Updated News From Kaup

ಕಾರ್ಕಳ : ವಿಶ್ವಕರ್ಮ ಸಹಕಾರ ಬ್ಯಾಂಕ್ ಇದರ ಸ್ವರ್ಣ ಮಹೋತ್ಸವ - ಸ್ವಚ್ಛತಾ ಕಾರ್ಯಕ್ರಮ

Thumbnail
Posted On: 21 Oct 2025, 01:32 PM

ಕಾರ್ಕಳ : ವಿಶ್ವಕರ್ಮ ಸಹಕಾರ ಬ್ಯಾಂಕ್ ಇದರ ಸ್ವರ್ಣ ಮಹೋತ್ಸವದ ಪ್ರಯುಕ್ತ ಕಾರ್ಕಳ ಶಾಖೆಯ ವತಿಯಿಂದ ಸ್ವಚ್ಛತಾ ಕಾರ್ಯಕ್ರಮವು ಜರುಗಿತು. ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಹರೀಶ್ ಆಚಾರ್ ಮಾತನಾಡಿ, ಆರ್ಥಿಕ ಸಂಸ್ಥೆಗೆ ಸಾಮಾಜಿಕ ಜವಾಬ್ದಾರಿ ಕೂಡ ಇರುವುದರಿಂದ ಸಾಮಾಜಿಕ ಜವಾಬ್ದಾರಿಯನ್ನು ಮೂಡಿಸುವ ಉದ್ದೇಶದಿಂದ ಸ್ವಚ್ಛ ಭಾರತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಮಾಜಿ ಪುರಸಭಾಧ್ಯಕ್ಷ, ಕೆಎಂಪಿಯ ಜಿಲ್ಲಾಧ್ಯಕ್ಷರಾದ ಪ್ರಕಾಶ್ ರಾವ್ ಮಾತನಾಡಿ, ಬ್ಯಾಂಕ್ ಕೇವಲ ಠೇವಣಿ ಸಂಗ್ರಹಣೆಯ ಜೊತೆಗೆ ಸ್ವಚ್ಛತೆಯ ಕಾರ್ಯಕ್ರಮ ಹಮ್ಮಿಕೊಂಡು, ಮುಂದಿನ 10 ತಿಂಗಳು ನಿರಂತರ ಕಾರ್ಯಕ್ರಮ ಹಮ್ಮಿಕೊಂಡ ಬಗ್ಗೆ ಸಂತಸ ವ್ಯಕ್ತ ಪಡಿಸಿದರು. ರೋಟರಿ ಕ್ಲಬ್ ಅಧ್ಯಕ್ಷರಾದ ಸುರೇಂದ್ರ ನಾಯಕ್, ಚಿನ್ನದ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷರಾದ ಎಂ ರಮೇಶ್ ಆಚಾರ್ಯ, ಲಯನ್ಸ್ ಕ್ಲಬ್ ಕಾರ್ಕಳ ಸಿಟಿ ಇದರ ಸ್ಥಾಪಕ ಅಧ್ಯಕ್ಷರಾದ ಜ್ಯೋತಿ ರಮೇಶ್, ಕಾಳಿಕಾಂಬಾ ದೇವಸ್ಥಾನದ 1 ನೇ ಜೊತೆ ಮುಕೇಸ್ತರರಾದ ಪಿ ರವಿ ಆಚಾರ್ಯ, ಸ್ವಚ್ಚ ಬ್ರಿಗೇಡ್ ನ ಪಿಲಿಕ್ಸ್ ವಸ್, ವಕೀಲರ ಸಂಘ ಕಾರ್ಕಳ ಇದರ ಅಧ್ಯಕ್ಷರಾದ ಪ್ರಕಾಶ್ ಆಚಾರ್ಯ, ಹಾಗೂ ಭುವನೇಂದ್ರ ಕಾಲೇಜಿನ ಶಂಕರ್ ಕುಡ್ವ ಹಾಗೂ ಎನ್ ಎಸ್ ಎಸ್ ನ ವಿದ್ಯಾರ್ಥಿಗಳು, ಸ್ವಚ್ಛ ಕಾರ್ಕಳ ಬ್ರಿಗೇಡ್ ಇದರ ಸದಸ್ಯರು, ಜ್ಯೋತಿ ಯುವಕ ಮಂಡಲದ ಅಧ್ಯಕ್ಷರಾದ ಪ್ರಶಾಂತ್ ಹಾಗೂ ಎಲ್ಲಾ ಸಂಘ ಸಂಸ್ಥೆಯ ಸದಸ್ಯರು ಭಾಗವಹಿಸಿದ್ದರು.

ಐಎಂಎ ಇದರ ರಾಜ್ಯ ಉಪಾಧ್ಯಕ್ಷರಾಗಿ ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಅವಿರೋಧ ಆಯ್ಕೆ

Thumbnail
Posted On: 21 Oct 2025, 10:58 AM

ಉಡುಪಿ : ನೂರು ವರ್ಷಗಳ ಸಂಭ್ರಮದಲ್ಲಿ ಇರುವ ಭಾರತೀಯ ವೈದ್ಯಕೀಯ ಸಂಘ ಇದರ ಕರ್ನಾಟಕ ರಾಜ್ಯ ಶಾಖೆಗೆ ನಡೆದ ಚುನಾವಣೆಯಲ್ಲಿ ರಾಜ್ಯ ಉಪಾಧ್ಯಕ್ಷರಾಗಿ ಮಂಗಳೂರು ಭಾರತೀಯ ಸಂಘದ ಮಾಜಿ ಅಧ್ಯಕ್ಷ ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಅವಿರೋಧವಾಗಿ ಆಯ್ಕೆ ಆಗಿರುತ್ತಾರೆ. ವಿಶ್ವದಲ್ಲಿಯೇ ಅತಿ ದೊಡ್ಡ ಹಾಗು ಅತೀ ಪ್ರಭಾವಶಾಲಿ ಸರಕಾರೇತರ ಸಂಸ್ಥೆಯಾಗಿರುವ ಐಎಂಎ ಭಾರತದ ಪ್ರತೀ ರಾಜ್ಯ, ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಶಾಖೆಗಳನ್ನ ಹೊಂದಿರುವುದಲ್ಲದೇ ವಿಶ್ವದ ಹಲವು ರಾಷ್ಟ್ರಗಳಲ್ಲಿ ತನ್ನ ಸುಮಾರು 2500 ರಷ್ಟು ಶಾಖೆಯನ್ನ ಹೊಂದಿದೆ. ಕಳೆದ 2 ಎರಡು ದಶಕಗಳಿಂದ ಐಎಂಎ ಯ ಜೊತೆ ಸಂಘಟನಾತ್ಮಕವಾಗಿ ಜೋಡಿಸಿಕೊಂಡು ದುಡಿಯುತ್ತಿರುವ ಡಾ ಕುಲಾಲ್ ದ.ಕ ಜಿಲ್ಲೆ, ಕರಾವಳಿ, ಮಲೆನಾಡು ಹಾಗು ಮೈಸೂರು ವಿಭಾಗಗಳಲ್ಲಿ ಪರಿಣಾಮಕಾರಿ ನಾಯಕತ್ವ ನೀಡಿ, ಸ್ಥಳೀಯ ಶಾಖಾ ಅಧ್ಯಕ್ಷ, ಪ್ರಾದೇಶಿಕ ಅಧ್ಯಕ್ಷ, ಸಾರ್ವಜನಿಕ ಸಂಪರ್ಕ ಅಧಿಕಾರಿ, ಸಂಚಾಲಕ, ಸಂಯೋಜಕ , ರಾಜ್ಯ ಕೇಂದ್ರ ಹಾಗೂ ರಾಷ್ಟ್ರ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ದುಡಿದು ಸಾಕಷ್ಟು ಜನಾನುರಾಗಿ ಆಗಿರುವ ಇವರು ರಾಜ್ಯದ ಕನ್ನಡ ವೈದ್ಯ ಬರಹಗಾರರ ಬಳಗವನ್ನ ಹುಟ್ಟು ಹಾಕಿ, ವೈದ್ಯ ಸಾಹಿತಿಗಳನ್ನ ಸಂಘಟಿಸಿ 2020 ರಲ್ಲಿ ಮಂಗಳೂರಲ್ಲಿ ಪ್ರಥಮ ವೈದ್ಯರ ಸಾಹಿತ್ಯ ಸಮ್ಮೇಳನ ಆಯೋಜಿಸಿ ಚಾಲನೆ ಕೊಟ್ಟಿದ್ದರು. ಹಲವಾರು ವೈದ್ಯ ಹಾಗು ಕುಟುಂಬ ವೈದ್ಯರ ಸಮ್ಮೇಳನ ನಡೆಯಿಸಿದವರು. ಸಂಘಟನೆ, ವೈದ್ಯಕೀಯ ಸೇವೆ, ಬರಹ, ಭಾಷಣ ,ಸಾಮಾಜಿಕ ಹೋರಾಟಗಳಿಂದ ಚಿರಪರಿಚಿತರಾಗಿರುವ ಇವರಿಗೆ ಐಎಂಎ ಜೀವಮಾನದ ಸಾಧನೆಗೆ ಕೊಡುವ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಡಾ. ಬಿ. ಸಿ. ರಾಯ್ ಗೌರವ ಪುರಸ್ಕಾರ ಪಡೆದ ಅತಿ ಕಿರಿಯ ವಯಸ್ಸಿನ ವೈದ್ಯರು ಎಂಬ ಖ್ಯಾತಿ ಇದೆ. ಕೆಎಂಸಿ ಯ ಹಳೆ ವಿದ್ಯಾರ್ಥಿ ಆಗಿರುವ ಶ್ರೀಯುತರು ಶ್ರೀನಿವಾಸ್ ಸಂಸ್ಥೆಯಲ್ಲಿ ದುಡಿದು ಈಗ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಕ್ಟೋಬರ್ 25 ರಂದು ಗಂಗಾವತಿಯಲ್ಲಿ ಜರುಗುವ 81 ನೇ ಐಎಂಎ ರಾಜ್ಯ ಸಮ್ಮೇಳನದಲ್ಲಿ ಅವರು ಅಧಿಕಾರ ಸ್ವೀಕರಿಸಲಿದ್ದು, ಹಿರಿಯ ನಾಯಕರಾದ ಅವರಿಗೆ ಬೆಳಗಾವಿ ವಿಭಾಗದ ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಧಾರವಾಡ, ಹುಬ್ಬಳ್ಳಿ, ಗದಗ, ಹಾವೇರಿ, ಉತ್ತರಕನ್ನಡ ಜಿಲ್ಲೆಗಳಲ್ಲಿ ವೈದ್ಯರನ್ನ ಸಂಘಟಿಸಿ ಸಂಘಟನೆಯನ್ನ ಮತ್ತಷ್ಟು ಬಲಪಡಿಸುವ ಜವಾಬ್ದಾರಿ ಹಾಗೂ ಉಸ್ತುವಾರಿಗಳನ್ನ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಕಾಪು ಬ್ಲಾಕ್ ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಮೀಜ್ ಹುಸೇನ್ ಬಿಹಾರ ಚುನಾವಣಾ ವೀಕ್ಷಕರಾಗಿ ನೇಮಕ

Thumbnail
Posted On: 21 Oct 2025, 10:45 AM

ಕಾಪು : ಕಾಪು ಬ್ಲಾಕ್ ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ, ಪ್ರಸ್ತುತ ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಕಾಪು ತಾಲೂಕು ಭೂನ್ಯಾಯ ಮಂಡಳಿ ಸದಸ್ಯರಾದ ರಮೀಜ್ ಹುಸೇನ್ ಅವರನ್ನು ರಾಷ್ಟ್ರೀಯ ಯುವ ಕಾಂಗ್ರೆಸ್‌ನ ಪದಾಧಿಕಾರಿಯಾದ ಜ್ಯೋತಿಷ್ ಎಚ್.ಎಮ್. ಅವರ ಶಿಫಾರಸಿನ ಮೇರೆಗೆ, ನವೆಂಬರ್ ತಿಂಗಳಲ್ಲಿ ನಡೆಯಲಿರುವ ಬಿಹಾರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭಾಗಲ್ಪುರ್ ಜಿಲ್ಲೆಯ ಅಮರಪುರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಚುನಾವಣಾ ವೀಕ್ಷಕರಾಗಿ ನೇಮಕ ಮಾಡಲಾಗಿದೆ. ರಮೀಜ್ ಹುಸೇನ್ ಅವರು ಕಳೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಾಗಪು‌ರ್ ಸೆಂಟ್ರಲ್ ಕ್ಷೇತ್ರದಲ್ಲಿ ವೀಕ್ಷಕರಾಗಿ ಸೇವೆ ಸಲ್ಲಿಸಿದ್ದ ಅನುಭವ ಹೊಂದಿದ್ದಾರೆ. ರಮೀಜ್ ಹುಸೇನ್‌ ಅವರು ಕಳೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಾಗಪು‌ರ್ ಸೆಂಟ್ರಲ್ ಕ್ಷೇತ್ರದಲ್ಲಿ ವೀಕ್ಷಕರಾಗಿ ಸೇವೆ ಸಲ್ಲಿಸಿದ್ದ ಅನುಭವ ಹೊಂದಿದ್ದಾರೆ. ಇವರ ನೇಮಕಕ್ಕೆ ಪಕ್ಷದ ಪ್ರಮುಖರು ಅಭಿನಂದನೆ ಸಲ್ಲಿಸಿದ್ದಾರೆ.

ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು : ಗ್ರಾಮೀಣ ಕ್ರೀಡಾಕೂಟ

Thumbnail
Posted On: 21 Oct 2025, 09:48 AM

ಕಾಪು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ನೇತೃತ್ವದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ನಡೆಯುವ 13 ನೇ ವರ್ಷದ ಸಾರ್ವಜನಿಕ ಗೋಪೂಜಾ ಉತ್ಸವದ ಪ್ರಯುಕ್ತ ನಡೆದ ಗ್ರಾಮೀಣ ಕ್ರೀಡಾಕೂಟವನ್ನು ಶಿರ್ವ ನಡಿಬೆಟ್ಟು ಬಳಿಯ ಕೃಷಿಕರಾದ ಶ್ರೀನಿವಾಸ ಆಚಾರ್ಯ ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ವಿಶ್ವ ಹಿಂದೂ ಪರಿಷದ್ ಮಟ್ಟಾರು ಘಟಕದ ಅಧ್ಯಕ್ಷರಾದ ಜಗದೀಶ ಆಚಾರ್ಯ ವಹಿಸಿದ್ದರು. ಶಿರ್ವ ಮೂಡುಮಟ್ಟಾರು ಅಂಗನವಾಡಿ ಶಿಕ್ಷಕಿ ಸೌಮ್ಯಾ ಪ್ರಶಾಂತ ಆಚಾರ್ಯ, ಹಿರಿಯರಾದ ಕೃಷ್ಣ ನಾಯಕ್ ಪಾಂಜಗುಡ್ಡೆ, ಅಯ್ಯಪ್ಪ ಭಕ್ತವೃಂದ ಮಾಣಿಬೆಟ್ಟು ಮಟ್ಟಾರು ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ, ವಿಶ್ವ ಹಿಂದೂ ಪರಿಷದ್ ಉಡುಪಿ ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಜಯಪ್ರಕಾಶ್ ಪ್ರಭು, ವಿಶ್ವ ಹಿಂದೂ ಪರಿಷದ್ ಉಡುಪಿ ಜಿಲ್ಲಾ ಬಾಲಸಂಸ್ಕಾರ ಪ್ರಮುಖ್ ಉಷಾ ಪಾಟ್ಕರ್, ಮಾತೃಶಕ್ತಿ ಮಟ್ಟಾರು ಘಟಕ ಪ್ರಮುಖ್ ಸುಮತಿ ಸಾಲ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಂಜಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು‌. ನಂತರ ವಿವಿಧ ವಿಭಾಗಗಳಲ್ಲಿ ಕ್ರೀಡಾಕೂಟ ಜರಗಿತು.

ಕೆ ಕೆ ಫ್ರೆಂಡ್ಸ್ ಕಡಂಬು, ಶಿರ್ವ : ದೀಪಾವಳಿ ಸಂಭ್ರಮ ; ಕಣ್ಮನ ಸೆಳೆದ ಬೃಹತ್ ಗೂಡುದೀಪ

Thumbnail
Posted On: 21 Oct 2025, 09:39 AM

ಶಿರ್ವ : ಇಲ್ಲಿನ ಕೆ ಕೆ ಫ್ರೆಂಡ್ಸ್ ಕಡಂಬು ಇದರ ವತಿಯಿಂದ ದೀಪಾವಳಿಯ ಪ್ರಯುಕ್ತ ಬೃಹತ್ ಗಾತ್ರದ ಗೂಡುದೀಪವನ್ನು ಕಡಂಬು ಮೈದಾನದಲ್ಲಿ ಅಳವಡಿಸಿ ದೀಪಾವಳಿ ಆಚರಿಸಲಾಯಿತು. ಗೂಡುದೀಪವು ಸುಮಾರು 9 ಫೀಟ್ ಎತ್ತರ ಮತ್ತು 5 ಫೀಟ್ ಅಗಲದೊಂದಿಗೆ ಕಡಂಬು ಮೈದಾನದಲ್ಲಿ ರಾರಾಜಿಸುತ್ತಿದೆ. ಮೈದಾನದಲ್ಲಿ ಮಾಡಿದ ವಿದ್ಯುದೀಪಾಲಂಕಾರವು ನೋಡಗರನ್ನು ಸೆಳೆಯುತ್ತಿದೆ. ಕೆ ಕೆ ಫ್ರೆಂಡ್ಸ್ ಇದರ ಎಲ್ಲಾ ಸದಸ್ಯರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಎಸ್ ಡಿ ಎಂ ಆಯುರ್ವೇದ ಆಸ್ಪತ್ರೆಗೆ ಕೊಡುಗೆಗಳ ಹಸ್ತಾಂತರ

Thumbnail
Posted On: 18 Oct 2025, 10:16 PM

ಉಡುಪಿ : ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಇದರ ಸ್ಥಾಪಕರಾದ ಉಡುಪಿ ವಿಶ್ವನಾಥ್ ಶೆಣೈ ಇವರ ಪ್ರಾಯೋಜಕತ್ವದಲ್ಲಿ ಎಸ್ ಡಿ ಎಮ್ ಆಯುರ್ವೇದ ಆಸ್ಪತ್ರೆ ಉದ್ಯಾವರ ಇಲ್ಲಿಗೆ ರೋಗಿಗಳ ಅನುಕೂಲಕ್ಕಾಗಿ ಎರಡು ವೀಲ್ ಚೇರ್ ಮತ್ತು ವಾಕರ್ ಗಳನ್ನು ನೀಡಲಾಯಿತು. ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ಡಾ.ದೀಪಕ್ ಎಸ್.ಎಂ ರವರು ಈ ಕೊಡುಗೆಗಳನ್ನು ಸ್ವೀಕರಿಸಿ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಕೆ ನಿಶಾಂತ್ ಪೈ, ಡಾ.ಸದಾನಂದ ಭಟ್, ರಮಾನಂದ ಕಾರಂತ್, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ, ಅಂತರಾಷ್ಟ್ರೀಯ ಖ್ಯಾತಿಯ ಪತ್ರಿಕಾ ಛಾಯಾಗ್ರಹ ಅಸ್ಟ್ರೋ ಮೋಹನ್, ಕಸಾಪ ಪದಾಧಿಕಾರಿಗಳಾದ ರಂಜನಿ ವಸಂತ್, ಸಿದ್ದ ಬಸಯ್ಯ ಸ್ವಾಮಿ ಚಿಕ್ಕ ಮಠ, ವಸಂತ್, ರಾಘವೇಂದ್ರ ಪ್ರಭು ಕವಾ೯ಲು, ಉದ್ಯಮಿ ಪ್ರಶಾಂತ್ ಕಾಮತ್ ಮುಂತಾದವರು ಉಪಸ್ಥಿತರಿದ್ದರು.

ಕಾಪು : ರಾ.ಹೆ. 66 ರಲ್ಲಿ ಸರ್ವಿಸ್ ರಸ್ತೆ ನಿಮಾಣಕ್ಕೆ ಸಮಾಜ ಸೇವಕ ಜಯರಾಮ ಆಚಾರ್ಯ ಕಾಪು‌ ಆಗ್ರಹ

Thumbnail
Posted On: 18 Oct 2025, 10:11 PM

ಕಾಪು : ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಉಡುಪಿ ಜಿಲ್ಲೆಯ ಹೆಜಮಾಡಿಯಿಂದ ಬೈಂದೂರುವರೆಗೆ ಎರಡು ಬದಿಗಳಲ್ಲೂ ಸರ್ವಿಸ್ ರಸ್ತೆ ನಿರ್ಮಾಣ ಮಾಡಲು ಸಮಾಜ ಸೇವಕ ಜಯರಾಮ ಆಚಾರ್ಯ ಕಾಪು ಇವರು ಉಡುಪಿ ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಪುನರ್ಮನವಿ ನೀಡಿ ಆಗ್ರಹಿಸಿದ್ದಾರೆ. ಉಡುಪಿ ಜಿಲ್ಲೆಯ ಕೆಲವು ಪ್ರದೇಶದಲ್ಲಿ ಸ್ಕೈವಾಕ್ ನಿರ್ಮಾಣ ಒಪ್ಪಿಗೆ, ಕೋಟೇಶ್ವರ, ಹೆಜಮಾಡಿ ಮದ್ದೆ 26 ಕಿ.ಮೀ ಸರ್ವಿಸ್ ರಸ್ತೆಗೆ ಅನುಮೋದನೆ ವಿಚಾರ ಕೇಳಿ ಸಂತೋಷವಾಯಿತು. ಆದರೆ ಎಲ್ಲೆಲ್ಲಿ ಅತೀ ಅವಶ್ಯಕತೆ ಇದೆ ಅಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಮಾಡದೆ ಯಾದೃಚ್ಛಿಕ ಸರ್ವಿಸ್ ರಸ್ತೆ ನಿರ್ಮಾಣ ಮತ್ತು ಸ್ಕೈ ವಾಕ್ ವ್ಯವಸ್ಥೆ ಸರಿಯಲ್ಲ. ಉಡುಪಿ ಜಿಲ್ಲೆಯ ಎರಡು ಬದಿಗಳಲ್ಲಿ ಸರ್ವಿಸ್ ರಸ್ತೆ ಅತಿ ಅಗತ್ಯವಿದೆ. ಸಾದಾರಣ ಒಟ್ಟು 70 ರಿಂದ 75 ಕಿ.ಮೀ. ಅಗತ್ಯವಾಗಿ ನಿರ್ಮಾಣವಾಗಬೇಕು, ಅಂತೆಯೇ ಪುರಸಭೆ, ತಾಲೂಕು ವ್ಯಾಪ್ತಿ ಮತ್ತು ಹೆಜಮಾಡಿಯಿಂದ ಬೈಂದೂರು ತನಕ ಸರ್ವಿಸ್ ರಸ್ತೆ ನಿರ್ಮಾಣವಾಗಲೇ ಬೇಕು. ಹಲವಾರು ಕಡೆ ಸರ್ವಿಸ್ ರಸ್ತೆ ಇಲ್ಲದೆ ಹಲವಾರು ಅಪಘಾತಗಳು ಈಗಾಗಲೇ ನಡೆದು ಹೋಗಿರುತ್ತದೆ. ಉಡುಪಿ ಜಿಲ್ಲೆಯ ಮಾನ್ಯ ಸಂಸದರು ಈ ಬಗ್ಗೆ ಪುನರ್ ಪರಿಶೀಲಿಸಿ ಎಲ್ಲಾ ಶಾಸಕರೊಂದಿಗೆ ಹಾಗೂ ಸ್ಥಳೀಯರೊಂದಿಗೆ ಚರ್ಚಿಸಿ ಉಡುಪಿ ಜಿಲ್ಲೆಯ ಎನ್ ಎಚ್ 66 ರ ಎರಡು ಬದಿಗಳಲ್ಲಿ ಸರ್ವಿಸ್ ರಸ್ತೆ ಮತ್ತು ಚರಂಡಿ ವ್ಯವಸ್ಥೆ ನಿರ್ಮಿಸಲು ಆಗ್ರಹಿಸಲಾಗಿತ್ತು. ಆದರೆ ಈ ಮನವಿಗೆ ಯಾವುದೇ ಸ್ಪಂದನೆ, ವ್ಯವಸ್ಥೆ ಆಗಲಿಲ್ಲ, ಉಡುಪಿ ಜಿಲ್ಲೆಯಲ್ಲಿ 2 ತಿಂಗಳಲ್ಲಿ 25ಕ್ಕೂ ಮಿಕ್ಕಿ ಅಪಘಾತಗಳು ಆಗಿ 9 ಹದಿಹರೆಯದ ಯುವಕರು ಪ್ರಾಣ ಕಳೆದುಕೊಂಡು ಅವರ ಕುಟುಂಬವು ಸಂಕಷ್ಟವನ್ನು ಅನುಭವಿಸುವಂಥಾಗಿರುತ್ತದೆ ಇದಕ್ಕೆ ಕಾರಣ ನಮ್ಮ ವ್ಯವಸ್ಥೆ ಹಾಗೂ ಸರಿಯಾದ ರೀತಿಯಲ್ಲಿ ಜಿಲ್ಲಾಡಳಿತ ಮತ್ತು ಪಾರ್ಲಿಮೆಂಟ್ ಸದಸ್ಯರು ಸರ್ವಿಸ್ ರಸ್ತೆ ನಿರ್ಮಾಣದ ಬಗ್ಗೆ ಕೇಂದ್ರ ಸರಕಾರದೊಂದಿಗೆ ಸ್ಪಂದಿಸದಿರುವುದು ಮುಖ್ಯ ಕಾರಣವಾಗಿರುತ್ತದೆ, ಇನ್ನಾದರೂ ಎಚ್ಚೆತ್ತುಕೊಂಡು ಉಡುಪಿ ಜಿಲ್ಲೆಯ ಎರಡು ಬದಿಗಳಲ್ಲೂ ಸರ್ವಿಸ್ ರಸ್ತೆ ಮತ್ತು ಡ್ರೈನೇಜ್ ಗಳನ್ನು ಕೂಡಲೇ ನಿರ್ಮಿಸಿ ಕೊಡಬೇಕು ಎಂದು ಪಾರ್ಲಿಮೆಂಟ್ ಸದಸ್ಯರನ್ನು ಕಾಪು ಜಯರಾಮ ಆಚಾರ್ಯರವರು ವಿನಂತಿಸಿದ್ದಾರೆ.

ಕಾಪು : ಇಗ್ನೇಷಿಯಸ್ ಮೆಂಡೋನ್ಸ ಇವರಿಗೆ ಸಂತಾಪ ಸೂಚಕ ಸಭೆ

Thumbnail
Posted On: 17 Oct 2025, 12:08 PM

ಕಾಪು : ಮಲಂಗೋಳಿ ನಿವಾಸಿ ಕಳತ್ತೂರು ವಿನ್ಸೆಂಟ್ ಪಾವಲೇ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಇಗ್ನೇಷಿಯಸ್ ಮೆಂಡೋನ್ಸ ನಿಧನರಾಗಿದ್ದು, ಇವರ ಸಂತಾಪ ಸೂಚಕ ಸಭೆಯನ್ನು ಕಳತ್ತೂರು ಇಗರ್ಜಿ ವಠಾರದಲ್ಲಿ ನಡೆಯಿತು. ಹಲವಾರು ನಾಗರಿಕರು ಇವರ ಗುಣಗಾನ ಮಾಡಿದರು. ಈಗರ್ಜಿಯ ಧರ್ಮಗುರು ಪ್ರಾನ್ಸಿಸ್ ಲುವಿಸ್, ಜನಸಂಪರ್ಕ ಜನ ಸೇವಾ ವೇದಿಕೆ ಅಧ್ಯಕ್ಷರಾದ ದಿವಾಕರ ಬಿ ಶೆಟ್ಟಿ, ಗ್ಯಾರಂಟಿ ಸಮಿತಿಯ ಸದಸ್ಯರಾದ ರಾಜೇಶ್ ಕುಲಾಲ್, ಕಾಂಗ್ರೆಸ್ ನಾಯಕರಾದ ಮೊಹಮದ್ ಫಾರೂಕ್ ಚಂದ್ರನಗರ, ಕಾಂಗ್ರೆಸ್ ನಾಯಕರಾದ ಜಾನ್ಸನ್ ಕರ್ಕಡ, ಪಂಚಾಯತ್ ಸದಸ್ಯರಾದ ಕೃಷ್ಣ ಕುಲಾಲ್ ರೋಷನ್ ಕ್ಯಾಸ್ಟಾಲಿನ್, ಐರಿನ್ ತಾವ್ರೋ ,ಆಲ್ಬರ್ಟ್ ಮೆಂಡೋನ್ಸ, ಫೆಡ್ರಿಕ್ ತೌರೋ ಗಿಳ್ಬೇರ್ಟ್ ನಜರಾತ್, ರಿಚಾರ್ಡ್ ಲೋಬೋ, ಸಾಹಿತಿ ದಯಾನಂದ ಶೆಟ್ಟಿ ದೆಂದೂರು, ಕಳತ್ತೂರು ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದರು.

ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರ ವಳದೂರು ನಾರಾಯಣ ಶೆಟ್ಟಿ ನಿಧನ

Thumbnail
Posted On: 17 Oct 2025, 12:03 PM

ಕಾಪು : ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಧರ್ಮದರ್ಶಿಗಳು, ದೈವ ಭಕ್ತರೂ, ಪರೋಪಕಾರಿಗಳು, ಶಬರಿಮಲೆ ಶ್ರೀ ಅಯ್ಯಪ್ಪಸ್ವಾಮಿಯ ವಿಶೇಷ ಆರಾಧಕರೂ ಆದ ವಳದೂರು ನಾರಾಯಣ ಶೆಟ್ಟಿಯವರು ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಬೆಳಿಗ್ಗೆ ಸ್ವರ್ಗಸ್ಥರಾಗಿರುತ್ತಾರೆ. ಇವರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ.

ಕಾಪು : ಸಾಧನಾ ಶಿಖರವೇರಿದ ಸಾಹಿತಿ ಎಸ್.ಎಲ್.ಭೈರಪ್ಪ - ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ

Thumbnail
Posted On: 15 Oct 2025, 05:15 AM

ಕಾಪು : ಬದುಕಿನ ಸಮಸ್ಯೆಗಳನ್ನು ಲೆಕ್ಕಿಸದೆ ಸಾಧನಾ ಶಿಖರವನ್ನು ಏರಿದ ಸಾಹಿತಿ ಭೈರಪ್ಪ ನಮಗೆ ಸ್ಪೂರ್ತಿ ಆಗಬೇಕು. ಇವರ ಕೃತಿಗಳು ಚರ್ಚೆಗೆ ಒಳಗಾದ್ದರಿಂದ ಎಡ ಬಲ ಚಿಂತಕರೂ ಕೊಂಡು ಓದಿದವರಿದ್ದಾರೆ. ಕೃತಿಗಳ ಮೂಲಕ ಚಿರಾಯುವಾದ ಸಾಹಿತಿ ಎಸ್.ಎಲ್.ಭೈರಪ್ಪ ಎಂದು ಉಡುಪಿ ಎಮ್.ಜಿ.ಎಮ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ ನುಡಿದರು. ಅವರು ಮಂಗಳವಾರ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ನೇತೃತ್ವದಲ್ಲಿ ಸಾಹಿತ್ಯ ಸಂಘ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕಾಪು ಇವರ ಸಹಭಾಗಿತ್ವದಲ್ಲಿ ಕಾಲೇಜಿನ ಡಾ.ವಿ.ಎಸ್.ಆಚಾರ್ಯ ಸಭಾಭವನದಲ್ಲಿ ಏರ್ಪಡಿಸಿದ "ಡಾ.ಎಸ್.ಎಲ್.ಭೈರಪ್ಪ ಸಂಸ್ಮರಣೆ" ಕಾರ್ಯಕ್ರಮದಲ್ಲಿ ಮಾತನಾಡಿದರು. ದೇವರು ಎಲ್ಲಿ ? ಎನ್ನುವವರಿಗೆ ದೇವರು ಇಲ್ಲಿ ಎಂದು ತೋರಿಸಿ ಕೊಟ್ಟ ಭೈರಪ್ಪರವರನ್ನು ಹೊಗಳುವವರೂ ತೆಗಳುವವರೂ ಇದ್ದಾರೆ. ಇವರ ಕೃತಿಗಳಲ್ಲಿ ವಾಸ್ತವತೆ ಮತ್ತು ಬದುಕಿನ ಚಿಂತೆನೆಯೂ ಇದೆ ಎಂದರು. ಕಾಲೇಜಿನ ಪ್ರಾಚಾರ್ಯರಾದ ಡಾ.ಗೋಪಾಲೃಷ್ಣ ಎಂ.ಗಾಂವ್ಕರ್ ಮಾತನಾಡಿ, ಹಲವಾರು ಸಾಹಿತ್ಯ ಕೃತಿಗಳಲ್ಲಿ ಅತೀ ಹೆಚ್ಚು ಆಸಕ್ತಿಯನ್ನು ಮೂಡಿಸಿದ ಕೃತಿಗಳಿದ್ದರೆ ಅದು ಭೈರಪ್ಪರವರದ್ದು, ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಓದುಗರಾಬೇಕು. ಸಾಹಿತ್ಯ ವ್ಯಕ್ತಿತ್ವವನ್ನು ರೂಪಿಸುತ್ತದೆ. ದಿನ ನಿತ್ಯದ ವಾಸ್ತವಿಕತೆ ಅರಿಯಲು ಕಾದಂಬರಿಗಳನ್ನು ಓದಬೇಕು ಎಂದರು. ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಭೈರಪ್ಪನವರು ಕಾದಂಬರಿ ಬರೆಯುವ ಪೂರ್ವದಲ್ಲಿ ಸಾಕಷ್ಟು ಸಿದ್ಧತೆ ಮಾಡಿಕೊಂಡು ನಿಖರವಾದ ಮಾಹಿತಿಯನ್ನು ಓದುಗರಿಗೆ ತಿಳಿಯುವಂತೆ ಅಭಿವ್ಯಕ್ತಿಗೊಳಿಸುತ್ತಿದ್ದರು. ಹಾಗಾಗಿ ಅವರ ಕಾದಂಬರಿಗಳಲ್ಲಿ ನಿತ್ಯ ಸತ್ಯವನ್ನು ಕಾಣಬಹುದಾಗಿದೆ ಎಂದರು. ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕರೂ, ಸಾಹಿತ್ಯ ಸಂಘದ ನಿರ್ದೇಶಕರಾದ ಡಾ.ರವಿರಾಜ್ ಶೆಟ್ಟಿ ಭೈರಪ್ಪರವರ ಸಾಹಿತ್ಯ ಸೇವೆಯ ಬಗ್ಗೆ ಅನುಭವ ಹಂಚಿಕೊಂಡರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸಹಿತ ವೇದಿಕೆಯಲ್ಲಿರುವ ಗಣ್ಯರು ಭೈರಪ್ಪರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿ, ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕಾಪು ಕಸಾಪ ಸಹಕಾರ್ಯದರ್ಶಿ ಕೃಷ್ಣಕುಮಾರ್ ರಾವ್ ಮಟ್ಟು, ಸದಸ್ಯರಾದ ಮಧುಕರ್ ಎಸ್.ಕಲ್ಯಾ, ರಾಕೇಶ್ ಕುಂಜೂರು, ಜಿಲ್ಲಾ ಸಮಿತಿಯ ನರಸಿಂಹಮೂರ್ತಿ ರಾವ್, ಕಾಲೇಜಿನ ಸಹ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಘಟಕದ ಕೋಶಾಧ್ಯಕ್ಷರು, ಕಾರ್ಯಕ್ರಮ ಸಂಯೋಜಕರಾದ ವಿದ್ಯಾಧರ್ ಪುರಾಣಿಕ್ ನಿರೂಪಿಸಿದರು. ಆಂಗ್ಲ ಭಾಷಾ ವಿಭಾಗದ ಸಹ ಪ್ರಾಧ್ಯಾಪಕಿ ದೀಪಿಕಾ ಸುವರ್ಣ ವಂದಿಸಿದರು.