿರುವ ಮಾಹಿತಿಯು ತಿಳಿದು ಬಂದಿರುತ್ತದೆ. ಹಲವಾರು ವರ್ಷಗಳಿಂದ ನಮ್ಮ ಪ್ರದೇಶಕ್ಕೆ ಸರಕಾರಿ ಅಥವಾ ಖಾಸಗಿ ಬಸ್ಸುಗಳ ವ್ಯವಸ್ಥೆಯನ್ನು ಮಾಡಲಾಗಲಿಲ್ಲ. ಅಂತೆಯೇ ಮನವಿಯನ್ನು ನೀಡಿ ಒಂದು ವರ್ಷ ಐದು ತಿಂಗಳು ಕಳೆದರೂ ಯಾವುದೇ ವ್ಯವಸ್ಥೆಯಾಗಲಿಲ್ಲ. ಈ ಬಗ್ಗೆ ಮಾನ್ಯ ಉಸ್ತುವಾರಿ ಸಚಿವರಿಗೆ ಮತ್ತು ಮಾನ್ಯ ಜಿಲ್ಲಾಧಿಕಾರಿ ಮತ್ತು ಉಡುಪಿ ಜಿಲ್ಲೆ ಪ್ರಾದೇಶಿಕ ಸಾರಿಗೆ ಅಧಿಕಾರಿಯವರಿಗೆ ಪುನರಪಿ ಜ.15ರಂದು ಮನವಿಯನ್ನು ಸಲ್ಲಿಸಲಾಯ್ತು.
ಯಾವ ಕಾರಣಕ್ಕಾಗಿ, ಕುತ್ಯಾರು ಗ್ರಾಮಾಂತರ ಪ್ರದೇಶಕ್ಕೆ ಬಸ್ಸು ಸೌಲಭ್ಯ ಒದಗಿಸಲಾಗಿರುವುದಿಲ್ಲ ಎಂದು ನಮಗೆ ತಿಳಿದಿರುವುದಿಲ್ಲ. ಖಾಸಗಿ ಬಸ್ಸಿನವರು ಸರಕಾರಿ ಬಸ್ಸು ಹಾಕದಂತೆ ತಡೆ ಮಾಡಿಸಿದರೆ ತಡೆ ತೆರವಿಗೆ ಯಾರು ಸ್ಪಂದಿಸಬೇಕೆಂದು ಮನವರಿಕೆಯಾಗುವುದಿಲ್ಲ. ತಡೆ ತೆರವಿನ ನಂತರ ನಮ್ಮ ಪ್ರದೇಶಕ್ಕೆ ಸರಕಾರಿ ಬಸ್ಸು ಸೌಲಭ್ಯ ಬರಲಿ ಎಂದು ಆಶಿಸುತ್ತಿದ್ದೇನೆ.
ಅಂತೆಯೇ ತಮ್ಮಲ್ಲಿ ನಿವೇದಿಸುವುದೆಂದರೆ, ಪ್ರಸ್ತುತ ಉಡುಪಿಯಿಂದ ಹೊರಟು ಕಾಪು ಮೂಲಕ ಈಗ ಸಂಚರಿಸುತ್ತಿರುವ ಖಾಸಗಿ ಬಸ್ಸುಗಳು ಕುತ್ಯಾರು ಗ್ರಾಮದ ಪುಂಚಲಕಾಡು ಪ್ರದೇಶದಲ್ಲಿ 45 ನಿಮಿಷಕ್ಕೂ ಮೇಲ್ಪಟ್ಟು ನಿಲುಗಡೆಯಾಗುತ್ತಿದ್ದು, ಸದ್ರಿ ಬಸ್ಸುಗಳ ಮುಂದಿನ ನಿಲುಗಡೆ ವ್ಯಾಪ್ತಿಯನ್ನು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕುತ್ಯಾರು ಗ್ರಾಮದ ಇರಂದಾಡಿ, ಆನೆಗುಂದಿ ಶ್ರೀ ಮಹಾಸಂಸ್ಥಾನ ಸರಸ್ವತಿ ಪೀಠ ಮತ್ತು ಸಮಾಜ ಕಲ್ಯಾಣ ಇಲಾಖೆಯ ಮೋರಾರ್ಜಿ ದೇಸಾಯಿ ವಸತಿ ಶಿಕ್ಷಣ ಶಾಲೆ, ಶ್ರೀ ದುರ್ಗಾಮಂದಿರ ಮತ್ತು ಇತರ ಸಂಘ ಸಂಸ್ಥೆಗಳು ಇರುವ ಸ್ಥಳದಲ್ಲಿ ನಿಲುಗಡೆ ಮಾಡಿ ಅಲ್ಲಿಂದ ಪುಂಚಲಕಾಡು ಮಾರ್ಗವಾಗಿ ಕಾಪುವಿನಿಂದ ಉಡುಪಿಗೆ ತಲುಪಬಹುದು. ಪ್ರಸ್ತುತ ಪುಂಚಲಕಾಡಿನಿಂದ ನಮ್ಮ ಪ್ರದೇಶಕ್ಕೆ ಕ್ರಾಂಕ್ರಿಟ್ ರಸ್ತೆಯಾಗಿದ್ದು ಯಾವುದೇ ಆಡಚನೆಯಾಗುವುದಿಲ್ಲ. ಈ ಬಗ್ಗೆ ಮಾನ್ಯ ಉಡುಪಿ ಜಿಲ್ಲಾಧಿಕಾರಿಯವರು ಇದಕ್ಕೆ ಬೇಕಾದ ಖಾಸಗಿ ಬಸ್ಸುಗಳ ಪರ್ಮಿಟ್ ವ್ಯವಸ್ಥೆಯನ್ನು ಮಾರ್ಪಾಡು ಮಾಡಿ ಸಾರ್ವಜನಿಕರಿಗೆ ಬಸ್ಸಿನ ಸೌಕರ್ಯವನ್ನು ಒದಗಿಸಿಕೊಡಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ.
ದೇಶದ್ರೋಹಿ ಬರಹ ಆರೋಪಿತ ವಿದ್ಯಾರ್ಥಿನಿ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ : ರಚನ್ ಸಾಲಿಯಾನ್

Posted On: 12-05-2025 07:27PM
ಕಾರ್ಕಳ : ನಿಟ್ಟೆ ಶಿಕ್ಷಣ ಸಂಸ್ಥೆಯೊಂದರ ಹಾಸ್ಟೆಲ್ ಕ್ಯಾಂಪಸ್ ನಲ್ಲಿ ಕಂಡು ಬಂದ ದೇಶ ದ್ರೋಹಿ ಬರವಣಿಗೆ ಕೃತ್ಯವನ್ನು ಖಂಡಿಸಿ ಕ್ರಮ ಕೈಗೊಳ್ಳುವಂತೆ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ.) ಸ್ಥಾಪಕಾಧ್ಯಕ್ಷ ಶಿವಕುಮಾರ್ ಕರ್ಜೆ ಮಾರ್ಗದರ್ಶನದಲ್ಲಿ ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್ ಹೆಜಮಾಡಿ ನೇತೃತ್ವದಲ್ಲಿ ಕಾರ್ಕಳ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ನೀಡಲಾಯಿತು.
ಉಡುಪಿ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿ ಕೂಂಡಿರುವ ನಿಟ್ಟೆ ಶಿಕ್ಷಣ ಸಂಸ್ಥೆಯೊಂದರ ಹಾಸ್ಟೆಲ್ ಗೋಡೆಯ ಮೇಲೆ ಮೇ.7ರಂದು ರಾತ್ರಿ ಕೆಲವು ವಿದ್ಯಾರ್ಥಿನಿಯರು ದೇಶ ದ್ರೋಹ ಬರವಣಿಗೆಯ ಘಟನೆಯಲ್ಲಿ ಕಂಡು ಬಂದಿದ್ದು, ದೇಶದ ಆಂತರಿಕ ಭದ್ರತೆಗೆ ಅನುಮಾನ ಸೃಷ್ಟಿಸುವ ಕೃತ್ಯವಾಗಿದ್ದು, ಇದನ್ನು ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ.) ತ್ರೀವವಾಗಿ ಖಂಡಿಸುತ್ತದೆ.
ಪ್ರಸುತ ಸಂದರ್ಭದಲ್ಲಿ ದೇಶದಲ್ಲಿ ನಡೆಯುತ್ತಿರುವ ಚಟುವಟಿಕೆಗಳು ದೇಶಾಭಿಮಾನವನ್ನು ಹೆಚ್ಚಿಸುತ್ತಿದ್ದು, ನಮ್ಮ ದೇಶದ ಸೈನ್ಯದ ತ್ಯಾಗ ಮತ್ತು ಸೇವೆಯನ್ನು ಇಡೀ ದೇಶವೇ ಕೊಂಡಾಡುತಿರುವುದು ಗಮನಾರ್ಹ ಸಂಗತಿ. ಇಂತಹ ಸಂದರ್ಭದಲ್ಲಿ ಒಂದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಈ ರೀತಿಯ ಚಟುವಟಿಕೆ ಕಂಡು ಬಂದಿರುವುದು ಅವಮಾನೀಯ. ಈ ರೀತಿಯ ದೇಶ ದ್ರೋಹದ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡಿರುವ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕ್ಯೆಗೊಂಡು, ವಿದ್ಯಾರ್ಥಿಗಳನ್ನು ಕಾಲೇಜ್ ನಿಂದ ಅಮಾನತುಗೊಳಿಸುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂದರ್ಭದಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ.) ಉಡುಪಿ ಜಿಲ್ಲಾಧ್ಯಕ್ಷ ಸ್ವಯಂ ಶೆಟ್ಟಿ, ಪದಾಧಿಕಾರಿಗಳಾದ ಸ್ಮರಣ್ ನಿಟ್ಟೆ, ಅಭಿಲಾಷ್ ನಿಟ್ಟೆ, ಕಾರ್ಕಳ ತಾಲೂಕು ಅಧ್ಯಕ್ಷ ಪ್ರತೀಕ್ ಶೆಟ್ಟಿ, ಸನ್ನಿ ನೆಲ್ಸನ್ ಡಿಸೋಜ ಉಪಸ್ಥಿತರಿದ್ದರು.
ಪಡುಬಿದ್ರಿ : ಗ್ರಾ.ಪಂ. ಉಪಚುನಾವಣೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆ

Posted On: 12-05-2025 05:28PM
ಪಡುಬಿದ್ರಿ : ಪಾದೆಬೆಟ್ಟು-2 ಅನುಸೂಚಿತ ಜಾತಿ ಮಹಿಳೆಗೆ ಮೀಸಲಿರಿಸಿದ ಉಪಚುನಾವಣಾ ಕ್ಷೇತ್ರಕ್ಕೆ ಮೇ.25ರಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಶ್ರೀಮತಿ ಪಿ.ಉಷಾರವರು ಪಕ್ಷದ ಮುಖಂಡರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕರುಣಾಕರ್ ಎಮ್ ಪೂಜಾರಿ, ಕೆ.ಪಿ.ಸಿ.ಸಿ ಕೋ-ಆರ್ಡೀಟರ್ ನವೀನಚಂದ್ರ ಜೆ ಶೆಟ್ಟಿ, ದಲಿತ ಮುಖಂಡರಾದ ಶೇಖರ್ ಹೆಜ್ಮಾಡಿ, ಗ್ರಾ.ಪಂ.ಸದಸ್ಯರಾದ ನವೀನ್ ಎನ್ ಶೆಟ್ಟಿ, ಗಣೇಶ್ ಕೋಟ್ಯಾನ್, ಜ್ಯೋತಿ ಮೆನನ್, ಮಾಜಿ ಸದಸ್ಯರಾದ ಅಶೋಕ್ ಸಾಲ್ಯಾನ್, ದಿನೇಶ್ ಕಂಚಿನಡ್ಕ, ತಾಲೂಕು ಗ್ಯಾರಂಟಿ ಸಮಿತಿ ಸದಸ್ಯರಾದ ಹಸನ್ ಬಾವ, ಕೀರ್ತಿ ಕುಮಾರ್, ಕಾಪು ಬ್ಲಾಕ್ ಕಾಂಗ್ರೆಸ್ ಎಸ್.ಸಿ /ಎಸ್.ಟಿ ಸಮಿತಿ ಮಾಜಿ ಅಧ್ಯಕ್ಷ ಸುಧಾಕರ್ ಕೆ., ವಿಠಲ್ ಮಾಸ್ಟರ್, ಸಂತೋಷ್ ಪಡುಬಿದ್ರಿ ಉಪಸ್ಥಿತರಿದ್ದರು.
ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಕಾಪು ಶ್ರೀ ಹೊಸ ಮಾರಿಗುಡಿ ಭೇಟಿ

Posted On: 09-05-2025 03:05PM
ಕಾಪು: ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಗುರುವಾರ ರಾತ್ರಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಆಗಮಿಸಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ದರುಶನ ಪಡೆದರು.
ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯಾರವರು ವಿಶೇಷ ಪೂಜೆ ಸಲ್ಲಿಸಿ ಮಾರಿಯಮ್ಮ ಹಾಗೂ ಉಚ್ಚಂಗಿ ದೇವಿಯ ಅನುಗ್ರಹ ಪ್ರಸಾದ ನೀಡಿದರು. ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿಯಿಂದ ಅವರನ್ನು ಗೌರವಿಸಲಾಯಿತು.
ದೇವಳದ ಶಿಲಾ ಕೆತ್ತನೆಗಳನ್ನು ಗಮನಿಸಿದರು. ಹೊಸ ಮಾರಿಗುಡಿ ಅಭಿವೃದ್ಧಿ ಹೊಂದಿದ ಬಗ್ಗೆ ವಿವರಿಸಲಾಯಿತು. ಈ ಸಂದರ್ಭ ದೇವಳದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ ಮತ್ತು ಕಾಪು ಶಾಸಕ, ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಪ್ರವಾಸೋದ್ಯಮದ ನಿಟ್ಟಿನಲ್ಲಿ ಅನುದಾನ ಒದಗಿಸುವ ಕುರಿತು ಮನವಿ ನೀಡಿದರು.
ಗಜೇಂದ್ರ ಸಿಂಗ್ ಶೇಖಾವತ್ ಮನವಿಯನ್ನು ಸ್ವೀಕರಿಸಿ ಅನುದಾನ ಒದಗಿಸುವುದಾಗಿ ಅಮ್ಮನ ಸನ್ನಿದಾನದಲ್ಲಿ ಭರವಸೆ ನೀಡಿದರು. ಈ ಸಂದರ್ಭ ಕಾಪು ಬಿಜೆಪಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ಪೊಲೀಸ್ ಅಧಿಕಾರಿಗಳು, ದೇವಳದ ಸಿಬ್ಬಂದಿಗಳು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.
ಬಂಟಕಲ್ಲು : ನೂರಹನ್ನೊಂದನೇ ಕಸಾಪ ಸಂಸ್ಥಾಪನಾ ದಿನಾಚರಣೆ ಸಂಪನ್ನ

Posted On: 09-05-2025 03:00PM
ಶಿರ್ವ: ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಸಾಹಿತಿಗಳಿಗೆ ಮಾತ್ರ ಸೇರಿದ್ದಲ್ಲ. ಪ್ರತೀಯೊಬ್ಬ ಕನ್ನಡಿಗನಿಗೂ ಸೇರಿದ ಸ್ವಾಯತ್ತ ಸಂಸ್ಥೆಯಾಗಿದೆ. ೧೧೧ನೇ ವರ್ಷ ಪೂರೈಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು ಜನ ಸಾಮಾನ್ಯರ ಪರಿಷತ್ತು ಆಗಿ ಕಾರ್ಯನಿರ್ವಹಿಸುತ್ತಿದ್ದು ಇದೇ ಅದರ ದೀರ್ಘ ಅಸ್ತಿತ್ವಕ್ಕೆ ಕಾರಣವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ನಾಡು,ನುಡಿ, ಸಂಸ್ಕೃತಿ, ಸಾಹಿತ್ಯ, ಜಾನಪದ, ಕನ್ನಡ,ಕನ್ನಡಿಗ, ಕರ್ನಾಟಕ ಇದೇ ಧ್ಯೇಯೋದ್ಧೇಶಗಳನ್ನು ಅನುಷ್ಠಾನ ಮಾಡಲು ಬದ್ದವಾಗಿದೆ. ಪ್ರೀತಿಯ ಬಾಂಧವ್ಯ ಬೆಳೆಸುವುದೇ ಇದರ ಆಶಯವಾಗಿದೆ ಎಂದು ಕಾರ್ಕಳ ತಾಲೂಕು ಕಸಾಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ನುಡಿದರು. ಅವರು ಸೋಮವಾರ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಾಪು ತಾಲೂಕು ಕಸಾಪ ಘಟಕದ ಸಹಭಾಗಿತ್ವದಲ್ಲಿ ಬಂಟಕಲ್ಲು ಬಸ್ಸು ನಿಲ್ದಾಣದ ಸಾರ್ವಜನಿಕ ತರೆದ ವಾಚನಾಲಯದಲ್ಲಿ ಜರುಗಿದ ೧೧೧ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ,ಜನಸಾಮಾನ್ಯರೆಲ್ಲ ಬಂದು ನಿಲ್ಲುವ ಬಸ್ಸು ತಂಗುದಾಣದಲ್ಲಿ ಶತಮಾನೋತ್ತರ ಇತಿಹಾಸ ಹೊಂದಿರುವ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸುತ್ತಿರುವುದು ನಾಡಿನ ಸಮಸ್ತರ ಭಾವನೆಗಳಿಗೆ ಸ್ಪಂದಿಸುವುದೇ ಆಗಿದೆ. ಈ ಸಂಸ್ಥೆಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟ ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು, ಅವರಿಗೆ ಬೆಂಬಲವಾಗಿ ನಿಂತ ಮಹಾನ್ ದಿವಾನರಾಗಿದ್ದ ಸರ್.ಎಂ.ವಿಶ್ವಶ್ವರಯ್ಯ ಮತ್ತು ಮಿರ್ಜಾ ಇಸ್ಮಾಯಿಲ್‌ರವರು. ಇದು ಸಾಹಿತಿಗಳ ಪರಿಷತ್ತು ಅಲ್ಲ. ಜನಸಾಮಾನ್ಯರ ಪರಿಷತ್ತು. ನಾವು ಆಡುವ ಭಾಷೆ ನೆಲದಭಾಷೆ, ಹೃದಯದ ಭಾಷೆ ಆಗಿದೆ, ಆಗಬೇಕು. ಇದು ಭಾವದ ಪ್ರತೀಕ ಎಂದರು.

ಕಾರ್ಯಕ್ರಮವನ್ನು ದೀಪ ಪ್ರಜ್ವಲನದ ಮೂಲಕ ಉದ್ಘಾಟಿಸಿದ ಸಾಹಿತಿ,ಕವಯತ್ರಿ ಪ್ರೊ.ಡಾ.ಫ್ಲಾವಿಯಾ ಕಸ್ತಲಿನೊ ಮಣಿಪಾಲ ಇವರು ಮಾತನಾಡಿ ಕರಾವಳಿ ಭಾಗದಲ್ಲಿ ಹೆಚ್ಚಿನವರ ಮಾತೃಭಾಷೆ, ತುಳು, ಕೊಂಕಣಿ, ಕುಂದಾಪ್ರ ಕನ್ನಡ ಇದ್ದರೂ ಶಾಲೆಯಲ್ಲಿ ಕನ್ನಡವನ್ನು ಕಲಿಯುತ್ತೇವೆ. ಕನ್ನಡದ ನೆಲದಲ್ಲಿ ನಾವೆಲ್ಲ ಕನ್ನಡಿಗರೇ ಆಗಿದ್ದೇವೆ. ಕನ್ನಡದ ಶ್ರೀಮಂತ ಸಂಸ್ಕೃತಿ,ಪರಂಪರೆಯನ್ನು ನೂರಾರು ಕವಿಗಳು,ಸಾಹಿತಿಗಳು ಸಾಹಿತ್ಯ ಗ್ರಂಥಗಳ ಮೂಲಕ ಅನಾವರಣಗೊಳಿಸಿದ್ದಾರೆ ಎಂದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯನುಡುಗಳನ್ನಾಡಿ ಉಡುಪಿ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು ಸಾಹಿತ್ಯದ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ನಡೆಸುತ್ತಿರುವುದು ಜಿಲ್ಲೆಯ ಸಾಧನೆಗೆ ಪ್ರೇರಣೆಯಾಗಿದೆ. ಸಾಹಿತ್ಯ ಚಟುವಟಿಕೆಗಳಿಗೆ ರಾಜ್ಯದಲ್ಲಿ ಉಡುಪಿ ಜಿಲ್ಲೆ ಮುಂಚೂಣಿಯಲ್ಲಿದೆ ಎಂದರು. ದತ್ತಿ ಉಪನ್ಯಾಸ : ಹಿರಿಯ ಸಾಹಿತಿ ಕುರಾಡಿ ಸೀತಾರಾಮ ಅಡಿಗ ಮತ್ತು ಟಿ.ಎಸ್.ಕಮಲಾಕ್ಷಿ ಅಡಿಗ ಸ್ಮಾರಕ ದತ್ತಿ ಉಪನ್ಯಾಸದಲ್ಲಿ ಬೆನಗಲ್ ವಿಶ್ವಭಾರತ ಕರ್ನಾಟಕ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷ ಸೂರಾಲು ನಾರಾಯಣ ಮಡಿ ಮಾತನಾಡಿ ಕುರಾಡಿ ಸೀತಾರಾಮ ಅಡಿಗರು ಸಾಹಿತ್ಯ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಗಳ ಬಗ್ಗೆ ಮಾಹಿತಿ ನೀಡಿ ಅವರ ಸಾಹಿತ್ಯ, ಮಕ್ಕಳ ಗೀತೆಗಳು, ಕವನಗಳ ಬಗ್ಗೆ ಗಮನ ಸೆಳೆದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ದಂಪತಿಗಳಾದ ದೇವೇಂದ್ರ ನಾಯಕ್ ಶಿರ್ವ ಮತ್ತು ವನಿತಾ ಡಿ,ನಾಯಕ್‌ರವರನ್ನು ದತ್ತಿಗೌರವದೊಂದಿಗೆ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕಸಾಪ ಕಾಪು ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು. ವೇದಿಕೆಯಲ್ಲಿ ಕಸಾಪ ಜಿಲ್ಲಾ ಸಭಾಭವನ ನಿರ್ಮಾಣ ಸಮಿತಿ ಅಧ್ಯಕ್ಷ ಕೆ.ದೇವದಾಸ್ ಹೆಬ್ಬಾರ್, ಬಂಟಕಲ್ಲು ನಾಗರಿಕ ಸೇವಾ ಸಮಿತಿ ಕೋಶಾಧಿಕಾರಿ ಜಗದೀಶ ಆಚಾರ್ಯ, ಬೆಳ್ಳೆ ಗ್ರಾ.ಪಂ.ಉಪಾಧ್ಯಕ್ಷ ಶಶಿಧರ ವಾಗ್ಲೆ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಬಂಟಕಲ್ಲು ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಉಮೇಶ ಪ್ರಭು ಪಾಲಮೆ, ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ, ಕಸಾಪ ಜಿಲ್ಲಾ ಸಮಿತಿಯ ನರಸಿಂಹಮೂರ್ತಿ, ರಿಕ್ಷಾ ಯೂನಿಯನ್ ಅಧ್ಯಕ್ಷ ಮಂಜುನಾಥ ಪೂಜಾರಿ, ಡೇನಿಸ್ ಡಿಸೋಜ, ಉಮೇಶ್ ರಾವ್, ರವೀಂದ್ರ ಪಾಟ್ಕರ್, ಉಷಾ ಮರಾಠೆ, ಕಸಾಪ ಕಾಪು ಘಟಕದ ಗೌ.ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ, ಸಮಿತಿಯ ಸದಸ್ಯರುಗಳಾದ ಮಧುಕರ್ ಎಸ್, ಪ್ರೊ.ವಿದ್ಯಾ ಅಮ್ಮಣ್ಣಾಯ, ಸಂಘಟನಾ ಕಾರ್ಯದರ್ಶಿ ದೀಪಕ್ ಬೀರ ಉಪಸ್ಥಿತರಿದ್ದರು.
ಕು.ದೀಕ್ಷಿತಾ, ದೀಕ್ಷಾ ನಾಡಗೀತೆ ಹಾಡಿದರು. ಕಸಾಪ ಸಹಕಾರ್ಯದರ್ಶಿ ಕೃಷ್ಣಕುಮಾರ್ ರಾವ್ ಮಟ್ಟು ಸ್ವಾಗತಿಸಿದರು. ಬಂಟಕಲ್ಲು ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಹಾಗೂ ಕಸಾಪ ಸಂಘಟನಾ ಕಾರ್ಯದರ್ಶಿ ಕೆ.ಆರ್.ಪಾಟ್ಕರ್ ನಿರೂಪಿಸಿದರು. ಗೌ.ಕಾರ್ಯದರ್ಶಿ ನೀಲಾನಂದ ನಾಯ್ಕ್ ವಂದಿಸಿದರು.
ಕ್ರಿಯೇಟಿವ್ ಸಂಸ್ಥೆಯ ಪ್ರಥಮ ಪಿಯು ವಾಣಿಜ್ಯ ವಿಭಾಗದಲ್ಲಿ ಉಚಿತ ಶಿಕ್ಷಣಕ್ಕೆ ಅವಕಾಶ

Posted On: 05-05-2025 12:14PM
ಕಾರ್ಕಳ : 2025 -26ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 90%ಕ್ಕಿಂತ ಅಧಿಕ ಅಂಕ ಗಳಿಸಿದ ಕಾರ್ಕಳದ ಸ್ಥಳೀಯ ವಿದ್ಯಾರ್ಥಿಗಳು ವಾಣಿಜ್ಯ ವಿಭಾಗವನ್ನು ಸೇರಬಯಸುವುದಾದರೆ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯು ವಿಶೇಷ ರಿಯಾಯಿತಿಯನ್ನು ಘೋಷಿಸಿದೆ. ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಾಣಿಜ್ಯ ವಿಭಾಗದಲ್ಲಿ ಉಚಿತ ಶಿಕ್ಷಣಕ್ಕೂ ಅವಕಾಶ ಕಲ್ಪಿಸಲಾಗಿದೆ.
ಕಳೆದ ಬಾರಿ ಸಾನ್ವಿರಾವ್ ಎಂಬ ವಿದ್ಯಾರ್ಥಿನಿ 598 ಅಂಕಗಳನ್ನು ಗಳಿಸುವುದರ ಮೂಲಕ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಗುರುತಿಸಿಕೊಂಡಿರುವುದು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಹೆಗ್ಗಳಿಕೆಯಾಗಿದೆ. ಸಿಎ ಫೌಂಡೇಶನ್ ನಲ್ಲಿ 13 ವಿದ್ಯಾರ್ಥಿಗಳಲ್ಲಿ 07 ವಿದ್ಯಾರ್ಥಿಗಳು ಅರ್ಹತೆಯನ್ನು ಗಳಿಸಿರುವುದಲ್ಲದೆ, CSEET ಪರೀಕ್ಷೆಯಲ್ಲಿ 34 ವಿದ್ಯಾರ್ಥಿಗಳಲ್ಲಿ 24 ವಿದ್ಯಾರ್ಥಿಗಳು ಪ್ರಥಮ ಪ್ರಯತ್ನದಲ್ಲೇ ಅರ್ಹತೆಯನ್ನು ಪಡೆದುಕೊಂಡಿರುವುದು ವಾಣಿಜ್ಯ ವಿಭಾಗದ ಗುಣಾತ್ಮಕ ಶಿಕ್ಷಣಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಹತ್ತಾರು ಕ್ರೀಯಾಶೀಲ ಕಾರ್ಯಕ್ರಮಗಳೊಂದಿಗೆ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಯ ಜೊತೆಗೆ ಬದುಕಿನ ಪಾಠವನ್ನು ಕಲಿಸುವ ಮೂಲಕ ಅವರ ಉತ್ತಮ ಭವಿಷ್ಯಕ್ಕೆ ಸಂಸ್ಥೆ ಕಾರಣವಾಗಿದೆ.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡುವ ಈ ಉಚಿತ ಶಿಕ್ಷಣ ಸೌಲಭ್ಯವನ್ನು ಅರ್ಹ ಫಲಾನುಭವಿಗಳು ಪಡೆದುಕೊಳ್ಳುವಂತೆ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ : +919980924567
ಎಸ್ ಎಸ್ ಎಲ್ ಸಿ ಪರೀಕ್ಷೆ : ಮುಹಮ್ಮದ್ ಅಫ್ನಾನ್ 578 ( 92.48%) ಅಂಕ

Posted On: 05-05-2025 12:05PM
ಕಾಪು : ಕಾಪು ದಂಡತೀರ್ಥ ಇಂಗ್ಲಿಷ್ ಮೀಡಿಯಂ ಪಬ್ಲಿಕ್ ಹೈಸ್ಕೂಲ್ ನ ವಿದ್ಯಾರ್ಥಿ ಮುಹಮ್ಮದ್ ಅಫ್ನಾನ್ ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 578 ( 92.48%) ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದ್ದಿದ್ದಾರೆ
ಇವರು ಮುಹಮ್ಮದ್ ಅಶ್ರಫ್ ಮತ್ತು ತಬಸ್ಸುಮ್ ದಂಪತಿಯ ಪುತ್ರ ಹಾಗೂ ಕಾಪು ಎಸ್. ಐ. ಓ ಯುನಿಟ್ ನ ಕ್ಯಾಡರ್ ಆಗಿರುತ್ತಾರೆ.
ಕಾಪು : 75 ಲಕ್ಷ ರೂಪಾಯಿ ಅನುದಾನದ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ

Posted On: 03-05-2025 07:25PM
ಕಾಪು : ಕಾಪು ವಿಧಾನಸಭಾ ಕ್ಷೇತ್ರದ ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ 75 ಲಕ್ಷ ರೂಪಾಯಿ ಅನುದಾನದ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆಯನ್ನು ಶನಿವಾರ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.

ಜಂತ್ರ - ಮುದರಂಗಡಿ - ಶಿರ್ವ - ನಿಂಜೂರು ಜಿಲ್ಲಾ ಮುಖ್ಯ ರಸ್ತೆ ಸೇತುವೆ ಮಟ್ಟಕ್ಕೆ ಎತ್ತರಿಸಿ ಅಭಿವೃದ್ಧಿಗೆ 37 ಲಕ್ಷ, ಹೆಜಮಾಡಿ - ಕೋಡಿ ಜಿಲ್ಲಾ ಮುಖ್ಯರಸ್ತೆ ಅಭಿವೃದ್ಧಿಗೆ 17 ಲಕ್ಷ, ಎರ್ಮಾಳು - ಮುದರಂಗಡಿ ಜಿಲ್ಲಾ ಮುಖ್ಯರಸ್ತೆ ಅಭಿವೃದ್ಧಿಗೆ 21 ಲಕ್ಷ ರೂಪಾಯಿ ಸೇರಿದಂತೆ ಒಟ್ಟು 75 ಲಕ್ಷ ರೂಪಾಯಿ ಅನುದಾನದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಮುದರಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮೋಹಿನಿ, ಗ್ರಾಮ ಪಂಚಾಯತ್ ಸದಸ್ಯರಾದ ರವೀಂದ್ರ ಪ್ರಭು, ಶಿವರಾಮ್ ಭಂಡಾರಿ, ಸ್ಥಳೀಯರಾದ ವಿಶ್ವನಾಥ್ ಶೆಟ್ಟಿ, ಹೆಜಮಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮೋಹನ್ ಸುವರ್ಣ, ಗ್ರಾಮ ಪಂಚಾಯತ್ ಸದಸ್ಯರಾದ ಶರಣ್ ಮಟ್ಟು, ಪಾಂಡುರಂಗ ಹೆಜಮಾಡಿ, ಪವಿತ್ರಾ ಗಿರೀಶ್, ವಸಂತಿ ವಿನೋದ್, ಜನಾರ್ಧನ ಕೋಟ್ಯಾನ್, ನಳಿನಾಕ್ಷಿ, ಸುಜಾತ, ಬಬಿತಾ, ಪ್ರಸಾದ್, ಲಿಲೇಶ್, ಸ್ಥಳೀಯರಾದ ಚಂದ್ರಹಾಸ್, ನಿತಿನ್, ಬಡಾ ಗ್ರಾಮ ಪಂಚಾಯತ್ ಸದಸ್ಯರಾದ ಶಂಕುತಳಾ, ಉಚ್ಚಿಲ ಮಹಾ ಶಕ್ತಿ ಕೇಂದ್ರದ ಚಂದ್ರಶೇಖರ್ ಕೋಟ್ಯಾನ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಸಮೀಕ್ಷೆ ಕರಾರುವಕ್ಕಾಗಿ ನಡೆಯಬೇಕು : ತಹಶಿಲ್ದಾರ್ ಡಾ. ಪ್ರತಿಭಾ ಆರ್.

Posted On: 03-05-2025 05:49PM
ಕಾಪು : ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿರುವ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ, ಔದ್ಯೋಗಿಕ ಪ್ರಾತಿನಿಧ್ಯತೆ ಇತ್ಯಾದಿ ಸ್ಥಿತಿಗತಿಗಳಿಗಾಗಿ ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ ಸಮೀಕ್ಷೆಯು ಅತ್ಯವಶ್ಯಕವಾಗಿದ್ದು ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ ಸಮೀಕ್ಷೆಯಿಂದ ಒಂದೇ ಒಂದು ಕುಟುಂಬವು ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ತಹಶಿಲ್ದಾರ್ ಡಾ.ಪ್ರತಿಭಾ ಆರ್ ಹೇಳಿದರು. ಕಾಪು ತಾಲೂಕಿನ ತಹಶಿಲ್ದಾರ್ ಕಚೇರಿಯ ಸಭಾಂಗಣದಲ್ಲಿ ನಡೆದ ಸಮೀಕ್ಷೆದಾರರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನ್ಯಾಯಮೂರ್ತಿಗಳಾದ ಎಚ್.ಎನ್. ನಾಗಮೋಹನದಾಸ್ ಏಕಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿಯ ಒಳಮೀಸಲಾತಿ ಕುರಿತು ಕ್ರಮವಹಿಸಲು ಸರ್ಕಾರದಿಂದ ನಡೆಸಲಾಗುತ್ತಿರುವ ಸಮೀಕ್ಷೆ ಇದಾಗಿದೆ. ಈ ಸಮೀಕ್ಷೆಯಲ್ಲಿ ಆನ್ಲೈನ್ ಆ್ಯಪ್ ಮೂಲಕ ಮೊಬೈಲ್ ನಲ್ಲಿ ಮಾಹಿತಿ ದಾಖಲಿಸಲಾಗುತ್ತದೆ. ಮಾಹಿತಿದಾರರು ತಮ್ಮ ರೇಷನ್ ಕಾರ್ಡ್ ಆಥವಾ ಆಧಾರ್ ಕಾರ್ಡ್ ಹಾಜರುಪಡಿಸುವುದು ಕಡ್ಡಾಯವಾಗಿದೆ. ಪರಿಶಿಷ್ಟ ಜಾತಿಯ ಒಳಮೀಸಲಾತಿ ಸಮೀಕ್ಷೆಯು 3 ಹಂತಗಳಲ್ಲಿ ಕೈಗೊಳ್ಳಲಾಗುತ್ತಿದೆ. ಸಮೀಕ್ಷೆದಾರರು ಮನೆ-ಮನೆ ಭೇಟಿ ನೀಡಿ ಸಮೀಕ್ಷೆಯನ್ನು ಮೇ 5ರಿಂದ ಮೇ 17ರ ವರೆಗೆ ಬೆಳಗ್ಗೆ 8ರಿಂದ ಸಂಜೆ 6.30ರ ವರೆಗೆ ಪರಿಶಿಷ್ಟ ಜಾತಿಯ ಒಳಮೀಸಲಾತಿ ಸಮೀಕ್ಷೆ ಕೈಗೊಳ್ಳಬೇಕು. ಮನೆ ಮನೆ ಭೇಟಿ ಅವಧಿಯಲ್ಲಿ ಬಿಟ್ಟು ಹೋದ ಪರಿಶಿಷ್ಟ ಕುಟುಂಬಗಳು ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿನ ವಿಶೇಷ ಶಿಬಿರಗಳಲ್ಲಿ ಮೇ 19 ರಿಂದ 21 ರವರೆಗೆ ಮಾಹಿತಿ ದಾಖಲಿಸಬಹುದು. ಅದೂ ಸಾಧ್ಯವಾಗದ ಕುಟುಂಬಗಳು ಮೇ 19ರಿಂದ ಮೇ 23ರವರೆಗೆ ಆನ್ ಲೈನ್ ನಲ್ಲಿ ಸ್ವಯಂ ಘೋಷಣೆ ಮಾಡಿಕೊಳ್ಳಲೂ ಸಹ ಅವಕಾಶ ಕಲ್ಪಿಸಲಾಗಿದೆ. ಆಧಾರ್ ನಂಬರ್ ಹಾಗೂ ರೇಷನ ಕಾರ್ಡ್ ನಂಬರ್‌ನೊಂದಿಗೆ ಸ್ವಯಂ ಘೋಷಣೆ (ಆನ್‌ಲೈನ್)ಯನ್ನು ಸಲ್ಲಿಸಬಹುದು ಎಂದರು.
ಗ್ರಾಮ ಮಟ್ಟದ ಸಮೀಕ್ಷೆದಾರರು ತಮ್ಮ ವ್ಯಾಪ್ತಿಯ ಮತಗಟ್ಟೆವಾರು ಪ್ರತಿಯೊಂದು ಮನೆಗೆ ತೆರಳಿ, ಜಾಗರೂಕತೆಯಿಂದ ಸಮೀಕ್ಷೆ ನಡೆಸಬೇಕು ಎಂದರು. ಸಮೀಕ್ಷೆಯಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಯನ್ನು ಭರ್ತಿ ಮಾಡಬಾರದು. ಮನೆ-ಮನೆಗೆ ಭೇಟಿ ನೀಡಿದಾಗ ಅಲ್ಲಿನ ಕುಟುಂಬ ಸದಸ್ಯರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಮಾಹಿತಿಯನ್ನು ಮನೆಯ ಮುಖ್ಯಸ್ಥರಿಂದ ಪಡೆದುಕೊಂಡು ಸಮೀಕ್ಷೆಯ ಪ್ರಶ್ನೆಗಳಿಗೆ ಕುಟುಂಬದ ಸದಸ್ಯರು ನೀಡಿದಂತಹ ಮಾಹಿತಿಯನ್ನು ಮಾತ್ರ ಭರ್ತಿ ಮಾಡಬೇಕು. ಈ ಸಮೀಕ್ಷೆಯಲ್ಲಿ ಯಾವುದೇ ಮಧ್ಯವರ್ತಿ, ಸಂಘ-ಸಂಸ್ಥೆಗಳು ಮತ್ತು ಮಕ್ಕಳಿಂದ ಮಾಹಿತಿ ಭರ್ತಿ ಮಾಡುವಂತಿಲ್ಲ. ಸಮೀಕ್ಷೆಯಲ್ಲಿನ ಎಲ್ಲ ಪ್ರಶ್ನೆಗಳನ್ನು ಅರ್ಥೈಸಿಕೊಂಡು ಸರಿಯಾದ ಮಾಹಿತಿ ಸಂಗ್ರಹಿಸಿ ಮೊಬೈಲ್ ಆ್ಯಪ್ ಮೂಲಕವೇ ಸಮೀಕ್ಷೆ ಕೈಗೊಳ್ಳಬೇಕು ಎಂದು ತಹಶಿಲ್ದಾರ್ ಮಾಹಿತಿ ನೀಡಿದರು.
ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿಯವರು ತರಬೇತಿ ಕಾರ್ಯಾಗಾರಕ್ಕೆ ಭೇಟಿ ನೀಡಿ, ಮಾರ್ಗದರ್ಶನ ನೀಡಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ನಾರಾಯಣಸ್ವಾಮಿ, ಬಸವರಾಜು, ವಿನಾಯಕ, ಉಪ ತಹಶಿಲ್ದಾರರುಗಳಾದ ಅಶೋಕ್, ದೇವಕಿ, ಮಾಸ್ಟರ್ ಟ್ರೈನರ್ ಗಳಾದ ಮಧುರಾಜ್, ಎಡ್ವರ್ಡ್, ನವ್ಯ, ರಾಘವೇಂದ್ರ, ಪುಷ್ಪಲತಾ ಉಪಸ್ಥಿತಿರಿದ್ದರು.
ಆದ್ಯ.ಎಮ್.ಪೂಜಾರಿ : 592 ಅಂಕ

Posted On: 03-05-2025 05:14PM
ಕಾಪು : ಆದ್ಯ.ಎಮ್.ಪೂಜಾರಿ ಅವರು ಬೆಳಪು ಗ್ರಾಮದ ಅ.ಬಿ.ವಾಜಪೇಯಿ ಬಡವಣೆಯ ನಿವಾಸಿಯಾಗಿದ್ದು . ಇವರು ಪಯ್ಯಾರು ಪಿ.ಕೆ.ಎಸ್. ಪ್ರೌಢಶಾಲೆ ಕಳತ್ತೂರು, ಇಲ್ಲಿಯ ವಿದ್ಯಾರ್ಥಿನಿಯಾಗಿದ್ದು ಎಸ್. ಎಸ್. ಎಲ್.ಸಿ ಪರೀಕ್ಷೆಯಲ್ಲಿ 592(94.72%) ಅಂಕಗಳನ್ನು ಗಳಿಸಿರುತ್ತಾರೆ.
ಆದ್ಯ ಅವರು ಮಂಜುನಾಥ್.ಕೆ.ಪೂಜಾರಿ ಮತ್ತು ರಜನಿ ಎಮ್. ಪೂಜಾರಿ ದಂಪತಿಗಳ ಪುತ್ರಿಯಾಗಿದ್ದಾರೆ.