Updated News From Kaup
ಬ್ಯಾಂಕಿಂಗ್ ಪರೀಕ್ಷೆಗಳಿಗೆ ತರಬೇತಿ : ನೋಂದಣಿಗೆ ಸೂಚನೆ

Posted On: 25-05-2023 07:07AM
ಉಡುಪಿ : ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕ.ರಾ.ಮು.ವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಬ್ಯಾಂಕ್ ಅಧಿಕಾರಿಗಳ ಮತ್ತು ಗುಮಾಸ್ತರ ಹುದ್ದೆಗಳ ನೇಮಕಾತಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 45 ದಿನಗಳ ತರಬೇತಿ ನೀಡಲಾಗುವುದು.
ಆಸಕ್ತ ಅಭ್ಯರ್ಥಿಗಳು ಮೇ 30 ರ ಒಳಗೆ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ದೂ.ಸಂಖ್ಯೆ: 0821-2515944 ಅನ್ನು ಸಂಪರ್ಕಿಸಿ, ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಕ.ರಾ.ಮು.ವಿ ಕುಲಸಚಿವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ : 61 ದಿನಗಳ ಕಾಲ ಯಾಂತ್ರೀಕೃತ ಮೀನುಗಾರಿಕೆ ನಿಷೇಧ

Posted On: 25-05-2023 07:04AM
ಉಡುಪಿ : ಜಿಲ್ಲೆಯ ಕರಾವಳಿಯಲ್ಲಿ ಯಾವುದೇ ಬಲೆ ಹಾಗೂ ಸಾಧನಗಳನ್ನು ಉಪಯೋಗಿಸಿ ಮೀನುಗಾರಿಕೆಗಾಗಿ ಯಾಂತ್ರೀಕೃತ ದೋಣಿಗಳ ಮತ್ತು 10 ಅಶ್ವಶಕ್ತಿ (ಹೆಚ್.ಪಿ) ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಇನ್ಬೋರ್ಡ್ ಅಥವಾ ಔಟ್ಬೋರ್ಡ್ ಯಂತ್ರಗಳನ್ನು ಅಳವಡಿಸಿರುವ ಸಾಂಪ್ರದಾಯಿಕ ದೋಣಿಗಳ ಮುಖಾಂತರ ಕೈಗೊಳ್ಳುವ ಮೀನುಗಾರಿಕೆ ಚಟುವಟಿಕೆಯನ್ನು ಜೂನ್ 1 ರಿಂದ ಜುಲೈ 31 ರ ವರೆಗೆ ಒಟ್ಟು 61 ದಿನಗಳ ಕಾಲ ನಿಷೇಧಿಸಲಾಗಿದೆ.
ದೋಣಿಯನ್ನು ಸಾಗಿಸುವ ಉದ್ದೇಶಕ್ಕಾಗಿ 10 ಅಶ್ವಶಕ್ತಿಯವರೆಗಿನ ಸಾಮರ್ಥ್ಯದ ಮೋಟರೀಕೃತ ದೋಣಿ ಹಾಗೂ ಸಾಂಪ್ರದಾಯಕ/ ನಾಡದೋಣಿಗಳು ಕರಾವಳಿ ಮೀನುಗಾರಿಕೆಯನ್ನು ಕೈಗೊಳ್ಳಲು ಅನುಮತಿ ನೀಡಲಾಗಿದೆ.
ಮೀನುಗಾರಿಕೆ ನಿಷೇಧದ ಆದೇಶವನ್ನು ಉಲ್ಲಂಘಿಸುವ ಮೀನುಗಾರಿಕಾ ದೋಣಿಗಳು ಮತ್ತು ಮೀನುಗಾರರು ಕರ್ನಾಟಕ ಕಡಲ ಮೀನುಗಾರಿಕೆ ಕಾಯ್ದೆ 1986 ರಲ್ಲಿ ವಿಧಿಸಲಾಗಿರುವ ದಂಡನೆಗಳಿಗೆ ಹೊಣೆಯಾಗುವುದಲ್ಲದೇ, ಒಂದು ವರ್ಷದ ಅವಧಿಗೆ ಡೆಲಿವರಿ ಪಾಯಿಂಟ್ನಲ್ಲಿ ರಾಜ್ಯ ಮಾರಾಟಕರ ರಹಿತ ಡೀಸಿಲ್ ಪಡೆಯಲು ಅನರ್ಹರಾಗುತ್ತಾರೆ.
ಕರಾವಳಿ ಪ್ರದೇಶದ ಎಲ್ಲಾ ಮೀನುಗಾರರು ಈ ಆದೇಶವನ್ನು ಪಾಲಿಸಿ ಸರಕಾರದೊಂದಿಗೆ ಸಹಕರಿಸುವಂತೆ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಪು : ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿದ ಯುವಕರು - ದೂರು ದಾಖಲು

Posted On: 24-05-2023 11:54AM
ಕಾಪು : ಇಲ್ಲಿನ ಠಾಣಾ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಲ್ವರು ಯುವಕರು ಮೋಜಿಗಾಗಿ ತಮ್ಮ ಕಾರುಗಳನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸುತ್ತಾ ಸಾಗುತ್ತಿದ್ದುದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿತ್ತು. ಈ ಬಗ್ಗೆ ಪೋಲಿಸರು ಯುವಕರ ವಿರುದ್ಧ ದೂರು ದಾಖಲಿಸಿ ಮತ್ತು ಕಾರನ್ನು ವಶಕ್ಕೆ ಪಡೆದ ಘಟನೆ ಕಾಪುವಿನಲ್ಲಿ ನಡೆದಿದೆ.
ನೀಲಿ ಬಣ್ಣದ ಮಹೀಂದ್ರಾ ಜೀಪ್, ಕಪ್ಪು ಬಣ್ಣದ ಕ್ರೆಟಾ ಕಾರು, ಬಿಳಿ ಬಣ್ಣದ ಫಾರ್ಚುನರ್ ಕಾರು ಮತ್ತು ಬಿಳಿ ಬಣ್ಣದ ಸ್ವಿಫ್ಟ್ ಕಾರು ಮತ್ತದರ ಚಾಲಕರನ್ನು ಪೊಲೀಸರು ಪತ್ತೆ ಹಚ್ಚಿದ್ದು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
ಆರೋಪಿಗಳಾದ ಅಯಾನ್, ಮಿಷಾಲುದ್ದೀನ್, ಶನೂನ್ ಡಿಸೋಜಾ ಮತ್ತು ವಿವೇಕ್ ಎಂಬವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಸಾರ್ವಜನಿಕರ ಪ್ರಾಣಕ್ಕೆ ಅಪಾಯಕರವಾಗುವ ರೀತಿಯಲ್ಲಿ ರಸ್ತೆಯ ತುಂಬಾ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಹೋಗುತ್ತಿದ್ದರು.
ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ : ಜಿಲ್ಲಾ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿ ಇಲಾಖೆ ಸಹಾಯಕ ಆಯುಕ್ತರಾಗಿ ಪ್ರಶಾಂತ್ ಕುಮಾರ್ ಶೆಟ್ಟಿ ನೇಮಕ

Posted On: 23-05-2023 05:14PM
ಉಡುಪಿ : ಜಿಲ್ಲೆಯ ವಿವಿಧ ದೇವಳಗಳಲ್ಲಿ ಆಡಳಿತ ಕಾರ್ಯನಿರ್ವಹಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಶಾಂತ್ ಕುಮಾರ್ ಶೆಟ್ಟಿ ಪ್ರಸ್ತುತ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿ ಇಲಾಖೆಯ ಉಡುಪಿ ಜಿಲ್ಲಾ ಸಹಾಯಕ ಆಯುಕ್ತರಾಗಿ ಮುಂಭಡ್ತಿ ಪಡೆದಿದ್ದಾರೆ.
ಇವರು ಕಾಪು ಹೊಸ ಮಾರಿಗುಡಿ ದೇವಳದ ಕಾರ್ಯನಿರ್ವಹಣಾಧಿಕಾರಿಯಾಗಿ ಉತ್ತಮವಾಗಿ ಸೇವೆ ಸಲ್ಲಿಸಿದ್ದರು.
ಇವರ ಉತ್ತಮ ಸೇವೆಯು ಹೀಗೆಯೇ ಮುಂದುವರೆಯಲಿ ಎಂದು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಸಿಬ್ಬಂದಿ ವರ್ಗ ಮತ್ತು ಅಭಿವೃದ್ಧಿ ಸಮಿತಿ ಸಿಬ್ಬಂದಿ ವರ್ಗ ಶುಭ ಹಾರೈಸಿದ್ದಾರೆ.
ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ : ಯುಎಸ್ಎ ಘಟಕ ಉದ್ಘಾಟನೆ

Posted On: 22-05-2023 11:05AM
ಕಾಪು : ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಅಂತಾರಾಷ್ಟ್ರೀಯ ಘಟಕವನ್ನು ಯುಎಸ್ಎ ಸಮಿತಿಯ ಅಧ್ಯಕ್ಷ ಅಖಿಲ ಅಮೇರಿಕಾ ತುಳು ಅಸೋಸಿಯೇಶನ್ನ ಸಂಸ್ಥಾಪಕ ಭಾಸ್ಕರ ಶೇರಿಗಾರ್ ಬೋಸ್ಟನ್, ಶೈಲಶ್ರೀ ಶೇರಿಗಾರ್, ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಅವರು ಅಮೆರಿಕದ ಬೋಸ್ಟನ್ನಲ್ಲಿ ಮೇ 14 ರಂದು ಉದ್ಘಾಟಿಸಿದರು.

ಪ್ರಸ್ತವಾನೆಗೈದ ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮಾತನಾಡಿ, ಪ್ರಪಂಚದಾದ್ಯಂತ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನವು ಸಮಗ್ರವಾಗಿ ಜೀರ್ಣೋದ್ದಾರಗೊಳ್ಳುತ್ತಿದೆ. 17ನೇ ಶತಮಾನದ ಕೆಳದಿ ಅರಸರ ಕಾಲದ ಇತಿಹಾಸವನ್ನು ಹೊಂದಿರುವ ಮಾರಿಗುಡಿಯ ಪುನರುತ್ಥಾನ ಯೋಜನೆಗಳು ಹೊಯ್ಸಳ ಶೈಲಿಯಲ್ಲಿ ನಿರ್ಮಾಣಗೊಳ್ಳುತ್ತಿವೆ. ಜೀರ್ಣೋದ್ಧಾರಕ್ಕೆ ಪೂರಕವಾಗಿ 18 ಕ್ಕೂ ಅನೇಕ ದೇಶಗಳಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಸಹಸ್ರಮಾನದಲ್ಲೊಮ್ಮೆ ಸಿಗಬಹುದಾದ ಮಾರಿಗುಡಿ ಜೀರ್ಣೋದ್ದಾರ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸುವಂತೆ ಅವರು ವಿನಂತಿಸಿದರು. ಅಧ್ಯಕ್ಷತೆ ವಹಿಸಿದ್ದ ಯುಎಇ ಸಮಿತಿ ಅಧ್ಯಕ್ಷ ಭಾಸ್ಕರ್ ಶೇರಿಗಾರ್ ಮಾತನಾಡಿ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕದಾದ್ಯಂತ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿಯ ಸಂದೇಶವನ್ನು ಹರಡುವುದರ ಜತೆಗೆ ಜೀರ್ಣೋದ್ಧಾರ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮತ್ತು ಬೆಂಬಲಿಸುವುದಾಗಿ ಭರವಸೆ ನೀಡಿದರು.
ಅಮೇರಿಕಾ ಸಮಿತಿಯ ಸದಸ್ಯ ಶರತ್ ಅಮೀನ್, ಬೋಸ್ಟನ್ ತುಳುಕೂಟದ ಸಂಸ್ಥಾಪಕ ಅಧ್ಯಕ್ಷ ಮತ್ತು ಬೋಸ್ಟನ್ ಕನ್ನಡ ಕೂಟದ ಮಾಜಿ ಅಧ್ಯಕ್ಷ ಡಾ| ಸುಧಾಕರ ರೇವನ್, ಶಿರೀಶ್ ಶೆಟ್ಟಿ ಅಟ್ಲಾಂಟಾ, ಡಿಜಿಟಲ್ ಕ್ಯೂಬ್ಸ್ನ ಸಿಇಒ ಸಂತೋಷ್ ಉಡುಪಿ ಮಿಚಿಗನ್, ರಾಮದಾಸ್ ಕುಲಾಲ್ ನ್ಯೂಯಾರ್ಕ್, ಆಟಾದ ಅಧ್ಯಕ್ಷೆ ಶ್ರೀವಲ್ಲಿ ರೈ ಫ್ಲೋರಿಡಾ, ಸಿದ್ಧಾರ್ಥ್ ಶೆಟ್ಟಿ ಟೆಕ್ಸಾಸ್, ಸುಷ್ಮಾ ಜಯಚಂದ್ರ ಪೆನ್ಸಿಲ್ವೇನಿಯಾ, ತುಳುವೆರೆ ಚಾವಡಿ ಸಂಸ್ಥಾಪಕ ಉಮೇಶ್ ಅಸೈಗೋಳಿ ಉತ್ತರ ಕೆರೊಲಿನಾ ಉಪಸ್ಥಿತರಿದ್ದರು. ಅನಿವಾಸಿ ಭಾರತೀಯ ಸಮಿತಿ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಯುಎಇ, ಯುಎಇ ಸಮಿತಿ ಕಾರ್ಯಾಧ್ಯಕ್ಷ ಶಶಿಧರ ಶೆಟ್ಟಿ, ಹೊಸ ಮಾರಿಗುಡಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯ, ಆರ್ಥಿಕ ಸಮಿತಿಯ ಪ್ರಧಾನ ಸಂಚಾಲಕ ಉದಯ ಸುಂದರ್ ಶೆಟ್ಟಿ ಸಹಿತ ವಿವಿಧ ಸಮಿತಿಗಳ ಪ್ರಮುಖರು ವರ್ಚುವಲ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು.
ನವದುರ್ಗೆಯರನ್ನು ಪ್ರತಿನಿಧಿಸುವ ಒಂಬತ್ತು ಸುಮಂಗಲಿಯರಾದ ಪೂಜಾ ಶೆಟ್ಟಿ, ಡಾ| ಉಷಾ ರಾವ್, ರಮ್ಯಾ ಜೈನ್, ಲಕ್ಷ್ಮೀ ಪುರಾಣಿಕ್, ಮಧು ಗೌಡ, ಚಂದ್ರಿಕಾ ರಾವ್, ಚಂದ್ರ ಬಿಸ್ವಾಸ್, ಶೈಲಶ್ರೀ ಶೇರಿಗಾರ್ ಮತ್ತು ಸೌಮ್ಯಾ ಕರುಣಾಕರ್ ಒಂಬತ್ತು ದೀಪಗಳನ್ನು ಬೆಳಗಿಸಿದರು. ಸಂಘಟಕರಾದ ಶೈಲಶ್ರೀ ಭಾಸ್ಕರ ಶೇರಿಗಾರ್ ಸ್ವಾಗತಿಸಿದರು. ಶಿರೀಶ್ ಶೆಟ್ಟಿ ಅಟ್ಲಾಂಟಾ ವಂದಿಸಿದರು. ಡಾ| ಸುಧಾಕರ್ ರಾವ್ ಕಾರ್ಯಕ್ರಮ ನಿರೂಪಿಸಿದರು.
ಕಟಪಾಡಿಯ ಮಹಿಳೆಗೆ ಮುತ್ತೂಟ್ ಫ಼ೈನಾನ್ಸ್ ಸಂಸ್ಥೆಯ ಎಮ್ ಜಾರ್ಜ್ ಫೌಂಡೆಶನ್ ವತಿಯಿಂದ ವೈದ್ಯಕೀಯ ನೆರವು

Posted On: 21-05-2023 10:55AM
ಉಡುಪಿ : ನಗರದ ಮೈತ್ರಿ ಕಾಂಪ್ಲೆಕ್ಸ್ ನಲ್ಲಿರುವ ಚಿನ್ನದ ಸಾಲದ ಕಂಪನಿಯಾದ ಮುತ್ತೂಟ್ ಫ಼ೈನಾನ್ಸ್ ಸಂಸ್ಥೆಯ ಎಮ್ ಜಾರ್ಜ್ ಫೌಂಡೆಶನ್ ವತಿಯಿಂದ ಮಂಜೂರಾದ ಮೆಡಿಕಲ್ ಚಾರಿಟಿಯ ಚೆಕ್ ನ್ನು ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವ ಕಟಪಾಡಿಯ ಲಕ್ಷ್ಮಿಬಾಯಿ ಚಂದ್ರಪ್ಪರವರಿಗೆ ಕಟಪಾಡಿಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಇಂದಿರ ಆಚಾರ್ಯರವರು ಹಸ್ತಾರಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕ ಪ್ರಭಾಕರ ಕೆ ಪಾಲನ್, ಪ್ರಬಂಧಕ ಗಣೇಶ್ ಭಟ್, ಮುತ್ತೂಟ್ ಫ಼ೈನಾನ್ಸ್ ಲಿಮಿಟೆಡ್ ಉಡುಪಿ ಮತ್ತು ಮುತ್ತೂಟ್ ಫ಼ೈನಾನ್ಸ್ ಸಿಬ್ಬಂದಿ ಮಂಜುನಾಥ್ ಬಿ. ಉಪಸ್ಥಿತರಿದ್ದರು.
ಕಾಪು : ಕ್ಷೇತ್ರದ ಮತದಾರರಿಗೆ ಚಿರಋಣಿಯಾಗಿರುತ್ತೇನೆ - ಗುರ್ಮೆ ಸುರೇಶ್ ಶೆಟ್ಟಿ

Posted On: 21-05-2023 10:29AM
ಕಾಪು : ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಕಾಪು ವಿಧಾನಸಭಾ ಕ್ಷೇತ್ರದ ವಿವಿಧ ಪಂಚಾಯತ್ ಗಳಿಗೆ ಶನಿವಾರ ಭೇಟಿ ನೀಡಿ ತಮ್ಮನ್ನು ಬೆಂಬಲಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭ ನಡೆದ ರೋಡ್ ಶೋದಲ್ಲಿ ಅವರು ಮಾತನಾಡಿ ತಾವು ನೀಡಿದ ವಚನಕ್ಕೆ ಬದ್ಧರಿರುವುದಾಗಿ ಹೇಳಿದರು. ತಾನು ಕ್ಷೇತ್ರದ ಮತದಾರರಿಗೆ ಚಿರಋಣಿಯಾಗಿರುತ್ತೇನೆ ಎಂಬುದನ್ನು ಅವರು ಪುನರುಚ್ಚರಿಸಿದರು.
ಮೊದಲ ದಿನದ ವಿಜಯೋತ್ಸವದ ಸಮಾರೋಪ : ಕಳತ್ತೂರಿನಲ್ಲಿ ಶನಿವಾರ ನಡೆದ ಮೊದಲನೇ ದಿನದ ವಿಜಯೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಗುರ್ಮೆ ಸುರೇಶ್ ಶೆಟ್ಟಿ ಮುಂದಿನ ಐದು ವರ್ಷಗಳಿಗೆ ತಮ್ಮನ್ನು ಚುನಾಯಿಸಿದ ಮತದಾರರಿಗೆ ತಾವು ಕಾಯಾ ವಾಚಾ ಮನಸಾ ಸೇವೆ ಸಲ್ಲಿಸುವುದಾಗಿ ಹೇಳಿದರು.
ಈ ಸಂದರ್ಭ ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಮಂಗಳೂರು ವಿಭಾಗ ಪ್ರಭಾರಿಗಳಾದ ಉದಯ್ ಕುಮಾರ್ ಶೆಟ್ಟಿ, ಕಾಪು ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ಪಕ್ಷದ ಮುಖಂಡರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಶ್ಯಾಮಲಾ ಕುಂದರ್, ಗೀತಾಂಜಲಿ ಸುವರ್ಣ, ವೀಣಾ ಶೆಟ್ಟಿ, ಶಿಲ್ಪಾ ಜಿ ಸುವರ್ಣ, ಗಂಗಾಧರ್ ಸುವರ್ಣ, ಲತಾ ಆಚಾರ್ಯ, ಸುಮಾ ಶೆಟ್ಟಿ, ಸುರೇಂದ್ರ ಪನಿಯೂರು, ಗೋಪಾಲಕೃಷ್ಣ ರಾವ್, ಸಚಿನ್ ಸುವರ್ಣ ಪಿತ್ರೋಡಿ, ಸಂತೋಷ ಮೂಡುಬೆಳ್ಳೆ ಸೇರಿದಂತೆ ಹಿರಿಯ ನಾಯಕರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಅಕ್ರಮ ಮರಳು ಗಣಿಗಾರಿಕೆ ತಡೆಯಲು ಕಾರ್ಯಪ್ರವೃತ್ತರಾಗಿ : ತಹಶೀಲ್ದಾರ್ ರವಿ ಎಸ್ ಅಂಗಡಿ

Posted On: 20-05-2023 06:42PM
ಉಡುಪಿ : ಉಡುಪಿ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ಕುರಿತು ಸಾರ್ವಜನಿಕರಿಂದ ದೂರುಗಳು ಬಂದ ತಕ್ಷಣವೇ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಮರಳು ಸಾಗಾಣಿಕೆಯನ್ನು ತಡೆಯಲು ಕ್ರಮಕೈಗೊಳ್ಳುವಂತೆ ಉಡುಪಿ ತಾಲೂಕು ತಹಶೀಲ್ದಾರ್ ರವಿ ಎಸ್ ಅಂಗಡಿ ಹೇಳಿದರು. ಅವರು ಶುಕ್ರವಾರ ಉಡುಪಿ ತಾಲೂಕು ಕಚೇರಿಯಲ್ಲಿ ಉಡುಪಿ ತಾಲೂಕು ಮರಳು ಉಪಖನಿಜ ಅಕ್ರಮ ಸಾಗಾಣಿಕೆ, ದಾಸ್ತಾನು ವಿಷಯಗಳ ಕುರಿತು ಟಾಸ್ಕ್ಫೋರ್ಸ್ ಸಮಿತಿ ಸದಸ್ಯರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಡುಪಿ ತಾಲೂಕು ವ್ಯಾಪ್ತಿಯಲ್ಲಿ ಸೂಚಿಸಲಾದ ಇಲಾಖೆಗಳು ನಿಗಧಿಪಡಿಸಿದ ದಿನಗಳಂದು ಗಸ್ತು ನಡೆಸಿ, ಅಕ್ರಮ ಮರಳು ಗಣಿಗಾರಿಕೆಯ ಬಗ್ಗೆ ವರದಿ ನೀಡುವಂತೆ ತಿಳಿಸಿದರು.
ಸಭೆಯಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿ ಕೆ.ಎಂ ರಾಜು, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿನಾಯಕ ಪೂಜಾರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಿರಿಯ ಭೂ ವಿಜ್ಞಾನಿ ಅಶ್ವಿನಿ, ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ರವಿಶಂಕರ್, ಉಪ ತಹಶೀಲ್ದಾರ್ ಐರಿನ್ ನೊರೋಹ್ನ, ಮಲ್ಪೆ ವೃತ್ತ ನಿರೀಕ್ಷಕ ಸುರೇಶ್, ಉಡುಪಿ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ, ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಂಜಪ್ಪ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾಪು : ಗೆಲುವಿನ ಸಂಭ್ರಮಾಚರಣೆ - ನೂತನ ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರಿಂದ ರೋಡ್ ಶೋ

Posted On: 20-05-2023 05:56PM
ಕಾಪು : ನೂತನ ಶಾಸಕರಾಗಿ ಆಯ್ಕೆಯಾದ ಗುರ್ಮೆ ಸುರೇಶ್ ಶೆಟ್ಟಿಯವರ ರೋಡ್ ಶೋ ಕಾರ್ಯಕ್ರಮ ಶನಿವಾರದಂದು ಬಿಜೆಪಿ ಪಕ್ಷದ ಪ್ರಮುಖರ ಉಪಸ್ಥಿತಿಯಲ್ಲಿ ಬೆಳಿಗ್ಗೆ ಪಡುಕೆರೆಯಿಂದ ಆರಂಭವಾಯಿತು.

ತದನಂತರ ಉದ್ಯಾವರ, ಕಟಪಾಡಿ, ಶಿರ್ವ, ಮುದರಂಗಡಿ, ಅಡ್ಡೆ, ಪಲಿಮಾರು, ನಂದಿಕೂರು, ಪಡುಬಿದ್ರಿ, ಹೆಜಮಾಡಿ, ಎರ್ಮಾಳು, ಅದಮಾರು, ಕಾಪು ಹೀಗೆ ಕ್ಷೇತ್ರದೆಲ್ಲೆಡೆ ಸಾಗಿ ಈ ದಿನದ ರೋಡ್ ಶೋ ಶಿರ್ವ ವ್ಯಾಪ್ತಿಯ ಕುಶಲ ಶೇಖರ ಶೆಟ್ಟಿ ಸಭಾಂಗಣದಲ್ಲಿ ಸಮಾಪನಗೊಳ್ಳಲಿದೆ.
ನೂತನ ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಶಾಸಕ ಲಾಲಾಜಿ ಆರ್, ಮೆಂಡನ್, ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ್ ನಾಯಕ್, ಜಿ.ಪಂ. ಸದಸ್ಯರಾದ ಗೀತಾಂಜಲಿ ಸುವರ್ಣ, ಶಿಲ್ಪಾ ಜಿ. ಸುವರ್ಣ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪಡುಬಿದ್ರಿ ಗ್ರಾ.ಪಂ. ಉಪಾಧ್ಯಕ್ಷೆ ಯಶೋಧ ಪೂಜಾರಿ, ಹೆಜಮಾಡಿ ಗ್ರಾ.ಪಂ. ಅಧ್ಯಕ್ಷ ಪಾಂಡುರಂಗ ಕರ್ಕೇರ, ಪ್ರಾಣೇಶ್ ಹೆಜಮಾಡಿ, ಶರಣ್ ಮಟ್ಟು ಮತ್ತಿತರರು ಉಪಸ್ಥಿತರಿದ್ದರು.
ಕಾಪು : ಪೇಟೆಯಲ್ಲಿ ಕಾಂಗ್ರೆಸ್ ಸಂಭ್ರಮಾಚರಣೆ

Posted On: 20-05-2023 05:24PM
ಕಾಪು : ಕರ್ನಾಟಕ ಸರ್ಕಾರದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಮತ್ತು ಇತರರ ಪ್ರಮಾಣವಚನ ಸ್ವೀಕಾರದ ನೇರ ಪ್ರಸಾರದ ವೀಕ್ಷಣೆಯ ಅವಕಾಶವನ್ನು ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ವತಿಯಿಂದ ಕಾಪು ಪೇಟೆಯಲ್ಲಿ ಆಯೋಜಿಸಲಾಗಿತ್ತು.
ಪಕ್ಷದ ಮುಖಂಡರು, ಕಾರ್ಯಕರ್ತರು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಪ್ರಮಾಣವಚನ ಸ್ವೀಕಾರದ ಸಂದರ್ಭ ಜೈಕಾರ ಹಾಕಿದರು. ಇದೇ ಸಂದರ್ಭ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಪದಗ್ರಹಣ ಸಮಾರಂಭದ ಸಂಭ್ರಮಾಚರಣೆ ಮಾಡಿದರು.