Updated News From Kaup

ಪಡುಬಿದ್ರಿ : ಚಾಲಕನ‌ ನಿಯಂತ್ರಣ ತಪ್ಪಿದ ಬಸ್ ; ಆಟೋ ರಿಕ್ಷಾ ಜಖಂ

Posted On: 16-05-2023 11:24AM

ಪಡುಬಿದ್ರಿ : ಮಂಗಳೂರಿನಿಂದ ಕಾರ್ಕಳ ಹೋಗುವ ವೇಗದೂತ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಕಾರ್ಕಳ ಜಂಕ್ಷನ್ ನಲ್ಲಿದ್ದ ಪೋಲೀಸ್ ಬೂತ್ ಗೆ ಡಿಕ್ಕಿ ಹೊಡೆದು ಅದನ್ನು ಸುಮಾರು ನೂರು ಅಡಿ ಎಳೆದೊಯ್ದು ರಿಕ್ಷಾ ಸ್ಟ್ಯಾಂಡ್ ಗೆ ನುಗ್ಗಿದ ಬಸ್ಸು ಒಂದು ಆಟೋ ರಿಕ್ಷಾ ವನ್ನು ಸಂಪೂರ್ಣ ಜಖಂ ಗೊಳಿಸಿದ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.

ಅದ್ರಷ್ಟವಶಾತ್ ಬಸ್ ಅಲ್ಲಿಗೆ ನಿಂತಿದ್ದರಿಂದ ಹಲವರು ತಮ್ಮ ಪ್ರಾಣ ಕಳಕೊಳ್ಳವುದು ತಪ್ಪಿದೆ. ಪಕ್ಕದಲ್ಲಿ ಬ್ಯಾಂಕ್ ಎಟಿಎಂ ಅಲ್ಲದೆ ಹಲವಾರು ಅಂಗಡಿಗಳಿದ್ದು ಜನನಿಭಿಡ ಪ್ರದೇಶವಾಗಿತ್ತು.

ಹೈವೇ ಪಕ್ಕ ಅಪಘಾತ ಸಂಭವಿಸಿದ ಕಾರಣ ಸ್ವಲ್ಪ ಹೊತ್ತು ಟ್ರಾಫಿಕ್ ಜಾಂ ಆಗಿದೆ. ಪಡುಬಿದ್ರಿ ಪೋಲಿಸ್ ಸ್ಥಳಕ್ಕೆ ಧಾವಿಸಿ ಸುಗಮ ಸಂಚಾರಕ್ಕೆ ಅನುವು ಮಾಡುವ ಮೂಲಕ ತನಿಖೆ ನಡೆಸುತ್ತಿದ್ದಾರೆ.

ಮೇ 16 - 17 : ಮಲ್ಲಾರು ರಾಣೆಕೇರಿಯ ಕೋಟೆ ಶ್ರೀ ಗಡು ಮಾರಿಯಮ್ಮ ಹಾಗೂ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಕಾಲಾವಧಿ ರಾಶಿ ಮಾರಿಪೂಜೆ

Posted On: 15-05-2023 10:33AM

ಕಾಪು : ಇಲ್ಲಿನ ಮಲ್ಲಾರು ರಾಣೆಕೇರಿಯ ಕೋಟೆ ಶ್ರೀ ಗಡು ಮಾರಿಯಮ್ಮ ಹಾಗೂ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಕಾಲಾವಧಿ ರಾಶಿ ಮಾರಿಪೂಜೆಯು ಮೇ 16, ಮಂಗಳವಾರ ಹಾಗೂ ಮೇ 17, ಬುಧವಾರದಂದು ಜರಗಲಿದೆ.

ಮೇ 15, ಸೋಮವಾರದಂದು ಬೆಳಿಗ್ಗೆ ಗಂಟೆ 8ಕ್ಕೆ ಶ್ರೀ ಮಾರಿಯಮ್ಮ, ಶ್ರೀ ಉಚ್ಚಂಗಿ ಮತ್ತು ಶ್ರೀ ಚಾಮುಂಡೇಶ್ವರೀ ದೇವಿಗೆ ರಜತ ಮುಖ ಸಮರ್ಪಣೆ ನಡೆಯಲಿದೆ.

ಮೇ 16, ಮಂಗಳವಾರ ರಾತ್ರಿ ಗಂಟೆ 7ಕ್ಕೆ ಗಡುಮಾರಿಯಮ್ಮ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ರಾತ್ರಿ ಗಂಟೆ 8ಕ್ಕೆ ಪ್ರಸಿದ್ಧ ಭಜನಾ ಮಂಡಳಿಗಳಿಂದ ಕುಣಿತಾ ಭಜನಾ ಕಾರ್ಯಕ್ರಮ, ರಾತ್ರಿ ಗಂಟೆ 9ಕ್ಕೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಗಂಟೆ 12ಕ್ಕೆ ಮಹಾಪೂಜೆ, ಶ್ರೀ ದೇವಿಯ ದರ್ಶನ ಸೇವೆ ಹಾಗೂ ರಾಶಿ ಪೂಜೆ ಮಹೋತ್ಸವ ಜರಗಲಿದೆ.

ಮೇ 17, ಬುಧವಾರ ಬೆಳಿಗ್ಗೆ ಗಂಟೆ 6ಕ್ಕೆ ಅರಮನೆ ಪೂಜೆ, ಮಧ್ಯಾಹ್ನ ಗಂಟೆ 12-30ಕ್ಕೆ ಅನ್ನಸಂತರ್ಪಣೆ, ಮಧ್ಯಾಹ್ನ ಗಂಟೆ 3ಕ್ಕೆ ಮಹಾ ಪೂಜೆ, ಶ್ರೀ ಮಾರಿಯಮ್ಮ ಹಾಗೂ ಚಾಮುಂಡೇಶ್ವರೀ ದೇವಿಯ ದರ್ಶನ ಸೇವೆ ನಂತರ ಪ್ರಸಾದ ವಿತರಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಕ್ಷದ ಕಾರ್ಯಕರ್ತರ ಸಂಘಟಿತ ಹೋರಾಟದಿಂದ ಗೆಲುವು : ಗುರ್ಮೆ ಸುರೇಶ್ ಶೆಟ್ಟಿ

Posted On: 14-05-2023 12:29PM

ಕಾಪು : ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದ ಹಿರಿಯರು ಮಾಡಿಕೊಟ್ಟ ಅವಕಾಶ, ಪಕ್ಷದ ಕಾರ್ಯಕರ್ತರ ಸಂಘಟಿತ ಹೋರಾಟ, ನಾಯಕರ ಸಂಕಲ್ಪದಿಂದ ಗೆಲುವಾಗಿದೆ ಎಂದು ನೂತನ ಶಾಸಕರಾಗಿ ಆಯ್ಕೆಯಾದ ಗುರ್ಮೆ ಸುರೇಶ್ ಶೆಟ್ಟಿಯವರು ಕಾಪುವಿನಲ್ಲಿ ಹೇಳಿದರು. ಶಾಸಕರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಕಾಪುವಿನಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

ಕಾಪು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪಣತೊಟ್ಟಿದ್ದು, ಈಗಾಗಲೇ ಶಾಸಕರಾಗಿದ್ದ ಲಾಲಾಜಿ ಮೆಂಡನ್ ಅವರ ಮುಂದುವರಿದ ಕಾಮಗಾರಿಗಳನ್ನು ಮುಂದುವರಿಸಲಾಗುವುದು. ಹಲವಾರು ಯೋಜನೆಗಳಿವೆ ಆ ಮೂಲಕ ಕಾಪು ಕ್ಷೇತ್ರವನ್ನು ಸಾಮಾಜಿಕ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಮೇಲಕೆತ್ತುವ ಕೆಲಸವನ್ನು ಮಾಡುತ್ತೇನೆ ಎಂದರು.

ಸಮಾಜ ಸೇವೆ ಜೀವನದ ಒಂದು ಭಾಗ, ಶಾಸಕತ್ವದ ಮೂಲಕ ಜನಪರ ಕಾರ್ಯಗಳನ್ನು ಸಮಾಜಕ್ಕೆ ತಲುಪಲು ಸಾಧ್ಯವಿದೆ. ಅಧಿಕಾರಿಗಳು, ಸರ್ಕಾರದ ಮೇಲೆ ಒತ್ತಡ ಹಾಕಿ ಕೆಲಸ ಮಾಡುವ ಸೌಭಾಗ್ಯವನ್ನು ಭಗವಂತ ಒದಗಿಸಿದ್ದಾನೆ ಎಂದೂ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.

ಈ ಸಂದರ್ಭ ಕಾಪು ಬಿಜೆಪಿ ಅಧ್ಯಕ್ಷ ಶ್ರೀಕಾಂತ್‌ ನಾಯಕ್‌, ಲಾಲಾಜಿ ಮೆಂಡನ್‌, ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟು, ಶಿಲ್ಪಾ ಸುವರ್ಣ, ಮಟ್ಟಾರು ರತ್ನಾಕರ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

ಕಾಪು : ವಿಜಯಿಯಾದ ಗುರ್ಮೆ ಸುರೇಶ್ ಶೆಟ್ಟಿಗೆ ಭವ್ಯ ಸ್ವಾಗತ

Posted On: 13-05-2023 08:50PM

ಕಾಪು : ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ‌ಸೊರಕೆಯನ್ನು 13,004 ಮತಗಳ ಅಂತರದಲ್ಲಿ ಸೋಲಿಸಿ ವಿಜಯಿಯಾದ ಬಿಜೆಪಿ ‌ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ‌ಇಂದು ಸಂಜೆ ಕಾಪು ಬಿಜೆಪಿ ಕಚೇರಿಗೆ ಆಗಮಿಸಿದರು.

ಈ‌ ಸಂದರ್ಭ ಪಕ್ಷದ ಪ್ರಮುಖರು, ಕಾರ್ಯಕರ್ತರು ಅವರನ್ನು ಸ್ವಾಗತಿಸಿದರು.

ಕಾಪು : ಕ್ಷೇತ್ರದಲ್ಲಿ ಸೋಲು ಗೆಲುವಿನ ಲೆಕ್ಕಾಚಾರಕ್ಕೆ ಬ್ರೇಕ್ ‌; ಗೆಲುವು ಕಂಡ ಬಿಜೆಪಿ ; ಕಾರ್ಯಕರ್ತರಲ್ಲಿ ಸಂಭ್ರಮ

Posted On: 13-05-2023 07:10PM

ಕಾಪು : ಯಾವುದೇ ಶುಭ ಸಮಾರಂಭಗಳಲ್ಲೂ ಚರ್ಚಿತವಾದ ವಿಷಯ ಅವರು ಗೆಲ್ಲುತ್ತಾರೆ ಇವರು ಗೆಲ್ಲುತ್ತಾರೆ ಎಂದು, ಜಾತಿ ಲೆಕ್ಕಾಚಾರ, ಚುನಾವಣಾ ಪೂರ್ವ, ಚುನಾವಣೋತ್ತರ ಸಮೀಕ್ಷೆಗಳು, ಪಕ್ಷಗಳ ಕಾರ್ಯಕರ್ತರು ನಮ್ಮದೇ ಪಕ್ಷದ ಗೆಲುವು ಎಂಬ ಅಭಿಲಾಷೆಯಲ್ಲಿ ಬಿರುಬೇಸಿಗೆಯನ್ನು ಲೆಕ್ಕಿಸದೆ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಬೇಕೆಂಬ ತವಕ, ತುಡಿತದಲ್ಲಿದ್ದರು. ಅಂತೂ ಮೇ 13ರಂದು ಫಲಿತಾಂಶ ಬಂದಿದೆ.

ಉಡುಪಿ ಜಿಲ್ಲೆಯಲ್ಲಿ 5 ಕ್ಷೇತ್ರಗಳು ಬಿಜೆಪಿ ತೆಕ್ಕೆಗೆ ಬಿದ್ದಿವೆ. ಇದರಲ್ಲಿ ಮತ ಎಣಿಕೆಯ ಕೆಲವು ಸುತ್ತುಗಳವರೆಗೆ ಬೈಂದೂರು ಮತ್ತು ಕಾರ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್ ಕೆಲವೇ ಅಂತರದ ಮತಗಳ ಸ್ಪರ್ಧೆಯನ್ನು ಬಿಜೆಪಿಗೆ ನೀಡುತ್ತಾ ಬಂದರೂ ಕೊನೆಯ ಗೆಲುವು ಬಿಜೆಪಿಯದ್ದಾಗಿತ್ತು. ಉಳಿದಂತೆ ಮೊದಲಿಂದ ಕೊನೆಯವರೆಗೂ ಬಹುಮತದ ಅಂತರವನ್ನೇ ಕಾಯ್ದ ಬಿಜೆಪಿ ಅಭ್ಯರ್ಥಿಗಳು ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಭದ್ರಗೊಳಿಸಿದ್ದಾರೆ.

ಕಾಪು ಕ್ಷೇತ್ರದಲ್ಲಿ 5 ಅಭ್ಯರ್ಥಿಗಳು ವಿವಿಧ ಪಕ್ಷದಿಂದ ಕಣದಲ್ಲಿದ್ದರು. ಅವರು ಪಡೆದುಕೊಂಡ ಇವಿಎಮ್ ಮತ್ತು ಪೋಸ್ಟಲ್ ಮತಗಳ ಒಟ್ಟು ಅಂಕಿಅಂಶ ಇಂತಿವೆ : ಗುರ್ಮೆ ಸುರೇಶ್ ಶೆಟ್ಟಿ (ಬಿಜೆಪಿ) 80,559 ವಿನಯ ಕುಮಾರ್ ಸೊರಕೆ (ಕಾಂಗ್ರೆಸ್) 67555 ಸಬಿನಾ ಸಮದ್ ( ಜೆಡಿಎಸ್) 568 ಎಸ್.ಆರ್. ಲೋಬೊ (ಆಪ್) 252 ಮಹಮದ್ ಹನೀಫ್ (ಎಸ್‌ಡಿಪಿಐ) 1616 ನೋಟಾ: 805 ಒಟ್ಟು ಚಲಾವಣೆಯಾದ ಮತ: 1,51,355 ಗೆಲುವಿನ ಅಂತರ : 13,004

ಎಲ್ಲಾ ಲೆಕ್ಕಾಚಾರಗಳನ್ನು ಜನರು ಮಾಡಿದರೂ ಅಂತಿಮವಾಗಿ ಕಾಪು ಕ್ಷೇತ್ರದಲ್ಲಿ ಹಲವಾರು ಸಮಾಜಸೇವೆಯ ಮೂಲಕ ಗುರುತಿಸಿಕೊಂಡಿದ್ದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಗೆಲುವಿನ ನಗೆ ಬೀರಿದ್ದಾರೆ. ರಾಜಕಾರಣದಲ್ಲಿ ಅನುಭವಿಯಾಗಿದ್ದು ಕ್ಷೇತ್ರದ ಜನರೊಂದಿಗೆ ಬೆರೆತಿದ್ದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಸೋಲನ್ನು ಕಂಡಿದ್ದಾರೆ. ಒಟ್ಟಿನಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಕ್ಷೇತ್ರದ ಜನರಿಗೆ ಒಂದಷ್ಟು ಭರವಸೆಯಿದೆ, ಅಭಿವೃದ್ಧಿಯ ಪಥದಲ್ಲಿ ಸಾಗಿ ಸರ್ವಾಂಗೀಣ ಬೆಳವಣಿಗೆಯಾಗಿ ರಾಜ್ಯ, ದೇಶದಲ್ಲೇ ಕಾಪು ಕ್ಷೇತ್ರ ಮಾದರಿಯಾಗಲಿ....

ಕಾಪು : ಗುರ್ಮೆ ಸುರೇಶ್ ಶೆಟ್ಟಿ ಭರ್ಜರಿ ಗೆಲುವು

Posted On: 13-05-2023 01:47PM

ಕಾಪು : ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿಯವರು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆಯನ್ನು ಸೋಲಿಸಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಉಡುಪಿ ಜಿಲ್ಲೆಯ 5 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲುವು

Posted On: 13-05-2023 01:39PM

ಉಡುಪಿ : ಜಿಲ್ಲೆಯ 5 ಕ್ಷೇತ್ರಗಳಾದ ಕುಂದಾಪುರ, ಬೈಂದೂರು, ಕಾರ್ಕಳ, ಕಾಪು, ಉಡುಪಿಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಭರ್ಜರಿಯಾಗಿ ಗೆಲುವು ಸಾಧಿಸಿದ್ದಾರೆ.

ಆ ಮೂಲಕ ಪಕ್ಷದ ಗೆಲುವನ್ನು ಕಾರ್ಯಕರ್ತರು ಸಂಭ್ರಮಿಸಿದ್ದಾರೆ.

ಉಡುಪಿ : ಯಶ್ಪಾಲ್ ಸುವರ್ಣಗೆ ಗೆಲುವು

Posted On: 13-05-2023 12:49PM

ಉಡುಪಿ : ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ ಮುನ್ನಡೆ ಕಾಯ್ದುಕೊಂಡು ಗೆಲುವು ಸಾಧಿಸಿದ್ದಾರೆ.

ಉಡುಪಿ : 5 ವಿಧಾನಸಭಾ ಕ್ಷೇತ್ರದಲ್ಲಿ 4 ರಲ್ಲಿ ಬಿಜೆಪಿ, 1 ರಲ್ಲಿ ಕಾಂಗ್ರೆಸ್ ಮುನ್ನಡೆ

Posted On: 13-05-2023 10:49AM

ಉಡುಪಿ : ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಕುಂದಾಪುರ, ಕಾರ್ಕಳ, ಕಾಪು, ಉಡುಪಿಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದೆ.

ಕಾಪು : ಗುರ್ಮೆ ಸುರೇಶ್ ಶೆಟ್ಟಿ ಮುನ್ನಡೆ

Posted On: 13-05-2023 10:39AM

ಕಾಪು : ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಮೂರನೆಯ ಸುತ್ತಿನಲ್ಲಿ 18907 ಮತಗಳನ್ನು ಪಡೆದು ಮುನ್ನಡೆಯಲ್ಲಿದ್ದಾರೆ.

ಇವರ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ 13512 ಮತಗಳನ್ನು ಪಡೆದು ಹಿನ್ನಡೆಯಲ್ಲಿದ್ದಾರೆ.