Updated News From Kaup
ಕಟಪಾಡಿ : ಬಸ್ - ಬೈಕ್ ಅಪಘಾತ ; ಬೈಕ್ ಸವಾರ ಮೃತ್ಯು

Posted On: 11-06-2023 01:39PM
ಕಟಪಾಡಿ : ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆಯಲ್ಲಿ ಬೈಕ್ ಮತ್ತು ಬಸ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಮೃತಪಟ್ಟ ಬೈಕ್ ಸವಾರ ಹೂವಿನ ವ್ಯಾಪಾರಿ ಕಟಪಾಡಿ ಸರಕಾರಿ ಗುಡ್ಡೆ ನಿವಾಸಿ ಇಕ್ಬಾಲ್ ಎಂದು ಗುರುತಿಸಲಾಗಿದೆ. ಬಸ್ ಉಡುಪಿಯಿಂದ ಮಂಗಳೂರು ಕಡೆ ಹೋಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಉಚ್ಚಿಲ : ಶ್ರೀ ಮಹಾಲಕ್ಷ್ಮಿ ದೇಗುಲಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ

Posted On: 11-06-2023 01:11PM
ಉಚ್ಚಿಲ : ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಮೊದಲ ಬಾರಿಗೆ ಉಡುಪಿಗೆ ಆಗಮಿಸುತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನ, ಹಿರಿಯರ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಇಂದು ಉಚ್ಚಿಲದ ಶ್ರೀ ಮಹಾಲಕ್ಷ್ಮಿ ದೇಗುಲಕ್ಕೆ ಭೇಟಿ ನೀಡಿದರು.

ದೇವಳದ ಪ್ರಧಾನ ಅರ್ಚಕರು ದೇವರ ಪ್ರಸಾದ ನೀಡಿದರು. ದೇವಳದ ಆಡಳಿತ ಮಂಡಳಿಯ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹೆಜಮಾಡಿ : ಮೊಗವೀರ ಮಹಾಸಭಾದ ವತಿಯಿಂದ ನೂತನ ಶಾಸಕರಿಗೆ ಸನ್ಮಾನ

Posted On: 11-06-2023 12:53PM
ಹೆಜಮಾಡಿ : ಇಲ್ಲಿನ ಮೊಗವೀರ ಮಹಾಸಭಾದ ವತಿಯಿಂದ ಕಾಪು ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಯಶ್ ಪಾಲ್ ಸುವರ್ಣ ಸುವರ್ಣ ಅವರ ಅಭಿನಂದನಾ ಸಮಾರಂಭ ಇಂದು ಹೆಜಮಾಡಿ ಬೊಬ್ಬರ್ಯ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮೊಗವೀರ ಮಹಾಜನ (ರಿ.) ಹೆಜಮಾಡಿ ಅಧ್ಯಕ್ಷರಾದ ರವಿ ಕುಂದರ್, ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪಾಂಡುರಂಗ ಕರ್ಕೇರ, ಗುರಿಕಾರರಾದ ಪುರುಶೋತ್ತಮ್, ರಾಘವ, ಹೆಜಮಾಡಿ ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ್ ಪುತ್ರನ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಕಟಪಾಡಿ : ಪಡುಕುತ್ಯಾರು ಆನೆಗುಂದಿ ಶ್ರೀಗಳ ಚಾತುರ್ಮಾಸ್ಯ ಪೂರ್ವಭಾವಿ ಕ್ಷೇತ್ರ ಸಂದರ್ಶನ

Posted On: 11-06-2023 11:14AM
ಕಟಪಾಡಿ : ಪಡುಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರರಾದ ಪರಮ ಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಚಾತುರ್ಮಾಸ್ಯ ಪೂರ್ವಭಾವೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇಗುಲಗಳ ಕ್ಷೇತ್ರ ಸಂದರ್ಶನವು ಶನಿವಾರ ಆರಂಭಗೊಂಡಿತು.
ಕೊಲಕಾಡಿ ಶ್ರೀ ಕಾಳಿಕಾಂಬಾ ದೇವಸ್ಥಾನ, ಪಡುಪಣಂಬೂರು ನಾಲ್ಕೂರು ಪಂಜುರ್ಲಿ ದೈವಸ್ಥಾನ, ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದರು.
ಈ ಸಂದರ್ಭ ಮಾತನಾಡಿದ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರರಾದ ಪರಮ ಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು ಭಕ್ತ ಜನರ ಸಂಪೂರ್ಣ ಸಹಕಾರದಿಂದ 7 ವರ್ಷದಿಂದ ಪಡುಕುತ್ಯಾರಿನಲ್ಲಿ ಅತ್ಯಂತ ಯಶಸ್ವಿಯಾಗಿ ಚಾತುರ್ಮಾಸ್ಯ ವ್ರತವನ್ನು ಆಚರಿಸಲು ಸಾಧ್ಯವಾಗಿದೆ. ಮಹಾಸಂಸ್ಥಾನದ ಆಸೆಟ್ ವತಿಯಿಂದ ನಡೆಸಲ್ಪಡುವ ಆನೆಗುಂದಿ ಶ್ರೀ ಸರಸ್ವತೀ ಪೀಠ ಸೂರ್ಯ ಚೈತನ್ಯ ಶಾಲೆಯ ಸಮಗ್ರ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದು ತಮ್ಮ ಆಶೀರ್ವಚನದಲ್ಲಿ ವಿವರಿಸಿದರು. ಚಾತುರ್ಮಾಸ್ಯ ವ್ರತಚಾರಣೆ ಬಗ್ಗೆ ಆನೆಗುಂದಿ ಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ ಆಚಾರ್ ಕಂಬಾರು ಸಂಪೂರ್ಣ ಮಾಹಿತಿ ನೀಡಿದರು. ಚಾತುರ್ ರ್ಮಾಸ್ಯ ವ್ರತಚಾರಣೆಗೆ ಹಾಗೂ ಆಸೆಟ್ ನ ಸೂರ್ಯ ಚೈತನ್ಯ ಶಾಲೆಗೆ ಸಂಪೂರ್ಣ ರೀತಿಯಲ್ಲಿ ಮಂಗಳೂರು ಶ್ರೀ ಕಾಳಿಕಾಂಬಾ ಕ್ಷೇತ್ರದ ವತಿಯಿಂದ, ಭಕ್ತಾಧಿಗಳಿಂದ ಪೂರ್ಣ ರೀತಿಯಲ್ಲಿ ಸಹಕಾರ ನೀಡುವುದಾಗಿ ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ 2ನೇ ಮೊಕ್ತೇಸರ ಸುಂದರ ಆಚಾರ್ಯ ಬೆಳುವಾಯಿ ಹೇಳಿದರು.
ಈ ಸಂದರ್ಭ ಶ್ರೀ ಕ್ಷೇತ್ರದ 3ನೇ ಮೊಕ್ತೇಸರ ಎ ಲೋಕೇಶ್ ಆಚಾರ್ಯ ಚಿಲಿಂಬಿ, ಕ್ಷೇತ್ರದ ಆಡಳಿತ ಮಂಡಳಿ ಸದಸ್ಯರು, ಶ್ರೀ ಗುರು ಸೇವಾ ಪರಿಷತ್ ಮಂಗಳೂರು ವಲಯದ ಅಧ್ಯಕ್ಷ ಶೇಖರ್ ಆಚಾರ್ಯ ಗುರು ಸೇವಾ ಪರಿಷತ್ ಪುತ್ತೂರು ವಲಯದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ, ಆಸೆಟ್ ಅಧ್ಯಕ್ಷ ಮೋಹನ್ ಕುಮಾರ್ ಬೆಳ್ಳೂರು, ಶ್ರೀ ಮಠದ ಆಪ್ತ ಸಹಾಯಕ ಲೋಲಾಕ್ಷ ಆಚಾರ್ಯ, ಶ್ರೀ ಕಾಳಿಕಾಂಬಾ ಸೇವಾ ಸಮಿತಿ, ವಿಶ್ವಬ್ರಾಹ್ಮಣ ಮಹಿಳಾ ಸಮಿತಿ, ದ. ಕ. ಜಿಲ್ಲಾ ಚಿನ್ನದ ಕೆಲಸ ಗಾರರ ಸಂಘ, ವಿಶ್ವಕರ್ಮ ಯುವ ವೇದಿಕೆ, ವಿಶ್ವಕರ್ಮ ಯುವ ಮಿಲನದ ಸದಸ್ಯರು, ಶ್ರೀ ಗುರು ಸೇವಾ ಪರಿಷತ್ ಸದಸ್ಯರು ಹಾಗೂ ಅನೇಕ ಭಕ್ತಾಧಿಗಳು ಉಪಸ್ಥಿತರಿದ್ದರು. ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತ ಮಂಡಳಿಯ ವಿಶೇಷ ಆಹ್ವಾನಿತ ಸದಸ್ಯ ಸುಜೀರ್ ವಿನೋದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಕಾಪು : ಕಟಪಾಡಿಯಲ್ಲಿ ನೂತನವಾಗಿ ಆರಂಭವಾಗುತ್ತಿದೆ ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜು

Posted On: 11-06-2023 09:19AM
ಕಾಪು : ಕಳೆದ 25 ವರ್ಷಗಳಿಂದ ವೃತ್ತಿಪರ ಶಿಕ್ಷಣಕ್ಕೆ ಹೆಸರುವಾಸಿಯಾಗಿ ಕರಾವಳಿ ಭಾಗದಲ್ಲಿ ವಾಣಿಜ್ಯ ವಿಭಾಗದ ಪದವಿ ಕಾಲೇಜುಗಳನ್ನು ಆರಂಭಿಸಿ ವಿದ್ಯಾರ್ಥಿಸ್ನೇಹಿ ಮೌಲ್ಯದಾರಿತ ಶಿಕ್ಷಣ ಸಂಸ್ಥೆಯಾಗಿ ಹೆಸರುವಾಸಿಯಾಗಿರುವುದೇ ತ್ರಿಶಾ ಸಂಸ್ಥೆಗಳು. ಪ್ರಸಕ್ತ ವರ್ಷದಿಂದ ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜಿನ್ನು ಎಸ್ ವಿ ಎಸ್ ಕ್ಯಾಂಪಸ್ ಕಟಪಾಡಿಯಲ್ಲಿ ಆರಂಭಿಸಲಿದೆ ಎಂದು ಶನಿವಾರ ಕಾಪು ಪ್ರೆಸ್ ಕ್ಲಬ್ ನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಸಿದ್ಧಾಂತ್ ಪೌಂಡೇಶನ್ ಅಧ್ಯಕ್ಷರಾದ ಸಿ.ಎ ಗೋಪಾಲಕೃಷ್ಣ ಭಟ್ ಹೇಳಿದರು.
ಪ್ರಸ್ತುತ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಭಾಗದಲ್ಲಿ ಪಿ.ಸಿ.ಎಂ.ಬಿ ಮತ್ತು ಪಿ.ಸಿ.ಎಂಸಿ ವಿಷಯಗಳ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಾದ ಸಿ.ಇ.ಟಿ,(CET) ಜೆಇಇ (JEE)ಮತ್ತು ಎನ್ಇಇ ಟಿ (NEET)ಪರೀಕ್ಷೆಗಳಿಗೆ ತರಬೇತಿಯನ್ನ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ ವೇದಾಂತು ದೀಕ್ಷಾ ಅಕಾಡೆಮಿ ಸಹಯೋಗದಲ್ಲಿ ದೇಶದ ವಿವಿಧ ಭಾಗಗಳ ಹೆಸರಾಂತ ನುರಿತ ವಿಷಯ ತಜ್ಞರಿಂದ ತರಬೇತಿಯನ್ನು ನೀಡಲಾಗುತ್ತದೆ. ವಾಣಿಜ್ಯ ವಿಭಾಗದಲ್ಲಿ ಬಿ.ಎ.ಬಿ.ಎಸ್, ಜೊತೆಗೆ ವೃತ್ತಿಪರ ಕೋರ್ಸ್ ಗಳಾದ ಸಿಎ, ಸಿಎಸ್ ಗಳಿಗೆ ಕರಾವಳಿ ಭಾಗದ ಪ್ರಸಿದ್ದ ವೃತ್ತಿಪರ ಶಿಕ್ಷಣ ಸಂಸ್ಥೆಯಾದ ತ್ರಿಶಾ ಕ್ಲಾಸಸ್ ತರಬೇತಿಯನ್ನು ಜೊತೆಗೆ ಬ್ಯಾಂಕಿಂಗ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ಒದಗಿಸಲಾಗುತ್ತದೆ. ವಿಶೇಷವಾಗಿ ಪಿಯುಸಿಯಲ್ಲಿ ವಾಣಿಜ್ಯ ವಿಭಾಗದಲ್ಲಿ ನಾಲ್ಕು ವಿಷಯದ ಜೊತೆಗೆ ಅರ್ಥಶಾಸ್ತ್ರ ಒಂದು ವಿಷಯವನ್ನು ಹೆಚ್ಚುವರಿಯಾಗಿ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ. ಇದರಿಂದ ಹೆಚ್ಚುವರಿ ಜ್ಞಾನದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇದು ಪೂರಕವಾಗಲಿದೆ.
ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜಿನಲ್ಲಿ ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯವಿದೆ .ಪ್ರತಿ ಒಂದು ವಿಷಯವನ್ನು ಸಮಗ್ರವಾಗಿ ತಿಳಿದುಕೊಂಡಿರುವ ನೈಪುಣ್ಯವುಳ್ಳ ಶಿಕ್ಷಕ ವೃಂದ, ವಿಶಾಲವಾದ ಸುಸಜ್ಜಿತ ತರಗತಿಗಳು, ಮೌಲ್ಯದಾರಿತ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವ ಪಠ್ಯೇತರ ಚಟುವಟಿಕೆಗಳು, ವಿಶಾಲವಾದ ಆಟದ ಮೈದಾನ, ಗ್ರಂಥಾಲಯದ ಸೌಲಭ್ಯ ವಿದ್ಯಾರ್ಥಿಗಳಿಗೆ ದೊರಕುತ್ತದೆ. ವಿದ್ಯಾರ್ಥಿಯ ವೈಯಕ್ತಿಕ ಜ್ಞಾನಾಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಕಾಲೇಜಿನಲ್ಲಿ ಮೆಂಟರಿಂಗ್ ಸೌಲಭ್ಯವನ್ನು ಅಳವಡಿಸಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಸೈಕೊಮ್ಯಾಟ್ರಿಕ್ ಟೆಸ್ಟ್ ಅನ್ನು ಬರೆದು ಅವುಗಳಿಂದ ಬಂದ ಪಲಿತಾಂಶದ ಆಧಾರದಲ್ಲಿ ತಮ್ಮ ವಿಭಾಗಗಳನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಸಿದ್ಧಾಂತ್ ಫೌಂಡೇಶನ್ ಕಳೆದ ಕೆಲವು ವರ್ಷಗಳಿಂದ ಪ್ರೇರಣಾ ಎನ್ನುವ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ಕಾರ್ಯಗಾರವನ್ನ ಉಡುಪಿ ಕುಂದಾಪುರ ಶಿವಮೊಗ್ಗ ಉತ್ತರಕನ್ನಡ ಭಾಗದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿದೆ. ಜೊತೆಗೆ ಏಳು ದಿನಗಳ ಉಚಿತ ವಿಕಸನ ಎನ್ನುವ ಬೇಸಿಗೆ ಶಿಬಿರವನ್ನು ಅಂಬಲಪಾಡಿ ದೇವಸ್ಥಾನ ಉಡುಪಿಯಲ್ಲಿ ಆಯೋಜಿಸಿ ವಿದ್ಯಾರ್ಥಿಗಳಿಗೆ ಅವರ ಮುಂದಿನ ಹಾದಿಗೆ ಪೂರಕವಾಗಿರುವಂತಹ ವಾತಾವರಣವನ್ನು ನಿರ್ಮಿಸಿದೆ. ಪ್ರಸ್ತುತ ಕಟಪಾಡಿಯ ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿರುವ ಡಾ. ಅನಂತ್ ಪೈ ಇವರು ಜವಾಬ್ದಾರಿಯನ್ನ ನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಜೀವನ ಮೌಲ್ಯದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗುವಂತಹ ಶೈಕ್ಷಣಿಕ ವ್ಯವಸ್ಥೆಯನ್ನು ಕಲ್ಪಿಸಲು ಆರಂಭವಾಗಿರುವುದೇ ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜು, ಇದೇ ತಿಂಗಳ ಜೂನ್ 15ರಿಂದ ತರಗತಿಗಳು ಪ್ರಾರಂಭವಾಗಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಿದ್ಧಾಂತ ಫೌಂಡೇಶನ್ ಅಧ್ಯಕ್ಷರಾದ ಸಿಎ ಗೋಪಾಲಕೃಷ್ಣ ಭಟ್, ಸಿದ್ಧಾಂತ ಫೌಂಡೇಶನ್ ಟ್ರಸ್ಟಿ ರಾಮ್ ಪ್ರಭು, ತ್ರಿಶಾ ಸಮೂಹ ಸಂಸ್ಥೆಗಳ ಅಡ್ಮಿನಿಸ್ಟ್ರೇಟಿವ್ ಆಫೀಸರ್ ವಿ.ಕೆ ಉದ್ಯಾವರ, ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಂತ್ ಪೈ, ಕನ್ನಡ ಪ್ರಾಧ್ಯಾಪಕ ಧೀರಜ್ ಬೆಳ್ಳಾರೆ ಉಪಸ್ಥಿತರಿದ್ದರು.
ಕಾಪು : ಪಿ.ಕೆ.ಎಸ್ ಪ್ರೌಢಶಾಲೆ ಕಳತ್ತೂರು ವತಿಯಿಂದ ಶಾಸಕ ಗುರ್ಮೆ ಸುರೇಶ್ ಶೆಟ್ಟಿಗೆ ಅಭಿನಂದನೆ

Posted On: 10-06-2023 05:50PM
ಕಾಪು : ಪೈಯ್ಯಾರು ಕರಿಯಣ್ಣ ಶೆಟ್ಟಿ (ಪಿ.ಕೆ.ಎಸ್) ಪ್ರೌಢಶಾಲೆ, ಕಳತ್ತೂರು ವತಿಯಿಂದ ಕಾಪು ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಶನಿವಾರ ಅಭಿನಂದನಾ ಕಾರ್ಯಕ್ರಮ ನೆರವೇರಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಾಸಕರು ವಿದ್ಯಾರ್ಥಿಗಳಿಗೆ ನಾನು ಕನ್ನಡ ಮೀಡಿಯಂ ಎಂಬ ಕೀಳರಿಮೆ ಬೇಡ. ಮನುಷ್ಯ ಪ್ರಯತ್ನ ಪಟ್ಟರೆ ಏನನ್ನು ಸಾಧಿಸಬಹುದು ಪ್ರತಿ ವಿದ್ಯಾರ್ಥಿಯಲ್ಲೂ ಅವರದ್ದೇ ಆದ ಪ್ರತಿಭೆ ಇದ್ದೇ ಇರುತ್ತದೆ. ಆತ್ಮವಿಶ್ವಾಸದಿಂದ ಮುಂದೆ ಸಾಗಿ ಎಂದರು.
ಈ ಸಂದರ್ಭದಲ್ಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ನಿತ್ಯಾನಂದ ಆರ್ ಶೆಟ್ಟಿ, ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್ ಗುರ್ಮೆ, ಸಂಚಾಲಕರಾದ ಶಿವರಾಮ ಶೆಟ್ಟಿ, ಖಜಾಂಚಿಗಳಾದ ಅರುಣ ಡಿ ಶೆಟ್ಟಿ, ಸದಸ್ಯರುಗಳಾದ ಲವ ಶೆಟ್ಟಿ, ವೇಣುಗೋಪಾಲ ಎಂ, ಯೋಗೀಶ್ ಆಚಾರ್ಯ, ಕಾಂತಾರ ಟೈಲರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಪೈಯ್ಯಾರ್, ಶಾಲಾ ಮುಖ್ಯ ಶಿಕ್ಷಕರಾದ ಗಂಗಾ ನಾಯ್ಕ ಉಪಸ್ಥಿತರಿದ್ದರು. ಚಂದ್ರಕಾಂತ ನಾಯ್ಕ ವಂದಿಸಿದರು.
ಜೂನ್ 11 - 12 : ಕಾಪು ಹೊಸ ಮಾರಿಗುಡಿ - ಸಾನಿಧ್ಯ ಚಲನಾ ಸಮಾರಂಭ

Posted On: 10-06-2023 05:36PM
ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಶ್ರೀ ಮಾರಿಯಮ್ಮ ಮತ್ತು ಶ್ರೀ ಉಚ್ಚಂಗಿ ದೇವಿ ಗದ್ದುಗೆಯ ತಾತ್ಕಾಲಿಕ ಗುಡಿಗೆ ಸಾನಿಧ್ಯ ಚಲನೆ ಧಾರ್ಮಿಕ ಕಾರ್ಯಕ್ರಮವು ಜೂ. 11 ಮತ್ತು 12 ರಂದು ನಡೆಯಲಿದೆ ಎಂದು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ತಿಳಿಸಿದರು. ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಶುಕ್ರವಾರ ಜರಗಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮೊದಲ ಹಂತದ ಕಾಮಗಾರಿಗೆ ಅನುಗುಣವಾಗಿ ಅಗ್ರಸಭೆ, ಮುಖ ಮಂಟಪ ನಿರ್ಮಾಣವಾಗಬೇಕಿದ್ದು, ಅದಕ್ಕೆ ಪೂರ್ವಭಾವಿಯಾಗಿ ಪ್ರಸ್ತುತ ಇರುವ ಮಾರಿಯಮ್ಮ ಗುಡಿ ಮತ್ತು ಉಚ್ಚಂಗಿ ಗುಡಿಗಳನ್ನು ವಿಸರ್ಜಿಸಬೇಕಾಗಿದೆ. ಈ ಉದ್ದೇಶದಿಂದ ಅಮ್ಮನ ಅಭಯ ನುಡಿ ಮತ್ತು ಪ್ರಾಜ್ಞರ ಪ್ರಶ್ನಾ ಚಿಂತನೆಯಂತೆ ತಾತ್ಕಾಲಿಕ ಗುಡಿಗಳನ್ನು ನಿರ್ಮಿಸಲಾಗಿದ್ದು ಜೂ.11ರಂದು ಬೆಳಿಗ್ಗೆ ಗಂಟೆ 8 ರಿಂದ ಚಂಡಿಕಾಯಾಗ ಪ್ರಾರಂಭಗೊಂಡು, 11 ಕ್ಕೆ ಪೂರ್ಣಾಹುತಿ, ಪ್ರಸಾದ ವಿತರಣೆ ನಡೆಯಲಿದೆ.

ಜೂ.12ರಂದು ಅಮ್ಮನ ಗದ್ದುಗೆ ಸಾನ್ನಿಧ್ಯ ಚಲನೆ ನಡೆಯಲಿದ್ದು ಬೆಳಿಗ್ಗೆ ಗಂಟೆ 7 ರಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆದು 8.30 ಕ್ಕೆ ನೂತನ ತಾತ್ಕಾಲಿಕ ಗುಡಿಯಲ್ಲಿ ಸಾನಿಧ್ಯ ಪ್ರತಿಷ್ಠೆ ನಡೆಯಲಿದೆ. ಕ್ಷೇತ್ರದ ತಂತ್ರಿಗಳಾದ ಜ್ಯೋತಿರ್ವಿದ್ವಾನ್ ಕೆ.ಜಿ. ರಾಘವೇಂದ್ರ ತಂತ್ರಿ ಕೊರಂಗ್ರಪಾಡಿ, ಜ್ಯೋತಿರ್ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ ಕೊರಂಗ್ರಪಾಡಿ ನೇತೃತ್ವದಲ್ಲಿ ಪ್ರಧಾನ ಅರ್ಚಕ ವೇ| ಮೂ| ಶ್ರೀನಿವಾಸ ತಂತ್ರಿ ಅವರ ಸಹಕಾರದೊಂದಿಗೆ ಚಂಡಿಕಾಯಾಗ, ಸಾನಿಧ್ಯ ಚಲನೆ, ಮತ್ತು ಸಾನಿಧ್ಯ ಪ್ರತಿಷ್ಠಾಪೂರ್ವಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಬೆಳಿಗ್ಗೆ 10 ಗಂಟೆಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಉಡುಪಿ ಜಿಲ್ಲಾಧಿಕಾರಿ ಡಾ| ಕೂರ್ಮಾ ರಾವ್ ಎಂ. ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಸಮಿತಿ ಮುಖಂಡರಾದ ಸರ್ವೋತ್ತಮ ಶೆಟ್ಟಿ ಅಬುದಾಭಿ, ಮಲ್ಲಾರು ಶಶಿಧರ್ ಶೆಟ್ಟಿ ಮಸ್ಕತ್, ಮೂಳೂರು ಸುಧಾಕರ ಹೆಗ್ಡೆ ಮುಂಬಯಿ, ರವಿ ಸುಂದರ್ ಶೆಟ್ಟಿ ಮುಂಬಯಿ, ಸಂತೋಷ್ ಶೆಟ್ಟಿ ಇನ್ನಾ ಬಾಳಿಕೆ ಕುರ್ಕಿಲಬೆಟ್ಟು, ಉಪೇಂದ್ರ ಶೆಟ್ಟಿ ಬೆಂಗಳೂರು, ವಿವಿಧ ಸಮಾಜದ ಗಣ್ಯರಾದ ಎಂ.ಬಿ. ಪುರಾಣಿಕ್, ಆನಂದ್ ಎಂ. ಶೆಟ್ಟಿ, ಡಾ| ಜಿ. ಶಂಕರ್, ಬಿ.ಎನ್. ಶಂಕರ ಪೂಜಾರಿ, ಧರ್ಮಪಾಲ್ ಯು, ದೇವಾಡಿಗ, ಗಂಗಾಧರ ಆಚಾರ್ಯ, ರಾಮದಾಸ್ ಶೆಟ್ಟಿಗಾರ್, ಗೋಕುಲ್ದಾಸ್ ಬಾರ್ಕೂರು, ಜಯ ರಾಣ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕೆ ವಾಸುದೇವ ಶೆಟ್ಟಿ, ಕಾರ್ಯಾಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ , ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯಾ, ಉಪಾಧ್ಯಕ್ಷರುಗಳಾದ ಗಂಗಾಧರ್ ಸುವರ್ಣ, ದೇವಿಪ್ರಸಾದ್ ಶೆಟ್ಟಿ ಬೆಳಪು, ಮನೋಹರ್ ಶೆಟ್ಟಿ ಮತ್ತು ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಯೋಗೀಶ್ ವಿ. ಶೆಟ್ಟಿ ಬಾಲಾಜಿ ಉಪಸ್ಥಿತರಿದ್ದರು.
ಶಿರ್ವ : ಬಂಟಕಲ್ಲು ಆಟೋ ರಿಕ್ಷಾ ಚಾಲಕ ಮತ್ತು ಮಾಲಕ ಸಂಘದ ಅಧ್ಯಕ್ಷರಾಗಿ ಮಂಜುನಾಥ ಪೂಜಾರಿ ಆಯ್ಕೆ

Posted On: 10-06-2023 07:06AM
ಶಿರ್ವ : ಬಂಟಕಲ್ಲು ಆಟೋ ರಿಕ್ಷಾ ಚಾಲಕ ಮತ್ತು ಮಾಲಕ ಸಂಘದ ಅಧ್ಯಕ್ಷರಾಗಿ ಬಂಟಕಲ್ಲು ಶ್ರೀ ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷರು, ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ಬಂಟಕಲ್ಲು ಇದರ ಗುರುಸ್ವಾಮಿ ಆಗಿರುವ ಮಂಜುನಾಥ ಪೂಜಾರಿ ಇವರು ತೃತೀಯ ಬಾರಿಗೆ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಬಂಟಕಲ್ಲು ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿರುವ ಮಾಧವ ಕಾಮತ್, ಉಪಾಧ್ಯಕ್ಷರಾಗಿ ಸತೀಶ್ ಅರಸಿಕಟ್ಟೆ, ಕಾರ್ಯದರ್ಶಿಯಾಗಿ ಡೆನಿಸ್ ಡಿಸೋಜ, ಜೊತೆ ಕಾರ್ಯದರ್ಶಿಯಾಗಿ ದಿವಾಕರ ಶೆಟ್ಟಿ, ಕೋಶಾಧಿಕಾರಿ ಸುಧಾಕರ್ ಅರಸಿಕಟ್ಟೆ, ಕ್ರೀಡಾ ಕಾರ್ಯದರ್ಶಿ ಅಶೋಕ್ ಅರಸಿಕಟ್ಟೆ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಉಮೇಶ್ ಪ್ರಭು ಪಾಲಮೆ, ರಾಘವೇಂದ್ರ ಹೇರೂರು, ಶೈಲೇಶ್ ಕಲ್ಲುಗುಡ್ಡೆ, ವಿಠಲ ಮೂಲ್ಯ ಅರಸಿಕಟ್ಟೆ, ನವೀನ್ ಸನಿಲ್, ಕೇಶವ, ರವಿ ಕುಲಾಲ್, ಸುರೇಶ್ ಕುಲಾಲ್, ಹರೀಶ್ ಹೇರೂರು, ಗೋಪಾಲ್ ದೇವಾಡಿಗ ಹೇರೂರು ಆಯ್ಕೆಯಾಗಿದ್ದಾರೆ.
ಪಡುಬಿದ್ರಿ : ನಿವೃತ್ತ ಬಿಎಸ್ಎಫ್ ಕಮಾಂಡೆಂಟ್ ಪಿ.ಎ. ಮೊಹಿದ್ದೀನ್ ಸನ್ಮಾನ

Posted On: 10-06-2023 07:02AM
ಪಡುಬಿದ್ರಿ: ಗಡಿ ಭದ್ರತಾ ಪಡೆಯಲ್ಲಿ ಸುಮಾರು ೩೫ ವರ್ಷಗಳ ಕಾಲ ಸೇವೆ ಸಲ್ಲಿಸಿ ಅಸಿಸ್ಟೆಂಟ್ ಕಮಾಂಡೆಂಟ್ ಆಗಿ ನಿವೃತ್ತ ಹೊಂದಿದ ಪಡುಬಿದ್ರಿ ಜಮಾಅತ್ ಸದಸ್ಯರಾದ ಪಿ.ಎ. ಮೊಹಿದ್ದೀನ್ ಅವರನ್ನು ಪಡುಬಿದ್ರಿ ಜಮಾಅತ್ ಸಮಿತಿಯ ವತಿಯಿಂದ ಶುಕ್ರವಾರ ಸನ್ಮಾನಿಸಲಾಯಿತು.
ಬಿಎಸ್ಎಫ್ನಲ್ಲಿ ೩೫ ವರ್ಷಗಳ ಕಾಲ ದೇಶದ ಹಲವು ರಾಜ್ಯಗಳಲ್ಲಿ ಸೇವೆ ಸಲ್ಲಿಸಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಅಸಿಸ್ಟೆಂಟ್ ಕಮಾಂಡೆಂಟ್ ಇತ್ತೀಚೆಗೆ ನಿವೃತ್ತರಾದ ಪಿ.ಎ. ಮೊಹಿದ್ದೀನ್ ಅವರನ್ನು ಪಡುಬಿದ್ರಿ ಜುಮ್ಮಾ ಮಸೀದಿಯಲ್ಲಿ ನಡೆದ ಸಮಾರಂಭದಲ್ಲಿ ಜುಮ್ಮಾ ಮಸೀದಿ ಖತೀಬ್ ಎಸ್.ಎಮ್. ಅಬ್ದುಲ್ ರಹ್ಮಾನ್ ಮದನಿ ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಹಜ್ ಯಾತ್ರೆಕೈಗೊಳ್ಳಲಿರುವ ಜಮಾಅತ್ ಸದಸ್ಯ ವೈ. ಜಲೀಲ್ ಸಾಹೇಬ್ ಅವರನ್ನು ಅಭಿನಂದಿಸಿ ಬೀಳ್ಕೊಡಲಾಯಿತು.
ಪಡುಬಿದ್ರಿ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಪಿ.ಕೆ. ಮಯ್ಯದ್ದೀನ್ ಲಚ್ಚಿಲ್, ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಶೇಖ್ ಇಸ್ಮಾಯಿಲ್ ಮಾಸ್ಟರ್, ಉಪಾಧ್ಯಕ್ಷ ಅಬ್ದುಲ್ ಶುಕೂರ್ ದಾವೂದ್ ಸಾಹೇಬ್, ಕೋಶಾಧಿಕಾರಿ ಎ.ಎಚ್. ಮುಹಮ್ಮದ್ ಹಾಜಿ, ಮಾಜಿ ಅಧ್ಯಕ್ಷ ಹಾಜಿ ಪಿ.ಎ. ಅಬ್ದುಲ್ ರಹ್ಮಾನ್, ಹಾಜಿ ಎಂ.ಎಚ್. ಹಮ್ಮಬ್ಬ, ಜಮಾಅತ್ ಸದಸ್ಯರಾದ ಪಿ.ಎಂ, ಅಕ್ಬರ್, ನಜೀರ್ ಸಿ.ಪಿ ಕಂಚಿನಡ್ಕ, ಹಂಝ ಅಬ್ಬಾಸ್, ಮಯ್ಯದ್ದಿ ಮಜಲಕೋಡಿ, ಇಮ್ತಿಯಾಝ್ ಚಾಬು ಸಾಹೇಬ್, ಇಸ್ಮಾಯಿಲ್ ಕಾಡಿಪಟ್ಣ, ಭಾಷಾ ಬೇಂಗ್ರೆ ಉಪಸ್ಥಿತರಿದ್ದರು.
ಜಿಲ್ಲಾ ಉಸ್ತುವಾರಿ ಸಚಿವರ ನೇಮಕ : ದ.ಕ ಜಿಲ್ಲೆಗೆ ದಿನೇಶ್ ಗುಂಡೂರಾವ್, ಉಡುಪಿ ಜಿಲ್ಲೆಗೆ ಲಕ್ಷ್ಮೀ ಹೆಬ್ಬಾಳ್ಕರ್

Posted On: 09-06-2023 06:53PM
ಉಡುಪಿ : ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ದಕ್ಷಿಣ ಕನ್ನಡಕ್ಕೆ ದಿನೇಶ್ ಗುಂಡೂರಾವ್, ಉಡುಪಿಗೆ ಲಕ್ಷ್ಮೀ ಹೆಬ್ಬಾಳ್ಕರ್ ರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.