Updated News From Kaup

ಗೆದ್ದಲು ತಿನ್ನುತ್ತಿರುವ 2 ಸಾವಿರ ಮನೆ ನಿವೇಶನದ ಅರ್ಜಿಗಳನ್ನು ಮತ್ತೆ ಓಪನ್ ಮಾಡುತ್ತೇನೆ : ವಿನಯ ಕುಮಾರ್ ಸೊರಕೆ

Posted On: 02-05-2023 04:53PM

ಉಡುಪಿ : ನಾನು ಶಾಸಕನಾಗಿದ್ದ ಕಾಲದಲ್ಲಿ 94 ಸಿ ಕಾನೂನು ಮತ್ತು ಅಕ್ರಮ‌ ಸಕ್ರಮ ಯೋಜನೆಯಡಿ 2 ಸಾವಿರ ಅರ್ಜಿಯನ್ನು ಈ ಭಾಗದಲ್ಲಿ ಶಿಫಾರಸು ಮಾಡಿದ್ದೇನೆ. ನಾನು‌ ಶಿಫಾರಸು ಮಾಡಿದ ಅರ್ಜಿಯನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ ಎಂದು ವಿನಯ ಕುಮಾರ್ ಸೊರಕೆ ಹೇಳಿದ್ದಾರೆ. ಪೆರ್ಡೂರು ಪೇಟೆಯಲ್ಲಿ‌ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ನಾನು ಶಿಫಾರಸು ಮಾಡಿದ ಎಲ್ಲಾ ಅರ್ಜಿಗಳು ಗೆದ್ದಲು ಹಿಡಿದಿದ್ದು ಅರ್ಜಿಯ ಕಟ್ಟನ್ನು ಮತ್ತೆ ಓಪನ್ ಅದಕ್ಕೆ ಮರು‌ಜೀವ ಕೊಟ್ಟು ಬಡವರಿಗೆ ಮನೆ ಮಂಜೂರಾತಿ ಮಾಡುವ ಕೆಲಸವನ್ನು ಮಾಡುತ್ತೇನೆ ಎಂದು ಅವರು ಹೇಳಿದರು. ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟಂತೆ ಬೈಪಾಸ್ ರಸ್ತೆ ಮೂಲಕ ಪೆರ್ಡೂರು ದೇವಸ್ಥಾನಕ್ಕೆ ಹಾನಿ ಆಗದ ಹಾಗೇ ರಸ್ತೆ ಅಗಲೀಕರಣ ಮಾಡಬೇಕಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಬಹಳಷ್ಟು ರಾಜಕೀಯ ಮಾಡ್ತಾ ಇದೆ. ಈಗಿನ ವ್ಯವಸ್ಥೆಯಲ್ಲಿ ಮಾಡೋದಾದಲ್ಲಿ ದೇವಸ್ಥಾನದ ಅರ್ಚಕರು ತಿಳಿಸಿದಂತೆ ಪಾಣಿಗ್ರಹದಲ್ಲಿ ಕಂಪನ ಬರುತ್ತದೆ.‌ ಕೆರೆ, ರಥಬೀದಿ ಎಲ್ಲಾನು ನಾಶವಾಗುತ್ತದೆ. ದೇವಸ್ಥಾನಕ್ಕೆ ಧಕ್ಕೆ ಆಗುತ್ತದೆ. ‌ಬೈಪಾಸ್ ರಸ್ತೆ ಮೂಲಕ ಈ ಕಾಮಗಾರಿ ಆದರೆ ದೇವಸ್ಥಾನಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ. ದೇವಸ್ಥಾನಕ್ಕೆ ಧಕ್ಕೆ ಆಗದೇ ರಸ್ತೆ ಅಗಲೀಕರಣಕ್ಕೆ ನಾವು ಮುಂದುವರಿಸುತ್ತೇವೆ ಎಂದು ಸೊರಕೆ ಹೇಳಿದ್ದಾರೆ.

ಬಿಜೆಪಿ ದೇವಸ್ಥಾನದ ವಿಚಾರದಲ್ಲಿ ರಾಜಕೀಯ ಶುರುಮಾಡಿ ದೇವಸ್ಥಾನವನ್ನೆ ನಾಶ ಮಾಡಲು ಪ್ರಯತ್ನ ಮಾಡುತ್ತಿದೆ ಎಂದು ಸೊರಕೆ ಆಕ್ರೋಶ ವ್ಯಕ್ತಪಡಿಸಿದರು. ನನ್ನ ಕ್ಷೇತ್ರದಾದ್ಯಂತ ಕುಡಿಯುವ ನೀರಿನ‌ ಸಮಸ್ಯೆ ಬಹಳಷ್ಟು ಇದೆ. ಚುನಾವಣಾ ಸಂದರ್ಭದಲ್ಲಿ ಕುಡಿಯುವ‌ ನೀರಿಗೆ ಆದ್ಯತೆ ಕೊಡ್ತಾ ಇಲ್ಲ. ಮೂಲಭೂತ ಸೌಕರ್ಯದಿಂದ ಜನರನ್ನು ವಂಚಿತರಾಗುವ ಕೆಲಸವನ್ನು ಬಿಜೆಪಿ ಮಾಡ್ತಾ ಇದೆ. ಕುಡಿಯುವ ನೀರಿನ ಮೂಲ ಹುಡುಕುವ ಬದಲು ಪೈಪ್ ಲೈನ್ ಮಾತ್ರ ಹಾಕುವ ಕೆಲಸ ಆಗ್ತಿದೆ ಅಂತಾ ಸೊರಕೆ‌ ವ್ಯಂಗ್ಯವಾಡಿದರು.

ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೊಳಿ ಮಾತನಾಡಿ ಈಗಿನ ಬಿಜೆಪಿ ಅಭ್ಯರ್ಥಿಯ ಮೇಲೆ ಎರಡು ಕ್ರಿಮಿನಲ್ ಕೇಸ್ ದಾಖಲಾಗಿದೆ ಎಂದು ಅವರೇ ಸಲ್ಲಿಸಿದ ಅಫಿದಾವಿತ್ ದಾಖಲಾಗಿದೆ. ಗಣಿ ಲೂಟಿಯಲ್ಲಿ ಸರಕಾರಕ್ಕೆ 81 ಕೋಟಿ ವಂಚಿಸಿದ ಪ್ರಕರಣ ಇದರಲ್ಲಿ ಮುಖ್ಯವಾದದ್ದು. ಈ ಬಗ್ಗೆ ಜನರು ಯೋಚಿಸಬೇಕಾಗಿದೆ.‌ ಆಲೋಚಿಸಿ ಮತ ಹಾಕಬೇಕಾಗಿದೆ. ಕಮಲ‌ ಕೆರೆಯಲ್ಲಿದ್ದರೆ ಚಂದ, ತೆನೆ ಗದ್ದೆಯಲ್ಲಿದ್ದರೆ ಚಂದ, ಪ್ರಾಮಾಣಿಕವಾದ ಕೈ ಅಧಿಕಾರದಲ್ಲಿದ್ದರೆ ಚಂದ ಅಂತೆ. ಹಾಗಾಗಿ ಪ್ರಾಮಾಣಿಕ ರಾಜಕಾರಣಿ ಸೊರಕೆ ಉತ್ತಮ ಆಯ್ಕೆ ಎಂದು ಮರೋಳಿ ಅಭಿಪ್ರಾಯ ಪಟ್ಟರು. ಕಾಂಗ್ರೆಸ್ ಮುಖಂಡರಾದ ಶಾಂತಾರಾಮ‌ಸೂಡ, ಚರಣ್ ವಿಠಲ್ ಕುದಿ, ಜಿತೇಂದ್ರ ಫುಟಾರ್ಡೊ, ಸಂತೋಷ್ ಕುಲಾಲ್ ಉಪಸ್ಥಿತರಿದ್ದರು.

ಗುರ್ಮೆ ಸುರೇಶ್ ಶೆಟ್ಟಿ ಪರ ಹರಿಕೃಷ್ಣ ಬಂಟ್ವಾಳ್ ಮತಯಾಚನೆ

Posted On: 02-05-2023 04:35PM

ಕಾಪು : ವಿಧಾನಸಭೆಯ ಹಿರಿಯಡ್ಕದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಪರ ಬಿಜೆಪಿ ಮುಖಂಡರಾದ ಹರಿಕೃಷ್ಣ ಬಂಟ್ವಾಳ್ ಮತಯಾಚನೆ ನಡೆಸಿದರು.

ಈ ಸಂದರ್ಭದಲ್ಲಿ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಶಾಸಕರಾದ ಲಾಲಾಜಿ ಮೆಂಡನ್, ಕಾಪು ಕ್ಷೇತ್ರದ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್ ಸೇರಿದಂತೆ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಮೇ 10 ಮತ ಒತ್ತು : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

Posted On: 01-05-2023 05:46PM

ಉಡುಪಿ : ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಕ್ಕೆ ಸಂಬಂಧಿಸಿದಂತೆ, ಮೇ 10 ರಂದು ನಡೆಯುವ ಮತದಾನ ದಿನದಂದು ಜಿಲ್ಲೆಯ ಎಲ್ಲಾ ಮತದಾರರು ತಪ್ಪದೇ ಮತದಾನ ಮಾಡುವಂತೆ ತಿಳಿಸಿದ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಮತದಾನ ದಿನವನ್ನು ನೆನಪಿನಲ್ಲಿಟ್ಟುಕೊಳ್ಳಲು ಸಹಕಾರಿಯಾಗುವಂತೆ, ಮೇ 10 ಮತ ಒತ್ತು ಎಂಬ ಪ್ರಾಸ ವಾಕ್ಯವನ್ನು ಸುಲಭವಾಗಿ ನೆನಪಿನಲ್ಲಿಡುವಂತೆ ತಿಳಿಸಿದರು. ಅವರು ಚುನಾವಣಾ ಆಯೋಗದ ನಿರ್ದೇಶನದಂತೆ, ಮತದಾರರಿಗೆ ತಮ್ಮ ಮತಗಟ್ಟೆಯ ಕುರಿತು ಜಾಗೃತಿ ಮೂಡಿಸಲು ನಡೆದ, ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮದ ಅಂಗವಾಗಿ, ಉಡುಪಿಯ ಅಜ್ಜರಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರಜಾಪ್ರಭುತ್ವದ ಹಬ್ಬ – ಮೇ 10 ಮತದಾನ ಧ್ಯೇಯ ವಾಕ್ಯದ ಧ್ವಜರೋಹಣ ನೆರವೇರಿಸಿ ಮಾತನಾಡಿದರು.

ಜಿಲ್ಲೆಯ ಎಲ್ಲಾ ಮತದಾರರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ತಾವು ಮತದಾನ ಮಾಡಬೇಕಾದ ಮತಗಟ್ಟೆಯ ವಿಳಾಸವನ್ನು ಮೊದಲೇ ತಿಳಿದುಕೊಳ್ಳುವುದರಿಂದ ಮತದಾನ ದಿನದಂದು ಮತಗಟ್ಟೆ ಕುರಿತ ಯಾವುದೇ ಗೊಂದಲಗಳಿಗೆ ಒಳಗಾಗದೇ ಸುಲಭವಾಗಿ ಮತದಾನ ಮಾಡಲು ಸಾಧ್ಯವಿದೆ. ಈ ಮಾಹಿತಿಯನ್ನು ತಮ್ಮ ವ್ಯಾಪ್ತಿಯ ಬಿ.ಎಲ್.ಓ ಗಳ ಬಳಿ, ಚುನಾವಣಾ ಆಯೋಗದ ವೋಟರ್ ಹೆಲ್ಪ್ಲೈನ್ ಆಪ್ ಮೂಲಕ ಅಥವಾ ಉಚಿತ ಸಹಾಯವಾಣಿ ಸಂಖ್ಯೆ 1950 ಕರೆ ಮಾಡಿ ಪಡೆಯಬಹುದಾಗಿದೆ ಎಂದು ತಿಳಿಸಿದರು. ಜಿಲ್ಲಾ ಸ್ವೀಪ್ ವತಿಯಿಂದ ಈಗಾಗಲೇ ಹಲವು ವಿನೂತನ ಕಾರ್ಯಕ್ರಮಗಳ ಮೂಲಕ, ಮತದಾನ ಕುರಿತು ಜಾಗೃತಿ ಮೂಡಿಸುತ್ತಿದ್ದು, ಮತದಾರರು ಯಾವುದೇ ಆಸೆ, ಆಮಿಷ, ಒತ್ತಡಗಳಿಗೆ ಒಳಗಾಗದೇ ಮತದಾನ ಮಾಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯ ಶತಾಯುಷಿ ಮತದಾರರೂ ಸಹ ಉತ್ಸಾಹದಿಂದ ಮತದಾನ ಪ್ರಕ್ರಿಯೆಲ್ಲಿ ಭಾಗವಹಿಸುತ್ತಿದ್ದು, ಎಲ್ಲಾ ಯುವ ಮತದಾರರು ತಮ್ಮ ಮೊದಲ ಬಾರಿಯ ಮತವನ್ನು ತಪ್ಪದೇ ಚಲಾಯಿಸುವುವಂತೆ ಹೇಳಿದರು.

ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಡೆದ ಮತದಾನ ಪ್ರಮಾಣಕ್ಕಿಂತಲೂ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯುವಂತೆ ಮಾಡಲು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಜಿಲ್ಲೆಯ ಕಾಲೇಜುಗಳಲ್ಲಿನ 18 ವರ್ಷ ಮೇಲ್ಪಟ್ಟ ಎಲ್ಲಾ ಯುವ ಜನತೆಯ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ನೊಂದಾಯಿಸಲಾಗಿದೆ. ಯುವ ಜನತೆ ಸಂವಿಧಾನ ತಮಗೆ ನೀಡಿರುವ ಮತದಾನದ ಹಕ್ಕನ್ನು ಯಾವುದೇ ಆಮಿಷಗಳಿಗೆ ಬಲಿಯಾಗದೇ, ಸೂಕ್ತ ರೀತಿಯಲ್ಲಿ ಚಲಾಯಿಸುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಡಯಟ್ನ ಪ್ರಾಂಶುಪಾಲ ಗೋವಿಂದ ಮಡಿವಾಳ, ಉಪ ಪ್ರಾಂಶುಪಾಲ ಡಾ.ಅಶೋಕ್ ಕಾಮತ್, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರೇಗೌಡ, ಉಡುಪಿ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ವಿಜಯಾ ಮತ್ತು ಶಾಲೆಯ ಶಿಕ್ಷಕ ವೃಂದ, ಬಿ.ಎಲ್.ಓ ಗಳು ಹಾಗೂ ಮತಗಟ್ಟೆ ವ್ಯಾಪ್ತಿಯಲ್ಲಿನ ಮತದಾರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಬನ್ನಂಜೆಯಿಂದ ಅಜ್ಜರಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯವರೆಗೆ ವಿದ್ಯಾರ್ಥಿಗಳಿಂದ ಜಾಥಾ ನಡೆಯಿತು. ಡಿಡಿಪಿಐ ಗಣಪತಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ಬೇಸಿಗೆ ಶಿಬಿರಗಳು ಮಕ್ಕಳ ಮನೋ ವಿಕಸನಕ್ಕೆ ಸಹಕಾರಿ : ನ್ಯಾ.ಶರ್ಮಿಳಾ

Posted On: 01-05-2023 05:42PM

ಉಡುಪಿ : ಮಕ್ಕಳು ರಜೆ ಸಮಯದಲ್ಲಿ ಮನೆಯಲ್ಲಿಯೇ ಮೊಬೈಲ್ ಗೀಳಿಗೆ ಬಲಿಯಾಗುತ್ತಿದ್ದು, ಅವರನ್ನು ಬೇಸಿಗೆ ಶಿಬಿರಗಳಿಗೆ ಕಳುಹಿಸುವುದರಿಂದ, ಅವರು ಇತರೇ ಮಕ್ಕಳೊಂದಿಗೆ ಬೆರೆಯುವ ಮೂಲಕ ಅವರ ವ್ಯಕ್ತಿತ್ವ ವಿಕಸನಕ್ಕೆ ಸಹಕರಿಯಾಗಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಹೇಳಿದರು. ಅವರು ಉಡುಪಿಯ ಬಾಲ ಭವನದಲ್ಲಿ, ರಾಜ್ಯ ಬಾಲಭವನ ಸೊಸೈಟಿ (ರಿ) ಬೆಂಗಳೂರು, ಜಿಲ್ಲಾ ಪಂಚಾಯತ್ ಉಡುಪಿ, ಕಾನೂನು ಸೇವಾ ಪ್ರಾಧಿಕಾರ ಉಡುಪಿ, ಜಿಲ್ಲಾ ಬಾಲ ಭವನ ಸಮಿತಿ ಉಡುಪಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಇವರ ಸಹಯೋಗದಲ್ಲಿ ನಡೆದ, 2023-24 ನೇ ಸಾಲಿನ ಬೇಸಿಗೆ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮತನಾಡಿದರು.

ಬುದ್ದಿವಂತರ ಜಿಲ್ಲೆ ಎಂಬ ಹೆಗ್ಗಳಿಕೆ ಹೊಂದಿರುವ ಉಡುಪಿಯಲ್ಲಿ ಯುವ ಜನತೆಯಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳದ ಸಂಗತಿಯಾಗಿದೆ. ಯುವ ಜನರಲ್ಲಿ ಏಕಾಂಗಿತನ, ಆತ್ಮ ವಿಶ್ವಾಸದ ಕೊರತೆ, ನಕರಾತ್ಮಕ ಚಿಂತನೆಯಿಂದ ಆತ್ಮಹತ್ಯೆಗಳು ಸಂಭವಿಸಲಿದ್ದು, ಇತರೊಂದಿಗೆ ಬೆರೆತು, ವಿವಿಧ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ಆತ್ಮ ವಿಶ್ವಾಸ ಮತ್ತು ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ ಎಂದರು. ಬೇಸಿಗೆ ಶಿಬಿರಗಳ ಮೂಲಕ ಮಕ್ಕಳಲ್ಲಿನ ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ದೊರೆಯುವುದರ ಜೊತೆಗೆ ಮಕ್ಕಳು ವಿನೂತನ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವ ಮೂಲಕ ಮನೋ ವಿಕಾಸ ಹೊಂದಿ, ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಸಾಧ್ಯವಾಗಲಿದೆ. ಬೇಸಿಗೆ ರಜೆಯ ಸದುಪಯೋಗವಾಗಲಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಿವೇಕಾನಂದ, ಸಂಪನ್ಮೂಲ ವ್ಯಕ್ತಿಗಳಾದ ನಿರಂಜನ ಭಟ್, ಹೇಮಲತಾ ರಾವ್, ಸ್ಪೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಬಾಲಭವನದ ಮೇಲ್ವಿಚಾರಕಿ ಶೈಲಾ ಸ್ವಾಗತಿಸಿದರು. ಶ್ವೇತಾ ನಿರೂಪಿಸಿ ವಂದಿಸಿದರು.

ಕಾಪು : ಪಂಚಾಯತ್ ಸದಸ್ಯ ರೋಶನ್ ನೇತೃತ್ವದಲ್ಲಿ ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

Posted On: 01-05-2023 05:22PM

ಕಾಪು : ಯುವ ನಾಯಕ, ಮೊಗವೀರ ಮುಂದಾಳು ಹೆಜಮಾಡಿ ಗ್ರಾಮ ಪಂಚಾಯತ್ ಪಕ್ಷೇತರ ಸದಸ್ಯ ರೋಶನ್ ನೇತೃತ್ವದಲ್ಲಿ ನೂರಾರು ಯುವಕರು ಇಂದು ಕಾಂಗ್ರೆಸ್ ಗೆ ಸೇರ್ಪಡೆಯಾದರು.

ಕಾಪು ರಾಜೀವ ಭವನದಲ್ಲಿ ನಡೆದ ಯುವ ಕಾಂಗ್ರೆಸ್ ಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಮಾತನಾಡಿದ ರೋಶನ್, ಯಾವುದೇ ಕಪ್ಪು ಚುಕ್ಕೆ ಇಲ್ಲದ ಪ್ರಾಮಾಣಿಕ ರಾಜಕಾರಣಿ ವಿನಯ ಕುಮಾರ್ ಸೊರಕೆಯವರ ವ್ಯಕ್ತಿತ್ವಕ್ಕೆ ಮನಸೋತು ಕಾಂಗ್ರೆಸ್ ಸೇರ್ಪಡೆ ಯಾಗುತ್ತಿದ್ದೇವೆ. ರಾಜ್ಯದಲ್ಲಿ 40 % ಸರ್ಕಾರ ಇದ್ರೆ ಬಿಜೆಪಿ ನೇತೃತ್ವದ ಹೆಜಮಾಡಿ ಪಂಚಾಯತ್ ನಲ್ಲಿ 20% ಕಮಿಷನ್ ಸರ್ಕಾರದ ಆಡಳಿತ ನಡೀತಾ ಇದೆ. ಕೇವಲ noc ಗಾಗಿ ಪಂಚಾಯತ್ ಸದಸ್ಯನಾದ ನನ್ನ ಹತ್ರನೇ ಲಂಚ ಕೇಳಿದ್ದಾರೆ. ಪಂಚಾಯತ್ ನಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಾ ಇದೆ. ಪಕ್ಷೇತರನಾಗಿ ನನ್ನನ್ನು ಗೆಲ್ಲಿಸಿದ ನನ್ನ ಗ್ರಾಮಸ್ಥರ ಕೆಲಸ ಆಗ್ತಾ ಇಲ್ಲ. ಇದರಿಂದ ರೋಸಿ ಹೋಗಿ ಕಾಂಗ್ರೆಸ್ ಪಕ್ಷಕ್ಕೆ ನಾನು ನನ್ನ ಸ್ನೇಹಿತರು ಸ್ವ ಇಚ್ಛೆಯಿಂದ ಸೇರ್ಪಡೆ ಗೊಂಡಿದ್ದೀವಿ. ಕರಾವಳಿ ಉದ್ದಕ್ಕೂ ಪಕ್ಷ ಸಂಘಟನೆ ಮಾಡಿ ಸೊರಕೆಯವರನ್ನು ಭಾರೀ ಅಂತರದ ಗೆಲುವಿಗಾಗಿ ನನ್ನ ತಂಡ ಇಂದಿನಿಂದಲೇ ಕೆಲಸ ಮಡುತ್ತೆ ಅಂತಾ ರೋಶನ್ ಹೇಳಿದರು. ಕಾಪು ಭಾಗದ ಕ್ರೀಯಾಶೀಲ ಸಮಾಜಮುಖಿ‌ ಕಾರ್ಯಕರ್ತೆ ಫರ್ಜಾನ ಕಾಪು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಈ ಸಂದರ್ಭ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಮಾತನಾಡಿ ಯುವ ಜನತೆಯ ಆಶೋತ್ತರಗಳಿಗೆ ತುರ್ತು ಸ್ಪಂದಿಸುವ ಕೆಲಸಕ್ಕೆ ನನ್ನ ಮೊದಲ ಆದ್ಯತೆ. ಈಗಾಗಲೇ ನನ್ನ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಕೈಗಾರಿಕಾ ವಲಯವನ್ನು ಸ್ಥಾಪಿಸಿ ಪ್ರತೀ ಮನೆಯಲ್ಲಿ ಒಬ್ಬರಿಗೆ ಉದ್ಯೋಗ ನೀಡುವ ಕೆಲಸವನ್ನು ನಾನು ಮಾಡುತ್ತೇನೆ ಎಂದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ ಯುವ ಶಕ್ತಿಯ ಸದ್ಭಳಕೆಯಾಗಬೇಕು. ಯುವಶಕ್ತಿ ಹೆಚ್ಚು ಕೆಲಸ ಮಾಡಿದಷ್ಟು ಗೆಲುವಿನ ವೇಗ ಜಾಸ್ತಿಯಾಗುತ್ತದೆ. ಸ್ವಚ್ಚ ಮನಸ್ಸಿನ ರಾಜಕಾರಣಿ ವಿನಯ ಕುಮಾರ್ ಸೊರಕೆಯವರ ಭಾರೀ ಅಂತರದ ಗೆಲುವಿಗಾಗಿ ಯುವಶಕ್ತಿ ಪ್ರಯತ್ನಿಸಬೇಕಾಗಿದೆ ಎಂದರು.

ಕೆ.ಪಿ.ಸಿ.ಸಿ ಕಾರ್ಯದರ್ಶಿ ರಾಜಶೇಖರ ‌ಕೋಟ್ಯಾನ್ , ದೇವಿಪ್ರಸಾದ್ ಶೆಟ್ಟಿ ‌ಬೆಳಪು , ಕೆ.ಪಿ.ಸಿ.ಸಿ ಸಂಯೋಜಕ ನವೀನಚಂದ್ರ ಜೆ ಶೆಟ್ಟಿ. ಕೆ.ಪಿ.ಸಿ.ಸಿ ಸಂಯೋಜಕ ಅಬ್ದುಲ್ ಅಜೀಜ್ ‌, ರಾಜ್ಯ ಮೀನುಗಾರರ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಅಖೀಲೇಶ್ ಕೋಟ್ಯಾನ್ , ಜಿಲ್ಲಾ‌ ಕಾಂಗ್ರೆಸ್ ಮೀನುಗಾರರ ಸಮಿತಿ ಅಧ್ಯಕ್ಷ ವಿಶ್ವಾಸ್ ಅಮೀನ್ ‌,‌ ಪ್ರಚಾರ ಸಮಿತಿ ಅಧ್ಯಕ್ಷ ಜಿತೇಂದ್ರ ಪೂಟಾರ್ಡೊ, ಕಾಪು‌‌ ಬ್ಲಾಕ್ ಯುವ ಕಾಂಗ್ರೆಸ್ ‌ಅಧ್ಯಕ್ಷ ರಮೀಜ್‌ ಹುಸೇನ್ , ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತಾ ಶೆಟ್ಟಿ , ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ‌ವೈ ಸುಕುಮಾರ್ , ದಲಿತ ಮುಖಂಡ ಶೇಖರ್ ಹೆಜಮಾಡಿ , ಕಾಪು ಬ್ಲಾಕ್ ‌ಹಿಂದುಳಿದ ವರ್ಗದ ‌ಅಧ್ಯಕ್ಷ ದೀಪಕ್ ಎರ್ಮಾಳ್ ಉಪಸ್ಥಿತರಿದ್ದರು. ಸಂತೋಷ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕಾಪು : ಪುರಸಭೆ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿಯಿಂದ ಮತಯಾಚನೆ

Posted On: 01-05-2023 05:09PM

ಕಾಪು : ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿರುವ ಗುರ್ಮೆ ಸುರೇಶ್ ಶೆಟ್ಟಿ ಇಂದು ಕಾಪು ಪುರಸಭೆ ವ್ಯಾಪ್ತಿಯಲ್ಲಿ ಮತ ಯಾಚಿಸಿದರು.

ಈ ಸಂದರ್ಭ ಮಾತನಾಡಿದ ಅವರು ದೇಶವಿಂದು ಸ್ವಾತಂತ್ರ್ಯದ ಅಮೃತಕಾಲದಲ್ಲಿದೆ. ಪ್ರಧಾನ ಮಂತ್ರಿ ಅವರು ದೇಶವನ್ನು ಮುಂಚೂಣಿಗೆ ಕೊಂಡೊಯ್ಯಲು ಅನೇಕ ಸಂಕಲ್ಪ, ದೃಢ ನಿರ್ಧಾರಗಳನ್ನು ಮಾಡಿದ್ದಾರೆ. ಇವೆಲ್ಲವನ್ನು ಈಡೇರಿಸಲು ಅವರ ಕೈ ಬಲಪಡಿಸುವುದು ಅಗತ್ಯ. ಆದುದರಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಮರಳುವಂತೆ ಮಾಡಲು ಪಕ್ಷದ ಅಭ್ಯರ್ಥಿಗಳು ಗೆಲ್ಲಬೇಕಾಗಿದೆ. ತಮಗೆ ಮತ ನೀಡಿ ಗೆಲ್ಲಿಸಿದ್ದಲ್ಲಿ ಮುಂದಿನ ಐದು ವರ್ಷ ಜನತೆಯ ಸೇವೆಗೆ ತಮ್ಮ ಬದುಕು ಪಣವಾಗಿರುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಟ್ಟಾರ್ ರತ್ನಾಕರ್ ಹೆಗ್ಡೆ, ಸಂದೀಪ್ ಶೆಟ್ಟಿ, ಸುರೇಶ್ ದೇವಾಡಿಗ, ಲತಾ ದೇವಾಡಿಗ, ಅನಿಲ್ ಕುಮಾರ್, ಮೋಹನ್ ಕಾಪು, ಗಂಗಾಧರ ಸುವರ್ಣ, ರಂಜಿತ್ ಸುವರ್ಣ, ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

ವಿದ್ಯಾರ್ಥಿ ಜೀವನದಲ್ಲಿ ಜನರಿಗೆ ಭೂಮಿಯ ಹಕ್ಕನ್ನು ಕೊಟ್ಟವರು ವಿನಯ್ ಕುಮಾರ್ ಸೊರಕೆ: ಐವನ್ ಡಿಸೋಜ

Posted On: 01-05-2023 12:43PM

ಉಡುಪಿ: ವಿದ್ಯಾರ್ಥಿ ಜೀವನದಲ್ಲೇ ಭೂ ನ್ಯಾಯ ಮಂಡಳಿ ಸದಸ್ಯರಾಗಿ ಜನರಿಗೆ ಭೂಮಿಯ ಹಕ್ಕನ್ನು ಕೊಟ್ಟ ಏಕೈಕ ರಾಜಕಾರಣಿ ಇದ್ರೆ ಅದು ವಿನಯ ಕುಮಾರ್ ಸೊರಕೆ ಅಂತಾ ವಿಧಾನ‌ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ. ಪಡುಬಿದ್ರಿಯ ಕಂಚಿನಡ್ಕದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಸಮಾಜ ಸೇವಕರಂದರೆ ಸಮಾಜದ ಜೊತೆ ಇರಬೇಕು. ತನ್ನ ಸಮಾಜ ಸೇವೆಯ ಕಾರ್ಯದಲ್ಲಿ ವಿನಯತೆಯಿಂದ ವಿನಯವಂತರಾಗಿ ಕಳೆದ ಚುನಾವಣೆಯಲ್ಲಿ 5 ವರ್ಷಗಳ ಕಾಲ ಸೋಲಿಸಿ ರಜೆ ಕೊಟ್ಟರೂ ನಿಮ್ಮ ಜೊತೆ ಇದ್ದು ನಿಮ್ಮ ಸಮಸ್ಯೆ ಗೆ ಹೋರಾಟಕ್ಕೆ ಧ್ವನಿಯಾದವರು ವಿನಯ ಕುಮಾರ್ ಸೊರಕೆಯವರು ಮಾತ್ರ. ಮತದಾನ ಮಾಡುವ ಸಂದರ್ಭ ಮತದಾರರಿಗೆ ಅಂಜಿಕೆ, ಅಳುಕು ಇರಬಾರದು. ಈ ಬಾರಿ ವಿನಯ ಕುಮಾರ್ ಸೊರಕೆಯವರಿಗೆ ಮತ ನೀಡಿ 25 ಸಾವಿರ ಮತಗಳ‌ ಅಂತರದಲ್ಲಿ ಗೆಲ್ಲಿಸಬೇಕು. ಅಂತಾ ಐವನ್ ಡಿಸೋಜ ಹೇಳಿದ್ದಾರೆ.

ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳಿ ಮಾತನಾಡಿ ತಿನ್ನೋ ಉಪ್ಪಿಗೂ ಕೂಡಾ ಜಿ ಎಸ್ ಟಿ ಯನ್ನು ಹಾಕಿ ಬಡವರನ್ನು ಮತ್ತೆ ಬಡತನಕ್ಕೆ ದೂಡಿದ ಬಿಜೆಪಿ ಸರ್ಕಾರ ಇದೀಗ ಅಭಿವೃದ್ಧಿಯ ಮಂತ್ರ ಜಪಿಸಿ ಜನರನ್ನು ಮರಳು ಮಾಡುವ ಕಾರ್ಯಕ್ಕೆ ಕೈ ಹಾಕಿದೆ. ಆಧಾರ್ ಕಾರ್ಡ್ ಪಾನ್ ಕಾರ್ಡ್ ಲಿಂಕ್ ಮೂಲಕ 13 ಸಾವಿರ ಕೋಟಿ ರೂ ಗುಳುಂ ಮಾಡಲಾಗಿದೆ. ಬಿಜೆಪಿಗೆ ವಿನಯ ಕುಮಾರ್ ಸೊರಕೆಯವರನ್ನು ದೂಷಿಸಲು ಯಾವುದೇ ಕಾರಣಗಳು ಸಿಗ್ತಾ ಇಲ್ಲ. ಧರಿಸುವ ಬಟ್ಟೆಯಷ್ಟು ಶುಭ್ರವಾಗಿದೆ ಅವರ ವ್ಯಕ್ತಿತ್ವ. ಜನರ ವಿಶ್ವಾಸಕ್ಕೆ ನಂಬಿಕೆಗೆ ಬೆಲೆ ಕೊಡುವ ರಾಜಕಾರಣಿ. ಕಾಪುವಿನ ರಿಪೋರ್ಟ್ ಕಾರ್ಡ್ ನಿಮ್ಮ ಮುಂದಿದೆ.ಊರಿನ ಅಭಿವೃದ್ಧಿಗೆ ರಾಜಕಾರಣ ಮಾಡಿದ ಏಕೈಕ ವ್ಯಕ್ತಿ ಸೊರಕೆಯವರು. ಪಕ್ಷದ ಆಂತರಿಕ ಕಾರಣಕ್ಕಾಗಿ ಮಂತ್ರಿ ಸ್ಥಾನ ಹೋದ್ರು ಬೇಸರ ಪಡಿಸದೆ ಕಾಪು ತಾಲೂಕು ಆಗಲೇಬೇಕು ಅಂತಾ ಅನುದಾನ ತಂದವರು.ಪ್ರಾಂಜಲ ಮನಸ್ಸಿನಿಂದ ಪ್ರೀತಿಯಿಂದ ಮಮತೆಯಿಂದ ಸೊರಕೆಯವರ ಪರ ಕಾರ್ಯಕರ್ತರಯ ಕೆಲಸ ಮಾಡಬೇಕಿದೆ. ಸೊರಕೆಯವರ ವಿರೋಚಿತ ಗೆಲುವಿಗಾಗಿ ಕಟಿಬದ್ಧರಾಗಿ ಎಲ್ಲಾ ಸೇರಿ ಹಗಲಿರುಳು ದುಡಿಯಬೇಕು. ಸೋತ ಮೇಲೂ ಅತಿ ಹೆಚ್ಚು ಜನ ಸಂಪರ್ಕವನ್ನು ಇಟ್ಟುಕೊಂಡ‌‌ ಸೊರಕೆಯವರನ್ನು ಕಾಪುವಿನ‌ ಜನ ಕಾಪಾಡಿಕೊಳ್ತಾರೆ. ಅನ್ನೋ‌ ನಂಬಿಕೆ ಇದೆ ಅಂತಾ ಸುಧೀರ್ ಕುಮಾರ್ ಮರೋಳಿ ಹೇಳಿದ್ದಾರೆ.

ಕಾಪು ಕಾಂಗ್ರೆಸ್ ಆಭ್ಯರ್ಥಿ ವಿನಯ್ ಕುಮಾರ್ ಸೊರಕೆ ಮಾತನಾಡಿ ಕಾರ್ಮಿಕರ ಮೇಲೆ ಜಿ ಎಸ್ ಟಿ ತೆರಿಗೆ ಮೂಲಕ‌ ಕಾರ್ಮಿಕರನ್ನು‌ ಬೀದಿಗೆ ತಂದಿದ್ದಾರೆ. ಕಾಪುವಿನ ಪ್ರಣಾಳಿಕೆಯಲ್ಲಿ ಕಾರ್ಮಿಕರಿಗೂ ಹೆಚ್ಚಿನ ಮಹತ್ವ ಕೊಟ್ಟಿದ್ದೇವೆ. ಮತದಾರರ ಮನವೊಲಿಸಿ ಕಾಂಗ್ರೆಸ್ ಕಾರ್ಯಕ್ರಮದ ಬಗ್ಗೆ ತಿಳಿಸಿ ಪ್ರತಿಯೊಬ್ಬರೂ ಅಭ್ಯರ್ಥಿಯಾಗಿ ಕೆಲಸ ಮಾಡಬೇಕು ಅಂತಾ ಸೊರಕೆ ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡರಾದ ರಾಜಶೇಖರ ಕೋಟ್ಯಾನ್, ನವೀನ ಚಂದ್ರ ಶೆಟ್ಟಿ, ನವೀನ ಚಂದ್ರ ಸುವರ್ಣ, ದಿನೇಶ್ ಕೋಟ್ಯಾನ್, ರಮೀಜ್, ವಿಶ್ವಾಸ್ ಅಮೀನ್, ಜಿತೇಂದ್ರ ಫುಟಾರ್ಡೊ, ಶೇಖರ ಹೆಜ್ಮಾಡಿ, ಕರುಣಾಕರ ಪೂಜಾರಿ, ಸುಧೀರ್ ಕರ್ಕೇರ, ಯಶವಂತ್,ಅಖಿಲೇಶ್ ಕೋಟ್ಯಾನ್, ದೇವಿ ಪ್ರಸಾದ್ ಶೆಟ್ಟಿ, ಶರ್ಪುದ್ದೀನ್ ಶೇಖ್, ದೀಪಕ್ ಕುಮಾರ್ ಎರ್ಮಾಳ್, ಸುಕುಮಾರ್, ಅಜೀಜ್, ರಮೀಜ್ ಉಪಸ್ಥಿತರಿದ್ದರು.

ಉಡುಪಿ : ಮಕ್ಕಳ ಚಲನಚಿತ್ರ ಸ್ಕೂಲ್ ಲೀಡರ್ - ಬಾಲ ಕಲಾವಿದರ ಆಯ್ಕೆ ಪ್ರಕ್ರಿಯೆಗೆ ಚಾಲನೆ

Posted On: 01-05-2023 12:34PM

ಉಡುಪಿ : ಮಕ್ಕಳು ಪ್ರತಿಭಾವಂತರು. ಪಾಠ ಪ್ರವಚನದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಮಕ್ಕಳು ತೊಡಗಬೇಕಾಗಿದೆ. ಹಣ ಸಂಪಾದನೆಗಾಗಿ ಚಲನಚಿತ್ರವಾಗಬಾರದು ಸಮಾಜಕ್ಕೆ ಸಂದೇಶ ಕೊಡುವ ಹಿನ್ನೆಲೆಯ ಸದಭಿರುಚಿಯ ಚಿತ್ರವನ್ನು ಮಾಡಬೇಕಾಗಿದೆ. ಆಯ್ಕೆ ಇಂದು ಆಗದಿದ್ದರೂ ನಾಳೆ ಆಗುತ್ತದೆ ಎಂಬ ಭರವಸೆ ನಮ್ಮಲ್ಲಿರಬೇಕು. ಎಂದು ಬಡಗುಬೆಟ್ಟು ಕೋ ಆಪರೇಟಿವ್ ಸೊಸೈಟಿಯ ಕಾರ್ಯನಿರ್ವಾಹಕ ಬಿ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.

ಅವರು ಬಡಗುಬೆಟ್ಟು ಕೋ ಆಪರೇಟಿವ್ ಸೊಸೈಟಿಯ ಜಗನ್ನಾಥ ಶೆಟ್ಟಿ ಸಭಾ ಭವನದಲ್ಲಿ ಜರಗಿದ ಸನ್ ಮ್ಯಾಟ್ರಿಕ್ಸ್ ಅರ್ಪಿಸುವ ಫಿಲಂ ವ್ಹೀಲ್ ಸ್ಟುಡಿಯೋಸ್ ಸಹಯೋಗದೊಂದಿಗೆ ಸದ್ಯದಲ್ಲಿ ಚಿತ್ರೀಕರಣಗೊಳ್ಳಲಿರುವ ಸ್ಕೂಲ್ ಲೀಡರ್ ಚಿತ್ರದ ಬಾಲ ಕಲಾವಿದರ ಆಯ್ಕೆ ಪ್ರಕ್ರಿಯೆಯನ್ನು ಉದ್ಘಾಟಿಸಿ ಮಾತನಾಡಿದರು.

ಕಾಂತಾರ ಚಿತ್ರದಲ್ಲಿ ನಟಿಸಿದ ಚಂದ್ರಕಲಾ ರಾವ್ ಮಾತನಾಡಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಶುಭ ಹಾರೈಸಿದರು. ಚಿತ್ರ ನಿರ್ಮಾಪಕರಾದ ಸತ್ಯೇಂದ್ರ ಪೈ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಸುದರ್ಶನ್ ಎಸ್ ಪುತ್ತೂರು, ರೂಪದರ್ಶಿ ವಿದ್ಯಾಸರಸ್ವತಿ, ನಟಿಯರಾದ ಚಂದ್ರಕಲಾ ರಾವ್, ರಂಜಿತಾ ಶೇಟ್, ಪತ್ರಕರ್ತ ಶೇಖರ ಅಜೆಕಾರು, ಚಿತ್ರದ ನಿರ್ದೇಶಕ ರಝಾಕ್ ಪುತ್ತೂರು, ಅಕ್ಷತ್, ಮೋಹನ್ ಪಡ್ರೆ, ಮೈತ್ರಿ, ದೀಪಕ್ ಬೀರ ಉಪಸ್ಥಿತರಿದ್ದರು.

ಸಾನ್ವಿ ಎಸ್ ಆಚಾರ್ಯ ಪ್ರಾರ್ಥಿಸಿದರು ರಝಾಕ್ ಪುತ್ತೂರು ಪ್ರಸ್ತಾವನೆಗೈದರು. ಪತ್ರಕರ್ತ ಪ್ರಕಾಶ್ ಸುವರ್ಣ ನಿರೂಪಿಸಿದರು. ರಂಗ ನಟ ನಾಗೇಶ್ ಕಾಮತ್ ವಂದಿಸಿದರು.

ಶ್ರೀ ದೇವಿ ಭಜನಾ ಮಂಡಳಿ ಮಂಡೇಡಿ ಇನ್ನಂಜೆ : 45ನೇ ವಾರ್ಷಿಕ ಭಜನಾ ಮಂಗಳೋತ್ಸವ ಸಂಪನ್ನ

Posted On: 30-04-2023 06:04PM

ಕಾಪು : ಶ್ರೀ ದೇವಿ ಭಜನಾ ಮಂಡಳಿ (ರಿ.) ಮಂಡೇಡಿ ಇನ್ನಂಜೆ ಇದರ 45ನೇ ವಾರ್ಷಿಕ ಭಜನಾ ಮಂಗಳೋತ್ಸವವು ಎಪ್ರಿಲ್ 28 ರಂದು ನಡೆಯಿತು. ಬೆಳಿಗ್ಗೆಯಿಂದ ಸಂಜೆಯವರೆಗೆ ಸುಮಾರು 10 ಭಜನಾ ತಂಡಗಳಿಂದ ನಿರಂತರ ಭಜನಾ ಸೇವೆ ನಡೆಯಿತು.

ಮಧ್ಯಾಹ್ನ ಸತ್ಯನಾರಾಯಣ ಪೂಜೆ ಹಾಗೂ ಅನ್ನಸಂತರ್ಪಣೆ ಮತ್ತು ರಾತ್ರಿ ಘಂಟೆ 7:30ಕ್ಕೆ ಭಜನಾ ಮಂಗಳೋತ್ಸವ ಸಂಪನ್ನಗೊಂಡು, ಸ್ಥಳೀಯ ಮಕ್ಕಳಿಗೆ ನೃತ್ಯ ಕಾರ್ಯಕ್ರಮ, ಗಣ್ಯರಾದ ಕೊಡುಗೈ ದಾನಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ದಯಾನಂದ ಶೆಟ್ಟಿ ದಂಪತಿ, ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಸಹಕರಿಸುತ್ತಿರುವ ದಯಾನಂದ ವಿಠ್ಠಲ ಶೆಟ್ಟಿ ದಂಪತಿ ಹಾಗೂ ಗ್ರಾಮದ ಹಿರಿಯರಾದ ಗೋಪಾಲ ಪೂಜಾರಿ, ಜಯ ಶೆಟ್ಟಿ, ಮುದ್ದು ಮುಖಾರಿ (ಪಾತ್ರಿ)ಯವರು ನೀಡಿರುವ ಸೇವೆಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ದಯಾನಂದ ಶೆಟ್ಟಿ "ಹರಿ ಕೀರ್ತನಾಶ್ರಮ" ಮಂಡೇಡಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ವಿ.ಜಿ ಶೆಟ್ಟಿ ಮಂಡೇಡಿ, ಸಮಾಜರತ್ನ ಜಿ. ಲೀಲಾಧರ ಶೆಟ್ಟಿ, ಗೌರವ ಸಲಹೆಗಾರರಾದ ಜೀವನ್ ಪ್ರಕಾಶ್ ಶೆಟ್ಟಿ, ಗೌರವಾಧ್ಯಕ್ಷರಾದ ರಮೇಶ್ ಕೆ. ಶೆಟ್ಟಿ, ಶಿವರಾಮ ಜೆ. ಶೆಟ್ಟಿ, ಕಾರ್ಯದರ್ಶಿ ಕೃಷ್ಣ ವಿ. ಶೆಟ್ಟಿ, ಜೊತೆ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ, ಕೋಶಾಧಿಕಾರಿ ಸಂತೋಷ್ ಎಸ್.ಶೆಟ್ಟಿ, ಸಂತೋಷ್ ಎನ್. ಶೆಟ್ಟಿ ಮತ್ತು ಭಜನಾ ಮಂಡಳಿಯ ಎಲ್ಲಾ ಸದಸ್ಯರು ಹಾಗು ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ನಿರ್ಮಲ್ ಕುಮಾರ್ ಹೆಗ್ಡೆ ಹಾಗೂ ರೇಷ್ಮಾ ಸಿ. ಶೆಟ್ಟಿ ನಿರ್ವಹಿಸಿದರು, ಮಂಡಳಿಯ ಅಧ್ಯಕ್ಷರಾದ ಲಕ್ಷ್ಮಣ್ ಕೆ.ಶೆಟ್ಟಿ ಸ್ವಾಗತಿಸಿ ಧನ್ಯವಾದಗೈದರು. ನಂತರ ಕಿನ್ನಿಗೋಳಿ ಕಲಾವಿದರಿಂದ ತುಳು ಹಾಸ್ಯಮಯ ನಾಟಕ "ತೊಟ್ಟಿಲು" ಪ್ರದರ್ಶನಗೊಂಡಿತು.

ಜಾತಿ ಧರ್ಮ‌ ಇಂದಿನ ಅಗತ್ಯತೆ ಅಲ್ಲ ; ಉದ್ಯೋಗವಿಲ್ಲದೆ ಯುವ ಜನತೆ ಲಂಚದ ಪರಮಾವಧಿಯಿಂದ ಬೇಸತ್ತಿದ್ದಾರೆ : ವಿನಯ್ ಕುಮಾರ್ ಸೊರಕೆ

Posted On: 30-04-2023 05:57PM

ಕಾಪು : ಇಲ್ಲಿನ ಇಂದಿನ‌ ಅಗತ್ಯತೆ ಜಾತಿ ಧರ್ಮ‌ ಅಲ್ಲ. ಅತಿಯಾದ ಬೆಲೆ ಏರಿಕೆಯಿಂದ ಜನತೆ ರೋಸಿ ಹೋಗಿದ್ದಾರೆ. ಉದ್ಯೋಗವಿಲ್ಲದೆ ಯುವ ಜನತೆ ಲಂಚದ ಪರಮಾವಧಿಯಿಂದ ಬೇಸತ್ತು ಹೋಗಿದ್ದಾರೆ ಅಂತಾ ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ. ಅವರು ಕಾಪು ಕ್ಷೇತ್ರದ ಹಿರೇಬೆಟ್ಟು ಪಂಚಾಯತ್ ವ್ಯಾಪ್ತಿಯಲ್ಲಿ ಮನೆಮನೆ ಮತಯಾಚನೆ ಸಂದರ್ಭ ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಆಡಳಿತ ವಿರೋಧಿ ಅಲೆ ಜನರಲ್ಲಿ ಎದ್ದು ಕಾಣ್ತಾ ಇದೆ. ಜನತೆ ಬದಲಾವಣೆಯನ್ನು ಬಯಸಿದೆ. ಕಾಪುವಿನ‌ ತಳಮಟ್ಟದ ಜನತೆಯಲ್ಲಿ ಇದು ಮನೆ ಮಾತಾಗಿದೆ. 40 ವರ್ಷಗಳ‌‌‌ ಕಾಲ ರಾಜಕೀಯ ಬದುಕಿನಲ್ಲಿ‌ ನಾನು‌ ಬಹಳಷ್ಟನ್ನ ಅನುಭವಿಸಿದ್ದೇನೆ. ಶಾಸಕನಾಗಿ, ಪಾರ್ಲಿಮೆಂಟ್ ಸದಸ್ಯನಾಗಿ , ಮಂತ್ರಿಯಾಗಿ ದುಡಿದ ಸಂತೋಷವೂ ಇದೆ. ಅನುಭವವೂ ಇದೆ. ಇದುವರೆಗೆ ಕಾಂಗ್ರೆಸ್ ಪಕ್ಷದಲ್ಲಿದ್ದ ನನಗೆ ಅದೇ ನನ್ನ‌ ಮನೆ. ಈ‌ ಬಾರಿ ನನ್ನನ್ನು ಆಯ್ಕೆಮಾಡಿ 5 ವರ್ಷ ಜನ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಟ್ಟರೆ ಕಾಪು ಕ್ಷೇತ್ರ ವನ್ನು ಜಗತ್ತಿನ ಭೂಪಟದಲ್ಲಿ ಗುರುತಿಸುವಷ್ಟು ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ಸೊರಕೆ ಅಭಿಪ್ರಾಯಪಟ್ಟರು.

ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ನಾರಾಯಣ ಮದಗ, ಇಸ್ಮಾಯಿಲ್, ಸುಲೇಮಾನ್, ರಮೇಶ್, ಸುರೇಖ, ಆಶಾ, ಸುಗುಣ, ರಾಜೇಶ್ವರಿ, ಕ್ರಷ್ಣ, ಆನಂದ, ಸುಧಾಕರ, ಸಂಜೀವ ಮದಗ, ಉಮ್ಮರ್ ಅಲಿ, ದಾನೇಶ್, ಶಾಹೀದ್, ಸುಹೈಬ್ ಉಪಸ್ಥಿತರಿದ್ದರು.