Updated News From Kaup

ತಾಲೂಕು ಪಂಚಾಯತ್ ಮಾಜಿ ಸದಸ್ಯ ಭಾಸ್ಕರ್ ಕೋಟ್ಯಾನ್ ನಿಧನ

Posted On: 09-06-2023 06:39PM

ಕಾಪು : ಹಿರಿಯ ಕಾಂಗ್ರೆಸಿಗ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಭಾಸ್ಕರ್ ಕೋಟ್ಯಾನ್ (67) ಹೃದಯಾಘಾತದಿಂದ ನಿಧನ ಹೊಂದಿದರು.

ಉಡುಪಿ ತಾಲೂಕು ಪಂಚಾಯತಿಗೆ ಉದ್ಯಾವರ ಕ್ಷೇತ್ರದಿಂದ ಒಂದು ಬಾರಿ ಆಯ್ಕೆಯಾಗಿದ್ದ ಇವರು, ಗ್ರಾಮ ಪಂಚಾಯತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಉದ್ಯಾವರ ಬಿಲ್ಲವ ಮಹಾಜನ ಸಂಘ ಇದರ ಮಾಜಿ ಅಧ್ಯಕ್ಷರಾಗಿದ್ದ ಇವರು, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇದ್ದುದನ್ನು ನೇರವಾಗಿ ಹೇಳುತ್ತಿದ್ದ ಇವರು ಉದ್ಯಾವರದಲ್ಲಿ ಹಲವು ವರ್ಷಗಳ ಹಿಂದೆ ನಡೆದ ಫಿಶ್ ಮಿಲ್ ವಿರೋಧಿ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದರು. ಉದ್ಯಾವರ ಗ್ರಾಮೀಣ ಕಾಂಗ್ರೆಸ್ಸಿನಲ್ಲಿ ಸಕ್ರಿಯವರಾಗಿದ್ದು, ಪತ್ನಿ, ಮಗಳು ಮತ್ತು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

ಕಾಪು : ಮುದರಂಗಡಿ ಬಿಜೆಪಿ ಮಹಾಶಕ್ತಿ ಕೇಂದ್ರ ವತಿಯಿಂದ ಶಾಸಕ ಗುರ್ಮೆ ಸುರೇಶ್ ಶೆಟ್ಟಿಗೆ ಅಭಿನಂದನೆ

Posted On: 08-06-2023 11:06AM

ಕಾಪು : ಭಾರತೀಯ ಜನತಾ ಪಾರ್ಟಿ ಮಹಾಶಕ್ತಿ ಕೇಂದ್ರ ಮುದರಂಗಡಿ ಇದರ ವತಿಯಿಂದ ಜೂನ್ 7ರಂದು ಮುದರಂಗಡಿಯ ಸ್ಪಂದನ ಸಭಾಭವನದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಗುರ್ಮೆ ಸುರೇಶ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ನಿಕಟಪೂರ್ವ ಶಾಸಕರಾದ ಲಾಲಾಜಿ ಆರ್ ಮೆಂಡನ್, ಬಿಜೆಪಿ ಕಾಪು ಮಂಡಲದ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಶಿಲ್ಪಾ ಜಿ ಸುವರ್ಣ, ಮುದರಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯೋಗಿಣಿ ಶೆಟ್ಟಿ, ಮುದರಂಗಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಶಿವರಾಮ್ ಭಂಡಾರಿ, ಮುದರಂಗಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ, ಹಿರಿಯರಾದ ಗಂಗಾಧರ ಶೆಟ್ಟಿ, ಸಮಾಜ ಸೇವಕರಾದ ವಿಶ್ವನಾಥ ಶೆಟ್ಟಿ ಹಾಗೂ ಪಕ್ಷದ ಹಿರಿಯರು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾಪು : ಭಾರತೀಯ ಜನತಾ ಪಾರ್ಟಿ ವತಿಯಿಂದ ರಾಜ್ಯ ಸರಕಾರದ ವಚನಭೃಷ್ಟತೆ ನೀತಿ ಖಂಡಿಸಿ ಪ್ರತಿಭಟನೆ

Posted On: 05-06-2023 07:02PM

ಕಾಪು : ಭಾರತೀಯ ಜನತಾ ಪಾರ್ಟಿ ಕಾಪು ವಿಧಾನಸಭಾ ಕ್ಷೇತ್ರದ ವತಿಯಿಂದ ಕಾಪು ಪೇಟೆಯಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನಾ ಸಭೆ ಸೋಮವಾರ ನಡೆಯಿತು. ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್, ರಾಜ್ಯ ಸರಕಾರ 200 ಯುನಿಟ್ ವಿದ್ಯುತ್ ಎಲ್ಲರಿಗೂ ಉಚಿತ ಎಂದು ಹೇಳಿ ಇದೀಗ ವಾರ್ಷಿಕ ಸರಾಸರಿಯ ಶೇ.10 ರಷ್ಟು ಹೆಚ್ಚು ಮಾತ್ರ ಉಚಿತ ಎಂದು ಹೇಳಿ ಜನರಿಗೆ ಕೊಟ್ಟ ವಚನ ಮುರಿದು ವಚನಭ್ರಷ್ಟ ರಾಗಿದ್ದಾರೆ. ಅಲ್ಲದೆ ಪ್ರತಿ ಯುನಿಟ್ ವಿದ್ಯುತ್ ಗೆ ಸುಮಾರು 70 ಪೈಸೆ ಯಷ್ಟು ವಿದ್ಯುತ್ ದರ ಏರಿಸಿ ಜನವಿರೋಧಿ ನೀತಿ ತೋರಿಸಿದ್ದಾರೆ.

ಇನ್ನು ಪಶುಸಂಗೋಪನಾ ಇಲಾಖೆಯ ಸಚಿವರಾದ ವೆಂಕಟೇಶ್ ರವರು ಗೋವುಗಳನ್ನು ಯಾಕೆ ಕಡಿಯಬಾರದು ಎಂದು ಹಿಂದೂಗಳ ಭಾವನೆಗಳ ಮೇಲೆ ಚೆಲ್ಲಾಟವಾಡುವ ಮಾತನ್ನಾಡಿದ್ದಾರೆ. ಗೋವುಗಳೆಂದರೆ ಭಾರತೀಯರಿಗೆ ಪರಮ‌ ಪವಿತ್ರವಾದದು. ಯಾವುದೇ ಕೆಲಸ ಶುಭಾರಂಭ ಮಾಡುವುದಾದರೆ ಮೊದಲು ಗೋಪೂಜೆ ಮಾಡುವರು. ಗ್ರಹಪ್ರವೇಶ ಮಾಡುವುದಾರೂ ಮೊದಲು ಗೋವನ್ನು ಪ್ರವೇಶ ಮಾಡಿಸಿ ನಂತರ ನಾವು ಪ್ರವೇಶ ಮಾಡುವೆವು. ಭಾರತೀಯರದ್ದು ಗೋವು ಆಧಾರಿತ ಕೃಷಿ ಜೀವನ ಪದ್ಧತಿ. ಅಂತಹ ಗೋವುಗಳನ್ನು ಕಡಿಯುವ ಮಾತನ್ನಾಡುವ ಮೂಲಕ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವರು. ಈ ಕಾಯ್ದೆ ಹಿಂಪಡೆಯುವ ಪ್ರಯತ್ನ ಮಾಡಿದಲ್ಲಿ ಬಿಜೆಪಿ ಕಾರ್ಯಕರ್ತರು ನಿಮ್ಮ ಮುಂದಿನ ಎಲ್ಲ ಕಾರ್ಯಕ್ರಮಗಳಿಗೆ ಕಪ್ಪು ಬಾವುಟ ತೋರಿಸಿ ಪ್ರತಿಭಟನೆ ಮಾಡುವೆವು. ಗ್ರಾಮ ಗ್ರಾಮಗಳಲ್ಲಿ ಜನಜಾಗ್ರತಿ ಮೂಡಿಸುವೆವು ಎಂದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಮಾತನಾಡಿ, ವೃದ್ಧ ಗೋವುಗಳನ್ನು ಏನು ಮಾಡುವುದು ಎಂಬ ಪ್ರಶ್ನೆಗೆ ನಿಮ್ಮ ವೃದ್ಧ ತಂದೆ ತಾಯಿ ಇದ್ದರೆ ಏನು ಮಾಡುವಿರೋ ಗೋವನ್ನೂ ಅದೇ ರೀತಿಯಲ್ಲಿ ನೋಡುವ ಸಂಸ್ಕ್ರತಿ ನಮ್ಮದು ಎಂದರು. ಚಕ್ರವರ್ತಿ ಸೂಲಿಬೆಲೆಗೆ ಜೈಲು ಸೇರಬೇಕಾದೀತು ಎನ್ನುವ ಸಚಿವ ಎಮ್ ಬಿ‌ ಪಾಟೀಲ್ ಹೇಳಿಕೆ ಖಂಡಿಸಲಾಗಿ ರಾಜ್ಯ ಸರಕಾರದ ಜನವಿರೋಧಿ ನೀತಿ ಬಿಡದಿದ್ದರೆ ದಿನಂಪ್ರತಿ ಹೋರಾಟಕ್ಕೂ ನಾವು ಸಿಧ್ಧ ಎನ್ನುವ ಎಚ್ಚರಿಕೆ ನೀಡಲಾಯಿತು.

ಈ ಸಂದರ್ಭದಲ್ಲಿ ಕಾಪು‌ ಮಂಡಲ ಉಪಾಧ್ಯಕ್ಷರಾದ ನವೀನ್ ಎಸ್ ಕೆ, ಚಂದ್ರಶೇಖರ್ ಕೋಟ್ಯಾನ್, ಸುಧಾಮ ಶೆಟ್ಟಿ, ಮಂಡಲ ಪ್ರಧಾನ‌ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ಮಂಡಲ ಕಾರ್ಯದರ್ಶಿಗಳಾದ ಲತಾ ಆಚಾರ್ಯ, ಚಂದ್ರ ಮಲ್ಲಾರ್, ಮಂಡಲ ಮಹಿಳಾಮೋರ್ಚ ಅಧ್ಯಕ್ಷರಾದ ಸುಮಾ ಶೆಟ್ಟಿ, ಎಸ್ ಸಿ ಮೋರ್ಚ ಅಧ್ಯಕ್ಷರಾದ ಎಮ್ ಜಿ ನಾಗೇಂದ್ರ, ಪುರಸಭಾ ಸದಸ್ಯರಾದ ಅನಿಲ್ ಕುಮಾರ್, ಶೈಲೇಶ್, ಪ್ರಮುಖರಾದ ಶರಣ್ ಕುಮಾರ್ ಮಟ್ಟು, ಪ್ರವೀಣ್ ಶೆಟ್ಟಿ ಇನ್ನಂಜೆ, ದಿನೇಶ್ ಕೋಟ್ಯಾನ್, ಜಗದೀಶ್ ಮೆಂಡನ್, ಶೈಲೇಶ್ ಶೆಟ್ಟಿ, ರಮಾ ಶೆಟ್ಟಿ, ಗೌರಿ ಶಂಕರ್ ಮತ್ತಿತರರು ಉಪಸ್ಥಿತರಿದ್ದರು.

ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನು ಭೇಟಿಯಾದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ

Posted On: 05-06-2023 06:53PM

ಕಾಪು : ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಗಳಾದ ಏಕನಾಥ ಶಿಂಧ ಅವರನ್ನು ಜೂನ್ 5ರಂದು ಮುಂಬೈನಲ್ಲಿರುವ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಭೇಟಿಯಾದರು.

ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಪು ಕ್ಷೇತ್ರಕ್ಕೆ ತನ್ನ ಪರವಾಗಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಮುಖ್ಯಮಂತ್ರಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಕಾಪು ಕ್ಷೇತ್ರ ಸರ್ವಾಂಗೀಣ ರೀತಿಯಲ್ಲಿ ಅಭಿವೃದ್ಧಿ ಹೊಂದುವಂತಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಹೋಟೆಲ್ ಉದ್ಯಮಿಗಳಾದ ರಿತೇಶ್ ಶೆಟ್ಟಿ, ಜೀವನ್ ಶೆಟ್ಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಕಾರ್ಕಳ : ಕುಲಾಲ ಸಂಘ ಬೋಳ ವತಿಯಿಂದ ಶ್ರೀ ಸತ್ಯನಾರಾಯಣ ಪೂಜೆ - ವಾರ್ಷಿಕ ಮಹಾಸಭೆ

Posted On: 05-06-2023 06:19PM

ಕಾರ್ಕಳ : ನೂರಾರು ಕುಟುಂಬಗಳ ಸದಸ್ಯರು ಒಂದೆಡೆ ಸೇರಿ ವಿಚಾರ ವಿನಿಮಯ ಮಾಡುವಾಗ ಒಮ್ಮತವೇರ್ಪಡದಿರುವುದು ಸಹಜ. ಆದರೆ ಉತ್ತಮ ಕಾರ್ಯ ಸಿದ್ಧಿಯಾಗಬೇಕಾದರೆ, ಇಂತಹ ಭಿನ್ನಾಭಿಪ್ರಾಯಗಳನ್ನು ಮೂಲದಲ್ಲಿಯೇ ಸರಿಪಡಿಸಿಕೊಂಡು ಏಕತೆಯಿಂದಿದ್ದಲ್ಲಿ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೊಸ್ಮಾರು ಕುಲಾಲ ಸಮಾಜ ಕಲ್ಯಾಣ ಸಂಘದ ಅಧ್ಯಕ್ಷ ಪ್ರಮೋದ್ ಕುಲಾಲ್ ಅಭಿಪ್ರಾಯಪಟ್ಟರು‌. ಅವರು ಕುಲಾಲ ಸಂಘ ಬೋಳದ ವತಿಯಿಂದ ಜೂ.4ರಂದು ನಡೆದ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಒಂಭತ್ತನೇ ವರ್ಷದ ವಾರ್ಷಿಕ ಮಹಾಸಭೆಯ ಮುಖ್ಯ ಅತಿಥಿಯಾಗಿ ಮಾತನಾಡಿದರು.

ದೈವ ದೇವರ ಆರಾಧನೆ ಮಾತ್ರವಲ್ಲದೆ ಸೇವೆಯಲ್ಲಿಯೂ ಕುಲಾಲ ಸಮಾಜದ ಬಂಧುಗಳ ಪಾತ್ರ ಮಹತ್ವವಾದುದು. ಶ್ರದ್ಧಾ ಭಕ್ತಿಯಿಂದ, ಪ್ರಾಮಾಣಿಕತೆಯಿಂದ ದುಡಿಯುವ ಇಂತಹ ಸೇವಕರನ್ನು ಗುರುತಿಸಿ,ಗೌರವಿಸುವ ಕಾರ್ಯ ಸಮಾಜದಲ್ಲಿ ನಡೆಯಬೇಕೆಂದರು.

ಸನ್ಮಾನ : ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ 94.33% ಅಂಕಗಳನ್ನು ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿ ಚಿಂತನ್ ಕುಲಾಲ್ ರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಕುಲಾಲ ಸಮಾಜದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಭಾಗವಹಿಸಿದ ಮಕ್ಕಳಿಗೆ ವಸಂತಿ ಮಹಾಬಲ ಮೂಲ್ಯರ ವತಿಯಿಂದ ಪುಸ್ತಕ ವಿತರಿಸಲಾಯಿತು. ಸಂಘದ ಅಧ್ಯಕ್ಷ ಗಣೇಶ ಮೂಲ್ಯ ಅಧ್ಯಕ್ಷತೆ ವಹಿಸಿದ್ದರು.

ಸ್ಥಾಪಕಾಧ್ಯಕ್ಷ ಮಹಾಬಲ ಮೂಲ್ಯ, ಗೌರವಾಧ್ಯಕ್ಷ ವಸಂತ ಮೂಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಪವನ್ ಕುಮಾರ್ ಸ್ವಾಗತಿಸಿ, ವರದಿ ವಾಚಿಸಿದರು. ಶ್ರೀಶಾ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ಸಂಗೀತಾ ಕುಲಾಲ್ ವಂದಿಸಿದರು.

ಕಾರ್ಕಳ : ಇನ್ನಾ ಗ್ರಾಮ ಪಂಚಾಯತ್ ನಲ್ಲಿ ವಿಶ್ವ ಪರಿಸರ ದಿನಾಚರಣೆ

Posted On: 05-06-2023 06:04PM

ಕಾರ್ಕಳ : ಇನ್ನಾ ಗ್ರಾಮ ಪಂಚಾಯತ್ ಮತ್ತು ಕಾರ್ಕಳ, ಮೂಡುಬಿದ್ರೆ ತಾಲೂಕು ಅರಣ್ಯ ಇಲಾಖೆಗಳ ವತಿಯಿಂದ ವಿಶ್ವ ಪರಿಸರ ದಿನಾಚರಣೆಯು ಪಂಚಾಯತನ ಗೋಪಾಲ್ ಭಂಡಾರಿ ಸಭಾಂಗಣದಲ್ಲಿ ನಡೆಯಿತು. ಪಂಚಾಯತ್ ಅಧ್ಯಕ್ಷ ಕುಶ ಆರ್ ಮೂಲ್ಯ ಅವರು ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅರಣ್ಯಾಧಿಕಾರಿ ನಾಗೇಶ್ ಎನ್ ಬಿಲ್ಲವ ಅವರು ಪರಿಸರ ಸರಕ್ಷಣೆ ನಮ್ಮೆಲ್ಲರ ಕರ್ತವ್ಯ. ಪರಿಸರದ ಪ್ರೀತಿ ಬಾಲ್ಯದಿಂದಲೂ ಇರಬೇಕು. ಹಸಿರು ಮನೆ, ಹಸಿರು ಶಾಲೆ, ಹಸಿರು ಗ್ರಾಮಗಳು ಇಂದು ನಮ್ಮ ಅಗತ್ಯವಾಗಿದೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಇನ್ನಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಜೇಂದ್ರ ಭಟ್ ಅವರು ಪರಿಸರ ದಿನದ ಸಂದೇಶವನ್ನು ನೀಡಿ ಮಾಲಿನ್ಯವನ್ನು ಉಂಟುಮಾಡುತ್ತಿರುವ ಪಳೆಯುಳಿಕೆ ಇಂಧನಗಳ ಬಳಕೆ ಹೆಚ್ಚುತ್ತಿರುವ ಬಗ್ಗೆ ಅರಿವು ಮೂಡಿಸಿದರು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ರೈತರಿಗೆ, ಶಕ್ತಿ ಸಂಜೀವಿನಿ ಒಕ್ಕೂಟದ ಎಲ್ಲ ಸದಸ್ಯರಿಗೆ, ಶಾಲೆಯ ಅಧ್ಯಾಪಕರಿಗೆ, ವಿದ್ಯಾರ್ಥಿಗಳಿಗೆ ಹಸಿರು ಗಿಡಗಳನ್ನು ಅರಣ್ಯ ಇಲಾಖೆಯ ವತಿಯಿಂದ ವಿತರಣೆ ಮಾಡಲಾಯಿತು. ಪರಿಸರದ ಬಗ್ಗೆ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಣೆ ಮಾಡಲಾಯಿತು. ಶಕ್ತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಪ್ರತಿಮಾ, ಪಂಚಾಯತ್ ಉಪಾಧ್ಯಕ್ಷೆ ಸರಿತಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾಲತಾ, ಕಾರ್ಕಳ ಸಾಮಾಜಿಕ ಅರಣ್ಯಾಧಿಕಾರಿ ವಿದ್ಯಾಲಕ್ಷ್ಮಿ ಪಂಚಾಯತ್ ಸದಸ್ಯರಾದ ವಿಮಲ ಚಂದ್ರಹಾಸ ಶೆಟ್ಟಿ ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಟಪಾಡಿ : ಪಡುಕುತ್ಯಾರು ಆನೆಗುಂದಿ ಶ್ರೀ ಗಳ ಚಾತುರ್ಮಾಸ್ಯ ಜು 5ರಿಂದ ಸೆ.29 ; ಪೂರ್ವಭಾವಿ ಕ್ಷೇತ್ರ ಸಂದರ್ಶನ ಜೂ8ರಿಂದ 29

Posted On: 05-06-2023 05:56PM

ಕಟಪಾಡಿ : ಪಡುಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರರಾದ ಪರಮ ಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ 19ನೇ ವರ್ಷದ ಶೋಭಕ್ಕೃತ್ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆಯು 2023 ಜುಲೈ 3 ರಿಂದ ಸೆಪ್ಟಂಬರ್ 29 ರ ವರೇಗೆ ಪಡು ಕುತ್ಯಾರಿನಲ್ಲಿ ನಡೆಯಲಿದೆ.

ವರ್ಷಂಪ್ರತಿ ನಡೆಯುವ ಚಾತುರ್ಮಾಸ್ಯ ಪೂರ್ವಭಾವೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇಗುಲಗಳಲ್ಲಿ 2023 ಜೂನ್ 8 ರಿಂದ 29 ರವರೆಗೆ ಅಂಕೋಲಾ, ಕೊಲಕಾಡಿ, ಪಡುಪಣಂಬೂರು, ಹಳೆಯಂಗಡಿ, ಮಂಗಳೂರು, ಮಧೂರು, ಆರಿಕ್ಕಾಡಿ ಕಾರ್ಳೆ,ಬಂಗ್ರ ಮಂಜೇಶ್ವರ, ಕೋಟೆಕಾರು, ಕಾರ್ಕಳ, ಮೂಡಬಿದ್ರೆ, ಗೋಕರ್ಣ, ಭಟ್ಕಳ, ಬಾರ್ಕೂರು, ಉಪ್ರಳ್ಳಿ, ಕಟಪಾಡಿ, ಕಾಪು ಇಲ್ಲಿ ಕ್ಷೇತ್ರ ಸಂದರ್ಶನವು ನಡೆಯಲಿದೆ ಎಂದು ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ ಆಚಾರ್ ಕಂಬಾರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಉಚ್ಚಿಲ : ಅಪಘಾತಕ್ಕೀಡಾಗಿ ಸಾವಾದ ವಾನರದ ಅಂತ್ಯ ಸಂಸ್ಕಾರ ನಡೆಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು

Posted On: 04-06-2023 08:35PM

ಉಚ್ಚಿಲ : ರಾಷ್ಟೀಯ ಹೆದ್ದಾರಿ 66ರ ಉಚ್ಚಿಲ ನಾರಾಯಣಗುರು ರಸ್ತೆ ಬಳಿ ರಸ್ತೆ ಅಪಘಾತದಲ್ಲಿ ಅಸುನೀಗಿದ ವಾನರನಿಗೆ ಭಜರಂಗದಳ ಹಾಗೂ ವಿಶ್ವ ಹಿಂದು ಪರಿಷದ್ ಕಾರ್ಯಕರ್ತರಿಂದ ಭಕ್ತಿ ಶ್ರದ್ಧಾ ಪೂರ್ವಕ ಅಂತ್ಯ ಸಂಸ್ಕಾರ ನಡೆಸಿದ ಘಟನೆಯು ಉಚ್ಚಿಲದಲ್ಲಿ ಶನಿವಾರ ನಡೆದಿದೆ.

ಬೆಳಿಗ್ಗೆ 11 ಗಂಟೆಯ ಸುಮಾರಿಗೆ ರಾಷ್ಟೀಯ ಹೆದ್ದಾರಿ 66ರಲ್ಲಿ ಕಾರೊಂದು ಡಿಕ್ಕಿ ಹೊಡೆದು ವಾನರ ಗಾಯಗೊಂಡಿತ್ತು. ಕೂಡಲೇ ಕಾರ್ಯಕರ್ತರು ಪಶು ಚಿಕಿತ್ಸಾಲಯಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಪ್ರಯತ್ನ ಪಟ್ಟಿದ್ದಾರೆ ಚಿಕಿತ್ಸೆಗೆ ಸ್ಪಂದಿಸದ ವಾನರ ಅಸು ನೀಗಿತ್ತು. ಪರಿಶೀಲನೆ ನಡೆಸಿದ ವೈದ್ಯರು ಸಾವನ್ನು ಧೃಡಪಡಿಸಿದ್ದರು.

ಬಳಿಕ ಪುರೋಹಿತರ ಮಾರ್ಗದರ್ಶನದಂತೆ ಹಿಂದೂ ಸಂಘಟನೆಯ ಕಾರ್ಯಕರ್ತರಾದ ಮಹೇಶ್, ಸಂದೀಪ್, ವಿಶು, ಮನೋಜ್ ಸೇರಿ ಅಂತ್ಯಸಂಸ್ಕಾರದ ವಿಧಿವಿಧಾನ ನೆರವೇರಿಸಿದರು.

ಪುಸ್ತಕದಲ್ಲಿದ್ದ ವಿಚಾರಗಳು ಮಸ್ತಕಕ್ಕೆ ಹೋದರೆ ಮಸ್ತಕವೇ ಒಂದು ಪುಸ್ತಕವಾಗುವುದು - ನ್ಯಾಯವಾದಿ ಎಂ ಗುರುಪ್ರಸಾದ್ ಮಂಡ್ಯ

Posted On: 04-06-2023 06:04PM

ಮಂಗಳೂರು : ಕರ್ನಾಟಕ ಸಾಮಾಜಿಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮತ್ತು ಬರಹ ಪ್ರಕಾಶನ ಮಂಗಳೂರು ಸಾರಥ್ಯದಲ್ಲಿ ಬೆಂಗಳೂರಿನ ನಯನ ರಂಗಮಂದಿರದಲ್ಲಿ ಜೂನ್ 03 ರಂದು ಕೃತಿಗಳ ಲೋಕಾರ್ಪಣೆ ಹಾಗೂ ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಸಂಭ್ರಮ ಸಡಗರದಿಂದ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ನ್ಯಾಯವಾದಿ ಗುರುಪ್ರಸಾದ್ ಮಾತನಾಡಿ ಪುಸ್ತಕದಲ್ಲಿರುವ ವಿಚಾರಗಳು ಮಸ್ತಕಕ್ಕೆ ಹೋದರೆ ಮಸ್ತಕವೇ ಒಂದು ಪುಸ್ತಕವಾಗಿ ರೂಪುಗೊಳ್ಳುತ್ತದೆ. 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ತಮ್ಮ ಅನುಭವ ಮಂಟಪದಲ್ಲಿ ಇವನಾರವ ಇವನಾರವ ಎಂದೆನಿಸದೆ , ಇವ ನಮ್ಮವ ಇವ ನಮ್ಮವ ಎಂದು ಹೇಳುತ್ತಾ ಜಗತ್ತಿನಲ್ಲಿ ಜಾತಿ ಧರ್ಮ ಮೇಲು ಕೀಳು ಎಂಬ ಭಾವನೆ ನಮ್ಮಲ್ಲಿರದೆ ನಾವೆಲ್ಲ ಒಂದೇ ಎಂಬ ಭಾವನೆಯಿಂದ ಇರಬೇಕೆಂದು ಹೇಳಿದ್ದರು. ಅವರು ತಾಳೆಗರಿಯಲ್ಲಿ 900 ,ವರ್ಷಗಳ ಹಿಂದೆ ಬರೆದ ಎಷ್ಟೊಂದು ವಚನಗಳು ಇಂದು ನಮಗೆ ದಾರಿದೀಪವಾಗಿದೆ. ಆದುದರಿಂದ ಉತ್ತಮ ಪುಸ್ತಕಗಳನ್ನು ಓದುವುದರ ಮೂಲಕ ನಮ್ಮ ಜೀವನವನ್ನು ಸಾರ್ಥಕ ಗೊಳಿಸಿಕೊಳ್ಳಬೇಕು ಎಂದರು. ನಾವು ಯಾವುದೇ ಶುಭ ಸಮಾರಂಭಗಳನ್ನು ಮಾಡುವಂತಹ ಸಂದರ್ಭದಲ್ಲಿ ಹಾರ ತುರಾಯಿ ನೀಡುವ ಬದಲು ಉತ್ತಮ ಪುಸ್ತಕಗಳನ್ನು ನೀಡಬೇಕು. ಪುಸ್ತಕಗಳನ್ನು ಓದುವ ಮೂಲಕ ನಮ್ಮಲ್ಲಿ ಜ್ಞಾನ ಸಂಪಾದನೆಯಾಗುತ್ತದೆ ಎಂದರು.

ಆ ಕಾಲದಲ್ಲಿ ಮಹಿಳೆಯರ ಸ್ವಾತಂತ್ರ್ಯಕ್ಕಾಗಿ ಒಂದು ಪಾರ್ಲಿಮೆಂಟನ್ನೇ ರಚಿಸಿ ಮಹಿಳೆಯರು ಮನೆಯಲ್ಲಿ ಬಂಧಿಯಾಗಿರದೇ ಸ್ವತಂತ್ರವಾಗಿ ಇರಬೇಕೆಂದು ಬಯಸಿದ್ದರು. ಇದರ ದ್ಯೊತಕವಾಗಿ ಇಂದು ರಾಣಿ ಪುಷ್ಪಲತಾ ದೇವಿಯಂತವರು ಒಂದು ಸಂಸ್ಥೆಯನ್ನು ಸ್ಥಾಪಿಸಿ ಅಧ್ಯಕ್ಷರಾಗಿ ಕಾರ್ಯಕ್ರಮ ನಡೆಸಲು ಸಾಧ್ಯವಾಯಿತು ಎಂದು ಹೇಳಿದರು. ಆ ಬಳಿಕ ರಾಣಿ ಪುಷ್ಪಲತಾ ದೇವಿಯವರ ವರ್ಣರಂಜಿತ ಚಿತ್ರ ಕವನಸಂಕಲನ "ಭೂರಮೆಯೊಡಲು" ಹಾಗೂ ಡಾ. ಆನಂದ ಬಂಜನ್ ರವರ "ತುಳುನಾಡ ವೈಭವ" ಕೃತಿಗಳನ್ನು ಲೋಕಾರ್ಪಣೆ ಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಭಾರತ ದೇಶದಾದ್ಯಂತ ಕನ್ನಡಕ್ಕಾಗಿ ದುಡಿದ ಸುಮಾರು 3500 ಪ್ರಮುಖರನ್ನು ಸನ್ಮಾನಿಸಿದ್ದ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಾ| ಹೆಚ್ ಎಲ್ ಎನ್ ರಾವ್ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ| ಆನಂದ್ ಬಂಜನ್, ಕವಿಗೋಷ್ಟಿ ಅಧ್ಯಕ್ಷ ಡಾ| ಫ್ರಾನ್ಸಿಸ್ ಕ್ಸೇವಿಯರ್, NSCDF ಅಧ್ಯಕ್ಷ ಗಂಗಾಧರ್ ಗಾಂಧಿ ಕವಿಗೋಷ್ಠಿ ಸಂಚಾಲಕಿ ಸುಧಾ ಕಂದಕೂರ ಉಪಸ್ಥಿತರಿದ್ದರು. ರಾಜ್ ಸಂಪಾಜೆ ಮತ್ತು ರೇಖಾ ಸುರೇಶ್ ರಾವ್ ಕಾರ್ಯಕ್ರಮ ನಿರೂಪಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 40ಕ್ಕೂ ಹೆಚ್ಚು ಕವಿಗಳು ತಮ್ಮ ಸ್ವರಚಿತ ಕವನ ವಾಚಿಸಿದರು. ಸಭಾ ಕಾರ್ಯಕ್ರಮದ ನಂತರ ಕಾರ್ತಿಕ್ ಡಾನ್ಸ್ ಅಕಾಡೆಮಿ ಬೆಂಗಳೂರು ಮತ್ತು ಶ್ರೀಮತಿ ಧನ್ಯ ಸಂತೋಷ್ ಸಾರಥ್ಯದ ಕೈರಾಳಿ ನಾಟ್ಯಾಲಯ ಹಾಗೂ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕವಿಗಳಿಗೆ ಮತ್ತು ಕಲಾವಿದರಿಗೆ ಪ್ರಶಂಸನಾ ಪತ್ರ ಮತ್ತು ಪುಸ್ತಕಗಳನ್ನು ನೀಡಲಾಯಿತು.

ಕಾರ್ಕಳ : ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜು, ಶಿರ್ಡಿ ಸಾಯಿಬಾಬಾ ಕಾಲೇಜು ವಿದ್ಯಾರ್ಥಿಗಳಿಂದ ಆಗುಂಬೆ ಘಾಟ್ ಸ್ವಚ್ಛತೆ

Posted On: 04-06-2023 03:40PM

ಕಾರ್ಕಳ : ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಕಾರ್ಕಳದ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜು ಮತ್ತು ಶಿರ್ಡಿ ಸಾಯಿಬಾಬ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳಿಂದ ಆಗುಂಬೆಯ ಘಾಟಿಯ ಇಕ್ಕೆಲಗಳನ್ನು ಸ್ವಚ್ಛತೆಯೆಡೆಗೆ ನಮ್ಮ ಹೆಜ್ಜೆ, ಪರಿಸರ ಕಾಳಜಿ ನಮ್ಮೆಲ್ಲರ ಹೊಣೆ ಎಂಬ ಧ್ಯೇಯ ವಾಕ್ಯದೊಂದಿಗೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.

ಈ ಅರಣ್ಯದಲ್ಲಿ ಅಳಿವಿನಂಚಿನಲ್ಲಿರುವ ಅನನ್ಯ ಪ್ರಾಣಿ, ಪಕ್ಷಿ ಪ್ರಬೇಧಗಳಿವೆ. ನಾವು ಮಾಡುವ ಪ್ಲಾಸ್ಟಿಕ್‌ ತ್ಯಾಜ್ಯದಿಂದ ಅವುಗಳ ಜೀವನ ದುಸ್ತರವಾಗುವಂತಾಗಿದೆ. ಆದ್ದರಿಂದ ನಾವು ಪ್ರಕೃತಿಯನ್ನು ಹಾಳುಗೆಡಹುವ ಕಾರ್ಯ ಬಿಟ್ಟು ಸಾಧ್ಯವಾದಷ್ಟು ಪರಿಸರದ ಸ್ವಚ್ಛತೆಗೆ ಆದ್ಯತೆಯಾಗುವಂತೆ ಬದುಕಬೇಕಾಗಿದೆ ಎಂದು ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌ ಹೇಳಿದರು. ನಾವು ಶಿಕ್ಷಿತರಾದರೂ ಅನಕ್ಷರಸ್ಥರಂತೆ ವರ್ತಿಸುತ್ತಿದ್ದೇವೆ. ನಾವು ಬಳಸಿದ ತ್ಯಾಜ್ಯ ವಸ್ತುಗಳನ್ನು, ಕಸ, ಪ್ಲಾಸ್ಟಿಕ್‌ ಇತ್ಯಾದಿಗಳನ್ನು ಜವಾಬ್ದಾರಿಯಿಲ್ಲದೇ ಕಂಡಲ್ಲಿ ಎಸೆಯುತ್ತಿದ್ದೇವೆ. ಅದು ಕಾಡಿನ ಪರಿಸರವನ್ನು ಮಾಲಿನ್ಯಗೊಳಿಸಿ ಅಲ್ಲಿನ ಪ್ರಾಣಿಪಕ್ಷಿಗಳಿಗೂ ತೊಂದರೆಯುಂಟುಮಾಡುತ್ತಿದೆ. ಆದ್ದರಿಂದ ಪ್ರವಾಸಿ ಸ್ಥಳ ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನು ಸ್ವಂತ ಕಾಳಜಿಯಿಂದ ನಿರ್ಮಲವಾಗಿಡುವ ಕಡೆಗೆ ಗಮನ ಹರಿಸಬೇಕಾಗಿದೆ ಎಂದು ಎನ್‌ ಎಸ್ ಎಸ್‌ ನ ಯೋಜನಾಧಿಕಾರಿಯಾದ ಶ್ರೀ ಉಮೇಶ್‌ ಕರೆ ನೀಡಿದರು.

ಶಿರ್ಡಿ ಡಿಗ್ರಿ ಕಾಲೇಜಿನ ಆಶೀಶ್‌ ಶೆಟ್ಟಿ ಮಾತನಾಡಿ ಪ್ರತಿಯೊಬ್ಬರಿಗೂ ಸಾಮಾಜಿಕ ಪ್ರಜ್ಞೆಯಿರಬೇಕು. ಕೊಳಕು ಮಾಡುವ ಸಂಸ್ಕೃತಿ ನಿಲ್ಲಬೇಕು. ಎಲ್ಲರೂ ಬದುಕಿ ಬಾಳುವ ವಾತಾವರಣ ನಿರ್ಮಾಣ ಮಾಡುವುದಕ್ಕಾಗಿ ನಾವೆಲ್ಲ ಟೊಂಕಕಟ್ಟಿ ನಿಲ್ಲಬೇಕಾದ ಅನಿರ್ವಾಯತೆಯಿದೆ. ಪರಿಸರ ಪ್ರೀತಿ ಬೆಳೆಸೋಣ ಎಂದರು.

ಈ ಸಂದರ್ಭದಲ್ಲಿ ಆಗುಂಬೆಯ ಘಾಟಿಯ ಆರಂಭದಿಂದ ಸೋಮೇಶ್ವರದವರೆಗೆ ಕ್ರಿಯೇಟಿವ್‌ ಕಾಲೇಜು ಹಾಗೂ ಶಿರ್ಡಿ ಕಾಲೇಜಿನ ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನ ನೇರವೇರಿಸಿದರು. ಉಪನ್ಯಾಸಕರಾದ ಚಂದ್ರಕಾಂತ ಆಚಾರ್ಯ, ಶ್ರೀಮತಿ ಶ್ರೀನಿಧಿ, ಪ್ರಿಯಾಂಕ, ತಿಪ್ಪೇಸ್ವಾಮಿ, ಶಶಿಧರ ಭಟ್‌ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಹರೀಶ್‌, ಚ್ರೈತ್ರಾ, ಆರ್ ಎಫ್ ಒ ಗೌರವ್‌ ಹಾಗೂ ಅರಣ್ಯಾಧಿಕಾರಿಗಳು ಮತ್ತು ಶಿರ್ಡಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಉಪಸ್ಥಿತರಿದ್ದರು.