Updated News From Kaup
ಉದ್ಯಾವರ : ಕ್ಷುಲ್ಲಕ ಕಾರಣಕ್ಕೆ ಹತ್ಯೆ

Posted On: 21-04-2023 11:57AM
ಉದ್ಯಾವರ : ಇಲ್ಲಿನ ಪಿತ್ರೋಡಿ ಸಮೀಪ ಮೀನುಗಾರನನ್ನು ಕೊಂದಿರುವ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ.
ಪಿತ್ರೋಡಿ ನಿವಾಸಿ ಮೀನುಗಾರಿಕೆ ಬೋಟ್ ಕಾರ್ಮಿಕ ದಯಾನಂದ ಸಾಲ್ಯಾನ್ (48) ಕೊಲೆಯಾದವರು. ಪಿತ್ರೋಡಿಯ ಬಾರ್ನಲ್ಲಿ ಮದ್ಯ ಸೇವಿಸುತ್ತಿದ್ದಾಗ ಪಕ್ಕದಲ್ಲಿ ಕುಳಿತಿದ್ದ ಸ್ಥಳೀಯ ನಿವಾಸಿ ಭರತ್ ಎಂಬಾತನ ಜತೆಗೆ ಯಾವುದೋ ಕಾರಣಕ್ಕೆ ಮಾತಿಗೆ ಮಾತು ಬೆಳೆದಿದೆ. ಬಳಿಕ ಬಾರ್ನಿಂದ ಹೊರಬಂದು ಜಗಳವಾಡಿಕೊಂಡಿದ್ದಾರೆ.
ಈ ಸಂದರ್ಭ ಭರತ್ ತನ್ನ ಪಂಚ್ನಿಂದ ದಯಾನಂದ ಮುಖಕ್ಕೆ ಹೊಡೆದಿದ್ದಾನೆ. ದಯಾನಂದ ನೆಲಕ್ಕೆ ಬಿದ್ದಾಗ ಓಡಿಹೋಗಿದ್ದಾನೆ. ಸ್ಥಳೀಯ ಭಜನೆ ತಂಡದವರು ದಯಾನಂದ ಅವರ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಆಸ್ಪತ್ರೆಗೆ ಒಯ್ದರೂ ದಯಾನಂದ ಮೃತಪಟ್ಟಿದ್ದಾರೆ. ಆರೋಪಿ ಭರತ್ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ : ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನ ವಿರುದ್ಧ ಪ್ರಕರಣ ದಾಖಲು

Posted On: 19-04-2023 10:58PM
ಕಾಪು : ಚುನಾವಣಾಧಿಕಾರಿಯ ಅನುಮತಿ ಪಡೆಯದೆ ಚುನಾವಣೆ ನಾಮಪತ್ರ ಸಲ್ಲಿಕೆಯ ನಂತರ ಬಂದಂತಹ ಕಾರ್ಯಕರ್ತರಿಗೆ ಭೋಜನ ಮತ್ತು ನೀರನ್ನು ವಿತರಿಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮೇಲೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚುನಾವಣಾಧಿಕಾರಿಗಳ ಪ್ಲೈಯಿಂಗ್ ಸ್ಕ್ವಾಡ್ ತಂಡ ಕಾಪುವಿನಲ್ಲಿ ಗಸ್ತು ಮಾಡುತ್ತಿರುವ ಸಮಯದಲ್ಲಿ ಮಧ್ಯಾಹ್ನ ಉಡುಪಿ ಜಿಲ್ಲಾಧಿಕಾರಿಗಳ ಕಛೇರಿ ಚುನಾವಣಾ ವಿಭಾಗದಿಂದ ಬಂದ ಕರೆಯಂತೆ ಸಿ-ವಿಜಿಲ್ ದೂರಿನಂತೆ ಕಾಂಗ್ರೆಸ್ ಪಕ್ಷದ ವತಿಯಿಂದ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಲುವಾಗಿ ನಡೆದ ರ್ಯಾಲಿ ಬಳಿಕ ಕಾಪುವಿನಲ್ಲಿರುವ ರಾಜೀವ ಸಭಾ ಭವನ ಇಲ್ಲಿ ಭಾಗವಹಿಸಿದ ಕಾಯ೯ಕತ೯ರಿಗೆ ಕಾಪು ವಿಧಾನ ಸಭಾ ಕ್ಷೇತ್ರದ ಚುನಾವಣಾಧಿಕಾರಿಯಿಂದ ಅನುಮತಿಯನ್ನು ಪಡೆಯದೇ ಸುಮಾರು 1000 ಜನರಿಗೆ ಭೋಜನ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿದ್ದು ಅದನ್ನು ಪಕ್ಷದ ಕಾಯ೯ಕತ೯ರಿಗೆ ವಿತರಿಸುತ್ತಿದ್ದು ಕಂಡು ಬಂದಿದ್ದು, ಜಾಥ ನಡೆಸಲು ಅನುಮತಿ ಪಡೆದುಕೊಂಡ ಕಾಪು ಬ್ಲಾಕ್ ಕಾಂಗ್ರೆಸ್ ದಕ್ಷಿಣದ ಅಧ್ಯಕ್ಷ ನವೀನ್ ಚಂದ್ರ ಸುವಣ೯ ಮೇಲೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಕಾಪು : ಜೆಡಿಎಸ್ ಅಭ್ಯರ್ಥಿ ಸಬೀನಾ ಸಮದ್ ನಾಮಪತ್ರ ಸಲ್ಲಿಕೆ

Posted On: 19-04-2023 02:33PM
ಕಾಪು : ನಮ್ಮ ಅಭ್ಯರ್ಥಿಯ ಗೆಲುವಿಗೆ ಪಕ್ಷವು ಶ್ರಮಿಸಲಿದ್ದು. ಉತ್ತಮ ಯೋಜನೆಗಳನ್ನು ಕಾಪು ತಾಲೂಕಿಗೆ ನೀಡಲಿದ್ದೇವೆ. ಈ ಬಾರಿ ಕಾಪು ವಿಧಾನ ಸಭಾಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಮಹಿಳೆಗೆ ಸ್ಥಾನ ನೀಡಿದೆ. ಸಮಾಜ ಸೇವೆ ಮಾಡುತ್ತಿರುವ ಸಬೀನ ಸಮದ್ ರಿಗೆ ನಮ್ಮ ಪಕ್ಷವು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಯೋಜನೆಗಳನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಜನತಾದಳ (ಜಾತ್ಯತೀತ) ಪಕ್ಷದ ಉಡುಪಿ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿ ಹೇಳಿದರು. ಅವರು ಜೆಡಿಎಸ್ ಅಭ್ಯರ್ಥಿ ಸಬೀನ ಸಮದ್ ನಾಮಪತ್ರಿಕೆ ಸಲ್ಲಿಕೆ ಪ್ರಕ್ರಿಯೆ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಪುವಿನಲ್ಲಿ ಅಗ್ನಿಶಾಮಕ ದಳ ನಿರ್ಮಾಣ, ಪರಿಸರ ಸ್ನೇಹಿ ಉದ್ಯೋಗ ಸೃಷ್ಟಿ ಸೇರಿದಂತೆ ಹಲವಾರು ಯೋಜನೆಗಳಿವೆ. ಪಕ್ಷ ಅಧಿಕಾರಕ್ಕೆ ಬಂದರೆ ಅದನ್ನು ಈಡೇರಿಸುವಲ್ಲಿ ಬದ್ಧರಿದ್ದೇವೆ ಎಂದರು.
ಈ ಸಂದರ್ಭ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಕಾಪು : ಗೆಲುವಿನ ನಿರೀಕ್ಷೆಯಲ್ಲಿ ಜನತಾದಳ (ಜಾತ್ಯತೀತ) ಪಕ್ಷ ; ಕುಮಾರಸ್ವಾಮಿ ಯೋಜನೆಗಳೇ ಅಭ್ಯರ್ಥಿ ಗೆಲುವಿಗೆ ಶ್ರೀರಕ್ಷೆ

Posted On: 19-04-2023 01:42PM
ಕಾಪು : ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಹಲವಾರು ಜನಪರ ಕಾರ್ಯಗಳ ಮೂಲಕ ರಾಜ್ಯದಲ್ಲಿ ಪ್ರಗತಿ ಕಂಡಿದೆ. ಇವರ ಕಾರ್ಯಗಳೇ ನಮ್ಮ ಕಾಪು ತಾಲೂಕಿನ ಅಭ್ಯರ್ಥಿ ಸಬೀನಾ ಸಮದ್ ಗೆಲುವಿಗೆ ಶ್ರೀರಕ್ಷೆಯಾಗಿದೆ ಎಂದು ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೇಶ್ ಶೆಟ್ಟಿ ಹೇಳಿದರು. ಅವರು ಬುಧವಾರ ಕಾಪು ಜೆಡಿಎಸ್ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜೆಡಿಎಸ್ ಪಕ್ಷವು ಜನತಾ ಪರ್ವ ಕಾರ್ಯಕ್ರಮದ ಅಡಿಯಲ್ಲಿ ಜನತಾ ಜಲಧಾರೆ, ಜನತಾ ಮಿತ್ರ, ಪಂಚರತ್ನ ಯೋಜನೆಗಳನ್ನು ರೂಪಿಸಿದೆ. ಈ ಬಾರಿ ಜಾತ್ಯಾತೀತ ಜನತಾದಳದ ಅಭ್ಯರ್ಥಿ ಸಬೀನ ಸಮದ್ ಕಾಪುವಿನವರಾಗಿದ್ದು, ಕಾಪು ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆಲುವಿನ ನಿರೀಕ್ಷೆಯಿದೆ ಎಂದರು.
ಕಾಪು ಪುರಸಭೆ ವ್ಯಾಪ್ತಿಯಲ್ಲಿ ಯು.ಜಿ.ಡಿ ಮ್ಯಾನ್ ಹೋಲ್ ಅಂಡರ್ ಗ್ರೌಂಡ್ ಡ್ರೈನೇಜ್ ಸಿಸ್ಟಮ್ ಅನುಷ್ಟಾನಕ್ಕೆ ಒತ್ತು, ಹೆಜಮಾಡಿ ಬಂದರು ಶೀಘ್ರ ಕಾರ್ಯ ಮುಗಿಸುವ ಬಗ್ಗೆ, ಪರಿಸರ ಸ್ನೇಹಿ ಉದ್ಯೋಗ ಸೃಷ್ಟಿ, ಕಾಪುವಿನಲ್ಲಿ ಅಗ್ನಿಶಾಮಕ ದಳ ನಿರ್ಮಾಣ, ಕಾಪು ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೆ, ಪುರಸಭೆಯ ಹೆಚ್ಚುವರಿ ಟ್ಯಾಕ್ಸ್ ಕಡಿಮೆ ಮಾಡಲಾಗುತ್ತದೆ. ಕಾಪು ಕ್ಷೇತ್ರಕ್ಕೆ ಆಟದ ಮೈದಾನ ನಿರ್ಮಾಣ, ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಮತ್ತು ಬಸ್ ಸ್ಟ್ಯಾಂಡ್ ನಿರ್ಮಾಣ, ಪಣಿಯೂರು-ಇನ್ನಂಜೆಯಲ್ಲಿ ರೈಲು ನಿಲುಗಡೆ, ಕೋಮು ಸೌಹಾರ್ದತೆಗೆ ಧಕ್ಕೆಯಾಗದಂತೆ ಸರ್ವರಿಗೂ ಸಮಾನ ಅವಕಾಶವನ್ನ ಮಾಡಿಕೊಡುವ ನಿಟ್ಟಿನಲ್ಲಿ ಪಕ್ಷ ಪ್ರಾಮಾಣಿಕವಾಗಿ ಪ್ರಯತ್ನಿಸಲಿದೆ ಎಂದರು.
ಜಿಲ್ಲಾಧ್ಯಕ್ಷ ಯೋಗೀಶ್ ವಿ ಶೆಟ್ಟಿ, ಅಭ್ಯರ್ಥಿ ಸಬೀನ ಸಮದ್,ಕಾರ್ಯಾಧ್ಯಕ್ಷ ವಾಸುದೇವ ರಾವ್,ರಾಜ್ಯ ಕಾರ್ಯದರ್ಶಿ ಸುಧಾಕರ್ ಶೆಟ್ಟಿ, ಮುಖಂಡರಾದ ಇಕ್ಬಾಲ್ ಅತ್ರಾಡಿ,ಜಯರಾಮ ಆಚಾರ್ಯ, ಭರತ್ ಶೆಟ್ಟಿ, ಸಂಜಯ್,ಉಮೇಶ್ ಕರ್ಕೇರ, ಚಂದ್ರಹಾಸ ಎರ್ಮಾಳ್,ಇಬ್ರಾಹಿಂ, ರಝಾಕ್ ಕರೀಂ ಹಾಗೂ ಫೈಝನ್ ಉಪಸ್ಥಿತರಿದ್ದರು.
ಹೆಜಮಾಡಿ : ದಾಖಲೆಗಳಿಲ್ಲದ್ದ 4.79 ಲಕ್ಷ ರೂ. ಮೌಲ್ಯದ ಸಿಗರೇಟ್ ವಶ

Posted On: 18-04-2023 07:00PM
ಹೆಜಮಾಡಿ : ಚುನಾವಣೆಯ ನಿಮಿತ್ತ ಹೆಜಮಾಡಿ ಚೆಕ್ಪೋಸ್ಟ್ ಬಳಿ ಅಧಿಕಾರಿಗಳು, ಪೋಲಿಸರು ತಪಾಸಣೆಯಲ್ಲಿದ್ದಾಗ ಕಾರು ಮತ್ತು ಯಾವುದೇ ದಾಖಲೆ ಇಲ್ಲದ 4.79 ಲಕ್ಷ ರೂ. ಮೌಲ್ಯದ ಸಿಗರೇಟ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾಪು ತಾಲೂಕು ಹೆಜಮಾಡಿ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ಆಗುತ್ತಿದ್ದ ಸಂದರ್ಭ ಮಂಗಳೂರು ಕಡೆಯಿಂದ ಬಂದ ಕಾರಿನಲ್ಲಿ ಕಾರು ಚಾಲಕ ಅಬ್ದುಲ್ ಖಾದರ್ ಅನ್ಸಾರ್ ಹಾಗೂ ಸುಫಿಯಾನ್ ಶೌರಿ ಇವರು ಯಾವುದೇ ದಾಖಲೆ ಇಲ್ಲದ 10 ಸಿಗರೇಟ್ ತುಂಬಿಸಿದ 20 ಪ್ಯಾಕ್ಗಳಿರುವ 120 ಬಂಡಲ್, ನಿಷೇಧೀತ E-Cigarette ತಲಾ 3 ಬಂಡಲ್ನಲ್ಲಿ ತಲಾ 10 ರಂತೆ ಒಟ್ಟು 30 ಸಿಗರೇಟ್ಗಳು ಇದ್ದು ಅವುಗಳ ಒಟ್ಟು ಮೌಲ್ಯ ರೂಪಾಯಿ 4,79,970 ಆಗಿದ್ದು, ಸಿಗರೇಟು ಬಂಡಲ್ಗಳನ್ನು ಮಂಜೇಶ್ವರ ಬಾಯಾರಿನ ಮೊಯ್ನು ಎಂಬಾತನು ಆರೋಪಿತರಿಗೆ ನೀಡಿ, ಅವುಗಳನ್ನು ಮಣಿಪಾಲದ ಸೈಫು ಎಂಬುವವನಿಗೆ ನೀಡುವಂತೆ ತಿಳಿಸಿರುವುದಾಗಿರುತ್ತದೆ. ಪೋಲಿಸರು ಸ್ವತ್ತುಗಳನ್ನು ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಕಾರನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಪು : ಬಿಜೆಪಿ ಪಕ್ಷದ ಮಾಧ್ಯಮ ಕೇಂದ್ರ ಮತ್ತು ಕಾಲ್ ಸೆಂಟರ್ ಉದ್ಘಾಟನೆ

Posted On: 18-04-2023 06:19PM
ಕಾಪು : ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಮಾಧ್ಯಮ ಕೇಂದ್ರ ಮತ್ತು ಕಾಲ್ ಸೆಂಟರ್ ನ್ನು ಬಿಜೆಪಿಯ ರಾಜ್ಯ ಚುನಾವಣಾ ಸಹ ಉಸ್ತುವಾರಿ ಕೆ. ಅಣ್ಣಾಮಲೈ ಹಾಗೂ ಶಾಸಕರಾದ ಲಾಲಾಜಿ ಮೆಂಡನ್ ಸಹಿತವಾಗಿ ಗಣ್ಯರು ಎಪ್ರಿಲ್ 17 ರಂದು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ಕಾಪು ಕ್ಷೇತ್ರದ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಉದ್ಯಮಿಗಳಾದ ಕೆ. ಪ್ರಕಾಶ್ ಶೆಟ್ಟಿ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಉಚ್ಚಿಲ : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ - ಬಿಜೆಪಿ ಕಾಪು ತಾಲೂಕು ಅಧ್ಯಕ್ಷನ ವಿರುದ್ಧ ದೂರು

Posted On: 17-04-2023 11:04PM
ಉಚ್ಚಿಲ : ಇಲ್ಲಿನ ಸಭಾಂಗಣವೊಂದರಲ್ಲಿ ಬಿಜೆಪಿ ವತಿಯಿಂದ ನಡೆದ ಸಭೆಯಲ್ಲಿ ಕಾಪು ತಾಲೂಕು ಬಿಜೆಪಿ ಪಕ್ಷದ ಅಧ್ಯಕ್ಷ ಯಾವುದೇ ಅನುಮತಿ ಪಡೆಯದೇ ಸುಮಾರು100 ಜನರಿಗೆ ಉಪಹಾರ ವಿತರಿಸಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಘಟನೆ ಆದಿತ್ಯವಾರ ನಡೆದಿದೆ
ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ 121-ಕಾಪು ವಿಧಾನಸಭಾ ಕ್ಷೇತ್ರದ ಫ್ಲೈಯಿಂಗ್ ಸ್ಕ್ವಾಡ್ 3 ನೇ ತಂಡದ ಅಧಿಕಾರಿಯಾಗಿರುವ ಮುಸ್ತಾಫ್ ರವರಿಗೆ ಜಿಲ್ಲಾಧಿಕಾರಿಗಳ ಕಛೇರಿ ಚುನಾವಣಾ ವಿಭಾಗದಿಂದ ಬಂದ ದೂರಿನಂತೆ ಕಾಪು ತಾಲೂಕು ಬಡಾ ಗ್ರಾಮ ಉಚ್ಚಿಲದಲ್ಲಿರುವ ಸಭಾಭವನದಲ್ಲಿ ಭಾರತೀಯ ಜನತಾ ಪಾರ್ಟಿಯ ಪರವಾಗಿ ಆಯೋಜಿಸಿರುವ ಸಭೆಯಲ್ಲಿ ಭಾಗವಹಿಸುತ್ತಿರುವ ವ್ಯಕ್ತಿಗಳಿಗೆ ಕಾಪು ತಾಲೂಕು ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾದ ಶ್ರೀಕಾಂತ್ನಾಯಕ್ ರವರು ಯಾವುದೇ ಅನುಮತಿ ಪಡೆಯದೇ ಉಪಾಹಾರದ ವ್ಯವಸ್ಥೆ ಮಾಡಿದ್ದ ಬಗ್ಗೆ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ನಾಳೆ (ಎಪ್ರಿಲ್ 18) : ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

Posted On: 17-04-2023 07:00PM
ಕಾಪು : ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ, ಶಾಸಕರಾದ ವಿನಯ್ ಕುಮಾರ್ ಸೊರಕೆ ನಾಳೆ ಕಾಪು ತಾಲೂಕು ಕಛೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.
ಬೆಳಿಗ್ಗೆ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಅಲ್ಲಿಂದ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಅಲ್ಲಿಂದ ಕಾಲ್ನಡಿಗೆಯಲ್ಲಿ ಕಾಪು ಪೇಟೆಯವರೆಗೆ ಬಂದು ಅಲ್ಲಿ ಸಾರ್ವಜನಿಕ ಸಭೆ ನಡೆಸಿ, ತದನಂತರ ಅಪರಾಹ್ನ ಗಂಟೆ 12.05 ರ ನಂತರ ಕಾಪು ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿಯವರಿಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ಪ್ರಕಟನೆ ತಿಳಿಸಿದೆ.
ಉಚ್ಚಿಲ : ಕಾಂಗ್ರೆಸ್ ನ ಗ್ಯಾರಂಟಿ ಕಾಡ್೯ ಚೀನಿ ಸೆಟ್ ರೇಡಿಯೋ ಕತೆಯಂತೆ - ಕೋಟ ಶ್ರೀನಿವಾಸ ಪೂಜಾರಿ

Posted On: 16-04-2023 04:54PM
ಉಚ್ಚಿಲ : ಸಾಮಾಜಿಕ ಜಾಲತಾಣವನ್ನು ಅತ್ಯಂತ ಬಲಿಷ್ಟಗೊಳಿಸಬೇಕಾಗಿದೆ. ಆಡಳಿತಾತ್ಮಕ, ಸೈದ್ಧಾಂತಿಕ ಸಮರ್ಥನೆಗೂ ಸಾಮಾಜಿಕ ಜಾಲತಾಣ ಅನಿವಾರ್ಯ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಉಚ್ಚಿಲ ಮೊಗವೀರ ಸಭಾಭವನದಲ್ಲಿ ಜರಗಿದ ಮಂಗಳೂರು ವಿಭಾಗದ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಈ ಬಾರಿ ಬಿಜೆಪಿ ಪಕ್ಷವು ಟಿಕೆಟ್ ಹಂಚಿಕೆಯಲ್ಲಿ ಐವತ್ತು ಮಂದಿ ಹಿಂದುಳಿದವರಿಗೆ, 30 ಮಂದಿ ಪರಿಶಿಷ್ಟ ಜಾತಿ,18 ಮಂದಿ ಪರಿಶಿಷ್ಟ ಪಂಗಡದವರಿಗೆ ಅವಕಾಶ ನೀಡಿದೆ. ಚುನಾವಣೆ ಗೋಸ್ಕರ ಅಲ್ಲ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮೀಸಲಾತಿ ಸಿಗುವಂತೆ ಮಾಡುವುದೇ ಬಿಜೆಪಿಯ ಉದ್ದೇಶ. ಕಾಂಗ್ರೆಸ್ ಪಕ್ಷವನ್ನು ಜನರು ನಂಬುತ್ತಿಲ್ಲ. ಹಾಗಾಗಿ ಗ್ಯಾರಂಟಿ ಗ್ಯಾರಂಟಿ ಎನ್ನುತ್ತಿದ್ದಾರೆ. ಕಾಂಗ್ರೆಸ್ ನ ಗ್ಯಾರಂಟಿ ಕಾಡ್೯ ಚೀನಿ ಸೆಟ್ ರೇಡಿಯೋ ಕತೆಯಂತೆ. ರೆಡಿಯೋ ಹಾಳಾಗುತ್ತದೆ ಎಂದು ಜನ ಕೊಳ್ಳಲು ಗ್ಯಾರಂಟಿ ಕಾಡ್೯ ಕೊಡುತ್ತಿದ್ದ. ಹಾಳಾದ ರೇಡಿಯೋಗೆ ಗ್ಯಾರಂಟಿ ಕಾಡ್೯ ಇದೆ ಎಂದು ಕೊಂಡೊಯ್ದರೆ ಗ್ಯಾರಂಟಿ ಕಾಡ್೯ಗೇ ಗ್ಯಾರಂಟಿ ಇಲ್ಲ ಎನ್ನುತ್ತಿದ್ದ. ಅಂತೆಯೇ ಕಾಂಗ್ರೆಸ್ ನ ಗ್ಯಾರಂಟಿ ಕಾಡ್೯ ಜನರನ್ನು ವಂಚಿಸುವ ಕಾಡ್೯ ಎಂದರು.
ಈ ಸಂದರ್ಭ ಕುಯಿಲಾಡಿ ಸುರೇಶ್ ನಾಯಕ್, ಉದಯ ಕುಮಾರ್ ಶೆಟ್ಟಿ, ವಿಕಾಸ್ ಪುತ್ತೂರು, ಸುದರ್ಶನ್, ಸುದೀಪ್ ಶೆಟ್ಟಿ, ರಾಘವೇಂದ್ರ ಠಾಕೂರ್, ಅಜಿತ್ ಕುಮಾರ್, ಜೀತು ಪೂಜಾರಿ, ದೆಹಲಿ ಶಾಸಕ ವಿಜೇಂದ್ರ ಗುಪ್ತ, ಶ್ರೀಕಾಂತ ನಾಯಕ್, ಮಹೇಶ್ ಠಾಕೂರ್ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮತ್ತು ವಿಕಾಸ್ ಪುತ್ತೂರು ಡಿಜಿಟಲ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಸುಜಾತ ಪ್ರಾರ್ಥಿಸಿದರು. ಮಹೇಶ್ ಪೂಜಾರಿ ಸ್ವಾಗತಿಸಿದರು.
ರಾಷ್ಟ್ರ ದೃಷ್ಟಿಯ ದೇವಾಲಯ ಉತ್ಸವ : ಎಲ್ಲೂರು ವಿಶ್ವೇಶ್ವರ ದೇವರಿಗೆ "ಭೌವನೋತ್ಸವ"

Posted On: 16-04-2023 09:04AM
ರಾಷ್ಟ್ರೀಯ ಏಕತೆ , ರಾಷ್ಟ್ರದ ಸಮೃದ್ಧಿ , ಪ್ರಜಾಶಾಂತಿ , ಜನಪದರ ನೆಮ್ಮದಿಯೆ ಮೊದಲಾದ ಲೋಕದೃಷ್ಟಿಯ ಆಶಯವಿರುವ "ದೇವಾಲಯಗಳ ವಾರ್ಷಿಕ ಮಹೋತ್ಸವ"ಗಳು ಸಕಲ ಪಾಪಗಳನ್ನು ಪರಿಹರಿಸುವಂತಹದ್ದು , ಅಮಂಗಲವನ್ನು ನಾಶಪಡಿಸುವಂತಹದ್ದು ,ಸೌಭಾಗ್ಯ - ಸಂತತಿ - ಸಂಪತ್ತು ಕೊಡುವಂತಹದ್ದು , ಧರ್ಮ - ಅರ್ಥ - ಕಾಮ - ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥ ಈಡೇರಿಸುವಂತಹದ್ದು ಎಂಬುದು ಶಾಸ್ತ್ರ ಪ್ರಮಾಣ. ಈ ಸಂಕಲ್ಪದೊಂದಿಗೆ ನಡೆಸುವ ಉತ್ಸವದ ಅಂತ್ಯದಲ್ಲಿ ಮಹೋತ್ಸವದಿಂದ ಸಂತುಷ್ಟರಾದ ದೇವರು ರಾಜನಿಗೆ - ರಾಷ್ಟ್ರಕ್ಕೆ = "ರಾಜಾರಾಷ್ಟ್ರಕ್ಕೆ" ಹಾಗೂ ನಡೆಸಿದಂತಹಾ ಕರ್ತೃಗಳಿಗೆ, ನೋಡಿದಂತಹ ಮಹಾಜನರಿಗೆ ಬರುವಂತಹ ಸಕಲಾರಿಷ್ಟಗಳನ್ನು ಪರಿಹರಿಸಿ ಸದಾ ಭಾಗ್ಯ- ಭೋಗ - ನಿತ್ಯಸೌಮಂಗಲ್ಯೋತ್ಸವವನ್ನು ಅನುಗ್ರಹಿಸಬೇಕೆಂದು ಪ್ರಾರ್ಥಿಸಿಕೊಳ್ಳವುದು ಅಥವಾ ಧ್ಯಾನಿಸುವ ಸಂಪ್ರದಾಯವಿದೆ . ಇಂತಹ ಉತ್ಸವಗಳು ಅಂಕುರಾರೋಪಣ ಮೂಲಕ ನೆರವೇರಿದರೆ ಉತ್ತಮ , ಧ್ವಜಾರೋಹಣ ಪುರಸ್ಸರ ಸಂಪನ್ನಗೊಂಡರೆ ಮಧ್ಯಮ , ಭೇರಿತಾಡನ ಪೂರ್ವಕ ನಡೆದರೆ ಅಧಮ ಎಂದು ಉತ್ಸವಗಳನ್ನು ತಂತ್ರ - ಆಗಮ ಶಾಸ್ತ್ರಗಳು ವಿವರಿಸುತ್ತವೆ . ಒಂದು ದಿನದಲ್ಲಿ ಪೂರೈಸುವ ಉತ್ಸವವು ಶೈವೋತ್ಸವ , ಮೂರುದಿನಗಳ ಉತ್ಸವ ಗೌಣೋತ್ಸವ , ಐದು ದಿನಗಳ ಉತ್ಸವ ಭೌತಿಕೋತ್ಸವ, ಏಳು ದಿನಗಳ ಉತ್ಸವ ಭೌವನೋತ್ಸವ, ಒಂಬತ್ತು ದಿನಗಳ ಉತ್ಸವ ದೈವಿಕೋತ್ಸವ, ಹನ್ನೆರಡು ದಿನಗಳ ಉತ್ಸವ ಶ್ರೀಕರೋತ್ಸವ, ಇಪ್ಪತ್ತೊಂದು ದಿನಗಳ ಉತ್ಸವ ರೌದ್ರೋತ್ಸವ. ಇಂತಹ ಮಹೋತ್ಸವವನ್ನು ವರ್ಷದ ಯಾವ ತಿಂಗಳುಗಳಲ್ಲಿ ಮಾಡಬಹುದು ಅಥವಾ ಪ್ರಾರಂಭಿಸಬಹುದು ಎಂದರೆ : ಕಾರ್ತಿಕ ಮಾಸದಲ್ಲಿ , ಮಾರ್ಗಶಿರ ಮಾಸದಲ್ಲಿ ,ಮಾಘ - ಪಾಲ್ಗುಣ ಮಾಸಗಳಲ್ಲಿ , ಚೈತ್ರ - ವೈಶಾಖ ಮಧ್ಯದಲ್ಲಾಗಲಿ ನರವೇರಿಸ ಬಹುದೆಂಬುದು ಶಾಸ್ತ್ರ ಸೂಚನೆ . ಸಂಕ್ರಮಣದಲ್ಲಾಗಲಿ ,ಪೌರ್ಣಮಿ - ಅಮಾವಸ್ಯೆಯಲ್ಲಾಗಲಿ , ದೇವರ ಜನ್ಮನಕ್ಷತ್ರದಲ್ಲಾಗಲಿ ಮಹೋತ್ಸವ ಆರಂಭಿಸಬೇಕು ಎಂದು ನಿರ್ದೇಶಿಸುತ್ತದೆ ಶಾಸ್ತ್ರ . ಎಲ್ಲೂರಿನ ಮಹತೋಭಾರ ಶ್ರೀ ವಿಶ್ವೇಶ್ವರ ದೇವರ ಸನ್ನಿಧಿಯಲ್ಲಿ ಮೇಷ ಸಂಕ್ರಮಣದಂದು ಧ್ವಜಾರೋಹಣ ಪರಸ್ಸರ ಉತ್ಸವ ಆರಂಭವಾಗುತ್ತದೆ . ಈ ಸಂದರ್ಭವು ಚೈತ್ರ - ವೈಶಾಖ ಮಾಸಗಳ ನಡುವೆ ಒದಗಿಬರುತ್ತದೆ. ಎ.13 ರಂದು ಅಂಕುರಾರೋಪಣ,ಎಪ್ರಿಲ್ 14 ರಂದು ಧ್ಜಜಾರೋಹಣದೊಂದಿಗೆ ಉತ್ಸವ ಆರಂಭಗೊಂಡು ಎಪ್ರಿಲ್ 20 ರ ಪರ್ಯಂತ ಏಳು ದಿನಗಳ ಕಾಲ ನೆರವೇರುವುದು .ಏಳು ದಿನಗಳ ಉತ್ಸವವಾಗಿರುವುದರಿಂದ ಇದು "ಭೌವನೋತ್ಸವ".
ನಡೆದೇಗುಲದಲ್ಲಿ ದೇವರು : ಉತ್ಸವ ಎಂದರೆ ಒಂದಷ್ಟು ಅಲಂಕಾರ , ಧಾರ್ಮಿಕ ವಿಧಿ ವಿಧಾನಗಳು ,ತಂತ್ರಿಯವರ ನಿರ್ವಹಣೆಯ ಪೂಜೆ - ಬಲಿಗಳು , ವಿವಿಧ ವಾದ್ಯ - ವಾದನಗಳ ಸಡಗರದ ಬಲಿ , ಪಾಲಕಿ ಸುತ್ತು , ಕಟ್ಟೆಪೂಜೆ , ಸಿಡಿಮದ್ದು ಸಿಡಿಸುವುದು ಹಾಗೂ ಊರಿಗೆ ಊರೆ ಸಂಭ್ರಮಿಸುವ ಸಂದರ್ಭ . ಮಹಾಕ್ರೀಡೆಗಳು ನಡೆದು ಅದು ಮಹೋತ್ಸವವಾಗುತ್ತದೆ . ಈ ವಿಜೃಂಭಣೆಯ ಆಚರಣೆಗೆ ಮಹತ್ತು ಪ್ರಾಪ್ತಿಯಾಗುವುದು ರಥದಿಂದ . ರಥಾರೋಹಣ - ರಥೋತ್ಸವ - ರಥ ಎಳೆಯುವುದು ಮುಂತಾದ ಸಮಷ್ಟಿಗೆ ಪಾಲ್ಗೋಳ್ಳವಿಕೆಯ ಅವಕಾಶದಿಂದ ಇದನ್ನು "ಶ್ರೀಮನ್ಮಮಹಾರಥೋತ್ಸವ" ಎಂದಿರಬೇಕು. ರಥೋತ್ಸವ : ಸರ್ವಾಲಂಕೃತ ರಥವು ಸಾಗಿಬರುವುದನ್ನು ಕಂಡಾಗ ನಮಗನ್ನಿಸುವುದು ದೇವಾಲಯವೊಂದು ನಡೆದು ಬರುತ್ತಿರುವಂತೆ . ಆದುದರಿಂದ ರಥಗಳನ್ನು " ನಡೆದೇಗುಲ"ಗಳೆಂದು ಕರೆದಿರಬೇಕು . ಜನಪದರು ಸೇರಿ ಕಟ್ಟಿದ ರಥದಲ್ಲಿ ದೇವರ ರಥಾರೋಹಣದ ಪೂರ್ವಭಾವಿಯಾಗಿ ರಥದ ಚಕ್ರದಿಂದ ಆರಂಭಿಸಿ ಶಿಖರ ಪರ್ಯಂತ ದೇವಾನುದೇವತೆಗಳ ಸನ್ನಿಧಾನವನ್ನು ಆವಾಹಿಸಲಾಗುವುದು , ಇಂತಹ ದೇವಲೋಕವೇ ಆಗುವ ಅಲಂಕೃತ ರಥಕ್ಕೆ ದೇವರ ಆರೋಹಣ , ರಥೋತ್ಸವ ಇವೆಲ್ಲ ಆಗಮ ಶಾಸ್ತ್ರದ ಕಲ್ಪನೆ - ಅನುಸಂಧಾನ. ದೇವರ ರಥಾರೋಹಣದ ಬಳಿಕ ಪೂಜೆ . ರಥ ಎಳೆಯುವ ಮೊದಲು ಸ್ಥಳವಂದಿಗರು , ಅಜಕಾಯಿ ಒಡೆಯುವ ಪಾರಂಪರಿಕ ಕ್ರಮವು ಎಲ್ಲೂರಿನಲ್ಲಿದೆ . ಇಂದಿಗೂ ನಡೆಯುತ್ತದೆ . ಇದಕ್ಕೆ ಪ್ರಾಶಸ್ತ್ಯವಿದೆ . ಇದೊಂದು ರಥೋತ್ಸವ ಎಂಬ ಆಚರಣೆಯ ಪದ್ಧತಿಯಾಗಿ ನೆರವೇರುತ್ತದೆ . ಇಂತಹ ಭವ್ಯ - ದಿವ್ಯ ರಥದಲ್ಲಿ ಸನ್ನಿಹಿತರಾಗುವ ದೇವರ ದರ್ಶನ ಮಾತ್ರದಿಂದ ಪುನರ್ಜನ್ಮವಿಲ್ಲ ಎಂಬ ಮಾತು , ಹಾಗೂ ಅಶ್ವಮೇಧ ಫಲಪ್ರಾಪ್ತಿ ಎಂಬ ಹೇಳಿಕೆಗಳು ರಥೋತ್ಸವಕ್ಕೆ ಪ್ರಾಧಾನ್ಯ ಕೊಡುತ್ತವೆ , ಬಹುಸಂಖ್ಯೆಯ ಮಂದಿ ಭಾಗವಹಿಸುತ್ತಿರುವ ಸಾರ್ವತ್ರಿಕ ವ್ಯಾಪ್ತಿಯನ್ನು ಸಮರ್ಥಿಸುತ್ತದೆ . ಗರ್ಭಗುಡಿಯಲ್ಲಿರುವ ದೇವರು ಅಂಗಣಕ್ಕೆ ಬರುವ ಪದ್ಧತಿ ಸಾಮಾನ್ಯ .ಆದರೆ ಉತ್ಸವ ಕಾಲದಲ್ಲಿ ದೇವರು ಊರಿನ ಎಲ್ಲೆಡೆ ಕಟ್ಟೆಪೂಜೆಗೆ ಹೋಗುವುದು , ರಥದಲ್ಲಿ ಸಂಚರಿಸುವುದು , ಅವಭೃತ , ಸೂಟೆದಾರ ಮುಂತಾದ ಉತ್ಸವ ವಿಧಿಗಳು ಸೂಕ್ಷ್ಮ ದಿಂದ ಸ್ಥೂಲಕ್ಕೆ ತೆರೆದುಕೊಳ್ಳುವ ದೇವಾಲಯ ಪರಿಕಲ್ಪನೆಯನ್ನು ಮತ್ತೆ ದೃಢಗೊಳಿಸುತ್ತದೆ . ಈ ಎಲ್ಲಾ ಸಮಾಜಮುಖಿ ಚಿಂತನೆ ಇರುವ ಕಾರಣಕ್ಕೆ ದೇವಾಲಯ ಉತ್ಸವ ಸರ್ವರ - ಸಮಾಜದ - ಭಕ್ತ ಸಂದಣಿಯ ಉತ್ಸಾಹಕ್ಕೆ ಕಾರಣವಾಗುತ್ತದೆ .ಇದು ಖಂಡಿತಾ ಸಂಕುಚಿತವಲ್ಲ ,ವೈಚಾರಿಕ ವೈಶಾಲ್ಯತೆ ಇರುವಂತಹದ್ದು ಎಂದನಿಸುವುದಿಲ್ಲವೆ . ಶಯನೋತ್ಸವ : ಇದು ಕಾಲಕ್ಕೆ ಸರಿಯಾದ ಮಳೆ - ಬೆಳೆ - ಸಮೃದ್ಧಿ ಆಶಯದ ಉತ್ಸವಾಂಗ . ರಥೋತ್ಸವದ ಬಳಿಕ ಅಂದು ರಾತ್ರಿ ದೇವರ ಗರ್ಭಗುಡಿಯಲ್ಲಿ ಈ ಶಯನೋತ್ಸವ ನಡೆಯುತ್ತದೆ . ನಿದ್ರಾಕಲಶವಿರಿಸಿ ,ಪಾರ್ವತಿ ಪರಮೇಶ್ವರರನ್ನು ಸುಖನಿದ್ದೆಗಾಗಿ ಪ್ರಾರ್ಥಿಸಿ ಗರ್ಭಗುಡಿಯ ದ್ವಾರವನ್ನು ಬಂಧಿಸಬೇಕು. ಮರುದಿನ ಸುಪ್ರಭಾತದಲ್ಲಿ ಕವಾಟೋದ್ಘಾಟನೆ.ಮಧ್ಯಾಹ್ನ ಸಂಭ್ರಮದ ಉತ್ಸವ. ಸಂಜೆ ಓಕುಳಿ - ಮಾಣಿಯೂರು ಮಠದಲ್ಲಿ ಅವಭೃತ. ಹಿಂದಿರುಗುವಾಗ ತೂಟೆದಾರ.ಅವಭೃತ - ಆರಟ. 'ಆರಟ'ವನ್ನು "ಜಳಕ"ವೆಂದೂ ಹೇಳುತ್ತಾರೆ . ದೇವಳಕ್ಕೆ ಹಿಂದಿರುಗಿದ ಮೇಲೆ ಮೂಲಸ್ಥಾನ ವಿಶ್ವೇಶ್ವರ ದೇವರಿಗೆ "ಗಂಧಪೂಜೆ". ಉತ್ಸವದಲ್ಲಿ ಸಂಭವಿಸಿರಬಹುದಾದ ನ್ಯೂನಾತಿರಿಕ್ತ ದೋಷ ಪರಿಹಾರ ಹಾಗೂ ಸಕಾಲದ ಮಳೆ - ಬೆಳೆ - ಸರ್ವಸಮೃದ್ಧಿಯನ್ನು ಯಾಚಿಸಿ ಈ ಪೂಜೆ ಮೂಲಲಿಂಗಕ್ಕೆ ತೇದ ಗಂಧವನ್ನು ಲೇಪಿಸಿ ಸೀಮೆಯ ಪ್ರಾರ್ಥನೆಯೊಂದಿಗೆ ಸಂಪನ್ನಗೊಳ್ಳುವುದು. ಮುಂದೆ ಧ್ವಜಾವರೋಹಣ , ಮಹಾಮಂತ್ರಾಕ್ಷತೆ. ದೀಪಾರಾಧನೆಯಂತೆ , ದೀಪೋತ್ಸವದಂತೆ , ದೀವಟಿಗೆಗಳಂತೆ , ಹಿಲಾಲುಗಳ ವೈಭವದಂತೆ , ಪಚ್ವೆಡಿಯ (ಬಟ್ಟೆಯನ್ನು ಎಣ್ಣೆಯಲ್ಲಿ ಅದ್ದಿ ಹಿಲಾಲಿನ ತುದಿಗೆ ಕಟ್ಟಿ ದೇವರ ಮುಂಭಾಗ ಉರಿಸುವುದು) ಸೇವೆಯಂತೆ , ಸಿಡಿಮದ್ದು ಸಿಡಿಸುವ ಗದ್ದಲದಂತೆ 'ತೂಟೆದಾರ' ನಡೆಯುತ್ತದೆ .
ಸುಮಾರು 900 - 1000 ವರ್ಷ ಪುರಾತನವಾದ ಎಲ್ಲೂರಿನ ವಿಶ್ವೇಶ್ವರ ದೇವರು "ಕುಂದ ಅರಸರ" ತಪಸ್ಸಿಗೆ ಒಲಿದು ಕಾಶಿಯಿಂದ ಬಂದರೆಂಬುದು ಕ್ಷೇತ್ರ ಸಂಬಂಧಿಯಾದ ಪುರಾಣ ಕಥೆ.ಮೂಲಸ್ಥಾನ ವಿಶ್ವೇಶ್ವರ ದೇವರಿಗೆ ಅನ್ನಪೂರ್ಣೇಶ್ವರೀ ಹಾಗೂ ಗಣಪತಿ ಉಪಸ್ಥಾನ ಸನ್ನಿಧಿಗಳು.ಉಳಿದಂತೆ ಮೂಲ ಸ್ಥಾನದಲ್ಲಿರುವ ಬ್ರಹ್ಮ,ನಾಗ,ಚಾವುಂಡಿ, ಗುಳಿಗ ಸನ್ನಿಧಾನಗಳು ಮತ್ತು ವೀರಭದ್ರ ,ನಂದಿಕೇಶ್ವರ ಹಾಗೂ ಆಂಜನೇಯ ಸಂಕಲ್ಪಗಳು ಪರಿವಾರ ಶಕ್ತಿಗಳು ಕ್ಷೇತ್ರದಲ್ಲಿ ಸನ್ನಿಹಿತವಾಗಿವೆ.ಪುರಾತನ ಸಂಪ್ರದಾಯ,ಆಚರಣೆಯ ಪದ್ಧತಿಗಳನ್ನು ಉಳಿಸಿಕೊಂಡು ಬಂದಿರುವ ಜಿಲ್ಲೆಯ ಕೆಲವೇ ದೇವಳಗಳಲ್ಲಿ ಎಲ್ಲೂರಿನ ಮಹತೋಭಾರ ಶ್ರೀವಿಶ್ವೇಶ್ವರ ದೇವಸ್ಥಾನ ಒಂದು. ಇದೊಂದು ಮಾಗಣೆಗಳ ಕೂಡುಕಟ್ಟು ಹಾಗೂ ನೂರ ಐದು ಸ್ಥಳವಂದಿಗರಿರುವ ಸೀಮೆಯ ದೇವಳ. ಭಾರತೀಯ ದೇವಾಲಯಗಳಿಗೆ ಜಾನಪದ ಮೂಲವಿದೆ ಎಂಬ ವಿದ್ವಾಂಸರ - ಸಂಶೋಧಕರ ಅಭಿಪ್ರಾಯಗಳು ದೇವಳಗಳಲ್ಲಿ ನೆರವೇರುವ ವಾರ್ಷಿಕ ಉತ್ಸವ ವಿಧಾನಗಳಿಂದ , ಆ ವೇಳೆಯ ಸಮಷ್ಟಿಯ ಸಹಭಾಗಿತ್ವದ ಶೈಲಿಯಿಂದ ದೃಢಗೊಳ್ಳುತ್ತದೆ . ಲೇಖನ : ಕೆ.ಎಲ್.ಕುಂಡಂತಾಯ { "ಮಹತೋಭಾರ ಎಲ್ಲೂರು ವಿಶ್ವನಾಥ" - 'ಕ್ಷೇತ್ರ ಪರಿಚಯ' ಪುಸ್ತಕದಿಂದ.}
ಕಾರ್ಯಕ್ರಮದ ವಿವರ : 14- 04- 2023.......ಧ್ವಜಾರೋಹಣ 18 - 04 - 2023 ....ಮೃತ್ಯುಂಜಯ ಯಾಗ 19 - 04 - 2023... ಶ್ರೀ ಮನ್ಮಹಾರಥೋತ್ಸವ 20 - 4 -2023.. ಕವಾಟೋದ್ಘಾಟನೆ, ಅವಭೃತ,ಗಂಧಪೂಜೆ, ಧ್ವಜಾವರೋಹಣ, ಮಹಾಮಂತ್ರಾಕ್ಷತೆ.