Updated News From Kaup

ಪಡುಬಿದ್ರಿ : ಕಡಲ್ಕೊರೆತ ಪ್ರದೇಶಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ ; ಶಾಶ್ವತ ಪರಿಹಾರದ ಭರವಸೆ

Thumbnail
Posted On: 08 Jul 2023, 10:49 PM

ಪಡುಬಿದ್ರಿ : ಉಡುಪಿ ಜಿಲ್ಲೆಯಲ್ಲಿ ಪ್ರತಿವರ್ಷ ಸಂಭವಿಸುವ ಕಡಲ್ಕೊರೆತ ತಡೆಗೆ ತಮ್ಮ ಅವಧಿಯಲ್ಲಿ ಶಾಶ್ವತ ಪರಿಹಾರವನ್ನು ಕೈಗೊಳ್ಳಲು ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು. ಅವರು ಇಂದು ಪಡುಬಿದ್ರಿಯ ಕಾಡಿಪಟ್ಣದಲ್ಲಿ ಸಮುದ್ರ ಕೊರೆತ ಪ್ರದೇಶ ವೀಕ್ಷಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಮಳೆಗಾಲದಲ್ಲಿ ಸಮುದ್ರ ಕೊರೆತ ಸಂಭವಿಸುತ್ತಿರುವುದು ಸಾಮಾನ್ಯವಾಗಿದ್ದು ಈ ಬಗ್ಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಶಾಶ್ವತ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದರು. ಜಿಲ್ಲೆಯಲ್ಲಿ ಈ ಬಾರಿ ತಡವಾಗಿ ಮಳೆ ಆರಂಭಗೊಂಡಿದ್ದರು ಸಹ ಪ್ರಾಕೃತಿಕ ವಿಕೋಪದಿಂದ ಇದುವರೆಗೆ ಏಳು ಮಂದಿ ಮೃತಪಟ್ಟಿದ್ದು ಇವರ ಕುಟುಂಬದವರಿಗೆ ತಲಾ ರೂ. ಐದು ಲಕ್ಷಗಳ ಪರಿಹಾರವನ್ನು ವಿತರಿಸಲಾಗಿದೆ ಜಿಲ್ಲೆಯಲ್ಲಿ ಮಳೆಯಿಂದ ಜೀವ ಹಾನಿ ಸಂಭವಿಸದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಮಳೆಯಿಂದ ಮಾನವ ಜೀವ ಹಾನಿ,ಮನೆ ಹಾನಿ, ಜಾನುವಾರು ಹಾನಿಗೆ ಸಂಬಂಧಿಸಿದಂತೆ ತಕ್ಷಣವೇ ಸೂಕ್ತ ಪರಿಹಾರ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಚಿವರು ಜಿಲ್ಲೆಯಲ್ಲಿ ಕಾಲು ಸಂಕ ಗಳ ನಿರ್ಮಾಣ ಮತ್ತು ಕಿಂಡಿ ಅಣೆಕಟ್ಟು ನಿರ್ಮಾಣದ ಬಗ್ಗೆ ಮಾಹಿತಿ ಪಡೆದು ಅಗತ್ಯ ಕ್ರಮ ವಹಿಸಲಾಗುವುದು ಎಂದರು. ಈ ಸಂದರ್ಭ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿ.ಪಂ. ಸಿಇಓ ಪ್ರಸನ್ನ ಹೆಚ್, ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ ಹಾಕೆ, ತಹಸೀಲ್ದಾರ್ ಶ್ರೀನಿವಾಸ ಕುಲಕರ್ಣಿ, ಅಶೋಕ್ ಕುಮಾರ್ ಕೊಡವೂರು, ಉದಯಕುಮಾರ್ ಶೆಟ್ಟಿ, ನವೀನ್ ಚಂದ್ರ ಜೆ.ಶೆಟ್ಟಿ, ರಾಜಶೇಖರ ಕೋಟ್ಯಾನ್, ಶರ್ಫುದ್ದೀನ್, ಶಿವ ಪ್ರಸಾದ್ ಶೆಟ್ಟಿ ಎರ್ಮಾಳ್, ದೀಪಕ್ ಎರ್ಮಾಳ್, ಕಿಶೋರ್ ಕುಮಾರ್ ಎರ್ಮಾಳ್, ಗಣೇಶ್ ಕೋಟ್ಯಾನ್, ನವೀನ್ ಎನ್.ಶೆಟ್ಟಿ, ರಮೀಜ್ ಹುಸೇನ್, ಜ್ಯೋತಿ ಮೆನನ್, ಫರ್ಜಾನ, ಸಂಜಯ್, ನಿಯಾಜ್, ಆಶಾ ಕಟಪಾಡಿ, ತಸ್ನೀನ್ ಅರ, ಕರುಣಾಕರ್ ಪೂಜಾರಿ, ಹಸನ್ ಮತ್ತಿತರರು ಉಪಸ್ಥಿತರಿದ್ದರು.

ಕಾಪು : ನೆಲ್ಲಿಕಟ್ಟೆಯಲ್ಲಿ ಬಾಲ ಸಂಸ್ಕಾರ ಕೇಂದ್ರ ಉದ್ಘಾಟನೆ

Thumbnail
Posted On: 08 Jul 2023, 10:22 PM

ಕಾಪು : ವಿಶ್ವ ಹಿಂದೂ ಪರಿಷದ್ ಭಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮೂಡುಬೆಳ್ಳೆ ಘಟಕದ ವತಿಯಿಂದ ನೆಲ್ಲಿಕಟ್ಟೆಯಲ್ಲಿ ಬಾಲ ಸಂಸ್ಕಾರ ಕೇಂದ್ರ ಉದ್ಘಾಟನೆಗೊಂಡಿತು. ಶಿರ್ವವಲಯದ ಗೌರವಸಲಹೆಗಾರರಾದ ಮಧ್ವರಾಜಭಟ್ ದೀಪ ಬೆಳಗಿಸುವುದರ ಮೂಲಕ ಬಾಲ ಸಂಸ್ಕಾರ ಕೇಂದ್ರವನ್ನು ಉದ್ಘಾಟಿಸಿ ಬಾಲ ಸಂಸ್ಕಾರ ಕೇಂದ್ರದ ಅವಶ್ಯಕತೆಯ ಬಗ್ಗೆ ಮಾತನಾಡಿದರು. ಈ ಸಂದರ್ಭ ಕಾಪು ಪ್ರಖಂಡ ಕಾರ್ಯದರ್ಶಿ ರಾಜೇಂದ್ರಶೆಣೈ, ಮಾತೃಶಕ್ತಿ ಕಾಪು ತಾಲೂಕು ಪ್ರಮುಖ್ ವಾಣಿ ಆಚಾರ್ಯ, ಶಿರ್ವವಲಯ ಗೌರವಾಧ್ಯಕ್ಷರಾದ ನಾಗರಾಜಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಶ್ವ ಹಿಂದೂ ಪರಿಷದ್ ಕಾಪು ಪ್ರಖಂಡ ಸಹ ಕಾರ್ಯದರ್ಶಿ ವಿಖ್ಯಾತ್ ಭಟ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕಾರ್ಕಳ : ಕ್ರಿಯೇಟಿವ್‌ ಕಾಲೇಜು - ಕ್ರಿಯೇಟಿವ್‌ ಸಮಾಗಮ

Thumbnail
Posted On: 08 Jul 2023, 04:39 PM

ಕಾರ್ಕಳ : ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನ (ರಿ) ಕಾರ್ಕಳ ಇದರ ವತಿಯಿಂದ ದಿನಾಂಕ ಜುಲೈ 7ರಂದು 2023-24 ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ʼಕ್ರಿಯೇಟಿವ್‌ ಸಮಾಗಮʼ ಕಾಲೇಜಿನ ನೇಸರ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ವಾರ್ಷಿಕ ಸಂಚಿಕೆ “ಸಪ್ತಸ್ವರ”ವನ್ನು ಬಿಡುಗಡೆಗೊಳಿಸಿ ಮಾತನಾಡಿದ ಡಾ. ಗಣನಾಥ ಶೆಟ್ಟಿಯವರು ವಿದ್ಯಾರ್ಥಿಗಳು ವಿದ್ಯಾರ್ಥಿದೆಸೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಾಧನೆ ಮಾಡುವಂತಾಗಲಿ ಎಂದು ಆಶಿಸಿದರು. ಸಂಸ್ಥಾಪಕರಾದ ಅಮೃತ್‌ ರೈ ಕಾಲೇಜಿನ ವಿವಿಧ ಸಂಘಗಳನ್ನು ಉದ್ಘಾಟಿಸಿದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಅಶ್ವತ್‌ ಎಸ್‌. ಎಲ್‌ ರವರು ಬದುಕನ್ನು ನಿರ್ಧರಿಸುವ ಪಿ.ಯು ಶಿಕ್ಷಣದಲ್ಲಿ ತಾವುಗಳೆಲ್ಲ ತಮ್ಮ ಅಪ್ಪ ಅಮ್ಮಂದಿರ ಭರವಸೆ ಉಳಿಸಿಕೊಳ್ಳುವಂತಹ ಸಾಧನೆ ಮಾಡುವಂತಾಗಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌ ಮಾತನಾಡಿ ಕ್ರಿಯಾಶೀಲ ವ್ಯಕ್ತಿತ್ವದಿಂದ ಮಾತ್ರ ಸವಾಲುಗಳನ್ನು ಎದುರಿಸಲು ಸಾಧ್ಯ. ಸಾಧನೆಗೆ ಯಾವುದೇ ಅಡ್ಡದಾರಿಗಳಿಲ್ಲ. ನೇರ ದಾರಿಯ ಪರಿಶ್ರಮವೇ ಸಾಧನೆಯ ಮೆಟ್ಟಿಲು ಆದ್ದರಿಂದ ವಿದ್ಯಾರ್ಥಿಗಳು ಕಲಿಕೆಯ ಅವಧಿಯಲ್ಲಿ ಉದಾಸೀನ ಪ್ರವೃತ್ತಿಯವರಾಗದೆ ನಿರಂತರ ಶ್ರಮದಿಂದ ಉನ್ನತಿಗೇರುವಂತಾಗಲಿ ಎಂದು ನುಡಿದರು. 2022-23 ನೇ ಸಾಲಿನ ಪ್ರಥಮ ಪಿಯುಸಿ ತರಗತಿಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಿಗಳಾದ ವಿದ್ಯಾರ್ಥಿಗಳನ್ನು ಸಂಸ್ಥಾಪಕರಾದ ಆದರ್ಶ ಎಂ. ಕೆ ಮತ್ತು ಗಣಪತಿ ಭಟ್‌ ಕೆ. ಎಸ್‌ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದರು. ಹಿಂದಿ ಉಪನ್ಯಾಸಕ ವಿನಾಯಕ ಜೋಗ್‌ ಸ್ವಾಗತಿಸಿದರು. ಕುಮಾರಿ ವಿಜೇತಾ ಮತ್ತು ಬಳಗದವರು ಪ್ರಾರ್ಥಿಸಿದರು. ಕನ್ನಡ ಉಪನ್ಯಾಸಕ ರಾಮಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಜೀವಶಾಸ್ತ್ರ ಉಪನ್ಯಾಸಕ ಲೋಹಿತ್‌ ಎಸ್‌ ಕೆ ವಂದನಾರ್ಪಣೆಗೈದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿನಿಯರಾದ ಕೀರ್ತಿ ಪಾಟ್ಕರ್‌, ಯೋನಾ ಭಾಸ್ಕರ ಶೆಟ್ಟಿ, ನಾಗಶಿವಾನಿ, ಸಾನ್ವಿಕುಮಾರ್‌ ನಿರೂಪಣೆಗೈದರು.

ಜುಲೈ 9 (ನಾಳೆ) : ಕಾಪು ಹೊಸಮಾರಿಗುಡಿ ದೇವಸ್ಥಾನ - ಕಾಪುವಿನ ಅಮ್ಮನ ಮಕ್ಕಳು ತಂಡಕ್ಕೆ ಸೇರ್ಪಡೆಗೊಳಿಸುವ ಮಹಾಅಭಿಯಾನಕ್ಕೆ ಚಾಲನೆ

Thumbnail
Posted On: 08 Jul 2023, 04:28 PM

ಕಾಪು : ಇಲ್ಲಿನ ಹೊಸಮಾರಿಗುಡಿ ದೇವಸ್ಥಾನವು ಸಂಪೂರ್ಣ ಇಳಕಲ್ ಕೆಂಪು ಶಿಲೆಯೊಂದಿಗೆ ಸುಮಾರು 30 ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿದ್ದು ಪ್ರಥಮ ಹಂತದ ಕಾಮಗಾರಿಯು ಭರದಿಂದ ಸಾಗುತ್ತಿದ್ದು ಜೀರ್ಣೋದ್ಧಾರದ ಅಂಗವಾಗಿ 9 ಶಿಲಾಸೇವೆ ಸಮರ್ಪಿಸಿ ಕಾಪುವಿನ ಅಮ್ಮನ ಮಕ್ಕಳು ತಂಡಕ್ಕೆ ಸದಸ್ಯರನ್ನು ಸೇರ್ಪಡೆ ಗೊಳಿಸುವ ಮಹಾಅಭಿಯಾನಕ್ಕೆ ಜುಲೈ 9 ರಂದು ಅಮ್ಮನ ಸನ್ನಿಧಿಯಲ್ಲಿ ಚಾಲನೆ ನೀಡಲಾಗುವುದು. ಮಹಾಅಭಿಯಾನದ ಮೂಲಕ 9 ಶಿಲಾ ಸೇವೆ ಸಮರ್ಪಿಸುವ ಕನಿಷ್ಟ ಒಂಭತ್ತು ಸದಸ್ಯರನ್ನು ಕಾಪುವಿನ ಅಮ್ಮನ‌ ಮಕ್ಕಳು ತಂಡಕ್ಕೆ ಸೇರ್ಪಡೆಗೊಳಿಸುವ ಸಮಿತಿ ಸದಸ್ಯರು ದೀಕ್ಷಾ ದೀಪ ಪ್ರಜ್ವಲನೆ ನಡೆಸಿ ಸಂಕಲ್ಪ ಸ್ವೀಕರಿಸಲಿದ್ದಾರೆ. ಪ್ರಪಂಚದಾದ್ಯಂತ 99,999 ಸದಸ್ಯರನ್ನು ಸೇರ್ಪಡೆಗೊಳಿಸಿ 9,99,999 ಶಿಲಾ ಸೇವೆ ಸಮರ್ಪಿಸುವ ಗುರಿಯೊಂದಿಗೆ ಅಮ್ಮನ ಸಂಪೂರ್ಣ ಶಿಲಾಮಯ ಮಾರಿಗುಡಿ ನಿರ್ಮಾಣದ ಗುರಿ ಹೊಂದಲಾಗಿದೆ. ಈ ಅಭಿಯಾನವು ಜುಲೈ 9 ರಿಂದ ಅಕ್ಟೋಬರ್ 15ರವರೆಗೆ ಅಂದರೆ 99 ದಿನಗಳವರೆಗೆ ನಡೆಯಲಿದೆ. ಪೂರ್ವಭಾವಿಯಾಗಿ ಮುಂಬಯಿ - ಪುಣೆ - ಬೆಂಗಳೂರು ಹಾಗೂ 18 ದೇಶಗಳಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿ ಮೂಲಕವಾಗಿ ಪ್ರಪಂಚದಾದ್ಯಂತ ಇರುವ ಅಮ್ಮನ ಭಕ್ತರು 9 ಶಿಲಾಸೇವೆಯ ಬಾಬ್ತು 9,999 ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಶಿಲೆಯನ್ನು ನೀಡಿ, ಶಿಲಾಪುಷ್ಪವನ್ನು ಅರ್ಪಿಸಿ, “ಕಾಪುವಿನ ಅಮ್ಮನ ಮಕ್ಕಳು” ತಂಡಕ್ಕೆ ಸೇರ್ಪಡೆಗೊಳಿಸುವ ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಕಳೆದ ಜೂನ್ 12 ರಂದು ಕಾಪು ಹೊಸಮಾರಿಗುಡಿಯ ಮಾರಿಯಮ್ಮ ದೇವಿಯ ಸಾನಿಧ್ಯ ಚಲನೆ ಮತ್ತು ತಾತ್ಕಾಲಿಕ ಗುಡಿಯಲ್ಲಿ ಸಾನಿಧ್ಯ ಪ್ರತಿಷ್ಟೆ ಕಾರ್ಯಕ್ರಮ ನಡೆದಿರುತ್ತದೆ. ಮುಂದಿನ ನವರಾತ್ರಿ ಸಂದರ್ಭ ಅಮ್ಮನ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡಲಾಗುವುದು. ಮಾರ್ಚ್ ನಲ್ಲಿ ನಡೆಯುವ ಸುಗ್ಗಿ ಮಾರಿಪೂಜೆಗೆ ಮೊದಲು ‌ಮಾರಿಯಮ್ಮನ ಗುಡಿ ಸಮರ್ಪಣೆಗೆ ಯೋಜನೆ ರೂಪಿಸಲಾಗಿದೆ. ಕಾಪು ಶಾಸಕ, ಸಮಿತಿ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಅವರು ಎಲ್ಲ ಸಮಾಜದ ಗಣ್ಯರೊಂದಿಗೆ ದೀಪ ಪ್ರಜ್ವಲನೆಗೊಳಿಸಿ, ಕಾಪುವಿನ ಅಮ್ಮನ ಮಕ್ಕಳು ತಂಡಕ್ಕೆ ಸೇರ್ಪಡೆ ಮಹಾಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಸಮಿತಿಯ ಗೌರವಾಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು ಹಾಗೂ‌ ದೀಕ್ಷೆ ಸ್ವೀಕರಿಸಲಿರುವ ಸಂಯೋಜಕರು ಪಾಲ್ಗೊಳ್ಳಲಿದ್ದಾರೆ ಎಂದು ಕಾಪು ಹೊಸಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮತ್ತು ವ್ಯವಸ್ಥಾಪನಾ‌ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯ ಹಾಗೂ ಸಮಿತಿ ಪದಾಧಿಕಾರಿಗಳು ‌ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಗೆ ಮಾತೃ ವಿಯೋಗ

Thumbnail
Posted On: 08 Jul 2023, 11:26 AM

ಕಾಪು : ಮಾಜಿ ಸಚಿವರು ಹಾಗೂ ಮಾಜಿ ಸಂಸದರು ಆಗಿರುವಂತಹ ವಿನಯ್ ಕುಮಾರ್ ಸೊರಕೆ ರವರ ತಾಯಿ ಶ್ರೀಮತಿ ಸುನೀತಿ ಅಚ್ಯುತ ಸೊರಕೆ (91) ರವರು ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದ್ದಾರೆ. ಶ್ರೀಮತಿ ಸುನೀತಿ ಅಚ್ಯುತ ಸೊರಕೆ (91)ರವರು ಮೂರು ಜನ ಪುತ್ರರು, ಎರಡು ಜನ ಪುತ್ರಿಯರು, ಎಂಟು ಮೊಮ್ಮಕ್ಕಳು,ಹಾಗೂ ಮೂರು ಮರಿ ಮಕ್ಕಳನ್ನು ಅಗಲಿದ್ದಾರೆ. ಇವರ ಅಂತ್ಯ ಸಂಸ್ಕಾರವನ್ನು ಇಂದು ಮದ್ಯಾಹ್ನ 1.30 ರ ನಂತರ ತಮ್ಮ ಸ್ವಗೃಹವಾದ ಪುತ್ತೂರು ತಾಲೂಕಿನ ಸರ್ವೇ ಗ್ರಾಮದ ಸೊರಕೆಯಲ್ಲಿ ನಡೆಯುವುದು ಎಂದು ತಿಳಿಸಲಾಗಿದೆ.

ಕಾಪು : ದೇಸಿಕ್ರ್ಯೂ ಸೊಲ್ಯೂಷನ್ಸ್ ಸರ್ವಿಸ್ ಪ್ರೈ.ಲಿಮಿಟೆಡ್ - ವನಮಹೋತ್ಸವ

Thumbnail
Posted On: 07 Jul 2023, 07:47 PM

ಕಾಪು : ದೇಸಿಕ್ರ್ಯೂ ಸೊಲ್ಯೂಷನ್ಸ್ ಸರ್ವಿಸ್ ಪ್ರೈ.ಲಿಮಿಟೆಡ್ ಇವರ ಆಶ್ರಯದಲ್ಲಿ ‌ಕಾಪುವಿನಲ್ಲಿ‌ ವನಮಹೋತ್ಸವ ಆಚರಿಸಲಾಯಿತು. ಅರಣ್ಯಾಧಿಕಾರಿ ಜೀವನ್ ದಾಸ್ ಶೆಟ್ಟಿ ಮತ್ತು ಮಂಜುನಾಥ್ ಅತಿಥಿಗಳಾಗಿ‌ ಭಾಗವಹಿಸಿದ್ದರು. ಜೀವನ್ ದಾಸ್ ಶೆಟ್ಟಿ ಮರಗಳ ಪ್ರಾಮುಖ್ಯತೆ ಕುರಿತು ಮಾತನಾಡಿದರು. ಸಂಸ್ಥೆಯ ವಿನೋದ್ ರಾವ್ ವನಮಹೋತ್ಸವದ ಕುರಿತು ಮಾತನಾಡಿದರು. ಈ‌ ಸಂದರ್ಭ ಸಂಸ್ಥೆಯ ‌ಉದ್ಯೋಗಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಸಂಸ್ಥೆಯ ಉದ್ಯೋಗಿಗಳಿಗೆ ಹೂವಿನ ಮತ್ತು ಹಣ್ಣಿನ ‌ಗಿಡಗಳನ್ನು ವಿತರಿಸಲಾಯಿತು. ಕಾರ್ಯಕ್ರಮ ಆಯೋಜಕರಾದ ಸಂಸ್ಥೆಯ ರಶ್ಮಿ‌ ಎಸ್ ಎಮ್ ಸ್ವಾಗತಿಸಿದರು. ವೀಣಾ ಶೆಟ್ಟಿ ವಂದಿಸಿದರು.

ಪಡುಬಿದ್ರಿ : ಕಡಲ್ಕೊರೆತ ; ಕೈರಂಪಣಿ ಗೋದಾಮು ಸಮುದ್ರ ಪಾಲು

Thumbnail
Posted On: 07 Jul 2023, 07:31 PM

ಪಡುಬಿದ್ರಿ : ಮಳೆ ಅಬ್ಬರ ಕೊಂಚ ಕಡಿಮೆಯಾದರೂ ಕಡಲಾರ್ಭಟ ಇನ್ನೂ ನಿಂತಿಲ್ಲ. ಪಡುಬಿದ್ರಿಯ ಕಾಡಿಪಟ್ಣ ಮುಖ್ಯ ಬೀಚ್ ನಲ್ಲಿರುವ ಇಂಟರ್ಲಾಕ್ ಮತ್ತು ತೆಂಗಿನ ಮರಗಳು ಕಡಲ್ಕೊರೆತದ ಹಾವಳಿಗೆ ಸಿಲುಕಿವೆ. ಇನ್ನೊಂದೆಡೆ ಕೈ ರಂಪಣಿ ಗೋದಾಮು ಕಡಲಲೆಗಳಿಗೆ ಸಿಲುಕಿ ನೆಲಸಮವಾಗಿದೆ. ಇನ್ನೂ ಮುಂದುವರಿದಂತೆ ಮೀನುಗಾರಿಕಾ ರಸ್ತೆಯು ಅಪಾಯದ ಅಂಚಿನಲ್ಲಿದೆ.

ಜುಲೈ 7 (ನಾಳೆ) : ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ

Thumbnail
Posted On: 06 Jul 2023, 08:55 PM

ಉಡುಪಿ : ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮುಂಗಾರು ಮಳೆಯ ಆರ್ಭಟ ಬುಧವಾರ ಕೂಡ ಮುಂದುವರಿದಿದ್ದು, ಮುಂಜಾಗೃತ ಕ್ರಮವಾಗಿ ಜುಲೈ 7 (ಶುಕ್ರವಾರ) ರಂದು ಉಡುಪಿ ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜಿಗಳಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಸುತ್ತೋಲೆ ಪ್ರಕಟಿಸಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಕೆರೆ, ನದಿ , ಸಮುದ್ರಗಳಿಗೆ ಮಕ್ಕಳು ತೆರಳದಂತೆ ಪಾಲಕರು ಎಚ್ಚರಿಕೆ ವಹಿಸಬೇಕು. ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ವಿಪತ್ತು ನಿರ್ವಹಣಾ ಕಾರ್ಯಗಳನ್ನು ಕೇಂದ್ರ ಸ್ಥಾನದಲ್ಲಿದ್ದು ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಮಳೆ ಮುಂದುವರಿಯುವ ಬಗ್ಗೆ ಹವಾಮಾನ ಇಲಾಖೆ ಸೂಚನೆ ನೀಡಿದ್ದು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ನೋಡಲ್​ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗ ನೀಡಿದ ರಜೆಯನ್ನು ಶನಿವಾರ ಪೂರ್ಣ ದಿನ ಅಥವಾ ಭಾನುವಾರ ತರಗತಿಗಳನ್ನು ನಡೆಸಿ ಸರಿದೂಗಿಸುವಂತೆ ಇಲಾಖೆ ಸುತ್ತೋಲೆ ಹೊರಡಿಸಿದೆ.

ಕಾಪು : ತಾಲೂಕಿನ ಜಲಾವೃತಗೊಂಡ ಸ್ಥಳದಲ್ಲಿದ್ದ ಕುಟುಂಬಗಳ ಸ್ಥಳಾಂತರ

Thumbnail
Posted On: 06 Jul 2023, 08:43 PM

ಕಾಪು : ತಾಲೂಕಿನಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ಕೆಲವೊಂದು ಪ್ರದೇಶಗಳು ಜಲಾವೃತಗೊಂಡಿದ್ದು ಈ ಭಾಗದಲ್ಲಿದ್ದ ಕುಟುಂಬಗಳನ್ನು ತಾಲೂಕು ಆಡಳಿತ, ಗ್ರಾಮ ಪಂಚಾಯತ್ ಗಳ ಮುತುವರ್ಜಿಯಿಂದ ಸ್ಥಳಾಂತರಗೊಳಿಸಲಾಗಿದೆ. ಕೆಲವೆಡೆ ನೀರು ರಸ್ತೆಯಲ್ಲಿ ಹರಿದ ಪರಿಣಾಮ ಸಂಚಾರಕ್ಕೆ ತೊಡಕಾಗಿತ್ತು. ಕೆಲವೆಡೆ ರಸ್ತೆ ಸಂಚಾರ ನಿರ್ಬಂಧಿಸಲಾಗಿತ್ತು. ಕಾಪು ತಾಲೂಕಿನ ಪಾಂಗಾಳ, ಉಳಿಯಾರಗೋಳಿ, ಮಲ್ಲಾರು, ಎಲ್ಲೂರು, ನಂದಿಕೂರು, ಪಾದೆಬೆಟ್ಟು, ಮಟ್ಟು, ತೆಂಕ, ಮಜೂರು, ಮೂಡಬೆಟ್ಟು, ಏಣಗುಡ್ಡೆ, ಬೆಳಪು, 92 ಹೇರೂರು, ನಡ್ಸಾಲು, ಬೆಳ್ಳೆ, ಕುರ್ಕಾಲು ಗ್ರಾಮಗಳ 64 ಕುಟುಂಬಗಳ ಒಟ್ಟು 258 ಸದಸ್ಯರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ಈ ಸಂದರ್ಭ ಕಾಪು ತಹಶೀಲ್ದಾರ್, ವಿವಿಧ ಇಲಾಖೆಗಳ ಅಧಿಕಾರಿಗಳು, ಪಂಚಾಯತ್ ಆಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು, ಗೃಹ ರಕ್ಷಕ ದಳ ವಿಪತ್ತು ನಿರ್ವಹಣಾ ತಂಡ ಮತ್ತು ಕರಾವಳಿ ಪಡೆಯ ಸದಸ್ಯರುಗಳು, ಸ್ಥಳೀಯರು ಸಹಕರಿಸಿದ್ದರು.

ಕಾಪು : ಜಲಾವೃತವಾದ ಪ್ರದೇಶಗಳಿಗೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಭೇಟಿ

Thumbnail
Posted On: 06 Jul 2023, 07:52 PM

ಕಾಪು : ಧಾರಾಕಾರ ಮಳೆಯಿಂದ ಕಟಪಾಡಿಯ ಮಟ್ಟು ಅಣೆಕಟ್ಟು ಸಂಪೂರ್ಣವಾಗಿ ತುಂಬಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು ಈ ಪ್ರದೇಶಕ್ಕೆ ಮತ್ತು ತಾಲೂಕಿನ ಮಜೂರು ಬ್ರಹ್ಮ ಬೈದರ್ಕಳ ಗರಡಿ ಇಲ್ಲಿಗೆ ಹೋಗುವ ದಾರಿ ಹಾಗೂ ಗರಡಿಯು ಸಂಪೂರ್ಣ ಜಲಾವೃತಗೊಂಡಿದ್ದು ಅಪಾಯ ಮಟ್ಟದಲ್ಲಿದ್ದು ಇಲ್ಲಿಗೆ ಮಾಜಿ ಸಚಿವರು ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾದ ವಿನಯ್ ಕುಮಾರ್ ಸೊರಕೆರವರು ಇಂದು ಭೇಟಿ ನೀಡಿ ಸುತ್ತಮುತ್ತಲಿನ ಜನರಿಗೆ ಜಾಗೃತರಾಗಿರುವಂತೆ ತಿಳಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದರು. ಈ ಸಂದರ್ಭ ಮಾಜಿ ಸಚಿವರೊಂದಿಗೆ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಅಮೀರ್ ಕಾಪು, ಪ್ರಶಾಂತ್ ಜತ್ತನ್ನ, ಶರ್ಪುದ್ದೀನ್ ಶೇಖ್, ಸುನಿಲ್ ಬಂಗೇರ, ಆಶೋಕ್ ನಾಯರಿ, ರಾಹುಲ್, ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.