Updated News From Kaup

ಶಿರ್ವ : ವಿಶ್ವಬ್ರಾಹ್ಮಣ ಯುವ ಸಂಗಮ, ಮಹಿಳಾ ಬಳಗದ ದ್ವಾದಶ ವರ್ಷದ ವಾರ್ಷಿಕೋತ್ಸವ ಸಂಪನ್ನ

Posted On: 20-03-2025 09:53AM

ಶಿರ್ವ : ವಿಶ್ವಬ್ರಾಹ್ಮಣ ಯುವ ಸಂಗಮ (ರಿ.) ಮತ್ತು ಮಹಿಳಾ ಬಳಗದ ದ್ವಾದಶ ವರ್ಷದ ವಾರ್ಷಿಕೋತ್ಸವವು ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮುಂಡ್ಕೂರು ಶ್ರೀ ವಿಶ್ವ ಬ್ರಾಹ್ಮಣ ಯುವ ಸೇವಾದಳದ ಗೌರವಾಧ್ಯಕ್ಷರಾದ ಪ್ರಸಾದ್ ತಂತ್ರಿಗಳು ವಿಶ್ವಕರ್ಮರು ಬ್ರಾಹ್ಮಣತ್ವವನ್ನು ಬೆಳೆಸಬೇಕು. ದೇವರನ್ನು ಸೃಷ್ಟಿಸುವ ನಾವು ದೇವರ ಪೂಜೆಯನ್ನು ಯಾಕೆ ಬಿಟ್ಟು ಕೊಟ್ಟಿದ್ದೇವೆ ಎಂದು ಚಿಂತನೆ ಮಾಡುವ ಕಾಲಘಟ್ಟದಲ್ಲಿ ಇದ್ದೇವೆ. ಮುಂದಿನ ಯುವ ಪೀಳಿ ಗೆಯತ್ತ ಮುಖ ಮಾಡಿದ ನಾವು ಜಾಗೃತರಾಗಬೇಕು ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹಿರಿಯ ವೈದಿಕರಾದ ಮೋಹನ್ ಪುರೋಹಿತ್ ದಂಪತಿಗಳನ್ನು ಸನ್ಮಾನಿಸಲಾಯಿತು. ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ಉಮೇಶ ಆಚಾರ್ಯ ಮತ್ತು ವೇದಾವತಿ ಆಚಾರ್ಯ ಇವರನ್ನು ಅಭಿನಂದಿಸಲಾಯಿತು. ಸುಮಾರು 27 ಜನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು. 5 ಜನರಿಗೆ ವೈದ್ಯಕೀಯ ಚಿಕಿತ್ಸಾ ವೆಚ್ಚ ನೀಡಲಾಯಿತು. ಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು.

ಮಹಿಳಾ ಬಳಗದ ಸದಸ್ಯರು ಪ್ರಾರ್ಥಿಸಿದರು. ಮಂಜುಳಾ ಉಮೇಶ ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ಮಾಧವಾಚಾರ್ಯ ವರದಿ ವಾಚಿಸಿದರು. ಕೋಶಾಧಿಕಾರಿ ಪ್ರಶಾಂತ ಆಚಾರ್ಯ ಲೆಕ್ಕಪತ್ರ ಮಂಡಿಸಿದರು. ಗೌರವಾಧ್ಯಕ್ಷ ಸುರೇಶ ಆಚಾರ್ಯ, ಬಂಟಕಲ್ಲು ಗಾಯತ್ರಿ ವೃಂದದ ಅಧ್ಯಕ್ಷೆ ವಿದ್ಯಾ ಹರೀಶ್ ಆಚಾರ್ಯ, ಕುತ್ತ್ಯಾರು ಶ್ರೀ ದುರ್ಗಾಪರಮೇಶ್ವರಿ ಯುವಕ ವೃಂದದ ಅಧ್ಯಕ್ಷ ಶ್ರೇಯಸ್ ಆಚಾರ್ಯ, ಮಹಿಳಾ ಬಳಗದ ಅಧ್ಯಕ್ಷೆ ಸಹನಾ ಗಣೇಶ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಉಮೇಶ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂಜೀವ ಆಚಾರ್ಯ ವಂದಿಸಿದರು. ಪ್ರೀತಮ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಹಿಳಾ ಬಳಗದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ಮಾ. 20 ರಿಂದ 23 : ಬಂಟಕಲ್‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನಲ್ಲಿ ವರ್ಣೋತ್ಸವ, ವಾರ್ಷಿಕ ಸಮಾರಂಭ

Posted On: 19-03-2025 07:16PM

ಬಂಟಕಲ್ :‌ ಬಂಟಕಲ್‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 2024-25 ನೇ ಸಾಲಿನ ವರ್ಣೋತ್ಸವ – 2025 ಮತ್ತು ವಾರ್ಷಿಕ ಸಮಾರಂಭಗಳು ಮಾರ್ಚ್ 20 ರಿಂದ 23ವರೆಗೆ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಸೋದೆ ಎಜ್ಯುಕೇಶನ್‌ ಟ್ರಸ್ಟ್‌ ಕಾರ್ಯದರ್ಶಿ ರತ್ನಕುಮಾರ್‌ ಹೇಳಿದ್ದಾರೆ. ಅವರು ಬುಧವಾರ ಕಾಲೇಜಿನ ಸಭಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ಗುರುವಾರ ಮಾರ್ಚ್ 20ರಂದು ಬೆಳಗ್ಗೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು 9-30ಕ್ಕೆ ನಡೆಯಲಿದ್ದು, ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನ ಇದರ ಉಪಾಧ್ಯಕ್ಷರಾದ ಶ್ರೀನಿವಾಸ ತಂತ್ರಿಗಳು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಸಂಸ್ಥೆಯ ಹಳೆ ವಿದ್ಯಾರ್ಥಿಗಳಾದ ಪವನ್‌ಕುಮಾರ್ ಶೆಟ್ಟಿ, ಮ್ಯುಸಿಕ್ ಟಿಬಿಒಎಸ್‌ಎಮ್‌ ನ ಹಿರಿಯ ಪ್ರಾಧ್ಯಾಪಕಿ ಶ್ರೀಮತಿ ಉಷಾ ರಾಮಚಂದ್ರ ಭಟ್  ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ರತ್ನಕುಮಾರ್‌ ವಹಿಸಲಿದ್ದಾರೆ. ವರ್ಣೋತ್ಸವ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ಇಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪಕ್ಕದ ರಾಜ್ಯ/ಜಿಲ್ಲೆಯ ತಾಂತ್ರಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.  ವಿವಿಧ ತಾಂತ್ರಿಕ ಸ್ಪರ್ಧೆಗಳ ಜೊತೆಗೆ ನೃತ್ಯ, ಗಾಯನ, ಫೋಟೋಗ್ರಫಿ, ಚಿತ್ರಕಲೆ, ಮುಖವರ್ಣ ಸ್ಪರ್ಧೆ ನಡೆಯಲಿರುವುದು. ಅದೇ ದಿನ ಸಂಜೆ  ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ  ನಡೆಯಲಿದೆ.

ವರ್ಣೋತ್ಸವದ ಸಮಾರೋಪ ಸಮಾರಂಭವು ಶುಕ್ರವಾರ ಮಾರ್ಚ್ 21ರಂದು ಸಂಜೆ ನಡೆಯಲಿದೆ.  ಸಮಾರಂಭದಲ್ಲಿ ಬೆಂಗಳೂರಿನ ಉದ್ಯಮಿ ವಿನೋದ್‌ಜಾನ್, ಖ್ಯಾತ ಚಲನ ಚಿತ್ರ ನಟ ಪೃಥ್ವಿಅಂಬರ್‌ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪರಮಪೂಜ್ಯ ಶ್ರೀ ಸೋದೆ ಶ್ರೀಪಾದರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಅದೇ ದಿನ ಸಂಜೆ ಕಾಲೇಜಿನ ಯಕ್ಷಗಾನ ಸಂಘ ಯಕ್ಷಸಿಂಚನದ ವಿದ್ಯಾರ್ಥಿಗಳಿಂದ 3 ಗಂಟೆಯ ಕಾಲ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಮಾರ್ಚ್ ರಂದು 22 ಕಾಲೇಜು ವಾರ್ಷಿಕೋತ್ಸವ ಸಮಾರಂಭವು ಸಂಸ್ಥೆಯ ಆವರಣದಲ್ಲಿ ಪರಮಪೂಜ್ಯ ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಸಭಾ ಕಾರ್ಯಕ್ರಮ ದೊಂದಿಗೆ ಪ್ರಾರಂಭವಾಗುವ ಸಮಾರಂಭವು ಸಂಜೆ ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮಾಪನಗೊಳ್ಳಲಿದೆ.

ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿಯ ನಿರ್ದೇಶಕರಾದ ಡಾ. ಎನ್. ಹೆಚ್. ಸಿದ್ದಲಿಂಗ ಸ್ವಾಮಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿ ಡಾಟಾ ಪ್ಯಾಟರ್ನ್ಸ್ ಲಿಮಿಟೆಡ್‌ ಇದರ ಮುಖ್ಯಸ್ಥರು ಮತ್ತು ನಿರ್ದೇಶಕರಾದ ಶ್ರೀನಿವಾಸ ಗೋಪಾಲನ್ ರಂಗರಾಜನ್ ಮತ್ತು ಶ್ರೀಮತಿ ರೇಖಾಮೂರ್ತಿ ರಂಗರಾಜನ್‌ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶ್ರೀ ಮೂಡಬಿದ್ರಿಯ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕಚಾರು ಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಈ ಸಮಾರಂಭಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿ ಆಶೀರ್ವಚನ ನೀಡಲಿದ್ದಾರೆ. ಆದಿತ್ಯವಾರ, 23 ಮಾರ್ಚ್ 2025 ರಂದು ಬೆಳಿಗ್ಗೆ 10-00 ರಿಂದ “ಆಟೋಎಕ್ಸ್ಪೋ”ದುಬಾರಿ ವಾಹನಗಳ ಪ್ರದರ್ಶನ ಮತ್ತು ಮದ್ಯಾಹ್ನ 3 ಗಂಟೆಗೆ ಹಳೆ ವಿದ್ಯಾರ್ಥಿಗಳ ಸಮಾವೇಶ ಸಮಾರಂಭ ನಡೆಯಲಿದೆ. ಸಂಜೆ 7 ಗಂಟೆಗೆ ಕೇರಳದ ಪ್ರತಿಷ್ಟಿತ ಮ್ಯುಸಿಕಲ್ ಬ್ಯಾಂಡ್ ಸಂಸ್ಥೆಯಾದ“ತಮರಶ್ಶೇರಿಚೂರಂ” ತAಡದಿಂದ ಸಂಗೀತ  ರಸಮಂಜರಿ ಮನೋರಂಜನಾ ಕಾರ್ಯಕ್ರಮ ಜರಗಲಿದೆ ಎಂದೂ ರತ್ನಕುಮಾರ್‌ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪ್ರಾಂಶುಪಾಲ ಡಾ. ತಿರುಮಲೇಶ್ವರ ಭಟ್‌, ಸಂಯೋಜಕರಾದ ಸಚಿನ್‌ ಪ್ರಭು, ಡಾ. ಶಿಲ್ಪಾ ಕಾಮತ್‌ ಉಪಸ್ಥಿತರಿದ್ದರು.

ಮಾಚ್೯ 21 : ಪಡುಬಿದ್ರಿಯಲ್ಲಿ ರಾಗ್ ರಂಗ್ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸ್ಟಾರ್ ನೃೆಟ್

Posted On: 19-03-2025 04:47PM

ಪಡುಬಿದ್ರಿ : ಪಡುಬಿದ್ರಿ ರಾಗ್ ರಂಗ್ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಕ್ಲಬ್ (ರಿ.) ವತಿಯಿಂದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ 20ನೇ ವರ್ಷದ "ಸ್ಟಾರ್ ನೃೆಟ್" ಸಾಂಸ್ಕೃತಿಕ ಕಾರ್ಯಕ್ರಮವು ವಿಶ್ವಾಸ್ ವಿ.ಅಮೀನ್ ಸಾರಥ್ಯದಲ್ಲಿ ಮಾರ್ಚ್ 21 ರಂದು ರಾತ್ರಿ 8 ಗಂಟೆಗೆ ದೇವಸ್ಥಾನದ ವಠಾರದಲ್ಲಿ ಅದ್ದೂರಿ ವೇದಿಕೆಯಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಗಣ್ಯರು ಹಾಗು ಕನ್ನಡ ಮತ್ತು ತುಳು ಚಿತ್ರರಂಗದ ಖ್ಯಾತ ನಟ ನಟಿಯರು ಭಾಗವಹಿಸಲಿದ್ದು, ವಿವಿಧ ವಿಭಾಗದ ಸಾಧಕರಿಗೆ ಸನ್ಮಾನ ಮತ್ತು ಜಿಲ್ಲೆಯ ಪ್ರಸಿದ್ಧ ನೃತ್ಯ ತಂಡದವರಿಂದ "ನೃತ್ಯ ವೃೆಭವ" ಹಾಗು ಕೇರಳ ಮತ್ತು ಜಿಲ್ಲೆಯ ಸುಪ್ರಸಿದ್ಧ ಸಂಗೀತಾ ಕಲಾವಿದರನ್ನು ಒಳಗೊಂಡ ಶಶಿ ಮ್ಯೂಸಿಕಲ್ ಪಡುಬಿದ್ರಿ ತಂಡದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮವು ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ವಿಶ್ವಾಸ್ ವಿ.ಅಮೀನ್ ತಿಳಿಸಿದ್ದಾರೆ.

ಕಳೆದ 19 ವರ್ಷಗಳಿಂದ ಸಂಸ್ಥೆಯು ಸಾಮಾಜಿಕ ಹಾಗು ಕಲಾ ಕ್ಷೇತ್ರದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಂಡು ಬಂದಿರುತ್ತದೆ. ಪಡುಬಿದ್ರಿಯಲ್ಲಿ ಪ್ರಥಮ ಬಾರಿಗೆ ಉಭಯ ಜಿಲ್ಲಾ ಮಟ್ಟದ ಗೂಡುದೀಪ ಸ್ಪರ್ಧೆಯನ್ನು ಅಯೋಜಿಸಿರುತ್ತದೆ. ಗ್ರಾಮೀಣ ಮಟ್ಟದ ಕಲಾ ಪ್ರತಿಭೆಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಂಡು ಬರುತ್ತಿದೆ.

ಪಡುಕಳತ್ತೂರು ಪಿಕೆಎಸ್ ಪ್ರೌಢ ಶಾಲೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ

Posted On: 18-03-2025 09:12PM

ಕಾಪು : ಪಡುಕಳತ್ತೂರು ಪಿಕೆಎಸ್ ಪ್ರೌಢ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ ಭಯ ಹಾಗೂ ಒತ್ತಡ ನಿವಾರಣೆ, ಪರಿಣಾಮಕಾರಿ ಪರೀಕ್ಷಾ ಪೂರ್ವ ಸಿದ್ಧತೆ, ಧನಾತ್ಮಕ ಚಿಂತನೆಯೊಂದಿಗೆ ಆತ್ಮವಿಶ್ವಾಸ ವೃದ್ಧಿಯ ಬಗ್ಗೆ ಕಾಪು ತಾಲೂಕು ಕಸಾಪ ಅಧ್ಯಕ್ಷರು ಹಾಗೂ ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ ಸಂವಾದ ನಡೆಸಿ ವಿದ್ಯಾರ್ಥಿಗಳಲ್ಲಿ ಉತ್ಸಾಹ ತುಂಬಿದರು.

ಪರೀಕ್ಷೆಯ ದಿನದ ಮೊದಲ ಸಿದ್ಧತೆ, ಪರೀಕ್ಷಾ ಕೊಠಡಿಯಲ್ಲಿ ಹಾಗೂ ಪರೀಕ್ಷೆಯ ಕೊನೆಯಲ್ಲಿ ಗಮನಿಸಬೇಕಾದ ಅಂಶಗಳನ್ನು ತಿಳಿಸಿ ಯಾವುದೇ ಭಯವಿಲ್ಲದೆ ಖುಷಿಯಲ್ಲಿ ಪೂರ್ಣ ಆತ್ಮವಿಶ್ವಾಸದೊಂದಿಗೆ ಪರೀಕ್ಷೆಗೆ ಬರೆಯುವಂತೆ ಮನವರಿಕೆ ಮಾಡಿದರು. ಕನ್ನಡ ಭಾಷಾ ಪಾಠದಲ್ಲಿ ಪೂರ್ಣ ಅಂಕಗಳಿಸಿದ ಕಾಪು ತಾಲೂಕಿನ ಎಲ್ಲಾ ವಿದ್ಯಾರ್ಥಿಗಳಿಗೆ ಕಸಾಪ ವತಿಯಿಂದ ನಗದು ಬಹುಮಾನದೊಂದಿಗೆ ತಾಲೂಕು ಮಟ್ಟದಲ್ಲಿ ಸನ್ಮಾನಿಸಲಾಗುವುದು ಎಂದರು.

ಶಿರ್ವ ರೋಟರಿಯ ಇಂರ‍್ಯಾಕ್ಟ್ ಸಂಸ್ಥೆಗಳಿರುವ ಶಾಲೆಗಳಲ್ಲಿ ನೂರು ಶೇಕಡ ಫಲಿತಾಂಶ ದಾಖಲಿಸಿದ್ದಲ್ಲಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳಿಗೆ ವಿಶೇಷ ಬಹುಮನ ನೀಡಿ ಅಭಿನಂದಿಸಲಾಗುವುದು ಎಂದರು. ವಿದ್ಯಾರ್ಥಿಗಳು ಮುಕ್ತವಾಗಿ ಸಂವಾದದಲ್ಲಿ ಪಾಲ್ಗೊಂಡರು.

ಶಾಲಾ ಮುಖ್ಯ ಶಿಕ್ಷಕ ಗಂಗಾ ನಾಯ್ಕ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಹಶಿಕ್ಷಕ ಚಂದ್ರಕಾಂತ್ ಮಾನೆ ನಾಯ್ಕ್ ವಂದಿಸಿದರು. ವೇದಿಕೆಯಲ್ಲಿ ಶಿಕ್ಷಕಿಯರಾದ ಸಂಗೀತಾ, ಕು.ಕಾವ್ಯಾ ಉಪಸ್ಥಿತರಿದ್ದರು.

ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಕಾಪು : ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಭೇಟಿ

Posted On: 18-03-2025 09:04PM

ಕಾಪು : ಪುನರ್ ನಿರ್ಮಾಣಗೊಂಡಿರುವ ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಕಾಪು ಇಲ್ಲಿಗೆ ಮಂಗಳವಾರ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಭೇಟಿ ನೀಡಿದರು.

ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯಾ ಸನ್ನಿದಾನದಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿ ಗೌರವಿಸಿದರು.

ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಸದಸ್ಯ ಶೇಖರ್ ಸಾಲ್ಯಾನ್, ನವದುರ್ಗಾ ಲೇಖನ ಯಜ್ಞ ಸಮಿತಿಯ ಕಾರ್ಯಾಧ್ಯಕ್ಷೆ ಸಾವಿತ್ರಿ ಗಣೇಶ್, ಪ್ರಚಾರ ಸಮಿತಿಯ ಸಂಚಾಲಕ ರಘುರಾಮ್ ಶೆಟ್ಟಿ ಕೊಪ್ಪಲಂಗಡಿ, ಪ್ರಬಂಧಕ ಗೋವರ್ಧನ್ ಸೇರಿಗಾರ್ ಮತ್ತಿತರರು ಉಪಸ್ಥಿತರಿದ್ದರು.

ಚಿತ್ರಕಲೆ : ಕಾಂತಾರ ಸಿನಿಮಾದ ಚಿತ್ರ ಬಿಡಿಸಿದ ಕಾಂತಾವರದ ಶ್ರೀಯಾ ಕುಲಾಲ್

Posted On: 18-03-2025 03:39PM

ಕಾರ್ಕಳ : ತಾಲೂಕಿನ ಕಾಂತಾವರದ ಶ್ರೀಯಾ ಕುಲಾಲ್ ಕಾಂತಾರ ಸಿನಿಮಾದ ಕಲ್ಪನೆಯ ಚಿತ್ರ ರಚಿಸಿದ್ದು, ಅದ್ಭುತವಾಗಿ ಮೂಡಿ ಬಂದಿದೆ. ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿರುವ ಈಕೆಯಿಂದ ಹಲವಾರು ಚಿತ್ರಗಳು ರೂಪುಗೊಂಡಿದೆ.

ಶ್ರೀಯಾ ಕುಲಾಲ್ ಕಾಂತಾವರ ಕುಲಾಲ ಸಂಘ ಇದರ ಸಕ್ರಿಯ ಸದಸ್ಯ ಸಂತೋಷ್ ಕುಲಾಲ್ ಬೇಲಾಡಿ ಹಾಗೂ ಸುಮಿತ ಕುಲಾಲ್ ದಂಪತಿ ಸುಪುತ್ರಿ.

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಭೇಟಿ

Posted On: 18-03-2025 10:41AM

ಉಚ್ಚಿಲ : ಇಲ್ಲಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಮಂಗಳವಾರ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಭೇಟಿ ನೀಡಿದರು.

ಅಂಗಾರಕ ಸಂಕಷ್ಟಹರ ಚತುರ್ಥಿಯ ಶುಭದಿನದಂದು ಶ್ರೀ ಕ್ಷೇತ್ರಕ್ಕೆ ಆಗಮಿಸಿದ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರಿಗೆ ದೇವಳದ ಪ್ರಧಾನ ಅರ್ಚಕರು ಶ್ರೀದೇವಿಯ ಪ್ರಸಾದ ನೀಡಿದರು. ದೇವಸ್ಥಾನದ ವತಿಯಿಂದ ಗೌರವಿಸಿಲಾಯಿತು.

ಈ ಸಂದರ್ಭದಲ್ಲಿ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಗಿರಿಧರ್ ಸುವರ್ಣ, ಪುರೋಹಿತರಾದ ರಾಘವೇಂದ್ರ ಉಪಾಧ್ಯಾಯ, ಶ್ರೀನಿವಾಸ್ ಉಪಾಧ್ಯಾಯ, ದೇವಳದ ಪ್ರಬಂಧಕ ಸತೀಶ್ ಅಮೀನ್ ಪಡುಕರೆ ಮೊದಲಾದವರು ಉಪಸ್ಥಿತರಿದ್ದರು.

ತುಳುನಾಡ ಕಲಾವಿದರು ಪಡುಬಿದ್ರಿ ವತಿಯಿಂದ 24 ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮ

Posted On: 18-03-2025 10:34AM

ಪಡುಬಿದ್ರಿ : ತುಳುನಾಡ ಕಲಾವಿದರು (ರಿ.) ಪಡುಬಿದ್ರಿ ಇದರ ವತಿಯಿಂದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ 24ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕಲ್ಲಟ್ಟೆ ಶ್ರೀ ಧರ್ಮ ಜಾರಂದಾಯ ಸೇವಾ ಸಮಿತಿಯ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು.

ಭಾರತೀಯ ನೌಕದಳದ ನಿವೃತ್ತ ಸೇನಾಧಿಕಾರಿ ನಟರಾಜ್ ಪಿ.ಎಸ್ ಮಾತನಾಡಿ, ಕಲೆ ಹಾಗು ರಂಗಭೂಮಿ ಕಲಿಕೆಯು ಸೃಜನಶೀಲತೆ, ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆತ್ಮವಿಶ್ವಾಸವನ್ನು ಸುಧಾರಿಸುತ್ತದೆ. ಕಲೆಯು ಜನರಿಗೆ ಮೌಲ್ಯಯುತ ನೀತಿ ಪಾಠವನ್ನು ತಿಳಿಸುವ ಕೊಂಡಿಯಾಗಿದೆ. ಯುವ ಕಲಾವಿದರಿಗೆ ಉತ್ತೇಜನವನ್ನು ನೀಡುವ ಹಾಗೂ ಉತ್ತಮ ಅವಕಾಶವನ್ನು ಕಲ್ಪಿಸುವ ಕೆಲಸ ಕಾರ್ಯಗಳು ಸಂಘ ಸಂಸ್ಥೆಗಳು ಮಾಡಬೇಕಾಗಿದೆ. ಈ ನಿಟ್ಚಿನಲ್ಲಿ ತುಳುನಾಡ ಕಲಾವಿದರು ಮಾಡುತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಸನ್ಮಾನ/ಪ್ರಶಸ್ತಿ ಪ್ರಧಾನ : ಭಾರತೀಯ ನೌಕಾದಳದ ನಿವೃತ್ತ ಸೇನಾಧಿಕಾರಿ ನಟರಾಜ್ ಪಿ.ಎಸ್, ಸಾಮಾಜಿಕ ಹೋರಾಟಗಾರ ಶೇಖರ್ ಹೆಜ್ಮಾಡಿ, ಸಮಾಜ ಸೇವಕ ಕೆ. ಸುರೇಶ್ ಕುಮಾರ್, ರಾಷ್ಟ್ರೀಯ ಅಥ್ಲೆಟಿಕ್ ಶಾಟ್ಪುಟ್ ಕ್ರೀಡಾ ಪಟು ಅನುರಾಗ್ ಜಿ. ರವರನ್ನು ಸನ್ಮಾನಿಸಲಾಯಿತು. 2024-25 ರ ಸಾಲಿನ "ತುಳುನಾಡ ಸಿರಿ ಪ್ರಶಸ್ತಿ"ಯನ್ನು ಕಲಾ ಕ್ಷೇತ್ರದಲ್ಲಿ ಸಾಧನೆಗೈದ ರಂಗಭೂಮಿ ಕಲಾವಿದೆ ಕು.ಯಶೋಧ ಪಡುಬಿದ್ರಿರವರಿಗೆ ನೀಡಿ ಗೌರವಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಸಂತೋಷ್ ಪಡುಬಿದ್ರಿ ವಹಿಸಿದ್ದರು. ಈ ಸಂದರ್ಭದಲ್ಲಿ ರಾಗ್ ರಂಗ್ ಕಲ್ಚರಲ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ವಿಶ್ವಾಸ್ ಅಮೀನ್, ಪಡುಬಿದ್ರಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷೆ ಯಶೋಧ ಪಡುಬಿದ್ರಿ, ಗ್ರಾ.ಪಂ.ಸದಸ್ಯ ಗಣೇಶ್ ಕೋಟ್ಯಾನ್, ಓಂಕಾರ ಕಾಸ್ಟ್ಯೂಮ್ಸ್ ಮತ್ತು ಕಲಾ ಸಂಗಮದ ಪಾಲುದಾರೆ ಗೀತಾ ಅರುಣ್, ಸಾಮಾಜಿಕ ಹೋರಾಟಗಾರ ಶೇಖರ್ ಹೆಜ್ಮಾಡಿ, ಕಡಲ್ ಫಿಶ್ ಕ್ರಿಕೆಟರ್ಸ್ ಸಂಸ್ಥೆಯ ಅಧ್ಯಕ್ಷ ಚೇತನ್ ಪಡುಬಿದ್ರಿ, ಶ್ರೀ ಆದಿಶಕ್ತಿ ಮಂತ್ರದೇವತೆ ಮತ್ತು ಕೊರಗಜ್ಜ ಸನ್ನಿಧಾನದ ಧರ್ಮದರ್ಶಿ ಸುಧಾಕರ್ ಸಾಲ್ಯಾನ್, ಪಡುಬಿದ್ರಿ ರೋಟರಿ ನಿಯೋಜಿತ ಅಧ್ಯಕ್ಷ ಸುನಿಲ್ ಕುಮಾರ್, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ರಾಜ್ಯ ಅಧ್ಯಕ್ಷ ರಚನ್ ಸಾಲ್ಯಾನ್, ಭಗವತಿ ಫ್ರೆಂಡ್ಸ್ ಗ್ರೂಪ್ ಸ್ಥಾಪಕ ಅಧ್ಯಕ್ಷ ಯುವರಾಜ್ ಕುಲಾಲ್ ಉಪಸ್ಥಿತರಿದ್ದರು. ಸಂತೋಷ್ ಪಡುಬಿದ್ರಿ ಸ್ವಾಗತಿಸಿದರು. ಸಂತೋಷ್ ನಂಬಿಯಾರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸುಧಾಕರ್ ಕೆ. ವಂದಿಸಿದರು.

ಶ್ರೀ ಕ್ಷೇತ್ರ ಶಂಕರಪುರ : ವಿಶ್ವ ಪ್ರಾಣಿ ಪಕ್ಷಿಗಳ ಮೋಕ್ಷ ದಿನಾಚರಣೆ

Posted On: 17-03-2025 12:59PM

ಕಟಪಾಡಿ : ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ಇದರ ವತಿಯಿಂದ ವಿಶ್ವ ಪ್ರಾಣಿ ಪಕ್ಷಿಗಳ ಮೋಕ್ಷ ದಿನಾಚರಣೆಯು ಆದಿತ್ಯವಾರ ಶಂಕರಪುರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಪ್ರಾಣಿ ಪಕ್ಷಿಗಳಿಗೂ ಆತ್ಮವಿದೆ ಪ್ರಾಣಿ ಪಕ್ಷಿಗಳು ವಿವಿಧ ಕಾರಣದಿಂದ ಸಾವನ್ನಪ್ಪಿದಾಗ ಇದಕ್ಕೆ ಮೋಕ್ಷ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ವಿಶ್ವ ಪ್ರಾಣಿ ಪಕ್ಷಿಗಳ ಮೋಕ್ಷ ದಿನಾಚರಣೆ ಕಾರ್ಯಕ್ರಮವು ಕಳೆದ ಎಂಟು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ ಎಂದರು.

ಈ ಸಂದರ್ಭದಲ್ಲಿ ಮಠದ ಟ್ರಸ್ಟಿ ಗೀತಾಂಜಲಿ ಸುವರ್ಣ, ವೀಣಾ ಶೆಟ್ಟಿ, ಸಮಾಜ ಸೇವಕರಾದ ಪ್ರಶಾಂತ್ ಪೂಜಾರಿ, ವಿನೋದ್ ಪಡೀಲ್, ಚಂದ್ರಹಾಸ್, ಸಂತೋಷ್ ಉದ್ಯಾವರ ಮುಂತಾದವು ಉಪಸ್ಥಿತರಿದ್ದರು.

ಮಠದ ಪ್ರಮುಖರಾದ ಸತೀಶ್, ನಿಲೇಶ್ ಮುಂತಾದವರು ಸಹಕರಿಸಿದರು. ರಾಘವೇಂದ್ರ ಪ್ರಭು ನಿರೂಪಿಸಿ, ವಂದಿಸಿದರು.

ಬದ್ರೀಯಾ ಜುಮ್ಮಾ ಮಸೀದಿ ಮಜೂರು ಮಲ್ಲಾರು ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ

Posted On: 17-03-2025 11:10AM

ಕಾಪು : ಬದ್ರೀಯಾ ಜುಮ್ಮಾ ಮಸೀದಿ ಮಜೂರು ಮಲ್ಲಾರು ಇದರ ನೂತನವಾಗಿ ಆಯ್ಕೆಯಾದ ಜಮಾತ್ ಆಡಳಿತ ಸಮಿತಿ ಹಾಗೂ ಜಮಾತ್ ಅಭಿವೃದ್ದಿ ಸಮಿತಿಯ ವತಿಯಿಂದ ದಾನಿಗಳ ನೆರವಿನಿಂದ ವಿವಿದ ಅಭಿವೃದ್ಧಿ ಕಾಮಗಾರಿಗಳನ್ನು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಿದರು. ಈ ಸಂದರ್ಭ ಅವರು ಅಭಿವೃದ್ದಿ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಜಮಾತ್ ಸಮಿತಿ ಮತ್ತು ಅಬಿವೃದ್ದಿ ಸಮಿತಿ ಹಾಗೂ ದಾನಿಗಳು, ಎಲ್ಲಾ ಜಮಾತಿಗರ ಒಗ್ಗಟ್ಟನ್ನು ಶ್ಲಾಘಿಸಿದರು.

ಜಮಾತಿನ ಹಲವಾರು ದಾನಿಗಳ ಮುಖಾಂತರ ಸಮಾರು 10 ಲಕ್ಷದ ಅಭಿವೃದ್ಧಿ ಕಾರ್ಯಗಳು ನಡೆಯಿತು. ಜಮಾತಿನ ಅಧ್ಯಕ್ಷರಾದ ಡಾ. ಯು.ಎಂ.ಫಾರೂಕ್ ಚಂದ್ರನಗರರವರು ಅಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ರಜಬ್ ಪರ್ಕಳ, ಅಶ್ರಫ್ ಮೂಸ ಮಜೂರು, ಹಸನಬ್ಬ ಸಾಹೇಬ್, ಹಾಜಿಮೋನು, ಉ ಎ ರಶೀದ್, ಸಾದಿಕ್ ಕೆ ಪಿ, ಮಹಮ್ಮದ್, ಶೌಕತ್ ಅಲಿ ಬಾವ, ಅಬ್ದುಲ್ ರಹೀಂ, ಜಮಾತ್ ಆಡಳಿತ ಸಮಿತಿಯ ಸದಸ್ಯರುಗಳು, ಮಾಜಿ ಅಧ್ಯಕ್ಷರುಗಳು ಹಾಗೂ ಜಮಾತಿನ ಸದಸ್ಯರು ಉಸಸ್ಥಿತರಿದ್ದರು. ಮಸೀದಿಯ ಖತೀಬರಾದ ಅಬ್ದುಲ್ ರಶೀದ್ ಸಖಾಫಿ ದುವಾ ಮಾಡಿದರು. ಶರ್ಫುದ್ದೀನ್ ಶೇಖ್ ಸ್ವಾಗತಿಸಿ, ಅಶ್ರಫ್ ಖಾಸಿಂ ಕರಂದಾಡಿ ವಂದಿಸಿದರು.