Updated News From Kaup

ಕಾಪು : ಜಮೀಯತುಲ್ ಫಲಾಹ್ ಕಾಪು ಘಟಕದಿಂದ ವಿದ್ಯಾರ್ಥಿ ವೇತನ ವಿತರಣೆ

Posted On: 30-09-2024 01:43PM

ಕಾಪು : ಜಮೀಯತುಲ್ ಫಲಾಹ್ ಕಾಪು ತಾಲೂಕು ಘಟಕದ ವತಿಯಿಂದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಶನಿವಾರ ಕಾಪುವಿನ ಕೆ1 ಹೊಟೇಲ್‌ನಲ್ಲಿ ನಡೆಯಿತು. ಕಾಪು ತಾಲ್ಲೂಕಿನ ಪ್ರತಿಭಾವ್ನಿತ 66 ವಿದ್ಯಾರ್ಥಿಗಳಿಗೆ ಒಟ್ಟು 2.64 ಲಕ್ಷ ರೂ. ಆರೋಗ್ಯ ಸಹಾಯಕ್ಕಾಗಿ 40 ಸಾವಿರ ರೂ. ಸೇರಿ ಸುಮಾರು ಮೂರು ಲಕ್ಷಕ್ಕೂ ಅಧಿಕ ಮೌಲ್ಯವನ್ನು ಅರ್ಹರಿಗೆ ವಿತರಿಸಲಾಯಿತು.

ಜಮೀಯತುಲ್ ಫಲಾಹ್ ದ.ಕ ಮತ್ತು ಉಡುಪಿ ಜಿಲ್ಲಾಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್ ಮಾತನಾಡಿ, ಮುಸ್ಲಿಮ್ ಸಮುದಾಯ ಇತ್ತೀಚಿನ ದಿನಗಳಲ್ಲಿ ಶಿಕ್ಷಣಕ್ಕೆ ಒತ್ತು ನೀಡುತಿದ್ದು, ಜಮೀಯತುಲ್ ಫಲಾಹ್ ಇದಕ್ಕಾಗಿ ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳಬೇಕು ಎಂದು ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಜಮೀಯತುಲ್ ಫಲಾಹ್ ಕಾಪು ತಾಲ್ಲೂಕು ಘಟಕದ ಅಧ್ಯಕ್ಷ ಶಭಿ ಅಹಮದ್ ಕಾಝಿ ಮಾತನಾಡಿ, ವಿದ್ಯಾರ್ಥಿಗಳು ಪಡೆದ ಈ ವಿದ್ಯಾರ್ಥಿವೇತನವನ್ನು ದುರುಪಯೋಗ ಮಾಡದೆ ಇದನ್ನು ಮುಂದಿನ ತಮ್ಮ ಶಿಕ್ಷಣಕ್ಕಾಗಿ ಮೀಸಲಿಡಬೇಕು ಎಂದು ಹೇಳಿದರು.

ಹಲೀಮ ಸಾಬ್ಜು ಆಡಿಟೋರಿಂ ಆಡಳಿತ ನಿರ್ದೇಶಕ ಹಾಜಿ ಅಬ್ದುಲ್ ಜಲೀಲ್ ಸಾಹೇಬ್ ಶುಭಹಾರೈಸಿದರು. ಉಪಾಧ್ಯಕ್ಷ ಮುಹಮ್ಮದ್ ಸಾಧಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉಸ್ಮಾನ್ ಖಾನ್ ಕಿರಾಅತ್ ಪಠಿಸಿದರು. ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಸ್ವಾಗತಿಸಿದರು. ಮಾಧ್ಯಮ ಕಾರ್ಯದರ್ಶಿ ಅನ್ವರ್ ಅಲಿ ಕಾಪು ಕಾರ್ಯಕ್ರಮ ನಿರೂಪಿಸಿ, ಪ್ರಾಸ್ತಾವನೆಗೈದರು. ಕೋಶಾಧಿಕಾರಿ ಶೇಖ್ ಸಾಬಿರ್ ಅಲಿ ವಂದಿಸಿದರು.

ತರಬೇತಿ ಸಮ್ಮೇಳನ - ಜೇಸಿಐ ಉಡುಪಿ ಸಿಟಿ ಘಟಕಕ್ಕೆ ಹಲವು ಪ್ರಶಸ್ತಿ

Posted On: 30-09-2024 11:16AM

ಉಡುಪಿ : ಜೇಸಿಐ ಉಡುಪಿ ಸಿಟಿ ಘಟಕವು ಜೇಸಿಐ ವಲಯ 15 ರ ವತಿಯಿಂದ ಶಂಕರಪುರದಲ್ಲಿ ನಡೆದ ವಲಯದ ಪ್ರಥಮ ತರಬೇತಿ ಸಮ್ಮೇಳನ ಇನ್ಸ್ಪಾಯರ್ - 2024 ರಲ್ಲಿ ಅತ್ಯುತ್ತಮ ಹೊಸ ತರಬೇತುದಾರ ಪುರಸ್ಕಾರ ಸಹಿತ ವಿವಿಧ ಪ್ರಶಸ್ತಿಗೆ ಭಾಜನವಾಗಿದೆ.

ಜೇಸಿ ಶಂಕರಪುರದಲ್ಲಿ ಸಹ ಆತಿಥ್ಯದಲ್ಲಿ ನಡೆದ ಸಮ್ಮೇಳನದಲ್ಲಿ ತರಬೇತಿ ವಿಭಾಗದಲ್ಲಿ ಟಾಪ್ - 4, ಪರಿಣಾಮಕಾರಿ ಭಾಷಣದಲ್ಲಿ ದ್ವಿತೀಯ, ಬ್ಯಾನರ್ ಅನಾವರಣದಲ್ಲಿ ದ್ವಿತೀಯ, ತರಬೇತಿ ವಿಭಾಗದಲ್ಲಿ 7 ಮನ್ನಣೆ ಸಹಿತ ವಿವಿಧ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ವಲಯಾಧ್ಯಕ್ಷ ಗಿರೀಶ್ ಎಸ್ .ಪಿ ಪ್ರಶಸ್ತಿ ನೀಡಿ ಗೌರವಿಸಿದರು.

ಈ ಸಂದಭ೯ದಲ್ಲಿ ತರಬೇತಿ ವಿಭಾಗದ ನಿದೇ೯ಶಕಿ ಹೇಮಲತಾ ಪ್ರದೀಪ್, ವಲಯಾಡಳಿತ ಮಂಡಳಿ ಸದಸ್ಯರು, ಉಡುಪಿ ಸಿಟಿ ಅಧ್ಯಕ್ಷೆ ಡಾ.ಹರೀಣಾಕ್ಷಿ ಕಕೇ೯ರ, ಪೂವ೯ ಅಧ್ಯಕ್ಷರಾದ ಉದಯ್ ನಾಯ್ಕ್, ಸ್ಮಿತಾ ಪಾಟೀಲ್ , ರಾಘವೇಂದ್ರ ಕವಾ೯ಲು ಉಪಸ್ಥಿತರಿದ್ದರು.

ಅಕ್ಟೋಬರ್ 3 : ಕಾಪು ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಉಪ ಸಮಿತಿಯಾದ ಉಡುಪಿ ನಗರಸಭಾ ಸಮಿತಿಯ ಕಚೇರಿ ಉದ್ಘಾಟನಾ ಸಮಾರಂಭ

Posted On: 29-09-2024 08:18PM

ಕಾಪು : ಉಡುಪಿ ನಗರಸಭಾ ವ್ಯಾಪ್ತಿಯ ಜನರನ್ನು ನವದುರ್ಗಾ ಲೇಖನ ಯಜ್ಞದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಉಡುಪಿಯ ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರದಲ್ಲಿ ಕಾಪು ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಉಪ ಸಮಿತಿಯಾದ ಉಡುಪಿ ನಗರಸಭಾ ಸಮಿತಿಯ ಕಚೇರಿ ಉದ್ಘಾಟನಾ ಸಮಾರಂಭವು ಅಕ್ಟೋಬರ್ 3, ಗುರುವಾರ ಅಪರಾಹ್ನ 04:30ಕ್ಕೆ ನಡೆಯಲಿದೆ.

ಶ್ರೀ ಹೊಸ ಮಾರಿಗುಡಿ ದೇವಸ್ಥಾನವು ಅತ್ಯದ್ಬುತವಾಗಿ ಬಾಗಲಕೋಟೆಯ ಇಳಕಲ್ ಕೆಂಪು ವರ್ಣದ ಶಿಲೆಯಿಂದ ಶಿಲಾಮಯವಾಗಿ ನವಿಕೃತಗೊಳ್ಳುತ್ತಿದೆ. ಪ್ರಥಮ ಹಂತದ ಕಾಮಗಾರಿಯನ್ನು ಪೂರ್ಣಗೊಳಿಸಿ 2025 ರ ಫೆಬ್ರವರಿ 25 ರಿಂದ ಮೊದಲ್ಗೊಂಡು ಮಾರ್ಚ್ 5 ರ ವರೆಗೆ 9 ದಿನಗಳ ಧಾರ್ಮಿಕ, ಸಾಂಸ್ಕೃತಿಕ ಸಭಾ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಲಿದೆ. ಮಾರ್ಚ್ 2 ರಂದು ಮಾರಿಯಮ್ಮ ಮತ್ತು ಉಚ್ಚಂಗಿ ದೇವಿಯ ಗದ್ದುಗೆ ಪ್ರತಿಷ್ಠೆ ಹಾಗೂ ಮಾರ್ಚ್ 5 ರಂದು ದೇವಳದ ಬ್ರಹ್ಮಕಲಶೋತ್ಸವವು ನಡೆಯಲಿದೆ. ಆ ಪ್ರಯುಕ್ತ ನವದುರ್ಗಾ ಲೇಖನ ಯಜ್ಞ ಎಂಬ ಮಹಾ ಸಂಕಲ್ಪವನ್ನು ಸಾನಿಧ್ಯ ವೃದ್ಧಿ ಮತ್ತು ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡಿದೆ.

ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಉಡುಪಿ ಕ್ಷೇತ್ರದ ಶಾಸಕರು, ಎಲ್ಲಾ ವಾರ್ಡ್ ಗಳ ನಗರಸಭಾ ಸದಸ್ಯರು, ಹಾಗೂ ಅನೇಕ ಗಣ್ಯರು ಭಾಗವಹಿಸಲಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕಾಪು ಮಾರಿಯಮ್ಮನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಉಡುಪಿ ಜಿಲ್ಲೆಯ ನೇತ್ರತ್ವ ವಹಿಸಿರುವ ಸಾಯಿರಾಧಾ ಗ್ರೂಪ್ ನ ಆಡಳಿತ ನಿರ್ದೇಶಕರಾದ ಮನೋಹರ ಎಸ್.ಶೆಟ್ಟಿ , ಉಡುಪಿ ನಗರಸಭಾ ಅಧ್ಯಕ್ಷರಾದ ಪ್ರಭಾಕರ ಪೂಜಾರಿ, ಉಡುಪಿ ನಗರಸಭಾ ಸಮಿತಿಯ ಪ್ರಧಾನ ಸಂಚಾಲಕರಾದ ಕೊಡವೂರು ದಿವಾಕರ ಶೆಟ್ಟಿ ಮತ್ತು ಮುಖ್ಯ ಸಂಚಾಲಕರಾದ ಗಿರೀಶ್ ಅಂಚನ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹಿಂದು ಸಮಾಜ ಉದಾರ ಭಾವನೆಯನ್ನು ಹೊಂದಿದೆ : ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ

Posted On: 29-09-2024 07:54PM

ಪಡುಬಿದ್ರಿ : ಹಿಂದು ಸಮಾಜ ಉದಾರ ಭಾವನೆಯನ್ನು ಹೊಂದಿದೆ. ಎಲ್ಲರೂ ಒಟ್ಟಿಗೆ ಒಂದಾಗಿ ಬಾಳಬೇಕೆಂಬ ಕಲ್ಪನೆಯೂ ಇದೆ. ಆದರೆ ಆ ಭಾವನೆಯು ಅನ್ಯರಿಗೂ ಇದ್ದಲ್ಲಿ ಮಾತ್ರ ಅದು ಯಶಸ್ಸು ಕಾಣಲು ಸಾಧ್ಯ. ನಮ್ಮ ಉಳಿವಿಗಾಗಿ ನಾವು ಜಾಗೃತರಾಗಿರಬೇಕು. ಜಾತೀಯತೆಯಲ್ಲಿ ಹರಿದು ಹಂಚಿ ಹೋಗದೇ, ಸಮಾಜ ಮುಖಿಯಾಗಿ ಹಿಂದುತ್ವ ಜಾಗೃತಗೊಳ್ಳಬೇಕಿದೆ. ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರು ಈ ಬಗ್ಗೆ ಚಿಂತಿಸಿ ಸಮಾಜದ ರಕ್ಷಣೆಗೆ ಮಹತ್ವದ ನಿರ್ಧಾರದೊಂದಿಗೆ ಮುಂದಡಿ ಇರಿಸುವ ಅವಶ್ಯಕತೆ ಇದೆ ಎಂದು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತೀ ಪೀಠದ ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು. ಅವರು ಭಾನುವಾರ ಕಾಪು ತಾಲೂಕು ವಿಶ್ವ ಹಿಂದು ಪರಿಷದ್ ವತಿಯಿಂದ ಪಡುಬಿದ್ರಿ ಬಂಟರ ಭವನದಲ್ಲಿ ನಡೆದ ವಿಶ್ವ ಹಿಂದು ಪರಿಷದ್ನ ಷಷ್ಠಿಪೂರ್ತಿ ವರ್ಷದ ಪ್ರಯುಕ್ತ ಹಿಂದೂ ಸಮಾವೇಶದಲ್ಲಿ ಆಶೀರ್ವಚನ ನೀಡುತ್ತಾ ಮಾತನಾಡಿದರು.

ವಿಶ್ವ ಹಿಂದು ಪರಿಷದ್ ಉಡುಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ಮಾತನಾಡಿ, ನಮ್ಮ ಮನೆಯಂಗಳಕ್ಕೆ ಬಂದಂತಹ ಸಮಸ್ಯೆಗಳು ಮನೆಯೊಳಕ್ಕೆ ಬಾರದಂತೆ ಎಚ್ಚರಿಕೆ ವಹಿಸಿಕೊಳ್ಳಬೇಕಾದ ಆವಶ್ಯಕತೆ ಇದೆ. ಜಾಗೃತ ಹಿಂದು ಸಮಾಜ ನಿರ್ಮಾಣ ಆಗಬೇಕಿದೆ. ನಮ್ಮ ಮಕ್ಕಳು ಹಿಂದುಗಳಾಗಿ ಬದುಕಬೇಕಾದಲ್ಲಿ ಹಿಂದುತ್ವ ಮನೋಭಾವವು ಜಾಗೃತ ಸ್ಥಿತಿಯಲ್ಲಿ ಇರಬೇಕಿದೆ. ಹಿಂದುತ್ವ ರಕ್ಷಣೆಗಾಗಿ ವಿವಿಧ ಆಯಾಮಗಳಲ್ಲಿ ವಿಶ್ವ ಹಿಂದು ಪರಿಷದ್ ಕೆಲಸ ಮಾಡಲು ಕಟಿಬದ್ಧವಾಗಿದೆ. ಅದಕ್ಕೆ ಹಿಂದು ಸಮಾಜವು ಬೆಂಬಲ ನೀಡಬೇಕಿದೆ ಎಂದರು.

ವಿಶ್ವ ಹಿಂದು ಪರಿಷದ್ ರಾಜ್ಯ ಕಾರ್ಯಕಾರಿಣಿ ಸದಸ್ಯ ರಘು ಸಕಲೇಶಪುರ ದಿಕ್ಸೂಚಿ ಭಾಷಣ ಮಾಡಿದರು. ಧಾರ್ಮಿಕ ಚಿಂತಕ ಶಶಿಧರ ಶೆಟ್ಟಿ ಎರ್ಮಾಳು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದೈವನರ್ತಕ ಸುಧಾಕರ ಪಾಣಾರ ಮೂಡುಬೆಳ್ಳೆ, ಆಯುರ್ವೇದ ವೈದ್ಯೆ ಡಾ. ಪಯಸ್ವಿನಿ ಶೆಟ್ಟಿಗಾರ್, ಉಡುಪಿ ಜಿಲ್ಲಾ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ಉಪಾಧ್ಯಕ್ಷ ಗೋಪಾಲ ಪೂಜಾರಿ ಶಿರ್ವ, ಉಡುಪಿ ಜಿಲ್ಲಾ ವಿಶ್ವ ಹಿಂದು ಪರಿಷದ್ ಅಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ ವೇದಿಕೆಯಲ್ಲಿದ್ದರು.

ಪ್ರಾಜ್ನ ವಂದೇ ಮಾತರಂ ಹಾಡಿದರು. ವಿಶ್ವ ಹಿಂದು ಪರಿಷದ್ ಕಾಪು ತಾಲೂಕು ಅಧ್ಯಕ್ಷ ಜಯಪ್ರಕಾಶ್ ಪ್ರಭು ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಂದ್ರ ಶೆಣೈ ವಂದಿಸಿದರು. ಸಂತೋಷ್ ನಂಬಿಯಾರ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು.

ನನಗೆ ನೀಡಿದ ನಿತ್ಯಾನಂದಾನುಗ್ರಹ ಪ್ರಶಸ್ತಿ ಸಮ್ಮಾನ ಅವಿಸ್ಮರಣೀಯ : ಡಾ.ಕೆ. ಪ್ರಕಾಶ್ ಶೆಟ್ಟಿ

Posted On: 29-09-2024 07:42PM

ಪಡುಬಿದ್ರಿ : ಪಡುಬಿದ್ರಿಯ ಅಳಿಯನಾಗಿ ನನಗೆ ಪ್ರೀತಿ, ಸ್ನೇಹ ನೀಡಿದ್ದೀರಿ. ನಿಮ್ಮ ಅಭಿಮಾನಕ್ಕೆ ಚಿರ ಋಣಿ. ನೀವೆಲ್ಲ ದೇವರಿಗೆ ಸಮಾನ. ನನಗೆ ನೀಡಿದ ನಿತ್ಯಾನಂದಾನುಗ್ರಹ ಪ್ರಶಸ್ತಿ ಸಮ್ಮಾನ ಅವಿಸ್ಮರಣೀಯ. ಈ ಊರಿನ ದೇವಳದ ಜೀರ್ಣೋದ್ಧಾರದ ಸಂಕಲ್ಪಕ್ಕಾಗಿ ನಾವೆಲ್ಲಾ ಒಗ್ಗಟ್ಟಾಗ ಬೇಕಿದೆ. ಬಂಟ ಸಮಾಜದ ಅಭ್ಯದಯಕ್ಕಾಗಿ ದುಡಿಯಲು ಸದಾ ಸಿದ್ಧ ಎಂದು ಬೆಂಗಳೂರಿನ ಉದ್ಯಮಿ, ಎಂಆರ್ ಜಿ ಗ್ರೂಪ್ ನ ಚೇರ್ಮನ್, ಆಡಳಿತ ನಿರ್ದೇಶಕ ಡಾ.ಕೆ.ಪ್ರಕಾಶ್ ಶೆಟ್ಟಿ ಹೇಳಿದರು. ಅವರು ಪಡುಬಿದ್ರಿ ಬಂಟರ ಸಂಘ, ಬಂಟ್ಸ್ ವೆಲ್ ಫೇರ್ ಟ್ರಸ್ಟ್ ಪಡುಬಿದ್ರಿ, ಸಿರಿಮುಡಿ ದತ್ತಿನಿಧಿ ಟ್ರಸ್ಟ್‌ ಇವರ ಸಹಭಾಗಿತ್ವದಲ್ಲಿ ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ಮತ್ತು ವಿದ್ಯಾರ್ಥಿವೇತನ ವಿತರಣೆ ಹಾಗೂ ‘ಸಿರಿಮುಡಿ ದತ್ತಿನಿಧಿ ಟ್ರಸ್ಟ್’ ಬಂಟರ ಸಂಘ ಪಡುಬಿದ್ರಿ ಪ್ರಾಯೋಜಕತ್ವದಲ್ಲಿ ಸಮಸ್ತ ಬಂಟ ಸಮಾಜದ ಪರವಾಗಿ ಇತ್ತೀಚೆಗೆ ಪ್ರತಿಷ್ಠಿತ ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಭಾಜನರಾಗಿ “ಶ್ರೀ ಗುರು ನಿತ್ಯಾನಂದಾನುಗ್ರಹ” ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಬೆಂಗಳೂರು ಬಂಟ್ಸ್ ಸಂಘದ ಅಧ್ಯಕ್ಷ ಸಿಎ ಅಶೋಕ್ ಶೆಟ್ಟಿ ಅವರು ಇಂದಿನ ಸೋಶಿಯಲ್ ವೆಲ್ಫೇರ್ ಕಾರ್ಯಕ್ರಮ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಮಾಜ ಹಿರಿ, ಕಿರಿಯರನ್ನು ಮೇಲೆತ್ತುವ ಪ್ರಯತ್ನಗಳು ನಿರಂತರವಾಗಿ ನಡೆಯಬೇಕಿದೆ. ದೇಶ ವಿದೇಶಗಳ ನಮ್ಮ ಬಂಟ ಬಾಂಧವರಿಂದಲೂ ಸಹಾಯಪಡೆದು ವಿದ್ಯಾರ್ಥಿಗಳಿಗೆ ಹಂಚೋಣ. ವಿದ್ಯಾಭ್ಯಾಸದಿಂದಲೂ ಸಮಾಜವೂ ಬಲಯುತವಾಗಬಲ್ಲದು ಎಂದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ನಮ್ಮ ಬದುಕು ಸಮಾಜದ ಋಣ ತೀರಿಸುವ ಬದುಕಾಗಬೇಕು. ಪ್ರಕಾಶ ಶೆಟ್ಟಿ ಅವರಂತಹಾ ಅದರ್ಶ ವ್ಯಕ್ತಿತ್ವಗಳು ಮತ್ತಷ್ಟು ಮೂಡಿಬರಲೆಂದರು. ವಿಧಾನಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಮಾತನಾಡಿ, ಬಂಟ ಸಮಾಜದ ಉದ್ಧಾರಕ್ಕಾಗಿ ಅಹರ್ನಿಶಿ ದುಡಿಯುತ್ತಿರುವವರು ಪ್ರಕಾಶ್ ಶೆಟ್ಟಿ ಅವರಾಗಿದ್ದಾರೆ. ಮಾನವ ಸಂಪನ್ಮೂಲ ಸದ್ಬಳಕೆಯಲ್ಲಿ ಡಾ. ದೇವಿಪ್ರಸಾದ್ ಶೆಟ್ಟಿ ಮುಂಚೂಣಿಯಲ್ಲಿರುವುದಾಗಿಯೂ, ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿಗಳು ಕೊಡುಗೆಯಿತ್ತವರನ್ನು ಮರೆಯಬಾರದೆಂದರು.

ಸಮಾರಂಭದಲ್ಲಿ 15ಲಕ್ಷ ರೂ. ಗಳನ್ನು ವಿದ್ಯಾರ್ಥಿ ವೇತನ, ವಿಧವಾ ವೇತನ, ವಿಶೇಷ ಚೇತನರಿಗೆ ಧನ ಸಹಾಯದ ರೂಪದಲ್ಲಿ ವಿತರಿಸಲಾಯಿತು. ಬಂಟಾಶ್ರಯ ಯೋಜನೆಗಾಗಿ ಸ್ಥಳವನ್ನಿತ್ತ ಮಾರ್ಕ್ಸ್ ಡಿಸೋಜರಿಗೆ ಮುಂಬೈ ಉದ್ಯಮಿ ಎಲ್ಲೂರುಗುತ್ತು ಪ್ರವೀಣ್ ಭೋಜ ಶೆಟ್ಟಿ ಅವರ ಪರವಾಗಿ ಮುಂಗಡ ಹಣವನ್ನು ಹಸ್ತಾಂತರಿಸಲಾಯಿತು. ಸಿರಿಮುಡಿ ಕ್ರೆಡಿಟ್ ಕೋ ಆಪರೇಟಿವ್ ಸಂಘದ ಹಾಗೂ ಅಂತರ್ ರಾಜ್ಯ ಬಂಟ ಕ್ರೀಡೋತ್ಸವದ ಬ್ರೋಷರ್ ಹಾಗೂ ಠೇವಣಾತಿ ಪತ್ರವನ್ನು ವಿತರಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಸಭೆಯಲ್ಲಿ ಸಮ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಬೆಳಗ್ಗೆ 9 ಗಂಟೆಗೆ ಪಡುಬಿದ್ರಿ ಪೇಟೆಯಿಂದ ಬಂಟರ ಭವನದವರೆಗೆ ಅದ್ದೂರಿಯಾದ ಮೆರವಣಿಗೆ ನಡೆದು, ಮೆರವಣಿಗೆಯಲ್ಲಿ ಡಾ. ಕೆ ಪ್ರಕಾಶ್ ಶೆಟ್ಟಿ ಹಾಗೂ ಇತರ ಅತಿಥಿ ಗಣ್ಯರನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ಬೆಳಿಗ್ಗೆ 10 ರಿಂದ ಪಡುಬಿದ್ರಿ ಬಂಟರ ಸಂಘದ ಸದಸ್ಯರಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರುಣಾಕರ ಆರ್. ಶೆಟ್ಟಿ, ಸಿ.ಎಂ.ಡಿ. ಪೆನಿನ್ಸುಲಾ ಗ್ರೂಪ್ ಆಫ್ ಹೊಟೇಲ್ಸ್, ಮುಂಬಯಿ ಮತ್ತು ಎರ್ಮಾಳು, ಸೀತಾರಾಮ ಶೆಟ್ಟಿ, ಮಾಜಿ ಅಧ್ಯಕ್ಷರು ಬಂಟ್ಸ್ ಸಂಘ ಪಿಂಪ್ರಿ ಚಿಂಚಿವಾಡ ಪುಣೆ, ಪುಣೆ ಉದ್ಯಮಿ ಎರ್ಮಾಳು ಪುಚ್ಚೊಟ್ಟು ಸೀತಾರಾಮ ಶೆಟ್ಟಿ, ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಮಹಿಳಾ ವಿಭಾಗದ ಅಧ್ಯಕ್ಷೆ ಜ್ಯೋತಿ ಆರ್. ಶೆಟ್ಟಿ ಹಾಗೂ ಯುವ ವಿಭಾಗದ ಅಧ್ಯಕ್ಷ ನವೀನ್ ಎನ್. ಶೆಟ್ಟಿ ಉಪಸ್ಥಿತರಿದ್ದರು. ಸಿರಿಮುಡಿ ದತ್ತಿನಿಧಿಯ ಸ್ಥಾಪಕಾಧ್ಯಕ್ಷ ಸಾಂತೂರು ಭಾಸ್ಕರ ಶೆಟ್ಟಿ ಸ್ವಾಗತಿಸಿದರು. ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ್‌ ಶೆಟ್ಟಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯ ಶೆಟ್ಟಿ ಪದ್ರ ಹಾಗೂ ಡಾ. ಮನೋಜ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು ವಂದಿಸಿದರು.

ಕಾಪು : ಕುತ್ಯಾರು ಸೂರ್ಯಚೈತನ್ಯ ಹೈಸ್ಕೂಲ್ ನಲ್ಲಿ ರೇಬಿಸ್ ಜಾಗೃತಿ ಕಾರ್ಯಕ್ರಮ

Posted On: 29-09-2024 09:10AM

ಕಾಪು : ರೇಬಿಸ್ ರೋಗವನ್ನು ತಡೆಗಟ್ಟುವ ಜಾಗೃತಿಗಾಗಿ ಸೆಪ್ಟೆಂಬರ್ 28ನ್ನು ವಿಶ್ವ ರೇಬಿಸ್ ದಿನವಾಗಿ ಆಚರಿಸಲಾಗುತ್ತಿದೆ. ರೇಬಿಸ್ ರೋಗವು ನಾಯಿ ಮತ್ತು ಬೆಕ್ಕು ಕಡಿತದಿಂದ ಬರುತ್ತದೆ. ಈ ಪ್ರಾಣಿಗಳಿಂದ ಕಚ್ಚಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಬೇಕು. ಎಚ್ಚರಿಕೆಯ ಕ್ರಮವಾಗಿ ಎಲ್ಲಾ ಸಾಕುಪ್ರಾಣಿಗಳಿಗೆ ರೇಬಿಸ್ ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಆಕಸ್ಮಿಕವಾಗಿ ಪ್ರಾಣಿಗಳ ಕಡಿತವಾದರೆ ಪಶು ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದರೆ ಮಾರಣಾಂತಿಕ ರೋಗದಿಂದ ದೂರವಿರಬಹುದೆಂದು ಕಾಪು ತಾಲೂಕು ಪಶುವೈದ್ಯಾಧಿಕಾರಿ ಡಾ. ಅರುಣ್ ಹೆಗ್ಡೆ ತಿಳಿಸಿದರು. ಉಡುಪಿ ಜಿಲ್ಲಾ ಪಂಚಾಯತ್ ಪಶುಪಾಲನ ಮತ್ತು ಪಶು ವೈದ್ಯ ಸೇವಾ ಇಲಾಖೆ, ಪಶು ಚಿಕಿತ್ಸಾಲಯ ಶಿರ್ವ, ರೋಟರಿ ಕ್ಲಬ್ ಶಿರ್ವ ಸಹಯೋಗದಲ್ಲಿ ಕುತ್ಯಾರು ಸೂರ್ಯ ಚೈತನ್ಯ ಹೈಸ್ಕೂಲ್ ನಲ್ಲಿ ಜರುಗಿದ ರೇಬಿಸ್ ಜಾಗೃತಿ ಶಿಬಿರದಲ್ಲಿ ಅವರು ಮಾಹಿತಿ ನೀಡಿದರು.

ಶಿರ್ವ ರೋಟರಿ ಕ್ಲಬ್ ಅಧ್ಯಕ್ಷ ಅಮಿತ್ ಅರುಣ್ ಅಧ್ಯಕ್ಷತೆ ವಹಿಸಿದ್ದರು.

ಡಾ.ಲೋಕೇಶ್ ಪಡುಬಿದ್ರಿ, ಹಿರಿಯ ಪಶುವೈದ್ಯ ಪರೀಕ್ಷಕರಾದ ಶಿವಪುತ್ರೇಯ ಗುರುಸ್ವಾಮಿ, ವಸಂತ ಮಾಧವ, ರೋಟರಿ ಮಾಜಿ ಅಧ್ಯಕ್ಷ ಡಾ.ವಿಠಲ ನಾಯಕ್, ರೊಟೇರಿಯನ್ ವಿಲಿಯಂ ಪುರ್ತಾದೊ, ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ದಿವಾಕರ ಆಚಾರ್ಯ ಗೇರುಕಟ್ಟೆ ಉಪಸ್ಥಿತರಿದ್ದರು.

ಪ್ರಾಂಶುಪಾಲರಾದ ಸಂಗೀತ ರಾವ್ ಸ್ವಾಗತಿಸಿದರು. ಶಿಕ್ಷಕಿ ಸೌಮ್ಯ ವಂದಿಸಿದರು. ಶಿಕ್ಷಕಿ ಅನಿತಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಗೆ ರೇಬಿಸ್ ಜಾಗೃತಿ ಕರಪತ್ರವನ್ನು ವಿತರಿಸಲಾಯಿತು.

ನವೆಂಬರ್ 16 : ಪಲಿಮಾರಿನಲ್ಲಿ ಕಾಪು ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನ - ಪೂರ್ವಭಾವಿ ಸಭೆ

Posted On: 29-09-2024 09:06AM

ಪಲಿಮಾರು : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ಆರನೇ ಕನ್ನಡ ಸಾಹಿತ್ಯ ಸಮ್ಮೇಳನ ನವೆಂಬರ್ 16, ಶನಿವಾರ ಪಲಿಮಾರು ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಜರುಗಲಿದ್ದು, ಸಮ್ಮೇಳನದ ಸಿದ್ಧತಾ ಪೂರ್ವಭಾವಿ ಸಭೆಯು ಕಸಾಪ ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆಯವರ ಅಧ್ಯಕ್ಷತೆಯಲ್ಲಿ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.

ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಪು ತಾಲೂಕು ಕಲೆ, ಸಾಹಿತ್ಯ, ಜಾನಪದ, ಧಾರ್ಮಿಕ, ಸಾಂಸ್ಕೃತಿಕ, ಐತಿಹಾಸಿಕ ವಿಶಿಷ್ಠ ಪರಂಪರೆಯನ್ನು ಹೊಂದಿದ ತಾಲೂಕು ಆಗಿದೆ. ಕಾಪು ನೂತನ ತಾಲೂಕು ಆಗಿ ರಚನೆಯಾದಂದಿನಿಂದ ನಿರಂತರ ಐದು ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ರಾಜ್ಯದ ಏಕೈಕ ತಾಲೂಕು ಎಂಬ ಹೆಗ್ಗಳಿಕೆ ಈ ತಾಲೂಕು ಹೊಂದಿದ್ದು 6ನೇ ಸಮ್ಮೇಳನಕ್ಕೆ ಸಿದ್ಧತೆಯಲ್ಲಿರುವುದು ಅಭಿನಂದನೀಯ ಎಂದರು. ಕಾಪು ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಮಾತನಾಡಿ, ಸಾಹಿತ್ಯ ಸಮ್ಮೇಳನ ಎಂಬುದು ತಾಲೂಕಿನ ನುಡಿಜಾತ್ರೆಯಾಗಿದ್ದು ತಾಯಿ ಭುವನೇಶ್ವರೀಯ ಶೋಭಾಯಾತ್ರೆಯೊಂದಿಗೆ ಪ್ರಾರಂಭವಾಗಿ ಸಮಾರೋಪದವರೆಗೆ ಜರುಗುವ ವಿವಿಧ ಕಾರ್ಯಕ್ರಮಗಳು, ವ್ಯವಸ್ಥಿತವಾಗಿ ನಡೆಸಲು ಪೂರಕ ಉಪಸಮಿತಿಗಳು ಹಾಗೂ ಸಮಿತಿಯ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು. ಸ್ವಾಗತ ಸಮಿತಿ ಹಾಗೂ ವಿವಿಧ ಸಮಿತಿಗಳಿಗೆ ಸಂಚಾಲಕರು, ಉಪ ಸಂಚಾಲಕರನ್ನು ಆಯ್ಕೆ ಮಾಡಲಾಯಿತು.

ಹಿರಿಯ ಸಮಾಜಸೇವಕರು, ಶಾಲಾ ಹಳೆವಿದ್ಯಾರ್ಥಿಗಳಾದ ಲಕ್ಷ್ಮಣ ಶೆಟ್ಟಿ ನಂದಿಕೂರು, ಪಲಿಮಾರು ಇಗರ್ಜಿಯ ಧರ್ಮಗುರುಗಳಾದ ರೆ.ಫಾ.ಜೆರಾಲ್ಡ್ ಡಿಮೆಲ್ಲೋ ಮಾತನಾಡಿ ಪಲಿಮಾರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ಅವಕಾಶ ಒದಗಿಬಂದುದು ಊರಿಗೆ ಹೆಮ್ಮೆಯ ಸಂಗತಿಯಾಗಿದೆ. ಎಲ್ಲರೂ ಸೇರಿ ಯಶಸ್ವಿಗೊಳಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಕಸಾಪ ಜಿಲ್ಲಾ ಕೋಶಾಧ್ಯಕ್ಷ ಮನೋಹರ್ ಪಿ, ಜಿಲ್ಲಾ ಸಭಾಭವನ ನಿರ್ಮಾಣ ಸಮಿತಿ ಅಧ್ಯಕ್ಷ ಕೆ.ದೇವದಾಸ್ ಹೆಬ್ಬಾರ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಸಾದ್ ಪಲಿಮಾರು, ಶಾಲಾಭಿವೃದ್ಧಿ ಮೇಲ್ತುವಾರಿ ಸಮಿತಿ ಅಧ್ಯಕ್ಷೆ ಶೋಭಾ ವೇದಿಕೆಯಲ್ಲಿದ್ದರು. ಸಭೆಯಲ್ಲಿ ಪಲಿಮಾರು ವ್ಯಾಪ್ತಿಯ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಕಸಾಪದ ಪದಾಧಿಕಾರಿಗಳು, ಸದಸ್ಯರು, ಆಹ್ವಾನಿತ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲೆ ಗ್ರೆಟ್ಟಾ ಮೊರಾಸ್ ಸ್ವಾಗತಿಸಿದರು. ಪ್ರೌಢ ಶಾಲಾ ಶಿಕ್ಷಕ ಸುಧಾಕರ ಶೆಣೈ ನಿರೂಪಿಸಿ, ವಂದಿಸಿದರು.

ಸೆಪ್ಟೆಂಬರ್ 29 (ನಾಳೆ) : ಕಾರ್ಕಳ ಕುಲಾಲ ಸಂಘದ ವಾರ್ಷಿಕ ಮಹಾಸಭೆ

Posted On: 28-09-2024 09:20PM

ಕಾರ್ಕಳ : ತಾಲೂಕಿನ ಕುಲಾಲ ಸುಧಾರಕ ಸಂಘ (ರಿ.) ಜೋಡುರಸ್ತೆ ಕಾರ್ಕಳ ಇದರ 29 ನೇ ವರ್ಷದ ಮಹಾಸಭೆ, ಶ್ರೀ ಸತ್ಯ ನಾರಾಯಣ ಪೂಜೆ, ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣೆ, ಸಾಧಕರಿಗೆ ಸನ್ಮಾನ ಹಾಗೂ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ ಸಂಘದ ಸಭಾ ಭವನದಲ್ಲಿ ನಡೆಯಲಿದೆ ಎಂದು ಸಂಘದ ಪ್ರಮುಖರು ತಿಳಿಸಿರುವರು.

ನ. 16 - 18 : ಪಡುಬಿದ್ರಿಯಲ್ಲಿ ಕಡಲ್ ಫಿಶ್ ಕ್ರಿಕೆಟರ್ಸ್ ವತಿಯಿಂದ ರಾಷ್ಟ್ರ ಮಟ್ಟದ ಕ್ರಿಕೆಟ್ ಪಂದ್ಯಾವಳಿ

Posted On: 28-09-2024 11:15AM

ಪಡುಬಿದ್ರಿ : ಕಡಲ್ ಫಿಶ್ ಕ್ರಿಕೆಟರ್ಸ್ ಪಡುಬಿದ್ರಿ ವತಿಯಿಂದ ನವೆಂಬರ್ 16ರಿಂದ 18ರವರೆಗೆ ರಾಷ್ಟ್ರ ಮಟ್ಟದ ಅಹರ್ನಿಶಿ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಪಡುಬಿದ್ರಿ ಎಸ್.ಎಸ್.ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ಜರಗಿದ ಸುದ್ದಿಗೋಷ್ಠಿಯಲ್ಲಿ ತಂಡದ ಅಧ್ಯಕ್ಷ ಚೇತನ್‌ ಕುಮಾ‌ರ್ ಮಾಹಿತಿ ನೀಡಿದರು.

ವಿಜೇತರಿಗೆ ಪ್ರಥಮ ಕಡಲ್ ಫಿಶ್ ಟ್ರೋಫಿ ಸಹಿತ ನಗದು 5 ಲಕ್ಷ ರೂ., ದ್ವಿತೀಯ 3 ಲಕ್ಷ ರೂ. ಬಹುಮಾನವಿದೆ. ಪಂದ್ಯಾಕೂಟದಲ್ಲಿ ಮಧ್ಯಪ್ರದೇಶ, ಛತ್ತೀಸ್‌ಗಢ, ಮುಂಬಯಿ, ಹರ್ಯಾಣ, ಬೆಂಗಳೂರು, ಚಿತ್ರದುರ್ಗ, ಕೋಲಾರ ಸಹಿತ 25ಕ್ಕೂ ಅಧಿಕ ತಂಡಗಳು ಭಾಗವಹಿಸಲಿವೆ.

ಉಡುಪಿ ಮತ್ತು ದಕ್ಷಿಣ ಕನ್ನಡದ ತಂಡಗಳನ್ನು ಪಿನ್‌ ಕೋಡ್ ಮಾದರಿಯಲ್ಲಿ ಆಡಿಸಲಾಗುವುದು. ಇಲ್ಲಿ ವಿಜೇತ ತಂಡ ನೇರ ಫೈನಲ್ ಪ್ರವೇಶ ಪಡೆಯಲಿದೆ. ಪಂದ್ಯಾವಳಿಯ ಉಳಿಕೆಯ ಹಣವನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ಸಂಘಟಕರ ಪರವಾಗಿ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ತಿಳಿಸಿದರು.

ಈ ಸಂದರ್ಭ ಅಶೋಕ್ ಸಾಲ್ಯಾನ್, ಪಾಂಡುರಂಗ ಕೋಟ್ಯಾನ್, ಕರುಣಾಕರ ಪೂಜಾರಿ, ರಮೀಝ್ ಹುಸೈನ್, ಸುಭಾಷ್ ಕಾಮತ್, ಕೃಷ್ಣ ಬಂಗೇರ, ಪ್ರಶಾಂತ್ ಸಾಲ್ಯಾನ್, ವಸಂತ್ ಮತ್ತಿತರರು ಉಪಸ್ಥಿತರಿದ್ದರು.

ಅಕ್ಟೋಬರ್ 3 -12 : ವೈಭವದ ಉಡುಪಿ ಉಚ್ಚಿಲ ದಸರಾ - 2024

Posted On: 25-09-2024 08:04PM

ಉಚ್ಚಿಲ : ಇಲ್ಲಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಈ ವರ್ಷದ ಉಡುಪಿ ಉಚ್ಚಿಲ ದಸರಾ-2024ವನ್ನು ಅಕ್ಟೋಬರ್ 3 ರಿಂದ 12 ರ ತನಕ ಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಭಕ್ತರ ಸಹಕಾರದೊಂದಿಗೆ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ನಾಡೋಜ ಡಾ.ಜಿ.ಶಂಕರ್ ಹೇಳಿದರು. ಅವರು ಉಚ್ಚಿಲದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನವೆಂಬರ್ 02 ರ ಸಂಜೆ ಗಂಟೆ 6.30 ಪಡುಬಿದ್ರಿಯಿಂದ ಕಾಪು ಸಮುದ್ರತೀರದ ದೀಪಸ್ತಂಭದವರೆಗಿನ ವಿದ್ಯುದ್ದೀಪಾಲಂಕಾರದ ಉದ್ಘಾಟನೆ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ. ಅಕ್ಟೋಬರ್ 3, ಗುರುವಾರ ಬೆಳಗ್ಗೆ ಗಂಟೆ 10ಕ್ಕೆ ಸರಿಯಾಗಿ ದಸರಾ ಉತ್ಸವದ ಉದ್ಘಾಟನೆಯು ಗಣ್ಯರು, ದಾನಿಗಳ, ಉಪಸ್ಥಿತಿಯಲ್ಲಿ ನಡೆಯಲಿದೆ.

ದಸರಾ ಪ್ರಯುಕ್ತ ಆಯೋಜಿಸಿರುವ ವಿವಿಧ ಮೇಳ, ಮಾಹಿತಿ ಶಿಬಿರ ಹಾಗೂ ವಸ್ತು ಪ್ರದರ್ಶನದ ಉದ್ಘಾಟನೆಯು ಬೆಳಿಗ್ಗೆ 10.30ಕ್ಕೆ ನಡೆಯಲಿದೆ. ಬೆಳಿಗ್ಗೆ, ಗಂಟೆ 10.45 ಕ್ಕೆ ದ.ಕ. ಮೊಗವೀರ ಮಹಾಜನ ಸಂಘದ 100ನೇ ವರ್ಷದ ಸವಿನೆನಪಿಗೆ ನವೀಕರಿಸಲ್ಪಟ್ಟ ನೂತನ ಆಡಳಿತ ಕಛೇರಿಯ ಶುಭಾರಂಭ ಮಾಡಲಾಗುವುದು.

ಪ್ರತಿ ದಿನ ಚಂಡಿಕಾ ಹೋಮ, ಕಲ್ಪೋಕ್ತ ಪೂಜೆ, ಧಾರ್ಮಿಕ ಸಭೆ, ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ಸಹಿತ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸ್ಥಳೀಯ ಮಹಿಳೆಯರಿಂದ ವೈವಿಧ್ಯಮಯ ಕಾರ್ಯಕ್ರಮ ವಿವಿಧ ವೃತ್ತಿಪರ ತಂಡಗಳಿಂದ ಜಾದೂ ಕಾರ್ಯಕ್ರಮ, ಯಕ್ಷಗಾನ, ಭರತನಾಟ್ಯ, ಹರಿಕಥೆ, ಜಾನಪದ ನೃತ್ಯ, ನೃತ್ಯ ರೂಪಕ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯಲಿದೆ. ಕರಾವಳಿ ಜಿಲ್ಲೆಗಳ 40 ಕುಣಿತ ಭಜನಾ ತಂಡಗಳಿಂದ ಏಕಕಾಲದಲ್ಲಿ ಕ್ಷೇತ್ರದ ರಥಬೀದಿಯ ಸುತ್ತ ಕುಣಿತ ಭಜನೆ, ಸಾಮೂಹಿಕ ದಾಂಡಿಯಾ ನೃತ್ಯ ಸಹಿತ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.