Updated News From Kaup
ಮೇ 5 : ಕುಂಜೂರು

Posted On: 04-05-2023 06:19PM
ಉಡುಪಿ ಜಿಲ್ಲೆಯ ಐತಿಹಾಸಿಕ ಮಹತ್ವದಿಂದ ಅಪೂರ್ವವೆಂದು ಗುರುತಿಸಲ್ಪಡುವ ಕೆಲವೇ ದುರ್ಗಾ ಪ್ರತಿಮೆಗಳಲ್ಲಿ ಕುಂಜೂರಿನ ದುರ್ಗಾ ದೇವಸ್ಥಾನದ ಮೂಲಸ್ಥಾನ ಶ್ರೀದುರ್ಗಾ ಮೂರ್ತಿಯು ಒಂದು. ಜಗನ್ಮಾತೆಯು ಮಹಿಷನ ವಧಾನಂತರ ಸಾವಕಾಶವಾಗಿ ನಿಂತ ಭಂಗಿಯಲ್ಲಿರುವ ಮೂರ್ತಿಯು ಚತುರ್ಬಾಹುವನ್ನು ಹೊಂದಿದೆ. ಸ್ಕಂದಭಂಗದಲ್ಲಿದೆ. ಮೇಲೆನ ಬಲ ಕೈಯಲ್ಲಿ ಪ್ರಯೋಗ ಚಕ್ರ.ಮೇಲಿನ ಎಡ ಕೈಯಲ್ಲಿ ಶಂಖವನ್ನು ಹಾಗೂ ಕೆಳಗಿನ ಎಡ ಕೈಯಲ್ಲಿ ಯಾವ ಆಯುಧವೂ ಇಲ್ಲ.ಕೆಳಗಿನ ಬಲ ಕೈಯಲ್ಲಿ ತ್ರಿಶೂಲವಿದೆ.ವಿಗ್ರಹವು ಮಹತ್ವವುಳ್ಳ ಶಿಲ್ಪಶೈಲಿಯನ್ನು ಹೊಂದಿದ್ದು ಪ್ರತಿಮಾಲಕ್ಷಣ ಪ್ರಕಾರ ಕ್ರಿ.ಶ.ಒಂಬತ್ತನೇ ಶತಮಾನಕ್ಕೆ ಅನ್ವಯಿಸುತ್ತದೆ. ಈ ಮಹಿಷಮರ್ದಿನಿ ಬಿಂಬವನ್ನು ಕಡು ಕರಿ ಶಿಲೆಯಿಂದ ನಿರ್ಮಿಸಲಾಗಿದೆ.ಮೂರ್ತಿಯ ಮುಖವು ವೃತ್ತಾಕಾರದಲ್ಲಿದ್ದು ,ಶಂಕುವಾಕಾರದ ಕಿರೀಟವನ್ನು ಹೊಂದಿದೆ. ಮಿತಾಲಂಕಾರದಿಂದ ಕೂಡಿದ ದುರ್ಗಾ ಮೂರ್ತಿಯು ಸುಮಾರು ಮೂರುಅಡಿ ಎತ್ತರವಿದೆ ಎಂದು ಖ್ಯಾತ ಇತಿಹಾಸಕಾರ ಡಾ.ಗುರುರಾಜ ಭಟ್ಟ ಅವರು 1969ರ ವೇಳೆ ನಡೆಸಿದ್ದ ಕ್ಷೇತ್ರಕಾರ್ಯದ ಆಧಾರದಲ್ಲಿ ವಿವರ ನೀಡಿದ್ದಾರೆ.

ಉಪಸ್ಥಾನ ಗಣಪತಿ : ಬಲಮುರಿಯಾದ ಈ ಮೂರ್ತಿಯು ಗಟ್ಟಿ ಶಿಲೆಯಿಂದ ರಚಿಸಿದ್ದು ಅಲಂಕಾರ ರಹಿತವಾಗಿದೆ.ಕುಳ್ಳಾದ ಮತ್ತು ಮುದ್ದಾದ ಈ ಗಣಪತಿ ಮೂರ್ತಿಯು ಒಂದಡಿ ಎತ್ತರವಾಗಿದೆ. ಕ್ರಿ.ಶ. ಒಂಬತ್ತು - ಹತ್ತನೇ ಶತಕದಷ್ಟು ಪ್ರಾಚೀನತೆಯನ್ನು ಭಟ್ಟರು ಹೇಳಿದ್ದಾರೆ. ಬಲಿ ಮೂರ್ತಿ : ಸುಮಾರು ಹತ್ತು ಇಂಚು ಎತ್ತರದ ಲಾವಣ್ಯಯುಕ್ತವಾದ ಪಂಚಲೋಹದ ಚತುರ್ಬಾಹು ಪ್ರತಿಮೆಯು ಸುಮಾರು ಹದಿನಾಲ್ಕು - ಹದಿನೈದನೇ ಶತಮಾನದಷ್ಟು ಪ್ರಾಚೀನ. ಚತುರಸ್ರ ಆಕಾರದ ದ್ವಿತಲದ ಗರ್ಭಗುಡಿಯು ಷಡ್ವರ್ಗ ಕ್ರಮದಲ್ಲಿದೆ.ಮಧ್ಯಮ ಗಾತ್ರದ ರಚನೆಯಾಗಿದೆ.ಜೀರ್ಣೋದ್ಧಾರ ಪೂರ್ವದಲ್ಲಿದ್ದ ಪ್ರಾಚೀನ ಗರ್ಭಗುಡಿಯಲ್ಲಿ ಗುರುತಿಸಲಾದ ಗಚ್ಚುಗಾರೆಯ ಶಿಲ್ಪಶೈಲಿಯನ್ನು ಆಧರಿಸಿ ನೂತನ ಗರ್ಭಗುಡಿಯನ್ನು ಶಿಲೆಯಲ್ಲಿ ನಿರ್ಮಿಸಿ ಮರ - ತಾಮ್ರದ ಛಾವಣಿಯನ್ನು ಅಳವಡಿಸಲಾಗಿದೆ. ಜೀರ್ಣೋದ್ಧಾರವು ಪುನಾರಚನೆಯೇ ಆಗಿತ್ತು.
ಪೌರಾಣಿಕ ಹಿನ್ನೆಲೆ : 1919ನೇ ಇಸವಿಯಲ್ಲಿ ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದಿಂದ ಪ್ರಕಟವಾದ ಸಂಸ್ಕೃತ ಶ್ಲೋಕಗಳು ಮಾತ್ರ ಇರುವ , (ನಾಲ್ಕು ಅಧ್ಯಾಯಗಳಲ್ಲಿ 142 ಶ್ಲೋಕಗಳಲ್ಲಿ ) ಸ್ಕಾಂದಪುರಾಣದ ಸಹ್ಯಾದ್ರಿ ಖಂಡದ "ಎಲ್ಲೂರು ಮಹಾತ್ಮ್ಯೆ" ಯಿಂದ ( ಮುಂದೆ ಈ ಶ್ಲೋಕಗಳನ್ನೇ ಆಧರಿಸಿ ಕನ್ನಡ ತಾತ್ಪರ್ಯ ಸಹಿತ "ಎಲ್ಲೂರು ಮಹಾತ್ಮೆ" ಯು 1952 ರಿಂದ 1976 ರ ಅವಧಿಯಲ್ಲಿ ಮೂರು ಬಾರಿ ಮುದ್ರಿಸಲ್ಪಟ್ಟು ಪ್ರಕಟವಾಗಿದೆ) ಜನಜನಿತ ಹಾಗೂ ಸರ್ವಸಮ್ಮತ . ಶೌನಕಾದಿ ಋಷಿಗಳಿಗೆ ಸೂತಾಚಾರ್ಯರು ಪುಣ್ಯಕ್ಷೇತ್ರ ಹಾಗೂ ತೀರ್ಥಕ್ಷೇತ್ರಗಳ ಕುರಿತು ಹೇಳುತ್ತಾ ... ತಾನು ಎಲ್ಲೂರಿಗೆ ಹೇಗೆ ಹೋದೆನು, ಎಲ್ಲಿ ಯಾವ ಸ್ಥಳದಲ್ಲಿ ಆವಿರ್ಭವಿಸಿದೆ ಎಂಬುದನ್ನು ಮಹಾದೇವನು ಪಾರ್ವತಿಗೆ ಹೇಳುತ್ತಾ "ತತ್ರ ಕುಂಜಪುರ ಕ್ಷೇತ್ರ ಕಲ್ಪನಂ ಪರಮಾದ್ಭುತಂ" ಎಂದು ಹೇಳುತ್ತಾನೆ ಈಶ್ವರ.ಪಿಲಾರಕಾನದಲ್ಲಿ ತಪಸ್ಸನ್ನಾಚರಿಸುತ್ತಿದ್ದ ಭಾರ್ಗವನಾಮಕನಾದ ಮಹರ್ಷಿಯು ಸಂಕಲ್ಪಿಸಿದ ಹತ್ತು ಕ್ಷೇತ್ರಗಳ ಮಧ್ಯೆ ನಾನು ಕುಂದರಾಜನ ತಪಸ್ಸಿಗೆ ಮೆಚ್ಚಿ ಆವಿರ್ಭವಿಸಿದೆನು ಎಂದು ಈಶ್ವರನು ಪಾರ್ವತಿಗೆ ಹೇಳಿದನು.ಈ ಹತ್ತು ಕ್ಷೇತ್ರಗಳು ಯಾವುವು ಎಂದರೆ ಪಿಲಾರಕಾನ,ಶಾಂತಪುರ(ಸಾಂತೂರು), ನಂದಿಕೂರು, ಪಾದೆಬೆಟ್ಟು, ಕುಂಜೂರು, ಉಳಿಯಾರು, ಪಾಂಗಾಳ, ಕಳತ್ತೂರು, ಪೇರೂರು ಹಾಗೂ ಶಿರ್ವ. ಈ ಯಾದಿ ಪುರಾಣೋಲ್ಲೇಖಿತವಾದುದು. ಎಲ್ಲೂರಿನಿಂದ ಅಗ್ನೇಯದಿಂದ ಉತ್ತರಕ್ಕೆ ಹರಿಯುತ್ತಾ ಮುಂದೆ ಪಶ್ಚಿಮಾಭಿಮುಖವಾಗಿ ಹರಿಯುತ್ತಾ ಪಶ್ಚಿಮಸಮುದ್ರವನ್ನು ಸಂಗಮಿಸಿಸುವ ವಾರಣೀ ಎಂಬ ನದಿಯನ್ನು ಒತ್ತೊತ್ತಾಗಿ ಮರಗಳು ಬೆಳೆದ ಕುಂಜ ಎಂಬ ಪ್ರದೇಶದ ಬಳಿ ಮುಚ್ಚಿ ಭಾರ್ಗವ ಋಷಿಗಳು ನೂತನ ಭೂಪ್ರದೇಶವನ್ನು ಸೃಷ್ಟಿಸಿ ಅಲ್ಲಿ ಮಹಾಯಾಗವೊಂದನ್ನು ಗ್ರಾಮಸ್ಥರ ಸಹಾಯದಿಂದ ನೆರವೇರಿಸಿ ಪವಿತ್ರ ಭೂಪ್ರದೇಶದಲ್ಲಿ ದುರ್ಗಾ ಶಕ್ತಿಯನ್ನು ಸಂಕಲ್ಪಿಸಿದರು.ಈ ಪ್ರದೇಶ ಕುಂಜಪುರ > ಕುಂಜೂರು ಎಂದಾಯಿತು. ಕನಿಷ್ಠ ಸಾವಿರದ ಇನ್ನೂರು ವರ್ಷ ಪುರಾತನದಲ್ಲಿ ದೇವಾಲಯವೊಂದು ಸಂಕಲ್ಪಿಸಿದ ಕುಂಜೂರು ಆಕಾಲದಲ್ಲಿ ಒಂದು ಬ್ರಾಹ್ಮಣರ ನೆಲೆಯಾಗಿತ್ತು (settlement) ಎಂಬುದಕ್ಕೆ ಪುರಾಣಕಾಲದ ಒಂದು ಗ್ರಾಮದ ಅಸ್ತಿತ್ವ ಸ್ಪಷ್ಟವಾಗುತ್ತದೆ.ಈಗಿನ ಮಾಣಿಯೂರಿನಿಂದ ಮೊದಲ್ಗೊಂಡು ದಳಾಂತ್ರೆ ಕೆರೆ, ಮಾಣಿಯೂರು ಮಠ,ಸಾಣಿಂಜೆ,ಕುದುರೆ, ಮಂಜರಬೆಟ್ಟು,ಕರಂಬಳ,ಕುಂಜೂರು ದೇವಳದ ಬಳಿಯ ಉಡುಪರ ಮನೆಯೂ ಪೂರ್ವದ ಮಠವೇ ಆಗಿತ್ತು ಎಂಬ ಮಾಹಿತಿ ಸಿಗುತ್ತದೆ.ಬಳಿಕ ಮೂಜಗಳ್ ಎಂಬಲ್ಲಿಯವರೆಗೆ ಹಾಗೂ ಈಗಿನ ಮುದರಂಗಡಿಯಿಂದ ಎರ್ಮಾಳು ರಸ್ತೆ ಹಾಗೂ ಮುದರಂಗಡಿ - ಎಲ್ಲೂರು -ಪಣಿಯೂರು - ಉಚ್ಚಿಲ ರಸ್ತೆಯ ನಡುವೆ ಎಲ್ಲೂರು ಗ್ರಾಮದ ವ್ಯಾಪ್ತಿಯಲ್ಲಿರುವ ವಿಸ್ತಾರವಾದ ಭೂಪ್ರದೇಶವೇ "ಕುಂಜೂರು".
ಬ್ರಾಹ್ಮಣರ ನೆಲೆಗಳನ್ನು ವಿವರಿಸುವ ಗ್ರಾಮಪದ್ಧತಿಯಲ್ಲಿ ಪೂರ್ವಷೋಡಷ ಹಾಗೂ ಪಶ್ಚಿಮ ಷೋಡಷಗಳೆಂದು ಎರಡು ವಿಭಾಗ.ಎರಡು ಮೂರು ಪಾಠಾಂತರಗಳು ಲಭಿಸುತ್ತವೆ.ಉರ್ವ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ದೊರೆತ ತುಳುಲಿಪಿಯಲ್ಲಿದ್ದ ಗ್ರಾಮಪದ್ಧತಿಯ ಒಂದು ಪಾಠಾಂತರದಲ್ಲಿ 'ಕುಂಜೂರು' ಒಂದುಗ್ರಾಮ. ವಾರುಣೀ ನದಿಯ ಇಕ್ಕೆಲದಲ್ಲಿ ಒಂದು ಜನ ಜೀವನ,ಸಂಸ್ಕೃತಿ ಬೆಳೆದಿದೆ.ಎಂಬುದಕ್ಕೆ ಕುಂಜೂರು ಗ್ರಾಮವು ಉದಾಹರಣೆಯಾಗುತ್ತದೆ. ಈ ಕುರಿತು ಕುಂಜೂರಿನ ಪೌರಾಣಿಕ ಕಾಲದ ನಕ್ಷೆಯೊಂದು ಸಿದ್ಧಗೊಳಿಸಲಾಗುತ್ತಿದೆ. ಕ್ರಮೇಣ ಪ್ರಕಟಿಸುವ. { ಮೇ 5 ಕುಂಜೂರು ಆರಡ. ಈ ಸಂದರ್ಭಕ್ಕೆ ಇದೊಂದು ವಿಶೇಷ ಬರಹ. "ಕುಂಜೂರು ಶ್ರೀ ದುರ್ಗಾ" ಪುಸ್ತಕದ ಆಧಾರ} ಬರಹ : ಕೆ. ಎಲ್. ಕುಂಡಂತಾಯ
ಮೇ 7 - 14 : ಪಡು ಕುತ್ಯಾರು ಆನೆಗುಂದಿ ಮಹಾ ಸಂಸ್ಧಾನದಲ್ಲಿ ವಸಂತ ವೇದ ಶಿಬಿರ

Posted On: 04-05-2023 03:13PM
ಕಾಪು : ತಾಲೂಕಿನ ಪಡು ಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದಲ್ಲಿ ವರ್ಷಂಪ್ರತಿ ನಡೆಸಲಾಗುವ ವಸಂತ ವೇದ ಶಿಬಿರವು ಮೇ 7ರಿಂದ ಆರಂಭಗೊಳ್ಳಲಿದೆ. ಮೇ 6ರಂದು ಶಿಬಿರ ವಿದ್ಯಾರ್ಥಿಗಳ ನೋಂದಣಿ ಪೂರ್ಣಗೊಳ್ಳಲಿದೆ.
ಮೇ 7ರಂದು ಬೆಳಗ್ಗೆ 10 ಗಂಟೆಗೆ ಮಹಾಸಂಸ್ಥಾನದ ಪೀಠಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ದೀಪ ಪ್ರಜ್ವಲನಗೊಳಿಸಿ ವಸಂತ ವೇದ ಶಿಬಿರವನ್ನು ಉದ್ಘಾಟಿಸಲಿರುವರು. ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ ಶ್ರೀಧರ ಆಚಾರ್ಯ ಒಡೆಯ ಹೋಬಳಿ ಅಧ್ಯಕ್ಷತೆ ವಹಿಸುವರು. ಮುಖ್ಯಅತಿಥಿಯಾಗಿ ಉಡುಪಿ ಮಂಗಳಾ ಜ್ಯುವೆಲ್ಲರ್ಸ್ ಮಾಲಕರೂ, ಕೊಡಂಕೂರು ವಿಶ್ವಬ್ರಾಹ್ಮಣ ಸಂಸ್ಕೃತ ವಿದ್ಯಾಪೀಠದ ಅಧ್ಯಕ್ಷರಾದ ಶ್ರೀಶ ಆಚಾರ್ಯ ಅಲೆಯೂರು ಭಾಗವಹಿಸುವರು. ಸಮಾರಂಭದಲ್ಲಿ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವ ಅಧ್ಯಕ್ಷ ಪಿ ವಿ ಗಂಗಾಧರ ಆಚಾರ್ಯ ಉಡುಪಿ, ವೇದ ಸಂಜೀವಿನಿ ಪಾಠಶಾಲೆಯ ಸಂಚಾಲಕ ಬಿ .ಸೂರ್ಯ ಕುಮಾರ್ ಆಚಾರ್ಯ ಹಳೆಯಂಗಡಿ, ಅಸೆಟ್ ಅಧ್ಯಕ್ಷ ಮೋಹನ್ ಕುಮಾರ್ ಬೆಳ್ಳೂರು, ಗೋವು ಪರ್ಯಾವರಣ್ ಟ್ರಸ್ಟ್ ಅಧ್ಯಕ್ಷ ಬಿ ಸುಂದರ ಆಚಾರ್ಯ ಬೆಳುವಾಯಿ, ಆನೆಗುಂದಿ ಗುರು ಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮ್ಮಣ್ಣು, ಶ್ರೀ ಸರಸ್ವತೀ ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, , ಶಿಬಿರಾಧಿಕಾರಿ ಐ ಲೋಲಾಕ್ಷ ಆಚಾರ್ಯ ಕಟಪಾಡಿ ಉಪಸ್ಥಿತರಿರುವರು.
ವಸಂತ ವೇದ ಶಿಬಿರದಲ್ಲಿ ಪ್ರಮುಖವಾಗಿ ಸಂಧ್ಯಾವಂದನೆ ಪಾಠವನ್ನು ಹಾಗೂ ನಮ್ಮ ಧರ್ಮ. ಸಂಸ್ಕಾರ, ಆಚರಣೆಗಳು, ಕರ್ತವ್ಯಗಳು ಮುಂತಾದ ವಿಷಯಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ನೀಡಲಾಗುವುದು. ವಸಂತ ವೇದ ಶಿಬಿರದ ಸಮಾರೋಪವು ಮೇ 14 ರ ಜಗದ್ಗುರುಗಳವರ ಪಟ್ಟಾಭಿಷೇಕ ವರ್ಧಂತಿಯಂದು ನಡೆಯಲಿದೆ.
ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ ಆಯೋಜಿಸಿರುವ ವಸಂತ ವೇದ ಶಿಬಿರವು ಶ್ರೀ ನಾಗಧರ್ಮೇಂದ್ರ ಸರಸ್ವತಿ ಸಂಸ್ಕೃತ ವೇದ ಸಂಜೀವಿನಿ ಪಾಠಶಾಲೆ, ಆನೆಗುಂದಿ ಗುರು ಸೇವಾ ಪರಿಷತ್ತು ಕೇಂದ್ರ ಸಮಿತಿ, ಅಸೆಟ್, ಗೋವು ಮತ್ತು ಪರ್ಯಾವರನ್ ಸಂರಕ್ಷಣಾ ಟ್ರಸ್ಟ್, ಶ್ರೀ ಸರಸ್ವತೀ ಮಾತೃ ಮಂಡಳಿ ಇವುಗಳ ಸಹಕಾರದೊಂದಿಗೆ ನಡೆಯಲಿದೆ ಎಂದು ಆನೆಗುಂದಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್. ಕಂಬಾರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ನ 5 ವರ್ಷದ ಹಿಂದಿನ ಅಭಿವೃದ್ಧಿಯ ಪಟ್ಟಿಯನ್ನು ಮುಂದಿಟ್ಟು ಬಿಜೆಪಿ ಓಟು ಕೇಳುತ್ತಿದೆ : ವಿನಯ್ ಕುಮಾರ್ ಸೊರಕೆ

Posted On: 04-05-2023 12:13PM
ಕಾಪು : ನಾನು ಶಾಸಕನಾಗಿದ್ದ ಅವಧಿಯಲ್ಲಿ 2013 ರಿಂದ 2018 ರಲ್ಲಿ ನಡೆಸಿದ್ದ ಅಭಿವೃದ್ಧಿ ಕಾಮಗಾರಿಗಳನ್ನು ಪಟ್ಟಿ ಮಾಡಿ ಮತದಾರರ ಮುಂದೆ ಇಟ್ಟು ಬಿಜೆಪಿ ಓಟು ಕೇಳುತ್ತಿದೆ ಎಂದು ವಿನಯ್ ಕುಮಾರ್ ಸೊರಕೆ ಲೇವಡಿ ಮಾಡಿದ್ದಾರೆ. ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಮನೆ ಮತಯಾಚನೆ ಮಾಡಿ ಅವರು ಮಾತನಾಡಿದರು.
ಬಿಜೆಪಿ ಪಾರ್ಟಿಗೆ ಸ್ವಂತಿಕೆ ಅನ್ನೋದು ಇಲ್ಲ. ನಾನು ಶಾಸಕನಾಗಿದ್ದ ಅವಧಿಯಲ್ಲಿ ಮಾಡಿದ ಶೇ.75 ಕಾಮಗಾರಿಗಳನ್ನು ತಮ್ಮ ಕಾಲದ ಅಭಿವೃದ್ಧಿ ಅಂತಾ ಮತದಾರರ ಮುಂದೆ ಸುಳ್ಳು ಹೇಳಿ ಓಟು ಕೇಳುವ ಗಿಮಿಕ್ ಮಾಡ್ತಾ ಇದೆ. ಈ ಬಾರಿ ಬಿಜೆಪಿಯ ಪ್ರಣಾಳಿಕೆ ಕಳೆದ ಬಾರಿಯ ನನ್ನ ಪ್ರಣಾಳಿಕೆಯನ್ನು ಕಾಪಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಬಿಜೆಪಿಗೆ ಕಾಂಗ್ರೆಸ್ ನ ಅವಧಿಯಲ್ಲಿ ಆದ ಅಭಿವೃದ್ಧಿ ಕಾಮಗಾರಿಗಳು ಮತ್ತು ಕಾಂಗ್ರೆಸ್ ಪ್ರಣಾಳಿಕೆಯೇ ದಾರಿದೀಪವಾಗಿದೆಯೋ ಅಂತ ಮತದಾರರು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಸೊರಕೆ ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡರಾದ ಪ್ರಶಾಂತ್ ಜತ್ತನ್ನ, ರತನ್ ಶೆಟ್ಟಿ, ಮೆಲ್ವಿನ್ ಡಿಸೋಜ, ಹಸನಬ್ಬ ಶೇಖ್, ಜೆಸಿಂತಾ, ಲ್ಯಾನ್ಸಿ ಕರೋಡ ಮತ್ತಿತರರು ಉಪಸ್ಥಿತರಿದ್ದರು.
ಶಿರ್ವ : ಕೌಶಲ್ಯ ಅಭಿವೃದ್ಧಿಯು ಸ್ಪರ್ಧೆಯನ್ನು ಗೆಲ್ಲುವ ಮಾರ್ಗವಾಗಿದೆ - ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್

Posted On: 04-05-2023 12:04PM
ಶಿರ್ವ: ಇಲ್ಲಿನ ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಗಣಕ ವಿಜ್ಞಾನ ವಿಭಾಗವು ತನ್ನ ಘಟಕವಾದ ಐಟಿ ಕ್ಲಬ್ ನ ಮೂಲಕ ಬಿಸಿಎ ವಿದ್ಯಾರ್ಥಿಗಳಿಗೆ ಆಯೋಜಿಸಿದ ರೈಜೆನ್23 ಐಟಿ ಕಾಂಪಿಟೇಶನ್ಸ್ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ ಅಧ್ಯಕ್ಷ ನೆಲೆಯಲ್ಲಿ ಮಾತನಾಡಿ ವಿಜೇತರಿಗೆ ಪ್ರಮಾಣ ಪತ್ರ ಜೊತೆಗೆ ಬಹುಮಾನಗಳನ್ನು ವಿತರಿಸಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮಲ್ಲಿ ಅಡಗಿರುವಂತ ವಿವಿಧ ಕೌಶಲಗಳನ್ನು ವೃದ್ಧಿಸಿಕೊಳ್ಳುವ ಮೂಲಕ ಎಲ್ಲಾ ರೀತಿಯ ಸ್ಪರ್ಧೆಗಳನ್ನು ಗೆಲ್ಲಲು ಸಾಧ್ಯ ಎಂದು ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಐಟಿ ಕ್ಲಬ್ ನಿರ್ದೇಶಕ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ರೈಜೆನ್23 ಐಟಿ ಕಾಂಪಿಟೇಶನ್ಸ್ ಬಗ್ಗೆ ಮಾರ್ಗದರ್ಶನ ನೀಡಿ ಮಾತನಾಡಿದರು.

ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಲ್ಲಿ ಅಡಗಿರುವ ವಿವಿಧ ಕೌಶಲ್ಯಗಳನ್ನು ವೃದ್ಧಿಸುವ ರಸಪ್ರಶ್ನೆ, ಕೋಡಿಂಗ್, ಗೇಮಿಂಗ್,ರಂಗೋಲಿ,ಅಣುಕು ಸಂದರ್ಶನ, ಪೋಸ್ಟರ್ ತಯಾರಿಕೆ, ನಿಧಿ ಬೇಟೆ,ಪವರ್ಪಾಯಿಂಟ್ ಪ್ರಸ್ತುತಿ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.

ಇದೇ ಸಂದರ್ಭದಲ್ಲಿ ವಿಪ್ರೊ ಕ್ಯಾಂಪಸ್ ಪ್ಲೇಸ್ಮೆಂಟ್ ಡ್ರೈವಲ್ಲಿ ಆಯ್ಕೆಯಾದ ಕು. ನಿವೇದಿತಾ ನಿಖಿಲ್ ಪೂಜಾರಿ ಇವರನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿಗಳಾದ ಮಾನ್ವಿತ ಎಸ್ ಸುವರ್ಣ, ಡಿಯೋನ್ ಜೋಯಲ್ ಪಿಂಟೋ ಈ ಸ್ಪರ್ಧೆಯ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ದಿವ್ಯಶ್ರೀ ಬಿ, ಸುಷ್ಮಾ, ಬಿಸಿಎ ವಿಭಾಗದ ಎಲ್ಲಾ ಅಧ್ಯಾಪಕ-ಅಧ್ಯಾಪಕೇತರಬಂಧುಗಳು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಲ್ರುಶಾ ಮಿಲಿನಾ ಡಿಸಾ ಬಹುಮಾನ ಪಟ್ಟಿಯನ್ನು ವಾಚಿಸಿದರು. ವಿದ್ಯಾರ್ಥಿಗಳಾದ ಗೌರವ ಬಂಗೇರ ಮತ್ತು ತಂಡ, ಆಲಿಸ್ಟರ್ ಸುಜಾಯ್ ಡಿಸೋಜ, ಅನುಪ್ ನಾಯಕ ಸಹಕರಿಸಿದರು. ಕು.ಶ್ರೀಲಕ್ಷ್ಮಿ ಪ್ರಾರ್ಥಿಸಿದರು. ಕು. ಛಾಯಾ ಏ ಕರ್ಕೇರ ಸ್ವಾಗತಿಸಿ, ಪದ್ಮಶ್ರೀ ಭಟ್ ವಂದಿಸಿದರು. ಕು. ಫೈಝ ಭಾನು ಕಾರ್ಯಕ್ರಮ ಸಂಯೋಜಿಸಿದರು.
ಕಾಪು : ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿಯಿಂದ ಕಟಪಾಡಿ ಮೂಡುಬೆಟ್ಟು ಗ್ರಾಮದ ಸರ್ಕಾರಿ ಗುಡ್ಡೆ ಪ್ರದೇಶದಲ್ಲಿ ಮತಯಾಚನೆ

Posted On: 04-05-2023 11:55AM
ಕಾಪು : ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ಗುರ್ಮೆ ಸುರೇಶ್ ಶೆಟ್ಟಿ ಅವರು ಕಟಪಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಮೂಡುಬೆಟ್ಟು ಗ್ರಾಮದ ಸರ್ಕಾರಿ ಗುಡ್ಡೆ ಪ್ರದೇಶದಲ್ಲಿ ಮತಯಾಚನೆ ಮಾಡಿದರು.
ಈ ಸಂದರ್ಭ ಮಾತನಾಡಿದ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಮೆಂಡನ್ ರವರು ಸರ್ಕಾರಿ ಗುಡ್ಡೆ ಪ್ರದೇಶದ ಜನರ ಬೆಂಬಲ ತುಂಬಾ ಅಗತ್ಯ ಇನ್ನಷ್ಟು ಈ ಪ್ರದೇಶದ ಅಭಿವೃದ್ಧಿ ಕಾರ್ಯಗಳಿಗೆ ಗುರ್ಮೆ ಸುರೇಶ್ ಶೆಟ್ಟಿಯವರಿಗೆ ಹೆಚ್ಚಿನ ಬೆಂಬಲ ನೀಡಿ ಅವರ ಗೆಲುವಲ್ಲಿ ನೀವು ಪಾಲುದಾರರಾಗಬೇಕು ಎಂದು ಮನವಿ ಮಾತನಾಡಿದರು. ನಂತರ ಮಾತನಾಡಿದ ಕಾಪು ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿಯಾದ ಸುಲೋಚನಾ ಭಟ್ ರವರು, ಸರ್ಕಾರಿ ಗುಡ್ಡೆ ಪ್ರದೇಶದಲ್ಲಿ ನೆರೆದಿರುವ ಜನರ ಸಂಖ್ಯೆಗೆ ಹಾಗೂ ಜನರು ನೀಡಿರುವ ಬೆಂಬಲಕ್ಕೆ ಶ್ಲಾಘನೆ ವ್ಯಕ್ತ ಪಡಿಸಿದರು.
ನಂತರ ಮಾತನಾಡಿದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ, ನರೇಂದ್ರ ಮೋದಿಯವರ ಸಂಕಲ್ಪ ಗೆಲ್ಲಬೇಕು ನಮ್ಮ ಧರ್ಮ ಗೆಲ್ಲಬೇಕು ಅವರು ಈ ದೇಶಕ್ಕೆ ನೀಡಿರುವ ಕೊಡುಗೆಗಳು ಅಪಾರ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಆಗಲಿವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಗೀತಾಂಜಲಿ ಸುವರ್ಣ, ಕಟಪಾಡಿ ಗ್ರಾಮ ಪಂಚಾಯತ್ ಸದಸ್ಯೆ ವೀಣಾ ಶೆಟ್ಟಿ, ಶಕ್ತಿ ಕೇಂದ್ರ ಪ್ರಮುಖ್ ಸಂತೋಷ್ ಮೂಡುಬೆಳ್ಳೆ, ಶಕ್ತಿ ಕೇಂದ್ರ ಅಧ್ಯಕ್ಷ ನಿತೇಶ್ ಶೇರಿಗಾರ್, ಅಭ್ಯರ್ಥಿ ಪ್ರಮುಖ್ ಅನಿಲ್ ಕುಮಾರ್, ಕಟಪಾಡಿ ಗ್ರಾಮದ ಬಿಜೆಪಿ ಸದಸ್ಯೆ ಶಾಲಿನಿಚಂದ್ರ ಪೂಜಾರಿ, ಸರ್ಕಾರಿ ಗುಡ್ಡೆ ಭೂತ್ ಅಧ್ಯಕ್ಷ ನಿತೇಶ್ ದೇವಾಡಿಗ, ಸರ್ಕಾರಿ ಗುಡ್ಡೆ ಓ ಬಿ ಸಿ ಕಾರ್ಯದರ್ಶಿ ರಘುಪತಿ ಆಚಾರ್ಯ, ಪಂಚಾಯತ್ ಸದಸ್ಯೆ ಕುಮಾರಿ ದೀಕ್ಷಿತಾ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾಪು : ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ

Posted On: 03-05-2023 06:27PM
ಕಾಪು : ಭಾರತೀಯ ಜನತಾ ಪಕ್ಷದ ಕಾಪು ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಣಾಳಿಕೆಯನ್ನು ದೆಹಲಿ ಶಾಸಕರಾದ ವಿಜೇಂದ್ರ ಗುಪ್ತ ಬುಧವಾರ ಕಾಪು ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಕಾಲದಲ್ಲಿ ಹಲವಾರು ಯೋಜನೆಗಳು ಚಾಲ್ತಿಗೆ ಬಂದಿದೆ. ಮುಂದೆಯೂ ಕಾಪು ಕ್ಷೇತ್ರದ ಅಭಿವೃದ್ಧಿ ನಮ್ಮ ಗುರಿ ಎಂದರು.
ಕಾಪು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಿಜೆಪಿ ಚುನಾವಣಾ ಪ್ರಣಾಳಿಕೆಯ ಪ್ರಮುಖಾಂಶಗಳು : ಪ್ರಣಾಳಿಕೆಯಲ್ಲಿ ತಾಲೂಕು ಆಸ್ಪತ್ರೆಯನ್ನು 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಮೂಲಕ ಸಾರ್ವಜನಿಕರಿಗೆ ಅಗತ್ಯ ಆರೋಗ್ಯ ಸೇವೆಗೆ ಒತ್ತು, ಕಾಪು ಲೈಟ್‌ಹೌಸ್ ಬೀಚ್‌ನ ಸಮಗ್ರ ಅಭಿವೃದ್ಧಿ ಮೂಲಕ ಪ್ರವಾಸಿಗರ ಆಕರ್ಷಣೆ, ಸ್ಥಳೀಯರಿಗೆ ಉದ್ಯೋಗದ ಅವಕಾಶ, ಕಾಪು ತಾಲೂಕಿಗೆ ಸುಸಜ್ಜಿತವಾದ ಅಗ್ನಿ ಶಾಮಕ ಠಾಣೆಯ ಮಂಜೂರಾತಿ, ಕಾಪು ಪುರಸಭಾ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸುವುದು, ಕಾಪು ದೀಪಸ್ತಂಭದ ಬಳಿ (ಉತ್ತರ ದಿಕ್ಕು) ಸರ್ವಋತುವಿನಲ್ಲಿಯೂ ಮೀನುಗಾರರಿಗೆ ಅನುಕೂಲವಾಗುವಂತೆ ಮೀನುಗಾರಿಕಾ ಜಟ್ಟಿ ನಿರ್ಮಾಣ, ಕಾಪು ತಾಲೂಕಿನಲ್ಲಿ ಪ್ರಮುಖ ಸರಕಾರಿ ಕಟ್ಟಡಗಳ ನಿರ್ಮಾಣ, ಪ್ರವಾಸಿ ಮಂದಿರ ಕಟ್ಟಡ ಹಾಗೂ ತಾಲೂಕು ಪಂಚಾಯತ್ ಕಟ್ಟಡ ನಿರ್ಮಾಣಕ್ಕೆ ಯೋಜನೆ, ಹೆಜಮಾಡಿಯಲ್ಲಿ ತಾಲೂಕು ಕ್ರೀಡಾಂಗಣವನ್ನು ಮೇಲ್ದರ್ಜೆಗೆ ಪರಿವರ್ತನೆ, ಕಾಪು ತಾಲೂಕು ಕೇಂದ್ರದಲ್ಲಿ ವಿವಿಧೋದ್ದೇಶಕ್ಕಾಗಿ ಸುಸಜ್ಜಿತವಾದ ಮಾರುಕಟ್ಟೆ ಪ್ರಾಂಗಣ ನಿರ್ಮಾಣ, ಕಾಪು ತಾಲೂಕಿನಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ನಿರ್ಮಾಣ. ಕಾಪು ವಿಧಾನಸಭಾ ಕ್ಷೇತ್ರದ ನಗರ ಭಾಗದ ವಸತಿ ರಹಿತರಿಗೆ ವಸತಿ ಸೌಲಭ್ಯ ಹಾಗೂ ಗ್ರಾಮೀಣ ಭಾಗದ ನಿವೇಶನ ರಹಿತರಿಗೆ ನಿವೇಶನ ಸಹಿತ ವಸತಿ ಸೌಲಭ್ಯ ಒದಗಿಸುವ ಗುರಿ, ಸಮುದ್ರ ಕೊರೆತಕ್ಕೆ ಶಾಶ್ವತ ತಡೆಗೋಡೆ ಯೋಜನೆ, ವಿಧಾನಸಭಾ ಕ್ಷೇತ್ರದಾದ್ಯಂತ ವಿವಿಧ ಕೆರೆಗಳ ಅಭಿವೃದ್ಧಿ/ಅಂತರ್ಜಲ ವೃದ್ಧಿಗೆ ಕ್ರಮ, ಹಿರಿಯಡ್ಕ ಭಾಗಗಳಲ್ಲಿ ಸರಕಾರಿ ಜಾಗದಲ್ಲಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಕೈಗಾರಿಕಾ ಪ್ರದೇಶದ ಗುರುತಿಸುವಿಕೆ ಮತ್ತು ಅಭಿವೃದ್ಧಿ, ನಾಡದೋಣಿ ಮೀನುಗಾರರಿಗೆ ಪ್ರತೀ ತಿಂಗಳು ಪ್ರತೀ ದೋಣಿಗೆ 300 ಲೀಟರ್ ಸೀಮೆಎಣ್ಣೆ ವರ್ಷದಲ್ಲಿ 10 ತಿಂಗಳು ನಿರಂತರವಾಗಿ ನೀಡುವುದು, ಹಿಂದುಳಿದ ವರ್ಗಕ್ಕೆ ಸೇರಿದ ಸಣ್ಣ ಸಣ್ಣ ಸಮುದಾಯಗಳಿಗೆ ನಿವೇಶನ ಒದಗಿಸಿ, ಸಮುದಾಯ ಭವನ ನಿರ್ಮಾಣ. ಶಿಕ್ಷಣ, ಸ್ವಂತ ಉದ್ಯೋಗ ಹಾಗೂ ಇನ್ನಿತರ ಅಭಿವೃದ್ಧಿಗೆ ಯೋಜನೆ ರೂಪಿಸುವುದು, ಕಾಪುವಿನ ಹೃದಯ ಭಾಗದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ಸಹಿತ ಸಂಕೀರ್ಣ ನಿರ್ಮಾಣಕ್ಕೆ ಆದ್ಯತೆ, ಕಾಪು ಪುರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳ ರಸ್ತೆ, ಚರಂಡಿ, ಮಳೆ ನೀರಿನ ತೋಡು, ಬೀದಿ ದೀಪ ಸಹಿತವಾಗಿ ಅಗತ್ಯವಿರುವ ಮೂಲಭೂತ ಸೌಕರ್ಯ ಒದಗಿಸಲು ವ್ಯವಸ್ಥಿತ ಯೋಜನೆ, ಭೂ ಪರಿವರ್ತಿತ ನಿವೇಶನದಲ್ಲಿ ಏಕ ವಿನ್ಯಾಸಗೊಳ್ಳದ ವಸತಿ ನಿವೇಶನಕ್ಕೆ ಕಾನೂನು ಸರಳೀಕರಣಗೊಳಿಸಲು ಕ್ರಮ ಕೈಗೊಳ್ಳುವುದು, 60 ವರ್ಷ ದಾಟಿದ ಮೀನುಗಾರರಿಗೆ ಪಿಂಚಣಿ ಯೋಜನೆಗೆ ಸರಕಾರದಿಂದ ಮಂಜೂರಾತಿ, 80 ಬಡಗುಬೆಟ್ಟು ಗ್ರಾಮದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಾಸ್ಟರ್ ಪ್ಲಾನ್‌ನಲ್ಲಿ ಗುರುತಿಸಿರುವ ಕೈಗಾರಿಕಾ ವಲಯವನ್ನು ವಸತಿ ವಲಯವಾಗಿ ಬದಲಾಯಿಸುವುದು, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ನಿರ್ಮಾಣ, ಕಾಪು ತಾಲೂಕಿಗೆ ನ್ಯಾಯಾಲಯಗಳ ಸ್ಥಾಪನೆ, ಕರಾವಳಿ ಭಾಗದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ, ಅರ್ಹ ಫಲಾನುಭವಿಗಳಿಗೆ ಮನೆ ನಿವೇಶನ ನೀಡುವುದು, ಪುರಸಭೆ ವ್ಯಾಪ್ತಿಯೊಳಗೆ ಬಫಾರ್ ಝೇನ್ ಕೈಬಿಡಲು ಸರಕಾರದ ಮಟ್ಟದಿಂದ ಆದೇಶಿಸಿ ಸರಳೀಕರಣಗೊಳಿಸುವುದು, ಅಕ್ರಮ-ಸಕ್ರಮ ಯೋಜನೆ ಪರಿಣಾಮಕಾರಿಯಾಗಿ ಜಾರಿ, ಕಾಪು ಕ್ಷೇತ್ರದ ಅತ್ಯಂತ ಹುಸಿ ಒಕ್ಕಲು ಸಾಗುವಾಳಿದಾರರಿಗೆ ಅವರ ಹೆಸರಿಗೆ ಪಹಣಿ ದಾಖಲಿಸಲು ಕ್ರಮವಹಿಸುವುದು. ಈಗಿರುವ ಪಾಲಿಟೆಕ್ನಿಕ್ ಕಾಲೇಜನ್ನು ಮೇಲ್ದರ್ಜೆಗೊಳಿಸುವುದು, ಸರಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ, ಹೆಜಮಾಡಿ/ಪಡುಬಿದ್ರಿಯಲ್ಲಿ ಕೇಂದ್ರ ಸರಕಾರದ ಸಹಭಾಗಿತ್ವದಲ್ಲಿ ಮತ್ಸ್ಯಗ್ರಾಮ ಸ್ಥಾಪನೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಪು ಮೇಲ್ದರ್ಜೆಗೆ, ಐ.ಟಿ. ಪಾರ್ಕ್ ಸ್ಥಾಪನೆ, ಜವಳಿ ಪಾರ್ಕ್ ಸ್ಥಾಪನೆ, ವಿಧಾನಸಭಾ ಕ್ಷೇತ್ರಾದ್ಯಂತ ಪ್ರವಾಸೋದ್ಯಮಕ್ಕೆ ಆದ್ಯತೆ, ಧಾರ್ಮಿಕ ಕೇಂದ್ರಗಳ ನವೀಕರಣ/ ಹೊಸತನ/ಕಾರಿಡಾರ್ ನಿರ್ಮಾಣ.
ಈ ಸಂದರ್ಭ ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್, ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ, ಕಾಪು ಮಂಡಲದ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ಚುನಾವಣಾ ಉಸ್ತುವಾರಿ ಸುಲೋಚನ ಭಟ್, ಪಕ್ಷದ ಪ್ರಮುಖರಾದ ಪ್ರಕಾಶ್ ಶೆಟ್ಟಿ, ಕೇಸರಿ ಯುವರಾಜ್, ಉಪೇಂದ್ರ ನಾಯಕ್, ಶಿಲ್ಪಾ ಸುವರ್ಣ, ಶ್ಯಾಮಲಾ ಕುಂದರ್, ಕಿರಣ್ ಆಳ್ವ ಉಪಸ್ಥಿತರಿದ್ದರು.
ಕಾಪು : ಮಜೂರು ಪಂಚಾಯತ್ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿಯವರಿಂದ ಮತಯಾಚನೆ

Posted On: 03-05-2023 02:45PM
ಕಾಪು : ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ಗುರ್ಮೆ ಸುರೇಶ್ ಶೆಟ್ಟಿಯವರ ಚುನಾವಣಾ ಮತಯಾಚನೆಯು ಮಜೂರು ಪಂಚಾಯತ್ ವ್ಯಾಪ್ತಿಯ ಪ್ರದೇಶದಲ್ಲಿ ನೆರವೇರಿತು.
ಮತದಾರರನ್ನು ಉದ್ದೇಶಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿಯವರು, ಪಕ್ಷದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾತನಾಡಿ ಈ ಬಾರಿಯೂ ಬಿಜೆಪಿ ಸರ್ಕಾರದ ಆಡಳಿತಕ್ಕಾಗಿ ಗುರ್ಮೆ ಸುರೇಶ್ ಶೆಟ್ಟಿಯವರಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ನಂತರ ಶಾಸಕರಾದ ಲಾಲಾಜಿ ಮೆಂಡನ್ ಅವರು ಮಾತನಾಡಿ ಪಕ್ಷದದಲ್ಲಿ ಮಾಡಿದ ನಿಸ್ವಾರ್ಥ ಸೇವೆಯ ಮುಂದಿನ ಜವಾಬ್ದಾರಿಯನ್ನು ಗುರ್ಮೆ ಸುರೇಶ್ ಶೆಟ್ಟಿಯವರು ನಿಭಾಯಿಸಿಕೊಂಡು ಹೋಗುತ್ತಾರೆ ಎಂಬ ಭರವಸೆ ಕೊಟ್ಟರು. ನಂತರ ಮಾತನಾಡಿದ ಗುರ್ಮೆ ಸುರೇಶ್ ಶೆಟ್ಟಿವರು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅವರಿಗೆ ಪರಿಹಾರದ ಭರವಸೆ ಕೊಟ್ಟರು.
ಈ ಸಂದರ್ಭದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿಯಾದ ಸುಲೋಚನಾ ಭಟ್ ಬಂಟ್ವಾಳ ಹಾಗೂ ಕಾಪು ಪುರಸಭಾ ಸದಸ್ಯರಾದ ಹರಿಣಿ ಹಾಗೂ ಅನುಸೂಯ ಕಾಂಪ್ಲೆಕ್ಸ್ ನ ಅಧ್ಯಕ್ಷರಾದ ಡಾ. ಶ್ವೇತಾ ರವರು ಉಪಸ್ಥಿತರಿದ್ದರು.
ಕಾಪು : ಜಗದ್ಗುರು ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳ ಆಶೀರ್ವಾದ ಪಡೆದ ವಿನಯ್ ಕುಮಾರ್ ಸೊರಕೆ

Posted On: 03-05-2023 11:01AM
ಕಾಪು : ಪಡುಕುತ್ಯಾರಿನಲ್ಲಿ ಜಗದ್ಗುರು ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ತಮ್ಮ ಅಭಿವೃದ್ಧಿ ಯೋಜನೆಗಳ ಬಗ್ಗೆ, ಸರಕಾರದ ಯೋಜನೆಗಳ ಬಗ್ಗೆ ಸ್ವಾಮೀಜಿಯವರೊಂದಿಗೆ ಸಮಾಲೋಚನೆ ಮಾಡಿದರು.
ಈ ಸಂದರ್ಭ ಕಾಂಗ್ರೆಸ್ ಪಕ್ಷದ ಪ್ರಮುಖರಾದ ದಿವಾಕರ ಡಿ ಶೆಟ್ಟಿ, ರಾಜೇಶ್ ಕುಲಾಲ್, ದಿವಾಕರ ಬಿ. ಶೆಟ್ಟಿ, ಜಾನ್ಸನ್ ಕಾರ್ಕಡ, ಶಶಿಕಾಂತ್ ಆಚಾರ್ಯ, ಪ್ರಭಾಕರ ಆಚಾರ್ಯ, ರತನ್ ಶೆಟ್ಟಿ ಉಪಸ್ಥಿತರಿದ್ದರು.
ಕಾಪು : ಗುರ್ಮೆ ಪ್ರಚಾರಕ್ಕೆ ತಾರಾ ಮೆರುಗು ; ನಟಿ ತಾರಾ ಚುನಾವಣಾ ಕಾರ್ಯಾಲಯ ಭೇಟಿ

Posted On: 03-05-2023 10:54AM
ಕಾಪು : ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ಗುರ್ಮೆ ಸುರೇಶ್ ಶೆಟ್ಟಿಯವರ ಪರವಾಗಿ ನಟಿ ತಾರಾ ಮತ ಯಾಚನೆ ಮಾಡಿದರು.
ಈ ಸಂದರ್ಭ ಕಾಪುವಿನಲ್ಲಿರುವ ಭಾರತೀಯ ಜನತಾ ಪಾರ್ಟಿಯ ಚುನಾವಣಾ ಕಾರ್ಯಾಲಯಕ್ಕೆ ಕರ್ನಾಟಕ ವಿಧಾನಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಪಕ್ಷದ ಸ್ಟಾರ್ ಪ್ರಚಾರಕಿ ನಟಿ ತಾರಾ ಭೇಟಿ ಕೊಟ್ಟರು.
ಉಚ್ಚಿಲ ಬಡಾ ಗ್ರಾಮದಲ್ಲಿ 300ರಕ್ಕೂ ಮಿಕ್ಕ ಮೀನುಗಾರರು ಕಾಂಗ್ರೆಸ್ ಸೇರ್ಪಡೆ

Posted On: 03-05-2023 10:31AM
ಕಾಪು : ತಾಲೂಕಿನ ಉಚ್ಚಿಲ ಬಡಾ ಗ್ರಾಮದ ಕಡಲತಡಿಯ ಭಾಗದಲ್ಲಿ ಬಹಳಷ್ಟು ಮೀನುಗಾರರು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಭಾಗದಲ್ಲಿ ಇಷ್ಟೊಂದು ಜನರು ಸೇರಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿರುವುದು ಚುನಾವಣಾ ಇತಿಹಾಸದಲ್ಲಿ ಇದೇ ಮೊದಲು ಅಂತಾ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಹೇಳಿದರು. ಅವರು ಕಡಲ ತಡಿಯ ಉಚ್ಚಿಲ ಬಡಾ ಗ್ರಾಮದಲ್ಲಿ 300ರಕ್ಕೂ ಮಿಕ್ಕ ಮೀನುಗಾರರ ಮುಖಂಡರು ಹಾಗೂ ಯುವಕ ಯುವತಿಯರ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೊಗವೀರರನ್ನು ಕೇವಲ ಓಟ್ ಬ್ಯಾಂಕ್ ಆಗಿ ನಡೆಸಿಕೊಂಡ ಬಿಜೆಪಿ ಸರ್ಕಾರ ಬಹಳಷ್ಟು ಸೌಲಭ್ಯದಿಂದ ವಂಚಿತರನ್ನಾಗಿ ಮಾಡಿದೆ. ಕರಾವಳಿ ಭಾಗದ ಅಭಿವೃದ್ಧಿಗಾಗಿ ಕಾಂಗ್ರೆಸ್ ಈ ಬಾರಿ ವಿಶೇಷ ಅನುದಾನವನ್ನು, ವಿಶೇಷ ಪ್ರಣಾಳಿಕೆಯನ್ನು ಜಾರಿ ಮಾಡುವ ಪ್ರಾಮಾಣಿಕ ಭರವಸೆಯನ್ನು ನೀಡಿದೆ. ಭರಪೂರ ಕೊಡುಗೆಯನ್ನು ಕಾಂಗ್ರೆಸ್ ಈ ಬಾರಿ ಕರಾವಳಿ ಭಾಗಕ್ಕೆ ನೀಡುವ ವಾಗ್ದಾನವನ್ನು ಮಾಡಿದೆ. ಅದರ ಸಂಪೂರ್ಣ ಜವಾಬ್ದಾರಿ ನನ್ನ ಹೆಗಲಮೇಲಿದೆ ಎಂದು ಸೊರಕೆ ಹೇಳಿದರು.
ಉಡುಪಿ ಜಿಲ್ಲಾ ಮೀನುಗಾರರ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ವಿಶ್ವಾಸ್ ವಿ ಅಮೀನ್, ದೀಪಕ್ ಎರ್ಮಳ್, ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಶೇಖಬ್ಬಾ ಅವರ ನೇತೃತ್ವದಲ್ಲಿ ಬಹಳಷ್ಟು ಮಂದಿ ಇಳಿಹೊತ್ತಿನಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ಮೊಗವೀರ ಮುಖಂಡರಾದ ಸುಕುಮಾರ್ ಬಂಗೇರ, ರೂಪೇಶ್ ಮೆಂಡನ್, ಜೀವನ್ ಮೆಂಡನ್, ಆನಂದ್ ತಿಂಗಳಾಯ, ಅನಿಶ್, ಯಶ್ವಂತ್ ಬಂಗೇರ, ಉಮೇಶ್ ಪೂಜಾರಿ, ದಯಾನಂದ ಕೋಟ್ಯಾನ್ ,ಶಿವಣ್ಣ ಬಂಗೇರ, ಲಕ್ಷ್ಮಣ್ ಗುರಿಕಾರ ಸೇರ್ಪಡೆಯ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತಾಡಿದ ಸುಕುಮಾರ್ ಬಂಗೇರರವರು ವಿನಯಕುಮಾರ್ ಸೊರಕೆಯವರ ಗೆಲುವಿಗೆ ಎಲ್ಲರೂ ಸೇರಿ ಹಗಲಿರುಳು ಶ್ರಮಿಸುವುದಾಗಿ ಭರವಸೆ ನೀಡಿದರು.