Updated News From Kaup
ಮೇ 20-21 : ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ರೋಡ್ ಶೋ

Posted On: 19-05-2023 09:41PM
ಕಾಪು : ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ಗುರ್ಮೆ ಸುರೇಶ್ ಶೆಟ್ಟಿಯವರ ರೋಡ್ ಶೋ ಮೇ 20, ಶನಿವಾರ ಮತ್ತು ಮೇ 21, ಭಾನುವಾರ ಜರಗಲಿದೆ.
ವಿವರಗಳು : ಮೇ 20 ಶನಿವಾರದಂದು ಬೆಳಿಗ್ಗೆ ಗಂಟೆ 9.30 ಪಡುಕೆರೆ, 10 ಗಂಟೆಗೆ ಕೋಟೆ, 10.15 ಕಟಪಾಡಿ, 10.45 ಉದ್ಯಾವರ ಸಂಪಿಗೆನಗರ, 11.15 ಕಟಪಾಡಿ, 11.30 ಕುರ್ಕಾಲು, 12.00 ಬಂಟಕಲ್ಲು, 12.15 ಶಿರ್ವ, 12.45 ಕುತ್ಯಾರು, 1ಗಂಟೆಗೆ ಮುದರಂಗಡಿ, 1.30 ಪಲಿಮಾರಿನಲ್ಲಿ ನಡೆಯಲಿದೆ. ವಿರಾಮದ ಬಳಿಕ ಮಧ್ಯಾಹ್ನ 2.30 ಕ್ಕೆ ಪಲಿಮಾರು, 3 ಗಂಟೆಗೆ ಪಡುಬಿದ್ರಿ, 3.15 ಹೆಜಮಾಡಿ, 3.30 ಪಡುಬಿದ್ರಿ 3.45 ತೆಂಕ, 4 ಅದಮಾರು, 4.15 ಬೆಳಪು, 4.30 ಎಲ್ಲೂರು ಪಣಿಯೂರು, 4.45 ಉಚ್ಚಿಲ, ಸಂಜೆ 5 ಮುಳೂರು ಫಿಶರೀಸ್ ರಸ್ತೆ, 5.15 ದೀಪಸ್ತoಭ, 5.45 ಕೈಪುಂಜಾಲು, 6ಕ್ಕೆ ಕೋತಲ್ ಕಟ್ಟೆ, ಕಾಪು ಪೇಟೆ, 6.15 ಕೊಂಬಗುಡ್ಡೆ, 6.30 ಮಜೂರು, 7 ಗಂಟೆಗೆ ಕಳತ್ತೂರು ತದನಂತರ ಕುಶಲ ಶೇಖರ ಶೆಟ್ಟಿ ಸಭಾಂಗಣದಲ್ಲಿ ಸಮಾರೋಪ ಮತ್ತು ಭೋಜನದ ವ್ಯವಸ್ಥೆ ಇರಲಿದೆ.
ಎರಡನೇ ದಿನವಾದ ಮೇ 21, ಭಾನುವಾರ ಬೆಳಿಗ್ಗೆ ಗಂಟೆ 9.30 ಬೆಳ್ಳಂಪಳ್ಳಿ ಕುಕ್ಕೆಹಳ್ಳಿ, 9.45 ಕುಕ್ಕೆಹಳ್ಳಿ, 10 ಬಜೆ ರಸ್ತೆ, 10.15 ಬುಕ್ಕಿಗುಡ್ಡೆ, 10.30 ಪೆರ್ಡೂರು, 10.45 ಭೈರಂಪಳ್ಳಿ, 11 ಪಂಚನಬೆಟ್ಟು ರಸ್ತೆ, 11.30 ಮುತ್ತೂರು ರಸ್ತೆ, 12.00 ಕಾಜರಗುತ್ತು, 12.15 ಕೊಡಿಬೆಟ್ಟು, ಓಂತಿಬೆಟ್ಟು ಜಂಕ್ಷನ್, 12.30 ಹಿರಿಯಡ್ಕ, 12.45 ಪುತ್ತಿಗೆ, ಮಧ್ಯಾಹ್ನ 1ಕ್ಕೆ ಹಿರಿಯಡ್ಕದಲ್ಲಿ ಸಭಾ ಕಾರ್ಯಕ್ರಮ ಭೋಜನದ ವಿರಾಮ ತದನಂತರ 2.15 ಮಟ್ಟಾರು, 3 ನಾಲ್ಕುಬೀದಿ, 3.15 ಬೆಳ್ಳೆ, 3.30 ನೆಲ್ಲಿಕಟ್ಟೆ ಕೊಡಂಗಳ, 4 ಕರ್ವಾಲು ನೆಹರೂನಗರ, 4.15 ನೈಲಪಾದೆ ಕುಂತಳನಗರ, 4.30 ದೆಂದೂರುಕಟ್ಟೆ, 4.45 ಅಲೆವೂರು, 5 ಕೆಮ್ತೂರು ರಸ್ತೆ ಕೊರಂಗ್ರಪಾಡಿ, 5.15ಅಲೆವೂರು ಮಣಿಪಾಲ ರಸ್ತೆ, 5.30 ದಶರಥ ನಗರ, 5.45 ಪರ್ಕಳ, 6 ಆತ್ರಾಡಿ, 6.15 ಪರೀಕ, 6.39 ನೆಲ್ಲಿಕಟ್ಟೆ, 7ಗಂಟೆಗೆ ಸಮಾರೋಪ, ಸಭಾಕಾರ್ಯಕ್ರಮ ಮತ್ತು ಭೋಜನದೊಂದಿಗೆ ಮುಕ್ತಾಯವಾಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಶಿರ್ವ : ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ದೃಷ್ಟಿಹೀನರಿಗೆ ಸಹಾಯಕವಾಗುವ ಯಂತ್ರದ ಅಭಿವೃದ್ಧಿ

Posted On: 19-05-2023 08:28PM
ಶಿರ್ವ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಶ್ರೇಯ ಉಡುಪ, ಸ್ನೇಹ ಜೆ ಎಸ್, ತುಳಸಿ ಡಿ ಜೆ ಮತ್ತು ಯಶವಂತ ನಾಯಕ್ ಇವರು ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಪ್ರಾಧ್ಯಾಪಕರಾದ ಚೇತನ್ ಇವರ ಮಾರ್ಗದರ್ಶನದಲ್ಲಿ “ರೋಬೋಟ್ ಅಸಿಸ್ಟೆನ್ಸ್ ಫಾರ್ ವಿಷುವಲೀ ಇಂಪೇರ್ಡ್” ಎಂಬ ಪ್ರಾಜೆಕ್ಟ್ನ್ನು ಅಭಿವೃದ್ಧಿ ಪಡಿಸಿರುತ್ತಾರೆ. ಈ ಪ್ರಾಜೆಕ್ಟ್ಗೆ ಕರ್ನಾಟಕ ಸರಕಾರದ ವೈಜ್ಞಾನಿಕ ಮತ್ತು ತಂತ್ರಜ್ಞಾನ ಮಂಡಳಿಯಿಂದ (KSCST) ಆರ್ಥಿಕ ನೆರವು ದೊರೆತಿದೆ.
ಕಣ್ಣುಗಳು ಮಾನವನ ಅತ್ಯಮೂಲ್ಯವಾದ ಅಂಗ. ದೃಷ್ಟಿಯನ್ನು ಕಳೆದುಕೊಂಡವರು ತಮ್ಮ ದಿನನಿತ್ಯದ ಚಟುವಟಿಕೆಯನ್ನು ನಡೆಸಲು ಬಹಳಷ್ಟು ಕಷ್ಟಪಡುತ್ತಾರೆ. ಈ ಸಮಸ್ಯೆಯನ್ನು ಬಗೆಹರಿಸಲು ವಿದ್ಯಾರ್ಥಿಗಳು ಈ ಪ್ರಾಜೆಕ್ಟ್ನ್ನು ಅಭಿವೃದ್ಧಿಪಡಿಸಿದ್ದಾರೆ. ಈ ರೋಬೋಟ್ ಮೂಲಕ ದೃಷ್ಟಿಯನ್ನು ಕಳೆದುಕೊಂಡವರು ತಮ್ಮ ದಿನನಿತ್ಯದ ಚಟುವಟಿಕೆಗಳಿಗೆ, ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು, ವಸ್ತುಗಳನ್ನು ಗುರುತಿಸಲು ಸಹಾಯಕವಾಗಿದೆ, ಈ ರೋಬೋಟ್ ಧ್ವನಿ ಪ್ರಕ್ರಿಯೆಯನ್ನು ಒಳಗೊಂಡಿದ್ದು ಇದರ ಮೂಲಕ ದೃಷ್ಟಿಯನ್ನು ಕಳೆದುಕೊಂಡವರು ತಮ್ಮ ಕೆಲಸ ಕಾರ್ಯವನ್ನು ನಿರ್ವಹಿಸುತ್ತಾರೆ.
ವಿದ್ಯಾರ್ಥಿಗಳ ಈ ಯೋಜನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್, ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಮುಖ್ಯಸ್ಥರು ಅಭಿನಂದಿಸಿರುತ್ತಾರೆ.
ಮೇ 20 ಮತ್ತು 21 : ಉಡುಪಿ ಜಿಲ್ಲೆಯಲ್ಲಿ ಸಿಇಟಿ ಪರೀಕ್ಷೆ ಬರೆಯಲಿದ್ದಾರೆ 5712 ವಿದ್ಯಾರ್ಥಿಗಳು

Posted On: 19-05-2023 08:10PM
ಉಡುಪಿ : ಪ್ರಸಕ್ತ ಸಾಲಿನ ಸಿಇಟಿ ಪರೀಕ್ಷೆಗಳು ಮೇ 20 ಮತ್ತು 21 ರಂದು ನಡೆಯಲಿದ್ದು, ಇದಕ್ಕಾಗಿ ಉಡುಪಿಯಲ್ಲಿ 6, ಕಾರ್ಕಳದಲ್ಲಿ 2, ಕುಂದಾಪುರದಲ್ಲಿ 2 ಹಾಗೂ ಬ್ರಹ್ಮಾವರದಲ್ಲಿ 2 ಸೇರಿದಂತೆ ಒಟ್ಟು 12 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು 5712 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ (ಪ್ರಭಾರ) ಪ್ರಸನ್ನ ಹೆಚ್ ತಿಳಿಸಿದರು. ಅವರು ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ, 2023 ನೇ ಸಾಲಿನ ಸಿಇಟಿ ಪರೀಕ್ಷೆ ಮತ್ತು ದ್ವಿತೀಯ ಪಿ.ಯು.ಸಿ ಪೂರಕ ಪರೀಕ್ಷೆ ನಡೆಸುವ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಿಇಟಿ ಪರೀಕ್ಷೆ ಕುರಿತು ಪ್ರಶ್ನೆಪತ್ರಿಕೆಯನ್ನು ಜಿಲ್ಲಾ ಖಜಾನೆಯಲ್ಲಿ ಸೂಕ್ತ ಪೊಲೀಸ್ ಭದ್ರತೆಯಲ್ಲಿ ಇಡುವಂತೆ ತಿಳಿಸಿದ ಅವರು, ಖಜಾನೆಯಲ್ಲಿ ಸಿಸಿಟಿವಿ ವ್ಯವಸ್ಥೆ ಅಳವಡಿಸುವಂತೆ ಹಾಗೂ ಪ್ರಶ್ನೆ ಪತ್ರಿಕೆ ವಿತರಣೆಗೆ ನೇಮಿಸಿರುವ ತಾಲೂಕುಗಳ ತಹಶೀಲ್ದಾರ್ಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಪ್ರಾಂಶುಪಾಲರನ್ನು ಒಳಗೊಂಡ ತ್ರಿಸದಸ್ಯ ಸಮಿತಿ ಸದಸ್ಯರ ತಂಡಗಳು ಪೊಲೀಸ್ ಭದ್ರತೆಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ನಿಗಧಿತ ಸಮಯಕ್ಕೆ ಸರಿಯಾಗಿ ತಲುಪಿಸುವಂತೆ ಸೂಚನೆ ನೀಡಿದರು. ಪ್ರತೀ ಪರೀಕ್ಷಾ ಕೇಂದ್ರಕ್ಕೆ ವೀಕ್ಷಕರನ್ನು ಹಾಗೂ ಎಲ್ಲಾ ಪರೀಕ್ಷಾ ಕೇಂದ್ರಗಳ ಕೊಠಡಿಗಳಿಗೆ ಸಿಸಿ ಕೆಮರಾ ಗಳ ಅಳವಡಿಕೆ ಮತ್ತು ಕೊಠಡಿ ಮೇಲ್ವಿಚಾರಕನ್ನು ನೇಮಿಸಲಾಗುವುದು ಎಂದರು. ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀ. ಪ್ರದೇಶವನ್ನು ನಿಷೇಧಿತ ಸ್ಥಳವೆಂದು ಘೋಷಿಸಿ, ಸೂಕ್ತ ಪೊಲೀಸ್ ಭದ್ರತೆ ನೀಡುವಂತೆ ಪೊಲೀಸ್ ಇಲಾಖೆಗೆ ಹಾಗೂ ಮುಂಜಾಗ್ರತೆಯಾಗಿ ಎಲ್ಲಾ ಕೇಂದ್ರಗಳಿಗೆ ಆರೋಗ್ಯ ಸಹಾಯಕರನ್ನು ನೇಮಿಸುವಂತೆ ಆರೋಗ್ಯ ಇಲಾಖೆಗೆ ಮತ್ತು ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಯವಾಗದಂತೆ ಎಚ್ಚರವಹಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಿಇಟಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಯಾವುದೇ ರೀತಿಯ ವಾಚ್ಗಳು, ಮೊಬೈಲ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳು, ತುಂಬು ತೋಳಿನ ಶರ್ಟ್ ಹಾಗೂ ಆಭರಣಗಳನ್ನು ಧರಿಸುವುದನ್ನು ನಿಷೇಧಿಸಲಾಗಿದ್ದು, ಪರೀಕ್ಷೆಗಳು ಆರಂಭವಾಗುವ ಸಮಯಕ್ಕಿಂತ ಸಾಕಷ್ಟು ಮುಂಚಿತವಾಗಿ ವಿದ್ಯಾರ್ಥಿಗಳು ಕೇಂದ್ರದಲ್ಲಿ ಹಾಜರಿರುವಂತೆ ಹಾಗೂ ತಮ್ಮ ಪರೀಕ್ಷಾ ಪ್ರವೇಶ ಪತ್ರದ ಜೊತೆ ಯಾವುದಾದರೊಂದು ಗುರುತಿನ ಚೀಟಿಯನ್ನು (ಕಾಲೇಜಿನ ಗುರುತಿನ ಚೀಟಿ, ಬಸ್ ಪಾಸ್, ಡ್ರೈವಿಂಗ್ ಲೈಸೆನ್ಸ್, ಪಾಸ್ಪೋರ್ಟ್, ಆಧಾರ್ ಕಾರ್ಡ್, ಪಾನ್ ಕಾರ್ಡ್) ತರುವಂತೆ ತಿಳಿಸಿದರು. ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿರುವ ಸಿಬ್ಬಂದಿಗಳು ತಮ್ಮ ಕರ್ತವ್ಯಕ್ಕೆ ಗೈರು ಹಾಜರಾಗದಂತೆ ಅಥವಾ ಬೇರೆಯವನ್ನು ನಿಯೋಜಿಸದಂತೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಪರೀಕ್ಷೆ ಸಂದರ್ಭದಲ್ಲಿ ಯಾವುದೇ ಗೊಂದಲ ಉಂಟಾಗದಂತೆ, ಪರೀಕ್ಷೆಯನ್ನು ಸಮರ್ಥವಾಗಿ ಮತ್ತು ಅತ್ಯಂತ ಸುವ್ಯವಸ್ಥಿತವಾಗಿ ನಡೆಸುವಂತೆ ನಿರ್ದೇಶನ ನೀಡಿದರು.
ವಿಕಲಚೇತನರಿಗೆ ವಿವಿಧ ಸೌಲಭ್ಯ: ಅರ್ಜಿ ಆಹ್ವಾನ

Posted On: 19-05-2023 07:53PM
ಉಡುಪಿ : ಪ್ರಸಕ್ತ ಸಾಲಿನಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಜಿಲ್ಲೆಯ ಅಂಗವಿಕಲರಿಗಾಗಿ, ಸರ್ಕಾರ ಅನುಷ್ಠಾನಗೊಳಿಸಿರುವ ಯೋಜನೆಗಳಾದ ವಿದ್ಯಾರ್ಥಿವೇತನ ಮತ್ತು ಪ್ರತಿಭಾ ಪ್ರೋತ್ಸಾಹಧನ, ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ, ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ಟಾಪ್, ಅಂಗವಿಕಲರ ದೈನಂದಿನ ಚಟುವಟಿಕೆಗಳಿಗೆ ಅಗತ್ಯವಿರುವ ಸಾಧನ ಸಲಕರಣೆ, ನಿವಾರಣಾ ಶಸ್ತ್ರಚಿಕಿತ್ಸೆಗೆ ವೈದ್ಯಕೀಯ ನೆರವು, ವಿಕಲಚೇತನರ ಬಸ್ ಪಾಸ್, ಸ್ವಯಂ ಉದ್ಯೋಗಕ್ಕಾಗಿ ಶೇ. 50 ರಷ್ಟು ಬ್ಯಾಂಕ್ ಸಾಲ ಮತ್ತು ಶೇ. 50 ಸಬ್ಸಿಡಿ ಮೂಲಕ ಆಧಾರ ಸಾಲ ಯೋಜನೆ, ಯಂತ್ರಚಾಲಿತ ದ್ವಿ-ಚಕ್ರ ವಾಹನ, ವಿಕಲಚೇತನ ವ್ಯಕ್ತಿಯನ್ನು ವಿವಾಹವಾಗುವ ಸಾಮಾನ್ಯ ವ್ಯಕ್ತಿಗೆ ವಿವಾಹ ಪ್ರೋತ್ಸಾಹಧನ, ಅಂಧ ಮಹಿಳೆಗೆ ಜನಿಸುವ ಮೊದಲನೇ ಮತ್ತು ಎರಡನೇ ಮಗುವಿನ ಪಾಲನೆಗಾಗಿ ಶಿಶುಪಾಲನಾ ಭತ್ಯೆ, ಶ್ರವಣ ದೋಷವುಳ್ಳ ವಿಕಲಚೇತನ ವ್ಯಕ್ತಿಗಳಿಗೆ ಹೊಲಿಗೆಯಂತ್ರ, ಅಂಧ ವಿದ್ಯಾರ್ಥಿಗಳಿಗೆ ಬ್ರೆöÊಲ್ಕಿಟ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಅರ್ಹ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸಿ ಬ್ಲಾಕ್, ತಳಮಹಡಿ, ಸಿಂಡಿಕೇಟ್ ಬ್ಯಾಂಕ್ ಹತ್ತಿರ, ಜಿಲ್ಲಾ ಪಂಚಾಯತ್ ವಿಭಾಗ, ರಜತಾದ್ರಿ, ಮಣಿಪಾಲ ದೂರವಾಣಿ ಸಂಖ್ಯೆ: 0820-2574810, 2574811 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈತರು ಪ್ರೋತ್ಸಾಹಧನ ಪಡೆಯಲು ಇ-ಕೆವೈಸಿ ಕಡ್ಡಾಯ

Posted On: 19-05-2023 07:49PM
ಉಡುಪಿ : ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪಿ.ಎಂ.ಕಿಸಾನ್ ಯೋಜನೆಯಡಿ ಪ್ರೋತ್ಸಾಹಧನ ಪಡೆಯಲು ಫಲಾನುಭವಿ ರೈತರು ಇ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದ್ದು, ಇ-ಕೆವೈಸಿ ಮಾಡಿಸಲು ಬಾಕಿ ಇರುವ ರೈತ ಫಲಾನುಭವಿಗಳಿಗೆ ಯೋಜನೆಯ ಮುಂದಿನ ಕಂತು ಬಿಡುಗಡೆಯಾಗುವುದಿಲ್ಲ.
ಕೃಷಿ ಇಲಾಖೆಯ ವತಿಯಿಂದ ಈಗಾಗಲೇ ಈ ಕುರಿತು ಮಾಹಿತಿ ನೀಡಲಾಗಿದ್ದು, ಇದು ಕೊನೆಯ ಅವಕಾಶವಾಗಿದ್ದು, ಕೂಡಲೇ ರೈತರು ತಮ್ಮ ಆಧಾರ್ ಕಾರ್ಡ್, ಆಧಾರ್ ಕಾರ್ಡ್ ಜೋಡಣೆಯಾಗಿರುವ ಮೊಬೈಲ್ ನಂಬರ್ ದಾಖಲೆಗಳೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಕೇಂದ್ರ ಅಥವಾ ಸಾಮಾನ್ಯ ಸೇವಾ ಕೇಂದ್ರದಲ್ಲಿ ಇ-ಕೆವೈಸಿ ಮಾಡಿಸಿಕೊಳ್ಳಬಹುದಾಗಿದೆ ಎಂದು ಉಡುಪಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2000 ರೂಪಾಯಿ ನೋಟು ಚಲಾವಣೆ ಹಿಂಪಡೆಯುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಘೋಷಣೆ

Posted On: 19-05-2023 07:27PM
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, 2,000 ರೂಪಾಯಿ ಮುಖಬೆಲೆಯ ನೋಟನ್ನು ಹಿಂತೆಗೆದುಕೊಂಡಿದೆ. ನೋಟುಗಳು ಸೆಪ್ಟೆಂಬರ್ 30 ರವರೆಗೆ ಕಾನೂನುಬದ್ಧವಾಗಿ ಮುಂದುವರಿಯುತ್ತದೆ.
ಸಾರ್ವಜನಿಕರಿಗೆ ಸಾಕಷ್ಟು ಸಮಯವನ್ನು ಒದಗಿಸಲು, ಎಲ್ಲಾ ಬ್ಯಾಂಕುಗಳಲ್ಲಿ ಸೆಪ್ಟೆಂಬರ್ 30, 2023 ರೊಳಗೆ ರೂ. 2000 ಮುಖಬೆಲೆಯ ನೋಟನ್ನು ಬ್ಯಾಂಕ್ನಲ್ಲಿ ಠೇವಣಿ ಮಾಡಿಕೊಳ್ಳಬಹುದು ಅಥವಾ ವಿನಿಮಯ ಮಾಡಿಕೊಳ್ಳಬಹುದು. ಅಕ್ಟೋಬರ್ 1, 2023 ರಿಂದ 2,000 ರೂಪಾಯಿ ನೋಟುಗಳು ಚಲಾವಣೆ ಸ್ಥಗಿತಗೊಳ್ಳಲಿದೆ.
ಈ ಬಗ್ಗೆ ಬ್ಯಾಂಕ್ಗಳಿಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ನೀಡಲಾಗಿದೆ. ತಕ್ಷಣವೇ ಜಾರಿಗೆ ಬರುವಂತೆ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ನೀಡುವುದನ್ನು ನಿಲ್ಲಿಸುವಂತೆ ಆರ್ಬಿಐ ಬ್ಯಾಂಕ್ಗಳಿಗೆ ಸೂಚಿಸಿದೆ.
ಕಾಪು ವಿದ್ಯಾನಿಕೇತನ ಸಮೂಹ ಸಂಸ್ಥೆ : ನೂರು ಶೇಕಡಾ ಫಲಿತಾಂಶ - ವಿದ್ಯಾರ್ಥಿಗಳಿಗೆ ಅಭಿನಂದನೆ, ಬೀಳ್ಕೊಡುಗೆ ಸಮಾರಂಭ

Posted On: 19-05-2023 06:51PM
ಕಾಪು : ಆತ್ಮವಿಶ್ವಾಸವೇ ಜೀವನಕ್ಕೆ ಮಾರ್ಗದರ್ಶನ. ಇದೊಂದು ಕೌಶಲ್ಯ. ಆಭರಣದಂತೆ ಆತ್ಮವಿಶ್ವಾಸ ನಮ್ಮನ್ನು ಅಲಂಕರಿಸುವಂತಿರಬೇಕು. ವಿದ್ಯಾರ್ಥಿ ದಿಸೆಯಲ್ಲಿಯೇ ಕಠಿಣ ಪರಿಶ್ರಮದ ಮೂಲಕ ಸಾಧನೆಯ ದಾರಿಯನ್ನು ಕಂಡುಕೊಳ್ಳಬೇಕು ಎಂದು ಜೀವನ ಕೌಶಲ್ಯ ತರಬೇತುದಾರರಾದ ಸುಪರ್ಣ ಶೆಟ್ಟಿ ಹೇಳಿದರು. ಅವರು ಕಾಪು ವಿದ್ಯಾನಿಕೇತನ ಸಮೂಹ ಸಂಸ್ಥೆಯು ಐ ಸಿ ಎಸ್ ಇ ಬೋಡ್೯ ಪರೀಕ್ಷೆಯಲ್ಲಿ ನೂರು ಶೇಕಡಾ ಫಲಿತಾಂಶ ಪಡೆಯಲು ಕಾರಣೀಭೂತರಾದ ವಿದ್ಯಾರ್ಥಿಗಳನ್ನು ಮತ್ತು ಉತ್ತಮ ಅಂಕ ಗಳಿಸಿ ಸಾಧನೆಗೈದ ವಿದ್ಯಾರ್ಥಿಗಳಿಗೆ ನಡೆದ ಅಭಿನಂದನೆ ಮತ್ತು ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸೂಕ್ತ ಅವಕಾಶವನ್ನು ಬಳಸಿ ಮುಂದುವರಿಯಬೇಕು. ಹೆತ್ತವರು ಮತ್ತು ಮಕ್ಕಳ ಅನ್ಯೋನ್ಯತೆಯ ಸಂಬಂಧಗಳ ಜೊತೆಗೆ ಪಿತೃ ಋಣ, ಲೋಕ ಋಣದ ಅರಿವಿರಬೇಕು ಎಂದರು.
ಅಭಿನಂದನೆ : ಉತ್ತಮ ಅಂಕ ಗಳಿಸಿ ಸಾಧನೆಗೈದ ರಿಧ, ಚಿರಾಗ್, ಆಶೀಶ್ ರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ವಿದ್ಯಾನಿಕೇತನ ಸಮೂಹ ಸಂಸ್ಥೆಯ ಸಂಚಾಲಕರಾದ ಕೆ ಪಿ ಆಚಾರ್ಯ ವಹಿಸಿದ್ದರು. ಸಂಸ್ಥೆಯ ಮುಖ್ಯಸ್ಥೆ ಶ್ವೇತ ಐತಾಳ್, ಶಿಕ್ಷಕ ವರ್ಗ, ಪೋಷಕರು ಉಪಸ್ಥಿತರಿದ್ದರು.
ಪತ್ರಕರ್ತರಾದ ರಾಕೇಶ್ ಕುಂಜೂರು ಶುಭಾಶಂಸನೆಗೈದರು. ಸಂಸ್ಥೆಯ ಮುಖ್ಯ ಶಿಕ್ಷಕಿ ಸ್ಮಿತಾ ಪಾಟೀಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಕಾಪು : ಬಿರುವೆರ್ ಕಾಪು ಸೇವಾ ಸಮಿತಿಯ ವತಿಯಿಂದ ಬ್ರಹ್ಮಶ್ರೀ ಮನೆ ಹಸ್ತಾಂತರ

Posted On: 18-05-2023 12:06PM
ಕಾಪು : ಇಲ್ಲಿನ ಬಿರುವೆರ್ ಕಾಪು ಸೇವಾ ಸಮಿತಿಯ ನೇತೃತ್ವದಲ್ಲಿ ಪುನರ್ ನಿರ್ಮಿಸಲಾದ ಮಲ್ಲಾರು ಗರಡಿ ಬಳಿಯ ಕೃಷ್ಣಪ್ಪ ಪೂಜಾರಿ ಮತ್ತು ಇಂದಿರಾ ಪೂಜಾರ್ತಿ ದಂಪತಿಯ ಬ್ರಹ್ಮಶ್ರೀ ಮನೆಯನ್ನು ಬುಧವಾರ ಉದ್ಘಾಟಿಸಿ, ಹಸ್ತಾಂತರಿಸಲಾಯಿತು.
ಉಡುಪಿಯ ವಕೀಲ ಸಂಕಪ್ಪ ಅಮೀನ್ ಅವರು ಮನೆಯನ್ನು ಉದ್ಘಾಟಿಸಿ ಮಾತನಾಡಿ, ಕೇವಲ ಐದು ವರ್ಷಗಳ ಹಿಂದೆ ಆರಂಭಗೊಂಡಿರುವ ಬಿರುವೆರ್ ಕಾಪು ಸೇವಾ ಸಮಿತಿಯು ಈಗಾಗಲೇ 21 ಸೇವಾ ಕಾರ್ಯಕ್ರಮಗಳನ್ನು ನಡೆಸಿದ್ದು ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವ ಮೂಲಕ ಮಾದರಿಯಾಗುವ ಕೆಲಸವನ್ನು ಮಾಡಿದೆ. ಎಲ್ಲಾ ಪ್ರದೇಶಗಳಿಗೂ ತನ್ನ ಸೇವೆಯನ್ನು ವಿಸ್ತರಿಸುತ್ತಿರುವ ಸಮಿತಿಯ ಸೇವಾ ಕಾರ್ಯಗಳು ಇತರೆಲ್ಲಾ ಸಂಘ-ಸಂಸ್ಥೆಗಳಿಗೂ ಮಾದರಿಯಾಗಿದೆ ಎಂದರು.
ಬಿರುವೆರ್ ಕಾಪು ಸೇವಾ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯ ರಾಕೇಶ್ ಕುಂಜೂರು ಮಾತನಾಡಿ, ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿ, ಗುಡಿಸಲಿನಲ್ಲಿ ವಾಸಿಸುತ್ತಿದ್ದ ಮಲ್ಲಾರು ಗರಡಿ ಬಳಿಯ ಕೃಷ್ಣಪ್ಪ ಪುಜಾರಿ ಮತ್ತು ಇಂದಿರಾ ಪೂಜಾರ್ತಿ ದಂಪತಿಯು ತಮಗಾರೂ ಆಸರೆಯಿಲ್ಲದೇ ಹರುಕು ಮುರುಕು ಮನೆಯಲ್ಲಿ ವಾಸಿಸುತ್ತಿದ್ದರು. ಅವರ ಮನೆಯನ್ನು ಬಿರುವೆರ್ ಕಾಪು ಸೇವಾ ಸಮಿತಿಯ ನೇತೃತ್ವದಲ್ಲಿ ದಾನಿಗಳ ಸಹಕಾರದೊಂದಿಗೆ ಸುಮಾರು 1.50 ಲಕ್ಷ ರೂ. ವೆಚ್ಚದಲ್ಲಿ ಪುನರ್ ನಿರ್ಮಿಸಲಾಗಿದೆ ಎಂದರು.
ಕಟಪಾಡಿ ಅರವಿಪುರಂ ಮಠ ಚರಣ್ ಶಾಂತಿ, ಶಿರ್ವ ಬಿಲ್ಲವರ ಸಂಘದ ಅಧ್ಯಕ್ಷ ಗೋಪಾಲ ಪೂಜಾರಿ, ಮಲ್ಲಾರು ಬಿಲ್ಲವರ ಸಂಘದ ಅಧ್ಯಕ್ಷ ಉಮೇಶ್ ಪೂಜಾರಿ, ಪುರಸಭೆ ಸದಸ್ಯರಾದ ಶೈಲೇಶ್ ಅಮೀನ್, ಉಮೇಶ್ ಕರ್ಕೇರ, ಉದ್ಯಮಿಗಳಾದ ದೀಪಕ್ ಕುಮಾರ್ ಎರ್ಮಾಳು, ರವಿ ಪೂಜಾರಿ ಇನ್ನಂಜೆ, ಹರಿಪ್ರಸಾದ್ ಶಿರ್ವ, ಬಿರುವೆರ್ ಕಾಪು ಸೇವಾ ಸಮಿತಿಯ ಉಪಾಧ್ಯಕ್ಷ ಗಣೇಶ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ವಿಕ್ಕಿ ಪೂಜಾರಿ ಮಡುಂಬು, ಅತಿಥ್ ಸುವರ್ಣ, ಸಂಧ್ಯಾ ಬಿ. ಕೋಟ್ಯಾನ್, ಅಶ್ವಿನಿ ನವೀನ್, ಅನಿಲ್ ಅಮೀನ್, ಪ್ರಮುಖರಾದ ಶರತ್ ಪೂಜಾರಿ, ಗೀತಾ ಗೋಪಾಲ್, ಬಾಬು ಪೂಜಾರಿ, ಸುಮಿತ್ರಾ ಬಾಬು ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ : ಮೇ 19ರಂದು ಮಿನಿ ಉದ್ಯೋಗ ಮೇಳ

Posted On: 17-05-2023 10:34AM
ಉಡುಪಿ : ಅದ್ವಿತ್ ಐ ಟೆಕ್ ಪ್ರೈ.ಲಿ, ಆಭರಣ ಮೋಟಾರ್ಸ್, ಸುಷ್ಮಾ ಆಟೋಮೊಬೈಲ್ಸ್, ಕಾಂಚನ್ ಅಥರ್ ಎಲೆಕ್ಟ್ರಿಕಲ್ ಹಾಗೂ ಬಿ.ಎಸ್.ಎಲ್ ಇಂಡಿಯಾ ಪ್ರೈ.ಲಿ ಕಂಪನಿಗಳ ವತಿಯಿಂದ ಮೇ 19 ರಂದು ಬೆಳಗ್ಗೆ 10.30 ಕ್ಕೆ ಬಿ.ಎಸ್.ಎಲ್ ಇಂಡಿಯಾ ಪ್ರೈ.ಲಿ, ಸಂಪರ್ಕ ಜೆರಾಕ್ಸ್ ಹತ್ತಿರ, 2ನೇ ಮಹಡಿ, ನಂದ ಕಮರ್ಷಿಯಲ್ ಕಾಂಪ್ಲೆಕ್ಸ್, ಕೋರ್ಟ್ ರೋಡ್, ಉಡುಪಿ ಇಲ್ಲಿ ಮಿನಿ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಬಿ.ಕಾಂ, ಬಿ.ಇ ಇಂಜಿನಿಯರಿಂಗ್ ಮತ್ತು ಡಿಪ್ಲೋಮಾ, ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ಅಂಕಪಟ್ಟಿ, ಸ್ವ-ವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ಪ್ರತಿಯೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ ದೂರವಾಣಿ ಸಂಖ್ಯೆ:8105618291, 9945856670 ಹಾಗೂ 9901472710 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಪು : ಪಡುಕುತ್ಯಾರು ಆನೆಗುಂದಿಶ್ರೀಗಳ ಪಟ್ಟಾಭಿಷೇಕ ವರ್ಧಂತಿ ಸಂಪನ್ನ ; ಪ್ರಶಸ್ತಿ ಪ್ರಧಾನ ; ಶೈಕ್ಷಣಿಕ ಸಾಧಕರಿಗೆ ಅಭಿನಂದನೆ
Posted On: 16-05-2023 02:17PM
ಕಾಪು : ನವ ಮಾದ್ಯಮ ಕಾಲದಲ್ಲಿ ಸಂಸ್ಕಾರಯುತ ಜೀವನ ನಡೆಸುವುದನ್ನು ಎಳೆಯ ಮಕ್ಕಳಿಗೆ ಕಲಿಸುವ ಪ್ರಯತ್ನ ನಡೆಯಬೇಕು. ಇದಕ್ಕಾಗಿ ಹೆತ್ತವರು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ನುಡಿದರು. ಅವರು ಪಡುಕುತ್ಯಾರು ಮಹಾಸಂಸ್ಥಾನದ ಶ್ರೀ ಸರಸ್ವತೀ ಸತ್ಸಂಗ ಮಂದಿರದಲ್ಲಿ ತಮ್ಮ ಪಟ್ಟಾಭಿಷೇಕ ಮಹೋತ್ಸವದ 13ನೇ ವರ್ಷದ ವರ್ಧಂತ್ಯುತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ವಿವಿಧ ವಿಭಾಗಗಳಲ್ಲಿ ಸಾಧಕರನ್ನು ಮಹಾಸಂಸ್ಥಾನದಿಂದ ಗುರುತಿಸುವ ಪ್ರಯತ್ನ ಮಾಡಲಾಗಿದೆ. ತಮ್ಮ ಕುಲಕಸುಬು ಮಾಡಿಕೊಂಡು ತೆರೆಮರೆಯಲ್ಲಿರುವ ಸಾಧಕರನ್ನೂ ಈ ಬಾರಿ ಗುರುತಿಸಿದ್ದೇವೆ. ಎಂದು ಅವರು ಸೇವಾ ವಲಯದಲ್ಲಿ ಮತ್ತು ಸಮಾಜಕ್ಕೆ ಸಲ್ಲಿಸಿದ ಸೇವೆಯ ಬಗ್ಗೆ ಮಾತನಾಡಿದರು.

ಸಭೆಯ ಅಧ್ಯಕ್ಷತೆಯನ್ನು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ವಹಿಸಿದ್ದರು. ಮಹಾಸಂಸ್ಥಾನದ ವ್ಯಾಪ್ತಿಯಲ್ಲಿರುವ ಉತ್ತರ ಕನ್ನಡ, ಅವಿಭಜಿತ ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಯ ಶ್ರೀಕಾಳಿಕಾಂಬಾ ದೇವಸ್ಥಾನದ ಧರ್ಮದರ್ಶಿಗಳು ಸಮಾಜ ಸದಸ್ಯರಿಂದ ಸಂಗ್ರಹಿಸಿದ ಗುರುಕಾಣಿಕೆಯನ್ನು ವಾಡಿಕೆಯಂತೆ ಜಗದ್ಗುರುಗಳವರಿಗೆ ಫಲತಾಂಬೂಲಗಳೊಂದಿಗೆ ಸಮರ್ಪಿಸಿ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು. ಬೆಳಿಗ್ಗೆ ಜಗದ್ಗುರುಗಳವರಿಂದ ಕಟಪಾಡಿ ಶ್ರೀಮಹಾಸಂಸ್ಥಾನದಲ್ಲಿ ಶ್ರೀಕರಾರ್ಚಿತ ದೇವತಾ ಪೂಜೆ ಬಳಿಕ ಕಟಪಾಡಿಯಲ್ಲಿರುವ ಅನಂತಶ್ರೀ ವಿಭೂಷಿತ ನಾಗಧರ್ಮೇಂದ್ರ ಸರಸ್ವತೀ ಮಹಾಸ್ವಾಮಿಗಳವರ ವೃಂದಾವನದಲ್ಲಿ ಜಗದ್ಗುರುಗಳವರಿಂದ ಪೂಜೆ ನಡೆಯಲಿದೆ. ಬಳಿಕ ಪಡುಕುತ್ಯಾರಿನ ಶ್ರೀ ಸರಸ್ವತೀ ಯಾಗ ಶಾಲೆಯಲ್ಲಿ ಶ್ರೀ ವಿಶ್ವಕರ್ಮ ಯಜ್ಞ, ಶ್ರೀ ದಕ್ಷಿಣಾಮೂರ್ತಿ ಯಜ್ಞ, ಶ್ರೀ ರುದ್ರ ಯಜ್ಞ, ಸಾಮೂಹಿಕ ಶ್ರೀ ಚಂಡಿಕಾ ಯಾಗ ನಡೆಯಿತು. ಬಳಿಕ ಆನೆಗುಂದಿ ಪ್ರತಿಷ್ಠಾನದ ವತಿಯಿಂದ ಜಗದ್ಗುರುಗಳವರ ಪಾದಪೂಜೆ ನಡೆಯಿತು.
ಬೆಳಿಗ್ಗೆ ಜಗದ್ಗುರುಗಳವರಿಂದ ಕಟಪಾಡಿ ಶ್ರೀಮಹಾಸಂಸ್ಥಾನದಲ್ಲಿ ಶ್ರೀಕರಾರ್ಚಿತ ದೇವತಾ ಪೂಜೆ ಬಳಿಕ ಕಟಪಾಡಿಯಲ್ಲಿರುವ ಅನಂತಶ್ರೀ ವಿಭೂಷಿತ ನಾಗಧರ್ಮೇಂದ್ರ ಸರಸ್ವತೀ ಮಹಾಸ್ವಾಮಿಗಳವರ ವೃಂದಾವನದಲ್ಲಿ ಜಗದ್ಗುರುಗಳವರಿಂದ ಪೂಜೆ ನಡೆಯಲಿದೆ. ಬಳಿಕ ಪಡುಕುತ್ಯಾರಿನ ಶ್ರೀ ಸರಸ್ವತೀ ಯಾಗ ಶಾಲೆಯಲ್ಲಿ ಶ್ರೀ ವಿಶ್ವಕರ್ಮ ಯಜ್ಞ, ಶ್ರೀ ದಕ್ಷಿಣಾಮೂರ್ತಿ ಯಜ್ಞ, ಶ್ರೀ ರುದ್ರ ಯಜ್ಞ, ಸಾಮೂಹಿಕ ಶ್ರೀ ಚಂಡಿಕಾ ಯಾಗ ನಡೆಯಿತು. ಬಳಿಕ ಆನೆಗುಂದಿ ಪ್ರತಿಷ್ಠಾನದ ವತಿಯಿಂದ ಜಗದ್ಗುರುಗಳವರ ಪಾದಪೂಜೆ ನಡೆಯಿತು. ಪ್ರಶಸ್ತಿ ಪ್ರಧಾನ : 2023ನೇ ಸಾಲಿನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬಂಬ್ರಾಣ ಯಜ್ಞೇಶ ಆಚಾರ್ಯ ಮಂಗಳೂರು ಇವರಿಗೆ ಶ್ರೀ ಸರಸ್ವತೀ ಅನುಗ್ರಹ ಪ್ರಶಸ್ತಿ, ಬ್ರಹ್ಮಶ್ರೀ ಸೀತಾರಾಮ ಶಾಸ್ತ್ರಿ ಮಂಗಳೂರು (ವೈದಿಕ), ಮಂಟಪ ಕೇಶವ ಆಚಾರ್ಯ ಸಾಲಿಗ್ರಾಮ, ಮಂಜುನಾಥ ಆಚಾರ್ಯ ಚಿತ್ರಪಾಡಿ , ವ್ಯಾಸರಾಯ ಆಚಾರ್ಯ ಪಾದೂರು, ದಿವಾಕರ ಆಚಾರ್ಯ ಕೋಟೆಕಾರು(ಶಿಲ್ಪ) ವಿಘ್ನೇಶ್ವರ ಭಟ್ ಪುತ್ತೂರು (ಜ್ಯೋತಿಷ್ಯ), ಡಾ. ಸಿ.ಆರ್. ಚಂದ್ರ ಶೇಖರ್ ಬೆಂಗಳೂರು( ವೈದ್ಯಕೀಯ), ನೇಜಾರು ವಿಶ್ವನಾಥ ರಾವ್ ಕತಾರ್, ಬಿ. ವಿಶ್ವನಾಥ ರಾವ್ ಕೊಯಂಬುತ್ತೂರು( ಮರಣೋತ್ತರ) ( ಉದ್ಯಮ) ಎಂಬಿವರಿಗೆ ಆನೆಗುಂದಿಶ್ರೀ ಪ್ರಶಸ್ತಿಗೆ ಪ್ರದಾನ ಮಾಡಲಾಯಿತು. ವಿಜಯ ಕುಮಾರ್ ಕುಂಟಾಡಿ ಕೆ.ಎ.ಎಸ್ , ಬ್ರಹ್ಮಾವರ ಡಾ. ಗೋಪಾಲಕೃಷ್ಣ ನವದೆಹಲಿ ಇವರಿಗೆ ವಿಶೇಷ ಗೌರವಾಭಿನಂದನೆ ನಡೆಯಿತು. ಶೈಕ್ಷಣಿಕ ಸಾಧಕರಿಗೆ ಅಭಿನಂದನೆ : 2021,2022,2023 ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್. ಎಲ್. ಸಿ, ಪಿ.ಯು.ಸಿ/ಪ್ಲಸ್ ಟು ಪರೀಕ್ಷೆಗಳಲ್ಲಿ 95% ಮತ್ತು ಅಧಿಕ ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಹಾಗೂ ಪದವಿ, ಮೆಡಿಕಲ್, ಇಂಜಿನಿಯರಿಂಗ್ ಪರೀಕ್ಷೆಗಳಲ್ಲಿ ರೇಂಕ್ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರದೊಂದಿಗೆ ಜಗದ್ಗುರುಗಳವರಿಂದ ಅಭಿನಂದನೆ ನಡೆಯಿತು. ಶೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠ ಶಾಲೆಯಲ್ಲಿ ಋಕ್ ಸಂಹಿತಿಯನ್ನು ಪೂರ್ತಿಗೊಳಿಸಿದ ಎರಡನೇ ತಂಡದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿಗಳಿಂದ ವಸಂತ ವೇದ ಶಿಬಿರದ ಸಮಾರೋಪದಲ್ಲಿ ಶಿಬಿರಾರ್ಥಿಗಳಿಗೆ ನಡೆಸಿದ ಸ್ಪರ್ಧಾ ವಿಜೆತರಿಗೆ ಹಾಗೂ ಶಿಬಿರದಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಧರ್ಮಸಭೆಯಲ್ಲಿ ವಿದ್ವಾನ್ ವೇ.ಬ್ರ. ಶ್ರೀ ಶಂಕರ ಆಚಾರ್ಯ ಕಡ್ಲಾಸ್ಕರ್ (ಪಂಡಿತ್) ಹುಬ್ಬಳ್ಳಿ ಅವರಿಂದ ಗುರುಪೀಠಗಳು ಮತ್ತು ಯುವ ಜನತೆ ಎಂಬ ವಿಷಯದಲ್ಲಿ ಉಪನ್ಯಾಸ ನಡೆಯಿತು. ಆನೆಗುಂದಿ ಮೂಲ ಮಠ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪಂಚಸಿಂಹಾಸನ ವಿಕಾಸ ಸಮಿತಿ ಕೋಶಾಧಿಕಾರಿ ದಿನೇಶ್ ಆಚಾರ್ಯ ಪಡುಬಿದ್ರಿ, ಕಾಳಿಕಾಂಬಾ ದೇವಾಲಯಗಳ ಧರ್ಮದರ್ಶಿಗಳಾದ ಕೆ. ಕೇಶವ ಆಚಾರ್ಯ ಮಂಗಳೂರು, ಶಿಲ್ಪಿ ರಾಮಚಂದ್ರ ಆಚಾರ್ಯ ಕಾರ್ಕಳ, ಪ್ರಭಾಕರ ಆಚಾರ್ಯ ಚಿತ್ತೂರು, ಉಪ್ರಳ್ಳಿ, ಗಜಾನನ ಎನ್. ಆಚಾರ್ಯ ಭಟ್ಕಳ , ಮಧುಕರ ಚಂದ್ರಶೇಖರ ಆಚಾರ್ಯ ಗೋಕರ್ಣ, ಶೇಖರ ಆಚಾರ್ಯ ಕಾಪು , ಬಿ.ಎಂ.ಯದುನಂದನ ಆಚಾರ್ಯ ಬಂಗ್ರಮಂಜೇಶ್ವರ, ಜನಾರ್ದನ ಆಚಾರ್ಯ ಆರಿಕ್ಕಾಡಿ, ಕೆ. ಪ್ರಭಾಕರ ಆಚಾರ್ಯ ಮಧೂರು, , ಮಹಾಸಂಸ್ಥಾನದ ವಿವಿಧ ಸಮಿತಿಗಳ ಪ್ರಮುಖರಾದ ಬಿ.ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ, ಮೋಹನ್ ಕುಮಾರ್ ಬೆಳ್ಳೂರು, ಸುಂದರ ಆಚಾರ್ಯ ಬೆಳುವಾಯಿ, ಗಣೇಶ್ ಆಚಾರ್ಯ ಕೆಮ್ಮಣ್ಣು, ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಪಿ.ವಿ ಗಂಗಾಧರ ಆಚಾರ್ಯ ಉಡುಪಿ, ವೈ. ಧರ್ಮೇಂದ್ರ ಆಚಾರ್ಯ ನಿವೃತ್ತ ಸುಬೇದಾರ್ ಕಾಸರಗೋಡು, ವಿವಿಧ ಪ್ರಮುಖ ಸಂಘ ಸಂಸ್ಥೆಗಳ ಮುಖ್ಯಸ್ಥರಾದ ಮಧು ಆಚಾರ್ಯ ಮೂಲ್ಕಿ, ಸದಾನಂದ ಎಸ್. ಆಚಾರ್ಯ ಕಲ್ಯಾಣ ಪುರ, ತುಕಾರಾಮ ಆಚಾರ್ಯ ಬೆಂಗಳೂರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ. ಬಿ ಆಚಾರ್ ಕಂಬಾರು ಪ್ರಾಸ್ತಾವನೆಯೊಂದಿಗೆ ಸ್ವಾಗತಿಸಿದರು. ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ವಂದಿಸಿದರು. ಕಾರ್ಯದರ್ಶಿ ಕೆ. ಎಂ. ಗಂಗಾಧರ ಆಚಾರ್ಯ ಕೊಂಡೆವೂರು ಕಾರ್ಯಕ್ರಮ ನಿರೂಪಿಸಿದರು. ಶೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠ ಶಾಲೆಯ ವಿದ್ಯಾರ್ಥಿಗಳಿಂದ ವೇದ ಘೋಷ ನಡೆಯಿತು.